ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಾನೀಗ ಎಲ್ಲವನ್ನೂ ಪ್ರಶ್ನಿಸುವ, ಕುತೂಹಲದಿಂದ ನೋಡುವ ಶಿಶುವಾಗಿ ಬದಲಾಗಿದ್ದೆ. ಪ್ರಾಯೋಗಿಕ ದೃಷ್ಟಿ ನನ್ನಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ವೈಚಾರಿಕ ಪ್ರಜ್ಞೆ ಜಾಗೃತವಾಗಿತ್ತು. ಈ ಬಗೆಯ ಮನೋಧರ್ಮ ಸಂಶೋಧನಾ ಪ್ರಕ್ರಿಯೆಯ ನೆಲೆಯಲ್ಲಿ ಪ್ರಯೋಜನಕಾರಿಯಾಗಿತ್ತು. ಆದರೆ ಅನುದಿನದ ಬದುಕಿನಲ್ಲಿಯೂ ಇದು ಅನುರಣನವಾಗತೊಡಗಿದಾಗ ಒಂದಷ್ಟು ತೊಂದರೆ ಎದುರಾದದ್ದಂತೂ ಸತ್ಯ. ದಿನನಿತ್ಯದ ಬದುಕಿನ ಹಲವು ಸಂಗತಿಗಳ ಬಗ್ಗೆಯೂ ಪ್ರಶ್ನೆಗಳು ನಿರಂತರವಾಗಿ ಹುಟ್ಟತೊಡಗಿತ್ತು. ನನಗೇ ಗೊತ್ತಿಲ್ಲದ ಹಾಗೆ ನಾನೊಬ್ಬ ವಿಮರ್ಶಕ ಪ್ರಜ್ಞೆಯುಳ್ಳ ವ್ಯಕ್ತಿಯಾಗಿಬಿಟ್ಟಿದ್ದೆ.
ಸಂಶೋಧನೆಯ ಅನುಭವದ ಕುರಿತು ಡಾ| ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ

ಸಂಶೋಧಕನಾಗಬೇಕೆಂಬ ಬಯಕೆ ನನ್ನಲ್ಲಿ ಮೂಡಿದ್ದು ನಾನು ದ್ವಿತೀಯ ಎಂ.ಎ. ಓದುತ್ತಿದ್ದಾಗ. ಮುಂದೆ ಅವಕಾಶ ಸಿಕ್ಕಿದರೆ ಪಿಎಚ್.ಡಿ. ಮಾಡಬೇಕು ಎಂಬ ಯೋಚನೆ ಆಗಾಗ ಮನಸ್ಸಿನಲ್ಲಿ ಸುಳಿದಾಡುತ್ತಿತ್ತು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದವನಿಗೆ ದೊರೆತದ್ದು ಡಿಗ್ರಿ ಕಾಲೇಜಿನ ಉಪನ್ಯಾಸಕ ವೃತ್ತಿ. ವಿದ್ಯಾರ್ಥಿಗಳ ತರಲೆ, ತುಂಟತನ, ಗಂಭೀರತೆ, ಪ್ರತಿಭಾ ಪ್ರದರ್ಶನ ಇವುಗಳ ಮಧ್ಯೆ ಒಂದು ವರ್ಷ ಕಳೆದುಹೋದದ್ದೇ ತಿಳಿಯಲಿಲ್ಲ. ಅಷ್ಟಾಗುವಾಗ ಮಂಗಳೂರು ವಿಶ್ವವಿದ್ಯಾನಿಲಯದ ಪಿಎಚ್.ಡಿ. ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದೆ. ಆಯ್ಕೆ ಆಗುತ್ತೇನೆಂಬ ನಿರೀಕ್ಷೆಯೇನೂ ಇರಲಿಲ್ಲ. ಆಯ್ಕೆ ಆಗಬೇಕೆಂಬ ತುಡಿತ ಇದ್ದದ್ದು ನಿಜ. ಅನಿರೀಕ್ಷಿತವಾಗಿ ಆಯ್ಕೆಯಾದೆ. ಸಂಶೋಧನಾ ಪ್ರಕ್ರಿಯೆಯ ಕುರಿತಾಗಿ ಸರಿಯಾದ ತಿಳಿವಳಿಕೆ ಇಲ್ಲದವನಾದ ನನ್ನಲ್ಲಿ ಇನ್ನೂ ಗಂಭೀರತೆ ಮೂಡಿರಲಿಲ್ಲ. ವಿಷಯವನ್ನು ಆಯ್ದುಕೊಳ್ಳುವುದು, ಮಾಹಿತಿ ಸಂಗ್ರಹಿಸುವುದು, ಮಹಾಪ್ರಬಂಧ ಸಿದ್ಧಗೊಳಿಸುವುದು ಇವಿಷ್ಟೇ ನನ್ನ ತಲೆಯಲ್ಲಿದ್ದ ವಿಚಾರಗಳು. ಆದರೆ ಯಾವಾಗ ‘ಡಾ. ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ಎನ್ನುವ ವಿಷಯವನ್ನು ಆಯ್ದುಕೊಂಡು, ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡೆನೋ ಆಗ ವಾಸ್ತವತೆ ಅರಿವಿಗೆ ಬರತೊಡಗಿತ್ತು.

***

ನನಗೆ ಮಾರ್ಗದರ್ಶಕರಾಗಿದ್ದವರು ಡಾ. ಲಕ್ಷ್ಮೀದೇವಿ ಮೇಡಂ ಅವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಓದಿದ್ದ ನನಗೆ ಮಡಿಕೇರಿಯ ಫೀಲ್ಡ್‌ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದ ಅವರ ಪರಿಚಯ ಇರಲಿಲ್ಲ. ಮಾರ್ಗದರ್ಶಕರನ್ನೊಮ್ಮೆ ಮುಖತಃ ಕಂಡು ಮಾತನಾಡಿಸಬೇಕು ಎಂಬ ಯೋಚನೆ ನನ್ನ ತಲೆಗೆ ಬಂದಾಗ ಅವರು ಮಂಗಳೂರಿನ ಸರ್ಕಾರಿ ಕಾಲೇಜೊಂದರಲ್ಲಿ ಪರೀಕ್ಷಾ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲಿಗೇ ಬರಹೇಳಿದರು.

ನಾನವರ ಪಿಎಚ್.ಡಿ. ವಿದ್ಯಾರ್ಥಿ ಎಂದು ಅವರಿಗೆ ತಿಳಿದ ತಕ್ಷಣವೇ ನನ್ನನ್ನೊಮ್ಮೆ ಹಾಗೆಯೇ ನಗುತ್ತಾ ನೋಡಿ, “ಇಷ್ಟು ಚಿಕ್ಕ ಹುಡುಗನಿಗೆ ನಾನು ಹೇಗಪ್ಪಾ ಗೈಡ್ ಮಾಡ್ಲಿ” ಎಂದು ವಿನೋದದಿಂದ ಹೇಳಿದರು. ನಾನಾಗ ನಿಜಕ್ಕೂ ಕುಳ್ಳ ಕುಳ್ಳಗೆ ಸಪೂರ ಸಪೂರವಾಗಿ ಪಿಯುಸಿ ಮುಗಿಸಿದ ಹುಡುಗನ ಹಾಗಿದ್ದೆ. ಎಲ್ಲರೂ ನನ್ನನ್ನು ಸಣ್ಣ ಹುಡುಗ, ವಿದ್ಯಾರ್ಥಿ ಎಂದು ತಪ್ಪಾಗಿ ಭಾವಿಸುತ್ತಿದ್ದುದರ ಅನುಭವ ಈಗಾಗಲೇ ನನಗಿದ್ದುದರಿಂದ ಅವರ ಮಾತು ನನಗೆ ಸಹಜವೆಂದು ಅನಿಸಿತು. ಮೊದಲ ಭೇಟಿಯಲ್ಲಿ ಅವರಲ್ಲಿದ್ದ ಆತ್ಮೀಯತೆ ಆ ಬಳಿಕವೂ ಮುಂದುವರಿಯಿತು. ನಾನು ತಪ್ಪಿದಾಗಲೆಲ್ಲ ಕಿವಿಹಿಂಡಿ, ಸರಿಯಿದ್ದಾಗ ಶಹಭಾಷ್ ಹೇಳಿದ ಅವರ ಮಾರ್ಗದರ್ಶನ ನನ್ನ ಪಿಎಚ್.ಡಿ. ಪಯಣದ ಅವಿಸ್ಮರಣೀಯ ಅನುಭವವಾಗಿದೆ.

***

ಪಿಎಚ್.ಡಿ. ಆರಂಭಿಸಿದ ವೇಳೆಗೆ ಶ್ರೀಯುತ ಮೊಗಸಾಲೆಯವರು ನನ್ನ ಪಾಲಿಗೇನೂ ಅಪರಿಚಿತರಾಗಿರಲಿಲ್ಲ. ಅವರ ‘ತೊಟ್ಟಿ’ ಹೆಸರಿನ ಕಾದಂಬರಿಯನ್ನು ಡಿಗ್ರಿಯಲ್ಲಿದ್ದಾಗಲೇ ಓದಿದ್ದೆ. ‘ಸೀತಾಪುರದ ಕತೆಗಳು’ ಸಂಕಲನದ ಐದು ಕಥೆಗಳ ಬಗ್ಗೆ ಪ್ರಥಮ ಎಂ.ಎ.ಯಲ್ಲಿದ್ದಾಗ ವಿಚಾರ ಮಂಡನೆ ಮಾಡಿದ್ದೆ. ಆದರೆ ಸಾಹಿತ್ಯ ರಚನೆಯ ಜೊತೆಗೆ ಅತ್ಯುತ್ತಮವಾದ ಸಂಘಟನಾ ಶಕ್ತಿಯೂ ಅವರಲ್ಲಿದೆ ಎನ್ನುವುದು ತಿಳಿದುಬಂದದ್ದು ಪಿಎಚ್.ಡಿ. ಆರಂಭಿಸಿದ ನಂತರವೇ. ಸಂಶೋಧನಾ ಪ್ರಕ್ರಿಯೆಯ ಅಷ್ಟೂ ವರ್ಷಗಳಲ್ಲಿ ಅವರ ವ್ಯಕ್ತಿತ್ವದ ಔನ್ನತ್ಯವನ್ನು ನಾನು ಗ್ರಹಿಸಿಕೊಂಡಿದ್ದೇನೆ. ಸಾಧನೆಗಳ ಹೊರತಾಗಿಯೂ ಸರಳವಾಗಿ ಕಾಣಿಸಿಕೊಳ್ಳುವ ಅವರ ವಿನಯಶೀಲತೆಯ ಅರಿವು ನನಗಾಗಿದೆ. ತಾವು ಬೆಳೆಯುವುದರ ಜೊತೆಗೆ ತಮ್ಮ ಒಡನಾಟಕ್ಕೆ ಬಂದವರನ್ನೂ ಬೆಳೆಸುವ ಅವರ ಹೃದಯ ವೈಶಾಲ್ಯತೆ ನನ್ನ ಗಮನಕ್ಕೆ ಬಂದಿದೆ. ಉತ್ತಮ ಸಾಹಿತಿಯ ಬರವಣಿಗೆಗಳನ್ನು ಸಂಶೋಧನಾತ್ಮಕವಾಗಿ ಪರಿಗಣಿಸಿದ ಬಗೆ ನನಗೆ ಸಂತೃಪ್ತಿಯನ್ನು ತಂದುಕೊಟ್ಟಿದೆ.

ನಾನಾಗ ಎರಡು ನಾವೆಗಳ ಪಯಣಿಗನಾಗಿದ್ದೆ. ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಲೇ ಪಿಎಚ್.ಡಿ. ಕೆಲಸವನ್ನೂ ಮಾಡಬೇಕಾಗಿತ್ತು. ಪ್ರತಿಯೊಂದು ಕೆಲಸದಲ್ಲಿಯೂ ಪರಿಪೂರ್ಣತೆಗೆ ಒತ್ತು ಕೊಡುವ ಮನಃಸ್ಥಿತಿಯವನಾದ ನನಗೆ ಎರಡು ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸುವುದು ನಿಜಕ್ಕೂ ಸವಾಲಿನ ವಿಷಯವಾಗಿತ್ತು. ತರಗತಿಯ ಪಾಠಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಹೊರಟರೆ ಪಿಎಚ್.ಡಿ. ಮಾಹಿತಿ ಸಂಗ್ರಹಣೆಗೆ ಸಮಯಾವಕಾಶ ದೊರೆಯುತ್ತಿರಲಿಲ್ಲ. ಈ ಕಡೆಗೆ ಕಣ್ಣು ಹಾಯಿಸಿದರೆ ತರಗತಿಯ ಪಾಠ ನಿರ್ವಹಣೆ ನನಗೆ ಖುಷಿ ಕೊಡದಂತಹ ಸ್ಥಿತಿ. ಎರಡರಲ್ಲಿಯೂ ತೊಡಗಿಸಿಕೊಂಡು ಯಶಸ್ವಿಯಾಗುವ ಪರಮ ವಿದ್ಯೆ ಪ್ರಾಪ್ತವಾಗುವಷ್ಟರಲ್ಲಿ ಒಂದಷ್ಟು ಸಮಯ ಕಳೆದುಹೋಗಿತ್ತು.

***

ಕನ್ನಡ ಎಂ.ಎ. ಓದಿದ್ದೆನಾದರೂ ಕನ್ನಡ ಸಾಹಿತ್ಯ ಜಗತ್ತಿನ ಅಗಾಧತೆಯ ಪರಿಚಯ ನನಗಾಗಿರಲಿಲ್ಲ. ಕನ್ನಡ ಸಾರಸ್ವತ ಲೋಕದ ವ್ಯಾಪ್ತಿ ಅದೆಷ್ಟು ವಿಶಾಲವಾದದ್ದು ಎಂಬ ಅರಿವು ನನ್ನಲ್ಲಿ ಮೂಡಿದ್ದು ಸಂಶೋಧನೆಯ ಸಂಗಕ್ಕೆ ಬಿದ್ದ ಮೇಲೆಯೇ. ಸಾಹಿತ್ಯವೆಂದರೆ ನನ್ನ ಆಪ್ತಮಿತ್ರ ಎನ್ನುವ ನವಿರು ಭಾವನೆಯಲ್ಲಿ ಮೈಮರೆತಿದ್ದ ನನಗೆ ಅದು ಭಯ ಹುಟ್ಟಿಸುವ ಸಂಗತಿಯೂ ಆಗಬಹುದೆಂಬ ಸತ್ಯದರ್ಶನವಾದ ಸಮಯವದು. ಆ ಸಂದರ್ಭದ ನನ್ನ ಅನುಭವವನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಕನ್ನಡ ಸಾಹಿತ್ಯ ಎನ್ನುವುದೊಂದು ವಿಶಾಲ ಸಾಗರ. ಎದ್ದುಬರುವ ಅಲೆಗಳಿಗೆ ಎದೆಗೊಟ್ಟು, ಮುನ್ನುಗ್ಗುವ ಛಲ ಇದ್ದವರಿಗೆ ಮಾತ್ರ ಅದರಾಳದಲ್ಲಿ ಹುದುಗಿಕೊಂಡಿರುವ ಮುತ್ತುರತ್ನಗಳು ದೊರೆಯುತ್ತವೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಬೇಕಾದರೆ ಅವಿರತ ಸಾಧನೆಯ ಅಗತ್ಯವಿದೆ ಎನ್ನುವ ವಾಸ್ತವ ತಲೆಯೊಳಗಿಳಿದದ್ದು ಸಂಶೋಧನಾ ಪ್ರಕ್ರಿಯೆಯಿಂದಾಗಿ ನನಗಾದ ಬಹುದೊಡ್ಡ ಲಾಭ.

***

ದ್ವಿತೀಯ ಪಿ.ಯು.ಸಿ. ಓದುತ್ತಿದ್ದಾಗಲೇ ಸಾಹಿತ್ಯ ರಚನೆಯ ಹವ್ಯಾಸ ನನ್ನಲ್ಲಿತ್ತು. ಕಥೆ, ಕವನ, ಹನಿಗವನ ಬರೆಯುವುದು ನನ್ನ ಆಸಕ್ತಿಯ ವಿಷಯಗಳು. ಈ ಆಸಕ್ತಿ ಹೆಚ್ಚಾಗುತ್ತಾ ಹೋಗಿ, ಎಂ.ಎ. ಪೂರೈಸುವ ವೇಳೆಗಾಗಲೇ ನಾನು ಬರಹವ್ಯಸನಿಯಾಗಿಬಿಟ್ಟಿದ್ದೆ. ಬರೆಯದೇ ಇದ್ದರೆ ಏನನ್ನೋ ಕಳೆದುಕೊಂಡ ಅನುಭವ. ಆದರೆ ಪಿಎಚ್.ಡಿ. ಆರಂಭವಾದ ಮೇಲೆ ನನ್ನ ಸೃಜನಶೀಲ ಸಾಹಿತ್ಯ ರಚನೆಯನ್ನು ನಾನು ಕಡಿಮೆ ಮಾಡಲೇಬೇಕಿತ್ತು. ಎರಡೂ ಬರವಣೆಗೆಗಳ ಮಧ್ಯೆ ಅಜ ಗಜ ಅಂತರ. ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಪಿಎಚ್.ಡಿ. ಬರಹ ಗಂಭೀರತೆ, ಪ್ರಾಮಾಣಿಕತೆ, ನೇರಾಭಿವ್ಯಕ್ತಿ, ವಾಸ್ತವಿಕ ವಿಚಾರ ಮಂಡನೆ ಇತ್ಯಾದಿ ವಿಚಾರಗಳನ್ನು ಆಧರಿಸಿಕೊಂಡಿದ್ದರೆ ಸೃಜನಶೀಲ ಬರವಣಿಗೆಗೆ ಬೇಕಾಗಿದ್ದುದು ಕಲ್ಪನಾಶಕ್ತಿ, ಭಾವತೀವ್ರತೆ, ಅಂತರ್ಮುಖಿತ್ವ ಇಂತಹ ಸಂಗತಿಗಳು. ಪಿಎಚ್.ಡಿ. ಬರವಣಿಗೆಯ ಮರುದಿನ ಕಥೆ ಬರೆಯಹೊರಟರೆ ಅದು ಪ್ರಬಂಧದ ಸಹೋದರನಂತೆ ಇರುತ್ತಿತ್ತು. ಒಳ್ಳೆಯ ಕಥೆಯೊಂದನ್ನು ಬರೆದ ಮೇಲೆ ಪಿಎಚ್.ಡಿ. ಬರಹಕ್ಕಿಳಿದರೆ ಅದು ಲಾಲಿತ್ಯಪೂರ್ಣವಾಗಿ ನಾಟ್ಯವಾಡುತ್ತಿತ್ತು. ಹಲವು ವಾರಗಳ ಪರಿಶ್ರಮದ ಬಳಿಕ ಎರಡೂ ಬರವಣಿಗೆ ರೀತಿಯಲ್ಲೊಂದು ಸ್ಪಷ್ಟತೆ ಒದಗಿಬಂದದ್ದಂತೂ ನಿಜ.

***

ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಾನೀಗ ಎಲ್ಲವನ್ನೂ ಪ್ರಶ್ನಿಸುವ, ಕುತೂಹಲದಿಂದ ನೋಡುವ ಶಿಶುವಾಗಿ ಬದಲಾಗಿದ್ದೆ. ಪ್ರಾಯೋಗಿಕ ದೃಷ್ಟಿ ನನ್ನಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ವೈಚಾರಿಕ ಪ್ರಜ್ಞೆ ಜಾಗೃತವಾಗಿತ್ತು. ಈ ಬಗೆಯ ಮನೋಧರ್ಮ ಸಂಶೋಧನಾ ಪ್ರಕ್ರಿಯೆಯ ನೆಲೆಯಲ್ಲಿ ಪ್ರಯೋಜನಕಾರಿಯಾಗಿತ್ತು. ಆದರೆ ಅನುದಿನದ ಬದುಕಿನಲ್ಲಿಯೂ ಇದು ಅನುರಣನವಾಗತೊಡಗಿದಾಗ ಒಂದಷ್ಟು ತೊಂದರೆ ಎದುರಾದದ್ದಂತೂ ಸತ್ಯ. ದಿನನಿತ್ಯದ ಬದುಕಿನ ಹಲವು ಸಂಗತಿಗಳ ಬಗ್ಗೆಯೂ ಪ್ರಶ್ನೆಗಳು ನಿರಂತರವಾಗಿ ಹುಟ್ಟತೊಡಗಿತ್ತು. ನನಗೇ ಗೊತ್ತಿಲ್ಲದ ಹಾಗೆ ನಾನೊಬ್ಬ ವಿಮರ್ಶಕ ಪ್ರಜ್ಞೆಯುಳ್ಳ ವ್ಯಕ್ತಿಯಾಗಿಬಿಟ್ಟಿದ್ದೆ. ‘ಅವರವರ ಬದುಕು ಅವರವರದ್ದು; ಅದರಲ್ಲಿ ಮೂಗು ತೂರಿಸುವ ಅಧಿಕಾರ ಯಾರಿಗೂ ಇಲ್ಲ’ ಎಂಬ ನಂಬಿಕೆ ಮೊದಲು ನನ್ನಲ್ಲಿತ್ತು. ಆದರೆ ಈಗ ನನ್ನ ಬದುಕಿನ ಜೊತೆಗೆ ಬೇರೊಬ್ಬರ ಜೀವನವನ್ನೂ ವಿಶ್ಲೇಷಿಸುವ ಮನಃಸ್ಥಿತಿ ನನ್ನ ಪ್ರಜ್ಞೆಯನ್ನೂ ಮೀರಿ ನನ್ನ ಮನಃಪಟಲದಲ್ಲಿ ಹೆಜ್ಜೆಗುರುತು ಮೂಡಿಸಲಾರಂಭಿಸಿತ್ತು. ಇದೊಂದು ಬಗೆಯ ವಿಚಿತ್ರ ಹಿಂಸೆಯಾಗಿ, ಬಿಟ್ಟೆನೆಂದರೂ ಬಿಡದ ಮಾಯೆಯಾಗಿ ನನ್ನನ್ನು ಒಂದಷ್ಟು ಸಮಯ ಕಾಡಿದ್ದು ನನಗೆ ಮರೆಯಲಾಗದ ವಿಷಯ.

***

ಕಾರ್ಯಕ್ರಮ ನಿರೂಪಣೆ ಮಾಡಿದ ಅನುಭವ ನನಗಿತ್ತು. ವಿದ್ಯಾರ್ಥಿಗಳೆದುರು ನಿಂತು ಪಾಠ ಮಾಡಿದ ಅನುಭವವೂ ಜೊತೆಗಿತ್ತು. ಯಾವತ್ತೂ ನನ್ನಲ್ಲಿ ಅಳುಕು ಇರಲಿಲ್ಲ. ಯಾರಿಗೂ ಗೊತ್ತಿಲ್ಲದ ಪರಮರಹಸ್ಯವನ್ನು ತಿಳಿಸುತ್ತಿದ್ದೇನೆ ಎಂಬ ಭಂಡ ಆತ್ಮವಿಶ್ವಾಸ ನನ್ನ ಸುದೀರ್ಘ ಸಂಗಾತಿಯಾಗಿತ್ತು. ಸಂಶೋಧನೆಗಿಳಿದ ಕ್ಷಣವೇ ಈ ಆತ್ಮವಿಶ್ವಾಸ ಅದೆಲ್ಲೋ ಕಳೆದುಹೋಯಿತು. ಈ ಜಗತ್ತಿಗೆ ನಾನು ತಿಳಿಸಬೇಕಾದದ್ದು ಏನೂ ಇಲ್ಲ; ಎಲ್ಲವನ್ನೂ ಈ ಪ್ರಪಂಚ ಈಗಾಗಲೇ ತಿಳಿದುಕೊಂಡಾಗಿದೆ ಎಂಬ ಭಾವನೆ ಮೂಡತೊಡಗಿತ್ತು. ವಿದ್ಯಾರ್ಥಿಗಳೆದುರು ನಿಂತು ಮಾತನಾಡುವಾಗಲೂ ಸಹ ‘ನಿಮಗೆ ಗೊತ್ತಿರಬಹುದು’ ಎಂದೇ ಮಾತನ್ನು ಆರಂಭಿಸುವ ಅಭ್ಯಾಸ ಶುರುವಾಗಿತ್ತು. ನಾನು ಹೇಳಹೊರಟಿರುವ ವಿಚಾರ ಎದುರು ಕುಳಿತ ಎಲ್ಲರಿಗೂ ತಿಳಿದಿದೆ ಎಂಬ ವಿಚಿತ್ರ ಆಲೋಚನೆ ಮನದಲ್ಲಿ ಮೂಡತೊಡಗಿತ್ತು. ಇದರಿಂದಾಗಿ ತುಸು ಸಮಯ ಕೀಳರಿಮೆಯ ಕಿರಿಕಿರಿಯನ್ನೂ ಅನುಭವಿಸಿದ್ದು, ಅದರಿಂದ ಹೊರಬಂದದ್ದು ಇವೆಲ್ಲವೂ ಬೆಚ್ಚನೆಯ ಭಾವ ಹುಟ್ಟುಹಾಕುವ ಸಂಗತಿಗಳು.

ಸೇರಿರುವ ವಿದ್ವಜ್ಜನರ ಮುಂದೆ ಮಹಾಪ್ರಬಂಧವನ್ನು ಮಂಡಿಸುವ ಅವಕಾಶ ದೊರೆತದ್ದು ಸಂಶೋಧನೆ ಆರಂಭಿಸಿದ ಏಳು ವರ್ಷಗಳ ನಂತರ. ಸರಿಯಾಗಿ ಪೂರ್ವಸಿದ್ಧತೆ ಮಾಡಿಕೊಂಡು ಹೋಗಿದ್ದರೂ ಮನಸ್ಸಿನಲ್ಲಿ ತುಸು ಅಳುಕಿತ್ತು. ತಾಯಿ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಯಲ್ಲಿರುವ ನೆನಪನ್ನು ಆ ಕ್ಷಣದಲ್ಲಿ ಪ್ರಯತ್ನಪೂರ್ವಕವಾಗಿ ತಡೆದು ನಿಲ್ಲಿಸಿದ್ದೆ; ಮನದ ಒಳಪ್ರವೇಶಿಸದಂತೆ. “ನೀನು ಚೆನ್ನಾಗಿಯೇ ಪ್ರಬಂಧ ಮಂಡಿಸುತ್ತೀಯ ವಿಶ್ವ” ಎಂದು ಗುರುಗಳಾದ ಶ್ರೀಯುತ ಧನಂಜಯ ಕುಂಬ್ಳೆ ಸರ್ ಹಿಂದಿನ ದಿನ ಹೇಳಿದ್ದ ಮಾತು ಕಿವಿಯಲ್ಲಿ ರಿಂಗಣಿಸುತ್ತಿತ್ತು. “ತಲೆಕೆಡಿಸ್ಕೊಳ್ಬೇಡಿ. ಈಗ ತಾಯಿಯ ಆರೋಗ್ಯ ನೋಡ್ಕೊಳ್ಳಿ. ನಾಡಿದ್ದು ಬಂದು ಚೆನ್ನಾಗಿ ಪ್ರಬಂಧ ಮಂಡಿಸಿ ವಿಶ್ವನಾಥ್” ಎಂದು ಗುರುಗಳಾದ ಶ್ರೀಯುತ ಸೋಮಣ್ಣ ಸರ್ ಹೇಳಿದ್ದು ಅಂತರಂಗದಲ್ಲೊಂದು ಶಕ್ತಿ ಹುಟ್ಟುಹಾಕಿತ್ತು. ನನ್ನಿಂದ ಸಾಧ್ಯವಾದಮಟ್ಟಿಗೆ ಪ್ರಬಂಧ ಮಂಡಿಸಿದೆ. ಬೆನ್ನಿಗೆಯೇ ಪ್ರಶ್ನೆಗಳ ಸರಮಾಲೆ. ಎಲ್ಲದಕ್ಕೂ ನನಗೆ ತಿಳಿದಷ್ಟು ಉತ್ತರ ಕೊಟ್ಟೆ. ಪ್ರಬಂಧ ಮಂಡನೆ ಬಹಳ ಚೆನ್ನಾಗಿತ್ತು. ಕೊಟ್ಟ ಉತ್ತರಗಳೂ ಸಮರ್ಪಕವಾಗಿವೆ ಎಂಬ ಅಭಿಪ್ರಾಯ ಸೇರಿದ್ದ ಎಲ್ಲರಿಂದಲೂ ವ್ಯಕ್ತವಾದಾಗ ಹೃದಯದೊಳಗೆ ಅಂತಿಮವಾಗಿ ನೆಲೆಗೊಂಡದ್ದು ಧನ್ಯತೆಯ ಭಾವ. ಈ ಮೊದಲು ನನ್ನ ಪರಿಚಯವೇ ಇಲ್ಲದಿದ್ದರೂ ಆತ್ಮೀಯತೆ ತೋರಿದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಂತೂ ನನ್ನ ಮನದಲ್ಲಿ ಶಾಶ್ವತ ಸ್ಥಾನ. ನನ್ನೆಲ್ಲಾ ಪ್ರಯತ್ನಗಳಿಗೂ ಜೊತೆನಿಲ್ಲುವ ತಂದೆ, ತಾಯಿ, ಅಣ್ಣನ ಪ್ರೋತ್ಸಾಹವಂತೂ ಬರೆದು ಮುಗಿಯದ ವಿಚಾರ.