ಸೋಂದೆಯ ಶ್ರೀವಾದಿರಾಜಮಠದ ಆವರಣದಲ್ಲಿ ವಾದಿರಾಜ ಮತ್ತಿತರ ಯತಿಗಳ ವೃಂದಾವನಗಳಲ್ಲದೆ ಅನೇಕ ಪ್ರಾಚೀನ ಗುಡಿಗಳಿದ್ದು ಅವುಗಳಲ್ಲಿ ಶ್ರೀವಾದಿರಾಜರೇ (ಕ್ರಿ.ಶ.1585) ಸ್ಥಾಪಿಸಿದ ರಮಾ ತ್ರಿವಿಕ್ರಮದೇಗುಲವು ಪ್ರಮುಖವಾಗಿದೆ. ಮಠದ ಆವರಣದ ನಡುವೆ ಸ್ಥಿತವಾಗಿರುವ ಈ ಪ್ರಾಚೀನ ದೇಗುಲಕ್ಕೆ ಚಾಲುಕ್ಯಶೈಲಿಯ ಸರಳವಾದ ಶಿಖರ. ಆರು ಸ್ತರಗಳ ಮೇಲೆ ಲೋಹದ ಕಳಶ. ದೇವಾಲಯದ ಸುತ್ತ ಸಪಾಟಾದ ಸುತ್ತುಗೋಡೆಯ ಮೇಲೆ ಅಲ್ಲಲ್ಲಿ ರೇಖಾಚಿತ್ರಗಳಂತಹ ಕೆತ್ತನೆಗಳು. ಹನುಮ ಗರುಡ ಕೋತಿ ಹಂಸ ಮೊದಲಾದವನ್ನು ಇಲ್ಲಿ ಕಾಣಬಹುದು. ಕೆಲವು ಉಬ್ಬುಶಿಲ್ಪಗಳೂ ಇವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತೇಳನೆಯ ಕಂತು
ಮಲೆನಾಡ ನಡುವಣ ದಟ್ಟ ಹಸುರೊಳಗಣ ಗ್ರಾಮೀಣ ಪ್ರದೇಶ ಸೋಂದೆ. ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪಟ್ಟಣಗಳಲ್ಲೊಂದಾದ ಶಿರಸಿಯಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರ ಕನ್ನಡನಾಡಿನ ಅತಿಮುಖ್ಯ ಧಾರ್ಮಿಕ ಕ್ಷೇತ್ರಗಳಲ್ಲೊಂದೆಂಬ ಹೆಸರು ಪಡೆದಿದೆ. ಮಾಧ್ವ ಸಂಪ್ರದಾಯದ ಅಷ್ಟಮಠಗಳಲ್ಲೊಂದರ ಜೊತೆಗೆ ಸ್ವರ್ಣವಲ್ಲೀ ಮಠ, ಜೈನ ಮಠಗಳೂ ಈ ಪರಿಸರದಲ್ಲಿವೆ. ಶಾಲ್ಮಲೀ ನದಿ ಈ ಪ್ರಾಂತ್ಯವನ್ನು ಪವಿತ್ರಗೊಳಿಸಿದೆ. ಈ ನದಿಯ ಹರಿವಿನಲ್ಲೇ ಸಹಸ್ರಲಿಂಗ ಕ್ಷೇತ್ರವಿದೆ.
ಹದಿನೇಳನೆಯ ಶತಮಾನದಲ್ಲಿ ಪ್ರವರ್ಧಮಾನವಾಗಿದ್ದ ಸ್ವಾದಿ (ಸೋದೆ) ಅರಸುಮನೆತನ ಈ ನಾಡನ್ನು ಆಳುತ್ತಿದ್ದು, ಅರಸರ ಮನೆ, ಕೋಟೆಗಳ ಕುರುಹುಗಳು ಅಲ್ಲಲ್ಲಿ ಲಭ್ಯವಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಸೋಂದೆಯು ಹೆಸರಾಂತ ಮಾಧ್ವಯತಿ ಶ್ರೀವಾದಿರಾಜರ ಜೀವನಸಾಧನೆಗಳಿಗೆ ಸಾಕ್ಷಿಯಾಗುವ ಭಾಗ್ಯ ಪಡೆದುಕೊಂಡಿದೆ.
ಸೋಂದೆಯ ಶ್ರೀವಾದಿರಾಜಮಠದ ಆವರಣದಲ್ಲಿ ವಾದಿರಾಜ ಮತ್ತಿತರ ಯತಿಗಳ ವೃಂದಾವನಗಳಲ್ಲದೆ ಅನೇಕ ಪ್ರಾಚೀನ ಗುಡಿಗಳಿದ್ದು ಅವುಗಳಲ್ಲಿ ಶ್ರೀವಾದಿರಾಜರೇ (ಕ್ರಿ.ಶ.1585) ಸ್ಥಾಪಿಸಿದ ರಮಾ ತ್ರಿವಿಕ್ರಮದೇಗುಲವು ಪ್ರಮುಖವಾಗಿದೆ. ಮಠದ ಆವರಣದ ನಡುವೆ ಸ್ಥಿತವಾಗಿರುವ ಈ ಪ್ರಾಚೀನ ದೇಗುಲಕ್ಕೆ ಚಾಲುಕ್ಯಶೈಲಿಯ ಸರಳವಾದ ಶಿಖರ. ಆರು ಸ್ತರಗಳ ಮೇಲೆ ಲೋಹದ ಕಳಶ. ದೇವಾಲಯದ ಸುತ್ತ ಸಪಾಟಾದ ಸುತ್ತುಗೋಡೆಯ ಮೇಲೆ ಅಲ್ಲಲ್ಲಿ ರೇಖಾಚಿತ್ರಗಳಂತಹ ಕೆತ್ತನೆಗಳು. ಹನುಮ ಗರುಡ ಕೋತಿ ಹಂಸ ಮೊದಲಾದವನ್ನು ಇಲ್ಲಿ ಕಾಣಬಹುದು. ಕೆಲವು ಉಬ್ಬುಶಿಲ್ಪಗಳೂ ಇವೆ.
ದೇಗುಲಕ್ಕಿಂತ ಎತ್ತರವಾಗಿರುವ ಮುಂಭಾಗದ ಧ್ವಜಸ್ತಂಭ . ಸ್ತಂಭದ ಮೇಲೆ ಕಿರುಮಂಟಪವೊಂದಿದ್ದು ಅದರಡಿಯಲ್ಲಿ ನಾಲ್ಕು ಬದಿಗೆ ಕಿರುಗಂಟೆಗಳು ಇಳಿಬಿದ್ದಿವೆ. ಸ್ತಂಭದ ಕೆಳಭಾಗದಲ್ಲಿ ನಾಲ್ಕೂ ಬದಿಯ ಫಲಕಗಳ ಮೇಲೆ ಶಿವ, ಷಣ್ಮುಖ ಮತ್ತಿತರ ವಾಹನಾರೂಢ ದೇವತೆಗಳ ಉಬ್ಬುಶಿಲ್ಪಗಳಿವೆ. ದೇಗುಲದ ಮುಖ್ಯದ್ವಾರದ ಸೋಪಾನಗಳೆಡೆಯಲ್ಲಿ ಎರಡು ಆನೆಗಳು. ಒಳಗೆ ಪ್ರವೇಶಿಸುತ್ತಿರುವಂತೆಯೇ ವಿಶಾಲವಾದ ಪ್ರದಕ್ಷಿಣಾಪಥ. ಬಾಗಿಲ ಎದುರಲ್ಲೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತನಾದ ರಮಾ ತ್ರಿವಿಕ್ರಮ.
ರಾಜ್ಯಭ್ರಷ್ಟನಾಗಿ ಕಾಡು ತಿರುಗುತ್ತಿದ್ದ ಸೋಂದೆಯ ಅರಸ ಅರಸಪ್ಪ ನಾಯಕ ಶ್ರೀವಾದಿರಾಜರ ಅನುಗ್ರಹದಿಂದ ಮರಳಿ ರಾಜ್ಯ ಪಡೆದನಂತೆ. ತನ್ನ ಕೃತಜ್ಞತೆಯ ಕುರುಹಾಗಿ ಅರಸ ಈ ದೇಗುಲವನ್ನು ಕಟ್ಟಿಸಲು ಮುಂದಾದ. ಸ್ವತಃ ವಾದಿರಾಜರೇ ಬದರಿಕ್ಷೇತ್ರದ ವೇದವ್ಯಾಸರ ಆಶ್ರಮದಿಂದ ತ್ರಿವಿಕ್ರಮದೇವರ ಮೂರ್ತಿಯನ್ನು ತರಿಸಿ ಇಲ್ಲಿ ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ. ಒಳಗುಡಿಯ ಅಕ್ಕಪಕ್ಕದಲ್ಲಿ ರಥದ ಚಕ್ರಗಳಿವೆ. ಒಂದೆಡೆ ಎರಡು ಚಕ್ರಗಳಿದ್ದರೆ ಇನ್ನೊಂದೆಡೆ ಒಂದೇ ಚಕ್ರ ಕಾಣಿಸುತ್ತದೆ. ಇದೇ ದೇಗುಲಸಂಕೀರ್ಣದಲ್ಲಿ ನೆಲೆಸಿರುವ ಭೂತರಾಜನು ವಾದಿರಾಜರ ಆದೇಶದ ಮೇರೆಗೆ ತ್ರಿವಿಕ್ರಮದೇವರ ಮೂರ್ತಿಯನ್ನು ರಥಸಹಿತ ಹೊತ್ತು ತರುತ್ತಿದ್ದನೆಂದೂ ದಾರಿಯಲ್ಲಿ ಅಡ್ಡಗಟ್ಟಿದ ರಕ್ಕಸರನ್ನು ರಥದ ಚಕ್ರವೊಂದರಿಂದ ದಮನಮಾಡಿದನೆಂದೂ ಕಥೆ. ಹೀಗಾಗಿ ಮೂರು ಚಕ್ರಗಳು ಮಾತ್ರವೇ ಉಳಿದುಕೊಂಡಿವೆ.
ಮಹಾವಿಷ್ಣುವಿನ ಆಯುಧಗಳಾದ ಶಂಖ, ಚಕ್ರ, ಗದಾ, ಪದ್ಮಗಳನ್ನು ಧರಿಸಿರುವ ಕ್ರಮದ ಆಧಾರದ ಮೇಲೆ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳನ್ನು ಗುರುತಿಸಲಾಗುತ್ತದೆ. ತ್ರಿವಿಕ್ರಮರೂಪಿ ವಿಷ್ಣು ಬಲಮೇಲುಗೈಯಲ್ಲಿ ಗದೆ, ಎಡಮೇಲುಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಾಗೂ ಬಲಗೈಯಲ್ಲಿ ಪದ್ಮಗಳನ್ನು ಧರಿಸಿರುತ್ತಾನೆ. ಇಡೀ ದೇಶದಲ್ಲೇ ತ್ರಿವಿಕ್ರಮದೇವರ ಗುಡಿ ಇದೊಂದೇ ಎಂಬ ಹೆಗ್ಗಳಿಕೆ ಹೊತ್ತ ಸೋಂದೆಯ ಗುಡಿ ಹಲರೀತಿಯ ವೈಶಿಷ್ಟ್ಯಗಳನ್ನು ತೋರ್ಪಡಿಸುತ್ತದೆ. ಕೊಳಗದಂತಹ ಕಿರೀಟ ಧರಿಸಿದ ಚತುರ್ಭುಜ ತ್ರಿವಿಕ್ರಮ ದೇವರ ಮೂರ್ತಿ ಭವ್ಯವಾಗಿದೆ. ಪ್ರಭಾವಳಿ, ದೇವರ ಪಾದದೆಡೆಯಲ್ಲಿರುವ ದೇವತಾಪರಿವಾರ ಎಲ್ಲವೂ ಸ್ಪಷ್ಟವಾಗಿ ಗೋಚರಿಸುವಂತಿವೆ. ವಿಜಯನಗರೋತ್ತರ ಕಾಲದ ಹಲವು ಶಿಲ್ಪಗಳನ್ನು ದೇಗುಲದ ಆವರಣದೊಳಗಿನ ಸುತ್ತುಮಂಟಪದ ಕಂಬಗಳ ಮೇಲೆ ಕಾಣಬಹುದು.
ಉಡುಪಿಯ ಕಡೆಗೋಲ ಕೃಷ್ಣ, ಬನವಾಸಿಯ ನರಸಿಂಹದೇವರ ಪ್ರತಿರೂಪಗಳು ಆಕರ್ಷಕವಾಗಿವೆ. ವಾಹನಾರೂಢರಾದ ಹಲವು ದಿಕ್ಪಾಲಕರು, ಹಂಸವಾಹನನಾದ ಬ್ರಹ್ಮ, ಲಕ್ಷ್ಮಿ, ಮಹಿಷಾಸುರಮರ್ದಿನಿ, ಶೇಷನಾರಾಯಣ, ವರದರಾಜ ವಿಷ್ಣು, ಮಯೂರವಾಹನನಾದ ಷಣ್ಮುಖ- ಮೊದಲಾದ ಉಬ್ಬುಶಿಲ್ಪಗಳು ಇಲ್ಲಿ ಕಂಡುಬರುತ್ತವೆ. ಸ್ವತಃ ವಾದಿರಾಜರೇ ಒಂದು ಕಂಬದ ಮೇಲೆ ಕಾಣುವುದೊಂದು ವಿಶೇಷ. ಆಶೀರ್ವದಿಸುವ ಭಂಗಿಯಲ್ಲಿ ನಿಂತ ಯತಿಗಳ ಎಡತೋಳನ್ನು ದಂಡವು ಆಧರಿಸಿದೆ.
ಬಲಪಕ್ಕದಲ್ಲಿರುವ ಕಮಂಡಲವನ್ನು ಸುತ್ತುವರೆದ ಸರ್ಪವು ಹೆಡೆಯೆತ್ತಿದೆ. ಇನ್ನೊಂದು ಬದಿಯಲ್ಲಿ ಶಿಷ್ಯರೊಬ್ಬರು ನಿಂತಿದ್ದಾರೆ. ಗದಾಧಾರಿಯಾದ ಭೀಮಸೇನನೂ ಒಂದು ಕಂಬದ ಮೇಲೆ ಮೂಡಿದ್ದಾನೆ. ಹನುಮನೂ ಕೈಮುಗಿದು ನಿಂತು ಭಕ್ತಿಯನ್ನು ತೋರ್ಪಡಿಸುತ್ತಿದ್ದಾನೆ. ಅಂಬೆಗಾಲು ಕೃಷ್ಣ, ಅಶ್ವಾರೂಢ ಕಲ್ಕಿ – ಇನ್ನಿತರ ವಿಶೇಷ ಶಿಲ್ಪಗಳು. ತ್ರಿವಿಕ್ರಮದೇವರನ್ನು ಇಲ್ಲಿಗೆ ಬಿಜಯಮಾಡಿಸಿದ ಭೂತರಾಜನಿಗೂ ಈ ಸಂಕೀರ್ಣದಲ್ಲಿ ಪ್ರತ್ಯೇಕ ಸ್ಥಾನವಿದೆ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.