ಯಾವುದೇ ಸರಕಾರ ಬರಲಿ ಅಥವಾ ಇರಲಿ, ಕೋವಿಡ್ ಮಾರಿ ಬರಲಿ ಹೋಗಲಿ, ಯುಕ್ರೇನಿನಲ್ಲಿ ಯುದ್ಧವಾಗುತ್ತಿರಲಿ ಬಿಡಲಿ, ದಿನನಿತ್ಯದ ಸಾಮಾನ್ಯಪ್ರಜೆಯ ಪರಿಸ್ಥಿತಿ ಯಥಾಪ್ರಕಾರ ಅಯೋಮಯವಾಗಿದೆ. ಆಸ್ಟ್ರೇಲಿಯವು ಪ್ರಪಂಚದ ಅತ್ಯಂತ ದುಬಾರಿ ದೇಶಗಳಲ್ಲಿ ಒಂದು. ಇಲ್ಲಿನ ದಿನನಿತ್ಯ ಜೀವನದ ಅಂದಾಜು ಖರ್ಚುವೆಚ್ಚವು ಸದಾ ದುಬಾರಿಯಾಗಿಯೇ ಇರುತ್ತದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ವಸತಿ ಸಮಸ್ಯೆ ವಿಪರೀತವಾಗಿದೆ. ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳ ವಸತಿ ವೆಚ್ಚ ಗಗನಕುಸುಮವಾಗಿದೆ. ಸಾಧಾರಣ ಮೂರು ಮಲಗುವ ಕೋಣೆಗಳಿರುವ ಮನೆಗೆ ಒಂದು ಮಿಲಿಯನ್ ಡಾಲರುಗಳಿಗೂ ಹೆಚ್ಚು ಬೆಲೆ.
ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ಅತ್ತ ಕಡೆ ಫ್ರಾನ್ಸ್ ದೇಶದ ದೊಡ್ಡ ಚುನಾವಣೆ ಮುಗಿದು ಮ್ಯಾಕ್ರೋನ್ ಮತ್ತೆ ಆಯ್ಕೆಯಾಗಿ ಬಹುಜನರು ಸಮಾಧಾನದ ಉಸಿರು ಬಿಡುತ್ತಿದ್ದಾರೆ. ಇತ್ತ ಕಡೆ ಆಸ್ಟ್ರೇಲಿಯ ಉದ್ದಗಲಕ್ಕೂ ಮುಂದಿನ ಮೇ ತಿಂಗಳು ನಡೆಯಲಿರುವ ಚುನಾವಣೆಯ ಮಾತು ಹರಡಿದೆ. ಅಥವಾ ಹಾಗೆಂದು ರಾಜಕೀಯ ಪಕ್ಷಗಳ ನಾಯಕತ್ವಗಳು ಅಂದುಕೊಂಡಿರಬಹುದು. ಏಕೆಂದರೆ ಮಾತನಾಡುತ್ತಿರುವುದು ಅವರೆ ತಾನೆ. ಕಳೆದೆರಡು ತಿಂಗಳುಗಳಿಂದ ನಿಧಾನವಾಗಿ ಆಮೆಗತಿಯಲ್ಲಿ ನಡೆದಿದ್ದ ಚುನಾವಣಾ ಪ್ರಚಾರಕ್ಕೆ ಇದ್ದಕ್ಕಿದ್ದಂತೆ ಜ್ವರ ಕಾಣಿಸಿ ಕಾವೇರುತ್ತಿದೆ. ಕಾವೇರುವ ಕ್ಷಣ ಬಂದಾಗ ವಿರೋಧಪಕ್ಷದ ನಾಯಕ ನಿಜವಾದ ಕೋವಿಡ್-೧೯ ಜ್ವರಕ್ಕೆ ತುತ್ತಾಗಿ ಇನ್ನೂ ಮನೆವಾಸದಲ್ಲಿಯೇ ಇದ್ದಾರೆ. ವಾರದ ಹಿಂದೆ ಈ ವಿಷಯ ಬಯಲಾಗಿ ಅವರ ಪಕ್ಷದ ಸದಸ್ಯರು ಮತ್ತು ಬೆಂಬಲಿಗರ ಮುಖಗಳು ಕಳೆಗುಂದಿದ್ದು ಟಿವಿ ಪರದೆಯ ಮೇಲೆ ಸ್ಪಷ್ಟವಾಗಿ ಕಂಡಿದ್ದು. ಅದರ ಜೊತೆ ಕಂಡಿದ್ದು ಸ್ವಲ್ಪ ಹೆಚ್ಚಾಗೇ ಬೀಗುತ್ತಿದ್ದ ಅಧಿಕಾರದಲ್ಲಿರುವ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯ ಮುಖ. ಉಳಿದಂತೆ ಕಳೆದವಾರ ರಸ್ತೆಗಳ ಅಕ್ಕಪಕ್ಕ ವಿವಿಧ ಪಕ್ಷಗಳ ಪ್ರಚಾರ ಬೋರ್ಡುಗಳನ್ನಿಟ್ಟುಕೊಂಡು ಕೂತಿದ್ದ ಪ್ರಚಾರಕರು.
ಹೋದವಾರ ಮೊಟ್ಟಮೊದಲ ಬಾರಿಗೆ ನಮ್ಮ ಬೀದಿಯಲ್ಲಿ ಕೂಡ ಅಧಿಕಾರ ಪಕ್ಷದ ನಾಯಕರುಗಳ ಭಿತ್ತಿಚಿತ್ರವನ್ನು ನೋಡಿದಾಗ ಆಶ್ಚರ್ಯವಾಗಿತ್ತು. ಅರೆರೆ, ಇಷ್ಟು ವರ್ಷ ನೆರೆಹೊರೆಯಲ್ಲಿ ಕಾಣಿಸದೆ ಮುಖಮುಚ್ಚಿ ಮರೆಯಲ್ಲಿದ್ದ ರಾಜಕೀಯ ಪ್ರಜ್ಞೆ ಈ ವರ್ಷ ಕಣ್ಣಿಗೆ ಹೊರಗೆ ಬಂದಿದ್ದೂ ಅಲ್ಲದೆ ಢಾಳಾಗಿ ರಾರಾಜಿಸುತ್ತಿದೆಯಲ್ಲ! ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದ ಮನೆಯವರ ಬಳಿ ಹೋಗಿ ಈ ಬೀದಿಯಲ್ಲಿ ನಡೆಯುವ ರೇಸಿಸಂ ಘಟನೆಗಳನ್ನು ಕುರಿತು ಮಾತನಾಡಲೇ ಎಂದೆನಿಸಿತು. ಸ್ಥಳೀಯ ಎಂಪಿ ಕಚೇರಿಯಲ್ಲಿ ದೂರು ಕೊಟ್ಟರೂ ಅವರು ತಮ್ಮ ತಮ್ಮ ಸ್ಥಾನದ ಪರಿವ್ಯಾಪ್ತಿಯಲ್ಲಿ ಬರುವ ವಿಷಯ ಇದಲ್ಲ, ಎಂದು ಕೈ ತೊಳೆದುಕೊಂಡದ್ದು ನೆನಪಿಗೆ ಬಂದು ಸುಮ್ಮನಾದೆ.
ದೇಶದಲ್ಲಿ ಹೆಸರಿರುವ ನಾಲ್ಕಾರು ರಾಜಕೀಯ ಪಕ್ಷಗಳಲ್ಲಿ ಎರಡು ಪ್ರಬಲವಾಗಿದ್ದು ಅವುಗಳಲ್ಲಿ ಒಂದು ಚುನಾವಣೆಯಲ್ಲಿ ಆರಿಸಿ ಅಧಿಕಾರಕ್ಕೆ ಬಂದರೆ ಇನ್ನೊಂದು ವಿರೋಧಪಕ್ಷದ ಪಟ್ಟ ಹೊರುತ್ತದೆ. ಮೂರನೆಯದು ಸಮಾಜವಾದ, ಸಮಾಜದ ಸುಭದ್ರತೆ, ಪರಿಸರರಕ್ಷಣೆ ಎಂತೆಲ್ಲ ಮಾತನಾಡುವ ಹಲವರಿಗೆ ಮಾತ್ರ ಒಲವಿರುವ ಪಕ್ಷ. ಇದಕ್ಕೆ ಒಂದಷ್ಟು ಶಕ್ತಿಯಿದ್ದರೂ ಸಾಕಷ್ಟು ಚುನಾಯಿತರ ಬಲವಿಲ್ಲ. ಮಿಕ್ಕವು ಪ್ರತಿ ಚುನಾವಣೆಯ ಸಮಯದಲ್ಲಿ ಮಾತ್ರ ಮುಖ ತೋರಿ ನಾವೂ ಇದ್ದೀವಿ ಎನ್ನುವವರು. ಹೀಗಾಗಿ ರಾಜಕೀಯವಾಗಿ ನೋಡಿದರೆ ಈ ದೇಶ ಅಲ್ಲೂ ಸಲ್ಲ ಇಲ್ಲೂ ಸಲ್ಲ ಎಂದುಕೊಂಡೆ ಗಾಡಿ ಚಲಾಯಿಸುತ್ತಿದೆ. ಚುನಾವಣೆಯಲ್ಲಿ ಯಾವುದೇ ಪಕ್ಷವು ಗೆದ್ದು ಬಂದರೂ ಅವು ತಮಗೆ, ತಮ್ಮ ಸರ್ಕಾರಕ್ಕೆ ಬೇಕಿರುವ ಮಾರ್ಗದರ್ಶನಕ್ಕಾಗಿ ದೂರದ ಬ್ರಿಟನ್ ಮತ್ತು ಅಮೆರಿಕ ದೇಶಗಳನ್ನು ಅವಲಂಬಿಸುತ್ತವೆ ಎನ್ನುವುದು ಗೊತ್ತಿರುವ ವಿಷಯವೆ.
ಯಾವುದೇ ಸರಕಾರ ಬರಲಿ ಅಥವಾ ಇರಲಿ, ಕೋವಿಡ್ ಮಾರಿ ಬರಲಿ ಹೋಗಲಿ, ಯುಕ್ರೇನಿನಲ್ಲಿ ಯುದ್ಧವಾಗುತ್ತಿರಲಿ ಬಿಡಲಿ, ದಿನನಿತ್ಯದ ಸಾಮಾನ್ಯಪ್ರಜೆಯ ಪರಿಸ್ಥಿತಿ ಯಥಾಪ್ರಕಾರ ಅಯೋಮಯವಾಗಿದೆ. ಆಸ್ಟ್ರೇಲಿಯವು ಪ್ರಪಂಚದ ಅತ್ಯಂತ ದುಬಾರಿ ದೇಶಗಳಲ್ಲಿ ಒಂದು. ಇಲ್ಲಿನ ದಿನನಿತ್ಯ ಜೀವನದ ಅಂದಾಜು ಖರ್ಚುವೆಚ್ಚವು ಸದಾ ದುಬಾರಿಯಾಗಿಯೇ ಇರುತ್ತದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ವಸತಿ ಸಮಸ್ಯೆ ವಿಪರೀತವಾಗಿದೆ. ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳ ವಸತಿ ವೆಚ್ಚ (ಬಾಡಿಗೆ ಮತ್ತು ಮನೆಸಾಲ ಮತ್ತು ಅಡಮಾನ ಇತ್ಯಾದಿ) ಗಗನಕುಸುಮವಾಗಿದೆ. ಸಾಧಾರಣ ಮೂರು ಮಲಗುವ ಕೋಣೆಗಳಿರುವ ಮನೆಗೆ ಒಂದು ಮಿಲಿಯನ್ ಡಾಲರುಗಳಿಗೂ ಹೆಚ್ಚು ಬೆಲೆ. ಕಳೆದೆರಡು ವರ್ಷಗಳಿಂದ, ಕೋವಿಡ್-೧೯ ಬಂದಾಗಲಿಂದ ನಮ್ಮ ಬ್ರಿಸ್ಬೇನ್ ನಗರವೂ ಏನು ಹಿಂದೆ ಬಿದ್ದಿಲ್ಲ. ದೂರದ ಮೆಲ್ಬೋರ್ನ್ ಕಡೆಯಿಂದ ಹಣವಿರುವ ಮಂದಿ ಬಂದು ಉಷ್ಣಹವೆಯಿರುವ ರಾಣಿರಾಜ್ಯದಲ್ಲಿ ಆಸ್ತಿ ಮಾಡುತ್ತಾರೆ, ಇದರಿಂದ ವಸತಿಗಳ ಬೆಲೆ ಅನವಶ್ಯಕವಾಗಿ ಏರುತ್ತದೆ ಎನ್ನುವ ಆರೋಪ ಸದಾ ಇದ್ದೇ ಇದೆ. ಎರಡು ವರ್ಷಗಳಿಂದ ಬ್ರಿಸ್ಬೇನ್ ನಗರ ದಲ್ಲಿ ಕೂಡ ಮೂರು ಕೊಠಡಿ ಮನೆ ಕೈಗೆಟುಕುತ್ತಿಲ್ಲ. ಕಾರಣ ಉದ್ಯೋಗಗಳು ಮತ್ತು ವೇತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ಹಳೆಯ ವೇತನಶ್ರೇಣಿಗೆ ಜೋತುಬಿದ್ದ ಉದ್ಯೋಗಿಗಳಿಗೆ ಹೊಸ ಮುಖಬೆಲೆ ಏರಿಸಿಕೊಂಡು ಆಕಾಶದಲ್ಲಿ ಹಾರಾಡುತ್ತಿರುವ ಮನೆಗಳನ್ನು ಕೈಗೆಟಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬೇರೆ ದಿನನಿತ್ಯದ ಖರ್ಚುಗಳನ್ನು ಗಮನಿಸಿದರೆ ಚಿಂತೆಯಾಗಿ ಹಣೆಮೇಲೆ ಗೆರೆಗಳು ಮೂಡುವುದು ಸಹಜವೇ. ಶಿಶುಪಾಲನಾ ಕೇಂದ್ರದಲ್ಲಿ ಒಂದು ಮಗುವಿಗೆ ಒಂದು ದಿನಕ್ಕೆ ಸುಮಾರು ಒಂದು ನೂರು ಡಾಲರು ಫೀಸ್. ಕಡಿಮೆ ವೇತನ ವರ್ಗಕ್ಕೆ ಸೇರಿದ್ದರೆ ಕುಟುಂಬದ ಆದಾಯವನ್ನು ಆಧರಿಸಿ ಸರಕಾರದ ವತಿಯಿಂದ ಅಲ್ಪಸ್ವಲ್ಪ ಸಬ್ಸಿಡಿ ಸಿಗುತ್ತದೆ. ಈ ಪಾಟಿ ಫೀಸ್ ಕೊಡಲಾರದೆ ಅನೇಕ ಅಮ್ಮಂದಿರು ವಾರಕ್ಕೆ ಎರಡು ಅಥವಾ ಮೂರು ದಿನಗಳು ಕೆಲಸಕ್ಕೆ ಹೋಗುತ್ತಾರೆ. ಮಕ್ಕಳನ್ನು ಪಡೆಯುವುದು, ಪಾಲಿಸುವುದು ಬಲು ದುಬಾರಿ ಎನ್ನುವುದು ಸರ್ವವಿದಿತ.
ಈಗಂತೂ ಪೆಟ್ರೋಲ್ ಬೆಲೆ ವಿಪರೀತವಾಗಿ, ಸಾಮಾನ್ಯ ಜನರು ಗೋಳಿಟ್ಟು ಸರಕಾರವು ಕೆಲವಾರಗಳ ಮಟ್ಟಿಗೆ ಇಂಧನ ತೆರಿಗೆಯನ್ನು ಸ್ವಲ್ಪ ಕಡಿಮೆ ಮಾಡಿತು. ದಿನನಿತ್ಯ ಶಾಲೆ, ಕೆಲಸ ಎಂಬಂತೆ ಓಡಾಡುವ ಜನರಿಗೆ ಈ ಕೆಲ ವಾರಗಳ ತೆರಿಗೆ ಸಡಿಲತೆ ಸಹಾಯವಾದರೂ ಅದು ಕೊನೆಯಾದಾಗ ಪುನಃ ಅದೇ ಗೋಳು. ಅತ್ತಕಡೆ ನೋಡಿದರೆ ಸಾರ್ವಜನಿಕ ಸಾರಿಗೆ ಎಂದಿಗೂ ದುಬಾರಿಯೆ.
ನಿತ್ಯಜೀವನದ ಈ ಪಾಟಿ ಖರ್ಚುವೆಚ್ಚಗಳನ್ನು ಭರಿಸಲು ಹೆಣಗಾಡುತ್ತಿರುವ ಶ್ರೀಸಾಮಾನ್ಯರು ಚುನಾವಣೆಯ ಕಣದಲ್ಲಿರುವ ಧುರೀಣರಿಗೆ, ಮೊದಲು ‘ಕಾಸ್ಟ್ ಆಫ್ ಲಿವಿಂಗ್’ ಇಳಿಸಿ ಆಮೇಲೆ ವೋಟ್ ಮಾಡಲು ಹೇಳಿʼ, ಎಂದು ಹೇಳುತ್ತಿದ್ದಾರೆ. ಯಾವ ಪಕ್ಷ ಗೆದ್ದರೂ ಇದ್ದದ್ದೇ ಈ ಪರಿಸ್ಥಿತಿ ಎನ್ನುವ ಸತ್ಯದಲ್ಲೇ ದಿನಗಳು ಕಳೆದುಹೋಗುತ್ತಿವೆ. ಅದರಲ್ಲಿಯೇ ನಾವು, ನಮ್ಮ ಬದುಕು, ನಮ್ಮ ಕನಸುಗಳು, ಯೋಜನೆಗಳು ಎಲ್ಲವೂ ಸಿಕ್ಕಿಕೊಂಡು ಗಿರಕಿ ಹೊಡೆಯುತ್ತಿವೆ. ದೇಶವನ್ನು ಸದಾ ಕಾಡುವ ಯುವಜನತೆಯಲ್ಲಿ ಅಧಿಕವಾಗಿರುವ ಆತ್ಮಹತ್ಯೆ ಸಮಸ್ಯೆ, ವಸತಿಹೀನರ ಸಮಸ್ಯೆ, ಮಾನಸಿಕ ಆರೋಗ್ಯಕ್ಕೆ ಮತ್ತು ಸುಧಾರಣೆಗೆ ಇಂಬು ಕೊಡುವ ಕಾರ್ಯಕ್ರಮಗಳ ಕೊರತೆ, ವೃದ್ಧರಿಗೆ ಅವಶ್ಯವಿರುವ ಸೇವೆಗಳಿಗೆ ಹಣಹೂಡಿಕೆ, ಪರಿಸರರಕ್ಷಣೆಗೆ ಹಣಹೂಡಿಕೆ, ಇನ್ನೂ ಏನೆಲ್ಲಾ ಸಮಸ್ಯೆಗಳಿಗೆ, ವಿಷಯಗಳಿಗೆ ಗಮನ ಕೊಡಬೇಕಿದೆ. ಅವುಗಳ ಬಗ್ಗೆ ಹೆಚ್ಚಿನ ಮಾತು, ತೊಡಗುವಿಕೆ ಮತ್ತು ಶ್ರದ್ಧೆ ಎದ್ದು ಕಾಣಬೇಕಿದೆ. ಅದಾಗಲೇ ಈ ಚುನಾವಣೆಯಲ್ಲ, ಇನ್ನು ನಾಲ್ಕು ವರ್ಷಗಳಲ್ಲಿ ಬರುವ ಮತ್ತೊಂದು ಚುನಾವಣೆಗೆ ಆಗಲೇ ಜನ ಕಾಯುತ್ತಿದ್ದಾರೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಬ್ರಿಟನ್ನಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ