ಒಂದು ನಿರ್ದಿಷ್ಟ ಮರದ ಬುಡದಿಂದ ತುದಿಯವರೆಗೂ ಹಣ್ಣುಗಳು ಇದ್ದರೆ ಬಹಳ ಮಳೆಯೆಂದು, ಕಡಿಮೆ ಹಣ್ಣು ಇದ್ದರೆ ಮಳೆ ಕಡಿಮೆ ಎಂದು, ನಡು ನಡುವೆ ಹಣ್ಣು ಇದ್ದರೆ ಮಳೆ ಒಮ್ಮೊಮ್ಮೆ ಹೆಚ್ಚು ಕಡಿಮೆ ಆಗಬಹುದೆಂದೂ ಖಚಿತವಾಗಿ ಹೇಳುತ್ತಾರೆ. ಕುಣಬಿ ಸಮುದಾಯಕ್ಕೆ ಯುಗಾದಿಯೆಂದರೆ ಪ್ರಕೃತಿಯ ಮಡಿಲಿನಲ್ಲಿ ಕುಳಿತೊಂದು ಹಾಡು ಹಾಡಿದಂತೆ.
ಈ ವರ್ಷದ ಯುಗಾದಿಯ ಸಂಭ್ರಮಕ್ಕೆ ಅಕ್ಷತಾ ಕೃಷ್ಣಮೂರ್ತಿ ಬರಹ ನಿಮ್ಮ ಓದಿಗೆ
ಯುಗಾದಿ ಮರಳಿ ಬರುವ ಕೌತುಕವನ್ನು ಕನ್ನಡದ ಪ್ರಸಿದ್ಧ ಕವಿ. ದ.ರಾ. ಬೇಂದ್ರೆಯವರು ಕವನಗಳ ಸಾಲಿನಲ್ಲಿ ಹಿಡಿದಿಟ್ಟಿರುವುದು ಯಾರಿಗೆ ಗೊತ್ತಿಲ್ಲ!
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಅರ್ಥಪೂರ್ಣವಾದ ಯುಗಾದಿಗೊಂದು ಹೊಸ ಭಾಷ್ಯ ಬರೆಯುವ ಹಾಡು ಇದು. ನಿಸರ್ಗದ ವರದಾನದಿಂದ ಗಿಡ ಮರಗಳಲ್ಲಿ ಹೊಸ ಕುಡಿಗಳು ಚಿಗುರುವವು. ಎಲ್ಲೆಲ್ಲೂ ಹಸಿರು ಕಂಗೊಳಿಸುವುದು. ‘ಹೊಂಗೆ ಹೂವ ತೋಂಗಲಲ್ಲಿ ಭೃಂಗದ ಸಂಗೀತ ಕೇಲಿ…’ ಎಂದು ಬೇಂದ್ರೆಯಜ್ಜ ಹೇಳಿದಂತೆ, ಈ ಸಂದರ್ಭದಲ್ಲಿ ಪ್ರಕೃತಿಯೇ ಸಂಗೀತಮಯವಾಗಿರುತ್ತದೆ. ಹೀಗಾಗಿ ಯುಗಾದಿ ಭಾರತೀಯರ ಪಾಲಿಗೆ ಪ್ರಮುಖ ಹಬ್ಬ. ಪ್ರತಿ ಬಾರಿ ಹಸಿರನ್ನು, ಆ ನೆಪದಲ್ಲಿ ರಾಶಿ ರಾಶಿ ಸಂಭ್ರಮವನ್ನು, ಪ್ರೀತಿಯನ್ನು, ಸಂತಸವನ್ನು ಹೊತ್ತು ತರುವ ಹಬ್ಬ ಯುಗಾದಿ.
ಉತ್ತರಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಕುಣಬಿ ಬುಡಕಟ್ಟು ಜನಾಂಗಗಳು ಆಚರಿಸುವ ಯುಗಾದಿ ಹಬ್ಬ ಬಹಳ ವಿಶಿಷ್ಟವಾದದ್ದು. ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಕಾಡು ಇರುವ, ಜನಸಾಂದ್ರತೆ ಕಡಿಮೆ ಇರುವ ತಾಲ್ಲೂಕು ಜೋಯಿಡಾ. ಆದ್ದರಿಂದ ಇಲ್ಲಿ ವಾಸಿಸುವ ಎಲ್ಲ ಸಮುದಾಯದ ಜನರೂ ಕಾಡನ್ನು ಅವಲಂಬಿಸಿಕೊಂಡಿದ್ದಾರೆ. ಪ್ರೀತಿಸುತ್ತಾರೆ. ಅವರ ಹಬ್ಬದ ಆಚರಣೆಗಳೂ ಕಾಡಿನ ವಿಸ್ಮಯವನ್ನೂ ಆರಾಧಿಸುವ ರೀತಿಯಲ್ಲಿ ಇರುತ್ತದೆ.
ಜೋಯಿಡಾದಲ್ಲಿ ಸರಳವಾದ ಪುಟ್ಟ ಪುಟ್ಟ ಗುಡಿಗಳಿವೆ. ಅಲ್ಲಿಯೇ ಆರಾಧನೆ, ಉತ್ಸವಗಳು ನಡೆಯುತ್ತವೆ. ಕೃಷಿ ಪ್ರಧಾನ ಊರಾದ್ದರಿಂದ ವೈಭವವೂ ಬಹಳವೇನೂ ಇರುವುದಿಲ್ಲ. ಯುಗಾದಿಯಂದು ಊರಿನ ದೇಗುಲದಲ್ಲಿ ಆಯಾ ಊರುಗಳ ಪ್ರಮುಖರು, ಹಿರಿಯರು ಸೇರುತ್ತಾರೆ. ದೇವರಿಗೆ ಪೂಜೆಯನ್ನು ಮಾಡಿ ಊರಿನ ಪರವಾಗಿ `ಚೌರಾಸ್ ಮಾಗಣಿ’ ಹೇಳಿಕೆ ನಡೆಯುತ್ತದೆ. ಕೊನೆಗೆ ಪಂಚಾಂಗ ಶ್ರವಣವೂ ನಡೆಯುತ್ತದೆ. ಊರಿನ ಜನರ ಸಾಮೂಹಿಕ ಪ್ರಾರ್ಥನೆಯನ್ನು ಅರ್ಚಕರು ದೇವರಿಗೆ ಅರಿಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಚೌರಾಸ್ ಮಾಗಣಿ ಎಂದು ಹೇಳುತ್ತಾರೆ. ಊರಿಗೆಲ್ಲ ಒಳಿತಾದರೆ, ತಮಗೂ ಒಳಿತಾಗುವುದು ಎಂಬ ನಂಬಿಕೆಯನ್ನು ನಮ್ಮ ಹಿರಿಯರು ಹೊಂದಿದ್ದರು. ಹಾಗಾಗಿ ಚೌರಾಸ್ ಮಾಗಣಿಯಲ್ಲಿ, ಊರಿನಲ್ಲಿ ಬೆಳೆ ಚೆನ್ನಾಗಿ ಬರಲೆಂದು, ಜಾನುವಾರುಗಳು ಚೆನ್ನಾಗಿರಲೆಂದು, ಮನೆಗಳಲ್ಲಿ ಮದುವೆ ಮುಂಜಿ ಕಾರ್ಯಕ್ರಮಗಳು ನಡೆಯಲೆಂದು ಕೇಳಿಕೊಳ್ಳುತ್ತಾರೆ. ಅದಾದ ನಂತರ ಊರಿನ ಹಿರಿಯರು ತಮ್ಮ ಸುತ್ತಲಿನ ಕಾಡನ್ನು ಅವಲೋಕಿಸಿದಾಗ ತಾವು ಕಂಡುಕೊಂಡ ವಿಷಯಗಳ ಕುರಿತು ಮಾತನಾಡುತ್ತಾರೆ. ಕಾಡಿನ ನಡುವೆ, ಕಾಡು ನಂಬಿಕೊಂಡ ಜೀವಗಳಿಗೆ ಪ್ರಕೃತಿ ತೀರಾ ಹತ್ತಿರ. ಪ್ರಕೃತಿಯ ಆಗುಹೋಗುಗಳು ಇವರ ಬದುಕಿನ ಮೇಲೆ ಬಹಳಷ್ಟು ಪರಿಣಾಮವನ್ನು ಬೀರುತ್ತದೆ. ಊರ ಹಿರಿಯರು ಆಯಾ ವರ್ಷದಲ್ಲಿ ಕಂಡುಂಡ ಅನುಭವದ ಆಧಾರದಿಂದ ಮಳೆಯ ಬಗ್ಗೆ ಹಲವಾರು ಮಾಹಿತಿಯನ್ನು ಕಿರಿಯರಿಗೆ ಒದಗಿಸುತ್ತಾರೆ.
ಜೋಯಿಡಾದ ಕಾಡುಗಳಲ್ಲಿ ಬೆಳೆಯುವ ಹಣ್ಣಿನ ಮರದ ಆಧಾರದಿಂದ, ಕೆಲವೊಂದು ಹೂಗಳ ಅರಳುವಿಕೆಯ ಆಧಾರದಿಂದ ಮುಂದಿನ ಮಳೆಗಾಲದಲ್ಲಿ ಆಗಬಹುದಾದ ಮಳೆಯ ಪ್ರಮಾಣ ನಿರ್ಧರಿಸುತ್ತಾರೆ. ಒಂದು ನಿರ್ದಿಷ್ಟ ಮರದ ಬುಡದಿಂದ ತುದಿಯವರೆಗೂ ಹಣ್ಣುಗಳು ಇದ್ದರೆ ಬಹಳ ಮಳೆಯೆಂದು, ಕಡಿಮೆ ಹಣ್ಣು ಇದ್ದರೆ ಮಳೆ ಕಡಿಮೆ ಎಂದು, ನಡು ನಡುವೆ ಹಣ್ಣು ಇದ್ದರೆ ಮಳೆ ಒಮ್ಮೊಮ್ಮೆ ಹೆಚ್ಚು ಕಡಿಮೆ ಆಗಬಹುದೆಂದೂ ಖಚಿತವಾಗಿ ಹೇಳುತ್ತಾರೆ. ಪ್ರಕೃತಿಯಲ್ಲಿ ಮುಂಬರುವ ಕಾಲದ ಬದಲಾವಣೆಯನ್ನು ತಿಳಿದುಕೊಳ್ಳುವ ಕುಣಬಿಗಳಿಗೆ ಯುಗಾದಿ ಹಬ್ಬ ಕೃಷಿ ಕೆಲಸಗಳನ್ನು ಆರಂಭಿಸುವ ಹಬ್ಬವಾಗಿಯೂ ವಿಶಿಷ್ಟವಾಗಿದೆ.
ಕುಣಬಿಗಳು ಸಾಂಪ್ರದಾಯಿಕವಾದ ಕುಮರಿ ಬೇಸಾಯ ನಂಬಿಕೊಂಡು ಬಂದವರು. ಬೇಸಗೆಯ ಬಳಿಕ ಕುಮರಿ ಬೇಸಾಯಕ್ಕೆ ನಿಗದಿ ಮಾಡಿದ ಗದ್ದೆಗಳಲ್ಲಿ, ಮೊದಲು ಕೃಷಿ ಮಾಡುವ ಗದ್ದೆಯನ್ನು ಸ್ವಚ್ಛಗೊಳಿಸಿ, ಬಿದ್ದ ಕಸಕಡ್ಡಿಗಳನ್ನು ಸುಟ್ಟು ಆ ಜಾಗವನ್ನು ಉತ್ತು ವಿವಿಧ ಪ್ರಕಾರದ ಬೀಜಗಳನ್ನು ಬಿತ್ತುವುದು ರೂಢಿ ಇದೆ. ಯುಗಾದಿಯ ದಿನ ಕೃಷಿ ಕೆಲಸದ ಆರಂಭ ಎಂಬಂತೆ, ಊರವರೆಲ್ಲ ಸೇರಿ ತಮ್ಮ ತಮ್ಮ ಮನೆಯಿಂದ ಒಂದಿಷ್ಟು ಬೀಜಗಳನ್ನು ದೇವಸ್ಥಾನಕ್ಕೆ ತರುತ್ತಾರೆ. ದೇಗುಲದ ಎದುರಿಗಿರುವ ಜಾಗವನ್ನು ಹಸನುಗೊಳಿಸಿ, ಕಸ ಕಡ್ಡಿಗಳನ್ನು ಒಂದೆಡೆ ಸಂಗ್ರಹಿಸಿ ಸುಡುತ್ತಾರೆ. ನಂತರ ಆ ಜಾಗದಲ್ಲಿ ‘ಮಾಲಮುಟೈ’ ಎಂಬ ಬೀಜ ಬಿತ್ತನೆ ಮಾಡುವ ಪೂಜೆ ನಡೆಯುತ್ತದೆ. ಈ ದಿನ ವಿಶೇಷವಾಗಿ ಹಲಸಿನ ಹಣ್ಣನ್ನು ದೇವರಿಗೆ ನೈವೇದ್ಯ ಕೊಡುವ ಪದ್ಧತಿ ಇದೆ. ನಂತರ ಸೇರಿದವರೆಲ್ಲ ಪ್ರಸಾದದ ರೂಪದಲ್ಲಿ ಹಣ್ಣನ್ನು ತಿನ್ನುತ್ತಾರೆ. ನಂತರ ವಿವಿಧ ರೀತಿಯ ಬೀಜಗಳನ್ನು ಬಿತ್ತುವ ಪದ್ಧತಿ ರೂಢಿಯಿಂದ ಬಂದಿದೆ. ಇದಾದ ನಂತರ ಹಳ್ಳಿಗರು ತಮ್ಮ ತಮ್ಮ ಊರಿನಲ್ಲಿ ಕೃಷಿಗೆ ಸಂಬಂಧಿಸಿದ ಕೆಲಸ ಕಾರ್ಯ ಮಾಡಲು ಅನುವು ಮಾಡಿಕೊಡುತ್ತಾರೆ.
ಚೌರಾಸ್ ಮಾಗಣಿಯಲ್ಲಿ, ಊರಿನಲ್ಲಿ ಬೆಳೆ ಚೆನ್ನಾಗಿ ಬರಲೆಂದು, ಜಾನುವಾರುಗಳು ಚೆನ್ನಾಗಿರಲೆಂದು, ಮನೆಗಳಲ್ಲಿ ಮದುವೆ ಮುಂಜಿ ಕಾರ್ಯಕ್ರಮಗಳು ನಡೆಯಲೆಂದು ಕೇಳಿಕೊಳ್ಳುತ್ತಾರೆ. ಅದಾದ ನಂತರ ಊರಿನ ಹಿರಿಯರು ತಮ್ಮ ಸುತ್ತಲಿನ ಕಾಡನ್ನು ಅವಲೋಕಿಸಿದಾಗ ತಾವು ಕಂಡುಕೊಂಡ ವಿಷಯಗಳ ಕುರಿತು ಮಾತನಾಡುತ್ತಾರೆ.
ಹೋಳಿ ಹುಣ್ಣಿಮೆಯ ನಂತರದಿಂದ ಯುಗಾದಿಯವರೆಗೂ ಕುಣಬಿ ಜನರು ಆಯುಧವನ್ನು ಬಳಸಿ ಮಾಡುವ ಕೆಲಸಗಳನ್ನು ಸಂಪೂರ್ಣ ನಿಷೇಧಿಸುತ್ತಾರೆ. ಯುಗಾದಿಯ ನಂತರದಲ್ಲಿ ಊರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಆಯುಧಗಳಿಂದ ಕಡೆಯುವ, ಸುಡುವ, ಅಗೆಯುವ ಕೆಲಸಗಳು ಆರಂಭವಾಗುತ್ತವೆ. ಶಿವರಾತ್ರಿಯ ನಂತರ ಆಲೆಮನೆಯಲ್ಲಿ ತಯಾರಾದ ಬೆಲ್ಲ ಕೂಡ ಯುಗಾದಿಯವರೆಗೆ ಮನೆಯವರ ಬಳಕೆಗೆ ಲಭ್ಯವಾಗದು. ಯುಗಾದಿಯಂದು ದೇವರ ನೈವೇದ್ಯಕ್ಕೆ ಬೆಲ್ಲವನ್ನು ಒಪ್ಪಿಸಿಯಾದ ನಂತರ ಮನೆ ಬಳಕೆಗೆ ಈ ಬೆಲ್ಲವನ್ನು ತೆಗೆಯುವುದು ವಾಡಿಕೆ. ಜೋಯಿಡಾದ ಕೆಲವು ಹಳ್ಳಿಗಳಲ್ಲಿ ದೇವರ ಪೂಜೆಯ ನಂತರ ಊರಿನವರು ಎಲ್ಲರೂ ಸೇರಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಅಡುಗೆಗೆ ಬೇಕಾಗುವ ಎಲ್ಲ ಸಾಮಾನುಗಳು ಊರಿನ ಪ್ರತಿ ಮನೆಯಿಂದ ಸಂಗ್ರಹಿಸುತ್ತಾರೆ. ಕೆಲವೊಂದು ಊರುಗಳಲ್ಲಿ ಈ ದಿನ ಊರಿನವರೇ ಅಭಿನಯಿಸುವ ಕೊಂಕಣಿ ನಾಟಕಗಳನ್ನು ಕೂಡ ನೋಡಬಹುದು.
ಯುಗಾದಿ ಎಂದರೆ ಅದು ಸಾಂಸ್ಕೃತಿಕ ಹಬ್ಬ. ಪ್ರತಿ ವರ್ಷ ಚೈತ್ರ ಮಾಸದ ಮೊದಲ ದಿನ ಆಚರಿಸುವ ಹಬ್ಬ ಯುಗಾದಿ. ಒಂದು ಸಂವತ್ಸರ ಕಳೆದು ಹೊಸ ಸಂವತ್ಸರ ಪ್ರಾರಂಭವಾಗುವುದರಿಂದ ಅದನ್ನು ನಾವು ‘ಯುಗದ ಆದಿ’ ಅಥವಾ ‘ಯುಗಾದಿ’ ಎಂದು ಕರೆಯುತ್ತೇವೆ. ಚೈತ್ರ ಮಾಸದೊಂದಿಗೆ ವಸಂತ ಋತುವಿನ ಆರಂಭ. ಈ ಸಮಯದಲ್ಲಿ ಗಿಡ ಮರಗಳು ಚಿಗುರಿಕೊಂಡು ನಳನಳಿಸುತ್ತವೆ. ಎಲ್ಲೆಲ್ಲೂ ಹಸಿರು. ಅಷ್ಟೇ ಅಲ್ಲ, ಇದು ಹೂ ಹಣ್ಣು ಬಿಡುವ ಕಾಲವಾಗಿದ್ದರಿಂದ ಪ್ರಕೃತಿಯು ಶ್ರೀಮಂತವಾಗಿರುತ್ತದೆ. ಪ್ರಕೃತಿಯೆಂದರೇ ಅದು ನವಜೀವನದ ಸಂಕೇತವಾಗಿದೆ. ಪ್ರಕೃತಿಯ ಬದಲಾವಣೆ, ವಸಂತನ ಆಗಮನ ಕೋಗಿಲೆಯ ಕೂಗು, ಯುಗಾದಿ ಸಂಭ್ರಮಕ್ಕೆ ರಂಗು ತುಂಬುತ್ತದೆ.
ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಯುಗಾದಿ ಆಚರಣೆಯ ವಿಧಾನ ತುಸು ಭಿನ್ನವಾಗಿರುತ್ತದೆ. ಯುಗಾದಿಯ ದಿನ ಬೆಳಗಾಗುವ ಮೊದಲೇ ಎದ್ದು ಹೊಸಿಲು ತೊಳೆದು, ಮಣ್ಣಿನ ಅಂಗಳವನ್ನು ಸಗಣಿಯಿಂದ ಸಾರಿಸಿ ಶುಚಿಗೊಳಿಸಿ, ಚಂದದ ರಂಗೋಲಿ ಹಾಕಿ, ಬಾಗಿಲಿಗೆ ಮಾವಿನೆಲೆ, ಬೇವಿನೆಲೆಯ ಗೊಂಚಲು ಕಟ್ಟಿ ತೋರಣ ಕಟ್ಟುವುದು ರೂಢಿ. ಕರಾವಳಿಯ ಮನೆಗಳಲ್ಲಿ ಮತ್ತು ದೇಗುಲಗಳಲ್ಲಿಯೂ ಪಂಚಾಂಗ ಶ್ರವಣವೇ ಮುಖ್ಯವಾದ ಆಚರಣೆ. ಪಂಚಾಂಗ ಶ್ರವಣವೆಂದರೆ, ಮುಂದಿನವರ್ಷ ಮಳೆ ಬೆಳೆ ಹೇಗಿರುತ್ತದೆ, ರಾಜಕೀಯ ಚಟುವಟಿಕೆಗಳು ಹೇಗಿರುತ್ತವೆ, ಯುದ್ಧಾದಿ ಭೀತಿಗಳು ಇರುತ್ತವೆಯೇ ಎಂಬ ವಿಚಾರಗಳನ್ನು ಅರಿತಕೊಳ್ಳುವುದು. ಮತ್ತೆ ಆ ದಿನ ಊರಿನ ಪ್ರಮುಖರೆಲ್ಲರೂ ಗ್ರಾಮದೇವಿಯ ಮಂದಿರಲ್ಲಿ ಸೇರಿ ಒಟ್ಟಾಗಿ ಪೂಜೆ ಮಾಡಿಸುತ್ತಾರೆ.
ಪೂಜೆಯ ನಂತರ ಹಂಚುವ ಪ್ರಸಾದ ಮಕ್ಕಳಾದಿಯಾಗಿ ದೊಡ್ಡವರಿಗೂ ತುಂಬ ಇಷ್ಟ. ಎಲ್ಲರೂ ನೈವೇದ್ಯಕ್ಕಾಗಿ ಅವರವರ ಮನೆಯಿಂದ ತಂದ ಎಲ್ಲ ಪದಾರ್ಥ ಒಟ್ಟು ಮಾಡಿ ಪೂಜೆಯ ನಂತರ ಹಂಚುತ್ತಾರೆ. ಅಂತಹ ಪದಾರ್ಥಕ್ಕೆ ಒಂದು ಹೇಳಲಾಗದ ಹೊಸ ಬಗೆಯ ರುಚಿಯಿರುತ್ತದೆ. ಹೊಸ ವರ್ಷದ, ಮೊದಲ ಪೂಜೆಗೆ ಬಂದ ಮಕ್ಕಳ ಪುಟ್ಟ ಪುಟ್ಟ ಕೈಗಳಲ್ಲಿ ಪ್ರಸಾದ ರೂಪದ ತಿಂಡಿ ಅವರ ಮೊಗದಲ್ಲಿ ಹರುಷದ ಎಳೆ ಹೊಮ್ಮಿಸುತ್ತದೆ. ದೇಗುಲದ ಕಟ್ಟೆಯ ಮೇಲೆ ಕುಳಿತು ಎಲ್ಲರೂ ಖುಷಿಯಿಂದ ಮಾತಾಡುತ್ತ ಪ್ರಸಾದ ಸೇವಿಸುವ ಪರಿಯಲ್ಲಿ ಬಾಂದವ್ಯ ಬೆಸೆಯುವ ಹುಮ್ಮಸ್ಸಿರುತ್ತದೆ. ಎಲ್ಲರ ಮನೆಯ ಅಡುಗೆ ರುಚಿ ಬಾಯಲ್ಲಿ ಓಡಾಡಿ ಮನವೂ ಖುಷಿಗೊಂಡು ಒಂದು ರೀತಿಯಲ್ಲಿ ತಮ್ಮ ತಮ್ಮ ಊರಿನ ಬಗ್ಗೆ ಒಂದು ವಿಶೇಷವಾದ ಅಭಿಮಾನ ಶುರುವಾಗುತ್ತದೆ.
ಹೊಸ ಸಂವತ್ಸರದಲ್ಲಿ ಯಾವ ಗ್ರಹ ಯಾವ ಅಧಿಪತ್ಯ ವಹಿಸಿದ್ದಾನೆ, ಯಾವ ಗ್ರಹಕ್ಕೆ ಈ ಸಂವತ್ಸರದಲ್ಲಿ ರಾಜನ ಸ್ಥಾನ, ಯಾವುದಕ್ಕೆ ಮಂತ್ರಿಯ ಸ್ಥಾನ, ಯಾರು ಮಳೆಯನ್ನು ನಿಯಂತ್ರಿಸುತ್ತಿದ್ದಾರೆ, ಈ ವರುಷ ಎಷ್ಟು ಕೊಳಗ ಮಳೆಯಾಗುತ್ತದೆ, ಮಳೆ ಈ ವರ್ಷ ಯಾವ ವಾಹನವನ್ನು ಏರಿ ಬರುತ್ತದೆ ಎಂಬೆಲ್ಲ ವಿಷಯವನ್ನು ಪಂಚಾಂಗ ಶ್ರವಣದಲ್ಲಿ ಗೊತ್ತಾಗುತ್ತದೆ. ಹೀಗಾಗಿ ಯುಗಾದಿಯ ದಿನದಂದು ನೌಕರಿಯ ಸಲುವಾಗಿ ಊರಿನಿಂದ ಹೊರಗಿದ್ದವರೂ ಕೂಡ ಬಿಡುವು ಮಾಡಿಕೊಂಡು ಬಂದು ಪಂಚಾಂಗ ಶ್ರವಣದಲ್ಲಿ ಭಾಗಿಯಾಗುತ್ತಾರೆ.
ಪಂಚಾಂಗ ಶ್ರವಣದ ವೇಳೆಯಲ್ಲಿ ಹೇಳುವ ಪುರಾಣದ ಕಥೆಗಳು ಮಕ್ಕಳ ಮನಸ್ಸನ್ನು ಗೆಲ್ಲುತ್ತವೆ. ಊರಿನ ಹಿರೇಕರೆಲ್ಲರ ಮುಂದೆ ಪಂಚಾಂಗ ಪಠಣವಾಗಿ ಭಟ್ಟರು ದೇಗುಲದ ಬಾಗಿಲು ಹಾಕಿ ಹೋದ ನಂತರದಲ್ಲಿ ಸೇರಿದ ಎಲ್ಲರೂ ಕೂಡಿ `ಒಂದು ಸುತ್ತಿನ ಮಾತುಕತೆ’ ನಡೆಸುತ್ತಾರೆ. ವರ್ಷದ ಮೊದಲಲ್ಲೆ ಕಷ್ಟ ಸುಖದ ಬಗೆಗಿನ ಅರಿವನ್ನು ಜಾಗೃತಗೊಳಿಸುವ ಪಂಚಾಂಗ ಶ್ರವಣದಂತಹ ಪ್ರಯತ್ನ ಬಹು ಮುಖ್ಯವಾದದ್ದು. ಮನುಷ್ಯ ಸದಾ ಸುಖವನ್ನೇ ಬಯಸುತ್ತಾನೆ. ಕಷ್ಟ ಬಯಸಲಾರ. ಎಂದಿಗೂ ಕಷ್ಟ ನಿರಂತರವಾಗಿರದು. ಕಷ್ಟ ಸುಖ ಸಮಾನವಾಗಿ ಸ್ವೀಕರಿಸುವ, ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂಬ ಪಾಠವೂ ಅಲ್ಲಿ ಹಿರಿಯರಿಂದ ಕಿರಿಯರಿಗೆ ಸಿಗುತ್ತ ಹೋಗುತ್ತದೆ. ನಂತರ ಗ್ರಾಮದ ಸಮಸ್ತ ಜನ ಬೇವು ಬೆಲ್ಲ ಹಂಚಿ ತಿನ್ನುವ ಪರಿಯಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿ ಮೊಳೆಯುತ್ತದೆ.
ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ