ಜಸಿಂಡಾ ಆರ್ಡೆರ್ನ್ ತಮ್ಮ ಹೈಸ್ಕೂಲ್ ದಿನಗಳಿಂದ ಸ್ವಂತ ಸಾಮರ್ಥ್ಯ, ಬುದ್ಧಿವಂತಿಕೆ, ಕಠಿಣ ಶ್ರಮದಿಂದ ರಾಜಕೀಯ ವಲಯದಲ್ಲಿ ಬೆಳೆದವರು. ಮಗುವಿಗೆ ಜನ್ಮ ಕೊಟ್ಟು, ಬಾಣಂತಿಯಾಗಿದ್ದೂ ತಮ್ಮ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸಿದ ಹೆಮ್ಮೆಯ ಹೆಣ್ಣು ಇವರು. ಹಾಗೆ ನೋಡಿದರೆ ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಮಹಿಳಾ ರಾಜಕೀಯ ನಾಯಕರು, ಪ್ರಧಾನಿಗಳು, ಅಧ್ಯಕ್ಷರು, ಚಾನ್ಸಲರ್ ಮುಂತಾದವರ ಉದಾಹರಣೆಗಳು ಇವೆ. ಆದರೆ ಇವರ ಸಂಖ್ಯೆ ಪುರುಷರಷ್ಟು ಇಲ್ಲ. ಪಾಶ್ಚಾತ್ಯ ದೇಶಗಳ ಮಟ್ಟಿಗೆ ಹೇಳುವುದಾದರೆ ನ್ಯೂಝಿಲ್ಯಾಂಡ್ ದೇಶದ ಜಸಿಂಡಾ ಆರ್ಡೆರ್ನ್ ಅವರಷ್ಟು ಸಾಮರ್ಥ್ಯದ ಉದಾಹರಣೆಗಳು ಇಲ್ಲವೇನೋ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮದುವೆಯಾಗಲಿದ್ದಾರೆ. ನಿಮಗೆ ಈ ಸುದ್ದಿ ಕುತೂಹಲ ತಂದಿರಬಹುದು. ಕಳೆದ ವಾರ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಆಂಟೊನಿ ಆಲ್ಬಾನೀಸಿ ತಮ್ಮ ನಾಲ್ಕು ವರ್ಷಗಳ ಸಂಗಾತಿ ಜೋಡಿ ಹೇಡನ್ (Jodie Haydon) ಅವರಿಗೆ, ‘ಪ್ರಿಯೆ, ನಿನ್ನ ಹೆಸರೇನೋ ಜೋಡಿ ಸರಿ. ಆದರೆ ನಿಜವಾಗಿಯೂ ನಾವಿಬ್ಬರೂ ಜೋಡಿ ಕಟ್ಟೋಣವೇ, ಏನಂತೀಯಾ’, ಎಂದು ಕೇಳಿ, ಹೇಡನ್ ತಮ್ಮ ಕೋರಿಕೆಗೆ ‘ಯೆಸ್’ ಅಂದರು, ವೀ ಆರ್ ಎಂಗೇಜ್ಡ್, ಎನ್ನುವ ಹರ್ಷವನ್ನು Instagram ಮೂಲಕ ಹಂಚಿಕೊಂಡರು. ನಂತರ ಪಾರ್ಲಿಮೆಂಟಿನಲ್ಲಿ ಸದಸ್ಯರು ಚುಡಾಯಿಸಿದ್ದನ್ನು ಕುಲುಕುಲು ನಗುತ್ತಾ ಸ್ವೀಕರಿಸಿ ಆನಂದಿಸಿದರು.

ಪಾಶ್ಚಿಮಾತ್ಯ ಸಮಾಜಗಳಲ್ಲಿ ನಿಶ್ಚಿತಾರ್ಥ ಆಯಿತೆಂದರೆ ತಕ್ಷಣಕ್ಕೇ ಮದುವೆಯಾಗಿಬಿಡಬೇಕು ಎನ್ನುವ ನಿಯಮವೇನೂ ಇಲ್ಲ. ಕೆಲವರು ಪರ್ಮನೆಂಟ್ ಫಿಯಾನ್ಸಿಗಳಾಗೇ ಉಳಿಯುತ್ತಾರೆ. ಕೆಲವರು ಮುಂದೆಂದೊ ಒಂದು ದಿನ ಘಳಿಗೆ ಕೂಡಿಬಂದಾಗ ಮದುವೆಯಾಗುತ್ತಾರೆ. ಅಷ್ಟರಲ್ಲಿ ಅವರಿಗೆ ಮಕ್ಕಳಾಗಿರುತ್ತವೆ. ಇಂತಹ ಪದ್ಧತಿಗಳು ಸರ್ವೇಸಾಮಾನ್ಯ. ಇದರಿಂದ ಯಾರಿಗೂ ಬೇಸರವಿಲ್ಲ, ಕಷ್ಟ-ನಷ್ಟಗಳಿಲ್ಲ, ದೂಷಿಸುವುದು ಏನೂ ಇಲ್ಲ. ಅವರವರ ಅನುಕೂಲಕ್ಕೆ, ಬದುಕಿನ ಬದಲಾಗುವ ಪರಿಸ್ಥಿತಿಗಳಿಗೆ ಒಗ್ಗುವಂತೆ ಮದುವೆಗಳು ನಡೆಯುತ್ತವೆ. ಅಂದಹಾಗೆ, ಆಲ್ಬಾನೀಸಿ ಅವರಿಗೆ ಇದು ಎರಡನೇ ಮದುವೆ. ಅವರು ಮೊದಲು ಮದುವೆಯಾಗಿದ್ದು ಮತ್ತೊಬ್ಬ ರಾಜಕಾರಣಿಯನ್ನು. ಆಕೆ ನ್ಯೂ ಸೌತ್ ವೇಲ್ಸ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರು. ಇಬ್ಬರಿಗೂ ಸೇರಿ ೨೩ ವರ್ಷದ ಮಗನಿದ್ದಾನೆ.

ಆಲ್ಬಾನೀಸಿ ಮರುವಿವಾಹ ಯಾವಾಗ ಎನ್ನುವ ಪ್ರಶ್ನೆ ಕುತೂಹಲದ ಮತ್ತೊಂದು ಮಜಲು. ಯಾಕೆಂದರೆ, ಅವರು ಅಧಿಕಾರದಲ್ಲಿದ್ದಾಗಲೇ ಮದುವೆ ನಡೆದರೆ ಆಸ್ಟ್ರೇಲಿಯಾ ಮಟ್ಟಿಗೆ ಅದೊಂದು ದಾಖಲೆಯಾಗುತ್ತದೆ. ಅಧಿಕಾರದಲ್ಲಿದ್ದಾಗ ಮದುವೆಯಾದ ಮೊಟ್ಟಮೊದಲ ಪ್ರಧಾನಿ ಎನ್ನುವ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಸಲ್ಲುತ್ತದೆ.

ತಮ್ಮ ಅಧಿಕಾರಾವಧಿಯಲ್ಲಿ ಒಬ್ಬ ಪ್ರಧಾನಮಂತ್ರಿ ಮದುವೆಯಾಗುವುದು, ಮತ್ತೊಬ್ಬರು ತಾಯಿಯಾಗುವುದು ಅಪರೂಪದ ವಿಷಯಗಳೇ. ನಮಗೆಲ್ಲಾ ತಿಳಿದಿರುವಂತೆ ರಾಜಕೀಯದಲ್ಲಿ ಬೆಳೆಯುವುದಕ್ಕೆ, ಪ್ರಾಮುಖ್ಯತೆ ಗಳಿಸುವುದಕ್ಕೆ ಅನೇಕ ಕಾಲ ಹಿಡಿಯುತ್ತದೆ. ಮದುವೆಯಾಗುವುದಕ್ಕೆ ವಯಸ್ಸು ಗೌಣ. ಆದರೆ ಮಗು ಹೆರುವುದಕ್ಕೆ ವಯಸ್ಸು ಮುಖ್ಯವಾಗುತ್ತದೆ. ಈ ವಿಷಯವನ್ನು ಗಮನಿಸಿದರೆ ಇಲ್ಲಿಯವರೆಗೆ ಕೇವಲ ಇಬ್ಬರು ಮಹಿಳಾ ಪ್ರಧಾನಿಗಳು ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಕಿಸ್ತಾನದ ಬೆನೆಝೀರ್ ಭುಟ್ಟೊ ಮತ್ತು ನ್ಯೂ ಝಿಲ್ಯಾಂಡ್ ದೇಶದ ಜಸಿಂಡಾ ಆರ್ಡೆರ್ನ್ ನಲವತ್ತಕ್ಕೂ ಮೊದಲೆ ಅಧಿಕಾರಕ್ಕೆ ಬಂದು ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಾ ತಮ್ಮ ಮಗುವಿಗೆ ಜನ್ಮ ಕೊಟ್ಟದ್ದು ವಿಶೇಷವಾದ ವಿಷಯ. ನಮ್ಮ ಭಾರತದ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರಂತೆ ಬೆನೆಝೀರ್ ಭುಟ್ಟೊ ಅವರಿಗೆ ತಮ್ಮ ಹೆಸರಾಂತ ಭುಟ್ಟೊ ಮನೆತನದ ಬೆಂಬಲವಿತ್ತು. ರಾಜಕೀಯವು ರಕ್ತಗತವಾಗಿ ಬಂದಿತ್ತು. ಆದರೆ ಜಸಿಂಡಾ ಆರ್ಡೆರ್ನ್ ತಮ್ಮ ಹೈಸ್ಕೂಲ್ ದಿನಗಳಿಂದ ಸ್ವಂತ ಸಾಮರ್ಥ್ಯ, ಬುದ್ಧಿವಂತಿಕೆ, ಕಠಿಣ ಶ್ರಮದಿಂದ ರಾಜಕೀಯ ವಲಯದಲ್ಲಿ ಬೆಳೆದವರು. ಮಗುವಿಗೆ ಜನ್ಮ ಕೊಟ್ಟು, ಬಾಣಂತಿಯಾಗಿದ್ದೂ ತಮ್ಮ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸಿದ ಹೆಮ್ಮೆಯ ಹೆಣ್ಣು ಇವರು. ಹಾಗೆ ನೋಡಿದರೆ ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಮಹಿಳಾ ರಾಜಕೀಯ ನಾಯಕರು, ಪ್ರಧಾನಿಗಳು, ಅಧ್ಯಕ್ಷರು, ಚಾನ್ಸಲರ್ ಮುಂತಾದವರ ಉದಾಹರಣೆಗಳು ಇವೆ. ಆದರೆ ಇವರ ಸಂಖ್ಯೆ ಪುರುಷರಷ್ಟು ಇಲ್ಲ. ಪಾಶ್ಚಾತ್ಯ ದೇಶಗಳ ಮಟ್ಟಿಗೆ ಹೇಳುವುದಾದರೆ ನ್ಯೂಝಿಲ್ಯಾಂಡ್ ದೇಶದ ಜಸಿಂಡಾ ಆರ್ಡೆರ್ನ್ ಅವರಷ್ಟು ಸಾಮರ್ಥ್ಯದ ಉದಾಹರಣೆಗಳು ಇಲ್ಲವೇನೋ.

ಇರಲಿ, ಮತ್ತೆ ನಮ್ಮ ಆಸ್ಟ್ರೇಲಿಯಾ ಪ್ರಧಾನಿ ಮದುವೆ ವಿಷಯಕ್ಕೆ ಬರೋಣಂತೆ. ೨೦೧೯ ರಿಂದ ಆಲ್ಬಾನೀಸಿ ಮತ್ತು ಹೇಡನ್ ಜೊತೆಯಾಗಿ ಕೂಡುಜೀವನ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮದುವೆಗಳಿಗಿಂತಲೂ ಇಂತಹ live-in-relationship ಗಳೇ ಅಧಿಕವಾಗಿವೆ. ಅವಕ್ಕೆ ನಾನಾ ಕಾರಣಗಳಿವೆ ಮತ್ತು ಅವಕ್ಕೆ ಅಧಿಕೃತ ಕಾನೂನುಬದ್ಧ ಮಾನ್ಯತೆಯಿದೆ. ೨೦೨೧ ರಲ್ಲಿ ಆಗಿನ ವಿರೋಧಪಕ್ಷ ನಾಯಕರಾಗಿದ್ದ ಆಲ್ಬಾನೀಸಿ ಗಂಭೀರವಾದ ಒಂದು ರಸ್ತೆ ಅಪಘಾತಕ್ಕೀಡಾದಾಗ ಅವರಿಗೆ ಜೋಡಿ ಹೇಡನ್ ಸಾಂತ್ವನ ಹೇಳಿ ಉಪಚರಿಸಿ, ಆಲ್ಬಾನೀಸಿ ಬಗ್ಗೆ ತನ್ನಲ್ಲಿ ಬೆಳೆದಿದ್ದ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ನಂತರದ ದಿನಗಳಲ್ಲಿ ಆಲ್ಬಾನೀಸಿ ಅವರು ೨೦೨೨ರಲ್ಲಿ ಹೊಸ ಸರಕಾರ ರಚಿಸಿ ಪ್ರಧಾನಿಯಾದ ಮೇಲೆ ಕೆಲ ಮುಖ್ಯ ಅಂತಾರಾಷ್ಟ್ರೀಯ ಭೇಟಿಗಳಲ್ಲಿ ಅವರ ಪಕ್ಕ ನಿಂತು, ಸಹಕಾರ ಬೆಂಬಲವನ್ನು ಕೊಟ್ಟು ಮಾಧ್ಯಮದವರ ಗಮನ ಸೆಳೆದಿದ್ದರು. ದೇಶದ ಪ್ರಧಾನಿಯೊಡನೆ ತಮ್ಮ ಜೀವನವನ್ನು ಹಂಚಿಕೊಂಡರೂ ಜೋಡಿ ಹೇಡನ್ ಉದ್ಯೋಗದಲ್ಲಿದ್ದುಕೊಂಡು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿದ್ದಾರೆ. ಪ್ರಧಾನಿಯ ದೂರ ಭೇಟಿಗಳಲ್ಲಿ ಜೊತೆಯಾದಾಗ ಕೆಲಸಕ್ಕೆ ರಜೆ ಹಾಕಿ ಹೋಗುತ್ತಾರೆ. ಅವರ ಆರ್ಥಿಕ ಸ್ವಾವಲಂಬನೆ ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷಣೆಗೆ ಪುಷ್ಟಿ ಕೊಡುತ್ತದೆ. ಇಲ್ಲಿ ಇದರ ಕುರಿತು ಸ್ವಲ್ಪ ಬರೆಯುತ್ತಿದ್ದೀನಿ. ಏಕೆಂದರೆ ಈ ಬಾರಿಯ ಘೋಷಣೆ ಬಹಳಷ್ಟು ಚರ್ಚೆಯನ್ನುಂಟು ಮಾಡುತ್ತಿದೆ.

(ಆಸ್ಟ್ರೇಲಿಯಾ ಪ್ರಧಾನಿ ಆಂಟೊನಿ ಆಲ್ಬಾನೀಸಿ ತಮ್ಮ ಸಂಗಾತಿ ಜೋಡಿ ಹೇಡನ್ ಅವರೊಂದಿಗೆ…)

ಪಾಶ್ಚಿಮಾತ್ಯ ಸಮಾಜಗಳಲ್ಲಿ ನಿಶ್ಚಿತಾರ್ಥ ಆಯಿತೆಂದರೆ ತಕ್ಷಣಕ್ಕೇ ಮದುವೆಯಾಗಿಬಿಡಬೇಕು ಎನ್ನುವ ನಿಯಮವೇನೂ ಇಲ್ಲ. ಕೆಲವರು ಪರ್ಮನೆಂಟ್ ಫಿಯಾನ್ಸಿಗಳಾಗೇ ಉಳಿಯುತ್ತಾರೆ. ಕೆಲವರು ಮುಂದೆಂದೊ ಒಂದು ದಿನ ಘಳಿಗೆ ಕೂಡಿಬಂದಾಗ ಮದುವೆಯಾಗುತ್ತಾರೆ. ಅಷ್ಟರಲ್ಲಿ ಅವರಿಗೆ ಮಕ್ಕಳಾಗಿರುತ್ತವೆ. ಇಂತಹ ಪದ್ಧತಿಗಳು ಸರ್ವೇಸಾಮಾನ್ಯ. ಇದರಿಂದ ಯಾರಿಗೂ ಬೇಸರವಿಲ್ಲ, ಕಷ್ಟ-ನಷ್ಟಗಳಿಲ್ಲ, ದೂಷಿಸುವುದು ಏನೂ ಇಲ್ಲ. 

ವಿಶ್ವಸಂಸ್ಥೆಯ ಘೋಷಣೆ ‘ಅವಳನ್ನು ಲೆಕ್ಕಕ್ಕೆ ಸೇರಿಸೋಣ, ಅವಳ ಸಾಮರ್ಥ್ಯಗಳನ್ನು ಪೋಷಿಸೋಣ, ಪ್ರಗತಿ ವೃದ್ಧಿಸಲಿ’ ಎನ್ನುವುದು ಈ ಮಾರ್ಚ್ ೮ ನೇ ತಾರೀಕಿನ ಮಹಿಳಾ ದಿನಾಚರಣೆಯ ಮಾತುಕತೆಗಳ ಗುರಿಯಾಗಿದೆ. ಅದೆಷ್ಟೋ ದಶಕಗಳಿಂದ ಮಹಿಳಾ ಸಬಲತೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮುಂತಾದ ಕ್ಷೇತ್ರಗಳಲ್ಲಿ ಎಷ್ಟೆಷ್ಟೋ ಕೆಲಸಗಳು ನಡೆದಿದ್ದು, ಇನ್ನೂ ನಡೆಯುತ್ತಲೇ ಇರುವಾಗ ‘ಅವಳನ್ನು ಲೆಕ್ಕಕ್ಕೆ ಸೇರಿಸೋಣ’ (Count her in) ಎನ್ನುವ ಕರೆಗೆ ಒಂದೆಡೆ ವಿಷಾದದ ಛಾಯೆಯ ಲೇಪನವಿದ್ದರೆ ಇನ್ನೊಂದೆಡೆ ಅದು ‘ಮಾಡಬೇಕಾದ ಕೆಲಸ ಇನ್ನೂ ಬೆಟ್ಟದಷ್ಟಿದೆ’ ಎನ್ನುವ ಎಚ್ಚರಿಕೆಯ ಗಂಟೆಯೂ ಆಗಿದೆ. ಹುಡುಗಿಯರಿಗೆ, ಹೆಂಗಸರಿಗೆ ಹೆಚ್ಚುತ್ತಿರುವ ಅವಕಾಶಗಳಿಂದ ಅವರ ಪಾಲ್ಗೊಳ್ಳುವಿಕೆಯ ಸಮತೆಯ ಬಗ್ಗೆ ವಿಶ್ವಾಸ ಮೂಡಿದರೆ ಅದು ಮಹಿಳಾ ಸಮಾನತೆಯನ್ನೂ ಕೂಡ ದೃಢಪಡಿಸುತ್ತದೆಯೇ ಎನ್ನುವ ಪ್ರಶ್ನೆಯನ್ನು ಹಾಗೆಯೆ ಉಳಿಸಿಬಿಡುತ್ತದೆ. ಇಪ್ಪತ್ತೊಂದನೇ ಶತಮಾನದ ಕಾಲುಭಾಗ ಮುಗಿಯುವ ವೇಳೆಯಲ್ಲಿ ನಾವಿದ್ದಾಗ ‘ಮಹಿಳೆಯನ್ನು/ಹುಡುಗಿಯನ್ನು ಲೆಕ್ಕಕ್ಕೆ ಸೇರಿಸಿ – Count her in ಎನ್ನುವ ಮಾತು ಚಿಂತೆ ಹುಟ್ಟಿಸುತ್ತದೆ. ಹಾಗೆ ಹೇಳುತ್ತಿರುವವರು ಯಾರು, ಅವರ ಲೆಕ್ಕವೇನು, ಅದರಲ್ಲಿ ನಾವು ಸೇರಬೇಕೆಂದರೆ ನಮ್ಮ ಪಾತ್ರವೇನು, ಅದನ್ನು ಅವರು ನಿಶ್ಚಯಿಸುತ್ತಾರೋ ಅಥವಾ ನಮ್ಮ ನಿರ್ಣಯಕ್ಕೆ ಬಿಡುತ್ತಾರೋ ಹೇಗೆ ಏನು, ಎನ್ನುವ ಅನೇಕ ಪ್ರಶ್ನೆಗಳು ಏಳುತ್ತವೆ.

ಅದೇ ರೀತಿ ‘Invest in her’ ಎಂದಾಗ ಹುಡುಗಿ/ಮಹಿಳೆಗೆ ಸೇರಿದ ಯಾವ್ಯಾವ ವಿಷಯಗಳಲ್ಲಿ invest ಮಾಡಬೇಕು, ಅದರ ಆಯ್ಕೆ ಅವರಿಗೇ ಸೇರಿದ್ದೋ ಇಲ್ಲಾ ಅದನ್ನು ಮತ್ತೊಬ್ಬರು ನಿರ್ಣಯಿಸುತ್ತಾರೋ, ಅಥವಾ ಮೊದಲಿನಂತೆ ಪರೋಕ್ಷ ಕೈಗಳ ನಿಯಂತ್ರಣಕ್ಕೊಳಗಾಗಬೇಕೇ, ಎನ್ನುವ ಚಿಂತನೆಗಳು ಕೂಡ ಮುಖ್ಯವಾಗುತ್ತದೆ. ‘ಮಹಿಳಾ ಪ್ರಗತಿ ಸಮಾಜದ ಪ್ರಗತಿ’ ಎನ್ನುವ ದಶಕಗಳ ಕರೆ ಈಗಲೂ ಮತ್ತೆ ಮೊಳಗುತ್ತಿದೆ ಎಂದರೆ ನಮ್ಮ ಪ್ರಪಂಚದಲ್ಲಿ, ಸಮಾಜಗಳಲ್ಲಿ ಇನ್ನೂ ಮಹಿಳಾ ಸಮತೆ ಮತ್ತು ಸಮಾನತೆಗಳ ಸಾಧನೆಯಾಗಿಲ್ಲ ಅಂದರ್ಥ. ಆಗಿದ್ದಿದ್ದರೆ ಪಾಶ್ಚಾತ್ಯ ದೇಶಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳಾ ಪ್ರಧಾನಿಗಳು, ಅಧ್ಯಕ್ಷರು ಇರುತ್ತಿದ್ದರು. ಪ್ರಗತಿ ಹೊಂದುತ್ತಿರುವ (developing) ದೇಶಗಳಲ್ಲಿ ದಿನನಿತ್ಯವೂ ದುಡಿಯುತ್ತಿರುವ ಮಹಿಳೆಯರ ಆರ್ಥಿಕ ಬಲವನ್ನು ಇನ್ನೂ ಗುರುತರ ಮಟ್ಟದಲ್ಲಿ ಗಮನಿಸುತ್ತಿದ್ದರು. ಎಲ್ಲೆಲ್ಲೂ ನಡೆಯುತ್ತಿರುವ ಮಹಿಳಾ ವಿರುದ್ಧ ದೌರ್ಜನ್ಯಗಳು ಕಡಿಮೆಯಾಗುತ್ತಿದ್ದವು. ಮಹಿಳೆಯರ ಆರೋಗ್ಯ ಮತ್ತು ರಕ್ಷಣೆಗಳು ಸುಧಾರಿಸುತ್ತಿದ್ದವು.

ವಿಶ್ವವಿಖ್ಯಾತರಾದ, ನೊಬೆಲ್ ಪ್ರಶಸ್ತಿ ಪಡೆದ, ಗೌರವಾನ್ವಿತರಾದ ಶ್ರೀ ಅಮಾರ್ತ್ಯ ಸೆನ್ ನನಗೆ ಬಹಳ ಪ್ರಿಯರಾದ ವಿದ್ವಾಂಸರು. ಇವರ ‘ಮಾನವ ಪ್ರಗತಿ ಮತ್ತು ಜೀವನ ಗುಣಮಟ್ಟ’ (human development and quality of life), ಮತ್ತು ‘ಮಹಿಳಾ ಪ್ರಗತಿ’ ವಿಚಾರಧಾರೆಗಳು ನನ್ನನ್ನು ಮತ್ತು ನನ್ನ ಪಿ.ಎಚ್.ಡಿ ಅಧ್ಯಯನವನ್ನು ಆಳವಾಗಿ ಪ್ರಭಾವಿಸಿವೆ. ಅವರು ಒಂದೆಡೆ ಹೇಳುತ್ತಾರೆ- “ಒಮ್ಮೆ ಪತ್ರಿಕಾ ವರದಿಗಾರರೊಬ್ಬರು ನನ್ನನ್ನು ಪ್ರಶ್ನಿಸಿದರು- ‘ವರ್ಷಗಳಿಂದಲೂ ನೀವು ಹೇಳಿದ ವಿಷಯವನ್ನೇ ಮತ್ತೆ ಮತ್ತೆ ಹೇಳುತ್ತಾ ಇದ್ದೀರಿ. ನಿಮ್ಮ ಅಧ್ಯಯನಗಳಲ್ಲಿ ಹೊಸತೇನಾದರೂ ಇದೆಯೇ’ ಎಂದು. ನಾನು ಹೇಳಿದೆ, “ಸಮಸ್ಯೆಗಳು, ಪ್ರಶ್ನೆಗಳು ಹಾಗೇ ಉಳಿದಿವೆ, ಅವಲ್ಲಿ ಏನೂ ಸುಧಾರಣೆಯಾಗಿಲ್ಲ. ಹಾಗಾಗಿ ನಾನು ಇನ್ನೂ ಅವುಗಳ ಬಗ್ಗೆಯೇ ಮಾತನಾಡಬೇಕಾಗಿದೆ”. ಮುಖ್ಯವಾಗಿ ಅಮಾರ್ತ್ಯ ಸೆನ್ ಅವರು ಬೆಟ್ಟು ಮಾಡಿ ತೋರಿಸಿದ್ದು ಮಹಿಳಾ ಪ್ರಗತಿ ವಿಷಯದಲ್ಲಿ ಇನ್ನೂ ಬಾಕಿಯಿರುವ ಸಮಸ್ಯೆಗಳು, ಪ್ರಶ್ನೆಗಳು. ಅವರ ಮಾತು ಆಗಲೂ ನಿಜ, ಈಗಲೂ ನಿಜ. ‘Count her in’ ಎನ್ನುವ ಕರೆ ಇನ್ನೆಷ್ಟು ವರ್ಷಗಳ ಕಾಲ ಕೇಳಿ ಬರುತ್ತದೆಯೋ ಏನೋ.

ಎಲ್ಲಾ ಕಾಲಕ್ಕೂ ಸಲ್ಲುವ ಹಿರಿಯ ಜ್ಞಾನಿ, ಪ್ರಖಂಡ ಚಿಂತಕ ಅಮಾರ್ತ್ಯ ಸೆನ್ ಹೇಳಿದಂತೆ ಮಹಿಳಾ-ಸಂಬಂಧಿತ ವಿಷಯಗಳಲ್ಲಿ ಗಮನಾರ್ಹ ಪ್ರಗತಿ, ಸುಧಾರಣೆ, ಬದಲಾವಣೆಗಳು ನಿಧಾನವಾಗಿ, ಬಹುನಿಧಾನವಾಗಿ ಜರುಗುತ್ತಿದೆ. ಅವು ಪುನಃಪುನಃ ಚರ್ಚೆಯಾಗುತ್ತಿವೆ. ಆಗುತ್ತಲೇ ಇವೆ. ಕೆಲಸ ನಡೆಯುತ್ತಲೇ ಇದೆ. ಆದರೆ ಬದಲಾವಣೆಯಾಗಬೇಕಾಗಿರುವುದು ಮನೋಭಾವಗಳಲ್ಲಿ, ಧೋರಣೆಗಳಲ್ಲಿ, ನಂಬಿಕೆಗಳಲ್ಲಿ, ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ-ಆರ್ಥಿಕ-ರಾಜಕೀಯ ನಿಲುವುಗಳಲ್ಲಿ. ನಿಮ್ಮೆಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.