Advertisement
ಹಾಸ್ಯದ ಹೊಂಬಿಸಿಲು ಹಳಿಸುತ್ತಿದೆಯೇ?: ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

ಹಾಸ್ಯದ ಹೊಂಬಿಸಿಲು ಹಳಿಸುತ್ತಿದೆಯೇ?: ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

ಮಾತು ‘ಮನೆ’ ಕಟ್ಟಬೇಕು, ಮಾತು ಮೌನವಾಗಬೇಕು. ಮಾತು ‘ಮಮತೆ’ಯಾಗಬೇಕು ಮಾತು ‘ಹಾಸ್ಯದ ಮನ್ವಂತರ ‘ಸೃಷ್ಟಿಸಬೇಕು. ಡಿವಿಜಿ ಹೇಳುವಂತೆ ‘ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ ‘ಎಂಬ ಮಾತು ನೆನಪಿಸಿಕೊಳ್ಳಬೇಕು. ಹಾಸ್ಯ ‘ವಿಕಾಸ’ ವಾಗಬೇಕೇ ವಿನಹ ಕಸದ ಬುಟ್ಟಿಯಾಗಬಾರದಲ್ಲವೇ? ನಗುವಿನ ಕನಸುಗಳ ಮನೆಯಲ್ಲಿ ಕಲ್ಲು ಬೀಳದೆ ಕಲ್ಲು ಕೂಡ ಕರಗುವಂತ ನಗುವನ್ನು ಸೃಷ್ಟಿಸುವಂತಹ ನಗೆ ಹಬ್ಬ ನಮ್ಮದಾಗಬೇಕು. ನಗುವಿನ ಧರ್ಮ ಯಾವಾಗಲೂ ಸಚ್ಚಾರಿತ್ರ್ಯವನ್ನು ಮನಗಾಣಿಸುತ್ತದೆ. ಆದರೆ ಇಂದು ನಗು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕಂಗಾಲಾಗಿದೆ ಅನಿಸುತ್ತದೆ.
ಟಿ.ವಿ. ವಾಹಿನಿಗಳು ಬಿತ್ತರಿಸುತ್ತಿರುವ ಹಾಸ್ಯ ಕಾರ್ಯಕ್ರಮಗಳ ಗುಣಮಟ್ಟದ ಕುರಿತು ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

ಒಂದು ‘ಪದ’ ನೂರಾರು ಅರ್ಥಗಳನ್ನು ಒಳಗೊಂಡಿರುವುದು. ಅದು ಸಮಯ ಸಂದರ್ಭಕ್ಕನುಗುಣವಾಗಿ ತನ್ನ ವಿನ್ಯಾಸವನ್ನು ಪಡೆದುಕೊಳ್ಳುವುದು. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ ಜನಜನಿತ. ಶೃಂಗಾರ, ಹಾಸ್ಯ ಕರುಣ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತ ಎಂಬ ನವರಸಗಳಿವೆ. ಜನಪದರ ಕಾಲದ ಸೂತ್ರದಾರನಿಂದ ಹಿಡಿದು ಪುರಾಣ, ಸಿನಿಮಾ ಪಾತ್ರಗಳಾದ ನಾರಾಯಣ, ತೆನಾಲಿ ರಾಮ, ಬೀರಬಲ್ಲ, ನರಸಿಂಹ ರಾಜು, ದ್ವಾರಕೀಶ, ಚಾರ್ಲಿ ಚಾಪ್ಲಿನ್, ಬಾಲಕೃಷ್ಣಾ ಮುಸರಿ ಕೃಷ್ಣ, ಇತ್ಯಾದಿ ನಟರು ಹಾಸ್ಯದ ನದಿಯನ್ನೇ ಹರಿಸಿದ ಉದಾರಣೆಗಳು ನಮ್ಮ ಕಣ್ಮುಂದಿವೆ. ನವ ರಸಗಳಲ್ಲಿ ಎರಡನೆಯದಾದ ಹಾಸ್ಯ, ಇತ್ತೀಚಿನ ದಿನಮಾನಗಳಲ್ಲಿ ಸಮೂಹ ಮಾಧ್ಯಮಗಳು ರೂಪಿಸುತ್ತಿರುವ ‘ಕಾಮಿಡಿ ಶೋ’ಗಳಿಂದ ದ್ವಂದ್ವಾರ್ಥಗಳ ಗೂಡಾಗಿವೆ. ಇಲ್ಲಿನ ಸಂಭಾಷಣೆಗಳು ನೋಡುಗರಿಗೆ ಕೇಳುಗರಿಗೆ ಮುಜುಗರವನ್ನುಂಟು ಮಾಡುತ್ತಿವೆ. ಕುಟುಂಬ ಸಮೇತರಾಗಿ ಕಾರ್ಯಕ್ರಮ ವೀಕ್ಷಿಸುತ್ತಿರುವಾಗ ಇಲ್ಲ ಸಲ್ಲದ ‘ಲೈಂಗಿಕ ವಾಂಚೆಯ ದ್ವಂದ್ವಾರ್ಥ’ (ಡಬ್ಬಲ್ ಮೀನಿಂಗ್ )ಳು ಆಂಗೀಕ ಅಭಿನಯ ಮನಸ್ಸನ್ನು ಘಾಸಿಗೊಳಿಸುತ್ತಿವೆ. ಸದಭಿರುಚಿಯ ಹಾಸ್ಯವಿಂದು ‘ಅಸು’ನೀಗಿದೆ ಎಂದೆನಿಸುತ್ತದೆ.

ಅನೇಕ ಪ್ರತಿಭೆಗಳಿಗೆ ವೇದಿಕೆಯಾದ ವಾಹಿನಿಗಳು ಈ ಪ್ರತಿಭೆಗಳನ್ನು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಮಾಡುತ್ತಿವೆ. ಹಾಸ್ಯ ವಿನೋದವಾಗಿ, ವಿಕಾಸದ ಹಂತ ತಲುಪಬೇಕು. ಅದು ‘ವಿಕೋಪ’ವಾಗಬಾರದು. ಹಾಸ್ಯ ಧರ್ಮವನ್ನು ವಾಹಿನಿಗಳು, ನಟರು ಮರೆತಂತೆ ಭಾಸವಾಗುತ್ತಿದೆ. ಖಾಸಗಿ ವಿಷಯಗಳೆಲ್ಲವೂ ಹಾಸ್ಯದ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ.

ಹಿಂದಿನ ಚಲನಚಿತ್ರಗಳಲ್ಲಿ ಡಾ. ರಾಜಕುಮಾರ್ ಕಾಲಮಾನದ ಹಾಸ್ಯ ಸಾಮಾಜಿಕ ಜವಾಬ್ದಾರಿಯ ಸಂದೇಶ ನೀಡುತ್ತಿತ್ತು. ಇಂದು ಅದು ‘ಕಾಣೆ’ಯಾಗಿದೆ. ಜನರನ್ನು ಒತ್ತಾಯಪೂರ್ವಕವಾಗಿ ನಗಿಸಬೇಕೆಂದೆ ದೈಹಿಕ ವಾಂಚೆಯ ಸಂಭಾಷಣೆ, ನಟನೆ ಸೃಷ್ಟಿಯಾಗುತ್ತಿವೆ. ಆರಂಭದ ದಿನಮಾನಗಳಲ್ಲಿ ಶೋ ಗಳಲ್ಲಿದ್ದ ಸದಭಿರುಚಿಯ ಹಾಸ್ಯ ‘ಬರ ಬರುತ್ತಾ ರಾಯರ ಕುದುರೆ ಕತ್ತೆ ಆಯಿತೇಂಬೊ’ ಮಾತಿಗೆ ಸಾಕ್ಷಿಯಾಗಿದೆ. ಸಿನಿಮಾಗಳಿಗೆ ಸೆನ್ಸಾರ್ ಮಾಡುವ ಸರ್ಕಾರ ಧಾರಾವಾಹಿಗಳಿಗೆ, ರಿಯಾಲಿಟಿ ಶೋಗಳಿಗೆ, ಕಾ’ಮಿಡಿ’ಶೋಗಳಿಗೆ ಹಾಗೂ ಸಾಮಾನ್ಯ ಸುದ್ದಿಯನ್ನು ಭಯ ಹುಟ್ಟಿಸುವಂತೆ ಹೇಳುವ ಸುದ್ದಿ ವಾಹಿನಿಗಳಿಗೆ ಸೆನ್ಸಾರ್ ಅವಶ್ಯಕತೆ ಇಲ್ಲವೇ? ಸಾಮುದಾಯಕವಾಗಿ ಬಿತ್ತನೆ ಗೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ಸಂಸಾರ ಅವಶ್ಯಕತೆ ಇದೆ ಅನಿಸುತ್ತಿದೆ ಈಗ. ಹಾಗೆ ಸಾಮಾಜಿಕ ಜಾಲತಾಣಗಳಿಗೆ ವಿಶ್ವ ಮಟ್ಟದಲ್ಲಿ ವಿಶೇಷವಾದ ಸೆನ್ಸಾರ್ ಅಳವಡಿಸಿಕೊಳ್ಳಬೇಕಾಗಿದೆ. ಏಕೆಂದರೆ ನಗು ಯಾರಿಗಾಗಿ ಯಾಕಾಗಿ, ಎಂಬುದನ್ನು ಟಿವಿ ಶೋಗಳು ಗೊತ್ತಿದ್ರು ಮರೆತಂತೆ ನಟಿಸುತ್ತಿವೆ. ಕೇವಲ ತಮ್ಮ ಟಿಆರ್‌ಪಿಗಾಗಿ ಈ ತರಹದ ಅರಗಿಸಿ ಕೊಳ್ಳದ ಹಾಸ್ಯಕ್ಕೆ ಹೆಜ್ಜೆ ಇಟ್ಟಿರುವುದು ಪರಮಾವಧಿಯೇ ಸರಿ.

ಸಿನಿಮಾ, ಧಾರಾವಾಹಿ, ಇತರ ಕಾರ್ಯಕ್ರಮಗಳೆಲ್ಲವೂ ಕೂಡ ಸಮುದಾಯದ ಭಾಗವಾಗಿ ಜವಾಬ್ದಾರಿಯಾಗಿ ಕಾರ್ಯನಿರ್ವಹಿಸುವ ಹಂತದಿಂದ ಕೆಳಗಿಳಿಯುತ್ತಿವೆ. ಕಲಾವಿದ ಸಮಾಜದ ಪ್ರತಿಬಿಂಬವಾಗಿ ಬೆಳಗಬೇಕೆ ಹೊರತು ಬೆಂಕಿಯಾಗಬಾರದು, ಕಾಮಿಡಿ ಶೋಗಳಲ್ಲಿನ ಕನ್ನಡ ಭಾಷೆ ದ್ವಂದ್ವಾರ್ಥಗಳಿಂದ ಬಿಡುಗಡೆ ಹೊಂದಬೇಕು. ನಗುವಿನಿಂದ ಆರೋಗ್ಯ ಆಯುಷ್ಯವೃದ್ಧಿ ಆಗುತ್ತದೆ. ಅನಾರೋಗ್ಯಕರ ಸಂಭಾಷಣೆಯಿಂದ ನಗುವಂತಾದರೆ ಮನಸ್ಸು, ಬುದ್ದಿಗೂ ಶರೀರಕ್ಕೂ ತಾಳ ತಪ್ಪದೇ ಇರದು.

ಮಾತು ‘ಮನೆ’ ಕಟ್ಟಬೇಕು, ಮಾತು ಮೌನವಾಗಬೇಕು. ಮಾತು ‘ಮಮತೆ’ಯಾಗಬೇಕು ಮಾತು ‘ಹಾಸ್ಯದ ಮನ್ವಂತರ ‘ಸೃಷ್ಟಿಸಬೇಕು. ಡಿವಿಜಿ ಹೇಳುವಂತೆ ‘ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ ‘ಎಂಬ ಮಾತು ನೆನಪಿಸಿಕೊಳ್ಳಬೇಕು. ಹಾಸ್ಯ ‘ವಿಕಾಸ’ ವಾಗಬೇಕೇ ವಿನಹ ಕಸದ ಬುಟ್ಟಿಯಾಗಬಾರದಲ್ಲವೇ? ನಗುವಿನ ಕನಸುಗಳ ಮನೆಯಲ್ಲಿ ಕಲ್ಲು ಬೀಳದೆ ಕಲ್ಲು ಕೂಡ ಕರಗುವಂತ ನಗುವನ್ನು ಸೃಷ್ಟಿಸುವಂತಹ ನಗೆ ಹಬ್ಬ ನಮ್ಮದಾಗಬೇಕು. ನಗುವಿನ ಧರ್ಮ ಯಾವಾಗಲೂ ಸಚ್ಚಾರಿತ್ರ್ಯವನ್ನು ಮನಗಾಣಿಸುತ್ತದೆ. ಆದರೆ ಇಂದು ನಗು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕಂಗಾಲಾಗಿದೆ ಅನಿಸುತ್ತದೆ. ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಮಹಾ ಪ್ರಬಂಧವನ್ನು ಎಂ ಎಸ್ ಸುಂಕಾಪುರ್ ಮಂಡಿಸಿದ್ದಾರೆ. ಅದು ನಗುವಿನ ಹೊಸ ಅವತಾರಗಳನ್ನು ಪ್ರತಿಬಿಂಬಿಸುವಂತಹದು.

ಆದ್ರೆ ಇಂದು ವಾಹಿನಿಗಳು ಹಾಸ್ಯದ ಹುಸಿ ಲೋಕ ಸೃಷ್ಟಿಸಿ, ಇದೇ ಕಾಮಿಡಿ ಎಂದು ಮುದ್ರೆಯೊತ್ತಲು ಸಿದ್ಧತೆ ನಡೆಸಿವೆ. ನಟರು ಪಂಚ್ ಡೈಲಾಗ್ ಹೇಳಿದಾಕ್ಷಣ ಜಡ್ಜ್ ಗಳು ಬಝರ್ ಒತ್ತುವುದರ ಮೂಲಕ ಹಾಸ್ಯದ ನಕಲು ರಹಧಾರಿ ನಿರ್ಮಿಸುತ್ತಿರುವುದು ವಿಷಾದನೀಯ. ಹಾಸ್ಯ ಚಿಂತನ ಮಂಥನ ವಾಗದೆ ಕೋಮಾ ಸ್ಥಿತಿ ತಲುಪಿಸುವ ಎಲ್ಲಾ ಸಿದ್ಧತೆಗಳು ನಡೆದಿವೆ.

ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ‘ಮಾತೆಂಬುದು ಜ್ಯೋತಿರ್ಲಿಂಗ’ ವೆಂಬ ಅಲ್ಲ ಅಲ್ಲಮನ ಮಾತು ಇಂದು ನಾವುಗಳೆಲ್ಲರೂ ಅಲ್ಲಗಳೆಯುತ್ತಿದ್ದೇವೆ ಅಲ್ಲವೇ? ‘ನುಡಿದರೆ ಮುತ್ತಿನ ಹಾರದಂತಿರಬೇಕು ‘ಎಂಬ ಬಸವಣ್ಣನ ಮಾತುಗಳು ಕೂಡ ಇಂದು ಕಣ್ಮರೆಯಾಗುತ್ತಿರುವುದು ದುರಂತ.

‘ನಗುವೊಂದು ರಸಪಾಕವಳುವೊಂದು ರಸಪಾಕ ನಗುವಾತ್ಮ ಪರಿಮಳವಫಸರಿಸುವ ಕುಸುಮ’ ವಾಗಲಿ ಎಂಬ ಡಿ.ವಿ.ಜಿಯವರ ಸಾಲುಗಳು ಮತ್ತೆ ಮತ್ತೆ ನಮಗೆ ನೆನಪಾಗಬೇಕಾಗಿದೆ.

About The Author

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

2 Comments

  1. Rajendra kumar Mudnal

    ಧನ್ಯವಾದಗಳು.🌹🌹

    Reply
    • Vasantha kumar

      ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ. ಈಗಿನ ವಾಹಿನಿಗಳಲ್ಲಿ ಬರುವ ಕಾಮಿಡಿ ಕಾರ್ಯಕ್ರಮಗಳು ನಿಜಕ್ಕೂ ಬಹಳ ಹೊಲಸಾಗಿ ಇರುತ್ತವೆ. ‘ಫಸ್ಟ್ ನೈಟ್’ ಅನ್ನುವ ಪದ ಅತ್ಯಂತ ಸಹಜವೇನೋ ಎಂಬಂತೆ ಇರುತ್ತದೆ. ಮಕ್ಕಳು ಮರಿಗಳೊಂದಿಗೆ ನೋಡುವ ಕಾರ್ಯಕ್ರಮಗಳೇ ಅಲ್ಲ. ಸರಿಯಾಗಿ ಹೇಳಿದ್ದೀರಿ. ಆದರೆ ಇವರಿಗೆ ಕಡಿವಾಣ ಹಾಕುವವರು ಯಾರು?!

      Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ