ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಜೊತೆಗೆ, ದಾದಾಗಿರಿ ಮಾಡಿ ಸಾಲು ತಪ್ಪಿಸಿ ಹೋಗುವ ಸೀನಿಯರ್‌ಗಳ ಕಿರಿಕಿರಿ ಬೇರೆ. ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಪೂರ್ಣೇಶ್ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ
ಒಂದು ತರಗತಿಯಿಂದ ಮತ್ತೊಂದು ಮುಂದಿನ ತರಗತಿಗೆ ಪ್ರಮೋಟ್ ಆಗುವುದು ಯಾವಾಗಲೂ ಯಾರಿಗಾದರೂ ಸಂತೋಷದ ವಿಚಾರವೇ! ಅದರಲ್ಲೂ ನವೋದಯದ ಅತಿ ಕಿರಿಯ ತರಗತಿಯಾಗಿದ್ದ ಆರನೇ ತರಗತಿಯಿಂದ ಏಳನೇ ತರಗತಿಗೆ ಪ್ರಮೋಟ್ ಆಗುವುದು ನಮಗಂತೂ ಅತೀವ ಸಂತೋಷದ ವಿಚಾರವೇ ಆಗಿತ್ತು. ಇದಕ್ಕೆ ವಿಶೇಷ ಕಾರಣಗಳೂ ಇಲ್ಲದಿರಲಿಲ್ಲ!
*****
ಮೊದಲನೆಯದಾಗಿ, ಆರನೇ ತರಗತಿಯಲ್ಲಿದ್ದ ನಾವು ಮೇಲಿನ ಏಳರಿಂದ ಹನ್ನೆರಡನೇ ತರಗತಿಯವರೆಗಿನ ಎಲ್ಲಾ ಹುಡುಗರಿಗೂ “ಅಣ್ಣ, ಅಣ್ಣ..” ಎಂದು ಕರೆಯುತ್ತಾ ವಿಧೇಯತೆ ತೋರಿಸಬೇಕಿದ್ದ ಅನಿವಾರ್ಯತೆಯಲ್ಲಿರುತ್ತಿದ್ದೆವು. ಇಂತಹ ಸಂದರ್ಭದಲ್ಲಿ ನಾವು ಏಳನೇ ತರಗತಿಗೆ ಪ್ರಮೋಟ್ ಆಗಿ, ಆರನೆಯ ತರಗತಿಗೆ ಹೊಸಬರ ಆಗಮನವಾಗುವುದೆಂದರೆ ನಮ್ಮನ್ನೂ “ಅಣ್ಣ, ಅಣ್ಣ..” ಎಂದು ಕರೆಯುವವರು ಬರುತ್ತಾರೆಂಬುದೇ ಆಗಿತ್ತು! ಇದು ಒಂದು ಬಗೆಯಲ್ಲಿ ನಮ್ಮ ಅಹಂ ತಣಿಸುವ ಕ್ರಿಯೆಯಾಗಿತ್ತು.
ಎರಡನೆಯದಾಗಿ ಆಗಿನ್ನೂ ಶಾಲಾ ಕ್ಯಾಂಪಸ್‌ನಲ್ಲಿ ಹೊಸದಾಗಿ ಕಟ್ಟಡಗಳ ನಿರ್ಮಾಣ ಕೆಲಸಗಳು ನಡೆಯುತಲಿದ್ದವು. ಅದಾಗ ತಾನೇ ಊಟದ ಮೆಸ್, ಪ್ರಾಂಶುಪಾಲರು ಮತ್ತು ಶಿಕ್ಷಕರುಗಳ ಕ್ವಾರ್ಟರ್ಸ್, ಎಂ.ಪಿ.ಹಾಲ್ ಎಂದು ಕರೆಯಲ್ಪಡುತ್ತಿದ್ದ ಶಾಲಾ ಮಲ್ಟಿ ಪರ್ಪಸ್ ಹಾಲ್, ಕೆಲ ತರಗತಿ ಕೋಣೆಗಳು ಮತ್ತು ಹೆಣ್ಣು ಮಕ್ಕಳ ಡಾರ್ಮಿಟರಿಗಳು ಮಾತ್ರ ಪೂರ್ಣಗೊಂಡಿದ್ದವು. ಅಂತಹ ಪೂರ್ಣಗೊಂಡ ಹೆಣ್ಣು ಮಕ್ಕಳ ಡಾರ್ಮಿಟರಿಯೊಂದರಲ್ಲಿ ನೆಲ ಮಹಡಿಯನ್ನು ಹನ್ನೆರಡನೆಯ ತರಗತಿಯ ಸೀನಿಯರ್ ಅಕ್ಕಂದಿರಿಗೆ ಮೀಸಲಿರಿಸಿ, ಮೊದಲ ಮತ್ತು ಎರಡನೆಯ ಮಹಡಿಗಳಲ್ಲಿ ನಮಗೆ ಅಂದರೆ ಆರನೆಯ ತರಗತಿಯ ಗಂಡು ಮಕ್ಕಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.
ಇನ್ನೂ ಗಂಡು ಮಕ್ಕಳ ಡಾರ್ಮಿಟರಿಗಳು ನಿರ್ಮಾಣ ಹಂತದಲ್ಲಿಯೇ ಇದ್ದುದರಿಂದ ಉಳಿದಂಥ ಗಂಡು ಮಕ್ಕಳಿಗೆ ವರ್ಕ್‌ಶಾಪ್‌ಗಳೆಂಬ ಕೊಠಡಿಗಳಲ್ಲಿ ಮತ್ತು ಶಾಲಾ ಎಂ.ಪಿ ಹಾಲ್‌ನಲ್ಲಿ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಆರನೇ ತರಗತಿಗೆ ಹೊಸಬರು ಬರುತ್ತಲಿರುವುದರಿಂದ ಏಳನೇಯ ತರಗತಿಯವರಾದ ನಾವು ಗಂಡು ಮಕ್ಕಳಿಗಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದ ವರ್ಕ್‌ಶಾಪ್ ಒಂದಕ್ಕೆ ಶಿಫ್ಟ್ ಆಗಲಿದ್ದೆವು. ಅಂದರೆ ಗಂಡು ಮಕ್ಕಳಿದ್ದ ಕಡೆ ಹೋಗುತಲಿದ್ದೆವು! ಇದೂ ಕೂಡ ಮತ್ತೊಂದು ಬಗೆಯಲ್ಲಿ ನಮ್ಮ ಅಹಂ ತಣಿಸುವ ಕ್ರಿಯೆಯೇ ಆಗಿತ್ತು.
ಈ ಕಾರಣಗಳಿಗಾಗಿಯೇ ಇನ್ನೇನು ಮರುದಿನಗಳಲ್ಲಿ ಆರನೆಯ ತರಗತಿಗೆ ಹೊಸಬರು ದಾಖಲಾಗುತ್ತಾರೆಂದು ನಮ್ಮನ್ನು ವರ್ಕ್‌ಶಾಪ್ ಒಂದಕ್ಕೆ ಶಿಫ್ಟ್ ಮಾಡುವಾಗ ನಾವು ಸಾಕಷ್ಟು ಹರ್ಷಿತರಾಗಿ ನಲಿದಾಡಿದ್ದೆವು.
ಆದರೆ, ಈ ನಮ್ಮ ಹರ್ಷದ ನಲಿದಾಟಗಳೆಲ್ಲ ಕ್ಷಣಿಕವಾದವಾಗಿದ್ದವು ಎಂಬುದು ಆ ವರ್ಕ್‌ಶಾಪ್‌ಗಳನ್ನು ಹೊಕ್ಕ ಕೆಲ ಹೊತ್ತಿನಲ್ಲಿಯೇ ನಮ್ಮ ಅರಿವಿಗೆ ಬಂದಿತ್ತು.
ಏಕೆಂದರೆ, ಹಿಂದಿದ್ದ ಡಾರ್ಮಿಟರಿಗಳು ಅಗತ್ಯ ಸೌಲಭ್ಯಗಳನ್ನು ಹೊಂದಿದ್ದ, ಸುಸಜ್ಜಿತ ಆರ್ ಸಿಸಿ ಕಟ್ಟಡಗಳಾಗಿದ್ದರೆ ಈ ವರ್ಕ್‌ಶಾಪ್‌ಗಳೋ ಕಬ್ಬಿಣದ ಶೀಟ್ ಹೊದ್ದ, ಗೋಡಾನ್ ಮಾದರಿಯ ಕಟ್ಟಡಗಳಾಗಿದ್ದು ಈ ಹಿಂದೆ ಕಟ್ಟಡ ನಿರ್ಮಾಣದ ಕೆಲಸಗಾರರು ಉಳಿದುಕೊಳ್ಳಲೆಂದು, ಸಿಮೆಂಟ್, ಕಬ್ಬಿಣ ಮುಂತಾದ ಕಟ್ಟಡ ಸಾಮಾಗ್ರಿಗಳನ್ನು ಸಂಗ್ರಹಿಸಿಡಲೆಂದು ಕಟ್ಟಿದ ತಾತ್ಕಾಲಿಕ ನಿರ್ಮಾಣಗಳಾಗಿದ್ದವು. ಸಹಜವಾಗಿಯೇ ಅಲ್ಲಿ ವಾಸಯೋಗ್ಯ ಸೌಲಭ್ಯಗಳನ್ನು ನಾವು ನಿರೀಕ್ಷಿಸುವಂತೆಯೇ ಇರಲಿಲ್ಲ.
ಇನ್ನು ಹೋದ ಕ್ಷಣದಲ್ಲೇ ನಮಗೆ ಕಿರಿ ಕಿರಿಯಾದುದೆಂದರೆ ಆರನೆಯ ತರಗತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಮಂಚಗಳಿದ್ದು ಆರಾಮವಾಗಿ ರಾಜ ವೈಭೋಗ ಅನುಭವಿಸುವಂತಿದ್ದರೆ, ಇಲ್ಲಿ ಎರಡೆರಡು ಮಂಚಗಳನ್ನು ಜೋಡಿಸಿ ಅದನ್ನು ಮೂರು ಮೂರು ಜನರಿಗೆ ಹಂಚಿಕೆ ಮಾಡಿ, ಟು ಬೈ ಥ್ರೀ ಸಿಸ್ಟಮ್ ಜಾರಿಗೆ ತಂದಿದ್ದರು. ಅಲ್ಲದೇ, ಹಳೆಯ ಕಟ್ಟಡದಲ್ಲಿ ಮಂಚ ಮಂಚಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇದ್ದು ಮಿನಿ ಕ್ರಿಕೆಟ್ ಆಡುತ್ತಲಿದ್ದೆವು. ಇಲ್ಲೋ ಕ್ರಿಕೆಟ್ ಆಡುವುದಿರಲಿ, ಸಲೀಸಾಗಿ ನಡೆದಾಡಲೂ ಆಗದಂತಹ ಇಕ್ಕಟ್ಟಾದ ಹಾದಿ.
ಹಾಗಾಗಿಯೇ ಈ ವರ್ಕ್‌ಶಾಪ್‌ಗಳ ಸ್ಥಿತಿಗತಿಗಳನ್ನು ನೋಡುತ್ತಲೇ ಮನದ ಮೂಲೆಯಲ್ಲಿ ಒಂದಷ್ಟು ಕಸಿವಿಸಿ ಅನುಭವಿಸಲಾರಂಭಿಸಿದ್ದೆವು. ಮನಸ್ಸಿನಲ್ಲಿ “ಎಲಾ ಇವರ, ಆರನೆಯ ತರಗತಿಗೆ ಬಂದೊಡನೆ ನಮ್ಮನ್ನು ಸುಸಜ್ಜಿತ ಕೊಠಡಿಗಳಲ್ಲಿರಿಸಿ ರಾಜ ವೈಭೋಗ ನೀಡಿ ಈಗ ವರ್ಕ್‌ಶಾಪ್‌ಗಳಿಗೆ ತುಂಬುವ ಮೂಲಕ ಒಂದು ರೀತಿಯಲ್ಲಿ ಕಹಿ ಗುಳಿಗೆಗೆ ಸಕ್ಕರೆ ಲೇಪನ ಮಾಡಿದಂತೆ ನಮ್ಮನ್ನು ಮಂಗ ಮಾಡಿ ಬಿಟ್ಟರಾ” ಎನಿಸಲಾರಂಭಿಸಿತ್ತು.
ಜೊತೆಗೆ, “ಕಪ್ಪೆಯೊಂದನ್ನು ಆರಂಭದಲ್ಲಿ ತಣ್ಣೀರಿನ ಪಾತ್ರೆಯಲ್ಲಿಟ್ಟು ನಿಧಾನವಾಗಿ ನೀರನ್ನು ಬಿಸಿ ಮಾಡತೊಡಗಿದರೆ ಕಪ್ಪೆ ನೀರಿನ ಬಿಸಿಗೆ ತನ್ನ ದೇಹವನ್ನು ಹೊಂದಿಸಿಕೊಳ್ಳುತ್ತಾ ಹೋಗುತ್ತದೆಯೇ ಹೊರತು ಪ್ರಾಣ ಹೋದರೂ ಹೊರಗೆ ಜಿಗಿಯುವುದಿಲ್ಲ ಎಂಬ ಲಾಜಿಕ್ಕನ್ನು ನಮ್ಮ ಮೇಲೆ ಪ್ರಯೋಗಿಸಿದರಾ” ಎನಿಸಿ ಬೇಸರ ಮೂಡಿತು.
ಆದರೂ ಇನ್ನೇನು ತಾನೇ ಮಾಡುವುದೆಂದು ಹೊಂದಿಕೊಳ್ಳುವ ಮನಸ್ಸು ಮಾಡಿದೆವು.
ಆದರೆ, ನಿಜವಾದ ಸಮಸ್ಯೆ ಶುರುವಾಗಿದ್ದು ನಾವು ಶೌಚಾಲಯಗಳನ್ನು ಬಳಸಲು ಹೋದಾಗಲೇ.
ಈ ಹಿಂದೆ ಮೇಲಿನ ಡಾರ್ಮಿಟರಿಯ ಇಪ್ಪತ್ತು ಹುಡುಗರಿಗೆ ಮತ್ತು ಕೆಳಗಿನ ಡಾರ್ಮಿಟರಿಯ ಇಪ್ಪತ್ತು ಹುಡುಗರಿಗೆ ಐದೈದು ಶೌಚಾಲಯ, ಸ್ನಾನದ ಕೊಠಡಿಗಳಿದ್ದವು. ಅಂದರೆ ನಾಲ್ಕು ಹುಡುಗರಿಗೆ ತಲಾ ಒಂದೊಂದು ಶೌಚಾಲಯ ಮತ್ತು ಸ್ನಾನದ ಕೊಠಡಿಗಳಿದ್ದವು. ಅಷ್ಟೇ ಅಲ್ಲದೇ ನಲ್ಲಿಗಳಲ್ಲಿ ಬೇಕಾದಷ್ಟು ನೀರು ಬೇರೆ ಬರುತಿತ್ತು.
ಇಲ್ಲೋ ನಮ್ಮ ವರ್ಕ್‌ಶಾಪ್, ಪಕ್ಕಪಕ್ಕದಲ್ಲಿದ್ದ ಮತ್ತೊಂದು ವರ್ಕ್‌ಶಾಪ್ ಅಲ್ಲದೇ ಶಾಲಾ ಮಲ್ಟಿ ಪರ್ಪಸ್ ಹಾಲ್ ನಲ್ಲಿ ಆಶ್ರಯ ಪಡೆದಿದ್ದ ಏಳರಿಂದ ಹನ್ನೆರಡನೇ ತರಗತಿವರೆಗಿನ ಒಟ್ಟು ಇನ್ನೂರಷ್ಟು ಹುಡುಗರಿಗೆ ಐದೇ ಐದು ಶೌಚಾಲಯ ಮತ್ತು ಅಷ್ಟೇ ಸ್ನಾನದ ಕೊಠಡಿಗಳಿದ್ದವು. ಅಂದರೆ ಹತ್ತಿರತ್ತಿರ ನಲವತ್ತು ಹುಡುಗರಿಗೆ ಒಂದೊಂದು ಶೌಚಾಲಯ ಮತ್ತು ಸ್ನಾನದ ಕೊಠಡಿ! ಅದು ಬಿಟ್ಟರೆ ವರ್ಕ್‌ಶಾಪ್‌ನ ಹಿಂಬದಿಯಲ್ಲಿ ಕಟ್ಟಡ ಕಾರ್ಮಿಕರು ಆರೆಂಟು ವರ್ಷಗಳ ಕಾಲ ಬಳಸಿ ಶುಚಿತ್ವ ನಿರ್ವಹಣೆ ಮಾಡದೆ, ಬಳಕೆಗೆ ಯೋಗ್ಯವಲ್ಲದ ಹಂತ ತಲುಪಿದ್ದ ಐದು ಶೌಚಾಲಯಗಳ ಕಟ್ಟಡವೊಂದಿತ್ತು.
ಇನ್ನೂ ನಾವು ಹಿಂದೆ ಇದ್ದ ಡಾರ್ಮಿಟರಿಯ ಶೌಚಾಲಯಗಳ ನಲ್ಲಿಗಳಲ್ಲಿ ಸಾಕಾಗಿ ಹರಿಯುವಷ್ಟು ನೀರಿರುತ್ತಿದ್ದು, ಆರಾಮವಾಗಿ ಶೌಚಕ್ಕೆ ಹೋಗುತ್ತಿದ್ದರೆ ಈಗ ಸಿಂಟ್ಯಾಕ್ಸ್‌ನ ಮುಂದೆ ಕ್ಯೂ ನಿಂತು, ಬಕೆಟ್‌ನಲ್ಲಿ ನೀರು ಹಿಡಿದು, ಹೊತ್ತುಕೊಂಡು ಹೋಗಬೇಕಿತ್ತು.
ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಜೊತೆಗೆ, ದಾದಾಗಿರಿ ಮಾಡಿ ಸಾಲು ತಪ್ಪಿಸಿ ಹೋಗುವ ಸೀನಿಯರ್‌ಗಳ ಕಿರಿಕಿರಿ ಬೇರೆ. ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಹೀಗೆ ನಮ್ಮವು ಹೇಳ ತೀರದ ಫಜೀತಿಗಳಾಗಿದ್ದವು!
*****
ಆಗೆಲ್ಲಾ ನಮಗೆ ನಾವು ಹಿಂದೆ ಇದ್ದ ಡಾರ್ಮಿಟರಿಯ ಶೌಚಾಲಯಗಳು ನೆನಪಿಗೆ ಬರುತ್ತಿದ್ದವು. ಹಿಂದೆಲ್ಲಾ ಏಕಾಂತವಾಗಿ, ಆರಾಮವಾಗಿ ಇಷ್ಟದ ಗೀತೆಗಳನ್ನು ಗುನುಗಿಕೊಂಡು, ಕೂಗಿಕೊಂಡು ಇಲ್ಲವೇ ಪಕ್ಕದ ಕೊಠಡಿಯಲ್ಲಿ ಕುಳಿತವನೊಡನೆ ಹರಟೆ ಹೊಡೆದುಕೊಂಡು ಶೌಚ ನಡೆಸುತ್ತಿದ್ದೆವು. ಕೆಲವೊಮ್ಮೆ, ಪಕ್ಕದ ಕೊಠಡಿಯಲ್ಲಿ ಕುಳಿತವನೊಡನೆ ಪಾಠದಲ್ಲಿ ತಾನು ಏನೇನು ಓದಿದೆನೆಂದು ರಿವಿಷನ್ ಮಾಡುವವರು, ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಕುರಿತು ಚರ್ಚಿಸುತ್ತಿದ್ದವರೂ ಇದ್ದರು.
ಇನ್ನೂ ಕೆಲವರಂತೂ ಶೌಚಾಲಯದಲ್ಲಿ ಕುಳಿತು ಒಂದಿಡೀ ಸಿನಿಮಾ ಕತೆಯನ್ನೇ ಹಂಚಿಕೊಂಡರೂ ಕೇಳುವವರಿರಲಿಲ್ಲ! ಕೆಲವೊಮ್ಮೆ ಸಿನಿಮಾ ಕತೆಗಳನ್ನು ಹೇಳುತ್ತಿದ್ದವನು ಶೌಚಕ್ಕೆ ಹೋಗಬೇಕೆಂದಾಗ ಆಸಕ್ತಿಯಿಂದ ಕೇಳುತ್ತಿದ್ದವನು ಶೌಚ ಬರದಿದ್ದರೂ ಕಂಪನಿ ಕೊಡಲು ಪಕ್ಕದ ಕೊಠಡಿಯಲ್ಲಿ ಕುಳಿತು ಕತೆ ಕೇಳುವುದನ್ನು ಮುಂದುವರೆಸುತ್ತಿದ್ದದ್ದೂ ಇತ್ತು!
ಆದರೆ, ಇಲ್ಲಿ…!
ಹೀಗಿರಲಾಗಿ, ಸ್ನಾನಕ್ಕೇನೋ ಪರಿಹಾರ ಕಂಡುಕೊಂಡೆವು. ಸಿಂಟ್ಯಾಕ್ಸ್‌ನಿಂದ ಒಂದೋ ಎರಡೋ ಬಕೆಟ್ ನೀರು ತಂದು ವರ್ಕ್‌ಶಾಪ್‌ನ ಪಕ್ಕದಲ್ಲೇ ಹೊಯ್ದುಕೊಳ್ಳುತ್ತಿದ್ದೆವು. ಭಾನುವಾರದ ದಿನಗಳಂದು ಟವೆಲ್ ಒಳಗೆ ಸೋಪು, ಬಟ್ಟೆಗಳನ್ನು ಕಟ್ಟಿಕೊಂಡು ಪಕ್ಕದ ಹೇರೂರಿನ ಹಳ್ಳಕ್ಕೆ ತೆರಳಿ ಸ್ವಿಮ್ಮಿಂಗ್ ಪೂಲ್‌ನಂತಿರುತ್ತಿದ್ದ ಹಳ್ಳದ ಪುಟ್ಟ ಪುಟ್ಟ ಗುಂಡಿಗಳಲ್ಲಿ ಮನದಣಿಯೇ ಮುಳುಗೇಳುತ್ತಿದ್ದೆವು. ಇಲ್ಲವೇ, ಶಾಲೆಯ ಪಕ್ಕದಲ್ಲಿದ್ದ ತೋಟವೊಂದರ ನಡುವಲ್ಲಿನ ಪುಟ್ಟ ಜಲಪಾತಕ್ಕೆ ಗಂಟೆಗಟ್ಟಲೆ ಮೈಯೊಡ್ಡಿ ಮರಳುತ್ತಿದ್ದೆವು.
ಇನ್ನೂ ಆಗೆಲ್ಲಾ ನಮ್ಮ ನವೋದಯದಲ್ಲಿ ವರುಷಕ್ಕೆ ಆರು ತಿಂಗಳು ಮಳೆಗಾಲ ಇರುತ್ತಿದ್ದುದರಿಂದ ಸೂರು ನೀರು ಬೀಳುವ ಪೈಪ್‌ಗಳ ಅಡಿ ಬಕೆಟ್‌ಗಳನ್ನಿಟ್ಟು ನಲವತ್ತು ಬಕೆಟ್, ಐವತ್ತು ಬಕೆಟ್ ಸ್ನಾನ ಮಾಡಿದ ರೆಕಾರ್ಡ್‌ಗಳನ್ನು ಮಾಡುತ್ತಿದ್ದೆವು.
ಆದರೆ, ಈ ಶೌಚಾಲಯದ್ದು ಮಾತ್ರ ನೀವು ನಿರೀಕ್ಷಿಸಬಹುದಾದ್ದಕ್ಕಿಂತಲೂ ದೊಡ್ಡ ಸಮಸ್ಯೆಯಾಗುತ್ತ ನಮ್ಮ ಅಪಾರ ದುಃಖ ದುಮ್ಮಾನಗಳಿಗೆ ಕಾರಣವಾಗಿ ಬಿಟ್ಟಿತ್ತು. ಸರಿ, ಇನ್ನೇನು ತಾನೇ ಮಾಡುವುದು, ನಿವಾರಣೋಪಾಯಗಳ ಕುರಿತು ಯೋಚಿಸಲಾರಂಭಿಸಿದೆವು.
ನಿವಾರಣೋಪಾಯದ ಭಾಗವಾಗಿ ಶೌಚಕ್ಕೆ ರಾತ್ರಿ ವೇಳೆಯಲ್ಲಿ ಹೋಗುವುದು, ಬೆಳಿಗ್ಗೆ ಐದು ಗಂಟೆಗೆ ಎಲ್ಲರೂ ಏಳುವುದರಿಂದ ನಾಲ್ಕರ ವೇಳೆಗೇ ಎದ್ದು ಹೋಗುವುದು, ತಿಂಡಿ, ಊಟಗಳ ವಿರಾಮ ಸಮಯದಲ್ಲಿ ಹೋಗುವುದು, ಸಂಜೆ ಆಟದ ಸಮಯದಲ್ಲಿ ಹೋಗುವುದು.., ಹೀಗೆ ಹಲವು ತಂತ್ರಗಳನ್ನು ಪ್ರಯೋಗಿಸಿದೆವು. ಆದರೂ ಒಂದು ಶಾಶ್ವತ ಪರಿಹಾರ ಸಿಗದೆ ವ್ಯಥೆಗೊಂಡೆವು.
ಸ್ವಚ್ಚತೆ ಇರದ ಆ ಶೌಚಾಲಯಗಳನ್ನು ಬಳಸುವುದಕ್ಕೆ ನಮ್ಮ ಮನಸ್ಸುಗಳು ಹಿಂದೇಟು ಹಾಕುತ್ತಲೇ ಇದ್ದವು.
ಸರಿ, ಶಿಕ್ಷಕರೆದುರು , ಪ್ರಾಂಶುಪಾಲರೆದುರು ಮತ್ತೆ ಮತ್ತೆ ದೂರಿತ್ತೆವು. ಕೊನೆಯ ಪಕ್ಷ ಆರನೆಯ ತರಗತಿಯಲ್ಲಿ ನಾವಿದ್ದ ಎರಡು ಡಾರ್ಮಿಟರಿಗಳಲ್ಲಿ ಒಂದನ್ನಾದರೂ ಬಿಡಿಸಿ ಕೊಟ್ಟು ನಮ್ಮನ್ನು ಅಲ್ಲಿಗೇ ವಾಪಾಸ್ಸು ಕಳಿಸಿಬಿಡಿ ಎಂದೂ ಇಲ್ಲವೇ ಕೊನೆ ಪಕ್ಷ ಈಗಿರುವ ಐದು ಶೌಚಾಲಯಗಳಲ್ಲೇ ನಮ್ಮ ತರಗತಿಗೆಂದು ಒಂದನ್ನು ಬಿಟ್ಟು ಕೊಡಿ ಎಂದೂ ಬೇಡಿಕೆ ಇಟ್ಟೆವು.
ಆದರೆ ಈ ನಮ್ಮ ದೂರು ದುಮ್ಮಾನಗಳನ್ನು ಶಿಕ್ಷಕರು ಮತ್ತು ಪ್ರಾಂಶುಪಾಲರು ಗಂಭೀರವಾಗಿ ಪರಿಗಣಿಸಲು ಸಿದ್ಧರಿರಲಿಲ್ಲ. ಈಗಾಗಲೇ ಅವರುಗಳಿಗೆಲ್ಲಾ ಕ್ವಾರ್ಟರ್ಸ್‌ಗಳು ಸಿದ್ಧಗೊಂಡು ಅವುಗಳಲ್ಲಿ ಅವರು ಒಕ್ಕಲು ಹಾಕಿದ್ದರಿಂದ ನಮ್ಮ ಸಮಸ್ಯೆಯನ್ನು ಸರಿಯಾಗಿ ಅಂದಾಜಿಸುವವರಾಗಲಿಲ್ಲ.
ಆದ್ದರಿಂದ ಅವರು ನಮ್ಮ ಸಮಸ್ಯೆಗೆ ಪರಿಹಾರ ನೀಡುವ ಬದಲು ಇದು ತಾತ್ಕಾಲಿಕ ವ್ಯವಸ್ಥೆ ಆಗಿದ್ದು ಹೊಸ ಡಾರ್ಮಿಟರಿಗಳು ನಿರ್ಮಾಣ ಆಗುವವರೆಗೆ ಹೊಂದಿಕೊಳ್ಳುವುದು ಅನಿವಾರ್ಯವೆಂದೂ ಮುಂದುವರೆದು ನೀವು ಬಂದಿರುವ ಉದ್ದೇಶವಾದರೂ ಓದುವುದಾದ್ದರಿಂದ ಊಟ, ಶೌಚ ಎಂಬುವವಕ್ಕೆಲ್ಲಾ ಹೀಗೆ ತಲೆಕೆಡಿಸಿಕೊಳ್ಳಬಾರದೆಂದೂ ತಮ್ಮ ಹಿತೋಪದೇಶವನ್ನು ಮತ್ತೆ ಮತ್ತೆ ಹೇಳಿದರು.
ಅದಕ್ಕೆ ಪೂರಕವೆಂಬಂತೆ ಅದಾಗಲೇ ಈ ವ್ಯವಸ್ಥೆಗೆ ಸಂಪೂರ್ಣವಾಗಿ ಹೊಂದಿಕೊಂಡು ನಿಶ್ಚಿಂತೆಯಿಂದ ಇರುವ ನಮ್ಮ ಸೀನಿಯರ್‌ಗಳನ್ನು ಉದಾಹರಿಸಿದರು. ಅವರು ಉದಾಹರಿಸಿದಂತೆಯೇ ನಮ್ಮ ಸೀನಿಯರ್‌ಗಳು ಅಲ್ಲಿನ ವ್ಯವಸ್ಥೆಗೆ ಸಂಪೂರ್ಣವಾಗಿ ಹೊಂದಿಕೊಂಡು ನೆಮ್ಮದಿಯಿಂದಿದ್ದು, ನಮ್ಮ ಹೋರಾಟದ ಪರ ವಹಿಸದೆ ನಮ್ಮಂತಹ ಅಸಮಾಧಾನಿಗಳನ್ನು ಅಲ್ಪಸಂಖ್ಯಾತರನ್ನಾಗಿಸಿದ್ದರು. ಹಾಗಾಗಿ ನಮ್ಮ ಯಾವ ಪುನರಾವರ್ತಿತ ಬೇಡಿಕೆಗಳಿಗೂ ಮನ್ನಣೆ ಎಂಬುದೇ ಇರಲಿಲ್ಲ.
ಇದೋ ಒಂದು ಬಗೆಯಲ್ಲಿ ಶೋಯೆಬ್ ಅಖ್ತರ್ ವಿಕೆಟ್ ಕೀಳುವ ಅತ್ಯುತ್ಸಾಹದಲ್ಲಿ ಕಿಲೋಮೀಟರ್ ಲೆಕ್ಕದಲ್ಲಿ ಓಡಿಬಂದು, ನೂರಾರು ಮೈಲಿ ಲೆಕ್ಕದಲ್ಲಿ ಬಾಲನ್ನೆಸೆದಾಗಲೆಲ್ಲಾ ನಮ್ಮ ದ್ರಾವಿಡ್ ಬಾಲನ್ನು ತಣ್ಣಗೆ ಕುಟುಕುತ್ತಲೇ ಸಾಗಿದರೆ ಅಖ್ತರನಿಗೆ ಆಗಬಹುದಾದ ಹತಾಶೆ, ಜಿಗುಪ್ಸೆಗಳನ್ನು ನಮ್ಮಲ್ಲಿ ಉಂಟು ಮಾಡಿತ್ತಷ್ಟೇ!
ಸರಿ, ನಾವು ತಾನೇ ಇನ್ನೇನು ಮಾಡಲಾದೀತು!
ಊಟ ಚೆನ್ನಾಗಿಲ್ಲವಾದರೆ ರುಚಿಕರ ಊಟ ನೀಡುವವರೆಗೆ ಊಟವನ್ನೇ ಮಾಡುವುದಿಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡಿ ಗಾಂಧಿಗಿರಿ ಪ್ರದರ್ಶಿಸಬಹುದಿತ್ತು. ಆದರೆ, ಶೌಚಾಲಯ ಸರಿ ಇಲ್ಲವೆಂದು ಶೌಚಕ್ಕೆ ಹೋಗುವುದೇ ಇಲ್ಲ ಎಂದು ಗಾಂಧಿಗಿರಿ ಪ್ರದರ್ಶಿಸಲಾದೀತೆ!?
ಸಾಮಾನ್ಯವಾಗಿ ಹಾಸ್ಟೆಲ್‌ಗಳಿಗೆ ಸೇರಿದವರು ಊಟದ ಸಮಯದಲ್ಲಿ ಮನೆಯ ಊಟ ನೆನೆದು ಕಣ್ಣೀರಾಗುವ ಸಂದರ್ಭವಿದ್ದರೆ ನಮ್ಮದು ಪಿರಮಿಡ್‌ನಂತೆ ತಟ್ಟೆಗೆ ಪಲಾವ್ ಹಾಕಿಸಿಕೊಂಡು ಖುಷಿ ಖುಷಿಯಿಂದಲೇ ಈ ದಿನ ಪಲಾವ್, ಈ ದಿನ ಇಡ್ಲಿ, ಈ ದಿನ ದೋಸೆ , ಚಪಾತಿ, ವಾಂಗಿಬಾತ್ , ಪುಳಿಯೋಗರೆ ಎಂದೆಲ್ಲಾ ಎಣಿಸುತ್ತಾ ಚೆನ್ನಾಗಿ ತಿಂದುಂಡು ಶೌಚಕ್ಕೆ ಹೋಗುವಾಗ ಮಾತ್ರ ಮನೆಯ ಶೌಚಾಲಯವನ್ನು ನೆನೆದು ಕಣ್ಣೀರಾಗುವ ವಿಚಿತ್ರ ಸನ್ನಿವೇಶವಾಗಿತ್ತು!
ಇಂತಹ ವಿಚಿತ್ರ ಸನ್ನಿವೇಶದಲ್ಲಿ ನಮ್ಮ ತಾತ್ಕಾಲಿಕ ನಿವಾರಣೋಪಾಯಗಳನ್ನು ಪ್ರಯೋಗಿಸುತ್ತಲೇ, ಶೌಚಾಲಯಗಳ ಗಬ್ಬು ನಾರುವಂತಹ ಸ್ಥಿತಿಗತಿಯ ಬಗ್ಗೆ ದೂಷಿಸುತ್ತಲೇ ಅವುಗಳನ್ನು ಉಪಯೋಗಿಸುವುದಾಗಿತ್ತು ನಮ್ಮ ಪರಿಸ್ಥಿತಿ.
*****
ಹೀಗಿರುವಾಗಲೇ ನಮಗೆ ಕಾರ್ಯಾನುಭವ ಬೋಧಿಸುತ್ತಿದ್ದ ಮೇಡಂ ಒಬ್ಬರು ಅಮೆರಿಕಾಕ್ಕೆ ಹೋಗಿ ಬಂದರು.
ಹೋಗಿ ಬಂದವರು ಒಂದು ಶನಿವಾರ ತಮ್ಮ ಅಮೆರಿಕಾದಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತಾ, ಅಲ್ಲಿನ ವೃತ್ತಿ ಸಮಾನತೆಯ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನಾಡುತ್ತಲೇ ಅಮೆರಿಕಾದ ಸ್ಯಾನಿಟರಿ ಇಂಜಿನಿಯರ್‌ಗಳ ಬಗ್ಗೆ ಸ್ವಾರಸ್ಯಕರ ವಿಷಯಗಳನ್ನು ಹೇಳಿದರು.
ಅಮೆರಿಕಾದಲ್ಲಿ ಶೌಚಾಲಯ ಸ್ವಚ್ಛಗೊಳಿಸುವವರನ್ನು ಸ್ಯಾನಿಟರಿ ಇಂಜಿನಿಯರ್‌ಗಳೆಂದು ಗೌರವಯುತವಾಗಿ ಕರೆಯುವುದಾಗಿಯೂ ಅವರು ತಮ್ಮ ತಮ್ಮ ಕಾರುಗಳಲ್ಲಿ ಬಂದು, ನಿಗದಿತ ಉಡುಪುಗಳನ್ನು ತೊಟ್ಟು ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಹೋಗುವರೆಂದೂ ವಿವರಿಸಿದರು. ಅಲ್ಲದೇ, ಅಲ್ಲಿನ ಬಹುತೇಕರು ತಮ್ಮ ವೈಯಕ್ತಿಕ ಶೌಚಾಲಯಗಳನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುವರೆಂದೂ ತಿಳಿಸಿದರು.
ಇದಾದ ಮರುದಿನ ಬೆಳಿಗ್ಗೆ ನಮ್ಮ ಮನಸ್ಥಿತಿಯನ್ನೂ ನಮ್ಮ ಶೌಚಾಲಯಗಳ ಸ್ಥಿತಿಗತಿಯನ್ನೂ ಗಮನಿಸಿದ್ದ ನಮ್ಮ ಹೌಸ್ ಮಾಸ್ಟರ್ ವಾರದ ಸಂಡೆ ಕ್ಲೀನಿಂಗ್ ಆರಂಭಕ್ಕೂ ಮುನ್ನ ಸ್ಯಾನಿಟರಿ ಇಂಜಿನಿಯರ್‌ಗಳ ಪೀಠಿಕೆ ಹಾಕಿದರು. ಪೀಠಿಕೆಯ ಮುಂದುವರೆದ ಭಾಗವಾಗಿ ನಮ್ಮ ಶೌಚಾಲಯಗಳನ್ನು ನಾವೇ ಸ್ವಚ್ಛಗೊಳಿಸಿ ಕೊಳ್ಳುವ ಬಗ್ಗೆ ಮಾತು ಸಾಗಿತು. ಮಾತಿನ ಮಧ್ಯೆ ಗಾಂಧಿ, ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೂಡಾ ಬಂದು ಹೋದರು.
ಅವರ ಕೆಲವೇ ನಿಮಿಷಗಳ ಈ ಸ್ವಾರಸ್ಯಕರ, ಸ್ಫೂರ್ತಿಯುತ ಮಾತುಗಳಿಂದ ನಾವೆಷ್ಟು ಪ್ರಭಾವಿತರು, ಉತ್ಸಾಹಿತರು ಆಗಿದ್ದೆವೆಂದರೆ ಕ್ಷಣ ಮಾತ್ರದಲ್ಲಿ ಎಂಬಂತೆ ಸಿಕ್ಕ ಸಿಕ್ಕ ಪ್ಲಾಸ್ಟಿಕ್‌ಗಳನ್ನು ಹ್ಯಾಂಡ್ ಗ್ಲೌಸ್‌ಗಳಾಗಿ ತೊಟ್ಟು, ಮುಖಕ್ಕೆ ಮೂಗು ಮುಚ್ಚುವಂತೆ ದೊಡ್ಡ ಪ್ಲಾಸ್ಟಿಕ್ ಇಲ್ಲವೇ ಟವೆಲ್‌ಗಳನ್ನು ಮಾಸ್ಕ್ ನಂತೆ ಸುತ್ತಿ, ಬಕೇಟು, ಮಗ್ಗು, ಬ್ಲೀಚಿಂಗ್ ಪೌಡರ್, ಬ್ರಷ್, ಪೊರಕೆಗಳನ್ನು ಹಿಡಿದು, ಅದಾಗಲೇ ಇಂಜಿನಿಯರ್‌ಗಳಾದ ಸಂಭ್ರಮವನ್ನು ಅನುಭವಿಸುತ್ತಾ ನಮ್ಮ ವರ್ಕ್‌ಶಾಪ್‌ನ ಹಿಂಬದಿಯಲ್ಲಿದ್ದ , ಕಟ್ಟಡ ಕಾರ್ಮಿಕರು ಆರೆಂಟು ವರ್ಷಗಳ ಕಾಲ ಬಳಸಿ ಶುಚಿತ್ವ ನಿರ್ವಹಣೆ ಮಾಡದೆ ಬಳಕೆಗೆ ಯೋಗ್ಯವಲ್ಲದ ಹಂತ ತಲುಪಿದ್ದ ಐದು ಶೌಚಾಲಯಗಳ ಕಟ್ಟಡದ ಸ್ವಚ್ಛತಾ ಕಾರ್ಯಕ್ಕೆ ಸಿದ್ಧರಾಗಿದ್ದೆವು!
ಒಂದಷ್ಟು ಜನ ಸಿಂಟ್ಯಾಕ್ಸ್‌ನಿಂದ ಬಕೆಟ್‌ಗಳಲ್ಲಿ ನೀರು ಹೊತ್ತು ತಂದರೆ ಮತ್ತೊಂದಷ್ಟು ಜನ ನೀರು ಹೊಯ್ದುಕೊಂಡು ಪೊರಕೆಯಿಂದ ಗುಡಿಸಲಾರಂಭಿಸಿದೆವು. ಒಂದಷ್ಟು ಜನ ಬ್ಲೀಚಿಂಗ್ ಪೌಡರ್ ಹಾಕಿದರೆ ಮತ್ತೊಂದಷ್ಟು ಜನ ಬ್ರಷ್ ಹಿಡಿದು ಕಮೋಡ್‌ಗಳನ್ನು ಉಜ್ಜಲಾರಂಭಿಸಿದೆವು. ಕೆಲವರು ದಪ್ಪನೆಯ ಕೋಲುಗಳನ್ನು ಕಮೋಡ್‌ಗಳ ಒಳಗೆ ಹಾಕಿ ಕಟ್ಟಿಕೊಂಡಿದ್ದ ಕಸವನ್ನೆಲ್ಲಾ ಬಿಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದೆವು.
ಈ ಎಲ್ಲಾ ಚಟುವಟಿಕೆಗಳಲ್ಲಿ ನಾವು ಮಗ್ನರಾಗಿರುವಾಗ ಅವರ್ಣನೀಯ ಸಂಭ್ರಮ ಕಳೆಗಟ್ಟಿ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ನಮಗೆಲ್ಲಾ ಆ ಕ್ಷಣಕ್ಕೆ “ಅರೇ, ಶೌಚಾಲಯ ಸ್ವಚ್ಛಗೊಳಿಸುವುದರಲ್ಲಿಯೂ ಇಷ್ಟು ಸಂಭ್ರಮ ಪಡಬಹುದೇ!?” ಎನಿಸಿದ್ದು ಸುಳ್ಳಲ್ಲ.
*****
ಅಂತೂ ಇಂತೂ ಈ ನಮ್ಮ ಶ್ರಮದ ಫಲವಾಗಿ ಬಳಕೆಗೆ ಯೋಗ್ಯವಲ್ಲದ ಸ್ಥಿತಿ ತಲುಪಿದ್ದ ಐದು ಶೌಚಾಲಯಗಳು ಬಳಕೆಗೆ ಯೋಗ್ಯವಾದವು. ಆ ಮೂಲಕ ನಮ್ಮ ಶೌಚಾಲಯ ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ದೊರಕಿಸಿಕೊಂಡಿದ್ದೆವು.
ಅಲ್ಲದೇ, ಇನ್ನೆಂದೂ ನಮ್ಮ ಶೌಚಾಲಯಗಳನ್ನು ನಾವೇ ಸ್ವಚ್ಛಗೊಳಿಸಲು ಹಿಂಜರಿಕೆ ತೋರದಷ್ಟು ನಾವು ಬದಲಾಗಿ ಬಿಟ್ಟಿದ್ದೆವು.
ಇದು ನಮ್ಮ ಪಾಲಿಗೆ ಕೇವಲ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ಘಟನೆಯಷ್ಟೇ ಆಗಿರಲಿಲ್ಲ. ಬದಲಿಗೆ, ಕಾಯಕ ಸಮಾನತೆಯನ್ನು ಜೀವನ ಪೂರ್ತಿ ಅಳವಡಿಸಿಕೊಂಡ ಮಹೋನ್ನತ ಘಳಿಗೆಯಾಗಿತ್ತು.
ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. “ದೇವರಿದ್ದಾನೆ! ಎಚ್ಚರಿಕೆ!!” ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ..
ಸೊಗಸಾದ ಬರಹ. ನೆನಪಿನ ಪುಸ್ತಕದ ಹಿಂದಿನ ಪುಟಗಳನ್ನು ಮರಳಿ ತಿರುವುತ, ಇಳಿಸಂಜೆ ಮಳೆಯಲಿ ಬೆಚ್ಚನೆಯ ಕಾಫಿ ಹೀರಿದ ಹಾಗೆ.
It is indeed gratifying for me as teacher to have imparted an important lesson on life skills to my students and made a positive impact on their mindset….
Much more beautiful and awesome is the way the entire learning has been narrated with such clarity and simplicity that it makes the experience more impact full and admirable!!!
Dear Poornesh you rock 👍👏👏💕🥰
Very nice article..
Excellent writing with good mixture of humor, description of hitherto unknown world and a wonderful lesson!
Being a Navodayite (albeit many years senior and in a different school), I could relate to all that is described. Those were fun days that taught many things equality of work being the most important.
Would like to see many more writings!
Many of us have lot of memories about namma navodaya life but we fail to express or we don’t have the required skill to express the memories in the way u do.Your blessed to have that writing skill where u bring back all our memories through your writing. You are an amazing writer and I am happy that vy reading your Navodaya stories I can recall my Navodaya life