ಮುಟ್ಟದೇ ಉಳಿದವರು…

ಮುಟ್ಟಿಸಿಕೊಳ್ಳುತ್ತಲೇ ಇರಲಿಲ್ಲ ಅವ್ವ
ತಿಂಗಳಲ್ಲಿ ಮೂರು ದಿನ..
ನಾನೋ ಸೆರಗುಹಿಡಿದು
ಓಡಾಡುವ ಕೂಸು ಆಗ…
ಕೂತು ಹಿತ್ತಲ ಬಾಗಿಲಲ್ಲಿ
ಬಾಳೆಎಲೆಯಲಿ ಉಂಡು
ಸಾರಿಸಿ ಹೋಗುತ್ತಿದ್ದ ಅವ್ವ,
ಆ ಮೂರುದಿನ ಮಾತ್ರ
ವಿಪರೀತ
ಕೋಪಿಷ್ಟೆಯಾಗುತ್ತಿದ್ದಳು..,
ಬಚ್ಚಲಲ್ಲಿ ಎತ್ತರಕ್ಕೆ
ಕಟ್ಟಿಟ್ಟ ಗಂಟನ್ನು
ನಿಗೂಢ ರಹಸ್ಯವೆಂಬಂತೆ
ಕಾಪಾಡಿಕೊಂಡೇ ಬರುತ್ತಿದ್ದಳು..
ಹೀಗೆ ಒಂದು ದಿನ
ಹಿತ್ತಲ ಬಾಗಿಲಲ್ಲಿ
ಅಕ್ಕನೂ ಕೂತು ಉಂಡಾಗ
ನನಗೋ ದಿಗಿಲೇ ದಿಗಿಲು..,
ಅಕ್ಕನೂ ಮೂರುದಿನ
ಮುಟ್ಟಿಸಿಕೊಳ್ಳುವುದಿಲ್ಲ ಎಂದು..
ಹೊರ ಜಗುಲಿಯ ಮೇಲೆಯೇ
ಮಲಗಿದ ಅವ್ವ ಅಕ್ಕ
ಚಳಿಗೆ ನಡುಗುತ್ತಾ,
ಸೊಳ್ಳೆಗಳ ಕಾಟ ತಡೆಯುತ್ತಾ
ನಿದ್ದೆಯಿಲ್ಲದೇ ನರಳುವಾಗ
ನನಗೂ ಹತ್ತುತ್ತಿರಲಿಲ್ಲ ನಿದ್ದೆ
ಆ ಮೂರು ದಿನ,
ಮುಟ್ಟು ಮುಟ್ಟು ಎನ್ನುತ್ತಲೇ
ಮುಟ್ಟಿಸಿಕೊಳ್ಳದೇ ಉಳಿದವರು ನಾವು…
ಈಗ, ನನ್ನವಳೂ
ತಿಂಗಳಲ್ಲಿ ಮೂರುದಿನ
ಅಸ್ವಸ್ಥಗೊಳ್ಳುತ್ತಾಳೆ..,
ಚೂರು ಹೆಚ್ಚೇ ಸಿಡಿಮಿಡಿಗೊಳ್ಳುತ್ತಾಳೆ,
ಹೊರಹಾಕುತ್ತಾಳೆ ಆಗಾಗ
ಒಳಗಿನ ಸಂಕಟವ..,
ಎಂದಿನಂತೆಯೇ ಎದೆಗಪ್ಪಿ
ಮಲಗುತ್ತೇನೆ ನಾನು
ತುಸು ಹೆಚ್ಚೇ ಮುದ್ದಿಸುತ್ತಾ.,
ಅವಳು ಮೆಲ್ಲನೆ ಅರಳುತ್ತಾಳೆ ಹೂವಂತೆ,
ನಾಜೂಕಾದ ಪಕಳೆಗಳ ತೆರೆದಿಟ್ಟು
ಹಾರುತ್ತಾಳೆ ಚಿಟ್ಟೆಯಂತೆ..,
ಮರೆತು ನೋವ
ಸಂಭ್ರಮಿಸುತ್ತಾಳೆ
ಹೊಸ ಚಿಗುರಿನಂತೆ..,
ಮುಟ್ಟು ಮುಟ್ಟು ಎನ್ನುತ್ತಲೇ
ಮುಟ್ಟದ ನಮಗೆ
ಜಗದ ಹುಟ್ಟಿನ ಗುಟ್ಟು ಹೇಳುತ್ತಾಳೆ….

 

ಸಚಿನ್  ಅಂಕೋಲಾದವರು.
ಉಡುಪಿಯ ವಾಸಿಯಾಗಿರುವ ಸಚಿನ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್..
“ನಾನೂ ಹೆಣ್ಣಾಗಬೇಕಿತ್ತು” ಇವರ ಪ್ರಕಟಿತ ಕವನ ಸಂಕಲನ..