ಜಗಳಕ್ಕೂ ಸೀರೆಗೂ ಏನು ಸಂಬಂಧ? ಸೀರೆಯ ಪ್ರಸ್ತಾಪ ಯಾಕಾಗಿ ಆಗುತ್ತದೆ? ಅವರಿಬ್ಬರ ಜಗಳಕ್ಕೆ ಮಾತ್ರ ಸೀರೆಯ ಪ್ರಸ್ತಾಪ ಸೀಮಿತವಲ್ಲ. ಕೆಲವೊಮ್ಮೆ ರಾಜಕಾರಣಿಗಳೂ ಹೀಗೆ ʻನಾನೇನು ಸೀರೆಯುಟ್ಟಿಲ್ಲʼ ಎಂದು ಹೇಳುವುದಿದೆ. ಹಾಗಾದರೆ ಸೀರೆ ಉಡುವುದು ಅವಮಾನವೇ? ಸೀರೆಗೂ ಪೌರುಷಕ್ಕೂ ಪರಸ್ಪರ ವಿರೋಧವೇ? ಸೀರೆ ಉಟ್ಟವರೆಲ್ಲ ಹೇಡಿಗಳೇ? ನಮ್ಮ ದೇಶದ ಚರಿತ್ರೆಯಲ್ಲಿ ಸೀರೆಯುಟ್ಟ ಹಲವು ಮಹಿಳೆಯರು ವೀರಾವೇಶದಿಂದ ಹೋರಾಡಿದ ಕತೆಗಳನ್ನು ನಾವೆಲ್ಲ ಓದಿದ್ದೇವೆ. ʻವೀರಗಚ್ಚೆ ಹಾಕಿ ಹೋರಾಡಿದಳುʼ ʻಸೈನಿಕರನ್ನು ಹುರಿದುಂಬಿಸಿದಳುʼ ಎನ್ನುವ ವಿವರಗಳು ಏನನ್ನು ಹೇಳುತ್ತವೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೈದನೆಯ ಕಂತಿನಲ್ಲಿ ಸೀರೆಯ ಕುರಿತ ಬರಹ ನಿಮ್ಮ ಓದಿಗೆ
ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಿದ್ದೆ. ಅದೆಲ್ಲಿಂದಲೋ ಗಲಾಟೆ ಕೇಳುತ್ತಿತ್ತು. ʻಏನೋ ಗಲಾಟೆ ಆಗ್ತಿದೆʼ ಅಂತ ಒಂದು ಕ್ಷಣ ನಿಂತೆ. ತುಸು ದೂರದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದುದು ಕಾಣಿಸಿತು, ಕೇಳಿಸಿತು. ಒಬ್ಬರಿಗೊಬ್ಬರು ತಮ್ಮ ತಮ್ಮ ಪೌರುಷ ತೋರಿಸುವುದರಲ್ಲಿ ಸ್ಪರ್ಧೆ ಏರ್ಪಟ್ಟಂತೆ ಕೂಗಾಡುತ್ತಿದ್ದರು. ʻನಾನೇನು ಸೀರೆ ಉಟ್ಟಿಲ್ಲʼ ಅಂತ ಒಬ್ಬ ಅಂದರೆ ಇನ್ನೊಬ್ಬ ʻನಾನೇನು ಬಳೆ ತೊಟ್ಟಿಲ್ಲʼ ಎನ್ನುತ್ತಿದ್ದ. ಇನ್ನೊಂದು ಸುತ್ತು ಬರುವುದರಲ್ಲಿ ಅಲ್ಲೊಂದಿಷ್ಟು ಜನ ಸೇರಿದ್ದರು. ಕೆಲವರು ಜಗಳವನ್ನು ನಿಂತು ನೋಡುತ್ತಿದ್ದರು; ಇನ್ನು ಕೆಲವರು ಅವರ ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಿದ್ದರು. ಕೆಲಹೊತ್ತಿನಲ್ಲಿ ಜಗಳ ನಿಂತಿತ್ತು.
ಜಗಳಕ್ಕೂ ಸೀರೆಗೂ ಏನು ಸಂಬಂಧ? ಸೀರೆಯ ಪ್ರಸ್ತಾಪ ಯಾಕಾಗಿ ಆಗುತ್ತದೆ? ಅವರಿಬ್ಬರ ಜಗಳಕ್ಕೆ ಮಾತ್ರ ಸೀರೆಯ ಪ್ರಸ್ತಾಪ ಸೀಮಿತವಲ್ಲ. ಕೆಲವೊಮ್ಮೆ ರಾಜಕಾರಣಿಗಳೂ ಹೀಗೆ ʻನಾನೇನು ಸೀರೆಯುಟ್ಟಿಲ್ಲʼ ಎಂದು ಹೇಳುವುದಿದೆ. ಹಾಗಾದರೆ ಸೀರೆ ಉಡುವುದು ಅವಮಾನವೇ? ಸೀರೆಗೂ ಪೌರುಷಕ್ಕೂ ಪರಸ್ಪರ ವಿರೋಧವೇ? ಸೀರೆ ಉಟ್ಟವರೆಲ್ಲ ಹೇಡಿಗಳೇ? ನಮ್ಮ ದೇಶದ ಚರಿತ್ರೆಯಲ್ಲಿ ಸೀರೆಯುಟ್ಟ ಹಲವು ಮಹಿಳೆಯರು ವೀರಾವೇಶದಿಂದ ಹೋರಾಡಿದ ಕತೆಗಳನ್ನು ನಾವೆಲ್ಲ ಓದಿದ್ದೇವೆ. ʻವೀರಗಚ್ಚೆ ಹಾಕಿ ಹೋರಾಡಿದಳುʼ ʻಸೈನಿಕರನ್ನು ಹುರಿದುಂಬಿಸಿದಳುʼ ಎನ್ನುವ ವಿವರಗಳು ಏನನ್ನು ಹೇಳುತ್ತವೆ. ಅಂದರೆ ಸೀರೆಗೆ ಯಾವುದೇ ಕೀಳರಿಮೆಯನ್ನು ಅಂಟಿಸಬೇಕಿಲ್ಲ ಎಂದಾಯಿತು. ಇರಲಿ ಬಿಡಿ ಆ ವಿಷಯ. ಈಗ ಸೀರೆ ಕುರಿತಿರುವ ಒಂದಿಷ್ಟು ಸಂಗತಿಗಳನ್ನು ಗಮನಿಸೋಣ.
ಸೀರೆಯ ಮೂಲ ಯಾವುದು? ಭಾಷಾ ಶಾಸ್ತ್ರಜ್ಞರ ಪ್ರಕಾರ ʻಚೀರಾʼದಿಂದ ಸೀರೆ ಬಂದಿದೆ. ಈ ಸೀರೆಯ ಪ್ರಸ್ತಾಪ ಇತಿಹಾಸ ಪೂರ್ವದ ಕಾವ್ಯಗಳಲ್ಲಿಯೂ ಕಾಣಿಸುತ್ತದೆ. ಕೃಷ್ಣನ ಬಾಲಲೀಲೆಗಳಲ್ಲಿ ಅವನು ನಾರಿಯರ ಸೀರೆಗಳನ್ನು ಕದ್ದು ಅವರನ್ನು ಗೋಳಾಡಿಸಿದ ಸಂಗತಿಗಳು ದಾಸರ ಕೀರ್ತನೆಗಳಲ್ಲಿ, ಅದರಲ್ಲಿಯೂ ಹರಪನಹಳ್ಳಿ ಭೀಮವ್ವನ ಜಲಕ್ರೀಡೆಯ ಹಾಡಿನಲ್ಲಿ ವಿವಿಧ ವಿನ್ಯಾಸದಲ್ಲಿ ವರ್ಣನೆಗೊಂಡಿದೆ. ಕೃಷ್ಣನನ್ನು ಸೀರೆ ಕೊಡುವಂತೆ ಬೇಡುವ ಗೋಪಿಕೆಯರು, ಅಣ್ಣ, ಅಪ್ಪ, ಮಾವ, ಗಂಡ ಎಲ್ಲರ ಹೆಸರನ್ನೂ ಹೇಳುತ್ತ ಅವರೆಲ್ಲ ತಂದಿರುವ ಸೀರೆಗಳನ್ನು ಹಲವು ಬಗೆಯಲ್ಲಿ ವರ್ಣಿಸುತ್ತಾರೆ. ʻಪ್ರಸ್ತಕ್ಕೆ ತಂದಿದ್ದು ಪುತ್ತಳಿ ಪತ್ತಲʼ ಎಂದು ಒಬ್ಬಳು ಹೇಳಿದರೆ, ಇನ್ನೊಬ್ಬಳು ಕಾಗಿನ ಕಡ್ಡಿಸೀರೆಯನ್ನುʻಮಾವ ತಂದುಕೊಟ್ಟ ನನಗೆ ನಿನ್ನೆʼ ಎನ್ನುತ್ತಾಳೆ. ಹೀಗೆ ಬಗೆಬಗೆಯ ವಿನ್ಯಾಸದ ಸೀರೆಯನ್ನು ಕೊಡು ಎಂದು ಕೃಷ್ಣನನ್ನು ಬೇಡಿದರೆ ಅದಕ್ಕೆ ಮಣಿಯದ ತುಂಟ ಕೃಷ್ಣ ʻಅಪ್ಪನ ಅಳಿಯನೆಂದೊಪ್ಪಿಕೊಂಡರೆ ನೀವು ಕೊಟ್ಟುಬಿಡುವೆ ನಿಮ್ಮ ಸೀರೆಗಳʼ ಎಂದು ಸವಾಲೆಸೆಯುತ್ತಾನೆ. ದ್ರೌಪದಿಯ ಸೀರೆಯನ್ನು ದುಶ್ಯಾಸನ ಸೆಳೆದ ವಿಷಯ ಮುಂದಿನ ಯುದ್ಧಕ್ಕೆ ನಾಂದಿ ಹಾಡಿರುವ ಸಂಗತಿ ಮಹಭಾರತದ ಬಹಳ ಮುಖ್ಯ ಭಾಗ. ಅದೇ ಮಹಾಭಾರತದಲ್ಲಿ ಯದುವಂಶದ ಸಾಂಬನಿಗೆ ಸೀರೆ ಉಡಿಸಿರುವ ಕಾರಣದಿಂದ ಯದುವಂಶ ಏನಾಯಿತು ಎನ್ನುವುದು ಗಮನಿಸಬೇಕಿರುವ ವಿಷಯ. ಹೀಗೆ ಸೀರೆಯ ಸುತ್ತಲೂ ಹಲವು ಕತೆಗಳು ಹುಟ್ಟಿಕೊಂಡಿವೆ.
ನಮ್ಮ ಕಾಲದ ಹೆಣ್ಣುಮಕ್ಕಳು ಚಿಕ್ಕವರಿರುವಾಗ ಅಮ್ಮಂದಿರ ಇಲ್ಲವೆ ಅಕ್ಕಂದಿರ ಸೀರೆಯನ್ನು ಉಟ್ಟು ಸಂಭ್ರಮಿಸುತ್ತಿದ್ದೆವು. ತುಸು ಅನುಕೂಲ ಇರುವವರ ಮನೆಯ ಹೆಣ್ಣುಮಕ್ಕಳಿಗೆ ಕಟ್ಟೋಸೀರೆ ಧರಿಸುವ ಭಾಗ್ಯವೂ ಇತ್ತು. ನಮ್ಮ ಅಮ್ಮಂದಿರ ಕಾಲದಲ್ಲಿ ಸೀರೆಯನ್ನು ಸುತ್ತುಹಾಕಿ ಉಡುತ್ತಿದ್ದರು. ಆಗ ಒಳಲಂಗ ಹಾಕುವ ಪರಿಪಾಠವಿರಲಿಲ್ಲ. ಅಕ್ಕಂದಿರು ಸೀರೆಯುಡುವ ಕಾಲಕ್ಕೆ ಅದು ಚಾಲ್ತಿಗೆ ಬಂತು. ಸುತ್ತುಹಾಕಿ ಸೀರೆ ಉಡುವವರು ಸೀರೆ ಸೊಂಟದಲ್ಲಿ ನಿಲ್ಲಲು ಡಾಬು ಅಥವಾ ದಾರದಿಂದ ಬಿಗಿಯುವುದೂ ಇತ್ತು. ಸೀರೆಯ ನಿರಿಗೆಯನ್ನು ಮಡಚಿ ಬಾಳೆಕಾಯಿ (ಅದರ ಬಾಹ್ಯ ರೂಪದಿಂದ ಆ ಹೆಸರು ಬಂದಿರಬಹುದು) ಹಾಕುವುದು ಸಾಮಾನ್ಯವಾಗಿತು. ಆ ಬಾಳೆಕಾಯಿಯೋ ಎಲ್ಲವನ್ನೂ ತನ್ನೊಡಲಲ್ಲಿ ಕಾಪಿಡುತ್ತಿತ್ತು. ಒಂದರ್ಥದಲ್ಲಿ ಈಗಿನ ಪರ್ಸಿನಂತೆ ಚಿಲ್ಲರೆ ಕಾಸನ್ನು ಮಾತ್ರವಲ್ಲ, ಮಹಿಳೆಯರಿಗೆ ಬೇಕಿರುವ ಚಿಕ್ಕಪುಟ್ಟ ವಸ್ತುಗಳ ಸಂಗ್ರಹಾಲವೂ ಆಗಿರುತ್ತಿತ್ತು. ಸೀರೆ ಕೇವಲ ಮೈಮುಚ್ಚುವ ಉಡುಪಾಗಿ ಮಾತ್ರ ಬಳಕೆಯಾಗುತ್ತಿರಲಿಲ್ಲ. ತೊಳೆದ ಕೈಯನ್ನು ಒರೆಸಲು, ಮೂಗೊರಸಲು, ಮಕ್ಕಳ ಕೈಬಾಯಿ ಒರೆಸು, ಚಳಿಯಾದಾಗ ಮೈತುಂಬ ಹೊದೆಯಲು, ತಲೆಗೆ ಕಟ್ಟಲಿಕ್ಕೆ, ಮಕ್ಕಳನ್ನು ಮಡಿಲಿನಲ್ಲಿ ಮಲಗಿಸಿ ಬೆಚ್ಚಗಾಗಿಸಲು ಹೀಗೆ ಅದರ ಉಪಯುಕ್ತತೆ ಬಹಳ ವಿಶೇಷವಾದುದು. ಅದರ ಪ್ರಯೋಜನವನ್ನು ಕುರಿತು ಒಂದು ಕವಿತೆಯನ್ನು ಹೊಸೆಯಬಹುದು.
ಉಟ್ಟರೆ ಸೀರೆಯಾದೆ, ಹೊದ್ದರೆ ಹೊದಿಕೆಯಾದೆ, ಹಾಸಿದರೆ ಹಾಸಿಗೆಯಾದೆ, ಕಟ್ಟಿದರೆ ಜೋಲಿಯಾದೆ, ಇಳಿಬಿಟ್ಟರೆ ಪರದೆಯಾದೆ, ಹೊಲಿದರೆ ಕೌದಿಯಾದೆ, ಒರೆಸಲು ಬಟ್ಟೆಯಾದೆ….. ಹೀಗೆ ಇನ್ನೊಂದಿಷ್ಟು ಸೇರಿಸಬಹುದು. ಪ್ರವೀಣ ಎನ್ನುವ ಯುವ ಕವಿಯೊಬ್ಬರು ಅಮ್ಮನ ಸೀರೆಯನ್ನು ವರ್ಣಿಸುತ್ತ ಅದರ ಉಪಯುಕ್ತತೆಯನ್ನು ಹೀಗೆ ಪಟ್ಟಿಮಾಡುತ್ತಾರೆ.
ಹೊಲಿದರೆ ನೆಮ್ಮದಿ ನೀಡುವ ದುಪಟಿ
ಹರಿದರೆ ಕಲ್ಮಶ ತೊಳೆಯುವ ಅರಿವೆ
ಇನ್ನಷ್ಟು ಹರಿದರೆ ಕಣ್ಣೀರು ಒರೆಸುವ ಬಟ್ಟೆ
ಹರಿದ ಚಿಂದಿಚಿಂದಿ ಮಾಡಿದರೂ
ಲಕ್ಷಾಂತರ ದೀಪಗಳಿಗೆ ಬತ್ತಿ
ಇದು ಒಂದು ಮುಖ. ಸೀರೆಯ ನೆನಪು ಹೆಣ್ಣುಮಕ್ಕಳಿಗೆ ತವರಿನಷ್ಟೆ ಸವಿಯಾದುದು. ಸೀರೆಯೊಂದಿಗೆ ಅಮ್ಮನ ನೆನಪು ಹಾಸುಹೊಕ್ಕಾದುದು. ಉದಾಹರಣೆಯಾಗಿ ವೈದೇಹಿಯವರ ʻನನ್ನಅಮ್ಮನ ಸೀರೆʼ ಕವನವನ್ನು ಗಮನಿಸಬಹುದು. ʻಅವಳದೇ ಪರಿಮಳ ನನ್ನ ಅಮ್ಮನ ಸೀರೆ/ಜೊತೆಗೆ ಕೈಬಳೆ ಸದ್ದು ಸೇರಿದಂತೆ/ ಸೊಂಟ ಸಿಕ್ಕಿಸಿ ದುಡಿವ ಹುರುಪಿನಂತೆ/ʼ ಎಂದು ಹೇಳತ್ತ, ʻನನ್ನ ಅಮ್ಮನ ಸೀರೆ/ ನೆರಿಗೆ ಅಂಬಡೆ ಗಂಟು/ ಖಾಲಿಯಾಗದ ಗೂಢ ಪದಾರ್ಥ ಕೋಶʼ ಎಂದು ವರ್ಣಿಸುವ ಕವನ ʻಹಾಸಿಕೊಳ್ಳುವೆ ಅದನು/ ಹೊದೆದುಕೊಳ್ಳುವೆ ಅದನು/ ʻಅಮ್ಮʼ ಎನ್ನುವ ಸುಖದ/ ನಿಟ್ಟುಸಿರ ಕರೆದುʼ ಎಂದು ಅಮ್ಮನ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತದೆ. ಸೀರೆ ಹೆಣ್ಣಿನ ಬದುಕಿಗೆ ಮಿತಿಯನ್ನು ಹೇರುವ ಒಂದು ರೂಪಕವಾಗಿಯೂ ಕೆಲವರಿಗೆ ಕಂಡಿದೆ. ನನ್ನದೇ ʻಸೀರೆʼ ಎನ್ನುವ ಕವನದ ಸಾಲುಗಳು ಹೀಗಿವೆ: ʻಹೊಸ ಹೊಸ ಸೀರೆಗಳ ತರಾವರಿ/ ಮಾರಾಟದ ಮರ್ಜಿ ಪರಿಪರಿ/ ಒರಟು ಸೀರೆಗೆ ಬಾಳೆಕಾಯಿ ಹಿಡಿತ/ ನಾಜೂಕಿಗೆ ಡಾಬಿನ ಬಿಗಿತ/ ಹುಡುಗಿ ಚಂದನದ ಗೊಂಬೆ/ ದನಿ ಕಳೆದುಹೋದ ಮೂಕಿ ……..ಊರುಕೇರಿಯ ತುಂಬ ಸೀರೆ ಸೆಳೆತ/ ಬಿಚ್ಚಿ ಎಸೆದಾಗ ಸಂತಸದ ಮೊರೆತʼ ಹೀಗೆ ಸೀರೆ ಒಂದು ರೂಪಕವಾಗಿ ವಿವಿಧ ಭಾವಗಳಿಗೆ ಕಾರಣವಾಗಿರುವ ವೈವಿಧ್ಯಮಯ ಉಡುಪು.
ಒಂದರ್ಥದಲ್ಲಿ ಈಗಿನ ಪರ್ಸಿನಂತೆ ಚಿಲ್ಲರೆ ಕಾಸನ್ನು ಮಾತ್ರವಲ್ಲ, ಮಹಿಳೆಯರಿಗೆ ಬೇಕಿರುವ ಚಿಕ್ಕಪುಟ್ಟ ವಸ್ತುಗಳ ಸಂಗ್ರಹಾಲವೂ ಆಗಿರುತ್ತಿತ್ತು. ಸೀರೆ ಕೇವಲ ಮೈಮುಚ್ಚುವ ಉಡುಪಾಗಿ ಮಾತ್ರ ಬಳಕೆಯಾಗುತ್ತಿರಲಿಲ್ಲ. ತೊಳೆದ ಕೈಯನ್ನು ಒರೆಸಲು, ಮೂಗೊರಸಲು, ಮಕ್ಕಳ ಕೈಬಾಯಿ ಒರೆಸು, ಚಳಿಯಾದಾಗ ಮೈತುಂಬ ಹೊದೆಯಲು, ತಲೆಗೆ ಕಟ್ಟಲಿಕ್ಕೆ, ಮಕ್ಕಳನ್ನು ಮಡಿಲಿನಲ್ಲಿ ಮಲಗಿಸಿ ಬೆಚ್ಚಗಾಗಿಸಲು ಹೀಗೆ ಅದರ ಉಪಯುಕ್ತತೆ ಬಹಳ ವಿಶೇಷವಾದುದು.
ಸೀರೆ ಇಡಿಯಾಗಿ ಮಾತ್ರವಲ್ಲ ಬಿಡಿಯಾಗಿಯೂ ಬಳಕೆಯಾಗುತ್ತಿದೆ. ದಾಸರು ʻಸೆರಗ ಬಿಡುʼ ಎಂದು ದೈವವನ್ನು ಬೇಡಿದರೆ, ಜನಸಾಮಾನ್ಯರು ಹಲವು ಬಾರಿ ʻಸೆರಗೊಡ್ಡಿʼ ಬೇಡುವುದಿದೆ. ʻಸೆರಗಿನಕೆಂಡʼ ತಾಪವನ್ನು ಸೂಚಿಸಿದರೆ, ಹಿಂದೆ ಅಮ್ಮಂದಿರು ಕೊಟ್ಟಿಗೆಯಿಂದ ಹಾಲನ್ನು ಒಯ್ಯುವಾಗ ಇತರರ ಕಣ್ಣು ತಾಗದಿರಲಿ ಎಂದು ಹಾಲಿನ ಚೆಂಬಿಗೆ ಸೆರಗು ಮುಚ್ಚಿ ಮನೆಯೊಳಗೆ ತೆಗೆದುಕೊಂಡು ಹೋಗುತ್ತಿದ್ದರು. ತನ್ನ ಸೀರೆಯ ಸೆರಗನ್ನು ಹರಿದು ದ್ರೌಪದಿ ಕೃಷ್ಣನ ಗಾಯಕ್ಕೆ ಕಟ್ಟಿದ್ದಳು. ಸೆರಗು, ಅಂಚು ಎನ್ನುವ ಪದಗಳು ಅನ್ಯ ಅರ್ಥದಲ್ಲಿ ಬಳಕೆಯಾಗುವುದೂ ಇದೆ.
ಸೀರೆ ಎನ್ನುವುದು ಒಂದೇ ಬಗೆಯಲ್ಲಿ ಉಡುವ ಉಡುಪಲ್ಲ. ಅದರಲ್ಲಿ ಸಾಕಷ್ಟು ವೈವಿಧ್ಯವಿದೆ. ಪ್ರಾದೇಶಿಕ ಭಿನ್ನತೆಯಿದೆ, ಒಂದೇ ಪರಿಸರದಲ್ಲಿಯೂ ಬೇರೆ ಬೇರೆ ಸಮುದಾಯಗಳು ಉಡುವ ಶೈಲಿಯಲ್ಲಿ ಕೂಡ ಭಿನ್ನತೆ ಇದೆ. ಉದಾಹರಣೆಗೆ ಕರ್ನಾಟಕದಲ್ಲಿ ಕೊಡವರು ನೆರಿಗೆ ಹಿಂದೆ ಬರುವಂತೆ ಉಟ್ಟು ಸೆರಗನ್ನು ಹಿಂಭಾಗದಿಂದ ಹೊದೆಯುತ್ತಾರೆ. ಮಲೆನಾಡಿನ ಭಾಗದಲ್ಲಿ ಹಿಂದಿನವರು ದುಂಡುಡುಗೆ ಎನ್ನುವ ರೀತಿಯಲ್ಲಿ ಉಡುತ್ತಿದ್ದರು. ಇನ್ನೊಂದು ಬಗೆಯದು ಗೊಬ್ಬೆಸೀರೆ. ಈಗಲೂ ಉತ್ತರ ಕನ್ನಡದ ಕರಾವಳಿಯಲ್ಲಿ ವಾಸಿಸುವ ಹಾಲಕ್ಕಿ ಹೆಣ್ಣುಮಕ್ಕಳು ರವಿಕೆ ಹಾಕದೆ ಸೀರೆಸೆರಗನ್ನು ಕುತ್ತಿಗೆಗೆ ಸುತ್ತಿ ಉಡುತ್ತಾರೆ. ಕೆಲವು ಸಮುದಾಯದಲ್ಲಿ ಪಂಚೆಯಂತೆ ಸೀರೆಯನ್ನು ಕಚ್ಚೆಹಾಕಿ ಉಡುವ ಪದ್ಧತಿ ಇದೆ. ಈಗಲೂ ವಿಶೇಷ ದಿನಗಳಲ್ಲಿ ಅದು ಬಳಕೆಯಲ್ಲಿದೆ. ಮರಾಠಿ, ಬೆಂಗಾಲಿ, ಅಯ್ಯಂಗಾರ್, ಸಂಕೇತಿ, ಮಾರ್ವಾಡಿ ಮುಂತಾದ ಹಲವು ಸಮುದಾಯದವರು ಸೀರೆಯನ್ನು ಉಡುವ ಶೈಲಿ ವಿಭಿನ್ನವಾದುದು. ಆ ಶೈಲಿಯಿಂದಲೇ ನಾವು ಅವರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವುದನ್ನು ಗುರುತಿಸಬಹುದು.
ಸೀರೆಯನ್ನು ವಿವಿಧ ಬಗೆಯ ನೂಲಿನಿಂದ ತಯಾರಿಸಲಾಗುತ್ತದೆ. ಆದಾಗ್ಯೂ ರೇಷ್ಮೆಯ ಸೀರೆಗೆ ಒಂದು ತೂಕ ಹೆಚ್ಚು. ಅದರೊಂದಿಗೆ ಜರಿ ಇದ್ದರಂತು ಅದರ ವೈಭವವೇ ಬೇರೆ. ಹಾಗಂತ ಎಲ್ಲ ರೇಷ್ಮೆ ಸೀರೆಗಳೂ ಒಂದೇ ಬಗೆಯವಲ್ಲ. ಮೈಸೂರುರೇಷ್ಮೆ, ಮೊಳಕಾಲ್ಮೂರು, ಹುಬ್ಬಳ್ಳಿ, ಪೋಚಂಪಳ್ಳಿ, ಧರ್ಮಾವರಂ, ಕಾಂಚೀವರಂ, ಕಾಶ್ಮೀರಿಸಿಲ್ಕ್, ಕಾಶಿಪಟ್ಟೆ ಅಥವಾ ಬೆನಾರಸ್ ಮುಂತಾಗಿ ಅವರವರ ಆಯ್ಕೆಗೆ ಅವಕಾಶಗಳು ಹಲವು. ನಮ್ಮ ನಮ್ಮ ಜೇಬಿನ ಗಾತ್ರಕ್ಕೆ ಅನುಸಾರವಾಗಿ ಅವನ್ನು ಕೊಂಡುಕೊಳ್ಳಬಹುದು. ವಿಶೇಷ ದಿನಗಳೆಂದರೆ ರೇಷ್ಮೆಸೀರೆಗಳ ಮೆರವಣಿಗೆಗೆ ವಿಪುಲವಾದ ಅವಕಾಶ. ಅಹಿಂಸಾವಾದಿಗಳಾದ ಜೈನರು ರೇಷ್ಮೆಯನ್ನು ಬಳಸುವುದಿಲ್ಲ. ರೇಷ್ಮೆಹುಳುವನ್ನು ಸಾಯಿಸಿ ರೇಷ್ಮೆಯ ನೂಲನ್ನು ತೆಗೆಯುವುದರಿಂದ ಅವರು ಅದನ್ನು ಉಡುವುದಿಲ್ಲ. ಅದೇ ಕಾರಣದಿಂದ ಅಪರೂಪ ಎನ್ನುವಂತೆ ರೇಷ್ಮೆಯನ್ನು ಉಡದಿರುವ ಇತರ ಜನಗಳೂ ಇದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ರೇಷ್ಮೆಗೆ ಪರ್ಯಾಯ ಎನ್ನುವಂತೆ ಸೆಣಬಿನ ನೂಲಿನಿಂದ ಸೀರೆಯನ್ನು ತಯಾರಿಸಲಾಗುತ್ತಿದೆ. ಕೃತಕ ರೇಷ್ಮೆಯಿಂದ ತಯಾರಾಗುವ ಸೀರೆಗಳು ಮಾರುಕಟ್ಟೆಯನ್ನು ಆಳುತ್ತಿವೆ. ಇವು ಬಹಳ ಕಡಿಮೆ ಬೆಲೆಗೆ ಸಿಗುವಂಥವು. ಹತ್ತಿಯ ನೂಲಿನ ಸೀರೆಗೆ ಅದರದೇ ಆದ ಒಂದು ಸವಲತ್ತಿದೆ. ಚಳಿಯಲ್ಲಿ ಬೆಚ್ಚಗೆ ಮತ್ತು ಸೆಖೆಗಾಲಕ್ಕೆ ಸೌಖ್ಯದ ಅನುಭವ ನೀಡುವ ಅವಕ್ಕೆ ಬೇಡಿಕೆಯೂ ಅಧಿಕ. ನಮ್ಮ ರಾಜ್ಯವೂ ಸೇರಿದಂತೆ ಹಲವು ಪ್ರಾದೇಶಿಕ ವೈವಿಧ್ಯಮಯ ಸೀರೆಗಳಿವೆ. ಇಳಕಲ್ ಸೀರೆಯ ಸೊಬಗಿಗೆ ಆಧುನಿಕರೂ ಬೆರಗಾಗಿದ್ದಾರೆ. ವಿವಿಧ ಬಗೆಯ ನೂಲಿನಿಂದ ತಯಾರಾಗುವ ಅದರ ತೋಪಿನ ಸೆರಗು ಆಕರ್ಷಕ. ಅದನ್ನೇ ಹೋಲುವ ಹುಬ್ಬಳ್ಳಿ ಸೀರೆಯೂ ವಿಶೇಷ ದಿನಗಳಿಗೆ ಮೆರಗನ್ನು ತರುವಂಥದು. ದಿನದ ಬಳಕೆಗೆ ಉಡುಪಿಯ ನೂಲಿನ ಸೀರೆ ಬಹಳ ಆರಾಮು. ಕೊಪ್ಪಳದ ಭಾಗ್ಯನಗರಕ್ಕೆ ಕಾಲಿಟ್ಟರೆ ಮನೆಮನೆಯಲ್ಲಿಯೂ ಮಗ್ಗಗಳು. ಕೈಗೆಟುಕುವ ಬೆಲೆಯ ಅವನ್ನು ಕೊಳ್ಳದೆ ಹಿಂದಿರುಗಲು ಆಗದು ಎನ್ನುವಷ್ಟು ವಿವಿಧ ವಿನ್ಯಾಸದ ಸೀರೆಗಳು. ಇನ್ನು ಕೊಯಮತ್ತೂರು ಹತ್ತಿನೂಲಿನ ಸೀರೆಯ ಸೊಬಗೇ ಬೇರೆ. ತಿಳಿಹಳದಿ ಬಣ್ಣ ಹೊಂದಿರುವ ನೂಲಿನಂಚಿನ ಇಲ್ಲವೆ ಜರಿಯಂಚಿನ ಮಲೆಯಾಳಿ ಸೀರೆ ಕಣ್ಣಿಗೆ ಹಿತ ಮತ್ತು ಉಡವುದು ಒಂಥರಾ ಸುಖ.
ಭರತನಾಟ್ಯ, ಓಡಿಸ್ಸಿ, ಮಣಿಪುರಿ, ಕಥಕ್ಕಳಿ ಹೀಗೆ ಭಾರತೀಯ ನೃತ್ಯ ಪ್ರಕಾರದಲ್ಲಿ ಹೆಣ್ಣುಮಕ್ಕಳು ಹಲವು ವಿನ್ಯಾಸದಲ್ಲಿ ಸೀರೆಯನ್ನು ಧರಿಸಿಯೇ ತಮ್ಮ ಸಾಮರ್ಥ್ಯವನ್ನು ಪ್ರಸ್ತುತಪಡಿಸುತ್ತ ಬಂದಿದ್ದಾರೆ. ಸಾಂಪ್ರದಾಯಿಕ ಶಿಲ್ಪಕಲೆಗಳನ್ನು ಗಮನಿಸಿದರೆ ಮೂರ್ತಿಶಿಲ್ಪವಿರಲಿ, ಭಿತ್ತಿಚಿತ್ರಗಳಿರಲಿ ಅಲ್ಲಿನ ಶಿಲ್ಪಾಂಗನೆಯರು ಧರಿಸಿರುವ ಉಡುಪಿನಲ್ಲಿ ಸೀರೆಗೆ ಪ್ರಾಶಸ್ತ್ಯವಿರುವುದು ಕಂಡು ಬರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ವಿದೇಶಿಯರೂ ಈ ಸೀರೆಯ ಸೊಬಗಿಗೆ ಮಾರುಹೋದದ್ದಿದೆ. ಭಾರತದ ಹುಡುಗಿ ಅಥವಾ ಹುಡುಗ ವಿದೇಶೀ ಹುಡುಗ/ಹುಡುಗಿಯನ್ನು ನಮ್ಮ ನೆಲದಲ್ಲಿ ಮದುವೆಯಾದಾಗ ಆ ಸಂಭ್ರಮಕ್ಕೆ ಇಲ್ಲಿಗೆ ಬಂದಿದ್ದ ಅಲ್ಲಿನ ಮಹಿಳೆಯರು ನಮ್ಮ ರೇಷ್ಮೆಸೀರೆಯುಟ್ಟು ಗಮ್ಮತ್ತಾಗಿ ಮೆರೆಯುತ್ತಿದ್ದರು. ಈಗಲೂ ಮದುವೆ ಅಥವಾ ವಿಶೇಷ ದಿನಗಳಲ್ಲಿ ವಿವಿಧ ವಿನ್ಯಾಸಗಳ ಸೀರೆಯುಟ್ಟು ವೈಯಾರದಿಂದ ಓಡಾಡುವುದು ಮಹಿಳೆಯರಿಗೆ ಆಪ್ಯಾಯಮಾನವೇ. ಕೆಲವು ಸಂದರ್ಭಗಳಲ್ಲಿ ಇಂತಹುದೇ ಬಣ್ಣದ ಸೀರೆಯನ್ನು ಉಡಬೇಕೆನ್ನುವ ರೂಢಿಯೂ ಇದೆ. ಸೀಮಂತ ಮಾಡುವಾಗ ಬಸುರಿಗೆ ಹಸಿರು ಸೀರೆ ಉಡಿಸಬೇಕೆನ್ನುವುದು ಪ್ರಚಲಿತದಲ್ಲಿರುವ ಪದ್ಧತಿ. ʻಹಸಿರು ಕಡ್ಡಿಸೀರೆ ತೋಪು ಮುಸುಕು ಮ್ಯಾಲೆ ಮಾಡಿ ಬಿಸಿಲಿಗೆ ಬೆನ್ನಹಾಕಿ ನಡೆಯಂಗಾಗೈತೆʼ ಎನ್ನುವ ಹಾಡು ಇದನ್ನು ಸೂಚಿಸುತ್ತದೆ. ವಧುವು ಉಡುವ ಸೀರೆಗಳಲ್ಲಿ ಆಯಾ ಸಮುದಾಯದಲ್ಲಿ ಇಂಥದೇ ಬಣ್ಣವನ್ನು ಧರಿಸಬೇಕೆನ್ನುವ ರೂಢಿ ಬೆಳೆದುಬಂದಿದೆ. ಹಿಂದೆ ವಿಧವೆಯರು (ಅದರಲ್ಲಿಯೂ ಬ್ರಾಹ್ಮಣವಿಧವೆಯರು) ಬಣ್ಣದ ಸೀರೆಯನ್ನು ಉಡುವಂತಿರಲಿಲ್ಲ. ಈಗಲೂ ವೈದ್ಯಕೀಯ ಸೇವೆಯಲ್ಲಿ ಇರುವವರಿಗೆ ಬಿಳಿಯ ಸೀರೆ ಉಡಬೇಕೆನ್ನುವ ವಸ್ತ್ರಸಂಹಿತೆ ಇದೆ.
ಇದು ಮನುಷ್ಯರ ಕತೆಯಾದರೆ ನಾವು ಆರಾಧಿಸುವ ದೇವಿಯರೆಲ್ಲ ಸೀರೆಯನ್ನು ಧರಿಸಿದವರೇ. ರಾಜಾರವಿವರ್ಮನ ಚಿತ್ರಗಳು ಇಲ್ಲವೆ ಇತರ ಕಲಾವಿದರು ಕಂಡರಿಸಿರುವ ದೇವಿಯರ ಚಿತ್ರಗಳು ಸೀರೆಯಲ್ಲಿಯೇ ರಾರಾಜಿಸುತ್ತವೆ. ವಿದ್ಯಾಧಿದೇವತೆ ಸರಸ್ವತಿ, ಹಣದೊಡತಿ ಲಕ್ಷ್ಮಿ, ಶಕ್ತಿಯ ಸಾಕಾರ ಪಾರ್ವತಿ ಎಲ್ಲರೂ ಸೀರೆಯನ್ನು ಉಟ್ಟವರೇ. ಶುಂಭ-ನಿಶುಂಭರನ್ನು, ಮಹಿಷಾಸುರನನ್ನು, ರಕ್ತಬೀಜಾಸುರರನ್ನು ನಿಗ್ರಹಿಸಿದ ಚಾಮುಂಡಿ ಅಥವಾ ದೇವಿಯ ಉಗ್ರರೂಪ ಮಹಿಳೆ ದುರ್ಬಲಳಲ್ಲ ಎನ್ನುವುದರ ಪ್ರತೀಕವಾಗಿಯೇ ಕಾಣಿಸಿಕೊಂಡಿದೆ. ಮಹಿಳೆಯ ಸಾಮರ್ಥ್ಯಕ್ಕೂ ಸೀರೆಗೂ ಸಂಬಂಧವಿಲ್ಲ ಎನ್ನುವಂತೆ ಆಕೆಯನ್ನು ಬಿಂಬಿಸಿರುವವರು ಪುರುಷರೇ. ಆದರೆ ಅದೇ ಸೀರೆಯನ್ನು ದೌರ್ಬಲ್ಯದ ಸಂಕೇತವಾಗಿ ಹಂಗಿಸುತ್ತಿರುವವರೂ ಪುರುಷರೇ. ಏನೇ ಇರಲಿ, ಸೀರೆಯನ್ನು ಹಂಗಿಸಿದ್ದಕ್ಕೆ ಸೀರೆಯ ಬಗೆಗೆ ಒಂದಿಷ್ಟು ಮಾಹಿತಿಗಳನ್ನು ಮೆಲುಕು ಹಾಕಲು ಅವಕಾಶವಾಯಿತು.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.