ಇಷ್ಟೆಲ್ಲ ಗೊಂದಲ, ಪ್ರಶ್ನೆಗಳ ನಡುವೆಯೂ ನಾನೇಕೆ ಪತಿಪೂಜೆ ಮಾಡುತ್ತೇನೆ ಎಂದರೆ ಅದು ಧಾರ್ಮಿಕ ಕಟ್ಟಳೆಯಲ್ಲ ಅದು ಹೃದಯದ ನಿವೇದನೆ. ನನ್ನವನೆದುರು ನನ್ನ ಪ್ರೀತಿಯನ್ನು ತೋರಿಸಿಕೊಳ್ಳುವ ಒಂದು ವಿಧಾನ. ನಾವು ಹೆಣ್ಣುಮಕ್ಕಳಿಗೆ ಇಂತಹ ಹಲವಾರು ದಾರಿಗಳಿವೆ. ನಾವು ಯಾವುದನ್ನೂ ಮುಚ್ಚಿಟ್ಟುಕೊಳ್ಳಲಾರೆವು. ಕೋಪ, ಅಸಹನೆ, ನೋವು, ನಗು, ಅಳು… ಎಲ್ಲವನ್ನೂ ತೋರಿಸಿಕೊಂಡುಬಿಡುತ್ತೇವೆ. ಆದರೆ ಗಂಡಿಗೆ ಹಾಗಲ್ಲ. ಅವನು ತನ್ನ ನೋವನ್ನಾಗಲೀ, ಅಳುವನ್ನಾಗಲೀ, ಕಣ್ಣೀರನ್ನಾಗಲೀ ತೋರಿಸುವಂತೆಯೇ ಇಲ್ಲ. ಹಾಗೇ ತಾನೇ ನಮ್ಮ ಸಮಾಜ ನಿರೀಕ್ಷಿಸುತ್ತದೆ. ಅವ ಅದರ ಬಲಿಪಶು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ
ಪೂಜಿಸಲೆಂದೇ
ಹೂಗಳ ತಂದೆ...
ಬೆಳ್ಳಂಬೆಳಗ್ಗೆ ಎದ್ದು ಹೊರಬಂದ ನನ್ನ ಆ ದಿನವನ್ನ ಸಂಪನ್ನವಾಗಿಸಿದ್ದು ಮನೆ ಮುಂದಿನ ಪುಟ್ಟ ತೋಟದಲ್ಲಿ ಅರಳಿದ್ದ ಪುಟ್ಟ ಪುಟ್ಟದ್ದರಿಂದ ಹಿಡಿದು ದೊಡ್ಡದು ಎನಿಸಿಕೊಳ್ಳುವ ಹೂರಾಶಿ. ಎಂತಹ ವೈವಿಧ್ಯಮ ಬಣ್ಣ, ಅದೆಷ್ಟು ಅಂದ. ಮನಸಿನ ಎಲ್ಲ ಕಲ್ಮಶಗಳನ್ನೂ ತೊಡೆದು ಹಾಕಬಲ್ಲಷ್ಟು ಸ್ನಿಗ್ಧ. ಬೆಳಗಿನ ದೈವೀಕ ಪೂಜೆಗೆ, ಅಲಂಕಾರದ ಹೂದಾನಿಗೆ, ಅಪರೂಪಕ್ಕೆ ಮಾತ್ರ ಮುಡಿಯ ಬಯಸುವ ನನ್ನ ಮುಡಿಗೆ, ಪೂಜಿಸುವಷ್ಟು ಪ್ರೀತಿಸುವ ಜೀವದ ಆ ಪಾದಗಳಿಗೆ… ಹೀಗೆ ಎಲ್ಲದಕ್ಕೂ ಇವೇ ಕೋಮಲ ಹೂಗಳು…
ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ
ಆದರೆ ಒಂದೇ ಒಂದು ಹೂವನ್ನಾದರೂ ನಿನಗೆ ಇದೆಲ್ಲ ಇಷ್ಟವಾ ಎಂದು ಕೇಳಿದ್ದೇವಾ?! ಇಲ್ಲವೇ ಇಲ್ಲ ಅಲ್ಲವಾ…. ಒಂದು ವೇಳೆ ಕೇಳಿ ಅದರ ಒಂದು ಪಿಸುಮಾತಿನುತ್ತರಕ್ಕೆ ಕಾಯುತ್ತಾ ಕುಳಿತಿದ್ದರೆ ಉತ್ತರ ಸಿಗುತ್ತಿತ್ತಾ… ಉಹ್ಞೂ ಉತ್ತರ ಜಗದೋಶ್ಲ್..
ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೆ ತರಲು
ಸಸ್ಯಗಳೂ ಮಾತನಾಡುತ್ತವಂತೆ… ಅವತ್ತು ಭೀಮನ ಅಮವಾಸ್ಯೆ ಇತ್ತು. ನನ್ನ ಸಹೋದ್ಯೋಗಿಗಳೆಲ್ಲ ಅದೇ ಚರ್ಚೆಯಲ್ಲಿ ಮುಳುಗಿದ್ದರು. ಯಾರು ಹೇಗೆ ಪತಿಯ ಪಾದ ಪೂಜೆ ಮಾಡಿದರು, ಎಷ್ಟು ಹೊತ್ತು ಮಾಡಿದರು, ಬಿಸಿ ನೀರಿನಲ್ಲಿ ಮಾಡಿದರಾ, ತಣ್ಣೀರಿನಲ್ಲಿ ಮಾಡಿದರಾ… ಎಂದೆಲ್ಲಾ ವರ್ಣರಂಜಿತವಾಗಿ. “ಏನ್ರೀ ಮನೆಯವರಿಗೆ ಮಂಗಳಾರತಿ ಮಾಡಿದ್ರಾ” ಎಂದು ಒಬ್ಬರು ಕೇಳಿದರೆ, ಮತ್ತೊಬ್ಬರು, “ಪಾಪದ ಪ್ರಾಣಿ, ಇವತ್ತೊಂದು ದಿನ ಬಚಾವು”, ಎನ್ನುತ್ತಾ ಕಿಸಕ್ ಎಂದು ನಕ್ಕರು. ಮತ್ತದು ಮುಂದುವರಿದು “ಆ ಅವರ್ಯಾಕೋ ಇನ್ನು ಬಂದಿಲ್ಲ ಕಣ್ರೀ, ಇನ್ನೂ ಪಾದ ತೊಳೆಯೋದು ಮುಗಿದಿಲ್ವೇನೋ”, ಎನ್ನುತ್ತಾ ನಗುವಿಗೆ ಒಗ್ಗರಣೆ ಹಾಕುವರು. ಅದು ಇನ್ನೊಂದಿಷ್ಟು ಹೊತ್ತಿಗೂ ಮುಂದುವರಿದು ಪಾಪದ ಪತಿ ಹಾಸ್ಯದ ವಸ್ತುವಾಗಿ ನಲಿಯುವನು. ಈ ಕ್ಷಣ ನನಗೆ “ಇಬ್ಬರು ಹೆಂಡಿರ ಮುದ್ದಿನ ಪೋಲೀಸ್” ಚಲನಚಿತ್ರದ ಮುಖ್ಯಮಂತ್ರಿ ಚಂದ್ರು ಮತ್ತು ರೇಖಾದಾಸ್ ನೆನಪಾಗಿ ಮತ್ತಷ್ಟು ನಗು ಉಕ್ಕಿ ಬಂತು. ಆ ಚಲನಚಿತ್ರದಲ್ಲಿ ಪಾದಪೂಜೆಯ ಪರಾಕಾಷ್ಟೆಯನ್ನೇ ನೋಡಬಹುದು ನಾವು.
ಯಾವಾಗಲೂ ಗಂಡನ ಪಾದ ಪೂಜೆ ಮಾಡುತ್ತಲೇ ಇರುವ ಹೆಂಡತಿಯ ಪಾತ್ರಧಾರಿ ರೇಖಾದಾಸ್, ಅದೆಷ್ಟೋ ಲಕ್ಷ ಬಾರಿ ಈ ಪೂಜೆಯನ್ನು ಮಾಡಬೇಕಿರುತ್ತದೆ. ಅದಕ್ಕಾಗಿ ಅವಳು ಕೂತಲ್ಲಿ ನಿಂತಲ್ಲಿ ಮಲಗಿದಲ್ಲಿ ಎದ್ದಲ್ಲಿ ಎಲ್ಲೆಲ್ಲಿಯೂ ಗಂಡನಿಗೆ ಒಂಚೂರು ಬಿಡುವು ಕೊಡದೆ ಪಾದಪೂಜೆ ಮಾಡುತ್ತಿರುತ್ತಾರೆ. ಅದನ್ನು ಕಂಡ ಬ್ಯಾಂಕ್ ಜನಾರ್ಧನ್ ರು ಅದನ್ನು ಇನ್ನೊಂದು ರೀತಿಯೂ ಮಾಡಬಹುದು. ಅದೇನೆಂದರೆ ಬಿಸಿನೀರಿನಲ್ಲಿ ಪಾದಪೂಜೆ ಮಾಡುವುದಾದರೆ ಕಡಿಮೆ ಸಂಖ್ಯೆಯಲ್ಲಿಯೇ ವ್ರತ ಪೂರ್ಣವಾಗುತ್ತದೆಂದು ಉಪಾಯ ಹೇಳುತ್ತಾರೆ. ಯಾವಾಗ ಉಪಾಯ ಸಿಕ್ಕಿತೋ ರೇಖದಾಸ್ ನೀರನ್ನು ಚಳ್ಳ ಮಳ್ಳ ಕುದಿಸಿ ತೆಗೆದುಕೊಂಡು ಬಂದು ಯಾರೊಂದಿಗೋ ಮಾತಿನಲ್ಲಿ ಮಗ್ನರಾಗಿದ್ದ ಗಂಡ(ಮುಖ್ಯಮಂತ್ರಿ ಚಂದ್ರು)ನ ಪಾದದ ಮೇಲೆ ಸುರಿಯುತ್ತಾಳೆ. ಅಷ್ಟೇ ಕತೆ. ಅಯ್ಯಯ್ಯೋ ಎಂದು ತಕಧಿಮಿ ಆಡುವ ಮುಖ್ಯಮಂತ್ರಿ ಚಂದ್ರುರವರು “ಕೊನೆಗೆ ನಿನ್ನ ಪಾದಪೂಜೆಯ ಮನೆ ಹಾಳಾಗೋಗ, ಇದ್ರಿಂದ ಏನೇ ಸಿಗುತ್ತೆ ನಿನಗೆ” ಅಂತ ಕೇಳುತ್ತಾರೆ. ಆಗ ರೇಖಾದಾಸ್, “ರೀ ಅಷ್ಟು ಸಲ ಗಂಡನ ಪಾದ ಪೂಜೆ ಮಾಡಿದ್ರೆ ಮುಂದಿನ ಜನ್ಮದಲ್ಲಿ ಒಳ್ಳೆ ಗಂಡ ಸಿಗ್ತಾನಂತೆ ರೀ” ಎನ್ನುತ್ತಾರೆ. ಇದನ್ನು ಕೇಳಿದ ಚಂದ್ರುರವರು, “ನಿನಗೆ ಮುಂದಿನ ಜನ್ಮದಲ್ಲಿ ನಾನು ಬೇಡ, ಇನ್ಯಾವನೋ ಬೇಕು ಅಂತ ನನ್ನ ಪಾದ ಪೂಜೆ ಮಾಡಿ ಪ್ರಾಣ ತೆಗಿತಿದೀಯಾ” ಅಂತಂದು ಬೈದು ಕಳಿಸುತ್ತಾರೆ. ಅದೆಷ್ಟು ನಗುಬರಿಸುತ್ತವೆ ಆ ಸನ್ನಿವೇಶಗಳು ಎಂದರೆ ವರ್ಣಿಸಲಸಾಧ್ಯ.
ಇನ್ನೇನು ಎರೆಡೋ ಮೂರೋ ತಿಂಗಳಲ್ಲಿ ಭೀಮನ ಅಮವಾಸ್ಯೆ ಬರುತ್ತದೆ. ಎಲ್ಲ ಹೆಣ್ಣುಮಕ್ಕಳೂ ಶ್ರದ್ಧೆಯಿಂದಲೋ ಭಯದಿಂದಲೋ ಭಕ್ತಿಯಿಂದಲೋ ಪ್ರೀತಿಯಿಂದಲೋ ಪತಿಪೂಜೆಯನ್ನು ಮಾಡಿ ಧನ್ಯರೂ ಆಗುತ್ತಾರೆ. ನಾನೂ ಅದಕ್ಕೆ ಹೊರತಲ್ಲ. ನನ್ನದೂ ಪೂಜೆ ಆಗುತ್ತದೆ. ಆದರೆ ಪ್ರತಿ ಭೀಮನ ಅಮಾವಾಸ್ಯೆಗೂ ನನ್ನನ್ನು ಕಾಡುವ ಪ್ರಶ್ನೆಗಳು ಬಹಳಷ್ಟು. ಗಂಡನ ಪೂಜೆ ಏನೋ ಸರಿ, ಹಾಗೇ ಅವನೂ ಹೆಂಡತಿಯ ಪೂಜೆ ಮಾಡಬೇಕಲ್ಲವಾ… ನಾವು ಹೆಂಗಳೆಯರು ಮಾತ್ರ ಯಾಕೆ ಪೂಜೆ ಮಾಡಬೇಕು, ಅಂತೆಲ್ಲ ಮನಸು ಕೆಣಕುತ್ತದೆ. ನಮ್ಮ ಕೆಲವು ಆಚರಣೆಗಳು ಯಾಕೆ ಹೀಗೆ? ಸಮಾನತೆ ಯಾಕಿಲ್ಲ?! ಪುರುಷನಿಗೇಕೆ ಅಷ್ಟೊಂದು ಮರ್ಯಾದೆ… ಹೀಗೆ ಏನೇನೋ ಪ್ರಶ್ನೆಗಳು. ಹೆಣ್ಣಿನ ಘನತೆ ಮತ್ತು ಮರ್ಯಾದೆಗೆ ಯಾವ ಕೊರತೆಯೂ ಇಲ್ಲ. ಆದರೆ ಅದು ಆಚರಣೆಯಲ್ಲಿ ಇದೆಯಾ ಎಂದಾಗ ಮಾತ್ರ ಪ್ರಶ್ನೆ ಉದ್ಭವಿಸುತ್ತದೆ. ಇಷ್ಟೆಲ್ಲ ಗೊಂದಲ, ಪ್ರಶ್ನೆಗಳ ನಡುವೆಯೂ ನಾನೇಕೆ ಪತಿಪೂಜೆ ಮಾಡುತ್ತೇನೆ ಎಂದರೆ ಅದು ಧಾರ್ಮಿಕ ಕಟ್ಟಳೆಯಲ್ಲ ಅದು ಹೃದಯದ ನಿವೇದನೆ. ನನ್ನವನೆದುರು ನನ್ನ ಪ್ರೀತಿಯನ್ನು ತೋರಿಸಿಕೊಳ್ಳುವ ಒಂದು ವಿಧಾನ. ನಾವು ಹೆಣ್ಣುಮಕ್ಕಳಿಗೆ ಇಂತಹ ಹಲವಾರು ದಾರಿಗಳಿವೆ. ನಾವು ಯಾವುದನ್ನೂ ಮುಚ್ಚಿಟ್ಟುಕೊಳ್ಳಲಾರೆವು. ಕೋಪ, ಅಸಹನೆ, ನೋವು, ನಗು, ಅಳು… ಎಲ್ಲವನ್ನೂ ತೋರಿಸಿಕೊಂಡುಬಿಡುತ್ತೇವೆ. ಆದರೆ ಗಂಡಿಗೆ ಹಾಗಲ್ಲ. ಅವನು ತನ್ನ ನೋವನ್ನಾಗಲೀ, ಅಳುವನ್ನಾಗಲೀ, ಕಣ್ಣೀರನ್ನಾಗಲೀ ತೋರಿಸುವಂತೆಯೇ ಇಲ್ಲ. ಹಾಗೇ ತಾನೇ ನಮ್ಮ ಸಮಾಜ ನಿರೀಕ್ಷಿಸುತ್ತದೆ. ಅವ ಅದರ ಬಲಿಪಶು.
ಆದರೆ ಅವನೊಳಗೂ ಮೃದು ಭಾವನೆಗಳಿರುತ್ತವೆ. ಒಂದು ಕಣ್ಣೀರು ತುಳುಕಲು ಕಾದಿರುತ್ತದೆ. ತಾಯಿಯದೋ, ಹೆಂಡತಿಯದೋ ಮಡಿಲಲ್ಲಿ ತಲೆಯಿಟ್ಟು ಹಗುರಾಗಲು ಅವನೂ ಬಯಸುತ್ತಾನೆ. ಗಂಡನಿಗೆ ಚೂರು ಹುಷಾರು ತಪ್ಪಿದರೆ ನಾವೋ ನಮ್ಮ ಕಾಳಜಿಯ ಅಷ್ಟೂ ಪಟ್ಟುಗಳನ್ನೂ ಬಳಸಿ ಅವರು ನಮಗೆ ಎಷ್ಟು ಮುಖ್ಯ ಎನ್ನುವುದನ್ನು ತೋರಿಸಿಕೊಡುತ್ತೇವೆ. ಆದರೆ ಅವರಿಗೆ ಅದು ಸಾಧ್ಯವೇ ಇಲ್ಲ. ಅವರ ಕಾಳಜಿ ಸಣ್ಣ ಗದರಿಕೆಯಲ್ಲಿಯೇ ತಿಳಿಯಬೇಕು. ಆದರೆ ಅವರ ಕಣ್ಣನ್ನೊಮ್ಮೆ ಹುಡುಕಿ ನೋಡಿದರೆ ಸಾಕು, ಅಲ್ಲೊಂದು ಆತಂಕ, ತೆಳು ನೀರ ಪೊರೆ ಮಡುಗಟ್ಟಿರುತ್ತದೆ. ಅದನ್ನವರು ತೋರಗೊಡದೆ, ನಮ್ಮನ್ನು ಧೈರ್ಯವಾಗಿಡಲು ಏನು ಬೇಕೋ ಅದನ್ನೆಲ್ಲ ಮಾಡುತ್ತಿರುತ್ತಾರೆ.
ಇಷ್ಟು ವರ್ಷಗಳ ದಾಂಪತ್ಯದಲ್ಲಿ ನನ್ನ ಅಹಮ್ಮು ಕರಗಿದೆ. ನನ್ನ ಹುಂಬ ತಿಳಿವಳಿಕೆಯನ್ನು ಬದಲಿಸಿದೆ. ಸಂಸಾರದಲ್ಲಿ ಯಾರೂ ಹೆಚ್ಚಲ್ಲ ಯಾರೂ ಕಡಿಮೆಯಲ್ಲ ಎಂಬುದನ್ನು ಕಲಿಸಿಕೊಟ್ಟಿದೆ. ಸಾಕೇ ಸಾಕು ಎನಿಸುವಂತಹ ಜಗಳಗಳೂ ಕೊನೆಗೆ ಪ್ರೀತಿಯ ಅಪ್ಪುಗೆಯಲ್ಲೇ ಸುಖಾಂತ್ಯಗೊಂಡದ್ದೂ ಇದೆ. ಆ ಅನುಭವವಂತೂ ಸ್ವರ್ಗ. ದಾಂಪತ್ಯಕ್ಕೆ ಪ್ರೀತಿಯಷ್ಟೇ ಸಣ್ಣಪುಟ್ಟ ಜಗಳಗಳೂ ಅಗತ್ಯವೇ. ನಾವು ಅವನ ಪಾದಪೂಜೆ ಮಾಡಿ ಅವನ ಪಾದಗಳನ್ನು ಕಣ್ಣಿಗೊತ್ತಿಕೊಳ್ಳುವುದನ್ನು ಜಗತ್ತು ನೋಡುತ್ತದೆ. ನಮಗೆ ಶಬ್ಬಾಶ್ ಗಿರಿಯನ್ನೂ ಕೊಡುತ್ತದೆ. ಆದರೆ ಅವ ಪ್ರೀತಿಯಿಂದ ನಮ್ಮ ಪಾದಗಳನ್ನು ಚುಂಬಿಸುವುದನ್ನು ನಾವು ಮಾತ್ರ ಅನುಭವಿಸಿರುತ್ತೇವೆ. ಅದು ಜಗತ್ತಿಗೆ ತಿಳಿಯದೇ ಹೋಗುತ್ತದೆ. ಅವ ಯಾವ ಪ್ರತಿಫಲಾಪೇಕ್ಷೆ ಹೊಗಳಿಕೆ ನಿರೀಕ್ಷಿಸದೆಯೇ ಅದನ್ನು ಆತ್ಮದ ಜರೂರತ್ತಿನಂತೆ ಮಾಡಿರುತ್ತಾನೆ. ಅಂಥವನಿಗೆ ಒಂದು ಕೃತಜ್ಞತೆ ಹೇಳುವುದು ಅತಿಶಯವಂತೂ ಅಲ್ಲವಲ್ಲ. ದಾಂಪತ್ಯವನ್ನು ಗಟ್ಟಿಗೊಳಿಸುವಂತಹ, ಪ್ರೀತಿಯನ್ನು ಹೆಚ್ಚು ಮಾಡುವಂತಹ ಇಂತಹ ಆಚರಣೆಗಳಲ್ಲಿ ತರ್ಕ ಹುಡುಕದೆ ಅನುಸರಿದುವುದು ನಮ್ಮ ಸಹಬಾಳ್ವೆಗೆ ನಾವೇ ಕೊಟ್ಟುಕೊಳ್ಳುವ ಕೊಡುಗೆ ತಾನೆ….
ಒಂದು ಹೂವು ಅವನ ಪಾದದ ಗುಂಗಲ್ಲಿ ಉರುಳಲಿ… ಋಣಾನುಬಂಧದ ಶಿಖರದ ಮೇಲೆ ಪ್ರೀತಿ ಕಳಶ ಸದಾ ಹೊಳೆಯುತ್ತಲೇ ಇರಲಿ… ಎಲ್ಲ ಸಂಬಂಧಗಳೂ ಆಗಾಗ ಪ್ರಯಾಣಕ್ಕೆ ಜೊತೆಯಾಗಿ ನಂತರ ವಿದಾಯ ಹೇಳಿ ತಮ್ಮ ಪ್ರಯಾಣವನ್ನು ತಾವು ತಮ್ಮದೇ ದಾರಿಯಲ್ಲಿ ಮುಂದುವರಿಸುತ್ತವೆ. ಆದರೆ ಕೊನೆಯವರೆಗೂ ಉಳಿದು ಪ್ರಯಾಣದ ಅಂತಿಮ ಕ್ಷಣದವರೆಗೂ ಸಾಗಿ ಬರುವುದು ಅವ ಮಾತ್ರ. ಅವನು ಆತ್ಮಸಖ, ಪ್ರೀತಿಯ ಒಡನಾಡಿ, ಜೊತೆಗಾರ… ಒಂದು ಬದುಕು ಯಾವುದೇ ಅಡೆತಡೆಯನ್ನಾಗಲಿ ದಾಟಿ, ಬಂದ ಕಷ್ಟಗಳನ್ನೆಲ್ಲಾ ಜೊತೆಯಾಗಿ ಎದುರಿಸಿ, ಹೋರಟವನ್ನು ಮುಂದುವರೆಸಿ, ನನಗೆ ಆಯಾಸವಾದಾಗ ಅವ ಮುಖದ ಮುಂಗುರುಳ ಸರಿಸಿ ಗಾಳಿಯೂದಿ ನೀರ ಕುಡಿಸಿ, ಅವ ದಣಿದು ಕೂತಾಗ ಮಡಿಲ ತಾವಲ್ಲಿ ಮಗುವಾಗಿಸಿಕೊಂಡು ಅವನ ಕೂದಲಲಿ ಬೆರಳಾಡಿಸಿ ಆಯಾಸ ಪರಿಹರಿಸಿ ಬದುಕ ಮುಂದುವರಿಸುವ ಚೈತನ್ಯ ಒಂದು ಸಹಬಾಳ್ವೆಯಲ್ಲಿರುತ್ತದೆ. ಆ ಬಾಳ್ವೆ ನಿಜಕ್ಕೂ ಒಂದು ಹೂವಿನಷ್ಟೇ ಸಾರ್ಥಕ. ತನ್ನ ಮನದಾಳದ ಅಭಿಪ್ರಾಯವೇನೇ ಇರಲಿ, ಇತರರ ಖುಷಿಗೆ ಕಾರಣವಾಗುವ ಹೂವಿನ ಬಾಳ್ವೆಯಷ್ಟೇ ಅರ್ಥಪೂರ್ಣ….
ಈ ಗುಲಾಬಿಯು ನಿನಗಾಗಿ
ಅದು ಚೆಲ್ಲುವ ಪರಿಮಳ ನಿನಗಾಗಿ…
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”