ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ. ಈ ಕಾರಣದಿಂದ ನನ್ನ ಓದಿನ ಆಸಕ್ತಿ ಕುಂಠಿತವಾಗುತ್ತಾ ಹೋಯ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

ಹೈಸ್ಕೂಲ್ ಶಿಕ್ಷಕರಾಗಿರುವ ನನ್ನ ಸ್ನೇಹಿತರೊಬ್ಬರು ಅಲ್ಲಿ ಶುರುವಾಗುವ ಮಕ್ಕಳ ಪ್ರೇಮ ಪ್ರಸಂಗಗಳ ಬಗ್ಗೆ ಹೇಳ್ತಾ ಇರ್ತಾರೆ. ಮಕ್ಕಳನ್ನು ಕುರಿತು ‘ಓದೋಕೆ ಅಂತಾ ಶಾಲೆಗೆ ಕಳಿಸಿದ್ರೆ, ಲವ್ವು ಗಿವ್ವು ಅಂತಾ ಲೈಫನ್ನು ಹಾಳು ಮಾಡಿಕೊಳ್ತಾರೆ. ಈ ರೀತೀನ ಸರ್ ಮಾಡೋದು?’ ಅಂತಾ ಬಯ್ತಾ ಇರ್ತಾರೆ. ಆಫ್ ಕೋರ್ಸ್, ಅವರು ಬಯ್ಯೋದ್ರಲ್ಲಿ ಅರ್ಥ ಇದೆ. ಲೈಫಲ್ಲಿ ಸೆಟ್ಲೇ ಆಗಿರೋಲ್ಲ. ಜೀವನ ಅಂದ್ರೆ ಏನು ಅಂತಾನೇ ಗೊತ್ತಿರೊಲ್ಲ… ಇಂಥವ್ರು ಈ ರೀತಿ ಮಾಡಿದ್ರೆ ಸಿಟ್ಟು ಬರಬೇಕಾದ್ದೆ. ‘ಹುಚ್ಚು ಖೋಡಿ ಮನಸ್ಸು, ಅದು ಹದಿನಾರರ ವಯಸು’ ಎನ್ನುವಂತೆ ಇದು ಅವರ ತಪ್ಪಲ್ಲ. ಅವರ ವಯಸ್ಸಿನ ತಪ್ಪು ಅಂತಾ ಆ ಸ್ನೇಹಿತನಿಗೂ ಗೊತ್ತು. ಸರಿಯಾಗಿ ಮಾರ್ಗದರ್ಶನ ಮಾಡಿದರೆ ಅವರನ್ನು ಸರಿದಾರಿಗೆ ತರಬಹುದು. ತಮಾಷೆ ಏನಪ್ಪಾ ಅಂದ್ರೆ ಈ ರೀತಿ ಮಕ್ಕಳನ್ನು ಬಯ್ಯೋ ಆ ನನ್ನ ಗೆಳೆಯ ಅವನೂ ಸಹ ಆ ವಯಸ್ಸಿನಲ್ಲಿ ಇದೇ ರೀತಿ ಮಾಡಿದ್ದ!!!

ಆಗ ಹೈಸ್ಕೂಲಿನಲ್ಲಿ ಓದುವಾಗ ನನ್ನ ಕೆಲ ಗೆಳೆಯರು ತಾವು ಇಷ್ಟಪಡುವ ಹುಡುಗಿಯರ ಹೆಸರಿನ ಮೊದಲ ಇಂಗ್ಲೀಷ್ ಅಕ್ಷರ ಹಾಗೂ ತಮ್ಮ ಹೆಸರಿನ ಮೊದಲಕ್ಷರ ಸೇರಿಸಿ ನೋಟ್ ಬುಕ್ಕಿನ ಮೇಲೆ ಬರೆದುಕೊಳ್ಳೋದು ಅಥವಾ ಲವ್ ಸಿಂಬಲ್ ಹಾಕಿ ಶಾಲಾ ಗೋಡೆಯ ಮೇಲೆ ಮಾವಿನ ಕಾಯ ಹೀಚಿನ ವಾಟೆಯಲ್ಲಿ ಬರೆಯುತ್ತಿದ್ದರು. ಬಹುತೇಕರು ಡೆಸ್ಕಿನ ಮೇಲೆ ಬರೆಯೋದು ಅಥವಾ ಬಸ್ಸಿನ ಸೀಟಿನ ಮೇಲೆ ಬರಿಯೋದನ್ನು ಮಾಡ್ತಾರೆ. ನನ್ನ ಜೊತೆಯಲ್ಲಿ ಹಾಸ್ಟೆಲ್ಲಿನಲ್ಲಿ ನನ್ನ ಪಕ್ಕದಲ್ಲೇ ಇದ್ದ ಶಂಕರ್ ಮಾತ್ರ ಯಾವಾಗ್ಲೂ ನಮ್ಮ ಕ್ಲಾಸ್ ಮೇಟ್ ಹುಡುಗಿಯ ನೆನಪಿನಲ್ಲಿಯೇ ಕಾಲ ಕಳೀತಿದ್ದ. ಹೀಗೆ ಮಾಡ್ತಾ ಮಾಡ್ತಾ 9 ನೇ ಕ್ಲಾಸಲ್ಲೇ ಫೇಲ್ ಆಗಿ ಶಾಲೆ ಬಿಟ್ಟು ಹೋಗಿದ್ದ. ಈ ಸಮಯದಲ್ಲಿ ನಾವು ವಾರ್ಡನ್ ಗಮನಕ್ಕೆ ತಂದಿದ್ದರೆ ಅವನನ್ನು ಸರಿದಾರಿಗೆ ತರಬಹುದಿತ್ತೇನೋ? ಆದರೆ ವಾರ್ಡನ್ ಹತ್ತಿರ ಹೇಳಿದರೆ ಚಾಡಿ ಹೇಳ್ದಂತೆ ಆಗುತ್ತೋ? ಎಲ್ಲಿ ಅವನಿಗೆ ಹೊಡೆತ ಕೊಡುತ್ತಾರೋ? ಎಂದುಕೊಂಡು ಸುಮ್ಮನಾಗಿದ್ದನ್ನು ಈಗ ನೆನಪಿಸಿಕೊಂಡರೆ ನಾನು ಹೇಳಿದ್ದರೆ ಚೆಂದವಿತ್ತೇನೋ ಅಂತಾ ಅನಿಸುತ್ತೆ.

ಈ ವಯಸ್ಸಿನಲ್ಲಿ ಮಕ್ಕಳಿಗೆ ಈ ಭಾವನೆ ಬರೋದಿಕ್ಕೆ ಕ್ರಶ್ ಅನ್ತಾರೆ. ‘ವಯಸ್ಸಿಗೆ ಬಂದಾಗ ಕತ್ತೆಯೂ ಸಹ ಸುಂದರವಾಗಿ ಕಾಣುತ್ತೆ’ ಅಂತಾರಲ್ಲಾ ಹಾಗೆ!! ಈ ವಯಸ್ಸಲ್ಲಿ ಮಕ್ಕಳಿಗೆ ವಿರುದ್ಧ ಲಿಂಗಿಗಳ ಕಡೆ ಆಕರ್ಷಣೆಯಾಗೋದು ಸಹಜ. ಆದರೂ ಸೂಕ್ತ ರೀತಿಯ ಸಲಹೆ ಸೂಚನೆ ನೀಡಿ ಅವರನ್ನು ಸರಿ ದಾರಿಗೆ ತರಬಹುದು. ‘ಖಾಲಿ ಮನಸ್ಸು ದೆವ್ವಗಳ ಕಾರ್ಯಾಗಾರ’ ಎಂಬಂತೆ ಮಕ್ಕಳು ಬ್ಯೂಸಿಯಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಸ್ನೇಹಿತರಂತೆ ಕಂಡು ಅವರ ಭಾವನೆಗಳಿಗೆ ಸ್ಪಂದಿಸಿ, ಅವರನ್ನು ಪ್ರೀತಿಸಿದರೆ ಹಾಗೂ ಅವರಿಗೆ ಸಮಯ ಕೊಟ್ಟರೆ ಮಕ್ಕಳು ಪ್ರೀತಿಯನ್ನು ಹುಡುಕಿಕೊಂಡು ಬೇರೆಯವರ ಬಳಿ ಹೋಗುವುದು ತಪ್ಪುತ್ತದೆ. ನನಗೂ ಸಹ ಈ ಭಾವನೆಗಳು ಬರುತ್ತಿದ್ದವಾದರೂ ಮನೆಯ ಕಂಡೀಷನ್ ನೆನಪು ಬಂದು ಓದಿನತ್ತ ಮನಸ್ಸನ್ನು ಹೊರಳಿಸುತ್ತಿದ್ದೆ.

ನಮ್ಮ ಕ್ಲಾಸಲ್ಲಿ ನಮ್ಮ ಇಂಗ್ಲೀಷ್ ಮೇಷ್ಟ್ರು ಆಗಿದ್ದ ಕೆಆರ್ ಎಸ್ ಆಗಾಗ್ಗೆ ಕ್ಲಾಸಿನಲ್ಲಿ ಹಾಡನ್ನು ಹೇಳಿಸುತ್ತಿದ್ದರು. ಅದರಲ್ಲೂ ನರಸಿಂಹ ಹೇಳುತ್ತಿದ್ದ ‘ಹರಿ ಭಜನೆ ಮಾಡೋ ನಿರಂತರ….. “ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು….’ ಎಂಬ ಹಾಡುಗಳನ್ನು ಕೇಳಿ ಕೇಳಿ ನಮಗೆ ಕಂಠಪಾಠವಾಗಿ ಹೋಗಿದ್ದವು. ನರಸಿಂಹ ನಮ್ಮದೇ ಶಾಲೆಯ ಕ್ಲರ್ಕ್‌ರವರ ಮಗ. ಅವನು ನನ್ನ ಪಕ್ಕ ಕೂರುತ್ತಿದ್ದ. ನೋಡೋಕೆ ಸಣ್ಣ ಹುಡುಗನಂಗೆ ಇದ್ದ. ಆದರೆ ಅವನು ಮಾಡುತ್ತಿದ್ದ ತರಲೆ ಮಾತ್ರ ನಮಗೆ ಮಾತ್ರ ಗೊತ್ತಾಗ್ತಿತ್ತು. ನಾವು ಎದ್ದಾಗ ನಮ್ಮ ಯೂನಿಫಾರಂ ಚಡ್ಡಿಯನ್ನು ಮೆಲ್ಲಗೆ ಮೇಲೆತ್ತುವ ತರಲೆ ಮಾಡುತ್ತಿದ್ದ, ಓದಲು ಕುಳಿತರೆ ಹುಳದ ರೀತಿ ಕಿವಿ ಹತ್ತಿರಕ್ಕೆ ಬಂದು ‘ಗುಂಯ್’ ಗುಟ್ಟುವ ಶಬ್ದ ಮಾಡುತ್ತಿದ್ದ. ಬೇರೆ ಹುಡುಗರ ಮಿಮಿಕ್ರಿ ಮಾಡುವುದು, ಆ ಊರಲ್ಲಿದ್ದ ಡಾಕ್ಟರ್ ಅವರ ಮಿಮಿಕ್ರಿ ಮಾಡುವುದು.. ಹೀಗೆಲ್ಲ ಏನೇನೋ ಮಾಡುತ್ತಿದ್ದ. ರಂಗನಾಥನಿಗೆ ಕಾಮಿಡಿ ಮಾಡುತ್ತಾ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದ್ದ. ಈಗ ಇದೇ ನರಸಿಂಹ ಬೆಂಗಳೂರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ.

ನನ್ನ ಪಕ್ಕ ಸಂದೇಶ(ಹೆಸರು ಬೇರೆ ಇದೆ) ಕೂರುತ್ತಾ ಇದ್ದ. ಅವನು ಬಾಯಲ್ಲಿ ಬೆಲ್ಲದಚ್ಚನ್ನು ಇಟ್ಟುಕೊಂಡು ಕೂರುತ್ತಿದ್ದ. ದಪ್ಪನೆಯ ಕನ್ನಡಕ ಹಾಕುತ್ತಿದ್ದ ಇವನು ಕಣ್ಮುಚ್ಚಿಕೊಂಡು ನಿದ್ರಿಸಿದರೂ ಯಾರಿಗೂ ತಿಳಿಯುತ್ತಿರಲಿಲ್ಲ. ಪಾಠವನ್ನು ಕೇಳುತ್ತಲೇ ಇರಲಿಲ್ಲ. ಇವನ ನೋಟ್ಸ್ ನೋಡಿದರೆ ತುಂಬಾ ಕಚಡಾ ಥರ ಇರುತ್ತಿತ್ತು. ಇವನು 10 ನೇತರಗತಿಯಲ್ಲಿ ತೆಗೆದ ಅಂಕಗಳನ್ನು ನೋಡಿದರೆ ಇವನು ಯಾಕಾದ್ರೂ ಓದುತ್ತಿದ್ದಾನೆ ಎಂದು ಅನಿಸುತ್ತಿತ್ತು. ಆದರೆ ಇಂದು ಇದೇ ವ್ಯಕ್ತಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ!! ಇದೇ ರೀತಿ ಇನ್ನೂ ಅನೇಕರು ಆಗ ಕಮ್ಮಿ ಅಂಕ ಪಡೆಯುತ್ತಿದ್ದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೇ ರೀತಿ ನಮ್ಮ ಶಾಲೆಯಲ್ಲಿ ‘ಕನ್ನಡ ಪಂಡಿತ’ ಎಂದು ಹೆಸರಾಗಿದ್ದ ಇಂದ್ರಜಿತ್ ಎಂಬ ನನ್ನ ಸ್ನೇಹಿತನಿದ್ದ. ಇವನು ಮೊದಲ ವರ್ಷ ತನ್ನೂರಿನಿಂದ ಶಾಲೆಗೆ ಬರುತ್ತಿದ್ದ. ಆದರೆ ಬಹುಷಃ 9 ನೇತರಗತಿಗೆ ಹಾಸ್ಟೆಲ್‌ಗೆ ಸೇರಿದ ಅನಿಸುತ್ತೆ. ಕನ್ನಡ ಮೇಷ್ಟ್ರ ಹತ್ತಿರ ಭಾಷೆಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದ. ಕನ್ನಡದಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದ ಎಂಬ ಕಾರಣಕ್ಕೆ ಇರಬೇಕು ಇವನಿಗೆ ಪಂಡಿತ ಎಂಬ ಹೆಸರು ಸೂಕ್ತವಾಗಿತ್ತು. ಇವನು ಸಾಮಾನ್ಯವಾಗಿ ಓದುತ್ತಿದ್ದ. ಹಾಸ್ಟೆಲ್ಲಿನಲ್ಲಿ ಊಟ ಬಡಿಸೋಕೆ ಹೋಗುತ್ತಿದ್ದ. ಇದೇ ವ್ಯಕ್ತಿ ಇಂದು ಶೇರ್ ಮಾರ್ಕೆಟ್ಟಿನ ಬಗ್ಗೆ ಇಂಗ್ಲೀಷಿನಲ್ಲಿ ಮೂರ್ನಾಲ್ಕು ಪುಸ್ತಕಗಳನ್ನು ಬರೆದಿದ್ದಾನೆ! ಯಶಸ್ವೀ ಇಂಟ್ರಾಡೇ ಟ್ರೇಡರ್ ಆಗಿದ್ದಾನೆ. ಆದ್ದರಿಂದ ನಾವು ಯಾವತ್ತೂ ಮಕ್ಕಳನ್ನು ಮೊದಲೇ ಇವರು ಹೀಗೇ ಎಂದು ಜಡ್ಜ್ ಮಾಡಬಾರದು. ಮುಂದೆ ಅವರು ಬದಲಾಗಬಹುದು. ನಾವು ಅವಕಾಶಗಳನ್ನು ಒದಗಿಸಬೇಕಷ್ಟೇ.

ನನ್ನ ಡೆಸ್ಕಿನ ಮುಂದೆ ವೆಂಕಟೇಶ ಎಂಬುವವನು ಕೂರುತ್ತಿದ್ದ. ಇವನು ಹೊಳಲ್ಕೆರೆಯಿಂದ ಬರುತ್ತಿದ್ದ. ಮಿತ ಭಾಷಿ. ಆದರೆ ಇವನದೊಂದು ವಿಶೇಷ ಏನಪ್ಪಾ ಅಂದ್ರೆ ಇವನಿಗೆ ಯಾರಾದ್ರೂ ಒಂದು ಹೊಡೆತ ಹೊಡೆದರೆ ಇವನು ಆ ಹೊಡೆತಕ್ಕೊಂದು ಹೊಡೆತ ಕೊಟ್ಟು, ಹೊಡೆದವನಿಗೆ ವಾಪಸ್ಸು ಹೊಡೆಯೋತನಕ ಮನೆಗೆ ಹೋಗ್ತಾ ಇರಲಿಲ್ಲ. ಮೊದಲೇ ಬಸ್ಸಿನಲ್ಲಿ ಓಡಾಡುತ್ತಿದ್ದವ. ಬಸ್ಸನ್ನು ಮಿಸ್ ಮಾಡಿಕೊಂಡರೂ ಇವನು ಮಾತ್ರ ಹೊಡೆತ ಕೊಟ್ಟೇ ಹೋಗುತ್ತಿದ್ದ. ಶಾಲೆಗೆ ಬೆಲ್ ಹೊಡೆದಾಗ ನಾನು ಇವನಿಗೆ ಸುಖಾಸುಮ್ಮನೆ ಹೊಡೆದು ಜೋರಾಗಿ ಹೋಗುತ್ತಿದ್ದೆ. ಇವನು ನನ್ನನ್ನು ಅಷ್ಟೇ ವೇಗವಾಗಿ ಬೆನ್ನತ್ತಿ ಹೊಡೆದು ಬರುತ್ತಿದ್ದ. ಎಷ್ಟೋ ಬಾರಿ ಇವನಿಗೆ ಸಿಗದೇ ಎಲ್ಲೆಲ್ಲೋ ಓಡಿದಾಗ ಇವನೂ ಸಹ ಹಾಗೇ ಹೋದ ಜಾಯಮಾನದವನಲ್ಲ. ಅಪ್ಪಿತಪ್ಪಿ ಮಿಸ್ಸಾಗಿ ಸಿಗದೇ ಹೋದಾಗ ಮಾರನೇ ದಿನವಾದರೂ ನೆನಪಿಸಿಕೊಂಡು ಹೊಡೆಯುತ್ತಿದ್ದ. ಇವನೇ 10 ನೇತರಗತಿಯಲ್ಲಿ ಶಾಲೆಗೆ ಟಾಪರ್ ಆದ.

ನಾನು ಎನ್.ಸಿ.ಸಿ. ಗೆ 9 ನೇ ತರಗತಿಯಲ್ಲಿ ಸೇರಿದ್ದಕ್ಕೆ 10 ನೇತರಗತಿಗೆ ಎನ್.ಸಿ.ಸಿ ಯ ಎರಡನೇ ವರ್ಷಕ್ಕೆ ಬಂದೆ. ಎಸ್ಸೆಸ್ಸೆಲ್ಸಿ ಅಂತಾ ಬಹುತೇಕರು ಎಸ್ಸೆಸ್ಸೆಲ್ಸಿಗೆ ‘ಎನ್ ಸಿ ಸಿ’ ಸೇರೋದನ್ನು ಇಷ್ಟಪಡುತ್ತಿರಲಿಲ್ಲ. ನಾನು ಎರಡನೇ ವರ್ಷ ಮುಗಿಸೋಣ ಎಂದು ಎನ್ ಸಿ ಸಿ ಬಿಡಲಿಲ್ಲ. ಈ ವರ್ಷ ನಮಗೆ ಕ್ಯಾಂಪ್ ಕಳಿಸ್ತಾ ಇದ್ರು. ನನಗೂ ಅದೇ ರೀತಿ ಸಿ.ಎ.ಟಿ.ಸಿ ಕ್ಯಾಂಪ್ ಎಂದು ಕೊಂಡಜ್ಜಿಗೆ ಕಳಿಸಿದ್ರು. ಈ ಊರು ದಾವಣಗೆರೆಯ ಬಳಿ ಇತ್ತು. ಇಲ್ಲೊಂದು ಗುಡ್ಡವಿತ್ತು. ಇದು ಕೊರಕಲು ಕೆಂಪು ಮಣ್ಣಿನಿಂದ ತುಂಬಿತ್ತು. ವಿಶಾಲವಾದ ಜಾಗವಾದ್ದರಿಂದ ಇಲ್ಲೇ ನಾವು ಇರಬೇಕಾಗಿತ್ತು. ನಮಗೆ ಹತ್ತು ಜನರಿಗೊಂದರಂತೆ ಟೆಂಟ್ ಕೊಟ್ಟಿದ್ದರು. ಇದರಲ್ಲೇ ನಾವು ವಾಸ ಮಾಡಬೇಕಾಗಿತ್ತು. ಚೇಳುಗಳಿದ್ದ ಕಾರಣಕ್ಕೆ ನಾವು ಶೂಗಳನ್ನು ಬಿಚ್ಚುವಂತೆ ಇರಲಿಲ್ಲ. ಕಡೇ ಪಕ್ಷ ಸಾಕ್ಸ್‌ಗಳನ್ನಾದರೂ ಹಾಕಿಕೊಂಡು ಇರಬೇಕಾಗಿತ್ತು. ಬೆಳಗ್ಗೆ 5 ಘಂಟೆಗೆ ನಮ್ಮ ದಿನಚರಿ ಆರಂಭವಾಗುತ್ತಿತ್ತು. ಅಷ್ಟೊತ್ತಿಗೆ ಒಂದು ಬಕೇಟ್ಟಿನಲ್ಲಿ ಟೀ ಬರುತ್ತಿತ್ತು. ಹಾಸ್ಟೆಲ್ಲಿನಲ್ಲಿ ನಮಗೆ ಟೀ ಸೌಲಭ್ಯವಿಲ್ಲದ ಕಾರಣಕ್ಕೋ ಏನೋ ನಾವು ಟೀಯನ್ನು ತುಸು ಜಾಸ್ತಿಯೇ ಕುಡಿಯುತ್ತಿದ್ದೆವು. ಆನಂತರ ನಮ್ಮನ್ನು ಮಾರ್ಚ್ ಫಾಸ್ಟ್‌ಗೆಂದು ಕರೆದುಕೊಂಡು ಹೋಗುತ್ತಿದ್ದರು. 8 ಘಂಟೆಯವರೆಗೂ ಮಾಡಿಸಿ ನಂತರ ಸ್ನಾನಕ್ಕೆ ಬಿಡುತ್ತಿದ್ದರು. ತದನಂತರ ಟಿಫನ್ ವ್ಯವಸ್ಥೆ. ಆಮೇಲೆ ಮಾರ್ಚ್ ಫಾಸ್ಟ್ ತರಬೇತಿ, ರೈಫಲ್ ಟ್ರೈನಿಂಗ್ ಕೊಡುತ್ತ ಇದ್ದರು. ಮಧ್ಯಾಹ್ನದವರೆಗೂ ಬಿಡುವಿಲ್ಲದ ತರಬೇತಿ ಮಧ್ಯಾಹ್ನದ ಊಟ. ಆಮೇಲೆ ಒಂದು ಘಂಟೆ ರೆಸ್ಟ್‌ಗೆ ಅವಕಾಶ ಕೊಡುತ್ತಿದ್ದರು. ಸಂಜೆ ಕಲ್ಚರಲ್ ಪ್ರೋಗ್ರಾಂ ಇರುತ್ತಿತ್ತು. ನಂತರ ರಾತ್ರಿ ಊಟ ಕೊಡುತ್ತಿದ್ದರು. ಆನಂತರ ನಾವು ಮಲಗಬೇಕಾಗಿತ್ತು. ಟೆಂಟಿನೊಳಗೆ ನೆಲದ ಮೇಲೆಯೇ ಚಾಪೆಯನ್ನಾಸಿಕೊಂಡು ಮಲಗುತ್ತಿದ್ದೆವು. ಸುಸ್ತಾಗುತ್ತಿದ್ದ ಕಾರಣ ನಮ್ಮ ನಿದ್ದೆಗೆ ಇದ್ಯಾವುದೂ ಭಂಗ ತರುತ್ತಿರಲಿಲ್ಲ. ಇದೇ ರೀತಿ ಒಂದು ವಾರ ಕಳೆದು ಊರಿಗೆ ವಾಪಸ್ಸಾಗುವಾಗ ಏನೋ ಒಂಥರಾ ಬೇಸರವಾಗ್ತಾ ಇತ್ತು. ಬೇರೆ ಬೇರೆ ಕಡೆಯಿಂದ ಬಂದು ಗೆಳೆಯರಾಗಿದ್ದವರನ್ನು ಬಿಟ್ಟು ಹೋಗೋ ಮನಸ್ಥಿತಿಯ ಜೊತೆಗೆ, ಕೊಡುತ್ತಿದ್ದ ಉತ್ತಮ ತಿಂಡಿ, ಊಟ ಬಿಟ್ಟು ಮತ್ತೆ ಹಾಸ್ಟೆಲ್ಲಿಗೆ ಹೋಗಬೇಕಲ್ಲಪ್ಪ ಎಂಬ ನೋವು ನಮಗೆ ತುಂಬಾ ಬೇಸರ ತರಿಸುತ್ತಿತ್ತು.

ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ. ಈ ಕಾರಣದಿಂದ ನನ್ನ ಓದಿನ ಆಸಕ್ತಿ ಕುಂಠಿತವಾಗುತ್ತಾ ಹೋಯ್ತು. ಇದರ ಜೊತೆಗೆ ಇದೇ ವರ್ಷ ನಮ್ಮ ಸ್ವಾಮೀಜಿಯವರು ಸ್ವರ್ಗಸ್ತರಾದ ಕಾರಣ ನಮಗೆ ಪಾಠಗಳು ಪ್ರತೀ ವರ್ಷದಂತೆ ನಡೆಯಲಿಲ್ಲ. ಶತಕದ ಗಡಿ ದಾಟಿ ‘ಸೇವೆ ಸೇವೆ ಸೇವೆ’ ಎಂದು ತಮ್ಮ ಜೀವನವನ್ನೇ ಸಮಾಜಕ್ಕೆ ಮೀಸಲಾಗಿರಿಸಿ ಬದುಕಿ, ಹಲವರ ಬಾಳು ಬೆಳಗಿದ ಮಹಾನ್ ಚೇತನ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಆರಾಧನೆ ಕಾರ್ಯಕ್ರಮಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದರು. ಅಂದು ಇವರ ಪಾರ್ಥಿವ ಶರೀರ ಬರುವ ದಿನ ನಾನು ಎನ್ ಸಿ ಸಿ ಕ್ಯಾಡೆಟ್ ಆಗಿದ್ದರಿಂದ ನನ್ನನ್ನೂ ಕಾಯಲು ರಸ್ತೆಯಂಚಿನ ಬದಿಯಲ್ಲಿ ಹಾಕಿದ್ದು ಅದನ್ನು ತೀರ ಹತ್ತಿರದಿಂದ ನೋಡಲು ಅದೃಷ್ಟ ನನಗೆ ಸಿಕ್ಕಿತು ಎಂದು ಭಾವಿಸುತ್ತೇನೆ.

“ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದ ಕುಸಿಯೇ ನೆಲವಿಹುದು ಮಂಕುತಿಮ್ಮ||” ಎಂಬ ಡಿವಿಜಿಯವರ ಮಾತಿನಂತೆ ನಾವು ಬಾಳಬೇಕು. ಬಾಳಲ್ಲಿ ನಾವು ಯಾವತ್ತೂ ಇನ್ನೊಬ್ಬರನ್ನು ಲಘುವಾಗಿ ಪರಿಗಣಿಸಬಾರದು. ಅವರಿಂದ ನಮಗೇನು ಎಂಬ ಅಹಂಕಾರವನ್ನು ಪಡುವುದು ಬೇಡ. ಎಲ್ಲರೊಳೊಂದಾಗಿ ಬಾಳಬೇಕು.