ತರಕಾರಿ ಗುಣಮಟ್ಟ ನೋಡುವುದು, ಚೌಕಾಶಿ ಮಾಡುವುದು ಮೊದಲಾದರಲ್ಲಿ ತೊಡಗಿಕೊಂಡರೆ, ಈ ಸಮೂಹದಲ್ಲಿದ್ದ ರಾಮಕ್ಕ, ಚೆನ್ನಮ್ಮಕ್ಕ, ಜೊತೆ ಇನ್ನೊಬ್ಬರು ಇದ್ದರು -ಒಂದು ಹೂವಿನ ಹೆಸರು ಅವರದು- ಯಾವ ಮಾಯದಲ್ಲೋ ಎರಡು ಬದನೆಕಾಯಿಯನ್ನೋ, ಒಂದು ಮಾವಿನ ಹಣ್ಣನ್ನೋ ‘ಅಬೇಸ್’ ಮಾಡಿ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಗಾಡಿ ಹೋದ ನಂತರ ಉಳಿದವರಿಗೆ ತಮ್ಮ ಕೈಚಳಕದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದೂ, ಉಳಿದವರು ಅದಕ್ಕೆ ಕೊಂಕಿನ, ಮೆಚ್ಚುಗೆಯ ಮಾತಾಡುತ್ತಾ ಒಂದಷ್ಟು ಸಮಯ ಕಳೆಯುತ್ತಿದ್ದರೆ, ನಮ್ಮಮ್ಮ ಪಾಪ ಭೀರು, “ಪಾಪ ಯಾಕೆ ಹಾಗೆ ಮಾಡಿದೆ, ಈ ಬಿಸಿಲಿನಲ್ಲಿ ಸುತ್ತುವ ಅವನಿಗೆ ನಷ್ಟವಾಯಿತಲ್ಲ” ಎಂದು ಕೊರಗುತಿದ್ದರು.
ವಸಂತಕುಮಾರ್ ಕಲ್ಯಾಣಿ ಬರಹ ನಿಮ್ಮ ಓದಿಗೆ
ಸಾಮಾನ್ಯವಾಗಿ ಐವತ್ತು ಅರುವತ್ತು ದಾಟಿದವರು ಟೀನೇಜ್ ಹುಡುಗ-ಹುಡುಗಿಯರನ್ನು ಮುಖಾಮುಖಿಯಾಗುವಾಗ “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅನ್ನುತ್ತಾ ಪೀಠಿಕೆ ಹಾಕಿ ತಮ್ಮ ಕಾಲದ ಮಹಿಮೆಗಳನ್ನೆಲ್ಲ ರಸಭರಿತವಾಗಿ ವರ್ಣಿಸಲು ತೊಡಗಿಕೊಳ್ಳುತ್ತಾರೆ.
ಹೀಗೆ ಒಮ್ಮೆ ಚಿಲ್ಟಾರಿಯೊಬ್ಬ “ನಿಮ್ಮ ಕಾಲದಲ್ಲಿ (ಅಂದರೆ ಅವನ ಭಾವನೆ.. ನೀವು ಹುಡುಗರಿದ್ದಾಗ) ಹೇಗಿತ್ತು ಸರ್?” ಎಂದಾಗ ರವಿ ಬೆಳಗೆರೆ “ಅಪ್ಪ ಮಹಾನುಭಾವ ನಾನು ಈ ಕಾಲದವನೇ ಕಣಯ್ಯ, ನನಗೆ ಇನ್ನೂ ಐವತ್ತು. ನಾನೇನು ಯಾವುದೋ ಶತಮಾನದವನಲ್ಲ” ಎಂದುತ್ತರಿಸಿದ್ದರು.
ನನಗೂ ಒಮ್ಮೊಮ್ಮೆ ಹುಕಿ ಬಂದಾಗ ಅಥವಾ ಸಮಯ ಸಂದರ್ಭಕ್ಕೆ ತಕ್ಕಂತೆ ಹಳೆಯ ನೆನಪುಗಳು ಒತ್ತರಿಸಿ ಬಂದಾಗ, ಆ ಆಚರಣೆ, ಅಭ್ಯಾಸಗಳು ಈಗಿನವರಿಗೆ ಎಷ್ಟು ಆಶ್ಚರ್ಯ ಜನಕ ಹಾಗೂ ನಗುವಿಗೆ ಕಾರಣವಾಗಬಲ್ಲವು ಎನಿಸಿತು. ಒಂದೆರಡು ಉದಾಹರಣೆಗಳು ಹೀಗಿವೆ.
ಬೆಂಗಳೂರಿನ ಯಶವಂತಪುರ ನನ್ನ ಬಾಲ್ಯದಲ್ಲಿ ತುಸುಮಟ್ಟಿಗೆ ಹಳ್ಳಿಯೇ ಆಗಿತ್ತು. ತುಮಕೂರು ರಸ್ತೆಯ ಇಕ್ಕೆಲದಲ್ಲಿ ಅನೇಕ ಸಣ್ಣಪುಟ್ಟ ಕಾರ್ಖಾನೆಗಳಿದ್ದವು. ಅಲ್ಲದೆ ಎರಡು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಿರ್ಲೋಸ್ಕರ್, ಮೈಸೂರ್ ಲ್ಯಾಂಪ್ಸ್, ಜಿ ಕೆ ಡಬ್ಲ್ಯೂ, ಮೈಸೂರು ಫೋರ್ಸ್ಲೀನ್ (ನಂತರ ಅದು ಬಿಎಚ್ ಇಎಲ್ ಗೆ ವಿಲೀನವಾಯಿತು.) ಮುಖ್ಯವಾಗಿ ಮೈಸೂರು ಗಂಧದ ಸಾಬೂನು ಕಾರ್ಖಾನೆ. ಹಾಗಾಗಿ ಯಶವಂತಪುರದಲ್ಲಿ ಒಂದಷ್ಟು ಬಾಡಿಗೆ ಮನೆಗಳಿಗೆ ಬೇಡಿಕೆ ಆ ಕಾಲದಲ್ಲೂ ಇತ್ತು. ಹಾಗೆಯೇ ಹೊಲಗದ್ದೆಗಳು ಕೂಗಳತೆಯ ದೂರದಲ್ಲಿ ಇದ್ದವು. ರೈಲ್ವೆ ಸ್ಟೇಷನ್‌ಗೆ ಹತ್ತಿರವಾಗಿ ರೈಲ್ವೆ ಕ್ವಾಟರ್ಸ್‌ಗಳಿದ್ದವು. ನಂತರ ಅಲ್ಲಿಯೇ ಹೊಸ ಕ್ವಾಟರ್ಸ್ ಕೂಡ ತಲೆಯೆತ್ತಿತು. ಆ ಕ್ವಾಟರ್ಸ್‌ನಲ್ಲಿ ನೆಲೆಸಿದ್ದ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಆಂಗ್ಲೋ ಇಂಡಿಯನ್ ಗಳು, ಚರ್ಚ್‌ಗೆ ಹೋಗಬೇಕಾದರೆ ಅಥವಾ ಸಿಟಿ ಬಸ್ ಸ್ಟ್ಯಾಂಡ್‌ಗೆ ಹೋಗಬೇಕಾದರೆ ನಮ್ಮ ಮನೆಯಿದ್ದ ‘ಪೈಪ್ ಲೈನ್’ ರೋಡ್ ಮೂಲಕವೇ ಹೋಗಬೇಕು. ನಮ್ಮಂತಹ ಚಿಲ್ಟಾರಿಗಳಿಗೆ ಅವರ ವೇಷಭೂಷಣವೇ ವಿಚಿತ್ರವಾಗಿ ಕಾಣುತ್ತಿತ್ತು. ಗಂಡಸರೇನೋ ಹ್ಯಾಟು, ಬೂಟು, ಇನ್ ಮಾಡಿದ ಶರ್ಟ್, ಇಸ್ತ್ರಿ ಮಾಡಿದ ಬಟ್ಟೆಗಳು. ಹೆಂಗಸರು ಮೊಣಕಾಲುದ್ದದ ಸ್ಕರ್ಟುಗಳು. ವಿಶೇಷ ಇದಲ್ಲ! ಇವರನ್ನ ನೋಡಿದರೆ ಇವರು ನಮ್ಮವರಲ್ಲ ಎನಿಸುತ್ತಿತ್ತು. ಜೊತೆಗೆ ಆ ಹೆಣ್ಣು ಮಕ್ಕಳನ್ನು ‘ಲೇಡೀಸ್’ ಎಂದು ಕರೆಯಬೇಕೆಂದು ಕೊಂಡಿದ್ದೆವು. ಎಲ್ಲಾ ಹೆಣ್ಣು ಮಕ್ಕಳನ್ನು ಹಾಗೆ ಕರೆಯಬಹುದೆಂಬ ಕಲ್ಪನೆ ನಮಗೆ ಇರಲಿಲ್ಲ. ಹಾಗಾಗಿ ಅಂತಹವರು ನಮ್ಮ ಮನೆಯ ಹತ್ತಿರದ ರಸ್ತೆಯಲ್ಲಿ ಹಾಯುವಾಗ; ನಮ್ಮಲ್ಲಿ ಒಬ್ಬ ಕಿಲಾಡಿ ಮೊದಲೆ ಗುರುತಿಸಿಕೊಂಡು ಲೇಡೀಸ್ ಬರ್ತಿದ್ದಾರೆ ಎಂದು ಸೂಚನೆ ಕೊಡುತ್ತಿದ್ದ. ಕೂಡಲೇ ನಾವು ಉಳಿದವರು ನಮ್ಮ ಪಕ್ಕದ ಮನೆಯ ಮುಂದಿನ ಪಾಳು ಬಾವಿಯ ಹಿಂದೆ ಅಡಗಿಕೊಂಡು, ಜೋರಾಗಿ “ಲೇಡೀಸ್ ಲೇಡೀಸ್” ಎಂದು ಬೊಬ್ಬೆ ಹಾಕುತ್ತಿದ್ದೆವು. ಮನೆಯವರು ಯಾರಾದ್ರು ಗಮನಿಸಿ ನಮ್ಮ ಬಾಯಿ ಮುಚ್ಚಿಸುತ್ತಿದ್ದರು.
ಆಗ ಈಗಿನ ಹಾಗೆ ತರಕಾರಿಗಳನ್ನು ಮಾರಲು ಬರುವ ವ್ಯಾನ್‌ಗಳು ಆಗ ಇರಲಿಲ್ಲ. ಸಂತೆ ಬೀದಿ-ನಾನು ಅದಕ್ಕೆ ‘ಸಂತೆ ಬೀಜಿ’ ಎನ್ನುತ್ತಿದ್ದೆ ಎಂದು ಅಕ್ಕಂದಿರು ಹೇಳುತ್ತಾರೆ- ಹತ್ತಿರವೇ ಇತ್ತು. ವಾರಕ್ಕೊಮ್ಮೆ ಭಾನುವಾರ ಸಂತೆಯು ನಡೆಯುತ್ತಿದ್ದರೆ ಉಳಿದ ದಿನ ಕೆಲವು ತರಕಾರಿ ಅಂಗಡಿಗಳು, ಗ್ರಂಧಿಗೆ, ಕಳ್ಳೇಪುರಿ ಅಂಗಡಿಗಳು ಕಾಯಂ ಆಗಿ ಇರುತ್ತಿತ್ತು. ಆದರೂ ಒಮ್ಮೊಮ್ಮೆ ಕೆಲವರು ತರಕಾರಿ ಮಂಕರಿಯನ್ನು ತಲೆಯ ಮೇಲೆ ಹೊತ್ತು ತರುತ್ತಿದ್ದರು. ಕೆಲವರು ಸೊಪ್ಪು, ಹಣ್ಣು, ಕೆಲವರು ಸೀಸನ್‌ನಲ್ಲಿ ಅವರೆಕಾಯಿ. ಸೊಪ್ಪಿನಲ್ಲಿ ‘ಬೆರಕೆ ಸೊಪ್ಪು’ ಎಂಬುದೊಂದು ಅನೇಕ ಸೊಪ್ಪುಗಳ ಮಿಶ್ರಣ. ಹತ್ತು ಪೈಸೆಗೆ ಒಂದು ದೊಡ್ಡ ಡಬರಿಯ ತುಂಬಾ ಸಿಗುತ್ತಿತ್ತು. ಆಗ ಮಾಡುತ್ತಿದ್ದ ಅದರ ಸಾಂಬಾರ್ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಹಾಗೆಯೇ ಅವರೇ ಕಾಯಿಯನ್ನು ಕೊಂಡಾಗ ಅಕ್ಕ ಪಕ್ಕದವರೆಲ್ಲ ಸೇರಿಕೊಂಡು, ಮನೆಯ ಅಂಗಳದಲ್ಲಿ ಕೂತು ಬಿಡಿಸುತ್ತಾ, ಯಥೇಚ್ಛವಾಗಿ ಇರುತ್ತಿದ್ದ ಹುಳುಗಳನ್ನು ಎತ್ತಿ ಎಸೆಯುವುದೂ ಕ್ಷಣಮಾತ್ರದಲ್ಲಿ ಗುಬ್ಬಿಯ ಸಮೂಹ ಅದನ್ನು ಸ್ವಾಹಾ ಮಾಡುವುದು ಅತ್ಯಂತ ಸಾಮಾನ್ಯ ದೃಶ್ಯವಾಗಿತ್ತು.
ನಂತರದ ದಿನಗಳಲ್ಲಿ ಈ ಹಣ್ಣು ತರಕಾರಿ ಮಾರಾಟಗಾರರು ಅಪರೂಪಕ್ಕೆ ಸಣ್ಣ ತಳ್ಳುಗಾಡಿಯಲ್ಲಿ ತರಕಾರಿ ತರುತ್ತಿದ್ದರು. ಆಗ ಒಂದು ಮನೆಯವರು ಕೊಳ್ಳಲು ನಿಲ್ಲಿಸಿದರೆ, ಅಕ್ಕಪಕ್ಕದ ಕೆಲವು ಮನೆಯವರು ಗಾಡಿಯನ್ನು ಸುತ್ತುವರಿದು; ತರಕಾರಿ ಗುಣಮಟ್ಟ ನೋಡುವುದು, ಚೌಕಾಶಿ ಮಾಡುವುದು ಮೊದಲಾದರಲ್ಲಿ ತೊಡಗಿಕೊಂಡರೆ, ಈ ಸಮೂಹದಲ್ಲಿದ್ದ ರಾಮಕ್ಕ, ಚೆನ್ನಮ್ಮಕ್ಕ, ಜೊತೆ ಇನ್ನೊಬ್ಬರು ಇದ್ದರು -ಒಂದು ಹೂವಿನ ಹೆಸರು ಅವರದು- ಯಾವ ಮಾಯದಲ್ಲೋ ಎರಡು ಬದನೆಕಾಯಿಯನ್ನೋ, ಒಂದು ಮಾವಿನ ಹಣ್ಣನ್ನೋ ‘ಅಬೇಸ್’ ಮಾಡಿ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಗಾಡಿ ಹೋದ ನಂತರ ಉಳಿದವರಿಗೆ ತಮ್ಮ ಕೈಚಳಕದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದೂ, ಉಳಿದವರು ಅದಕ್ಕೆ ಕೊಂಕಿನ, ಮೆಚ್ಚುಗೆಯ ಮಾತಾಡುತ್ತಾ ಒಂದಷ್ಟು ಸಮಯ ಕಳೆಯುತ್ತಿದ್ದರೆ, ನಮ್ಮಮ್ಮ ಪಾಪ ಭೀರು, “ಪಾಪ ಯಾಕೆ ಹಾಗೆ ಮಾಡಿದೆ, ಈ ಬಿಸಿಲಿನಲ್ಲಿ ಸುತ್ತುವ ಅವನಿಗೆ ನಷ್ಟವಾಯಿತಲ್ಲ” ಎಂದು ಕೊರಗುತಿದ್ದರು.
ಬಳೆಗಾರರು ಬಂದರಂತು ಚಾಪೆ ಹಾಕಿಕೊಂಡು ಕೂತುಬಿಡುತ್ತಿದ್ದರು. ತರಹೇವಾರಿ ಬಣ್ಣದ, ಡಿಸೈನಿನ, ಗಾತ್ರದ ಬಳೆಗಳನ್ನು ನೋಡುವುದೇ ಚೆಂದ. ಯಥಾಪ್ರಕಾರ ಕೊಳ್ಳುವವರು ಇಬ್ಬರಾದರೆ ಚೌಕಾಸಿ ಮಾಡುವವರು ನಾಲ್ಕಾರು ಮಂದಿ. ದೊಡ್ಡವರಿಂದ ಹಿಡಿದು ಚಿಳ್ಳೆಪಿಳ್ಳೆ ಹೆಣ್ಣು ಮಕ್ಕಳಿಗೂ ಒಳ್ಳೆಯ ಸಂಭ್ರಮ. ಗಂಡಸರಿಗೆ ಮನರಂಜನೆ!
ಹಾಗೆಯೇ ಬಟ್ಟೆ ವ್ಯಾಪಾರಿಗಳು ಆಗಾಗ ಬರುತ್ತಿದ್ದರು. ಲಂಗದ ಬಟ್ಟೆ, ರವಿಕೆ ಬಟ್ಟೆ, ಸೀರೆ, ಹೊದಿಕೆ, ಮೇಲ್ವಾಸು ಮುಂತಾದವನ್ನು ಮಾರುವವರು ಬರುತ್ತಿದ್ದರು. ಆಗಲೂ ಅಷ್ಟೇ ಕೊಳ್ಳುವವರು ಒಬ್ಬರಾದರೆ ಬಟ್ಟೆಯ ಗುಣಮಟ್ಟ ಪರಿಶೀಲಿಸುವವರು, ಚೌಕಾಸಿ ಮಾಡುವವರು ಅನೇಕರು. ಒಮ್ಮೊಮ್ಮೆ ನಮ್ಮ ‘ರೇಂಜಿಗೆ’ ಅವರು ಕೊಡಲು ಒಪ್ಪಿರುತ್ತಾರೆ ಆದರೆ ಚೌಕಾಸಿ ಮಾಡುವವರು ಇನ್ನೂ ಕಡಿಮೆಗೆ ಕೇಳಿರುತ್ತಾರೆ. ಆಗ ಅವರು “ಹೋಗ್ರಮ್ಮೋ ನೀವು ಕೇಳುವ ರೇಟಿಗೆ ನಮಗೆ ಅಸಲೂ ಗಿಟ್ಟಲ್ಲ” ಎಂದು ಸಿಟ್ಟು ಮಾಡಿಕೊಂಡು ಹೊರಟೆಬಿಡುತ್ತಾರೆ. ನಮ್ಮ ಇಷ್ಟದ ಡಿಸೈನ್‌ನ, ಬಣ್ಣದ ಬಟ್ಟೆ ನಮ್ಮ ಕೈತಪ್ಪಿ ಹೋದದ್ದೂ ಇದೆ. ಇನ್ನೊಂದು ವಿಶೇಷ ಹೇಳಲೇಬೇಕು. ಹೀಗೆ ಬಟ್ಟೆ ನೋಡುವಾಗ ಒಬ್ಬರು ಮಹಾನುಭಾವರು, ಪ್ಯಾಂಟ್, ಶರ್ಟ್ ಅಥವಾ ಲಂಗದ ಬಟ್ಟೆಯ ಒಂದು ಎಳೆ ತೆಗೆದು ತಮ್ಮ ಚೆಡ್ಡಿ ಜೇಬಿನಿಂದ ಕಡ್ಡಿ ಪೆಟ್ಟಿಗೆ ತೆಗೆದು, ಕಡ್ಡಿಗೀರಿ ಆ ನೂಲಿನ ಎಳೆಗೆ ತಾಗಿಸುತ್ತಿದ್ದರು. ಸಹಜವಾಗಿಯೇ ಅದು ಉರಿದು ಹೋಗುತ್ತಿತ್ತು, ಒಮ್ಮೊಮ್ಮೆ ಅಂಟಂಟಾಗಿ ಒಮ್ಮೊಮ್ಮೆ ಬೂದಿಯಾಗಿ- ಬಹುಷಃ ಅದರಲ್ಲಿರುವ ಹತ್ತಿಯ, ಲಿನೆನ್ನಿನ ಮಿಶ್ರಣಕ್ಕೆ ತಕ್ಕಂತೆ- ಆದರೆ ಆ ಮಹಾನುಭಾವರು ತಲೆ ಆಡಿಸುತ್ತಿದ್ದರು. ಅದು ‘ಓಕೆ ನಾ, ಹೊಗೆನಾ, (ನಾಟ್ ಓಕೆನಾ)’ ತಿಳಿಯುತ್ತಿರಲಿಲ್ಲ! ಅಲ್ಲದೇ ಅವರ ದಿರಿಸು ನೋಡಿದರೆ ಒಂದು ಪಟ್ಟಾ ಪಟ್ಟಿ ಚೆಡ್ಡಿ, ಒಂದು ಹಳೇ…ಯ, ಕೊಳೇ…ಯ ಶರಟು. ಅವರು ಹೊಸಬಟ್ಟೆ ಕೊಂಡು ಎಷ್ಟು ಕಾಲವಾಗಿತ್ತೋ! ಆದರೂ ಅವರ ಈ ಪ್ರಯೋಗ ಆಗಾಗ ನಡೆಸಿದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಆಗೆಲ್ಲ ವ್ಯಾಪಾರಿ ಅವರ ಟೆಸ್ಟಿಂಗ್‌ಗೆ ಷರಾ ಬರೆಯುತ್ತಾ “ಅಂತ ಕಳಪೆ ಮಾಲು ನಾವು ತರಲ್ಲ ಸ್ವಾಮಿ, ನೀವೇ ನೋಡಿದ್ರಲ್ಲ” ಎಂದು ಅವರ ಟೆಸ್ಟಿಂಗ್ ಓಕೆ ಅಂತ ಇವನೇ ತೀರ್ಪು ನೀಡುತ್ತಿದ್ದ!
ನಮ್ಮ ಮನೆಯ ಮುಂದೆ ಮಾರಮ್ಮನ ಗುಡಿ; ಅದಕ್ಕೊಂದು ದೊಡ್ಡ ಪ್ರಾಂಗಣ. ರಸ್ತೆಯ ಇನ್ನೊಂದು ಬದಿಯಿಂದ ಪ್ರವೇಶ. ಮೊದಲು ಸಿಗುವುದು ನವಗ್ರಹ, ಗಣೇಶನ ಗುಡಿ. ಸಂಕ್ರಾಂತಿಯಂದು ಬೆಳಿಗ್ಗೆ ಪೂಜೆಯ ನಂತರ ಪೊಂಗಲ್ ವಿತರಣೆಯಾಗುತ್ತಿತ್ತು. ಹುಡುಗರೆಲ್ಲ ಕ್ಯೂ ನಿಂತು ತಳ್ಳಾಡುತ್ತಿದ್ದರೆ ನಾವು ಹೋಗುವ ಹಾಗಿಲ್ಲ! ಏಕೆಂದರೆ ಆ ಹುಡುಗರ ಟೋಳಿಯಲ್ಲಿ ಪೋಲಿ ಹುಡುಗರಿದ್ದಾರೆ! ಪೋಲಿ ಹುಡುಗರೆಂದರೆ ಗೋಲಿ, ಹೆಡ್ ಬುಷ್, ಬುಗುರಿ, ಚಿನ್ನಿದಾಂಡು ಆಡುವವರು ಅದೂ ಕೆಲವೊಮ್ಮೆ ಹಣ ಕಟ್ಟಿ. ನಾವು ಬರೀ ಲಗೋರಿ, ಕಬಡ್ಡಿ, ಫುಟ್ಬಾಲ್, ಕ್ರಿಕೆಟ್ ಆಡಬೇಕು! ಸಂಕ್ರಾಂತಿಯ ಸಂಜೆ ಕಿಚ್ಚು ಹಾಯಿಸುವ ಕಾರ್ಯಕ್ರಮ. ಊರಿನ ಮುಖ್ಯಸ್ಥರು ಚೇರ್ಮನ್ ರಾಮಯ್ಯನವರು ಮತ್ತವರ ಸಹೋದರರು. ಅದರಲ್ಲಿ ಒಬ್ಬರು ಎಂಎಲ್ಎ ಆಗಿದ್ದರು. ಆಂಜನೇಯನ ಗುಡಿಯ ಪಕ್ಕದಲ್ಲಿ, ಒಂದು ರೀತಿಯಲ್ಲಿ ಮೂಲ ಯಶವಂತಪುರಕ್ಕೆ ಬಾಗಿಲು ಇದ್ದ ಹಾಗಿದ್ದ ಸ್ಥಳದಲ್ಲಿ; ಹುಲ್ಲಿನ ರಾಶಿ ಪೇರಿಸಿ ಬೆಂಕಿ ಹಚ್ಚುತ್ತಿದ್ದರು. ಆಗ ನಾವಿದ್ದ ಯಶವಂತಪುರದಲ್ಲಿ ಸಾಕಷ್ಟು ದನ ಕರುಗಳಿದ್ದವು. ಹಾಲು ಕೊಡುವ ಹಸು ಎಮ್ಮೆಗಳೂ ಇದ್ದವು. ಕಿಚ್ಚು ಹಾಯಿಸಲು ಕರೆತರುವುದು ಬರಿಯ ಎತ್ತುಗಳನ್ನು ಮಾತ್ರ. ಅದಕ್ಕೆ ಹಿಂದಿನ ದಿನದಿಂದಲೇ ಸಿಂಗಾರ ಮಾಡುವ ಕಾರ್ಯಕ್ರಮ ಶುರುವಾಗಿರುತ್ತಿತ್ತು. ಕೊಂಬಿಗೆ ರಿಬ್ಬನ್‌ಗಳು, ಕುಚ್ಚುಗಳು, ಮಯ್ಯಿಗೆ ಬಣ್ಣ… ನೋಡುವುದೇ ಸೊಗಸು. ಸರತಿಯಲ್ಲಿ ಮೊದಲು ನಿಲ್ಲುತ್ತಿದ್ದುದು ದೊಡ್ಡ ಮನೆ ಅರ್ಥಾತ್ ರಾಮಯ್ಯನವರ ಮನೆಯ ಎತ್ತುಗಳು. ಒಂದರ ಹೆಸರು ಭೀಮ; ಅದು ಮೊದಲು ನಂತರ ಉಳಿದವು. ರಭಸದಲ್ಲಿ ಬಂದು ಕಿಚ್ಚು ಹಾದು ಬರಬೇಕು, ಅದರ ಮೂಗುದಾರ ಹಿಡಿದವರು ಒಟ್ಟಿಗೆ ಹಾರುತ್ತಿದ್ದರು. ಸೂರ್ಯ ಮುಳುಗುವ ಹೊತ್ತಿನಲ್ಲಿ ಅವನ ಹೊಂಬೆಳಕಿನ ಜೊತೆ ಕಿಚ್ಚಿನ ಬೆಳಕೂ ಎತ್ತುಗಳ ಮಿರಿಮಿರಿ ಮಿಂಚುವ ಹೊಳಪೂ ಸೇರಿ ಒಂದು ರೀತಿಯ ದೈವೀಕ ಅನುಭವಕ್ಕೆ ವೇದಿಕೆ ಸೃಷ್ಟಿಯಾಗುತ್ತಿತ್ತು.
ನಾಡ ಹಬ್ಬ ದಸರೆಯ ಸಮಯದಲ್ಲೂ ಒಂಬತ್ತು ದಿನಗಳು ಮನೆಯ ಎದುರಿಗೇ ಇದ್ದ ಮಾರಮ್ಮನ ದೇಗುಲದಲ್ಲಿ ವಿಶೇಷ ಪೂಜೆ ಇರುತ್ತಿತ್ತು. ಒಂದು ದಿನಕ್ಕೆ ಇಂತಿಂಥ ಮನೆಗಳು ಎಂದು ಮೊದಲೇ ನಿರ್ಧರಿಸಿ, ಆ ಮನೆಗಳಿಂದ ಸಂಜೆಯ ಪೂಜಾ ಸಮಯಕ್ಕೆ ಶಕ್ತ್ಯಾನುಸಾರ ‘ಕಳ್ಳೆಪುರಿ’(ಮಂಡಕ್ಕಿ) ಸಂಗ್ರಹಿಸಿ; ಅದನ್ನು ಪೂಜೆಯ ನಂತರ ಎಲ್ಲರಿಗೂ ಹಂಚುವ ಕಾರ್ಯಕ್ರಮ. ನಮ್ಮನೆಯಿಂದಲೂ ಒಂದು ದಿನ ಹೀಗೆ ಕೊಟ್ಟು, ಆ ದಿನ ಪಡೆದುಕೊಳ್ಳುವ ಪ್ರಸಾದದ ಪುರಿಗೆ ವಿಶೇಷ ರುಚಿ ಇರುತ್ತಿತ್ತು ಎಂಬುದು ನಮ್ಮ ಮನದ ಭಾವನೆಯಷ್ಟೇ! ಹತ್ತನೆಯ ದಿನ ಸಂಜೆ ದೂರದ- ಬಸ್ ನಿಲ್ದಾಣ ಹತ್ತಿರದ- ಶಿವ ದೇವಾಲಯದಿಂದಲೂ ಉತ್ಸವ ಮೂರ್ತಿ ಆಗಮಿಸುತ್ತಿತ್ತು. ಜೊತೆಗೆ ಹನುಮಪ್ಪನ, ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ ಅಲ್ಲಿಯೇ ನೂರಿನ್ನೂರು ಮೀಟರ್ ಒಳಗೆ. ನಾನು -ಸ್ವಲ್ಪ ದೊಡ್ಡವನಾದ ಮೇಲೆ- ಮೆರವಣಿಗೆ ಪಲ್ಲಕ್ಕಿಗೆ ಹೆಗಲು ಕೊಟ್ಟು ಆನಂದಿಸುತ್ತಿದ್ದೆ. ಅದನ್ನು ಕಂಡು ಅಮ್ಮನಿಗೆ ಏನೋ ಒಂಥರಾ ಖುಷಿ. ಕೊನೆಯಲ್ಲಿ ‘ಬನ್ನಿ’ ಕಡಿಯುವ ಸಂಭ್ರಮ. ಮೊದಲು ದೊಂದಿ ಹಿಡಿದವರು, ತಮಟೆ ಬಾರಿಸುವವರು ಮುಂದೆ ಬಂದು ಬಗ್ಗಿ ದೇವರಿಗೆ ನಮಸ್ಕರಿಸಿ ಹಾಗೆಯೇ ಹಿಂದೆ ಹೋಗುವರು. ನಂತರ ಮುಖ್ಯಸ್ಥರಲ್ಲಿ ಒಬ್ಬರು ಹತ್ತಿರದಲ್ಲಿ ನಿಂತು (ಏನು ಇಷ್ಟು ಸಮೀಪವೆ?! ನಾವಾಗಿದ್ದರೆ ಇನ್ನಷ್ಟು ದೂರದಿಂದ ಬಾಣ ಬಿಡುತ್ತಿದ್ದೆವು ಎಂದು ನಮ್ಮಂತಹವರ ಮನದಲ್ಲಿ ಭಾವನೆಗಳು ಮೂಡುತ್ತಿದ್ದವು) ಒಂದಾದ ನಂತರ ಒಂದರಂತೆ ಮೂರು ಬಾಣಗಳನ್ನು ಬನ್ನಿಯ ಗೆಲ್ಲುಗಳಿಗೆ ಜೊತೆಯಾಗಿ ನಿಂತಿದ್ದ ಬಾಳೆ ಮರಕ್ಕೆ ಬಿಡುವರು. ನಂತರ ಅದನ್ನು ತೆಗೆದುಕೊಂಡು ನಮಸ್ಕರಿಸಿ ಹೊರಟಮೇಲೆ ಹಿರಿಯರಾದ ರಾಮಯ್ಯನವರು ಒಂದೇ ಏಟಿಗೆ ಮಚ್ಚಿನಿಂದ ಬಾಳೆ ಕಂದನ್ನು ಕತ್ತರಿಸುವ ಕ್ಷಣಕ್ಕೇ ಕಾಯುತ್ತಿದ್ದ ಹುಡುಗರ ದಂಡೇ ಮುಗಿಬಿದ್ದು, ಬಾಳೆಯ ಕಂದಿನ ಜೊತೆಯಿದ್ದ ಬನ್ನಿ ಮರದ ಎಲೆಗಳನ್ನು ಸಂಪಾದಿಸಿ ಬೇಕಾದವರಿಗೆ ಹಂಚುತ್ತಿದ್ದರು. ನಮಗೂ ಕೆಲವು(ಪೋಲಿ!) ಹುಡುಗರ ಪರಿಚಯವಿದ್ದುದರಿಂದ ನಮಗೂ ಒಂದೆರಡು ಎಲೆಗಳು ಸಿಗುತ್ತಿದ್ದವು. ನಾವದನ್ನು ನಮ್ಮ ಮನೆಯ ಮೇಲೆ ಬೀಳುವ ಹಾಗೆ ತೂರಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೆವು. ‘ಬನ್ನಿ’ ಎಂದರೆ ಬಂಗಾರಕ್ಕೆ ಸಮ, ಮನೆಯ ರಕ್ಷಣೆ ಅಭಿವೃದ್ಧಿಗೆ ಪೂರಕ ಎನ್ನುವ ಭಾವನೆಗಳಿದ್ದ ಕಾಲ ಅದು.
ಆಯುಧ ಪೂಜೆಯ ದಿನ ನಡೆಯುತ್ತಿದ್ದ ಇನ್ನೊಂದು ಘಟನೆಯು ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮ ಮನೆಯ ಸುತ್ತಮುತ್ತ ಅನೇಕ ‘ಕಂಟ್ರಾಕ್ಟರ್’ ಗಳಿದ್ದರು ಅಲ್ಲದೆ ಕೆಲವರ ಮನೆಯಲ್ಲಿ ಮರಳು, ಜಲ್ಲಿ ಸಾಗಿಸುವ ಲಾರಿಗಳು ಇದ್ದವು. ಆ ದಿನ ವಿಶೇಷವಾಗಿ ಸಿಂಗಾರಗೊಂಡ ಲಾರಿಗಳು, ಆಯುಧ ಪೂಜೆಯ ನಂತರ ಚಿಳ್ಳೆ ಪಿಳ್ಳೆಗಳನ್ನು, ದಾಂಡಿಗರನ್ನೂ ಹತ್ತಿಸಿಕೊಂಡು ಒಂದು ರೌಂಡ್ ಹೋಗಿ ಬಂದು ಇಲ್ಲಿಯೇ ದೇವಸ್ಥಾನದ ಬಳಿ ಇಳಿಸಿ ಹೋಗುತ್ತಿದ್ದರು. ನಾನು, ನನ್ನಂಥವರು ಯಥಾ ಪ್ರಕಾರ ಮನಸ್ಸಿನಲ್ಲಿ ಆಸೆ ಇದ್ದರೂ, ಮನೆಯವರ -ಮುಖ್ಯವಾಗಿ ಅಪ್ಪನ- ಶಿಸ್ತಿಗೆ ಹೆದರಿ ಈ ಸುಖದಿಂದ ವಂಚಿತರಾಗಿದ್ದು ಇನ್ನೂ ಮನದೊಳಗೆ ಕಾಡುತ್ತಿದೆ.
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
👌👍✌✌🙏
ಬರೆವಣಿಗೆಯ ಕಲೆ ಹಸ್ತಗತವಾದರೆ ಬರೆಯಲಿಕ್ಕೆ ಜೀವನ ಅನಂತ.
ವಸಂತಕುಮಾರರ ನೆನಪಿನ ಶಕ್ತಿ, ಆಸಕ್ತಿ, ನಿರೀಕ್ಷಣಾ ಮನೋಭಾವ ಮತ್ತು ಎಕ್ಸಪ್ರೆಶನ್ಗಳು ಅವರ ಈ ಬರೆವಣಿಗೆಯ ಕಲೆಗೆ ಪೂರಕವಾಗಿವೆ. ಅವರು ಬರಿದ ಕಥೆಗಳೀ ಇರಲಿ ಈ ಥರದ ಲೇಖನವೇ ಇರಲಿ ಇವೆಲ್ಲ ಗುಣಗಳ ಅಪೂರ್ವ ಸಂಗಮ ಸಾರ್ಥಕತೆಯನ್ನು ಪಡೆಯುತ್ತದೆ. 🙏
ಯಳಮಳ್ಳೀ ಬೀ ಎನ್. ಬೆಂಗಳೂರು.
ಧನ್ಯವಾದಗಳು ತಮ್ಮ ಅನಿಸಿಕೆ, ಅಭಿಪ್ರಾಯಕ್ಕೆ