”ನಾನಂತೂ ಇಲ್ಲಿಗೆ ಬಂದ ಪ್ರಾರಂಭದಲ್ಲಿ ಸಿಕ್ಕ ಒಂದು ಅವಕಾಶವನ್ನೂ ಬಿಡದೆ ಸೇತುವೆಗಳನ್ನು ತೆರೆದು ಮುಚ್ಚುವ ಕಾರ್ಯಾಚರಣೆಯನ್ನು ತಲ್ಲೀನಳಾಗಿ ನೋಡುತ್ತಿದ್ದೆ, ಫೋಟೋ ತೆಗೆಯುತ್ತಿದ್ದೆ, ವಿಡಿಯೋ ಮಾಡುತ್ತಿದ್ದೆ. ಆದರೆ ಕೆಲ ತಿಂಗಳುಗಳ ನಂತರ ಅದು ದಿನನಿತ್ಯದ ಚಟುವಟಿಕೆ ಎಂದೆನಿಸಿ ವಿಶೇಷವಾಗಿ ಕಾಣಿಸುವುದು ನಿಂತುಹೋಯಿತು. ಈಗ ಅಂತಹ ಸಂದರ್ಭಗಳಲ್ಲಿ ಸೇತುವೆಯ ಕಡೆಗೂ ಕೂಡ ನೋಡದೆ ಆ ಕಡೆ, ಈ ಕಡೆ ನೋಡುವುದು, ಫೋನ್ ನೋಡುವುದು ಇನ್ನೂ ಏನೇನೋ ಮಾಡುತ್ತೇನೆ”
ಸೀಮಾ ಎಸ್ ಹೆಗಡೆ ಬರೆಯುವ ಆ್ಯಮ್ಸ್ಟರ್ ಡ್ಯಾಮ್ ಪತ್ರ.
ನೆದರ್ ಲ್ಯಾಂಡ್ಸ್ ಕಡಲ ಕೆಳಗಿರುವ ದೇಶ, ಕಾಲುವೆಗಳ ದೇಶ ಎಂದೇ ಪ್ರಸಿದ್ಧ. ಅದರ ಹಲವಾರು ನಗರಗಳಲ್ಲೊಂದಾದ ಆ್ಯಮ್ಸ್ಟರ್ ಡ್ಯಾಮ್ ಜಗತ್ಪ್ರಸಿದ್ಧ ಸುಂದರ ನಗರ. ನೀರಿನೊಂದಿಗೆ ಸೆಣೆಸಿ ದೇಶವನ್ನು ಕಟ್ಟಿ, ಸಹಸ್ರ ಸಂಖ್ಯೆಯಲ್ಲಿ ಸುಂದರ ಕಾಲುವೆಗಳನ್ನು ನಿರ್ಮಿಸಿಕೊಂಡಿರುವ ಡಚ್ಚರ ಬಗ್ಗೆ ಕೆಲದಿನಗಳ ಹಿಂದೆ ಬರೆದಿದ್ದೆ. ಆದರೆ ಆ ಕಾಲುವೆಗಳ ಬಗ್ಗೆ ಬರೆದು ಅವುಗಳಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಅಸಂಖ್ಯಾತ ಸೇತುವೆಗಳ ಬಗ್ಗೆ ಬರೆಯದಿರಲಾದೀತೇ? ಹಾಗೆ ಮಾಡಿದಲ್ಲಿ ಲೇಖನ ಅಪೂರ್ಣವೆನಿಸೀತು.
ಆ್ಯಮ್ಸ್ಟರ್ ಡ್ಯಾಮ್ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಸೇತುವೆಗಳನ್ನು ಹೊಂದಿದ ನಗರ, ಸುಮಾರು 2,000 ಸೇತುವೆಗಳಿವೆ. ಆಶ್ಚರ್ಯವಾಗುತ್ತಿದೆಯಾ? ಮುಂದೆ ಕೇಳಿ- ಈ ನಗರದ ಮಧ್ಯಭಾಗದಲ್ಲಿಯೇ (city centre) ಸುಮಾರು 500 ಸೇತುವೆಗಳಿವೆ! ಇಟಲಿಯ ವೆನಿಸ್ ನಗರವನ್ನು ಕಾಲುವೆಗಳ ನಗರ, ಸೇತುವೆಗಳ ನಗರ ಎಂದು ಕರೆಯುವುದು ವಾಡಿಕೆ. ಆಶ್ಚರ್ಯವೆಂದರೆ ವೆನಿಸ್ ನಗರದಲ್ಲಿರುವುದು 409 ಸೇತುವೆಗಳು ಮಾತ್ರ! ಆ್ಯಮ್ಸ್ಟರ್ ಡ್ಯಾಮ್ ಅನ್ನು ಉತ್ತರದ ವೆನಿಸ್ ಎಂದು ಕರೆಯುತ್ತಾರೆ. ಆ್ಯಮ್ಸ್ಟರ್ ಡ್ಯಾಮ್ ನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಷ್ಟರಲ್ಲಿ ಏನಿಲ್ಲವೆಂದರೂ ಹತ್ತಾರು ಸೇತುವೆಗಳನ್ನು ಗಮನವಿಲ್ಲದೇ ದಾಟಿಬಿಟ್ಟಿರುತ್ತೇವೆ!
ಬರೀ ಆ್ಯಮ್ಸ್ಟರ್ ಡ್ಯಾಮ್ ಮಾತ್ರವಲ್ಲ, ದೇಶದ ಎಲ್ಲಾ ಸಣ್ಣ ಪುಟ್ಟ ಪಟ್ಟಣಗಳಿಂದ ಹಿಡಿದು ದೊಡ್ಡ ನಗರಗಳಲ್ಲೂ ಅಸಂಖ್ಯಾತ ಕಾಲುವೆಗಳಿವೆ. ಎಲ್ಲಾ ಕಡೆ ಕಾಲುವೆಗಳನ್ನು ಸಾರಿಗೆಗಾಗಿ ಉಪಯೋಗಿಸುವುದು ಸಾಮಾನ್ಯ. ಆದರೆ ಆ ಕಾಲುವೆಗಳನ್ನು ದಾಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲೆಂದು ಒಂದೊಂದು ಕಾಲುವೆಗೂ ಅಡ್ಡವಾಗಿ ಹಲವಾರು ಸೇತುವೆಗಳನ್ನು ಮಾಡಲಾಗಿದೆ. ಚಿಕ್ಕ ದೋಣಿಗಳು ಎಲ್ಲಾ ಕಾಲುವೆಗಳಲ್ಲೂ ಸೇತುವೆಯ ಕೆಳಗಡೆ ಸುರಕ್ಷಿತವಾಗಿ ಹಾದು ಹೋಗಬಲ್ಲವು. ಆದರೆ ದೊಡ್ಡ, ಎತ್ತರದ ದೋಣಿಗಳು ಕೆಲವು ಕಾಲುವೆಗಳಲ್ಲಿ ಸೇತುವೆಯ ಕೆಳಭಾಗಕ್ಕೆ ಬಂದಾಗ ಹಾದು ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಸೇತುವೆಗಳನ್ನು ತೆರೆಯುವ ಸೌಲಭ್ಯಗಳನ್ನು ಮಾಡಿದ್ದಾರೆ. ಆ ಸೇತುವೆಗಳು ನಿರ್ದಿಷ್ಟ ಸಮಯದಲ್ಲಿ ತೆರೆಯಲ್ಪಡುತ್ತವೆ. ಆ ಕೆಲಸಕ್ಕೆಂದೇ ನಿಯೋಜಿಸಲ್ಪಟ್ಟ ವ್ಯಕ್ತಿ, ಸಮಯಕ್ಕೆ ಸರಿಯಾಗಿ ಸೇತುವೆಯನ್ನು ತೆರೆದು ದೊಡ್ಡ ದೋಣಿಗಳನ್ನು ಹಾದು ಹೋಗಲು ಬಿಟ್ಟು ಪುನಃ ಸೇತುವೆಯನ್ನು ಮುಚ್ಚುತ್ತಾನೆ. ಆ ಸಮಯದಲ್ಲಿ ಕಾಲುವೆಗಳಲ್ಲಿ ದೋಣಿಗಳ ಸಾಲೇ ನಿಂತಿರುತ್ತದೆ. ಸೇತುವೆಯ ಮೇಲೆ ಸೈಕಲ್ ಗಳು, ಇತರ ವಾಹನಗಳು ಕಾಯುತ್ತಿರುತ್ತವೆ, ನಮ್ಮಲ್ಲಿ ರೈಲ್ವೆ ಕ್ರಾಸಿಂಗ್ ರೀತಿಯಲ್ಲಿ. ದೋಣಿಗಳಲ್ಲಿ ಸದಾ ಓಡಾಡುವವರ ಬಳಿ ಆ ಸೇತುವೆಗಳನ್ನು ನಿಯಂತ್ರಿಸುವವನ ದೂರವಾಣಿ ಸಂಖ್ಯೆ ಇರುತ್ತದೆ. ಕೆಲವೊಮ್ಮೆ ಅವರು ಫೋನ್ ಮಾಡಿ ಅವನನ್ನು ಕರೆಸಿಕೊಳ್ಳುವುದೂ ಉಂಟು.
ನಾನಂತೂ ಇಲ್ಲಿಗೆ ಬಂದ ಪ್ರಾರಂಭದಲ್ಲಿ ಸಿಕ್ಕ ಒಂದು ಅವಕಾಶವನ್ನೂ ಬಿಡದೆ ಸೇತುವೆಗಳನ್ನು ತೆರೆದು-ಮುಚ್ಚುವ ಕಾರ್ಯಾಚರಣೆಯನ್ನು ತಲ್ಲೀನಳಾಗಿ ನೋಡುತ್ತಿದ್ದೆ, ಫೋಟೋ ತೆಗೆಯುತ್ತಿದ್ದೆ, ವಿಡಿಯೋ ಮಾಡುತ್ತಿದ್ದೆ. ಆದರೆ ಕೆಲ ತಿಂಗಳುಗಳ ನಂತರ ಅದು ದಿನನಿತ್ಯದ ಚಟುವಟಿಕೆ ಎಂದೆನಿಸಿ ವಿಶೇಷವಾಗಿ ಕಾಣಿಸುವುದು ನಿಂತುಹೋಯಿತು. ಈಗ ಅಂತಹ ಸಂದರ್ಭಗಳಲ್ಲಿ ಸೇತುವೆಯ ಕಡೆಗೂ ಕೂಡ ನೋಡದೆ ಆ ಕಡೆ, ಈ ಕಡೆ ನೋಡುವುದು, ಫೋನ್ ನೋಡುವುದು ಇನ್ನೂ ಏನೇನೋ ಮಾಡುತ್ತೇನೆ. ಇನ್ನೂ ನಿಜ ಹೇಳಬೇಕೆಂದರೆ ಗಡಿಬಿಡಿಯಲ್ಲಿದ್ದರಂತೂ ಹಣೆ ಸಿಂಡರಿಸಿ ಈ ದೋಣಿಗಳ ಸಾಲು ಯಾವಾಗ ಮುಗಿಯುತ್ತದೆಯೋ ಎನ್ನುವಂತೆ ನೋಡುತ್ತಿರುತ್ತೇನೆ. ಮನುಷ್ಯ ಸಂದರ್ಭಗಳಿಗೆ ಹೇಗೆ ಒಗ್ಗಿ ಹೋಗುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ. ಮೊದಲೆಲ್ಲಾ ವಿಶೇಷವಾಗಿ ಕಾಣುತ್ತಿದ್ದುದು ಈಗ ಸರ್ವೇ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿದೆ. ದಿನನಿತ್ಯ ನಡೆಯುವ ಎಷ್ಟೋ ಕೆಲಸಗಳು ವಿಶಿಷ್ಟವಾಗಿದ್ದರೂ ಕೂಡ ಅವುಗಳಿಗೆ ಬೆಲೆ ಕೊಡುವುದನ್ನು ನಾವು ಎಂದೋ ನಿಲ್ಲಿಸಿಬಿಟ್ಟಿರುತ್ತೇವೆ!
ನಾನಂತೂ ಇಲ್ಲಿಗೆ ಬಂದ ಪ್ರಾರಂಭದಲ್ಲಿ ಸಿಕ್ಕ ಒಂದು ಅವಕಾಶವನ್ನೂ ಬಿಡದೆ ಸೇತುವೆಗಳನ್ನು ತೆರೆದು-ಮುಚ್ಚುವ ಕಾರ್ಯಾಚರಣೆಯನ್ನು ತಲ್ಲೀನಳಾಗಿ ನೋಡುತ್ತಿದ್ದೆ, ಫೋಟೋ ತೆಗೆಯುತ್ತಿದ್ದೆ, ವಿಡಿಯೋ ಮಾಡುತ್ತಿದ್ದೆ. ಆದರೆ ಕೆಲ ತಿಂಗಳುಗಳ ನಂತರ ಅದು ದಿನನಿತ್ಯದ ಚಟುವಟಿಕೆ ಎಂದೆನಿಸಿ ವಿಶೇಷವಾಗಿ ಕಾಣಿಸುವುದು ನಿಂತುಹೋಯಿತು. ಈಗ ಅಂತಹ ಸಂದರ್ಭಗಳಲ್ಲಿ ಸೇತುವೆಯ ಕಡೆಗೂ ಕೂಡ ನೋಡದೆ ಆ ಕಡೆ, ಈ ಕಡೆ ನೋಡುವುದು, ಫೋನ್ ನೋಡುವುದು ಇನ್ನೂ ಏನೇನೋ ಮಾಡುತ್ತೇನೆ. ಇನ್ನೂ ನಿಜ ಹೇಳಬೇಕೆಂದರೆ ಗಡಿಬಿಡಿಯಲ್ಲಿದ್ದರಂತೂ ಹಣೆ ಸಿಂಡರಿಸಿ ಈ ದೋಣಿಗಳ ಸಾಲು ಯಾವಾಗ ಮುಗಿಯುತ್ತದೆಯೋ ಎನ್ನುವಂತೆ ನೋಡುತ್ತಿರುತ್ತೇನೆ. ಮನುಷ್ಯ ಸಂದರ್ಭಗಳಿಗೆ ಹೇಗೆ ಒಗ್ಗಿ ಹೋಗುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ.
ಆದರೆ ಮೊದಲಬಾರಿ ನೋಡುಗರಿಗಂತೂ ಆ ಸೇತುವೆಗಳು ತೆರೆದು ಪುನಃ ಮುಚ್ಚುವುದು ನಿಜಕ್ಕೂ ಕುತೂಹಲಕಾರಿ. ಎಲ್ಲ ಸೇತುವೆಗಳ ತೆರೆಯುವಿಕೆ, ಮುಚ್ಚುವಿಕೆ ಒಂದೇ ರೀತಿಯಾಗಿರುವುದಿಲ್ಲ. ಕೆಲವು ಮಧ್ಯದಲ್ಲಿ ಮುರಿದುಕೊಂಡು ಆಚೆ ಈಚೆ ಮೇಲೆದ್ದು ನಿಂತರೆ ಇನ್ನು ಕೆಲವು ಸೇತುವೆಗಳು ಇಡಿಯದಾಗಿ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹೊರಳಿ ಅಡ್ಡಡ್ಡ ಸರಿದುಬಿಡುತ್ತವೆ. ಕೆಲವು ಇಡಿಯ ಸೇತುವೆ ಒಂದೇ ಕಡೆ ಮೇಲೆದ್ದು ತೆರೆದುಕೊಳ್ಳುತ್ತದೆ. ನದಿಗಳಿಗೆ ನಿರ್ಮಿಸಲಾದ ಕೆಲವು ದೊಡ್ಡ ಸೇತುವೆಗಳಂತೂ ತಮ್ಮ ಕೆಳಗಡೆ ಬೃಹದಾಕಾರದ ಹಡಗುಗಳಿಗೆ ದಾರಿಕೊಡಲೆಂದು ಎದ್ದು ನಿಂತಾಗ ನಮ್ಮ ಮುಂದಿರುವ ಹೈವೇ ರಸ್ತೆಯೇ ಹೆಚ್ಚು ಕಡಿಮೆ ಲಂಬವಾಗಿ ನಿಲ್ಲುತ್ತದೆ! ಮೊದಲ ಬಾರಿ ಇಂಥ ಸನ್ನಿವೇಶದಲ್ಲಿ ಹೈವೇ ರಸ್ತೆ ಮೇಲೆದ್ದು ನಿಂತಿದ್ದನ್ನು ನೋಡಿದ ಕ್ಷಣ ಒಂಥರಾ ಭಯಾನಕವಾಗಿ ಕಂಡಿತ್ತು! ಏನಾದರೂ ಹೆಚ್ಚುಕಮ್ಮಿ ಆಗಿ ಕೆಳಗಡೆ ಹೋಗುತ್ತಿರುವ ಹಡಗಿನ ಮೇಲೆ ಧುತ್ತೆಂದು ಬಿದ್ದರೆ ಎಂಬಿತ್ಯಾದಿ ಭಾವನೆಗಳು ಹೊಮ್ಮಿದ್ದವು! ಆದರೆ ಈ ದೇಶದಲ್ಲಿ ಅದು ದಿನನಿತ್ಯದ ಕೆಲಸ, ಆ ರೀತಿ ಯಾವ ಆಕಸ್ಮಿಕಗಳು ನಡೆಯುವುದಿಲ್ಲ. ದೊಡ್ಡ ಸೇತುವೆಗಳು ತೆರೆಯುವ ಸನ್ನಿವೇಶಗಳು ಭಯಾನಕವೆನಿಸಿದರೆ, ಚಿಕ್ಕ ಸೇತುವೆಗಳು ತೆರೆಯುವ ಸನ್ನಿವೇಶಗಳು ಮುದ್ದಾಗಿ ಕಾಣಿಸುತ್ತವೆ.
ಹಳ್ಳಿಗಳಲ್ಲೂ ಕಾಲುವೆಗಳು, ಸೇತುವೆಗಳು ಸರ್ವೇಸಾಮಾನ್ಯ. ನೆದರ್ ಲ್ಯಾಂಡ್ಸ್ ನ ಉತ್ತರ ಭಾಗದಲ್ಲಿರುವ ಗೀತೂರ್ನ್ ಎಂಬ ಒಂದು ಹಳ್ಳಿಯಲ್ಲಂತೂ ರಸ್ತೆಯೇ ಇಲ್ಲ ಎನ್ನಬಹುದು. ಊರಿನ ತುಂಬಾ ಕಾಲುವೆಗಳು, ಎಲ್ಲರ ಮನೆಗೂ ಆ ಕಾಲುವೆಗಳನ್ನು ಹಾದು ಚಿಕ್ಕ ಕಟ್ಟಿಗೆಯ ಸೇತುವೆಗಳ ಮೇಲೆಯೇ ಹೋಗಬೇಕು! ಆ ಊರನ್ನು ಹಾಲೆಂಡಿನ ವೆನಿಸ್ ಎಂದು ಕರೆಯುತ್ತಾರೆ. ಆ ಹಳ್ಳಿಯ ಸೌಂದರ್ಯವನ್ನು ಸವಿಯಲು ವರ್ಷಕ್ಕೆ ಸುಮಾರು ಎಂಟು ಲಕ್ಷ ಯಾತ್ರಿಗಳು ಭೇಟಿನೀಡುತ್ತಾರಂತೆ. ಅದರಲ್ಲಿ ಬಹುಪಾಲು ಜನ ಚೀನೀಯರು. ಆದ್ದರಿಂದ ಆ ಹಳ್ಳಿಯನ್ನು ಚೈನೀಸ್ ವೆನೀಸ್ ಆಫ್ ಹಾಲ್ಯಾಂಡ್ (Chinese Venice of Holland) ಎಂದು ಡಚ್ಚರು ತಮಾಷೆ ಮಾಡುತ್ತಾರಂತೆ! ಎಲ್ಲಾ ಊರು, ನಗರಗಳ ಬಹುತೇಕ ಸೇತುವೆಗಳ ಹಿಂದೆ ಒಂದಲ್ಲಾ ಒಂದು ಚಿಕ್ಕ ಕಥೆ ಇದ್ದೇ ಇರುತ್ತದೆ. ಎಲ್ಲಾ ಸೇತುವೆಗಳಿಗೂ ಸರಕಾರದಿಂದ ಕೊಡಲ್ಪಟ್ಟ ಸಂಖ್ಯೆ ಇರುತ್ತದೆ. ಆ್ಯಮ್ಸ್ಟರ್ ಡ್ಯಾಮ್ ನ ಕೆಲವು ಮುಖ್ಯ ಸೇತುವೆಗಳ ಬಗ್ಗೆ ಹೇಳುತ್ತೇನೆ. ಮೊದಲನೆಯದಾಗಿ, ಟವರ್ ಇಲ್ಲದ ಟವರ್ ಬ್ರಿಡ್ಜ್. ವಿಶೇಷವೆಂದರೆ ಇದರ ಮೇಲೆ ಇಂದು ಯಾವುದೇ ಟವರ್ ಇಲ್ಲ! ಹದಿನೈದನೆಯ ಶತಮಾನದಲ್ಲಿ ನಗರದ ಸುರಕ್ಷತೆಗೆಂದು ಕಟ್ಟಿದ್ದ ಟವರ್ ಅನ್ನು ಹತ್ತೊಂಭತ್ತನೆಯ ಶತಮಾನದಲ್ಲಿ ಅನವಶ್ಯಕ ಎಂದು ಕೆಡವಿದ್ದಾರಂತೆ. ಆದರೆ ಟವರ್ ಬ್ರಿಡ್ಜ್ ಎಂಬ ಹೆಸರು ಮಾತ್ರ ಹಾಗೆಯೇ ಉಳಿದಿದೆ. ಇದರ ಕೆಳಗಡೆ ಜೈಲಿನ ಕೋಣೆಗಳಾಗಿ ಉಪಯೋಗಿಸುತ್ತಿದ್ದ ಜಾಗವನ್ನು ಇಂದು ವಸ್ತುಪ್ರದರ್ಶನಕ್ಕೆಂದು ಮಾರ್ಪಡಿಸಿದ್ದಾರೆ.
ನೀಲಿ ಬಣ್ಣದಲ್ಲಿಲ್ಲದ ಬ್ಲೂ ಬ್ರಿಡ್ಜ್ ಆಮ್ಸ್ಟೆಲ್ ನದಿಗೆ ಅಡ್ಡವಾಗಿ ಕಟ್ಟಿರುವ ಸೇತುವೆ. ಹದಿನೇಳನೆಯ ಶತಮಾನದಲ್ಲಿ ಮೊತ್ತ ಮೊದಲ ಬಾರಿಗೆ ಕಟ್ಟಿಗೆಯಿಂದ ನಿರ್ಮಿಸಿದಾಗ ನೀಲಿ ಬಣ್ಣವನ್ನು ಹೊಂದಿತ್ತಂತೆ. ನಂತರದ ದಿನಗಳಲ್ಲಿ ಕಟ್ಟಿಗೆಯನ್ನು ತೆಗೆದು ಕಾಂಕ್ರೀಟ್ ನಿಂದ ಪುನರ್ನಿರ್ಮಿಸಲಾಗಿದೆ. ಇಂದು ನೋಡಿದರೆ ಆ ಸೇತುವೆಗೆ ನೀಲಿ ಬಣ್ಣದ ಕೊಂಚ ಮಾತ್ರದ ಛಾಯೆಯೂ ಇಲ್ಲ. ಆದರೂ ತನ್ನ ಹೆಸರನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ. ಹೆಸರಿಗೆ ತಕ್ಕಂತೆ ಕಿರಿದಾಗಿರುವ ಸ್ಕಿನ್ನಿ ಬ್ರಿಡ್ಜ್. ಇದು ಆ್ಯಮ್ಸ್ಟರ್ ಡ್ಯಾಮ್ ನ ಅತ್ಯಂತ ಪ್ರಸಿದ್ಧ ಸೇತುವೆ, ಇದನ್ನೂ ಕೂಡ ಆಮ್ಸ್ಟೆಲ್ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಇಬ್ಬರು ಶ್ರೀಮಂತ ಅಕ್ಕ ತಂಗಿಯರು ನದಿಯ ಎರಡೂ ಪಕ್ಕದಲ್ಲಿ ವಾಸವಾಗಿದ್ದು ದಿನಾಲೂ ಭೇಟಿಯಾಗಲು ಸುಲಭವಾಗಲಿ ಎಂದು ಈ ಸೇತುವೆಯನ್ನು ನಿರ್ಮಿಸಿದರು ಎಂಬ ಕಥೆಯಿದೆ. ಕಿರಿದಾಗಿರುವುದರಿಂದ ಬರಿದೇ ಸೈಕಲ್ ಸವಾರರು ಮತ್ತು ಕಾಲ್ನಡಿಗೆಯವರಿಗೆ ಮಾತ್ರ ಈ ಸೇತುವೆಯ ಮೇಲೆ ಪ್ರವೇಶ. ನಿತ್ಯ ಹಲವಾರು ಬಾರಿ ನಡುವೆ ತೆರೆದುಕೊಂಡು ತನ್ನ ಕೆಳಗಡೆ ಹಡಗುಗಳಿಗೆ ದಾರಿಮಾಡಿಕೊಡುತ್ತದೆ. ಪ್ರತಿರಾತ್ರಿ ದೀಪಾಲಂಕೃತಗೊಳ್ಳುತ್ತದೆ.
ಆದರೆ ಮೊದಲಬಾರಿ ನೋಡುಗರಿಗಂತೂ ಆ ಸೇತುವೆಗಳು ತೆರೆದು ಪುನಃ ಮುಚ್ಚುವುದು ನಿಜಕ್ಕೂ ಕುತೂಹಲಕಾರಿ. ಎಲ್ಲ ಸೇತುವೆಗಳ ತೆರೆಯುವಿಕೆ, ಮುಚ್ಚುವಿಕೆ ಒಂದೇ ರೀತಿಯಾಗಿರುವುದಿಲ್ಲ. ಕೆಲವು ಮಧ್ಯದಲ್ಲಿ ಮುರಿದುಕೊಂಡು ಆಚೆ ಈಚೆ ಮೇಲೆದ್ದು ನಿಂತರೆ ಇನ್ನು ಕೆಲವು ಸೇತುವೆಗಳು ಇಡಿಯದಾಗಿ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹೊರಳಿ ಅಡ್ಡಡ್ಡ ಸರಿದುಬಿಡುತ್ತವೆ. ಕೆಲವು ಇಡಿಯ ಸೇತುವೆ ಒಂದೇ ಕಡೆ ಮೇಲೆದ್ದು ತೆರೆದುಕೊಳ್ಳುತ್ತದೆ. ನದಿಗಳಿಗೆ ನಿರ್ಮಿಸಲಾದ ಕೆಲವು ದೊಡ್ಡ ಸೇತುವೆಗಳಂತೂ ತಮ್ಮ ಕೆಳಗಡೆ ಬೃಹದಾಕಾರದ ಹಡಗುಗಳಿಗೆ ದಾರಿಕೊಡಲೆಂದು ಎದ್ದು ನಿಂತಾಗ ನಮ್ಮ ಮುಂದಿರುವ ಹೈವೇ ರಸ್ತೆಯೇ ಹೆಚ್ಚು ಕಡಿಮೆ ಲಂಬವಾಗಿ ನಿಲ್ಲುತ್ತದೆ! ಮೊದಲ ಬಾರಿ ಇಂಥ ಸನ್ನಿವೇಶದಲ್ಲಿ ಹೈವೇ ರಸ್ತೆ ಮೇಲೆದ್ದು ನಿಂತಿದ್ದನ್ನು ನೋಡಿದ ಕ್ಷಣ ಒಂಥರಾ ಭಯಾನಕವಾಗಿ ಕಂಡಿತ್ತು! ಏನಾದರೂ ಹೆಚ್ಚುಕಮ್ಮಿ ಆಗಿ ಕೆಳಗಡೆ ಹೋಗುತ್ತಿರುವ ಹಡಗಿನ ಮೇಲೆ ಧುತ್ತೆಂದು ಬಿದ್ದರೆ ಎಂಬಿತ್ಯಾದಿ ಭಾವನೆಗಳು ಹೊಮ್ಮಿದ್ದವು!
ಈ ರೀತಿಯಲ್ಲಿ ನಡುವೆ ಎರಡು ಭಾಗಳಾಗಿ ತೆರೆದುಕೊಳ್ಳುವ ಸೇತುವೆಗಳ ಸಮಸ್ಯೆಯೆಂದರೆ ಬೇಸಿಗೆಯಲ್ಲಿ ತಾಪಮಾನ 25 ಡಿಗ್ರಿ ಸೆಲ್ಷಿಯಶ್ ಗಿಂತ ಜಾಸ್ತಿಯಾಯಿತೆಂದರೆ ಸೇತುವೆಗೆ ಉಪಯೋಗಿಸಿದ ವಸ್ತುಗಳು ಹಿಗ್ಗುವುದರಿಂದ ಸೇತುವೆಯ ಎರಡೂ ಭಾಗಗಳು ಅಂಟಿಕೊಂಡು ತೆರೆದುಕೊಳ್ಳುವುದೇ ಇಲ್ಲ. ಇನ್ನೂ ಕೆಲವೊಮ್ಮೆ ತೆರೆದುಕೊಂಡರೂ ಕೂಡಿಕೊಳ್ಳುವುದಿಲ್ಲ! ಆದ್ದರಿಂದ ಬೇಸಿಗೆಯಲ್ಲಿ ಪದೇ ಪದೇ ಇಂಥ ಸೇತುವೆಗಳಿಗೆ ನೀರು ಸಿಂಪಡಿಸುತ್ತಾರೆ.
ಜಾನ್ ಶಾಫೆರ್ ಬ್ರಿಡ್ಜ್ (Jan Schaefer Bridge)- ಆ್ಯಮ್ಸ್ಟರ್ ಡ್ಯಾಮ್ ಅನ್ನು ಪಕ್ಕದ ಪುಟ್ಟ ದ್ವೀಪದೊಂದಿಗೆ ಜೋಡಿಸುತ್ತದೆ. ಇದು ಉಳಿದೆಲ್ಲ ಸೇತುವೆಗಳಿಗೆ ಹೋಲಿಸಿದಲ್ಲಿ ಹೊಚ್ಚಹೊಸ ಸೇತುವೆ. 2001 ನೇ ಇಸವಿಯಲ್ಲಿ ಲೋಕಾರ್ಪಣೆಯಾಯಿತು. ಇದು ತೆರೆದುಕೊಳ್ಳುವಂತಹ ಸೇತುವೆಯಲ್ಲದಿದ್ದರೂ ಇದರ ವಿಶೇಷತೆಯೆಂದರೆ ನಡುಭಾಗವನ್ನು ಕಳಚಲು ಬರುವಂತದ್ದು. ಪ್ರತೀ ಐದು ವರ್ಷಗಳಿಗೊಮ್ಮೆ ಜರುಗುವ ಸೇಲ್ ಆ್ಯಮ್ಸ್ಟರ್ ಡ್ಯಾಮ್ (SAIL Amsterdam) ಎಂಬ ವಿಶೇಷ ಸಂದರ್ಭದಲ್ಲಿ ಪ್ರಪಂಚದೆಲ್ಲೆಡೆಯಿಂದ ದೊಡ್ಡ ದೊಡ್ಡ ಹಡಗುಗಳು ಬರಲೆಂದು ಈ ಸೇತುವೆ ತನ್ನ ನಡುಭಾಗವನ್ನು ತಾತ್ಕಾಲಿಕವಾಗಿ ಕಳಚಿಕೊಂಡು ನಿಲ್ಲುತ್ತದೆ! ಇನ್ನುಳಿದವು ಸಹಸ್ರಾರು ಜನರು ಪ್ರತಿನಿತ್ಯ ಓಡಾಡುವ ಲೆಕ್ಕವಿಲ್ಲದಷ್ಟು ಸಣ್ಣ ಪುಟ್ಟ ಸೇತುವೆಗಳು, ಮತ್ತು ಅತ್ಯಾಧುನಿಕ ಹಾವಿನ ಆಕೃತಿಯಲ್ಲಿರುವ ಕೆಂಪನೆಯ ಪೈಥಾನ್ ಬ್ರಿಡ್ಜ್ (Python bridge) ಮತ್ತು ನೆದರ್ ಲ್ಯಾಂಡ್ಸ್ ನ ಮೊತ್ತ ಮೊದಲನೆಯ ಸಸ್ಪೆನ್ಷನ್ ಬ್ರಿಡ್ಜ್ (suspension bridge- Nescio Bridge.)
ಕಾಲುವೆಗಳಿಗೆ ಅಡ್ಡವಾಗಿ ಮಲಗಿ ನಮ್ಮ ಭಾರವನ್ನು ಸದಾ ಹೊರುವ ಈ ಸೇತುವೆಗಳು ಕೆಲವೊಮ್ಮೆ ತೆರೆದು ನಿಂತು ನಮ್ಮನ್ನು ಸಂಕಟಕ್ಕೆ ಸಿಕ್ಕಿಸುತ್ತವೆ. ನಾನು ಕಂಡಂತೆ ಈ ತೆರೆದುಕೊಳ್ಳುವ ಸೇತುವೆಗಳ ಒಂದು ಅತ್ಯಂತ ವಿಶೇಷ ಲಕ್ಷಣವೆಂದರೆ ಎಲ್ಲಿಗಾದರೂ ಗಡಿಬಿಡಿಯಲ್ಲಿ ಹೊರಟಾಗ, ಅಥವಾ ಕಾಲುವೆಯ ಆಚೆಕಡೆ ಹೋಗಿ ಬಸ್ ಹಿಡಿಯಬೇಕಿದ್ದ ಸಮಯದಲ್ಲಿಯೇ ತೆರೆದುಕೊಂಡು ನಿಲ್ಲುವುದು. ತೆರೆದು ನಿಂತ ಸೇತುವೆಯ ಈಚೆ ನಿಂತು ನೋಡುತ್ತಿದ್ದಂತೆಯೇ ಆಚೆಕಡೆ ಬಸ್ ಹೋಗಿರುತ್ತದೆ! ಯಾವುದಾದರೂ ಹಳ್ಳಿಯಾದರೆ ಮುಂದಿನ ಬಸ್ ಗೆ ಅರ್ಧಗಂಟೆಯೋ, ಒಂದು ಗಂಟೆಯೋ ಕಾಯಬೇಕು.
ನಾವು ಬೆಂಗಳೂರಿನಲ್ಲಿ ಎಲ್ಲಿಗಾದರೂ ಹೋಗಿ ತಲುಪುವುದು ತಡವಾಯಿತೆಂದರೆ ಕೊಡುವ ಕಾರಣ ಟ್ರಾಫಿಕ್ ಜಾಮ್, ಅಂತೆಯೇ ನೆದರ್ ಲ್ಯಾಂಡ್ಸ್ ನಲ್ಲಿ ಸೇತುವೆ ತೆರೆದಿತ್ತು ಎಂದು ಕಾರಣ ಕೊಡಬಹುದು. ತಾವೆಲ್ಲಾ ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಶಾಲೆಗೆ ತಡವಾಗಿ ಬಂದಾಗ ಶಿಕ್ಷಕರು ಯಾಕೆ ತಡ ಎಂದು ಕೇಳಿದಾಗ ಸೇತುವೆ ತೆರೆದಿತ್ತು ಎಂದು ಸುಳ್ಳು ಹೇಳುತ್ತಿದ್ದೆವು ಎಂದು ನನ್ನ ಡಚ್ ಸ್ನೇಹಿತರೊಬ್ಬರು ಹೇಳಿದ್ದರು! ಅದೇನೇ ಇರಲಿ, ಪ್ರತಿ ಊರುಗಳಲ್ಲೂ ಆಂತರಿಕ ಭದ್ರತೆಗೆಂದು, ಸಾಗಾಟಕ್ಕೆಂದು ಸಹಸ್ರ ಸಂಖ್ಯೆಯಲ್ಲಿ ಕಾಲುವೆಗಳನ್ನು ನಿರ್ಮಿಸಿ, ಅದಕ್ಕೆ ಅಲ್ಲಲ್ಲಿ ಸೇತುವೆಗಳನ್ನು ನಿರ್ಮಿಸಿ ಅವುಗಳನ್ನು ಇಂದಿಗೂ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ಡಚ್ಚರ ಸಾಮರ್ಥ್ಯವನ್ನು ಮೆಚ್ಚದಿರಲಾಗದು.
ಹುಟ್ಟಿದ್ದು ಬೆಳೆದದ್ದು ಮಲೆನಾಡಿನ ಹಳ್ಳಿಯ ರೈತ ಕುಟುಂಬವೊಂದರಲ್ಲಿ. ಓದಿದ್ದು ಅರ್ಥಶಾಸ್ತ್ರ. ಈಗ ಇರುವುದು ನೆದರ್ಲ್ಯಾಂಡ್ಸ್ ನ ಆಮ್ಸ್ಟೆರ್ಡಾಮ್ ನಲ್ಲಿ.