ಕಾರೆಕಾಯಿ ಬೆಂಕಿ ಪೆಟ್ಯಾಗಿಕ್ಕಿ ಸಣ್ಣ ಸಣ್ಣ ಕಲ್ಲು ಹಾಕಿ ಮುಚ್ಚಿಕ್ಕಿದ್ರೆ ಬಂಗಾರ್ದ ಬಣ್ಣ ಬತ್ತಿತ್ತು. ಬುಡುಮೆ ಕಾಯಿ ನೋಡಾಕೆ ತೊಂಡೆ ಹಣ್ಣಿನ್ ತರುಕ್ಕೇ ಇದ್ರೂ ವಸಿ ಬುಡ್ಡಕ್ಕೆ, ಹಸೂರ್ಗೆ ಇರ್ತಿತ್ತು. ತೊಂಡೆಹಣ್ಣು ಕಾಯಿ ಹಸೂರ್ಗೆ ಇದ್ರೂವೆ ಹಣ್ಣಾದ್ ಮ್ಯಾಕೆ ಕೆಂಪುಕ್ಕೆ ಹೊಳೀತಿತ್ತು. ಇಸ್ಕೂಲ್ ಮಗ್ಗುಲಾಗೆ ಒಂದು ಶರಬತ್ ಹಣ್ಣಿನ ಗಿಡ ಇತ್ತು. ಅದ್ರಾಗೆ ಹಣ್ಣು ಬಿಟ್ಟರೆ ಸಾಕೂಂತ ನೂರಾರು ಕಣ್ಣು ಕಾಯ್ತಿದ್ವು. ಸಿಕ್ಕಿದೋರ್ಗೆ ಸೀರುಂಡೆ. ಸಿಕ್ದೋರು ಶರಬತ್ ಮಾಡ್ಕಂಡು ತಂಪಾಗಿ ಕುಡಿದ್ರೆ, ಸಿಗ್ದೋರ ಹೊಟ್ಯಾಗೆ ಬೆಂಕಿ ಬೀಳ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಬಾಲ್ಯಕಾಲದ “ಹಾಳೂ ಮೂಳು” ತಿನಿಸುಗಳ ಕುರಿತ ಬರಹ ನಿಮ್ಮ ಓದಿಗೆ
ನಾವು ಚಿಕ್ಕೋರಿದ್ದಾಗ ಈ ಸ್ನೇಕ್ಸ್(ಸ್ನ್ಯಾಕ್ಸ್) ಅದೂ ಇದೂ ಗೊತ್ತಿರ್ಲಿಲ್ಲಾ. ಊಟ ತಿಂಡಿ ಬಿಟ್ಟಿ ಬ್ಯಾರೇದುಕ್ಕೆಲ್ಲಾನೂವೇ ಹಾಳೂ ಮೂಳು ಅಂತ್ಲೇಯಾ ಕರೀತಿದ್ದಿದ್ದು. ನಲವತ್ತೊರ್ಸದ ಹಿಂದ್ಲು ಈ ಹಾಳೂ ಮೂಳೂನೂವೇ ಏಸ್ ಪಸಂದಾಗಿರ್ತಿತ್ತು. ನೂಡಲ್ಸು, ಪಿಜ್ಜಾ, ಬರ್ಗರ್ರು, ಚಿಪ್ಸು, ಪಪ್ಸು ಅಲ್ಕಾಣೇಳಿ. ನಮ್ಮ ಹೈಕ್ಳ ಹಾಳೂ ಮೂಳೂ ಪರ್ಪಂಚವೇ ಬ್ಯಾರೆ ಇತ್ತು. ಯಾನಾಡಿ (ಯಾಪಾಟಿ)ಸಿಗ್ತಿತ್ತು ತಿನ್ನಾಕೆ ಅಂದ್ರೆ, ಮೂರೊತ್ತೂ ನಮುಲಾಕೆ (ಜಗಿಯಾಕೆ) ಯಾತರದೋ ಒಂದು ಸಿಗ್ತಿತ್ತು. ಕಾಸು ಖರ್ಚಿಲ್ದೆ ಹೊಟ್ಟೆಗೆ ಮೇವು ಸಿಗ್ತಿತ್ತೋ. ಕಾಸೂ ಮಿಗಿಲ್ತಿತ್ತು ಅಂಬ್ತ ಹೇಳಾಕೆ ಆಗ ನಮ್ ತಾವ(ಮಕ್ಕುಳ್ ತಾವ)ಕಾಸಿದ್ರೆ ಅಲ್ವೇ? ಕಜ್ಜಾಯವೋ ಕೈಲಾಸವೋ ಸಿಗಾಕೆ. ಆದ್ರೂ ನಮುಗ್ ಸಿಗ್ತಿದ್ದ ತರಾವರಿ ಹಣ್ಣು, ಸೊಪ್ಪು, ಕಾಳು, ಬೀಜ, ಜೇನು ತುಪ್ಪ, ಆಲೆಮನೆ ತಿಂಡಿ ಎಲ್ಲಾ ಬೇಜಾನ್ ಮಜಾ ಕೊಡ್ತಿದ್ವು. ಕೈಲಾಸ್ವೇ ಕೈಯಾಗಿದ್ದಂಗೆ ಕುಣದಾಡ್ತಿದ್ವಿ.
ಬುಡ್ಡೆಕಾಯಿ
ಬೇಲಿ ಮ್ಯಾಗಿನ ಬಳ್ಳಿಗ್ಳಾಗೆ, ಹೊಲುದ್ ಬದೂಗ್ಳಾಗೆ, ಬುಡ್ಡೆಕಾಯಿ ಅಂತ ಸಿಗ್ತಿದ್ವು. ಅದು ಬಳ್ಳಿ ಗಿಡ. ಅದ್ರಾಗೆ ಎಲೆಗ್ಳು ಮೂರೆಲೆ ಕೂಡ್ಕಂಡಂಗೆ ಇರ್ತಿದ್ವು. ಅದ್ರಾಗೆ ಕಾಯಿ ಬಿಡ್ತಿದ್ವು. ಅದ್ರ ಹೊಟ್ಟು(ಸಿಪ್ಪೆ) ಸ್ಯಾನೆ ತೆಳ್ಳಗಿರ್ತಿತ್ತು. ಅದ್ನ ಸುಲ್ಕಂಬಾದು, ತಿನ್ನಾದು. ಸುಲ್ಯಾವಾಗ ಟಪ್ ಅಂಬ್ತ ಸದ್ದು ಬತ್ತಿತ್ತು. ಪ್ಲಾಸ್ಟಿಕ್ ಕವರ್ನಾಗೆ ಗುಳ್ಳೆ ಮಾಡಿ ಪಟಕ್ ಅಂತ ಒತ್ತಿದ್ರೆ ಸದ್ದು ಬತ್ತದಲ್ಲ ಅಂಗೆ. ಒಳ್ಗೆ ಗುಂಡೂರುಕ್ಕೆ(ಗುಂಡಗೆ) ಇರ್ತಿತ್ತು. ದೊಡ್ಡದಾದ್ರೆ ಕಡಲೆ ಬೀಜುದ್ ಗಾತ್ರದ್ದು ಕಾಯಿ ಇರ್ತಿತ್ತು. ಸಣ್ಣದಾದ್ರೆ ಕಡಲೆಕಾಳ್ಗಿಂತಲೂವೆ ವಸಿ ದೊಡ್ಡದಿರ್ತಿತ್ತು. ಚೆಂದಾಕಿ ಮಾಗಿರೋದಾದ್ರೆ ಕ್ಯಾದಿಗೆ ರೇಕಿನ ಬಣ್ಣ ಇರ್ತಿತ್ತೋ.(ಕೇದಿಗೆ ಎಲೆಯ ಬಣ್ಣ – ತೆಳು ಬಂಗಾರದ ಬಣ್ಣ) ಇಲ್ಲಾಂತಂದ್ರೆ ಒಂತರಾ ಹಸೂರು-ಅರಿಶಿನ ಬೆರೆತಂಗೆ ಬಣ್ಣ. ಈ ಕಾಯಿಗ್ಳನ್ನ ಹುಡುಕುಡುಕಿ ಕೀಳ್ತಿದ್ವಿ. ಅದ್ರಾಗೂ ನಾವು ಕಿತ್ಕಂಡು ತಿನ್ನಾದುಕ್ಕಿಂತ್ಲೂವೆ ನೆಲುದ್ ಮ್ಯಾಗೆ ಉದುರಿ ಬಿದ್ದಿರ್ತಿದ್ವಲ್ಲ ಆ ಕಾಯಿಗ್ಳು ಬೋ ಸೀಯಾಗಿರ್ತಿದ್ವು. ಅದ್ನ ಅಂಗೇ ಎತ್ತಿ, ಲಂಗದಾಗೆ ಒಂದು ಕಿತ ಒರ್ಸಿ ತಿಂದ್ರಾಯ್ತು. ಬೇಲಿ ಸಂದ್ಯಾಗೆ ಕೈ ಆಕುದ್ರೆ ಸಾಕು, ಮುಳ್ಳು ತರಚ್ಕಂಡು ನೋವಾದ್ರೂ ಕಮ್ ಕಿಮ್ ಅಂದಂಗೆ ಹುಡುಕಾಡಿದ್ರೆ ಬುಡ್ಡೇ ಕಾಯಿ ಸಿಗ್ತಿತ್ತು. ಜೊತ್ಯಾಗೆ ಬೇಲಿ ಗಿಡ್ದಾಗೂ ಬೇಲಿ ಹಣ್ಣು ಸಿಗ್ತಿತ್ತು. ಗುಲಾಬಿ, ಕೆಂಪು, ಹಳದಿ ಇಂಗೇ ಬಣ್ಣ ಬಣ್ಣದ ಹುವ್ವಾ ಬಿಡಾ ಬೇಲಿ ಗಿಡಗ್ಳಿದ್ದವು. ಅದ್ರಾಗೆ ಸಣ್ಣ ಸಣ್ಣ ಗೊಂಚಲಾಗೆ ಕರೇ ಹಣ್ಣುಗ್ಳು ಬಿಡ್ತಿದ್ವು. ಅವೂ ಬಣ್ಣದಾಗೂ ಆಕಾರದಾಗೂ ನೋಡಾಕೆ ಮೆಣಸಿನಕಾಳು ತರುಕ್ಕೇ ಇದ್ವು. ಹಣ್ಣು ಮಾತ್ರಾ ಸೀಯಾಗಿರ್ತಿತ್ತು. ನೀಲೀ ಬಣ್ಣವೋ ಕರೆ ಬಣ್ಣವೋ ಅನ್ನಂಗೆ ಒನ್ನೊಂದು ದಪ ಒನ್ನೊಂದು ತರೂಕ್ಕೆ ಕಾಣ್ತಿದ್ವು. ಇಸ್ಕೂಲ್ ಸುತ್ತೂರ ಬೇಲಿ ಗಿಡಗಳಿದ್ವು. ನಮ್ ಹೊಲದಾಗೂ ಇದ್ವು. ವೀರಾಪುರುಕ್ಕೆ ಹೋಗೋ ದಾರ್ಯಾಗೆ ಬೇಲಿ ಗಿಡ ಇದ್ವು. ಶನಿ ಶನಿವಾರ ಶನಿಮಾತ್ಮನ ಗುಡೀಗೆ ಅಂತ ಹೋಗೋದು. ದಾರೀಗುಂಟ ಸಿಗ್ತಿದ್ದ ಹಣ್ಣು ಹುಡೀಕ್ಕೊಂಡೇಯಾ. ಜೊತೆಗೆ ಗುಡೀಲಿ ಕೊಡ್ತಿದ್ದ ಚರ್ಪು ನಮ್ಮುನ್ನ ಅತ್ಲಾಗೆ ಎಳೀತಿತ್ತು.
ಇದೂ ಸಾಲ್ದೂಂತ ಸಂಜೀ ಆದ್ರೆ ಸಾಕು ಗೆಳತೀರ್ನ ಜೊತ್ಯಾಗ್ ಹಾಕ್ಕಂಡು ಸಂತೆಕುಂಟೆ ಗಿಡುಗ್ಳಾಗೆ ತಡಕಾಡೋದು.
ಸಂತೆಕುಂಟೆ ಸಂದೀಲಿ
ನಮ್ ಹೊಲುಕ್ಕೇ ಅಂಟಿಕೊಡಂಗೇ ಸಂತೆಕುಂಟೆ ಇತ್ತು. ಇದು ಗ್ರಾಮಠಾಣಾ ಜಾಗ. ಅಂದ್ರೆ ಸರ್ಕಾರಕ್ಕೆ ಸೇರಿದ್ದು. ಈಗ ಇಸ್ಕೂಲ್ ಜಾಗ. ಅಲ್ಲಿ ಗಿಡಪಡಾ ಬೆಳ್ಕಂಡು ಪೊದೆ ಪೊದೆಗ್ಳಾಗಿದ್ವು. ಅದ್ಕೇಯಾ ಅಲ್ಲಿ ವಸಿ ಹಿಂದಿನ ಜಾಗ ಊರಾಗಿನ್ ಹೆಂಗುಸ್ರು ಬಯಲು ಕಡೀಕ್ಕೆ ಹೋಗಾ ಜಾಗ್ವಾಗಿತ್ತು. ಅದುಕ್ಕೇ ಅತ್ಲಾ ಕಡೀಕ್ಕೆ ಹೋಗ್ದೆ ಇತ್ಲಾ ಕಡೆ ಇಸ್ಕೂಲ್ ಕಡೀಕ್ಕೆ ಬೆಳ್ದಿರಾ ಗಿಡಗ್ಳು, ಬೇಲಿ ಸಂದ್ಯಾಗೆ ನಮ್ಮ ಕಾರುಬಾರು. ಅಲ್ಲಿ ಬುಡ್ಡೆಕಾಯಿ, ಬೇಲಿಹಣ್ಣು, ಕಾರೆಕಾಯಿ, ಬುಡುಮೆಕಾಯಿ, ತೊಂಡೆಕಾಯಿ, ಕಾಶಿಹಣ್ಣು ಎಲ್ಲಾ ಸಿಗ್ತಿದ್ವು. ಒಂದು ಹುಣಿಸೆಮರ ಇತ್ತು. ಗಸಗಸೆ ಗಿಡ ಇತ್ತು. ಒಂದತ್ತು ಜನ ಜತೇಗೆ ಹೊಂಡುತಿದ್ವಿ ಜಾಲಾಡಾಕೆ. ಸಿಕ್ಕಿದ್ದೆಲ್ಲಾ ಬಾಚ್ಕೊಂಡು ಲಂಗದಾಗೆ ಗಂಟು ಹಾಕ್ಕಂಡು ಬಂದು ಮನ್ಯಾಗೆ ಕುಂತು, ಕೈ ಮೈಯಾಗ್ಳ ತರಚಿದ ಗಾಯ ತಡಿಕ್ಕೊಂತಾ ಹಣ್ಣು, ಕಾಯಿ ಮುಕ್ಕುತಿದ್ವಿ. ಲಂಗ ಎಲ್ಲಾ ಬಣ್ಣಬಣ್ಣವಾಗಿರ್ತಿತ್ತು. ಎಲ್ಲ ಹಣ್ಣು ಕಾಯಿಗ್ಳ ರಸ ಪಚಕ್ಕಂತ ಆಚೀಗ್ ಬಂದು ಅಮ್ಮ ಬೈಯಾದು ಹೊಸ್ದೇನೂ ಆಗಿರ್ಲಿಲ್ಲ. ಬ್ಯಾರೆ ಯಾರ್ಗೋ ಬೈಯ್ತೌರೆ ಅಂತ್ಲೇ ನಿರುಮ್ಮಳಕ್ಕೆ ಕುಂತು ಬಾಯಾಡಿಸ್ತಿದ್ದೆ.
ಕಾರೆಕಾಯಿ ಬೆಂಕಿ ಪೆಟ್ಯಾಗಿಕ್ಕಿ ಸಣ್ಣ ಸಣ್ಣ ಕಲ್ಲು ಹಾಕಿ ಮುಚ್ಚಿಕ್ಕಿದ್ರೆ ಬಂಗಾರ್ದ ಬಣ್ಣ ಬತ್ತಿತ್ತು. ಬುಡುಮೆ ಕಾಯಿ ನೋಡಾಕೆ ತೊಂಡೆ ಹಣ್ಣಿನ್ ತರುಕ್ಕೇ ಇದ್ರೂ ವಸಿ ಬುಡ್ಡಕ್ಕೆ, ಹಸೂರ್ಗೆ ಇರ್ತಿತ್ತು. ತೊಂಡೆಹಣ್ಣು ಕಾಯಿ ಹಸೂರ್ಗೆ ಇದ್ರೂವೆ ಹಣ್ಣಾದ್ ಮ್ಯಾಕೆ ಕೆಂಪುಕ್ಕೆ ಹೊಳೀತಿತ್ತು.
ಇಸ್ಕೂಲ್ ಮಗ್ಗುಲಾಗೆ ಒಂದು ಶರಬತ್ ಹಣ್ಣಿನ ಗಿಡ ಇತ್ತು. ಅದ್ರಾಗೆ ಹಣ್ಣು ಬಿಟ್ಟರೆ ಸಾಕೂಂತ ನೂರಾರು ಕಣ್ಣು ಕಾಯ್ತಿದ್ವು. ಸಿಕ್ಕಿದೋರ್ಗೆ ಸೀರುಂಡೆ. ಸಿಕ್ದೋರು ಶರಬತ್ ಮಾಡ್ಕಂಡು ತಂಪಾಗಿ ಕುಡಿದ್ರೆ, ಸಿಗ್ದೋರ ಹೊಟ್ಯಾಗೆ ಬೆಂಕಿ ಬೀಳ್ತಿತ್ತು.
ತ್ವಾಟದಾಗೆ
ನಮ್ ತ್ವಾಟದಾಗೆ ಕಾಶಿ ಹಣ್ಣಿನ ಗಿಡುಗ್ಳು ಏಸೊಂದು ಇದ್ವು ಅಂದ್ರೆ, ನಮ್ಮನ್ಯಾಗೆ ಒಂದು ಸ್ಟೀಲಿಂದು ಚೊಂಬಿತ್ತು. ಅದು ನೋಡಾಕೆ ತಪಲೆ ತರ ಇತ್ತೂಂತ ಅದುನ್ನ ಸಣ್ಣ ತಪಲೆ ಅಂತ್ಲೇ ಕರೀತಿದ್ವಿ. ಅದ್ನ ತಕಂಡು ಹೋದ್ರೆ ತುಂಬಿ ಓಡೋಗ್ತಿತ್ತು. ಕೆಂಪು ಕಾಶಿಹಣ್ಣು ಮೆಣಸಿನಕಾಳಿನ ಗಾತ್ರ ಇದ್ರೆ, ಕರೇದು ಇನ್ನೊಸಿ ದೊಡ್ಡುಕ್ಕಿರ್ತಿತ್ತು. ಎಲ್ಡೂ ಸೀಗಿರ್ತಿದ್ವು. ಚೊಂಬು ತುಂಬಿದ್ ಮ್ಯಾಗೆ, ಅಲ್ಲೇ ಇದ್ದ ಮೈಸೂರ ಮಲ್ಲಿಗೆ ಗಿಡುದ್ ದೊಡ್ಡ ಎಲೇನಾಗೆ ಹಾಕ್ಕೊಂಡು ಮುದುರ್ಕೊಂಡು ಬರಾದು. ಎದೂರ್ಗೆ ಯಾರಾರಾ ಗೆಳತೀರ್ ಸಿಕ್ರೆ, ಬಾಯಾಗ್ ನೀರ್ ಸುರ್ಸಿಕೊಂಡು ಕ್ಯೋಳಿದ್ರೆ ಏನಾರಾ ಲಂಚ ಮಾತಾಡ್ಕಂಡೇ ಕೊಡ್ತಿದ್ದಿದ್ದು. ಒನ್ನೊಂದು ಸಲ ಪಾಪಾಂತ ಸುಮ್ಕೆ ಕೊಡ್ತಿದ್ದಿದ್ದೂ ಉಂಟು. ನಂಟರು ಪಂಟರು ಬಂದ್ರೆ ಮಾತ್ರ ನಮ್ಗೆ ಉಳಿಸ್ದಂಗೇ ಅವ್ರೇ ಮುಕ್ಕುತಿದ್ರು. ನಿಮ್ಗೇನು ದಿನಾ ತಿಂತೀರ ಅನ್ನಾರು.
ಹೊಲ್ದಾಗೆ ಅಕ್ಕಡೀ ಸಾಲ್ನಾಗೆ ಹಲಸಂದಿ ಗಿಡಾ, ಟಮಾಟಾ ಹಣ್ಣಿನ್ ಗಿಡ, ರೇಷ್ಮೆ ಹಣ್ಣಿನ ಗಿಡ ಅದೂ ಇದೂ ಇರ್ತಿದ್ವು. ಅದ್ನ ಕಿತ್ಕಂಡು ತಿಮ್ತಿದ್ವಿ. ಕಡ್ಳೆ ಕಾಯಿ ಗಿಡ ಸಮೇತ ಕಿತ್ಕಂಡು ಬರಾದು. ಸಂಜೇ ಕಡೀಕೆ ನೀರೊಲೆಗೆ ಹೊಟ್ಟು ತುಂಬ್ಸಿ ಉರಿ ಹಾಕಿದ್ಮ್ಯಾಲೆ, ಗಿಡಾ ಇಕ್ಕಿ ಸುಟ್ಕಣಾದು. ಸುಟ್ಟ ಕಡ್ಲೆಕಾಯ್ಗೆ ಒಂದು ಸತಿ ಉಪ್ಪು ನೆಂಚಿ ತಿನ್ನಾದು, ಒಂದು ಸತಿ ಬೆಲ್ಲ ನೆಂಚಿಕಣಾದು.
ಹುಣಿಸೆ ಬೀಜ, ಹಲಸಿನ ಬೀಜ ಇದ್ರೆ ಒಲೆ ಒಳೀಕ್ಕಾಕಿ ಸುಟ್ಟು ತಿನ್ನಾದು. ಏನೂ ಸಿಗ್ದಿದ್ರೆ ಈರುಳ್ಳೀನಾರಾ ಹಾಕಿ ಸುಡೋದು. ಗೆಣಸು ಒಲಿ ಒಳೀಕ್ಕಾಕಿ ಸುಡ್ತಿದ್ವಿ. ಮ್ಯಾಗ್ಳ ಬೂದಿ ಕೊಡ್ವಿ, ಹೊಟ್ಟು ತೆಗ್ದು, ಬಟ್ಟಲಾಗಾಕಿ, ಅದ್ಕೆ ಬೆಲ್ಲವೋ, ಸಕ್ಕರೇನೋ ಹಾಕ್ಕಂಡು ಹಾಲು ಸೇರ್ಸಿ ಕಿವುಚಿದ್ರೆ ಅಬ್ಬಬ್ಬಬ್ಬ!! ಏನು ಪಸಂದಾಗಿರ್ತಿತ್ತು.
ರಾಗಿ ತೆನೆ ಕಾಲ್ದಾಗೆ ತೆನೆ ತಂದು ಒಲೇಗಿಕ್ಕಿ ಸುಡಾದು. ಸುಟ್ಟ ತೆನಿಗಳ್ನ ಅಂಗೈಯಾಗಾಕಿ ರಪರಪನೆ ಉಜ್ಜೀರೆ ರಾಗಿ ಕಾಳು ಪತಪತಾಂತ ಕೆಳೀಕ್ ಇಕ್ಕಿರೋ ತಟ್ಯಾಗೆ ಬೀಳ್ತಿತ್ತು. ಅಂಟಿಕಂಡಿರೋ ಹೊಟ್ಟು, ಬೂದೀಯಾ ಬಾಯಾಗೆ ಉರುಬಿ, ಹೋಗ್ದಿದ್ರೆ ಮರದಾಗೆ ಕೇರಿದ್ ಮ್ಯಾಗೆ ಅದ್ನ ಎಲ್ಡು ಭಾಗ ಮಾಡಾದು. ಒಂದು ಸೀ ಇನ್ನೊಂದು ಕಾರ. ಸೀದುಕ್ಕೆ ಹಸೇ ಕೊಬ್ರಿ, ಬೆಲ್ಲ, ಯಾಲಕ್ಕಿ ಹಾಕೋದು. ಖಾರದ್ದುಕ್ಕೆ ಬೆಳ್ಳುಳ್ಳಿ, ಕೊತ್ತಿಮಿರಿ ಸೊಪ್ಪು, ಹಸಿ ಮೆಣಸಿನಕಾಯಿ ಹಸೆ ಕೊಬ್ರಿ ಒರಳಾಗೆ ನೂರಿ(ಕುಟ್ಟಿ) ಹಾಕೋದು.
ಮುಸುಕಿನ್ ಜ್ವಾಳಾ ಬೆಳೀತಿದ್ವಿ. ಅದ್ನೂ ಒಲೇಗಿಕ್ಕಿ ಸುಡಾದು. ಇಲ್ಲಾಂದ್ರೆ ಬೇಯ್ಸಿ ತಿನ್ನಾದು.
ಟಮಾಟಾ ಹಣ್ಣು ಕಚ್ಚಿ ಹಳ್ಳ ಮಾಡ್ಕಂಡು, ಅದ್ರೋಳೀಕ್ಕೆ ಸಕ್ಕರೆ ತುಂಬ್ಸಿ ಚೀಪೋದು. ಬಾಳೆಗಿಡ ಒಂದೆರಡು ಇದ್ವು. ಸ್ಯಾನೆ ಸಿಕ್ತಿರಲಿಲ್ಲ. ಜಮ್ಮು ನೇರಳೆಮರ ಒಂದಿತ್ತು. ಅದ್ರ ಹಣ್ಣು ಗಾತ್ರದಾಗೆ ದೊಡ್ಡದಿದ್ವು. ಸ್ಯಾನೆ ಸೀನೂ(ಸಿಹಿಯೂ) ಇದ್ವು. ಅದ್ರ ಆಸೇಗೆ ಏಸೊಂದು ಜನ ನನ್ ತಾವ್ಕೆ ಬರೋರು. ಅಮ್ಮಿ ನಮ್ಗೂವೆ ಒಂದೆರಡು ಹಣ್ಣು ಕೊಡಮ್ಮಿ ಅಂತಾವ. ನಮ್ಗೂ ತಿಂದೂ ತಿಂದೂ ಬ್ಯಾಸ್ರ ಬರ್ತಿತ್ತಲ್ಲ, ಹೋಗ್ಲತ್ಲಾಗೆ ಯಾಸೆಟ್ಗೆ ಅಂತಾವಾ ಕೊಡ್ತಿದ್ದೊ. ಚೇಪೇಕಾಯಿ ಗಿಡ ಒಂದಿತ್ತು. ಹಣ್ಣಾಗಾಕೂ ಬಿಡ್ದೆ ಪೀಚು ಕಾಯ್ನೇ ಕೀಳಾರು ಜನ ಕಸ್ಕಟ್ಟೆ ಕಾಯೀಂತ್ಲೂ ನೋಡ್ತಿರ್ಲಿಲ್ಲ. ನೀರು ನಿಡೀಗೆ ಬರಾರು, ಆಳು ಕಾಳೂ ಎಲ್ರೂ ಕೀಳಾರು. ಇಂಗಾಗಿ ನಮ್ ತಾವ್ಕೆ ಬತ್ತಲೇ ಇರ್ಲಿಲ್ಲ. ನೇರಳೆ ಹಣ್ಣು ಸ್ಯಾನೆ ಬುಡ್ತಿದ್ವು. ಅವುರ್ಗೂ ಆಗಿ, ನಮ್ಗೂ ಆಗಿ ಮಿಗಿಲ್ತಿದ್ವು. ಪರಂಗಿ ಗಿಡ ಒಂದಿತ್ತು.
ಮಾವಿನ್ ಮರ ಇರ್ಲಿಲ್ಲ. ಯಾರಾನಾ ಮಾವಿನ ಕಾಯಿ ತಂದು ಕೊಡ್ತೀನಿ ಅಂದ್ರೆ, ನೇರಳೆಹಣ್ಣು, ಕಾಶಿಹಣ್ಣು, ಟಮಾಟಾ ಹಣ್ಣು, ಕಳ್ಳೆಗಿಡ ಕೊಡೋದು.
ರೇಷ್ಮೆ ಹಣ್ಣಾಗೂ ಎಲ್ಡು ಬಣ್ಣ. ಕೆಂಪ್ದು, ಕರೀದು. ನಮ್ ಹೊಲ್ದಾಗೂ ಒಂದೆರ್ಡು ಗಿಡ ಇದ್ವು. ಬ್ಯಾರೆಯೋರ್ ಹೊಲುದ್ ತಾವ್ಲೂ ಹೋಗಿ ಕೇಳಿ ಇಸ್ಕಂತಿದ್ವಿ. ಎಲಚೀಗಿಡ ಹುಡೀಕ್ಕೊಂಡು ಹೋಗ್ತಿದ್ವಿ.
ಸಕ್ಕರಚ್ಚು
ಕುಂಬಳ ಬಳ್ಳಿ, ಕಲ್ಲಂಗಡಿ ಬಳ್ಳಿ ಇತ್ತು. ಕುಂಬಳಕಾಯಿ ಒಡುದ್ರೆ, ಕಲ್ಲಂಗಡಿ ಹಣ್ಣು ತಿಂದಾದ್ ಮ್ಯಾಗೆ, ಕೆಕ್ಕರೆ ಹಣ್ಣು ತಿಂದ್ರೆ, ಬೀಜ ತೆಗ್ದು ತೊಳ್ದು, ಒಣುಗ್ಸಿ ಇಟ್ಕಂತಿದ್ದೊ. ಏನೂ ಸಿಗ್ದೇ ಹೋದ್ರೆ ಅದ್ನ ಕುಕ್ಕಿ ಬೀಜ ತೆಗ್ದು ತಿನ್ನಾದು. ನಮ್ಮಮ್ಮುನ್ನ ಗೋಳು ಹೊಯ್ಕಂಡು ಆ ಬೀಜ ತೆಗ್ದು ಕೊಡ್ತೀನಿ, ಸಕ್ಕರೆ ಪಾಕ ಹಿಡ್ದು ಕೊಡೂ ಅಂತ ಹಿಂದ್ ಬೀಳ್ತಿದ್ದೆ. ಅದ್ರಾಗೆ ಸಕ್ಕರಚ್ಚು ಅಂತ ಮಾಡ್ತಿದ್ರು. ಮದ್ವೇ ಮುಂಜಿ ಆದ್ರೆ ಈ ಬೀಜ್ಗುಳ ಅಚ್ಚು ಇರ್ಲೇ ಬೇಕಿತ್ತು. ಅದ್ರಾಗೂ ಮೊದುಲ್ನೇ ರಾತ್ರೀಗೆ ಇರ್ಲೇ ಬೇಕಿತ್ತು. ನಾವೂ ಯಾರ್ದಾನಾ ಮದ್ವೆ ಆದ್ರೆ ಕಾಯ್ತಿದ್ವಿ. ಮೊದುಲ್ನೇ ರಾತ್ರಿ ಆದ್ ಮ್ಯಾಕೆ, ಬೆಳಗಾನಾ ಅಲ್ಲಿಗೇ ಓಡೋಗಿ ಸಕ್ಕರೆ ಅಚ್ಚು ಎತ್ತಾಕ್ಕೊಂಡು ಬರಾದು. ಮೈನೆರುದ್ರೂ ಆಟೇಯಾ, ಅದಿರ್ಲೇ ಬೇಕಿತ್ತು. ಆವಾಗ ನಾವೂ ಕಾಯ್ಕಂಡು ಕುಂತಿರ್ತಿದ್ವಿ.
ಜಜ್ಜು ಹುಣಿಸೆಕಾಯಿ
ಹುಣಿಸೆ ಗಿಡ್ದಾಗೆ ಮೂರು ರಕ ತಿನ್ನಾಕೆ ಸಿಗ್ತಿತ್ತು. ಎಳೆ ಚಿಗುರು ಕಿತ್ಕಂಡು ತಿಂತಿದ್ವು. ಅದ್ನ ಸಾರು ಮಾಡಾಕೂ ಕಿತ್ಕಂಬರ್ತಿದ್ವಿ. ಚಿಗುರು ನೋಡ್ತಿದ್ದಂಗೇ ಬಾಯಾಗೆ ನೀರೂರ್ತಿತ್ತು. ಹುಣಿಸೆ ಕಾಯಿ ಕಿತ್ರಂತೂ ಪರಿಸೆ. ಏಳೆಂಟು ಜನಾ ಕೂಡ್ಕಂತಿದ್ವಿ. ಕಾಯಿ ನಮ್ ಹೊಲ್ದಾಗುಳ್ದು. ಒಬ್ಬಳು ಉಪ್ಪು ತಂದ್ರೆ, ಇನ್ನೊಬ್ಳು ಮೆಣಸಿನಕಾಯಿ. ಸಿಕ್ಕರೆ ಜೀರಿಗೆ. ಒಬ್ಬಳು ಬೀದ್ಯಾಗಿರಾ ಸೈಜು ಕಲ್ಲು(ದೊಡ್ಡ ಕಲ್ಲು) ರೆಡಿ ಇಕ್ಕಾಳು. ಅದ್ನ ಕಿಲೀನ್ ಮಾಡ್ಬೇಕಲ್ಲ, ಲಂಗದಾಗೆ ಉಜ್ಜುದ್ರೆ ಆಯ್ತು. ಅದ್ರ ಮ್ಯಾಗ್ಳ ಮಣ್ಣುಮಸಿ, ಧೂಳುಪಾಳು ಎಲ್ಲಾ ಮರ್ತಂಗೇ. ಇನ್ನೊಬ್ಳು ಜಜ್ಜಾಕೆ ಒಂದು ಅಂಗೈಯಗಲದ ಕಲ್ಲು ಹುಡಿಕ್ಕಾ ಬರಾಳು. ಅದ್ನೂವೆ ಲಂಗದಾಗೆ ಒರ್ಸಿ, ಕುಟ್ಟಾಕೆ ಸುರು ಮಾಡ್ತಿದ್ವಿ. ಜಜ್ಜಿದ ಮ್ಯಾಗೆ ಎಲ್ರೂ ಸೇರಿ ಹಂಚ್ಕಂಡು ತಿನ್ನಾದು. ಕಲ್ಲಿನ ಮ್ಯಾಗೆ ಚೂರೂಪಾರೂ ಅಂಟಿರ್ತಿತ್ತಾ, ಅದ್ನ ಎಲ್ರೂ ಕೈಯಾಕಿ ತಕ್ಕಂಡು ನೆಕ್ಕಿ ನೆಕ್ಕಿ ತಿಂತಿದ್ವಿ. ಹುಣಿಸೆಕಾಯಿ ಮುಗುದ್ ಮ್ಯಾಗೆ, ಹುಣಿಸೆ ಹಣ್ಣು ತಕಾ ಬಂದು ಕುಟ್ಟುಣಿಸೆ ಮಾಡ್ಕಣಾದು. ಅದ್ಕೆ ಉಪ್ಪು, ಜೀರಿಗೆ, ಬೆಲ್ಲ, ಒಣ ಮೆಣಸಿನಕಾಯಿ ಬೇಕಿತ್ತು. ಕುಟ್ಟಿದ್ ಮ್ಯಾಗೆ ಹಂಚಿಕಡ್ಡಿ ಪರಕೇನಾಗೆ ಪಟಕ್ ಅಂತ ಒಂದೆರಡು ಕಡ್ಡಿ ಮುರ್ಕಂಡು ಬರಾದು. ಅದ್ರ ತುದೀಗೆ ಉಂಡೆ ಮಾಡಿ ಕುಟ್ಟುಣಿಸೆ ಹಣ್ಣು ಸಿಗ್ಸಾದು. ಅದ್ನ ಚೀಪ್ಕಂತಾ ಇಡೀ ದಿನ ಕಳೀತಿದ್ವಿ. ದೊಡ್ಡ ಉಂಡೆ ಸಿಗ್ಸಿದ್ರೆ, ಸೊಲ್ಪೊತ್ತು ಚೀಪೋದು, ಬ್ಯಾರೇ ಏನಾರಾ ಸಿಗ್ತೋ ಇದ್ನ ಅಂಗೇ ಒಂದು ಕಡೆ ಮಡಗೋದು. ತಿರ್ಗಾ ಗ್ಯಪ್ತಿ ಬಂದಾಗ ತಕಂಡು ಚೀಪೋದು. ಚೀಪೋ ಮುಂದ್ಲ ಲಂಗ್ದಾಗೆ ಒಂದು ಕಿತ ಒರೆಸಿದ್ರೆ ಅದು ಪಾವ್ನ ಆಗ್ತಿತ್ತು. ನಮ್ ಲಂಗ ಒಂದ್ ತರಕ್ಕೆ ಮಡಿ ಮಾಡೋ ಬಟ್ಟೆ ಆಗಿತ್ತು!! ಯಾತರದಾನಾ ಇರ್ಲಿ ಒಂದು ಕಿತ ಲಂಗುಕ್ಕೆ ಮುಟ್ಟಿಸಿದ್ವೋ ಮುಗೀತು. ಕಿಲೀನ್ ಆಗೋಗ್ತಿತ್ತು. ಆದ್ರೆ ಯಾಕೋಪ್ಪ ನಮ್ಮಮ್ಮುಂಗೆ ಮಾತ್ರಾ ಅದು ಮಡಿ ಬಟ್ಟೆ ತರ ಕಾಣ್ತಿರ್ಲಿಲ್ಲ. ಯೇ ಅದ್ರ ಹುಟ್ಟು ನೋಡಮ್ಮಿ, ಒಳ್ಳೆ ಸಾರ್ಸಾ ಬಟ್ಟೆ ತರಾ ಗಬ್ಬೆದ್ದೋಗೈತೆ ಅಂತ ಮಕ್ಕೆ ಉಗಿಯೋದ್ನ ಕೇಳೀ ಕೇಳೀ ನಮ್ಗೂ ರೂಡಿ ಆಗೋಗಿತ್ತು.
ನಮ್ಮನೆ ಮುಂದ್ಕೆ ಒಂದು ಕೆಂಕೇಶಿ ಮರ ಇತ್ತು. ಅದ್ರಾಗ್ಳ ಕೆಂಪು ಹುವ್ವ ಎಳೇದಿದ್ದಾಗ ಒಂತರಾ ಹುಳ್ಳುಳ್ಳುಕೆ ಇರ್ತಿತ್ತು. ಅದ್ನಾ ತಿಂತಿದ್ವಿ. ಬಿಳೇ ದಾಸವಾಳದ ಹುವ್ವ ತಿಂತಿದ್ವಿ. ಯಾವ್ದ್ನೂ ಬಿಡ್ತಿರ್ಲಿಲ್ಲಪ್ಪ. ಎಲ್ಲಾನೂ ಖುಷೀಲೆ ತಿಂತಾ ಇದ್ವು.
ಹಣ್ಣು ಹುಡೀಕ್ಕೊಂಡು ಊರು ಸುತ್ತಾಟ
ಎಲಚೀಕಾಯಿ ಅಂದ್ರೆ ಪ್ರಾಣ್ವಾಗಿತ್ತು. ಸಿಕ್ಕರೆ ಬಾಯಾಗೆ ಹಾಕ್ಕಂಡು ಅರ್ಧ ಗಂಟೆ ಆದ್ರೂ ಚೀಪ್ತಾನೇ ಇರ್ತಿದ್ವಿ. ಕಾಯಿನ ಅಂಟು ಅಂಟು ಹೋಗಿ ನಮ್ ನಾಲ್ಗ್ಯಾಗಿಂದು ಅಂಟು ಸೇರಾ ತಕ ಉಗೀತಿರ್ಲಿಲ್ಲ. ಯಾರಾನಾ ಒಂದು ಚೊಂಬು ಎಲಚೀಕಾಯಿ ತಕಾಬಂದು ಕೊಟ್ರೆ ಹಬ್ಬ. ಅದ್ರಾಗೆ ನಮ್ಮಮ್ಮ, ಉಪ್ಪು, ಕಾರ, ಕೊತ್ತಿಮೀರಿ ಸೊಪ್ಪು ಸೇರ್ಸಿ ರೊಟ್ಟಿ ಮಾಡಿ, ಬಿಸಿಲಾಗೆ ಇಕ್ಕುತಿದ್ರು. ಅದ್ನ ಒಣಗಾಕೂ ಬಿಡ್ದೆ, ಹೋಗಿ ಹೋಗಿ ಅಂಗಂಗೇ ಮುರ್ಕೊಂಡು ತಿಂದು ಖಾಲಿ ಮಾಡ್ತಿದ್ವಿ.
ಮಾವುನ್ ಕಾಯಿನ ತುರ್ದು ಸಾರಿನ್ ಮೆಣಸಿನಪುಡಿ, ಬೆಲ್ಲ, ಉಪ್ಪು ಹಾಕಿ ಊರಾಕೋದು.(ಒಂದು ಎರಡು ಗಂಟೆ ಊರಲು ಬಿಡೋದು) ಆಮ್ಯಾಗೆ ಚೂರು ಚೂರೇ ತೆಗ್ದು ಬಾಯಾಗಾಕ್ಕಂಡು ವತ್ತಲಿಸ್ತಿದ್ರೆ ಸ್ವರ್ಗವೇ ಸೈ.
ನಾಯಿ ನೇರಳೆ ಹಣ್ಣು (ಚಿಕ್ಕದು ಗುಂಡು ನೇರಳೆ) ಸಿಕ್ರೆ ಮಜ್ಜಿಗೆ ಹಾಕಿ ಉಪ್ಪು ಕಾರ ಹಾಕಿ ಬೇಯ್ಸೋದು. ಮೆತ್ತಗೆ ರಸ ಒಸರ್ತಿದ್ದ ಹಣ್ಣು ಬಾಯಾಗೆ ಹಾಕ್ಕಂಡಂಗೇ ಕರಗಿ ಹೋಗ್ತಿತ್ತು.
ಸೂರ್ಯಕಾಂತಿ ಗಿಡ ಹುಡೀಕ್ಕೊಂಡು ಹೋಗ್ತಿದ್ವಿ. ಒಂದೂವ ಸಿಕ್ಕಿದ್ರೂ ಸತ ಬೋ ಖುಷಿ. ಒಳ್ಗೆ ದಂಡಿಯಾಗಿ ಇರೋ ಕಪ್ಪು ಬೀಜ ತಂದು ಕುಕ್ಕಿ ಕುಕ್ಕಿ ತಿಂತಿದ್ವಿ.
ಬ್ಯಾಸಿಗೆ ಕಾಲ್ದಾಗೆ (ಬ್ಯಾಲದಣ್ಣು)ಬೇಲದ ಹಣ್ಣು ಯಾರಾನಾ ತಂದುಕೊಡೋರು. ಹಣ್ಣಿನ ತಿರುಳು ಕೆತ್ತಿ, ಬೆಲ್ಲ ಹಾಕಿ ರುಬ್ಬಿದ್ರೆ, ಗಟ್ಟಿಯಾಗಿರ್ತಿತ್ತು. ಒಂದು ತಟ್ಟೆಗೆ ಹಾಕಿ ಒತ್ತಿ, ವಸಿ ಹೊತ್ತು ಅಂಗೇ ಬಿಟ್ರೆ, ಬಿಲ್ಲೆ ಬರ್ತಿದ್ವು.(ಮಿಠಾಯಿ ತರ) ಅದೂ ಹುಳ್ಳಕೆ, ಸೀಗೆ ಒಂತರಾ ರುಚಿ. ಅದುಕ್ಕೇ ನೀರು ಹಾಕಿ ರುಬ್ಬಿದ್ರೆ ಪಾನಕ ಆಗ್ತಿತ್ತು.
ಮರ ಇರೋರು ನೆಲ್ಲಿ ಕಾಯಿ ತಂದುಕೊಡಾರು. ಅದುಕ್ಕೆ ಅಚ್ಚಕಾರದ ಪುಡಿ, ಉಪ್ಪು ಸೇರ್ಸಿ ಅರ್ಧ ಗಂಟೆ ಬಿಟ್ರೆ, ಚೆಂದಾಗಿ ಉಪ್ಪು ಕಾರ ಇಡ್ಕಂತಿತ್ತು. ಬಾಯಲ್ಲಿ ಹಾಕ್ಕೊಂಡು, ಚಪ್ಪುರಿಸ್ಕಂಡು ನಮುಲುತ್ತಿದ್ರೆ, ಊಟ್ವೂ ಬ್ಯಾಡ ಏನೂ ಬ್ಯಾಡಾ ಅನ್ನಷ್ಟು ಖುಷಿ.
ಕೆರೆ ಬಯಲಾಗೆ ಊರ ಜನ್ರ ಗೇಯ್ಮೆ
ಕೆರಿಯಾಗೆ ನೀರು ಖಾಲಿಯಾಗದ್ನೇ ಕಾಯ್ಕಂಡು, ಊರಿನ್ ಪಟೇಲ್ರು, ಶ್ಯಾನುಭೋಗ್ರು ಇಡೀ ಊರ್ನಾಗೆ ಟಾಂ ಟಾಂ ಹೊಡ್ಸೋರು. ಅಂದ್ರೆ ತಮಟೆ ಬಾರ್ಸಿಕೊಂಡು ಸುದ್ದೀ ಸಾರಾಕೆ ಕಳ್ಸೋರು. ಕೆರೆ ಬಯಲಾಗೆ ಗೇಯ್ಮೆ ಮಾಡಾಕೆ ಒಂದು ನೂರು ಮಡಿಕೆ ಬೇಕಾಗ್ತಿತ್ತು. ಮನೆಗೊನ್ನೊಂದು ಮಡಿಕೆ ಕಳಿಸಾಕೆ ಯೋಳ್ತಿದ್ರು. ಮಡಿಕೆ(ನೇಗಿಲು) ಇಲ್ದೋರು ಕೂಲಿ ಹೋಗ್ತಿದ್ರು. ಇಲ್ಲಂದ್ರೆ ಕೂಲಿ ದುಡ್ಡಾರಾ ಕೊಡ್ಬೇಕಿತ್ತು. ಮಡಕೆಗೆ ಎರಡು ಎತ್ತು ಬೇಕಿತ್ತು. ಆ ಎಲ್ಡು ಎತ್ತುಗಳ್ನೂ ಕೂಡಿಸಾಕೆ ಬೆನ್ನ ಮ್ಯಾಗೆ ಒಂದು ನೊಗ. ಮಡಕೇಗೂ, ನೊಗುಕ್ಕೂ ಸೇರ್ಸಿ ಬಿಗಿಯಾಕೆ ಮೇಣಿ(ಹಗ್ಗ)ಇರ್ತಿತ್ತು. ಎಲ್ಲಾರೂ ಒಟ್ಗೇ ಗೇಯುತ್ತಿದ್ದರು. ಅಲ್ಲಿ ಬುಡ್ಡಕಡಲೆ(ಕಡಲೆ ಗಿಡ), ಕೆಕ್ಕರೆ ಹಣ್ಣು ಬೆಳೀತಿದ್ರು. ಬಂದ ಫಸಲು ಊರಾಗೆಲ್ಲಾ ಸಮವಾಗಿ ಹಂಚ್ತಿದ್ರು. ಯಾರಾನಾ ಮಡಕೆ ಕೊಡ್ದೋರು, ಕೂಲೀನೂ ಬರ್ದೋರ್ಗೆ ದಂಡ ಹಾಕ್ತಿದ್ರು. ಬುಡ್ಡಕಡಲೆನೂ ನಮ್ಮ ತಿಂಡೀಪಟ್ಟೀಲಿ ಸೇರ್ಕಂತಿತ್ತು. ಅವುನ್ನ ಸುಟ್ಕಂಡೋ, ಬೇಯ್ಸಿಕೊಂಡೋ, ಏನೂ ಇಲ್ಲಾದ್ರೂ ಹಸೀದೇ ಸೈ ತಿಂತಿದ್ವಿ.
ಆಲೇಮನೆ ಸುಗ್ಗಿ
ನಮ್ ಹೊಲ್ದಾಗೆ ಕಬ್ಬು ಬೆಳೀತಿದ್ವಿ ವರ್ಸೊರ್ಸವೂ ಆಲೆಮನೇನೂ ಇಕ್ತಿದ್ವಿ. ಕಬ್ಬು ಬಾಯಾಗೆ ಸಿಗಿದು, ಕಡ್ಕಂಡೇ ತಿಂತಿದ್ದಿದ್ದು. ಆವಾಗೆಲ್ಲಾ ಹಚ್ಚಿ ತಿನ್ನಾ ಇಸ್ಯವೇ ತಲೆಗೆ ಏರ್ತಿರಲಿಲ್ಲ. ಕಬ್ಬಾನಾ ಆಗ್ಲಿ, ಚೇಪೇಕಾಯಾನಾ ಆಗ್ಲಿ, ಮಾವುನ ಹಣ್ಣಾನಾ ಆಗ್ಲಿ ಕಡಿದು ತಿನ್ನಾದೇಯಾ. ಈಳಿಗೆಮಣೇ ಕೆಲ್ಸಾವಾ ಹಲ್ಲುಗ್ಳೇ ಚೆಂದಾಗಿ ಮಾಡ್ತಿದ್ವು.
ಆಲೆಮನೆ ಟೇಮ್ ನಾಗೆ ಕಬ್ಬನಾಲು ದಂಡಿಯಾಗಿ ಕುಡೀಬೌದಿತ್ತು. ಕಬ್ಬಿನ ಜಲ್ಲೆ ಒಳ್ಗೆ ನಿಂಬೆಹಣ್ಣು, ಹಸಿಮೆಣಸಿನಕಾಯಿ, ಶುಂಠಿ ಮಡಗಿ ಕುಡೀಯಾಕೇಂತ ರಸ ತೆಗೀತಿದ್ರು. ಒನ್ನೊಂದು ದಪ ಎಳ್ಳೀರೂ(ಎಳನೀರು) ಸೇರ್ಸಿ ಕುಡೀತಿದ್ವು.
ಕಾಕಂಬಿ
ಕಬ್ನಾಲು ಕೊಪ್ಪರಿಗೆ ಒಳಗೆ ಚೆಂದಾಕಿ ಕುದಿಸ್ತಿದ್ರು. ಒಂದು ಇಬ್ಬೆ ಬೆಲ್ಲ ಆಗಾಕೆ ಒಂದೂವರೆ ಎಲ್ಡು ಗಂಟೆ ಬೇಕಾಗ್ತಿತ್ತು. ಏಳು ಸರ್ತಿ ಕೊಪ್ಪರಿಗೆಯಾಗಿನ್ ಹಾಲು ಕುದಿ ಬಂದು ಮ್ಯಾಲೆದ್ದು ಬಂದು ಕೆಳ್ಗೆ ಹೋಗ್ತಿತ್ತು. ಅಲ್ಲಿಗೆ ಬೆಲ್ಲದ ಪಾಕ ಆಗೇದೆ ಅಂತ ಲೆಕ್ಕ. ಆಗ ಅದುನ್ನ ಹನ್ನೆರಡು ಅಂಗುಲ ನಾಟು(ಆಳ), ನಾಕು ಅಡಿ ಅಗಲ, ಐದಡಿ ಉದ್ದುದ ಮಣ್ಣಿನ ಗುಂಡಿ ಮಾಡಿರ್ತಿದ್ರು. ಅದ್ರಾಗೆ ಸುತ್ತೂರ ಎರ್ಡು ಅಡಿ ಬಿಟ್ಟು ಹಲಗೆ ಬಡಿದು ರೆಡಿ ಮಾಡ್ತಿದ್ರು. ಬಿಸಿ ಕೊಪ್ಪರಿಗೆಯಾಗಿನ್ ಬೆಲ್ಲದ ಪಾಕ್ವ ಪಾತ್ರೆಗೆ ಹಾಕಿದ್ರೆ ಪಾತ್ರೆ ತಡಕಂತಿರಲಿಲ್ಲ. ಅದುಕ್ಕೆ ಮರದ ಹಲಗೆಗಳ್ನ ನಾಕೂ ಕಡೆ ಇಕ್ಕಿ ಒಂದು ಡಬ್ಬದಂಗೆ ಮಾಡಿರ್ತಿದ್ರು. ನಾಕು ಜನ ಕೊಪ್ಪರಿಗೆ ಹಿಡ್ಕಂಡು ಬಂದು ಗುಂಡಿಯಾಗೆ ಸುರಿದ್ರೆ ಒಂದು ಅರ್ಧ ಮುಕ್ಕಾಲು ಗಂಟೆ ಹೊತ್ಗೆ ಅಚ್ಚು ಬೆಲ್ಲಾನೋ ಉಂಡೆ ಬೆಲ್ಲಾನೋ ಮಾಡೋಷ್ಟು ಗಟ್ಟಿಯಾಗ್ತಿತ್ತು. ಬಲಿತಿರೋ ಕಬ್ಬಾದ್ರೆ ಮೂವತ್ತು ಮೂವತ್ತೈದು ಕೆಜಿ ಬೆಲ್ಲ ಒಂದು ಇಬ್ಬೇಗೆ ಸಿಗ್ತಿತ್ತು. (ಸೂಲಿಂಗಿ ಒಡೆದರೆ ಬಲಿತೈತೆ ಅಂತ. ಆದ್ರೆ ಅದುಕ್ಕೆ ಹನ್ನೆರ್ಡು ತಿಂಗಳು ಕಾಯಬೇಕಿತ್ತು. ಹತ್ತು ತಿಂಗುಳ್ಗೇ ಆಲೆಮನೆ ಸುರು ಮಾಡ್ಕಂತಿದ್ರು. ಸೂಲಿಂಗಿ ಒಡೆಯಾದು ಅಂದ್ರೆ ಕಬ್ಬಿನ ಮ್ಯಾಗೆ ಜ್ವಾಳದ ಕಡ್ಡಿ ಮ್ಯಾಗೆ ಬಂದಂಗೆ ನಾಕಡಿ ಉದ್ದದ ಕಡ್ಡಿ ಹೊಂಟು, ಮ್ಯಾಗೆ ಅರ್ಧ ಅಡಿ ನಾರು ತರ ನಾಕೈದು ಕಡೆ ಚಿಗುರ್ತಿತ್ತು.)
ಬೆಲ್ಲದ ಪಾಕಕ್ಕೆ ಬಿಡ್ದೆ ಒಂದು ಅರ್ಧ ಗಂಟೆ ಮುಂಚಿತ್ವಾಗಿ ಎಳೆ ಪಾಕ ಬಂದಾಗ್ಲೇ ಹಾಲ್ನ ಮಣ್ಣಿನ ಮಡಕೆಗೆ ಸುರಿದ್ರೆ ಅದು ಕಾಕಂಬಿ. ಮರಮರ ಮರುಳ್ತಿರೋ ಹಾಲ್ನ ಚೊಂಬಿನ ತರ ಇರ್ತಿದ್ದ ಮಡಕೇನಾಗೆ ಹಾಕಿ ಮುಚ್ಚಿದ್ರೆ ಮೂರು ನಾಕು ತಿಂಗ್ಳು ಕೆಡತಿರಲಿಲ್ಲ. ಅದ್ನ ಉಪ್ಯೋಗಿಸ್ದೇ ಅಂಗೇ ಬಿಟ್ರೆ ಕಲ್ಲು ಸಕ್ಕರೆ ತರ ಹರಳು ಹರಳಾಗ್ತಿತ್ತು. ಈ ಕಾಕಂಬೀನ ರೊಟ್ಟಿ, ಚಪಾತಿ, ಬ್ರೆಡ್, ಬನ್ನು ಜೊತೇಗೆ ನಂಚಿಕೊಂಡು ತಿಂತಿದ್ವಿ. ಅದು ಒಳ್ಳೆ ಗುಲ್ಕನ್ ತರಾನೇ ಇರ್ತಿತ್ತು.
ಆಲೆಮನೆ ಸುದ್ದಿ ಗೊತ್ತಾದ್ ತಕ್ಷಣ ನಂಟರೆಲ್ಲ ಕಾಕಂಬಿ ಕ್ಯೋಳೋರು. ಕೊನೇಗೆ ಒಂದು ಕೊಪ್ಪರಿಗೆ ಪೂರ್ತಿ ಕಾಕಂಬೀಗೆ ಬಿಡ್ತಿದ್ರು. ಒಂದು ಹದಿನೈದು ಇಪ್ಪತ್ತು ಜನುಕ್ಕಾರಾ ಅದು ಆಗ್ತಿತ್ತು. ದುತ್ತಿ ತಕಂಡು(ದುತ್ತಿ ಅಂದ್ರೆ ಪುಟ್ಟ ಮಡಕೆ. ಅದ್ರ ಬಾಯಿ ಪುಟ್ಟದು. ಕೆಳಗೆ ಅಗಲ ಇರ್ತೈತೆ.) ಅದ್ರಾಗೆ ಕಾಕಂಬಿ ಸುರ್ದು ಅದೇ ಊರ್ನಾಗಿರೋರ್ಗಾದ್ರೆ ಬಿಳೆ ಪಂಚೆ ಬಟ್ಟೆ ಬಾಯಿಗೆ ಕಟ್ಟಿ ಕೊಡ್ತಿದ್ರು. ಬ್ಯಾರೆ ಊರಾಗಿರೋರಾದ್ರೆ ಅದ್ನ ಸೀಲ್ ಮಾಡ್ತಿದ್ರು. ಕಬ್ಬಿನ ಸಿಪ್ಪೆ ತಕಂಡು ಎರ್ಡು ಸೀಳು ಸಿಗಿದು ಅದ್ನ ದುತ್ತಿ ಬಾಯಿಗಿಕ್ಕಿ, ಮ್ಯಾಗೆ ಎಳೇ ಬೆಲ್ಲದ ಪಾಕ ಸುರಿದ್ರೆ ಗಟ್ಟಿಯಾಗ್ ಬಿಡ್ತಿತ್ತು. ಅದ್ನ ಜಪ್ಪಯ್ಯ ಅಂದ್ರೂ ತೆಗೆಯಾಕಾಗ್ತಿರ್ಲಿಲ್ಲ. ಸಲೀಸಾಗಿ ಬಸ್ನಾಗೆ ತಕಂಡು ಹೋಗ್ತಿದ್ರು. ಉಪ್ಯೋಗ ಮಾಡಾವಾಗ ಮುಚ್ಚಳ (ಸೀಲು) ಒಡೆದೇ ಬಳಸ್ಬೇಕಾಗಿತ್ತು.
ಕಳ್ಳೆಮಿಠಾಯಿ
ಆಲೆಮನ್ಯಾಗೆ ಮಾಡ್ತಿದ್ದ ವಿಸೇಸ ಪದಾರ್ಥ ಇದು. ಎಳೆ ಬೆಲ್ಲದಪಾಕ ಆದ್ ತಕ್ಷಣ ಅದುಕ್ಕೆ ಕಡಲೆಪೊಪ್ಪು, ಕಳ್ಳೆಬೀಜ, ಕಡ್ಲೇ ಪೊಪ್ಪಿನ ಪುಡಿ, ಒಣಗಿದ್ ಕೊಬ್ರಿ, ಯಾಲಕ್ಕಿ ಪುಡಿ ಹಾಕಿ ಒಂದು ತಟ್ಟೇಗೆ ತುಪ್ಪ ಸವರಿ ಈ ಪಾಕ ಹಾಕಿದ್ರೆ ಒಂದು ಮೂರು ನಾಕು ಗಂಟೆ ಬಿಟ್ಟೇಟ್ಗೆ ಒಳ್ಳೆ ಮಿಠಾಯಿ ಆಗ್ತಿತ್ತು. ಅದ್ನ ಕತ್ತರ್ಸಿ ಆಕಾರ ಮಾಡ್ತಿದ್ರು. ನಾವು ಹಠ ಹಿಡ್ದು ಸಣ್ಣ ಲೋಟುಕ್ಕೆ ತುಪ್ಪ ಸವರ್ಕೊಂಡು ಬಂದು ಹಾಕುಸ್ಕಂತುದ್ವಿ. ಆಗ ಲೋಟದ ಆಕಾರಾನೇ ಆಗ್ತಿತ್ತು.
ಇಂಗೇ ತರಾವರಿ ತಿಂಡಿಗ್ಳು ನಮ್ಗೆ ಸಿಗ್ತಿದ್ವು. ಇನ್ನಾ ಬರೀತಾ ಹೋದ್ರೆ ಮುಗಿಯಾ ಲಕ್ಷ್ಮಣವೇ ಕಾಣ್ತಿಲ್ಲ. ಮುಂದಿನ್ ಕಿತುಕ್ಕೆ ವಸಿ ನೋಡಾಮಾ.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.