“ನನ್ನನ್ನು ತೀವ್ರವಾಗಿ ಅಲುಗಾಡಿಸಿದ್ದು, ನಿಸ್ಸಹಾಯಕವಾಗಿ ನನ್ನ ಕವಿತೆಯಲ್ಲಿ ಧ್ವನಿ ಮಾತ್ರ ನೀಡಲು ಸಾಧ್ಯವಾಗಿದ್ದು ನಮ್ಮ ನಾಡಿನ ಹೆಂಗಸರ ಅಸಂಖ್ಯ ನೋವು. ತಮ್ಮವರು, ಪರರು ಎನ್ನದೆ ಎಲ್ಲರನ್ನೂ ಪ್ರೀತಿಯಿಂದ ಕಂಡವರು. ಜೀವನೋತ್ಸಾಹದಿಂದ ತುಂಬಿ ತುಳುಕುವ ಇವರು, ಘಟ್ಟಿಗಿತ್ತಿಯರಾದರೂ ಮೃದು ಮನಸ್ಸಿನವರು. ಇವರೆಷ್ಟು ಅಭಾಗ್ಯರೆಂದರೆ, ಇವರು ಹುಟ್ಟಿರುವುದೇ ಇಡೀ ಮನುಕುಲದ ನೋವನ್ನು, ಕಷ್ಟಗಳನ್ನು ಅನುಭವಿಸಲೆಂದೇ ತಿಳಿದವರು.”
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ರೊಸಾಲಿಯಾ ದಿ ಕಾಸ್ತ್ರೋ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ
ರೊಸಾಲಿಯಾ ದಿ ಕಾಸ್ತ್ರೋ (1837–1885) ಪದ್ಯಗಳು ಹಾಗೇ ಆಳಕ್ಕೆ ಇಳಿದು ಕಲಕುತ್ತವೆ. ಎಂದೂ ಮುಗಿಯದ ನೋವಿನ ಕರಿ ನೆರಳಿನ ಪದ್ಯಗಳು ಅಷ್ಟೇ ತೀವ್ರ ಮತ್ತು ಹರಿತ. ಶಾಶ್ವತ ಎನಿಸುವ ಬದಲಾವಣೆಯ ನೋವಿನ ರಾಗವನ್ನೇ ಪಲುಕಿದರೂ ಈ ಪದ್ಯಗಳಲ್ಲಿ ಒಂದು ಛಲವಿದೆ, ಸುಳ್ಳು ಸಮಾಧಾನವನ್ನ ಒಪ್ಪದ ಗುಣವಿದೆ. ತನ್ನ ಪಾಲಿನ ನೋವಿನ ಗುಟುಕನ್ನ ರೊಸಾಲಿಯಾ ತೆಳುವಾಗಿಸದೆ, ಮನದಲ್ಲಿ ಯಾವ ನಂಜಿಲ್ಲದೆ ನುಂಗುವಳು. ಪ್ರಕೃತಿಯೇ ಹೆಚ್ಚಾಗಿ ಹಣಿಕಿದರೂ ಪದ್ಯದ ಅಂದವನ್ನಷ್ಟೇ ಅಲ್ಲ ಹರಿತವಾದ ನೋವಿನ ಸೆಳಕನ್ನೂ ಅಷ್ಟೇ ತೀವ್ರವಾಗಿ ದಾಟಿಸುವುದು.
ಗ್ಯಾಲಿಶಿಯನ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಬರೆದ ರೊಸಾಲಿಯಾ ಹೆಚ್ಚಾಗಿ ಬರೆದದ್ದು ಗ್ಯಾಲಿಶಿಯನ್ ಭಾಷೆಯಲ್ಲಿಯೇ. ಸಾಮಾಜಿಕ ಕಳಕಳಿ ಉಳ್ಳ ಗಮನಾರ್ಹ ಕವಿ, ರೊಸಾಲಿಯಾ. ಚರ್ಚಿನ ಪೂಜಾರಿಯ ಅನೈತಿಕ ಮಗುವೆಂದು ಕಡೆಗಣಿಸಲ್ಪಟ್ಟ ಇವಳು ತನ್ನ ಇಡೀ ಬಾಲ್ಯವನ್ನ ಹಳ್ಳಿಯಲ್ಲಿ ತನ್ನ ತಂದೆ ತಾಯಿಯಿಂದ ದೂರವಿದ್ದು, ಸದಾ ದಮನಿತ ಶೋಷಿತ ರೈತಾಪಿ ವರ್ಗದೊಂದಿಗೆ ಕಳೆದವಳು. ತಾಯಿ, ಶ್ರೀಮಂತ ಮನೆತನದ ಹೆಣ್ಣು. ಹದಿನಾಲ್ಕನೇ ವಯಸ್ಸಿಗೆ ರೊಸಾಲಿಯಾಳನ್ನು ತನ್ನೊಡನೆ ಕರೆದೊಯ್ಯುವಾಗ ಅಷ್ಟು ವರುಷ ಹಳ್ಳಿಯಲ್ಲಿಯೇ ಜೀವಿಸಿದ ರೊಸಾಲಿಯಗೆ ತನ್ನ ಮನೆಯ ನೆನಪು ಕಾಡುವುದು ಹೀಗೆ…
“ಹೋಗಿ ಬರುವೆ ನಾಕವೇ,
ಹೋಗಿ ಬರುವೆ ಸುಖವೇ,
ಹುಟ್ಟಿ ಬೆಳೆದಮನೆಯ ತೊರೆಯುವೆ,
ನಾನು ಕಂಡ ಪರಪಂಚ ಈ ನನ್ನೂರ ತೊರೆಯುವೆ,
ಕಾಣದ ಲೋಕಕ್ಕಾಗಿ,
ಅಪರಿಚಿತರಿಗಾಗಿ ಸ್ನೇಹಿತರ ತೊರೆಯುವೆ
ಕಡಲಿಗಾಗಿ ಕಣಿವೆ ತೊರೆಯುವೆ
ಇಷ್ಟೇ!
ಪ್ರೀತಿಸುವುದೆಲ್ಲವ ತೊರೆಯುವೆ
ಏನು ಮಾಡಲಿ ನಾನು ಬಡಪಾಯಿ,
ಈಗ ನನ್ನ ನೆಲ ನನ್ನದಲ್ಲ”
ಹೀಗೆ ಅತ್ಯಂತ ನೋವಿನಿಂದಲೇ ತಾನು ಹುಟ್ಟಿ ಬೆಳೆದ ಊರನ್ನ ಜನರನ್ನ ತೊರೆದು ತಾಯಿಯೊಂದಿಗೆ ಹೊಸ ಜಗತ್ತಿನೊಂದಿಗೆ ಸೆಣೆಸಲು ಹೊರಟವಳು.
ಹನ್ನೊಂದನೇ ವಯಸ್ಸಿಗೆ ಬರೆಯಲು ಆರಂಭಿಸಿದ ರೊಸಾಲಿಯಾ ಸಾಕಷ್ಟು ಕಾದಂಬರಿಗಳನ್ನು ಬರೆದರೂ ಕವಿತೆಯನ್ನೇ ಹೆಚ್ಚು ನೆಚ್ಚಿದವಳು. ಗೆಲಿಶಿಯನ್ ಭಾಷೆಯಲ್ಲಿ: Cantares gallegos (1863; Galician Songs) and Follas novas (1880; New Medleys), ಸ್ಪಾನಿಷ್: la Flor (1857 the flower), A mi madre ( 1863 ; To my mother), En las orillas del Sar (1884; Beside the River Sar) ಇವಳ ಕವಿತಾ ಸಂಚಿಗಳು.
ಗ್ಯಾಲಿಶಿಯ ಜನರ ಜಾನಪದ, ಜ್ಞಾನ, ಬುದ್ಧಿವಂತಿಕೆ, ತಾಯ್ನೆಲದ ಬಗೆಗಿನ ಪ್ರೀತಿ, ಬಡತನ, ನೋವುಗಳನ್ನೇ ಹಾಡಿದ ರೊಸಾಲಿಯಾ ನಂತರದ ದಿನಗಳಲ್ಲಿ ತನ್ನೊಳಗಿನ ಭಾವೋತ್ಕರ್ಷಕ್ಕೆ ಆಣೆಕಟ್ಟು ಕಟ್ಟದೆ, ಅದುಮಿಟ್ಟ ಬಯಕೆ, ನೋವು, ಹತಾಶೆ, ಏಕಾಂತ, ಆಧ್ಯಾತ್ಮವನ್ನು ಕವಿತೆಯಾಗಿಸಿದಳು. ಅಧಿಕಾರದ ದುರ್ಬಳಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ರೊಸಾಲಿಯಾ, ಮಹಾನ್ ಸ್ತ್ರೀವಾದಿ.
ಬಾಳ ಬುತ್ತಿಯಲ್ಲಿ ಸುಖದ ಪಾಲು ಕಡಿಮೆಯೇ ಇದ್ದ ರೊಸಾಲಿಯಾ ನೋವನ್ನೇ ಹೆಚ್ಚು ಉಂಡದ್ದು. ಮ್ಯಾನುಎಲ್ ಮುರಗಿಯೇ ಎನ್ನುವ ಗ್ಯಾಲಿಶಿಯದ ಪತ್ರಕರ್ತ, ಇತಿಹಾಸಜ್ಞನನ್ನ ವರಿಸಿ ಏಳು ಮಕ್ಕಳಿಗೆ ತಾಯಿಯಾದಳು. ರೊಸಾಲಿಯಾಳ ಪದ್ಯಗಳನ್ನು ಸಂಪಾದಿಸಿ ಪ್ರಕಟಿಸಿದ್ದೂ ಈತನೇ. ಸದಾ ಅನಾರೋಗ್ಯದಿಂದ ಬಳಲುತ್ತಿದ್ದ ರೊಸಾಲಿಯಾ ತನ್ನ ಐವತ್ತನೇ ವಯಸ್ಸಿಗೆ ಗರ್ಭಕೋಶದ ಕ್ಯಾನ್ಸರ್‌ನಿಂದಾಗಿ ಬದುಕು ಮುಗಿಸಿ ನಿರ್ಗಮಿಸಿದಳು.
ರೊಸಾಲಿಯಾಳ “Follas Novas” ಸಂಕಲನದ ಕವಿನುಡಿಯ ಆಯ್ದ ಭಾಗ ಹೀಗಿದೆ:
ನನ್ನ ಪ್ರೀತಿಯ ಗ್ಯಾಲಿಶಿಯಾದಲ್ಲಿ ಅದೆಷ್ಟೊಂದು ನೋವಿದೆ. ನಮ್ಮ ದೇಶದ ಕಾಯಕ ಯೋಗಿಗಳಾದ ಅಭಾಗ್ಯ ರೈತರು, ಸೈನಿಕರ ಕುರಿತು ಪುಟಗಟ್ಟಲೆ ಬರೆದರೂ ಮುಗಿಯುವುದಿಲ್ಲ. ಅವರ ಕಷ್ಟ ಕಾರ್ಪಣ್ಯಗಳನ್ನು ಕಂಡಿರುವೆ. ಅದೆಲ್ಲ ನನ್ನದೇ ಎಂದು ಭಾವಿಸಿರುವೆ. ಆದರೆ ನನ್ನನ್ನು ತೀವ್ರವಾಗಿ ಅಲುಗಾಡಿಸಿದ್ದು, ನಿಸ್ಸಹಾಯಕವಾಗಿ ನನ್ನ ಕವಿತೆಯಲ್ಲಿ ಧ್ವನಿ ಮಾತ್ರ ನೀಡಲು ಸಾಧ್ಯವಾಗಿದ್ದು ನಮ್ಮ ನಾಡಿನ ಹೆಂಗಸರ ಅಸಂಖ್ಯ ನೋವು. ತಮ್ಮವರು, ಪರರು ಎನ್ನದೆ ಎಲ್ಲರನ್ನೂ ಪ್ರೀತಿಯಿಂದ ಕಂಡವರು. ಜೀವನೋತ್ಸಾಹದಿಂದ ತುಂಬಿ ತುಳುಕುವ ಇವರು, ಘಟ್ಟಿಗಿತ್ತಿಯರಾದರೂ ಮೃದು ಮನಸ್ಸಿನವರು. ಇವರೆಷ್ಟು ಅಭಾಗ್ಯರೆಂದರೆ, ಇವರು ಹುಟ್ಟಿರುವುದೇ ಇಡೀ ಮನುಕುಲದ ನೋವನ್ನು, ಕಷ್ಟಗಳನ್ನು ಅನುಭವಿಸಲೆಂದೇ ತಿಳಿದವರು.
ಗಂಡಂದಿರೊಟ್ಟಿಗೆ ಹೊಲ ಗದ್ದೆಗಳಲ್ಲಿ ಸಮವಾಗಿ ನೊಗ ಹೊತ್ತು ದುಡಿಯುವವರು, ಮನೆ ಮಕ್ಕಳು, ತಾಯ್ತನದ ಜವಾಬ್ದಾರಿಗಳು, ಕಿತ್ತು ತಿನ್ನುವ ಬಡತನದ ನಡುವೆ ಎದೆಗಾರಿಕೆಯಿಂದ ಬಾಳುವೆ ಮಾಡುವ ದಿಟ್ಟೆಯರು. ಹಗಲಿರುಳು ದಣಿವೆಯೇ ಇಲ್ಲದೆ, ರೋಗಗ್ರಸ್ಥ ಗಂಡನ ಆರೈಕೆಯೊಡನೆ, ಗಾಣದೆತ್ತಿನಂತೆ ದುಡಿಯುವ ಇವರಿಗೆ ವಿಶ್ರಾಂತಿ ಸಿಗೋದು ಮಾತ್ರ ಗೋರಿಯಲ್ಲಿ ಮಲಗಿದಾಗಲೇ. ವಲಸೆ, ಯುದ್ಧಕ್ಕಾಗಿ ರಾಜರುಗಳು ತಮ್ಮ ಪ್ರೇಮಿ, ಅಣ್ಣ, ಗಂಡ, ತಂದೆಯರನ್ನು ಕಿತ್ತುಕೊಳ್ಳುವಾಗ, ಮನೆಗೆ ಅನ್ನಸಂಪಾದಿಸುವ ಕೈಯನ್ನೇ ಕಸಿದುಕೊಂಡಾಗ ಪರಿತ್ಯಕ್ತರಾದ ಇವರು ತಮ್ಮ ದುರ್ದೆಸೆಗೆ ಮರುಗುತ್ತ, ಕಹಿಯಾದ ಜೀವನದ ಅನಿಶ್ಚಿತತೆಗಳ ಮಧ್ಯೆ, ಬಣ್ಣವೇ ಇರದ ಬದುಕಿನ ಒಂಟಿತನದಲ್ಲಿ, ಎಂದೂ ಮುಗಿಯದ ಬಡತನದ ಹಾಡು ಹಾಡುತ್ತ ಬದುಕಿದವರು.
ಆದರೆ ನಿಜವಾಗಿಯೂ ಇವರ ಎದೆ ಒಡೆದು ಚೂರಾಗೋದು ಮಾತ್ರ, ತಮ್ಮ ಕಾಮ ತೃಷೆಗಾಗಿಯೋ, ಮತ್ಯಾವುದೋ ಸ್ವಾರ್ಥ ಸಾಧನೆಗಾಗಿ ಬಾಳ ಸಂಗಾತಿ ತೊರೆದು ಹೋದಾಗ. ಪುಟ್ಟ ಮಕ್ಕಳನ್ನು ಅನಾಥ ಮಾಡಿ, ಒಂಟಿ ತಾಯಂದಿರಾಗಿ ಬದುಕುವಂತೆ ಮಾಡಿ, ನಡು ನೀರಲ್ಲಿ ಕೈ ಬಿಟ್ಟು ಹೋದಾಗ.
ಬದುಕಿನ ಈ ಬಡಪಾಯಿ ಬಲಿಪಶುಗಳು, ತಮ್ಮ ನೋವನ್ನು ನನ್ನೊಂದಿಗೆ ಹೇಳಿಕೊಳ್ಳುವ ಸಾಹಸ ಮಾಡುವಾಗ, ತಮ್ಮೊಳಗೆ ಸದಾ ಉರಿಯುವ ಪ್ರೀತಿಯ ಹಣತೆಯನ್ನು ತೋರುವರು, ತಮ್ಮ ವ್ಯಥೆಯ ಕಥೆಯನ್ನು ಹೇಳುವಾಗ ಅದೆಂಥ ಸುಕೋಮಲ ಭಾವನೆಗಳು ಇವರಲ್ಲಿ, ಮೃದುತ್ವದ ಖಜಾನೆಯೇ ಇದೆ ಇವರೊಳಗೆ, ಎಂಥಾ ಅಗಾಧ ಸ್ಥೈರ್ಯ ಇವರಲ್ಲಿ. ಅದೆಷ್ಟೋ ಅದ್ಭುತ ಕೆಲಸಗಳನ್ನು ಮೂಕರಾಗಿಯೇ ಮಾಡುತ್ತಾ, ಪ್ರೀತಿ, ಅದ್ಭುತಗಳ, ಎಂದೂ ತಳವರಿಯದ ಕ್ಷಮಯಾ ಧರಿತ್ರಿಯರು. ಇಂಥ ಕೆಚ್ಚೆದೆಯ ಅನಾಮಿಕ ನಾಯಕಿಯರ ಮುಂದೆ ನಾನು ಏನೂ ಅಲ್ಲ, ತೃಣ ಮಾತ್ರ ಎಂದೆನಿಸುವುದು. ನನಗಿಂತಲೂ ಶ್ರೇಷ್ಠ ಕವಿಗಳು ಇವರ ಕಥೆಯನ್ನು ಹಾಡಬೇಕು. ಇವರ ದೈವಿಕ ಮಧುರ ಹಾಡನ್ನು ತಾರಸ್ಥಾಯಿಯ ನೋವಿನ ಸ್ವರದಲ್ಲಿ ನುಡಿಸಬೇಕು (Santiago de Compostela. March 30, 1880.) ಹೀಗೆ ಆವರಿಸುವ ರೊಸಾಲಿಯಾಳ ಪದ್ಯಗಳ ರುಚಿಯ ಅಮಲಿನಲ್ಲಿ ಮುಳುಗುವಂತೆ ಮಾಡಿದ ಪ್ರೀತಿಯ ಕವಿ ಜ. ನಾ. ತೇಜಶ್ರೀ ಯವರಿಗೆ ನನ್ನಿ.
ರೊಸಾಲಿಯಾಳ ಕೆಲವು ಪದ್ಯಗಳು ಕನ್ನಡದ ಓದಿಗೆ…
1. ಕರಿ ನೆರಳು (Black Shadow)
*ಆಂಗ್ಲ ಮೂಲ: ಇದುಆರ್ಡೊ ಫ್ರೆಯ್ರ್ ಕ್ಯಾನೋಸಾ
ನೀನು ಅಗಲಿದೆ ಅಂದುಕೊಳ್ಳುವಾಗಲೇ
ನನ್ನ ಮೇಲೆರಗುವ ಆ ಕರಿ ನೆರಳು
ತಲೆದಿಂಬಿನ ಕಾಲಡಿ ಕೀಟಲೆ ಮಾಡುವುದು
ನೀನು ಹೋಗಿಯೇ ಬಿಟ್ಟೆ
ಅಂದುಕೊಳ್ಳುವಾಗಲೇ ಮರಳಿ
ಆ ಸೂರ್ಯನಾಗಿ ನನ್ನ ಛೇಡಿಸುವೆ
ನೀನು ಹೊಳೆಯುವ ತಾರೆ
ಮೊರೆಯುವ ಮಾರುತ
ರಾಗ ಹೊಮ್ಮುವುದೇ ಆದರೆ ನನ್ನ ರಾಗ ನೀನು
ಕಣ್ಣೀರು ಹನಿಸುವುದೇ ಆದರೆ ನನ್ನ ಕಂಬನಿ ನೀನು
ನದಿಯ ಪುಕಾರು
ಹಗಲು – ಇರುಳು ಎಲ್ಲದರಲ್ಲೂ
ಎಲ್ಲೆಲ್ಲೂ ನೀನೇ
ನನ್ನೊಳಗೇ ಇರುವೆ
ಎಂದಿಗೂ ತೊರೆದು ಹೋಗುವುದಿಲ್ಲ
ಸದಾಕಾಲವೂ ಕಾಯುವ ನೆರಳು
2. ನನ್ನ ನಿರಂತರ ಹುಡುಕಾಟ ಏನೆಂದು ಅರಿಯೆ
(I know not what I seek Eternally)
*ಆಂಗ್ಲ ಮೂಲ: ಮುರಿಯೆಲ್ ಕಿಟ್ಟೆಲ್
ನೆಲದಲ್ಲಿ
ಮುಗಿಲಿನಲ್ಲಿ
ಗಾಳಿಯಲ್ಲಿಯೂ
ನಾನು ನಿರಂತರ ಹುಡುಕುವುದು
ಏನೆಂದು ನನಗೆ ತಿಳಿದಿಲ್ಲ
ಎಂದೋ
ಕಳೆದು ಹೋದ
ಏನನ್ನೋ ಹುಡುಕುತ್ತಲಿರುವೆ
ಇನ್ನೂ… ಕಾಣಲಿಲ್ಲ
ಕಾಣದ ಕನಸಲಿರುವೆ
ನಾ ನೋಡುವ
ನಾ ತಾಗುವ
ಎಲ್ಲದರಲ್ಲೂ ನೀ ಇರುವೆ…
ಆಹ್!
ಎಂಥಾ ಆನಂದ
ಮತ್ತೆಂದೂ ನಿನ್ನ ಸೆರೆಹಿಡಿಯಲಾರೆ
ನೆಲದ ಮೇಲೋ,
ಮುಗಿಲೊಳಗೋ,
ಗಾಳಿಯಲ್ಲೋ
ನಿಜರೂಪಿ ನನಸು ನೀನು
ಹಾಳು ಕನಸಲ್ಲವೆಂದು
ಗೊತ್ತು ನನಗೀಗಲೂ…
3. ಬೇಸಿಗೆ ಸರಿಯುವುದರೊಳಗೆ…
(her end would come with summer’s end)
*ಆಂಗ್ಲ ಮೂಲ: ಕೇಟ್ ಫ್ಲೋರ್ಸ್
ಬೇಸಿಗೆ ಸರಿಯುವುದರೊಳಗೆ
ಅವಳೂ ಕರಗಿ ಹೋಗುವಳೋ ಏನೋ
ಪ್ಚ್,
ವಾಸಿಯಾಗದ ಖಾಯಿಲೆ
ಒಂದಿಷ್ಟು ಖುಷಿ
ಒಂದಿಷ್ಟು ನೋವು
‘ಈ ಶರತ್ಕಾಲದಲ್ಲಿ
ನಾನು ಇಲ್ಲವಾಗಬಹುದು
ನನ್ನದೇ ಗೋರಿಯ ಮೇಲೆ
ಎಲೆಗಳ ಮರ್ಮರ
ಬಿಡಿ,
ಅವೂ ಕೂಡ ಇಲ್ಲವಾಗುತ್ತವೆ’
ಕ್ರೂರಿ ಸಾವೂ
ಅವಳ ಮಾತು ಕೇಳಲು ತಯಾರಿಲ್ಲ
ಚಳಿಗಾಲದುದ್ದಕ್ಕೂ ಬದುಕಲು ಬಿಟ್ಟು
ಇನ್ನೇನು ಇಳೆಯೆಲ್ಲಾ
ಹೊಸ ಹುಟ್ಟು ಪಡೆಯುವಾಗ
ಮೈದುಂಬಿದ ವಸಂತ
ಸುಖದ ಮಂತ್ರಘೋಷಗಳ ನಡುವೆ
ಅವಳನ್ನು ಇಲ್ಲವಾಗಿಸಿದ
4. ಅಳುವ ಜೀವ ಒಂಟಿಯಲ್ಲ
(He who weeps does not go alone)
*ಆಂಗ್ಲ ಮೂಲ: ಕೇಟ್ ಫ್ಲೋರ್ಸ್
ಓ ಕಂಬನಿಯೆ,
ದಮ್ಮಯ್ಯ ಸುಮ್ಮನೆ ಸ್ರವಿಸು
ಅಳುವ ಜೀವ ಒಂಟಿಯಲ್ಲ
ನೋವೊಂದೇ ಸಾಕು
ಈ ಜೀವಕ್ಕೆ
ನಲಿವೊಂದು ಎಂದಿಗೂ ಸಾಲುವುದಿಲ್ಲ
ವಿಧಿಯ ಕೈಗೊಂಬೆ,
ಬಡಪಾಯಿ ನಾನು
ದುಃಖದಲ್ಲಿ ಮುಳುಗಿ ಅಂಡಲೆಯುತಿರುವೆ
ಏನಾದರಾಗಲಿ ಎಲ್ಲವನ್ನೂ ಹೊತ್ತು ತಿರುಗುವೆ
ಜೊತೆಗೆ ನೋವು ಕೊಂಡುಯ್ಯುವೆ
5. ಕಾಲ ಸರಿದಂತೆ…
(Hour after hour day after day)
*ಆಂಗ್ಲ ಮೂಲ: ಮುರಿಯೆಲ್ ಕಿಟ್ಟೆಲ್
ನೆಲ ಮುಗಿಲ ನಡುವೆ
ಅಸರಂತ ಕಾವಲು ಕಾಯುವ ಬದುಕು
ಮುಗಿದು ಹೋಗುವುದು ಉಕ್ಕಿ ಬರುವ ಪ್ರವಾಹದಂತೆ
ಮೊಗ್ಗು ಉದುರಿದ ಮೇಲೆ
ಮರಳಿ ಕೊಟ್ಟು ಬಿಡಿ ಪರಿಮಳ
ಕಡಲತೀರ ಮುದ್ದಿಸಿವೆ ಅಲೆಗಳು
ಒಂದರಮೇಲೊಂದು
ದಡಕೆ ತಾಕಿ ತಾಕಿ
ಮುದ್ದು ಮಾಡುತಲೇ ಸಾಯುವ ಅಲೆಗಳ
ಮರ್ಮರ ಮೊರೆತಗಳ ಒಟ್ಟು ಮಾಡಿ
ಕಂಚಿನ ಹರಿವಾಣದ ಮೇಲೆ
ಶಾಸನ ಬರೆದಿಡಬೇಕು
ಈ ಸಾಮರಸ್ಯದ ಕಥೆ
ಕಾಲ ಕಳೆದು ಹೋಗಿದೆ
ನಗು ಅಳು ದುಃಖ ದುಮ್ಮಾನ
ಹಿತವಾದ ಆ ಸುಳ್ಳು
ಆಹ್, ಎಲ್ಲಿವೆ?
ಆ ಎಲ್ಲಾ ಕುರುಹುಗಳು
ಹೇಳು ಜೀವವೆ
ಎಲ್ಲಿ?
ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.
👍
Writer Chaitra Shivayogimath has again excelled in introducing another writer Rosalia de Castro, a Galician poet and a novelist, in her column ‘Loka Sthree Kavya Lahari’ in Kendasampige.
Rosalia started writing at a tender age of 11. Though she penned a number of novels, she had a great passion for writing poems. The writer strongly opposed abuse of power but defended thecwomen empowerment. She married a journalist and had 7 children.
A feature of Chaitra’s articles is that they are not writings you read but they are writings that read you. With a flowery language, she has coined words in such a way that they make the article quite interesting.
Rosalia faced tough early days. She wrote mostly in Galician language. When she died of cancer, she was 50. Chaitra has translated 4 poems of Rosalía which include Black Shadow and He Who Weeps Does Not Go Alone
Chaitra, hi … I read your translations of Rosalia D’ Castro’s poems … they read so well in your Kannada translation. The poems are so powerful and drenched in emotion, that they shook me. Some of the lines in ‘ಕರಿ ನೆರಳು’ are so evocative …
ರಾಗ ಹೊಮ್ಮುವುದೇ ಆದರೆ ನನ್ನ ರಾಗ ನೀನು
ಕಣ್ಣೀರು ಹನಿಸುವುದೇ ಆದರೆ ನನ್ನ ಕಂಬನಿ ನೀನು …
“ಬೇಸಿಗೆ ಸರಿಯುವುದರೊಳಗೆ…” ಎಷ್ಟು ಹತಾಶೆ …
ಮೊಗ್ಗು ಉದುರಿದ ಮೇಲೆ
ಮರಳಿ ಕೊಟ್ಟು ಬಿಡಿ ಪರಿಮಳ
ಕಡಲತೀರ ಮುದ್ದಿಸಿವೆ ಅಲೆಗಳು
ಒಂದರಮೇಲೊಂದು
ದಡಕೆ ತಾಕಿ ತಾಕಿ
ಮುದ್ದು ಮಾಡುತಲೇ ಸಾಯುವ ಅಲೆಗಳ
ಮರ್ಮರ ಮೊರೆತಗಳ ಒಟ್ಟು ಮಾಡಿ
ಕಂಚಿನ ಹರಿವಾಣದ ಮೇಲೆ
ಶಾಸನ ಬರೆದಿಡಬೇಕು
ಈ ಸಾಮರಸ್ಯದ ಕಥೆ.
ಎಷ್ಟು ಸುಂದರವಾದ ಸಾಲುಗಳು ಇವು …
Thank you for this, Chaitra … 🌸👌
Amazing!! ಮನಸ್ಸನ್ನು ಆರ್ದ್ರಗೊಳಿಸಿದ ಲೇಖನ! ತಮ್ಮ ನಿರೂಪಣಾ ಶೈಲಿ ಅದ್ಭುತವಾಗಿದೆ. ಪದಗಳು ಭಾವ ತೀವ್ರತೆಯನ್ನು ಶಕ್ತಿಯುತವಾಗಿ ಅಭಿವ್ಯಕ್ತಿಸುತ್ತವೆ. ರೊಸೇಲಿಯಾರವರ ಬದುಕು ಬರಹಗಳ ಬಗ್ಗೆ ಬೆಳಕು ಚೆಲ್ಲಿದಕ್ಕಾಗಿ ಧನ್ಯವಾದಗಳು.