Advertisement
ಹಿರಿಯ ರಂಗನಟಿ ಜುಲೈಕಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಂದಿನಿಂದ

ಹಿರಿಯ ರಂಗನಟಿ ಜುಲೈಕಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಂದಿನಿಂದ

ಕಲಾವಿದರ ಮಾತಂತಿರಲಿ, ಊರೂರಿಗೆ ಬರುತ್ತಿದ್ದ ನಾಟಕವನ್ನೂ ನೋಡದ ಮನೆತನ ಎನ್ನಬಹುದೇನೊ. ಕಾಳಮ್ಮನಿಂದ ಮಲ್ಲಮ್ಮನಾಗಿ, ಮಲ್ಲಮ್ಮನಿಂದ ಸರಸ್ವತಿಯಾಗಿ, ಕೊನೆಗೆ ಸರಸ್ವತಿಯಿಂದ ಜುಲೈಖಾ ಬೇಗಂ ಆದೆ. ಕಲೆಯ ಹಿನ್ನೆಲೆಯಿಲ್ಲದೆ ಬೆಳೆದ ನನಗೆ ಅದ್ಹೇಗೆಅಭಿನಯ ಕಲೆ ಒದಗಿಬಂತೋ!”

ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಹಿರಿಯ ರಂಗ ಕಲಾವಿದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಜುಲೈಕಾ ಬೇಗಂ ಅವರ ಜೀವನ ವೃತ್ತಾಂತಒಂದು ಜೀವ ಮೂರು ಜನ್ಮ“.

ನಿರೂಪಿಸುತ್ತಾರೆ ಕೀರ್ತಿ ಬೈಂದೂರು.

ನನ್ನ ಅಜ್ಜನವರೆಲ್ಲ ವ್ಯವಸಾಯವನ್ನೇ ನಂಬಿದ್ದರು. ತಂದೆ ಹೂ, ಹಣ್ಣುಗಳ ಮಾರಾಟದಲ್ಲಿ ಎತ್ತಿದ ಕೈ. ಮನೆಯಲ್ಲಿ ಯಾರೊಬ್ಬರೂ ಕಲಾವಿದರಿರಲಿಲ್ಲ. ಕಲಾವಿದರ ಮಾತಂತಿರಲಿ, ಊರೂರಿಗೆ ಬರುತ್ತಿದ್ದ ನಾಟಕವನ್ನೂ ನೋಡದ ಮನೆತನ ಎನ್ನಬಹುದೇನೊ. ಕಾಳಮ್ಮನಿಂದ ಮಲ್ಲಮ್ಮನಾಗಿ, ಮಲ್ಲಮ್ಮನಿಂದ ಸರಸ್ವತಿಯಾಗಿ, ಕೊನೆಗೆ ಸರಸ್ವತಿಯಿಂದ ಜುಲೈಖಾ ಬೇಗಂ ಆದೆ. ಕಲೆಯ ಹಿನ್ನೆಲೆಯಿಲ್ಲದೆ ಬೆಳೆದ ನನಗೆ ಅದ್ಹೇಗೆ ಈ ಅಭಿನಯ ಕಲೆ ಒದಗಿಬಂತೋ!

ನನ್ನ ತಂದೆಯ ಜೊತೆ ಒಟ್ಟು ಆರು ಜನ ಒಡಹುಟ್ಟಿದವರಿದ್ದರು. ಮನೆಯಲ್ಲಿ ಅಷ್ಟೇನೂ ಸ್ಥಿತಿವಂತರಲ್ಲದ, ಆದರೆ ಬಡತನವೂ ಅಷ್ಟಾಗಿ ಕಾಡದ ವಾತಾವರಣ. ಒಂದು ಮಟ್ಟಿಗೆ ಹೇಳುವುದಾದರೆ, ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ. ಸಂಪ್ರದಾಯಸ್ಥ ಲಿಂಗಾಯತ ಸಮುದಾಯದ ಆಚರಣೆಗಳಿದ್ದ ಮನೆತನವದು. ರೈತರಾಗಿದ್ದ ನಮ್ಮ ಅಜ್ಜ ಅಜ್ಜಿಯಿಬ್ಬರ ಪಾಲಿಗೆ ಮಕ್ಕಳ ಮದುವೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ತೆರವು ಪದ್ಧತಿ ಚಾಲ್ತಿಯಲ್ಲಿತ್ತು. ‘ತೆರವು’ ಅಂದರೆ, ಗಂಡನ್ನು ಮದುವೆಯಾಗುವುದಕ್ಕಾಗಿ ಹೆಣ್ಣಿಗೆ ನೀಡುವ ದಕ್ಷಿಣೆ. ವರದಕ್ಷಿಣೆ ಅಂತೀವಲ್ಲಾ, ಇದನ್ನು ವಧುದಕ್ಷಿಣೆ ಎನ್ನಬಹುದು. ಐದು ಗಂಡು ಮಕ್ಕಳಿಗೆ ಮದುವೆ ಮಾಡಿಸುವುದೆಂದರೆ ನಮ್ಮ ಅಜ್ಜ ಅಜ್ಜಿಯರ ಸ್ಥಿತಿ ಹೇಗಿರಬೇಡನನ್ನ ತಂದೆ ಮದುವೆಯಾಗಿದ್ದೂ ತಡವಾಗಿಯೇ. ಗುರಪ್ಪ, ಕಳಕಪ್ಪ, ಮಲ್ಲಪ್ಪ, ವೀರಪ್ಪ ಕೊನೆಗೆ ಮಹದೇವಪ್ಪ, ಒಟ್ಟು ಐದು ಗಂಡು ಮಕ್ಕಳ ಮದುವೆ ಮಾಡಿ, ದೇಹದ ಶಕ್ತಿಯನ್ನು ಕಳೆದುಕೊಂಡಿದ್ದ ಅಜ್ಜ ಅಜ್ಜಿಯರಿಗೆ ಇಬ್ಬರು ಹೆಣ್ಣು ಮಕ್ಕಳ ಮದುವೆ ಆದರೆ ಸಾಕಿತ್ತು. ಹಾಗಾಗಿ ಗಡಿಬಿಡಿಯಲ್ಲಿ ಇಬ್ಬರ ಮದುವೆಯೂ ನಡೆಯಿತು.

ತಂದೆಯವರು ಹೆಂಡತಿಯೊಂದಿಗೆ ಅದೆಷ್ಟು ವರ್ಷ ಸಂಸಾರ ಮಾಡಿದ್ದರೋ ನೆನಪಿಗೆ ಬರುತ್ತಿಲ್ಲ, ಆದರೊಂದು ಆಗ ಗುದ್ದವ್ವನ ಬೇನೆ ಕಾಣಿಸಿಕೊಳ್ಳುತ್ತಿತ್ತಂತೆ. ಮೈಯೆಲ್ಲ ಯಾರೋ ಗುದ್ದುತ್ತಿದ್ದಂತಹ ಸಂಕಟ! ನೋವು ತಡೆಯಲಾರದೆ ಜನರೆಲ್ಲ ತೀರಿಹೋಗುತ್ತಿದ್ದರು. ನನ್ನ ತಂದೆಯವರ ಮೊದಲ ಹೆಂಡತಿಯೂ ಇದೇ ಬೇನೆಯಿಂದಾಗಿ ತೀರಿಹೋದರು.

ತಂದೆಯಿದ್ದ ಊರು, ಕುಕನೂರು. ಈಗಿನ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನಲ್ಲಿದೆ. ಮೊದಲದು ಕುಂತಳಪುರ ಎಂದಾಗಿತ್ತು. ನೀವೆಲ್ಲರೂ ಚಂದ್ರಹಾಸನ ಕತೆ ಕೇಳಿರಬಹುದು, ಆ ಚಂದ್ರಹಾಸ ಆಳಿದ್ದ ಸಂಸ್ಥಾನವದು. ಮನುಷ್ಯರನ್ನು ಕಡಿಯುತ್ತಿದ್ದ ದಿಬ್ಬ ಈಗ ಕರಗಿಹೋಗಿದೆ. ದಿಬ್ಬದ ಪಕ್ಕದಲ್ಲಿ ಮಹಾಮಾಯಿ ದೇವಸ್ಥಾನವಿದೆ. ಈಗಲೂ ಅಲ್ಲಿ ಮಹಾಮಾಯಿ ಉತ್ಸವ ನಡೆಯುತ್ತದೆ. ಅಂದಹಾಗೆ, ತಂದೆಯವರು ನಮ್ಮ ತಾಯಿಯನ್ನು ಮದುವೆಯಾದಾಗ ಅವರಿಗೆ 38 ವರ್ಷ ವಯಸ್ಸಾಗಿದ್ದ ನೆನಪು. ತಾಯಿ ಬಸಮ್ಮ ಅವರು ಬಳ್ಳಾರಿ ಜಿಲ್ಲೆಯ ಬಸರಕೋಡಿನವರು. ನಾಲ್ಕು ಹೆಣ್ಣು ಮಕ್ಕಳು ಹಾಗೂ ನಾಲ್ಕು ಗಂಡು ಮಕ್ಕಳಿದ್ದ ಕೂಡು ಕುಟುಂಬ ಅವರದ್ದು. ನನ್ನ ತಾಯಿ ಬಸಮ್ಮನವರ ಇಬ್ಬರು ಅಕ್ಕಂದಿರೂ ಮದುವೆಯಾಗಿ ಕುಕನೂರನ್ನು ಸೇರಿದರು. ಇತ್ತ ದೊಡ್ಡ ಅಕ್ಕ ಚಿಕ್ಕವಳಾಗಿದ್ದ ನನ್ನ ತಾಯಿಯವರನ್ನು ಅವರ ಮೈದುನ ಅಂದರೆ, ನನ್ನ ತಂದೆಯವರೊಂದಿಗೆ ಮದುವೆ ಮಾಡಿಸಿದರು. ಹಾಗಾಗಿ ಅಕ್ಕ ತಂಗಿ ಇಬ್ಬರೂ ಅಣ್ಣ ತಮ್ಮಂದಿರನ್ನು ವಿವಾಹವಾಗಿ ಒಂದೇ ಮನೆಗೆ ಸೇರಿದರು. ಹಾಗೆ ನೋಡಿದರೆ ಮೂವರು ಹೆಣ್ಣು ಮಕ್ಕಳು ಸೇರಿದ್ದು ಒಂದೇ ಊರನ್ನು!

ದೊಡ್ಡವ್ವ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಅಣ್ಣ ಬದುಕಿರುವ ಬಗ್ಗೆ ಏನೊಂದು ತಿಳಿದಿಲ್ಲ. ಆಗ ರಜಾಕಾರ್ ಹಾವಳಿ ಹೆಚ್ಚಿದ್ದ ಸಮಯ. ಹಿಂದೂ ಮುಸ್ಲಿಂ ಧರ್ಮದವರ ನಡುವೆ ಸಂಘರ್ಷ ಏರ್ಪಟ್ಟಿದ್ದ ಸಂದರ್ಭ. ಬಹುಶಃ 1944ರ ಘಟನೆ ಇರಬೇಕು. ಸ್ವಾತಂತ್ರ್ಯ ಚಳವಳಿ ಬಿರುಸಾಗಿ ಸಾಗುತ್ತಿದ್ದ ಕಾಲ. ದೊಡ್ಡವ್ವ ರಾಜಕೀಯದಲ್ಲಿ ಚುರುಕಾಗಿದ್ದರು. ಏನೋ ಕಾರಣದ ಮೇರೆಗೆ ದೊಡ್ಡವ್ವನನ್ನು ಜೈಲಿಗೆ ಹಾಕಲಾಯಿತು. ಮುಂದೆ ಹೆಣ್ಣು ಮಗುವಿಗೆ ಜನ್ಮ ನೀಡಿ, ಕೊನೆಯುಸಿರೆಳೆದರು!

1947ರಲ್ಲಿ ನಾನು ಹುಟ್ಟಿದೆ. ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ನಾನು ಹುಟ್ಟಿದೆನೆಂದು ಕುಟುಂಬದಲ್ಲಿ ಹಲವರು ಹೇಳಿದ್ದರು. ಇನ್ನೊಬ್ಬ ದೊಡ್ಡವ್ವ ಆ ಹೊತ್ತಿಗಾಗಲೇ ಗಂಡು ಮಗುವನ್ನು ಪಡೆದಿದ್ದರು. ಹಾಗಾಗಿ ಒಟ್ಟು ಇಬ್ಬರು ಗಂಡು ಮಕ್ಕಳ ನಡುವೆ ನಾನು ಹುಟ್ಟಿದ್ದು, ಮನೆಜನರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಮುಂದೆ ಇನ್ನೊಬ್ಬ ದೊಡ್ಡವ್ವ ಒಟ್ಟು ನಾಲ್ಕು ಮಗುವಿಗೆ ಜನ್ಮ ನೀಡಿದ್ದೇನೊ ಹೌದು, ಆದರೆ ಒಂದು ಮಗುವನ್ನೂ ಉಳಿಸಿಕೊಳ್ಳಲಾಗಲಿಲ್ಲ. ನಾನು ಹುಟ್ಟಿದ ಏಳು ವರ್ಷದ ನಂತರ ನನಗೊಬ್ಬ ತಮ್ಮ ಹುಟ್ಟಿದ. ಅವನು ಹುಟ್ಟುವ ತನಕವೂ ನಾನು ತಾಯಿಯ ಎದೆಹಾಲನ್ನು ಕುಡಿಯುತ್ತಿದ್ದೆ. ಸಿಹಿಯಾಗಿ ಸವಿಯಂತಿರುವ ತಾಯಿ ಎದೆಹಾಲಿನ ರುಚಿಯೇ ವಿಶೇಷ ಎಂದು ಈಗಲೂ ಅನಿಸುತ್ತದೆ. ಈ ಹೊತ್ತಿಗೂ ಎದೆಹಾಲಿನ ರುಚಿಯನ್ನು ನನ್ನ ನಾಲಗೆ ಮರೆತೇ ಇಲ್ಲ ಎನ್ನಿ. ಹಾಂ, ತಮ್ಮ ಹುಟ್ಟುವುದಕ್ಕೂ ಮುನ್ನ ನಡೆದ ನೆನಪುಗಳನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ ಹೇಗೆ?

ತಾಯಿಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ ಎನ್ನುವಾಗ ಊರಿನ ಸೂಲಗಿತ್ತಿಯನ್ನು ಕರೆಸಿದ್ದರು. ಎಲ್ಲರಂತೆ ತಲೆ ಮುಂದಾಗಿ ಹುಟ್ಟಿದವಳಲ್ಲ ನಾನು. ಕಾಲು ಮುಂದಾಗಿ, ಬಾಯಿ ಮೇಲಾಗಿ ಹುಟ್ಟಿದವಳೆಂದು ಹೇಳುತ್ತಾರೆ. ಸೂಲಗಿತ್ತಿಗೆ ಅದ್ಯಾವ ದ್ವೇಷವೋ ಅಥವಾ ಅವಳಿಗೆ ಏನೆನಿಸಿತೋ, ಕಾಲು ಮುಂದಾಗಿ ಹುಟ್ಟುತ್ತಿದ್ದ ನನ್ನ ಬಲಗಾಲನ್ನು ತಿರುಗಿಸಿಬಿಟ್ಟಿದ್ದಳು. ಇವತ್ತಿಗೂ ನನ್ನ ಬಲಗಾಲು ಹಾಗೇ ಸೊಟ್ಟಗಾಗೇ ಇದೆ. ಮನೆಯಲ್ಲಿ ದೊಡ್ಡವ್ವ ಬರುವುದು ಸ್ವಲ್ಪ ತಡವಾಗಿದ್ದರೆ ಬಹುಶಃ ಜೀವವನ್ನೇ ತೆಗೆದುಬಿಡುತ್ತಿದ್ದಳೋ ಏನೊ!

ಮಗುವಿನ ಧ್ವನಿ ಕೇಳುತ್ತಿದ್ದಂತೆ ‘ಅರೇ, ಹೆಣ್ಣು ಮಗು ಹುಟ್ಟಿತು’ ಎಂದು ಮನೆಮಂದಿಯೆಲ್ಲ ಸಂಭ್ರಮಿಸಿದ್ದರು. ಆ ಸಂಭ್ರಮಾಚರಣೆಯ ಹಿಂದೆ ಮಗುವಿಗಾಗಿ ಹಂಬಲಿಸಿದ್ದ ದಿನಗಳಿವೆ. ತಂದೆ ತಾಯಿಯಿಬ್ಬರಿಗೂ ಮದುವೆಯಾಗಿ ಏಳು ವರ್ಷ ಕಳೆದಿತ್ತು. ಮಗುವಿನ ಸುಳಿವೇ ಇಲ್ಲ. ಊರಿನಲ್ಲೊಬ್ಬರು ಬನ್ನಿ ಮಹಾಕಾಳಿ ದೇವಿಗೆ 41 ದಿನ ಹರಕೆ ಹೊತ್ತುಕೊಂಡರೆ ಆಗುತ್ತದೆ ಎಂದಿದ್ದರಂತೆ. ಅದಕ್ಕೆ ಅಮ್ಮ ಒದ್ದೆ ಬಟ್ಟೆಯನ್ನು ಹೊಟ್ಟೆಗೆ ಸುತ್ತಿಕೊಂಡು, ಬನ್ನಿ ಗಿಡಕ್ಕೆ ಸುತ್ತಿಬಂದಿದ್ದರು. ಅದಕ್ಕಾಗಿ ನನ್ನ ಹುಟ್ಟು ಹೆಸರು ಕಾಳಮ್ಮ. ಕೂದಲನ್ನು ಕೆದರಿಕೊಂಡು, ಭಯಹುಟ್ಟಿಸುವಂತೆ ನೋಡುತ್ತಿದ್ದೆನಂತೆ. ಆಗ ಹೆಸರು ಬದಲಿಸಿ ನೋಡಿ ಎಂಬ ಸಲಹೆ ಬಂತು. ನಂತರ ತಂದೆಯ ಮನೆದೇವರಾಗಿದ್ದ ಯಾದಗಿರಿಯಲ್ಲಿದ್ದ ಮೈಲಪುರದ ಮಲ್ಲಯ್ಯನಿಗೆ ಪ್ರಿಯವಾದ ಹೆಸರೆಂದು ಮಲ್ಲಮ್ಮ ಎಂದಿಟ್ಟರು.

ನನಗೆ ಬುದ್ಧಿ ಬಂದಾಗ ತಂದೆಯವರು ಹೇಗೆ ಕಾಣುತ್ತಿದ್ದರೆಂದರೆ ನೀವು ನಂಬಲಿಕ್ಕಿಲ್ಲ, ತಲೆಯೆಲ್ಲ ಅರ್ಧ ಬೋಳಾಗಿ, ಹಲ್ಲುಗಳು ಕೆಲವೊಂದು ಉದುರೇ ಹೋಗಿತ್ತು! ಮಗಳೆಂದರೆ ಮಾತ್ರ ರಾಶಿ ಪ್ರೀತಿ. ಮಗು ಆಡು, ಹಸುವಿನ ಹಾಲು ಕುಡಿದರೆ ಚುರುಕಾಗುತ್ತದೆಂದು ಅಕ್ಕಪಕ್ಕದವರೆಲ್ಲ ಹೇಳಿದ್ದಕ್ಕೆ, ತಂದೆಯವರು ಆಡು ಸಾಕಲೂ ಶುರುವಿಟ್ಟರು. ಕುಕನೂರಿನಲ್ಲಾಗ ಶೆಟ್ರಂಗಡಿ ಇತ್ತು. ಅಲ್ಲಿ ಸಿಗುತ್ತಿದ್ದ ತುಪ್ಪದ ಉಂಡೆಗೆ ಮಾತ್ರ ನನ್ನ ಅಳುವನ್ನೆಲ್ಲ ನಿಲ್ಲಿಸುವ ಶಕ್ತಿಯಿತ್ತು. ಜೋರಾಗಿ ಅತ್ತಾಗಲೆಲ್ಲ, ‘ಏನ್ ಬೇಕವ್ವಾ ನಿಂಗೆ?’ ಎನ್ನುತ್ತಿದ್ದದ್ದಷ್ಟೇ. ಬಲಗೈ ಮುಂದೆ ಚಾಚಿ ಶೆಟ್ರಂಗಡಿ ತೋರಿಸುತ್ತಿದ್ದೆ. ಅಂಗಡಿಯ ಶೆಟ್ರು, ‘ಬಂದ್ಯವ್ವಾ, ಬಾ. ಏನ್ ತುಪ್ಪದ ಉಂಡೆ ಬೇಕೆನು?’, ಎನ್ನುತ್ತಿದ್ದರು. ಗಾಜಿನ ಭರಣಿಯಲ್ಲಿ ತುಂಬಿಡುತ್ತಿದ್ದ ತುಪ್ಪದುಂಡೆ ನನ್ನ ಕೈ ತುಂಬುತ್ತಿತ್ತು. ಒಂದು ಬಿಲ್ಲಿ ಕೊಟ್ಟರೆ ಒಂದು ಉಂಡೆಗೆ ಸರಿಹೋಗುತ್ತಿತ್ತು. ಜೊತೆಗೆ ನನ್ನ ಅಳು, ಕೂಗಾಟವೂ ಕೂಡ!

ನಾಲ್ಕು ವರ್ಷದವಳಿದ್ದಾಗಿಂದಲೂ ತಂದೆ ಹೂವಿನ ವ್ಯಾಪಾರ ಮಾಡುತ್ತಿದ್ದರು. ಗದಗಿನ ಲಕ್ಕುಂಡಿಯಿಂದ ಸೇವಂತಿಗೆ ಹೂಗಳನ್ನು ತರುತ್ತಿದ್ದರು. ಲಕ್ಕುಂಡಿಯ ಹಲ ತೋಟಗಳಲ್ಲಿ ಬೇಕಾದಷ್ಟು ಸೇವಂತಿಗೆಯನ್ನು ಬೆಳೆಯುತ್ತಿದ್ದರು. ಆಗ ಕುಕನೂರಿನಿಂದ ಲಕ್ಕುಂಡಿಗೆ ಹೋಗುವುದಕ್ಕೆ ಇರುತ್ತಿದ್ದದ್ದು ಒಂದೇ ಒಂದು ಬಸ್ಸು. ನಾವದನ್ನು ಬಸ್ಸೆಂದು ಕರೆಯುತ್ತಲೇ ಇರಲಿಲ್ಲ. ಬಸ್ಸಿನ ಮುಖವೋ ತೀರಾ ಚಿಕ್ಕದಾಗಿತ್ತು. ಹಾಗಾಗಿಯೋ ಏನೊ ಇದನ್ನು ಮೋಟಾರು ಎನ್ನುತ್ತಿದ್ದರು. ಇರುವುದೊಂದೇ ಮೋಟಾರಾಗಿದ್ದರೂ ಅದು ನೇರವಾದ ಮಾರ್ಗದಿಂದ ಹೋಗುತ್ತಿರಲಿಲ್ಲ, ಆ ಊರು ಈ ಊರು ಸುತ್ತುಹಾಕಿ ಲಕ್ಕುಂಡಿ ತಲುಪುತ್ತಿತ್ತು. ತಂದೆಯವರು ಎಂದಿಗೂ ಆ ಮೋಟಾರನ್ನು ನಂಬಿದ್ದೇ ಇಲ್ಲ. ಹಿಂದಿನ ಬಾರಿ ಹೋದಾಗಲೇ ಈ ದಿನ ಬರುತ್ತೇನೆಂದು ದಿನ ಗೊತ್ತುಮಾಡಿ ಬರುತ್ತಿದ್ದರು. 3 ಹರದಾರಿ ಅಂದರೆ 36 ಕಿ.ಮೀ ದೂರದಲ್ಲಿದ್ದ ಲಕ್ಕುಂಡಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸುತ್ತಿದ್ದರು. ಅದಕ್ಕೆ ಸರಿಯಾಗಿ ತೋಟದವರೆಲ್ಲ ಹೂವುಗಳನ್ನೆಲ್ಲ ಕಿತ್ತು, ರಾಶಿ ಹಾಕಿರುತ್ತಿದ್ದರು. ತಂದೆಯವರು ಹೋಗುತ್ತಿದ್ದಂತೆ ಮೂರ್ನಾಲ್ಕು ಮಣ ಸೇವಂತಿಗೆಯನ್ನು ತುಂಬಿಕೊಂಡು, ದುಡ್ಡಿನ ಲೆಕ್ಕಾಚಾರ ಪೂರೈಸಿ, ಮುಂದಿನ ಸಲ ಬರುವ ದಿನಾಂಕವನ್ನೂ ಹೇಳಿ ಹೊರಡುತ್ತಿದ್ದರು. ಊಟ ತಿಂಡಿಯ ವ್ಯವಸ್ಥೆಯೆಲ್ಲ ತೋಟದ ಮಾಲೀಕರ ಮನೆಯಲ್ಲೇ ಆಗುತ್ತಿತ್ತು. ಕುಸ್ತಿ ಪೈಲ್ವಾನರಾಗಿದ್ದ ತಂದೆ ತಲೆಯ ಮೇಲೆ 35 40 ಕೆಜಿಯಷ್ಟಿದ್ದ ಸೇವಂತಿಗೆಯನ್ನು ತುಂಬಿಕೊಂಡು ಬರುತ್ತಿದ್ದರು. ಮೊಬೈಲ್ ಫೋನ್, ಟೆಂಪೋ, ಕಾರು ಏನೊಂದೂ ಇಲ್ಲದ ಆಗಿನ ಬದುಕಿನ ರೀತಿ ಬಹಳ ಅಚ್ಚುಕಟ್ಟಾಗಿ ಸಾಗುತ್ತಿತ್ತು.

ಇನ್ನು ಮಲ್ಲಿಗೆ ಹೂ ತರಿಸುತ್ತಿದ್ದದ್ದು ಹೊಸಪೇಟೆಯಿಂದ. ಅದು ನನಗೆ ಬುದ್ಧಿ ಬಂದ ಮೇಲಿಂದ ಬಹುಶಃ ಮಲ್ಲಿಗೆಯ ವ್ಯಾಪಾರ ಆರಂಭವಾಗಿರಬೇಕು. ನಾನಾಗ ಐದು ವರ್ಷದ ಹುಡುಗಿಯಾಗಿದ್ದೆ. ಮನೆಯಲ್ಲಂತೂ ಹೆಣ್ಣೆಂಬ ಭೇದವೇ ಇರಲಿಲ್ಲ.

ತಂದೆ ವ್ಯಾಪಾರಕ್ಕೋಸ್ಕರವಾಗಿ ಕುದುರೆಯೊಂದನ್ನು ಕೊಂಡಿದ್ದರು. ಅದು ಕಣ್ಣಿರದ ಕೆಂದುಗುದುರೆ. ಎಲ್ಲರ ಮೆಚ್ಚಿನ ‘ಲಕ್ಷ್ಮೀ’ ಆಗಿತ್ತು. ನಾಲ್ಕು ದಿನಗಳ ಮುಂಚೆ ತಾಯಿ ಒಂದೆರಡು ಆಳುಗಳೊಂದಿಗೆ ಜಾತ್ರೆ ನಡೆಯುತ್ತಿದ್ದ ಜಾಗಕ್ಕೆ ಹೋಗಿ ಟೆಂಟ್ ಕಟ್ಟುತ್ತಿದ್ದರು. ಮಾರನೇ ದಿನ ತಂದೆಯವರು ಡಂಬಳ ಎಂಬಲ್ಲಿಗೆ ಹೋಗಿ ಸೀಬೆ ಹಣ್ಣನ್ನು ತಂದು ಜಾತ್ರೆಯತ್ತ ಪಯಣಿಸುತ್ತಿದ್ದರು. ನಾ ಹೋಗಬೇಕಾದ ದಿನವೂ ಗೊತ್ತುಮಾಡಿಡುತ್ತಿದ್ದರು. ಊರಿನಲ್ಲಿದ್ದ ಜನರಿಗೆ ಹೇಳಿ, ಕುದುರೆಯ ಎಡಬಲಕ್ಕೆ ಮಾಲುಗಳನ್ನು ತುಂಬಿ, ಮೇಲೊಂದು ತಡಿ ಹಾಸಿ, ಭದ್ರವಾಗಿ ಕಟ್ಟಿಡುತ್ತಿದ್ದರು. ಲಕ್ಷ್ಮಿಯ ಮೇಲೆ ಕೂರುತ್ತಿದ್ದಂತೆ ಹಾಗೇ ನಿದ್ರೆಗೆ ಜಾರುತ್ತಿದ್ದೆ. ಅದೆಷ್ಟು ಆಪ್ತವಾಗಿತ್ತು ಎಂದರೆ ನನ್ನ ಜೊತೆಗಿದ್ದಷ್ಟೂ ದಿನ ಎಲ್ಲಿಯೂ ಬೀಳಿಸದೆ, ಭಯಪಡಿಸದೆ ತಾನು ಯಾವ ಜಾಗ ತಲುಪಬೇಕೋ ಅಲ್ಲಿಗೆ ಆರಾಮವಾಗಿ ಬರುತ್ತಿತ್ತು. ತಾಯಿಯ ಮಡಿಲ ಮೇಲೆ ಮಲಗಿದಂತಹ ಬೆಚ್ಚಗಿನ ಅನುಭವ. ಜಾಗ ಸೇರಿದ್ದೇವೆಂದು ತಿಳಿಯುತ್ತಿದ್ದದ್ದೇ, ಅದರ ಹೇಶಾರವದಿಂದ. ಒಂದಷ್ಟು ದಿನ ಜಾತ್ರೆಯಲ್ಲೇ ಇದ್ದು, ವ್ಯಾಪಾರವನ್ನು ಮುಗಿಸಿ, ಊರಿಗೆ ಮರಳುತ್ತಿದ್ದೆವು.

ತಂದೆಯ ಜೊತೆಗೆ ಮೊದಲ ಸಲ ಹೊಸಪೇಟೆಯ ಕಡೆ ಬಸ್ಸೇರಿದ್ದೆ. ಆವತ್ತು ಟಾಂಗಾದಲ್ಲಿ ಕುಳಿತುಕೊಂಡು, ಮಲ್ಲಿಗೆ ಹೂಗಳನ್ನು ಎಲ್ಲಿಂದ ಖರೀದಿಸಬೇಕು ಎಂದಿದ್ದರು. ಒಂದೇ ದಿನದಲ್ಲಿ ಹೋಗಬೇಕಾದ ಮಾರ್ಗ, ಮಾಡಬೇಕಾದ ಕಾರ್ಯ ಎಲ್ಲವನ್ನು ಕಲಿತಿದ್ದೆ. ಮುಂದೆ ಹೊಸಪೇಟೆಯಲ್ಲಿ ಇಳಿಯಬೇಕೆಂದು ಹೇಳಿ ಬಸ್ಸಿನಲ್ಲಿ ಕಳಿಸುತ್ತಿದ್ದರು. ಅಲ್ಲಿ ಇಳಿಯುತ್ತಿದ್ದಂತೆ ಟಾಂಗಾದವರಿಗೆ ತಂದೆ ಕೊಟ್ಟ ಚೀಟಿ ಕೊಡುತ್ತಿದ್ದೆ. ಹೂವಿನಂಗಡಿಗೆ ತಲುಪಿಸುತ್ತಿದ್ದರು. ಮತ್ತೆ ಬರುವಾಗ, ತಂದ ಮಲ್ಲಿಗೆಯ ಮೊಗ್ಗುಗಳನ್ನೆಲ್ಲ ಪೊಟ್ಟಣದೊಳಗಿಟ್ಟು, ಹಾಳಾಗದಂತೆ ಕಟ್ಟಿಕೊಡುವ ಕೆಲಸವನ್ನೂ ಮಾಡುತ್ತಿದ್ದರು. ಆ ಸಮಯದಲ್ಲಿ ನನಗೆ ಸ್ವೀಟ್ ಬೋಂಡಾ ಕೊಡಿಸುತ್ತಿದ್ದರು. ಹೂಗಾರ ವೀರಪ್ಪನ ಮಗಳೆಂದು ನಾನಾಗ ಎಲ್ಲರಿಗೂ ಪರಿಚಿತಳಾಗಿದ್ದೆ. ಸೇರಿದ್ದವರೆಲ್ಲ ಐದು ವರ್ಷದ ಹುಡುಗಿ ಒಬ್ಬಳೇ ಬಂದದ್ದಕ್ಕೆ ಅಚ್ಚರಿಪಡುತ್ತಾ, ಕಾಲಮೇಲೆ ಕೂರಿಸಿಕೊಳ್ಳುತ್ತಿದ್ದರು. ಮಲ್ಲಿಗೆಯನ್ನು ಗಂಟುಕಟ್ಟಿ ಬಸ್ಸಿಗೇರಿಸಿ, ಕುಕನೂರಿಗೆ ಕಳುಹಿಸಿಕೊಡುತ್ತಿದ್ದರು. ಟಾಂಗಾದವರೊಂದಿಗೆ ಬಾಂಧವ್ಯ ಇಷ್ಟೊಂದು ಬಿಗಿಯಾಗುವುದಕ್ಕೂ ಒಂದು ಹಿನ್ನೆಲೆಯಿದೆ.

ಒಂದು ಕಣ್ಣಿಲ್ಲದ ಕುದುರೆಗಿಂತ, ಎರಡೂ ಕಣ್ಣಿರುವ ಚುರುಕಾದ ಕುದುರೆಯನ್ನು ಖರೀದಿಸಬೇಕೆಂದು ತಂದೆಯವರಿಗೆ ಮೊದಲಿನಿಂದಲೂ ಅನಿಸುತ್ತಿತ್ತು. ಒಂದು ದಿನ ಧೈರ್ಯ ಮಾಡಿ, ಲಕ್ಷ್ಮೀಯನ್ನು ಕೊಟ್ಟು ಬಿಳಿ ಬಣ್ಣದ ಕುದುರೆಯನ್ನು ಕೊಂಡಿದ್ದರು. ಆ ಕುದುರೆಯ ಮೇಲೆ ಕುಳಿತು, ತಂದೆಯವರ ಮೊದಲ ಹೆಂಡತಿಯ ಊರಾಗಿದ್ದ ಕೊಪ್ಪಳದ ದದೇಗಲ್ಲಿಗೆ ಬಂದಿಳಿದಿದ್ದೆವು. ತಂದೆ ತಾಯಿಯಿಬ್ಬರೂ ಕುದುರೆಯಿಂದಿಳಿದು ಊರಿನವರೊಂದಿಗೆ ಮಾತಾಡುತ್ತಿದ್ದರು. ಲಕ್ಷ್ಮೀ ಕುದುರೆಯ ಜೊತೆಗೆ ಆಡಿದ ಅಭ್ಯಾಸ ಬೇರೆ ಇತ್ತೆಂದು, ಕುದುರೆ ಜೋರಾಗಿ ಓಡಲೆಂದು ಹೊಡೆಯಲು ಬಳಸುವ ಚಮಕಾವನ್ನು ಎತ್ತಿಕೊಂಡೆ. ಕಾಲಿನ ಬಳಿ ಒಂದೇಟು ಕೊಟ್ಟೆನೊ ಇಲ್ಲವೊ, ಕುದುರೆ ಒದ್ದ ರಭಸಕ್ಕೆ ಅಲ್ಲಿದ್ದ ಜಲ್ಲಿರಾಶಿಯ ಮೇಲೆ ಧೊಪ್ಪೆಂದು ಬಿದ್ದೆ. ಚೂಪಾದ ಕಲ್ಲುಗಳೆಲ್ಲ ತಾಕಿ ಎಡಗಿವಿಯ ಚರ್ಮ ಹರಿದು, ರಕ್ತ ಹರಿಯುತ್ತಲೇ ಇತ್ತು. ತಾಯಿಯಂತೂ ಹಣೆ ಹಣೆ ಬಡಿದುಕೊಂಡು ನನ್ನ ಸ್ಥಿತಿಗೆ ಮರುಕಪಡುತ್ತಾ, ಲಕ್ಷ್ಮೀಯಂತಿದ್ದ ಕುದುರೆಯನ್ನು ಕೊಟ್ಟು ಈ ಕುದುರೆಯನ್ನು ತಂದ ತಂದೆಯನ್ನು ಹಳಿಯುತ್ತಿದ್ದರು. ಈ ಘಟನೆ ತಿಳಿಯುತ್ತಿದ್ದಂತೆಯೇ ಅಲ್ಲಿದ್ದ ಎಲ್ಲ ಟಾಂಗಾದವರು ಒಂದುಗೂಡಿದ್ದರು. ಬಸ್ಸಿನಲ್ಲಿ ಕೂರಿಸಿ, ಆಸ್ಪತ್ರೆಗೆ ಕಳುಹಿಸಿದ್ದರು. ಅಂದಿನಿಂದ ಟಾಂಗಾದವರಿಗೆಲ್ಲ ನಾನು ಮೆಚ್ಚಿನವಳಾಗಿದ್ದೆ.

ಸಿಕಂದರಾಬಾದಿನಲ್ಲಿದ್ದ ಸರಕಾರಿ ಆಸ್ಪತ್ರೆಯಲ್ಲಿ ಸರ್ಜನ್ ಇದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಅವರ ಪ್ರೀತಿ ಕಾಳಜಿಯಿಂದ ನನಗೆ ವಿಶೇಷ ಬೆಡ್ ವ್ಯವಸ್ಥೆ ದೊರಕಿತು. ಸ್ಟಿಚ್ ಹಾಕಿದ್ದರು, ಮೂರ್ನಾಲ್ಕು ದಿನಗಳು ಆಸ್ಪತ್ರೆಯಲ್ಲೇ ಉಳಿಯಬೇಕಿತ್ತು. ಮಾರನೇ ದಿನ ಸಾವಿನ ಸುದ್ದಿಯೋ ಅಥವಾ ಇನ್ಯಾವ ಸಂಗತಿಯೋ ನೆನಪಾಗುತ್ತಿಲ್ಲ. ಅಮ್ಮ ಒಂದೇ ಸಮನೆ ಅಳುತ್ತಿದ್ದಳು. ಡಾಕ್ಟರ್ ಬಂದವರೇ ಕಾರಣ ಕೇಳುವ ಸಲುವಾಗಿ ಮಾತಾಡಿಸಿದರು. ಅವರ ಉರ್ದು ಭಾಷೆ ಅಮ್ಮನಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದು, ಕಾರಣ ಕೇಳಿದರು, ಅಮ್ಮ ಆ ಸಿಬ್ಬಂದಿಗೆ ಪರಿಸ್ಥಿತಿಯನ್ನು ವಿವರಿಸಿದರು. ಡಾಕ್ಟರ್ ಮಾತ್ರ, ‘ಯೇ ಮೇರಿ ಬೇಟಿ. ಮೈ ಇಸೇ ದೇಖ್ಲೇತಿ. ಜಾವೋ’ ಎಂದು ನಿರಾತಂಕವಾಗಿ ಕಳಿಸಿಯೇಬಿಟ್ಟರು. ಈ ಸಮಯದಲ್ಲಿ ನನ್ನ ಮತ್ತವರ ಬಾಂಧವ್ಯ ಇನ್ನಷ್ಟು ಗಾಢವಾಯಿತು. ಡ್ಯೂಟಿ ಅವಧಿಯಾಗುತ್ತಿದ್ದಂತೆ ನನ್ನ ಬಳಿ ಬಂದು ಆರೈಕೆ ಮಾಡಿ, ಬೇಕಾದ ತಿಂಡಿಯನ್ನೆಲ್ಲ ನೀಡುತ್ತಿದ್ದರು. ಮೂರೇ ದಿನಕ್ಕೆ ಅವರ ಮನೆಗೇ ಕರೆದೊಯ್ದರು. ಅಲ್ಲಿಗೆ ನರ್ಸ್ ಒಬ್ಬರನ್ನು ಕರೆಸಿಕೊಂಡು ಶುಶ್ರೂಷೆ ನಡೆಸುತ್ತಿದ್ದರು.

ಅವರ ಮನೆಯಲ್ಲಿದ್ದಾಗ ಸವಿದ ಹೊಸ ರುಚಿಯ ಬಗ್ಗೆ ಹೇಳದಿದ್ದರೆ ಹೇಗೆ! ಬೆಳಿಗ್ಗೆಯಾಗುತ್ತಿದ್ದಂತೆ ಅವರು ತುಪ್ಪ ಸವರಿದ ಚಪಾತಿಯನ್ನು ಬೆಲ್ಲದ ಚಹಾದೊಳಗೆ ಅದ್ದಿ ತಿನ್ನುತ್ತಿದ್ದರು. ಅಂತಹ ಸ್ವಾದ ನನ್ನ ಬದುಕಿನಲ್ಲಿ ಈವರೆಗೂ ಸವಿದಿಲ್ಲ. ಐದಾರು ದಿನ ಕಳೆಯುತ್ತಿದ್ದಂತೆ ತಂದೆ ತಾಯಿಯಿಬ್ಬರೂ ಬಂದರೆ ಡಾಕ್ಟರ್ ತಮ್ಮ ಮಾತುಗಳನ್ನು ಪಕ್ಕದ ಸಿಬ್ಬಂದಿಯಲ್ಲಿ, ‘ಈ ಮಗುವನ್ನು ನನಗೇ ಕೊಟ್ಟು ಬಿಡಲು ಹೇಳಿ. ನಾನೇ ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದರಂತೆ…

ಮುಂದುವರೆಯುವುದು….

About The Author

ಕೀರ್ತಿ ಬೈಂದೂರ್

ಕೀರ್ತಿ ಬೈಂದೂರ್ ಕನ್ನಡ ಉಪನ್ಯಾಸಕಿಯಾಗಿ‌ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ