ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಷ್ಟು ಒಲವು ಇಲ್ಲದ್ದಿದ್ದ ಕಾಲದಲ್ಲಿ ಅದರ ನೆಲೆಗೆ ಒಂದು ಸಾಂಘಟಿಕ ಶಕ್ತಿ ಬೇಕಿತ್ತು. ಅಂತಹ ಶಕ್ತಿ ಒದಗಲು ದತ್ತಾತ್ರೇಯ ಗರುಡರು ಒಂದು ಪ್ರೇರಕ ವ್ಯಕ್ತಿ. ಬೆಂಗಳೂರಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನೆಲೆನಿಲ್ಲಲು, ಶ್ರೀ ರಾಮರಾವ್ ನಾಯಕ್ ಮತ್ತು ಶ್ರೀ ಶೇಷಾದ್ರಿ ಗವಾಯಿ ಅವರೊಡನೆ ದತ್ತಾತ್ರೇಯ ಗರುಡರು ಶ್ರಮಿಸಿದರು. ಇಡೀ ವಿಶ್ವದಾದ್ಯಂತ ಅವರ ಅಸಂಖ್ಯಾತ ಶಿಷ್ಯರು ಹಬ್ಬಿಕೊಂಡಿದ್ದಾರೆ ಮತ್ತು ಸಂಗೀತವನ್ನು ಜಗಮಾನ್ಯ ಮಾಡಿದ್ದಾರೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

ಕಳೆದ ಸಂಚಿಕೆಯಲ್ಲಿ ಮಲ್ಲೇಶ್ವರದ ಲೂಮಿನರೀಸ್ ಮತ್ತು ಸಾಂಸ್ಕೃತಿಕ ಲೋಕದ ಪಕ್ಷಿನೋಟ ಕೊಟ್ಟೆ. ಹಲವು ಗಣ್ಯರನ್ನು ನೆನೆದೆ ಮತ್ತು ಶ್ರೀ ಹನುಮಂತ ರಾವ್ ಅವರ ಬಗ್ಗೆ ಒಂದೆರೆಡು ಸಾಲು ಬರೆದಿದ್ದೆ… ಹೀಗೆ …..

ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಶ್ರೀ ಹನುಮಂತ ರಾವ್ ಮತ್ತು ಅವರ ಪತ್ನಿ ಡಾ. ಪದ್ಮಾ (ಇವರು IISC ಯಲ್ಲಿ ಪ್ರೊಫೆಸರ್) ಇವರು ಇಲ್ಲಿಯವರು. ಸೈನ್ಸ್‌ಗೆ ಸಂಬಂಧಪಟ್ಟ ಸುಮಾರು ನನ್ನ ತಲೆಯ ಮೇಲೆ ಹಾರುತ್ತ ಇದ್ದ ವಿಷಯಗಳನ್ನು ಇವರ ಮೂಲಕ ತಲೆ ಒಳಗೆ ನುಗ್ಗಿಸಿದ್ದೇನೆ! ಫುಲ್ ಸೂಟ್‌ನಲ್ಲಿ ಇವರನ್ನು ನೋಡುವುದೇ ಒಂದು ಖುಷಿ. ಕೋಟು ಪ್ಯಾಂಟು ಗರಿಗರಿಯಾಗಿ ಮೈಮೇಲೆ ಕೂಡುತ್ತಿತ್ತು. ಶ್ರೀ ಅರಾ ಮಿತ್ರ ಅವರಿಗೂ ಇವರಿಗೂ ತುಂಬಾ ಸ್ನೇಹ. ಕನ್ನಡ ಸಾಹಿತ್ಯ ಹಾಗೂ ಹಳೆಯ ಕಾವ್ಯಗಳ ಬಗ್ಗೆ ಚರ್ಚಿಸುತ್ತಿದ್ದರು. ಅರಾ ಮಿತ್ರ ಅವರು ಕನ್ನಡ ಭಾಷಾ ಬೋಧಕರು ಹಾಗು ತಜ್ಞರು. ಹನುಮಂತರಾವ್ ಅವರು ಪ್ರಾಣಿಶಾಸ್ತ್ರ ತಜ್ಞ. ಇಬ್ಬರನ್ನೂ ಬೆಸೆದಿದ್ದು ಕನ್ನಡದ ಮೇಲಿನ ಅಭಿಮಾನ ಹಾಗೂ ಸ್ನೇಹಪರತೆ. ಹನುಮಂತ ರಾವ್ ಅವರ ಗರಿ ಗರಿಯಾದ ಸೂಟಿನ ಬಗ್ಗೆ ಅರಾ ಮಿತ್ರ ಹೀಗೆ ಹೇಳುತ್ತಿದ್ದರು. ನಾವೆಲ್ಲಾ ಐರನ್ ಮಾಡಿ ಬಟ್ಟೆ ಹಾಕಿಕೊಂಡರೆ ಇವರು ಬಟ್ಟೆ ಹಾಕಿಕೊಂಡು ಐರನ್ ಮಾಡಿಕೊಳ್ಳುತ್ತಾರೆ…!

ಈ ಪ್ಯಾರಾ ಬರೆದಾಗ ಒಂದು ಸಂಗತಿ ಹೇಳಲು ಮರೆತಿದ್ದೆ. ಶ್ರೀ ಹನುಮಂತರಾವ್ ಮತ್ತು ಪದ್ಮ ಅವರ ಮಗಳು ನಮ್ಮ ಮೂರನೇ ಅಣ್ಣ ಶಾಮುವಿನ ಧರ್ಮಪತ್ನಿ. ನಮ್ಮ ಅಣ್ಣ ಶಾಮೂವಿನ ಅತ್ತೆ ಮಾವ! ಹೀಗಾಗಿ ಅವರ ಜತೆ ನನಗೆ ಹೆಚ್ಚು ಸಲಿಗೆ ಮತ್ತು ಮಾತು! ಕುದುರೆಗೆ ಕಾಂಪೌಂಡ್ ಐಸ್ Compound eyes ಇರುತ್ತದೆ ಎನ್ನುವುದರಿಂದ ಹಿಡಿದು ಪಾರ್ಕಿನ್ಸನ್ ಕಾಯಿಲೆ ತನಕ ಅವರ ಬಳಿ ಮಾತಾಡುತ್ತಿದ್ದೆ. ಒಮ್ಮೆ ಸತ್ತವರ ನೆರಳು ನಾಟಕ ನೋಡಿ ಬಂದು ಮನೆಯಲ್ಲಿ ಕೂತಿದ್ದರು. ನಾನು ಅವರ ಮನೆ ಹೊಕ್ಕೆ. ನಾಟಕದ ವಿಷಯ ಬಂತು. ನಾನು ನಾಟಕವನ್ನು ಮಿತಿ ಮೀರಿ ಹೊಗಳಿ ಹೊಗಳಿ ಹೊಗಳಿಬಿಟ್ಟೆ. ಅದರಲ್ಲೂ ಪುರಂದರ ದಾಸರ ಹಾಡುಗಳನ್ನು ನಾಟಕಕ್ಕೆ ಅಳವಡಿಸಿರುವ ರೀತಿ ಅದಕ್ಕೆ ನೀಡಿರುವ ಸಂಗೀತ ಇವುಗಳನ್ನು ಸ್ವಲ್ಪ ಹೆಚ್ಚಾಗಿಯೇ ಹೊಗಳಿದ್ದೆ.(ನನ್ನ ಮೊಬೈಲ್‌ನಲ್ಲಿ ಈ ಹಾಡುಗಳು ಇವೆ ಮತ್ತು ಪ್ರತಿದಿವಸ ವಾಕಿಂಗ್ ಸಮಯದಲ್ಲಿ ಈ ಹಾಡುಗಳು, ಅದರ ಹಿಂದಿನ ವ್ಯಾಖ್ಯಾನ ಕಿವಿ ಮೇಲೆ ಬೀಳುತ್ತದೆ) ಅವರ ಮುಖದಲ್ಲಿ ಸಣ್ಣ ನಗೆ ಸೂಸುತ್ತಾ ನನ್ನ ಮಾತು ಕೇಳಿಸಿಕೊಂಡರು. ನಂತರ ನಾನು ಹೊಗಳಿದ್ದ ಒಂದೊಂದೇ ಅಂಶ ಹಿಡಿದು ನಾಟಕವನ್ನು ಚೆನ್ನಾಗಿ ಹಿಗ್ಗಾ ಮುಗ್ಗಾ ಜಾಲಾಡಿದ್ದರು! ನಮ್ಮ ಸಮಾಜಕ್ಕೆ, ಸೊಸೈಟಿಗೆ ನಾಟಕದಿಂದ ಯಾವ ಮೆಸೇಜ್ ಹೋಗಿದೆ? ಒಂದು ಪದ್ಧತಿಯನ್ನು ಹಿಯಾಳಿಸೋದು, ಒಂದು ಅಪರೂಪದ ಪ್ರಸಂಗ ಹಿಡಿದುಕೊಂಡು ಇಡೀ ಜನಾಂಗದ ಮೇಲೆ ಒಂದು ಕೆಟ್ಟ ಅಭಿಪ್ರಾಯಕ್ಕೆ ಬರುವ ಹಾಗೆ ಬಿಂಬಿಸುವುದು ಇವೆಲ್ಲಾ ಹೇಗೆ ಹಾನಿಕಾರಕ ಅಂತ ವಿವರಿಸಿದರು. ನಾಟಕದ ಉದ್ದೇಶ ಏನಿರಬೇಕು ಅಂತ ವಿವರಿಸಿ ಭರತ ಮುನಿಯ ಪುಸ್ತಕದಿಂದ ಮೂರು ಪುಟ ಕೋಟ್ ಮಾಡಿದ್ದರು! ಅವರ ಆಳವಾದ ಜ್ಞಾನದ ಪರಿಚಯ ಆಗಾಗ ಈ ರೀತಿ ಸವಿದವನು ನಾನು. ಎಷ್ಟೋ ವರ್ಷದ ನಂತರ ಭರತಮುನಿಯ ಪುಸ್ತಕ ಓದಬೇಕಾದರೆ ಈ ಪ್ರಸಂಗ ನೆನಪಾಯಿತು.

(ಶ್ರೀ ಭಾಸ್ಕರ್ ಮತ್ತು ಅವರ ಶತಾಯುಷಿ (೧೦೪)ಅಮ್ಮ)

ಗಾಯತ್ರಿ ಬ್ಯಾಂಕ್ ಬಗ್ಗೆ ಹೇಳಿದ್ದೆ. ಅದಿರೋದು ಮಲ್ಲೇಶ್ವರ ಸರ್ಕಲ್. ಸರ್ಕಲ್‌ನಿಂದ ನೀವು ಪೂರ್ವಕ್ಕೆ ನಡೆದರೆ ಅಲ್ಲಿ ಗೀತಾಂಜಲಿ ಅಂತ ಒಂದು ಥಿಯೇಟರ್ ಇತ್ತು. ಅದರ ಪಕ್ಕವೇ ಎಡಕ್ಕೆ ನಡೆದರೆ ಎಂಟನೇ ಕ್ರಾಸ್ ಕೆಳಗೆ ಅಲ್ಲಿ ನರಸಿಂಹಯ್ಯ ಗಾರ್ಡನ್ ಅಂತ ಒಂದು ಇತ್ತು, ಇದು ಎಪ್ಪತ್ತರ ದಶಕ. ಅಲ್ಲೊಬ್ಬರು ಸಂಗೀತ ವಿದ್ವಾಂಸರು ಶ್ರೀ ಲಕ್ಷ್ಮಣ ಶಾಸ್ತ್ರಿ ಅಂತ. ಇವರು ತುಮಕೂರಿನಲ್ಲಿ ನಮ್ಮ ವಠಾರದವರು. ಅವರ ಮಕ್ಕಳು (ಶ್ರೀಮತಿ ಶ್ರೀಮತಿ ಮತ್ತು ಮಂಜುಳಾ, ಒಬ್ಬ ತಮ್ಮ ಮಂಜು…) ನನಗೆ ಸ್ನೇಹಿತರು. ಹಿರಿಯಕ್ಕ ಶ್ರೀಮತಿ ಸಂಗೀತ ವಿದ್ವಾಂಸರು ಮತ್ತು ಸಂಗೀತ ಶಾಲೆ ನಡೆಸುತ್ತಾ ಇದ್ದಾರೆ. ಇವರೂ ಸಹ ಖ್ಯಾತ ಸಂಗೀತ ವಿದುಷಿ.

ನನ್ನ ಮಿತ್ರ ಖ್ಯಾತ ಫೋಟೋಗ್ರಾಫರ್ ಮತ್ತು ಫ್ರೀಲ್ಯಾನ್ಸರ್ ಶ್ರೀ ಬಿ.ವಿ. ಪ್ರಕಾಶ್ ಇಲ್ಲಿಯವರು. ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದ, ದೇಶ ಸುತ್ತುವ ಪ್ರಕಾಶ್ ಟ್ರೆಕ್ಕಿಂಗ್, ಬೆಟ್ಟ ಪರ್ವತಾರೋಹಣ ಮುಂತಾದ್ದನ್ನು ಮಾಡುವುದಲ್ಲದೆ ಹುಡುಗರ ಹಿಂಡು ಕಟ್ಟಿಕೊಂಡು ದೇಶ ವಿದೇಶ ಗಳ ಬೆಟ್ಟ ಕಾಡುಮೇಡು ಸುತ್ತುತ್ತಾರೆ. ಅಲ್ಲದೆ ದೇಶ ವಿದೇಶಗಳ ಸ್ಥಳ ಪರಿಚಯ ಮಾಡುತ್ತಾರೆ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ. ಅವರು ಬರೆದಿರುವ ಲೇಖನಗಳೇ ಸಾವಿರಕ್ಕೂ ಮೀರಿದವು ಮತ್ತು ಪುಸ್ತಕ ರೂಪದಲ್ಲಿ ತಂದರೆ ಕನಿಷ್ಠ ಹತ್ತು ಪುಸ್ತಕ ಆದರೂ ಆಗುವಂತಹುದು. ಅತ್ಯುತ್ತಮ ಫೋಟೋಗ್ರಫಿ ಪ್ರಶಸ್ತಿ ಇವರಿಗೆ ಹಲವು ಬಾರಿ ಸಂದಿದೆ. ಈಗಲೂ (ಇವರು ಎಪ್ಪತ್ತರ ಹುಡುಗ) ಸಿಕ್ಕಾಗಲೆಲ್ಲ ಹಿಮಾಲಯದ ಸುತ್ತಲಿನ ಪರ್ವತ ಹತ್ತಲು ಹೋಗುತ್ತಿರುವುದಾಗಿ ಹೇಳುತ್ತಾರೆ! ತೀರಾ ಈಚೆಗೆ ಎಪ್ಪತ್ತು ಮೀರಿರುವ ಹೈಸ್ಕೂಲ್ ಕ್ಲಾಸ್‌ಮೇಟ್ ಹೆಣ್ಣು ಗಂಡು ಗೆಳೆಯರನ್ನು (ಅದರಲ್ಲಿ ನಾನೂ ಎಪ್ಪತ್ತೈದರ ಯುವಕ ಇದ್ದೆ) ವ್ಯಾನಿನಲ್ಲಿ ಕುಡಿದ ನೀರು ಅಲ್ಲಾಡದ ಹಾಗೆ ಕರೆದುಕೊಂಡು ಮೇಕೆ ದಾಟು ತೋರಿಸಿದರು! ಬಿರು ಬೇಸಿಗೆ ಮೇಕೆ ದಾಟು ಪೂರ್ಣ ಒಣಗಿತ್ತು. ನಾನು ಬುಡದವರೆಗೆ ಎತ್ತರದ ಮೆಟ್ಟಿಲು ಇಳಿದು ನೋಡಿದೆ. ಏದುಬ್ಬುಸ ಪಟ್ಟುಕೊಂಡು ಮೆಟ್ಟಲು ಹತ್ತಿ ಮೇಲೆ ಬಂದೆ ಮತ್ತು ಅರ್ಧ ತಾಸು ಕೂತು ಉಸಿರು ಹದಕ್ಕೆ ತಂದೆ. ಮನೆಗೆ ಬಂದ ಮೇಲೆ ನನ್ನ ಸಾಹಸ ಸ್ವಲ್ಪ ಓವರ್ ಆಗೇ ಕೊಚ್ಚಿಕೊಂಡೆ… ಸಾಹಸ ಹೇಳಿ ಎಲ್ಲರ ಕೈಲೂ ಪೂಜೆ ಪುನಸ್ಕಾರ ಮಾಡಿಸಿಕೊಂಡೆ!

ಮಲ್ಲೇಶ್ವರ ಅಂದರೆ ಧುತ್ತೆಂದು ನೆನಪಾಗುವ ಹಲವು ಮಹನೀಯರಲ್ಲಿ ಶ್ರೀ ಮಾವಿನಕೆರೆ ರಂಗನಾಥನ್ ಹೆಸರು ಮೊದಲು ಮೊದಲಲ್ಲಿ ಬರಲೇಬೇಕು. ಮಾವಿನಕೆರೆ ರಂಗನಾಥನ್ ಸಾಹಿತಿ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ… ಹೀಗೆ ಹಲವು ಪ್ರತಿಭೆಗಳ ಸಂಗಮ. ಪುರೋಗಾಮಿ ಸಾಹಿತ್ಯ ಸಂಘ ಎನ್ನುವ ಒಂದು ಪ್ರಕಾಶನ ಸಂಸ್ಥೆಯ ಒಡೆಯ. ಹಲವಾರು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅವರು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ. ನಾನು ಅವರ ಮಿಥುನ ಎನ್ನುವ ಚಿತ್ರ ನೋಡಿದ್ದೀನಿ. ಒಮ್ಮೆ ನಮ್ಮ ಅಣ್ಣನ ಕ್ಲಿನಿಕ್‌ಲ್ಲಿದ್ದಾಗ ಇವರು ಬಂದರು. ಅಣ್ಣನ ಪೇಶಂಟ್ ಅವರು ಮತ್ತು ಅಣ್ಣ ನನ್ನ ಬಗ್ಗೆ ಮೊದಲೇ ಹೇಳಿದ್ದ ಅಂತ ಕಾಣುತ್ತೆ. ಅಣ್ಣ ನನ್ನನ್ನು ಅವರಿಗೆ ಸಾರ್ ಇವನು ನನ್ನ ತಮ್ಮ ಅಂತ ಪರಿಚಯಿಸಿದ. ಮಾಸ್ತಿ ಸಂಭಾವನೆ ಗ್ರಂಥದಲ್ಲಿ ಪ್ರಕಟ ಆಗಿದ್ದ ನನ್ನ ಲೇಖನದ ಬಗ್ಗೆ ಹೇಳಿದ್ದೆ. ಮಾವಿನಕೆರೆ ರಂಗನಾಥನ್ ಅವರು ಆ ಗ್ರಂಥದ ಸಂಪಾದಕರು. ಆ ವೇಳೆಗೆ ಪುಸ್ತಕ ಪ್ರಕಟ ಆಗಿ ಎರಡು ಮೂರು ದಶಕ ಕಳೆದಿತ್ತು ಅಂತ ಕಾಣುತ್ತೆ. ಇಬ್ಬರೂ ಕೂತು ಸುಮಾರು ಹೊತ್ತು ಮಾತಾಡಿದೆವು. ತುಂಬಾ ಪ್ರೀತಿಯಿಂದ ನನ್ನ ಬಗ್ಗೆ ವಿಚಾರಿಸಿದರು.

ಮಾವಿನಕೆರೆ ಅಂದಕೂಡಲೇ ನನಗೆ ನನ್ನ ಮಿತ್ರ ಭಾಸ್ಕರ್ ನೆನಪು ಕೊಚ್ಚಿ ಬರುತ್ತೆ. ಭಾಸ್ಕರ್ ಅವರು ಕರ್ನಾಟಕದ ದೊಡ್ಡ ಕೈಗಾರಿಕೋದ್ಯಮಿ. ದೊಡ್ಡ ತಯಾರಿಕಾ ಘಟಕ ಮತ್ತು ಸಂಶೋಧನಾ ವಿಭಾಗ ಹೊಂದಿರುವ ಇವರ ಉದ್ಯಮವನ್ನು ಮತ್ತೊಬ್ಬ ಗೆಳೆಯ ಮುರಳಿ ಅವರ ಜತೆ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ರಕ್ಷಣಾ ಉದ್ಯಮ ಸೇರಿದಹಾಗೆ ಬಾಹ್ಯಾಕಾಶ ಇಲಾಖೆಗೂ ಸಹ ಇವರು ಉಪಕರಣ ಸಿದ್ಧಪಡಿಸುತ್ತಾರೆ. ಇವರು ಮಾವಿನಕೆರೆ ರಂಗನಾಥ ಸ್ವಾಮಿ ದೇವರ ಪರಮ ಭಕ್ತರು. ಅಲ್ಲಿನ ದೇವಸ್ಥಾನವನ್ನು ನವೀಕರಿಸಿದ್ದಾರೆ. ಕಳೆದ ವರ್ಷ ನಮ್ಮ ಹೈಸ್ಕೂಲ್ ಗೆಳೆಯರ ಹಿಂಡನ್ನು ಕರೆದುಕೊಂಡು ದೇವಸ್ಥಾನ ತೋರಿಸಿ, ಅಲ್ಲಿ ಒಳ್ಳೆಯ ಸಂಗೀತ ಏರ್ಪಡಿಸಿ ಒಳ್ಳೇ ಊಟ ಹಾಕಿ ಸತ್ಕರಿಸಿದರು. ಅಂತಹ ಅಪರೂಪದ ಹೃದಯ ವೈಶಾಲ್ಯದ ಸ್ನೇಹಜೀವಿ ಭಾಸ್ಕರ್.

(ದತ್ತಾತ್ರೇಯ ಗರುಡ)

ಆರನೇ ಕ್ರಾಸ್ ವಿಷಯಕ್ಕೆ ಬಂದರೆ ಬೆಂಗಳೂರಿಗೇ ಯಾಕೆ ಇಡೀ ರಾಷ್ಟ್ರಕ್ಕೆ ಹೆಸರು ತಂದ ಒಬ್ಬರು ಹಿರಿಯ ಸಂಗೀತಗಾರರನ್ನು ಮತ್ತು ತಬಲಾ ವಾದಕರನ್ನು ಮರೆಯುವ ಹಾಗೇ ಇಲ್ಲ. ಅವರೇ ದತ್ತಾತ್ರೇಯ ಸದಾಶಿವ ಗರುಡ. ಇವರ ಸಂಗತಿಗೆ ಬರುವ ಮುನ್ನ ಇವರ ತಂದೆಯವರ ಬಗ್ಗೆ ಒಂದು ಟಿಪ್ಪಣಿ.

ದತ್ತಾತ್ರೇಯ ಸದಾಶಿವ ಗರುಡ ಅವರ ತಂದೆ 19ನೇ ಶತಮಾನದ ಕೊನೆಯಿಂದ 20ನೇ ಶತಮಾನದ ಮಧ್ಯದವರೆಗೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಸಿದ್ಧರಾಗಿದ್ದ ರಂಗನಟ, ನಾಟಕಕಾರ ಮತ್ತು ನಾಟಕಮಂಡಲಿಯ ಒಡೆಯರಾಗಿದ್ದ ಸದಾಶಿವರಾಯ ಗರುಡ. ಇವರ ಬಗ್ಗೆ ವಿಕಿಪೀಡಿಯ ಹೀಗೆ ಹೇಳುತ್ತದೆ….

ಗರುಡ ಸದಾಶಿವರಾಯರು: – ಕ್ರಿ.ಶ.೧೮೮೦ರ ಸುಮಾರಿಗೆ ಜನಿಸಿದ್ದರು. ಇವರ ತಂದೆ ಗುರುನಾಥ ಶಾಸ್ತ್ರಿ. ಗರುಡ ಸದಾಶಿವರಾಯರು ‘ಗದಗ ಶ್ರೀ ದತ್ತಾತ್ರೇಯ ನಾಟಕ ಮಂಡಳಿ’ ಯನ್ನು ಕಟ್ಟಿ, ಕರ್ನಾಟಕದ ಉದ್ದಗಲಕ್ಕೂ ಸಹಸ್ರಾರು ಪ್ರದರ್ಶನಗಳನ್ನು ನೀಡಿದರು.

(ಡಿ ಎಸ್ ಗರುಡ ಮತ್ತು ಶ್ರೀಮತಿ ಗೌರಾಂಬ)

ಲೋಕಮಾನ್ಯ ತಿಲಕರ ರಾಷ್ಟ್ರೀಯ ಹೋರಾಟಕ್ಕೆ ಸಂಬಂಧಿಸಿದ ‘ಬಂಧವಿಮೋಚನೆ’ ನಾಟಕದಿಂದ ರಂಗಪ್ರವೇಶ ಮಾಡಿದ ಗರುಡರು ೫೦ಕ್ಕೂ ಹೆಚ್ಚು ವರ್ಷಗಳನ್ನು ರಂಗಭೂಮಿಯ ಮೇಲೆ ಕಳೆದಿದ್ದಾರೆ. ಸುಮಾರು ೫೦ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹಾಗು ರಾಷ್ಟ್ರೀಯ ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಇವರ ‘ಶ್ರೀ ರಾಮಪಾದುಕಾ ಪಟ್ಟಾಭಿಷೇಕ’ ರಂಗಭೂಮಿಯ ಇತಿಹಾಸದಲ್ಲಿಯೆ ಮಹತ್ವದ ನಾಟಕ.

“ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ” ಕಟ್ಟಿ ಬೆಳೆಸಿ, ಅದಕ್ಕಾಗಿ ನಾಟಕಗಳನ್ನು ಕೂಡ ಬರೆದು ಪ್ರದರ್ಶಿಸಿದ ಕೀರ್ತಿ ಶ್ರೀ ಸದಾಶಿವರಾವ್ ಗರುಡ ಅವರದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕೂಡ ಶ್ರೀ ಸದಾಶಿವರಾವ್ ಗರುಡ ಅವರ “ಸತ್ಯ ಸಂಕಲ್ಪ” ನಾಟಕವನ್ನು ನೋಡಿ ಮೆಚ್ಚಿಕೊಂಡಿದ್ದು ವಿಶೇಷ. ಶ್ರೀ ಸದಾಶಿವರಾವ್ ಗರುಡ ಅವರ “ಕಂಸವಧ”, “ಕೃಷ್ಣಲೀಲಾ”, ಲಂಕಾದಹನ” ಮುಂತಾದ ನಾಟಕಗಳು ಬ್ರಿಟಿಷ್ ಆಡಳಿತದ ವಿರುದ್ಧ ಪರೋಕ್ಷವಾಗಿ ಧ್ವನಿ ಎತ್ತಿದ್ದು ಗಮನ ಸೆಳೆದ ಅಂಶ. ಈ ನಾಟಕಗಳನ್ನು ಆಗ ನೋಡಿದ ಪ್ರೇಕ್ಷಕರು ಉತ್ಸಾಹದಿಂದ “ಜೈ ಭಾರತ ಮಾತಾ”, “ಬ್ರಿಟಿಷರಿಗೆ ಧಿಕ್ಕಾರ”ಎಂದು ಘೋಷಣೆ ಕೂಗುತ್ತಿದ್ದರು ಎನ್ನುವುದನ್ನೂ ಸ್ಮರಿಸಬಹುದು.

“ಕರ್ನಾಟಕ ನಾಟಕಾಲಂಕಾರ”, “ಅಭಿನಯ ಕೇಸರಿ”, “ನಾಟ್ಯಾಚಾರ್ಯ” ಹೀಗೆ ಹತ್ತು ಹಲವು ಬಿರುದಾವಳಿಗಳನ್ನು ಪಡೆದ ಶ್ರೀ ಸದಾಶಿವರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು “ಗರೂಡ ಸದಾಶಿವರಾಯರು” ಎಂದೇ ಕರೆಯುತ್ತಿದ್ದರು. ರಂಗಭೂಮಿಯು ಶಿಖರ ಸ್ಥಿತಿಯಲ್ಲಿದ್ದ ೧೯೦೫ ರಿಂದ ೧೯೪೦ರ ಅವಧಿಯಲ್ಲಿ ಬಂದ ವೃತ್ತಿನಿರತ ರಂಗಕರ್ಮಿಗಳು ಹಾಗೂ ನಾಟಕಕಾರರಲ್ಲಿ ಶ್ರೀ ಸದಾಶಿವರಾವ್ ಗರುಡ ಅವರದ್ದು ಬಹು ದೊಡ್ಡ ಹೆಸರು. ವೃತ್ತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದುಕೊಟ್ಟ ಕೀರ್ತಿಯೂ ಶ್ರೀ ಗರೂಡ ಸದಾಶಿವರಾವ್ ಅವರದ್ದು. ಈಗಲೂ ಅನೇಕ ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವರಾವ್ ಗರುಡ ಅವರ “ರಂಗಭೂಮಿ ಶಿಸ್ತು” ಪಾಲಿಸಿಕೊಂಡು ಹೋಗುತ್ತಿದ್ದಾರೆ.”ನಮನ”

(ಡಿ ಎಸ್ ಗರುಡ್ ಮತ್ತು ಶ್ರೀಮತಿ ಗೌರಾಂಬ ಅವರ ಕುಟುಂಬ)

ಗರುಡ ನಾಟ್ಯ ಸಂಘ (ರಿ): ಇದು “ನಾಟಕಾಲಂಕಾರ” ಬಿರುದಾಂಕಿತ ಶ್ರೀ ಗರುಡ ಸದಾಶಿವರಾಯರ ಕುಟುಂಬದ ಮೂರನೇ ತಲೆಮಾರಿನವರು ಸ್ಥಾಪಿಸಿರುವ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ. ಈ ಗರುಡ ನಾಟ್ಯ ಸಂಘವು ಮೊದಲು ಚಟುವಟಿಕೆ ಆರಂಭಿಸಿದ್ದು ಗದಗ ಜಿಲ್ಲೆಯಲ್ಲಿ. ಅದೇ ಗರುಡ ಸದಾಶಿವರಾಯರು ವಾಸವಾಗಿದ್ದ ಊರು. ಅಲ್ಲಿಯೇ ಗರುಡ ಸದಾಶಿವರಾಯರ ನೆನಪಿನಲ್ಲಿ ಆರಂಭಗೊಂಡ ಸಂಘವು ಈಗ ಬೆಂಗಳೂರಿನಲ್ಲಿ ಹೊಸದೊಂದು ಹುರುಪಿನೊಂದಿಗೆ ಬೆಳೆಯುತ್ತಿದೆ. ರಂಗಭೂಮಿಯಲ್ಲಿ ಖ್ಯಾತಿ ಪಡೆದ ಶ್ರೀ ಗರುಡ ಸದಾಶಿವರಾಯರ ನೆನಪನ್ನು ಹಸಿರಾಗಿ ಉಳಿಸುವ ಉದ್ದೇಶದೊಂದಿಗೆ ಈ ಸಂಘವನ್ನು ಸ್ಥಾಪಿಸಿದ್ದು ಅವರ ಮಕ್ಕಳಾದ ದತ್ತಾತ್ರೇಯ, ಶ್ರೀಪಾದರಾವ್, ವಲ್ಲಭರಾವ್ ಹಾಗೂ ನರಹರಿರಾವ್ ಅವರು.

ಗರುಡರ ಕೆಲವು ಪ್ರಸಿದ್ಧ ನಾಟಕಗಳು:

ಶ್ರೀ ರಾಮಪಾದುಕಾ ಪಟ್ಟಾಭಿಷೇಕ.
ಸತ್ಯಸಂಕಲ್ಪ
ಎಚ್ಚಮನಾಯಕ
ಮಾರ್ಕಂಡೇಯ
ಕೀಚಕವಧೆ
ಬಲಸಿಂಹ ತಾರಾ
ಶಕ್ತಿವಿಲಾಸ
ಶಶಿಕಲಾ
ಉಗ್ರಕಲ್ಯಾಣ
ವಿಷಮ ವಿವಾಹ
ಕಂಸವಧೆ
ನಾನು ಕನ್ನಡಿಗ
ಶ್ರೀ ಶರಣ ಬಸವೇಶ್ವರ
ತುಕಾರಾಮ

(ಗರುಡ ಸದಾಶಿವರಾಯರು)

೧೯೫೪ರಲ್ಲಿ ಗರುಡ ಸದಾಶಿವರಾಯರು ನಿಧನರಾದರು. ಜಗಜಂಪಿ ಎಂಬ ಮಹನೀಯರು ಸದಾಶಿವರಾಯರ ಜೀವನ ಚರಿತ್ರೆ ಬರೆದು ಡಾಕ್ಟರೇಟ್ ಗಳಿಸಿದ್ದಾರೆ. ಡಾ. ಪ್ರಕಾಶ ಗರುಡ ಅವರು ಒಂದು ಕೃತಿ ರಚಿಸಿದ್ದಾರೆ. ಡಾ. ಪ್ರಕಾಶ ಗರುಡ ಸದಾಶಿವರಾಯರ ಮೊಮ್ಮೊಗ. ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದರು. ದತ್ತಾತ್ರೇಯ ಗರುಡರು “ಸದಾಶಿವ ನಾಟಕ ದರ್ಶನ” ಎಂಬ ಪುಸ್ತಕ ಬರೆದಿದ್ದಾರೆ.

ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಷ್ಟು ಒಲವು ಇಲ್ಲದ್ದಿದ್ದ ಕಾಲದಲ್ಲಿ ಅದರ ನೆಲೆಗೆ ಒಂದು ಸಾಂಘಟಿಕ ಶಕ್ತಿ ಬೇಕಿತ್ತು. ಅಂತಹ ಶಕ್ತಿ ಒದಗಲು ದತ್ತಾತ್ರೇಯ ಗರುಡರು ಒಂದು ಪ್ರೇರಕ ವ್ಯಕ್ತಿ. ಬೆಂಗಳೂರಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನೆಲೆನಿಲ್ಲಲು, ಶ್ರೀ ರಾಮರಾವ್ ನಾಯಕ್ ಮತ್ತು ಶ್ರೀ ಶೇಷಾದ್ರಿ ಗವಾಯಿ ಅವರೊಡನೆ ದತ್ತಾತ್ರೇಯ ಗರುಡರು ಶ್ರಮಿಸಿದರು. ಇಡೀ ವಿಶ್ವದಾದ್ಯಂತ ಅವರ ಅಸಂಖ್ಯಾತ ಶಿಷ್ಯರು ಹಬ್ಬಿಕೊಂಡಿದ್ದಾರೆ ಮತ್ತು ಸಂಗೀತವನ್ನು ಜಗಮಾನ್ಯ ಮಾಡಿದ್ದಾರೆ.

ಅನೇಕ ವಿದ್ಯಾರ್ಥಿಗಳಿಗೆ ತರಬೇತು ನೀಡಿದ ಅವರು ಪ್ರಚಾರದಿಂದ ತುಂಬಾ ದೂರವಿದ್ದವರು. ಕರ್ನಾಟಕ ರಾಜ್ಯಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದವು. 2011ರಲ್ಲಿ 97ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು. ಸುಮಾರು 60 ವರ್ಷ ಮಲ್ಲೇಶ್ವರದಲ್ಲಿ ವಾಸವಿದ್ದರು. ಖುಶಿ ಕೊಡುವ ಸಂಗತಿ ಎಂದರೆ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಅವರ ಮುಂದಿನ ಪೀಳಿಗೆ ದಾಪುಗಾಲು ಹಾಕುತ್ತಿದೆ.

“ನನ್ನ ಮಾವ ತಬಲಾವಾದನ ಮತ್ತು ಗಾಯನ ಇವುಗಳಲ್ಲಿ ಶ್ರೇಷ್ಠ ಪಂಡಿತರೆಂದು ಪರಿಗಣಿಸಲ್ಪಟ್ಟಿದ್ದರು” ಎಂದು ಅವರ ಅಳಿಯ ಶ್ರೀ ಗೋಪಾಲಸ್ವಾಮಿ ನೆನೆಯುತ್ತಾರೆ. ಇಂತಹ ಹಿರಿಯರ ಸಂಗೀತ ನಾಟಕದಂತಹ ಲಲಿತಕಲೆಗಳ ಮೆಚ್ಚಿನ ಶಿಷ್ಯ, ನಂತರ ಮುದ್ದಿನ ಅಳಿಯ ನನ್ನ ಗೆಳೆಯ ಶ್ರೀ ಸಿ ಜಿ ಗೋಪಾಲಸ್ವಾಮಿ, ಬೆಂಗಳೂರಿನ ಹಿರಿಯ ವಕೀಲ ಮತ್ತು ಕಾನೂನು ತಜ್ಞ. ಶ್ರೀ ದತ್ತಾತ್ರೇಯ ಸದಾಶಿವ ಗರುಡ ಅವರ ಬಗ್ಗೆ ಹೆಚ್ಚಿನ ವಿವರ ಮತ್ತು ಫೋಟೋ ಇವರೇ ನೀಡಿದ್ದು. ನನಗೊಂದು ಪರ್ಸನಲ್ ದುಃಖ ಅಂದರೆ ನಾನು ಸಂಗೀತ ಆಗಲಿ ಅಥವಾ ಯಾವುದೇ ಸಂಗೀತ ವಾದ್ಯ ಆಗಲಿ ಕಲಿಯುವ ಬಲವಾದ ಇಚ್ಛೆ ಹೊಂದಿರಲಿಲ್ಲವೇ ಅನ್ನುವುದು. ನಾನು ಚಿಕ್ಕವನಿದ್ದಾಗ ನಮ್ಮೆದುರು ರಸ್ತೆಯ ಒಬ್ಬರು ಯಾರಾದರೂ ತೀರಿಕೊಂಡಾಗ ಹೇಳುತ್ತಿದ್ದ ಉಲ್ಲಮ್ ಉರಿವುದಯ್ಯಾ ಮುರುಗ ಹಾಡಿನ ಬಗ್ಗೆ ಹಿಂದೆ ಹೇಳಿದ್ದೆ. ನನ್ನ ಬ್ಯಾಡ್ ಲಕ್ ನೋಡಿ, ಆ ಹಾಡು ಸಹ ನನಗೆ ಪೂರ್ತಿ ಬರಲೇ ಇಲ್ಲ. ಮನೆಗೆ ಒಂದು ಬುಲ್ ಬುಲ್ ತರಂಗ್ ತಂದಿದ್ದು, ಅದರಲ್ಲಿ ಹಾಡು ನುಡಿಸಲು ಪ್ರಯತ್ನ ಪಟ್ಟಿದ್ದು ಒಂದು ಅನುಭವ. ಒಂದೇ ಒಂದು ಸಲ ಪಿಟೀಲು ಕಲಿಯಬೇಕು ಅಂತಾ ಅನಿಸಿದ್ದು, ನನ್ನ ಸಹೋದ್ಯೋಗಿ ನಾಗರಾಜನ ಹತ್ತಿರ ಅದನ್ನು ಕಲಿಯುವ ನಿರ್ಧಾರ ಮಾಡಿದ್ದು ಮತ್ತು ಕೊನೆಗೆ ನನ್ನ ಇನ್ನೊಬ್ಬ ಗೆಳೆಯ ಪ್ರಸನ್ನ ಹಾಗೂ ನಾನು ಅದನ್ನು ವೀಟೋ ಮಾಡಿದ್ದು ಮುಂದೆ ಎಂದಾದರೂ ನಿಮಗೆ ಹೇಳುತ್ತೇನೆ.

ಇನ್ನೊಂದು ನನ್ನ ಪ್ರಬಲವಾದ ಅನಿಸಿಕೆಯನ್ನು ನಾನು ಇಲ್ಲಿ ಹಂಚಿಕೊಳ್ಳಲೇಬೇಕು. ಸಾಹಿತಿಗಳು, ಸಂಗೀತ ವಿದ್ವಾಂಸರು, ಸಮಾಜದ ಮುಂದಾಳುಗಳು, ಶಿಕ್ಷಣ ತಜ್ಞರು ಮುಂತಾದ ಸ್ವಸ್ಥ ಸಭ್ಯ ಸಮಾಜದ ಆಧಾರ ಸ್ತಂಭಗಳು ಅನಿಸಿರುವ ಹಿರಿಯರ ಬಗ್ಗೆ ನಂತರದ ಪೀಳಿಗೆಗಳಿಗೆ ಲವಶೇಷವೂ ಗೊತ್ತಿರುವುದಿಲ್ಲ ಮತ್ತು ಅವರವರ ಪೂರ್ವಜರು ಈ ಸಮಾಜ ನಿರ್ಮಾಣದಲ್ಲಿ ಎಂತಹ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎನ್ನುವ ಅರಿವು ಸಹ ಇರದು. ಅನಕೃ, ತರಾಸು ಮೊದಲಾದ ಅಂದಿನ ಹಿರಿಯರ ಹಾಗೂ ಇಂದು ನಮ್ಮ ಜತೆ ಇರುವ ಅನೇಕ ಹಿರಿಯರ ಬಗ್ಗೆ, ಅವರು ಆಪ್ತ ವಲಯದಲ್ಲಿ ಹೇಗಿದ್ದರು ಎನ್ನುವ ಬಗ್ಗೆ ಕೆಲವು ಎಕ್ಸೆಪ್ಷನ್ ಬಿಟ್ಟು ಏನೂ ತಿಳಿಯದು. ಇಂಗ್ಲೀಷಿನವರು ಈ ಬಗ್ಗೆ ದೊಡ್ಡ ದೊಡ್ಡ ಪುಸ್ತಕ ಬರೆದು, ಒಂದು ಸಿನಿಮಾ ತೆಗೆದು ತಮ್ಮ ಪರಂಪರೆ ಕಾಪಾಡುತ್ತಾರೆ. ಇಲ್ಲಿ ನಮ್ಮಲ್ಲಿ ಅಂತಹ ಯಾವುದೇ ಪ್ರಯತ್ನ ಇರಲಿ, ಯೋಚನೆ ಸಹ ಇಲ್ಲ.

ಈ ಕೊರತೆಯನ್ನು ನೀಗಿಸಲು ತಮ್ಮ ಜತೆ ಬದುಕಿ ಬಾಳಿದ ಹಿರಿಯರ ಬಗ್ಗೆ ತಮ್ಮ ನೆನಪುಗಳನ್ನು ದಾಖಲಿಸಿ ಇಡುವುದು ನಾವು ನಮ್ಮ ಮುಂದಿನ ಪೀಳಿಗೆಗೆ ರವಾನಿಸುವ ಬೌದ್ಧಿಕ ಆಸ್ತಿ. ಈ ಬಗ್ಗೆ ನಮ್ಮ ಪೀಳಿಗೆಯ ಗೆಳೆಯರು ಕಾರ್ಯೋನ್ಮುಖರಾಗಲಿ ಎನ್ನುವ ಹಂಬಲ ನನ್ನದು.

ಗೀತಾಂಜಲಿ ಥಿಯೇಟರ್ ಅಂದೇನಲ್ಲಾ, ಅದರ ಪಕ್ಕ ಬಲಗಡೆ ಕೊಂಚ ದೂರ ಹೋದರೆ ರಸ್ತೆ ಕವಲು ಆಗುತ್ತೆ. ಒಂದು ರಸ್ತೆ ಕೆಳಗೆ ವೃಷಭಾವತಿ ಹರಿಯುತ್ತೆ, ಈ ರಸ್ತೆಗೆ ಲಿಂಕ್ ರಸ್ತೆ ಎಂದು ಹೆಸರು. ಮತ್ತೊಂದು ರಸ್ತೆ ಸಿರೂರು ಪಾರ್ಕ್ ರಸ್ತೆ. ರಸ್ತೆಗೆ ಸೇರಿದ ಹಾಗೆ ಒಂದು ಪುಟ್ಟ ಮೈದಾನ, ಅದಕ್ಕೆ ಸಿರೂರು ಪಾರ್ಕ್ ಅಂತ ಬೋರ್ಡು ಹಾಕಿದ್ದಾರೆ. ಅಲ್ಲಿ ಒಂದು ಬೆಂಗಳೂರು ನಗರ ಕಾರ್ಪೋರೇಶನ್ ಬೋರ್ಡು ಇದೆ. ಸಿರೂರು ಪಾರ್ಕು ಮತ್ತು ಭಾಷ್ಯಂ ಪಾರ್ಕ್‌ಗಳ ಬಗ್ಗೆ ಒಂದು ಗೊಂದಲ ಇದೆ. ಎರಡೂ ಒಂದೇ ಎಂದು ಕೆಲವರ ನಂಬಿಕೆ. ಎರಡೂ ಪಾರ್ಕ್ ಬೇರೆ ಬೇರೆ. ಭಾಷ್ಯಂ ಪಾರ್ಕ್ ಮಲ್ಲೇಶ್ವರ ಆದರೆ ಈ ಪಾರ್ಕ್ ಶೇಷಾದ್ರಿ ಪುರಕ್ಕೆ ಸೇರಿದ್ದು. ಇಲ್ಲೇ ಡಾಕ್ಟರ್ ಸುಧೀಂದ್ರ ಅವರ ಮನೆ. ಶ್ರೀ ಸುಧೀಂದ್ರ ಅವರು ಬೆಂಗಳೂರಿನ ಪ್ರಖ್ಯಾತ ದಂತ ವೈದ್ಯರು, ಹಲವು ಕಾಲೇಜುಗಳಲ್ಲಿ ಪ್ರೊಫೆಸರ್ ಆಗಿದ್ದರು ಎಂದು ನೆನಪು ಮತ್ತು ಡಾ.ಪದ್ಮಾ ಅವರ ಸಹೋದರ. ಡಾಕ್ಟರ್ ಸುಧೀಂದ್ರ ಅವರ ಶ್ರೀಮತಿ ಅಂತರಾಷ್ಟ್ರೀಯ ಖ್ಯಾತಿಯ ವೀಣಾ ವಾದಕಿ ಶ್ರೀಮತಿ ಸುಮಾ ಸುಧೀಂದ್ರ ಅವರು. ಬೆಂಗಳೂರಿನ ಸಂಗೀತ ಮತ್ತು ಸಾಂಸ್ಕೃತಿಕ ವಲಯದಲ್ಲಿ ಅತ್ಯಂತ ಚಿರಪರಿಚಿತ ಹೆಸರು. ಚೌಡಯ್ಯ ಹಾಲ್ ನಿರ್ಮಾಣ ಮತ್ತು ಅದರ ಕಾರ್ಯ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರು ತಯಾರಿಸಿ ಪೇಟೆಂಟ್ ಪಡೆದಿರುವ ತರಂಗಿಣಿ ವೀಣೆ ಸುಧಾರಿತ ವೀಣೆ ಮತ್ತು ಸುಲಭವಾಗಿ ಒಯ್ಯುವಂತಹುದು.. ಅದೇ ರಸ್ತೆಯಲ್ಲಿ ಮುಂದೆ ಸರಿದರೆ ನಟರಾಜ್ ಥಿಯೇಟರ್ ಪಕ್ಕ ಬರುವಿರಿ. ಎಡಕ್ಕೆ ತಿರುಗಿ ನೂರೋ ಇನ್ನೂರೋ ಗಜ ನಡೆದರೆ ಸ್ವಸ್ತಿಕ್ ಥಿಯೇಟರ್ ಇದ್ದ ಜಾಗ ಸಿಗುತ್ತೆ. ಈಗ ಅಲ್ಲಿ ಸ್ವಸ್ತಿಕ್ ಥಿಯೇಟರ್ ಇಲ್ಲ. ಬದಲಿಗೆ ಒಂದು ದೊಡ್ಡ ಕಟ್ಟಡ ಬಹುಶಃ ಮಾಲ್ ಇರಬಹುದು ರೂಪು ತಳೆಯುತ್ತಾ ಇದೆ. ಯಾವುದೇ ಥಿಯೇಟರ್ ಅಥವಾ ದೊಡ್ಡ ಬಂಗಲೆ ನೆಲಸಮ ಆದರೆ ಅಲ್ಲೊಂದು ಮಾಲ್ ಬರುತ್ತದೆ ಎನ್ನುವುದು ಈಗ ಸಾಮಾನ್ಯ ನಂಬಿಕೆ. ಸ್ವಸ್ತಿಕ್ ಅಂದಕೂಡಲೇ ನೆನಪಿಗೆ ಬರುವುದು ಅಲ್ಲಿ ಪ್ರದರ್ಶಿತವಾಗುತ್ತಿದ್ದ ನೂರಾರು ಜನರ ಅಚ್ಚುಮೆಚ್ಚಿನ ತಮಿಳು ಸಿನೆಮಾಗಳು, ಅದರಲ್ಲೂ ಎಂ ಜಿ ಆರ್ ಸಿನಿಮಾ.

(ಶ್ರೀಮತಿ ಎಸ್ ಎಲ್ ಶ್ರೀಮತಿ ಅವರು ಸಂಗೀತ ವಿದುಷಿ)

ಎಂ ಜಿ ಆರ್ ಅಂದರೆ ನನಗೂ ಒಂದು ಕಾಲದಲ್ಲಿ ತುಂಬಾ ಇಷ್ಟ. ಟೆಂಟ್ ಸಿನಿಮಾದಲ್ಲಿ ಇವರ ಮೊದಲ ಚಿತ್ರ ನೋಡಿದ್ದು ನಾನು. ವೀರಪ್ಪನ್ ಅನ್ನುವ ವಿಲನ್. ಕೊನೆಗೆ ಎಂ ಜಿ ಆರ್ ಕತ್ತಿ ಫೈಟ್ ಆಡುತ್ತಾನೆ ಮತ್ತು ವೀರಪ್ಪನ್ ಒಂದು ಕಾಲು ತೊಡೆಯವರೆಗೆ ಕಟ್ ಮಾಡುತ್ತಾನೆ. ತೆವಳಿಕೊಂಡು ಇಡೀ ಪರದೆಯ ಮೇಲೆ ಒದ್ದಾಡುತ್ತಾನೆ. ಆ ಚಿತ್ರದ ಹೆಸರು ನೆನಪಿಲ್ಲ, ಆದರೂ ಅಲ್ಲಿನ ಈ ದೃಶ್ಯ ಈಗಲೂ ನೆನಪಿನಲ್ಲಿದೆ. ಮತ್ತೊಂದು ಎಂ ಜಿ ಆರ್ ನೆನಪು ಅಂದರೆ ಅವನ ಒಂದು ಹಾಡು ಈಗಲೂ ನನಗೆ ಪೆಟ್. ಹಾಡು ಪೂರ್ತಿ ಬರಲ್ಲ, ನಾನ್ ಆನೈ ಇಟ್ಟಾಲ್ ಅದು ನಡೆಂದ ವಿಟ್ಟಾಳ್….. ಈ ಹಾಡು. ಇದನ್ನು ಆಗಾಗ ನಾನು ಬಾತ್ ರೂಮ್ ಹೊರಗೂ ಸಹ ಹೇಳುತ್ತೇನೆ. ಎಷ್ಟೋ ಸಲ ಗೆಳೆಯರ ಜತೆ ಹೊರ ಊರಿಗೆ ಹೋಗಿದ್ದಾಗ ಬಾತ್ ರೂಮಿನಲ್ಲಿ ಈ ಹಾಡು ಗುನುಗಿ ಅವರ ಮುಖದ ನೆರಿಗೆ ನಿವಾರಣೆಗೆ ನನ್ನ ಅರಿವಿಲ್ಲದೆ ನೆರವಾಗಿದ್ದೇನೆ. ಸ್ವಸ್ತಿಕ್ ನೆನಪು ಎಲ್ಲಿಗೆ ಹೋಯಿತು ನೋಡಿ. ಮತ್ತೆ ಸ್ವಸ್ತಿಕ್ ಮತ್ತು RMS ಕಚೇರಿಗೆ ಹೋಗೋಣ. RMS ಅಂದರೆ ರೈಲ್ವೆ ಮೇಲ್ ಸರ್ವಿಸ್ ಅಂತ. ಅಂಚೆ ಡಬ್ಬಕ್ಕೆ ಹಾಕಿದ ಪತ್ರ ಎಲ್ಲೆಲ್ಲಿ ಹಾದು ಕೊನೆಗೆ ವಿಳಾಸದಾರನ ಹತ್ತಿರ ಸೇರುತ್ತೆ ಅಂತ ಮೂರನೇ ಕ್ಲಾಸಿನಲ್ಲಿ ಓದಿದ್ದು ನೆನಪಿದೆಯಾ? ಇಲ್ಲ ಅಂದರೆ ಜ್ಞಾಪಿಸಿಕೊಳ್ಳಿ. ನಾವು ಅಂಚೆ ಡಬ್ಬಕ್ಕೆ ಹಾಕಿದ ಪತ್ರಗಳ ಸ್ಥಳ ವಿಲೇವಾರಿ ಇಲ್ಲೇ ಆಗುತ್ತಾ ಇತ್ತು ಮತ್ತು ಈ ರಸ್ತೆ RMS ರಸ್ತೆ ಎಂದೇ ಕರೆಸಿಕೊಳ್ಳುತ್ತಿತ್ತು. ನನ್ನ BSc ಗೆಳೆಯ(ಐವತ್ತೇಳು ವರ್ಷ ಹಿಂದೆ)ಮಾಯಾಸೆಟ್ಟಿ ಅನ್ನುವವರು ಇಲ್ಲೇ ಕೆಲಸ ಮಾಡುತ್ತಿದ್ದರು. ಇಡೀ ರಾತ್ರಿ ಅಲ್ಲಿ ಕೆಲಸ ಮಾಡಿ ಕಾಲೇಜಿಗೆ ಬರುತ್ತಾ ಇದ್ದ ಮಾಯಾಸೆಟ್ಟಿಗೆ ಯಾವಾಗಲೂ ನಿದ್ದೆ ಎಳೆಯುತ್ತಿತ್ತು. ಕಣ್ಣು ತೇಲಾಡುತ್ತಿತ್ತು, ನಮಗಿಂತ ಎರಡು ಮೂರು ವರ್ಷ ಹಿರಿಯ ಆತ, ತುಂಬಾ ಗಂಭೀರ ಸ್ವಭಾವ. ನಮ್ಮನ್ನೆಲ್ಲ ಕೋತಿಗಳು, ಚಿಂಪಾಂಜಿಗಳು ಅಂತ ಮನಸಿನಲ್ಲೇ ಬೈದುಕೊಳ್ತಾ ಇದ್ದನೋ ತಿಳಿಯದು. ಅದೇ ರೀತಿ ಇನ್ನೊಬ್ಬರು ನಮಗಿಂತ ಹಿರಿಯರು ಅಂದರೆ ಭೋಗೇಂದ್ರನ್ ಅಂತ. ಅವರೂ ಸಹ ಎಲ್ಲೋ ಕೆಲಸಕ್ಕೆ ಹೋಗ್ತಾ ಇದ್ದರು. ಎಷ್ಟೋ ವರ್ಷದ ನಂತರ ಅವರ ಭೇಟಿ ಸೆಂಟ್ರಲ್ ಬ್ಯಾಂಕ್ ಕೌಂಟರ್‌ನಲ್ಲಿ ಆಯಿತು. ಈ ವಿಷಯ ಮುಂದೆ ಹೇಳುತ್ತೇನೆ. ವಿದ್ಯೆ ಕಲಿಯಲು ಅವರು ರಾತ್ರಿ ಕೆಲಸ ಮಾಡಿಕೊಂಡು ಬಂದು ಇಲ್ಲಿ ಹಗಲಿನಲ್ಲಿ ಕಾಲೇಜಿಗೆ ಬರುತ್ತಾ ಇದ್ದದ್ದು ಅವರ ಮೇಲೆ ನಮಗೆ ಒಂದು ರೀತಿಯ ಅಭಿಮಾನ ಹುಟ್ಟಿಸುತ್ತಿತ್ತು. ಈ ಅಭಿಮಾನ ಈಗ ಇನ್ನೂ ಹೆಚ್ಚಿದೆ ಮತ್ತು ಅಂತಹ ವಿದ್ಯಾರ್ಥಿಗಳನ್ನು ನೋಡಿದಾಗ ಸಂತೋಷದಿಂದ ಮೈ ಉಬ್ಬುತ್ತದೆ.

ನಮ್ಮ ಚಿಕ್ಕಂದಿನಲ್ಲಿ ನಡೆದ ಒಂದು ಅತ್ಯಂತ ದುಃಖದ ಪ್ರಸಂಗವನ್ನು ಗೆ. ಶಿವಸ್ವಾಮಿ ಮತ್ತು ಶ್ರೀರಾಮ್ ಮೊನ್ನೆ ನೆನೆಸಿಕೊಂಡರು..

“ಆವತ್ತು ಆರ್ಯ ವಿದ್ಯಾ ಶಾಲೆಯ ಎದುರು RMS ಆಫೀಸು. ಆರ್ಯವಿದ್ಯಾ ಶಾಲೆಯ ಕಾಂಪೌಂಡ್ ಒಳಗೆ ಮೂರು ವಿದ್ಯಾರ್ಥಿಗಳು ಶಾಲೆ ಶುರುವಾಗುವ ಮೊದಲೇ ಬಂದಿದ್ದರಿಂದ ಶಾಲೆಯ ಬೆಲ್ ಆಗುವುದನ್ನು ಕಾಯುತ್ತಾ ಕುಳಿತಿದ್ದರು.

R M S ಕಛೇರಿಯ ಒಳಗಿಂದ ಬಂದ ವ್ಯಾನ್ ಪೂರ್ತಿ ತೆರೆಯದ ಗೇಟ್‌ಗೆ ಡಿಕ್ಕಿ ಹೊಡೆದು ಕಂಬದ ಮೇಲಿದ್ದ ಕಲ್ಲುಚಪ್ಪಡಿ ಅಲ್ಲಿ ಕೂತಿದ್ದ ಮಕ್ಕಳ ಮೇಲೆ ಬಿದ್ದು ಎಲ್ಲರೂ ಸ್ಥಳದಲ್ಲೇ ಮೃತಪಟ್ಟರು. ಮೂವರು ಮಕ್ಕಳಲ್ಲಿ ನನ್ನ ಸಹಪಾಠಿಯೂ ಇದ್ದ. ಸುಭಾಷ್ ಆಳ್ವ ಅವನ ಹೆಸರು. ಅವನು ಆಗಿನ ಮಂತ್ರಿ ಡಾ. ನಾಗಪ್ಪ ಆಳ್ವ ಅವರ ಮಗ. ಮುಂಚೆ ಬಂದಿದ್ದರಿಂದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದರು. ನಾನು ಶಾಲೆಗೆ ಹೋದಾಗ ಆ ಭಯಾನಕ ದೃಶ್ಯ ಕಂಡು ಮನೆಗೆ ಓಡಿ ಬಂದಿದ್ದೆ. ಗೋಪಾಲಸ್ವಾಮಿ ಈ ದುರಂತ ನೆನೆದ.

ಈ ಸುದ್ದಿ ಘಟನೆ ನಡೆದ ಕೆಲವೇ ದಿವಸದಲ್ಲಿ ಜನರ ನೆನಪಿನಿಂದ ಜಾರಿದವು. ನಾಗಪ್ಪ ಆಳ್ವ ಅವರು ಮಂತ್ರಿ ಆಗಿದ್ದು ನೆನಪಿದೆ. ಹಾಗೇ ಅವರ ಮಗ ಜೀವರಾಜ ಆಳ್ವ ರಾಮಕೃಷ್ಣ ಹೆಗ್ಗಡೆ ಅವರ ಬಲಗೈ ಹಾಗಿದ್ದವರು. ಬಹುಶಃ ಅಪಘಾತಕ್ಕೆ ಒಳಗಾದ ಸುಭಾಷ್ ಆಳ್ವ ಜೀವರಾಜ್ ಆಳ್ವ ಅವರ ಅಣ್ಣನೋ ತಮ್ಮನೋ ಇರಬಹುದು. ಜೀವರಾಜ್ ಆಳ್ವ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆದರು ಮತ್ತು ಅವರ ರಾಜಕೀಯ ಜೀವನ ಏರು ಮುಖದಲ್ಲಿ ಇದ್ದಾಗಲೇ ಅತಿ ಚಿಕ್ಕವಯಸ್ಸಿನಲ್ಲಿ (೫೧ವರ್ಷ)ಕಾಲವಾದರು. ಈಗ ಇದು ಮರೆತು ಹೋದ ಕತೆ.

(ಮುಂದುವರೆಯುವುದು….)