ಜ್ವರದ ತಾಪದಿಂದ ನರಳುತ್ತಿದ್ದ ಅವ್ವಕ್ಕಗ ಹಣಿ ಮ್ಯಾಲೆ ತಣ್ಣೀರಿನ ಪಟ್ಟಿ ಹಾಕಿದ್ರಾತು ಅಂತ ಹಳೇ ಬಟ್ಟಿ ತುಂಡನ್ನು ಹುಡುಕಲು ಕಪಾಟಿನಲ್ಲಿ ತಡಕಾಡಿದ ಗಂಗವ್ವಜ್ಜಿಯ ಕೈಗೆ ಹೋದವರ್ಷ ಪಂಚಮಿಹಬ್ಬಕ್ಕಂತ ಹೊಲಿಸಿದ ಅವ್ವಕ್ಕನ ಲಂಗ ಸಿಕ್ಕಿತು. ಒಂದೆರಡೇ ಸಲ ಹಾಕಿಕೊಂಡಿದ್ದ ಲಂಗದ ಒಂದು ಭಾಗವನ್ನು ಕತ್ತರಿಯಿಂದ ಕತ್ತರಿಸಿದ್ದು ಕಂಡು ಗಂಗವ್ವಜ್ಜಿಯ ಎದಿ ಧಸಕ್ಕೆಂದಿತು. ಎಪ್ಪತ್ತು ವರ್ಷ ವಯಸ್ಸಿನ ಅನುಭವಿ ಮುದುಕಿ ಗಂಗವ್ವಗ ಏನೋ ಅನುಮಾನ ಬಂದು, ಕಾಪಾಟಿನೊಳಗಿನ ಎಲ್ಲಾ ಬಟ್ಟಿ ಕಿತ್ತಿ ನೆಲದ ಮ್ಯಾಲೆ ಹಾಕಿ, ಒಂದೊಂದೇ ಬಟ್ಟಿ ತಗದು, ಝಾಡಿಸಿ-ಬಿಡಿಸಿ ಏನೋ ಪರೀಕ್ಷಾ ಮಾಡೋಹಂಗ ನೋಡಾಕ ಸುರುಮಾಡಿದಳು.
ಸರಿತಾ ನವಲಿ, ನ್ಯೂ ಜೆರ್ಸಿ ಬರೆದ ಈ ಭಾನುವಾರದ ಕಥೆ “ಅಂದ-ಛಂದವಿಲ್ಲದ ಗೊಂಬಿ”

 

ಹೊಸಳ್ಳಿಯೊಳಗ ಸೂರ್ಯಮುಳುಗೋ ಸಮಯ. ಅಂಗಳ ಕಸ ಬಳದು, ಥಳಿ ಹಾಕಿದ ಗಂಗವ್ವಜ್ಜಿಗೆ ನೀರಿನಿಂದ ತಂಪಾದ ನೆಲದಿಂದ ಬಂದ ಮಣ್ಣಿನ ವಾಸನಿ ಮನಸ್ಸಿಗೂ ತಂಪು ಅನಸ್ತು. ಮುಸ್ಸಂಜಿ ಹೊತ್ತಿನ್ಯಾಗ ಬೀಸ್ತಿದ್ದ ತಣ್ಣನೆಯ ಗಾಳಿಗೆ ಮೈಯೊಡ್ಡಿ ಮನಿಮುಂದ ತಲಬಾಗಿಲಿನ ಬಲಗಡೆಯಿದ್ದ ಕಟ್ಟಿ ಮ್ಯಾಲೆ ಕೂತಕಿಗೆ, ಕೈಯಾಗ ಹಸರು ಬಣ್ಣದ ಹೆಣಿಕಿ ಹಾಕಿದ್ದ ಪ್ಲಾಸ್ಟಿಕ್ಕಿನ ಸಣ್ಣ ಬುಟ್ಟಿ ಹಿಡಕೊಂಡು ಅಂಗಳದಾಗಿನ ಮಲ್ಲಿಗಿ ಗಿಡದಿಂದ ಹೂವಾ-ಮಗ್ಗಿ ಬಿಡಿಸ್ತಿದ್ದ ಅವ್ವಕ್ಕ ಕಂಡಳು. ಬಂಗಾರದ ಮೈಬಣ್ಣದ, ಮಾರುದ್ದ ಕೂದಲಿನ, ತೆಳ್ಳಗ, ತಿದ್ದಿ-ತೀಡಿ ಮಾಡಿದ ಗೊಂಬಿ ಹಂಗ ಲಕ್ಷಣವಾಗಿದ್ದ ಮೊಮ್ಮಗಳನ್ನು ಅಭಿಮಾನದಿಂದ ನೋಡಿದಳು ಗಂಗವ್ವ. ಒಂದು ವಾರದ ಹಿಂದನ ಗಂಡಿನ ಮನಿ ಕಡೆಯವರು ಕನ್ಯಾ ನೋಡೋ ಶಾಸ್ತ್ರಕ್ಕಂತ ಬಂದು ಅವ್ವಕ್ಕನ ನೋಡಿ ಹೋಗಿದ್ದರು. ಅನುಕೂಲಸ್ಥರ ಮನಿತನದ, ತಕ್ಕಮಟ್ಟಿಗೆ ಲಕ್ಷಣವಾಗಿದ್ದು, ಹೆಚ್ಚಿನ ಓದು ಓದಿಕೊಂಡಿದ್ದ ಹುಡುಗ ಹೈದ್ರಾಬಾದಿನ್ಯಾಗ ಕೆಲಸ ಮಾಡ್ತಿದ್ದ. ಈ ಸಂಬಂಧ ಏನಾದರೂ ಗಟ್ಟಿಯಾತು ಅಂದ್ರ, ಕಲಬುರಗಿ ಶರಣಬಸಪ್ಪಗ ಹಣ್ಣು-ಕಾಯಿ ಮಾಡಿಸಿಕೊಂಡು ಬರಬೇಕಂತ ಯೋಚನಿ ಮಾಡಿದಳು ಗಂಗವ್ವಜ್ಜಿ. ತನ್ನ ಕೈಯಾಗ ಆಡಿ-ಬೆಳೆದ ಕೂಸು ಈಗ ಮದುವಿ ಮಾಡಿಕೊಂಡು ಗಂಡನ ಮನಿಗೆ ಹೋಗೋವಷ್ಟು ಬೆಳದು ನಿಂತಳಲ್ಲ ಅಂದುಕೊಂಡ ಅಜ್ಜಿ, ಮೊಮ್ಮಗಳ ಮದುವಿ ಯೋಚನಿಯೊಳಗ ಮುಳುಗಿದಳು.

ಮಲ್ಲಿಗಿ ಹೂವುಗಳನ್ನು, ಇನ್ನೇನು ಅರಳತಾವ ಅನ್ನೋಹಂಗಿದ್ದ ಮಲ್ಲಿಗಿ ಮಗ್ಗಿಗಳನ್ನು ಕಿತ್ತಿ ಬುಟ್ಟಿಗೆ ತುಂಬಿಕೊಂಡು ತಂದ ಅವ್ವಕ್ಕ ತಲಬಾಗಿಲಿನ ಎಡಗಡೆಯಿದ್ದ ಕಟ್ಟಿಮ್ಯಾಲೆ ಹೂಗಳನ್ನೆಲ್ಲ ಸುರುದು ತಾನೂ ಕೂತುಕೊಂಡು ತನ್ನ ಎದುರುಗಡೆ ಕಟ್ಟಿ ಮ್ಯಾಲೆ ಕೂತಿದ್ದ ಗಂಗವ್ವಜ್ಜಿನ ಮಾತಾಡಿಸಿದಳು.

“ಆಯಿ, ನೋಡಿಲ್ಲೆ… ಇವತ್ತು ಎಷ್ಟೊಂದು ಹೂವಾ ಕಿತ್ತೇನಿ”.

ಅರಳಿದ ಮಲ್ಲಿಗಿ ಹೂಗಳನ್ನು ಒಂದು ಗುಪ್ಪಿ ಮಾಡಿ, ಅರಳಲಿಕ್ಕಿರೋ ಮಲ್ಲಿಗಿ ಮಗ್ಗಿಗಳನ್ನ ಅಲ್ಲೇ ನೀರು ತುಂಬಿಟ್ಟಿದ್ದ ಬಟ್ಟಲದಾಗ ಹಾಕಿದಳು. ಮೊಮ್ಮಗಳ ದನಿ ಕೇಳಿ ತನ್ನ ಯೋಚನಿಯಿಂದ ಹೊರಗಬಂದ ಗಂಗವ್ವಜ್ಜಿ ತಿರುಗಿ ನೋಡಿದಾಗ, ಅವ್ವಕ್ಕ ಆಗಲೇ ಮಾರುದ್ದದ ತನ್ನ ಹೆರಳು ಬಿಚಗೊಂಡು, ದೊಡ್ಡಹಲ್ಲಿನ ಹಣಗಿಯಿಂದ ಕೂದಲಿನ ತೊಡಕು ಬಿಡಿಸಿಕೊಳ್ಳಲಿಕ್ಕೆ ಸುರುಮಾಡಿದ್ದಳು. ತನ್ನ ಕಡೆ ತಿರುಗಿದ ಅಜ್ಜಿಯನ್ನು ನೋಡಿದ ಅವ್ವಕ್ಕ ಕೈಯಾಗಿನ ಹಣಗಿನ ಅಲ್ಲೇ ನೆಲದ ಮ್ಯಾಲಿಟ್ಟು, “ಇಲ್ಲಿ ನೋಡು ಆಯಿ, ಎಷ್ಟೊಂದು ಹೂವಾ ಅದಾವು. ಒಂದು ಮಳದಷ್ಟು ಮಾಲಿ ಕಟ್ಟಬಹುದು” ಅನಕೋತ ಗ್ವಾಡಿ ಮ್ಯಾಲಿನ ದೀಪದ ಗೂಡಿನ್ಯಾಗಿಟ್ಟಿದ್ದ ದಾರದ ಉಂಡಿ ತಗದು, ಮಲ್ಲಿಗಿ ಮಗ್ಗಿ ಹಾಕಿಟ್ಟಿದ್ದ ನೀರಿನ ಬಟ್ಟಲಿನ್ಯಾಗ ಅದ್ದಿ, ದಾರ ತೋಯಿಸಿ ಮಾಲಿ ಕಟ್ಟಲಿಕ್ಕೆ ಸುರುಮಾಡಿದಳು. ಸಂಜಿಹೊತ್ತಿನ್ಯಾಗ ಅಂಗಳದಾಗಿನ ಕಟ್ಟಿಮ್ಯಾಲೆ ಕೂತುಗೊಂಡು, ಬೆನ್ನಿನ ಮ್ಯಾಲೆ ಕರಿಮೋಡದ ಹಂಗ ಕೂದಲ ಹರಡಿಕೊಂಡು, ತಲಿ ಬಗ್ಗಿಸಿಕೊಂಡು ಮಲ್ಲಿಗಿ ಮಾಲಿ ಕಟ್ಟುತ್ತಿದ್ದ ಮೊಮ್ಮಗಳನ್ನು ನೋಡಿ ಗಂಗವ್ವಜ್ಜಿಗೆ ಕಾಳಜಿಯಾಯಿತು.

“ಅವ್ವಿ…, ಮೂರಾಸಂಜಿ ಹೊತ್ತಿನ್ಯಾಗ ಹೀಂಗ ಭಾಳ ಹೊತ್ತು ಕೂದಲ ಹಿರಿಬಿಟಗೊಂಡು ಕುಂದರಬಾರದವ್ವ, ನದರುತಾಕತೈತಿ. ಕೆಟ್ಟಕಣ್ಣು ಬೀಳ್ತಾವ, ಕೂದಲಾ ಕಟ್ಟಿಕೋ ಕೂಸ….”.

“ಇದಿಷ್ಟು ಮಾಲಿ ಕಟ್ಟಿ, ಒದ್ದಿ ಬಟ್ಟ್ಯಾಗ ಸುತ್ತಿಟ್ಟು, ಆಮ್ಯಾಲೆ ಜಡಿ ಹಾಕ್ಕೋತೀನಿ ಆಯಿ…”

ಒಂದು ಮಳ ಉದ್ದದ ಮಲ್ಲಿಗಿಮಾಲಿ ಕಟ್ಟೋ ಖುಷಿಯೊಳಗಿದ್ದ ಅವ್ವಕ್ಕ ಅಜ್ಜಿ ಮಾತಿಗೆ ಲಕ್ಷ್ಯ ಕೊಡಲಿಲ್ಲ. ಮೊಮ್ಮಗಳ ಮಾತು ಕೇಳಿಸಿಕೊಂಡು ಹಂಗೇ ಸುತ್ತ ಒಂದು ಕಣ್ಣು ಹಾಯಿಸಿ ನೋಡಿದ ಗಂಗವ್ವಜ್ಜಿಗೆ ದೂರದಲ್ಲಿ ತನ್ನ ಮಗ ರಾಜಪ್ಪ ಅವಸರದಿಂದ ಮನಿ ಕಡೆ ಬರ್ತಿದ್ದಿದು ಕಾಣಿಸಿತು. ಹೆಗಲ ಮ್ಯಾಲೆ ಹಾಕಿಕೊಂಡಿದ್ದ ಟವಲಿನಿಂದ ಮಾರಿ ಮ್ಯಾಲಿನ ಬೆವರು ಒರಸಿಕೋತ, ಓಡುನಡಿಗಿಯೊಳಗ ತನ್ನ ಮನಿಯ ಅಂಗಳಕ್ಕ ಬಂದ ರಾಜಪ್ಪ ತಾಯಿ ಗಂಗವ್ವ ಮತ್ತು ಮಗಳು ಅವ್ವಕ್ಕನನ್ನು ನೋಡಿದ. ಆತನ ಮಾರಿ ಮ್ಯಾಲೆ ಖುಷಿ, ನಗು ಒಟ್ಟಿಗೇ ಕಂಡವು.

“ಅವ್ವಾ, ಗಂಡಿನ ಕಡಿಯವರು ನಮ್ಮ ಅವ್ವಕ್ಕನ್ನ ಒಪ್ಪಿಕೊಂಡಾರಂತ…, ಮುಂದಿನ ವಾರನೇ ನಮ್ಮನಿಗೆ ಬಂದು ಕೊಬ್ಬರಿ-ಸಕ್ಕರಿ ಶಾಸ್ತ್ರ ಮಾಡಿ, ಹುಡುಗಿಗೆ ಸೀರಿ-ಖಣ ಕೊಟ್ಟು ಹೋಗ್ತಾರಂತ…, ಅಯ್ಯನೋರು ಹಂತ್ಯಾಕ ಹೇಳಿ ಕಳಿಸ್ಯಾರ”.

“ಹೆಂತಾ ಒಳ್ಳೇ ಸುದ್ದಿ ಹೇಳಿದ್ಯಪ್ಪ… ಅಂಥಾ ಮನಿತನ ಸಿಗಬಕಂದ್ರ ನಮ್ಮ ಅವ್ವಕ್ಕ ಪುಣ್ಯ ಮಾಡ್ಯಾಳ… ಕೇಳಿಸಿಕೊಂಡೇನ ಅವ್ವೀ…, ನನ್ ಬಂಗಾರ…”

ಅಪ್ಪ ಮತ್ತು ಅಜ್ಜಿಯ ಮಾತುಗಳನ್ನು ಕೇಳಿಸಿಕೊಂಡ ಅವ್ವಕ್ಕ ನಾಚಿಕೊಂಡು, ಅರ್ಧ ಕಟ್ಟಿದ ಮಲ್ಲಿಗಿ ಮಾಲಿನ ಅಲ್ಲೇ ಬಿಟ್ಟು ಮನಿ ಒಳಗ ಓಡಿದಳು. ಗಂಗವ್ವ ಮತ್ತು ರಾಜಪ್ಪ ಇಬ್ಬರೂ ನಕ್ಕೋತ ಮನಿ ಒಳಗ ಹೋದರು.

******

ಆ ದಿನ ರಾಜಪ್ಪನ ಮನಿಯೊಳಗ ಅವ್ವಕ್ಕನ ಮದುವಿ ನಿಶ್ಚಿತಾರ್ಥದ ಸಂಭ್ರಮ. ಮನಿ ತುಂಬ ಬಂಧು-ಬಳಗದವರೆಲ್ಲ ಸೇರಿದ್ದ ಗದ್ದಲದೊಳಗೂ ಅವ್ವಕ್ಕ ಯಾಕೋ ಮಂಕಾಗಿದ್ದನ್ನು ನೋಡಿದ ಗಂಗವ್ವಜ್ಜಿ ತನ್ನ ಸೊಸಿ ರೇಣುಕಾನ್ನ ಇದರ ಬಗ್ಗೆ ವಿಚಾರಿಸಿದಳು.

“ಇನ್ನು ಸ್ವಲ್ಪ ದಿವ್ಸಕ್ಕ ಮದಿವಿ ಮಾಡಿಕೊಂಡು ಈ ಮನಿ ಬಿಟ್ಟು ಹೋಕ್ಕೀನಿ ಅಂತ ಮನಸಿಗೆ ಹಚ್ಚಿಕೊಂಡದೇನೋ ನಮ್ಮ ಕೂಸು. ನನಗೂ ಸಮಾಧಾನ ಮಾಡ್ಲಿಕ್ಕೆ ಆಗಿಲ್ಲತ್ತಿ…. ಮುಂಜಾನಿಂದ ಮನಿ ತುಂಬ ಮಂದಿ ಗದ್ದಲನ ಆಗೇತಿ… ಕೈತುಂಬ ಕೆಲಸ ಆಗೇತಿ…”.

ಸೊಸಿ ಮಾತಿಗೆ ಗಂಗವ್ವಜ್ಜಿ ಮಾತು ಮುಂದುವರಿಸಲಿಲ್ಲ. ಮದುವಿ ನಿಶ್ಚಿತಾರ್ಥದ ಎಲ್ಲ ಶಾಸ್ತ್ರ ಮುಗಿಸಿ ಗೋಧಿಹುಗ್ಗಿ, ಹೋಳಿಗಿ-ತುಪ್ಪದ ಊಟ ಉಂಡು ಬೀಗರು ತಮ್ಮೂರಿಗೆ ಹೋದರು. ರಾತ್ರಿ ಮಲಗೋಕಿಂತ ಮೊದಲು ಮೊಮ್ಮಗಳನ್ನು ಪ್ರೀತಿಯಿಂದ ಮಾತಾಡಿಸಿದಳು ಅಜ್ಜಿ.

“ಅವ್ವಕ್ಕ… ಮದುವಿ ಮಾಡಿಕೊಂಡು ತವರುಮನಿ ಬಿಟ್ಟು ಗಂಡನಮನಿಗೆ ಹೋಗಬೇಕಲ್ಲ ಅಂತ ಬ್ಯಾಸರ ಮಾಡ್ಕೋಬ್ಯಾಡವ್ವ.. ಬೀಗರು ಭಾಳ ಒಳ್ಳೇ ಮಂದಿಯಿದ್ದಾರ. ನಿನಗ ಏನೂ ತ್ರಾಸ ಆಗಲಾರದಂಗ ನೋಡ್ಕೋತಾರ”.

ತನ್ನ ಮಾತಿಗೆ ಅವ್ವಕ್ಕ ತಲಿನ ಎಡಗಡೆ ಬಗ್ಗಿಸಿ, ಕಣ್ಣು ಅಗಲಿಸಿ, ತುಟಿ ಸೊಟ್ಟಗ ಮಾಡಿ ಒಂದ ನಮೂನಿ ನಕ್ಕಂಗ ಅನಿಸಿತು ಗಂಗವ್ವಜ್ಜಿಗೆ. ಅದನ್ನು ನೋಡಿದ ಆಕಿ ಅಷ್ಟಕ್ಕೇ ಸುಮ್ಮನಾಗಲಿಲ್ಲ.

“ಅಯ್ಯ ಖೋಡಿ! ನದರು ತಾಗೇತಿ ಕೂಸಿಗೆ…”

ಅವಸರದಿಂದ ಅಡಗಿ ಮನಿಗೆ ಹೋಗಿ ನಾಲ್ಕು ಒಣಮೆಣಸಿನಕಾಯಿ, ಒಂದಿಷ್ಟು ಕಲ್ಲುಪ್ಪನ್ನು ಎಡಗೈಯ್ಯಾಗ ಹಿಡಕೊಂಡು ಬಂದು ಅವ್ವಕ್ಕನ ಮಾರಿ ಮ್ಯಾಲೆ ಇಳಿತಗದು, “ ’ಒಳ್ತು’ ಅನ್ನ ಕೂಸೇ…” ಅಂದಳು. ಹಲ್ಲು ಬಿಗಿಹಿಡಿದು ನಿಂತಿದ್ದ ಅವ್ವಕ್ಕ ಬಾಯಿ ಸೊಟ್ಟಗಾಗಿಸಿಕೊಂಡೇ “ಒಳತು..” ಅಂದಾಗ ತನ್ನ ಎಡಗೈ ಮುಷ್ಟಿಗೆ “ಥೂ.. ಥೂ..” ಅಂತ ಉಗುಳಿದ ಹಂಗ ಮಾಡಿದ ಗಂಗವ್ವಜ್ಜಿ ಅಡಗಿ ಮನಿಯೊಳಗ ಒಲ್ಯಾಗಿನ್ನೂ ನಿಗಿ-ನಿಗಿ ಅಂತಿದ್ದ ಕೆಂಡಕ್ಕ ಉಪ್ಪು-ಮೆಣಸಿನಕಾಯಿ ಹಾಕಿ ಚಟ-ಚಟ ಅನಿಸಿದಳು. ಮರುದಿನ ಮುಂಜಾನೆ ಲವಲವಿಕೆಯಿಂದ ಎದ್ದ ಅವ್ವಕ್ಕನನ್ನು ನೋಡಿದ ಅಜ್ಜಿಗೆ ಸಮಾಧಾನವಾಯಿತು.

******

ಮದುವಿಗೆ ಇನ್ನು ಎರಡೇ ತಿಂಗಳು ಇರೋದ್ರಿಂದ ರಾಜಪ್ಪನ ಮನಿಯೊಳಗ ಈಗ ಅವ್ವಕ್ಕನ ಮದುವಿ ಸುದ್ದಿನೇ ಎಲ್ಲರ ಮಾತಿನ ವಿಷಯವಾಯಿತು. ಪ್ರತಿಸಲ ಸುಗ್ಗಿ ಆದಮ್ಯಾಲೆ ಬಂದ ರೊಕ್ಕದಾಗ ಸ್ವಲ್ಪ-ಸ್ವಲ್ಪ ಬಂಗಾರ ಖರೀದಿ ಮಾಡುತ್ತಿದ್ದ ರೇಣುಕಾ, ಅವ್ವಕ್ಕಗಂತ ಪಾಟಲಿ, ಬಿಲವಾರ, ತೋಡೆ, ಗುಂಡಿನಸರ, ಕಾಸಿನಸರ ಅಂತ ಬಂಗಾರ ಸಾಮಾನು ಮಾಡಿಸಿಟ್ಟಿದ್ದಳು. ಮಾಂಗಲ್ಯ ಮಾಡಸಲು ಹೇಳಿಬರಲಿಕ್ಕೆ ಅಂತ ಅಗಸಾಲರ ಅಂಗಡಿಗೆ ಹೋಗಲು ತನ್ನ ಜೋಡಿ ಮಗ್ಗಲ ಮನಿ ದೇವಕ್ಕನನ್ನು ಕರೆದುಕೊಂಡು ಹೋಗುವುದಾಗಿ ರೇಣುಕಾ ಹೇಳಿದಾಗ ಗಂಗವ್ವಜ್ಜಿಗೆ ಯಾಕೋ ಸೊಸಿಯ ನಿರ್ಧಾರ ಸರಿಯೆನಿಸಲಿಲ್ಲ. ಗಂಗವ್ವಜ್ಜಿಯ ಆಕ್ಷೇಪಕ್ಕ ರೇಣುಕಾ, “ಆಗಲೇ ಇಬ್ಬರು ಹೆಣ್ಣುಮಕ್ಕಳ ಲಗ್ನ ಮಾಡಿದಾಕಿದ್ದಾಳ ದೇವಕ್ಕ, ನಮಗ ಬಳಗದ ಪೈಕಿ ಅಂತ ಬಾಜೂ ಮನಿಯೊಳಗ ಇದ್ದಾರ. ಆಕಿನ್ನೇ ಜೊತಿಗೆ ಕರಕೊಂಡು ಹೋಗ್ತೇನಿ ಅತ್ತಿ…” ಅಂತ ಅಂದಾಗ ಸೊಸಿ ಮಾತಿಗೆ ಅತ್ತಿ ಮಾತು ಬೆಳೆಸಲಿಲ್ಲ.

ಮುಂದ ಎರಡು ದಿನಕ್ಕ ಮದುವಿ ಜವಳಿ ಖರೀದಿ ಮಾಡಲು ಕಲಬುರಗಿಗೆ ಹೋಗೋದಂತ ಎಲ್ಲರೂ ಸೇರಿ ನಿರ್ಧರಿಸಿದರು. ಗಂಗವ್ವಜ್ಜಿ ಮಗ ರಾಜಪ್ಪ, ಸೊಸಿ ರೇಣುಕಾ ಜೊತಿಗೆ ದೇವಕ್ಕ ಮತ್ತು ಆಕಿ ಗಂಡ ಶರಣಪ್ಪನೂ ಕಲಬುರಗಿಗೆ ಹೋಗೋದಂತ ಮಾತಾಡಿಕೊಂಡರು. ಶರಣಪ್ಪನ ಪರಿಚಯದ ಅಂಗಡಿಯೊಳಗ ಜವಳಿ ಖರೀದಿ ಮಾಡೋದು ಅನ್ನೋ ಮಾತಿಗೆ ಎಲ್ಲಾರೂ ಒಪ್ಪಿಕೊಂಡರು. ಶರಣಪ್ಪನ ಒಳ್ಳೆತನ ಗಂಗವ್ವಜ್ಜಿಗಂತೂ ಗೊತ್ತೇಯಿತ್ತು. ಆದರ ರೇಣುಕಾ ಭಾವುಕಳಾಗಿ ಕೈಮುಗಿದಳು.

“ಭಾಳ ಉಪಕಾರ ಆತ್ರಿ ಅಣ್ಣಾರ…” ತನ್ನ ಸೀರಿ ಸೆರಗಿನಿಂದ ರೇಣುಕಾ ಕಣ್ಣು ಒರೆಸಿಕೊಂಡಳು.

“ಉಪಕಾರ ಅಂತ ದೊಡ್ಡ ಮಾತು ಆಡಬ್ಯಾಡವ್ವ ತಂಗಿ… ನನಗ ಅವ್ವಕ್ಕ ಬ್ಯಾರೇ ಅಲ್ಲ… ನನ್ನ ಹೆಣ್ಣುಮಕ್ಕಳು ಬ್ಯಾರೇ ಅಲ್ಲ… ನಾನು ಸಣ್ಣವಿದ್ದಾಗ ಈ ಡೊಡ್ಡವ್ವ ರಾಜಪ್ಪನ ಜೋಡಿ ನನಗೂ ಹೊಟ್ಟಿ ತುಂಬ ರೊಟ್ಟಿ ಉಣ್ಣಾಕ ಕೊಟ್ಟಾಳ… ಅದರ ಋಣ ಹೀಂಗಾದ್ರೂ ತೀರ್ಸಿದ್ರಾತು” ಗಂಗವ್ವನ ಕಡೆ ನೋಡಿ ಹೇಳಿದ ಶರಣಪ್ಪ.

ಶರಣಪ್ಪನ ಮಾತು ಒಪ್ಪೋಹಂಗಿದ್ರೂ, ಗಂಗವ್ವಜ್ಜಿಗೆ ಯಾಕೋ ದೇವಕ್ಕ ನೋಡೋ ನೋಟನೇ ಪಸಂದ ಬರ್ತಿದ್ದಿಲ್ಲ. ಆ ದಿನನೂ ಆಕಿ ಕಣ್ಣುಗಳು ಏನೋ ಹುಡುಕುತಿರೋ ಹಂಗ ಕಂಡರೂ ಗಂಗವ್ವಜ್ಜಿ ಏನೂ ಮಾತಾಡದೇ ಸುಮ್ಮನಿದ್ದಳು. ಅಪ್ಪ-ಅವ್ವ, ದೇವಕ್ಕ ಚಿಗವ್ವ-ಶರಣಪ್ಪಕಾಕಾ ಎಲ್ಲಾರೂ ಜವಳಿ ಖರೀದಿಗೆ ಅಂತ ಕಲಬುರಗಿ ಕಡೆ ಹೋಗಿದ್ದೇ ತಡ, ಮನ್ಯಾಗಿದ್ದ ಅವ್ವಕ್ಕಗ ವಿಪರೀತ ತಲಿಸೂಲಿ ಎದ್ದಿತು.

“ಆಯೀ… ನನಗ ತೆಲಿ ಸಿಡಿಯೋ ಹಂಗ ತೆಲಿಬ್ಯಾನಿ ಆಗಾಕತ್ತೇತಿ…. ತೆಲಿವೊಳಗ ಸೂಜಿ ಚುಚ್ಚಿದಂಗ ಆಗ್ತೈತಿ… ಅಯ್ಯೋ… ಬ್ಯಾನಿ… ಬ್ಯಾನಿ…” ಗಟ್ಯಾಗಿ ತಲಿ ಹಿಡಕೊಂಡು ಅವ್ವಕ್ಕ ಚೀರಾಕ ಸುರು ಮಾಡಿದ್ದನ್ನು ಅಡಿಗಿ ಮನಿಯೊಳಗ ರೊಟ್ಟಿ ಹಿಟ್ಟು ಕಲಸಲಿಕ್ಕೆ ನೀರು ಎಸರಿಗಿಟ್ಟು ಒಲಿ ಮುಂದ ಕೂತಿದ್ದ ಗಂಗವ್ವಜ್ಜಿ ಕೇಳಿಸಿಕೊಂಡು ಗಾಬರಿಯಾಗಿ ಪಡಸಾಲಿಗೆ ಓಡಿಬಂದಳು.

“ಏನಾತವಾ ಅವ್ವಕ್ಕಾ…. ಮೊದಲೇ ರಾಶಿ ಕೂದಲ ನಿನ್ನವು… ನಿನ್ನೆ ತೆಲಿ ಸ್ನಾನ ಮಾಡಿದಾಕಿ ಸರಿಯಾಗಿ ಕೂದಲ ಒಣಗಿಸಿಕೊಂಡಿಲ್ಲ ಅನ್ಸತೈತಿ… ನಾನು ನಿನ್ನ ಹಣಿಗೆ ’ಅಂಬೃತಾಂಜಿನ್’ ಹಚ್ಚಿ, ತಿಕ್ಕಿ ಮಾಲೀಶ್ ಮಾಡ್ತೀನಿ… ತಡಿಯವ್ವಾ… ಒಲಿ ಮ್ಯಾಲಿನ ನೀರು ಇಳಿಸಿ ಬರ್ತೀನಿ…”

ಗಂಗವ್ವಜ್ಜಿ ಅಡಗಿಮನಿ ಒಳಗಹೋಗಿ ಬರೋದ್ರಾಗ, ಪಡಸಾಲಿಯೊಳಗ ಜ್ವಾಳ ತುಂಬಿದ ಗೋಣಿಚೀಲಗಳನ್ನು ಜೋಡಿಸಿಟ್ಟಿದ್ದ ಒಂದು ಮೂಲಿಯೊಳಗ ಅವ್ವಕ್ಕ ತಲಿ ಹಿಡ್ಕೊಂಡು ಮುದುರಿ ಕೂತಿದ್ದಳು.

“ಹಂಗ್ಯಾಕ ಆ ಮೂಲಿಯೊಳಗ ಕುಂತಿಯೇ ಅವ್ವಿ… ಬಾ ಇಲ್ಲೆ… ನನ್ನ ತೊಡಿ ಮ್ಯಾಲೆ ತೆಲಿಯಿಟಗೊಂಡು ಮಲಕೊವಂತಿ.” ಅಜ್ಜಿ ಕಾಳಜಿಯಿಂದ ಅವ್ವಕ್ಕನ ಕೈ ಹಿಡಿದು ಎಬ್ಬಿಸಿದಳು.

ಗಂಗವ್ವಜ್ಜಿ ತೊಡಿಮ್ಯಾಲೆ ತಲಿಯಿಟ್ಟು ಮಲಗಿದ ಅವ್ವಕ್ಕನ ಹಣಿಗೆ ಅರ್ಧ ಬಾಟಲಿ ’ಅಮೃತಾಂಜನ್’ಹಚ್ಚಿ ತಿಕ್ಕಿದರೂ ತಲಿಸೂಲಿ ಇನ್ನೂ ಜಾಸ್ತಿಯಾಯಿತೇ ವಿನಃ ಕಮ್ಮಿ ಅಗಲಿಲ್ಲ, ನಿದ್ದಿನೂ ಹತ್ತಲಿಲ್ಲ. ನೋವಿನಿಂದ ನರಳುತ್ತಿದ್ದ ಮೊಮ್ಮಗಳನ್ನ ನೋಡಿದ ಗಂಗವ್ವ, “ಇದ ಏನಾತೋ ಶಿವನ…, ಯಾರ ಕೆಟ್ಟಕಣ್ಣು ತಾಗೈತೋ ನಮ್ಮ ಕೂಸಿಗೆ… ಲಗ್ನ ಮಾಡಿಕೊಂಡು ಗಂಡನ ಮನಿಗೆ ಹೋಗೋ ಹುಡುಗಿ… ಹೀಂಗ ಬ್ಯಾನಿ ಹಚಗೊಂಡು ಒದ್ದಾಡಕ ಹತೈತಲ್ಲೋ…” ಚಿಂತಿ ಮಾಡಿದಳು. ಯಾಕ ಹೀಂಗಾತು ಅಂತ ಯೋಚನಿ ಮಾಡಿಕೋತ ಕೂತಳು.

ಕಲಬುರಗಿಯಿಂದ ಮದುವಿ ಜವಳಿ ಖರೀದಿ ಮಾಡಿಕೊಂಡು, ದೊಡ್ಡ ಬಟ್ಟಿಗಂಟು ಹೊರೆಸಿಕೊಂಡು ರಾಜಪ್ಪ, ರೇಣುಕಾ ಮನಿಗೆ ಬರೋದ್ರಾಗ ಹೊತ್ತು ಮುಳುಗಿತ್ತು. ಇಡೀ ದಿನ ತಲಿಸೂಲಿಯಂತ ಒದ್ದಾಡಿದ ಅವ್ವಕ್ಕ ಅದೇ ಎದ್ದು ಅಜ್ಜಿ ಮಾಡಿಕೊಟ್ಟಿದ್ದ ಚಹಾ ಕುಡಿದು ಕೂತಿದ್ಲು. ತನ್ನ ಮುಂದಯಿದ್ದ ಬಟ್ಟಿಗಂಟು ಬಿಚ್ಚಿ, ತನ್ನದೇ ಮದುವಿಗಂತ ಅವ್ವ-ಅಪ್ಪ ಖರೀದಿಮಾಡಿ ತಂದಿದ್ದ ಬಣ್ಣ-ಬಣ್ಣದ ಬಟ್ಟಿಗಳನ್ನು ನೋಡುವ ಲವಲವಿಕೆಯೂ ಆಕಿಗಿರಲಿಲ್ಲ. ರೇಣುಕಾಳ ಹಿಂದೆಯೇ ತನ್ನ ಕೈಯಾಗೊಂದು ಸೀರಿ ಹಿಡಕೊಂಡು ಮನಿಯೊಳಗ ಬಂದ ದೇವಕ್ಕ, “ಗಂಗವ್ವತ್ತಿ… ಈ ಸೀರೀನ ಅವ್ವಕ್ಕನ ಸಲುವಾಗಿ ನಾನು ಆರಿಸೀನಿ ನೋಡ್ರಿ… ದೊಡ್ಡವ್ವ-ದೊಡ್ಡಪ್ಪನ ಕಡಿಯಿಂದ ಆಕಿಗೆ ಉಡಿ ತುಂಬಾಕಂತ ತೊಗೊಂಡೇನಿ…” ಅಂತಂದು ಸೊಟ್ಟಗ ನಕ್ಕಳು.

******

ಹಳ್ಳ್ಯಾಗ ನಡಿಯೋ ಮದವಿಮನಿಗೆ ಮದುಮಗಳಿಗೆ ತವರುಮನಿಯವರು ಕೊಡೋ ಮದವಿಬಟ್ಟಿ, ಬಂಗಾರದ ಆಭರಣಗಳು, ಭಾಂಡಿ ಸಮಾನುಗಳನ್ನೆಲ್ಲ ನೋಡಲಿಕ್ಕೆ ಆಜು-ಬಾಜೂ ಮನಿ ಹೆಣ್ಮಕ್ಕಳು, ಓಣ್ಯಾಗಿನ ಹೆಣ್ಮಕ್ಕಳು ಬಂದು ಹೋಗೋ ರೂಢಿನ ಪಾಲಿಸಿಕೊಂಡು ಹೋಗೋ ಹಂಗ, ಆ ದಿನ ಏಳೆಂಟು ಮಂದಿ ಪರಿಚಯದ ಹೆಣ್ಮಕ್ಕಳು ಗಂಗವ್ವಜ್ಜಿ ಮನಿಗೆ ಬಂದರು. ಏನೋ ಕಾರಣ ಹೇಳಿ ದೇವಕ್ಕ ಬರದೆಯಿರೋದನ್ನು ನೋಡಿದ ರೇಣುಕಾಗ ಸ್ವಲ್ಪ ಬ್ಯಾಸರ ಅನಿಸಿದರೂ ಗಂಗವ್ವಜ್ಜಿಗೆ ಸಮಾಧಾನನೆ ಆಯಿತು.

“ಆ ಖೋಡಿಕಣ್ಣಿನ ದೇವಕ್ಕ ಬಂದು ಹೋದಾಗೆಲ್ಲ ನಮ್ಮ ಅವ್ವಕ್ಕಗ ಒಂದು ನಮೂನಿ ಕಿಸರ ಆಗ್ತೈತಿ…. ಇವತ್ತು ಆಕಿ ಬರಲಿಕ್ಕೆ ಆಗಂಗಿಲ್ಲ ಅಂದಿದ್ದೇ ಬೇಷಾಯಿತು” ತನ್ನಷ್ಟಕ್ಕ ಅಂದುಕೊಂಡಳು.

ಹಚ್ಚಿದ ಅವಲಕ್ಕಿ ತಿಂದು, ಚಹಾ ಕುಡಿದು ಎಲ್ಲಾರೂ “ಅವ್ವಕ್ಕನ ನಸೀಬ ಭಾರಿ ಛೋಲೋ ಐತಿ” ಅನಕೋತ ಆಕಿ ಅತ್ತಿಮನಿಯ ಗುಣಗಾನ ಮಾಡಿಕೋತ ಪಡಸಾಲಿಯೊಳಗ ಕೂತಿದ್ದರು. ಒಮ್ಮಿಂದೊಮ್ಮೆಲೆ ಮಗ್ಗಲಾಗಿದ್ದ ಕ್ವಾಣಿಯೊಳಗಿಂದ ಇಷ್ಟುದ್ದ ಕೂದಲ ಹಿರಿಬಿಟ್ಟುಗೊಂಡು, ಕಣ್ಣು ಕೆಂಪಗ ಮಾಡಿಕೊಂಡು ಬಂದ ಅವ್ವಕ್ಕ ದೊಡ್ಡ ದನಿಯೊಳಗ ಒದರಲಿಕ್ಕೆ ಸುರುಮಾಡಿದ್ಲು.

“ನಿಮ್ಮನ್ಯಾಗ ಯಾರಿಗೂ ಮದುವೀನೇ ಆಗಿಲ್ಲೇನು? ನನ್ನ ಮದಿವಿ ತಯಾರಿ ನೋಡಿ ಏನಾಗಬೇಕಾಗೈತಿ ನಿಮಗ? ಮೊದಲು ನಿಮ್ಮ-ನಿಮ್ಮ ಮಕ್ಕಳ ಬಾಳವಿ ನೋಡ್ರಿ ಹೆಂಗೈತಿ ಅಂತ?”

ಮೈಮ್ಯಾಲೆ ಬಂದವರಹಂಗ ಕಾಣ್ತಿದ್ದ ಆಕಿನ್ನ ನೋಡಿ ಎಲ್ಲರಿಗೂ ಗಾಬರಿಯಾಯಿತು. “ಏನಾತು…ಏನಾತು?” ಅಂತ ಎಲ್ಲರೂ ಆಕಿ ಕಡೆ ನೋಡೋಷ್ಟರೊಳಗ ಅವ್ವಕ್ಕ ಅಲ್ಲೇ ಮೂಲ್ಯಾಗಿಟ್ಟಿದ್ದ ಕಟ್ಟಗಿ ಮಂಟಪದಾಗ ಮುದುರಿ ಕೂತಗೊಂಡಳು. ರೇಣುಕಾಗಂತೂ ಗಾಬರಿಯಾಗಿಹೋಯಿತು. ಗಂಗವ್ವಜ್ಜಿ ಸ್ವಲ್ಪ ಎಚ್ಚೆತ್ತುಕೊಂಡು ಮಾತಾಡಿದಳು.

“ಅವ್ವಕ್ಕಗ ನಾಕ ದಿನದಿಂದ ಜ್ವರಾ ಬರಾಕತ್ತಿತ್ತು. ಆಕಿಗೆ ಮೈಯಾಗ ಆರಾಮಿಲ್ಲ… ಮನ್ಯಾಗಿನ ಈ ಗದ್ದಲ ತಡಕೋಳಿಕ್ಕೆ ಆಗಿಲ್ಲ… ಮದುವಿ ಸಾಮಾನೂ ಎಲ್ಲಾ ನೋಡಿದ್ರಲ್ಲ?… ನಿಮ್ದೆಲ್ಲ ಅವಲಕ್ಕಿ-ಚಾ ಆತಲ್ಲ… ಇನ್ನು ನಿಮ್ಮ-ನಿಮ್ಮ ಮನೀಗೆ ನಡೀರಿ”.

ಏನೋ ನೆಪ ಹೇಳಿ ತಮ್ಮನ್ನೆಲ್ಲ ಮನಿಗೆ ಕಳಿಸುವ ಗಂಗವ್ವಜ್ಜಿಯ ಚುರುಕುತನ ತಿಳಕೊಂಡ ಹೆಂಗಸರೆಲ್ಲ ಒಬ್ಬರ ಮಾರಿ ಒಬ್ಬರು ನೋಡಿಕೋತ, ಗುಸು-ಗುಸು ಮಾತಾಡಿಕೋತ ಹೋದದನ್ನು ದೇವಕ್ಕ ತನ್ನ ಮನಿ ಅಂಗಳದಾಗ ನಿಂತು ನೋಡಿದಳು. ಮುಂದ ಸ್ವಲ್ಪ ಹೊತ್ತಿಗೆ ಅವ್ವಕ್ಕಗ ಜೋರಾಗಿ ಜ್ವರ ಏರಿತು. ವಿಪರೀತ ಮೈ-ಕೈ ಬ್ಯಾನಿ ಅಂತ ಒದ್ದಾಡಿತು ರಾಜಪ್ಪನ ಮನಿ ಕೂಸು.

“ಅವ್ವಾ… ಯಾರೋ ಕೈ-ಕಾಲು ತಿರುವಿ-ತಿರುವಿ ಹಾಕಾಕತ್ತ್ಯಾರ… ಆಯೀ…. ಬ್ಯಾನಿ…. ಆಯೀ ಬ್ಯಾನಿ.., ಉರಿ.. ಉರಿ… ನನ್ನ ಮೈಯೆಲ್ಲ ಉರಿಯಾಕತ್ತೈತಿ…” ಗೋಳಾಡಿದಳು ಅವ್ವಕ್ಕ.

ಜ್ವರದ ತಾಪದಿಂದ ನರಳುತ್ತಿದ್ದ ಅವ್ವಕ್ಕಗ ಹಣಿ ಮ್ಯಾಲೆ ತಣ್ಣೀರಿನ ಪಟ್ಟಿ ಹಾಕಿದ್ರಾತು ಅಂತ ಹಳೇ ಬಟ್ಟಿ ತುಂಡನ್ನು ಹುಡುಕಲು ಕಪಾಟಿನಲ್ಲಿ ತಡಕಾಡಿದ ಗಂಗವ್ವಜ್ಜಿಯ ಕೈಗೆ ಹೋದವರ್ಷ ಪಂಚಮಿಹಬ್ಬಕ್ಕಂತ ಹೊಲಿಸಿದ ಅವ್ವಕ್ಕನ ಲಂಗ ಸಿಕ್ಕಿತು. ಒಂದೆರಡೇ ಸಲ ಹಾಕಿಕೊಂಡಿದ್ದ ಲಂಗದ ಒಂದು ಭಾಗವನ್ನು ಕತ್ತರಿಯಿಂದ ಕತ್ತರಿಸಿದ್ದು ಕಂಡು ಗಂಗವ್ವಜ್ಜಿಯ ಎದಿ ಧಸಕ್ಕೆಂದಿತು. ಎಪ್ಪತ್ತು ವರ್ಷ ವಯಸ್ಸಿನ ಅನುಭವಿ ಮುದುಕಿ ಗಂಗವ್ವಗ ಏನೋ ಅನುಮಾನ ಬಂದು, ಕಾಪಾಟಿನೊಳಗಿನ ಎಲ್ಲಾ ಬಟ್ಟಿ ಕಿತ್ತಿ ನೆಲದ ಮ್ಯಾಲೆ ಹಾಕಿ, ಒಂದೊಂದೇ ಬಟ್ಟಿ ತಗದು, ಝಾಡಿಸಿ-ಬಿಡಿಸಿ ಏನೋ ಪರೀಕ್ಷಾ ಮಾಡೋಹಂಗ ನೋಡಾಕ ಸುರುಮಾಡಿದಳು. ಗಂಗವ್ವನ ಈ ಹುಡುಕಾಟ ನೋಡಿದ ರೇಣುಕಾ ಮತ್ತು ರಾಜಪ್ಪ, “ನಿನಗೇನಾತಬೇ ಯವ್ವಾ… ಹೀಂಗ ಬಟ್ಟಿಯೆಲ್ಲ ಕಿತ್ತಾಕತ್ತೀದಿ” ನೋವಿನಿಂದ ನರಳುತ್ತಿದ್ದ ಅವ್ವಕ್ಕನನ್ನು ಹಿಡಿದುಕೊಂಡೇ ಕೂಗಿದರು. ಎಲ್ಲಾ ಬಟ್ಟಿಗಳನ್ನ ಕಿತ್ತಿ ಹಾಕಿ ನೋಡಿದಾಗ, ಬಟ್ಟಿ ಸಂದ್ಯಾಗ ಸೂಜಿ ಚುಚ್ಚಿದ ನಿಂಬಿಹಣ್ಣು ಕೈಗೆ ಸಿಕ್ಕಿದ್ದನ್ನು ನೋಡಿದ ಗಂಗವ್ವಜ್ಜಿ ದೊಪ್ಪನೆ ಕುಸಿದು ಕೂತಳು.

“ಅಯ್ಯೋ… ನಮ್ಮ ಕೂಸಿಗೆ ಯಾರೋ ಮಾಟ-ಮಂತ್ರ ಮಾಡಿಸ್ಯಾರಪ್ಪೋ…. ಅದಕ ಹೀಂಗ ತ್ರಾಸಬಡ್ಲಿಕತ್ತೈತಿ ಕೂಸು… ನಮಗ ಆಗಿಬರಲಾರದ ಯಾವ ಭೋಸುಡಿ ಈ ಕೆಲಸ ಮಾಡ್ಯಾಳೋ? ಆಕಿ ಮನಿ ಹಾಳಾಗ…, ಆಕಿ ಬಾಯಾಗ ಹುಳಾ ಬೀಳಾ…, ಒಳ್ಳೇ ಮನಿತನ ಸಿಕ್ಕು ಮದುವಿ ಮಾಡಿಕೊಂಡು ಹೋಗಬಕಾಗಿದ್ದ ಕೂಸಿಗೆ ಈ ಗತಿ ಬಂತಲ್ಲೋ ಶಿವನ…..”

ಎದಿ-ಎದಿ ಬಡಕೊಂಡು ಜೋರಾಗಿ ಅಳಾಕಹತ್ತಿದ ಗಂಗವ್ವಜ್ಜಿಯ ಮಾತು ಕೇಳಿದ ರೇಣುಕಾ ಗಾಬರಿಯಿಂದ ನೆಲಕ್ಕ ಕುಸಿದು ಹಣಿಗೆ ಕೈ ಹಚ್ಚಿದಳು.

“ಇನ್ನ ನಮ್ಮ ಕೂಸಿನ ಗತಿ ಏನು ಅತ್ತಿ… ಬೀಗರ ಮನಿಗೆ ಈ ಸುದ್ದಿ ತಿಳಿದು ಲಗ್ನ ಮುರುಕೊಂಡ್ರ ನಮ್ಮ ಅವ್ವಕ್ಕನ ಬಾಳ್ವಿ ಏನಾಗ್ತದ…?”

ಅತ್ತಿ-ಸೊಸಿ ಇಬ್ಬರೂ ಜೋರಾಗಿ ಅಳೋದನ್ನ ನೋಡಿದ ರಾಜಪ್ಪ ಇವರ ದನಿ ತಲಬಾಗಿಲದಿಂದ ಓಣ್ಯಾಗಿನ ಮಂದೀಗೆ ಕೇಳಿಸೀತು ಅಂತ ಅನಕೊಂಡು, ತನ್ನ ರೆಟ್ಟಿ ಹಿಡಕೊಂಡು ನೋವಿನ್ಯಾಗ ನಿಂತಿದ್ದ ಅವ್ವಕ್ಕನ್ನ ಮೆಲ್ಲಕ ನೆಲದ ಮ್ಯಾಲೆ ಮಲಗಿಸಿ, ತಲಬಾಗಿಲ ಮುಚ್ಚಬೇಕಂತ ಅವಸರ-ಅವಸರದಿಂದ ಬಾಗಿಲಿನ ಕಡೆಗೆ ಬಂದ. ಇನ್ನೇನು ಬಾಗಿಲು ಮುಚ್ಚೋ ಮೊದಲು ಹೊರಗಡೆ ಯಾರಾದ್ರೂ ತಮ್ಮ ಮನಿಯ ಗದ್ದಲ ಕೇಳಿಸಿಕೊಂಡರೇನೋ ಅಂತ ಕುತ್ತಿಗಿ ಆಕಡೆ-ಈಕಡೆ ತಿರುಗಿಸಿ ನೋಡಿದ ರಾಜಪ್ಪಗ, ಮಗ್ಗಲ ಮನಿ ಅಂಗಳದಾಗ ದೇವಕ್ಕ ನಿಂತಿದ್ದು ಕಾಣಿಸಿತು. ಗಂಗವ್ವ ಮತ್ತು ರೇಣುಕಾ ಹಾಡಾಡಿಕೊಂಡು ಅಳತಾಯಿರೋದು ದೇವಕ್ಕಗ ಕೇಳಿಸಿತೇನೋ ಅಂತ ಗಾಬರಿಯಾಗಿ ಕಣ್ಣು ಅಗಲಿಸಿ ಆಕಿ ಕಡೆಗೆ ನೋಡಿದ. ರಾಜಪ್ಪನ ನೋಟದಿಂದ ಅಂಜಿಕೊಂಡ ದೇವಕ್ಕ ತನ್ನ ಕೈಯಾಗ ಹಿಡಿದಿದ್ದ ಏನೋ ವಸ್ತುವನ್ನು ಇವರ ಮನಿ ಅಂಗಳದ ಕಡೆ ಒಗದು, ಗಾಬರಿಯಿಂದ ತನ್ನ ಮನಿಯೊಳಗ ಓಡಿಹೋದಳು. ದೇವಕ್ಕ ತಮ್ಮ ಮನಿ ಅಂಗಳದಾಗ ಒಗದುಹೋದ ವಸ್ತು ಏನಿರಬಹುದು ಅಂತ ತಲಬಾಗಿಲಿನ ಹೊಸ್ತಿಲ ದಾಟಿ ಬಂದು ನೋಡಿದ ರಾಜಪ್ಪನಿಗೆ ಕಂಡಿದ್ದು ಅವ್ವಕ್ಕನ ಲಂಗದ ಬಟ್ಟಿ ತುಂಡಿನಿಂದ ಮಾಡಿದ ಒಂದು ಗೊಂಬಿ! ಆ ಗೊಂಬಿ ಮೈಗೆಲ್ಲ ಅಲ್ಲಲ್ಲಿ ಸೂಜಿ ಚುಚ್ಚಿ, ಢಾಳಾಗಿ ಕುಂಕುಮ-ಕಾಡಿಗಿ ಹಚ್ಚಲಾಗಿತ್ತು. ಗೊಂಬಿ ನೋಡಿ ಗಾಬರಿಯಿಂದ ರಾಜಪ್ಪ, “ಏ ಅವ್ವಾ.. .ಏ ರೇಣು… ಬರ್ರಿ ಇಲ್ಲೇ…. ನೋಡ್ರಿ ಇದನ್ನ…” ಕೂಗಿದ. ಮಗನ ದನಿ ಕೇಳಿದ ಗಂಗವ್ವ ಇನ್ನೂ ಗಾಬರಿಯಾಗಿ ಹೊರಗೋಡಿ ಬಂದು ಅಂಗಳದಾಗ ಬಿದ್ದಿದ್ದ ಗೊಂಬಿಯನ್ನು ನೋಡಿದಳು.

“ನಾನು ಹೇಳಿದ್ ಮಾತು ಖರೇ ಐತಿ ನೋಡೋ ಮಗನ…. ಅವ್ವಕ್ಕಗ ಯಾರೋ ’ಭಾನಾಮತಿ’ ಮಾಡಿಸ್ಯಾರೋ… ಈ ಕರಾಮತಿ ಎಲ್ಲ ದೇವಕ್ಕಂದ ಅನಸತೈತಿ… ನಮ್ಮ ಕೂಸಿನ್ನ ಕಂಡ್ರ ಮೊದಲಿನಿಂದ್ಲೂ ಹೊಟ್ಟಿಕಿಚ್ಚುಪಟ್ಟು ಸಾಯ್ತಾಳ ನೀಚರಂಡಿ… ಆಕಿಗೆ ಬರಬಾರದ ರೋಗ ಬರಾ, ಆಕಿ ಮನಿ ನಾಶ ಆಗಿ ಹೋಗ…”.

ತನ್ನ ಕೈಗೆ-ಕೈ ಹಿಸುಕಿಕೊಂಡು ಮನಸಾ ಶಾಪ ಹಾಕಿದಳು ಗಂಗವ್ವಜ್ಜಿ. ದೇವಕ್ಕನ ಮತ್ಸರದ ಮುಂದ ಗಂಗವ್ವಜ್ಜಿಯ ವಾತ್ಸಲ್ಯದ ಒಡಲಿಗೆ ಬೆಂಕಿಬಿದ್ದಂಗ ಆಗಿತ್ತು. ಅತ್ತಿಯ ಜೋರಾದ ದನಿಗೆ ಹೊರಗೋಡಿ ಬಂದ ರೇಣುಕಾ ಆ ಗೊಂಬಿಯನ್ನು ಎತ್ತಿಕೊಳ್ಳಲು ಹೊರಟಿದ್ದ ಗಂಡನನ್ನು ನೋಡಿ ಚೀರಿದಳು.

ಗಂಗವ್ವಜ್ಜಿಗೆ ಯಾಕೋ ದೇವಕ್ಕ ನೋಡೋ ನೋಟನೇ ಪಸಂದ ಬರ್ತಿದ್ದಿಲ್ಲ. ಆ ದಿನನೂ ಆಕಿ ಕಣ್ಣುಗಳು ಏನೋ ಹುಡುಕುತಿರೋ ಹಂಗ ಕಂಡರೂ ಗಂಗವ್ವಜ್ಜಿ ಏನೂ ಮಾತಾಡದೇ ಸುಮ್ಮನಿದ್ದಳು. ಅಪ್ಪ-ಅವ್ವ, ದೇವಕ್ಕ ಚಿಗವ್ವ-ಶರಣಪ್ಪಕಾಕಾ ಎಲ್ಲಾರೂ ಜವಳಿ ಖರೀದಿಗೆ ಅಂತ ಕಲಬುರಗಿ ಕಡೆ ಹೋಗಿದ್ದೇ ತಡ, ಮನ್ಯಾಗಿದ್ದ ಅವ್ವಕ್ಕಗ ವಿಪರೀತ ತಲಿಸೂಲಿ ಎದ್ದಿತು.

“ಏ.. ಅದನ್ನ ಮುಟ್ಟಬ್ಯಾಡ್ರಿ… ಮಾಟ-ಮಂತ್ರದ ಗೊಂಬಿ ಅದು!”

ರೇಣುಕಾಳ ಮಾತಿಗೆ ಕಿವಿಕೊಡದೇ ರಾಜಪ್ಪ ಆ ಗೊಂಬೀನ ಕೈಯ್ಯಾಗ ತೊಗೊಂಡು ಪಡಸಾಲಿಗೆ ಬಂದ. ಅವನ ಹಿಂದೆನೇ ಮನಿ ಒಳಗ ಬಂದ ಅತ್ತಿ-ಸೊಸಿ ಇಬ್ಬರೂ ಅವಸರದಿಂದ ಹೋಗಿ ಅವ್ವಕ್ಕನನ್ನು ಹಿಡಿದುಕೊಂಡರು. ರಾಜಪ್ಪ ಆ ಗೊಂಬಿಗೆ ಚುಚ್ಚಿದ್ದ ಒಂದೊಂದೇ ಸೂಜಿ ಕಿತ್ತಿದ ಹಂಗೆಲ್ಲ ಅವ್ವಕ್ಕ ಕೈಕಾಲು ತಿರುವಿದಳು. ಲಟ-ಲಟ ಅಂತ ಎಲುಬು ಮುರಿದಂಗ ಮೈ ಮುರಿದಳು. ಕುತ್ತಿಗಿ ಸೊಟ್ಟಗ ಮಾಡಿ, ಕಟ-ಕಟ ಹಲ್ಲು ಕಡಿದು, ಕಣ್ಣುಗುಡ್ಡಿ ಗರ-ಗರ ತಿರುಗಿಸಿದಳು. ರಾಜಪ್ಪ ಗೊಂಬಿಗೆ ಹಚ್ಚಿದ್ದ ಎಲ್ಲಾ ಸೂಜಿ ಕಿತ್ತಿ ಒಗದು, ಆ ಬಟ್ಟಿ ಗೊಂಬಿನ್ನ ಹರದು, ಅದರೊಳಗಿದ್ದ ಕೂದಲದ ಎಳಿಗೊಳನ್ನು ಕಿತ್ತಿಹಾಕಿದ. ಬಟ್ಟಿ ಚೂರುಗಳನ್ನು ತನ್ನ ಅಂಗೈಯಾಗ ಮುಟಗಿ ಮಾಡಿ ಅಡಗಿ ಮನಿಯೊಳಗ ಉರೀತಿದ್ದ ಒಲಿಯೊಳಗ ಒಗದ. ಚೂರು-ಚೂರಾಗಿದ್ದ ’ಭಾನಾಮತಿಗೊಂಬಿ’ ಹತ್ತು ನಿಮಿಷದಾಗ ಸುಟ್ಟು ಬೂದಿಯಾಯಿತು. ಅವ್ವಕ್ಕ ಧೊಪ್ಪನ ನೆಲಕ್ಕ ಬಿದ್ದಳು. ಆಕಿ ಮೈಯೆಲ್ಲ ಬೆವರಿ ಜ್ವರ ಇಳದಿತ್ತು. ಗಂಗವ್ವಜ್ಜಿ ತೊಡಿಮ್ಯಾಲೆ ತಲಿಯಿಟ್ಟು ಮಲಗಿದ ಅವ್ವಕ್ಕನ ಅಂಗೈ, ಅಂಗಾಲು ತಿಕ್ಕಿದಳು ರೇಣುಕಾ. ಸುಸ್ತಾಗಿ ಮಲಗಿದ್ದ ಅವ್ವಕ್ಕನ ತಲಿಸವರಿಕೋತ ಗ್ವಾಡಿಗೆ ಒರಗಿದ ಗಂಗವ್ವಜ್ಜಿ ಮತ್ತು ಅಲ್ಲೇ ಮಗ್ಗಲದಾಗ ಕೂತ ರೇಣುಕಾ ಮಾತನಾಡಿಕೊಂಡರು.

“ದೇವಕ್ಕ ವೈನಿ ಹೀಂಗ ಮಾಡ್ತಾಳ ಅಂತ ನಾನು ಕನಸು-ಮನಸಿನ್ಯಾಗ ಅಂದುಕೊಂಡಿರಲಿಲ್ಲ… ಲಗ್ನದ ತಯಾರಿಗೆ ಜೊತಿಯಾಗಿರತಾಳ ಅಂತ ಆಕಿನ್ನ ನಂಬಿದ್ದು ದೊಡ್ಡ ತಪ್ಪಾತು. ನನಗ ಏನು ಮಂಕ ಬಡದಿತ್ತೋ ಏನೋ, ಜವಳಿ ತರಾಕೂ ಆಕಿನೇ ಜೊತಿಗೆ ಬಂದಿದ್ದಳು. ನೀವು ಬ್ಯಾಡ ಅಂದರೂ ಗುಳದಾಳಿ ಮಾಡಿಸಲಿಕ್ಕೆ ಹಾಕಿಬರಾಕ ಆಕಿನ್ನೇ ಜೊತಿಗೆ ಕರಕೊಂಡ ಹೋಗಿದ್ದೆನಲ್ಲ ಅತ್ತಿ…”

“ದೇವಕ್ಕ ಮದಿವಿ ಮಾಡಿಕೊಂಡು ಬಂದಾಗಿಂದ ನೋಡಿನಿ… ಆದ್ರ ಇಷ್ಟು ಹೊಟ್ಟಿಕಿಚ್ಚು ಪಡತಾಳಂತ ಅನಿಸಿರಲಿಲ್ಲ”.

“ಮಾಟ-ಮಂತ್ರ ಅಂತ ಕೇಳಿದ್ದೆ…. ಆದ್ರ ಇದು ಹೀಂಗಿರತೈತಿ ಅಂತ ನನಗ ಏನೂ ಗೊತ್ತಿರಲಿಲ್ಲ ಅತ್ತಿ…”.

“ಅಯ್ಯ… ಇವೇನು ಈಗ ಹುಟ್ಟಿಕೊಂಡಾವೇನು? ಹಿಂದಿನಿಂದಲೂ ನಡಕೊಂಡು ಬಂದಾವ. ಎಲ್ಲಾ ನಮ್-ನಮ್ಮ ನಂಬಿಕಿ ಮ್ಯಾಲೆ ನಿಂತೈತಿ. ನಾವು ದೇವ್ರುನ್ನ ನಂಬಿದಂಗ, ಸ್ವಲ್ಪ ಮಂದಿ ಮಾಟ-ಮಂತ್ರ ನಂಬಿ, ಅದನ್ನ ಮಾಡಿಕೊಂಡು ಬಂದಾರ. ತಮ್ಮದೇನಾರ ಆಸಿಯಿತ್ತು ಅಂದ್ರ, ಇನ್ನೊಬ್ರ ಮ್ಯಾಲೆ ಏನಾರ ಸೇಡು ತೀರಸ್ಕೋಬೇಕಂದ್ರ ಈ ವಾಮಾಚಾರದ ಹಾದಿ ಹಿಡಿತಾರ. ಯಾಕಂದ್ರ… ಮಾಟ-ಮಂತ್ರ ಮಾಡಿಸಿ ತಮ್ಮ ಮನಸಿನ್ಯಾಗ ಅನಿಸಿದ್ದನ್ನು ಮಾಡಿಸಲಿಕ್ಕೆ ಜಾಸ್ತಿ ಹೊತ್ತು ಆಗಂಗಿಲ್ಲ. ಇವ್ರು ಕೇಳಿದ್ದನೆಲ್ಲ ಲಗೂನೇ ಮಾಡಿಸಿಕೊಡ್ತೀವಿ ಅಂತ ಮಾಟ ಮಾಡಿಸೋರು ಇವ್ರನ್ನ ನಂಬಸ್ತಾರ. ಮತ್ತ… ಮಂದಿಗೂ ಅದರ ಬಗ್ಗೆ ಅಂಜಿಕಿ ಇರ್ತದ ನೋಡು….”.

“ಹಂಗದ್ರ… ಬರೀ ಕೆಟ್ಟದ್ದು ಮಾಡಲಿಕ್ಕೇ ಇದನ್ನೆಲ್ಲ ಮಾಡ್ತಾರಂತೀರೇನ್ರೀ….?” ಅಂಜಿಕೊಂಡೇ ಕೇಳಿದಳು ರೇಣುಕಾ.

“ಹಂಗೇನಿಲ್ಲವಾ ರೇಣುಕಾ… ಇದ್ರಾಗ ಛೋಲೋದೂ ಇರತೈತಿ. ಈ ಕೆಟ್ಟಕಣ್ಣು ಬೀಳಬಾರದಂತ ನಾವೂನೂ ತಾಯಿತ ಮಂತ್ರಿಸಿ ಕಟ್ಟಕೋತೀವಿ… ಮನ್ಯಾಗಿನ ಮೂಲಿಗೆ ಮಂತ್ರಿಸಿದ ಟೆಂಗಿನಕಾಯಿ ಕಟ್ಟತೀವಿ… ಮಂತ್ರಹಾಕಿ ಮೈಯ್ಯಾಗ ಏರಿದ ನಂಜು ಇಳಸ್ತಾರ, ಗಿಡಮೂಲಕಿಯಿಂದ ಔಷಧಿ ಮಾಡಿ ಮಂತ್ರಿಸಿ ಕೊಡ್ತಾರ… ಏಟೊಂದು ಸರ್ತಿ ಜಡ್ ಆದಾಗ ನಾವು ತೊಗೊಂಡಿಲ್ಲ ಹೇಳು…?”

“ಮತ್ತಿದು ’ಭಾನಾಮತಿ’?” ರೇಣುಕಾಳ ಧ್ವನಿಯಲ್ಲಿ ಕಾಳಜಿ ತುಂಬಿತ್ತು.

“ಹೂಂ… ಭಾನಾಮತಿನ್ಯಾಗ ತಮಗ ಆಗಿ ಬರಲಾರದವರ ಮ್ಯಾಲೆ ಸೇಡು ತೀರಿಸ್ಕೋಬೇಕಂತ ಮಾಟ-ಮಂತ್ರ ಮಾಡಿಸೋರ ಹತ್ರ ಯಾರ ಮ್ಯಾಲೆ ಮಾಟ ಮಾಡಸ್ತಾರೋ ಅವರದು ಒಂದೀಟು ಕೂದಲ, ಕತ್ತರಿಸಿದ ಉಗುರು, ಅವರು ಹಾಕ್ಕೊಂಡ ಬಿಟ್ಟಿದ್ದ ಬಟ್ಟಿ ಕೊಟ್ರ, ಅದೇ ಮನುಷ್ಯಾನ ಹೋಲಿಕಿಯಿರೋ ಹಂಗ ಒಂದು ಗೊಂಬಿನ್ನ ಮಾಡಿ, ಮಂತ್ರ ಹಾಕಿ ಆ ಮನುಷ್ಯಾನ ವಶ ಮಾಡಿಕೋತಾರಂತ ನಮ್ಮ ಆಯಿ ಹೇಳ್ತಿದ್ದಳು. ಆಮ್ಯಾಲೆ ಆ ಗೊಂಬಿಗೆ ನಾನಾಥರ ತ್ರಾಸ ಕೊಡ್ತಾರ. ಅದಕ್ಕ ಸೂಜಿ ಚುಚ್ಚತಾರ, ಕೈಕಾಲ ತಿರುವುತಾರ… ಈಗ ನಮ್ಮ ಅವ್ವಕ್ಕ ಅನುಭವಿಸಿದ್ದು ನೋಡಿದ್ವೆಲ್ಲ… ಪಾಪ ಕೂಸು ಒದ್ದಾಡಿಹೋತು…. ತನ್ನ ಹೆಣ್ಣುಮಕ್ಕಳಿಗೆ ಸಾಧಾರಣ ಮನಿತನ ಸಿಕ್ಕಾವಂದ್ರ ಅದು ಅವರ ನಸೀಬ. ನಮ್ಮ ಅವ್ವಕ್ಕ ಏನು ತಪ್ಪು ಮಾಡ್ಯಾಳ?” ಸುಸ್ತಾಗಿ ಮಲಗಿದ್ದ ಮೊಮ್ಮಗಳ ತಲಿಸವರಿದಳು ಗಂಗವ್ವಜ್ಜಿ.

“ನಮ್ಮ ಕೂಸಿಗೆ ಮಾಟ ಮಾಡಿಸಿ ಮದುವಿ ಮುರೀಬೇಕು ಅನ್ನೋ ಕೆಟ್ಟ ಯೋಚನಿ ಮಾಡಿದ್ಲು ನೋಡು. ನಾನು ಅವ್ವಕ್ಕಗ ಎಷ್ಟು ಸಲ ಹೇಳ್ತೀನಿ… ತಲಿ ಬಾಚಕೊಂಡ ಮ್ಯಾಲೆ ಕೂದಲ ಮುದುರಿ ಒಗಿ, ಹಣಗಿಗೆ ಕೂದಲ ಬಿಡಬ್ಯಾಡ ಅಂತ… ಆ ದಿವಸನೂ ಮದಿವಿ ಸುದ್ದಿ ಕೇಳಿ ನಾಚಿಕೊಂಡು ಕೂದಲನೂ ಮುದುರದೇ ಒಳಗ ಬಂದಳು. ಆ ದೇವಕ್ಕ ಅಲ್ಲೇ ಅಂಗಳದಾಗ ನಿಂತಿದ್ಲು ನೋಡು…”.

“ಹಂಗದ್ರ… ನಮ್ಮ ಜತನದಾಗ ನಾವಿರೋದು ಛೋಲೋ ಅಲ್ಲೇನ್ರೀ ಅತ್ತಿ?”

“ಹೌದವ್ವ ರೇಣುಕಾ… ನಾಳೆ ಮುಂಜಾನೇ ಐಯ್ಯನೋರು ಹತ್ರ ಹೋಗಿ, ಕೆಟ್ಟಕಣ್ಣು ತಾಗದೇ ಇರಲಿ ಅಂತ ಮಂತ್ರ ಹಾಕಿಸಿ ತಾಯಿತ ಮಾಡಿಸಿ ತಂದು ಅವ್ವಕ್ಕಗ ಕಟ್ಟೋಣು, ಹಂಗ… ಕಲಬುರಗಿ ಶರಣಬಸಪ್ಪಗ ಎಡಿ ಮಾಡ್ಸೋಣು”.

ಆಯಿ-ಅವ್ವಳ ಮಾತುಕತೆಯನ್ನು ಕೇಳಿಸಿಕೊಂಡ ಅವ್ವಕ್ಕ ಗಾಬರಿಯಿಂದ ಕಣ್ಣುಬಿಟ್ಟು ನೋಡಿದಳು.

“ಭಾನಾಮತಿ ಅಂತ ನೀನೇನು ಗಾಬರಿ ಮಾಡ್ಕೋಬ್ಯಾಡ ಅವ್ವಕ್ಕ… ನಾಳಿನೇ ನಿನಗ ತಾಯಿತ ಕಟ್ಟಿಸೋಣು… ಮದುವಿಗೆ ತಯಾರಿ ಮಾಡೋದು ಇನ್ನೂ ಬೇಕಾದಷ್ಟು ಐತಿ…. ಹೊತ್ತು ಭಾಳ ಆಗೈತಿ.. ಮಲಕೋಬಾರದೇನ ಕೂಸೇ….” ಗಂಗವ್ವಜ್ಜಿ ಹೇಳಿದಾಗ ಅವ್ವಕ್ಕ ನಿಶ್ಚಿಂತಿಯಿಂದ ನಿದ್ದಿ ಮಾಡಿದಳು.

******

“ಅಜಿ… ಅಜಿ… ಐವಾಂಟು ಬೈ ದಿಸ್ ಡಾಲ್… ಪ್ಲೀಸ್ ಟೆಲ್ ಮಾಮ್ ಟು ಬೈ ದಿಸ್ ಫಾರ್ ಮಿ…”. ʼಟಾಯ್ಸ್ ಸ್ಟೋರ್’ನ್ಯಾಗ ಜೋಡಿಸಿಟ್ಟಿದ್ದ ನೂರಾರು ಗೊಂಬಿಗಳನ್ನು ನೋಡಿ ಏನೋ ಯೋಚನಿ ಮಾಡ್ತಾ ನಿಂತಿದ್ದ ಗಿರಿಜಾ ಮೊಮ್ಮಗಳ ದನಿ ಕೇಳಿಸಿಕೊಂಡು ಎಚ್ಚೆತ್ತು, “ಏನ ಅವ್ವೀ… ಏನಂದೀ?” ಅಂದರು.

ಮಗಳ ಮಾತು ಕೇಳಿಸಿಕೊಂಡ ಸುಮಾ ಅವರಿಬ್ಬರ ಹತ್ತಿರ ಬಂದಾಕಿನೇ ಅವ್ನಿ ಕೈಯಾಗಿನ ಗೊಂಬಿಯನ್ನು ಕಿತ್ತಿಕೊಂಡು, ಅಂಗಡಿಯ ಐಲ್ ನಲ್ಲಿ ವಾಪಸಿಟ್ಟು, “ಐ ಟೋಲ್ಡ್ ಯು ಅವ್ನಿ, ಯು ಕ್ಯಾನ್ ಬೈ ಎನಿ ಅದರ್ ಡಾಲ್ ಬಟ್ ನಾಟ್ ದಿಸ್ ಡಾಲ್…. ಓಕೆ? ಮಗಳನ್ನು ಗದರಿಸಿದಾಗ, “ಬಟ್ ವೈ ಮಾಮ್? ಆವತ್ತು ಮ್ಯೂಸಿಯಂನಲ್ಲೂ ಬೇಡ ಅಂತ ಹೇಳಿದಿ… ಆಲ್ವೇಸ್ ಯು ಟೆಲ್ ಮಿ ನಾಟ್ ಟು ಬೈ ದಿಸ್ ಡಾಲ್….” ವಾದಕ್ಕಿಳಿದಳು ಅವ್ನಿ.

“ಯಾಕ ಗೊಂಬೀ ತೊಗೊಳ್ಳಾಕ ಬ್ಯಾಡ ಅಂತೀ ಸುಮಾ, ಕೂಸು ಅಷ್ಟು ಕೇಳಲಿಕ್ಕತ್ತ್ಯದ…” ಮೊಮ್ಮಗಳು ಬ್ಯಾಸರ ಮಾಡಿಕೊಂಡಿದ್ದನ್ನು ನೋಡಿದ ಗಿರಿಜಾ ಅವ್ನಿಯನ್ನು ತನ್ನ ಹತ್ತಿರ ಕರೆದು ಸಮಾಧಾನ ಮಾಡಿದರು.

“ಆ ಗೊಂಬಿ ತೊಗೊಳ್ಳಾಕ ನಾನು ಬ್ಯಾಡ ಅಂತ ಹೇಳಿದ್ದಕ್ಕ, ನಿನ್ನ ಹತ್ರ ಕೇಳಾಕ ಬಂದಾಳ. ಈ ಅಂಗಡಿಯೊಳಗ ನೂರಾರು ಗೊಂಬಿಗಳು ಅವ. ಎಲ್ಲಾ ಬಿಟ್ಟು ಅವ್ನಿಗೆ ಇದೇ ಗೊಂಬಿ ಬೇಕಾಗ್ಯದ ನೋಡು ಅಮ್ಮ. ಆವತ್ತು ಅಲ್ಲೆ ಮ್ಯೂಸಿಯಂನಾಗೂ ಇದೇ ಗೊಂಬಿ ಬೇಕು ಅಂತ ಹಟ ತಗದಿದ್ದಳು. ನಾನು ಬ್ಯಾಡ ಅಂತ ಹೇಳಿ ಕರಕೊಂಡು ಬಂದಿದ್ದೆ. ಇವತ್ತು ಅಜ್ಜಿ ಸಪೋರ್ಟ್ ತನಗ ಸಿಗ್ತದ ಅಂತ ಮೊಂಡುತನ ಮಾಡ್ತಾಳ. ಅಮ್ಮ… ನೀನು ನಮ್ಮ ಜೋಡಿ ಇರಲಿಕ್ಕೆ ನ್ಯೂ ಜೆರ್ಸಿಗೆ ಬಂದಾಗೆಲ್ಲ ಈಕಿದು ಹಟ ಜಾಸ್ತಿ ಆಗ್ತದ…” ಅಜ್ಜಿಯ ಮುದ್ದಿನಿಂದ ಮೊಮ್ಮಗಳು ಹಟಮಾಡೋದನ್ನು ಹೆಚ್ಚು ಮಾಡಿಕೊಂಡಾಳ ಅಂತ ಆರೋಪಿಸಿ ತನ್ನ ಮಾತು ಮುಂದುವರೆಸಿದಳು.

“ಗೊಂಬಿಯಂದ್ರ ಮುದ್ದಾಗಿರಬೇಕಲ್ಲೇನು? ನೋಡಿಲ್ಲೇ… ಈ ಗೊಂಬೀನ… ಅಂದದನಾ? ಛಂದದನಾ?”, ರೇಗಿಕೊಂಡ ಸುಮಾ ಐಲ್ ನಿಂದ ಆ ಗೊಂಬಿ ತಗದು ಗಿರಿಜಾರ ಮುಂದ ಹಿಡಿದಳು. ಸುಮಾನ ಕೈಯಾಗಿನ ಗೊಂಬಿ ನೋಡಿದ ಗಿರಿಜಾಗ ಆಶ್ಚರ್ಯ ಆಯಿತು.
“ಅಲ್ಲ ಸುಮಾ… ಇದೇನು ಗೊಂಬಿ? ನೋಡ್ಲಿಕ್ಕೆ ಹೀಂಗ ಅದ… ಈ ಊರಾಗ ಏನಂತ ಕರೀತಾರ ಇದನ್ನ…. ಇಂಥಾ ಗೊಂಬಿನ್ನ ಮಕ್ಕಳ ಆಟಗಿ ಸಾಮಾನಿನ ಜೊತಿಗೆ ಮಾರಲಿಕ್ಕೆ ಇಟ್ಟಾರಲ್ಲ ಈ ದೇಶದಾಗ?”

“ಇದಕ್ಕ ’ವೂಡೂ ಡಾಲ್’ ಅಂತ ಕರೀತಾರ… ಮಾಟ-ಮಂತ್ರಕ್ಕ ಉಪಯೋಗಿಸುತ್ತಿದ್ದ ಗೊಂಬಿ ಇದು. ಅದಕ್ಕೇ ಅವ್ನಿಗೆ ತೊಗೊಬ್ಯಾಡ ಅಂತ ಅಂದಿದ್ದು…”

“ಹೌದಾ? ಹಂಗಂದ್ರ…. ಈ ದೇಶದಾಗೂ ಇದೆಲ್ಲ ಮಾಟ-ಮಂತ್ರ ನಡೀತದೇನು?”

ಆಶ್ಚರ್ಯದಿಂದ ಕೇಳಿದ ಗಿರಿಜಾರಿಗೆ ಸುಮಾ ಉತ್ತರ ಹೇಳೊವಷ್ಟರೊಳಗ ಅವ್ನಿ ಆ ’ವೂಡೂ’ ಗೊಂಬಿನ್ನ ಬಿಟ್ಟು, ಒಂದು ’ಡೋರಾ’ ಗೊಂಬಿ ಮತ್ತೊಂದು ’ಬಾರ್ಬಿ’ ಗೊಂಬಿನ್ನ ತೊಗೊಂಡು “ಐ ವಿಲ್ ಬೈ ದೀಸ್ ಟು ಡಾಲ್ಸ್” ಅಂದು ಬಿಲ್ಲಿಂಗ್ ಕೌಂಟರ್ ಕಡೆಗೆ ಓಡಿದಳು. ಸುಮಾ ಬಿಲ್ ಮಾಡಿಸಿಕೊಂಡು, ಗೊಂಬಿಗಳಿದ್ದ ಬ್ಯಾಗ್ ಹಿಡಿದು ಅಂಗಡಿಯಿಂದ ಹೊರಗ ಬರೋವಷ್ಟರಲ್ಲಿ ಅವ್ನಿ ಮತ್ತು ಗಿರಿಜಾ ಹೊರಗಡೆ ಕಾರಿನ ಹತ್ತಿರ ಕಾಯುತ್ತ ನಿಂತಿದ್ದನ್ನು ನೋಡಿ,“ಅಮ್ಮ… ಒಂದಿಷ್ಟು ಕಾಯಿಪಲ್ಯ ತೋಗೋಬೇಕು… ದೇಸಿ ಸ್ಟೋರಿಗೆ ಹೋಗೋಣು…” ಅನ್ನುತ್ತಾ ಕಾರನ್ನು ಚಾಲೂ ಮಾಡಿದಳು.

ಮನಿಗೆ ಬಂದಿದ್ದೇ ತಡ ಅವ್ನಿ ತನ್ನ ಹೊಸ ಗೊಂಬಿಗಳ ಜೊತಿಗೆ ಆಟ ಆಡಿಕೋತ ಕೂತಳು. ಸುಮಾ ಮತ್ತು ಗಿರಿಜಾ ದೇಸಿ ಅಂಗಡಿಯಿಂದ ತಂದಿದ್ದ ಕಿರಾಣಿ ಸಾಮಾನು, ಕಾಯಿ-ಪಲ್ಯ ಎಲ್ಲ ತೆಗೆದಿಟ್ಟುಕೊಳ್ಳಲು ಸುರುಮಾಡಿದರು. ಟೆನ್ನಿಸ್ ಬಾಲಿನಷ್ಟು ದೊಡ್ಡದಾಗಿರೋ ನಿಂಬಿಹಣ್ಣಗಳನ್ನು ಎತ್ತಿಟ್ಟು, ಹಸಿಮೆಣಸಿನಕಾಯಿ ತುಂಬು ತೆಗಿಲಿಕ್ಕೆ ಸುರುಮಾಡಿದ ಗಿರಿಜಾ ಏನೋ ನೆನಪು ಮಾಡಿಕೊಂಡು ರಾತ್ರಿ ಅಡಗಿಗೆ ತಯಾರಿ ನಡೆಸಿದ್ದ ಮಗಳನ್ನು ಸಣ್ಣ ದನೀಲೆ ಮಾತಾಡಿಸಿದರು.

“ಸುಮಾ… ಅಲ್ಲೆ ಅಂಗಡ್ಯಾಗ ಅದೇನೋ ವೂಡು ಗೊಂಬಿ ಅಂತ ಹೇಳಿದೆಲ್ಲ… ಮತ್ತ… ಮತ್ತ… ಇಲ್ಲೆ ಆ ಗೊಂಬಿಯಿಂದ ಹೆಂಗ ಮಾಟ ಮಾಡಸ್ತಾರಂತ ನಿನಗ ಗೊತ್ತದೇನು?”

“ಅದೇನೋ ಗೊಂಬಿ ಮಾಡಿ, ಅದಕ್ಕೆಲ್ಲ ಮಳಿನೋ-ಸೂಜಿನೋ ಚುಚ್ಚಿ, ಮಂದಿ ಮ್ಯಾಲೆ ಮಾಟ ಮಾಡಿಸಿ ಸೇಡು ತೀರಸ್ಕೋತಾರಂತ, ನಂಗೂ ಇಷ್ಟೇ ಗೊತ್ತಿರೋದು… ಅದೇ ಆ ಮ್ಯೂಸಿಯಂನ್ಯಾಗ ಇಂಥಾ ಗೊಂಬಿ ನೋಡಿದ್ವಿ” ಅಂದು ಹೇಳೋವಷ್ಟರಲ್ಲಿ ಅಡಗಿ ತಯಾರಿ ಆಗಿತ್ತು. ಅಡಗಿ-ಊಟ ಮುಗಿಸಿ, ಪಾತ್ರಿ ಗಲಬರಿಸಿ ಡಿಷ್ ವಾಷರ್ ಗೆ ತುಂಬುತ್ತಾ ನಿಂತಿದ್ದ ಸುಮಾಳನ್ನು ನೋಡಿ ಅಡಗಿಮನಿಗೆ ಬಂದ ಗಿರಿಜಾ ಅಲ್ಲೇ ಕಟ್ಟಿ ಮ್ಯಾಲಿದ್ದ ಸುಮಾನ ಫೋನ್ ನೋಡ್ತಾ ಮಾತನಾಡಿದರು.

“ಸುಮಾ… ನೀನು ಹೊರಗೆಲ್ಲಾದ್ರೂ ಹೋದಾಗ ನಿನ್ನ ಫೋನಿನ್ಯಾಗ ಫೋಟೋ ತೆಗೀತಿಯಲ್ಲ, ನೀನು ಹೇಳ್ತಿದ್ದ ಆ ಮ್ಯೂಸಿಯಂನ ಫೋಟೋಗಳೇನಾದ್ರು ನಿನ್ನ ಈ ಫೋನಿನ್ಯಾಗ ಅವ ಏನು?”

“ಯಾಕಮ್ಮಾ… ಆ ಫೋಟೋಗಳನ್ನು ನೋಡಬೇಕಾಗ್ಯಾದ?… ಫೋಟೋಗಳನ್ನೆಲ್ಲ ರಾಜು ಲ್ಯಾಪ್ ಟಾಪ್ ನ್ಯಾಗ ಸೇವ್ ಮಾಡ್ಯಾರ ಅನ್ಸ್ತದ. ರಾಜೂ… ನಿಮ್ಮ ಲ್ಯಾಪ್ ಟಾಪ್ ತೊಗೊಂಬರ್ರಿ…” ಗಂಡನನ್ನು ಕರೆದಳು.

“ನಾನು ಇಲ್ಲಿಗೆ ಬಂದಾಗೆಲ್ಲ ಈ ದೇಶದ ಬ್ಯಾರೆ-ಬ್ಯಾರೆ ಜಾಗಗಳನ್ನ, ಊರುಗಳನ್ನ ನೋಡ್ತೀನಲ್ಲ…. ಅದಕ್ಕ ಕೇಳಿದೆ..”.

ಕೈಯೊಳಗ ತನ್ನ ಕಂಪೂಟ್ಯರ್ ಹಿಡಿದು ಬಂದ ಅಳಿಯನನ್ನು ನೋಡಿ ಸ್ವಲ್ಪ ಸಂಕೋಚದಿಂದಲೇ ಹೇಳಿದ ಗಿರಿಜಾ, ಮಗಳು-ಅಳಿಯ ಮೊಮ್ಮಗಳೊಂದಿಗೆ ಟೂರ್ ಹೋಗಿಬಂದಿದ್ದ ವೂಡೂ ಮ್ಯೂಸಿಯಂನ ಫೋಟೋಗಳನ್ನು ನೋಡಲಿಕ್ಕೆ ಸುರುಮಾಡಿದರು. ಮಾಮಿ ಯಾಕೋ ಈ ವಿಷಯದಾಗ ಬಹಳ ಕುತೂಹಲ ತೋರಿಸಿದ್ದನ್ನು ನೋಡಿದ ರಾಜು, ತನಗ ತಿಳಿದಷ್ಟು ಮಾಹಿತಿಯನ್ನು ಗಿರಿಜಾರಿಗೆ ಹೇಳಿದ.

“ಮುನ್ನೂರುಕ್ಕಿಂತ ಹೆಚ್ಚಿನ ವರ್ಷಗಳ ಹಿಂದೆ ಜೀತದಾಳುಗಳಾಗಿ, ವಲಸೆಗಾರರಾಗಿ ಪಶ್ಚಿಮ ಆಫ್ರಿಕಾದಿಂದ ಅಮೆರಿಕಾಗೆ ಬಂದ ಅಲ್ಲಿನ ಮಂದಿ ತಮ್ಮ ಜಾನಪದ ಪದ್ಧತಿಯಾಗಿದ್ದ ಈ ವೂಡೂ ಸಂಸ್ಕೃತಿನ ಇಲ್ಲೂ ಮುಂದುವರೆಸಿಕೊಂಡು ಹೋದರು. ನ್ಯೂ ಆರಲೆನ್ಸ್ ರಾಜ್ಯದ ಲೂಯಿಸಿಯಾನಾದಾಗ ಈ ಪದ್ಧತಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಈ ಸಂಸ್ಕೃತಿಯ ಮಾಹಿತಿ ಸಿಗಲಿ ಅಂತ ಅಲ್ಲೆ ಮ್ಯೂಸಿಯಂ ಮಾಡ್ಯಾರ್ರಿ ಮಾಮಿ… ಇದು ಒಂಥರಾ ಆಫ್ರೋ-ಅಮೆರಿಕನ್ ಧರ್ಮಗಳ ಸಾಂಸ್ಕೃತಿಕ ರೂಪ ಆಗ್ಯದ. ಇದಕ್ಕೆಲ್ಲ ಧರ್ಮದ ರೂಪ ಇದ್ದರೂ, ತನ್ನದೇ ಆದ ನಂಬಿಕೆನೂ ಅದ ಅಂತ ಹೇಳ್ತಾರ… ಈ ವೂಡೂ ಪದ್ಧತಿನ ಉಪಯೋಗಿಸಿಕೊಂಡು ತಮ್ಮನ್ನು ಇನ್ನೊಬ್ಬರಿಂದ ಕಾಪಾಡಿಕೊಳ್ಳಲಿಕ್ಕೆ ಇಲ್ಲಾ ಇನ್ನೊಬ್ಬರಿಗೆ ಕೆಡಕು ಮಾಡೋ ಉದ್ದೇಶದಿಂದ, ಗಿಡಮೂಲಿಕೆ ಔಷಧಿ-ವಿಷ ಮತ್ತ ತಾಯಿತಗಳನ್ನೂ ಮಾಡುತ್ತಿದ್ದರಂತ… ’ವೂಡೂ ರಾಣಿ’ ಅಂತ ಕರೆಸಿಕೊಳ್ಳುತ್ತಿದ್ದ ಮಾಂತ್ರಿಕ ವಿದ್ಯೆ ಕಲ್ತಿದ್ದ ಹೆಣ್ಣುಮಕ್ಕಳು ಊರ ಹೊರಗ ಒಂದು ಜಾಗ ಮಾಡಿಕೊಂಡು ಇಂಥ ಕೆಲಸ ಮಾಡ್ತಿದ್ರಂತ. ವೂಡೂ ಮ್ಯೂಸಿಯಂನ್ಯಾಗ ಒಂದು ವಸ್ತುಸಂಗ್ರಹಾಲಯ ಅದ, ಕೆಲವು ಕಲಾಕೃತಿಗಳೂ, ವೂಡೂರಾಣಿ ಫೋಟೋಗಳು ಅವ. ಈ ’ಲೂಯಿಸಿಯಾನಾ ವೂಡೂ’ ದಿಂದಲೇ ’ವೂಡೂ ಗೊಂಬಿ’ ಮಾಡ್ತಿದ್ರಂತ…”. ರಾಜು ವಿವರವಾಗಿ ಹೇಳಿ ಮಾತು ಮುಂದುವರೆಸಿದ.

“ಆಫ್ರಿಕಾದಿಂದ ಜೀತದಾಳಾಗಿ ದುಡಿಲಿಕ್ಕೆ ಬಂದವರು, ತಮ್ಮ ಮ್ಯಾಲೆ ದಬ್ಬಾಳಿಕೆ ಮಾಡ್ತಿದ್ದ ಯುರೋಪಿಯನ್ ಆಫೀಸರಗೊಳ ಮ್ಯಾಲೆ ಸೇಡು ತೀರಸ್ಕೋಬೇಕಂತ ಮಣ್ಣಿನಿಂದ ’ವೂಡೂ’ ಗೊಂಬಿಗಳನ್ನ ಮಾಡಿ ಅವರ ಮ್ಯಾಲೆ ಮಾಟ-ಮಂತ್ರ ಮಾಡುತ್ತಿದ್ದರಂತ… ಆ ಮಣ್ಣಿನ ಗೊಂಬಿಗಳ ಮ್ಯಾಲೆ ಹನಿ-ಹನಿಯಾಗಿ ನೀರು ಹಾಕ್ತಿದ್ರಂತ… ಗೊಂಬಿ ಕರಗಿಕೋತ ಹೋದಂಗ, ವಶೀಕರಣಕ್ಕ ಒಳಗಾದೋರು ಸೊರಗಿಕೋತ ಹೋಗ್ತಿದ್ರಂತ.. ಮತ್ತೆ… ಇಲ್ಲೆಲ್ಲ ಥಂಡಿ ಜಾಸ್ತಿಯಿರ್ತದಂತ ಮನಿಯೊಳಗ ’ಫೈಯರ್ ಪ್ಲೇಸ್’ ಇರ್ತದಲ್ಲ, ಹೊಗಿ ಹೋಗಲಿಕ್ಕಿರೋ ಅದರ ’ಚಿಮನಿ’ಯೊಳಗ ಇಂಥ ಗೊಂಬಿಗೊಳನ್ನ ಬಚ್ಚಿಡ್ತಿದ್ರಂತರಿ ಮಾಮಿ…” ಅಳಿಯನ ಮಾತುಗಳನ್ನೆಲ್ಲ ಕೇಳಿಸಿಕೊಂಡು ಕೂತಿದ್ದ ಗಿರಿಜಾ ಮಾತನಾಡಿದರು.

“ಇಂಥಾ ಮಾಟ-ಮಂತ್ರದ ಗೊಂಬಿನ್ನ ಮಕ್ಕಳ ಆಟಗಿ ಸಾಮಾನಿನ ಜೊತಿಗೆ ಮಾರಲಿಕ್ಕೆ ಇಟ್ಟಿದ್ದನ್ನು ಇವತ್ತು ಅಂಗಡಿಯೊಳಗ ನೋಡಿದೆ… ಮತ್ತ ಅದೇನು?” ಅನುಮಾನದಿಂದ ಕೇಳಿದರು.

“ಈಗೆಲ್ಲ ಮಾಟ-ಮಂತ್ರ ಅಂತ ಮಾಡಂಗಿಲ್ಲಂತ್ರಿ ಮಾಮಿ… ಈ ವೂಡೂ ಗೊಂಬಿನ್ನ ಮನಸ್ಸಿಗೆ ಧೈರ್ಯ ಕೊಡಲಿಕ್ಕೆ, ನಂಬಿಕೆ ಬರಲಿಕ್ಕೆ, ತಮ್ಮ ಜೀವನ ಸುಧಾರಿಸಿಕೊಳ್ಳಲಿಕ್ಕೆ ಉಪಯೋಗಿಸ್ತಾರಂತ… ಆ ಗೊಂಬಿಗೆ ಮಳಿ ಚುಚ್ಚಿ, ಅದೇನೋ ಅವರ ಮಂಡಲ ಪೂಜಿಮಾಡಿ, ಮಂತ್ರ ಹಾಕಿದ್ರ ಮಾತ್ರ ಅದು ಮಾಟ-ಮಂತ್ರದ ಗೊಂಬಿಯಾಗ್ತದ ಅಂತಾರ…” ರಾಜುನ ಉತ್ತರ ಕೇಳಿಸಿಕೊಂಡ ಸುಮಾ ಗಿರಿಜಾರಿಗೆ ತಾನೂ ಒಂದು ಪ್ರಶ್ನೆ ಕೇಳಿದಳು.

“ನಮ್ಮಲ್ಲೆನೂ ಇಂಥಾದ್ದೇ ಮಾಟಮಂತ್ರದ ಪದ್ಧತಿ ಇತ್ತು ಅಲ್ಲೇನಮ್ಮ… ’ಭಾನಾಮತಿ’ ಅಂತ… ಹೀಂಗೇ ಗೊಂಬಿ ಮಾಡಿ, ಅದಕ್ಕೆಲ್ಲ ಸೂಜಿ ಚುಚ್ಚಿ, ಮಾಟ ಮಾಡ್ತಿದ್ರಂತಲ್ಲ… ಅದೆಂಗ ಹಂಗೆಲ್ಲಾ ಮಾಡ್ತಿದ್ರೋ ಏನೋ?…. ಈಗೂ ಹಳ್ಳಿ ಕಡೆ ಮಾಡ್ತಾರಂತಲ್ಲ… ಹಂಗೆಲ್ಲ ಮಾಟ ಮಾಡೋರನ್ನ ಈಗ ಪೋಲೀಸರು ಹಿಡುಕೊಂಡು ಹೋಗ್ತಾರ ಅಂತ ಪೇಪರಿನೊಳಗ ಸುದ್ದಿ ಓದೀನಿ… ಪಾಪ, ಮಾಟ ಮಾಡಿಸಿಕೊಂಡವರಿಗೆ ಎಷ್ಟು ತ್ರಾಸ ಆಗ್ತದೋ ಏನೋ?”

ಸುಮಾಳ ಮಾತಿನ್ಯಾಗ ಭಾನಾಮತಿ ಅಂತ ಕೇಳಿದ ತಕ್ಷಣ ಆ ಬಗ್ಗೆ ಗಿರಿಜಾ ಏನೂ ಮಾತಾಡದೇ, “ಆಗ್ಲೇ ಹತ್ತೂವರಿ ಆಯ್ತು…. ಮತ್ತ ನಾಳಿಗೆ ನಿಮ್ಮಿಬ್ಬರಿಗೂ ಆಫೀಸಿಗೆ ಹೋಗೋದದಲ್ಲ… ಅವ್ನಿ ಆಗ್ಲೇ ನಿದ್ದಿ ಮಾಡಿಬಿಟ್ಟಳು ಅನಸತದ” ಅನಕೋತ ಮೆಲ್ಲಕ ತನ್ನ ರೂಮಿನ ಕಡೆ ನಡೆದರು.

’ಟಾಯ್ ಸ್ಟೋರ್ಸ್’ನಿಂದ ಬಂದಾಗಿಂದಲೂ ವೂಡೂ ಗೊಂಬಿ ಬಗ್ಗೆ ಮಾತನಾಡ್ತಾಯಿದ್ದ ಅಮ್ಮ ಒಮ್ಮೆಲೆ ಸುಮ್ಮನಾಗಿದ್ದು ಸುಮಾಗೆ ಆಶ್ಚರ್ಯ ಅನಿಸಿ ರೂಮಿನ ಕಡೆ ಹೋಗುತ್ತಿದ್ದ ಗಿರಿಜಾರನ್ನೇ ನೋಡುತ್ತಾ ಕೂತಳು.

“ಅವ್ನಿ ಗೊಂಬಿಗಳನ್ನು ಹಿಡಕೊಂಡೇ ನಿದ್ದಿ ಮಾಡ್ಯಾಳ ನೋಡು… ನೀನೂ ಮಲಕೋ ಹೋಗು ಸುಮಾ… ಗುಡ್ ನೈಟ್..” ರೂಮಿನಲ್ಲಿ ಮಲಗಿದ್ದ ಅವ್ನಿಯನ್ನು ನೋಡಿ ಹೇಳಿದರು ಗಿರಿಜಾ. ಅವ್ನಿ ಕೈಯಾಗಿದ್ದ ಗೊಂಬಿಗಳನ್ನ ಮೆಲ್ಲಕ ತೆಗದಿಡಬೇಕಂದಾಗ ನಿದ್ದಿಗಣ್ಣಾಗೇ “ಮೈ ಡಾಲ್ಸ್…” ಅಂತ ಅವ್ನಿ ಕನವರಿಸಿದಳು. “ಗೊಂಬಿ ಇಲ್ಲೇ ಇಡತೀನಿ ಅವ್ವೀ… ನೀನು ಮಲಕೋ ಕೂಸೇ…” ಅವ್ನಿಯ ತಲಿಸವರಿ ತಾವೂ ಮಲಗಿದರು. ಆದ್ರ ಯಾಕೋ ಭಾಳ ಹೊತ್ತಿನ ತನಕ ನಿದ್ದಿ ಹತ್ತಿಲಿಲ್ಲ. ಗಟ್ಯಾಗಿ ಕಣ್ಣುಮುಚ್ಚಿ ನಿದ್ದಿ ಮಾಡಬೇಕೆಂದುಕೊಂಡ ಗಿರಿಜಾರಿಗೆ, “ಅವ್ವಕ್ಕಾ… ಹೊತ್ತು ಭಾಳ ಆಗೈತಿ… ಮಲಕೋಬಾರದೇನ ಕೂಸೇ…” ಅಂತ ಗಂಗವಜ್ಜಿ ಹೇಳಿದಂಗ ಅನ್ನಿಸಿತು.