ಮಿನಿಕಾಯ್ ಎಂಬುದು ನಿಜಕ್ಕೂ ಒಂದು ಮಾಯಾದ್ವೀಪ ಎಂದು ಅರಿವಿಗೆ ಬಂದದ್ದು ಒಂದು ವರ್ಷಗಳ ನಂತರ ಎರಡನೆಯ ಬಾರಿ ಕಳೆದ ವಾರ ಈ ದ್ವೀಪದೊಳಕ್ಕೆ ಕಾಲಿಟ್ಟಾಗ. ಎರಡು ವರುಷದ ಹಿಂದೆ ನವರಾತ್ರಿಯ ರಜೆಯ ಸಮಯದಲ್ಲಿ ಕೊಚ್ಚಿಯಿಂದ ನೇರವಾಗಿ ನಾನಿರುವ ದ್ವೀಪಕ್ಕೆ ತೆರಳುವ ಹಡಗನ್ನು ಬೇಕೆಂತಲೇ ತಪ್ಪಿಸಿಕೊಂಡು, ಮೂರ್ನಾಲ್ಕು ದ್ವೀಪಗಳನ್ನು ಬಳಸಿಕೊಂಡು ಮೂರು ಹಗಲು ಮೂರು ಇರುಳು ಕಳೆದು ತಲುಪುವ ಪ್ರವಾಸಿಗರ ಹಡಗೊಂದನ್ನು ಹತ್ತಿದ್ದೆ. ಆ ದೊಡ್ಡ ಐಷಾರಾಮಿ ಹಡಗು ಬೆಳಗಿನ ಹೊತ್ತಲ್ಲಿ ದ್ವೀಪವೊಂದರ ಬಳಿ ಲಂಗರು ಹಾಕಿ ನಿಲ್ಲುತ್ತಿತ್ತು.ಪ್ರವಾಸಿಗರು ಅದರಿಂದ ಇಳಿದು ಸಂಜೆಯ ತನಕ ದ್ವೀಪದೊಳಗೆ ಸುತ್ತಾಡಿ ಕತ್ತಲಾಗುವ ಹೊತ್ತು ಮರಳಿ ಹಡಗಿನೊಳಕ್ಕೆ ಸೇರುತ್ತಿದ್ದರು. ಮತ್ತೆ ಇರುಳಿಡೀ ಕಡಲಿನಲ್ಲಿ ಚಲಿಸುವ ಹಡಗು ಬೆಳಗ್ಗೆ ಇನ್ನೊಂದು ದ್ವೀಪದ ಮುಂದೆ ನಿಲ್ಲುತ್ತಿತ್ತು. ಹಾಗೆ ನಿಂತಾಗ ನಾನೂ ಅವರೊಡನೆ ಇಳಿದು ಈ ಮಿನಿಕಾಯ್ ದ್ವೀಪವನ್ನು ಹೊಕ್ಕವನು ಚಕಿತಗೊಂಡಿದ್ದೆ. ಯಾಕೆಂದರೆ ದ್ವೀಪದ ಬೀದಿಗಳಲ್ಲಿ ಜನರೇ ಕಾಣಿಸುತ್ತಿರಲಿಲ್ಲ. ಕಾಣಿಸಿದ ಜನರ ಮುಖದಲ್ಲೂ ಏನೋ ಒಂದು ಉದಾಸೀನ. ಮಾತನಾಡಿಸಿದರೂ ಏನೋ ಒಂದು ಒಲ್ಲದ ಮುಖಭಾವ. ಮನೆಗಳೂ, ಮಕ್ಕಳೂ, ಆಟ, ಕೇಕೆ ನಗು ಏನೂ ಕೇಳಿಸದ ಏನೂ ಕಾಣಿಸದ ಒಂದು ತರಹದ ಕೆಟ್ಟ ಮೌನ. ಕೇಳಿಸುತ್ತಿದ್ದುದ್ದು ಆ ದ್ವೀಪದಲ್ಲಿ ಅಸಹಜವಾಗಿ ಅಧಿಕ ಸಂಖ್ಯೆಯಲ್ಲಿದ್ದ ಕಾಗೆಗಳ ಸದ್ದು ಮಾತ್ರ.


ಈ ಮಿನಿಕಾಯ್ ದ್ವೀಪದ ಕುರಿತು ನಾನು ಏನೋ ಪೂರ್ವಾಗ್ರಹ ಇರಿಸಿಕೊಂಡಿದ್ದೆ. ಈ ದ್ವೀಪದ ಜನರು ಸ್ನೇಹಮಯಿಗಳಲ್ಲವೆಂದೂ ಯಾವತ್ತೂ ಮುಖ ಹುಬ್ಬುಗಟ್ಟಿಕೊಂಡಿರುವರೆಂದೂ ತಪ್ಪಾಗಿ ತಿಳಿದುಕೊಂಡಿದ್ದೆ. ಯಾಕೆಂದರೆ ಅದು ನನ್ನದೇ ತಪ್ಪಾಗಿತ್ತು. ಯಾಕೆಂದರೆ ನಾನು ಪ್ರವಾಸಿಗನ ಹಾಗೆ ಆ ದ್ವೀಪದ ಒಂದು ಬದಿಯ ಸೆರಗಲ್ಲಿ ಮಾತ್ರ ನಡೆದಾಡಿದ್ದೆ. ಅಲ್ಲಿ ನಾನು ನೋಡಿದವರು ದ್ವೀಪವಾಸಿಗಳಾಗಿರಲಿಲ್ಲ. ಬದಲಾಗಿ ವರ್ಗವಾಗಿ ನೌಕರಿಗೆ ಒಲ್ಲದ ಮನಸಿನಿಂದ ಬಂದ ಸರಕಾರೀ ಉದ್ಯೋಗಸ್ಥರೂ, ವ್ಯಾಪಾರಿಗಳೂ, ತಂತ್ರಜ್ಞರೂ ಆಗಿದ್ದರು. ಲಕ್ಷದ್ವೀಪದ ಉಳಿದ ದ್ವೀಪಗಳಿಗೂ ಮಿನಿಕಾಯ್ ದ್ವೀಪಕ್ಕೂ ಇರುವ ಬಹಳ ದೊಡ್ಡ ವ್ಯತ್ಯಾಸವಿದು. ಇಲ್ಲಿನ ನಿವಾಸಿಗಳು ಈ ದ್ವೀಪದ ಒಂದು ಮಗ್ಗುಲಲ್ಲಿರುವ ಹನ್ನೊಂದು ಹಳ್ಳಿಗಳಲ್ಲಿ ಬದುಕುತ್ತಾರೆ,ಈ ಹನ್ನೊಂದೂ ಹಳ್ಳಿಗಳಿಗೂ ಒಂದೊಂದು ಹೆಸರಿದೆ. ಒಂದೊಂದು ಚಿಹ್ನೆ ಇದೆ. ಒಂದೊಂದು ಸ್ಪರ್ದೆಯ ದೋಣಿಯಿದೆ. ಒಂದೊಂದು ಹಳ್ಳಿಗೂ ಒಂದು ಪಂಚಾಯ್ತಿ ಮನೆಯಿದೆ. ಮತ್ತು ಒಂದೊಂದು ಹಳ್ಳಿಗೂ ಒಬ್ಬೊಬ್ಬ ‘ಮೂಪನ್’ ಇರುತ್ತಾನೆ. ‘ಮೂಪನ್’ ಅಂದರೆ ಮುಖಂಡ. ‘ಮೂಪತ್ತಿ’ ಅಂದರೆ ಮುಖಂಡೆ.ಆದರೆ ಇವರು ಗಂಡ ಹೆಂಡತಿಯರಲ್ಲ. ಹಳ್ಳಿಯ ಸಮರ್ಥನಾದ ಒಳ್ಳೆಯವನಾದ ಪುರುಷನೊಬ್ಬನನ್ನು ಹಳ್ಳಿಯವರೇ ಮುಖಂಡನೆಂದು ಆಯ್ಕೆ ಮಾಡುತ್ತಾರೆ. ಸಮರ್ಥಳಾದ ಮಹಿಳೆಯನ್ನು ಮೂಪತ್ತಿ ಮಾಡುತ್ತಾರೆ. ಇವರ ಅನುಪಸ್ಥಿತಿಯಲ್ಲಿ ಕೆಲಸ ನಿರ್ವಹಿಸಲು ಒಬ್ಬ ಸಹಾಯಕ ಮೂಪನ್ ಮತ್ತು ಸಹಾಯಕ ಮೂಪತ್ತಿ. ಕ್ರಿಕೆಟ್ ತಂಡದ ಉಪನಾಯಕ/ನಾಯಕಿ ಇದ್ದ ಹಾಗೆ. ಈ ನಾಲಕ್ಕು ಮಂದಿಯ ಆದೇಶದಂತೆ ಹಳ್ಳಿ ನಡೆಯುತ್ತದೆ. ಇಂತಹ ಹನ್ನೊಂದು ಹಳ್ಳಿಗಳ ಗುಚ್ಚವೇ ಮಿನಿಕಾಯ್ ಎಂಬ ಮಾಯಾದ್ವೀಪ. ಒಂದೊಂದು ಹಳ್ಳಿಯ ಬಾಗಿಲೂ ನೀಲಸಾಗರಕ್ಕೆ ತೆರೆದುಕೊಂಡಿರುತ್ತದೆ, ಬೆನ್ನು ಕಡಲಿಗೆ. ನೀಲಸಾಗರ ಅಂದರೆ ಹವಳ ಸರೋವರ. ಅಂದರೆ ಲಗೂನ್. ಈ ಕಡಲು ಮತ್ತು ನೀಲಸಾಗರದ ನಡುವಿನ ವ್ಯತ್ಯಾಸ ನಿಮ್ಮಲ್ಲಿ ಬಹುತೇಕರಿಗೆ ಗೊತ್ತಾಗಲಿಕ್ಕಿಲ್ಲ. ಇಲ್ಲಿಗೆ ಬರುವ ಮೊದಲು ನನಗೂ ಗೊತ್ತಿರಲಿಲ್ಲ. ಅದೇನೆಂಬುದನ್ನು ಮುಂದೆ ಹೇಳಲು ಪ್ರಯತ್ನಿಸುತ್ತೇನೆ.

ಮಿನಿಕಾಯ್ ಎಂಬ ಮಾಯಾದ್ವೀಪ

 (ಫೋಟೋಗಳು: ಅಬ್ದುಲ್ ರಶೀದ್)

ಒಂದು ಕಾಲದಲ್ಲಿ ಈ ಪ್ರತಿಯೊಂದು ಹಳ್ಳಿಗಳೂ ತಮ್ಮ ತಮ್ಮೊಳಗೆ ಒಂದು ರೀತಿಯ ಅಬೇಧ್ಯ ಚಕ್ರವ್ಯೂಹಗಳಾಗಿತ್ತೆಂದು ಅನಿಸುತ್ತದೆ.ಸುತ್ತಿ ತಿರುಗಿ ಮತ್ತೆ ಅಲ್ಲಿಗೇ ಬಂದು ಮರಳುವ ಸಣ್ಣಗಿನ ಗಲ್ಲಿಗಳು. ಕಲ್ಲು ಚಪ್ಪಡಿಯ ಮೇಲೆ ಸಾಗುವ ಕಿರು ರಸ್ತೆಗಳು. ಕಲ್ಲು ಚಪ್ಪಡಿಯ ಕೆಳಗೆ ಹರಿಯುವ ಒಳಚರಂಡಿಗಳು, ಬೀದಿಗೇ ತೆರೆದಿರುವ ಬಾಗಿಲುಗಳು.ರಸ್ತೆ ಮತ್ತು ಮನೆಗಳ ನಡುವೆ ಇರುವುದು ಬಣ್ಣದ ಪರದೆಯ ಬಾಗಿಲುಗಳು ಮತ್ತು ಕಿಟಕಿಗಳು. ಎರಡು ದ್ವಿಚಕ್ರ ವಾಹನಗಳಿಗೆ ಮಾತ್ರ ಚಲಿಸಲು ಅವಕಾಶ ಇರುವ ಕಿರು ರಸ್ತೆಗಳಿಂದಾಗಿ ಹಳ್ಳಿಯ ಒಳಗಡೆ ವಾಹನಗಳ ಓಡಾಟವೇ ಇಲ್ಲ. ಮತ್ತು ಈ ಯಾವ ಹಳ್ಳಿಗಳೂ ದ್ವೀಪದ ಮುಖ್ಯ ರಸ್ತೆಯಲ್ಲಿಲ್ಲ. ಹಾಗಾಗಿ ಪ್ರವಾಸಿಗಳಿಗೆ ಇವರ ಮುಖಗಳೂ, ಇವರು ಇರುವ ಹಳ್ಳಿಗಳ ಕಿರು ದಾರಿಗಳೂ ಕಾಣಿಸುವುದಿಲ್ಲ. ಹಾಗಾಗಿ ಮೊದಲ ಸಲ ಬಂದಾಗ ನನಗೂ ಕಾಣಿಸಿರಲಿಲ್ಲ.ಹಾಗಾಗಿ ನಾನು ಪೂರ್ವಾಗ್ರಹಿತನಾಗಿದ್ದೆ.

ಆದರೆ ಈ ಸಲ ನಾನು ಹೊರಟಿದ್ದುದು ಒಬ್ಬ ನೆಂಟನಂತೆ.ಒಂದು ಔತಣಕೂಟಕ್ಕೆ. ಮೂರು ದಿನಗಳ ಕಾಲದ ಅದರ ತಯಾರಿಯ ಸಮೇತ ನೋಡಿ ಬರಲಿಕ್ಕೆ ಮೂರು ದಿನ ಮೊದಲೇ ಬಂದು ತಲುಪಿದ್ದೆ. ಆ ಔತಣಕೂಟವೂ ವಿಶೇಷವಾಗಿತ್ತು, ಅದು ಈ ಹನ್ನೊಂದು ಹಳ್ಳಿಗಳಲ್ಲಿ ಒಂದು ಹಳ್ಳಿ ಏರ್ಪಡಿಸಿದ್ದ ಔತಣಕೂಟ. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ಕಳೆದ ವರ್ಷವೂ ಪಡೆದಿತ್ತು. ಕಳೆದ ವರ್ಷ ಹನ್ನೊಂದು ಹಳ್ಳಿಯ ಜನರಿಗೂ ಊಟ ಕೊಟ್ಟಿದ್ದರು.ಆದರೆ ಈ ವರ್ಷ ಕೊರೋನಾ ಕಾರಣ ಆ ಹಳ್ಳಿಗೆ ಮಾತ್ರ ಊಟ. ಅದಕ್ಕೆ ನನ್ನನ್ನೂ ಕರೆದಿದ್ದರು.ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಆ ಹಡಗಿನಲ್ಲಿ ನನ್ನ ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ನಾನೇನು ಬರೆದರೂ, ‘ಹೌದಾ?, ನಿಜವಾ?, ನಿಜಕ್ಕೂ ಹೀಗೆಲ್ಲಾ ಇವೆಯಾ’ ಎಂದೆಲ್ಲ ಸಂದೇಹಿಸುವ ತುಂಟರೂ ಅವಿಶ್ವಾಸಿಗಳೂ ಆದ ಓದುಗರೂ ಇರುವುದರಿಂದ ನಾನೇನು ಬರೆದರೂ ಅದಕ್ಕೆ ಸಾಕ್ಷಿ ಎಂಬಂತೆ ಋಜುವಾತುಗಳಾಗಿ ಫೋಟೋಗಳನ್ನೂ ಲಗತ್ತಿಸುವ ಕೆಲಸವನ್ನು ಕಳೆದ ಅಷ್ಟೂ ವರ್ಷಗಳಿಂದ ನಿಷ್ಠೆಯಿಂದ ಮಾಡುತ್ತಿದ್ದೇನೆ. ಈ ಅಲಿಖಿತ ಒಡಂಬಡಿಕೆಯಂತೆ ಈ ಛಾಯಾಸಾಕ್ಷಿ ಸಮೇತ ಮಿನಿಕಾಯ್ ಎಂಬ ಈ ಮಾಯಾದ್ವೀಪದ ಕಥಾನಕವನ್ನು ನಾಳೆ ಮುಂದುವರಿಸುತ್ತೇನೆ.

 

2.ಪುಟ್ಟದೊಂದು ಹೂಹಕ್ಕಿಯ ಹುಡುಕುವುದು ಇಲ್ಲಿಗೆ ಹೊರಟ ಕಾರಣವಾಗಿತ್ತು

 

ಮಿನಿಕಾಯ್ ದ್ವೀಪದ ಹಳ್ಳಿಯೊಂದು ದೋಣಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ಸಂಭ್ರಮದ ನೆಪದಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ನೆಂಟನಾಗಿ ಹಡಗು ಹತ್ತಿ ಹೊರಟಿದ್ದೆ ಎಂದು ನಿನ್ನೆ ಉಲ್ಲೇಖಿಸಿದ್ದೆನಷ್ಟೆ. ಆದರೆ ಮಿನಿಕಾಯ್ ಗೆ ತೆರಳಲು ಅದಕ್ಕಿಂತಲೂ ಮುಖ್ಯ ಕಾರಣ ಒಂದು ಪುಟ್ಟ ಹಕ್ಕಿಯ ಕುರಿತು ಕಳೆದ ಹಲವು ತಿಂಗಳುಗಳಿಂದ ನಾನು ನಡೆಸುತ್ತಿರುವ ಹುಡುಕಾಟವಾಗಿತ್ತು. ಲಕ್ಷದ್ವೀಪ ಸಮೂಹದ ಹಲವು ದ್ವೀಪಗಳಲ್ಲಿ ಸುತ್ತಿ ಬಂದಿರುವ ನಾನು ಕಂಡಿರುವ ಪಕ್ಷಿ ವರ್ಗಗಳಲ್ಲಿ ಕಾಗೆಯೇ ಪ್ರಮುಖವಾಗಿತ್ತು. ಆನಂತರದ ಸ್ಥಾನ ಕೋಗಿಲೆಗಳದಾಗಿತ್ತು. ಅದು ಬಿಟ್ಟರೆ ಕಾಣುವುದು ದೂರ ದೇಶಗಳಿಂದ ಚಳಿಗಾಲದ ಸಮಯದಲ್ಲಿ ವಲಸೆಬಂದು ಮಳೆಗಾಲದ ಮೊದಲು ಮತ್ತೆ ಹೊರಡುವ ದೇಶಾಂತರ ಪಕ್ಷಿಗಳು. ಮತ್ತೆ ಹೀಗೇ ದಾರಿ ತಪ್ಪಿಯೋ, ಆಹಾರ ಹುಡುಕುತ್ತಲೋ ಬಂದಿರುವ ಕಲವೇ ಕೆಲವು ರಾಮದಾಸ ಹದ್ದುಗಳು. ಅದು ಬಿಟ್ಟರೆ ಇಲಿಗಳ ಉಪಟಳ ಎದುರಿಸಲು ವಿಜ್ಞಾನಿಗಳು ತಂದು ಬಿಟ್ಟಿರುವ ಬೆರಳೆಣಿಕೆಯಷ್ಟಿರುವ ಕಣಜದ ಗೂಬೆಗಳು.

ಅಂದ ಹಾಗೆ ಈ ಕಾಗೆಗಳು ಮತ್ತು ಮತ್ತು ಕೋಗಿಲೆಗಳು ಬಹುತೇಕ ವಲಸೆ ಹಕ್ಕಿಗಳಲ್ಲ. ಹಾಗಾದರೆ ಇವುಗಳು ನೂರಾರು ಮೈಲುಗಳ ದೂರ ಕಡಲ ನಡುವೆ ಇರುವ ಈ ಪುಟ್ಟ ದ್ವೀಪಗಳಿಗೆ ಹೇಗೆ ಬಂದವು ಎನ್ನುವುದು ನನಗೆ ಇನ್ನೂ ಚೋಧ್ಯವಾಗಿಯೇ ಉಳಿದಿದೆ. ಕೆಲವರು ಊಹಿಸುವ ಪ್ರಕಾರ ಹಿಮಯುಗದ ಸಮಯದಲ್ಲಿ ಅಂದರೆ ಸುಮಾರು ನೂರಾ ಮೂವತ್ತು ಸಾವಿರ ವರ್ಷಗಳ ಹಿಂದೆ ಈ ದ್ವೀಪಗಳಿಗೂ ಮತ್ತು ಭಾರತದ ಮುಖ್ಯನೆಲಕ್ಕೂ ನಡುವೆ ಇಂತಹವೇ ಸಾವಿರಾರು ನಡುಗುಡ್ಡೆಗಳಿದ್ದವು ಮತ್ತು ಅವುಗಳು ಹಕ್ಕಿಗಳೂ ಹಾರಿಬರಬಲ್ಲಷ್ಟು ಹತ್ತಿರದಲ್ಲಿದ್ದವು. ಭಾರತ ಭೂಶಿರದಿಂದ ಉತ್ತರಕ್ಕೆ ಬೀಸಿದ ಮುಂಗಾರಿನ ಉಷ್ಣಗಾಳಿ ಉತ್ತರದ ಹಿಮಗಡ್ಡೆಗಳನ್ನು ಕರಗಿಸಿ, ಕರಗಿದ ಆ ನೀರು ಸಾಗರಕ್ಕೆ ನುಗ್ಗಿ, ಸಾಗರದ ನೀರು ಮೇಲಕ್ಕೆ ಎದ್ದು ಇಂತಹವೇ ಇನ್ನೂ ಹಲವು ಸಾವಿರ ನಡುಗುಡ್ಡೆಗಳು ಮುಳುಗಿದವು ಮತ್ತು ಆಗಲೇ ಈ ದ್ವೀಪಗಳಲ್ಲಿ ಕುಪ್ಪಳಿಸುತ್ತಿದ್ದ ಈ ಕಾಗೆಗಳು ಮತ್ತು ಕೋಗಿಲೆಗಳು ಉಳಿದ ದ್ವೀಪಗಳೊಳಗೇ ಒಂಟಿಯಾದವು ಅನ್ನುತ್ತಾರೆ ಅವರು. ಹಾಗಾದರೆ ಉಳಿದ ಹಕ್ಕಿಗಳು ಏನಾದವು ಎಂಬುದು ನನ್ನನ್ನು ಕಾಡುವ ಇನ್ನೊಂದು ಪ್ರಶ್ನೆ.

ಇನ್ನೊಂದು ಚೋದ್ಯದ ಸಂಗತಿ ಈಗ ನಾನಿರುವ ಈ ಮೂಲ ದ್ವೀಪದಲ್ಲಿ ಕಾಗೆಗಳೂ ಇಲ್ಲ ಎನ್ನುವುದು. ಬರೀ ಕೋಗಿಲೆಗಳು ಮಾತ್ರ ಹಗಲೂ ಇರುಳೂ ಸಿಕ್ಕಾಪಟ್ಟೆ ಅರಚಾಡುತ್ತಿರುತ್ತವೆ. ಕೆಲವರು ಪರೀಕ್ಷಾರ್ಥ ತಂದುಬಿಟ್ಟ ಕೆಲವು ಕಾಗೆಗಳು ಅಲ್ಲಿ ಇಲ್ಲಿ ಸದ್ದು ಮಾಡುತ್ತಿರುತ್ತದೆ. ಆದರೆ ಇಲ್ಲಿನ ದ್ವೀಪವಾಸಿಗಳು ಹೇಳುವ ಪ್ರಕಾರ ಅದು ಯಾರು ಬೇಕಾದರೂ ಪರೀಕ್ಷಾರ್ಥವಾಗಿ ಕಾಗೆಗಳನ್ನು ಈ ದ್ವೀಪಕ್ಕೆ ತಂದು ಬಿಡಲಿ. ಅವುಗಳ ಸಂಖ್ಯೆ ಕಡಿಮೆಯಾಗುತ್ತದೆಯೇ ವಿನಃ ಹೆಚ್ಚುವುದಿಲ್ಲ ಎಂದು. ಏಕೆಂದರೆ ಈ ದ್ವೀಪದ ಬಲು ಶ್ರೇಷ್ಠರಾದ ಸಂತರೊಬ್ಬರು ಕಾಕಸಂತತಿಯ ಮೇಲೆ ಶಾಪ ಹಾಕಿರುವರು. ಅವರು ಶಾಪ ಹಾಕಲೂ ಒಂದು ಕಾರಣವಿದೆ.

ಅವರು ಆಕಾಶಕ್ಕೆ ಕೈ ಎತ್ತಿ ಪಡೆದವನನ್ನು ಬೇಡಿಕೊಳ್ಳುತ್ತಿರುವಾಗ ಕಾಗೆಯೊಂದು ಅವರ ತೆರೆದ ಬೊಗಸೆಯೊಳಗೆ ಕಾಷ್ಠ ವಿಸರ್ಜಿಸಿಬಿಡುತ್ತದೆ. ಸಿಟ್ಟುಗೊಂಡ ಅವರು ಈ ದ್ವೀಪದ ಕಾಕಸಂತತಿ ನಾಶವಾಗಲಿ ಎಂದು ಶಾಪ ಹಾಕಿದ್ದಾರೆ. ಈ ಶಾಪ ಹಾಕಿದ್ದು ಸುಮಾರು ನಾನೂರು ವರ್ಷಗಳ ಹಿಂದೆ. ಅಂದಿನಿಂದ ಇಲ್ಲಿ ಕಾಗೆಗಳು ಕಾಣಿಸುತ್ತಿರಲಿಲ್ಲ. ಆದರೆ ಇದೀಗ ದ್ವೀಪದಲ್ಲಿ ಈ ಸಂತರ ಕುರಿತ ಭಕ್ತಿ ಮತ್ತು ಭಯ ಕಮ್ಮಿಯಾಗುತ್ತಿದೆ, ಅವರ ಶಾಪದ ಶಕ್ತಿಯನ್ನು ಒರೆಗೆ ಹಚ್ಚುವ ಪರೀಕ್ಷಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ‘ಅಂತಹ ತರಲೆ ಬುದ್ದಿಯ ಕೀಟಲೆಕೋರರು ದೂರದ ತೀರದಿಂದ ಮತ್ತು ಬೇರೆಯ ದ್ವೀಪಗಳಿಂದ ಕಾಗೆಗಳನ್ನು ಕದ್ದುಮುಚ್ಚಿ ಹಿಡಿದು ತಂದು ಇಲ್ಲಿ ಬಿಡುತ್ತಿದ್ದಾರೆ. ಆದರೆ ಅವರು ಎಷ್ಟು ಕಾಗೆಗಳನ್ನು ತಂದರೂ ಅವುಗಳ ವಂಶ ಇಲ್ಲಿ ಉದ್ಧಾರವಾಗುವುದಿಲ್ಲ, ಅವುಗಳ ಸಂತತಿಯನ್ನು ನಾಶಮಾಡಲೆಂದೇ ಇಲ್ಲಿ ಸಹಸ್ರಾರು ಕೋಗಿಲೆಗಳಿವೆ. ಇದಲ್ಲವೇ ನಮ್ಮ ಸಂತನ ಮಹಿಮೆ’ ಎಂದು ಇಲ್ಲಿನ ಹಿರಿಯರಾದ ದ್ವೀಪವಾಸಿಗಳು ಹೇಳುತ್ತಾರೆ.

ಆದರೆ ನಾನು ಹುಡುಕುತ್ತಿರುವ ಪುಟ್ಟ ಹಕ್ಕಿಯ ಕಥೆ ಬೇರೆಯೇ ಇದೆ. ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಹೆಸರಿನ ಹಾಗೆಯೇ ಈ ಹಕ್ಕಿ ಒಂದು ಕುಸುಮಬಾಲೆ. ಅಷ್ಟು ಹಗುರ. ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಇವರ ಹಾಡು ಮತ್ತು ಕಥೆಗಳಲ್ಲಿ ಇಷ್ಟೊಂದು ಸಲ ಬರುವ ಹಕ್ಕಿಗಳು ನಿಜವಾಗಿಯೂ ಯಾಕೆ ಇಲ್ಲ ಎಂದು ಹುಡುಕತೊಡಗಿದ್ದೆ. ಅವುಗಳು ಈಗ ಇಲ್ಲದಿರುವುದಕ್ಕೆ ಹಲವು ಕಾರಣಗಳನ್ನೂ ಹೇಳಿದ್ದರು.

(ಫೋಟೋಗಳು: ಅಬ್ದುಲ್‌ ರಶೀದ್)

ಕೆಲವರು ಪರೀಕ್ಷಾರ್ಥ ತಂದುಬಿಟ್ಟ ಕೆಲವು ಕಾಗೆಗಳು ಅಲ್ಲಿ ಇಲ್ಲಿ ಸದ್ದು ಮಾಡುತ್ತಿರುತ್ತದೆ. ಆದರೆ ಇಲ್ಲಿನ ದ್ವೀಪವಾಸಿಗಳು ಹೇಳುವ ಪ್ರಕಾರ ಅದು ಯಾರು ಬೇಕಾದರೂ ಪರೀಕ್ಷಾರ್ಥವಾಗಿ ಕಾಗೆಗಳನ್ನು ಈ ದ್ವೀಪಕ್ಕೆ ತಂದು ಬಿಡಲಿ. ಅವುಗಳ ಸಂಖ್ಯೆ ಕಡಿಮೆಯಾಗುತ್ತದೆಯೇ ವಿನಃ ಹೆಚ್ಚುವುದಿಲ್ಲ ಎಂದು.

ಅವುಗಳಲ್ಲಿ ಒಂದು ಹೆಚ್ಚುತ್ತಿರುವ ಕಾಗೆಗಳ ಸಂಖ್ಯೆ. ಇನ್ನೊಂದು ಕಣ್ಮರೆಯಾಗುತ್ತಿರುವ ಬುಗುರಿ ಮರಗಳು. ಆದರೆ ನನಗೆ ಅನಿಸಿದ ಕಾರಣ ಬೇರೆಯೇ ಇತ್ತು ಮತ್ತು ಅದು ಸತ್ಯವೂ ಆಗಿತ್ತು. ಅದು ಈ ದ್ವೀಪವಾಸಿಗಳ ಒಂದು ಕಾಲದ ಹಕ್ಕಿ ಸಾಕುವ ಹುಚ್ಚು. ಎಲೆಗಳ ಮರೆಯಲ್ಲಿರುವ ಈ ಹಕ್ಕಿಗಳನ್ನು ಅಲ್ಲೇ ಇರಲು ಬಿಡುವುದನ್ನು ಬಿಟ್ಟು ಅದನ್ನು ಹಿಡಿದು ಪಂಜರದಲ್ಲಿ ಸಾಕುವ ಅವರ ಹುಚ್ಚು. ಮತ್ತು ಮಕ್ಕಳಿಗೆ ಇವುಗಳ ಮೊಟ್ಟೆಯನ್ನು ತಿನಿಸುವ ಹುಚ್ಚು. ಈ ಹುಚ್ಚಿನಿಂದಾಗಿ ಈ ಹೂ ಹಕ್ಕಿಗಳ ಸಂತತಿಯೇ ನಾಶವಾಗಿತ್ತು. ಕೇವಲ ಕೆಲವೇ ಕೆಲವು ಹಕ್ಕಿಗಳು ದ್ವೀಪದ ತುದಿಯಲ್ಲಿರುವ ಪೊದೆ ತುಂಬಿದ ಜವುಗು ಜಾಗದಲ್ಲಿ ಕಾಗೆಗಳಿಂದಲೂ ಮನುಷ್ಯರ ಕಾಕದೃಷ್ಟಿಯಿಂದಲೂ ತಪ್ಪಿಸಿಕೊಂಡು ಬದುಕುತ್ತಿದ್ದವು. ಆದರೆ ಒಂದು ದಿನ ನನ್ನ ಕಣ್ಣಿಗೆ ಬಿದ್ದು ಬಿಟ್ಟವು.

ಅಂದಿನಿಂದ ಯಾರಿಗೂ ಹೇಳದೇ ಈ ಮುದ್ದು ಹಕ್ಕಿಗಳ ಹಿಂದೆ ಬಿದ್ದು ಬಿಟ್ಟಿದ್ದೆ. ಈ ದ್ವೀಪದ ಒಂದು ಕಾಲದ ಏಕಾಂಗಿ ತಬ್ಬಲಿತನವನ್ನೂ, ಈಗಿನ ಅನಾಹುತಗಳನ್ನೂ ಒಂದು ರೂಪಕವಾಗಿ ಹೇಳಲೋ ಎಂಬಂತೆ ಯಾರ ಕಣ್ಣಿಗೂ ಕಾಣಿಸದೆ ಬದುಕುತ್ತಿರುವ ಅಸಹಾಯಕ ಹಕ್ಕಿಗಳು. ಯಾರಿಗಾದರೂ ಹೇಳಿದರೆ ಅವರು ಇದನ್ನು ಹಿಡಿದು ಸಾಕಲು ಮುಂದಾಗುತ್ತಾರೆ. ಯಾರಿಗಾದರೂ ಒಮ್ಮೆಯಾದರೂ ಕೈಯಲ್ಲಿ ಮುಟ್ಟಿ ಒಮ್ಮೆಯಾದರೂ ಕೆನ್ನೆಯ ಬಳಿ ತಂದು ಸೋಕಿಸಿ ಆದ್ರರಾಗಬೇಕು ಅನ್ನಿಸುವ ಹಾಗಿರುವ ಕೋಮಲ ಹಕ್ಕಿಗಳು ಇವು. ಗೊತ್ತಾದರೆ ಮತ್ತೆ ಈ ಊರಿನ ಮಕ್ಕಳು ದೀವು ಹಲಸಿನ ಅಂಟನ್ನು ಕೋಲಿನ ತುದಿಗೆ ಅಂಟಿಸಿ ಅದನ್ನು ಎಲೆಗಳಿಗೆ ಸವರಿ ಸಿಕ್ಕಿಹಾಕಿಕೊಂಡ ಈ ಹೂಹಕ್ಕಿಗಳನ್ನು ಹಿಡಿದು ಪಂಜರದಲ್ಲಿ ಸಾಕಲು ಶುರುಮಾಡುತ್ತಾರೆ. ಅದಕ್ಕೆ ನಾನು ಇದುವರೆಗೂ ಯಾರಿಗೂ ಹೇಳಲಿಲ್ಲ. ಕೇಳಿಸುವ ಹಾಗೆ ಈ ಹಕ್ಕಿಗಳೂ ಜೋರು ಸದ್ದು ಮಾಡುವುದಿಲ್ಲ. ನಾನೂ ಅಷ್ಟೆ ಈ ಹೂ ಹಕ್ಕಿಗಳ ಫೋಟೋಗಳನ್ನೂ ಯಾರಿಗೂ ತೋರಿಸುವುದಿಲ್ಲ.

ನಾನು ಈ ಹಕ್ಕಿಗಳನ್ನು ನೋಡಲು ಹೋಗುವ ಹಾದಿಯಲ್ಲಿ ಒಂದು ಟೀ ಅಂಗಡಿ ಇದೆ. ಈ ಟೀ ಅಂಗಡಿಯಾತ ಮಿನಿಕಾಯ್ ದ್ವೀಪದವನು. ಈತನ ಮುಖದಲ್ಲಿ ಸದಾ ತಾನೊಬ್ಬ ಪಾತ್ರಧಾರಿ ಎಂಬ ಭಾವ. ಆತನ ಪ್ರತಿಯೊಂದು ನಡೆಯೂ ಪಾತ್ರವೊಂದು ನಡೆದಂತೆ. ಟೀ ಕುದಿಸುವುದು, ಸೋಸುವುದು, ಚಮಚೆಯಲ್ಲಿ ಸಕ್ಕರೆ ತೆಗೆದು ಲೋಟಕ್ಕೆ ಹಾಕಿ ಅಲ್ಲಾಡಿಸುವುದು. ಒಂದೇ ಎತ್ತರದಿಂದ ಟೀಯನ್ನು ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಉದ್ದಕ್ಕೆ ಸುರಿದು ಟೇಬಲ್ಲಿನ ಮುಂದೆ ಇಡುವುದು. ಅಡಿಕೆಯನ್ನು ಕತ್ತರಿಸಿ ಸೀಳುಮಾಡಿ, ಒಂದೇ ವೀಳ್ಯದೆಲೆಯನ್ನು ಸಮನಾಗಿ ನಾಲ್ಕು ಭಾಗಗಳಾಗಿ ಕತ್ತರಿಸಿ ಹೊಳೆಯುವ ಸುಣ್ಣದ ಕರಂಡಕದಿಂದ ಸಣ್ಣಗೆ ತೆಗೆದು ಎಲೆಗೆ ಹಚ್ಚಿ ಬಾಯೊಳಗಿಟ್ಟು ಕಣ್ಣಲ್ಲೇ ನಗುವುದು. ಎಲ್ಲವೂ ಕರಾರುವಾಕ್ಕು. ಹೆಚ್ಚಾಗಿ ಯಾರೂ ಓಡಾಡದ ದ್ವೀಪದ ತುದಿಯ ಈ ಕಾಡು ಜಾಗದಲ್ಲಿ ಹಳೆಯ ಮಲಯಾಳಂ ಸಿನಿಮಾ ಹಾಡು ಹಾಕಿಕೊಂಡು ಕೂರುವ ಈತ ನನ್ನ ತಿರುಗಾಟದಿಂದ ಕೊಂಚ ವಿಚಲಿತನಾಗಿದ್ದ. ನನ್ನ ಕ್ಯಾಮರಾವನ್ನು ಆತ ಸರ್ವೆ ಇಲಾಖೆಯ ಅಳೆಯುವ ಉಪಕರಣ ಎಂದು ಅಂದುಕೊಂಡಿದ್ದ.

ಆತ ವಿಚಲಿತನಾಗುವುದಕ್ಕೂ ಕಾರಣವಿತ್ತು. ಆತನ ಟೀ ಅಂಗಡಿ ಇದ್ದುದು ಯಾರಿಗೂ ಸೇರದ ಭಂಡಾರದ ಭೂಮಿಯಲ್ಲಿ. ಈ ‘ಭಂಡಾರದ ಭೂಮಿ’ ಒಂದು ಕಾಲದಲ್ಲಿ ಅಂದರೆ ನೂರಾರು ವರ್ಷಗಳ ಹಿಂದೆ ಕಣ್ಣೂರಿನ ಬೀಬಿ ರಾಣಿ ದ್ವೀಪವಾಸಿಗಳಿಗೆ ತೆಂಗಿನ ಮರ ನೆಡಲು ಭೋಗ್ಯಕ್ಕೆ ನೀಡಿದ ಭೂಮಿ. ಲಕ್ಷದ್ವೀಪದ ಬಹುತೇಕ ಕಡೆ ಇಂತಹ ಭಂಡಾರದ ಭೂಮಿಗಳಿವೆ. ಇಲ್ಲಿ ಇರುವ ತೆಂಗಿನ ಮರಗಳ ಮೇಲಿನ ಹಕ್ಕು ನೆಟ್ಟವರ ಕುಟುಂಬಸ್ಥರದು. ಭೂಮಿಯ ಮೇಲಿನ ಹಕ್ಕು ಇನ್ನೂ ಯಾರದೆಂದು ಇತ್ಯರ್ಥವಾಗಿಲ್ಲ. ಅಂತಹ ಕಡೆ ತೆಂಗಿನ ಮರಗಳ ಹಾಸಿನ ಕೆಳಗೆ ಟೀ ಅಂಗಡಿ ಇಟ್ಟಿರುವ ಈತನಿಗೆ ಸದಾ ಎರಡು ಭಯ. ಒಂದು ಯಾರಾದರೂ ತನ್ನನ್ನು ಒಕ್ಕಲೆಬ್ಬಿಸಬಹುದು ಎಂದು.(ಎಬ್ಬಿಸಿದರೂ ಯಾರೂ ತನ್ನ ಸಹಾಯಕ್ಕೆ ಬರಲಾರರು ಎನ್ನುವುದು ಅದಕ್ಕೆ ಹೊಂದಿಕೊಂಡಿರುವ ಉಪ ಭಯ. ಯಾಕೆಂದರೆ ಈತ ಸ್ಥಳೀಯನಾಗಿರದೆ ದೂರದ ಮಿನಿಕಾಯ್ ದ್ವೀಪದವನು). ಈತನ ಇನ್ನೊಂದು ದೊಡ್ಡ ಭಯ ತಲೆಯ ಮೇಲೆ ತೆಂಗಿನ ಕಾಯಿ, ತೆಂಗಿನ ಗರಿ ಇತ್ಯಾದಿಗಳು ಬೀಳಬಹುದೆಂದು. ಅದಕ್ಕೇ ಈತ ಅಂಗಡಿ ಬಿಟ್ಟು ಹೊರಗೆ ನಡೆಯುವಾಗಲೆಲ್ಲ ತಲೆಯ ಮೇಲೆ ಕೈಯಿಟ್ಟು ನಡೆಯುತ್ತಿದ್ದ ಅಂದುಕೊಂಡಿದ್ದೆ. ಆದರೆ ಆತ ತಲೆಯ ಮೇಲೆ ಕೈ ಇಡುತ್ತಿದ್ದುದು ಬೇರೆಯ ಕಾರಣಕ್ಕೆ ಎಂದು ಆಮೇಲೆ ಒಂದು ಮಧ್ಯಾಹ್ನ ಗೊತ್ತಾಯಿತು.

ಆವತ್ತು ಮಧ್ಯಾಹ್ನ ಕಡಲಿಗೆ ಇಳಿತವಿತ್ತು. ಸೂರ್ಯನೂ ಮಂಕಾಗಿದ್ದ. ಇದ್ದಕ್ಕಿದಂತೆ ಆಗ್ನೇಯದ ಕಡೆಯಿಂದ ಗಾಳಿಬೀಸಲು ತೊಡಗಿತು. ಎಷ್ಟು ದೊಡ್ಡ ಗಾಳಿ ಎಂದರೆ ಈ ಮಿನಿಕಾಯ್ ದ್ವೀಪದವನ ಟೀ ಅಂಗಡಿಯ ಪ್ಲಾಸ್ಟಿಕ್ ಕುರ್ಚಿಗಳು ತರಗೆಲೆಗಳಂತೆ ತೆಂಗಿನ ಮರಗಳ ಬುಡದಲ್ಲಿ ಹಾರಾಡಲು ತೊಡಗಿದವು. ಈತ ಅಂಗಡಿಯಿಂದ ಹೊರಬಂದು ಹಾರುತ್ತಿದ್ದ ಕುರ್ಚಿಗಳನ್ನು ಹಿಡಿಯಲು ಶುರುಮಾಡಿದ.ಆಗ ಆತನ ತಲೆಯ ಮೇಲಿದ್ದ ಚೌರಿ ಕೂದಲಿನ ಟೋಪಿ ಆತನ ತಲೆಯಿಂದ ಮೇಲೆದ್ದು ಪ್ಲಾಸ್ಟಿಕ್ ಕುರ್ಚಿಗಳ ಜೊತೆಗೆ ತಾನೂ ಹಾರಾಡತೊಡಗಿತು. ಆತ ಕುರ್ಚಿಗಳನ್ನು ಹಿಡಿದಿಡುವುದನ್ನು ಕೈಬಿಟ್ಟು ಇನ್ನೇನು ಕಡಲಿನೊಳಕ್ಕೆ ಹಾರಿಯೇ ಹೋಗಲಿದ್ದ ತನ್ನ ಚೌರಿ ಕೂದಲಿನ ಹಿಂದೆ ಓಡಿದ. ಕೈಯಲ್ಲಿ ಆ ಚೌರಿ ಕೂದಲಿನ ಟೋಪಿ ಹಿಡಕೊಂಡು ವಾಪಾಸು ಬರುವಾಗ ಆತ ಕೊಂಚ ಮಂಕಾಗಿದ್ದ. ನನಗೂ ಕೆಟ್ಟದೆನಿಸಿತ್ತು. ನನ್ನ ಕ್ಯಾಮರಾದಲ್ಲಿದ್ದ ಈ ಹೂಹಕ್ಕಿಗಳನ್ನು ಅವನಿಗೆ ತೋರಿಸಿ ‘ಈ ಹಕ್ಕಿ ನಿಮ್ಮ ಮಿನಿಕಾಯ್ ದ್ವೀಪದಲ್ಲಿದೆಯೇ?’ ಎಂದು ವಿಷಯ ಬದಲಿಸಲು ನೋಡಿದೆ. ಆತ ಈ ಹೂ ಹಕ್ಕಿಗಳ ಫೋಟೋವನ್ನು ಸರಿಯಾಗಿ ನೋಡಿದನೋ ಇಲ್ಲವೋ ಗೊತ್ತಿಲ್ಲ. ‘ಓ ಈ ಹಕ್ಕಿ ಮಾತ್ರವೇ ಏನು? ಲೋಕದ ಎಲ್ಲ ಹಕ್ಕಿಗಳೂ ನಮ್ಮ ಮಿನಿಕಾಯ್ ದ್ವೀಪದಲ್ಲಿದೆ’ ಎಂದು ಅಂದುಬಿಟ್ಟಿದ್ದ. ಅಂದಿನಿಂದ ನಾನು ಈ ಮಿನಿಕಾಯ್ ದ್ವೀಪಕ್ಕೆ ತೆರಳಲು ಒಂದು ನೆಪಕ್ಕಾಗಿ ಕಾಯುತ್ತಿದ್ದೆ. ದೋಣಿ ಸ್ಪರ್ಧೆಯ ಔತಣದ ಆಹ್ವಾನದಿಂದಾಗಿ ಆ ನೆಪವೂ ಸಿಕ್ಕು ಹಡಗು ಹತ್ತಿ ಹೊರಟೇ ಬಿಟ್ಟಿದ್ದೆ.

ಮುಂದೆ ಏನಾಯಿತು ಎಂದು ನಾಳೆ ಬರೆಯುವೆ.

3.ಹಾಡುಗಾರ ಇಬ್ರಾಹೀಮನ ಅತಿಶಯ ಜೀವನ ಪ್ರಸಂಗಗಳು

ಥೆಯೊಂದನ್ನು ನಡೆದ ಹಾಗೆ ಕಾಲಾನುಕ್ರಮಣದಲ್ಲಿ ಹೇಳುತ್ತಾ ಹೋಗುವುದು ಒಂದು ಬಗೆ. ಆದರೆ ಹೀಗೆ ಹೇಳುತ್ತಾ ಹೋಗುವುದರಿಂದ ಹೇಳುವವನಲ್ಲೂ ಕೇಳುವವನಲ್ಲೂ ಒಂದು ರೀತಿಯ ಅಸಹಜವಾದ ತಾಧ್ಯಾತ್ಮತೆಯೂ, ಬೋರು ಹೊಡೆಸುವ ಏಕತಾನತೆಯೂ. ಘಟನಾವಳಿಗಳು ಹೀಗೇ ಗಾಲಿಯೊಂದರ ನಿರಂತರ ಉರುಳುವಿಕೆಯಂತೆ ಕಾಲಾನುಕ್ರಮದಲ್ಲಿ ನಡೆಯುತ್ತಲೇ ಇರುತ್ತದೆ ಎಂಬ ಹುಸಿ ವಿಶ್ವಾಸವೂ ಉಂಟಾಗುತ್ತದೆ.ಯಾವುದೇ ಅನಿಶ್ಚಿತತೆಗಳಿಗೆ ಅಲ್ಲಿ ಜಾಗವೇ ಇರುವುದಿಲ್ಲವಾದ್ದರಿಂದ ಸ್ವಲ್ಪ ಹೊತ್ತು ಕಥೆಯ ನಡುವೆ ಕಣ್ಮುಚ್ಚಿ ವಿರಮಿಸಿ ಮತ್ತೆ ಕಥೆಯೊಳಗೆ ಸೇರಿಕೊಂಡರೂ ದೊಡ್ಡದಾದ ವ್ಯತ್ಯಾಸ ಏನೂ ಆಗಿರುವುದಿಲ್ಲ. ಏಕೆಂದರೆ ಅಲ್ಲಿ ಅಂತಹ ಅನಿರೀಕ್ಷಿತವೇನೂ ಸಂಭವಿಸಿರುವುದಿಲ್ಲ. ಆದರೆ ನನಗೆ ಗೊತ್ತಿರುವ ಹಾಗೆ ಲೋಕ ನಡೆಯುವುದೇ ಅನೀರೀಕ್ಷಿತ ಸಂಭವಗಳಿಂದಾಗಿ. ಲೋಕ ನಿಲ್ಲುವುದೂ ಅನಿರೀಕ್ಷಿತ ಸಂಭವಗಳಿಂದಾಗಿಯೇ. ಎಲ್ಲವೂ ಅಂದುಕೊಂಡ ಹಾಗೆಯೇ ನಡೆಯುವ ಹಾಗಿದ್ದರೆ ಲೋಕವೂ ಕಥೆಗಳೂ ಚಲಿಸುತ್ತಲೇ ಇರುತ್ತಿರಲಿಲ್ಲವೇನೋ.

ಇದು ಮಾಮೂಲಿ ಮಾತಾಯಿತು ಬಿಡಿ. ಘಟನೆಯೊಂದರ ಮೂಲಕ ಇದನ್ನು ಹೇಳುತ್ತೇನೆ.

ಔತಣ ಕೂಟವೊಂದರ ಆಹ್ವಾನದ ನೆಪದಿಂದಲೂ, ಪುಟ್ಟ ಹಕ್ಕಿಯೊಂದನ್ನು ನೋಡುವ ಆಶೆಯಿಂದಲೂ ಮಿನಿಕಾಯ್ ದ್ವೀಪಕ್ಕೆ ಹೊರಡಲು ತೀರ್ಮಾನಿಸಿದ್ದ ನಾನು ಹಡಗೊಂದರ ಪ್ರಯಾಣದ ವೇಳಾಪಟ್ಟಿಗಾಗಿ ಕಾಯುತ್ತಿದ್ದೆ. ಎಲ್ಲಿಗಾದರೂ ಹೋಗಬೇಕೆನಿಸಿದರೆ ಕಾರೋ, ರೈಲೋ, ವಿಮಾನವೋ ಹತ್ತಿ ಹೋದರಾಯಿತು ಎನ್ನುವ ನಿಮ್ಮ ಹಾಗಿನ ನಿಶ್ಚಿಂತೆ ದ್ವೀಪವಾಸಿಗಳಾದ ನಮಗೆ ಇರುವುದಿಲ್ಲ. ಹೋಗಬೇಕಾದರೆ ಹಡಗೊಂದರ ವೇಳಾಪಟ್ಟಿಗಾಗಿ ಕಾಯಬೇಕಾಗುತ್ತದೆ. ಆ ಹಡಗು ನೇರವಾಗಿ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹೋಗುವುದಿಲ್ಲ. ಸುತ್ತಿ ಬಳಸಿ ಹೋಗುವುದರಿಂದ ನೀವು ಬಸ್ಸೊಂದರಲ್ಲಿ ಆರು ಗಂಟೆಗಳಲ್ಲಿ ತಲುಪುವ ಜಾಗವನ್ನು ಇಲ್ಲಿ ಇಪ್ಪತ್ತನಾಲ್ಕು ಗಂಟೆಗಳ ನಂತರ ತಲುಪಬೇಕಾಗಬಹುದು. ಈ ನಡುವೆ ಹವಾಮಾನ, ಬಿರುಗಾಳಿ, ಸಮುದ್ರದ ಇಳಿತ ಭರತ ಇವೆಲ್ಲದರ ಮುಲಾಜೂ ಇರುತ್ತದೆ. ಒಂದು ವೇಳೆ ಹೊರಟೇಬಿಟ್ಟಿರಿ ಅಂತ ಇಟ್ಟುಕೊಳ್ಳಿ. ವಾಪಾಸು ಯಾವಾಗ ತಲುಪುವಿರಿ ಎಂದು ಹೇಳುವ ಹಾಗಿಲ್ಲ. ಅದಕ್ಕೆ ನೀವು ಅಲ್ಲಿಂದ ಹೊರಡುವ ಇನ್ನೊಂದು ಹಡಗಿನ ವೇಳಾಪಟ್ಟಿಗಾಗಿ ಕಾಯಬೇಕಾಗುತ್ತದೆ. ಜೊತೆಗೆ ಹವಾಮಾನ, ಬಿರುಗಾಳಿ, ಸಮುದ್ರದ ಇಳಿತ ಭರತ ಇವೆಲ್ಲದರ ಮುಲಾಜುಗಳೂ ಕೂಡಾ. ಕಡಲಲ್ಲಿ ಕಳೆಯುವ ಅಷ್ಟೂ ಹೊತ್ತು ಲೋಕಕ್ಕೂ ನಿಮಗೂ ಯಾವುದೇ ಸಂಬಂಧ ಇರುವುದಿಲ್ಲ. ಹಾಗಾಗಿ ದ್ವೀಪವೊಂದನ್ನು ಬಿಟ್ಟು ಇನ್ನೊಂದು ದ್ವೀಪಕ್ಕೆ ಹೊರಡುವಾಗ ಬಹಳ ಯೋಚಿಸಬೇಕಾಗುತ್ತದೆ. ಆದರೆ ನನಗನಿಸುವು ಪ್ರಕಾರ ಹಾಗೆ ಏನೂ ಯೋಚಿಸದೆ ಹೊರಟು ಬಿಡುವುದು ಒಳ್ಳೆಯದು.

ಹಾಗೆ ಏನೂ ಯೋಚಿಸದೆ ಹೊರಟೇ ಬಿಡುತ್ತೇನೆ ಅಂದುಕೊಂಡು ಕಡಲ ಬದಿಯಲ್ಲಿ ಹುಳ ಹೆಕ್ಕುತ್ತಿದ್ದ ವಲಸೆ ಹಕ್ಕಿಯೊಂದರ ಮೇಲೆ ಕ್ಯಾಮರಾದ ಕಣ್ಣನ್ನು ಕ್ರೋಡೀಕರಿಸುತ್ತಾ ನೋಡುತ್ತಿದ್ದೆ. ಹಕ್ಕಿ ಒದ್ದೆ ಮರಳಿನ ಮೇಲೆ ಪುಟುಪುಟು ಓಡಾಡುತ್ತಿತ್ತು. ಹಾವಸೆ ತುಂಬಿದ ಪುಟ್ಟ ಕಲ್ಲುಗಳ ಪೊಟರೆಗಳೊಳಗೆ ಏಡಿಗಳು ಗೂಢಾಲೋಚನೆ ಮಾಡುತ್ತಾ ಚಲಿಸುತ್ತಿದ್ದವು. ಅವುಗಳಿಗೆ ಈ ಹಕ್ಕಿಗಳನ್ನು ಹಿಡಿಯುವ ತವಕ. ಆದರೆ ಇಂತಹ ನೂರಾರು ಏಡಿಗಳ ಹುನ್ನಾರವನ್ನು ಕಂಡಿರುವ ಆ ಹಕ್ಕಿ ಲಗುಬಗೆಯಿಂದ ತನ್ನ ಹುಳದ ಹುಡುಗಾಟವನ್ನು ಮುಂದುವರಿಸಿತ್ತು. ಒಂದು ಕ್ಷಣ ಕಣ್ಮುಚ್ಚಿ ಯೋಚಿಸಿದೆ. ಒಂದು ವೇಳೆ ಏಡಿಯೊಂದು ಈ ಹಕ್ಕಿಯ ಪುಟ್ಟ ಕಾಲುಗಳನ್ನು ಹಿಡಕೊಂಡು ಬಿಟ್ಟರೆ ಏನಾಗಬಹುದು? ತಲೆ ಕೆಟ್ಟು ಹೋಯಿತು. ಸಾವಿರಾರು ಮೈಲು ದೂರದಿಂದ ಚಳಿಗಾಲ ಕಳೆಯಲು ಬಂದಿರುವ ಪುಟ್ಟ ಹಕ್ಕಿ. ಮತ್ತೆ ಹಿಮಾಲಯ ಶ್ರೇಣಿಯನ್ನೂ ಹಾರಿ ಹಿಂತಿರುಗಬೇಕಾದ ಹಕ್ಕಿ. ಇದರ ಜೋಡಿ ಹಕ್ಕಿ ಇಲ್ಲೇ ಇನ್ನೊಂದು ಕಡೆ ಹೀಗೆಯೇ ಹುಳ ಹುಡುಕುತ್ತಾ ಓಡಾಡುತ್ತಿದೆ. ಇನ್ನೇನು ಮಳೆಗಾಲ ಶುರುವಾಗುವ ಮೊದಲು ಇವುಗಳು ದೂರ ಹಾರಿ, ಸಂಸಾರ ಸುರು ಹಚ್ಚಬೇಕು. ಆಮೇಲೆ ಮರಿಗಳನ್ನೂ ಕರೆದುಕೊಂಡು ಇನ್ನೂ ದೂರ ಹಾರಬೇಕು. ಮತ್ತೆ ಮರಳಿ ಬರುವಷ್ಟು ಈ ಪುಟ್ಟಹಕ್ಕಿಗೆ ಆಯಸ್ಸು ಇದೆಯೋ ಗೊತ್ತಿಲ್ಲ. ಆದರೆ ಈ ಎಲ್ಲದರ ನಡುವೆ ಏಡಿಯೊಂದು ಹಠಾತ್ತನೆ ಈ ಹಕ್ಕಿಯ ಕಾಲುಗಳನ್ನು ತನ್ನ ಕೊಂಡಿಗಳಿಂದ ಹಿಡಿದುಕೊಂಡರೆ ಏನಾಗಬಹುದು? ಈ ಹಕ್ಕಿಯ ಜೀವನ ಘಟನಾಚಕ್ರದ ಉರುಳುವಿಕೆಯಲ್ಲಿ ಏನೇನೆಲ್ಲಾ ಉಳಿಕೆ ಪರಿಣಾಮಗಳು ಸಂಭವಿಸಬಹುದು? ನನ್ನ ಯೋಚನೆಯ ಮೇಲೆಯೇ ಹಿಕ್ಕೆ ಹಾಕಿದಂತೆ ಆ ಹಕ್ಕಿ ಸಣ್ಣಗೆ ಹಿಕ್ಕೆ ಹಾಕಿ ಅಲ್ಲಿಂದ ಹಾರಿತ್ತು. ಏಡಿಗಳ ಹುನ್ನಾರ ನಿಜಕ್ಕೂ ಜೋರಾಗುತ್ತಿದೆ ಎಂದು ಅದಕ್ಕೆ ಅನ್ನಿಸಿರಬೇಕು. ನಾನೂ ಎದ್ದು ಹೊರಟಿದ್ದೆ. ಎದ್ದು ಹೊರಟವನು ಮಧ್ಯಾಹ್ನದ ಹೊತ್ತು ಇಲ್ಲಿಂದ ಹೊರಡುವ ದೊಡ್ಡದೊಂದು ಹಡಗು ಹತ್ತಿ ಕುಳಿತಿದ್ದೆ.

(ಫೋಟೋಗಳು: ಅಬ್ದುಲ್‌ ರಶೀದ್)

ಕಥೆ ನಡೆಯುವುದೇ ಅನಿರೀಕ್ಷಿತ ಕಾರಣಗಳಿಂದಾಗಿ ಎಂದು ನಾನು ಈ ದಿನದ ಬರಹದ ಮೊದಲಲ್ಲೇ ಹೇಳಿರುವುದಕ್ಕೆ ಒಂದು ಕಾರಣವೂ ಇದೆ. ನೀವು ಯಶವಂತ ಚಿತ್ತಾಲರ ಕತೆಯೊಂದನ್ನು ಓದಿರಬಹುದು. ‘ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟಿದ’ ಇದು ಆ ಕಥೆಯ ಹೆಸರೆಂದು ಅನಿಸುತ್ತದೆ. ಅದೇ ತರಹ ನನಗೂ ಇಂದು ಸಂಭವಿಸಿತು. ಮಿನಿಕಾಯ್ ಕಥನದ ಎರಡು ಕಂತುಗಳನ್ನು ಬರೆದು ಮೂರನೇಯ ದಿನಕ್ಕೆ ಏನು ಬರೆಯುವುದು ಎಂದು ನಿನ್ನೆ ಇರುಳು ಯೋಚಿಸುತ್ತಿದ್ದೆ. ಅಷ್ಟು ಹೊತ್ತಿಗೆ ಕದ ತಟ್ಟಿದ ಸದ್ದು. ನೋಡಿದರೆ ಒಂದು ಅಪರಿಚಿತ ಮುಖ ವಿಶಾಲವಾಗಿ ನಕ್ಕು ನನ್ನ ಬಂದು ತಬ್ಬಿಕೊಂಡಿತು. ನಾನು ಗಲಿಬಿಲಿಯಾದೆ.

‘ಓ ಗೊತ್ತಾಗಲಿಲ್ಲವಲ್ಲಾ.. ’ ಆತ ಇನ್ನೂ ದೊಡ್ಡದಾಗಿ ನಕ್ಕ.

‘ನಾನು ಇಬ್ರಾಹಿಂ ಮಿನಿಕಾಯ್ ದ್ವೀಪದ ಹಾಡುಗಾರ’ ಎಂದು ಇನ್ನೂ ಜೋರಾಗಿ ನಕ್ಕ.

‘ಅಯ್ಯೇ ನನಗೆ ಗೊತ್ತಾಗಲಿಲ್ಲ. ಆದರೆ ನಿಮ್ಮ ಗಡ್ಡ ಎಲ್ಲಿ ಹೋಯಿತು’ ನಾನು ಇನ್ನೂ ಗಲಿಬಿಲಿಯಿಂದ ಕೇಳಿದೆ.

‘ಗಡ್ಡವೂ ಹೋಯಿತು. ಎಲ್ಲವೂ ಹೋಯಿತು’ ಆತ ಇನ್ನೂ ಜೋರಾಗಿ ನಕ್ಕ.

ವಿಷಯ ಆಗಿದ್ದು ಇಷ್ಟೇ. ಈತ ಮಿನಿಕಾಯ್ ದ್ವೀಪದ ಹಾಡುಗಾರ. ಚೆನ್ನಾಗಿ ದೋಲೂ ಬಾರಿಸುತ್ತಾನೆ. ನಾನು ಅಲ್ಲಿದ್ದಾಗ ಈತನ ಹಾಡುಗಳನ್ನು ಧ್ವನಿಮುದ್ರಿಸಿಕೊಂಡಿದ್ದೆ. ‘ಎಷ್ಟು ಚೆನ್ನಾಗಿ ಹಾಡುತ್ತೀಯಾ. ಕವರತ್ತಿಗೆ ಬಂದಾಗ ಇನ್ನೂ ಹಾಡಬೇಕು’ ಎಂದು ಆಹ್ವಾನವನ್ನೂ ಕೊಟ್ಟಿದ್ದೆ. ಆ ಆಹ್ವಾನವನ್ನು ಅಷ್ಟೇ ತೀವ್ರವಾಗಿ ಹಚ್ಚಿಕೊಂಡಿದ್ದ ಇಬ್ರಾಹಿಂ ಧ್ವನಿಮುದ್ರಣದ ಹೊತ್ತಲ್ಲಿ ಚೆನ್ನಾಗಿ ಕಾಣಿಸಬೇಕು ಅಂದುಕೊಂಡು ತನ್ನ ಹುಲುಸಾದ ಕರಿಯ ಗಡ್ಡವನ್ನು ಸ್ವಲ್ಪ ನೇರಗೊಳಿಸಲು ಹೋಗಿ ಜಾಸ್ತಿಯೇ ಹೆರೆದುಕೊಂಡಿದ್ದ. ಇನ್ನು ಗಡ್ಡ ಹೀಗೆ ಅಡ್ಡಾದಿಡ್ಡಿಯಾಗಿದ್ದರೆ ಚೆನ್ನಾಗಿರುವುದಿಲ್ಲ ಎಂದುಕೊಂಡು ಗಡ್ಡವನ್ನು ಸಂಪೂರ್ಣ ಬೋಳಿಸಿಕೊಂಡು ಗುರುತೇ ಇಲ್ಲದವನ ಹಾಗೆ ಆಗಿಹೋಗಿದ್ದ. ನಾನು ಯಾವ ಕಾರಣಕ್ಕೂ ಮರೆಯಲೇ ಆಗದ ಮುಖ ಈ ಇಬ್ರಾಹೀಮನದು. ಹಾಡುಗಾರ, ಡೋಲುಗಾರ, ಮೀನುಗಾರ ಮತ್ತು ದುಃಖಿ! ದುಃಖಿ ಏಕೆಂದರೆ ಈತನ ಮಡದಿಯನ್ನು ಇತ್ತೀಚೆಗಷ್ಟೆ ಈತ ತ್ಯಜಿಸಿಬಿಟ್ಟಿದ್ದ. ತ್ಯಜಿಸಲು ಕಾರಣ ದ್ವೀಪದ ಪಕ್ಷ ರಾಜಕಾರಣ.

ಈತನ ದ್ವೀಪದಲ್ಲಿ ಇರುವುದು ಎರಡೇ ಪಕ್ಷಗಳು ಮತ್ತು ಎಲ್ಲರೂ ಯಾವುದಾದರೊಂದು ಪಕ್ಷದಲ್ಲಿ ಇರಲೇಬೇಕಿತ್ತು. ಹಾಗೆ ಈತನೂ ಈತನ ಮಡದಿಯೂ ಒಂದೇ ಪಕ್ಷದಲ್ಲಿದ್ದರು. ಆದರೆ ಒಂದು ದಿನ ಈತನ ಮಡದಿ ಇನ್ನೊಂದು ಪಕ್ಷದ ಸಭೆಯಲ್ಲಿ ಹಾಡು ಹೇಳಿ ನೃತ್ಯ ಮಾಡಿದಳು ಎಂಬುದು ಇವರ ಜಗಳಕ್ಕೆ ಹೇತುವಾಗಿತ್ತು. ಅದರ ಜೊತೆಗೆ ದೋಣಿ ಸ್ಪರ್ಧೆಯಲ್ಲಿ ಇಬ್ರಾಹೀಮನ ಹಳ್ಳಿಗೆ ಮೊದಲ ಬಹುಮಾನ ಬಂದರೆ ಆಕೆಯ ಹಳ್ಳಿಗೆ ಕೊನೆಯ ಬಹುಮಾನ. ಆ ಈರ್ಷ್ಯೆ ಜಗಳವನ್ನು ಇನ್ನೂ ಬಿಗಡಾಯಿಸಿತ್ತು. ಇಬ್ರಾಹೀಮನಿಗೆ ಜೀವನ ಸಾಕೋ ಸಾಕಾಗಿತ್ತು. ಈ ನಡುವೆ ಆಕೆ ರಾಜಿಯಾಗಿ ಪುನಃ ಮದುವೆಯಾಗೋಣ ಎಂಬ ಸಂದೇಶವನ್ನೂ ಕಳಿಸತೊಡಗಿದ್ದಳು. ಇದು ಆತನಿಗೆ ಇನ್ನಷ್ಟು ಕೋಟಲೆಯ ವಿಷಯವಾಗಿತ್ತು. ಏಕೆಂದರೆ ಒಮ್ಮೆ ತ್ಯಜಿಸಿದ ಮಡದಿಯನ್ನು ಪುನಃ ಪಡೆಯಬೇಕಿದ್ದರೆ ಆಕೆ ಇನ್ನೊಂದು ವಿವಾಹವಾಗಿ ಆ ವಿವಾಹದಿಂದ ಹೊರಬರಬೇಕಿತ್ತು. ಅದೂ ಅಲ್ಲದೆ ಈತನಿಗೆ ಜೀವನದಲ್ಲಿ ಹಾಡುವುದು ಮತ್ತು ದೋಲುಬಡಿಯುವುದು ಬಿಟ್ಟರೆ ಬೇರೆ ಉತ್ಸಾಹಗಳೂ ಉಳಿದಿರಲಿಲ್ಲ. ಅದಕ್ಕಾಗಿಯೇ ಆತ ನಾನು ಆಹ್ವಾನ ಕೊಟ್ಟಿದ್ದೇ ಸರಿ, ಹಡಗು ಹತ್ತಿ ಮಿನಿಕಾಯಿಂದ ಹೊರಟೇಬಿಟ್ಟಿದ್ದ.

ಈ ಬರಹದ ಮೊದಲೇ ಹೇಳಿದ ಹಾಗೆ ಲೋಕ ಚಲಿಸುವುದೇ ಅನಿರೀಕ್ಷಿತ ಸಂಭವಗಳಿಂದಾಗಿ. ಈ ದ್ವೀಪಗಳಲ್ಲಿ ಚಲಿಸುವಾಗ ನಿಮ್ಮ ಬಳಿ ಗುರುತಿನ ಚೀಟಿಗಳೂ, ಅನುಮತಿ ಪತ್ರಗಳೂ ಆಧಾರದ ದಾಖಲೆಗಳೂ ಇರಲೇಬೇಕಾಗುತ್ತದೆ. ಅದರ ಪ್ರಕಾರ ಈತನೂ ತನ್ನ ಗುರುತಿನ ಚೀಟಿಯನ್ನೂ ಆಧಾರದ ದಾಖಲೆಯನ್ನೂ ನೀಟಾಗಿ ಮಡಚಿ ತನ್ನ ಮೊಬೈಲ್ ಫೋನಿನ ಕವಚದೊಳಗೆ ಭದ್ರವಾಗಿಟ್ಟುಕೊಂಡಿದ್ದ. ಹಡಗಿನಿಂದ ಏಣಿಯ ಮುಖಾಂತರ ಇಳಿಯುವಾಗ ತಾನು ತಲುಪಿರುವ ಸಂಗತಿಯನ್ನು ನನಗೆ ಹೇಳಲು ಮೊಬೈಲನ್ನು ಕೈಗೆತ್ತಿಕೊಂಡವನು ಹಡಗಿನ ಏಣಿಯ ತೂರಾಟದಲ್ಲಿ ಮೊಬೈಲನ್ನು ಆಳವಾದ ಕಡಲಿಗೆ ಬೀಳಿಸಿಕೊಂಡಿದ್ದ.

‘ಈಗ ನನಗೆ ಗಡ್ಡವೂ ಇಲ್ಲ, ಹೆಂಡತಿಯೂ ಇಲ್ಲ, ಮೊಬೈಲೂ ಇಲ್ಲ, ಗುರುತಿನ ಚೀಟಿಯೂ ಇಲ್ಲ, ಆಧಾರವೂ ಇಲ್ಲ, ಏನೂ ಇಲ್ಲʼ ಎಂದು ನಗಲು ನೋಡುತ್ತಿದ್ದ. ಆದರೆ ಆತ ಒಳಗೊಳಗೆ ದಿಗಿಲುಗೊಂಡಿರುವುದು ಆತನ ಕಣ್ಣುಗಳಲ್ಲಿ ಗೊತ್ತಾಗುತ್ತಿತ್ತು. ಇನ್ನು ನನ್ನ ಇತರ ಕೆಲಸಗಳ ಜೊತೆ ಆತನ ಕಳೆದುಹೋದ ದಾಖಲೆಗಳನ್ನು ಹುಡುಕಿಕೊಡುವುದರಲ್ಲೂ ಸಹಾಯ ಮಾಡಬೇಕು. ಏಕೆಂದರೆ ಅವುಗಳು ಕಳೆದುಹೋಗಲು ನಾನೂ ಕಾರಣ. ಹಕ್ಕಿಯೊಂದನ್ನು ನೋಡಲು ಹೋಗಿ ದ್ವೀಪವೊಂದರ ಕಥಾ ಪಾತ್ರವೊಂದರ ಕಷ್ಟನಷ್ಟಗಳಿಗೆ ಕಾರಣನಾಗುವುದೆಂದರೆ ಏನು ಅಷ್ಟು ಕಮ್ಮಿ ಅಪರಾಧವೇ? ಕಡಲ ಬದಿಯಲ್ಲಿ ಕುಳಿತುಕೊಂಡಿರಿ ಇಬ್ರಾಹೀಮರೇ ಒಂಚೂರು ಕೆಲಸ ಮುಗಿಸಿ ನಿಮ್ಮನ್ನು ಸೇರಿಕೊಳ್ಳುವೆ ಎಂದು ಹೇಳಿಬಂದಿರುವೆ. ಬಹುಶಃ ನಾಳೆ ಇಬ್ರಾಹೀಮನ ಕಳೆದುಹೋದ ದಾಖಲೆಗಳನ್ನು ಮರಳಿಪಡೆಯಲು ಸಹಾಯ ಮಾಡಬೇಕಾಗುತ್ತದೆ. ಅದೂ ಕಳೆದು ಸಮಯ ಉಳಿದರೆ ಮುಂದಿನ ವಿಷಯ!

 

4.ವೃಂಗಿಲಿಯ ಹಿನ್ನೆಲೆಯಲ್ಲಿ ಛೆ..ಛೆ.. ಸೂರ್ಯಾಸ್ತ

ಮಿನಿಕಾಯ್ ನಲ್ಲಿ ಮುಳುಗಿದಷ್ಟು ಚಂದದ ಸೂರ್ಯ ನಾನು ಇದುವರೆಗೆ ಬೇರೆ ಎಲ್ಲೂ ನೋಡಿಲ್ಲ. ಉದುರಿ ಬಿದ್ದ ಉದ್ದದೊಂದು ಎಲೆಯ ಹಾಗೆ ಅರಬಿ ಕಡಲಿನ ನಡುವಲ್ಲಿ ಮಲಗಿರುವ ಮಿನಿಕಾಯ್ ದ್ವೀಪದ ಪಶ್ಚಿಮದ ತುದಿಯಲ್ಲಿ ಕಡಲು ಮತ್ತು ನೀಲ ಲಗೂನ್ ಸೇರುವ ಜಾಗದಿಂದ ಮುಳುಗುವ ಸೂರ್ಯ ಬಹಳ ಮನೋಹರವಾಗಿ ಕಾಣಿಸುತ್ತದೆ. ಏಕೆಂದರೆ ಈ ಜಾಗದಿಂದ ಒಂದು ಸಾವಿರ ಮೀಟರ್ ದೂರದಲ್ಲಿ ನೀಲ ಲಗೂನಿನಿನ ನಡುವೆ ಇಲ್ಲಿಯವರು ವೃಂಗಿಲಿ ಎಂದು ಕರೆಯುವ ಒಂದು ಪುಟ್ಟ ದ್ವೀಪವಿದೆ. ಮುಳುಗುವ ಸೂರ್ಯ ಈ ನಡುಗುಡ್ಡೆಯ ಹಿನ್ನೆಲೆಯಲ್ಲಿ ಕಡಲಿನೊಳಗೆ ಇಳಿಯುವುದು ಅತಿ ಮನೋಹರವಾಗಿ ಕಾಣಿಸುತ್ತದೆ. ಅದೂ ಅಲ್ಲದೆ ಬೇರೆ ಯಾವ ದ್ವೀಪದಲ್ಲೂ ಕಾಣಿಸದ ಕಾಂಡ್ಲಾ ಕಾಡಿನ ನಡುವೆ ನೀಲ ಸಾಗರದ ನೀರು ದೊಡ್ಡದೊಂದು ನದಿಯ ಹಾಗೆ ಮೆಲ್ಲಗೆ ಹರಿದು ಮತ್ತೆ ಸಾಗರವನ್ನು ಸೇರುತ್ತದೆ. ಹಾಗಾಗಿ ಲಕ್ಷದ್ವೀಪ ಸಮೂಹದ ಬೇರೆ ಎಲ್ಲೂ ಕಾಣಿಸದ ಅಪರೂಪದ ಹಕ್ಕಿಗಳೂ ಇಲ್ಲಿ ಇರಬಹುದು ಎಂದು ಪಕ್ಷಿ ಶಾಸ್ತ್ರಜ್ಞರೊಬ್ಬರು ಹೇಳಿದ್ದರು.

ಅವರು ಹೇಳಿದ ಪ್ರಕಾರ ಅಪೂರ್ವ ಬಣ್ಣಗಳ ನೀರುಕೋಳಿಯೊಂದು ನನ್ನ ಕಣ್ಣಮುಂದೆಯೇ ಹಾರಿಯೂ ಆಗಿತ್ತು. ಆದರೆ ನಾನು ಹುಡುಕುತ್ತ ಬಂದಿರುವ ಹೂ ಹಕ್ಕಿಯ ಸುಳಿವಿಲ್ಲದೆ ಮನ ಪೆಚ್ಚಾಗಿತ್ತು. ಇನ್ನೇನು ಮಾಡುವುದು ಎಂದು ಅಲ್ಲಿನ ಅಭೂತಪೂರ್ವ ಸೂರ್ಯಾಸ್ತಮಾನದ ಫೋಟೋಗಳನ್ನು ತೆಗೆಯಲೆಂದು ಕ್ಯಾಮರಾದ ಮುಚ್ಚಳ ಬಿಚ್ಚಿ ಪ್ರವಾಸಿಗರಿಗಾಗಿ ನಿರ್ಮಿಸಿದ್ದ ಸಿಮೆಂಟು ಬೆಂಚಿನ ಮೇಲೆ ಕೂತಿದ್ದೆ.

ಆ ಅಪೂರ್ವ ಸೂರ್ಯಾಸ್ತದ ಆ ದಿವ್ಯ ಮೌನವನ್ನು ಮುರಿಯಲೋ ಎಂಬಂತೆ ಪಕ್ಕದ ಬೆಂಚಲ್ಲಿ ಇಬ್ಬರು ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದರು.

ಆ ಇಬ್ಬರು ಪರಿವೀಕ್ಷಕರು ಪಕ್ಕದ ರಾಜ್ಯವೊಂದರಿಂದ ಪರೀಕ್ಷಾ ಪರಿವೀಕ್ಷಕರಾಗಿ ಮಿನಿಕಾಯ್ ದ್ವೀಪವನ್ನು ತಲುಪಿದ್ದರು. ಆವತ್ತು ಭಾನುವಾರವಾದ್ದರಿಂದ ಬೇಗನೇ ಪರಿವೀಕ್ಷಣೆ ಮುಗಿಸಿಕೊಂಡು ಸೂರ್ಯಾಸ್ತ ನೋಡಲು ಅಲ್ಲಿ ಕುಳಿತಿದ್ದರು. ಈ ಅಭೂತಪೂರ್ವ ಸೂರ್ಯಾಸ್ತದ ಹೊತ್ತು ಸ್ವಲ್ಪ ನಶೆಯೂ ಇದ್ದಿದ್ದರೆ ಎಂಬುದು ಇವರಿಬ್ಬರ ಆಸೆ. ಆದರೆ ಈ ದ್ವೀಪಗಳಲ್ಲಿ ಸಂಪೂರ್ಣ ಪಾನನಿರೋಧ ಇರುವುದರಿಂದ ಅವರಿಗೆ ಹತಾಶೆಯಾಗಿದೆ. ಆ ಹತಾಶೆಯನ್ನು ಅವರು ಕೆಟ್ಟ ಶಬ್ಧಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಅವರ ಹತಾಶೆಯ ಮಾತುಗಳು ಅಲ್ಲೇ ಕುಳಿತಿರುವ ನನಗೆ ಅರಿವಾಗುವುದಿಲ್ಲ ಎಂಬುದು ಅವರ ನಂಬಿಕೆ. ಅವರ ನಂಬಿಕೆಗೆ ಇಂಬು ಕೊಡುವ ಹಾಗೆ ನಾನು ಅವರ ಜೊತೆ ಕನ್ನಡದ ಛಾಯೆ ಇರುವ ಇಂಗ್ಲಿಷಿನಲ್ಲೇ ಮಾತುಕತೆ ಮುಗಿಸಿ ಈಗ ಏನೂ ಮಾತಾಡದೆ ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನನಾಗಿರುವಂತೆ ನಟಿಸುತ್ತಿದ್ದೇನೆ. ಆದರೆ ನನ್ನ ಕಿವಿ ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುತ್ತಿದೆ. ಯಾಕೋ ನನಗೆ ಕುಳಿತಲ್ಲೇ ಒಂಥರಾ ನಗುವೂ ಬರುತ್ತಿದೆ.

‘ಈ ಮುದುಕನಿಗೆ ಸರಿಯಾದ ಕೋನದಲ್ಲಿ ಫೋಟೋ ತೆಗೆಯಲೂ ಬರುವುದಿಲ್ಲ. ನಾನಾಗಿದ್ದರೆ ಹೇಗೆಲ್ಲ ತೆಗೆಯುತ್ತಿದ್ದೆ ಗೊತ್ತಾ’ ಅವನು ಇನ್ನೊಬ್ಬನಿಗೆ ಹೇಳುತ್ತಿದ್ದಾನೆ.

‘ಮುಳುಗುವ ಸೂರ್ಯ ಅಂಗೈಯೊಳಗೆ ಕುಳಿತಿರುವ ಹಾಗೆ, ಬೊಗಸೆಯಿಂದ ಬೀಳುತ್ತಿರುವ ಹಾಗೆ, ಪ್ಯಾಂಟಿನ ನಡುವೆ ಕಾಲುಗಳ ಕೆಳಗೆ ಸೂರ್ಯ ನೇತಾಡುತ್ತಿರುವ ಹಾಗೆ’

‘ಕೈಯಿಂದ ನಾವೇ ಸೂರ್ಯನನ್ನು ನೂಕಿ ಸಮುದ್ರದಲ್ಲಿ ಮುಳುಗಿಸುವ ಹಾಗೆ, ಬೆನ್ನಿಂದ ಡಿಕ್ಕಿ ಹೊಡೆದು ಸಮುದ್ರಕ್ಕೆ ಬೀಳಿಸುವ ಹಾಗೆ. ಅಯ್ಯೋ ಪಡೆದವನೇ ಹೇಗೆಲ್ಲಾ ತೆಗೆಯಬಹುದಿತ್ತು’ ಇನ್ನೊಬ್ಬ ಸೇರಿಸುತ್ತಾನೆ.

‘ಅದೆಲ್ಲ ಬಿಡು. ಈಗ ಮೊಬೈಲಿನಲ್ಲಿ ಸೆಲ್ಫಿ ತೆಗೆದು ಹೆಂಡತಿ ಮಕ್ಕಳಿಗೆ ಕಳಿಸುವಾ’ ಒಬ್ಬ ಮೊಬೈಲನ್ನು ಮುಳುಗುತ್ತಿರುವ ಸೂರ್ಯನ ಕಡೆ ತಿರುಗಿಸುತ್ತಾನೆ.

‘ಅದಕ್ಕೇ ನಿನಗೆ ಬುದ್ಧಿ ಕಡಿಮೆ ಎಂದು ಹೇಳುವುದು’ ಇನ್ನೊಬ್ಬ ಅವನಿಗೆ ಬುದ್ಧಿ ಹೇಳುತ್ತಾನೆ.

‘ನಾವು ಇಷ್ಟು ದೂರ ಈ ಕಡಲಿನ ನಡುವೆ ಇಷ್ಟು ಕಷ್ಟಪಟ್ಟು ಬಂದು ಇರುವುದನ್ನು ನೀನು ಮೊಬೈಲಿನ ಒಂದು ಫೋಟೋ ಕಳಿಸಿ ಹಾಳು ಮಾಡುತ್ತೀಯಾ. ಮನೆಯಲ್ಲಿ ಅವರು ಏನು ತಿಳಿದುಕೊಳ್ಳುತ್ತಾರೆ. ಅಲ್ಲಿ ಅವರು ಮಜಾ ಮಾಡಲು ಹೋಗಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಇಡು ಫೋನು’ ಎಂದು ಗದರಿಸುತ್ತಾನೆ.

ಅವನು ಫೋನು ಇಡುವುದಿಲ್ಲ. ‘ತೆಗೆದರೆ ಏನಾಗುತ್ತದೆ? ಕಳಿಸದಿದ್ದರೆ ಆಯಿತಲ್ಲವಾ’ ಎಂದು ಫೋನಿನಲ್ಲಿ ಫೋಟೋ ತೆಗೆಯಲು ಶುರುಮಾಡುತ್ತಾನೆ.

‘ಹೌದಲ್ಲವಾ ಅದೂ ಸರಿಯೇ ಎಂದು ಇನ್ನೊಬ್ಬನೂ ಫೋಟೋ ತೆಗೆಯಲು ಶುರುಮಾಡುತ್ತಾನೆ.

ಇಬ್ಬರೂ ಮುಳುಗುತ್ತಿರುವ ಸೂರ್ಯನ ಫೋಟೋ ತೆಗೆಯುತ್ತಾ ಅದನ್ನು ಒಬ್ಬರಿಗೊಬ್ಬರು ತೋರಿಸುತ್ತಾ ವರ್ಣಿಸತೊಡಗುತ್ತಾರೆ.

‘ಓ ಇಲ್ಲಿ ನೋಡು ಇದು ಬಿಸಿನೀರಿನ ಹಂಡೆಯ ಮುಚ್ಚಳ ತೆಗೆದರೆ ಕಾಣುವ ಹಾಗೆ ಕಾಣಿಸುತ್ತಿದೆ ಅಲ್ಲವಾ’ ಒಬ್ಬ ಹೇಳುತ್ತಾನೆ.

‘ಹೌದು ಹೌದು ಇದು ನೋಡು ಅಂಬಾಸಿಡರ್ ಕಾರಿನ ಹಾಗೇ ಕಾಣಿಸುತ್ತಿದೆ.’

‘ಇಲ್ಲಿ ನೋಡು ಇದು ಅಂಬ್ಯುಲೆನ್ಸ್ ಥರವೇ ಇದೆಯಲ್ಲವಾ’

‘ಇದು ಮಕ್ಕಳನ್ನು ನಾಯಿ ಅಟ್ಟಿಸಿಕೊಂಡು ಓಡಿಸುವ ಹಾಗೆ ಕಾಣಿಸುತ್ತಿದೆ.’
ನಾನು ಕ್ಯಾಮರಾದ ಮುಚ್ಚಳ ಬಿಗಿದು ಎದ್ದುನಿಲ್ಲುತ್ತೇನೆ.

‘Sir are you going so fast?ʼ ಅವರಲ್ಲೊಬ್ಬ ಕೇಳುತ್ತಾನೆ.

‘Yes the sun is no more.’

ನಾನು ಅಲ್ಲಿಂದ ಹೊರಡುತ್ತೇನೆ.

‘ಈ ಸೂರ್ಯ ಇಲ್ಲಿ ಮುಳುಗಿ ಎಲ್ಲಿ ಹೋಗುತ್ತಾನೆ ಗೊತ್ತಾ?’ ಒಬ್ಬ ಕೇಳುವುದು ಹಿಂದಿನಿಂದ ಕೇಳಿಸುತ್ತದೆ.

‘ಅಮೇರಿಕಾ’

‘ಅಲ್ಲಿಂದ?’

‘ಆಫ್ರಿಕಾ’

‘ಆಮೇಲೆ?’

‘ಆಸ್ಟ್ರೇಲಿಯ”

‘ಆಮೇಲೆ ನಮ್ಮ ಇಂಡಿಯಾ’

‘ಸಂಜೆ ಪುನಾ ಅಮೇರಿಕಾ’

‘ಛೆ’
ಅವರಲ್ಲೊಬ್ಬ ಲೊಚಗುಟ್ಟುತ್ತಾನೆ

‘ಅಮೇರಿಕಾದಲ್ಲಿ ಆಗಿದ್ದರೆ ಸೂರ್ಯಾಸ್ತವನ್ನು ಒಂದು ಬಟ್ಟಲು ದ್ರಾಕ್ಷಾರಸ ಹೀರುತ್ತಾ ಆಸ್ವಾದಿಸಬಹುದಿತ್ತು.’

‘ಛೆ!’ ಇನ್ನೊಬ್ಬನೂ ಲೊಚಗುಟ್ಟುತ್ತಾನೆ

ನಾನೂ ಸದ್ದಿಲ್ಲದೆ ಮನಸಿನಲ್ಲೇ ಛೇ ಛೇ ಅನ್ನುತ್ತಾ ಸೈಕಲ್ಲು ಹೊಡೆಯುತ್ತೇನೆ.

 

5. ಇಬ್ನ್ ಬತೂತನ ಸ್ತ್ರೀರಾಜ್ಯ

ಸುಮಾರು ಹದಿನೆಂಟು ತಾಸು ಕಡಲಲ್ಲಿ ಚಲಿಸಿದ ನಂತರ ಅರೇಬಿಯನ್ ಸೀ ಹಡಗು ನಾನಿರುವ ಕವರತ್ತಿಯಿಂದ ಮಿನಿಕಾಯ್ ದ್ವೀಪವನ್ನು ತಲುಪುತ್ತಿತ್ತು. ಕಡಲಲ್ಲಿ ಸುಮಾರು ಮುನ್ನೂರು ಕಿಲೋಮೀಟರುಗಳಿಗಿಂತಲೂ ದೂರ ಚಲಿಸಿತ್ತು. ನಿಮಗೆ ಗೊತ್ತಿರಬಹುದು. ಕಡಲಲ್ಲಿ ದೂರವನ್ನು ನಾಟಿಕಲ್ ಮೈಲಿನಲ್ಲಿ ಅಳೆಯುತ್ತಾರೆ. ಒಂದು ನಾಟಿಕಲ್ ಮೈಲು ಅಂದರೆ ಒಂದು ಕಿಲೋಮೀಟರ್ ಮತ್ತು ಎಂಟುನೂರ ಐವತ್ತೆರಡು ಮೀಟರುಗಳು. ಮಿನಿಕಾಯ್ ದ್ವೀಪ ನಾನಿರುವ ಕವರತ್ತಿಯಿಂದ ದಕ್ಷಿಣ ದಿಕ್ಕಿನಲ್ಲಿ ಇನ್ನೂರೈವತ್ತು ಕಿಲೋಮೀಟರ್ ದೂರದಲ್ಲಿದೆ. ಆದರೆ ನಾನು ಹೋಗಿದ್ದು ಉತ್ತರಕ್ಕಿರುವ ಅಗತ್ತಿ ದ್ವೀಪದಿಂದಾಗಿ ಸುಮಾರು ಅರವತ್ತು ಕಿಲೋಮೀಟರ್ ಹೆಚ್ಚುವರಿ ದೂರವನ್ನು ಕ್ರಮಿಸಿ. ಕೊಚ್ಚಿಯಿಂದ ಹೊರಟಿದ್ದ ಆ ಹಡಗು ನಾನಿರುವ ದ್ವೀಪಕ್ಕೆ ಬಂದು ಅಲ್ಲಿಂದ ಅಗತ್ತಿಯನ್ನು ಹಾದು ಮಿನಿಕಾಯ್ ದ್ವೀಪವನ್ನು ಬಳಸಿಕೊಂಡು ಮತ್ತೆ ಕೊಚ್ಚಿಯನ್ನು ತಲುಪಬೇಕಿತ್ತು. ಇಂತಹದೇ ಇನ್ನೂ ಆರು ಹಡಗುಗಳು ಹೀಗೆಯೇ ಹಲವು ದ್ವೀಪಗಳನ್ನು ಬಳಸಿಕೊಂಡು ಸುತ್ತುತ್ತಲೇ ಇರುತ್ತವೆ.

ಇದರಲ್ಲಿ ಎಂ ವಿ ಕವರತ್ತಿ ಅನ್ನುವುದು ಬಹಳ ದೊಡ್ಡ ಐಷಾರಾಮಿ ಹಡಗು. ಪ್ರವಾಸಿಗರಿಗಾಗಿಯೇ ನಿರ್ಮಿಸಿರುವುದು. ಉಳಿದ ಹಾಗೆ ಎಂ ವಿ ಲಗೂನ್ ಮತ್ತು ಎಂ ವಿ ಕೋರಲ್ ಅನ್ನುವುದು ಇನ್ನೂ ಸ್ವಲ್ಪ ಸಣ್ಣ ಹಡಗು. ಆದರೆ ಯಾಕೋ ನನಗೆ ಇವುಗಳೇ ಸ್ವಲ್ಪ ಇಷ್ಟ. ಅವುಗಳ ವಿನ್ಯಾಸ ಒಳಾಂಗಣದ ಅಚ್ಚುಕಟ್ಟುತನ ಇತ್ಯಾದಿಗಳಿಂದಾಗಿ. ಇನ್ನೆರೆಡು ಇವಕ್ಕಿಂತಲೂ ಸಣ್ಣವು ಎಂ ವಿ ಅರೇಬಿಯನ್ ಸೀ ಮತ್ತು ಎಂ ವಿ ಲಕ್ಷದ್ವೀಪ್ ಸೀ. ಮಳೆಗಾಲದ ಸಮಯದಲ್ಲಿ ಇವುಗಳಲ್ಲಿ ಕೂರದಿರುವುದು ಒಳ್ಳೆಯದು ಅನ್ನುತ್ತಾರೆ. ಗಾಳಿಗೆ ಅಷ್ಟೊಂದು ಓಲಾಡುತ್ತದೆಯಂತೆ. ಗರ್ಭಿಣಿಯರಿಗಿಂತಲೂ ಹೆಚ್ಚಾಗಿ ವಾಂತಿಮಾಡಿಕೊಳ್ಳಬೇಕಾಗುತ್ತದೆಯಂತೆ. ಆದರೆ ಬೇಸಗೆಯ ಶಾಂತಸಾಗರದಲ್ಲಿ ಇವುಗಳೂ ಮಂದಗಮನೆಯರಂತೆ ವಯ್ಯಾರದಲ್ಲಿ ಚಲಿಸುತ್ತಿರುತ್ತವೆ. ಇನ್ನುಳಿದ ಎರಡು ಹಡಗುಗಳು ಎಂ ವಿ ಮಿನಿಕಾಯ್ ಮತ್ತು ಎಂ ವಿ ಅಮೀನಿದೀವಿ ಇವು ತುಂಬ ಸಣ್ಣ ಹಡಗುಗಳು. (ಅಂದ ಹಾಗೆ ಎಂ ವಿ ಅಂದರೆ ಮೋಟರೈಸ್ಡ್ ವೆಸೆಲ್ ಅಂದರೆ ಯಾಂತ್ರೀಕೃತ ಹಡಗುಗಳು) ಮಂಗಳೂರು ಮತ್ತು ಕೇರಳದ ಬೇಪೂರುಗಳಿಗೆ ಬಂದುಹೋಗುವ ಹಡಗುಗಳಿವು. ಮಳೆಗಾಲದಲ್ಲಿ ಇವುಗಳು ಓಡುವುದಿಲ್ಲ. ಏಕೆಂದರೆ ಕಾರ್ಗಾಲದ ಬಿರುಗಾಳಿಯನ್ನು ಇವುಗಳು ತಡೆದುಕೊಳ್ಳುವುದಿಲ್ಲ.

ಈ ಎಲ್ಲ ಹೊಸ ಹಡಗುಗಳು ಓಡುವ ಮೊದಲು ಇಲ್ಲಿ ಎಂ ವಿ ಟೀಪುಸುಲ್ತಾನ್ ಮತ್ತು ಎಂ ವಿ ಭಾರತ್ ಮಾತಾ ಇತ್ಯಾದಿ ಹಡಗುಗಳು ಓಲಾಡುತ್ತಾ ತೇಲಾಡುತ್ತಿದ್ದುವಂತೆ. ಅವುಗಳ ಓಡಾಟದ ಕುರಿತು ಬಹಳಷ್ಟು ಕಥೆಗಳೇ ಇವೆ. ಅದಕ್ಕೂ ಮೊದಲು ಇಲ್ಲಿನವರದೇ ಹಾಯಿ ಹಡಗುಗಳು ಮಂಗಳೂರಿಗೂ ಬೇಪೂರಿಗೂ ನಡುವೆ ಓಡಾಡುತ್ತಿದ್ದವು. ವಾರಗಟ್ಟಲೆಯ ಓಡಾಟ. ಕೆಲವೊಮ್ಮೆ ತಿಂಗಳುಗಟ್ಟಲೆಯೂ ಆಗುತ್ತಿತ್ತು. ಈ ಓಡಾಟಗಳ ರೋಮಾಂಚಕ ಕಥೆಗಳನ್ನು ಕೇಳುವುದೇ ಒಂದು ಅನುಭವ. ಸಿಂದಾಬಾದನ ನೌಕಾಯಾನದ ಕಥೆಗಳಂತೆ. ಆಗ ಈ ದ್ವೀಪಗಳಿಗೆ ಉದ್ಯೋಗ ಅರಸಿ ಬರುವ ಶಿಕ್ಷಕರೂ, ನೌಕರರೂ ಇಂತಹದೇ ಹಾಯಿ ಹಡಗುಗಳಲ್ಲಿ ವಾರಗಟ್ಟಲೆ ಕೂತು ಬರುತ್ತಿದ್ದರಂತೆ.

ಒಂದು ಸಲ ಹೀಗೆ ಒಬ್ಬರು ಶಿಕ್ಷಕಿಯನ್ನು ತಮ್ಮ ಹಾಯಿದೋಣಿಯಲ್ಲಿ ಹತ್ತಿಸಿಕೊಂಡು ಕೇರಳದ ಬೇಪೂರಿಗೆ ಹೊರಟಿದ್ದವರು ತಮ್ಮ ಕಥೆ ಹೇಳುತ್ತಿದ್ದರು. ಏಳು ದಿನಗಳಲ್ಲಿ ಬೇಪೂರು ತಲುಪಬೇಕಿದ್ದ ದೋಣಿ ಗಾಳಿಯಿಲ್ಲದೆ ಹಾಯಿ ಚಲಿಸದೆ ನಿಂತಲ್ಲೇ ಕಡಲ ನಡುವಲ್ಲಿ ಇನ್ನೂ ವಾರಗಟ್ಟಲೆ ನಿಂತುಕೊಳ್ಳಬೇಕಾಗಿ ಬಂದದ್ದು. ತಂದಿದ್ದ ನೀರು ಮುಗಿದು ಹೋಗಿದ್ದು. ದೋಣಿಯಲ್ಲಿದ್ದ ಕೊಬ್ಬರಿಯನ್ನೇ ತುಂಡು ತುಂಡು ತಿಂದು ಬದುಕಿಕೊಂಡದ್ದು. ಶಿಕ್ಷಕಿಯ ಅಳಲು ಮತ್ತು ವಾಂತಿ. ಇವರ ಛಲ ಮತ್ತು ದೇವರ ದಯೆ ಎಲ್ಲವನ್ನೂ ವಿವರಿಸುತ್ತಾ ತಮ್ಮ ಬೊಚ್ಚುಬಾಯಿಯಲ್ಲಿ ನಗುತ್ತಿದ್ದರು. ಆ ಟೀಚರ ಹೆಸರು ಸರಸ್ವತಿಯೋ, ಮೀನಾಕ್ಷಿಯೋ ಏನೋ ಇರಬೇಕು. ತಿರುವಾಂಕೂರಿನಲ್ಲಿ ಜನಿಸಿದ್ದ ಮಂಗಳೂರು ಮೂಲದ ಸಾರಸ್ವತ ಸಮಾಜಕ್ಕೆ ಸೇರಿದ್ದವರು. ಆ ಸರಸ್ವತಿ ಟೀಚರು ಇದ್ದಿದ್ದರೆ ಏನೆಲ್ಲ ಕಥೆಗಳು ಅವರ ಬಳಿ ಹೇಳಲು ಇರುತ್ತಿತ್ತೋ ಏನೋ. ಸದ್ದಿಲ್ಲದೆ ಚಲಿಸುತ್ತಿದ್ದ ಅರೇಬಿಯನ್ ಸೀ ಹಡಗಲ್ಲಿ ಇದನ್ನೇ ಯೋಚಿಸುತ್ತಿದ್ದೆ. ಸರಸ್ವತಿ ಟೀಚರು ಹೇಳುವ ಹಾಯಿದೋಣಿಯ ಕಥೆಗಳು.

ಕಳೆದ ಕಂತಿನಲ್ಲಿ ನಾನು ಬರೆದಿದ್ದ ಪರೀಕ್ಷಾ ಪರಿವೀಕ್ಷಕರೂ ಹೀಗೇ ಪರಿವೀಕ್ಷಣೆಗಾಗಿ ಕೇರಳದಿಂದ ಬಂದಿದ್ದವರು. ಇಬ್ಬರನ್ನು ಕವರತ್ತಿಯಲ್ಲಿ ಇಳಿದಿದ್ದರು, ಇಬ್ಬರು ಅಗತ್ತಿಯಲ್ಲಿ ಇಳಿದಿದ್ದರು, ಉಳಿದ ಇಬ್ಬರು ನನ್ನೊಡನೆ ಮಿನಿಕಾಯಲ್ಲಿ ಇಳಿದಿದ್ದರು. ಹಡಗಿನ ಡೆಕ್ಕಿನಲ್ಲಿ ಕುಳಿತು ಕಷ್ಟ ಸುಖಗಳನ್ನು ಮಾತನಾಡುತ್ತ ಕುಳಿತವರ ಕಷ್ಟಸುಖಗಳ ತಮಾಷೆಗಳನ್ನು ಆಗಾಗ ಕೇಳಿಸಿಕೊಳ್ಳುತ್ತಾ ನಡುನಡುವೆ ಆಕಾಶದಂತೆ ಸುತ್ತಿಕೊಂಡಿರುವ ಕಡುನೀಲ ಕಡಲನ್ನು ನೋಡುತ್ತಾ, ನಡುನಡುವೆ ದೀರ್ಘ ನಿದ್ದೆ ಹೋಗುತ್ತಾ ಹಡಗಿನಲ್ಲಿ ಹದಿನೆಂಟು ಗಂಟೆಗಳನ್ನು ಕಳೆದು ಬೆಳಗಿನ ಹೊತ್ತು ಮಿನಿಕಾಯ್ ಮುಟ್ಟಿದ್ದೆ. ಲಕ್ಷದ್ವೀಪ ಸಮೂಹದ ಅತಿ ದಕ್ಷಿಣಕ್ಕಿರುವ ದ್ವೀಪ ಮಿನಿಕಾಯ್. ಇಲ್ಲಿಂದ ಮಾಲ್ಡೀವ್ಸ್ ದ್ವೀಪಗಳು ಬಹಳ ಹತ್ತಿರ. ಆದರೆ ಅದು ಬೇರೆ ದೇಶವಾಗುವುದರಿಂದ ಅಲ್ಲಿಗೆ ಹೋಗಬೇಕಾದರೆ ಬೇರೆ ಯಾವುದೇ ದೇಶಗಳಿಗೆ ಹೋಗುವಂತೆ ರಹದಾರಿಯ ಸಮೇತ ಕೊಚ್ಚಿಯಿಂದ ವಿಮಾನದಲ್ಲಿ ಹೋಗಬೇಕು. ಭಾಷೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಮಿನಿಕಾಯ್ ದ್ವೀಪಕ್ಕೂ ಮಾಲ್ಡೀವ್ಸ್ ದೇಶದ ದ್ವೀಪಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಹದಿಮೂರನೆಯ ಶತಮಾನದ ಮೊರಾಕ್ಕೋ ಪ್ರವಾಸಿ ಮತ್ತು ಇಸ್ಲಾಮಿಕ್ ಕಾನೂನು ಪಂಡಿತ ಇಬ್ನ್ ಬತೂತ ಬಂದಿದ್ದಾಗ ಈ ಎಲ್ಲ ದ್ವೀಪಗಳೂ ಒಂದೊಂದು ಹೆಸರಿನಿಂದ ಕರೆಯಲ್ಪಡುತ್ತಿದ್ದುವು. ಆಗ ಆತ ಮಿನಿಕಾಯ್ ದ್ವೀಪಕ್ಕೆ ಇಟ್ಟಿದ್ದ ಹೆಸರು ಸ್ತ್ರೀದ್ವೀಪ ಎಂದು. ಏಕೆಂದರೆ ಈ ದ್ವೀಪದ ಸ್ತ್ರೀಯರು ಸುಂದರಿಯರೂ, ಪಾಕ ಪ್ರವೀಣರೂ, ಗೃಹಕೃತ್ಯಗಳ ಕೋವಿದರೂ, ಧೈರ್ಯವಂತರೂ ಆಗಿದ್ದರು.

(ಫೋಟೋಗಳು: ಅಬ್ದುಲ್‌ ರಶೀದ್)

ಇಬ್ನ್ ಬತೂತ ಗಮನಿಸಿದ ಹಾಗೆ ಆತನಿಗೆ ಅನುಕೂಲಕರವಾಗಿದ್ದ ಇನ್ನೊಂದು ಬಹಳ ಮುಖ್ಯ ಅಂಶವೆಂದರೆ ಈ ದ್ವೀಪದ ಸ್ತ್ರೀಯರು ತಮ್ಮ ಪತಿಯನ್ನು ಬೇಕಾದರೆ ತ್ಯಜಿಸಿಯಾರು ಆದರೆ ತಮ್ಮ ದ್ವೀಪವನ್ನು ತ್ಯಜಿಸಲಾರರು ಎಂಬುದು. ಸದಾ ಪ್ರವಾಸಿಗನಾಗಿ ಲೋಕ ಸುತ್ತುತ್ತಿದ್ದ ಇಬ್ನ್ ಬತೂತನಿಗೆ ಮಡದಿಯರ ಅವಶ್ಯಕತೆ ಇತ್ತು. ಆದರೆ ಅವರನ್ನು ಕಟ್ಟಿಕೊಂಡು ಓಡಾಡುವ ತಾಪತ್ರಯಗಳು ಬೇಕಾಗಿರಲಿಲ್ಲ. ಹಾಗಾಗಿ ಆತ ಈ ದ್ವೀಪದ ಇಬ್ಬರು ಸ್ತ್ರೀಯರನ್ನು ವರಿಸುತ್ತಾನೆ. ಇಬ್ಬರೂ ದ್ವೀಪದ ಎರಡು ಪತಿಷ್ಠಿತ ಕುಟುಂಬಗಳಿಗೆ ಸೇರಿದ ಸ್ತ್ರೀಯರು. ಹಾಗಾಗಿ ಆತನಿಗೆ ಈ ದ್ವೀಪದ ಎರಡೂ ಪತಿಷ್ಠಿತ ಕುಟುಂಬಗಳ ಬೆಂಬಲ ದೊರೆತು ಆ ದ್ವೀಪವನ್ನು ಆಳುತ್ತಿದ್ದ ದೊರೆಗಿಂತ ಬಲಶಾಲಿಯಾಗುತ್ತಾನೆ. ಈ ಅಪಾಯವನ್ನರಿತ ಆ ದೊರೆ ಇಬ್ನ್ ಬತೂತನಿಗೆ ದ್ವೀಪ ಬಿಡುವಂತೆ ಆಜ್ಞಾಪಿಸುತ್ತಾನೆ. ಆತನಿಗೂ ಇದೇ ಬೇಕಾಗಿರುತ್ತದೆ. ದ್ವೀಪವನ್ನೂ ಮಡದಿಯನ್ನೂ ಬಿಟ್ಟು ಸಿಲೋನೊನ ಕಡೆ ಹೊರಡುವ ಹಾಯಿ ದೋಣಿಯನ್ನು ಹತ್ತುತ್ತಾನೆ.

ಓದುಗರಲ್ಲಿ ಒಂದು ವಿನಂತಿ, ಇದನ್ನು ಓದಿದ ಕೂಡಲೇ, ‘ಓ ಹಾಗಾ? ನಾನು ಹೇಳಿಲ್ಲವಾ? ಅವರಲ್ಲಿ ಕಂಡಲ್ಲಿ ಕಂಡಲ್ಲಿ ಮದುವೆಯಾಗುವ ಪದ್ಧತಿ ಇದೆಯಲ್ಲವಾ’ ಎಂದು ಮೂಗಿನ ತುದಿಯಲ್ಲಿ ನಗಲು ಶುರುಮಾಡಬೇಡಿ. ನಾನು ಹೇಳುತ್ತಿರುವುದು ಏಳುನೂರು ವರ್ಷಗಳ ಹಿಂದಿನ ಸಂಗತಿ. ಈಗ ನೀವೇನಾದರೂ ಇಂತಹ ಆಸೆ ಇಟ್ಟುಕೊಂಡು ಬಂದರೆ ಇಲ್ಲಿನ ಸ್ತ್ರೀಯರು ನಿಮ್ಮನ್ನು ಅರಬಿಕಡಲಿನ ನೀರಲ್ಲಿ ಒತ್ತಿ ಮುಳುಗಿಸಿ ದಕ್ಕಯ್ಯ ದಮ್ಮಯ್ಯ ಹೇಳಿಸಿ ಇನ್ನೊಂದು ಹಡಗು ಹತ್ತಿಸಿ ಗಡೀಪಾರು ಮಾಡಿಬಿಡುತ್ತಾರೆ.

ತಮ್ಮ ಪ್ರಯಾಣದ ದಿನಗಳು, ತಮ್ಮ ಪ್ರಯಾಣದ ಭತ್ಯೆ ಇತ್ಯಾದಿಗಳ ಕುರಿತು ಮಾತನಾಡುತ್ತಿದ್ದ ಕೇರಳದ ಆ ಪರಿವೀಕ್ಷಕರಿಗೆ ತಮ್ಮ ಈ ಹಡಗಿನಲ್ಲಿ ಕಳೆದ ದಿನಗಳ ತುಟ್ಟಿಭತ್ಯೆಯನ್ನು ಯಾವ ಕಾಲಂನಲ್ಲಿ ಬರೆಯುವುದು ಎಂಬ ಚಿಂತೆಯಾಗಿತ್ತು. ಹಡಗಿನ ಟಿಕೇಟಿನಲ್ಲಿ ಪ್ರಯಾಣದ ದರ ಇತ್ತು. ಆದರೆ ವಸತಿ ಮತ್ತು ಆಹಾರದ ದರಗಳಿರಲಿಲ್ಲ. ‘ಹಾಗೆಲ್ಲಾ ಭಯ ಪಡಬೇಡ, ಎಲ್ಲದಕ್ಕೂ ನಿಯಮಗಳಿವೆ. ಇದಕ್ಕೂ ಒಂದು ವ್ಯವಸ್ಥೆ ಇರುತ್ತದೆ’ ಎಂದು ಒಬ್ಬನನ್ನು ಇನ್ನೊಬ್ಬ ಸಮಧಾನಿಸುತ್ತಿದ್ದ. ಇನ್ನೊಬ್ಬನಿಗೂ ಅಷ್ಟೇ ಈ ದ್ವೀಪಕ್ಕೆ ಎರಡನೇ ಬಾರಿ ಬರಬೇಕಾಗಿ ಬಂದ ಕೋಪ ಇನ್ನೂ ಆರಿರಲಿಲ್ಲ. ಕಳೆದ ಬಾರಿ ಪರಿವೀಕ್ಷಣೆಗಾಗಿ ಬಂದಿದ್ದಾಗ ಆತನ ಹೊಸತಾಗಿ ಮದುವೆಯಾಗಿದ್ದ ಮಡದಿಯೂ ಬಂದಿದ್ದಳು. ಆಕೆ ಹಡಗನ್ನು ಹತ್ತಿದವಳು ಕೊಚ್ಚಿಯಿಂದ ಮಿನಿಕಾಯ್ ತನಕವೂ ಸಮುದ್ರದ ಅಸ್ವಸ್ಥತೆಗೆ ಸಿಲುಕಿ ಸುದೀರ್ಘವಾದ ವಾಂತಿಮಾಡುತ್ತಾ ಹೈರಾಣಾಗಿ ಹೋಗಿದ್ದಳು. ಪುನಃ ಮಿನಿಕಾಯಿಂದ ಕೊಚ್ಚಿನ್ ತಲುಪುವವರೆಗೂ ಕೂಡಾ. ಅಲ್ಲಿ ಹಡಗು ತಲುಪಿದ ತಕ್ಷಣ ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ಸೇರಿಸಿ ಅಗತ್ಯವಾಗಿದ್ದ ಜೀವದ್ರವಗಳನ್ನು ಡ್ರಿಪ್ ಮೂಲಕ ಹಾಯಿಸಿ ಬದುಕಿಸಿದ್ದರು. ಆಗ ಅವಳು ಗರ್ಭ ಧರಿಸಿರುವುದೂ ಗೊತ್ತಾಗಿತ್ತಂತೆ. ಈಗ ಆ ಮಗುವಿಗೆ ಆರು ತಿಂಗಳು. ಎಲ್ಲ ಕಡೆಯೂ ಕೋವಿಡ್ ಬೇರೆ. ಈ ಕಡಲ ನಡುವೆ ೩೬ ಗಂಟೆ ಫೋನೂ ಇಲ್ಲದೆ ಏನೂ ಇಲ್ಲದೆ ತಲೆ ಕೆಟ್ಟು ಹೋಗಿತ್ತು. ಅದರ ನಡುವೆ ಈ ಒಬ್ಬನ ಪ್ರಯಾಣಭತ್ಯೆಯ ಚಿಂತೆ. ಅವರಿಗೆ ಗೊತ್ತಿಲ್ಲದೇ ಅವರ ಕಥೆಗಳನ್ನು ಕೇಳಿಸಿಕೊಳ್ಳುತ್ತಾ ನಾನೂ ಅದರಲ್ಲಿ ಒಳಗೊಂಡು ನನ್ನಲ್ಲೂ ಹಲವು ಕಳವಳಗಳು ಶುರುವಾಗ ತೊಡಗಿದ್ದವು.

ದೋಣಿ ಸ್ಪರ್ಧೆಯ ಔತಣಕೂಟದ ನೆಪದಲ್ಲಿ ಹೂಹಕ್ಕಿಯೊಂದನ್ನು ಹುಡುಕುತ್ತಾ ಹಡಗು ಹತ್ತಿದವನು ಈಗ ಕೇರಳದ ಇಬ್ಬರು ಪರಿವೀಕ್ಷಕರ ದೈನಿಕದ ಸಂಕಟದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವುದು ಸರಿ ಅಲ್ಲ ಅನಿಸುತ್ತಿತ್ತು. ಬೆಳಗೇ ಎದ್ದವನು ಮಿನಿಕಾಯ್ ಕಾಣುತ್ತಿದೆಯೇ ಎಂದು ಹಡಗಿನ ಡೆಕ್ಕಿನಲ್ಲಿ ನಿಂತು ದೂರಕ್ಕೆ ಕಣ್ಣು ಹಾಯಿಸುತ್ತಿದ್ದೆ. ಅಂದುಕೊಂಡ ಹಾಗೇ ದೂರದಲ್ಲಿ ಕಡು ನೀಲ ಕಡಲ ಮೇಲೆ ಏಳುತ್ತಿರುವ ಸೂರ್ಯನ ಅಡಿಯಲ್ಲಿ ಹಸುರಾಗಿ ಹೊಳೆಯುತ್ತಿರುವ ಪುಟ್ಟದೊಂದು ನೆಲ. ಇನ್ನೊಂದು ಮರಕತ ದ್ವೀಪ ಅಂದುಕೊಂಡೆ. ಮುತ್ತು ಮತ್ತು ಹವಳಗಳು ಕಡಲ ಒಳಗಿರುತ್ತವೆ. ಆದರೆ ಈ ದ್ವೀಪಗಳಿಗೆ ಮರಕತ ದ್ವೀಪಗಳು ಅಂತ ಯಾಕೆ ಕರೆಯುತ್ತಾರೆ ಎಂದು ಗೊತ್ತಿರಲಿಲ್ಲ. ಆಮೇಲೆ ಇಲ್ಲಿನ ಸಂಸ್ಕೃತ ಪಂಡಿತರೊಬ್ಬರು ಬಿಡಿಸಿ ಹೇಳಿದ್ದರು.

ಮರಕತ ಅಂದರೆ ಪಚ್ಚೆ. ಅಂದರೆ ಹಸಿರು. ಆಕಾಶದಿಂದ ನೋಡುವಾಗ ಈ ದ್ವೀಪಗಳು ಪಚ್ಚೆಯ ಆಭರಣಗಳಂತೆ ಕಾಣಿಸುತ್ತವೆಯಂತೆ. ಒಂದು ದ್ವೀಪ ಅಂದರೆ ಒಂದು ದೊಡ್ಡ ತೆಂಗಿನ ತೋಪು. ಆ ತೋಪಿನ ಹಸಿರು ಚಾದರೊಳಗೆ ಕಾಣಿಸದೆ ಬದುಕುವ ಒಂದು ದೊಡ್ಡ ಜನಸಮೂಹ. ನೀಲ ಕಡಲಲ್ಲಿ ಕಾಣುವುದು ಚಲಿಸುವ ದೋಣಿಗಳು ಮತ್ತು ಕಟ್ಟಿ ಹಾಕಿರುವ ದೋಣಿಗಳು ಮಾತ್ರ. ಕಡಲಿನಿಂದಲೂ ಕಾಣಿಸುವುದು ಹೀಗೆಯೇ. ಕಡಲ ಮಧ್ಯೆ ಮಲಗಿರುವ ಒಂದು ಪಚ್ಚೆಯ ಹಾರದ ಹಾಗಿರುವ ಈ ದ್ವೀಪಗಳು. ಅಂತಹ ದ್ವೀಪಗಳಲ್ಲೇ ಅತಿ ಸುಂದರ ದ್ವೀಪ ಮಿನಿಕಾಯ್. ಬೆಳಗಿನ ಹೊತ್ತಲ್ಲಿ ದೂರಕ್ಕೆ ಸೂರ್ಯನ ಬೆಳಕಿಗೆ ಎಚ್ಚರಾಗಿ ಮೈಮುರಿದುಕೊಳ್ಳುತ್ತಿರುವಂತೆ ಕಾಣಿಸುತ್ತಿತ್ತು.

6. ಕಾಕ ಸಾಮ್ರಾಜ್ಯದಲ್ಲಿ ಹೂಹಕ್ಕಿಗಳು ಇರಬಲ್ಲುವೇ?

ನಿನ್ನೆಯ ಮಿನಿಕಾಯ್ ಸರಣಿಯಲ್ಲಿ ಇಬ್ನ್ ಬತೂತನ ಎರಡು ವಿವಾಹಗಳ ಕುರಿತು ಓದಿದ ಗೆಳೆಯ ‘ನಿನಗೂ ಮನಸು ಆ ಕಡೆ ಕೊಂಚ ವಾಲಲಿಲ್ಲವೇ’ ಎಂದು ಕೇಳಿದರು. ಅದೆಲ್ಲಿಂದ ನೆನಪಾಯಿತೋ ಗೊತ್ತಿಲ್ಲ, ಸುಮಾರು ಮೂರು ದಶಕಗಳಿಗಿಂತಲೂ ಹಿಂದೆ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಓದಿಕೊಂಡಿದ್ದ ಟಿ ಎಸ್ ಎಲಿಯಟ್ಟನ ಕವಿತೆಯೊಂದರ ಎಪಿಗ್ರಾಪನ್ನು ಆತನಿಗೇ ತಿರುಗಿ ಉರು ಹೊಡೆದೆ. ಎಲಿಯಟ್ ತನ್ನ ಕವಿತೆಯಲ್ಲಿ ರಾಣಿ ಎಲಿಜಬೆತಳ ಕಾಲದ ಹೆಸರಾಂತ ನಾಟಕಕಾರ ಕ್ರಿಸ್ಟೋಫರ್ ಮಾರ್ಲೋನ ನಾಟಕದ ಸಾಲೊಂದನ್ನು ಹಣೆಬರಹವಾಗಿ ಬಳಸಿಕೊಳ್ಳುತ್ತಾನೆ. “Thou hast committed – / Fornication: but that was in another country, / And besides, the wench is dead.” ಆ ನಾಟಕದಲ್ಲಿ ಒಬ್ಬಾತ ಇನ್ನೊಬ್ಬನನ್ನು ಹಾದರ ಮಾಡಿರುವುದಾಗಿ ಆರೋಪಿಸುತ್ತಾನೆ. ಆರೋಪಿಸಿಕೊಂಡಾತ, ‘ಹಾದರ ಮಾಡಿರುವುದು ಹೌದು’ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ ಅದಕ್ಕೆ ಒಂದು ಷರಾ ಸೇರಿಸುತ್ತಾನೆ. ‘ಆದರೆ ಅದು ಇನ್ನೊಂದು ದೇಶದಲ್ಲಾಗಿತ್ತು/ಅದೂ ಅಲ್ಲದೆ ಆ ಹಾದರಗಿತ್ತಿಯೂ ಈಗ ಬದುಕಿಲ್ಲ. ಯೌವನದ ದಿನಗಳಲ್ಲಿ ನಾವು ಎಲಿಯಟ್ಟನ ಕವಿತೆಗಿಂತ, ಕವಿತೆಯ ಮೇಲ್ಗಡೆ ಬಲ ತುದಿಯಲ್ಲಿದ್ದ ಈ ನಾಟಕೀಯ ಸಾಲುಗಳನ್ನು ಹೆಚ್ಚು ಇಷ್ಟ ಪಟ್ಟಿದ್ದೆವು ಮತ್ತು ಆಕಾಲದಲ್ಲಿ ಅದು ಕವಿತೆಗಿಂತ ಹೆಚ್ಚು ಸಮಂಜಸವಾಗಿದ್ದವು.


ಕಣ್ಣಿಗೆ ಕಂಡ ಸುಂದರಿಯರೆಲ್ಲರೂ ನಮ್ಮವರಾಗಬೇಕೆಂಬ ಬಯಕೆ. ಆದರೆ ಈಗ ಸುಂದರಿಯರು ಎಂದರೆ ಬಯಕೆಗಿಂತ ಭಯವೇ ಹೆಚ್ಚು ಎಂಬುದು ನನ್ನ ನಂಬಿಕೆ ಎಂದು ಆತನಿಗೆ ತಿಳಿಸುವುದು ನನ್ನ ಉದ್ದೇಶವಾಗಿತ್ತು. ಅದೂ ಅಲ್ಲದೆ ಎಲ್ಲವನ್ನೂ ಒಪ್ಪಿಕೊಳ್ಳುವ ವೀರಾವೇಶದ ಸಮಯವೂ ಇದಲ್ಲವಲ್ಲ.

ಈ ನಡುವೆ ಮಿನಿಕಾಯ್ ನಿಂದ ಹಾಡು ಹೇಳಲು ಬಂದ ಡೋಲುವಾದಕ ಮಿತ್ರನ ಜಂಜಡಗಳೂ ಹೆಚ್ಚಾಗಿತ್ತು. ರಂಜಾನ್ ಉಪವಾಸದ ಸಮಯದ ಆಹಾರದ ಹೊಂದಾಣಿಕೆಯಿಂದಾಗಿ ಆತನಿಗೆ ವಾಯುಪ್ರಕೋಪದ ಸಮಸ್ಯೆಗಳು ಕಾಣಿಸಿಕೊಂಡು ಆತ ಇಲ್ಲಿರುವ ಸರಕಾರೀ ಆಸ್ಪತ್ರೆಯೊಂದಕ್ಕೆ ತೆರಳಿದರೆ ಆತನ ಗುರುತಿನ ಚೀಟಿಯೂ ಆಧಾರದ ಪತ್ರಗಳೂ ಇಲ್ಲದೆ ರೋಗಿಯಾಗಿ ನೋಂದಾವಣೆ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ಮಧ್ಯಪ್ರವೇಶಿಸಿ ಆತನ ದ್ವೀಪಕ್ಕೆ ದೂರವಾಣಿ ಮಾಡಿ ಅಲ್ಲಿನ ವೈದ್ಯರೊಂದಿಗೆ ಇಲ್ಲಿನ ವೈದ್ಯರ ಸಂಪರ್ಕ ಕಲ್ಪಿಸಿ ಚಿಕಿತ್ಸೆ ಕೊಡಿಸಿದ್ದೂ ಆಯಿತು. ಈಗ ಆತನಿಗೆ ತನ್ನ ದ್ವೀಪಕ್ಕೆ ಮರಳಬೇಕೆನಿಸಿದೆ. ಆದರೆ ಹತ್ತಿರದ ದಿನಗಳಲ್ಲಿ ಎಲ್ಲೂ ಹಡಗಿನ ವೇಳಾ ಪಟ್ಟಿಯಿಲ್ಲ. ಅದೂ ಅಲ್ಲದೆ ಕೊರೋನಾ ಕಾರಣಗಳಿಂದಾಗಿ ದ್ವೀಪಗಳಿಂದ ದ್ವೀಪಕ್ಕೆ ಸಂಚಾರ ನಿರ್ಬಂಧಗಳನ್ನೂ ಹೇರಲಾಗಿದೆ.

(ಫೋಟೋಗಳು: ಅಬ್ದುಲ್‌ ರಶೀದ್)

ಮದುವೆಯಾಗಿ ವಿಚ್ಚೇದಿತಳಾಗಿದ್ದ ಪತ್ನಿಯ ಮರುಮದುವೆಯ ಕೋರಿಕೆಯಿಂದಾಗಿ ರೋಸಿ ಹೋಗಿ ಇಲ್ಲಿಗೆ ಬಂದಿರುವ ಆತನಿಗೆ ಈಗ ಅಲ್ಲೇ ಇದ್ದಿದ್ದರೆ ಇದಕ್ಕಿಂತ ಸುಖವಾಗಿರುತ್ತಿತ್ತು ಎಂದು ಅನಿಸತೊಡಗಿದೆ. ಆದರೆ ಅನಿಸಿದಾಗ ತಿರುಗಿ ಹೊರಡುವುದು ಇಲ್ಲಿ ಸಾಧ್ಯವಾಗದ ಮಾತು. ಹಾಗಾಗಿ ಹಡಗಿನ ವೇಳಾಪಟ್ಟಿಯನ್ನೂ ಕಾಯುತ್ತಾ ಆತನೂ ಆತನ ಸಣ್ಣಪುಟ್ಟ ಅಗತ್ಯಗಳಿಗೆ ಸಹಾಯ ಮಾಡುತ್ತಾ ನಾನೂ ಕಾಲಕಳೆಯುತ್ತಿದ್ದೇವೆ. ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದೇವೆ. ನಮ್ಮಿಬ್ಬರಿಗೂ ಸಮಾನವಾದ ಕೆಲವು ಕಷ್ಟಸುಖಗಳು ಇರುವ ಹಾಗೆ ಅನಿಸುತ್ತಿದೆ.

ಇರಲಿ ಬಿಡಿ. ನಿನ್ನೆಯ ಕಂತಿನಲ್ಲಿ ನಾನಿರುವ ದ್ವೀಪದಿಂದ ಹಡಗು ಹತ್ತಿ ಮಿನಿಕಾಯ್ ತಲುಪಿದ ಕುರಿತು ಬರೆದಿದ್ದೆ. ಬೆಳಗಿನ ಬಿಸಿಲಲ್ಲಿ ಹೊಳೆಯುತ್ತಿರುವ ಮಿನಿಕಾಯ್ ಎಂಬ ಮರಕತ ದ್ವೀಪ ಹತ್ತಿರವಾಗುತ್ತಿದ್ದಂತೆ ದ್ವೀಪದ ತಲೆಯ ಮೇಲೆ ಒಂದಿಷ್ಟು ಕಾರ್ಮೋಡಗಳು ಸೂರ್ಯನ ಮುಖಕ್ಕೆ ಕೊಡೆ ಹಿಡಿದು ನಿಂತಿದ್ದವು. ಜೊತೆಗೆ ಸಣ್ಣಗಿನ ಎರಚಲು ಮಳೆ. ಕಡಲಿನಲ್ಲಿ ದ್ವೀಪದೊಳಗೆ ಮಳೆಯ ಚಲನೆಯನ್ನು ನೋಡುವುದು ಬಹಳ ಮನೋಹರವಾದ ದೃಶ್ಯ. ನೀವು ವಿಶಾಲವಾದ ಬಯಲೊಂದರಲ್ಲಿ ಕುಳಿತು ನಿಮ್ಮ ಕಡೆ ದಾವಿಸಿ ಬರುತ್ತಿರುವ ಒಬ್ಬಳು ಗೆಳತಿ ಅಥವಾ ಒಂದು ವೈರಿಪಡೆಯನ್ನು ನೋಡುತ್ತಿರುವ ಹಾಗೆ ಕಲ್ಪಿಸಿಕೊಳ್ಳಿ. ಹತ್ತಿರವಾಗುತ್ತಾ ಅವರು ನಿಚ್ಚಳವಾಗುತ್ತಾ ಹೋಗುತ್ತಾರೆ. ಮಳೆ ಕೆಲವೊಮ್ಮೆ ನಿಮ್ಮ ಹತ್ತಿರಕ್ಕೂ ಬಾರದೆ ಅಲ್ಲೇ ಸುರಿಸಿ ಹತ್ತಿರವೂ ಬಾರದೆ ಅಲ್ಲೇ ಅಂತರ್ಧಾನವಾಗುತ್ತದೆ. ಅಥವಾ ನಿಮ್ಮ ಹತ್ತಿರ ಬಂದೂ ಸುರಿಸದೆ ಇನ್ನಷ್ಟು ಮುಂದೆ ಹೋಗಿ ಸುರಿಸುತ್ತದೆ. ನಾವು ಶಾಲೆಯಲ್ಲಿ ಕಲಿತ ಹಾಗೆ ಇಲ್ಲಿ ತೇಲಿ ಬರುವ ಮೋಡಗಳು ಪರ್ವತಶ್ರೇಣಿಗಳಿಗೆ ಡಿಕ್ಕಿ ಹೊಡೆದು ಮಳೆಯಾಗಿ ಸುರಿಯುವುದಿಲ್ಲ, ಬದಲಾಗಿ ತಮ್ಮ ಭಾರಕ್ಕೆ ತಾವೇ ನಲುಗಿ ದೊಪ್ಪನೆ ತಪ್ಪಲೆಯೊಳಗಿನ ನೀರಂತೆ ಸುರಿದು ತಾವು ಇದುವರೆಗೆ ಇರಲೇ ಇಲ್ಲವೇನೋ ಎಂಬ ಹಾಗೆ ಮಾಯವಾಗಿರುತ್ತದೆ. ದ್ವೀಪದ ಒಳಗೂ ಹಾಗೇ. ಬಿಸಿಲಲ್ಲಿ ಬೆಳಗುತ್ತಿದ್ದ ಆಕಾಶವೇನಾದರೂ ಮಂಕಾಗಿದ್ದರೆ ಮನೆಯಿಂದ ಹೊರಬಂದು ಆಕಾಶಕ್ಕೆ ತಲೆ ಎತ್ತಿದರೆ ಕಪ್ಪಗಿನ ಮೇಘವೊಂದು ಕರಿಯ ಬೆಕ್ಕಿನ ಹಾಗೆ ಮೇಲಿನ ಮೂಲೆಯೊಂದರಿಂದ ನಿಮ್ಮನ್ನು ನೋಡುತ್ತಿರುತ್ತದೆ. ಸ್ವಲ್ಪ ಹೊತ್ತಿಗೆ ಮಳೆ ಸುರಿದು ಮತ್ತೆ ಆಕಾಶ ಬೆಳಗತೊಡಗುತ್ತದೆ. ಮಳೆ ಸುರಿಯದೆಯೂ ಆಕಾಶ ಬೆಳಗಿದರೆ ಮಳೆ ಅಲ್ಲೇ ಹತ್ತಿರ ಕಡಲಲ್ಲಿ ಸುರಿದುಹೋಗಿದೆ ಎಂದು ಅರ್ಥ. ಹಾಗಾದಾಗ ಇಲ್ಲೇ ಕಾಲು ಮೈಲು ದೂರವಿರುವ ಕಡಲನ್ನು ಓಡಿಹೋಗಿ ನೋಡಿ ಬರುತ್ತೇನೆ. ಮಳೆ ಸುರಿದ ನಂತರದ ಕಡಲು ದಿವ್ಯವಾಗಿ ಹೊಳೆಯುತ್ತಿರುತ್ತದೆ. ಒಂದು ಕಾಲಾತೀತ ಅಮಲಿನ ಹಾಗೆ.

ಹಾಗೇ ಹೊಳೆಯಲು ಕಾಯುತ್ತಿದ್ದ ಕಡಲಿನ ಮುಂದೆ ಕಾಣಿಸುತ್ತಿದ್ದ ಮಿನಿಕಾಯ್, ಅದರ ಶಿರದ ಮೇಲೆ ನಿಂತಿರುವ ಒಂದಿಷ್ಟು ಶ್ಯಾಮ ಮೇಘಗಳು. ಬೀಳಲಿರುವ ಮಳೆಗೆ ಮುನ್ನುಡಿ ಬರೆಯುತ್ತಿರುವ ಎರಚಲು ಮಳೆ. ಹಡಗು ನಿಧಾನಕ್ಕೆ ಪಡುವಣದ ಜೆಟ್ಟಿಯಲ್ಲಿ ಲಂಗರು ಹಾಕತೊಡಗಿತು. ಜೆಟ್ಟಿಗಳಲ್ಲಿ ಹಡಗು ಲಂಗರು ಹಾಕುವುದನ್ನು ನೋಡುವುದು ಹೊಸಬರಿಗೆ ಬಹಳ ಕುತೂಹಲದ ವಿಷಯ, ಆದರೆ ಹಡಗು ಯಾತ್ರೆಯನ್ನೇ ಹವ್ಯಾಸವಾಗಿರಿಸಿಕೊಂಡಿರುವ ನನ್ನಂತಹವರಿಗೆ ಅದೊಂದು ಗಜಪ್ರಸವದ ಹಾಗೆ. ಕಾಯುತ್ತ ನಿಲ್ಲುವುದು ಕೊಂಚ ನೀರಸ. ಅದೂ ಅಲ್ಲದೆ ಮಿನಿಕಾಯ್ ದ್ವೀಪ ಬೇರೆ ದ್ವೀಪಗಳ ಹಾಗಲ್ಲ. ಬೇರೆ ದ್ವೀಪಗಳಾದರೆ ಹಡಗು ಜೆಟ್ಟಿ ಎಂಬುದು ಬಹಳ ಜನ ಜಂಗುಳಿಯ ತಾಣ. ನಮ್ಮ ಹೋಬಳಿಗಳ ಬಸ್ಸು ನಿಲ್ದಾಣಗಳ ಹಾಗೆ. ಕೆಲಸವಿಲ್ಲದಿದ್ದರೂ ಜನ ತುಂಬಿಕೊಂಡಿರುತ್ತಾರೆ. ಆದರೆ ಇಲ್ಲಿ ಅನವಶ್ಯಕ ಆತುರವಿಲ್ಲ. ಸುಮ್ಮನೇ ಯಾರೂ ತಿರುಗಾಡುವುದಿಲ್ಲ, ಇವರ ಹನ್ನೊಂದು ಹಳ್ಳಿಗಳಾದರೋ ಯಾರಿಗೂ ಕಾಣಿಸದ ಹಾಗೆ ಉತ್ತರಕ್ಕೆ ತೆಂಗಿನ ತೋಪುಗಳ ಅಡಿಯಲ್ಲಿ ಪುಟ್ಟಪುಟ್ಟ ಅಗ್ರಹಾರಗಳಂತಹ ಹಳ್ಳಿಗಳು. ಜೊತೆಗೆ ಎರಚಲು ಮಳೆ ಬೇರೆ. ‘ಹೋ ಇಲ್ಲಿ ಎಷ್ಟು ಕಾಗೆಗಳು!’ ಕೇರಳದ ಪರಿವೀಕ್ಷಕ ಅಚ್ಚರಿಯಿಂದ ದನಿ ಎತ್ತಿದ. ಮಳೆಯ ಮೋಡವನ್ನು ನೋಡುತ್ತಾ ನಿಂತಿದ್ದ ನನಗೆ ಈ ಕಾಕ ಸಮೂಹದ ಸದ್ದುಗಳು ಗೊತ್ತಾಗಿಯೇ ಇರಲಿಲ್ಲ.

ದ್ವೀಪದ ಮೇಲೆ ಸುರಿಯಲಿರುವ ಮಳೆಯಿಂದ ರಕ್ಷಿಸಿಕೊಳ್ಳಲು ತಾಲೀಮು ನಡೆಸುತ್ತಿರುವ ಕಾಗೆಗಳ ವಾಯುಸೇನೆ. ನನ್ನ ಮುಖ ಕಪ್ಪಿಟ್ಟಿತು. ಕಾಗೆಗಳಿರುವಲ್ಲಿ ನಾನು ಹುಡುಕಿ ಬಂದಿರುವ ಹೂಹಕ್ಕಿಗಳಿರುವುದಿಲ್ಲ ಎಂಬ ಮುನ್ಸೂಚನೆ ಮಿದುಳೊಳಗೆ ಹಾದು ಹೋಗಿ ಪೆಚ್ಚೆನಿಸಿತು. ಲಂಗರು ಹಾಕುವುದನ್ನು ಮುಗಿಸಿದ ಹಡಗಿನಿಂದ ಹೊರಗಿಳಿಯಲು ಹಾಕುವ ಏಣಿಯನ್ನೂ ಹಾಕಲಾಯಿತು. ನಾನಾದರೋ ಹಾಗೆ ಇಳಿಯುವ ಹಾಗಿರಲಿಲ್ಲ. ಹಡಗಿನ ಸರಳೊಂದಕ್ಕೆ ಆಡನ್ನು ಕಟ್ಟಿ ಹಾಕಿದ ಹಾಗೆ ಕಟ್ಟಿ ನಿಲ್ಲಿಸಿದ್ದ ನನ್ನ ಸೈಕಲನ್ನೂ ಇಳಿಸಬೇಕಿತ್ತು.

7.ಸೈಕಲ್ಲಿನ ಜೊತೆಗಿದ್ದ ಲೇಡೀಸು ಸೈಕಲ್ಲು!

ಹಡಗಿನ ಸರಳಿಗೆ ಆಡಿನಂತೆ ಕಟ್ಟಿಹಾಕಿದ್ದ ಸೈಕಲನ್ನು ಅಲ್ಲಿಂದ ಬಿಚ್ಚಿ ಕೆಳಗಿಳಿಸಲು ಹೊರಟವನಿಗೆ ಸಖೇದಾಶ್ಚರ್ಯ ಚಕಿತನಾಗುವಂತೆ ನನ್ನ ದ್ವೀಪವಾಸದ ಹದಿನೆಂಟು ತಿಂಗಳುಗಳ ಸಂಗಾತಿ ಸೈಕಲ್ಲಿಗೆ ಗಂಟುಬಿದ್ದವಳಂತೆ ಇನ್ನೊಂದು ಲೇಡೀಸು ಸೈಕಲ್ಲು ಅಂಟಿಕೊಂಡಿತ್ತು, ಅದನ್ನೂ ಸುಂದರವಾದ ಹಗ್ಗದಿಂದ ಹಡಗಿನ ಸರಳಿಗೆ ಬಿಗಿದು ಕಟ್ಟಲಾಗಿತ್ತು. ನನಗೆ ಅರ್ಥವಾಗಲಿಲ್ಲ. ಹತ್ತುವಾಗ ಒಂಟಿಯಾಗಿದ್ದ ನನ್ನ ಈ ಪ್ರೀತಿಪಾತ್ರ ಸೈಕಲ್ಲಿಗೆ ಈ ಯಾತ್ರೆಯ ನಡುವಲ್ಲಿ ಈ ಲೇಡೀ ಬರ್ಡ್ ಸೈಕಲ್ಲಿನ ಸಂಗ ಒದಗಿದ್ದು ಹೇಗೆ? ಈ ಹದಿನೆಂಟು ತಿಂಗಳುಗಳ ದ್ವೀಪವಾಸದಲ್ಲಿ ನಾನು ಅರ್ಧ ಬೇಕೆಂದು ಇನ್ನರ್ಧ ಅನಿವಾರ್ಯವಾಗಿ ಒಂಟಿಯಾಗಿರುವಾಗ ನನ್ನ ಈ ಸೈಕಲ್ಲಿನ ಒಂಟಿತನ ನೀಗಿಸುವ ಈ ಲೇಡೀಸು ಸೈಕಲ್ಲು ಅದು ಯಾವ ಮಾಯದಲ್ಲಿ ಈ ಹಡಗನ್ನು ಹೊಕ್ಕಿತು. ಹೀಗೆ ಯೋಚಿಸುತ್ತಲೇ ಸೈಕಲ್ಲಿಗೆ ಬಿಗಿದಿದ್ದ ನೈಲಾನಿನ ಹಗ್ಗವನ್ನು ಬಿಚ್ಚುತ್ತಿದ್ದಂತೆಯೆ ಪುರುಷಾಕಾರವೊಂದು ಅಲ್ಲಿ ಬಂದು ನಿಂತಿತು. ಪಕ್ಕದಲ್ಲಿ ನಿಂತಿರುವ ಲೇಡಿ ಬರ್ಡ್ ಅವರದಾಗಿತ್ತು.


ಅವರು ಕೇರಳದ ಎರ್ನಾಕುಲಂ ಬಳಿಯ ಪಟ್ಟಣವೊಂದರಲ್ಲಿ ಆಯುರ್ವೇದ ಪಂಡಿತರಾಗಿದ್ದರು. ಪ್ರಸೂತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದ ಅವರ ಮಗಳಿಗೆ ಅಗತ್ತಿ ದ್ವೀಪದಲ್ಲಿರುವ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯೆಯಾಗಿ ನೇಮಕವಾಗಿತ್ತು. ಪ್ರೀತಿಯಿಂದ ಬೆಳಸಿದ ಒಬ್ಬಳೇ ಮಗಳು. ದ್ವೀಪದಲ್ಲಿ ಒಂಟಿಯಾಗಿರುವುದು ಬೇಡ ಎಂದು ತಾವೂ ಹೊರಟು ಬಂದಿದ್ದರು. ಆದರೆ ಮಗಳು ಹಗಲು ಇರುಳು ಆಸ್ಪತ್ರೆಯಲ್ಲಿರುವಾಗ ಇವರಿಗೆ ಒಬ್ಬರಿಗೇ ಅಲ್ಲಿನ ಏಕತಾನತೆಯ ಬದುಕು ರೋಸಿ ಹೋಗಿತ್ತು. ಅದಕ್ಕಾಗಿ ಒಂದು ಲೇಡೀಸ್ ಸೈಕಲನ್ನು ಕೊಂಡು ದ್ವೀಪದಲ್ಲಿ ಓಡಾಡಿಕೊಂಡಿರಬಹುದು ಎಂದು. ಲೇಡೀಸು ಸೈಕಲ್ಲು ಕೊಂಡದ್ದು ಅಲ್ಲಿಂದ ಬಿಟ್ಟು ಬರುವಾಗ ಮಗಳಿಗೆ ಉಪಯೋಗಕ್ಕೆ ಬರಬಹುದು ಎಂದು. ಆದರೆ ಬಿಟ್ಟು ಬರುವಾಗ ಮಗಳು ಇಲ್ಲಿ ಸೈಕಲ್ಲು ಬೇಡ ಮಳೆಗಾಳಿಯಲ್ಲಿ ತುಕ್ಕು ಹಿಡಿಯುತ್ತದೆ ಎಂದಿದ್ದಳು. ಇವರಿಗೂ ಯಾಕೋ ಮೂರು ತಿಂಗಳುಗಳ ಒಡನಾಡಿಯಾದ ಆ ಲೇಡೀ ಬರ್ಡಿನ ಮೇಲೆ ಮೋಹ ಉಂಟಾಗಿತ್ತು. ಅದಕ್ಕಾಗಿಯೇ ಅಗತ್ತಿಯಿಂದ ಹಡಗು ಹತ್ತುವಾಗ ಅದನ್ನೂ ಹತ್ತಿಸಿಕೊಂಡು ನನ್ನ ಸೈಕಲ್ಲಿನ ಬಳಿಯೇ ಕಟ್ಟಿ ಹಾಕಿದ್ದರು. ಯಾಕೋ ಪಿಚ್ಚೆನಿಸಿತು. ಒಂದು ಇರುಳಾದರೂ ನನ್ನ ಸೈಕಲಿನ ಜೊತೆಗಿದ್ದ ಲೇಡೀ ಬರ್ಡು. ಅತಿಯಾದ ವ್ಯಾಮೋಹ ಸರಿಯಲ್ಲ ಮಗನೇ ಎಂದು ನನ್ನ ಸೈಕಲನ್ನು ಹಗ್ಗದಿಂದ ಬಿಡಿಸಿಕೊಂಡು ಆಯುರ್ವೇದ ಪಂಡಿತರಿಗೆ ಪ್ರಣಾಮ ಸಲ್ಲಿಸಿ ಎರಡೂ ಕೈಗಳಿಂದ ಸೈಕಲ್ಲನ್ನು ಮಗುವಿನಂತೆ ಎತ್ತಿಕೊಂಡು ಹಡಗಿನ ಅಲ್ಲಾಡುವ ಏಣಿಯಿಳಿದು ಕೆಳಗೆ ಬಂದೆ. ಹನಿಯುತ್ತಿದ್ದ ಎರಚಲು ಮಳೆಯೂ ನಿಂತು ಆಕಾಶದಲ್ಲಿ ಹೊಸತಾದ ಮಳೆಯ ಮೋಡಗಳೂ ನಿಂತುಕೊಂಡಿದ್ದವು.

ದ್ವೀಪದ ರಸ್ತೆಗಳಲ್ಲಿ ಸೈಕಲ್ಲು ಹೊಡೆಯುವುದು ಒಂದು ಆಹ್ಲಾದಕಾರಿ ಅನುಭವ. ತಲೆಯ ಮೇಲೆ ತೆಂಗಿನ ಮರಗಳ ಚಾದರ, ಸುತ್ತಲಿಂದ ಸುಳಿದು ಬರುವ ಕಡಲ ತಂಗಾಳಿ, ಏರು ತಗ್ಗುಗಳಿಲ್ಲದೆ ಕಡಲಿಗೆ ಸಮಾನಾಂತರವಾಗಿ ಸುತ್ತುಹೊಡೆಯುವ ಕಾಂಕ್ರೀಟು ರಸ್ತೆ. ಬಹುತೇಕ ಎಲ್ಲ ದ್ವೀಪಗಳಲ್ಲೂ ಒಂದು ಉದ್ದದ್ದ ಬೀಚು ರಸ್ತೆ ಇರುತ್ತದೆ. ಈ ರಸ್ತೆಯನ್ನು ಹಿಡಕೊಂಡು ಹೊರಟರೆ ದ್ವೀಪದ ಅರ್ಧ ಸುತ್ತಾದರೂ ಸುತ್ತಿದಂತೆ ಆಗುತ್ತದೆ, ಇನ್ನೊಂದು ಲಗೂನು ರಸ್ತೆ. ಈ ರಸ್ತೆ ಹಿಡಿದರೆ ಇನ್ನೊಂದರ್ಧ. ಈ ರಸ್ತೆಗಳ ನಡುವೆ ಜೇಡರ ಬಲೆಯಂತೆ ಹೆಣೆದಿರುವ ರಸ್ತೆಗಳನ್ನು ಹೊಕ್ಕು ದಾರಿ ತಪ್ಪುವುದೂ ಮಜಾ ಕೊಡುತ್ತದೆ. ಏನು ದಾರಿ ತಪ್ಪಿದರೂ ಕೊನೆಗೆ ಈ ತಪ್ಪಿದ ದಾರಿ ನಿಮ್ಮನ್ನು ಬೀಚು ರಸ್ತೆಗೋ ಲಗೂನು ರಸ್ತೆಗೋ ತಂದುಬಿಡುತ್ತದೆ. ದಾರಿ ತಪ್ಪಿ ಕಂಗಾಲಾಗಲು ಇದೇನೂ ಅಡವಿಯಲ್ಲವಲ್ಲ. ಸರಾಸರಿ ಆರು ಕಿಲೋಮೀಟರ್ ಉದ್ದ ಎರಡು ಕಿಲೋಮೀಟರ್ ಅಗಲ ಇರುವ ಬಹುತೇಕ ದ್ವೀಪಗಳು. ಎಷ್ಟು ದಾರಿ ತಪ್ಪಿದರೂ ಯಾವುದಾದರೂ ಒಂದು ದಾರಿ ಸಿಗುವುದು ಖಚಿತ ಮತ್ತು ಅನಿವಾರ್ಯ. ಹಾಗಾಗಿ ನಾನು ಜೆಟ್ಟಿಯಲ್ಲಿ ಸೈಕಲ್ಲು ಹತ್ತಿದವನೇ ಬೆನ್ನಿಗೆ ಭಾರದ ಹೆಗಲು ಚೀಲವನ್ನೂ, ಹೊಟ್ಟೆಗೆ ಅಷ್ಟೇ ತೂಕದ ಕ್ಯಾಮರಾ ಚೀಲವನ್ನೂ ತೂಗಿಸಿಕೊಂಡು ಯಾರಲ್ಲೂ ದಾರಿ ಕೇಳದೆ ಸಪಾಟಾದ ಬೀಚು ರಸ್ತೆಯಲ್ಲಿ ಸಾಗತೊಡಗಿದೆ. ಯಾಕೋ ಸಣ್ಣಗೆ ನಗು ಬರುತ್ತಿತ್ತು. ಸಹಸ್ರ ಸಾವಿರ ಚದರ ಮೈಲು ವಿಸ್ತೀರ್ಣವನ್ನೂ, ಕೋಟಿ ಕೋಟ್ಯಾಂತರ ಜೀವಿಗಳನ್ನು ಹೊತ್ತು ನಿಂತಿರುವ ಅಸೀಮ ಸಹನೆಯನ್ನೂ ಹೊಂದಿರುವ ಈ ಭೂಮಿಯ ಒಂದು ತುದಿಯ ಅಣುಗಾತ್ರದ ನೆಲದಲ್ಲಿ ಅಪರಿಚಿತನಂತೆ ಬೆಳಬೆಳಗೆಯೇ ಸೈಕಲಲ್ಲಿ ಸಾಗುತ್ತಿರುವ ನಾನು. ಮರೆತೇ ಹೋಗಿರುವ ಹಲವು ಜನ್ಮಗಳ ನೆನಪುಗಳು, ಸಿಟ್ಟುಗಳು, ಸೆಡವುಗಳು, ಅನುರಾಗಗಳು, ವೈರಾಗ್ಯಗಳು ಮತ್ತು ಸೀಮಾತೀತ ಕುತೂಹಲಗಳು. ಹಡಗಲ್ಲಿ ಈ ಸೈಕಲ್ಲಿನ ಹಿಂದೆ ನಿಲ್ಲಿಸಿದ್ದ ಲೇಡೀಸು ಸೈಕಲ್ಲೂ ಇದರ ಹಿಂದೆ ಮುಂದೆ ಚಲಿಸುತ್ತಿದ್ದರೆ ಈ ಸೈಕಲ್ಲಿನ ಒಂಟಿತನವೂ, ನನ್ನ ಏಕಾಂಗಿತನವೂ ಕೊಂಚ ವಿರಮಿಸಿಕೊಳ್ಳುತ್ತಿತ್ತೇನೋ ಅಂತಲೂ ಅನಿಸುತ್ತಿತ್ತು.

(ಫೋಟೋಗಳು: ಅಬ್ದುಲ್‌ ರಶೀದ್)

ಅಲೆಯುವ ಮನಕ್ಕೆ ಲೋಕದ ಯಾವ ಸದ್ದುಗಳೂ ಕೇಳಿಸುವುದಿಲ್ಲವಂತೆ. ಅಲೆಮಾರಿಗಳು ಲೋಕದ ಗೊಡವೆಗಿಂತ ತಮ್ಮ ತಮ್ಮ ಸ್ವವ್ಯಸನಗಳಲ್ಲೇ ಹೆಚ್ಚು ಮುಳುಗಿರುತ್ತಾರಂತೆ. ಹಾಗಾಗಿ ಅವರು ಆಯಾಸಗೊಳ್ಳದೆ ಚಲಿಸುತ್ತಲೇ ಇರುತ್ತಾರಂತೆ. ಇದು ಹಿಂದೆ ಬದುಕಿದ್ದ ಮಿತ್ರರೂ ಆಗಿದ್ದ ಹಿರಿಯರೊಬ್ಬರು ಹೇಳಿದ್ದ ಮಾತು. ಅವರ ಪ್ರಕಾರ ಅಲೆಮಾರಿಗಳಷ್ಟು ಸ್ವರತಿ ಪ್ರಿಯರು ಬೇರೆ ಯಾರೂ ಇಲ್ಲ. ಹಾಗೆಯೇ ನನ್ನ ಕಥೆಯೂ ಎಂದು ಅನಿಸುತ್ತಿತ್ತು, ಏಕೆಂದರೆ ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತೆ ದ್ವೀಪದ ಕಡಲ ಪಕ್ಕದ ಸಿಮೆಂಟು ರಸ್ತೆಯಲ್ಲಿ ಸೈಕಲ್ಲು ಓಡಿಸುತ್ತಿದ್ದ ನನಗೆ ಮೊರೆಯುತ್ತಿದ್ದ ಕಡಲಿನ ಸದ್ದೂ, ಅದನ್ನೂ ಮೀರಿಸುವಂತೆ ಕಡಲ ಕಡೆಯಿಂದ ಕೇಳಿಸುತ್ತಿದ್ದ ಕಾಗೆಗಳ ಹಾಹಾಕಾರವೂ ಕೇಳಿಸಿಯೇ ಇರಲಿಲ್ಲ. ಕೇಳಿಸತೊಡಗಿದಾಗ ಸೈಕಲ್ಲು ನಿಲ್ಲಿಸಬೇಕೆನಿಸಿತು. ಸೈಕಲ್ಲು ನಿಲ್ಲಿಸಿ, ನೆಲಕ್ಕೆ ಬಗ್ಗಿಸಿ, ಬೆನ್ನಿನ ಚೀಲವನ್ನು ಅಲ್ಲೇ ನೆಲದಲ್ಲಿ ಇಳಿಸಿ ಕಡಲಿನತ್ತ ನಡೆದು ಹೋದರೆ ಕಡಲ ಬದಿಯಲ್ಲಿ ಕಾಗೆಗಳ ಹಿಂಡು. ಅವುಗಳ ನಡುವಲ್ಲಿ ಒಬ್ಬಳು ಸ್ತ್ರೀ. ಆಕೆ ಕೈಯಲ್ಲಿದ್ದ ಆಹಾರ ತ್ಯಾಜ್ಯಗಳ ಬಕೆಟ್ಟನ್ನು ಕಡಲಿಗೆ ಸುರಿಯುತ್ತಿದ್ದಳು. ಕಡಲಿಗೆ ಬೀಳುತ್ತಿದ್ದ ತ್ಯಾಜ್ಯದ ಸುತ್ತ ಕಾಗೆಗಳ ಸರಪಳಿ. ನೋಡುತ್ತಿದ್ದಂತೆ ಬೇರೆ ಯಾವ ದ್ವೀಪಗಳಲ್ಲೂ ನಾನು ನೋಡಿರದಿದ್ದ ದೊಡ್ಡ ಗಾತ್ರದ ಕೆಂಬಾರೆ ಹಕ್ಕಿಗಳು. ಒಂದಲ್ಲ ಎರಡಲ್ಲ ಹತ್ತಾರು. ಅವುಗಳೂ, ಕಾಗೆಗಳೂ, ಆ ಹೆಂಗಸೂ, ಕಡಲೂ, ಆಕಾಶವೂ ಒಂದು ರೀತಿಯ ಬೆಳಗಿನ ಆಲಸ್ಯದಲ್ಲಿ ಒಂದೇ ಚಿತ್ರದ ಹಲವು ಬಣ್ಣಗಳಂತೆ ಗೋಚರಿಸುತ್ತಿದ್ದವು. ಮನುಷ್ಯರು, ಕಾಗೆಗಳು ಮತ್ತು ಕಡಲ ಹಕ್ಕಿಗಳು ಮತ್ತು ಎಲ್ಲಿಂದಲೋ ಬಂದ ನಾನು. ಬಂದ ಕೆಲಸವನ್ನೂ ಮರೆತು, ಸೈಕಲ್ಲನ್ನೂ ಮರೆತು ಫೋಟೋ ಕ್ಲಿಕ್ಕಿಸತೊಡಗಿದೆ.

ಮಜಾ ಅನಿಸುತ್ತಿತ್ತು. ನಾನು ಈ ಕೆಂಬಾರೆ ಹಕ್ಕಿಗಳನ್ನು ನಾಚುಕೆಯ, ಸಂಕೋಚದ, ಏಕಾಂತ ಬಯಸುವ ಹಕ್ಕಿಗಳು ಅಂದುಕೊಂಡಿದ್ದೆ. ಎಷ್ಟು ಏಕಾಂತ ಪ್ರಿಯ ಹಕ್ಕಿಗಳೆಂದರೆ ಜೀವಮಾನ ಪೂರ್ತಿ ಜೊತೆಗಿರುವ ಸಂಗಾತಿಯ ಹಕ್ಕಿಯ ಜೊತೆಗೂ ಇವುಗಳು ಕಾಣಿಸಿಕೊಳ್ಳುವುದಿಲ್ಲ. ಸದಾ ಬೇರೆ ಬೇರೆಯಾಗಿ ಆಹಾರ ಹುಡುಕುತ್ತಿರುತ್ತವೆ. ಮಿಲನದ ಹೊತ್ತಲ್ಲಿ ಮತ್ತು ಆನಂತರ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳನ್ನು ಪಾಲಿಸುವ ಹೊತ್ತಲ್ಲಿ ಮಾತ್ರ ಗಂಡಹೆಂಡಿರಂತೆ ಜೊತೆಗಿರುವ ಹಕ್ಕಿಗಳು ಇವು. ಅಷ್ಟೊಂದು ಏಕಾಂತ ಪ್ರಿಯ ಹಕ್ಕಿಗಳು. ಆದರೆ ಅಚ್ಚರಿಯಾಗುವಂತೆ ಈ ದ್ವೀಪದ ಕಡಲ ತೀರದಲ್ಲಿ ಹೆಂಗಸೊಬ್ಬಳು ಎಸೆಯುತ್ತಿರುವ ಕಲಗಚ್ಚಿನ ಆಸೆಯಿಂದ ಕಾಗೆಗಳೊಡನೆ ಸ್ಪರ್ಧೆಗಿಳಿದಿವೆ. ನೋಡು ನೋಡುತ್ತಿದ್ದಂತೆ ಕಲಗಚ್ಚು ಎಸೆಯಲು ಕಡಲಿಗಿಳಿಯುತ್ತಿರುವ ಇನ್ನೊಬ್ಬಳು ಸ್ತ್ರೀ. ಕಾಕ ಸಮೂಹ ಈಕೆಯನ್ನು ಬಿಟ್ಟು ಆಕೆಯ ಕಡೆ ಹಾರಿ ಹೋದವು. ಜೊತೆಗೆ ಮಂದಗಮನೆಯರಂತೆ ಈ ಕೆಂಬಾರೆ ಹಕ್ಕಿಗಳೂ ಹಾರಿದವು. ಅಷ್ಟರಲ್ಲಿ ಈ ಹಿಂದೆ ದ್ವೀಪವೊಂದರಲ್ಲಿ ಪರಿಚಿತನಾಗಿದ್ದ ಪೋಲೀಸನೊಬ್ಬ ನನ್ನ ಹಿಂದೆಯಿಂದ ಬಂದು ಬೆನ್ನು ತಟ್ಟಿದ. ತಿರುಗಿ ನೋಡಿದರೆ ಪರಿಚಿತ ಪೋಲೀಸು. ಆತನಿಗೂ ಈ ದ್ವೀಪಕ್ಕೆ ಅದಾಗ ತಾನೇ ವರ್ಗಾವಣೆಯಾಗಿತ್ತು. ಈ ದ್ವೀಪದಲ್ಲಿ ಇಷ್ಟೊಂದು ಕೆಂಬಾರೆ ಹಕ್ಕಿಗಳನ್ನು ನೋಡಿ ಅಚ್ಚರಿಯಾಗಿತ್ತು. ಜೊತೆಗೆ ನನ್ನನ್ನು ನೋಡಿಯೂ. ಅದಾಗಲೇ ಈ ಹಕ್ಕಿಗಳ ಕುರಿತು ಒಂದಿಷ್ಟು ಮಾಹಿತಿ ಪಡೆದಿದ್ದ ಆತ ಅದನ್ನು ವಿವರಿಸತೊಡಗಿದ.

8.ಉಕ್ಕಿನ ಮಹಿಳೆ ಹವ್ವಾ ತಾತ

ಪರಿಚಿತ ಪೋಲೀಸನು ಹೇಳಿದ ಹಕ್ಕಿಗಳ ಕುರಿತ ವಿವರಗಳಲ್ಲಿ ಹಕ್ಕಿಗಳ ಗುಣ ಸ್ವಭಾವಗಳಿಗಿಂತ ಈತನ ಸಾಹಸ ಕಥೆಗಳ ವಿವರಗಳೇ ಹೆಚ್ಚಾಗಿತ್ತು. ನೋಡಲು ಬಹಳ ತರುಣನಂತೆ ಕಾಣುವ ಈ ಪೋಲೀಸನು ಅದಾಗಲೇ ತನ್ನ ಸೇವೆಯ ಎರಡು ದಶಕಗಳನ್ನು ಈ ದ್ವೀಪ ಸಮೂಹದ ವಿವಿಧ ದ್ವೀಪಗಳಲ್ಲಿ ಸವೆಸಿದ್ದನು.ಹಾಗೆ ಸವೆಸುತ್ತಿರುವಾಗಲೇ ಕಳೆದ ವರ್ಷ ದ್ವೀಪವೊಂದರಲ್ಲಿ ನನಗೆ ಕಾಣಲು ಸಿಕ್ಕಿದ್ದನು. ಅದು ಲಕ್ಷದ್ವೀಪ ಸಮೂಹದಲ್ಲೇ ಅತಿ ಪುಟ್ಟ ದ್ವೀಪ.ಜನಸಂಖ್ಯೆ ಮುನ್ನೂರಕ್ಕಿಂತ ಕಡಿಮೆ. ಆದರೆ ಫೋಲೀಸರೂ, ಶಿಕ್ಷಕರೂ, ಕಡಲು ಕಾವಲು ಪಡೆಯವರೂ, ವೈದ್ಯರೂ, ತಾಂತ್ರಿಕ ಸಿಬ್ಬಂದಿಗಳೂ ಸೇರಿದರೆ ಸುಮಾರು ನಾನೂರು ದಾಟಬಹುದು.‘ಮುನ್ನೂರು ಜನರಿಗೆ ನೂರು ಜನ ಸರಕಾರೀ ಸಿಬ್ಬಂದಿಗಳು ಯಾಕೆ ಬೇಕು?’ ಎಂದು ನೀವು ಕೇಳಬಹುದು. ಇದೆಲ್ಲಾ ಹೋಗಲಿ ಬಿಡಿ.ನಾನು ಹೇಳುತ್ತಾ ಹೋದರೆ, ‘ಹಾಗಾದರೆ ಈ ದ್ವೀಪಗಳು ಯಾಕೆ ಬೇಕು? ಜನಗಳು ಅಲ್ಲಿ ಯಾಕಿರಬೇಕು’ ಎಂದೆಲ್ಲ ಪ್ರಶ್ನೆಗಳೂ ಬರಬಹುದು.ನಾನು ಹೇಳ ಹೊರಟಿದ್ದು ಆ ಪುಟ್ಟ ದ್ವೀಪದಲ್ಲಿ ಪರಿಚಿತನಾಗಿದ್ದ ಪೋಲೀಸನ ಕಥೆ.

(ಫೋಟೋಗಳು:ಅಬ್ದುಲ್ ರಶೀದ್)

ಈ ದ್ವೀಪಗಳಲ್ಲಿ ಅಪರಾಧಗಳ ಸಂಖ್ಯೆ ತುಂಬಾ ಕಮ್ಮಿ.ಇಲ್ಲವೇ ಇಲ್ಲ ಎನ್ನಬಹುದು.ಇದಕ್ಕೆ ಕಾರಣ ಇಲ್ಲಿಯ ಜನರು ತುಂಬಾ ಒಳ್ಳೆಯವರು ಎಂದು ಹೇಳಲಾಗುವುದಿಲ್ಲ. ನನಗನಿಸುವ ಪ್ರಕಾರ ಇದಕ್ಕೆ ಅಪರಾಧ ನಡೆಸಿ ತಪ್ಪಿಸಿಕೊಂಡು ಹೋಗಿ ಅಡಗಿಕೊಳ್ಳಲು ಜಾಗ ಇಲ್ಲದಿರುವುದು! ಕಳ್ಳರು ಚೌರ್ಯದ ನಂತರ ಇರುವ ಈ ಪುಟ್ಟ ಜಾಗದಲ್ಲೇ ಅಡಗಿಕೊಳ್ಳುವುದು ಎಲ್ಲಿ? ಕದ್ದು ಪ್ರೇಮಿಸುವುದು ಎಲ್ಲಿ? ಪ್ರೇಮಿಸಿ ಓಡಿ ಹೋಗುವುದು ಎಲ್ಲಿಗೆ! ಹಾಗಾಗಿ ಇವು ಯಾವುವೂ ಇಲ್ಲಿನವರ ಸ್ವಭಾವದಲ್ಲಿ ಇದ್ದರೂ ತೋರಿಸಿಕೊಳ್ಳಲಾಗುವುದಿಲ್ಲ.ಆದರೂ ನಿಯಮಗಳ ಪ್ರಕಾರ ಪೋಲಿಸರೂ ಬೇಕಾಗುತ್ತದಲ್ಲ. ಇಲ್ಲಿನ ಪೋಲೀಸರಿಗೆ ಮುಖ್ಯ ಕೆಲಸ ದ್ವೀಪಗಳಿಗೆ ಹಡಗು ಬಂದಾಗ ಮತ್ತು ಹೊರಟಾಗ.ಅನುಮತಿಯಿಲ್ಲದೆ ಯಾರಾದರೂ ಅಪರಿಚಿತರು ಬರದ ಹಾಗೆ ನೋಡಿಕೊಳ್ಳುವುದು ಮತ್ತು ಅನುಮತಿ ಪಡೆದು ಒಳಬಂದವರು ಅವರ ನಿಗದಿತ ಹಡಗಿನಲ್ಲಿ ವಾಪಾಸು ಹಿಂತಿರುಗಿರುವರಾ ಎಂದು ಖಾತರಿಪಡಿಸಿಕೊಳ್ಳುವುದು.ಅದು ಬಿಟ್ಟರೆ ಸಣ್ಣಪುಟ್ಟ ತರಲೆ ತಾಪತ್ರಯಗಳನ್ನು ನೋಡಿಕೊಳ್ಳುವುದು.

ನಾನು ಹೇಳುತ್ತಿರುವ ಪೋಲೀಸನ ಕಥೆ ಇನ್ನೂ ವಿಶೇಷ. ಈತನಿಗೆ ಪೋಲೀಸು ಕೆಲಸಕ್ಕಿಂತ ಗಾಳ ಹಾಕಿ ಮೀನು ಹಿಡಿಯುವದು ಬಹಳ ಇಷ್ಟದ ಸಂಗತಿ. ಮತ್ತು ಸಂಸಾರದಲ್ಲಿ ಅಷ್ಟು ಆಸಕ್ತಿ ಇಲ್ಲ. ಹಾಗಾಗಿ ಈತ ಬೇಕುಬೇಕೆಂದೇ ಕರ್ತವ್ಯದಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿಸಿ ಶಿಸ್ತಿನ ಕ್ರಮವಾಗಿ ಆಗಾಗ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ವರ್ಗಾವಣೆ ಪಡೆದು ಸುಖವಾಗಿ ಮೀನು ಹಿಡಿಯುತ್ತಾ ಬದುಕುತ್ತಿದ್ದ. ಅಪರಾಧಗಳ ಕುರಿತ ಮಾಹಿತಿಗಳಿಗಿಂತ ಕಡಲ ಮತ್ಸ್ಯಗಳ ಕುರಿತು ಈತ ಬಹುದೊಡ್ಡ ಮಾಹಿತಿ ಕೇಂದ್ರವಾಗಿದ್ದ. ಹಾಗೆಂದು ಈತನನ್ನು ಮತ್ಸ್ಯತಜ್ಞ ಅಂದುಕೊಳ್ಳಬೇಡಿ. ಈತನ ಜ್ಞಾನ ಇರುವುದು ಅವುಗಳ ಜೀವಶಾಸ್ತ್ರಕ್ಕಿಂತ ಹೆಚ್ಚಾಗಿ ಅವುಗಳ ಪಾಕಶಾಶ್ತ್ರದ ಕುರಿತು. ಯಾವ ಮೀನನ್ನು ಹೇಗೆ ಹಿಡಿಯಬೇಕು? ಹೇಗೆ ಕತ್ತರಿಸಬೇಕು? ಯಾವುದನ್ನು ಕಾಯಿಸಬೇಕು? ಯಾವುದನ್ನು ಬೇಯಿಸಬೇಕು? ಯಾವುದನ್ನು ಹೊಗೆಹಾಕಿ ಒಣಗಿಸಿ ಮಳೆಗಾಲಕ್ಕಾಗಿ ಶೇಖರಿಸಿಡಬೇಕು ಎಂಬುದನ್ನೆಲ್ಲಾ ಈತ ರುಚಿಯ ವಿಶೇಷಗಳ ಜೊತೆಗೆ ವರ್ಣಿಸುತ್ತಿದ್ದರೆ ಈತ ಪೋಲೀಸನೋ ಅಥವಾ ಕವಿಯೋ ಎಂಬ ಸಂದೇಹವು ನಿಮ್ಮಲ್ಲಿ ಮೂಡದೇ ಇರದು.

ಇದೇ ಪೋಲೀಸನೇ ಕಳೆದ ಕಂತಲ್ಲಿ ಕೆಂಬಾರೆ ಹಕ್ಕಿಯ ಫೋಟೋ ತೆಗೆಯುತ್ತಿದ್ದ ನನ್ನ ಬೆನ್ನು ತಟ್ಟಿದ್ದು. ನನ್ನ ಹಾಗೆಯೇ ಈತನಿಗೂ ಇಲ್ಲಿಗೆ ಬಂದ ಹೊಸತರಲ್ಲಿ ಇಲ್ಲಿನ ಕಡಲ ಕರೆಯಲ್ಲಿ ಯಾವ ಭಯವೂ ಇಲ್ಲದೆ ಬದುಕುತ್ತಿರುವ ಈ ದೊಡ್ಡ ಹಕ್ಕಿಗಳನ್ನು ನೋಡಿ ಅಚ್ಚರಿಯಾಗಿತ್ತಂತೆ.ಆಮೇಲೆ ಅದಕ್ಕೆ ಕಾರಣವೂ ಗೊತ್ತಾಯಿತಂತೆ. ಅದೇನೆಂದರೆ ಈ ದ್ವೀಪದ ಹನ್ನೊಂದು ಹಳ್ಳಿಗಳೂ ಒತ್ತೊತ್ತಾಗಿ ಒಂದೇ ಕಡೆ ಇರುವುದರಿಂದ ಮತ್ತು ಎಲ್ಲರೂ ಮೂಪನ್ ಮತ್ತು ಮೂಪತ್ತಿಯ ಮಾತಿನಂತೆ ನಡೆಯುವುದರಿಂದ ಯಾರಿಗೂ ಈ ಹಕ್ಕಿಗಳನ್ನು ಹಿಡಿದು ರೆಕ್ಕೆ ಕತ್ತರಿಸಿ ಮನೆಯೊಳಗೆ ಸಾಕುವ ದೈರ್ಯವಿಲ್ಲವಂತೆ. ಹಾಗಾಗಿ ಹಕ್ಕಿಗಳು ಬಚಾವ್ ಅಂದ. ಅಂದ ಮಾತ್ರಕ್ಕೆ ಈತ ಹಕ್ಕಿಗಳ ಪ್ರೇಮಿ ಅಂದುಕೊಳ್ಳಬೇಡಿ. ಈತ ಸಣ್ಣದಿರುವಾಗ ಬಲು ದೊಡ್ಡ ಹಕ್ಕಿಚೋರನಾಗಿದ್ದನಂತೆ. ಅದರಲ್ಲೂ ಕಡಲ ಹಕ್ಕಿಗಳ ಮೊಟ್ಟೆಗಳ ಚೋರ. ಅದೆಲ್ಲ ಬಹಳ ದೊಡ್ಡ ಕಥೆಗಳು.ಇಲ್ಲಿ ಹೇಳುವುದು ಸಮಂಜಸವಲ್ಲ. ಏಕೆಂದರೆ ಈಗ ಈತ ಪೋಲೀಸನಾಗಿದ್ದಾನೆ ಮತ್ತು ಆಗ ಹಕ್ಕಿಗಳ ಮೊಟ್ಟೆ ಕದಿಯುವುದು ಅಪರಾಧವಾಗಿರಲಿಲ್ಲ!

ನಾನು ಆ ಪೋಲೀಸನಲ್ಲಿ, ‘ಈ ದ್ವೀಪದ ‘ಹವ್ವಾ ತಾತಾ’ ಎಂಬ ಸ್ತ್ರೀಯೊಬ್ಬರ ಮನೆ ಎಲ್ಲಿ? ಎಂದು ಕೇಳಿದೆ. ಆತನಿಗೆ ಮೊದಲು ಗೊತ್ತಾಗಲಿಲ್ಲ. ಆಮೇಲೆ ನನ್ನ ಮೊಬೈಲಿನಲ್ಲಿದ ಅವರ ಫೋಟೋ ತೋರಿಸಿದೆ. ‘ಓ ಸೈಕಲ್ಲಿನಲ್ಲಿ ಹೋಗುವ ಅಂಗನವಾಡಿಯ ಹವ್ವಾದಾತ’ ಆತ ತಟ್ಟನೆ ಗುರುತಿಸಿದ. ‘ಇದೇ ದಿಕ್ಕಿನಲ್ಲಿ ಮುಂದಕ್ಕೆ ಹೋಗಿ, ಆಮೇಲೆ ಪೂರ್ವಕ್ಕೆ ತಿರುಗಿ, ಆಮೇಲೆ ದಕ್ಷಿಣದಲ್ಲಿ ಚಲಿಸಿದರೆ ಅಲ್ಲಿ ಒಂದು ಹಳ್ಳಿ ಸಿಗುತ್ತದೆ, ಆ ಹಳ್ಳಿಯಲ್ಲ, ಅದರ ಮುಂದಿನದಲ್ಲ, ಅದು ಕಳೆದು ಮೂರನೆಯ ಹಳ್ಳಿ, ಅಲ್ಲಿ ಯಾರ ಬಳಿ ಕೇಳಿದರೂ ಅವರ ಮನೆ ತೋರಿಸುತ್ತಾರೆ’ ಅಂದ. ಎಡಬಲ ಗೊತ್ತಿಲ್ಲದವನು ನಾನು ಇನ್ನು ದಿಕ್ಕುಗಳನ್ನು ಕಂಡುಹಿಡಿದು ಆಮೇಲೆ ಹವ್ವಾದಾತಳನ್ನು ಕಂಡುಹಿಡಿಯುವುದನ್ನು ಯೋಚಿಸಿ ನಗು ಬಂತು. ನೆಲದಲ್ಲಿ ಒರಗಿಸಿದ್ದ ಸೈಕಲನ್ನು ಎತ್ತಿಕೊಂಡು ಬೆನ್ನಿನ ಚೀಲ ಬೆನ್ನಿಗೆ ಸಿಕ್ಕಿಸಿ, ಹೊಟ್ಟೆಯ ಚೀಲ ಹೊಟ್ಟೆಗೆ ಸಿಕ್ಕಿಸಿ ಸಾವಧಾನದಲ್ಲಿ ಸೈಕಲ್ಲು ಹೊಡೆಯತೊಡಗಿದೆ. ಸಾವಧಾನ ಏಕೆಂದರೆ ವೇಗವಾಗಿ ನೀವೇನಾದರೂ ಹೊರಟರೆ ದ್ವೀಪವೇ ಮುಗಿದು ಬಿಡುತ್ತದೆ ಮತ್ತು ಹುಡುಕುತ್ತಿರುವ ವಿಳಾಸ ಕೇಳುತ್ತಾ ನೀವು ವಾಪಾಸು ಹೋದ ದಾರಿಯಲ್ಲೇ ಮರಳಿ ಬರಬೇಕಾಗುತ್ತದೆ. ಅದರ ಬದಲು ಸಾವಧಾನವಾಗಿ ಚಲಿಸಿದರೆ ತಲೆಯೊಳಗೆ ದೊಡ್ಡ ದೊಡ್ಡ ಯೋಚನೆಗಳನ್ನು ಇಟ್ಟುಕೊಂಡು ಸೈಕಲ್ಲು ಹೊಡೆಯುತ್ತಾ ಇರಬಹುದಾಗಿದೆ. ನನಗಂತೂ ತಲೆಯೊಳಗೆ ದೊಡ್ಡ ದೊಡ್ಡ ಯೋಚನೆಗಳೂ, ಆಲೋಚನೆಗಳೂ ಹೀಗೇ ಸೈಕಲ್ಲು ಹೊಡೆಯುತ್ತಿರುವಾಗಲೇ ಹೊಳೆಯುತ್ತವೆ ಮತ್ತು ಅವುಗಳನ್ನು ತಲೆಯೊಳಗಿಟ್ಟುಕೊಂಡು ಸೈಕಲ್ಲು ಹೊಡೆಯುತ್ತಾ ಒಂದಿಷ್ಟು ದೂರ ಹೋದರೆ ಅದಕ್ಕೊಂದು ರೂಪವೂ ಆಕಾರವೂ ಬರುತ್ತದೆ. ಈ ದ್ವೀಪಕ್ಕೆ ಬರುವ ಮೊದಲು ಇದಕ್ಕಾಗಿ ಸಂಗೀತ ಕೇಳುತ್ತಿದ್ದೆ. ಈಗ ಸೈಕಲ್ಲು.
ಇದನ್ನು ಓದಿದ ಸಂಗೀತ ಪ್ರೇಮಿಗಳು ದಯವಿಟ್ಟು ನೊಂದುಕೊಳ್ಳಬಾರದು.ಸಂಗೀತ ಒಂದು ಯಾನವಾದರೆ ಸೈಕಲ್ಲು ಇನ್ನೊಂದು ಯಾನ ಎಂದು ತಿಳಿದುಕೊಳ್ಳಬೇಕು ಅಷ್ಟೇ!

ಹೀಗೇ ನಾನಿರುವ ದ್ವೀಪದಲ್ಲಿ ಸೈಕಲ್ಲು ಹೊಡೆಯುತ್ತಿರುವಾಗಲೇ ನನಗೆ ಮಿನಿಕಾಯ್ ಹೋಗಬೇಕು ಎಂದು ಅನಿಸಲು ತೊಡಗಿದ್ದು. ‘ಮಳೆಗಾಲ ಬರುವ ಮೊದಲು, ಅದಕ್ಕೂ ಮೊದಲು ಬರುವ ಉಪವಾಸದ ತಿಂಗಳು ತೊಡಗುವ ಮೊದಲು, ದೋಣಿ ಸ್ಪರ್ದೆಯ ಹೊತ್ತಲ್ಲಿ ಬಂದರೆ ನಿಮಗೆ ನಮ್ಮ ದ್ವೀಪದ ಎಲ್ಲ ವಿಷಯಗಳೂ ಗೊತ್ತಾಗುತ್ತವೆ ಮತ್ತು ಬಹಳ ಒಳ್ಳೆಯ ಆಹಾರವೂ ಸಿಗುತ್ತದೆ’ ಎಂದು ಎಂದು ಹವ್ವಾ ತಾತಾ ಅಂದಿದ್ದರು. ಹವ್ವಾ ಎಂಬುದು ಅವರ ಹೆಸರು. Adam ನ ಮಡದಿ Eve ಗೊತ್ತಲ್ಲ. Eve ರನ್ನು ಅರಬಿಯಲ್ಲೂ ಮಲಯಾಳದಲ್ಲೂ ಹವ್ವಾ ಎಂದೇ ಕರೆಯುವುದು. ಇಸ್ಲಾಂ ದರ್ಮದ ಪ್ರಕಾರ ಆಡಂ ಕೂಡಾ ಓರ್ವ ಪ್ರವಾದಿ. ಆದಂ ನೆಬಿ ಎಂದು ಕರೆಯುತ್ತಾರೆ. ಆತ ಮನುಕುಲದ ಮೊದಲ ಪುರುಷ. ಹವ್ವಾ ಮೊದಲ ಸ್ತ್ರೀ. ಅವರಿಬ್ಬರೂ ಸ್ವರ್ಗತೋಪಿನ ಸೇಬು ಹಣ್ಣೊಂದನ್ನು ಕದ್ದು ತಿಂದ ಪಾಪದಿಂದಾಗಿಯೇ ಮನುಷ್ಯ ಕುಲ ಭೂಮಿಯಲ್ಲಿ ಉಂಟಾಗಿದ್ದು. ಪಾಶ್ಚಾತ್ಯ ಪುರಾಣಗಳ ಕಥೆ ನಿಮಗೆ ಗೊತ್ತಿರಬಹುದು. ಅದೇ Eve ನ ಹೆಸರು ಇರುವವರು ಮಿನಿಕಾಯ್ ದ್ವೀಪದ ಈ ಹವ್ವಾ. ತಾತಾ ಅಂದರೆ ಹಿರಿಯಕ್ಕ. ಈ ಹವ್ವಾ ತಾತಳನ್ನು ಮಿನಿಕಾಯ್ ದ್ವೀಪದ ಉಕ್ಕಿನ ಮಹಿಳೆ ಎಂದೇ ಎಲ್ಲರೂ ಕರೆಯುತ್ತಾರೆ. ಬಹಳ ಜೋರು ಮತ್ತು ಖಡಕ್ ಮಾತು. ಈ ಹವ್ವಾ ತಾತ ಮುಖ್ಯಸ್ಥಳಾಗಿರುವ ಸ್ತ್ರೀ ಶಕ್ತಿ ಗುಂಪೊಂದು ಕಳೆದ ವರ್ಷದ ಗಣರಾಜ್ಯೋತ್ಸವದ ಹೊತ್ತಲ್ಲಿ ಆಹಾರ ಮೇಳವೊಂದಕ್ಕೆ ನಾನಿರುವ ದ್ವೀಪಕ್ಕೆ ಬಂದಿತ್ತು. ಆಗ ಪರಿಚಿತಳಾಗಿದ್ದ
ಹವ್ವಾ ತಮ್ಮ ಖಚಿತ ಮಾತುಗಳಿಂದ ಮತ್ತು ಜೋರು ನಗೆಯಿಂದ ಹತ್ತಿರವಾಗಿದ್ದರು. ಅವರಿಗೆ ಈಗ ಎಪ್ಪತ್ತೆರಡು ವರ್ಷ. ಕಳೆದವರ್ಷಗಳಿಂದ ಅಂಗನವಾಡಿಯೊಂದರ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವರು ಇದೀಗ ತಾನೇ ನಿವೃತ್ತರಾಗಿದ್ದಾರೆ. ಅವರ ಬಳಿ ಇರುವ ಸೈಕಲ್ಲಿಗೂ ೫೦ ವರ್ಷಗಳಾಗಿವೆ. ಅದೇ ಸೈಕಲಲ್ಲಿ ಈಗಲೂ ಚಲಿಸುತ್ತಾರೆ. ಈ ದ್ವೀಪದಲ್ಲಿ ಸೈಕಲ್ಲು ಓಡಿಸಿದ ಮೊದಲ ಮಹಿಳೆ ಈಕೆ. ‘ನೀವು ಬಂದಾಗ ನಾನು ಸೈಕಲ್ಲು ಓಡಿಸುವ ಫೋಟೋ ತೆಗೆಯಬೇಕು’ ಎಂದಿದ್ದರು ಆಕೆ.
ಹಾಗೆ ತೆಗೆದ ಸೈಕಲಿನ ಫೋಟೋ ಇಲ್ಲಿದೆ. ಆಕೆಯ ಕಥೆಯನ್ನು ಮುಂದಿನ ಕಂತಲ್ಲಿ ಮುಂದುವರಿಸುತ್ತೇನೆ.

9.ಮಾಯದಂತಹ ಒಂದು ಮಧ್ಯಾಹ್ನದ ಮಳೆ

ಅದು ನಾನು ಇದುವರೆಗೆ ಎಂದೂ ನೋಡಿ ಕೇಳಿರದ ಮಾಯದಂತಹ ಮಳೆಯಾಗಿತ್ತು. ಗಾಳಿ ಸಿಡಿಲು ಮತ್ತು ಗುಡುಗು ಆ ಪುಟ್ಟ ದ್ವೀಪದೊಳಗೂ ಮತ್ತು ಸುತ್ತಲಿನ ಕಡಲ ಮೇಲೂ ಲಾಸ್ಯವಾಡುತ್ತಿತ್ತು. ಹವ್ವಾ ತಾತಾಳ ಮನೆಯ ವೆರಾಂಡದೊಳಗಿಂದ ನಾನು ಸುಮ್ಮನೆ ನೋಡುತ್ತಿದ್ದೆ. ಮಧ್ಯಾಹ್ನದ ನಮಾಜಿನ ಬಾಂಗಿನ ಕರೆಯ ಹೊತ್ತು. ಹಗಲು ಹೊತ್ತು ನಿದ್ದೆಯಲ್ಲಿರುವಂತಿದ್ದು ಸಂಜೆಯ ಹೊತ್ತು ಚುರುಕಾಗುವ ದ್ವೀಪದ ಓಣಿಬೀದಿಗಳು, ಬಣ್ಣ ಬಣ್ಣದ ಗೋಡೆಗಳ ಮನೆಗಳು ಮತ್ತು ಪ್ರತಿಯೊಂದು ಮನೆಯ ಗೇಟಿನ ಸಿಮೆಂಟು ಕಂಬದ ತುದಿಯ ಕುಂಡಗಳಲ್ಲಿ ಬೆಳೆದಿರುವ ಒಂದೊಂದು ಬಗೆಯ ವಿಶಿಷ್ಟ ಹೂಗಳು, ಕೆಲವು ಕಡೆ ಎತ್ತರಕ್ಕೆ ಬೆಳೆದಿರುವ ಬೋಗನ್ ವಿಲ್ಲಾ ಬಳ್ಳಿಗಳು. ಮಲಗಿರುವ ಮಧ್ಯಾಹ್ನದ ಹೊತ್ತಿನ ಕನಸೊಂದರ ನಡುವೆ ಕೇಳುವ ರಾಗದ ಹಾಗಿದ್ದ ಪ್ರಾರ್ಥನೆಯ ಕರೆಯ ನಡುವೆ ಆಕಾಶದಿಂದ ಛಟೀರ್ ಎಂಬ ಸಿಡಿಲಿನ ಬಳ್ಳಿ ಮತ್ತು ಗುಡುಗಿನ ಸದ್ದು. ಮುಂದಿನ ಒಂದೂವರೆ ಗಂಟೆಗಳ ಕಾಲ ಮಳೆ ಸುರಿಯುತ್ತಲೇ ಇತ್ತು. ದ್ವೀಪಗಳಲ್ಲಿ ಮಳೆ ಎಷ್ಟು ಸುರಿದರೂ ಏನೂ ಸಂಭವಿಸುವುದೇ ಇಲ್ಲ. ಎಲ್ಲ ನೀರೂ ಕಡಲಿಗೆ ಹರಿಯುತ್ತಲೇ ಇರುತ್ತವೆ. ಕಡಲು ಒಂದು ರೀತಿ ಒಬ್ಬಳು ಸಹನಾಶೀಲೆಯಾದ ಭಗವಂತಳ ಹಾಗೆ ಸುಮ್ಮನೆ ಎಲ್ಲ ನೀರನ್ನೂ ಆಪೋಷನ ತೆಗೆದುಕೊಳ್ಳುತ್ತಲೇ ಇರುತ್ತಾಳೆ. ನೀವು ಬದುಕುತ್ತಿರುವ ಅಲ್ಲಿನ ಹಾಗೆ ಮಳೆಯಲ್ಲಿ ತೊರೆಗಳು ಹುಟ್ಟಿಕೊಳ್ಳುವುದು, ನದಿಯಾಗಿ ತುಂಬಿ ಪ್ರವಾಹವಾಗಿ ಹರಿಯುವುದು ಏನೂ ಇಲ್ಲ. ಮೇಲಿಂದ ಬಿದ್ದ ಮಳೆ ಉಸುಕು ಮಣ್ಣಲ್ಲಿ ಇಂಗಿ ಮಾಯವಾಗುವುದು. ಕಡಲ ಭರತದ ಹೊತ್ತಲ್ಲಿ ಮಳೆ ಸುರಿದರೆ ನೀರಬಾವಿಗಳು ತುಂಬಿಕೊಳ್ಳಬಹುದಷ್ಟೇ. ಇಳಿತದ ಸಮಯದಲ್ಲಿ ಅದೂ ಇರುವುದಿಲ್ಲ. ಒಂದು ರೀತಿಯ ನಿರುದ್ವಿಗ್ನ ಉಮ್ಮಳದ ಹಾಗೆ ಸುರಿದು ಕಾಣೆಯಾಗುವ ಮಾಯದಂತಹ ಮಳೆ.

ಆ ಮಳೆಯ ಸದ್ದಿನ ನಡುವೆಯೇ ಹವ್ವಾ ತಾತಾ ತಮ್ಮ ಕಥೆ ಹೇಳುತ್ತಿದ್ದರು. ತನಗೆ ಎಂಟು ವರ್ಷವಿರುವಾಗ ಕಡಲಿಗೆ ಹೋಗಿದ್ದ ಬಾಪಾ ಜೀವವಿಲ್ಲದೆ ವಾಪಾಸು ಬಂದಿದ್ದು, ಹನ್ನೊಂದು ವರ್ಷಕ್ಕೆ ಮದುವೆಯಾಗಿದ್ದು, ಅದು ಕಳೆದು ಹತ್ತು ವರ್ಷಕ್ಕೆ ಗಂಡನೂ ಕಡಲಿಂದ ಜೀವವಿಲ್ಲದೆ ವಾಪಾಸು ಬಂದಿದ್ದು, ಜೀವವಿರುವಾಗಲೂ ಆತ ಯಾವತ್ತೂ ಜೊತೆಗೆ ಇರದೇ ಇದ್ದಿದ್ದು, ತಾನು ಹಲ್ಲು ಕಚ್ಚಿ ಹಿಡಿದು ಐದು ಜನ ಸಹೋದರಿಯರನ್ನೂ ತಾಯಿಯನ್ನೂ ಸಲಹಿದ್ದು, ಸೈಕಲ್ಲು ಕಲಿತದ್ದು, ಹೊಲಿಯಲು ಹಾಡಲು ಕವಿತೆ ಬರೆಯಲು ಕಲಿತದ್ದು, ಗಟ್ಟಿ ಗಂಡಸಿನಂತೆ ದೊಡ್ಡ ಬಾಯಲ್ಲಿ ಎಲ್ಲವನ್ನೂ, ಎಲ್ಲರನ್ನೂ ಸಂಬಾಳಿಸುತ್ತಾ ಜೋರಿನ ಹೆಂಗಸು ಎಂದು ಅನಿಸಿಕೊಂಡಿದ್ದು, ಅಂಗನವಾಡಿಯ ಸಹಾಯಕಿಯಾಗಿ ಐವತ್ತು ವರ್ಷಗಳ ಕಾಲ ದ್ವೀಪದ ಮಕ್ಕಳ ತಾಯಿಯಾಗಿದ್ದು, ಈಗ ನಿನ್ನೆ ತಾನೇ ಅದರಿಂದಲೂ ನಿವೃತ್ತಳಾಗಿ ಇದೀಗ ಹೊಸಬಗೆಯ ಕಸೂತಿ ಕೆಲಸಗಳನ್ನು ಕಲಿಯಲು ಶುರುಮಾಡಿರುವುದು ಈ ಎಲ್ಲವನ್ನೂ ಮಳೆಯ ಸದ್ದಿನ ನಡುವೆಯೇ ಬೇರೆ ಯಾರದೋ ಕತೆ ಎಂಬಂತೆ ಹೇಳುತ್ತಿದ್ದರು. ಕಪಾಟಿನಿಂದ ಹಳೆಯ ಫೋಟೋ ಆಲ್ಬಂಗಳನ್ನು ತೆಗೆದು ಹಾಸುಗೆಯ ಮೇಲಿಟ್ಟು, ತಾನು ಹಾಡು ಹೇಳುತ್ತಾ ದೆಹಲಿಯವರೆಗೆ ಹೋಗಿ ಬಂದದ್ದು, ಅಂಡಮಾನಿಗೂ ಮದರಾಸಿಗೂ ಹೋಗಿದ್ದು, ಇಂದಿರಾಗಾಂಧಿಯಿಂದ ಫಲಕ ಪಡೆದದ್ದು ಎಲ್ಲವನ್ನೂ ಹಿಗ್ಗಿನ ಹುಡುಗಿಯಂತೆ ವಿವರಿಸುತ್ತಿದ್ದರು.

‘ಇನ್ನು ಮುಂದಿನ ಗುರಿ ಏನು?’ ಎಂದು ಕೇಳಿದೆ.

‘ಇನ್ನು ಏನು ಅಂತ ಹೇಳಲಿ ಸ್ವರ್ಗಕ್ಕೆ ಹೋಗಲು ಬೇಜಾರು’ ಎಂದರು.

ಅವರಿಗೆ ಸ್ವರ್ಗಕ್ಕೆ ಹೋಗಲು ಬೇಜಾರು ಏಕೆ ಅಂದರೆ ಅವರ ದ್ವೀಪ ‘ಮಿನಿಕಾಯ್’ ಸ್ವರ್ಗಕ್ಕಿಂತ ಚಂದವಂತೆ.

(ಫೋಟೋಗಳು: ಅಬ್ದುಲ್‌ ರಶೀದ್)

ಅದು ಸುಳ್ಳಲ್ಲ. ನಿಜವೂ ಕೂಡಾ. ಧರ್ಮ ಗ್ರಂಥಗಳಲ್ಲಿರುವ ಸ್ವರ್ಗದ ವಿವರಗಳಲ್ಲಿರುವ ಎಲ್ಲ ಸೌಂದರ್ಯವನ್ನೂ ನಾನೂ ಇಲ್ಲಿ ಸ್ವತಃ ಕಂಡಿದ್ದೆ. ಆದರೆ ಯಾಕೋ ಅಪ್ಸರೆಯರು ಕಾಣಿಸುತ್ತಿಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ. ಒಂದು ಮಧ್ಯಾಹ್ನ ಬಿಸಿಲಲ್ಲಿ ತಿರುಗಿ ಬಸವಳಿದು ಒಂದು ನಿಂಬೂ ಪಾನಿಯ ಅಂಗಡಿಗೆ ಹೋಗಿದ್ದೆ. ಅದು ನಿಜವಾಗಿ ಒಂದು ದಿನಸಿ ಅಂಗಡಿ. ಆ ಅಂಗಡಿಯೊಳಗೇ ಒಂದು ಮೂಲೆಯಲ್ಲಿ ನಿಂಬೂ ಪಾನಿಯ ಅಂಗಡಿ. ಅದನ್ನು ನಡೆಸುತ್ತಿರುವವರು ದಿನಸಿ ಅಂಗಡಿಯ ಮಾಲಿಕರ ಮಡದಿಯೂ ಇರಬಹುದು. ಅಥವಾ ಮಗಳೂ ಆಗಿರಬಹುದು. ಆಕೆ ಸಾಕ್ಷಾತ್ ಅಪ್ಸರೆಯ ಹಾಗೆ ಬೆಳಗುತ್ತಿದ್ದಳು. ದೂರದಿಂದಲೇ ಆ ದಿವ್ಯ ಸೌಂದರ್ಯದ ದರ್ಶನ ಪಡೆದು ನಿಂಬೂಪಾನಿಯನ್ನು ಮುಗಿಸಿ ವಾಪಾಸಾಗಿದ್ದೆ. ಈ ದ್ವೀಪಕ್ಕೆ ಸೇರಿಯೇ ಇಲ್ಲ. ಬಹುಶಃ ಬೇರೊಂದು ಲೋಕದಿಂದ ಬಂದು ಇಲ್ಲಿ ನೆಲೆಸಿರುವ ಹೌರಿ ಇವಳು ಎಂದು ನನ್ನ ಕಲ್ಪನಾ ಮೂಸೆಯೊಳಗೆ ಆ ಸ್ವರ್ಗ ಸೌಂದರ್ಯವನ್ನು ಸೇರಿಸಿಕೊಂಡುಬಿಟ್ಟೆ. ‘ಛೆ, ನೀವು ಆ ಸ್ವರ್ಗ ಸುಂದರಿಯ ಒಂದು ಚಿತ್ರವನ್ನಾದರೂ ಇಲ್ಲಿ ಹಾಕಬೇಕಾಗಿತ್ತು’ ಎಂದು ನಿಮ್ಮಲ್ಲಿ ಕೆಲವರು ಸೌಂದರ್ಯೋಪಾಸಕರಿಗೆ ಅನಿಸಬಹುದು. ಹಾಗೆ ಚಿತ್ರ ತೆಗೆಯುವುದು ತಪ್ಪು. ಆದರೆ ಯೋಚಿಸುವುದು ತಪ್ಪಲ್ಲ. ಬಹಳಷ್ಟು ಸೌಂದರ್ಯಗಳನ್ನು ಕಲ್ಪನಾ ಮೂಸೆಯೊಳಗೆ ಸೇರಿಸಿಕೊಂಡು ಬಿಡುವುದು ಲೌಕಿಕವಾದ ಅದರ ಮೇಲಿನ ಇಚ್ಛೆಗಳಿಗಿಂತ ಹಿತಕರ ಎನ್ನುವುದು ನನ್ನ ಸ್ವಂತ ಅನುಭವದ ಮಾತು. ಅದನ್ನು ಪಾಲಿಸುವುದು ನಿಮಗೆ ಬಿಟ್ಟದ್ದು!

ಆ ಮಾಯದಂತಹ ಮಳೆಯ ಮಧ್ಯಾಹ್ನ ಸಣ್ಣ ನಿದ್ದೆಯಿಂದ ಹೊರಬಂದು ಕಣ್ಣು ಬಿಟ್ಟಾಗ ಮಿನಿಕಾಯ್ ದ್ವೀಪ ತಾನು ನಿಜವಾದ ಸ್ವರ್ಗವೇನೋ ಅಂದುಕೊಂಡು ಹೊಳೆಯುತ್ತಿತ್ತು. ತೆಂಗಿನ ಗರಿಗಳಲ್ಲಿ ಇನ್ನೂ ಹೊಳೆಯುವ ಮಳೆಯ ಹನಿಗಳು. ತುಂಬಿತುಳುಕುತ್ತ ಹಸಿರಾಗಿ ಹೊಳೆಯುತ್ತಿರುವ ಲಗೂನ್ ಕಡಲು. ಒದ್ದೆ ಮರಳ ಮೇಲೆ ನಡೆಯುತ್ತಿರುವ ಪುಟ್ಟ ಹಕ್ಕಿಗಳು. ಪಡುವಣದಲ್ಲಿ ಉಳಿದಿರುವ ಒಂದೆರೆಡು ಮೋಡಗಳ ನಡುವೆ ಕದ್ದು ಮುಚ್ಚಿ ಓಡಾಡುತ್ತಿರುವ ಏರು ಸಂಜೆಯ ಚುರುಕು ಸೂರ್ಯ.
ಜನರೇ ಇಲ್ಲದ ಆ ಬೆಳಕಿನಲ್ಲಿ ದೂರದಿಂದ ಒಂದು ಕುಟುಂಬ ನಡೆದು ಬರುತ್ತಿತ್ತು. ಸಾಧಾರಣವಾಗಿ ಈ ದ್ವೀಪಗಳಲ್ಲಿ ಒಂದು ಕುಟುಂಬ ಹೀಗೆ ಒಟ್ಟಾಗಿ ಕಡಲ ತೀರದಲ್ಲಿ ನಡೆಯುವುದು ಬಹಳ ಕಡಿಮೆ. ಹೆಂಗಸರು ತಮ್ಮ ಕೆಲಸಗಳಲ್ಲಿ ಹರಟೆಯಲ್ಲಿ ಒಂದು ಗುಂಪಿನಲ್ಲಿರುತ್ತಾರೆ. ಗಂಡಸರೂ ಅಷ್ಟೆ ಗಂಡಸರ ಗುಂಪಿನಲ್ಲಿರುತ್ತಾರೆ. ಹುಡುಗರೂ, ಹುಡುಗಿಯರೂ, ಯುವಕರೂ, ಯುವತಿಯರೂ ವೃದ್ಧರೂ, ನಿವೃತ್ತರೂ ತಮ್ಮ ತಮ್ಮ ವಯೋಮಾನದ ಗುಂಪುಗಳಲ್ಲಿರುತ್ತಾರೆ. ಒಂದು ಕುಟುಂಬ ಎಂದು ಜೊತೆಗೆ ಓಡಾಡುವವರು ಬಹುತೇಕ ಪ್ರವಾಸಿಗಳು ಅಥವಾ ಹೊರಗಿನಿಂದ ನೌಕರಿಗೆ ಬಂದಿರುವ ಉದ್ಯೋಗಸ್ಥರು.

ಆದರೆ ಅಚ್ಚರಿಯಾಗುವಂತೆ ಅದೇ ದ್ವೀಪದ ಕುಟುಂಬವೊಂದು ಆ ಇಳಿ ಹಗಲು ಮಳೆ ನಿಂತು ಹೊಳೆಯುತ್ತಿದ್ದ ಲಗೂನಿನ ಒದ್ದೆ ಮರಳಲ್ಲಿ ದೂರದಿಂದ ನಡೆದು ಬರುತ್ತಿತ್ತು. ಪುಟ್ಟ ಬಾಲಕನೊಬ್ಬ ಕೈಯಲ್ಲಿ ಒಂದು ಕರಿಯ ಗಾಳಿಪಟ ಹಾರಿಸಿಕೊಂಡು ಓಡಿ ಬರುತ್ತಿದ್ದ. ಅವನ ಹಿಂದಿನಿಂದ ಕೂಸೊಂದನ್ನು ತೋಳಲ್ಲೆ ಎತ್ತಿಕೊಂಡು ನಡೆದು ಬರುತ್ತಿದ್ದ ಒಬ್ಬ ಗಂಡಸು. ಆತನ ಹಿಂದೆ ಒಬ್ಬಳು ಸ್ತ್ರೀ. ಅವಳ ಮುಖದಲ್ಲಿ ಅಂತಹ ಉಲ್ಲಾಸವೇನೂ ಇರಲಿಲ್ಲ. ಅವರ ಹಳೆಯ ದೋಣಿ ತುಂಬಿ ತೊನೆಯುತ್ತಿರುವ ಲಗೂನಿನ ನಡುವಲ್ಲಿ ತಾನೂ ತೊನೆದಾಡುತ್ತಿತ್ತು. ಮಧ್ಯಾಹ್ನ ಸುರಿದ ಮಳೆಗೆ ಆ ದೋಣಿಯೊಳಗೆ ನೀರು ಸೇರಿಕೊಂಡು ಅದು ಮುಳುಗಿಬಿಡುವ ಅಪಾಯದಲ್ಲಿತ್ತು. ಅದನ್ನು ಉಳಿಸಿಕೊಳ್ಳಲು ಆ ಕುಟುಂಬ ಅಲ್ಲಿಗೆ ಧಾವಿಸಿ ಬರುತ್ತಿತ್ತು. ಒಲ್ಲದ ಮಗನನ್ನು ಪುಸಲಾಯಿಸಲು ಆ ಗಾಳಿಪಟವನ್ನು ಆಮಿಷದಂತೆ ಬಳಸಲಾಗಿತ್ತು.
ನಾಲ್ಕು ಜೀವಗಳಿರುವ ಈ ಕುಟುಂಬದ ಕಥೆ ಬಹಳ ವಿಶೇಷವಾಗಿದೆ.

ಅದನ್ನು ಮುಂದಿನ ಕಂತಿನಲ್ಲಿ ಹೇಳುವೆ…

10. ಹಸಿರು ಕಡಲ ಹೆಣ್ಣಾಮೆಯ ಪ್ರಸವ ಪ್ರಸಂಗ

ಇದನ್ನು ಬರೆಯುವ ಹೊತ್ತಲ್ಲಿ ಇದು ನಡೆದಾಗ ನಿಜಕ್ಕೂ ನಾನು ಅಲ್ಲಿದ್ದೆ ಎಂದು ನಂಬಲಾಗುತ್ತಿಲ್ಲ. ಕಣ್ಣಾರೆ ಕಂಡಿದ್ದರೂ ಕನಸಿನಲ್ಲಿ ನೋಡಿದಂತಿದೆ. ನಾನು ನೋಡಿದ್ದು ನಿಜವಿರಬಹುದೇ ಎಂದು ಇದೀಗ ಸ್ವಲ್ಪ ಹೊತ್ತಿಗೆ ಮೊದಲು ಮತ್ತೆ ಅಲ್ಲಿಗೆ ಹೋಗಿ ನೋಡಿ ಬಂದೆ. ನಾನು ನೋಡಿದ್ದು ನಿಜವಾಗಿಯೂ ಸತ್ಯ ಅನ್ನುವುದಕ್ಕೆ ಸಾಕ್ಷಿಯಾಗಿ ಆ ಜಾಗದಲ್ಲಿ ನಾಲ್ಕಾರು ಕಲ್ಲುಗಳನ್ನಿಟ್ಟು ಗುರುತು ಮಾಡಿದ್ದರು. ನಾಳೆ ಬಹುಶಃ ಈ ಜಾಗವನ್ನು ಸುರಕ್ಷಿತ ಪ್ರದೇಶ ಎಂದು ಘೋಷಿಸಬಹುದು. ಅದಾಗಿ ಇನ್ನು ಸುಮಾರು ಎರಡೂವರೆ ತಿಂಗಳು ಕಳೆದರೆ ಅಂದರೆ ಒಂದು ದೊಡ್ಡ ಮಳೆಗಾಲದ ನಡುವೆ ಒಂದು ಇರುಳು ಈ ಮರಳು ಗುಂಡಿಯನ್ನು ತಮ್ಮ ಕೋಮಲ ಕೈಗಳಿಂದ ಮೆಲ್ಲಗೆ ಬಗೆದು ನೂರಾರು ಹಸಿರು ಕಡಲಾಮೆ ಮರಿಗಳು ಸಾಲುಸಾಲಾಗಿ ಹೊರಬರುತ್ತವೆ. ಆಗ ಸುಂಯ್ಯೋ ಹುಯ್ಯುವ ಮಳೆಯಲ್ಲಿ, ಗಾಳಿಯ ಅಬ್ಬರದಲ್ಲಿ ಮೋಡಗಳ ನಡುವಿನ ಚಂದ್ರ, ನಕ್ಷತ್ರಗಳ ಆಕಾಶದ ಬೆಳಕಲ್ಲಿ ಕಡಲ ನೀರು ಹೊಳೆಯುತ್ತವೆ. ಆ ಬೆಳಕನ್ನು ಗುರಿಯಾಗಿಟ್ಟುಕೊಂಡ ಈ ಮರಿಗಳು ಕಡಲ ನೀರಿಗೆ ಇಳಿದು ಮಾಯವಾಗುತ್ತವೆ.

ಆಗ ಪುಣ್ಯವಿದ್ದರೆ ಇನ್ನೂ ಇಲ್ಲಿದ್ದರೆ, ಬದುಕಿದ್ದರೆ ನಾನೂ ಅದನ್ನು ನೋಡುತ್ತೇನೆ ಎಂದುಕೊಂಡು ಆ ಜಾಗದ ಒಂದೇ ಒಂದು ಫೋಟೋ ತೆಗೆದು ಹಿಂತಿರುಗಿದ್ದೇನೆ.

ನಿನ್ನೆ ಸಂಜೆ ಕೊರೋನಾ ಕರ್ಫ್ಯೂ ಮತ್ತು ಉಪವಾಸ ವ್ರತ ಮುಗಿಸುವ ಹೊತ್ತು. ಉಳಿದ ದಿನಗಳಲ್ಲಾದರೆ ದ್ವೀಪದ ಈ ನಿರ್ಜನ ಮೂಲೆಯಲ್ಲಿ ಒಂದಿಬ್ಬರು ಮೀನುಗಾರರಾದರೂ ಗಾಳ ಹಿಡಿದುಕೊಂಡು ನಿಂತಿರುತ್ತಾರೆ. ಒಂದಿಷ್ಟು ಸಂಸಾರಗಳೂ, ಒಂದಿಬ್ಬರು ಪ್ರೇಮಿಗಳೂ ಸೂರ್ಯ ಮುಳುಗುವುದನ್ನು ನೋಡುತ್ತಾ ಮರಳಲ್ಲಿ ಕುಳಿತಿರುತ್ತಾರೆ. ಉಪವಾಸದ ದಿನಗಳ ಸಂಜೆಯಲ್ಲಿ ಇಷ್ಟು ದೂರದ ಮೂಲೆಗೆ ಯಾರೂ ಬರುವವರಿಲ್ಲ. ಅದರ ಜೊತೆ ಕರ್ಫ್ಯೂ ಕಾರಣ ಒಂದು ನರಪಿಳ್ಳೆಯೂ ಸುಳಿಯುವ ಹಾಗಿಲ್ಲ. ನಾನಾದರೋ ಕರ್ತವ್ಯ ನಿಮಿತ್ತ ಓಡಾಡಬಹುದು. ಹಾಗೆ ಕರ್ತವ್ಯ ಮುಗಿಸಿ ಖಿನ್ನನಾಗಿ ಕಡಲಿನ ಈ ಮೂಲೆಗೆ ಬಂದು ಕುಳಿತಿದ್ದೆ. ಒಂದು ಜೋಡಿ ಕ್ರೌಂಚ ಪಕ್ಷಿಗಳ ಹೊರತಾಗಿ ಉಳಿದೆಲ್ಲ ಕಡಲ ಹಕ್ಕಿಗಳೂ ವಾಪಾಸಾಗಿದ್ದವು. ಇನ್ನು ಏನಿದ್ದರೂ ಕಡಲ ಮರಳಲ್ಲಿ ಏಡಿಗಳು ಮತ್ತು ಶಂಕುಹುಳುಗಳ ಸಾಮ್ರಾಜ್ಯ. ಆ ಕ್ರೌಂಚಪಕ್ಷಿಗಳಾದರೋ ಹಾಳಾಗಿ ಬಿದ್ದಿದ್ದ ಹಳೆಯ ಹಡಗೊಂದರ ಮುಂಭಾಗದ ತುದಿಯೇರಿ ನಿಂತು ತಾವೇ ಅದನ್ನು ನಡೆಸುತ್ತಿರುವ ಕಪ್ತಾನರೇನೂ ಎನ್ನುವ ಹಾಗೆ ಹುಸಿ ಬಿಂಕದಲ್ಲಿ ಕುಳಿತಿದ್ದೆವು.

ಬಹುಶಃ ಹಕ್ಕಿಗಳೂ ಮನುಷ್ಯರ ಹಾಗೆ ಭ್ರಮಾಧೀನರಾಗುವ ಕಾಲ ಬಂದಿರಬಹುದು ಎಂದು ಅತ್ತ ಕಡೆ ಕ್ಯಾಮರಾ ಹೊರಳಿಸುತ್ತಿದ್ದಂತೆ ಪಕ್ಕದಲ್ಲೇ ಮರಳು ಬಗೆಯುವ ಸದ್ದು ಕೇಳಿಸುತ್ತಿತ್ತು.

ನೋಡಿದರೆ ಅದೊಂದು ದೊಡ್ಡ ಹಸಿರು ಹೆಣ್ಣು ಕಡಲಾಮೆ. ಮೊಟ್ಟೆ ಹಾಕಲು ಅದಾಗಲೇ ಗುಳಿತೋಡಿ ಬಹುತೇಕ ಮೊಟ್ಟೆಗಳನ್ನು ಇಟ್ಟು ಮುಗಿಸಿ ಇನ್ನೂ ಉಳಿದಿರುವ ಮೊಟ್ಟೆಗಳನ್ನು ಇಡುವ ಪ್ರಸವ ವೇದನೆ ಅನುಭವಿಸುತ್ತಾ ಅದೇ ನೋವಿನ ಕಣ್ಣಲ್ಲಿ ಅಪರಿಚಿತನೂ ಆಗಂತುಕನೂ ಆದ ನನ್ನನ್ನು ಭಯದಿಂದಲೂ, ಅನುಮಾನದಿಂದಲೂ ನೋಡುತ್ತಿತ್ತು. ಹಸಿರು ಕಡಲಾಮೆ ಅಂದರೆ ಅದರ ಬಣ್ಣ ಹಸುರಾಗಿದೆ ಎಂಬ ಅರ್ಥವಲ್ಲ. ಅದರ ದೇಹದಲ್ಲಿರುವ ಕೊಬ್ಬಿನ ಬಣ್ಣ ಹಸಿರು ಅದಕ್ಕೆ. ಅದರ ದೇಹದ ಕೊಬ್ಬಿನ ಬಣ್ಣ ಹಸಿರು ಯಾಕೆಂದರೆ ಅದು ತಿನ್ನುವುದು ಕಡಲ ತಳದಲ್ಲಿರುವ ಹಸಿರು ಸಸ್ಯ ಮತ್ತು ಪಾಚಿಗಳನ್ನು. ಈ ಹಸಿರು ಕೊಬ್ಬಿಗೆ ಒಂದು ಕಾಲದಲ್ಲಿ ಬಹಳ ಬೇಡಿಕೆ ಇತ್ತು. ಮನುಷ್ಯರು ಮೊಟ್ಟೆಹಾಕಲು ತೀರಕ್ಕೆ ಬರುವ ಈ ಬೃಹತ್ ಹೆಣ್ಣು ಕಡಲಾಮೆಗಳನ್ನು ಕೊಂದು ಅದರ ಕೊಬ್ಬನ್ನು ನಾಡ ದೋಣಿಗಳಿಗೆ ಬಣ್ಣ ಬಳಿಯಲು ಬಳಸುತ್ತಿದ್ದರು. ಹತ್ತಾರು ವರ್ಷಗಳ ಕಾಲ ನೀರಲ್ಲಿ ಲಂಗರು ಹಾಕಿ ನಿಲ್ಲಿಸಿದರೂ ಈ ಹಸಿರು ಬಣ್ಣದಿಂದಾಗಿ ದೋಣಿಗಳು ಹಾಳಾಗುತ್ತಿರಲಿಲ್ಲ. ಮೊಟ್ಟೆ ಇಡಲು ತೀರಕ್ಕೆ ಬರುತ್ತಿದ್ದ ಈ ಹೆಣ್ಣು ಕಡಲಾಮೆಗಳನ್ನು ಹಿಡಿದು ಅದರ ಮಾಂಸವನ್ನೂ ಮೊಟ್ಟೆಗಳನ್ನೂ ಉಕ್ಕಿನ ಕವಚದ ಹಾಗಿರುವ ಅದರ ಚಿಪ್ಪನ್ನೂ ಬಳಸುತ್ತಿದ್ದರು.

ಈಗೀಗ ಈ ಕಡಲಾಮೆಗಳು ಮನುಷ್ಯ ವಾಸಿಸುವ ತೀರಗಳಿಗೆ ಬರಲು ಹೆದರುತ್ತವೆ. ಆದರೆ ಅವುಗಳ ಕುಲಾಚಾರ ಹೇಗಿದೆ ಅಂದರೆ ಗರ್ಭ ಧರಿಸಿದ ಹೆಣ್ಣು ಕಡಲಾಮೆ ಮೊಟ್ಟೆ ಇಡಲು ಪುನಃ ತಾನು ಮೊಟ್ಟೆಯೊಡೆದು ಹೊರಬಂದ ಕಡಲ ತೀರಕ್ಕೇ ಬರಬೇಕಾಗುತ್ತದೆ. ಇದು ಅವುಗಳ ವಂಶವಾಹಿನಿಯಲ್ಲೇ ಬರೆದಿಟ್ಟಿರುವ ಕುಲಾಚಾರ! ಅದೆಷ್ಟು ಸಾವಿರ ಹರದಾರಿ ಸಾಗರದೊಳಗೆ ಈಜಿ ದೂರಹೋಗಿದ್ದರೂ ಪ್ರಸವ ವೇದನೆಯ ಹೊತ್ತಲ್ಲಿ ಮರಳಿ ತವರಿಗೆ ಬರಬೇಕಾಗುತ್ತದೆ. ಅದು ಅದರ ಕುಲದ ಕರ್ಮ. ಮೊಟ್ಟೆ ಇಡಲು ಹೆಣ್ಣಾಮೆ ತವರಿಗೆ ಮರಳಲೇ ಬೇಕು. ಗಂಡು ಆಮೆಗೆ ಗಂಡು ಮನುಷ್ಯರ ಹಾಗೆ ಅಂತಹ ಗಹನ ಜೈವಿಕ ಕರ್ಮಗಳೇನೂ ಇಲ್ಲ. ಅದೆಷ್ಟು ಕ್ಷಿಪ್ರವಾಗಿ ಸಾಧ್ಯವೋ ಅಷ್ಟು ಕ್ಷಿಪ್ರವಾಗಿ ಹೆಣ್ಣಾಮೆಯನ್ನು ಗರ್ಭವತಿಯಾಗಿ ಮಾಡಿದರೆ ಸಾಕು. ಆ ಮೇಲೆ ಹಾಯಾಗಿ ಕಡಲೊಳಗೆ ಓಡಾಡಿಕೊಂಡಿರುತ್ತವೆ. ಈ ಬೃಹತ್ ಪ್ರಸವ ವೇದನೆಯ ಸಂಕಟಗಳು ಕಳೆದು ಮತ್ತೆ ಗರ್ಭವತಿಯಾಗಲು ಈ ಹೆಣ್ಣಾಮೆಗೆ ಇನ್ನೂ ಎರಡು ವಸಂತಗಳಾದರೂ ಬೇಕು.
ಆದರೆ ಗಂಡಾಮೆಗಳಿಗೆ ಕಾಲದ ಹಂಗೂ ಇಲ್ಲ.!

ಆ ಹೆಣ್ಣು ಹಸಿರು ಕಡಲಾಮೆ ನನ್ನ ಕಡೆಗೆ ತನ್ನ ಕುಂಡೆ ತಿರುಗಿಸಿ ತನ್ನ ಹಿಂಭಾಗದ ನಖವಿರುವ ಪಾದಗಳಿಂದ ಒದ್ದೆ ಮರಳನ್ನು ಬಗೆದು ಗುಳಿ ತೋಡಿ ಮೊಟ್ಟೆಗಳನ್ನಿಟ್ಟು ಮತ್ತೆ ಆ ಗುಳಿಯನ್ನು ಮುಚ್ಚುತಿತ್ತು. ತಾಯ್ತನದ ನೋವಲ್ಲಿದ್ದ ಆ ಹೆಣ್ಣಾಮೆ ನಡುನಡುವೆ ಒಂಚೂರು ತಲೆಯೆತ್ತಿ ನನ್ನ ನೋಡಿ ಮತ್ತೆ ಮುಂದುವರಿಸುತ್ತಿತ್ತು. ಎಷ್ಟು ಅಸಹಾಯಕಳಾದ ತಾಯಿ! ಸಾಧಾರಣವಾಗಿ ಇವುಗಳು ತೀರಕ್ಕೆ ಬರುವುದು ಯಾರೂ ಇಲ್ಲದ ಇರುಳುಗಳಲ್ಲಿ. ಯಾರೂ ಕಾಣದ ಹಾಗೆ ಕಡಲ ಅಲೆ ತಲುಪುವಷ್ಟು ತೀರದಲ್ಲಿ ಗುಳಿತೋಡಿ, ಮೊಟ್ಟೆ ಇಟ್ಟು, ಮೊದಲಿದ್ದ ಹಾಗೆಯೇ ಗುಳಿಮುಚ್ಚಿ, ಅಲ್ಲೇನೂ ನಡೆದೇ ಇಲ್ಲವೇನೋ ಎಂಬಂತೆ ಯಾರೂ ಕಾಪಾಡದ ತನ್ನ ಅಸಹಾಯಕ ಮೊಟ್ಟೆಗಳನ್ನು ಅಲ್ಲೇ ಬಿಟ್ಟು ವಾಪಾಸಾಗಬೇಕಿತ್ತು. ಹೀಗೆ ವಾಪಾಸಾಗುವುದು ಹೆಣ್ಣು ಜೀವಿಯೊಂದರ ಇರುವ ಅಲ್ಪಸ್ವಲ್ಪ ಸ್ವಾತಂತ್ರ್ಯದ ಸಂಕೇತ ಎಂದು ನೀವು ಹೇಳಬಹುದು. ಆದರೆ ಯೋಚಿಸಿ ನೋಡಿ. ತಾನು ಇಡುವ ನೂರಾರು ಮೊಟ್ಟೆಗಳಿಂದ ಹೊರಬರುವ ಮರಿಗಳಲ್ಲಿ ಎಷ್ಟು ಉಳಿದವು. ಎಷ್ಟು ಆಕಾಶದಲ್ಲಿ ಹಾರುವ ಹಕ್ಕಿಗಳಿಗೆ, ಎಷ್ಟು ಕಡಲಲ್ಲಿ ಕಾಯುವ ಮೀನುಗಳಿಗೆ, ಎಷ್ಟು ಮನುಷ್ಯರ ಲಾಲಸೆಗಳಿಗೆ ಆಹಾರವಾದವು ಎಂಬ ಅರಿವೇ ಇಲ್ಲದ ತಾಯೊಬ್ಬಳ ಸ್ವಾತಂತ್ರ್ಯ! ಆದರೆ ಪುರುಷನಾಗಿದ್ದರೆ ತವರ ಸುಖವೂ ಇಲ್ಲ.

ಆ ದೊಡ್ಡ ಹೆಣ್ಣಾಮೆ ಬಹಳಷ್ಟು ಲೆಕ್ಕಾಚಾರ ಹಾಕಿ ಸಾವಿರಾರು ಮೈಲು ದೂರದಿಂದ ಈಜಿ ಬಂದಿರಬಹುದು. ಭೂಮಿಯ ಅಯಸ್ಕಾಂತೀಯ ಗುಣಗಳು ಈ ಹೆಣ್ಣಿಗೆ ತವರಿನ ದಾರಿಯನ್ನು ತೋರಿಸಿರಬಹುದು. ಕಡಲಿನ ಒಳ ಅಲೆಗಳ ಹರಿವು, ಆಕಾಶದ ತಾರೆಗಳ ಲೆಕ್ಕಾಚಾರ, ಕಡಲ ಭರತ ಇಳಿತಗಳ ಪಂಚಾಂಗ, ಹೊಟ್ಟೆಯೊಳಗಿನ ಮೊಟ್ಟೆಗಳ ಜಾತಕದ ಗೋಚಾರ ಫಲ ಎಲ್ಲವೂ ಇದ್ದಿರಬಹುದು. ಆದರೆ ಎಲ್ಲೋ ಲೆಕ್ಕ ತಪ್ಪಿದಂತೆ ಇಳಿ ಹಗಲ ಹೊತ್ತೇ ಸೂರ್ಯ ಮುಳುಗುವ ಮೊದಲೇ ಈ ಆಮೆ ಪ್ರಸವ ಮುಗಿಸಿ ವಾಪಾಸು ಹೋಗುವ ಆತುರದಲ್ಲಿ ಇದ್ದ ಹಾಗಿತ್ತು. ಹಾಗೆ ನೋಡಿದರೆ ನನ್ನ ಕಣ್ಣೆದುರೇ ನಡೆಯುತ್ತಿರುವ ಆಳಸಾಗರ ಜೀವಲೋಕದ ಒಂದು ಅನೂಹ್ಯ ಘಟನೆ. ಆದರೆ ಆ ಹೆಣ್ಣಾಮೆಗಾದರೋ ಅದೊಂದು ನೀಗಿಕೊಳ್ಳಲೇಬೇಕಾದ ಜೈವಿಕ ಕರ್ಮ. ಬಹುಶಃ ಇದರದ್ದು ನಾಲ್ಕನೆಯದೋ ಆರನೆಯದೋ ಪ್ರಸವ ಇರಬಹುದು. ಆರನೆಯ ಬಾರಿಗೂ ಅದೇ ತೀರಕ್ಕೆ ಮರಳಬೇಕಾದ ಪ್ರಾರಬ್ಧ ಕರ್ಮ. ಒಂದು ಸಲ ಮುಗಿದರೆ ಸಾಕು ಅಂತಲೂ ಅನ್ನಿಸಿರಬಹುದು.
ಹೀಗೆ ಏನೇನೋ ಅಂದುಕೊಳ್ಳುತ್ತಾ ಅದರ ಖಾಸಗೀತನಕ್ಕೆ ತೊಂದರೆಯಾಗದ ಹಾಗೆ ಫೋಟೋ ತೆಗೆಯುತ್ತಿದ್ದೆ.

(ಫೋಟೋಗಳು: ಅಬ್ದುಲ್‌ ರಶೀದ್)

ಆ ಮಹಾತಾಯಿ ಒಬ್ಬಳು ಶಿಸ್ತುಗಾರ್ತಿ ಮನೆವಾರ್ತೆಯಾಕೆಯ ಹಾಗೆ ಗುಳಿಯನ್ನು ನೀಟಾಗಿ ಮುಗಿಸಿ, ಮೊದಲಿದ್ದ ಹಾಗೆಯೇ ಹುಲ್ಲು ಕಸ ಕಡ್ಡಿಗಳನ್ನು ಸಾಧ್ಯವಾದಷ್ಟು ಮೊದಲಿದ್ದ ಹಾಗೆಯೇ ಮುಚ್ಚಿ, ತಲೆಯೆತ್ತಿ ನನ್ನನೊಮ್ಮೆ ದೀರ್ಘವಾಗಿ ನೋಡಿ ಮೆಲ್ಲನೆ ಕಡಲಕಡೆ ನಡೆಯತೊಡಗಿತು. ಬವಳಿ ಸುಸ್ತಾಗಿದ್ದ ತಾಯಿ. ಅದಕ್ಕೆ ಬಹುಶಃ ಮನುಷ್ಯ ಲೋಕದ ಜೈವಿಕ ಕರ್ಮಗಳ ಕುರಿತ ಅರಿವು ಇದ್ದ ಹಾಗಿತ್ತು.

‘ಗಂಡಸು ನೆಲದಲ್ಲಿದರೂ ಗಂಡಸೇ, ಕಡಲೊಳಗಿದ್ದರೂ ಗಂಡಸೇ, ನಿಮ್ಮದು ಒಂದು ಜನ್ಮವಾ’ ಎಂದು ಬೈದ ಹಾಗಿತ್ತು.

‘ಗಂಡಸರ ಪ್ರಸವ ವೇದನೆಗಳು ನಿನಗೇನು ಗೊತ್ತು ತಾಯೀ’ ಎಂದು ಅದನ್ನು ಅಲೆಗಳ ತನಕ ಬೀಳುಕೊಂಡೆ.
ಅದು ಕಡಲ ನೀರು ಮೈಗೆ ಸೋಕುತ್ತಿದ್ದಂತೆಯೇ ತನ್ನ ಆಜಾನುಬಾಹುಗಳನ್ನು ಬೀಸುತ್ತಾ ಕಡಲಲ್ಲಿ ಲೀನವಾಯಿತು. ಅದು ಓಡುತ್ತಿದ್ದ ವೇಗ ನೋಡಿದರೆ ಅಲ್ಲೇ ಎಲ್ಲೋ ಒಂದು ಕಡೆ ಅದರ ಪ್ರಿಯಕರ ಗಂಡಾಮೆ ಸಾಂತ್ವನ ಹೇಳಲು ಕಾಯುತ್ತಿದ್ದ ಹಾಗೆ ಇತ್ತು.

ನನಗೆ ನಿಜಕ್ಕೂ ಸಂಕಟವಾಗಿದ್ದು ಆ ಹೆಣ್ಣಾಮೆ ತೀರದಿಂದ ವಾಪಾಸು ತೆರಳುವಾಗ ನಡುವೆ ಇದ್ದ ಬೆಣಚು ಕಲ್ಲಿನ ಪುಟ್ಟ ಬಂಡೆಗಳನ್ನು ದಾಟಲು ಪಡುತ್ತಿದ್ದ ಕಷ್ಟ ಮತ್ತು ಹಾಗೆ ದಾಟುತ್ತಿದ್ದಾಗ ಅದರ ಕಣ್ಣುಗಳಲ್ಲಿ ಕಾಣುತ್ತಿದ್ದ ಅಸಹಾಯಕತೆ.
ನನಗೆ ಯಾಕೋ ಈಗ ಇದನ್ನು ಬರೆಯುತ್ತಾ ಇನ್ನಷ್ಟು ತಳಮಳವಾಗುತ್ತಿದೆ.
ಈ ಹೆಣ್ಣು ಕಡಲಾಮೆಯ ಫೋಟೋವನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ.

ಬಹುಶಃ ಅದರ ಕಣ್ಣುಗಳು ಘಾಸಿಗೊಂಡಿದೆ ಮತ್ತು ಅದಕ್ಕೆ ಏನೂ ಕಾಣಿಸುತ್ತಿರಲಿಲ್ಲ ಅನಿಸುತ್ತಿದೆ. ಬಹುಶಃ ಅದಕ್ಕೇ ಅದು ಸಮಯ ತಪ್ಪಿ ಅಲ್ಲಿಗೆ ಬಂದಿದೆ ಎಂದೂ ಅನಿಸುತ್ತಿದೆ. ಬಹುಶಃ ಅದು ನಿಜವಿರಲಿಕ್ಕಿಲ್ಲ. ಇದೂ ಕೇವಲ ಒಂದು ಭಯವಾಗಿರಬಹುದು ಅಂತಲೂ ಅನಿಸುತ್ತಿದೆ.

ಯಾಕೋ ಇವತ್ತು ಇದನ್ನು ಬರೆಯಲೇಬೇಕೆನಿಸಿತು, ಮಿನಿಕಾಯ್ ಕತೆಗಳು ಮುಂದಿನ ಕಂತಿನಿಂದ ಮತ್ತೆ.

(ಮರೆತ ವಿಷಯ: ಅಲ್ಲಿಂದ ವಾಪಾಸಾಗುವಾಗ ಸಾಗರ ವನ್ಯಜೀವಿ ಪಡೆಯ ಗೆಳೆಯರಿಗೆ ಕಡಲಾಮೆ ಮೊಟ್ಟೆಯಿಟ್ಟ ಸ್ಥಳದ ವಿವರ ತಿಳಿಸಿದೆ. ಅವರು ಇನ್ನು ಕಡಲಾಮೆ ಮರಿಗಳು ಹೊರಬರುವವರೆಗೆ ಅದನ್ನು ಕಾಯುತ್ತಾರೆ. ಇನ್ನು ಅಲ್ಲಿ ಹೋದಾಗ ಮಾತನಾಡಲು ಇನ್ನೂ ಒಂದಿಷ್ಟು ಗೆಳೆಯರು ಸಿಗುತ್ತಾರೆ. ಈ ಹಸಿರು ಕಡಲಾಮೆಗಳ ಜೀವನ ವೃತ್ತಾಂತ ನೋಡಬಯಸುವವರು green turtle ಎಂದು ಟೈಪ್ ಮಾಡಿದರೆ ತಿಂಗಳುಗಟ್ಟಲೆ ಓದುವಷ್ಟು ವಿವರಗಳು ದೊರೆಯುತ್ತವೆ)

(ಮುಂದುವರಿಯುವುದು)

ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ