ಚೇತರಿಸಿಕೊಳ್ಳಲೇ ಸಾಧ್ಯವಾಗದಷ್ಟು ಬಲಹೀನಳಾಗಿದ್ದ ಜೋಸಿ ಒಮ್ಮೆ ಸೂರ್ಯನ ಕಿರಣ ತಾಕಿದ್ದೇ ಚೈತನ್ಯಶೀಲಳಾಗಿದ್ದು ಹೇಗೆ? ಅವಳು ನಿಜದ ಜೋಸಿಯೇ ಅಥವಾ ರೋಬೋ ಜೋಸಿಯೇ? ಮನುಷ್ಯ ಚೈತನ್ಯವನ್ನು ಎಷ್ಟರ ಮಟ್ಟಿಗೆ ಅನುಕರಿಸಬಹುದು, ಮನುಷ್ಯರಾಗಿ ಇರುವುದು ಎಂದರೇನು? ವ್ಯಕ್ತಿಯೊಬ್ಬಳ ಇರವು ಆಕೆಗೆ ಮಾತ್ರ ಸಂಬಂಧಿಸಿದ್ದೋ ಅಥವಾ ಅದು ಆಕೆಯ ಸುತ್ತಲಿರುವ, ಆಕೆಯನ್ನು ಬಹುವಾಗಿ ಪ್ರೀತಿಸುವ ಸಮುದಾಯಕ್ಕೆ ಸಂಬಂಧಿಸಿದ್ದೋ? ಮುಂತಾದ ಸಂಕೀರ್ಣ ಪ್ರಶ್ನೆಗಳಿಗೆ ಈ ಕಾದಂಬರಿ ಒಡ್ಡಿಕೊಳ್ಳುತ್ತದೆ.
‘ಕಾವ್ಯಾ ಓದಿದ ಹೊತ್ತಿಗೆ’ಯಲ್ಲಿ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕಜುವೊ ಇಷಿಗುರೊ ಬರೆದ ಹೊಸ ಕಾದಂಬರಿಯ “ಕ್ಲಾರಾ ಅಂಡ್ ದ ಸನ್” ಬಗ್ಗೆ ಕಾವ್ಯಾ ಕಡಮೆ ಬರಹ

 

ಈ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಬಹು ನಿರೀಕ್ಷಿತ ಕಾದಂಬರಿ “ಕ್ಲಾರಾ ಅಂಡ್ ದ ಸನ್” ಓದಿದರೆ ಆಶ್ಚರ್ಯವಾಗುತ್ತದೆ. ಕಾದಂಬರಿ ಮುಗಿಸಿದ ನಂತರ ಮುಖಪುಟವನ್ನೂ, ಲೇಖಕರ ಹೆಸರನ್ನೂ ಮತ್ತೆ ಮತ್ತೆ ತಿರುಗಿಸಿ ನೋಡಿ, ನಾನು ಓದಬೇಕೆಂದು ಆಸೆಪಟ್ಟು ಕಾಯುತ್ತಿದ್ದುದು ಇದೇ ಕಾದಂಬರಿಯನ್ನು ತಾನೇ ಎಂದು ಒಂದೆರಡು ಬಾರಿ ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ಬೇರೆ ಕಾದಂಬರಿಗೆ ಈ ಮುಖಪುಟ ಹಾಕಿ ಪುಸ್ತಕದಂಗಡಿಯವರು ಮೋಸ ಮಾಡಿಲ್ಲ ತಾನೇ ಎಂದೂ ಭ್ರಮೆಯಾಗುತ್ತದೆ. ಈ ಆತಂಕಗಳಿಗೆಲ್ಲ ಕಾರಣವೂ ಇದೆ.

(ಕಜುವೊ ಇಷಿಗುರೊ)

ಕಜುವೊ ಇಷಿಗುರೊ ಹಾಗೆಲ್ಲ ಪದೇ ಪದೇ ಪುಸ್ತಕ ಪ್ರಕಟಿಸುವುದಿಲ್ಲ. ಕೆಲವೊಮ್ಮೆ ಅವರ ಕಾದಂಬರಿಗಳ ನಡುವೆ ಹತ್ತು ವರ್ಷಗಳ ಅಂತರವಿದೆ. ಈ ಕುರಿತಾಗಿ ಸಂದರ್ಶನವೊಂದರಲ್ಲಿ ಉತ್ತರಿಸುತ್ತ ಅವರು “ಪ್ರಪಂಚದಲ್ಲಿ ವರ್ಷವರ್ಷವೂ ಪ್ರಕಟವಾಗುವ ಪುಸ್ತಕಗಳ ಸಂಖ್ಯೆಯೇನೂ ಕಡಿಮೆಯಲ್ಲ. ಸಂಖ್ಯೆಗಳ ಕುರಿತು ನಾನು ಯಾವತ್ತೂ ತಲೆ ಕೆಡಿಸಿಕೊಂಡವನಲ್ಲ. ಒಂದು ವಸ್ತುವನ್ನು ಕಾದಂಬರಿ ಮಾಡಬೇಕೇ ಬೇಡವೇ ಎಂಬ ಪ್ರಶ್ನೆಯನ್ನು ಯಾವತ್ತೂ ಕೇಳಿಕೊಳ್ಳುತ್ತೇನೆ. ಅದೇ ಕಾರಣಕ್ಕೆ ಶುರು ಮಾಡಿದ ಎಷ್ಟೊಂದು ಡ್ರಾಫ್ಟ್‌ಗಳನ್ನು ಮುಂದುವರಿಸದೇ ಇದ್ದದ್ದೂ ಇದೆ” ಅಂದಿದ್ದಾರೆ.

2017ರಲ್ಲಿ ನೊಬಲ್ ಪ್ರಶಸ್ತಿ ಇಷಿಗುರೊ ಅವರನ್ನರಸಿ ಬಂದ ನಂತರ ಪ್ರಕಟವಾಗುತ್ತಿರುವ ಮೊದಲ ಕಾದಂಬರಿ “ಕ್ಲಾರಾ ಅಂಡ್ ದ ಸನ್.” ಇಲ್ಲಿನ ತನಕ ಪ್ರಕಟವಾಗಿರುವ ಅವರ ಏಳು ಕಾದಂಬರಿಗಳಿಗಿಂಥ ಈ ಹೊಸ ಕಾದಂಬರಿ ಭಿನ್ನವಾದುದು. ಭಾಷೆಯಲ್ಲಿ, ಆಕೃತಿ- ನಿರೂಪಣೆ, ವಸ್ತು ವಿಷಯಗಳಲ್ಲಿ ಹೊಸ ರೂಪಗಳನ್ನು ತೊಟ್ಟು ನಿಂತಂತೆ ಕಾಣುವ ಈ ಬರಹದ ಸಾರವನ್ನು ಒಂಚೂರೇ ಹಳಿ ತಪ್ಪಿದರೂ ಓದುಗರು ಕಡೆಗಣಿಸಿ ಬಿಡಬಹುದಾದ ಸಾಧ್ಯತೆಯಿದೆ. ಈ ರಿಸ್ಕ್‌ಗಳ ಅರಿವಿದ್ದೂ “ಆನು ಒಲಿದಂತೆ ಹಾಡುವೆ” ಎಂದು ಕಾದಂಬರಿಗೆ ಇದೇ ಆಕೃತಿಯನ್ನು ಉಳಿಸಿಕೊಂಡು ಬರೆಯುವುದಕ್ಕೆ ಖಂಡಿತ ಧೈರ್ಯ ಬೇಕು.

ಕಥೆ ಸರಳವಾದದ್ದೇ. ಆರೋಗ್ಯ ಸರಿಯಿಲ್ಲದ, ಮಾರಕ ಕಾಯಿಲೆಯಿಂದ ಬಳಲುತ್ತಿರುವ ಜೋಸಿ ಎಂಬ ಹದಿನಾಲ್ಕು ವರ್ಷದ ಹುಡುಗಿಗೆ ಸ್ನೇಹಿತೆಯಾಗಿರಲು ಕ್ಲಾರಾ ಎಂಬ ರೋಬೋಟನ್ನು ಜೋಸಿಯ ತಾಯಿ ಕ್ರಿಸ್ಸಿ ಕೊಡಿಸಿರುತ್ತಾಳೆ. ಈ ಕಾದಂಬರಿ ನಡೆಯುವ ಕಾಲವನ್ನು ಲೇಖಕರು ಎಲ್ಲಿಯೂ ಸ್ಪಷ್ಟಪಡಿಸುವುದಿಲ್ಲ. ಹಾಗೆ ನೋಡಿದರೆ ಜೋಸಿಯ ಸ್ನೇಹಿತರೆಲ್ಲರ ಬಳಿಯೂ ಇಂಥ ಸ್ನೇಹಪರ ರೋಬೋಟ್‌ಗಳಿವೆ. ಜೋಸಿಯನ್ನೂ ಸೇರಿದಂತೆ ಇಲ್ಲಿ ಬರುವ ಬಹುತೇಕ ಎಳೆಯರು ಮೇಲ್ವರ್ಗಕ್ಕೆ ಸೇರಿದವರು. ಜೀನ್ ಎಡಿಟಿಂಗ್ ಎಂಬ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮ ಪ್ರತಿಭೆಯನ್ನು ದುಪ್ಪಟ್ಟುಗೊಳಿಸಿಕೊಂಡವರು.

ಜೋಸಿ ಚಿತ್ರ ಕಲಾವಿದೆ. ಎಷ್ಟೇ ಹತ್ತಿರವಿದ್ದರೂ ರೋಬೋಟೊಂದು ಆಟಿಕೆಯೇ ಹೊರತು ಮನುಷ್ಯ ಸಂಬಂಧಗಳಿಗೆ ಬದಲಿಯಾಗಲಾರದು ಎಂಬ ಅರಿವು ಆಕೆಗಿದೆ. ಆಕೆಯ ತಾಯಿ ಮತ್ತು ತಂದೆ ಮನೋಗುಣಗಳ ವೈರುಧ್ಯದ ಕಾರಣವಾಗಿ ಬೇರೆಯಾಗಿದ್ದಾರೆ. ಒಟ್ಟಿನಲ್ಲಿ ಕತೆಗಿಂಥ ಹೆಚ್ಚಾಗಿ ಪುಸ್ತಕದಲ್ಲಿ ಅಪೂರ್ಣ ಸುಳುಹುಗಳೇ ಹೆಚ್ಚಿವೆ. ಕೇವಲ ಅಂತ್ಯವನ್ನಷ್ಟೇ ಓಪನ್ ಎಂಡೆಡ್ ಆಗಿ ಬಿಡದೇ ನಿರೂಪಣೆಯುದ್ದಕ್ಕೂ ಹಲವಾರು ತೆರೆದ ಸುಳಿವುಗಳನ್ನು ಲೇಖಕರು ಬಿಡುತ್ತ ಸಾಗಿರುವುದು ಪುಸ್ತಕ ಮುಗಿಸಿಟ್ಟ ಮೇಲೂ ಅದು ಅಷ್ಟೊಂದು ಕಾಡುವುದಕ್ಕೆ ಕಾರಣವಿರಬಹುದೇನೋ.

ಒಂದು ಮುಖ್ಯ ಉದಾಹರಣೆಯ ಜೊತೆಗೆ ಹೇಳಬೇಕೆಂದರೆ ಇಡೀ ಕಾದಂಬರಿಯ ನಿರೂಪಕಿ ಜೋಸಿಯಲ್ಲ, ಇನ್ನೊಂದು ಮುಖ್ಯ ಪಾತ್ರವಾದ ಅವಳ ತಾಯಿ ಕ್ರಿಸ್ಸಿಯೂ ಅಲ್ಲ. ಈ ಕಾದಂಬರಿಯ ನಿರೂಪಕಿ ಕ್ಲಾರಾ ಎಂಬ ಸೌರಶಕ್ತಿ ಚಾಲಿತ ರೋಬೋಟ್. ಸೂರ್ಯನ ಕೃಪೆಯಿಂದಲೇ ಚೈತನ್ಯ ಪಡೆವವಳು. ಕೆಲವು ಸಂಗತಿಗಳಲ್ಲಿ ತನ್ನ ಸೃಷ್ಟಿಕರ್ತರಾದ ಮನುಷ್ಯರಿಗಿಂಥ ಜಾಣೆ. ಆದರೆ ಮನುಷ್ಯ ಲೋಕದ ಸೂಕ್ಷ್ಮಗಳು ಅವಳಿಗೆ ವಿಚಿತ್ರವಾಗಿ ಕಾಣಿಸುತ್ತವೆ. ಲೋಕವನ್ನು ಕ್ಲಾರಾಳ ಕಣ್ಗಳಿಂದಲೇ ತೋರಿಸಿರುವುದಕ್ಕೆ ಲೇಖಕರಿಗೆ ಒಂದು ಬಗೆಯ ಸ್ವಾತಂತ್ರ್ಯವೂ ಲಭಿಸಿದೆ. ಮನುಷ್ಯಳಲ್ಲದ, ಕೇವಲ ಯಂತ್ರಮಾತ್ರವಾದವಳು ಕತೆಯ ನಿರೂಪಕಿಯಾದರೆ ನಮಗೆ ಕಾಣದ ಬಗೆಯಲ್ಲಿ ಲೋಕ ದರ್ಶನ ಆಕೆಗೆ (‘ಅದಕ್ಕೆ’ ಅನ್ನಲು ಮನಸ್ಸು ಬರುವುದಿಲ್ಲ) ಸಾಧ್ಯವಾಗಿದೆ.

“ಸಂಖ್ಯೆಗಳ ಕುರಿತು ನಾನು ಯಾವತ್ತೂ ತಲೆ ಕೆಡಿಸಿಕೊಂಡವನಲ್ಲ. ಒಂದು ವಸ್ತುವನ್ನು ಕಾದಂಬರಿ ಮಾಡಬೇಕೇ ಬೇಡವೇ ಎಂಬ ಪ್ರಶ್ನೆಯನ್ನು ಯಾವತ್ತೂ ಕೇಳಿಕೊಳ್ಳುತ್ತೇನೆ. ಅದೇ ಕಾರಣಕ್ಕೆ ಶುರು ಮಾಡಿದ ಎಷ್ಟೊಂದು ಡ್ರಾಫ್ಟ್‌ಗಳನ್ನು ಮುಂದುವರಿಸದೇ ಇದ್ದದ್ದೂ ಇದೆ” ಅಂದಿದ್ದಾರೆ ಕಜುವೊ ಇಷಿಗುರೊ.

ಇನ್ನೇನು ಕಾಯಿಲೆಯಿಂದ ಮರಣವನ್ನಪ್ಪುವ ಜೋಸಿಯನ್ನು ಉಳಿಸಿಕೊಳ್ಳಲು ಕ್ಲಾರಾಳೂ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾಳೆ. ತನ್ನ ತಂದೆಯಾದ (?) ಸೂರ್ಯನೊಂದಿಗೆ ತನ್ನದೇ ಬಗೆಯಲ್ಲಿ ಒಪ್ಪಂದ ಮಾಡಿಕೊಂಡು ಜೋಸಿಯನ್ನು ಉಳಿಸಿಕೊಡಲು ಸೂರ್ಯನಲ್ಲಿ ಪ್ರಾರ್ಥಿಸುತ್ತಾಳೆ. ನಡುವೊಮ್ಮೆ ಜೋಸಿಯ ತಾಯಿ ಕ್ರಿಸ್ಸಿ ಜೋಸಿಯ ರೂಪದ್ದೇ ಇನ್ನೊಂದು ರೋಬೋಟ್‌ಗಳನ್ನು ತಯಾರಿಸಲು ಆರ್ಡರ್ ಕೊಟ್ಟಿರುವುದು ಕ್ಲಾರಾಳಿಗೆ ತಿಳಿಯುತ್ತದೆ. ಜೋಸಿ ತೀರಿ ಹೋದ ಮೇಲೆ ಮಗಳಾಗಿ ಇರಲು, ದುಃಖ ಮರೆಸಲು ಉಪಯುಕ್ತವಾಗಬಹುದಾದ ಈ ರೋಬೋಟನ್ನು ತಯಾರಿಸಲು, ಅದರಲ್ಲಿ ಜೋಸಿಯದೇ ಗುಣಸ್ವಭಾವಗಳನ್ನು ತುಂಬಲು ತಾನೂ ಸಹಾಯ ಮಾಡುವುದಾಗಿ ಕ್ಲಾರಾ ಒಪ್ಪಿಕೊಳ್ಳುತ್ತಾಳೆ. ಆದರೆ ಕ್ರಿಸ್ಸಿ ಕ್ಲಾರಾಳಿಂದ ಕೇಳುವುದು ಅದಕ್ಕಿಂಥ ಹೆಚ್ಚಿನ ಸಹಾಯವನ್ನು. ಅದನ್ನು ಕ್ಲಾರಾ ಒಪ್ಪಿಕೊಳ್ಳುವಳೇ? ಅವಳಿಗದನ್ನು ನಿರ್ವಹಿಸಲು ಸಾಧ್ಯವೇ?

ಜೋಸಿಗೆ ರಿಕ್ ಎಂಬ ಬಾಯ್‍ಫ್ರೆಂಡ್ ಇರುತ್ತಾನೆ. ಅವನು, ಅವನ ವಯಸ್ಸಿನ ಹಲವರಂತೆ ಲಿಫ್ಟೆಡ್ (ಅಂದರೆ ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಜೀನ್ ಎಡಿಟಿಂಗ್ ಮಾಡಿಕೊಂಡು ಪ್ರತಿಭೆಯನ್ನು ಹೆಚ್ಚಿಸಿಕೊಂಡವ) ಅಲ್ಲ. ಹೀಗಾಗಿ ಒಮ್ಮೊಮ್ಮೆ ಜೋಸಿಯೂ ಸೇರಿದಂತೆ ಆಕೆಯ ಲಿಫ್ಟೆಡ್ ಸ್ನೇಹಿತರೆಲ್ಲ ರಿಕ್‌ನನ್ನು ಕೇವಲವಾಗಿ ನೋಡುತ್ತಾರೆ. ಮನುಷ್ಯ ಸಂಬಂಧದ ಎಳೆಗಳನ್ನು ಅರ್ಥೈಸಿಕೊಳ್ಳಲು ಕ್ಲಾರಾ ರಿಕ್‌ನ ಸಹಾಯವನ್ನೂ ಪಡೆಯುತ್ತಾಳೆ. ಜೋಸಿಯ ಚಿತ್ರಗಳಿಗೆಲ್ಲ ಶಬ್ದಗಳನ್ನು, ಮಾತುಗಳನ್ನು ಒದಗಿಸುವ ರಿಕ್, ಮತ್ತು ಮಗನನ್ನು ಹೇಗಾದರೂ ಸರಿ, ಲಿಫ್ಟೆಡ್ ಮಕ್ಕಳ ಜೊತೆಗೆ ಸೇರಿಸಬೇಕೆಂದು ಪ್ರಯತ್ನಿಸುವ ಆತನ ತಾಯಿ ಹೆಲನ್ ಕ್ಲಾರಾಳಿಗೆ ಹೊಸ ನೋಟಗಳನ್ನು ದಯಪಾಲಿಸುತ್ತಾರೆ.

ಚೇತರಿಸಿಕೊಳ್ಳಲೇ ಸಾಧ್ಯವಾಗದಷ್ಟು ಬಲಹೀನಳಾಗಿದ್ದ ಜೋಸಿ ಒಮ್ಮೆ ಸೂರ್ಯನ ಕಿರಣ ತಾಕಿದ್ದೇ ಚೈತನ್ಯಶೀಲಳಾಗಿದ್ದು ಹೇಗೆ? ಅವಳು ನಿಜದ ಜೋಸಿಯೇ ಅಥವಾ ರೋಬೋ ಜೋಸಿಯೇ? ಮನುಷ್ಯ ಚೈತನ್ಯವನ್ನು ಎಷ್ಟರ ಮಟ್ಟಿಗೆ ಅನುಕರಿಸಬಹುದು? ಮನುಷ್ಯರಾಗಿ ಇರುವುದು ಎಂದರೇನು? ವ್ಯಕ್ತಿಯೊಬ್ಬಳ ಇರುವು ಆಕೆಗೆ ಮಾತ್ರ ಸಂಬಂಧಿಸಿದ್ದೋ ಅಥವಾ ಅದು ಆಕೆಯ ಸುತ್ತಲಿರುವ, ಆಕೆಯನ್ನು ಬಹುವಾಗಿ ಪ್ರೀತಿಸುವ ಸಮುದಾಯಕ್ಕೆ ಸಂಬಂಧಿಸಿದ್ದೋ? ಮುಂತಾದ ಸಂಕೀರ್ಣ ಪ್ರಶ್ನೆಗಳಿಗೆ ಈ ಕಾದಂಬರಿ ಒಡ್ಡಿಕೊಳ್ಳುತ್ತದೆ.

ಈ ಕಾದಂಬರಿ ಕಾಡಲು ಶುರುವಾಗುವುದು ಓದಿ ಎತ್ತಿಟ್ಟ ಎರಡು ದಿನಗಳ ನಂತರ. ಓದುವಾಗ, ಓದಿ ಮುಗಿಸುವಾಗ ಸರಳವೆನಿಸಿದ ಕತೆ ನಿಜಕ್ಕೂ ಅಷ್ಟು ಸರಳವಾದದ್ದೇ ಎಂಬ ಯೋಚನೆ ಎಲ್ಲಿಂದಲೋ ಬಂದು ಮನಸ್ಸಿನಲ್ಲಿ ಕುಳಿತು ಬಿಡುತ್ತದೆ. ಆ ನಂತರ ಆ ಹಿಡಿತದಿಂದ ತಪ್ಪಿಸಿಕೊಳ್ಳಲೇ ಆಗುವುದಿಲ್ಲ. ಕತೆ ಸರಳತೆಯ ಬಟ್ಟೆ ತೊಟ್ಟಿರುವುದರಿಂದ ಘಟನೆಗಳು, ಪಾತ್ರಗಳೆಲ್ಲ ಚಾಚೂ ತಪ್ಪದೇ ನೆನಪಿರುತ್ತವೆ. ಆದರೆ ಓದುವಾಗ ಅಂದುಕೊಂಡಿದ್ದೆಲ್ಲ, ಅನ್ನಿಸಿದ್ದೆಲ್ಲ ಸತ್ಯವೇ ಅಥವಾ ಅಲ್ಲಿ ಹೇಳಿದ ಪ್ರತಿಯೊಂದಕ್ಕೂ ಬೇರೆ ಆಯಾಮವಿದೆಯೇ ಅನ್ನಿಸಿ ಸಂಕಟ ಶುರುವಾಗುತ್ತದೆ.

ಹಾಗಂತ ಇನ್ನೊಮ್ಮೆ ಕಾದಂಬರಿಯನ್ನು ಮೊದಲಿನಿಂದ ಓದಲು ತೊಡಗಿದರೂ ಈ ರಹಸ್ಯವನ್ನು ಭೇದಿಸಲಾಗುವುದಿಲ್ಲ. ಏಕೆಂದರೆ ಅಲ್ಲಿರುವುದು ಕೇವಲ ಶಬ್ದಗಳು. ಕಾದಂಬರಿ ಬೆಳೆಯಬೇಕಾದುದು ನಂತರ ನಮ್ಮ ಪ್ರಜ್ಞೆಯಲ್ಲಿ. ಇದೊಂಥರಾ ವಿಚಿತ್ರವಾದ ಆಟ. ಕಾದಂಬರಿಕಾರ ಮತ್ತು ಓದುಗರ ನಡುವೆ ನಡೆಯುವಂಥದ್ದು. ಕಾದಂಬರಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಓದಿ, ನಂತರ ಪುಸ್ತಕ ಮುಚ್ಚಿಟ್ಟು ಯೋಚಿಸು ಅಂತ ಇಷಿಗುರೊ ಸವಾಲೆಸೆದಂತೆ ಭಾಸವಾಗುತ್ತದೆ.

ಸೂರ್ಯನ ಕೃಪೆಯನ್ನು ತಾನು ಧರಿಸಿ ವಾಸಿಯಾಗುವುದಲ್ಲದೇ ತನ್ನ ಸುತ್ತಣ ಜಗತ್ತಿನ ಗಾಯಗಳನ್ನೂ ಮಾಯಿಸುತ್ತೇನೆ ಎಂದು ಮುಗ್ಧವಾಗಿ ನಂಬುವ ಕ್ಲಾರಾ ಕೇವಲ ಒಂದು ರೋಬೋಟ್ ಆಗಿ ಕಾಣುವುದಿಲ್ಲ. ಅವಳಲ್ಲಿ ಒಡಮೂಡಿರುವ ಅರಿವು, ಪ್ರಜ್ಞೆ ದತ್ತವಾಗಿದ್ದು ಅವಳ ಸೃಷ್ಟಿಕರ್ತರಾದ ಮನುಷ್ಯರಿಂದ. ಧಣಿಗಳು ಆಳುಗಳಿಗೆ ಪಾಠ ಹೇಳಲು ತೊಡಗಿದರೆ ಆಗುವ ಪ್ರಮಾದವೇ ಇಲ್ಲೂ ಆಗುತ್ತದೆ. ಈ ಸಂಬಂಧದ ಮೂಲವನ್ನು ಬಗೆಯಲು ಹೊರಟರೆ ಅದು ನಮ್ಮ ಸಂಸ್ಕೃತಿಯಲ್ಲಿ ಹಿಂದೆ ಹಿಂದೆ ಹೋಗಿ, ಆಡಮ್ ಮತ್ತು ಈವ್‌ರ ನಂಟಿನ ತನಕ ಹೋಗಿ ನಿಲ್ಲುತ್ತದೆ, ಓದುಗರನ್ನು ವಿಚಾರಕ್ಕೆ ಹಚ್ಚುತ್ತದೆ.

ಕ್ಲಾರಾ ತನ್ನನ್ನು ಕಾಣಿಸುತ್ತಲೇ ಸುಪ್ತವಾಗಿ ನಮ್ಮ ಬೌದ್ಧಿಕ ಊನಗಳಿಗೂ ಕನ್ನಡಿ ಹಿಡಿಯುತ್ತಾಳೆ.