ಲಕ್ನೋಗೆ ಹೊರಟು ನಿಂತಾಗ ಒಂದು ವಿಷಯವನ್ನು ಗೂಗಲ್ ಹೇಳಿತು: ಕೃಷ್ಣ ಸ್ವರ್ಗದಿಂದ ಸತ್ಯಭಾಮೆಗೆಂದೇ ಭೂಮಿಗೆ ತಂದ ಪಾರಿಜಾತದ ಗಿಡ ಈಗಲೂ ಇದೆ ಎಂದು ಸೂಚಿಸಿತು.  ಲಕ್ನೋದಿಂದ ಕೇವಲ 40 ಕಿಲೋಮೀಟರ‍್ಗಳ ದೂರದಲ್ಲಿ ದೊಡ್ಡ ಬಲುದೊಡ್ಡ ಮರವಾಗಿ ಎಂದು ಗೊತ್ತಾಯಿತು.  ಸರಿ ಮತ್ತೆ, ಇಬ್ಬರು ಹೆಂಡಿರ ಜಗಳದಲ್ಲಿ ಭೂಲೋಕಕ್ಕೆ ಇಳಿದು ಬಂದ ವಿಷಯ ಎಂದರೆ ಕುತುಹಲ ಇರದಿರಲು ಸಾಧ್ಯವೇ ? ಆ ಪುರಾತನ ಮರವನ್ನು ನೋಡಿದರೆ ಅದರ ಪಕ್ಕ ಸತ್ಯಭಾಮೆಯ ಮಂದಿರಕ್ಕೆ ಬದಲಾಗಿ ರುಕ್ಮಿಣಿದೇವಿ ಮಂದಿರವಿದೆ.
ಕಂಡಷ್ಟೂ ಪ್ರಪಂಚ ಅಂಕಣದಲ್ಲಿ
ಅಂಜಲಿ ರಾಮಣ್ಣ ಬರಹ  ಇಂದಿನ  ಓದಿಗೆ. 

 

ಭಿಷನ್ ಸಿಂಗ್ ಹೆಂಡತಿ ಫೋನ್ ಮಾಡಿದ್ದಳು. ಅಡುಗೆ ಏನು ಮಾಡಲಿ ಎಂದು ಕೇಳಿದಳು. “ಜ಼್ಯಾದಾ ನೀಂಬೂ ಡಾಲ್ಕೆ ಮಟರ್ ಬನಾಕೆ ರಖೋ” ಎನ್ನುವ ಉತ್ತರ ಈ ಕಡೆಯಿಂದ ಹೋಯಿತು. ತಕ್ಷಣ ’ಹಾಗಾದರೆ ನೀವು ಈ ದಿನವೇ ವಾಪಸ್ಸು ಬಂದು ಬಿಡ್ತೀರಾ” ಎಂದು ಕೇಳಿದೆ. “ನೋಡೋಣ ಮೇಡಮ್, ಆದರೆ ಈ ಸೀಸನ್ ನಲ್ಲಿ ಹಸಿ ಬಟಾಣಿ ಉಸಳಿ ತಿನ್ನದಿದ್ದರೆ ಹೇಗೆ ಹೇಳಿ’ ಎಂದು ಕೂಲಿಂಗ್ ಗ್ಲಾಸ್ ಒಳಗಿನಿಂದ ಗೋಲಾಕಾರವಾಗಿ ನಕ್ಕ ಭಿಷನ್ ಸಿಂಗ್ ಯಾರು, ಆತನ ಜೊತೆ ನಾನು ಎಲ್ಲಿಗೆ ಹೊರಟಿದ್ದೆ ಎಂದು ಹೇಳುವ ಮೊದಲು, ಲಕ್ನೋದಲ್ಲಿ ಛೋಟ್ಟಾ ಇಮಾಂಬ್ರಾ, ಬಡಾ ಇಮಾಂಬ್ರಾ, ನೋಡಿಕೊಂಡು ಅಲ್ಲಿ ನಡೆಯುತ್ತಿದ್ದ ನಮಾಜ಼್‍ನ ಧ್ವನಿ ಮುದ್ರಿಕೆ ಮಾಡಿಕೊಂಡು ಬಂದು ಮಲಗಿದವಳ ನಿದ್ದೆ ಕದ್ದ ಜಾಗಕ್ಕೆ ಹೋಗಿದ್ದನ್ನು ಹೇಳ ಬೇಕಿದೆ.

ಅವತ್ತು ಟೌನ್‌ಹಾಲಿನಲ್ಲಿ ಶ್ರೀಕೃಷ್ಣ ಪಾರಿಜಾತ ಸಣ್ಣಾಟ ಇತ್ತು. ಕೆಆರ್ ಸರ್ಕಲ್‌ನಿಂದ ಪಪ್ಪ ಸೀದಾ ಚಿಕ್ಕಗಡಿಯಾರದ ಕಡೆಗೆ ಕಾರು ತಿರುಗಿಸಿದವರೇ ಟೌನ್‌ಹಾಲಿಗೆ ಕರೆದುಕೊಂಡು ಹೋದರು. ಕೃಷ್ಣ ವೇದಿಕೆ ಮೇಲೆ ಬಂದ. ನಮ್ಮ ರವಿಚಂದ್ರನ್ ಆಕೃತಿಯ, ಆತನ ಈಗಿನ ವಯಸ್ಸಿನ ಕಲಾವಿದ ಮಧ್ಯಾಹ್ನದಿಂದ ಮೂರು ನಾಲ್ಕು ಶೋ ಕೊಟ್ಟು ಸುಸ್ತಾಗಿದ್ದ ಅನ್ನಿಸುತ್ತೆ. ಗಂಟಲು ಹೂತುಕೊಂಡಿತ್ತು, ಜೋತು ಬಿದ್ದ ಹೊಟ್ಟೆಯ ಬಳಿ ಬೆವರಿಗೆ ನೀಲಿ ಬಣ್ಣವೆಲ್ಲಾ ಅಳಿಸಿಕೊಂಡು ಕಾಣುತ್ತಿದ್ದ ಕಪ್ಪುಕಪ್ಪು ಪ್ಯಾಚ್‍ಗಳ ಕೃಷ್ಣ, ರುಕ್ಮಿಣಿ ಮತ್ತು ಭಾಮೆಯರ ನಡುವೆ ಸಿಕ್ಕಿಕೊಂಡು ‘ಇಬ್ಬರು ಹೆಂಡಿರ ಮುದ್ದಿನ ಪೋಲಿಸ್’ ಸಿನೆಮಾದಂತೆ ಆಗಿದ್ದ. ಅವಳಿಗಿತ್ತ ಪಾರಿಜಾತ ನನಗೇಕಿಲ್ಲ ಎನ್ನುವ ಭಾಮಾಮಣಿ, ಸರಸಕೆ ಕರೆದರೆ ವಿರಸವ ತೋರುತ್ತಿದ್ದ ರುಕ್ಕುಮಣಿ. ನೋಡಿ ನಕ್ಕು ಮನೆ ಸೇರಿದ್ದು ಅಷ್ಟೇ. ಇದು ಬಿಟ್ಟರೆ ‘ಪಾರಿಜಾತ ಅಂತ ಮನೆಗೆ ಹೆಸರಿಟ್ಟರೆ ಗಂಡ ಹೆಂಡತಿಗೆ ಯಾವಾಗಲೂ ಮನಸ್ತಾಪ ಇರುತ್ತೆ’ ಎನ್ನುವ ಮಾತು ‘ಪಾರಿಜಾತದ ಗಿಡ ಮನೆಯಿಂದ ಹೊರಗಿರಬೇಕು’ ಎನ್ನುವ ತಾಕೀತು, ‘ಪಾರಿಜಾತದ ಪಕಳೆ ನೋಡಿದ್ರೇ ಕಂದತ್ತೆ, ತೊಟ್ಟು ಉಸುರಿಗೇ ಸುಂಡತ್ತೆ’ ಎನ್ನುವ ಹೋಲಿಕೆ ಇಷ್ಟು ಬಿಟ್ಟರೆ ಪ್ರತೀ ಆಷಾಢದಲ್ಲೂ ಅಮ್ಮ ದೇವಿಗೆ ವಿಧವಿಧ ಹೂವಿನಲ್ಲಿ ಮಾಡುತ್ತಿದ್ದ ಲಕ್ಷಾರ್ಚನೆ ಅದರಲ್ಲಿ ನಡುನಡುವೆ ಇರುತ್ತಿದ್ದ ಪಾರಿಜಾತ, ಇಷ್ಟೇ ಪರಿಚಯ ಇದ್ದದ್ದು ಪಾರಿಜಾದತ ಬಗ್ಗೆ.

ಲಕ್ನೋಗೆ ಹೊರಟು ನಿಂತಾಗ ಗೂಗಲ್ ಹೇಳಿತು ಕೃಷ್ಣ ಸ್ವರ್ಗದಿಂದ ಸತ್ಯಭಾಮೆಗೆಂದೇ ಭೂಮಿಗೆ ತಂದ ಪಾರಿಜಾತದ ಗಿಡ ಈಗಲೂ ಇದೆ, ಲಕ್ನೋದಿಂದ ಕೇವಲ 40 ಕಿಲೋಮೀಟರ್‌ಗಳ ದೂರದಲ್ಲಿ ದೊಡ್ಡ ಬಲುದೊಡ್ಡ ಮರವಾಗಿ ಎಂದು. ಸರಿ ಮತ್ತೆ, ಇಬ್ಬರು ಹೆಂಡಿರ ಜಗಳದಲ್ಲಿ ಭೂಲೋಕಕ್ಕೆ ಇಳಿದು ಬಂದ ವಿಷಯ ಎಂದರೆ ಕುತೂಹಲ ಇರದಿರಲು ಸಾಧ್ಯವೇ?! ಲಕ್ನೋ ಸುತ್ತಿಸುತ್ತಿದ್ದ ಗೌತಮ್‍ನನ್ನೇ ಕೇಳಿದೆ ಟ್ಯಾಕ್ಸಿ ಏರ್ಪಾಡು ಮಾಡಿಕೊಡಲು. ಮೂರ್ನಾಲ್ಕು ಗಂಟೆಗಳ ಪ್ರವಾಸಕ್ಕೆ ಆತ ಕೇಳಿದ ದುಡ್ಡು ಭಾರೀ ಎನಿಸಿತು. ಆದರೆ ಅಲ್ಲಿಗೇ ಹೋಗಲೇ ಬೇಕೆಂಬ ಆಸೆ. ಇದರ ಬಗ್ಗೆಯೇ ವೀಣಾಳ ಜೊತೆ ಮಾತನಾಡುತ್ತಿದ್ದಾಗ, ನಾವು ಉಳಿದಿದ್ದ ಗೆಸ್ಟ್ ಹೌಸ್‍ನಲ್ಲಿಯೇ ಇದ್ದ ಮುಂಬೈನ ಅನಿತಾ ಮತ್ತವರ ಸ್ನೇಹಿತೆ ನಿಮಗೆ ತೊಂದರೆ ಆಗದಿದ್ದರೆ ನಾವಿಬ್ಬರೂ ಬರುತ್ತೇವೆ, ಟ್ಯಾಕ್ಸಿ ದುಡ್ಡು ಹಂಚಿಕೊಳ್ಳೋಣ ಎಂದಾಗ ಬೆಳಗ್ಗೆ ಆರು ಗಂಟೆಗೆ ಹೊರಡುವುದು ಅಂತ ನಿರ್ಧಾರ ಮಾಡಿಕೊಂಡೆವು.

ಫೆಬ್ರವರಿಯ ಬೆಳಗು ಮಸಕು ಮಸಕು, ಚಳಿಚಳಿ. ಸೂರ್ಯನೂ ರಾತ್ರಿಯೆಲ್ಲಾ ಬೆಂಕಿ ಕಾಯಿಸಿಕೊಂಡು ಮೈಮುರಿಯುತ್ತಿರುವಂತಹಾ ನೋಟ. ಉದ್ದುದ್ದ ದಾರಿ. ಕಿಶೋರ್ ಕುಮಾರ ‘ನಾನೂ ಜೊತೆಯಾಗುತ್ತೇನೆ’ ಎಂದು ಹಾಡಲು ಶುರು ಮಾಡುತ್ತಿದ್ದಂತೆ ಪ್ರಯಾಣ ಆರಂಭ ಪಾರಿಜಾತದ ಕಡೆಗೆ. ಲಕ್ನೋ ಪಕ್ಕದ ಜಿಲ್ಲೆ ಬಾರಬಂಕಿ. ಅಲ್ಲಿ ಕಿಂತೂರು ಎನ್ನುವ ಜಾಗ, ಅಲ್ಲಿಯೇ ಬೃಹದಾಕಾರವಾಗಿ ಫಲ್ಗುಣಕ್ಕೆ ಒಡ್ಡಿಕೊಂಡು ಬೋಳಾಗಿ ನಿಂತಿತ್ತು ಶ್ರೀಕೃಷ್ಣ ತಂದನೆನ್ನಲಾದ ಪಾರಿಜಾತದ ಮರ. ಅದರ ಮುಂದೆ ಒಂದು ದೊಡ್ಡ ಗೇಟ್. ಸುತ್ತಮುತ್ತ ಯಾರೂ ಕಾಣಲಿಲ್ಲ. ಗೇಟ್ ತೆಗೆದು ಒಳ ಹೊಕ್ಕಾಗ ಬದಿಯ ಚಾವಡಿಯಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದ ಪಂಡಿತ್ ಜಿ. ಅವರು ಅಲ್ಲಿ ಕಳೆದ ಅರವತ್ತೆರಡು ವರ್ಷಗಳಿಂದ ವಾಸವಿದ್ದಾರೆ. ಮುತ್ತಾತ, ತಾತ, ತಂದೆ ಎಲ್ಲಾ ಅದೇ ಚಾವಡಿಯಲ್ಲಿ ಇವರ ವಾಸ.

ಕೂಲಿಂಗ್ ಗ್ಲಾಸ್ ಒಳಗಿನಿಂದ ಗೋಲಾಕಾರವಾಗಿ ನಕ್ಕ ಭಿಷನ್ ಸಿಂಗ್ ಯಾರು, ಆತನ ಜೊತೆ ನಾನು ಎಲ್ಲಿಗೆ ಹೊರಟಿದ್ದೆ ಎಂದು ಹೇಳುವ ಮೊದಲು, ಲಕ್ನೋದಲ್ಲಿ ಛೋಟ್ಟಾ ಇಮಾಂಬ್ರಾ, ಬಡಾ ಇಮಾಂಬ್ರಾ, ನೋಡಿಕೊಂಡು ಅಲ್ಲಿ ನಡೆಯುತ್ತಿದ್ದ ನಮಾಜ಼್‍ನ ಧ್ವನಿ ಮುದ್ರಿಕೆ ಮಾಡಿಕೊಂಡು ಬಂದು ಮಲಗಿದವಳ ನಿದ್ದೆ ಕದ್ದ ಜಾಗಕ್ಕೆ ಹೋಗಿದ್ದನ್ನು ಹೇಳ ಬೇಕಿದೆ.

ಅವರು ಹಚ್ಚಿಕೊಂಡಿದ್ದ ಬೆಂಕಿಯಲ್ಲಿ ತಣ್ಣಗಾಗಿದ್ದ ನನ್ನ ಕೈಗಳು ಬಿಸಿಯಾಗಿಸಿಕೊಳ್ಳಲು ಒಡ್ಡಿತು, ಮಾತಿನಲ್ಲಿ ಶಾಖ ಏರತೊಡಗಿತು. ಮರದ ಹಿಂಭಾಗಕ್ಕೆ ಒಂದು ರುಕ್ಮಿಣಿ ಮಂದಿರ. ಅಲ್ಲಿಗೆ ದಕ್ಷಿಣೆ ನೀಡಿ ಹಿರಿಯರನ್ನು ಕೇಳಿದೆ “ಪಂಡಿತ್ ಜಿ, ಈ ಮರ ಕೃಷ್ಣ ಭಾಮೆಗಾಗಿ ತಂದಿದ್ದು ಅಂದ ಮೇಲೆ ಇಲ್ಲಿ ರುಕ್ಮಿಣಿಯ ಮಂದಿರ ಯಾಕೆ, ಭಾಮೆಗೆ ಮತ್ತೂ ಸಿಟ್ಟು ಬರಿಸಲು ಕೃಷ್ಣ ಹೂಡಿದ ಆಟಾನೇ ಅಲ್ವಾ” ಪಾಪ, ಭಕ್ತಿ ಪಾರಂಗತರು ಅವರು. “ಭಗವಂತನ ಪ್ರತೀ ಕೆಲಸದಲ್ಲೂ ರುಕ್ಮಿಣಿಯದ್ದೇ ಪಾತ್ರ’ ಎಂದವರು ಇದು ಬರೀ ಒಂದು ಕಥೆಯ ಪಾರಿಜಾತವಲ್ಲ ಎನ್ನುತ್ತಾ ಅದರ ಸುತ್ತಲಿನ ಹತ್ತಾರು ನಂಬಿಕೆಗಳ ಕಥೆ ಹೇಳುತ್ತಾ ಹೋದರು.

ಆ ರುಕ್ಮಿಣಿ ಮಂದಿರವನ್ನು ಸ್ಥಾಪಿಸಿದ್ದು ಕುಂತಿಯಂತೆ. ಇದೇ ಪಾರಿಜಾತದ ಮರವನ್ನು ಅರ್ಜುನ ತನ್ನ ತಾಯಿ ಕುಂತಿಗಾಗಿ ಸ್ವರ್ಗದಿಂದ ತಂದನಂತೆ. ನಿತ್ಯವೂ ಕುಂತಿ ಪಾರಿಜಾತದ ಕಿರೀಟ ಮಾಡಿ ಅಲ್ಲಿಯೇ ಉದ್ಭವವಾಗಿದ್ದ ಶಿವ ಲಿಂಗಕ್ಕೆ ಪೂಜೆ ಮಾಡುತ್ತಿದ್ದಳಂತೆ ಎನ್ನುತ್ತಾ ಅಲ್ಲಿಯೇ ಕೊಂಚ ಮುಂದೆ ನೆಲಮಟ್ಟಸದಲ್ಲಿಯೇ ಮುದ್ದಾಗಿ ಇದ್ದ ಶಿವಲಿಂಗವನ್ನು ತೋರಿಸಿದರು ಪಂಡಿತರು. ಕುಂತಿ ತನ್ನ ಮರಣಾನಂತರ ತನ್ನ ಅಸ್ತಿಯನ್ನು ಇದೇ ಪಾರಿಜಾತದ ಮರದ ಬುಡದಲ್ಲಿ ವಿಸರ್ಜಿಸಬೇಕು ಎಂದಿದ್ದರಿಂದ ಪಾಂಡವರು ಹಾಗೆಯೇ ಮಾಡಿ, ಅಲ್ಲೊಂದು ಹನುಮನ ಮಂದಿರ ಕಟ್ಟಿದರಂತೆ. ಅವರು ಹೇಳಿದ ಈ ಸೊಗಸಾದ ಕಥೆಗಳಿಗೆ ಪುರಾವೆ ಇದೆಯೋ ಇಲ್ಲವೋ ತಿಳಿದಿಲ್ಲ ಆದರೆ ಯುನೆಸ್ಕೋ ಅವರು ಈ ಮರವನ್ನು ಪ್ರಪಂಚದ ಅತೀ ಪುರಾತನ ಮರಗಳಲ್ಲಿ ಒಂದು ಎಂದು ಗುರುತಿಸಿದ್ದಾರೆ.

2012ರಲ್ಲಿ ಈ ಮರಕ್ಕೆ ಬೂಷ್ಟು ಬಂದು ಅನಾರೋಗ್ಯ ಕಾಣಿಸಿಕೊಂಡಾಗ ಉತ್ತರಪ್ರದೇಶ ಸರ್ಕಾರ ಜಗತ್ತಿನ ಹಲವು ಕಡೆಯಿಂದ ಗಿಡಮರ ವೈದ್ಯರನ್ನು ಕರೆಸಿ ಉಪಚಾರ ಮಾಡಿಸಿ ಮರವನ್ನು ಉಳಿಸಿಕೊಂಡಿದೆ. ಬೇಡಿದವರ ಕಾಮಧೇನು ಎನ್ನುವ ಮತ್ತೊಂದು ನಂಬಿಕೆ ಹೊತ್ತು ನಿಂತಿರುವ ಈ ಮರದ ಆಶೀರ್ವಾದ ಪಡೆಯಲು ದೂರದೂರದಿಂದ ನವವಿವಾಹಿತರು ಈಗಲೂ ಬರುತ್ತಿರುತ್ತಾರೆ ಎಂದ ಪಂಡಿತರು ‘ನೀನೂ ಏನು ಬೇಕೋ ಕೇಳಿಕೋ’ ಎಂದು ಕೈಗೆ ಒಂದು ಅರಿಶಿನ ಬಣ್ಣದ ಕಂಕಣ ಕಟ್ಟಿ ಹಾರೈಸಿದರು. ನಂಬಿಕೆ, ಶ್ರದ್ಧೆ ಆಚರಣೆಗಳಲ್ಲಿಯೇ ದೇವರು ಇರುವನು ಎನ್ನುವ ನಾನು ಕೇಳಿಕೊಳ್ಳುವ ಅವಕಾಶ ಬಂದಾಗಲೆಲ್ಲಾ ‘ಏನ ಬೇಡಲಿ ನಿನ್ನ ಬಳಿಗೆ ಬಂದು, ನೀನಿತ್ತ ಸೌಭಾಗ್ಯ ನಿಭಿಡವಾಗಿದೆ…’ ಎಂದು ಹಾಡಿಕೊಳ್ಳುತ್ತೇನೆ ಆದರೆ ಹಾಗಂತ ಪಂಡಿತ್ ಜಿ ಎದುರು ಅಪಶೃತಿಯಲ್ಲಿ ಅರುಚಿ ಅವರನ್ನು ಗಾಬರಿ ಬೀಳಿಸದೆ ಅವರೊಡನೆ ಫೋಟೊ ಕ್ಲಿಕ್ಕಿಸಿಕೊಂಡು ಮತ್ತೊಮ್ಮೆ ಲಕ್ನೋ ಕಡೆಗೆ ಮುಖ ಮಾಡಿದೆ. ಬೆಳಗಿನ ತಿಂಡಿಯ ಹೊತ್ತಿಗೆ ಲಕ್ನೋ ವಿಶ್ವವಿದ್ಯಾಲಯದ ಹಿಂದಿನ ಗಲ್ಲಿಯಲ್ಲಿ ಪ್ರಸಿದ್ಧ ಕಾಷ್ತಾ ಮತ್ತು ಚನಾ ಮಸಾಲ ಸಿಗತ್ತೆ ಎಂದ ಚಾಲಕನ ಹಿಂದೆ ಹೋಗಿ ಒಂದು ಗೂಡಂಗಡಿಯ ಮುಂದೆ ವೀಣಾ ನಾನು ಇಬ್ಬರೂ ಸರತಿಯಲ್ಲಿ ನಿಂತೆವು. ಹೊರಟಾಗ ಕೇಸರಿಯಾಗಿದ್ದವ ಈಗ ಬಿಳಿಯಾಗಿ ಬಣ್ಣ ಬದಲಿಸಿದ್ದ ಸೂರ್ಯ ಥೇಟ್ ನಮಗಾಗುತ್ತಿದ್ದ ಹಸಿವಿನಂತೆ.

ಮುಂದಾ? ಎಂದು ರಾಮ ಶಾಮ ಭಾಮ ಸಿನೆಮಾದ ಕಮಲ್ ಹಾಸನ್‌ನಂತೆ ಸ್ವಾಗತಿಸಿಕೊಂಡು ಮಹಿಳೆಯರೇ ನಡೆಸುವ ಲಕ್ನೋ ಚಿಕನ್‌ವರ್ಕ್ ಗಾರ್ಮೆಂಟ್ ಫ್ಯಾಕ್ಟರಿ ನೋಡಲು ಹೊರಟಾಗ, ಭಿಷನ್ ಸಿಂಗ್ ಫೋನ್ ಮಾಡಿ ‘ನಾನು ವಾಪಸ್ಸು ಬಂದಿದ್ದೇನೆ’ ಎಂದರು. ವಿಪರೀತ ಖುಷಿ ಆಯ್ತು. ಮುಂದಾ….