ಸುತ್ತ ಎತ್ತ ನೋಡಿದರೂ ರಾಕ್ಷಸಾಕಾರದ ಗುಡ್ಡಗಳು, ತುಂಬಿ ಹರಿಯುತ್ತಿದ್ದ ನದಿಗಳು. ಅಲ್ಲಿ ನಮ್ಮಂತೆ ಗುಂಪು ಗುಂಪು ಮನೆಗಳಾಗಲಿ ಹಳ್ಳಿಗಳಾಗಲಿ ಇಲ್ಲ. ಗುಡ್ಡಗಳಲ್ಲಿಯೇ ಹಳ್ಳಿಗಳು. ಅರ್ಧ ಕಿಲೋಮೀಟರ್ ಒಂದು, ಕಿಲೋಮೀಟರ್ ಅಂತರದಲ್ಲಿ ಒಂದೊಂದು ಮನೆಗಳು. ವಾಹನಗಳಿಗಿಂತ ಕುದುರೆಗಳೆ ಸಂಚಾರಕ್ಕೆ ಆಸರೆಗಳು. ನಮ್ಮ ತಂಡ ಮೊದಲೆ ತಯಾರಿಸಿ ಇಟ್ಟ ಅಡುಗೆ ಸಾಮಗ್ರಿಗಳ, ಬಟ್ಟೆ, ಹಾಸಿಗೆ ಹೊದಿಕೆಗಳ ಕಿಟ್ಟನ್ನು ಪ್ರತಿ ಮನೆಗೂ ತಲುಪಿಸಿ ಅವರಿಗೊಂದಿಷ್ಟು ಸಾಂತ್ವಾನ ಹೇಳಿ ಬರುತ್ತಿತ್ತು. ಶಾಲೆಗೆ, ದುಡಿಯಲು, ಕೊಂಡಕೊಳ್ಳಲು ಹೊರಗೆ ಹೋದವರು ಮರಳಿ ಹೆಣವಾಗಿ ಸಿಗುತ್ತಿದ್ದರು. ಇಲ್ಲವೇ ಪತ್ತೆ ಸಿಗದ ಹಾಗೆ ಕಾಣೆಯಾಗಿರುತ್ತಿದ್ದರು.
ಇಸ್ಮಾಯಿಲ್ ತಳಕಲ್ ಬರೆಯುವ ‘ತಳಕಲ್ ಡೈರಿ’ಯಲ್ಲಿ ಹೊಸ ಬರಹ ನಿಮ್ಮ ಓದಿಗೆ
ಉತ್ತರಖಂಡದಲ್ಲಿ ಆಗಾಗ ಮೇಘಸ್ಫೋಟ ಉಂಟಾಗಿ ಜೋರು ಮಳೆ ಸುರಿದು ಅಲ್ಲಿಯ ನದಿಗಳೆಲ್ಲವೂ ತುಂಬಿ ಹರಿಯುವ ದೃಶ್ಯಗಳನ್ನು ನೋಡಿ, ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಬಯಲು ಪ್ರದೇಶದಲ್ಲಿ ಹುಟ್ಟಿ ಬೆಳೆದು ಬಿಸಿಲನ್ನೆ ಕುಡಿದು ಉಂಡು ಬದುಕುವ ನಮ್ಮಂತವರಿಗೆ ಈ ರೀತಿಯ ಹಲವು ದಿನಗಳವರೆಗೆ ಮಳೆ ಹಿಡಿಯುವುದೆಂದರೆ ಬಲು ಅಚ್ಚರಿ. ನಮ್ಮ ಕಡೆ ಮೂರ್ನಾಲ್ಕು ದಿನ ಮಳೆಯಾಗತೊಡಗಿದರೆ ‘ನಮ್ಮೂರು ಮಲ್ನಾಡಾಗೈತಿ’ ಎಂದು ಉದ್ಘಾರ ತೆಗೆಯುತ್ತೇವೆಂದರೆ ನಮ್ಮ ಬದುಕಿನಲ್ಲಿ ಅದರ ಪಾತ್ರದ ಸ್ಪಷ್ಟತೆ ಅರ್ಥವಾಗುತ್ತದೆ.
ಕಡಿಮೆ ಮಳೆಯಾದರೆ ಸಾಕಾಗುವುದಿಲ್ಲ, ಹೆಚ್ಚಾದರೆ ಏನಾದರೊಂದು ಅನಾಹುತ ಮಾಡಿಬಿಟ್ಟಿರುತ್ತದೆ ಎಂದು ಎರಡ್ಮೂರು ವರ್ಷಗಳಲ್ಲಿ ಅನುಭವಕ್ಕೆ ಬಂದಿದೆ. ಆದರೆ ಉತ್ತರಖಂಡದಂತಹ ಯಾವಾಗಲೂ ಮೇಘಸ್ಪೋಟ ಉಂಟಾಗಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದು ನದಿಗಳೆಲ್ಲವೂ ಅಗತ್ಯಕ್ಕಿಂತ ತುಂಬಿ ಹರಿಯುವ ಪ್ರದೇಶದ ಜನ ಹೇಗೆ ಬದುಕುತ್ತಿರಬಹುದೆಂದು ಕುತೂಹಲ ಇದ್ದೆ ಇರುತ್ತದೆ. ಹಲವು ಬಾರಿ ಮನೆ ಮಠಗಳನ್ನು ಕಳೆದುಕೊಂಡ ಅಲ್ಲಿಯ ಜನ ಬಹಳಷ್ಟು ತೊಂದರೆ ಅನುಭವಿಸುತ್ತಿರುವುದನ್ನು ನೋಡುತ್ತಿರುತ್ತೇವೆ.
ಕೆಲವು ವರ್ಷಗಳ ಹಿಂದೆ ಹೀಗೆಯೇ ಮಳೆಯಿಂದಾಗಿ ಉತ್ತರಖಂಡದ ಜನ ಭಾರಿ ತೊಂದರೆ ಅನುಭವಿಸುಂತಾಗಿತ್ತು. ನೂರಾರು ಮಂದಿ ಕಾಣೆಯಾಗಿದ್ದರೆ ಹಲವರು ಆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸಾವಿರಾರು ಜನ ನಿರಾಶ್ರಿತರಾಗಿ ಊಟಕ್ಕೂ ಗತಿಯಿಲ್ಲದೆ ಪರದಾಡುವಂತಾಗಿತ್ತು. ಆಗ ನಾನು ಕೆಲಸ ಮಾಡುತ್ತಿದ್ದ ಎನ್‌ಜಿಒ ಒಂದರ ಅಧಿಕಾರಿ ನನಗೆ ಮತ್ತು ನನ್ನ ಸಹೋದ್ಯೋಗಿ ಮಿತ್ರರಿಗೆ ಕರೆದು ‘ಉತ್ತರಖಂಡದ ಸಂಕಷ್ಟಕ್ಕೊಳಗಾದ ಜನರಿಗೆ ಸಹಾಯ ಮಾಡಿ ಬರುವ, ಅವರಿಗೆ ಅನ್ನ ಬಟ್ಟೆ ಇತರ ಅಗತ್ಯ ಸಾಮಗ್ರಿಗಳು ಹಲವು ದಾನಿಗಳು ನೀಡಿದ್ದಾರೆ. ನಾವು ಹೋಗಿ ಅವುಗಳನ್ನು ವಿತರಿಸಿ ಬರುವುದು’ ಎಂದು ಹೇಳಿದಾಗ ನಾನು ಒಪ್ಪಿಕೊಂಡೆ. ಉತ್ತರಖಂಡವೆಂಬ ನಿಸರ್ಗದ ಅಚ್ಚರಿಯನ್ನು ಸಾವು ನೋವುಗಳು ಬಾಧಿಸತೊಡಗಿದ್ದು ಮನಸ್ಸಿಗೆ ಒಂಥರ ಬೇಸರವುಂಟು ಮಾಡಿದ್ದರಿಂದ ನನಗೆ ಆದಷ್ಟು ಬೇಗ ಅಲ್ಲಿಗೆ ಹೋಗಿ ಅಲ್ಲಿಯ ಜನರೊಂದಿಗೆ ಬೆರೆಯಬೇಕೆನ್ನುವ ಹಪಾಹಪಿ ಹೆಚ್ಚಾಗಿತ್ತು.
ನಮ್ಮ ಉತ್ತರ ಕರ್ನಾಟಕದ ಹಾಗೆ ಬಯಲು ಪ್ರದೇಶವಿರುತ್ತದೆ ಎಂದು ಹೋದವನಿಗೆ ಎದುರಾಗಿದ್ದು ಬರಿ ಗುಡ್ಡಗಾಡುಗಳಿರುವ ಪ್ರದೇಶ. ಹುಬ್ಬಳ್ಳಿಯಿಂದ ದೆಹಲಿಗೆ ಹೋಗಿ ಅಲ್ಲಿಂದ ಡೆಹ್ರಾಡೂನಿಗೆ ಹೋಗುವವರೆಗೂ ಏನೂ ತೊಂದರೆಯಾಗಲಿಲ್ಲ. ಆದರೆ ಡೆಹ್ರಾಡೂನಿನಿಂದ ನಿರಾಶ್ರಿತರ ಪ್ರದೇಶಗಳ ಕಡೆಗೆ ಹೋದ ಹಾಗೆಲ್ಲ ನಾವೆಲ್ಲ ಗುಡ್ಡಗಳಲ್ಲಿ ಗೆರೆ ಎಳೆದಂತಿದ್ದ ರಸ್ತೆಗಳಲ್ಲಿ ಸಾಗಬೇಕೆಂದು ತಿಳಿಯಿತು. ಮೊದಲೆ ನನಗೆ ಈ ಘಟ್ಟದ ರಸ್ತೆಗಳು, ಗುಡ್ಡದ ರಸ್ತೆಗಳೆಂದರೆ ಆಗಿಬರುತ್ತಿರಲಿಲ್ಲ. ಅಲ್ಲಿ ಕ್ಷಣ ಕ್ಷಣಕ್ಕೆ ಬರುವ ತಿರುವುಗಳು ನನ್ನ ತಲೆಯನ್ನೂ ಗರ ಗರ ತಿರುಗಿಸಿ ನನ್ನ ಆರೋಗ್ಯ ಹದಗೆಡುವ ಹಾಗೆ ಮಾಡಿಬಿಡುತ್ತಿದ್ದವು. ಅಲ್ಲಿಯ ಗುಡ್ಡಗಳಲ್ಲಿಯ ಕಡಿದಾದ ರಸ್ತೆಗಳು, ಎದುರಿಗೆ ಒಂದು ವಾಹನ ಬಂದರೆ ಬಹಳ ಎಚ್ಚರಿಕೆಯಿಂದ ಮತ್ತು ತುಂಬಾ ಕಷ್ಟಪಟ್ಟು ಜಾಗ ಮಾಡಿಕೊಟ್ಟು ಹೋಗಬೇಕಾಗಿದ್ದು ನೋಡಿ ತುಂಬಾ ಭಯವಾಗುತ್ತಿತ್ತು. ನೂರು ಅಡಿ ಪ್ರಪಾತಕ್ಕೆ ಬಿದ್ದ ಬಸ್ಸು, ಇನ್ನೂರು ಅಡಿ ಹಳ್ಳಕ್ಕೆ ಬಿದ್ದ ವಾಹನದಲ್ಲಿದ್ದ ಅಷ್ಟೂ ಜನ ಮೃತ್ಯು ಎಂದು ಆಗಾಗ ಸುದ್ದಿಪತ್ರಿಕೆಯಲ್ಲಿ ಓದಿದ್ದು ನೆನಪಾಗಿ ಮತ್ತೊಂದಿಷ್ಟು ಆತಂಕವಾಗುತ್ತಿತ್ತು. ನಮ್ಮ ಕಡೆಗಾದರೆ ‘ಮುಂದೆ ವಾಟರ್‍ಫಾಲ್ಸ್ ಇದೆ’ ಎಂಬ ನಾಮ ಫಲಕಗಳನ್ನು ಕಾಣುತ್ತೇವೆ. ಆದರೆ ಅಲ್ಲಿ ‘ರಾಕ್‌ಫಾಲ್ಸ್ ಇದೆ ಎಚ್ಚರಿಕೆ’ ಎನ್ನುವ ಫಲಕಗಳನ್ನು ಕಂಡು ಅಚ್ಚರಿಯಾಗುತ್ತಿತ್ತು. ಯಾರಿಗೂ ಮುನ್ಸೂಚನೆ ನೀಡದೆ ಯಾವುದೋ ಒಂದು ದೊಡ್ಡ ಬಂಡೆಗಲ್ಲು ದೊಪ್ಪನೆ ರಸ್ತೆಗೆ ಬಿದ್ದುಬಿಡುತ್ತಿತ್ತು. ಅದು ಬೀಳುವಾಗ ವಾಹನಗಳಿಲ್ಲದಿದ್ದರೆ ಬಚಾವು. ಇಲ್ಲದಿದ್ದರೆ ನಮ್ಮ ಕತೆ ಅಷ್ಟೆ. ಒಂದು ವೇಳೆ ಗುಡ್ಡ ಕತ್ತರಿಸಿಕೊಂಡು ಅದರ ಮಣ್ಣೆಲ್ಲ ರಾಶಿ ರಾಶಿಯಾಗಿ ರಸ್ತೆಯಲ್ಲಿ ಬಿದ್ದುಬಿಟ್ಟರೆ ಮುಗೀತು ಅರ್ಧ ದಿನವಾದರೂ ಸರಿ ಎರಡು ದಿನವಾದರೂ ಸರಿ ಅದನ್ನು ತೆಗೆದು ಹಾಕುವವರೆಗೂ ಆ ಬದಿಯ ವಾಹನಗಳೆಲ್ಲವೂ ಅಲ್ಲಿಯೇ ಈ ಬದಿಯ ವಾಹನಗಳು ಇಲ್ಲಿಯೇ. ಆದರೆ ಅಣ್ಣ ಅಕ್ಕಳನ್ನೋ, ತಮ್ಮ ತಂಗಿಯನ್ನೋ, ಹೆತ್ತವರನ್ನೋ ಅಥವಾ ಇಡಿ ಕುಟುಂಬವನ್ನೋ ಕಳೆದುಕೊಂಡವರ ದುಃಖದ ಮುಂದೆ ಇವು ಯಾವೂ ನಮಗೆ ದೊಡ್ಡವು ಎನಿಸುತ್ತಿರಲಿಲ್ಲ.
ಸುತ್ತ ಎತ್ತ ನೋಡಿದರೂ ರಾಕ್ಷಸಾಕಾರದ ಗುಡ್ಡಗಳು, ತುಂಬಿ ಹರಿಯುತ್ತಿದ್ದ ನದಿಗಳು. ಅಲ್ಲಿ ನಮ್ಮಂತೆ ಗುಂಪು ಗುಂಪು ಮನೆಗಳಾಗಲಿ ಹಳ್ಳಿಗಳಾಗಲಿ ಇಲ್ಲ. ಗುಡ್ಡಗಳಲ್ಲಿಯೇ ಹಳ್ಳಿಗಳು. ಅರ್ಧ ಕಿಲೋಮೀಟರ್ ಒಂದು, ಕಿಲೋಮೀಟರ್ ಅಂತರದಲ್ಲಿ ಒಂದೊಂದು ಮನೆಗಳು. ವಾಹನಗಳಿಗಿಂತ ಕುದುರೆಗಳೆ ಸಂಚಾರಕ್ಕೆ ಆಸರೆಗಳು. ನಮ್ಮ ತಂಡ ಮೊದಲೆ ತಯಾರಿಸಿ ಇಟ್ಟ ಅಡುಗೆ ಸಾಮಗ್ರಿಗಳ, ಬಟ್ಟೆ, ಹಾಸಿಗೆ ಹೊದಿಕೆಗಳ ಕಿಟ್ಟನ್ನು ಪ್ರತಿ ಮನೆಗೂ ತಲುಪಿಸಿ ಅವರಿಗೊಂದಿಷ್ಟು ಸಾಂತ್ವಾನ ಹೇಳಿ ಬರುತ್ತಿತ್ತು. ಶಾಲೆಗೆ, ದುಡಿಯಲು, ಕೊಂಡಕೊಳ್ಳಲು ಹೊರಗೆ ಹೋದವರು ಮರಳಿ ಹೆಣವಾಗಿ ಸಿಗುತ್ತಿದ್ದರು. ಇಲ್ಲವೇ ಪತ್ತೆ ಸಿಗದ ಹಾಗೆ ಕಾಣೆಯಾಗಿರುತ್ತಿದ್ದರು. ಹೆಣ ಸಿಕ್ಕ ಕುಟುಂಬದವರು ಮಣ್ಣು ಮಾಡಿ ದೀಪ ಹಚ್ಚಿ ಅಳುತ್ತಿದ್ದರೆ ಕಾಣೆಯಾದವರ ಕುಟುಂಬದವರು ಮರಳಿ ಬರುವರೆಂಬ ಭರವಸೆಯ ಕಣ್ಣ ಹೊಳಪಿನಲ್ಲಿ ಕಾಯುತ್ತ ನಿಂತಿರುತ್ತಿದ್ದರು. ಅವರೆಷ್ಟು ಭಾವನಾತ್ಮಕರೆಂದರೆ ಅಪ್ಪಿ ತಪ್ಪಿ ಅವರಿಗೇನಾದರೂ ಸಿಹಿ ತಿನಿಸನ್ನು ಕೊಟ್ಟರೆ ಅವರ ದುಃಖದ ಕಟ್ಟೆ ಒಡೆದು ಕಣ್ಣೀರು ದಳ ದಳ ಉದುರಿಬಿಡುತ್ತಿದ್ದವು. ಮನೆಯಲ್ಲಿ ಸಾವು ನೋವು ಸಂಭವಿಸಿರುವಾಗ ಸಿಹಿ ತಿನಿಸು ತಿನ್ನುವುದಾದರೂ ಹೇಗೆ ಎನ್ನುವುದು ಅವರ ಅಳಲು. ಅವರ ಬದುಕು ಆಧುನಿಕತೆಗೆ ಅಷ್ಟಾಗಿ ತೆರೆದುಕೊಳ್ಳದೇ ನಿಸರ್ಗದೊಂದಿಗೆ ಬೆರೆತದ್ದಕ್ಕೋ ಏನೋ ಅವರು ತುಂಬಾ ಮೃದು ಹಾಗೂ ಭಾವನಾ ಜೀವಿಗಳು ಎಂಬುದು ಗೊತ್ತಾಗಿತ್ತು.
ಎರಡೂ ಕಡೆ ಗುಡ್ಡ, ನಡುವೆ ವರ್ಷಪೂರ್ತಿ ಹರಿಯುವ ನದಿಗಳು. ಪ್ರತಿ ಗುಡ್ಡದ ಮೇಲೂ ಹಳ್ಳಿಗಳು. ಆ ಗುಡ್ಡಕ್ಕೂ ಈ ಗುಡ್ಡಕ್ಕೂ ಸಂಪರ್ಕ ಕಲ್ಪಿಸಿಲು ಬಹಳಷ್ಟು ಸೇತುವೆಗಳು. ಆದರೆ ಮೇಘಸ್ಫೋಟಕ್ಕೆ ಆ ನದಿಗಳು ಎಷ್ಟು ರೌದ್ರವಾಗಿದ್ದವೆಂದರೆ ತಮ್ಮ ಮೇಲಿನ ಸೇತುವೆಗಳನ್ನೆ ಕೆಡವಿ ಹಾಕಿ ತಮ್ಮ ಜೊತೆ ಎಳೆದುಕೊಂಡು ಹೋಗಿದ್ದವು. ಹೀಗಾಗಿ ಅಲ್ಲಿಯ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಭಾರಿ ತೊಂದರೆ ಅನುಭವಿಸಬೇಕಾಯಿತು. ಗುಡ್ಡಗಳಿಗೆ ಅಂದರೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ನಾಲ್ಕು ನೂರು ಐನೂರು ಮೀಟರ್ ಉದ್ದದ ಸೇತುವೆಗಳು ನದಿ ಜೊತೆ ಕೊಚ್ಚಿ ಹೋಗಿದ್ದರಿಂದ ನಾವು ಗುಡ್ಡವನ್ನು ಸುತ್ತು ಹಾಕಿ ಮತ್ತೊಂದು ಗುಡ್ಡಕ್ಕೆ ಹೋಗಲು ಮೂರ್ನಾಲ್ಕು ತಾಸುಗಳೇ ಹಿಡಿಯುತ್ತಿತ್ತು. ಅಲ್ಲಿರುವ ಪ್ರತಿ ಹಳ್ಳಿಗೂ ಹೋಗಿ ಕಿಟ್‌ಗಳನ್ನು ವಿತರಿಸಬೇಕೆನ್ನುವ ನಮ್ಮ ತಂಡದ ಯೋಜನೆ ತೊಂದರೆಯಾಗಿ ಮರುಗುಂತಾಗಿತ್ತು. ಹಾಗೋ ಹೀಗೋ ಕಷ್ಟ ಪಟ್ಟು ಸಾಧ್ಯವಾದಷ್ಟು ಕುಟುಂಬಗಳಿಗೆ ಮೂಲ ಸೌಕರ್ಯಗಳ ಕಿಟ್ಟನ್ನು ತಲುಪಿಸುವ ಸಾಹಸ ಮಾಡಿದ್ದೆವು. ಆದರೆ ಏನೆಲ್ಲ ವಸ್ತುಗಳನ್ನು ಕೊಟ್ಟರೂ ತಮ್ಮ ಕುಟುಂದ ಜೀವಗಳನ್ನು ಕಳೆದುಕೊಂಡ ಅವರ ಮುಖದಲ್ಲಿ ನಗುವನ್ನು ಮಾತ್ರ ಮೂಡಿಸಲು ನಮ್ಮಿಂದ ಮಾತ್ರ ಸಾಧ್ಯವಾಗಲಿಲ್ಲ. ತಮ್ಮ ಎದೆಯೊಳಗೆ ಆಗಿರುವ ಗಾಯಗಳಿಗೆ ಯಾವ ವಸ್ತುಗಳೂ ಮುಲಾಮು ಆಗಲಾರವು ಎನ್ನುವ ಭಾವ ಅವರ ಕಣ್ಣುಗಳಲ್ಲಿ ಹನಿಗಟ್ಟುತ್ತಿತ್ತು.
ಮಳೆ, ಒಬ್ಬರ ತುಟಿಗಳಲ್ಲಿ ಮಂದಹಾಸ ಮೂಡಿಸಿದರೆ ಮತ್ತೊಬ್ಬರ ಕಣ್ಣುಗಳಲ್ಲಿ ಕತ್ತಲು ಜಿನುಗಿಸುತ್ತದೆ. ಒಂದು ಜೀವವನ್ನು ಮೊಳೆಯಿಸಿದರೆ ಮತ್ತೊಂದು ಕಡೆ ಕೊಲ್ಲುತ್ತದೆ. ನಿಸರ್ಗದ ಮರ್ಮ ಅರಿತವರಾರೂ ಇಲ್ಲ. ಅದು ಉಂಟು ಮಾಡುವ ಅಚ್ಚರಿ, ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ನಿಗೂಢತೆ ಹಾಗೂ ಕುತೂಹಲಗಳು ನಮ್ಮ ಕಲ್ಪನೆಗೆ ನಿಲುಕುವುದಿಲ್ಲ. ಆದರೂ ನಾವು ಪ್ರಕೃತಿಯ ವಿರುದ್ಧ ಸೆಟೆದು ನಿಲ್ಲಲು ನೋಡುತ್ತೇವೆ. ಅದು ನಮ್ಮ ಅಹಂಕಾರವನ್ನು ಅಳಿಸುತ್ತಲೇ ಅದರ ಮುಂದೆ ನಾವೆಷ್ಟು ಚಿಕ್ಕವರೆಂದು ನಿರೂಪಿಸುತ್ತಲೇ ಬಂದಿಂದೆ.
ಮೂರ್ನಾಲ್ಕು ವರ್ಷಗಳಿಂದ ನಮ್ಮಲ್ಲಿಯೂ ಇಂತಹ ಮಳೆಯಾಗಿ ಸಾಕಷ್ಟು ತೊಂದರೆಗಳಾಗಿ ನಾವೂ ನಿರಾಶ್ರಿತರ ಮಟ್ಟಕ್ಕೆ ತಲುಪಿರುವುದು ನೋಡಿದರೆ ನಿಸರ್ಗ ನಮಗೇನೋ ಹೇಳಲು ಪ್ರಯತ್ನಿಸುವಂತೆ ಕಾಣಿಸುತ್ತದೆ. ಆದರೆ ನಾವು ಮೊದಲೇ ಕಿವುಡರಂತೆ ವರ್ತಿಸಿ ನಮ್ಮ ಅಹಂಕಾರಕ್ಕೆ ತಕ್ಕ ಪ್ರತಿಫಲ ಪಡೆಯುತ್ತಲೇ ಇರುತ್ತೇವೆ.
ಇಸ್ಮಾಯಿಲ್ ತಳಕಲ್ ಕೊಪ್ಪಳ ಜಿಲ್ಲೆಯ ಗೊಂಡಬಾಳ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸರ್ಕಾರಿ ಆದರ್ಶವಿದ್ಯಾಲಯ(ಆರ್‍ಎಮ್‍ಎಸ್‍ಎ) ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2020) ಸೇರಿದಂತೆ ಇವರ ಕಥೆಗಳು ಹಲವೆಡೆ ಪ್ರಕಟವಾಗಿ, ಬಹುಮಾನ ಪಡೆದುಕೊಂಡಿವೆ. “ಬೆತ್ತಲೆ ಸಂತ” ಇವರ ಪ್ರಕಟಿತ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನಕ್ಕೆ 2021ರ ಪ್ರತಿಷ್ಟಿತ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಬಹುಮಾನ” ಬಂದಿದೆ. ಸಂಗೀತ ಕೇಳುವುದು, ಅಡುಗೆ ಮಾಡುವುದು ಇವರ ಆಸಕ್ತಿಯ ವಿಷಯಗಳು.