ಖಾಲಿಯಾಗುವ ಸಂಭ್ರಮ

ಮಡಿಯಲೇ ಬರಬೇಕು ಎಂಬ ಅಪ್ಪಣೆಯೇನೂ ಇಲ್ಲ
ಆದರೂ ಚುಮುಚುಮು ಚಳಿ ಹದಬೆಚ್ಚನೆ ನೀರಸ್ನಾನ
ನಿನ್ನ ಪರಿಮಳದ ಪುಳಕ

ಹಾಗಾಗದಿದ್ದರೂ ಕೆಲವೊಮ್ಮೆ..

ಕೊರೆವ ಚಳಿಯಲಿ ಸಾಗರದ ಉಪ್ಪು ನೀರಲ್ಲಿ ಮುಳುಗೆದ್ದು ಕಣ್ಣಲ್ಲಿ
ಮನಸಲ್ಲಿ ನಿನ್ನ ನೆನೆ ನೆನೆದು ನಡುಕ

ಹೂವ ಅಷ್ಟಿಷ್ಟು ಬಿಡಿಸಿ
ಎದುರಿಗಿಟ್ಟು
ನೀಲಾಂಜನ ಬೆಳಗುತ್ತೇನೆ
ಎಂತಹ ಗಾಳಿಗೂ ಆರದಿರಲಿ
ಇಂದಿನದು ಮಾತ್ರವಲ್ಲ ನಿನ್ನೆ ಮೊನ್ನೆಗಳ ಪ್ರವರಗಳನ್ನು ಉಸಿರಿಗೂ ಬಿಡುವಿಲ್ಲದಂತೆ ಒಪ್ಪಿಸುತ್ತೇನೆ

ನಿನ್ನ ಮುಖದಲಿ.. ಕಣ್ಣುಗಳಲಿ..
ಸಣ್ಣನೆ ನಗು..
ಇತ್ತೇ..?
ಇತ್ತು ಇತ್ತು.. ನೀನು ನಕ್ಕಿದ್ದು ನನಗಷ್ಟೆ ಗೊತ್ತು

ನಿನ್ನ ಪೂಜಿಸುತ್ತೇನೆ ದೇವ
ಕೇಳುತ್ತಾರೆ: ಅಷ್ಟು ಹೊತ್ತು ಅವನೆದುರು ಕೂತೆಯಾ..
ಮೂಕನೆದುರು..!
ಸ್ತೋತ್ರ ನಿನಗೆ ಗೊತ್ತಾ..?
ಮಂತ್ರ, ಭಜನೆ..?

ನನಗೆ ಮಾತು ಗೊತ್ತು
ಮಾತಿನ ಸುಖಕೆ ಕೇಳುವ
ಕಿವಿಗಳು
ನೋಟವೂ ಗಂಧಮಯ ಒಪ್ಪಂದಗೊಂಡಿರುವೆ
ಒಪ್ಪವಾದ ಭಾಷೆ

ನಾನು ಆಡುತ್ತೇನೆ
ನೀನು ಆಲಿಸುವೆ

ಕಿರು ಬೆರಳ ತುದಿ ಸ್ಪರ್ಶಿಸಿದ ಸುಖ
ಮೈಯೆಲ್ಲ ಹಿಂಜಿದ ನೋವು
ಬಿಡಿಬಿಡಿಸಿ ನಿನ್ನೆದುರು ಅರ್ಪಿಸಿ
ಹಗುರವಾಗುತ್ತೇನೆ
ಅರಳುತ್ತೇನೆ
ಶ್ರೀಗಂಧವಾಗುತ್ತೇನೆ
ಖಾಲಿ
ಖಾಲಿ
ಆಗುವ ಸಂಭ್ರಮ..

ಜಗವು ಕಂಡಿದೆಯೇ
ದೇವರಾಗುವ ಜಾದು
ಭಕ್ತೆಯಾಗುವ ಮೋಜು

ನಾನು ಹೊರಡಬೇಕು ಜಗಕೆ
ಮತ್ತೆ
ಬರುತ್ತೇನೆ ಮಡಿಯುತ್ತ ಮಡಿಯಾಗಿ
ನೀನು ದೇವನಾಗು
ಮತ್ತೆ..ನಾ..ನು
ನಾನು ನಾನೇ ಆಗುತ್ತೇನೆ. .. ..