ರಕ್ತದಲೆ ಬರೀಬೇಕೆ ನಾಳೆಯನು?
ಚರಿತ್ರೆ ಓದುವುದು
ಎಂತದೊ ಒಂದು ಬೋರು
ಪುಟಗಳನ್ನು ಹಾರಿಸುತ್ತಲೇ
ಇರುತ್ತೇನೆ..
ಓದಿದ ಪುಟಗಳ ಲೆಕ್ಕಕ್ಕಿಂತ
ಹಾರಿಸಿದ ಪುಟಗಳ
ಲೆಕ್ಕವೇ ದೊಡ್ಡದು..
ಓದಿದ ಇಷ್ಟೇ ಪುಟಗಳಲಿ
ಕಲೆ ಸಾಹಿತ್ಯ ಸಂಸ್ಕೃತಿ
ಆಡಳಿತ ಕರ ವಸೂಲಿ
ಕಠಿಣ ಶಿಕ್ಷೆ ಬಹುಪರಾಕು..
ಒಬ್ಬ ರಾಜನ ಹೆಸರು ತೆಗೆದು
ಇನ್ನೊಬ್ಬ ರಾಜನ ಹೆಸರು
ಹಾಕಿದರೂ ಅಂತಹ
ಬದಲಾವಣೆ ಕಾಣಿಸಿದ್ದು ಕಾಣೆ!
ಅದಿರಲಿ,
ಚರಿತ್ರೆಯ ಬಹುಪಾಲು
ಪುಟಗಳನು ಕದ್ದ ಯುದ್ದಗಳ
ಕತೆ ಮಾತ್ರ ಧಾರುಣ
ಪುಟ ಪುಟವೂ ರಕ್ತ..
ಸಿಕ್ಕಾವು ಮೂಳೆ
ಹಳೆಯ ಖಡ್ಗದ ಮುರಿದ ಚೂರು
ಈಟಿ ಕುದುರೆ ಆನೆಯ ಶರಪಂಜರ
ರಾಜರ ಕತೆ ಅದು
ಅದು ಯುದ್ದದ ಕತೆಯೇ!
ತಲೆಯ ಮೇಲೆ ಕಿರೀಟ ಇರುವವರೆಗೂ
ಕೈಯಲ್ಲೊಂದು
ಖಡ್ಗ ಝಳಪಿಸುತ್ತಲೆ ಇರಬೇಕು
ಉಳಿಯಲು ಬಡಿದಾಡಿಕೊಂಡೆ
ಇರಬೇಕು
ರಕ್ತ ಹರಿದಷ್ಟು
ಗೆಲುವಿನ ನಗುವಿಗೆ ಪುಷ್ಟಿ
ಒಬ್ಬನನ್ನು ಕೊಂದರೆ ಕೊಲೆ
ಸಾವಿರಾರು ಜನರನು ಕೊಂದರೆ ಯುದ್ಧ
ಯೋಧ ಅಜರಾಮರ
ಒಂದು ಶಾಸನ
ಅದನು ಮೆರೆಸಲಿಕ್ಕಂತ
ಒಂದು ಹೊಸ ಯುದ್ಧ
ಪ್ರತಿ ಅಕ್ಷರವೂ ರಕ್ತದ ಕೆಂಪು ಕೆಂಪು
ಪ್ರತಿ ವೀರಗಲ್ಲುಗಳು
ಸಾವಿರ ಹಸಿರಂಡೆಮುಂಡೆಯರ
ನಿಟ್ಟುಸಿರು ದುಃಖ ದುಮ್ಮಾನ
ಚರಿತ್ರೆಯ ಪುಟಗಳವು ಕಪ್ಪು ಕಪ್ಪು
ಕೊಲ್ಲುವುದು ಉಳಿದಿದೆ ಅಷ್ಟೆ
ಮುತುವರ್ಜಿಯಲಿ..,
ನಾವೀಗ
ಯುದ್ಧವನು ತೀಡಿ ತೀಡಿ
ಮತ್ತಷ್ಟು ಹೊಳಪುಗೊಳಿಸಿದ್ದೆವೆ
ಚರಿತ್ರೆ ನಾಚುವಂತ ಹತಾರಗಳ
ರಾಶಿ ಸುರಿದಿದೆ
ನಮ್ಮ ಎದೆಗಳು ಬೀಗುತ್ತವೆ
ನಾವು ಚೆನ್ನಾಗಿಯೆ ಕೊಲ್ಲಬಲ್ಲೆವು
ಎಂಬುದು ಎಲ್ಲಾ ದೇಶಗಳು
ಕಲಿತ ಒಂದು ಹೊಸ ಕಲೆ!
ನೆಲವೇಕೆ ಹಡೆಯಲಿಲ್ಲ
ಮತ್ತೆ ಮತ್ತೆ ಅಶೋಕನನು;
ಹೆಣದ ರುಚಿ ನೋಡಿದ
ಮಣ್ಣಿಗೂ ಬಂತೆ ಹುಸಿ ಬಂಜೆತನ!?
ಕೊಂದು ಕಟ್ಟಬೇಕೆ ನಾಡೊಂದನು?
ರಕ್ತದಲೆ ಬರೆಯಬೇಕೆ ನಾಳೆಯೊಂದನು?
ಹೊಸತಲೆಮಾರಿನ ಕವಿ ಸದಾಶಿವ್ ಸೊರಟೂರು ಹುಟ್ಟಿದ್ದು, ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ.
ಈಗ ಚಿಂತಾಮಣಿಯ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ಕಲಿಸುವ ಮೇಷ್ಟ್ರು.
‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ ಕವನ ಸಂಕಲನಗಳು ಹಾಗೂ ಮೂರು ಪ್ರಕಟಿತ ಲೇಖನಗಳ ಕೃತಿಗಳು ಪ್ರಕಟವಾಗಿವೆ.
ಸಂಯುಕ್ತ ಕರ್ನಾಟಕ ಪತ್ರಿಕೆಯ ಅಂಕಣಕಾರರೂ ಹೌದು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ