ವಾರ್ಷಿಕ ಪರೀಕ್ಷೆ ಮುಗಿದ ಕೂಡಲೆ ಮುಂದಿನ ಇಯತ್ತೆಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಅರ್ಧ ಬೆಲೆಗೆ ಖರೀದಿಸುವ ತವಕ ಪ್ರತಿಯೊಬ್ಬ ಬಡ ವಿದ್ಯಾರ್ಥಿಗೆ ಸಾಮಾನ್ಯವಾಗಿತ್ತು.. ನಮ್ಮ ಮುಂದಿನ ಇಯತ್ತೆಯ ವಿದ್ಯಾರ್ಥಿಗಳಲ್ಲಿ ಯಾರು ಚೆನ್ನಾಗಿ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ ಎಂಬುದನ್ನು ನಾವು ಗಮನಿಸುತ್ತಿದ್ದೆವು. ಪರೀಕ್ಷೆ ಮುಗಿದ ಕೂಡಲೆ ಅವರ ಮನೆಗೆ ಹೋಗಿ ಪುಸ್ತಕಗಳ ಖರೀದಿಗೂ ಸಮಯ ಮೀಸಲಿಡಬೇಕಿತ್ತು. ಎಲ್ಲರಿಗೂ ಎಲ್ಲ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಒಮ್ಮೆಲೆ ಕೊಳ್ಳಲಿಕ್ಕಾಗುತ್ತಿರಲಿಲ್ಲ. ಒಂದೊಂದು ಸಲ ಇನ್ನೊಬ್ಬ ಸಹಪಾಠಿಯ ಜೊತೆಯಲ್ಲಿ ಹೋಗಬೇಕಾಗುತ್ತಿತ್ತು. ಹೀಗೆ ಪುಸ್ತಕಗಳನ್ನು ಹಂಚಿಕೊಂಡು ಖರೀದಿಸುತ್ತಿದ್ದೆವು. ಪುಸ್ತಕಗಳನ್ನು ತಿರುತಿರುಗಿ ನೋಡುತ್ತ ಅದರೊಳಗಿನ ದೋಷಗಳನ್ನು ಕಂಡುಹಿಡಿಯುವುದರಲ್ಲಿ ತಲ್ಲೀನರಾಗುತ್ತಿದ್ದೆವು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಇಪ್ಪತ್ತೇಳನೆಯ ಕಂತು
ಹಿರೇಮಠ ಸಂಗಯ್ಯಾ, ಕುಂಬಾರ, ಸೂರ್ಯಕಾಂತ, ಹಾರೂನ್ ರಶೀದ್, ರಹಮಾನ್, ಜಗ್ಗು, ಬಾಪು, ಕೃಷ್ಣಾ, ಮರಗು, ವಾಡೇದ, ಮುರಿಗೆಪ್ಪ, ಮುರನಾಳ ಮುಂತಾದ ನನ್ನ ಪ್ರಾಥಮಿಕ ಶಾಲೆಯ ಗೆಳೆಯರಲ್ಲದೆ ಓಣಿಯ ನಾವಿಗಲ್ಲಿಯ ಪಾಂಡು, ಉತ್ತಮ, ಸಂಗು, ಗೌಡರ, ಮುಂತಾದವರು ಆಗಾಗ ನೆನಪಾಗುತ್ತಲೇ ಇರುತ್ತಾರೆ. ನನಗೆ ಪ್ರೀತಿಯಿಂದ ನೋಡಿಕೊಂಡ ನನ್ನ ತಾಯಿಯ ಓರಿಗೆಯವರು ಮತ್ತು ನನ್ನ ಗೆಳೆಯರ ಅಕ್ಕ ತಂಗಿಯರು ಕೂಡ ನೆನಪಾಗುತ್ತಾರೆ. ಆದರೆ ಅವರ ಹೆಸರುಗಳೆಲ್ಲ ಮರೆತು ಹೋದುದಕ್ಕೆ ಒಂದು ತೆರನಾದ ನೋವು ಅನುಭವಿಸುವೆ.
ಘಮಂಡಿಯಲ್ಲಿರುತ್ತಿದ್ದ ಐಗೋಳ ಮಲಕ್ಯಾ, ಕಾಪ್ಸೆ, ಕೊರವರ ಖಗ್ಯಾ ಚಲವಾದಿ ವಿಠ್ಠಲ ಮುಂತಾದವರು ಕೂಡ ನೆನಪಾಗುತ್ತಾರೆ. ನೆನಪಿನಲ್ಲಿ ಎಲ್ಲರೂ ಸುಖ ದುಃಖ ನೆನಪಿಸುತ್ತಾರೆ. ನನಗೆ ನಾನೇ ನಗುವ ಹಾಗೆ ಮಾಡುತ್ತಾರೆ.
ಜಗಳಗಂಟ ಐಗೋಳ ಮಲಕ್ಯಾ ಮಾತಿನಲ್ಲಿ ಬಹಳ ಚತುರನಾಗಿದ್ದ. ಯಾರ ಜೊತೆಗಾದರೂ ಜಗಳ ನಡೆದಿದ್ದರೆ ನಾನು ಅವನ ಮಾತಿನ ಚಮತ್ಕಾರಕ್ಕಾಗಿ ದೂರದಲ್ಲಿ ಹೋಗಿ ನಿಲ್ಲುತ್ತಿದ್ದೆ. ಆತನ ತರ್ಕಬದ್ಧ ಮಾತುಗಳು ಎದುರಾಳಿಯನ್ನು ಧೃತಿಗೆಡಿಸುತ್ತಿದ್ದವು. ಸುಳ್ಳನ್ನು ಸತ್ಯ ಮಾಡುವ ಶಕ್ತಿ ಆತನ ಮಾತಿನ ಮೋಡಿಯಲ್ಲಿತ್ತು. ಮೌನಿ ಕಾಪ್ಸೆ ಹಾವಭಾವದ ಮೂಲಕವೇ ದ್ವೇಷ ಕಾರುತ್ತಿದ್ದ. ಕೊರವರ ಖಗ್ಯಾನ ಸ್ಟೈಲ್ ವಿರೋಚಿತವಾಗಿತ್ತು. ಚಲವಾದಿ ವಿಠ್ಠಲ ಬಹಳ ಹುಂಬನಾಗಿದ್ದ ಆದರೆ ಆತನ ತಮ್ಮ ಚಂದ್ರು ತಮ್ಮ ತಂದೆ ಸಿದ್ರಾಮಪ್ಪನವರ ಹಾಗೆ ಸೌಮ್ಯ ಮತ್ತು ಖುಷಿಕೊಡುವ ವ್ಯಕ್ತಿತ್ವ ಉಳ್ಳವನಾಗಿದ್ದ. ತಾಯಿ ಕೋಂಡುಬಾಯಿ ಸುಂದರ ಮತ್ತು ಧಾಡಸಿ ಹೆಣ್ಣುಮಗಳಾಗಿದ್ದಳು. ರೂಪಾಯಿ ಅಗಲ ಕುಂಕುಮದಿಂದ ಕೂಡಿದ್ದ ಅವಳ ಆಕರ್ಷಕ ನಗುಮುಖ ಇನ್ನೂ ನೆನಪಿದೆ. ನಾವು ಕೊರವರ ಓಣಿಯಲ್ಲಿದ್ದಾಗ ಅವರ ಮನೆಯ ಹಿಂದಿನ ಮನೆಯಲ್ಲಿದ್ದೆವು. ಆ ಪುಟ್ಟ ಮನೆಯ ಮಾಲೀಕರು ಕೂಡ ಅವರೇ ಆಗಿದ್ದರು ಎಂಬ ನೆನಪು. ಹೀಗಾಗಿ ನಾವು ಬಾಲಕರು ಅವರ ಮನೆಯಲ್ಲೇ ಹೆಚ್ಚಾಗಿ ಇರುತ್ತಿದ್ದೆವು. ಆಕೆ ಹೊರಗಡೆ ಯಾರ ಜೊತೆಗೂ ತಕರಾರು ಮಾಡುತ್ತಿರಲಿಲ್ಲ. ಆದರೆ ಗಂಡನಿಗೆ ಬಹಳ ಜೋರು ಮಾಡುತ್ತಿದ್ದಳು. ದಪ್ಪನೆ ಶರೀರದ ಬಾಯಿ ಸತ್ತ ಗಂಡನಿಗೆ ಕಿರಿಕಿರಿ ಮಾಡುತ್ತಿದ್ದಳು. ಒಂದೊಂದು ಸಲ ಗಂಡನಿಗೆ ಹಿಡಿದು ಹೊಡೆಯುತ್ತಿದ್ದಳು. ‘ಇನಾ ಹೊಡಿತಿನಿ ನಿನಗ ಬಿಡುದಿಲ್ಲಾ’ ಎಂದು ಆತ ಹೊರಗಿನವರಿಗೆ ಕೇಳಿಸುವ ಹಾಗೆ ಜೋರಾಗಿ ಹೇಳುತ್ತಿದ್ದ. ಆದರೆ ವಾಸ್ತವ ಬಲ್ಲ ನೆರೆಮನೆಯವರು ಒಳಗೊಳಗೆ ನಗುತ್ತಿದ್ದರು. ಅಂಥ ಸಂದರ್ಭದಲ್ಲಿ ನಾನು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬರುತ್ತಿದ್ದೆ.
ಕೆಲ ದಿನಗಳ ನಂತರ ಕೋಂಡುಬಾಯಿಯ ಹೊಟ್ಟೆಯಲ್ಲಿ ದೊಡ್ಡ ಗಡ್ಡೆ ಬೆಳೆದದ್ದು ತಿಳಿದುಬಂತು. ಅದ್ಯಾವನೋ ಆರ್.ಎಂ.ಪಿ. ಡಾಕ್ಟರ್ ಅಂಥ ಸಾಮಾನ್ಯ ಡಾಕ್ಟರ್ ಬಂದು ಮನೆಯಲ್ಲೇ ತನ್ನದೇ ಶೈಲಿಯಲ್ಲಿ ಆಪರೇಷನ್ ಎಂಬ ಆಪರೇಷನ್ ಮಾಡಿ ಗಂಟು ಕೀವು ಹೊರಗೆ ತೆಗೆದ. ಇಂದಿನ ಸೂಕ್ಷ್ಮ ವೈದ್ಯಕೀಯ ವಿಜ್ಞಾನದ ರೀತಿನೀತಿ ನೋಡಿದರೆ ಅಂಥ ಆಪರೇಷನ್ ನೆನೆಸಿಕೊಂಡಾಗ ಗಾಬರಿಯಾಗುತ್ತದೆ. ಕೊಂಡುಬಾಯಿ ಆಪರೇಷನ್ ಸಕ್ಸೆಸ್ ಆಯಿತು. ಆಕೆ ಸ್ವಲ್ಪೇ ದಿನಗಳಲ್ಲಿ ಎಂದಿನಂತೆ ಓಡಾಡಿಕೊಂಡು ಇದ್ದಳು.
ಮರಗು ದಪ್ಪನೆಯ ಹುಡುಗನಾಗಿದ್ದರೂ ಬಹಳ ಮುಗ್ಧ ಮತ್ತು ದಡ್ಡನಾಗಿದ್ದ. ಅವನು ನಗುತ್ತಲೇ ಮಾತನಾಡುತ್ತಿದ್ದ. ಮುರಿಗೆಪ್ಪ ಹಾಸ್ಯಭರಿತ ಸ್ಟೈಲ್‌ನಲ್ಲಿ ಮಾತನಾಡುತ್ತಿದ್ದ. ಜಗ್ಗು ಮತ್ತು ಬಾಪು ನಾಲ್ಕನೆಯ ಇಯತ್ತೆಯಲ್ಲಿ ಇದ್ದಾಗಲೇ ಅದಾವುದೋ ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ತಯಾರಿ ನಡೆಸಿದ್ದರು. ನಮ್ಮ ತೆಗ್ಗಿನ ಶಾಲೆಯ ಹೆಡ್ ಮಾಸ್ತರರು ಸ್ಪರ್ಧೆಗಾಗಿ ಅವರ ಹೆಸರನ್ನು ಸೂಚಿಸಿದ್ದರು. ಪಾಟೀಲ ಸರ್ ಅವರ ತಯಾರಿಯನ್ನು ಪರೀಕ್ಷಿಸುತ್ತಿದ್ದರು. ಒಂದು ದಿನ ಅವರಿಬ್ಬರೂ ಸರ್‌ಗೆ ವರದಿ ಒಪ್ಪಿಸುವ ರೀತಿಯಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ಘಟನೆಗಳ ದಿನಾಂಕಗಳನ್ನು ಮತ್ತು ಸಂಬಂಧಪಟ್ಟ ರಾಜರ ಹೆಸರುಗಳನ್ನು ಹೇಳುತ್ತಿದ್ದರು. ಅವರ ತಯಾರಿ ನೋಡಿ ಪಾಟೀಲ ಸರ್ ಖುಷಿ ಪಟ್ಟರು. ನನಗೋ ಅವರ ಪ್ರತಿಭೆ ನೋಡಿ ಗಾಬರಿಯಾಯಿತು.
ವಾರ್ಷಿಕ ಪರೀಕ್ಷೆ ಮುಗಿದ ಕೂಡಲೆ ಮುಂದಿನ ಇಯತ್ತೆಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಅರ್ಧ ಬೆಲೆಗೆ ಖರೀದಿಸುವ ತವಕ ಪ್ರತಿಯೊಬ್ಬ ಬಡ ವಿದ್ಯಾರ್ಥಿಗೆ ಸಾಮಾನ್ಯವಾಗಿತ್ತು.. ನಮ್ಮ ಮುಂದಿನ ಇಯತ್ತೆಯ ವಿದ್ಯಾರ್ಥಿಗಳಲ್ಲಿ ಯಾರು ಚೆನ್ನಾಗಿ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ ಎಂಬುದನ್ನು ನಾವು ಗಮನಿಸುತ್ತಿದ್ದೆವು. ಪರೀಕ್ಷೆ ಮುಗಿದ ಕೂಡಲೆ ಅವರ ಮನೆಗೆ ಹೋಗಿ ಪುಸ್ತಕಗಳ ಖರೀದಿಗೂ ಸಮಯ ಮೀಸಲಿಡಬೇಕಿತ್ತು. ಎಲ್ಲರಿಗೂ ಎಲ್ಲ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಒಮ್ಮೆಲೆ ಕೊಳ್ಳಲಿಕ್ಕಾಗುತ್ತಿರಲಿಲ್ಲ. ಒಂದೊಂದು ಸಲ ಇನ್ನೊಬ್ಬ ಸಹಪಾಠಿಯ ಜೊತೆಯಲ್ಲಿ ಹೋಗಬೇಕಾಗುತ್ತಿತ್ತು. ಹೀಗೆ ಪುಸ್ತಕಗಳನ್ನು ಹಂಚಿಕೊಂಡು ಖರೀದಿಸುತ್ತಿದ್ದೆವು. ಪುಸ್ತಕಗಳನ್ನು ತಿರುತಿರುಗಿ ನೋಡುತ್ತ ಅದರೊಳಗಿನ ದೋಷಗಳನ್ನು ಕಂಡುಹಿಡಿಯುವುದರಲ್ಲಿ ತಲ್ಲೀನರಾಗುತ್ತಿದ್ದೆವು. ಯಾವುದೇ ಒಂದು ಪೇಜ್ ಗಲೀಜಾಗಿದ್ದರೆ ಇಲ್ಲವೆ ಯಾವುದೇ ಹಾಳೆ ಸ್ವಲ್ಪ ಹರಿದಿದ್ದರೆ ಅರ್ಧಬೆಲೆಗಿಂತಲೂ ಸ್ವಲ್ಪ ಕಡಿಮೆ ಮಾಡಲು ಕೇಳಿಕೊಳ್ಳುತ್ತಿದ್ದೆವು.
ನಾವು ನಾಲ್ಕನೆಯ ಇಯತ್ತೆಯಲ್ಲಿ ಓದುವಾಗ ಐದನೇ ಇಯತ್ತೆಯಲ್ಲಿ ಒಬ್ಬ ಲಂಬಾಣಿ ಯುವಕ ಓದುತ್ತಿದ್ದ. ಆತ ಬಹಳ ಚೆನ್ನಾಗಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದ. ಅವನು ತನ್ನ ಪುಸ್ತಕಗಳನ್ನು ನಾನು ಹೋಗುವ ಮೊದಲೇ ಬೇರೆಯವರಿಗೆ ಮಾರಿದ್ದ. ಒಂದು ಪುಸ್ತಕ ಮಾತ್ರ ಉಳಿದಿತ್ತು. ಬಹಳ ಚೆನ್ನಾಗಿ ಇಟ್ಟಿದ್ದ. ಒಂದೇ ಪುಸ್ತಕ ಇರುವುದರಿಂದ ಕಡಿಮೆ ಬೆಲೆಗೆ ಕೇಳಿದೆ. ಮಿತಭಾಷಿಯಾಗಿದ್ದ ಆತ ಒಪ್ಪಲಿಲ್ಲ. ಅವರ ತಂದೆ ಮನೆಯ ಅಂಗಳದಲ್ಲಿ ಕಟ್ಟಿಗೆ ಅಡ್ಡೆ ಇಟ್ಟುಕೊಂಡಿದ್ದರು. ಆತ ಉರುವಲು ಕಟ್ಟಿಗೆ ಮಾರುವುದರಲ್ಲಿ ತಲ್ಲೀನನಾಗಿದ್ದ. ನಾನು ಅರ್ಧ ತಾಸು ಅವನ ಮನೆಯ ಪಕ್ಕದ ರಸ್ತೆಯಲ್ಲಿ ತಿರುಗಾಡುತ್ತ ಹಾಗೂ ಹೀಗೂ ಅರ್ಧ ಗಂಟೆ ಕಳೆದು ಮತ್ತೆ ಬಂದೆ. ಅರ್ಧ ಬೆಲೆಗಿಂತ ಎರಡು ದುಡ್ಡಾದರೂ ಕಡಿಮೆ ಮಾಡಲು ತಿಳಿಸಿದೆ. ಆತ ಅದೇ ಸಮಾಧಾನದಿಂದ ನಿರಾಕರಿಸಿದ. ನಾನು ಮುಂದೆ ಹೆಜ್ಜೆ ಹಾಕಿದೆ ಆತ ಕರೆಯುತ್ತಾನೆ ಎಂಬ ಆಸೆ ಇತ್ತು. ಆದರೆ ಆತ ಕರೆಯಲಿಲ್ಲ. ಏನು ಮಾಡಬೇಕೆಂದು ತೋಚಲಿಲ್ಲ. ಮತ್ತೆ ಸುತ್ತು ಹಾಕುತ್ತ ಯೋಚಿಸಿದೆ. ಎರಡು ದುಡ್ಡು ಹೋದರೆ ಹೋಗಲಿ ಪುಸ್ತಕ ಸೆಕೆಂಡ್ ಹ್ಯಾಂಡ್ ಆದರೂ ಹೊಸ ಪುಸ್ತಕದ ಹಾಗೇ ಇದೆ. ಅದಕ್ಕೆ ಬೇಗಡೆಯಿಂದ ಕವರ್ ಹಾಕಿದ್ದಾನೆ ಎಂದುಕೊಳ್ಳುತ್ತ ಒಂದು ಗಂಟೆ ಬಿಟ್ಟು ಪುಸ್ತಕ ಕೊಳ್ಳುವ ನಿರ್ಧಾರದಿಂದ ಹೋದೆ. ಅಷ್ಟೊತ್ತಿಗಾಗಲೇ ಇನ್ನಾವುದೋ ವಿದ್ಯಾರ್ಥಿ ಬಂದು ಆ ಪುಸ್ತಕವನ್ನು ಅರ್ಧ ಬೆಲೆಗೆ ಖರೀದಿಸಿ ಹೋಗಿದ್ದ! ಆ ನಿರಾಶೆ ಹೇಳತೀರದ್ದು. ಆ ಪುಸ್ತಕಕ್ಕೆ ಹಾಕಿದ ಬೇಗಡೆ ಕವರ್ ಆಗಾಗ ಇನ್ನೂ ಮನದಲ್ಲಿ ಹೊಳೆಯುತ್ತಿರುತ್ತದೆ.
ರೂಪಾಯಿ ಅಗಲ ಕುಂಕುಮದಿಂದ ಕೂಡಿದ್ದ ಅವಳ ಆಕರ್ಷಕ ನಗುಮುಖ ಇನ್ನೂ ನೆನಪಿದೆ. ನಾವು ಕೊರವರ ಓಣಿಯಲ್ಲಿದ್ದಾಗ ಅವರ ಮನೆಯ ಹಿಂದಿನ ಮನೆಯಲ್ಲಿದ್ದೆವು. ಆ ಪುಟ್ಟ ಮನೆಯ ಮಾಲೀಕರು ಕೂಡ ಅವರೇ ಆಗಿದ್ದರು ಎಂಬ ನೆನಪು. ಹೀಗಾಗಿ ನಾವು ಬಾಲಕರು ಅವರ ಮನೆಯಲ್ಲೇ ಹೆಚ್ಚಾಗಿ ಇರುತ್ತಿದ್ದೆವು.
ಶಾಲೆಯಲ್ಲಿ ಒಂದು ವರ್ಷ ಸೀನಿಯರ್ ಆಗಿದ್ದ ಸಂಗಯ್ಯ ಹಿರೇಮಠನ ತಂದೆ ಪ್ರಿಂಟಿಂಗ್ ಪ್ರೆಸ್ ನೌಕರರಾಗಿದ್ದ. ಹೀಗಾಗಿ ಆತ ಸಂಗಯ್ಯನ ಎಲ್ಲ ಪುಸ್ತಕಗಳಿಗೆ ಬೈಂಡ್ ಮಾಡಿರುತ್ತಿದ್ದ. ಆ ಪುಸ್ತಕಗಳನ್ನು ಅರ್ಧಬೆಲೆಗೆ ಪಡೆಯುವುದೆಂದರೆ ಸುಯೋಗವೇ ಸರಿ. ನಾನು 5ನೇ ಇಯತ್ತೆ ಪಾಸಾದಾಗ ಆತ 6ನೇ ಇಯತ್ತೆ ಪಾಸಾಗಿದ್ದ. ಅದು ಹೇಗೋ ಆತ ನನಗೆ ಗೆಳೆಯನಾಗಿದ್ದರಿಂದ ಆ ಪುಸ್ತಕಗಳು ನನಗೆ ಅರ್ಧ ಬೆಲೆಗೆ ಸಿಕ್ಕವು.
ಸಂಗಯ್ಯ ಬಹಳ ಪ್ರತಿಭಾವಂತ ಹಾಡುಗಾರನಾಗಿದ್ದ. ನಾನು ಏಳನೇ ಇಯತ್ತೆಯಲ್ಲಿದ್ದಾಗ ದೋಸ್ತಿ ಸಿನಿಮಾ ಬಂದಿತು. ಆ ಸಿನಿಮಾದ ‘ಮೇರಿ ದೋಸ್ತಿ ಮೇರಾ ಪ್ಯಾರ’ ಹಾಡು ಬಹಳ ಪ್ರಸಿದ್ಧವಾಗಿತ್ತು. ಬಾಲಕ ಸಂಗಯ್ಯ ಆ ಹಾಡನ್ನು ಬಹಳ ಸುಂದರವಾಗಿ ಹಾಡುತ್ತಿದ್ದ. ಗಣಪತಿ ಹಬ್ಬಗಳಲ್ಲಿ ಕಾಲೇಜು ಗ್ಯಾದರಿಂಗ್‌ಗಳಲ್ಲಿ ಅವನನ್ನು ಕರೆದುಕೊಂಡು ಹೋಗಿ ಹಾಡಿಸುತ್ತಿದ್ದರು. ಮುಂದೆ ಆತ ಬಿ.ಎ. ವರೆಗೆ ಓದಿದ. ಆದರೆ ಕೊನೆಯ ವರ್ಷ ಫೇಲಾದ. ಆಗ ಬಿ.ಎ.ನಲ್ಲಿ 200 ಅಂಕಗಳ ಇಂಗ್ಲಿಷ್ ಬೇಸಿಕ್, ಇನ್ನೂರು ಅಂಕಗಳ ಮೇಜರ್ ಮತ್ತು ತಲಾ ನೂರು ಅಂಕಗಳ ಎರಡು ಮೈನರ್ ವಿಷಯಗಳು ಇರುತ್ತಿದ್ದವು. ಆತ ಕನ್ನಡವನ್ನು ಮೇಜರ್ ಆಗಿ ತೆಗೆದುಕೊಂಡಿದ್ದ. ಶಬ್ದಮಣಿದರ್ಪಣ ವ್ಯಾಕರಣ ಗ್ರಂಥ ಆತನಿಗೆ ಬಹಳ ಕಠಿಣವೆನಿಸಿತು. ಹೀಗಾಗಿ ಫೇಲಾಗಿದ್ದ. ನಾನು ಕೂಡ ಕನ್ನಡ ಮೇಜರ್ ಮಾಡಿದ್ದೆ. ಸಂಸ್ಕೃತ ಮತ್ತು ಹಿಂದಿ ಮೈನರ್ ಪೇಪರ್‌ಗಳಾಗಿದ್ದವು. 200 ಅಂಕಗಳ ಬೇಸಿಕ್ ಇಂಗ್ಲಿಷ್ ಬಿಟ್ಟರೆ ಉಳಿದ ವಿಷಯಗಳು ತೊಂದರೆ ಕೊಡುತ್ತಿರಲಿಲ್ಲ. ಚೆನ್ನಾಗಿ ಕಲಿಸುವ ಇಬ್ಬರು ಇಂಗ್ಲಿಷ್ ಪ್ರಧ್ಯಾಪಕರು ಮಾತ್ರ ನನಗೆ ಸಿಕ್ಕರು. ಉಳಿದವರು ವಿಷಯ ಅರ್ಥ ಮಾಡಿಕೊಳ್ಳುವಲ್ಲಿ ಗೊಂದಲ ಸೃಷ್ಟಿಸುತ್ತಿದ್ದರು. ಒಬ್ಬರು ಥೇಮ್ಸ್ ನದಿಯ ಪಕ್ಕದಲ್ಲಿದ್ದು ಇಂಗ್ಲಿಷ್ ಕಲಿತು ಬಂದವರ ಹಾಗೆ ಉಚ್ಚಾರಣೆ ಮಾಡುತ್ತಿದ್ದರು. ಹೀಗಾಗಿ ಅನೇಕ ಹಳ್ಳಿಯ ವಿದ್ಯಾರ್ಥಿಗಳು ಬಹಳ ಕಷ್ಟಪಡುತ್ತಿದ್ದರು. ಆದರೆ ಅವರ ಉಚ್ಚಾರಣೆ ಕೃತಿಮವಾಗಿತ್ತು. ನಾನು ಬೇರೆ ಇಂಗ್ಲಿಷ್ ಪ್ರಾಧ್ಯಾಪಕರಿಗಿಂತ ಶ್ರೇಷ್ಠ ಎಂಬ ಭ್ರಮೆ ಅವರಿಗಿತ್ತು. ಇನಾಮದಾರ ಎಂಬ ಪ್ರಧ್ಯಾಪಕರು ಇದ್ದುದರಲ್ಲೇ ಪರವಾಗಿಲ್ಲ. ಅವರು ಸೈಲಾಸ್ ಮಾರ್ನರ್ ಕಾದಂಬರಿ ಕುರಿತ ಭಾವಪೂರ್ಣವಾಗಿ ಹೇಳುತ್ತಿದ್ದರು. ಉದ್ದನೆಯ ತಲೆಯ ಅವರು ನನಗಂತೂ ಸೈಲಾಸ್ ಮಾರ್ನರ್ ಹಾಗೇ ಕಾಣುತ್ತಿದ್ದರು. ಪಿ.ಯು.ಸಿ. ಓದುವಾಗ ದೇಶಪಾಂಡೆ ಸರ್ ವಿಕಾರ ಆಫ್ ವೇಕ್‌ಫೀಲ್ಡ್ ಅಷ್ಟೇ ಆಕರ್ಷಕವಾಗಿ ಹೇಳುತ್ತಿದ್ದರು. ನನ್ನ ನಾಲ್ಕು ಭಾಷೆಯ ವಿಷಯಗಳೆಲ್ಲ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿದ್ದವು. ಆದರೆ ಇಂಗ್ಲಿಷ್ ಚೆನ್ನಾಗಿ ಕಲಿಯುವ ವಾತಾವರಣ ಸೃಷ್ಟಿಸುವಲ್ಲಿ ಅನೇಕ ಇಂಗ್ಲಿಷ್ ಪ್ರಾಧ್ಯಾಪಕರು ಸೋತಿದ್ದರು.
ಫೇಲಾದ ಸಂಗಯ್ಯ ಹಿರೇಮಠ ಬೆಂಗಳೂರಿಗೆ ಓಡಿ ಹೋಗಿ ಮೋಹನ್ ಸಿಂಗರ್ ಆದ. (ನಂತರ ಬಿ.ಎ. ಪಾಸು ಮಾಡಿಕೊಂಡ) ಅಲ್ಲಿ ಕಷ್ಟಪಟ್ಟು ವಿವಿಧ ಕ್ಲಬ್‌ಗಳಲ್ಲಿ ಹಾಡುತ್ತ. ಕೊನೆಗೆ ಬ್ರಿಗೇಡ್ ರೋಡ್‍ನಲ್ಲಿದ್ದ ಕ್ವಾಲಿಟಿ ಮೊಘಲ್ ರೂಮ್ ಎಂಬ ಕ್ಲಬ್‌ನಲ್ಲಿ ಹಾಡತೊಡಗಿದ. ಆತನ ಹಾಡು ಕೇಳಲೆಂದೇ ಬಹಳಷ್ಟು ಗಿರಾಕಿಗಳು ಬರುತ್ತಿದ್ದರು. ಕೆಲವೇ ವರ್ಷಗಳಲ್ಲಿ ಆತ ಬೆಂಗಳೂರಲ್ಲಿ ಜನಪ್ರಿಯ ಹಾಡುಗಾರನಾದ. ಅವನ ಕೀರ್ತಿಯನ್ನು ಸಹಿಸದ ಇತರ ಹಾಡುಗಾರರು ಅವನ ಮೇಲೆ ಗೂಂಡಾಗಳನ್ನು ಬಿಟ್ಟರು. ಆದರೂ ಆತ ಎದೆಗುಂದದೆ ಅಲ್ಲೇ ಉಳಿದು ಬದುಕು ಕಟ್ಟಿಕೊಂಡ.
ನಾನು ಒದ್ದಾಡುತ್ತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಓದುವಾಗ ನೌಕರಿಯ ಸಂದರ್ಶನಕ್ಕಾಗಿ ಬೆಂಗಳೂರಿಗೆ ಹೋಗಬೇಕಾಯಿತು. ನೌಕರಿಯ ಅವಶ್ಯಕತೆ ಇತ್ತು. ಹೀಗಾಗಿ ಹೋಗಲೇ ಬೇಕಾಯಿತು. ಗೆಳೆಯ ಅನಂತ 50 ರೂಪಾಯಿ ಕೊಟ್ಟ. ಬೆಂಗಳೂರು ತಲುಪಿದೆ. ಸಂಗಯ್ಯ ಮೊದಲೇ ವಿಳಾಸ ಕಳಿಸಿದ್ದರಿಂದ ಹಾಗೂ ಹೀಗೂ ಹುಡುಕಿಕೊಂಡು ಅವನ ಕೋಣೆ ತಲುಪಿದೆ. ಮರುದಿನ ವಾಪಸಾಗುವಾಗ 50 ರೂಪಾಯಿ ಕೊಟ್ಟ. ಹಿಂದಿನ ರಾತ್ರಿ ಕ್ಲಬ್‌ಗೆ ಕರೆದುಕೊಂಡು ಹೋಗಿದ್ದ.
ಬೆಂಗಳೂರಿನ ಮೆಡಿಕಲ್ ಕಾಲೇಜೊಂದರ ಡೀನ್ ಆಗಾಗ ಹೆಂಡತಿ ಮತ್ತು ಇದ್ದ ಒಬ್ಬ ಮಗಳೊಂದಿಗೆ ಕ್ಲಬ್‌ಗೆ ಬರುತ್ತಿದ್ದರು. ಈತನ ಹಾಡಿಗೆ ಆಕರ್ಷಿತಳಾದ ಆ ಡಾಕ್ಟರ್ ಮಗಳು ಸಂಗಯ್ಯ ಯಾನೆ ಮೋಹನ ಸಿಂಗರ್‌ಗೆ ಲವ್ ಮಾಡಿದಳು. ಮದುವೆಯೂ ಆಯಿತು. ಆತ ಈ ಸಂಬಂಧದಿಂದ ಮನೆ ಅಳಿಯನಾಗಿ ಕೋಟ್ಯಧೀಶನಾದ. ಹೀಗಾಗಿ ಆತ ಕ್ಲಬ್‌ನಲ್ಲಿ ಹಾಡುವುದನ್ನು ನಿಲ್ಲಿಸಿದ. ಮೋಹನ್ ಸಿಂಗರ್ ಮ್ಯೂಜಿಕ್ ಪಾರ್ಟಿ ಆರಂಭಿಸಿದ. ಆಧುನಿಕ ಸಂಗೀತದ ಉಪಕರಗಳ ಖರೀದಿಗಾಗಿ ಲಂಡನ್‌ಗೆ ಹೋದ. ಹೊಸ ಸಂಗೀತ ಸಾಧನಗಳಿಂದ ಕೂಡಿದ ಮ್ಯೂಜಿಕ್ ಪಾರ್ಟಿಯಿಂದ ಮೋಹನ್ ಸಿಂಗರ್ ಬೆಂಗಳೂರಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದ.
ನಾನು 1976ರಲ್ಲಿ ಎಂ.ಎ. ಮುಗಿದ ನಂತರ ಕೃಷಿಪೇಟೆ ಮಾಸಪತ್ರಿಕೆಯ ಉಪ ಸಂಪಾದಕನಾಗಿ ಬೆಂಗಳೂರು ಸೇರಿದೆ. ಆತನ ಫೋನ್ ನಂಬರ್ ಇಲ್ಲದೆ ಅವನನ್ನು ಭೇಟಿಯಾಗಲಿಕ್ಕಾಗಲಿಲ್ಲ. ಅವನ ವಿಳಾಸವೂ ಗೊತ್ತಿರಲಿಲ್ಲ. ಅವನ ಮನೆಯವರಿಗೂ ಆತನ ವಿಳಾಸ ಗೊತ್ತಿರಲಿಲ್ಲ. ಆತನ ಮನಸ್ಸಿನಲ್ಲಿ ತಂದೆಯ ಬಗ್ಗೆ ಬಹಳ ತಿರಸ್ಕಾರ ಮೂಡಿತ್ತು. ಬಾಲ್ಯದಲ್ಲೇ ಆತನ ತಾಯಿ ತೀರಿಕೊಂಡಿದ್ದಳು. ಆತನಿಗೆ ಅಕ್ಕ ಮತ್ತು ತಮ್ಮ ಇದ್ದರು. ಆತನ ತಂದೆ ಇನ್ನೊಂದು ಮದುವೆಯಾಗದೆ ಬಹಳ ಕಷ್ಟದಲ್ಲಿ ಕಡಿಮೆ ಪಗಾರದ ನೌಕರಿಯಲ್ಲೇ ಮಕ್ಕಳನ್ನು ಸಾಕಿದ. ಮಗಳ ಮದುವೆಯನ್ನೂ ಮಾಡಿದ. ಆತನ ಮುಂಗೋಪಕ್ಕೆ ಸಂಗಯ್ಯ ಬಹಳ ಬೇಸರ ಮಾಡಿಕೊಂಡಿದ್ದ. ಆತ ಇಲ್ಲದ ಸಂದರ್ಭದಲ್ಲೇ ನಾವು ಸಂಗಯ್ಯನನ್ನು ಭೇಟಿಯಾಗಲು ಮನೆಗೆ ಹೋಗುವಂಥ ಪರಿಸ್ಥಿತಿ ಇತ್ತು. ಎಲುಬಿನ ಹಂದರವಾಗಿದ್ದ ಆತ ಸಿಡುಕು ಸ್ವಭಾವದವನಾಗಿದ್ದ. ಅವನ ಮನೆಗೆ ಗೆಳೆಯರು ಹೋಗುವ ಹಾಗಿರಲಿಲ್ಲ. ಹೀಗಾಗಿ ಬಹಳ ಬೇಸರ ಮತ್ತು ಒತ್ತಡದ ಬದುಕಿನಿಂದಾಗಿ ಸಂಗಯ್ಯ ಬೆಂಗಳೂರಿಗೆ ಓಡಿ ಹೋದವ ತಿರುಗಿ ಬಂದದ್ದು ಬಹಳ ಕಡಿಮೆ.
ನಾನು 1983ರಲ್ಲಿ ಪ್ರಜಾವಾಣಿ ಉಪ ಸಂಪಾದಕನಾಗಿ ನೇಮಕಗೊಂಡೆ. ಆತ ಮೋಹನ್ ಸಿಂಗರ್ ಆಗಿ ಪ್ರಸಿದ್ಧಿ ಹೊಂದಿದ ಸಂದರ್ಭದಲ್ಲಿ ಒಂದು ದಿನ ಆತನ ಮ್ಯೂಜಿಕ್ ಪಾರ್ಟಿ ಕಂಠೀರವ ಸ್ಟೇಟಿಯಂನಲ್ಲಿ ಇತ್ತು. ಆ ಕಾರ್ಯಕ್ರಮದ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ಬಂದಿತ್ತು. ನಾನು ಅವನ ಭೇಟಿಯ ಉದ್ದೇಶದಿಂದ ಅಲ್ಲಿಗೆ ಹೋದೆ. ಅವನ ಭೇಟಿಗಾಗಿ ಕಾರ್ಯಕ್ರಮ ಮುಗಿಯುವ ವರೆಗೂ ಕಾಯಬೇಕಾಯಿತು. ವಿಜಾಪುರದಲ್ಲಿದ್ದಾಗ ಆತ ಲಕಡಿ ಪೈಲವಾನ ಹಾಗೆ ಇದ್ದ. ಈಗ ನೋಡಿದರೆ ಆನೆಯ ಮರಿಯ ಹಾಗೆ ಆಗಿದ್ದಾನೆ! ಆದರೆ ಆತ ಮೈಕ್ ಹಿಡಿದು ಸಾವಕಾಶವಾಗಿ ಕುಣಿಯುತ್ತ ಹಾಡುವದು ಬಹಳ ಆಕರ್ಷಕವಾಗಿತ್ತು. ಕೊನೆಗೂ ಕಾರ್ಯಕ್ರಮ ಮುಗಿಯಿತು. ಭೇಟಿಯಾದೆ ಬಹಳ ಸಂತೋಷಪಟ್ಟ. ಆತನ ಹೆಂಡತಿ ಕೂಡ ಬಂದಿದ್ದಳು. ಭೇಟಿ ಮಾಡಿಸಿದ. ಕೊನೆಗೆ ಕಾರಲ್ಲಿ ಮನೆಯವರೆಗೆ ಬಿಡುವುದಕ್ಕಾಗಿ ನನ್ನ ದೊಮ್ಮಲೂರಿನ ಬಾಡಿಗೆ ಮನೆಗೆ ಬಂದ. ರಾತ್ರಿ 11 ಗಂಟೆಯಾಗಿದ್ದರೂ ದಂಪತಿ ನಮ್ಮ ಜೊತೆ ಸ್ವಲ್ಪ ಸಮಯ ಕಳೆದರು. ಪತ್ರಿಕೆಯ ಕಾರ್ಯಬಾಹುಳ್ಯದಿಂದಾಗಿ ಅವನನ್ನು ಹುಡುಕಿಕೊಂಡು ಹೋಗುವ ವ್ಯವಧಾನ ಇಲ್ಲದ ಕಾರಣ ಮತ್ತು ಆತ ತನ್ನ ಕಾರ್ಯಕ್ರಮಗಳಲ್ಲೇ ಮಗ್ನನಾಗಿದ್ದರಿಂದ ಅದೇ ಕೊನೆಯ ಭೇಟಿಯಾಯಿತು.
ಆತನ ತಮ್ಮ ಬೆಂಗಳೂರು ಸೇರಿದ. ಆತ ರೊಟ್ಟಿ ಮಾರಿ ಬದುಕುತ್ತಿದ್ದ. ಒಂದು ಸಲ ಎಲ್ಲೋ ಸಿಕ್ಕ. ಮನೆಗೆ ಕರೆದುಕೊಂಡು ಬಂದೆ. ಇನ್ನೊಂದು ಸಲ ಆತ ರೊಟ್ಟಿ ಪಲ್ಯೆ ತೆಗೆದುಕೊಂಡು ಬಂದ. ವ್ಯಾಪಾರ ಚೆನ್ನಾಗಿ ನಡೆದಿದೆ ಎಂದು ಹೇಳಿದ. ಮೊದಲಿಗೆ ಬಂದಾಗ ಬ್ಲಡ್ ಬ್ಯಾಂಕ್‌ಗೆ ರಕ್ತ ಮಾರಿ ಬದುಕಿದೆ ಎಂದು ಹೇಳಿದ. ಕೇಳಿ ಬಹಳ ಬೇಸರವಾಯಿತು. ಕೋಟ್ಯಧೀಶ ಅಣ್ಣ ಇದ್ದು ಈ ಪರಿಸ್ಥಿತಿಯೇ ಎಂದು ನೊಂದುಕೊಂಡೆ. ಆತ ಬಹುಶಃ ಅಣ್ಣನನ್ನು ಕೇಳಲೇ ಇಲ್ಲ ಎನಿಸುತ್ತದೆ. ಆತ ಕೇಳುವ ವಾತಾವರಣವನ್ನು ತಮ್ಮನಿಗೆ ಸೃಷ್ಟಿಸಲಿಲ್ಲ ಎಂದು ಹೇಳುವುದೇ ಸರಿಯಾದೀತು. ಬದುಕು ಹೇಗೋ ಸಾಗುತ್ತಲೇ ಇರುತ್ತದೆ.
ಚಂದು ಕೂಡ ಇನ್ನೂ ಬೆಂಗಳೂರಲ್ಲೇ ಇದ್ದಾನೆ. ವಿಜಾಪುರದಲ್ಲಿ ಆತನ ಮನೆ ಸಂಗಯ್ಯನ ಮನೆಯ ಹತ್ತಿರವೇ ಇತ್ತು. ನಾನು ಬೆಂಗಳೂರಲ್ಲಿ ಇದ್ದಾಗಲೇ ಒಂದು ದಿನ ಚಂದು ಫೋನ್ ಮಾಡಿ ಸಂಗಯ್ಯ ಯಾನೆ ಮೋಹನ್ ಸಿಂಗರ್ ನಿಧನವಾದ ಸುದ್ದಿಯನ್ನು ತಿಳಿಸಿದ. ಆತನಿಗೆ ಮಕ್ಕಳಾಗಲಿಲ್ಲ. ಕೋಟಿಗಟ್ಟಲೆ ಆಸ್ತಿ ಇದ್ದರೂ ಹೆಂಡತಿ ‘ಅನಾಥ’ಳಾದಳು!
(ಚಿತ್ರಗಳು: ಸುನೀಲ ಸುಧಾಕರ ಮತ್ತು ಅಂತರ್ಜಾಲ)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.