ಸಿಂಗಾಪುರ ಶಿಸ್ತಿನ ದೇಶ ಎನ್ನುವುದನ್ನು ಸಮರ್ಥಿಸಬಲ್ಲಂತಹ ಅನೇಕ ವಿಚಾರಗಳಿವೆ. ಅತ್ಯಂತ ಸಣ್ಣ ಸಂಗತಿಗಳನ್ನೂ ನಿಯಮಗಳಿಗೆ ಒಳಪಡಿಸುವುದು ಸಿಂಗಾಪುರದ ಮೂಲಭೂತ ಗುಣ. ಇದಕ್ಕೆ ನಿದರ್ಶನವಾಗಿ ಕೆಲವು ಅಂಶಗಳನ್ನು ಗಮನಿಸಿಕೊಳ್ಳಬಹುದು. ಚ್ಯೂಯಿಂಗ್ ಗಮ್ ಅನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಷ್ಟ್ರ ಸಿಂಗಾಪುರ. ವೈದ್ಯರಿಂದ ಒಪ್ಪಿಗೆ ಪಡೆದವರು ಮಾತ್ರವೇ ಚ್ಯೂಯಿಂಗ್ ಗಮ್ ಅನ್ನು ಅಗಿಯಬಹುದಾಗಿದೆ. ಸಿಂಗಾಪುರದಲ್ಲಿ ಹೆಚ್ಚು ಎತ್ತರದ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಸಿಂಗಾಪುರ ದೇಶದ ಕುರಿತ ಬರಹ

ಆಗ್ನೇಯ ಏಷ್ಯಾದ ಅತಿದೊಡ್ಡ ಬಂದರು ನಗರ ಎಂಬ ಹೆಗ್ಗಳಿಕೆ ಸಿಂಗಾಪುರದ್ದು. ಯಾವತ್ತೂ ಜನರಿಂದಲೇ ತುಂಬಿ ತುಳುಕುತ್ತಿರುವ ಇದು ಪ್ರಪಂಚದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದು ಎಂಬ ಖ್ಯಾತಿಯನ್ನೂ ಮುಡಿಗೇರಿಸಿಕೊಂಡಿದೆ. ಮಲಯ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿರುವ ರಾಷ್ಟ್ರವಿದು. ಸಾಮಾನ್ಯವಾಗಿ ಸಿಂಗಾಪುರವನ್ನು ಒಂದು ದ್ವೀಪವಾಗಿ ಗುರುತಿಸಲಾಗುತ್ತದೆ. ಆದರೆ ಸಿಂಗಾಪುರ ರಾಷ್ಟ್ರವು ಕೇವಲ ಒಂದೇ ದ್ವೀಪವಲ್ಲ. ಒಟ್ಟು ಅರುವತ್ತಮೂರು ದ್ವೀಪಗಳನ್ನು ಹೊಂದಿದೆ. ಸೇಂಟ್ ಜಾನ್ಸ್ ದ್ವೀಪ, ಸೆಂಟೋಸಾ ದ್ವೀಪ, ಸಿಸ್ಟರ್ಸ್ ಐಲ್ಯಾಂಡ್ ಮತ್ತು ಪುಲೌ ಉಬಿನ್ ಮೊದಲಾದ ಕಡಲಾಚೆಯ ದ್ವೀಪಗಳೂ ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಸಿಂಗಾಪುರದ ಬೆಳವಣಿಗೆಯ ಗತಿಯಲ್ಲಿರುವ ಶಿಸ್ತುಬದ್ಧತೆಯು ಜಗತ್ತಿನ ಉಳಿದ ದೇಶಗಳಲ್ಲಿ ಅಚ್ಚರಿ ಮೂಡಿಸುವ ಸಂಗತಿಯಾಗಿದೆ. ಒಂದು ಕಾಲಕ್ಕೆ ಬ್ರಿಟೀಷರ ಕೈಯ್ಯಡಿಯ ಶಿಶುವಾಗಿದ್ದ ಸಿಂಗಾಪುರ ಈಗ ಬೆಳೆದ ಹಂತದಲ್ಲಿಯೂ ಕಾಮನ್‌ವೆಲ್ತ್‌ನ ಸದಸ್ಯ ರಾಷ್ಟ್ರವಾಗುವ ಮೂಲಕ ಆ ಬಾಂಧವ್ಯವನ್ನು ಹಾಗೆಯೇ ಉಳಿಸಿಕೊಂಡಿದೆ.

1965ರಲ್ಲಿ ಸ್ವತಂತ್ರ ದೇಶವಾಗಿ ಮಾನ್ಯತೆ ಪಡೆಯುವುದಕ್ಕೆ ಮೊದಲು ಸಿಂಗಾಪುರವು ಫೆಡರೇಶನ್ ಆಫ್ ಮಲೇಷ್ಯಾದ ಭಾಗವಾಗಿತ್ತು. ಸ್ವಾತಂತ್ರ್ಯ ಗಳಿಸಿಕೊಂಡ ಮೇಲೆ ಕೈ ಕಾಲುಗಳನ್ನು ಹಲವು ದಿಕ್ಕುಗಳಲ್ಲಿ ಚಾಚಿಕೊಂಡ ಈ ದೇಶ ಹಣಕಾಸಿನ ದಿಶೆಯಲ್ಲಿ ಬೆಳವಣಿಗೆಯನ್ನು ಕಂಡಿದೆ. ವಿಶ್ವ ವ್ಯಾಪಾರ ಕೇಂದ್ರವೆಂಬ ಗುರುತಿಸುವಿಕೆಯನ್ನು ಗಳಿಸಿಕೊಂಡಿದೆ. ಕೈಗಾರಿಕಾ ಕ್ಷೇತ್ರವೂ ವಿಸ್ತರಿಸಲ್ಪಟ್ಟಿದೆ. ಪ್ರಪಂಚದಲ್ಲಿರುವ ಮೂರು ಆಧುನಿಕ ನಗರ ರಾಜ್ಯಗಳಲ್ಲಿ ಸಿಂಗಾಪುರವೂ ಒಂದಾಗಿದೆ. ಏಷ್ಯಾದಲ್ಲಿ ಅತ್ಯಂತ ಕಡಿಮೆ ಭ್ರಷ್ಟ ನಗರವೆನಿಸಿಕೊಂಡಿರುವ ಸಿಂಗಾಪುರವು ವಿಶ್ವದ ಐದನೇ ಕಡಿಮೆ ಭ್ರಷ್ಟ ನಗರವಾಗಿದೆ. ವಿಶ್ವದ ಇಪ್ಪತ್ತು ಚಿಕ್ಕ ದೇಶಗಳಲ್ಲಿ ಸಿಂಗಾಪುರವೂ ಒಂದಾಗಿದೆ. ಇಲ್ಲಿಯ ಇಡೀ ಭೂಪ್ರದೇಶದ ವಿಸ್ತೀರ್ಣ 683 ಚದರ ಕಿಲೋಮೀಟರ್ ಮಾತ್ರ! ಸಿಂಗಾಪುರ ಶ್ರೀಮಂತರ ರಾಷ್ಟ್ರವಾಗಿದ್ದು, ಇಲ್ಲಿ ಪ್ರತೀ ಆರು ಜನರಲ್ಲಿ ಒಬ್ಬರು ಒಂದು ಮಿಲಿಯನ್ ಅಮೇರಿಕನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಆದಿಕಾಲದಲ್ಲಿ ಸಿಂಗಾಪುರಕ್ಕಿದ್ದದ್ದು ಕಡಲ್ಗಳ್ಳರು ವಾಸಿಸುವ ದ್ವೀಪ ಎಂಬ ಕೆಟ್ಟ ಹೆಸರು. ಮೀನುಗಾರರಿಂದ ತುಂಬಿದ್ದ ಇದು ಸುಮಾತ್ರಾ ಸಾಮ್ರಾಜ್ಯದ ಹೊರ ಶಾಖೆಯಾಗಿ ಗುರುತಿಸಿಕೊಂಡಿತ್ತು. ಹದಿನಾಲ್ಕನೇ ಶತಮಾನಕ್ಕೆ ಸೇರಿದ ಇಂಡೋನೇಷಿಯನ್ ಮತ್ತು ಚೀನೀ ದಾಖಲೆಗಳಲ್ಲಿ ಸಿಂಗಾಪುರವನ್ನು ತುಮಾಸಿಕ್ ಮತ್ತು ಟೆಮಾಸೆಕ್ ಎಂಬ ಹೆಸರಿನಿಂದ ಗುರುತಿಸಲಾಗಿದೆ. ಈ ಪದಗಳು ಬಂದಿರುವುದು ಇಂಡೋನೇಷಿಯನ್ ಮೂಲದಿಂದ. ಸಮುದ್ರ ಎನ್ನುವುದು ಈ ಪದಗಳ ಅರ್ಥ. ಅಂದರೆ, ಸಿಂಗಾಪುರವು ಕಡಲಿನ ಮೂಲಕವೇ ಅಸ್ಮಿತೆಯೊಂದನ್ನು ಗಳಿಸಿಕೊಂಡಿತ್ತು ಎನ್ನುವುದು ವಾಸ್ತವ. ಇತಿಹಾಸದಲ್ಲಿ ಸಿಂಗಾಪುರ ದ್ವೀಪವು ಹಲವು ಬಾರಿ ಅತಿಕ್ರಮಣಕ್ಕೆ ಒಳಗಾಗುತ್ತಲೇ ಬಂದಿದೆ. ಎರಡು ಬಾರಿ ಚೋಳ ರಾಜರ ದಾಳಿಗೆ ಒಳಗಾಗಿದೆ. ಕ್ರಿ.ಶ. 1025ರಲ್ಲಿ ಒಂದನೇ ರಾಜೇಂದ್ರ ಚೋಳನ ಆಡಳಿತಾವಧಿಯಲ್ಲಿ ಮೊದಲ ಆಕ್ರಮಣ ನಡೆದರೆ, ಇನ್ನೊಂದು ದಾಳಿ ನಡೆದದ್ದು ಕ್ರಿ.ಶ. 1068ರಲ್ಲಿ. ಪಹಾಂಗ್ ಮೇಲೆ ದಾಳಿ ಮಾಡಿದ್ದ ಇಂಡೋನೇಷಿಯನ್ ರಾಜ ಕೀರ್ತನಗರ ಅವರು ತೆಮಾಸೆಕ್ ಮೇಲೂ ದಾಳಿ ನಡೆಸಿದ್ದರು. ಇದು ನಡೆದದ್ದು ಹದಿಮೂರನೇ ಶತಮಾನದ ಉತ್ತರಾರ್ಧದಲ್ಲಿ. ಕ್ರಿ.ಶ. 1349ರ ಸಮಯದಲ್ಲಿ ಸುಮಾರು ಎಪ್ಪತ್ತು ಸಿಯಾಮೀಸ್ ಯುದ್ಧ ದೋಣಿಗಳು ಈ ದ್ವೀಪಕ್ಕೆ ಒಂದು ತಿಂಗಳ ಮುತ್ತಿಗೆ ಹಾಕಿದ್ದವು. ಆದರೆ ಮುಂದುವರಿಸುವುದಕ್ಕೆ ಸಾಧ್ಯವಾಗಲಿಲ್ಲ. ಈ ವಿಚಾರವನ್ನು ತಿಳಿಸಿಕೊಟ್ಟವನು ಚೀನೀ ಪ್ರಯಾಣಿಕ ವಾಂಗ್ ದಯುವಾನ್. ಹದಿನಾಲ್ಕನೇ ಶತಮಾನದಲ್ಲಿ ಬರೆಯಲ್ಪಟ್ಟ ನಾಗರಕೃತಾಗಮ ಎನ್ನುವುದು ಜಾವಾನೀಸ್ ಸಾಮ್ರಾಜ್ಯದ ಮಜಪಾಹಿತ್‌ನ ಗೆಲುವುಗಳ ವರ್ಣನೆಯನ್ನು ಒಳಗೊಂಡಿರುವ ಮಹಾಕಾವ್ಯವಾಗಿದೆ. ತೆಮಾಸಿಕ್ ಕೂಡಾ ಮಜಪಾಹಿತ್ ಸಾಮ್ರಾಜ್ಯ ಗೆದ್ದುಕೊಂಡ ಪ್ರದೇಶಗಳಲ್ಲಿ ಒಂದಾಗಿತ್ತು ಎನ್ನುವ ವಿಚಾರ ಇದರಲ್ಲಿದೆ.

ಸಿಂಗಾಪುರ ಎಂದರೆ ಸಿಂಹದ ನಗರ ಎಂದರ್ಥ. ಈ ಹೆಸರಿನ ಹಿನ್ನೆಲೆಯನ್ನು ಗಮನಿಸಿಕೊಂಡಾಗ ಹಲಬಗೆಯ ಮೂಲಗಳು ಲಭ್ಯವಾಗುತ್ತವೆ. ಚೋಳ ರಾಜನಾಗಿದ್ದ ರಾಜೇಂದ್ರ ಚೋಳ ತಾನು ಆಕ್ರಮಿಸಿದ ಈ ನಗರವನ್ನು ಸಿಂಹಪುರ ಎಂದು ಕರೆದಿರಬಹುದು. ಆ ಬಳಿಕ ಅದು ಸಿಂಗಾಪುರವಾಗಿ ಮಾರ್ಪಟ್ಟಿರಬಹುದು ಎನ್ನುವ ಊಹೆಯಿದೆ. ಬೌದ್ಧ ಸಂನ್ಯಾಸಿಗಳು ಈ ಹೆಸರನ್ನು ನೀಡಿದ್ದಾರೆ ಎಂಬ ಅಭಿಪ್ರಾಯವೂ ಇದೆ. ಮಲಯನ್ ಸಾಹಿತ್ಯ ದಾಖಲೆಗಳಲ್ಲೊಂದಾದ ಸೆಜಾರಾ ಮೆಲಾಯು ಇನ್ನೊಂದು ಬಗೆಯ ಮಾಹಿತಿಯನ್ನು ಒದಗಿಸಿಕೊಟ್ಟಿದೆ. ಈ ನಗರ ಸ್ಥಾಪನೆಗೊಂಡದ್ದು ಶ್ರೀವಿಜಯನ್ ರಾಜಕುಮಾರನಿಂದ. ಹುಲಿಯನ್ನು ನೋಡಿದ ಅವನು ಅದನ್ನು ಸಿಂಹವೆಂದು ತಪ್ಪಾಗಿ ಗ್ರಹಿಸಿ ಈ ನಗರವನ್ನು ಸಿಂಗಾಪುರ ಎಂದನಂತೆ! ಆದರೆ, ಆ ಸಮಯದಲ್ಲಿ ಸಿಂಗಾಪುರದಲ್ಲಿ ಸಿಂಹಗಳಿರಲಿಲ್ಲ ಎನ್ನುವುದು ವಾಸ್ತವ. ಪ್ರಾಣಿಸಂಗ್ರಹಾಲಯಗಳಿಗೆಂದು ಸಿಂಹಗಳನ್ನು ಕರೆತಂದದ್ದು ಆಧುನಿಕ ಕಾಲದಲ್ಲಿ. ಆದ್ದರಿಂದ ಈ ಐತಿಹ್ಯ ಅದೆಷ್ಟರಮಟ್ಟಿಗೆ ನಿಜ ಎನ್ನುವ ಸಂಶಯವೂ ಕಾಡುತ್ತದೆ. ಸಿಂಗಾಪುರದ ರಾಷ್ಟ್ರೀಯ ಲಾಂಛನವೂ ಸಹ ಸಿಂಹದ ಜೊತೆಗೆ ಸಂಬಂಧವನ್ನು ತಳುಕು ಹಾಕಿಕೊಂಡಿದೆ. ಅರ್ಧ ಸಿಂಹ ಮತ್ತು ಅರ್ಧ ಮೀನಿನ ಆಕೃತಿಯನ್ನು ಹೊಂದಿರುವ ಮೆರ್ಲಿಯನ್ ಎನ್ನುವ ಪೌರಾಣಿಕ ಜೀವಿಯು ಸಿಂಗಾಪುರದ ಲಾಂಛನವಾಗಿದೆ. ಇದರಲ್ಲಿ ಸಿಂಹವು ಸಿಂಗಾಪುರದ ಮುನ್ನೋಟದ ಸಂಕೇತವಾದರೆ, ಮೀನಿನ ಆಕೃತಿಯು ಇಲ್ಲಿನ ಸಾಂಪ್ರದಾಯಿಕ ಉದ್ಯೋಗವನ್ನು ಪ್ರತಿನಿಧಿಸುತ್ತದೆ.

ಸಿಂಗಾಪುರಕ್ಕೆ ಬ್ರಿಟೀಷರ ಪ್ರವೇಶವಾದದ್ದು ಹತ್ತೊಂಭತ್ತನೇ ಶತಮಾನದ ಆರಂಭ ಕಾಲದಲ್ಲಿ. ಕ್ರಿ.ಶ. 1819ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಸ್ಟ್ಯಾಮ್‌ಫೋರ್ಡ್ ರಾಫೆಲ್ಸ್ ಅವರು ಸೂಕ್ತವಾದ ವ್ಯಾಪಾರ ಸ್ಥಳದ ಅನ್ವೇಷಣೆ ನಡೆಸುತ್ತಾ ತಲುಪಿದ್ದು ಸಿಂಗಾಪುರ ದ್ವೀಪವನ್ನು. ಆಗ ಸಿಂಗಾಪುರದಲ್ಲಿದ್ದದ್ದು ಕೆಲವು ಚೀನೀ ತೋಟಗಾರರು ಮತ್ತು ಸ್ಥಳೀಯರು. ಅಲ್ಲಿ ಭೂಮಿಯನ್ನು ಖರೀದಿಸುವುದಕ್ಕೆ ಕಂಪನಿಗೆ ಅನುಮತಿ ನೀಡಿದವರು ಅಲ್ಲಿಯ ಅನುವಂಶಿಕ ಮುಖ್ಯಸ್ಥರಾಗಿದ್ದ ಟೆಮೆಂಗ್‌ಗಾಂಗ್ ಅವರು. ಡಚ್ಚರು ಮತ್ತು ಜೋಹೋರ್ ಸುಲ್ತಾನನ ವಿರೋಧ ವ್ಯಕ್ತವಾದರೂ ಕೂಡಾ ಈ ಬಗೆಯ ಸಂಪರ್ಕವನ್ನು ಬೆಳೆಸುವುದಕ್ಕೆ ರಾಫೆಲ್ಸ್ ಅವರು ಅಳುಕಲಿಲ್ಲ. ರಾಫೆಲ್ಸ್ ವಿರುದ್ಧ ಲಂಡನ್ ನ್ಯಾಯಾಲಯದಲ್ಲಿ ದೂರು ದಾಖಲಾಯಿತು. ಕೆಲವು ಸೂಚನೆಗಳನ್ನು ರಾಫೆಲ್ಸ್ ಅವರು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತಷ್ಟೇ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬ್ರಿಟೀಷರು ಮತ್ತು ಡಚ್ಚರ ಮಧ್ಯೆ ಮನಸ್ತಾಪಕ್ಕೆ ಎಡೆಮಾಡಿಕೊಟ್ಟಿದ್ದ ಸಿಂಗಾಪುರವು ಸಂಪೂರ್ಣವಾಗಿ ಬ್ರಿಟೀಷರ ಕೈಸೇರಿದ್ದು 1824ರಲ್ಲಿ. ಆಂಗ್ಲೋ ಡಚ್ ಒಪ್ಪಂದದ ಮೂಲಕ. ಎರಡೇ ವರ್ಷಗಳಲ್ಲಿ ಇದು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ಪಾಲಿಗೆ ಭಾರತದ ಹೊರಗಿನ ನಿವಾಸವಾಯಿತು. ಬಂಗಾಳದ ಕೈಕೆಳಗಿನ ಪ್ರಾಂತ್ಯವಾಗಿ ಅದನ್ನು ಗುರುತಿಸಲಾಯಿತು. 1832ರ ಕಾಲಕ್ಕೆ ಸಿಂಗಾಪುರವನ್ನು ಬ್ರಿಟೀಷರು ತಮ್ಮ ವಸಾಹತುಶಾಹಿತ್ವದ ರಾಜಧಾನಿಯಾಗಿ ಪರಿಗಣಿಸಿದ್ದರು. 1851ರಲ್ಲಿ ಸಿಂಗಾಪುರವನ್ನು ಭಾರತದ ಗವರ್ನರ್ ಜನರಲ್ ಅವರ ಸಂಪೂರ್ಣ ನಿಯಂತ್ರಣಕ್ಕೀಡುಮಾಡಿದ ಕಂಪೆನಿಯು ಹದಿನಾರು ವರ್ಷಗಳ ನಂತರ ಲಂಡನ್ ವಸಾಹತುಶಾಹಿಯ ಅಧೀನದಲ್ಲಿರುವ ವಸಾಹತಾಗಿಸಿಕೊಂಡಿತು.

ಸಿಂಗಾಪುರದಲ್ಲಿ ಬ್ರಿಟೀಷ್ ವಸಾಹತುಶಾಹಿಯು ಕೊನೆಗಾಣುವುದಕ್ಕೆ ಪ್ರಮುಖ ಕಾರಣವಾದದ್ದು ಎರಡನೇ ವಿಶ್ವಯುದ್ಧ. ಸಮರದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಜಪಾನೀಯರು 1942ರ ಜನವರಿಯಲ್ಲಿ ಸಿಂಗಾಪುರ ದ್ವೀಪಕ್ಕೆ ಬಂದಿಳಿದರು. ಮುಂದಿನ ತಿಂಗಳಿನಲ್ಲಿಯೇ ಜೋಹೋರ್ ಜಲಸಂಧಿಯನ್ನು ದಾಟಿದ ಜಪಾನ್ ಬ್ರಿಟೀಷರಿಂದ ಸಿಂಗಾಪುರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತು. 1942ರಲ್ಲಿ ಜಪಾನ್ ತೆಕ್ಕೆಗೆ ಬಿದ್ದ ಈ ದೇಶ ಮುಂದಿನ ಮೂರು ವರ್ಷಗಳ ಕಾಲ ಯಥಾಸ್ಥಿತಿಯಲ್ಲಿಯೇ ಮುಂದುವರಿಯಿತು. ಎರಡನೇ ಮಹಾಯುದ್ಧದ ನಂತರ ಸಿಂಗಾಪುರವು ಸಾಂವಿಧಾನಿಕವಾದ ನಡೆಯನ್ನು ಕಂಡುಕೊಂಡಿತು. 1946ರಲ್ಲಿ ಬ್ರಿಟೀಷ್ ಪ್ರಭುತ್ವದ ಬಿಗಿಹಿಡಿತವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಾ, ಪ್ರತ್ಯೇಕ ವಸಾಹತಾಗಿ ಗುರುತಿಸಿಕೊಳ್ಳತೊಡಗಿತು. ಆದರೂ ಸಿಂಗಾಪುರ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವುದಕ್ಕೆ ಪ್ರಮುಖ ಅಡಚಣೆಯೊಂದಿತ್ತು. ಚೀನೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಸ್ವಾತಂತ್ರ್ಯ ಪಡೆದ ಬಳಿಕ ಪೌರತ್ವದ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿತ್ತು. ಆದರೂ ಸ್ವಾತಂತ್ರ್ಯದೆಡೆಗಿನ ತನ್ನ ನಡಿಗೆಯನ್ನು ತೀವ್ರಗೊಳಿಸುತ್ತಲೇ ಹೋದ ಸಿಂಗಾಪುರ 1955ರಲ್ಲಿ ಸರ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡಿತು. ಈ ಹೊಣೆಗಾರಿಕೆಯಲ್ಲಿ ರಕ್ಷಣೆ ಮತ್ತು ವಿದೇಶಾಂಗ ನೀತಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸಂಗತಿಗಳು ಅಡಕವಾಗಿದ್ದವು. ಇದಾಗಿ ನಾಲ್ಕು ವರ್ಷಗಳಲ್ಲಿಯೇ ಸ್ವಯಂ ಆಡಳಿತ ವ್ಯವಸ್ಥೆಗೊಳಪಟ್ಟಿತು.

1963ರಲ್ಲಿ ಸಿಂಗಾಪುರವು ಫೆಡರೇಶನ್ ಆಫ್ ಮಲೇಷ್ಯಾವನ್ನು ಸೇರಿಕೊಂಡ ಬಳಿಕ ಆಂತರಿಕ ಸಂಘರ್ಷವನ್ನು ಕಾಣುವಂತಾಯಿತು. ಇದುವರೆಗೂ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಸಿಂಗಾಪುರ ಪ್ರಾಂತ್ಯವು ಈಗ ಮಲೇಷ್ಯಾದ ಸಾರ್ವಭೌಮತ್ವದ ವಿರುದ್ಧ ಹೋರಾಟ ನಡೆಸತೊಡಗಿತು. ಮಲೇಷ್ಯಾದಲ್ಲಿ ಆಡಳಿತಾರೂಢವಾಗಿದ್ದ ಪೀಪಲ್ಸ್ ಆ್ಯಕ್ಷನ್ ಪಾರ್ಟಿ ಎನ್ನುವ ಪಕ್ಷದ ವಿರುದ್ಧದ ಪ್ರತಿಭಟನೆಯೆಂಬಂತೆ ಸೋಷಿಯಲಿಸಮ್ ಫ್ರಂಟ್ ಸಂಘಟನೆ ರೂಪುಗೊಂಡಿತು. ಹೀಗೆ ಕೇಂದ್ರ ಮತ್ತು ಪ್ರಾಂತ್ಯಗಳ ನಡುವಿನ ರಾಜಕೀಯ ಘರ್ಷಣೆಯ ಫಲವಾಗಿ 1965ರಲ್ಲಿ ಸಿಂಗಾಪುರವು ಮಲೇಷ್ಯಾದಿಂದ ಪ್ರತ್ಯೇಕಗೊಂಡು, ಸ್ವತಂತ್ರವಾಯಿತು. ಮುಂದಿನ ವರ್ಷವೇ ಈ ಸಂಘರ್ಷ ಸಂಪೂರ್ಣವಾಗಿ ಕೊನೆಗೊಂಡಿತು. 1971ರಲ್ಲಿ ಬ್ರಿಟೀಷ್ ಕಂಪೆನಿಯು ತನ್ನ ಸೇನೆಯನ್ನು ಸಿಂಗಾಪುರದಿಂದ ಹಿಂದೆಗೆದುಕೊಂಡಿತು. ಈ ಮೂಲಕ ಸಿಂಗಾಪುರ ಎಲ್ಲಾ ಬಗೆಯ ಬಂಧನಗಳಿಂದಲೂ ಮುಕ್ತವಾಯಿತು.

ಸ್ವಾತಂತ್ರ್ಯ ಪಡೆದ ತಕ್ಷಣವೇ ಅಂತಾರಾಷ್ಟ್ರೀಯ ವ್ಯಾಪಾರದ ಕಡೆಗೆ ಒತ್ತು ನೀಡಿದ್ದು ಸಿಂಗಾಪುರದ ಚಾಣಾಕ್ಷ ನಡೆಯಾಗಿದೆ. ರಫ್ತನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಆಕ್ರಮಣಕಾರಿಯಾದ ವ್ಯಾಪಾರ ನೀತಿಗೆ ಒತ್ತು ನೀಡಲಾಯಿತು. ಹಲವು ರಾಷ್ಟ್ರಗಳ ಒಕ್ಕೂಟಗಳನ್ನು ಸ್ಥಾಪಿಸುವ ಮೂಲಕ ವಿದೇಶೀ ವ್ಯಾಪಾರವನ್ನು ವರ್ಧಿಸಲಾಯಿತು. ಸಿಂಗಾಪುರದ ಆರಂಭಿಕ ಆಡಳಿತ ವ್ಯವಸ್ಥೆಯ ಹಿತಾಸಕ್ತಿಗಳ ಬಗೆಗೆ ಕೆಲಬಗೆಯ ಅಸಮಾಧಾನ ವ್ಯಕ್ತವಾಗುತ್ತಿದ್ದರೂ ಸಹ ಹಣಕಾಸಿನ ಕ್ಷೇತ್ರದಲ್ಲಿ ನಿರೀಕ್ಷೆಯನ್ನು ಮೀರಿದ ಯಶಸ್ಸು ದೊರಕಿತು. ಉನ್ನತ ಮಟ್ಟದ ಜೀವನಶೈಲಿಯನ್ನು ಜನರು ನಡೆಸುವಂತಾಯಿತು. ಅಂತಾರಾಷ್ಟ್ರೀಯವಾಗಿ ಧನಾತ್ಮಕವಾದ ಗುರುತಿಸುವಿಕೆಯನ್ನು ದೇಶ ಪಡೆದುಕೊಂಡಿತು.

ಹಿಂದಿನ ಕಾಲದಲ್ಲಿ ವಲಸಿಗರಿಗೆ ಆಶ್ರಯವಿತ್ತ ಪ್ರದೇಶವಾದ್ದರಿಂದ ಸಿಂಗಾಪುರ ಇಂದು ಹಲವು ಜನಾಂಗಗಳನ್ನು ಹೊಂದಿದೆ; ವೈವಿಧ್ಯಮಯವಾಗಿದೆ. ಇರುವ ಜನರಲ್ಲಿ ಚೀನೀಯರೇ ಹೆಚ್ಚು. ಒಟ್ಟು ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟು ಜನರು ಚೀನಾ ಮೂಲದವರೇ ಆಗಿದ್ದಾರೆ. ಎರಡು ಮತ್ತು ಮೂರನೇ ಸ್ಥಾನಗಳಲ್ಲಿರುವವರು ಮಲಯರು ಮತ್ತು ಭಾರತೀಯರು. ಶ್ರೀಲಂಕಾ ಮತ್ತು ಪಾಕಿಸ್ತಾನದ ಜನರೂ ಇಲ್ಲಿದ್ದಾರೆ. ಇಲ್ಲಿನ ಚೀನೀಯರು ಬೇರೆ ಬೇರೆ ಪ್ರಾಂತ್ಯಗಳಿಂದ ಬಂದವರಾದ ಕಾರಣ ಅವರು ಮಾತನಾಡುವ ಉಪಭಾಷೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಚೀನೀಯರಿಗೆ ಹೋಲಿಸಿದರೆ ಮಲಯರಲ್ಲಿ ಈ ಬಗೆಯ ಭಾಷಾ ವ್ಯತ್ಯಾಸ ಇಲ್ಲ. ಆದರೂ ಜಾವಾನೀಸ್, ಬೋಯಾನೀಸ್ ಮೊದಲಾದ ಭಾಷಾ ಪ್ರಭೇದಗಳಿವೆ. ಇರುವ ಭಾರತೀಯರಲ್ಲಿ ಶೇಕಡಾ ಐವತ್ತಕ್ಕಿಂತಲೂ ಹೆಚ್ಚು ಜನರು ತಮಿಳರು. ಜೊತೆಗೆ ಮಲಯಾಳಿಗಳಿದ್ದಾರೆ; ಸಿಖ್ಖರೂ ಇದ್ದಾರೆ. ಸಿಂಗಾಪುರ್ ಡಾಲರ್ ಎನ್ನುವುದು ಸಿಂಗಾಪುರದ ಕರೆನ್ಸಿಯಾಗಿದೆ. 1000 ಸಿಂಗಾಪುರ್ ಡಾಲರ್ ನೋಟಿನ ಹಿಂಭಾಗದಲ್ಲಿ ಸಿಂಗಾಪುರದ ರಾಷ್ಟ್ರಗೀತೆಯನ್ನು ಚಿಕ್ಕ ಅಕ್ಷರಗಳಲ್ಲಿ ಬರೆಯಲಾಗಿದೆ. ಮಜುಲ್ಹಾ ಸಿಂಗಾಪುರ ಎನ್ನುವುದು ಇಲ್ಲಿಯ ರಾಷ್ಟ್ರಗೀತೆಯಾಗಿದ್ದು, ಇದರಲ್ಲಿ ಒಟ್ಟು ಹದಿನಾಲ್ಕು ಸಾಲುಗಳಿವೆ.

ಧರ್ಮಗಳ ನೆಲೆಯಿಂದಲೂ ಸಹ ಸಿಂಗಾಪುರವು ಸಮೃದ್ಧವಾಗಿದೆ. ಚೀನೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕನ್ಫ್ಯೂಷಿಯನ್, ಬೌದ್ಧಧರ್ಮ ಮತ್ತು ದಾವೋ ಸಿದ್ಧಾಂತಗಳು ಪ್ರಾಮುಖ್ಯತೆ ಗಳಿಸಿಕೊಂಡಿವೆ. ಮಲೇಷ್ಯಾ ಮತ್ತು ಭಾರತ ದೇಶಗಳ ಜನರು ಇರುವುದರಿಂದ ಇಸ್ಲಾಂ ಧರ್ಮವೂ ಇಲ್ಲಿ ಅಸ್ತಿತ್ವ ಪಡೆದುಕೊಂಡಿದೆ. ಇಸ್ಲಾಂಗಿಂತ ಪ್ರಬಲವಾಗಿರುವ ಧರ್ಮವೆಂದರೆ ಕ್ರಿಶ್ಚಿಯನ್. ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಧರ್ಮವೂ ಹೌದು. ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಯಾವುದೇ ಧರ್ಮದ ಜೊತೆಗೂ ಗುರುತಿಸಿಕೊಳ್ಳದ ನಿರೀಶ್ವರವಾದಿಗಳೂ ಇದ್ದಾರೆ.
ಸಿಂಗಾಪುರದ ಅಧಿಕೃತ ಭಾಷೆಗಳು ನಾಲ್ಕು. ಬ್ರಿಟೀಷರು ಆಳಿದ ಕಾರಣಕ್ಕೆ ಆಂಗ್ಲ ಭಾಷೆ ಮಾನ್ಯತೆಯನ್ನು ಪಡೆದುಕೊಂಡಿದ್ದರೆ, ಇರುವ ಪ್ರಮುಖ ಜನಾಂಗಗಳ ಪ್ರತಿನಿಧಿಗಳೆಂಬಂತೆ ಮ್ಯಾಂಡರಿನ್ ಚೈನೀಸ್, ಮಲಯ ಮತ್ತು ತಮಿಳು ಭಾಷೆಗಳು ಅಧಿಕೃತ ಭಾಷೆಗಳೆನಿಸಿಕೊಂಡಿವೆ. ಆಡಳಿತ, ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಇಂಗ್ಲಿಷ್ ಭಾಷೆಯ ಕಾರುಬಾರು. ಹಾಗೆಂದ ಮಾತ್ರಕ್ಕೆ ಉಳಿದ ಭಾಷೆಗಳನ್ನು ನಿರ್ಲಕ್ಷಿಸಲಾಗಿಲ್ಲ. ಶಾಲೆಗಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಮ್ಯಾಂಡರಿನ್ ಚೈನೀಸ್ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಭಾಷೆಯ ಗೌರವ ಸಂದಿರುವುದು ಮಲಯ ಭಾಷೆಗೆ. ಇಂಗ್ಲಿಷ್ ರೀತಿಯಲ್ಲಿಯೇ ಜನರ ನಡುವಿನ ಮಾತುಕತೆಗೆ ಹೆಚ್ಚಾಗಿ ಬಳಕೆಯಾಗುತ್ತಿರುವ ಭಾಷೆ ಇದಾಗಿದೆ. ಭಾರತೀಯರು ಇಂಗ್ಲಿಷ್ ಭಾಷೆಯನ್ನು ತಮ್ಮದೇ ಜಾಯಮಾನದಲ್ಲಿ ಮಾತನಾಡಿದ ಕಾರಣಕ್ಕೆ ಭಾರತೀಯ ಇಂಗ್ಲಿಷ್ ಎಂಬ ಭಾಷಾಪ್ರಭೇದವೊಂದು ರೂಪುಗೊಳ್ಳುವಂತಾಗಿದೆ. ಸಿಂಗಾಪುರದಲ್ಲಿಯೂ ಸಹ ಇಂಗ್ಲಿಷ್ ಇದೇ ಬಗೆಯ ಪರಿವರ್ತನೆಗೆ ಒಳಗಾಗಿದ್ದು, ಅದನ್ನು ಸಿಂಗ್ಲಿಷ್ ಎಂದು ಕರೆಯಲಾಗುತ್ತದೆ. ಇದು ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ ಭಾಷೆಗಳ ಮಿಶ್ರಣವಾಗಿದೆ.

ಈ ನಗರ ಸ್ಥಾಪನೆಗೊಂಡದ್ದು ಶ್ರೀವಿಜಯನ್ ರಾಜಕುಮಾರನಿಂದ. ಹುಲಿಯನ್ನು ನೋಡಿದ ಅವನು ಅದನ್ನು ಸಿಂಹವೆಂದು ತಪ್ಪಾಗಿ ಗ್ರಹಿಸಿ ಈ ನಗರವನ್ನು ಸಿಂಗಾಪುರ ಎಂದನಂತೆ! ಆದರೆ, ಆ ಸಮಯದಲ್ಲಿ ಸಿಂಗಾಪುರದಲ್ಲಿ ಸಿಂಹಗಳಿರಲಿಲ್ಲ ಎನ್ನುವುದು ವಾಸ್ತವ. ಪ್ರಾಣಿಸಂಗ್ರಹಾಲಯಗಳಿಗೆಂದು ಸಿಂಹಗಳನ್ನು ಕರೆತಂದದ್ದು ಆಧುನಿಕ ಕಾಲದಲ್ಲಿ. ಆದ್ದರಿಂದ ಈ ಐತಿಹ್ಯ ಅದೆಷ್ಟರಮಟ್ಟಿಗೆ ನಿಜ ಎನ್ನುವ ಸಂಶಯವೂ ಕಾಡುತ್ತದೆ.

ಸಿಂಗಾಪುರದ ಸಂಸ್ಕೃತಿಯು ಇತರ ದೇಶಗಳ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಚೀನಾ, ಭಾರತ, ಇಂಡೋನೇಷ್ಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಸಾಂಸ್ಕೃತಿಕ ಚಟುವಟಿಕೆಗಳು ಸಿಂಗಾಪುರವನ್ನು ಗಾಢವಾಗಿ ಪ್ರಭಾವಿಸಿವೆ. ಚೀನಾ ಮತ್ತು ಭಾರತೀಯ ಮೂಲದ ಚಿತ್ರಕಲೆ, ನಾಟಕ ಮತ್ತು ಸಂಗೀತಗಳನ್ನು ಅಧ್ಯಯನ ಮಾಡುವ, ಅವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಆಸಕ್ತಿಯನ್ನು ಸಿಂಗಾಪುರದಲ್ಲಿ ಕಾಣಬಹುದು. ಪಾಶ್ಚಾತ್ಯ ಸಂಗೀತ ಶೈಲಿಯ ಪ್ರೇರಣೆಗೊಳಗಾದ ಮಲಯನ್ ಸಂಗೀತದ ಕುರಿತ ಆಕರ್ಷಣೆ ಇಲ್ಲಿ ಸರ್ವೇಸಾಮಾನ್ಯ. ಹಿಂದಿ ಮತ್ತು ತಮಿಳು ಚಲನಚಿತ್ರ ಗೀತೆಗಳು ಸಿಂಗಾಪುರದಲ್ಲಿ ಪ್ರಸಿದ್ಧಿ ಪಡೆದಿವೆ. ಇಲ್ಲಿ ಪತ್ರಿಕೆಗಳು, ರೇಡಿಯೋ ಮತ್ತು ದೂರದರ್ಶನಗಳ ಮೇಲೆ ಸರ್ಕಾರದ ನಿಯಂತ್ರಣವಿದೆ. ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರವು ಅನಪೇಕ್ಷಿತ ಸುದ್ದಿಗಳ ಮೇಲೆ ನಿರ್ಬಂಧ ಹೇರುತ್ತದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು ಚಲನಚಿತ್ರ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ನಿಲ್ದಾಣದ ನಾಲ್ಕೂ ಟರ್ಮಿನಲ್‌ಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಉಚಿತ ಚಲನಚಿತ್ರ ಪ್ರದರ್ಶನ ಇರುತ್ತದೆ.

ಆಗ್ನೇಯ ಏಷ್ಯಾದ ಅತ್ಯಂತ ಮುಂದುವರಿದ ಆರ್ಥಿಕತೆ ಎಂಬ ಮನ್ನಣೆಗೆ ಪಾತ್ರವಾಗಿರುವ ಸಿಂಗಾಪುರವು ವೇಗವಾಗಿ ಕೈಗಾರಿಕೀಕರಣ ಪ್ರಕ್ರಿಯೆಗೆ ಒಳಗಾಗುತ್ತಲೇ ಬಂದಿದೆ. ಏಷ್ಯಾದ ಬಹುತೇಕ ರಾಷ್ಟ್ರಗಳು ಕೃಷಿಗೆ ಪ್ರಾಮುಖ್ಯತೆ ಕೊಟ್ಟರೆ, ಸಿಂಗಾಪುರ ಈ ವಿಚಾರದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಒಟ್ಟಾರೆ ಭೂಪ್ರದೇಶದಲ್ಲಿ ಕಡಿಮೆ ಭಾಗವನ್ನು ಕೃಷಿಗೆಂದು ಮೀಸಲಿಡಲಾಗಿದೆ. ಇದರಿಂದಾಗಿ ಕೃಷಿಯ ಉತ್ಪಾದನೆ ಕಡಿಮೆ ಮತ್ತು ಅದರಿಂದಾಗಿ ಆದಾಯದ ಪ್ರಮಾಣವೂ ಕಡಿಮೆಯಿದೆ. ನೈಸರ್ಗಿಕ ಕಾಡುಗಳೆಲ್ಲವೂ ನಶಿಸಿಹೋಗಿವೆ. ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜನರು ಕೋಳಿಗಳನ್ನು ಬೆಳೆಸುವುದು ತಮ್ಮ ತಮ್ಮ ಬಳಕೆಗಾಗಿ. ಮೀನುಗಾರಿಕೆ ಒಂದು ಉದ್ಯಮವಾಗಿದ್ದರೂ ಸಹ ಇಡೀ ದೇಶದ ಜನರ ಬೇಡಿಕೆಯನ್ನು ಪೂರೈಸುವಷ್ಟಿಲ್ಲ. ಕಡಲಾಚೆಯಿಂದ ತಾಜಾ ಮೀನುಗಳನ್ನು ತರಿಸಿಕೊಳ್ಳಲಾಗುತ್ತದೆ. ಆರ್ಥಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದರೂ ಸಹ ಸಾಮಾಜಿಕ ವಿಚಾರಗಳನ್ನು ಕಡೆಗಣಿಸದ ದೇಶ ಇದಾಗಿದೆ. ಶಿ

ಕ್ಷಣ ಮತ್ತು ಆರೋಗ್ಯ ಇಂದಿಗೂ ಸಿಂಗಾಪುರದ ಆದ್ಯತೆಯ ವಿಷಯಗಳಾಗಿವೆ. ಉಳಿದ ದೇಶಗಳಲ್ಲಿರುವಂತೆ ಸಿಂಗಾಪುರದಲ್ಲಿಯೂ ಕಾರ್ಮಿಕರ ಕೊರತೆಯಿದೆ. ವೇತನ ಹೆಚ್ಚುತ್ತಲೇ ಇದೆ. ಆದರೆ ಸಿಂಗಾಪುರವು ನೂತನ ತಂತ್ರಜ್ಞಾನದ ಬಳಕೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್ ಉಪಕರಣಗಳು ಅಧಿಕ ಸಂಖ್ಯೆಯಲ್ಲಿ ಉತ್ಪಾದನೆಗೊಳ್ಳುತ್ತಿವೆ. ಆರ್ಥಿಕ ಅಭಿವೃದ್ಧಿ ಸಾಧಿತವಾಗಬೇಕಾದರೆ ಸರ್ಕಾರದ ಹಸ್ತಕ್ಷೇಪ ಕಡಿಮೆಯಾಗಬೇಕು ಎನ್ನುವುದನ್ನು ಮನಗಂಡ ಇಲ್ಲಿನ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಖಾಸಗೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ವಿದೇಶೀ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ಉದಾರೀಕರಣ ನೀತಿಯನ್ನು ಜಾರಿಗೆ ತರಲಾಗಿದೆ. ಪ್ರವಾಸೋದ್ಯಮದ ಮೂಲಕ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸುವುದು ಸಿಂಗಾಪುರದ ಹಿತಾಸಕ್ತಿಯ ವಿಷಯಗಳಲ್ಲಿ ಪ್ರಮುಖವಾಗಿದೆ. ಜಪಾನ್, ಇಂಡೋನೇಷ್ಯಾ, ಮಲೇಷ್ಯಾ, ಚೀನಾ ಮತ್ತು ಅಮೇರಿಕಾದ ಜೊತೆಗೆ ಸಿಂಗಾಪುರವು ಉತ್ತಮ ವ್ಯಾಪಾರ ಸಂಪರ್ಕ ಇಟ್ಟುಕೊಂಡಿದೆ. ವಿಶ್ವ ಬ್ಯಾಂಕ್ ವ್ಯಾಪಾರ ಪಟ್ಟಿಯನ್ನು ಪ್ರಕಟಿಸಿದೆ. ಇದರ ಪ್ರಕಾರ, ವ್ಯಾಪಾರ ಮಾಡುವುದಕ್ಕೆ ಸುಲಭವಾಗಿರುವ ಸ್ಥಳಗಳಲ್ಲಿ ಜಾಗತಿಕವಾಗಿ ಎರಡನೆಯ ಸ್ಥಾನದಲ್ಲಿದೆ.

ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯ ಉದ್ದೇಶವನ್ನೂ ಇರಿಸಿಕೊಳ್ಳಲಾಗಿದೆ. ಸಿಂಗಾಪುರದಲ್ಲಿ ನವೆಂಬರ್ ಏಳನ್ನು ರಾಷ್ಟ್ರೀಯ ಗಿಡ ನೆಡುವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಮನುಷ್ಯರವರೆಗೆ ಎಲ್ಲರೂ ಗಿಡಗಳನ್ನು ನೆಡುತ್ತಾರೆ. ಕೆಲವರು ತಮ್ಮ ಹುಟ್ಟುಹಬ್ಬ ಅಥವಾ ಮದುವೆಯ ನೆನಪಿಗಾಗಿಯೂ ಗಿಡಗಳನ್ನು ನೆಡುವ ಸಂಪ್ರದಾಯ ಸಿಂಗಾಪುರದಲ್ಲಿದೆ. ಜನರು ಕಾರುಗಳನ್ನು ಬಳಸುವುದಕ್ಕೆ ಸಿಂಗಾಪುರದಲ್ಲಿ ಸರ್ಕಾರದ ಪ್ರೋತ್ಸಾಹವಿಲ್ಲ. ಇಲ್ಲಿ ಕಾರು ಮಾಲೀಕರು ತಮ್ಮ ಕಾರುಗಳನ್ನು ಪ್ರಮಾಣೀಕರಿಸಬೇಕಾದರೆ ಕಾರಿನ ಬೆಲೆಯ ಒಂದೂವರೆ ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಬೇಕು.

1990ರ ದಶಕದಲ್ಲಿ ಕಾಣಿಸಿಕೊಂಡ ಆರ್ಥಿಕ ಬಿಕ್ಕಟ್ಟು ಏಷ್ಯಾದ ಹಲವು ರಾಷ್ಟ್ರಗಳನ್ನು ಬಾಧಿಸಿದಂತೆಯೇ ಸಿಂಗಾಪುರವನ್ನೂ ತೊಂದರೆಗೀಡುಮಾಡಿದೆ. ಆದರೆ ಅಂತಹ ಆರ್ಥಿಕ ಸಂಕಷ್ಟದ ಸನ್ನಿವೇಶವನ್ನು ವಿವೇಚನಾತ್ಮಕವಾಗಿ ನಿರ್ವಹಿಸಿದ್ದರಿಂದಾಗಿ ಉತ್ತಮ ಆರ್ಥಿಕ ವ್ಯವಸ್ಥೆಯನ್ನೇ ಹೊಂದುವಂತಾಗಿದೆ. ಇಪ್ಪತ್ತೊಂದನೇ ಶತಮಾನದ ಆರಂಭದಿಂದ ಹಣಕಾಸಿನ ಸ್ಥಿತಿ ಏರುಗತಿಯಲ್ಲಿಯೇ ಇದೆ. ಸಿಂಗಾಪುರದ ಆಡಳಿತ ವ್ಯವಸ್ಥೆಯೊಳಗಡೆ ಇಂದಿಗೂ ಹಲವಾರು ಸಮಸ್ಯೆಗಳಿವೆ. ಆದರೆ ಅದು ಈ ಬಗೆಯ ಬಿಕ್ಕಟ್ಟುಗಳಿಂದ ಪಾರಾಗುವ ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಲೇ ಇದೆ. ಆಂತರಿಕ ವ್ಯವಸ್ಥೆಯನ್ನು ಸಮರ್ಥವಾಗಿ ಇರಿಸಿಕೊಳ್ಳುವ ಜೊತೆಗೆ ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದುವುದರೆಡೆಗೆ ಆದ್ಯತೆ ನೀಡಿದೆ. ಹಲವು ಭಿನ್ನಾಭಿಪ್ರಾಯಗಳ ಹೊರತಾಗಿಯೂ ಮಲೇಷ್ಯಾ, ಇಂಡೋನೇಷ್ಯಾ, ಚೀನಾ ಮತ್ತು ಏಷಿಯಾನ್ ಒಕ್ಕೂಟದ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ವರ್ಧಿಸಿಕೊಳ್ಳುವುದೇ ಸಿಂಗಾಪುರದ ಇಂದಿನ ನಡೆಯಾಗಿ ಕಂಡುಬರುತ್ತದೆ.

ಸಿಂಗಾಪುರ ಶಿಸ್ತಿನ ದೇಶ ಎನ್ನುವುದನ್ನು ಸಮರ್ಥಿಸಬಲ್ಲಂತಹ ಅನೇಕ ವಿಚಾರಗಳಿವೆ. ಅತ್ಯಂತ ಸಣ್ಣ ಸಂಗತಿಗಳನ್ನೂ ನಿಯಮಗಳಿಗೆ ಒಳಪಡಿಸುವುದು ಸಿಂಗಾಪುರದ ಮೂಲಭೂತ ಗುಣ. ಇದಕ್ಕೆ ನಿದರ್ಶನವಾಗಿ ಕೆಲವು ಅಂಶಗಳನ್ನು ಗಮನಿಸಿಕೊಳ್ಳಬಹುದು. ಚ್ಯೂಯಿಂಗ್ ಗಮ್ ಅನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಷ್ಟ್ರ ಸಿಂಗಾಪುರ. ವೈದ್ಯರಿಂದ ಒಪ್ಪಿಗೆ ಪಡೆದವರು ಮಾತ್ರವೇ ಚ್ಯೂಯಿಂಗ್ ಗಮ್ ಅನ್ನು ಅಗಿಯಬಹುದಾಗಿದೆ. ಸಿಂಗಾಪುರದಲ್ಲಿ ಹೆಚ್ಚು ಎತ್ತರದ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಕಟ್ಟಡದ ಎತ್ತರ 280 ಮೀಟರ್ ದಾಟುವಂತಿಲ್ಲ ಎಂಬ ಕಟ್ಟುನಿಟ್ಟಾದ ನಿಯಮ ಇದೆ. ಇದರ ಹೊರತಾಗಿಯೂ ತಂಜಾಂಗ್ ಪಗರ್ ಸೆಂಟರ್ ಹೆಸರಿನ ಕಟ್ಟಡವು 290 ಮೀಟರ್ ಎತ್ತರವಿದೆ. ಎತ್ತರದ ನಿರ್ಬಂಧವನ್ನು ಮೀರಿ ನಿರ್ಮಾಣಗೊಳ್ಳುವುದಕ್ಕೆ ವಿಶೇಷ ಅನುಮತಿಯನ್ನು ಪಡೆದುಕೊಂಡ ಕಟ್ಟಡ ಇದೊಂದೇ.

1970ರ ದಶಕದಲ್ಲಿ ಪ್ರಪಂಚದಾದ್ಯಂತ ಹಿಪ್ಪಿ ಸಂಸ್ಕೃತಿ ಎನ್ನುವುದು ಫ್ಯಾಶನ್‌ನ ರೂಪದಲ್ಲಿ ಕಾಣಿಸಿಕೊಂಡಿತ್ತು. ಪುರುಷರೂ ಸಹ ಮಹಿಳೆಯರಂತೆ ತಲೆಗೂದಲನ್ನು ಉದ್ದಕ್ಕೆ ಬೆಳೆಸುತ್ತಿದ್ದರು. ಈ ಸಂಸ್ಕೃತಿಗೆ ಬೆದರಿದ ಸಿಂಗಾಪುರ ಸರ್ಕಾರವು ಪುರುಷರು ಉದ್ದ ಕೂದಲನ್ನು ಬಿಡುವಂತಿಲ್ಲ ಎಂಬ ನಿಯಮ ತಂದಿತ್ತು. ಶೌಚಾಲಯಗಳನ್ನು ಬಳಸಿದ ನಂತರ ಫ್ಲಶ್ ಮಾಡುವುದು ಜಗತ್ತಿನಾದ್ಯಂತ ಕಂಡುಬರುವ ಸಾಮಾನ್ಯ ಸಂಗತಿಯಾಗಿದೆ. ಆದರೆ ಸಿಂಗಾಪುರದಲ್ಲಿ ಇದಕ್ಕೆ ತದ್ವಿರುದ್ಧವಾದ ನಿಯಮವಿದೆ. ಸಾರ್ವಜನಿಕ ಶೌಚಾಲಯವನ್ನು ಬಳಸಿದ ನಂತರ ಅದನ್ನು ಫ್ಲಶ್ ಮಾಡುವಂತಿಲ್ಲ. ಒಂದುವೇಳೆ ಹಾಗೇನಾದರೂ ಮಾಡಿದರೆ 150 ಸಿಂಗಾಪುರ್ ಡಾಲರನ್ನು ದಂಡವಾಗಿ ಪಾವತಿಸಬೇಕಾಗುತ್ತದೆ. ಹೈಸ್ಕೂಲ್ ಮುಗಿಸಿದವರು ಎರಡು ವರ್ಷಗಳ ಕಾಲ ಸೈನಿಕರಾಗಿ ಸೇವೆ ಸಲ್ಲಿಸಬೇಕೆಂಬ ಕಡ್ಡಾಯ ನಿಯಮ ಸಿಂಗಾಪುರದಲ್ಲಿದೆ. ಕಸ ಹಾಕುವುದು ಸಿಂಗಾಪುರದಲ್ಲಿ ದೊಡ್ಡ ಅಪರಾಧವೆನಿಸಿಕೊಂಡಿದೆ. ಸಣ್ಣ ಕಸವನ್ನು ಎಸೆದರೂ ಸಹ 300 ಸಿಂಗಾಪುರ್ ಡಾಲರ್ ದಂಡ ಕಟ್ಟಬೇಕು. ದೊಡ್ಡ ಕಸವನ್ನು ಎಸೆದರೆ ಕಸ ಎಸೆದವರಿಂದಲೇ ಅದನ್ನು ಎತ್ತಿಸಲಾಗುತ್ತದೆ. ಹೀಗೆ ಕಸವನ್ನು ಎತ್ತುವವರು ಹಸುರು ಬಣ್ಣದ ಬಟ್ಟೆಯನ್ನೇ ಧರಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಕಸ ಎಸೆದವರು ಯಾರು ಎನ್ನುವುದು ಎಲ್ಲರಿಗೂ ತಿಳಿಯುವುದರಿಂದ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.

ಸರ್ಕಾರದ ಕುರಿತು ಸಾರ್ವಜನಿಕ ಸ್ಥಳದಲ್ಲಿ ಟೀಕಿಸಿದರೆ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಯಿರುತ್ತದೆ. ಬ್ರಿಟೀಷರ ವಿರುದ್ಧ ಸಿಂಗಾಪುರದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾನಂತರ ಅದು ಬೆಳವಣಿಗೆ ಸಾಧಿಸಿದ ರೀತಿ, ವರ್ತಮಾನ ಕಾಲಘಟ್ಟದಲ್ಲಿ ಅದು ಅಳವಡಿಸಿಕೊಂಡಿರುವ ಕಾನೂನು ಕಾಯಿದೆಗಳು ಇವನ್ನೆಲ್ಲಾ ಕಂಡಾಗ ಸಿಂಗಾಪುರ ಎನ್ನುವುದು ಶಿಸ್ತಿನ ದೇಶ ಎನ್ನುವುದು ಮನದಟ್ಟಾಗುತ್ತದೆ.