ಸುದ್ದಿಮಾಧ್ಯಮಗಳಿಗೆ ಪೊಲೀಸರು ತಿಳಿಸಿದ್ದು ಏನೆಂದರೆ ಆ ವ್ಯಕ್ತಿ ತನ್ನ ಜೀವಹಾನಿಗೆ ಮುಂದಾಗಿದ್ದ. ಅವರು ಅವನು ತನ್ನ ಪ್ರಾಣ ತೆಗೆದುಕೊಳ್ಳದಂತೆ ಮಾತನಾಡಿಸುತ್ತಾ ಪುಸಲಾಯಿಸುತ್ತಾ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದರು. ರೇಡಿಯೋ ಡೀಜೆಗಳು ಪಟಪಟನೆ ಪರಿಸ್ಥಿತಿಯ ವಿಶ್ಲೇಷಣೆ ಶುರುಮಾಡಿದರು. ಅವನ್ಯಾರು, ಯಾತಕ್ಕೆ ಪ್ರಾಣ ತೆಗೆದುಕೊಳ್ಳಲು ಮುಂದಾದ, ಯಾತಕ್ಕೆ ಆ ದಟ್ಟ ವಾಹನಸಂಚಾರವಿದ್ದ ಸುರಂಗವನ್ನೇ ಆರಿಸಿಕೊಂಡ, ಅವನಿಗೆ ಮಾಧ್ಯಮಗಳಲ್ಲಿ ತನ್ನನ್ನು ತೋರಿಸಿಕೊಳ್ಳುವ ಆಸೆ ಬಂದು ಸುಮ್ಮನೆ ಸ್ಟಂಟ್ ಎಂದು ಈ ರೀತಿ ಮಾಡುತ್ತಿದ್ದಾನೆಯೇ, ಎಂದೆಲ್ಲಾ ಮಾತು ನಡೆಯಿತು. ಚುಮುಚುಮು ಛಳಿಯ ಮುಂಜಾವಿಗೆ ಸಾವು ಬದುಕಿನಾಟದ ಬಿಸಿ ತಾಕಿತ್ತು. ದಾಳಗಳು ಯಾರ ಕೈಯಲ್ಲಿವೆ ಎಂಬ ಯೋಚನೆಯೇ ಮೈನವಿರೇಳಿಸಿತ್ತು.
ಡಾ.ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ನಗರವಾಸಿಗಳಿಗೆ ನಗರವೇ ಒಬ್ಬ ಸಂಗಾತಿಯಾಗಿಬಿಡುತ್ತದೆ. ದಿನನಿತ್ಯದ ಜಂಜಾಟಗಳು, ಸುತ್ತಲೂ ಹಬ್ಬಿರುವ ಕಾಂಕ್ರೀಟ್ ಕಾಡಿನ ಮಧ್ಯದೊಳಗೆ ಹರಡಿರುವ ಬದುಕು, ಅದರ ಮೇಲೆ ನೆರಳು-ಬೆಳಕುಗಳ ಪ್ರತಿಫಲನ, ದಿನವೂ ನೋಡುವ ರಸ್ತೆಗಳು, ಅವೇ ನಮ್ಮೊಡನೆ ಸಂಭಾಷಣೆಯಲ್ಲಿ ತೊಡಗಿದೆಯೇನೋ ಎನ್ನುವ ವಿಭ್ರಮೆ, ಒಟ್ಟಾರೆ ಎಲ್ಲವೂ ಸೇರಿ ಪ್ರತಿದಿನವೂ ರಾಗವಿರಾಗಗಳ ಹಾಡುಗಳಾಗುತ್ತವೆ.

ರಸ್ತೆಗಿಳಿದರೆ ಸಾಕು ನಗರ ಜೀವನದ ತೊರೆಗಳಲ್ಲಿ ತೇಲಾಡುವ ಮೀನುಗಳಾಗಿ, ತಪ್ಪದೆ ಎಲ್ಲಿಂದಲೋ ಹಾರಿ ಬೀಸಿಕೊಂಡು ಬರುವ ಸಮಯ ಎಂಬ ಗಾಳದಿಂದ ತಪ್ಪಿಸಿಕೊಳ್ಳುವ ಚಡಪಡಿಕೆ ಬಾಲ ಬಿಚ್ಚುತ್ತದೆ. ಹಿಂದಿನ ರಾತ್ರಿ ನಿದ್ದೆ ಕೊಟ್ಟಿದ್ದ ಸ್ವಲ್ಪ ಆರಾಮವನ್ನು ಮರೆಸಿ ಈ ಹೊತ್ತಿನ ವಾಸ್ತವವನ್ನು ಮುಖಕ್ಕೆ ರಾಚುತ್ತವೆ. ನಮ್ಮನಮ್ಮ ವಾಸ್ತವಗಳಲ್ಲಿ ಗೂಡು ಕಟ್ಟಿಕೊಂಡು ಗುಬ್ಬಚ್ಚಿಗಳಂತೆ ಬದುಕುತ್ತಾ ಇರುವ ನಮ್ಮಂತಹ ಮಂದಿ ಆಗಾಗ ವಾರಾಂತ್ಯದಲ್ಲಿ ನಗರವೆಂಬವ ಗುಹೆಗಳಿಂದ ಹೊರಬಂದು ಸಣ್ಣಸಣ್ಣ ಸಂತೋಷಗಳನ್ನು ಅನುಭವಿಸುತ್ತ ಇರುವ ಹೊತ್ತುಗಳಲ್ಲಿ ನವರಸ ಕ್ಷಣಗಳು ನಾವೂ ಕೂಡ ಇದೀವಿ ಎಂಬಂತೆ ಬಣ್ಣಬಣ್ಣದ ಹಕ್ಕಿಗಳಾಗಿ ರೆಕ್ಕೆಬಿಚ್ಚಿ ಗುಬ್ಬಚ್ಚಿಗಳಾಗಿದ್ದ ನಾವೇ ತರಾವರಿ ಬಾನಾಡಿ ಪಕ್ಷಿಗಳಾಗಿ ಹಾರಾಡುತ್ತೇವೇನೋ. ಹಾಗೆ ವಾರಾಂತ್ಯ ಪೂರ್ತಿ ಸ್ವತಂತ್ರವಾಗಿ ಹಾರಾಡಿ ಸೋಮವಾರದಂದು ಪುನಃ ಗುಬ್ಬಚ್ಚಿಗೂಡಲ್ಲಿ ಕೂತು ನಾಳೆಗಳನ್ನು ಹುಟ್ಟಿಸಿ ಅವಕ್ಕೆ ಕಾವಿಡಬೇಕು.

ಅಂದೂ ಕೂಡ ಹಾಗೇ ಆಯಿತು. ಅದೇನೋ ಮೆಲ್ಲನೆ ನಗುವಿನಿಂದ ರೇಡಿಯೋದ ಹಾಡನ್ನು ಕೇಳುತ್ತಾ ರಸ್ತೆಯಲ್ಲಿ ಸಾಗಿದ್ದ ಹೊತ್ತು ಅದು. ನಮ್ಮ ಸಾಮಾನ್ಯ ಬದುಕಿನ ನಿತ್ಯವಾಸ್ತವವನ್ನು ಪ್ರಶ್ನಿಸುತ್ತಾ ಮರೆತುಹೋಗಿದ್ದ, ನಮ್ಮದಲ್ಲದ, ಆದರೂ ನಮ್ಮಷ್ಟೇ ಸತ್ಯದ ಮತ್ತೊಂದು ಬದುಕು ಇದ್ದಕ್ಕಿದ್ದಂತೆ ಎದುರಾಗಿ ಅಣಕಿಸಿತು. ಕಾರಿನ ರೇಡಿಯೋ ವಾಹಿನಿಯ ಮುಖಾಂತರ ಬಂದ ವಾರ್ತೆಯಲ್ಲಿ ಕೇಳಿದ ಸುದ್ದಿ ಎಂದರೆ ಅಂದಿನ ಬೆಳಗ್ಗೆ ರಸ್ತೆ ವಾಹನಚಲನೆಗೆ ಕೆಲವು ಕಡೆ ತಡೆ ಉಂಟಾಗಿದೆ. ಎಲ್ಲೋ ಆ ತಡೆಗಳು ಇದ್ದರೂ ಕೂಡ ನಗರದ ಎಲ್ಲಾ ದಿಕ್ಕುಗಳ ಮುಖ್ಯರಸ್ತೆಗಳಲ್ಲಿ ವಾಹನಸಂಚಾರವು ವಿಳಂಬವಾಗುತ್ತದೆ. ಸಾಮಾನ್ಯವಾಗಿ ಇದ್ದೇಇರುವ ಟ್ರಾಫಿಕ್ ಅಲ್ಲದೆ ಇನ್ನೂ ಹೆಚ್ಚಿನ ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸಿಕೊಳ್ಳುತ್ತಾ ರೇಡಿಯೋ ವಾಲ್ಯೂಮ್ ಜಾಸ್ತಿ ಮಾಡಿದೆ. ವಿಳಂಬಸ್ಥಿತಿಯನ್ನು ಪೊಲೀಸರು ನಿಭಾಯಿಸುತ್ತಿದ್ದಾರೆ ಎಂದು ವರದಿಗಾರ ಹೇಳಿದಾಗ ಕುತೂಹಲವಾಯ್ತು. ಪೊಲೀಸ್ ಯಾತಕ್ಕೆ? ಏನಾಗಿದೆ? ರೇಡಿಯೋವಾಹಿನಿಯ ಡೀಜೇಗಳು ಅದರ ಬಗ್ಗೆ ಮಾತನಾಡಿದಾಗ ಪರಿಸ್ಥಿತಿಯ ಸುಳಿವು ಸಿಕ್ಕಿತು.

ಬ್ರಿಸ್ಬನ್ ನದಿಯಡಿಯಲ್ಲಿ ಕೊರೆದಿರುವ ಸುರಂಗಮಾರ್ಗದಲ್ಲಿ ತಡೆಯಿಲ್ಲದೆ ಕ್ಷಿಪ್ರವೇಗದಿಂದ ವಾಹನಗಳು ಸಂಚರಿಸಿ ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಒಂದೇ ದಾರದಲ್ಲಿ ಪೋಣಿಸುವ ಮಾರ್ಗವಿದೆ. ಉತ್ತರದ Sunshine Coast ಮಾರ್ಗದಿಂದ ಬರುವ ಜನರಿಗೆ ನಗರದ ದಕ್ಷಿಣಮಾರ್ಗಗಳನ್ನೂ ಅಲ್ಲದೆ ಮುಂದುವರೆದು Gold Coast ಪ್ರದೇಶವನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಸೇರಬಹುದು. ಇಂತಹ ಸುರಂಗಮಾರ್ಗದ ಆಚೆ ಕಡೆ ಅಡ್ಡಲಾಗಿ ತನ್ನ ute ವಾಹನವನ್ನು ನಿಲ್ಲಿಸಿ ಒಬ್ಬ ವ್ಯಕ್ತಿ ಸುರಂಗದ ಮೇಲೆ ಹತ್ತಿನಿಂತಿದ್ದ. ಹಾಗಾಗಿ ವಾಹನಸಂಚಾರವೂ ನಿಲುಗಡೆಯಾಗಿತ್ತು. ಪೊಲೀಸರು ಮತ್ತು ಆಂಬುಲೆನ್ಸ್ ಸಿಬ್ಬಂದಿ ಅಲ್ಲಿಗೆ ಬಂದು ಸೇರಿದ್ದರು. ಸುದ್ದಿಮಾಧ್ಯಮಗಳಿಗೆ ಪೊಲೀಸರು ತಿಳಿಸಿದ್ದು ಏನೆಂದರೆ ಆ ವ್ಯಕ್ತಿ ತನ್ನ ಜೀವಹಾನಿಗೆ ಮುಂದಾಗಿದ್ದ. ಅವರು ಅವನು ತನ್ನ ಪ್ರಾಣ ತೆಗೆದುಕೊಳ್ಳದಂತೆ ಮಾತನಾಡಿಸುತ್ತಾ ಪುಸಲಾಯಿಸುತ್ತಾ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದರು. ರೇಡಿಯೋ ಡೀಜೆಗಳು ಪಟಪಟನೆ ಪರಿಸ್ಥಿತಿಯ ವಿಶ್ಲೇಷಣೆ ಶುರುಮಾಡಿದರು. ಅವನ್ಯಾರು, ಯಾತಕ್ಕೆ ಪ್ರಾಣ ತೆಗೆದುಕೊಳ್ಳಲು ಮುಂದಾದ, ಯಾತಕ್ಕೆ ಆ ದಟ್ಟ ವಾಹನಸಂಚಾರವಿದ್ದ ಸುರಂಗವನ್ನೇ ಆರಿಸಿಕೊಂಡ, ಅವನಿಗೆ ಮಾಧ್ಯಮಗಳಲ್ಲಿ ತನ್ನನ್ನು ತೋರಿಸಿಕೊಳ್ಳುವ ಆಸೆ ಬಂದು ಸುಮ್ಮನೆ ಸ್ಟಂಟ್ ಎಂದು ಈ ರೀತಿ ಮಾಡುತ್ತಿದ್ದಾನೆಯೇ, ಎಂದೆಲ್ಲಾ ಮಾತು ನಡೆಯಿತು. ಚುಮುಚುಮು ಛಳಿಯ ಮುಂಜಾವಿಗೆ ಸಾವು ಬದುಕಿನಾಟದ ಬಿಸಿ ತಾಕಿತ್ತು. ದಾಳಗಳು ಯಾರ ಕೈಯಲ್ಲಿವೆ ಎಂಬ ಯೋಚನೆಯೇ ಮೈನವಿರೇಳಿಸಿತ್ತು.

ಕೆಲ ನಿಮಿಷಗಳಲ್ಲೇ ಮತ್ತಷ್ಟು ಸುದ್ದಿ ಬಂತು. ಅವನು ಮುಂಜಾನೆ ಏಳು ಗಂಟೆಯ ಹೊತ್ತಿಗೆ ದಕ್ಷಿಣ ದಿಕ್ಕಿನ ಸುರಂಗದ ಮುಂದೆ ಚಾಕುಗಳನ್ನ ಹಿಡಿದು ಮೇಲೆ ಹತ್ತಿದ್ದ. ಜೀವಹಾನಿಗೋ ಅಥವಾ ಸುಮ್ಮನೆ ತಮಾಷೆಗೊ ಅಥವಾ ಇನ್ನೇನಕ್ಕೋ ಹೇಳಲಾಗದ ಗೊಂದಲದ ವಾತಾವರಣವುಂಟಾಗಿತ್ತು. ಪೊಲೀಸರು ಇನ್ನೂ ಅವನನ್ನು ಮಾತನಾಡಿಸುತ್ತಲೇ ಇದ್ದರು. ಇಷ್ಟು ಕೇಳಿ ನಾವು ನಮ್ಮನಮ್ಮ ಕೆಲಸಗಳಿಗೆ ಹೋದೆವು. ಅಲ್ಲಿಗೆ ನಮ್ಮದು, ಅವನದ್ದು ಎಂಬ ವಾಸ್ತವಗಳ ಮಧ್ಯೆ ಗೆರೆ ಎಳೆದಾಗಿತ್ತು. ಸಂಜೆ ಸುದ್ದಿಯಲ್ಲಿ ಕೇಳಿದ್ದು ಅವನು ಚಾಕುಗಳನ್ನ ಬೀಸುತ್ತಾ ಎಲ್ಲರನ್ನೂ ಹೆದರಿಸಿದ್ದ. ಸುಮಾರು ಆರು ಗಂಟೆಗಳ ಕಾಲ ಅದೇ ನಾಟಕ ನಡೆದು ಕೊನೆಗೆ ಪೊಲೀಸರಿಗೆ ಶರಣಾಗಿದ್ದ. ಬೆಳಗ್ಗೆ ಕಾವೇರಿದ್ದ ಕತೆಗೆ ಸಂಜೆಯಾಗುವಷ್ಟರಲ್ಲಿ ಚಳಿ ಆವರಿಸಿ ಅದು ನಡುಗುತ್ತಾ ಮುದುಡಿ ಅದೆಲ್ಲೋ ನೆಲಬಿಲದಲ್ಲಿ ಹೋಗಿ ಸೇರಿಕೊಂಡು ಮಾಯವಾಯಿತು. ಬೇರೊಬ್ಬರ ಸಾವುಬದುಕಿನ ಕತೆಯನ್ನು ಇನ್ನಷ್ಟು ರೋಚಕವಾಗಿ ಬಣ್ಣಿಸಲಾಗದೆ ರೇಡಿಯೋ ಡೀಜೇಗಳಿಗೆ ನಿರಾಸೆಯಾಗಿರಬೇಕು.

ಈ ಘಟನೆಯ ಎರಡು ವಾರಗಳ ಹಿಂದೆಯಷ್ಟೇ ಆತ್ಮಹತ್ಯೆ ವಿಷಯವನ್ನು ತರಗತಿಯಲ್ಲಿ ನನ್ನ ಮನೋವಿಜ್ಞಾನ ಕೋರ್ಸಿನ ವಿದ್ಯಾರ್ಥಿಗಳು ಚರ್ಚಿಸಿದ್ದರು. ಅವರಲ್ಲಿ ಒಬ್ಬಳು ತರಗತಿ ಆರಂಭವಾಗುವ ಮುನ್ನವೇ ‘ನನ್ನ ಮಟ್ಟಿಗೆ ಈ ವಿಷಯ ಬಹು ಸೂಕ್ಷ್ಮವಾದದ್ದು. ನನ್ನ ಕುಟುಂಬದಲ್ಲೇ ಆತ್ಮಹತ್ಯೆಯ ಪ್ರಯತ್ನಗಳು ನಡೆದಿವೆ. ಆದ್ದರಿಂದ ತರಗತಿಯ ಚರ್ಚೆಯಲ್ಲಿ ನಾನು ಕೇವಲ ಕೇಳುಗಳಾಗಿರುತ್ತೀನಿ,’ ಎಂದು ಮೆಸೇಜ್ ಕಳಿಸಿದ್ದಳು. ಚರ್ಚೆಯಲ್ಲಿ ಇತರೆ ವಿದ್ಯಾರ್ಥಿಗಳು ಅವರ ಸ್ನೇಹಿತರ ಮತ್ತು ಹತ್ತಿರದಿಂದ ನೋಡಿಬಲ್ಲ ಆತ್ಮಹತ್ಯೆ ಘಟನೆಗಳನ್ನು ಕೇಸ್ ಸ್ಟಡೀಸ್ ಎಂಬ ದೃಷ್ಟಿಯಿಂದ ಪರಿಶೀಲಿಸಿದಾಗ ಅವಳೂ ಕೂಡ ಧೈರ್ಯದಿಂದ ಮಾತನಾಡಿದಳು. ಆತ್ಮಹತ್ಯೆಗೆ ಕಾರಣಗಳಾಗುವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಅಂಶಗಳನ್ನೂ ಅಲ್ಲದೆ ಮನುಷ್ಯನ ಮಿದುಳಿನ ಭಾಗಗಳ ಅನಾರೋಗ್ಯ ಸ್ಥಿತಿ, ಮಿದುಳಿನಲ್ಲಿರುವ ರಾಸಾಯನಿಕಗಳ ಏರುಪೇರು, ಹಾರ್ಮೋನ್ ಮತ್ತು neurotransmitterಗಳ ಪಾತ್ರ, ಅವು ಉಂಟು ಮಾಡುವ ಖಿನ್ನತೆ, ಆತಂಕ ಮತ್ತು ಒತ್ತಡಗಳ ಪರಿಣಾಮಗಳನ್ನು ಚರ್ಚಿಸಿದರು.

ರಸ್ತೆಗಿಳಿದರೆ ಸಾಕು ನಗರ ಜೀವನದ ತೊರೆಗಳಲ್ಲಿ ತೇಲಾಡುವ ಮೀನುಗಳಾಗಿ, ತಪ್ಪದೆ ಎಲ್ಲಿಂದಲೋ ಹಾರಿ ಬೀಸಿಕೊಂಡು ಬರುವ ಸಮಯ ಎಂಬ ಗಾಳದಿಂದ ತಪ್ಪಿಸಿಕೊಳ್ಳುವ ಚಡಪಡಿಕೆ ಬಾಲ ಬಿಚ್ಚುತ್ತದೆ. ಹಿಂದಿನ ರಾತ್ರಿ ನಿದ್ದೆ ಕೊಟ್ಟಿದ್ದ ಸ್ವಲ್ಪ ಆರಾಮವನ್ನು ಮರೆಸಿ ಈ ಹೊತ್ತಿನ ವಾಸ್ತವವನ್ನು ಮುಖಕ್ಕೆ ರಾಚುತ್ತವೆ.

ಆ ಸಂದರ್ಭದಲ್ಲಿ ನನಗೆ ಪರಿಚಯವಿರುವ ಹಲವರು – ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರು – ನೆನಪಾದರು. ಅವರಲ್ಲಿ ಎಂಟು ಜನರೊಡನೆ ನಾನು ‘client-professional’ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೆ. ಒಂದು ಸೆಷನ್ನಿನಲ್ಲಿ ಒಬ್ಬ client (ಇನ್ನೂ ಮೂವತ್ತು ವರ್ಷ ದಾಟಿರಲಿಲ್ಲ) ಇದ್ದಕ್ಕಿದ್ದಂತೆ ನನ್ನ ಕೈ ಹಿಡಿದು ಆತ್ಮಹತ್ಯೆಗೆ ಅವನು ಉಪಯೋಗಿಸಿದ ವಿಧಾನಗಳನ್ನು ಹೇಳಿಕೊಂಡ (ಪ್ರೊಫೆಷನಲ್ ಸೆಷನ್ನಿನಲ್ಲಿ ಎಂದಿಗೂ ಯಾವುದೇ ರೀತಿಯ ಶಾರೀರಿಕ ಸ್ಪರ್ಶವಿರುವುದಿಲ್ಲ, ಇರಬಾರದು ಎನ್ನುವುದು ನಿಯಮ). ಅವನ ಪ್ರಯತ್ನಗಳನ್ನು ಅತ್ಯಂತ ಗೋಪ್ಯವಾಗಿಟ್ಟು ಪ್ರಾಣಾಪಾಯದಿಂದ ಅವನ ಸಂಗಾತಿ ಅವನನ್ನು ರಕ್ಷಿಸಿದ್ದರು. ಅವನಿಗಿದ್ದ ಹಲವಾರು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ತಿಳಿದಿದ್ದು ಕೌನ್ಸೆಲ್ಲಿಂಗ್ ಮತ್ತು ಮನೋವೈದ್ಯರ ಚಿಕಿತ್ಸೆ ಅವನಿಗಿಷ್ಟವಿಲ್ಲ. ಹಾಗಾಗಿ ಸಮಸ್ಯೆಗಳು ಹಾಗೆ ಇದ್ದುಕೊಂಡು ಇನ್ನೂ ಹೆಚ್ಚಾಗುತ್ತಿವೆ. ಅವನು ಜನರನ್ನು, ಬೆಳಗನ್ನು, ಸಾರ್ವಜನಿಕ ಜೀವನವನ್ನು ದೂರಮಾಡಿದ್ದ. ಸದಾ ಕಂಪ್ಯೂಟರ್ ಗೇಮ್ಸ್, ಅವನ ಪುಟ್ಟ ಫ್ಲಾಟ್, ಅವನ ಸಂಗಾತಿ ಮತ್ತು ನಾಯಿ ಇಷ್ಟೇ ಅವನ ಜೀವನದಲ್ಲಿದ್ದ ಒಡನಾಡಿಗಳು. ಬಹುಶಃ ಅವನು ಗೇಮಿಂಗ್ ಡಿಸ್ ಆರ್ಡರ್ ಅಸ್ವಸ್ಥತೆಯಿಂದಲೂ ಬಳಲುತ್ತಿದ್ದಾನೆ ಎಂದೆನಿಸಿ ಹಲವಾರು ಸಲಹೆಗಳನ್ನು ಕೊಟ್ಟೆ. ತನ್ನ ಜೀವನದ ಮುಖ್ಯ ಭಾಗವಾದ ಕಂಪ್ಯೂಟರ್ ಗೇಮ್ಸ್ ಬಗ್ಗೆ ಬೆಟ್ಟು ಮಾಡಿ ತೋರಿದ್ದು ಅವನಿಗೆ ಸಹ್ಯವಾಗಲಿಲ್ಲವೇನೋ. ದುರಾದೃಷ್ಟವಾಶಾತ್, ಆಸಾಮಿ ಮಾಯವಾಗಿಬಿಟ್ಟ!!

ಅದಕ್ಕೆ ವ್ಯತಿರಿಕ್ತವಾಗಿ ಅರವತ್ತು ವರ್ಷ ದಾಟಿದ್ದ ಮತ್ತೊಬ್ಬ client ಬಾಯಿ ಬಿಚ್ಚಿ ಮಾತನಾಡುವುದಕ್ಕೇ ಹಲವಾರು ವಾರಗಳು ಬೇಕಾಯ್ತು. ಆತ್ಮಹತ್ಯೆಗೆ ಪ್ರಯತ್ನಿಸಿ ಅದು ಬಯಲಾಗಿ, ಪೊಲೀಸರು ಅವರನ್ನು ಆಸ್ಪತ್ರೆಯ ಮಾನಸಿಕ ಅಸ್ವಸ್ಥತೆಯುಳ್ಳ ರೋಗಿಗಳ ವಾರ್ಡಿನಲ್ಲಿರಿಸಿದ್ದರು. ‘ಇನ್ನೆಂದೂ ಅಂತಹ ಪ್ರಯತ್ನಗಳನ್ನು ಮಾಡುವುದಿಲ್ಲ’ ಎಂದು ಪ್ರಮಾಣಿಸಿ ಬರೆದುಕೊಟ್ಟು ಅವರು ಅಲ್ಲಿಂದ ‘ಪಾರಾಗಿ’ ಬಂದ ನಂತರ ಈ ಹಾಳು ಜನ್ಮವನ್ನು ಹೇಗೋ ಕಷ್ಟಪಟ್ಟು ಜೀವಿಸಿ ಕಡೆಯಲ್ಲಿ ಹೋಗುವುದೇ ಸರಿ ಎಂಬ ಬುದ್ಧಿ ಬಂತಂತೆ. ಈ ವ್ಯಕ್ತಿಯ ಅವಶ್ಯಕತೆಗಳಿಗನುಸಾರವಾಗಿ ನಾನು ಆಕ್ಷನ್ ಪ್ಲಾನ್ ತಯಾರಿಸಿ, ಅವರು ಅದನ್ನು ಒಪ್ಪಿಕೊಂಡು, ನಾನು ಸೂಚಿಸಿದ intervention ಗಳಲ್ಲಿ ಪಾಲ್ಗೊಂಡರು. ಒಂದೇ ಒಂದು ವರ್ಷದಲ್ಲಿ ಅವರು ಆತ್ಮವಿಶ್ವಾಸ ಮತ್ತು ಜೀವನದ ಬಗ್ಗೆ ಹೊಸ ಉತ್ಸಾಹ, ನಿರೀಕ್ಷೆ ಮತ್ತು ಭರವಸೆಗಳನ್ನು ರೂಢಿಸಿಕೊಂಡು, ತಮಗಿಷ್ಟವಾದ ತೋಟಗಾರಿಕೆ ಕ್ಷೇತ್ರದಲ್ಲಿ ಚಿಕ್ಕದೊಂದು ಉದ್ಯೋಗವನ್ನೂ ಹಿಡಿದು ಹೊಸ ದಾರಿಯಲ್ಲಿ ಹೆಜ್ಜೆ ಹಾಕಿದ್ದರು.

ಇತ್ತೀಚೆಗೆ ನನ್ನ ಕೆಲಸದ ಹಿನ್ನೆಲೆಯಲ್ಲಿ ಒಬ್ಬರ ಪರಿಚಯವಾಯ್ತು. ಔದ್ಯೋಗಿಕ (ಎಂಪ್ಲಾಯ್ಮೆಂಟ್) ಕೋಚ್ ಆಗಿರುವ ಅವರ ಕೆಲಸದ ವ್ಯಾಪ್ತಿಯನ್ನೂ, ವಿಧಾನಗಳನ್ನೂ ಕುರಿತು ಮಾತನಾಡಿದಾಗ ಆ ಹೆಂಗಸಿನ ಬಗ್ಗೆ ಭಲೇ ಎನ್ನಿಸಿತು. ಮುಂದಿನ ದಿನಗಳಲ್ಲಿ ಅವರ ಬಗ್ಗೆ ಹೆಚ್ಚಿನ ವಿಷಯಗಳು ತಿಳಿದು ‘ಭಲೇ’ ಎಂಬ ಭಾವನೆಯ ಜೊತೆಗೆ ಬಲು ಅಭಿಮಾನವೆನ್ನಿಸಿತು. ಆಕೆ ಹಲವಾರು ವರ್ಷಗಳ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರು. ಇಂದು ಆ ವಿಷಯದ ಬಗ್ಗೆ ತನ್ನನ್ನೇ ಉದಾಹರಣೆಯನ್ನಾಗಿಸಿ ಸಮುದಾಯದ ಅನೇಕ ಸಂದರ್ಭಗಳಲ್ಲಿ ಮುಖ್ಯಆಹ್ವಾನಿತ ವ್ಯಕ್ತಿಯಾಗಿ ಮಾತನಾಡುತ್ತಾರೆ. ಆತ್ಮಹತ್ಯೆ ವಿಷಯದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುತ್ತಾ ಅವರಿಗೆ ವಿವಿಧ ಸಹಾಯಗಳನ್ನು ನೀಡುವ ಸಂಸ್ಥೆಗಳನ್ನು ಪೋಷಿಸುತ್ತಿದ್ದಾರೆ.

ಪಶ್ಚಿಮ ದೇಶಗಳಲ್ಲಿ ಮನುಷ್ಯರ ಜೀವಕ್ಕೆ ಭಾರಿ ಬೆಲೆಯಿದೆ. ಆಸ್ಟ್ರೇಲಿಯಾದಲ್ಲಿ ಆತ್ಮಹತ್ಯೆ ಎಂಬುದು ಜನರ ಸಾವಿನ ಒಂದು ಮುಖ್ಯಕಾರಣ. ಹೆಚ್ಚಾಗಿ ಗಂಡಸರು, ಅದರಲ್ಲೂ ಆಸ್ಟ್ರೇಲಿಯನ್ ಅಬರಿಜಿನಲ್ ಮತ್ತು ದ್ವೀಪನಿವಾಸಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ (ಇದರ ಬಗ್ಗೆ ಅನೇಕ ವಾದ-ವಿವಾದಗಳಿವೆ). ನಿರುದ್ಯೋಗ, ಜೀವನಸಂಗಾತಿ ಬಿಟ್ಟುಹೋಗುವುದು, ಮಾನಸಿಕ ಅಸ್ವಸ್ಥತೆ, ಏಕಾಂಗಿತನ, ಆಸ್ಟ್ರೇಲಿಯಾದ ಔಟ್ ಬ್ಯಾಕ್ ಪ್ರದೇಶಗಳಲ್ಲಿ ಇರುವ ಕಷ್ಟಗಳು, ಅತಿಮದ್ಯಸೇವನೆ, ಮಾದಕವಸ್ತುಗಳ ಬಳಕೆ ಮತ್ತು ದುರ್ಬಳಕೆ, ಸಮಾಜದ ನಿರೀಕ್ಷೆಗಳನ್ನು ಎದುರಿಸಲಾಗದೆ ಸೋಲುವ ಭಯ ಎಂಬಂತೆ ಹಲವಾರು ಕಾರಣಗಳು ಜನರನ್ನು ಪ್ರಾಣಹಾನಿಗೆ ಪ್ರೇರೇಪಿಸುತ್ತಿವೆ.

ಆತ್ಮಹತ್ಯೆಯನ್ನು ತಡೆಯಲು, ಪ್ರಯತ್ನ ಮಾಡಿದವರಲ್ಲಿ ಜೀವನದ ಬಗ್ಗೆ ಮತ್ತೆ ಭರವಸೆ ಮೂಡಿಸಲು, ಸಮಾಜದಲ್ಲಿ ಅವರ ಬಗ್ಗೆ ಅನುಭೂತಿಯನ್ನು ಮೂಡಿಸಿ ಹೆಚ್ಚು ಜನರು ಒಗ್ಗಟ್ಟಾಗಿ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಲು ಸಾಕಷ್ಟು ಕೆಲಸ ನಡೆಯುತ್ತಿದೆ. ಮುಂಚೂಣಿಯಲ್ಲಿರುವ ಸಂಸ್ಥೆಗಳು Lifeline, Beyond Blue, Menslink, Suicide Prevention Australia ಮುಂತಾದವು. ಸರ್ಕಾರದಿಂದ ಸಿಗುವ ಅಲ್ಪಸ್ವಲ್ಪ ಅನುದಾನವಲ್ಲದೆ ಸಹೃದಯ ಜನರ ದಾನದೇಣಿಗೆಗಳಿಂದ, ಆಗಾಗ್ಗೆ ಏರ್ಪಡುವ ನಿಧಿಸಂಗ್ರಹ ಸಮಾರಂಭಗಳಿಂದ ಸಿಗುವ ನೆರವಿನಿಂದ ಇಂತಹ ಸಂಸ್ಥೆಗಳು ನಡೆಯುತ್ತಿವೆ. ಹೆಚ್ಚಿನ ಮಟ್ಟಿಗೆ ಈ ಸಂಸ್ಥೆಗಳ ಸಾಧಾರಣ ಕೆಲಸಗಳನ್ನ ನಡೆಸುವುದು ಸ್ವಯಂಸೇವಕರು.

ಮನೋದೌರ್ಬಲ್ಯಗಳು, ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ಆರೋಗ್ಯಕ್ಷೇತ್ರದಲ್ಲಿ ಕಾಲಿರಿಸಿದರೆ ನಮ್ಮ ಗುಬ್ಬಚ್ಚಿಗೂಡಿನ ಪುಟ್ಟಪ್ರಪಂಚದ ನೆಮ್ಮದಿ, ಬೆಚ್ಚಗಿನ ಭಾವನೆ ಮತ್ತೊಬ್ಬರ ಛಿದ್ರವಾಗಿರುವ ಗೂಡಿಗೆ, ಒಡೆದ ಕನ್ನಡಿ ಚೂರುಗಳೇ ತುಂಬಿರುವ ಅವರ ಲೋಕಕ್ಕೆ ಎದುರಾಗಿ ಎರಡೂ ವಾಸ್ತವಗಳು ಮುಖಾಮುಖಿಯಾಗುತ್ತವೆ. ಪ್ರತಿಯೊಬ್ಬರ ವಾಸ್ತವವೂ ನಿತ್ಯಸತ್ಯ.