ಒಳಭಾಗಕ್ಕೆ ತೆರೆದುಕೊಂಡಿದ್ದ ಬಾಗಿಲಿಗೊರಗಿ ನಿಂತುಕೊಂಡ ಪ್ರಿಯಾ ಆಗಸದ ಶೂನ್ಯದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ಅರೆಮುಚ್ಚಿದ ಕಣ್ಣುಗಳಿಂದ ನೋಡುತ್ತಾ ಅಂದಳು “ನಾನು ಕೆಟ್ಟ ಅದೃಷ್ಟದ ಸಂಕೇತ ದಿನೂ. ನೀವು ಹೆಣ್ಣು ನೋಡಲು ಬಂದಾಗ ನಾನು ಏನೇನೋ ಕನಸು ಕಟ್ಟಿದೆ. ಆದ್ರೆ ಅಂದುಕೊಂಡದ್ದೇನೂ ನಿಜವಾಗ್ಲಿಲ್ಲ. ಈಗ ನೋಡು, ಇದೇ ನನ್ನ ಬದುಕು. ಇದೇ ನನ್ನ ಭಾಗ್ಯ” ಎನ್ನುತ್ತಾ ಮುಖವನ್ನು ಅತ್ತ ಹೊರಳಿಸಿ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು. ಕಟ್ಟಿಕೊಂಡ ಗಂಟಲನ್ನು ಬಿಡಿಸಿಕೊಳ್ಳಲು ಕೊಸರುತ್ತಾ ದಿನೇಶನೆಂದ “ನಮ್ಮ ಬದುಕು ಭಾಗ್ಯಗಳನ್ನು ರೂಪಿಸಬೇಕಾದೋರು ನಾವೇ ಅಲ್ವಾ ಅತ್ತಿಗೆ?”
ಡಾ. ಸುಭಾಷ್‌ ಪಟ್ಟಾಜೆ ಬರೆದ ಈ ಭಾನುವಾರದ ಕತೆ “ಹುಟ್ಟು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

1

ಯಾರದು ಬಾಗಿಲು ತಟ್ಟುತ್ತಿರುವುದು?

ಅಡುಗೆ ಕೋಣೆಯೊಳಗೆ ಅನ್ನ ಬಸಿಯುತ್ತಿದ್ದ ಪ್ರಿಯಾ ತಿರುಗಿ ನೋಡಿದಳು. ಅಪ್ಪು ಶಾಲೆಯಿಂದ ಬರುವ ಹೊತ್ತಾಗಲಿಲ್ಲ. ಅಲ್ಲದೆ ಅವನು ಬಾಗಿಲು ತಟ್ಟುವುದಿಲ್ಲ. ‘ಅಮ್ಮಾ’ ಎಂದು ಕರೆಯುತ್ತಾನೆ. ಹಾಗಿದ್ದರೆ ಮತ್ತೆ ಯಾರು?

ಬಾಗಿಲನ್ನು ತೆರೆದಾಗ ಬರೇ ಆಶ್ಚರ್ಯವಲ್ಲ ಎದೆಬಡಿತವೇ ನಿಂತುಹೋದಂತಾಯಿತು.
“ದಿನೂ!”

ಅವನನ್ನೇ ನೋಡುತ್ತಾ ನಿಂತವಳಿಗೆ ಮತ್ತೇನೂ ಹೇಳಲು ತೋಚಲಿಲ್ಲ. ಒಂದೆರಡು ನಿಮಿಷಗಳ ಕಾಲ ಅವಳನ್ನೇ ದಿಟ್ಟಿಸಿದ ದಿನೇಶ ಮಾತಿಲ್ಲದೆ ಒಳಗೆ ಬಂದ. ಬಾಯಿ ಕಟ್ಟಿದಂತೆ ನಿಂತ ಪ್ರಿಯಾಳ ಮುಖ ಒಮ್ಮೆಲೆ ಕೆಂಪಗಾಗಿ ಕಣ್ಣಲ್ಲಿ ಕಂಬನಿ ಮೂಡಿತು. ಎದೆಯೊಳಗೇನೋ ಸಂಕಟ; ಸಂತಸ. ಜೊತೆಯಲ್ಲಿ ಸಂಕೋಚ. ಮೌನ ಕತ್ತು ಹಿಸುಕುತ್ತಿತ್ತು. ಎದೆ ಡವಗುಟ್ಟುತ್ತಿತ್ತು.

“ಸೌಖ್ಯವಾ ದಿನೂ?”

ದನಿ ಕೇಳುತ್ತಿದ್ದಂತೆ ದಿನೇಶ ಕಿಡಿತಗುಲಿದಂತೆ ಎಚ್ಚರಗೊಂಡ. ಮನಸ್ಸು ಸಹಜಸ್ಥಿತಿಯಲ್ಲಿರುವಂತೆ, ಹೃದಯ ಆದಷ್ಟು ಕಡಿಮೆ ಸದ್ದು ಮಾಡುವಂತೆ ಎಚ್ಚರ ವಹಿಸಿದ. ಆಳವಾಗಿ ಉಸಿರಾಡುತ್ತಾ ಶಾಂತನಾಗಿರುವಂತೆ ನಟಿಸಿ ಮಾತಿಗೆ ತೊಡಗಿದ. “ಅಪ್ಪು ಎಲ್ಲಿದ್ದಾನೆ ಅತ್ತಿಗೆ? ಶಾಲೆಯಿಂದ ಬರ್ಲಿಲ್ವಾ ಇನ್ನೂ?”

“ಅವ ಬರುವಾಗ ನಾಲ್ಕೂವರೆ ಕಳೀತದೆ. ಇದುವರೆಗೂ ನೀನು…”

ಕೆಲವು ವರ್ಷಗಳಿಂದ ನಾಲಿಗೆಯಲ್ಲಿ ಸಾಲುಗಟ್ಟಿದ್ದ ಪ್ರಶ್ನೆಗಳನ್ನು ಕೇಳಲು ಯತ್ನಿಸುತ್ತಿದ್ದಂತೆ ತನ್ನ ಕೊರಳು ಬಿಗಿಯುತ್ತಿರುವುದು ಅವಳ ಅರಿವಿಗೆ ಬಂತು. “ಅದು… ನ್… ನಾನು…” ಥಟ್ಟನೆ ಕಣ್ಣೆತ್ತಿದ ದಿನೇಶ ಮಾತಿಗಾಗಿ ಹುಡುಕಾಡತೊಡಗಿದ. ಅವಳಿಗೂ ಮಾತನಾಡಲು ಪದಗಳು ಸಿಗಲಿಲ್ಲ. ತನ್ನ ಬಾಯಿಯಿಂದ ಇನ್ನೇನು ಬಿಕ್ಕಳಿಕೆ ಹೊರಡಬಹುದೆನ್ನುವಷ್ಟರಲ್ಲಿ “ಇರು. ಚಾ ಮಾಡ್ತೇನೆ” ಎಂದು ಉಸಿರುಗಟ್ಟಿದಂತೆ ಹೇಳಿ ಸೀದಾ ನಡೆದಳು ಅಡುಗೆ ಮನೆಗೆ. ಚಹಾದ ಪಾತ್ರೆಗಾಗಿ ತಡಕಾಡುತ್ತಿದ್ದಂತೆ ಮತ್ತೆ ಅಳು ಬರುವಂತಾಗಿ ತುಸು ಹೊತ್ತು ಅಲ್ಲೇ ನಿಂತುಕೊಂಡಳು. ಇಲ್ಲ. ಇನ್ನು ಅಳಲಾರೆ ಎಂಬ ನಿರ್ಧಾರಕ್ಕೆ ಬಂದವಳಂತೆ ಗಟ್ಟಿಯಾದ ಹೆಜ್ಜೆ ಹಾಕುತ್ತಾ ಬಂದು ಅಲ್ಲೇ ಇದ್ದ ಕಿಟಿಕಿಯ ಸರಳುಗಳೆಡೆಯಿಂದ ಅವನನ್ನು ನೋಡಿದಳು. ಅವನ ಮುಖದಲ್ಲೂ ಆಸೆ, ನಿರೀಕ್ಷೆ, ಸೋಲು, ಗೆಲುವು, ಸಂತಸ ಮತ್ತು ವ್ಯಾಕುಲತೆಗಳು ಮುಸುಕಿದ್ದವು. ಚಹಾ ಕುದಿಯುತ್ತಿದ್ದಂತೆ ಅವಳ ಮನಸ್ಸೂ ಬಿಸಿಯಾಗತೊಡಗಿತು. ಕುದಿಯುವ ನೀರಿನ ಹನಿಗಳ ಜೊತೆಗೆ ನೆನಪುಗಳು ಚಿಮ್ಮಿ ಬರತೊಡಗಿದವು.

2

“ಯಾಕಣ್ಣಾ ಅತ್ತಿಗೆಗೆ ಹಾಗೊಂದು ಬಡಿಯುತ್ತಿ? ಅಷ್ಟಕ್ಕೂ ಅವಳೇನು ಮಾಡಿದ್ಲು?” ದಿನೇಶನ ದನಿಯಲ್ಲಿ ಅಸಹನೆಯಿತ್ತು. ಅಸಮಾಧಾನವಿತ್ತು.
“ನನ್ನ ಹೆಂಡತಿಗೆ ನಾನು ಹೊಡೀತೇನೆ. ಬಡೀತೇನೆ. ನೀನ್ಯಾರೋ ಅದನ್ನು ಕೇಳೋದಕ್ಕೆ?”

ಕೋಣೆಯೆಲ್ಲ ತುಂಬಿ ಬಾಗಿಲಿನಿಂದ ಹೊರನುಗ್ಗುವಷ್ಟು ಗಟ್ಟಿಯಾಗಿ ಲೋಕೇಶ ಬೊಬ್ಬಿರಿದ. ಅವನ ಬಲಗೈ ಪ್ರಿಯಾಳ ತುರುಬನ್ನು ಹಿಡಿದುಕೊಂಡು ವಿವಿಧ ಕೋನಗಳಲ್ಲಿ ಎಳೆದಾಡುತ್ತಲೇ ಇತ್ತು. ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿರುವ ಅತ್ತಿಗೆಯ ಸ್ಥಿತಿಯನ್ನು ಕಂಡು ದಿನೇಶನ ಮುಖ ಕಲ್ಲುಗಟ್ಟಿತು. ಸೀದಾ ಒಳಬಂದವನೇ ಅಣ್ಣನ ಬಲಗೈಯನ್ನು ಬಿಗಿಯಾಗಿ ಹಿಡಿದ. ಕೆರಳಿದ ಲೋಕೇಶನು ದಿನೇಶನತ್ತ ಕೈ ಬೀಸುತ್ತಿದ್ದಂತೆ ಅವನು ಚೀಲವನ್ನು ಕೂಡಲೇ ಕೆಳಗೆ ಬಿಟ್ಟು ಅಣ್ಣನ ಕೈಯನ್ನು ಬಿಗಿಯಾಗಿ ಹಿಡಿದು ನಿಲ್ಲಿಸಿಕೊಂಡ. ಲೋಕೇಶ ಕೊಸರಾಡತೊಡಗಿದಂತೆ ದಿನೇಶನ ಮುಷ್ಠಿ ಮತ್ತೂ ಬಿಗಿಯಾಗತೊಡಗಿತು. ಅಬ್ಬ! ಏನು ಶಕ್ತಿ! ಎಂದುಕೊಳ್ಳುತ್ತಲೇ ಪ್ರಿಯಾ ಅವರಿಬ್ಬರನ್ನು ಬಿಡಿಸಲು ಬಂದಳು. ಆಗ ದಿನೇಶನೆಂದ “ಹೆದರ್ಬೇಡ ಅತ್ತಿಗೆ. ನಾನು ಇವನಿಗೆ ಹೊಡಿಯೋದಿಲ್ಲ. ಇವ ಹೊಡಿಯದಿರಲಿ ಅಂತ ಕೈ ಹಿಡ್ಕೊಂಡಿದ್ದೇನೆ ಅಷ್ಟೆ”

ರಾತ್ರಿ ಊಟ ಬಡಿಸಿದ ಬಳಿಕ ಪ್ರಿಯಾ ಅನ್ಯ ಮನಸ್ಕಳಾಗಿ ಕುಳಿತಿರುವುದನ್ನು ಕಂಡು ದಿನೇಶ ಹೇಳಿದ “ಬಾ ಅತ್ತಿಗೆ. ನೀನೂ ಊಟಮಾಡು” ಅವಳು ಮಾತನಾಡಲಿಲ್ಲ “ಏನತ್ತಿಗೆ? ನನ್ನತ್ರ ಹೇಳಲಾಗದ ಚಿಂತೆ ನಿಂಗೇನಿದೆ? ಅದೇನೂಂತ ಹೇಳಿದ್ರೆ ಮನಸ್ಸಿನ ಭಾರವಾದ್ರೂ ಕಮ್ಮಿಯಾದೀತು. ಏನಿದ್ರೂ ಮನಸ್ಸಲ್ಲೇ ನುಂಗಿಕೊಂಡಿರೋದು ಒಳ್ಳೇದಲ್ಲ”
ಎನ್ನುತ್ತಿದ್ದಂತೆ ಅವಳ ದೀರ್ಘ ನಿಟ್ಟುಸಿರು ಅವನ ಮಾತನ್ನು ಕತ್ತರಿಸಿತು.

“ದಿನೂ. ನನ್ನನ್ನು ಮದುವೆಯಾದ ಬಳಿಕ ಅಥವಾ ಅದಕ್ಕಿಂತ ಮೊದಲು ಅವರಿಗೆ ಬೇರೆಯವಳೊಂದಿಗೆ ಸಂಬಂಧವಿತ್ತಾ? ಕೇರಳದ ಆಚೆ ಕಡೆ ಒಬ್ಬಳಿದ್ದಾಳಂತೆ? ಸಾಮಾನು ಕೊಳ್ಳಲು ಅಂಗಡಿಗೆ ಹೋದಾಗ ಯಾರೋ ಹೇಳೋದು ಕೇಳಿಸ್ತು”

“ನನ್ನಲ್ಲೇನೂ ಕೇಳ್ಬೇಡ ಅತ್ತಿಗೆ. ಅವನನ್ನು ಕಂಡ್ರೆ ಆಗದವರು ಸುಮ್ಮನೇ ಹೇಳಿದ್ದಾಗಿರಬಹುದು”

ಒಳಭಾಗಕ್ಕೆ ತೆರೆದುಕೊಂಡಿದ್ದ ಬಾಗಿಲಿಗೊರಗಿ ನಿಂತುಕೊಂಡ ಪ್ರಿಯಾ ಆಗಸದ ಶೂನ್ಯದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ಅರೆಮುಚ್ಚಿದ ಕಣ್ಣುಗಳಿಂದ ನೋಡುತ್ತಾ ಅಂದಳು “ನಾನು ಕೆಟ್ಟ ಅದೃಷ್ಟದ ಸಂಕೇತ ದಿನೂ. ನೀವು ಹೆಣ್ಣು ನೋಡಲು ಬಂದಾಗ ನಾನು ಏನೇನೋ ಕನಸು ಕಟ್ಟಿದೆ. ಆದ್ರೆ ಅಂದುಕೊಂಡದ್ದೇನೂ ನಿಜವಾಗ್ಲಿಲ್ಲ. ಈಗ ನೋಡು, ಇದೇ ನನ್ನ ಬದುಕು. ಇದೇ ನನ್ನ ಭಾಗ್ಯ” ಎನ್ನುತ್ತಾ ಮುಖವನ್ನು ಅತ್ತ ಹೊರಳಿಸಿ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು. ಕಟ್ಟಿಕೊಂಡ ಗಂಟಲನ್ನು ಬಿಡಿಸಿಕೊಳ್ಳಲು ಕೊಸರುತ್ತಾ ದಿನೇಶನೆಂದ “ನಮ್ಮ ಬದುಕು ಭಾಗ್ಯಗಳನ್ನು ರೂಪಿಸಬೇಕಾದೋರು ನಾವೇ ಅಲ್ವಾ ಅತ್ತಿಗೆ?”

***

“ಹೇಯ್” ರೋಷ ಭುಗಿಲೆದ್ದ ಲೋಕೇಶ ಅಬ್ಬರಿಸಿದ. “ನಾನು ಎಲ್ಲಿಗೆ ಬೇಕಾದ್ರೂ ಹೋದೇನು. ಅದನ್ನು ಕೇಳ್ಲಿಕ್ಕೆ ನೀನು ಯಾರು?”

“ನಿಮ್ಮ ಹೆಂಡತಿ. ನಿಮ್ಮಿಂದ ತಾಳಿ ಕಟ್ಟಿಸ್ಕೊಂಡವಳು” ತಟಕ್ಕನೆ ಎದ್ದು ನಿಂತ ಪ್ರಿಯಾ ಲೋಕೇಶನ ಕಣ್ಣುಗಳನ್ನು ಎದುರಿಸಿದಳು. ಅವನ ದೃಷ್ಟಿಯನ್ನು ಇರಿದು ಉರಿಸಿಬಿಡುವಂತೆ ನೋಡಿದಳು. ಸೋಲಬಾರದೆಂದು ಅವನೂ ದಿಟ್ಟಿಸತೊಡಗಿದ.

“ನಂಬಿ ಬಂದ ಹೆಂಡತಿಯನ್ನೇ ಬಾಳಿಸಲಾರದೋನು…”
ಅವಳು ಹಾಗೆನ್ನುತ್ತಲೇ ಲೋಕೇಶ ಕೈ ಎತ್ತಿ ಅವಳ ಕೆನ್ನೆಗೆ ಫಟಾರನೆ ಬಾರಿಸಿದ. ಅವನ ಕೈ ಹಿಂತಿರುಗುವ ಮೊದಲೇ ಪ್ರಿಯಾ ಅದಕ್ಕಿಂತ ಹೆಚ್ಚು ರಭಸದಿಂದ ಅವನ ಎಡಗೆನ್ನೆಗೆ ಬಾರಿಸಿದ್ದಳು. ಕೆರಳಿ ಕೆಂಡವಾದ ಲೋಕೇಶ ಮುಂದೇನು ಮಾಡುತ್ತಿದ್ದೇನೆಂಬ ಪರಿವೆಯಿಲ್ಲದೆ ಅವಳನ್ನು ಹಿಡಿದೆಳೆದು ಕೈ ಬಾಯಿ ಎನ್ನದೆ ಹೊಡೆಯತೊಡಗಿದ. ಕೈ ಸೋತು ಒದ್ದ. ಕಾಲು ಸೋತು ಹೊಡೆದ.

ಯಾರೋ ತಲೆ ನೇವರಿಸತೊಡಗಿದಾಗಲೇ ಪ್ರಿಯಾಳಿಗೆ ಎಚ್ಚರವಾದದ್ದು. ಮೊಣಕಾಲುಗಳೆಡೆಯಲ್ಲಿ ಹುದುಗಿಸಿದ್ದ ಮುಖವನ್ನೆತ್ತಿ ನೋಡಿದರೆ ದಿನೇಶ!
“ಅತ್ತಿಗೇ”

ಹೃದಯವೇ ಬಾಯಿಗೆ ಬಂದಂಥ ಮಾತು “ದಿನೂ ನಿನ್ನಣ್ಣ ನನ್ನನ್ನು…” ಪ್ರಿಯಾ ಅವನ ಎದೆಗೊರಗಿ ಬಿಕ್ಕಿದಳು. “ಅಳಬೇಡ ಅತ್ತಿಗೇ” ನೋವಿನ ಉರಿಯನ್ನು ಒರೆಸಿ ತೆಗೆಯುವಂತೆ ಕೈಗಳು ಅವಳ ಬೆನ್ನಿನ ಮೇಲೆ ಹರಿದವು. ಅವಳಿಗೆ ಹಿತವೆನಿಸಿ ದೀರ್ಘವಾಗಿ ಉಸಿರೆಳೆಯುತ್ತಾ ಅವನನ್ನು ತಬ್ಬಿಕೊಂಡಳು. ತಾನೇಕೆ ಹಾಗೆ ಮಾಡಿದೆ ಎಂದು ಅವಳಿಗೆ ಹೊಳೆಯಲಿಲ್ಲ. ಅವಳ ಬೆಚ್ಚಗಿನ ಮೈಯನ್ನು ತಬ್ಬಿದ ದಿನೇಶನಿಗೂ ಹೊರ ಜಗತ್ತಿನ ಪರಿವೆ ಉಳಿಯಲಿಲ್ಲ.

***

ಆಹಾ! ಎಂಥ ಶುಭಗಳಿಗೆ ನಮ್ಮ ಬಾಳಿನಲ್ಲಿ! ಅಂತೂ ಹೆರಿಗೆಯಾಯಿತು. ಲೇಬರ್ ರೂಮಿನ ಮಂಚದ ಮೇಲೆ ದಣಿದು ಮಲಗಿದ ಪ್ರಿಯಾ ನೆಮ್ಮದಿಯ ಉಸಿರು ಬಿಟ್ಟಳು. ನಡುಗುತ್ತಾ ಮುದುಡುವ ಮಗುವಿನ ಮೇಲೆ ಕಣ್ಣು ಹಾಯಿಸಿದಾಗ ಕನಸುಗಳೆಲ್ಲವೂ ಸಾಕಾರಗೊಂಡಂತೆನಿಸಿತು. ಇದುವರೆಗೆ ಆಗದಿದ್ದ ರೋಮಾಂಚನ ಕಣ್ಣಿಗೂ ಕರುಳಿಗೂ ಅನುಭವಕ್ಕೆ ಬಂತು. ಗಂಡನ ಮುಖದಲ್ಲಿ ಗೆಲುವಿನ ನಗೆಯನ್ನು ಕಾಣುವಾಗ ಮನದಲ್ಲಿ ಹಿಗ್ಗಿನ ಜತೆಗೆ ಇನ್ನಿಲ್ಲದ ಅಳುಕು. ಹತ್ತಿರ ಬರಲು ಅವಕಾಶವಿಲ್ಲದವನಂತೆ ಹೊರಗೆ ನಿಂತು ಕಿಟಕಿಯ ಸರಳುಗಳ ಮೂಲಕ ನೋಡುತ್ತಿರುವ ದಿನೇಶನನ್ನು ಕಂಡು ಒಳಗೊಳಗೆ ಯಾತನೆ. ಆಕೆ ಸನ್ನೆ ಮಾಡುತ್ತಲೇ ಅಂಜುತ್ತ ಅಳುಕುತ್ತ ಒಳಗೆ ಬಂದ ದಿನೇಶನ ಎದೆ ಮರಣದಂಡನೆಗೊಳಗಾದ ಕೈದಿಯಂತೆ ದಡಬಡಿಸುತ್ತಿತ್ತು “ನೋಡು ದಿನೂ… ಮಗ” ಎಂದು ಅವಳೊಮ್ಮೆ ನಕ್ಕಳು. ಅದೊಂದು ಹೊಸ ಮುಗುಳ್ನಗುವಾಗಿತ್ತು.

***

“ಎಂಥ ಮಾತು ಹೇಳುತ್ತಿದ್ದೀ ಅತ್ತಿಗೆ? ನಿನ್ನನ್ನು ಬಿಟ್ಟು ಬೇರೆ ಯಾವ ಹೆಣ್ಣನ್ನು ನಂಗೆ ಕಲ್ಪಿಸಿಕೊಳ್ಳಲು ಸಾಧ್ಯ? ನಿನ್ನ ಒತ್ತಾಯಕ್ಕೆ ಕಟ್ಟು ಬಿದ್ದು ಇನ್ನೊಬ್ಬಳನ್ನು ಮದುವೆಯಾಗಿ ಅವಳ ಮನೆಯಲ್ಲೇ ನೆಲೆಸಿದ್ರೂ ನಂಗೆ ಅವಳನ್ನು ಮುಕ್ತ ಮನಸ್ಸಿನಿಂದ ಪ್ರೀತಿಸಲು ಸಾಧ್ಯವಾ? ತಿಳಿದೂ ತಿಳಿದೂ ಇನ್ನೊಬ್ಬ ಹೆಣ್ಣಿನ ಜೀವನವನ್ನೇಕೆ ಹಾಳು ಮಾಡಲಿ? ಅದೆಲ್ಲ ಬೇಡ. ನಾನು ಯಾವತ್ತೂ ನಿನ್ನೊಂದಿಗಿರ್ತೇನೆ. ನಿನ್ನನ್ನು ಒಮ್ಮೆಯೂ ನೋಯಿಸೋದಿಲ್ಲ. ದುಃಖಪಡಿಸೋದಿಲ್ಲ. ಇತರರಿಂದ ತೊಂದರೆಗೊಳಗಾಗಲೂ ಬಿಡೋದಿಲ್ಲ”

ದಿನೇಶ ಉದ್ವೇಗಗೊಂಡದ್ದು ಬರೇ ದನಿಯಿಂದ ಮಾತ್ರವಲ್ಲ, ಪ್ರಿಯಾಳ ಭುಜಗಳನ್ನು ಹಿಡಿದುಕೊಂಡಿದ್ದ ಬೆರಳುಗಳ ಬಿಗಿಯಿಂದಲೂ ತಿಳಿಯುತ್ತಿತ್ತು.
“ನಂಗೆ ಅರ್ಥವಾಗ್ತದೆ ದಿನೂ, ಆದರೆ ನಾನು ಅಷ್ಟೊಂದು ಸ್ವಾರ್ಥಿಯಾಗಬೇಕಾ? ನನ್ನ ವ್ಯಾಮೋಹಕ್ಕಾಗಿ ನಿನ್ನ ಬಾಳನ್ನು ಹಾಳುಗೆಡಹಬೇಕಾ?” ಎನ್ನುತ್ತಿದ್ದಂತೆ ಅವಳ ಕಣ್ಣು ಹನಿಗೂಡಿತು.

“ಒಂದುವೇಳೆ ನಾನು ಮನೆಬಿಟ್ಟು ಹೋದ್ರೆ ನಿನ್ನ ಗತಿಯೇನು? ನಿಮ್ಮಿಬ್ರ ನಡುವೆ ಬಂದು ನಿನ್ನನ್ನು ಕಣ್ಣಿಟ್ಟು ಕಾಯೋರು ಯಾರು? ನಾನಿಲ್ಲದ ಸಮಯ ನೋಡಿ ಅಣ್ಣ ನಿನ್ನನ್ನು ಏನಾದರೂ ಮಾಡಿದರೆ, ಜೀವಕ್ಕೇನಾದರೂ ಅಪಾಯವಾದರೆ?”

ಅವಳ ಮುಖದ ಮೇಲೆ ನೆರಳು ಹಾದುಹೋದಂತಾಯಿತು. ಅಳುವೋ ಹೊಟ್ಟೆ ಮರಳಿಸುವ ವಾಂತಿಯೋ ಎಂದು ತಿಳಿಯಲಾರದ ಉಮ್ಮಳವು ಭೋರ್ಗರೆಯುತ್ತಾ ಬಂದು ಕಿಬ್ಬೊಟ್ಟೆಗೆ ಅಪ್ಪಳಿಸಿ ನಿಂತಿತು.

“ಮಗ ಹುಟ್ಟಿದ ನಂತರ ಕೆಲವು ದಿನಗಳವರೆಗೆ ನಿನ್ನಣ್ಣ ಒಳ್ಳೆ ಉತ್ಸಾಹ, ಲವಲವಿಕೆಯಲ್ಲಿದ್ರು. ಅವರು ಬದಲಾಗಿಬಿಟ್ರಲ್ಲಾ ಅಂತ ನಾನೂ ಸಂತಸದಿಂದಿದ್ದೆ. ಆದರೆ ಈಗೀಗ ನನ್ನತ್ರ ಮಾತಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದ್ದಕ್ಕಿದ್ದಂತೆ ನಿದ್ದೆಯಿಂದ ಎದ್ದು ದೆವ್ವ ಕಂಡವರಂತೆ ಕಿರಿಚ್ತಾರೆ. ಮುಟ್ಟಿದ್ರೆ ಸಿಡಿದು ಬೀಳ್ತಾರೆ. ‘ಓಹೋ! ಕತ್ತು ಹಿಸುಕಿ ಕೊಲ್ಲಲಿಕ್ಕೆ ನೋಡ್ತೀಯಾ? ನಂತರ ನಿಂಗೆ ಮಜವಾಗಿರಬಹುದಲ್ಲ!’ ಅಂತ ಬಡಬಡಿಸ್ತಾರೆ. ಆ ದಿನದ ನಂತರ ನಿನ್ನ ತೆಕ್ಕೆಯಲ್ಲಿರುವಾಗಲೂ ನನ್ನ ಜೀವ ನಡುಗ್ತದೆ. ಹೊರಗೆ ಸಣ್ಣ ಸಪ್ಪಳವಾದ್ರೂ ಆ ಕಡೆ ಕಿವಿ ನಿಮಿರಿ ಗಮನವೆಲ್ಲ ಅತ್ತಲೇ. ಗಂಡ ಬರುತ್ತಿದ್ದಾನೋ, ನಮ್ಮಿಬ್ಬರನ್ನು ಕಂಡು ಗರ್ಜಿಸುವನೋ ಎಂಬ ಗೊಂದಲದಲ್ಲಿ ನಿನಗೆ ಸಾಕಷ್ಟು ಸುಖ ಕೊಡಲಾರದೆ, ನಾನೂ ಅನುಭವಿಸಲಾಗದೆ…”

ದಿನೇಶನಿಗೆ ನೆಲೆ ತಪ್ಪಿದಂತಾಯಿತು. ಅವಳ ಮೈಯಿಂದ ಥಟ್ಟನೆ ಕಳಚಿಕೊಳ್ಳುತ್ತಿದ್ದಂತೆ ಜೀವದ ಬೇರನ್ನೇ ಕಿತ್ತು ತೆಗೆದಂತಾಗಿ ತಲೆ ಸುತ್ತಿ ಬಂದು ಬಳಲಿದವನಂತೆ ಮಗ್ಗುಲಾದ. ತಲೆಯೊಳಗೆ ಕತ್ತಲು ತುಂಬಿಕೊಂಡು ತಾನೆಲ್ಲಿದ್ದೇನೆ? ಏನಾಗುತ್ತದೆ? ಎಂಬ ಅರಿವೇ ಅಳಿದು ಹೋಯಿತು. ಪ್ರಿಯಾ ಮಲಗಿದಲ್ಲಿಂದಲೇ ಅವನ ಬೆನ್ನಿಗೆ ಅಂಟಿದಂತೆ ಒರಗಿ ತನ್ನ ಕೂದಲರಾಶಿಯನ್ನು ಕೆನ್ನೆಗೆ ಒತ್ತುತ್ತಾ “ದಿನೂ, ನಿನಗೆ ಗೊತ್ತಾ, ನೀವು ಹೆಣ್ಣು ನೋಡೋದಕ್ಕೆ ಬಂದಿದ್ದಾಗ, ಮನೆಯ ಪುಟ್ಟ ಜಗಲಿಯಲ್ಲಿ ನನ್ನ ಅಪ್ಪನ ಹತ್ರ ತಗ್ಗಿದ ದನಿಯಲ್ಲಿ ಮಾತಾಡ್ತಾ ಕೂತಿದ್ದ ನಿನ್ನನ್ನು ಅರೆತೆರೆದ ಬಾಗಿಲ ಹಿಂದೆ ತುದಿಗಾಲಲ್ಲಿ ನಿಂತು ಎವೆಯಿಕ್ಕದೆ ನೋಡಿದ್ದೆ ನಾನು.

‘ಪರ್ವಾಗಿಲ್ಲ. ನಂಗೆ ಇಷ್ಟವಾಗುವಂಥ ಶಾಂತ ಮುಖದ ಹುಡುಗ. ಇವನ ಕೈ ಹಿಡಿದೆ ಅಂತಾದ್ರೆ ನಾನೆಷ್ಟು ಸುಖಿ’ ಎಂದುಕೊಳ್ತಾ ಆಸೆಯಿಂದ ಹೊರಗಿಣುಕಿದ್ದೇ ತಡ, ಮುಖದಲ್ಲಿ ನಗು ಮೂಡಿಸ್ಕೊಂಡು ನೋಡ್ತಿದ್ದ ನಿನ್ನ ತುಂಟ ಕಣ್ಣು ನನ್ನನ್ನು ಗಬಕ್ಕನೆ ಹಿಡಿದಂತೆನಿಸಿ ಮೈಯಿಡೀ ಜುಮುಗುಟ್ಟಿತು. ನಾಚಿಕೆ ತಡೀಲಾರದೆ ಸರಸರನೆ ಅಡುಗೆಕೋಣೆಗೆ ಹೊಕ್ಕವಳು ಮತ್ತೆ ಹೊರಬಂದದ್ದು ಅಪ್ಪ ಎಲ್ಲರಿಗೂ ಚಹಾ ತರಲು ಹೇಳಿದಾಗಲೇ. ಆಗ ನಾನು ಮೊದಲಿನಂತೆ ಹಿಂಜರಿಯದೆ ಚಹಾದ ತಟ್ಟೆ ಹಿಡಿದು ಮೆಲ್ಲಮೆಲ್ಲನೆ ಹೆಜ್ಜೆಯಿಡ್ತಾ ನಿನ್ನ ಮುಂದೆ ಸ್ವಲ್ಪ ಬಾಗಿ ಕಣ್ಣೆತ್ತದೆ ನಿಂತೆ. ‘ಮಗಳೇ ಯಾಕೆ ಹಾಗೆ ನಿಂತುಬಿಟ್ಟೆ? ಮೊದಲು ಚಾ ನೀಡಬೇಕಾದ್ದು ಭಾವೀ ವರನಿಗಲ್ವಾ? ಕೊಡು, ಚಾ ಕೊಡು ಲೋಕೇಶನಿಗೆ’ ಎಂದ ಅಪ್ಪನ ದನಿ ಕೇಳ್ತಿದ್ದಂತೆ ಲೋಟದಲ್ಲಿದ್ದ ಚಹಾ ತುಳುಕಿ ತಟ್ಟೆ ಮೇಲೆ ಚೆಲ್ಲಿತು. ಯಾರನ್ನು ನೋಡಿದರೆ ಕಣ್ಣಲ್ಲಿ ದೀಪದ ಕುಡಿ ಹೊತ್ತಿಕೊಳ್ಬೇಕಿತ್ತೋ, ಕಣ್ಣಿಗೆ ಕಣ್ಣು ತಾಗಿ ಮುಖಕ್ಕೆ ನೆತ್ತರು ಅಪ್ಪಳಿಸ್ಬೇಕಿತ್ತೋ, ಮೈ ಅರಳಿ ರೋಮ ನಿಗುರಿ ನಿಲ್ಬೇಕಿತ್ತೋ ಏನೂ ಅನಿಸದೆ ತಣ್ಣಗೆನಿಸಿತು. ಚಹಾದ ತಟ್ಟೆ ಹಿಡಿದು ತಿರುಗಿಯೂ ನೋಡದೆ ನಡೆದವಳನ್ನು ಒಳಗಿನ ಕತ್ತಲೆ ಕಬಳಿಸಿಬಿಟ್ಟಿತು. ಬದುಕಲ್ಲಿ ಯಾರಿಂದ್ಲೂ ಪ್ರೀತಿ ಸಿಗ್ಲಿಲ್ಲ ಎಂಬ ಸಂಕಟ ಇತ್ತು. ಆದರೆ ನೀನು ಅದನ್ನು ಸುಳ್ಳಾಗಿಸಿದೆ. ನೀನು ನನ್ನನ್ನು ಇಷ್ಟು ಹಚ್ಚಿಕೊಂಡಿದ್ದೀಯಾ. ಮೆಚ್ಚಿಕೊಂಡಿದ್ದೀಯಾ. ನನ್ನನ್ನು ಇಷ್ಟೂ ಪ್ರೀತಿಸುವ ಜೀವವೊಂದಿದೆಯಲ್ಲ ಎಂಬ ಸಂತೋಷ ನನಗೆ. ಆದರೆ ನಾನು ಅದಕ್ಕೆ ತಕ್ಕವಳಲ್ಲ. ನಿನ್ನ ಪ್ರೀತಿಗೆ ಪ್ರತಿಯಾಗಿ ಏನೂ ಮಾಡಲಾರದೋಳು ನಾನು. ಆದ್ದರಿಂದ…” ಎನ್ನುತ್ತಿದ್ದಂತೆ ದಿನೇಶನು ಸರಕ್ಕನೆ ಅತ್ತ ಹೊರಳಿ ಬಲಗೈಯಿಂದ ಅವಳನ್ನು ತಬ್ಬಿ “ಇಲ್ಲ. ಹಾಗೆಲ್ಲಾ ಹೇಳ್ಬೇಡ. ನಿನ್ನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ನಿಂಗೂ ನಾನು ಬೇಡವಾದೆನಾ?” ಎಂದ.

ಅವನ ಬಲಗೈ ಪ್ರಿಯಾಳ ತುರುಬನ್ನು ಹಿಡಿದುಕೊಂಡು ವಿವಿಧ ಕೋನಗಳಲ್ಲಿ ಎಳೆದಾಡುತ್ತಲೇ ಇತ್ತು. ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿರುವ ಅತ್ತಿಗೆಯ ಸ್ಥಿತಿಯನ್ನು ಕಂಡು ದಿನೇಶನ ಮುಖ ಕಲ್ಲುಗಟ್ಟಿತು. ಸೀದಾ ಒಳಬಂದವನೇ ಅಣ್ಣನ ಬಲಗೈಯನ್ನು ಬಿಗಿಯಾಗಿ ಹಿಡಿದ. ಕೆರಳಿದ ಲೋಕೇಶನು ದಿನೇಶನತ್ತ ಕೈ ಬೀಸುತ್ತಿದ್ದಂತೆ ಅವನು ಚೀಲವನ್ನು ಕೂಡಲೇ ಕೆಳಗೆ ಬಿಟ್ಟು ಅಣ್ಣನ ಕೈಯನ್ನು ಬಿಗಿಯಾಗಿ ಹಿಡಿದು ನಿಲ್ಲಿಸಿಕೊಂಡ.

“ಇಲ್ಲ ದಿನೂ, ನಂಗೆ ಎಲ್ರೂ ಬೇಕು. ಆದ್ರೆ…”

“ನಿನ್ನ ಮಾತಿನ ಧಾಟಿ ನಂಗೊತ್ತಾಯ್ತು. ನನ್ನೊಂದಿಗೆ ಸೇರಿ ಹಾಳಾದೆ ಅಂತಲ್ವಾ?”

“ನೀನು ತಪ್ಪು ತಿಳ್ಕೊಂಡಿರುವೆ ದಿನೂ”

“ಹೌದು. ನಾನಂದುಕೊಂಡಿದ್ದೆ ನಿನ್ನ ಹೃದಯಕ್ಕಿಂತ ಬೆಚ್ಚಗಿರೋದು ಇನ್ನೊಂದಿಲ್ಲಾಂತ. ಓಹ್! ಇದುವರೆಗೆ ಅದೆಂಥ ಭ್ರಮೆಯ ಅಮಲಲ್ಲಿದ್ದೆ! ನೀನು ಇಷ್ಟೂ ಬದಲಾಗೋದು ಸಾಧ್ಯವೇ ಅಂತ ಯೋಚಿಸುವಾಗಲಂತೂ…”

“ನಾನು ಕಹಿಯಾಗಿ ಮಾತಾಡುವಂತೆ ಯಾಕೆ ಬಲವಂತ ಪಡಿಸುತ್ತಿರುವೆ ದಿನೂ?”

“ನಿನಗೇನು? ಅಣ್ಣನ ಮೇಲಿದ್ದ ಸೇಡೂ ತೀರಿತು. ಮಗು ಹುಟ್ಟಿದ ಬಳಿಕ ಪ್ರೀತಿಯೂ ಬತ್ತಿಹೋಯ್ತು”

“ದಿನೂ!” ಪ್ರಿಯಾ ಅವನನ್ನು ತನ್ನ ಮೈಮೇಲಿನಿಂದ ತಳ್ಳಿ ದಿಗ್ಗನೆ ಎದ್ದು ಕುಳಿತಳು. ಅವಳ ನೋಟ ಹೊಗೆಯಾಡಿತು. ಹೊತ್ತಿ ಉರಿಯಿತು. ಅಂತೆಯೇ ಕರಟಿ ಕೆಳಬಾಗುತ್ತಿದ್ದಂತೆ ಇಬ್ಬರನ್ನೂ ಮುಚ್ಚಿದ್ದ ಹೊದಿಕೆಯಿಂದ ಹೊರಬಂದ ತನ್ನ ಮೈ ನಗ್ನವಾಗಿದೆ ಎಂಬ ಅರಿವು ಮೂಡಿ ಒಮ್ಮೆಲೆ ಬೆಚ್ಚಿ ಪಕ್ಕಕ್ಕೆ ತಿರುಗಿ ನೆಲದ ಮೇಲೊರಗಿದ್ದ ಬಟ್ಟೆಗಳನ್ನು ಬಾಚಿ ಎತ್ತಿಕೊಂಡು ಸೀದಾ ಬೇರೊಂದು ಕೋಣೆಗೆ ಹೋಗಿ ದಢಾರನೆ ಬಾಗಿಲು ಹಾಕಿದಳು. ಬೆನ್ನ ಹಿಂದೆಯೇ ಕದ ಹಾಕಿಬಿಟ್ಟು ಬಸವಳಿದವಳಂತೆ ನಿಂತಲ್ಲೇ ಕುಸಿಯುತ್ತಿದ್ದಂತೆ ಯಾತನೆ ಒತ್ತರಿಸಿ ಬಂದಂತಾಗಿ ಎದೆಗೊರಗಿಸಿ ಹಿಡಿದಿದ್ದ ಸೀರೆಯ ಅಂಚನ್ನು ಬಾಯಿಗೆ ತುರುಕಿಕೊಂಡಳು.

***

ನಾನು ಅವಳನ್ನು ಮರೆಯಲು ಯತ್ನಿಸುತ್ತೇನೆ. ಕೊಡಲಿಯನ್ನು ಎತ್ತಿ ದಿಮ್ಮಿಯ ಆಯಕಟ್ಟಿಗೆ ಏಟು ಹಾಕುತ್ತಾ ದಿನೇಶ ಯೋಚಿಸಿದ. ಅವಡುಗಚ್ಚಿ ಹಿಡಿದಿದ್ದ ಭಾವಗಳ ಒತ್ತಡಕ್ಕೆ ತಕ್ಕಂತೆ ಬೀಳುವ ಏಟಿಗೆ ಪಕ್ಕಾದ ಚೆಕ್ಕೆಗಳು ಕಿಡಿಗಳಂತೆ ಚಿಮ್ಮುತ್ತಿದ್ದವು. ಆದರೆ ಮರೆಯಲಾರೆನೇಕೆ? ಇದೇನಾಶ್ಚರ್ಯ! ಯಾವಳು ಕ್ಷುದ್ರಗ್ರಹದಂತೆ ಬೆನ್ನಿಗೆ ಅಂಟಿ ಎಡೆಬಿಡದೆ ನೋಯಿಸುತ್ತಿದ್ದಳೋ, ಯಾರು ಇದೀಗ ಕೆಲವು ದಿನಗಳ ಹಿಂದೆ ನಮ್ಮಿಬ್ಬರ ಸಂಬಂಧ ಮುಗಿಯಿತು ಎಂದಿದ್ದಳೋ, ಯಾರ ಪ್ರತಿಯಾಗಿ ತನ್ನ ಮನಸ್ಸು ಹೇಯಭಾವದಿಂದ ತುಂಬಿದೆಯೋ ಅಂಥವಳಿಗಾಗಿ ನನ್ನ ಹೃದಯವೇಕೆ ಹಾಹಾಕಾರ ಮಾಡುತ್ತಿದೆ? ಯಾರ ಬಗ್ಗೆ ಇಷ್ಟೊಂದು ಅಸಹ್ಯವಿದೆಯೋ ಕೋಪವಿದೆಯೋ ಅದಕ್ಕೆ ತದ್ವಿರುದ್ಧವಾಗಿ ಶುಭ ಹಾರೈಕೆಗಳೇಕೆ? ಪರಸ್ಪರ ವಿರುದ್ಧವಾದ ಈ ವಿಚಾರಗಳು ನನ್ನೊಳಗೆ ಹೇಗೆ ತುಂಬಿಕೊಂಡವು? ಅವಳು ನನ್ನವಳು. ಅವಳಿಗೆ ನಾನಲ್ಲದೆ ಮತ್ತಾರೂ ಇಲ್ಲ ಎಂಬ ವಿಚಾರವೇಕೆ ನನ್ನೆದೆಯೊಳಗೆ ಇನ್ನೂ ಮಿಡಿಯುತ್ತದೆ? ಎಂದುಕೊಳ್ಳುತ್ತಿದ್ದಂತೆ ಮನೆಯೊಳಗಿನಿಂದ ಕೇಳಿಸಿತು ಗಾಜು ಒಡೆದಂಥ ‘ಫಳ್’ ಎಂಬ ಸದ್ದು. ಹಿಂದೆಯೇ ಅಪ್ಪುವಿನ ಅಳು. ಓಡಿಬಂದು ನೋಡಿದಾಗ ಕಂಡದ್ದೇನು? ಅಣ್ಣನ ಕೈಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾನೆ ಅಪ್ಪು! ಹಿಡಿದ ಆಟಿಕೆ ಕೈಯೊಳಗೆ ಭದ್ರವಾಗಿದೆ.

“ನಾಯಿಮಗನೇ, ಹಾಳುಮಾಡು. ಎಲ್ಲವನ್ನೂ ಹಾಳುಮಾಡು” ಹಲ್ಲು ಕಚ್ಚಿ ನುಡಿಯುತ್ತಾ ಅಪ್ಪುವಿನ ಮುಖ, ಬೆನ್ನು, ತೋಳುಗಳೆನ್ನದೆ ರಪರಪ ಬಾರಿಸುತ್ತಿದ್ದಾನೆ ಅಣ್ಣ! ಅವನು ಹೊಡೆಯುವ ಒಂದೊಂದು ಏಟೂ ತನ್ನ ಮೇಲೆ ಬಿದ್ದಂತಾಗಿ ದಿನೇಶನ ಮೈ ಚುರುಚುರು ಉರಿಯತೊಡಗಿತು. ಅಣ್ಣ ನಿಂತ ಭಂಗಿ, ಅಪ್ಪುವಿನ ಮಿದು ಕೆನ್ನೆಗಳ ಮೇಲೆ ಕೈ ಎತ್ತಿ ಇಳಿಸುವ ಠೀವಿ, ನೋಟದೊಳಗಿನ ಕ್ರೌರ್ಯವನ್ನು ಕಂಡು ಅವನ ನೆತ್ತರು ಕುದಿಯತೊಡಗಿತು. “ಕೊಲ್ತಿಯೇನೋ ಮಗನನ್ನು?” ಎಂದು ಬೊಬ್ಬಿಡುತ್ತಾ ಒಳನುಗ್ಗಿ ಅಣ್ಣನನ್ನು ಹಿಡಿದು ಹಿಂದಕ್ಕೆ ದಬ್ಬಿದ. ಅನಿರೀಕ್ಷಿತ ಆಕ್ರಮಣದಿಂದ ತತ್ತರಿಸಿದ ಆತನು ಜಾರಿಹೋದ ತನ್ನ ಲುಂಗಿಯನ್ನು ಮೇಲಕ್ಕೆ ಮಡಚಿ ಕಟ್ಟುತ್ತಾ “ನನ್ನ ಮೇಲೇ ಕೈ ಮಾಡ್ತೀಯಾ ಬೇವಾರ್ಸಿ” ಎಂದು ಗುಟುರು ಹಾಕಿಕೊಂಡು ಮುಂದಕ್ಕೆ ಧಾವಿಸಿ ಬರುತ್ತಿದ್ದಂತೆ

“ಲೋಕೇಶಾ…”

ಆ ರಭಸಕ್ಕೆ ಗಕ್ಕನೆ ನಿಂತ ಲೋಕೇಶನ ಕೈ ತಟಕ್ಕನೆ ಕೆಳಗಿಳಿದಿತ್ತು. ಮೊದಲ ಬಾರಿಗೆ ದಿನೇಶ ತನ್ನ ಹೆಸರೆತ್ತಿ ಕರೆದಿದ್ದುದರ ಆಘಾತ ಅವನ ಮುಖದಲ್ಲಿ ಒಡೆದು ಕಾಣಿಸಿತು.

“ನೀನೇನು ಮನುಷ್ಯನೋ ಮೃಗವೋ? ನಾಯಿಗೆ ಹೊಡೆದಂತೆ ಮಗನಿಗೆ ಹೊಡೀಲಿಕ್ಕೆ ನಾಚಿಕೆಯಾಗೋದಿಲ್ವಾ? ಬೀರುವಿನ ಮೇಲಿಂದ ಅವ ಆಟಿಕೆ ತೆಗೀಲಿಕ್ಕೆ ಹೊರಟಾಗ ಬೆಪ್ಪನ ಹಾಗೆ ನೋಡ್ತಾ ಕೂತ್ಕೊಳ್ಳದೆ ಎದ್ದು ಹೋಗಿ ತೆಗೆದುಕೊಡಬಹುದಿತ್ತಲ್ಲ? ಅವನ ಕೈ ತಾಗಿ ಫೋಟೋ ಕೆಳಗೆ ಬೀಳೋವರೆಗೂ ಕಾಯಬೇಕಿತ್ತಾ?”
ಅಣ್ಣ ಮಾತನಾಡಲಿಲ್ಲ. ನಿಂತಲ್ಲೇ ನಡುಗುತ್ತಾ ಜೋಲಿ ಹೊಡೆಯುತ್ತಿದ್ದ. ಕೋಪದಿಂದಲೇ? ಹೆದರಿಕೆಯಿಂದಲೇ? ಅಥವಾ ನಿನ್ನೆ ಕುಡಿದ ಹೆಂಡದ ಅಮಲು ಇನ್ನೂ ಇಳಿದಿಲ್ಲವೇ?

“ನಿಂಗೆ ಯಾರ ಮೇಲೆ ಸಿಟ್ಟಿದೆ ಅಂತ ನಂಗೊತ್ತುಂಟು. ಯಾಕಿದೆ ಅಂತಲೂ ಗೊತ್ತುಂಟು. ಏನೂ ಅರಿಯದ ಮಗನ ಮೇಲೆ ಅದನನ್ನು ತೀರಿಸಲು ನೋಡಿದ್ರೆ ಉಂಟಲ್ಲ… ನಿನ್ನನ್ನು…”
ಎನ್ನುತ್ತಲೇ ದಿನೇಶನಿಗೆ ಏದುಸಿರು ಒತ್ತಿ ಬಂತು. ಬಟ್ಟೆ ಒಗೆಯಲೆಂದು ಹಳ್ಳಕ್ಕೆ ಹೋಗಿದ್ದ ಪ್ರಿಯಾ ಬೊಬ್ಬೆ ಕೇಳುತ್ತಲೇ ಓಡಿ ಬಂದಿದ್ದಳು. ಲೋಕೇಶನ ದೃಷ್ಟಿ ಪ್ರಿಯಾಳತ್ತ ತಿರುಗಿತು.

“ಮಗ ಕಲಿಯೋದ್ರಲ್ಲಿ ಏನೂ ಚುರುಕಿಲ್ಲ. ಯಾವಾಗ ನೋಡಿದ್ರೂ ಬರೇ ಆಟ ಮಾತ್ರ. ನಾಲ್ಕಕ್ಷರ ಓದು ಅಂದಾಗ ಅವ ಹೇಳಿದ್ದು ಕೇಳದ್ದಕ್ಕೆ ಏಟು ಕೊಟ್ಟೆ ಅಷ್ಟೆ. ಅದಕ್ಕೆ ಈ ದಿನೇಶ ಇಷ್ಟು ಗಲಾಟೆ ಮಾಡೋದ? ನನ್ನ ಮಗನನ್ನು ಬೈಯುವ ಬಡಿಯುವ ಅಧಿಕಾರ ನಂಗೆ ಇಲ್ವಾ? ಅದಕ್ಕೆ ಅಡ್ಡ ಬರಲು ಇವನು ಯಾರು? ಆ ಮಗು ನನ್ನದೋ ಇವನದ್ದೋ?”

ಆ ಮಾತುಗಳು ಎರಡಲಗಿನ ಕತ್ತಿಯಂತೆ ದಿನೇಶನ ಒಳಕಿವಿಯನ್ನು ಭೇದಿಸಿದವು. ಎದೆಯೊಳಗೆ ಭೂಕಂಪವಾದಂತಾಯಿತು. ಮೋರೆ ಕಪ್ಪಿಟ್ಟು ಹುಬ್ಬು ಗಂಟಿಕ್ಕಿತು. ಮೈಯ ರಂಧ್ರಗಳೆಡೆಯಿಂದ ಬೆವರಿನ ಸೂಕ್ಷ್ಮ ತುಂತುರುಗಳು ಹೊಮ್ಮಿ ನಿಂತವು. ಯೋಚನೆಗಳು ಮುಂದಕ್ಕೆ ಹರಿಯದಂತೆ ನರಗಳು ಬಿಗಿದುಕೊಂಡವು.

“ನನ್ನನ್ನು ಧಿಕ್ಕರಿಸಲು ಇವನಿಗೆ ಅಧಿಕಾರ ಕೊಟ್ಟದ್ದು ಯಾರು? ಇವನ ಮುದ್ದಿನಿಂದಲೇ ನಮ್ಮ ಮಗ ಹಾಳಾಗಿ ಹೋಗ್ತಿರೋದು. ನಾನು ಬರೇ ಕೆಟ್ಟವ ಅಂತ ಮಗನ ತಲೆಗೆ ತುರುಕಲು ನೋಡ್ತಿದ್ದಾನೆ ಇವ. ನೀನು ಕೂಡಾ ಅಷ್ಟೆ. ದಿನೂ ದಿನೂ ಅಂತ ತಲೆ ಮೇಲೆ ಕೂರಿಸಿದ್ದಿ ಇವನನ್ನು. ಗಾರೆ ಕೆಲಸ ಮಾಡಿ ನಂಗಿಂತ ಹೆಚ್ಚು ಸಂಬಳ ತಗೊಳ್ತಾನೆ ಎಂಬುದು ಬಿಟ್ರೆ ಬೇರೆ ಯಾವ ಪ್ರಯೋಜನವುಂಟು ಇವನಿಂದ? ಇವನ ಸಂಬಳದ ಬಾಬ್ತಿಂದ ನಯಾಪೈಸೆ ಖರ್ಚಾದದ್ದುಂಟೋ ಈ ಮನೆಗೋಸ್ಕರ? ಈ ಕುಟುಂಬ ನಡೆಸ್ತಿರೋದು ನಾನಲ್ಲವಾ? ಹಾಗಿದ್ದೂ ನಂಗೆ ಎದುರಾಡೋದಾ?”

“ಇಲ್ಲಿ ಕೇಳಿ” ಪ್ರಿಯಾಳ ದನಿಯಲ್ಲಿ ಸಿಟ್ಟನ್ನು ಅದುಮಿ ಹಿಡಿದ ಗಾಂಭೀರ್ಯವಿತ್ತು “ನಿಮ್ಮ ಸ್ವಭಾವವೇ ಹಾಗೆ. ತಾನು ಹೇಳಿದ್ದೇ ಮಾತು. ಮಾಡಿದ್ದೇ ಸರಿ ಎಂಬ ಹಟ. ಹಾಗಿದ್ದ ಮೇಲೆ ಯಾರೇನು ಮಾಡೋದು ಬಂತು?”

“ನೋಡಿದ್ಯ? ನೀನು ಈಗಲೂ ಅವನ ಪರ. ನಿನಗಂತೂ ಅವ ಚೆನ್ನಾಗಿ ಮರುಳು ಮಾಡಿದ್ದಾನೆ. ಅಷ್ಟು ಮಾತ್ರವೋ ಅಥವಾ…”
“ಅಣ್ಣಾ” ಒಮ್ಮೆಲೆ ಏರಿಹೋಗುವವನಂತೆ ಮುಂದಕ್ಕೆ ಹಾಯ್ದ ದಿನೇಶ ಅಣ್ಣನನ್ನು ದುರುದುರು ನೋಡಿದ. ಆದರೆ ಲೋಕೇಶ ಅದನ್ನು ಗಮನಿಸದೆ ತುಟಿ ಸೊಟ್ಟಗೆ ಮಾಡಿ ‘ಹ್ಮ್’ ಎಂದು ಮುಖ ತಿರುವಿ ಕಾಲು ನೆಲಕ್ಕಪ್ಪಳಿಸುತ್ತಾ ಎತ್ತಲೋ ಹೊರಟು ಹೋದ.

ದಿನೇಶನ ಮನಸ್ಸು ಇದ್ದಕ್ಕಿದ್ದಂತೆ ಕತ್ತಲುಗೊಂಡು ಯೋಚನೆಗಳೆಲ್ಲ ಸ್ಥಗಿತವಾದವು. ತಲೆಯೊಳಗೆ ಭಾರವಾದ ದ್ರವ ತುಂಬಿಕೊಂಡಂತಾಗಿ ಕಣ್ಣು ಕತ್ತಲೆಗಟ್ಟಿತು. ಕೈಗೆ ಬೇರೇನೂ ಸಿಗದಿದ್ದುದಕ್ಕೆ ಕಿಟಿಕಿಯ ಸರಳು ಹಿಡಿದು ನಿಂತುಕೊಂಡ. ಪ್ರಿಯಾ ಗೋಡೆಗೆ ತಲೆ ಅನಿಸಿ ನಿಂತಿದ್ದಳು. ಅವನು ನೀರಿನಲ್ಲಿ ಮುಗ್ಗರಿಸುವವನಂತೆ, ಕತ್ತಲಲ್ಲಿ ತಡಕಾಡುವವನಂತೆ ಹೇಗೋ ಮುಂದೆ ನಡೆದು ಅವಳ ಹತ್ತಿರ ಬಂದ. ಆಕೆ ಅಳುವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಉಸಿರಿನಿಂದಲೇ ತಿಳಿಯುತ್ತಿತ್ತು.

“ಅತ್ತಿಗೇ ಇನ್ನು ಒಂದು ಕ್ಷಣವೂ ನಾನಿಲ್ಲಿರೋದಿಲ್ಲ”
ಎಂದು ಅವಳ ಹೆಗಲ ಮೇಲೆ ಕೈ ಇರಿಸಿ ಉಕ್ಕಿ ಬರುತ್ತಿರುವ ದುಃಖವನ್ನು ಅದುಮತೊಡಗಿದ. “ನಾನು ಇಲ್ಲಿಂದ ಹೋದರೆ ಎಲ್ಲ ಸರಿಯಾಗುವಂತಿದ್ರೆ…” ಎನ್ನುತ್ತಾ ಸ್ವಲ್ಪ ಹೊತ್ತು ಹಾಗೇ ನಿಂತ. ಅವಳಿಂದ ಯಾವ ಉತ್ತರವೂ ಬಾರದಿದ್ದುದರಿಂದ ಬಿರುಗಾಳಿಯಂತೆ ತನ್ನ ಕೋಣೆಗೆ ಧಾವಿಸಿ ಬ್ಯಾಗಿನೊಳಗೆ ಬಟ್ಟೆಬರೆಗಳನ್ನು ತುಂಬತೊಡಗಿದ.

“ಎಲ್ಲಿಗೆ?” ಅವಳು ಗಾಬರಿಪಟ್ಟು ಕೇಳಿದಳು.

“ನಾನೀಗ ಹೋಗಲೇಬೇಕು” ಏನೆನ್ನಬೇಕೆಂದು ತಿಳಿಯದವನಂತೆ ಅವನು ಅಸ್ಪಷ್ಟವಾಗಿ ಹೇಳಿದ. ಉಕ್ಕೇರಿದ ಕಡಲಿನಲ್ಲಿ ತೆರೆಗಳೊಂದಿಗೆ ಹೋರಾಡುತ್ತಾ ಏಟು ತಿಂದು ದಡಕ್ಕಪ್ಪಳಿಸಿ ಬಿದ್ದ ಕಟ್ಟಿಗೆಯ ತುಂಡಿನಂತೆ ಮನಸ್ಸು ಭಾವಶೂನ್ಯವಾಗಿದ್ದರೂ ಕಳೆಗುಂದಿದ ಮುಖದಲ್ಲಿ ನಿರ್ಧಾರದ ನೋಟವಿತ್ತು “ನಾವು ಬೇರೆಯಾಗಿದ್ರೇ ಒಳ್ಳೇದು ಅತ್ತಿಗೆ. ನಾನೊಮ್ಮೆ ಇಲ್ಲಿಂದ ಹೋಗಿಬಿಡ್ತೇನೆ. ಸದ್ಯಕ್ಕೆ ನನ್ನನ್ನು ಒಬ್ಬನೇ ಬಿಟ್ಟುಬಿಡು. ನನ್ನನ್ನು ನಿಜವಾಗಿ ಪ್ರೀತಿಸ್ತಿದ್ರೆ ದಯಮಾಡಿ ಬಿಟ್ಟುಬಿಡು”

“ದಿನೂ” ಅವಳು ಜೋರಾಗಿ ಕೂಗಿಕೊಂಡಳು. ಹಿಂಬಾಲಿಸಿ ಓಡಿ ಕೈ ಹಿಡಿದಳು. ಅವನು ಕತ್ತು ತಿರುವಿ ಬೇಸತ್ತ ನೋಟ ಬೀರುತ್ತಿದ್ದಂತೆ ಕಂಪಿಸುವ ಉಸಿರಿನೊಂದಿಗೆ ತಡೆತಡೆದು ಹೇಳಿದಳು “ಹೋಗ್ಬೇಡ ದಿನೂ. ಏನು ಹೇಳಬೇಕೆಂದರಿಯದೆ ಏನು ಮಾಡಬೇಕೆಂದು ಗೊತ್ತಾಗದೆ ನಾನು ಅವತ್ತೊಮ್ಮೆ ಏನೋ ಹೇಳಿದ್ದೆ. ಅದೆಲ್ಲವನ್ನು ಮನಸ್ಸಿಗೆ ಹಚ್ಕೊಂಡು… ಬೇಡ ದಿನೂ. ನಮ್ಮೊಟ್ಟಿಗೇ ಇದ್ದುಬಿಡೋ”

ದಿನೇಶನು ಅವಳ ಮುಖವನ್ನು ಬೊಗಸೆಯಲ್ಲಿ ಹಿಡಿದೆತ್ತಿದ. ಮುಚ್ಚಿದ ಕಣ್ಣುಗಳಿಂದ ಕಂಬನಿ ಉದುರುತ್ತಿರುವುದನ್ನು ಕಂಡು ತಡೆಯಲಾಗದೆ “ಅತ್ತಿಗೇ ನೀನು ನನ್ನ ಜೀವ. ಬಾ. ಅಪ್ಪುವನ್ನು ಎತ್ತಿಕೋ. ಎಲ್ಲಿಗಾದ್ರೂ ಹೋಗೋಣ ಇಲ್ಲಿಂದ” ಎಂದ. ಗಲ್ಲಿಗೇರಿಸುವವನು ಕಾಲಕೆಳಗಿನ ಹಲಗೆಯನ್ನು ಒದ್ದಾಗ ಫಕ್ಕನೆ ಕುತ್ತಿಗೆಯೇ ಹಾರಿ ಹೋದಂಥ ಅನುಭವವಾಯಿತು ಅವಳಿಗೆ “ಇಲ್ಲ. ಸಾಧ್ಯವಿಲ್ಲ”

“ಯಾಕೆ? ಯಾರಾದರೂ ಕಾಣುವ ಮುನ್ನ ಈಗಲೇ…”

“ಏನು ಹೇಳುತ್ತಿರುವೆ ದಿನೂ? ನಾನು ನಿನ್ನೊಂದಿಗೆ ಬಂದರೆ ಸುಖವಾಗಿ ಬದುಕಬಹುದು ಎಂದೆನಿಸುತ್ತದೆಯಾ? ಎಲ್ಲೇ ಹೋದರೂ ನಿನ್ನಣ್ಣ ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡುವನಾ? ಬೇಡ. ನನ್ನನ್ನು ಕಟ್ಕೊಂಡು ನೀನು ನರಕಕ್ಕೆ ಬೀಳ್ಬೇಡ”

“ಹಾಗಿದ್ರೆ ನಾನು…”

“ಹೋಗು ದಿನೂ. ಎಲ್ಲಾದ್ರೂ ಸುಖವಾಗಿರು. ನನ್ನನ್ನು ಮರೆತುಬಿಡು”
“ಹೇಗೆ ಮರೆಯಲಿ? ಮರೆಯೋದಿಲ್ಲ” ಎನ್ನುತ್ತಾ ವಿದಾಯದ ಮುತ್ತನ್ನು ಅವಳ ಹಣೆಗೆ ಒತ್ತುತ್ತಿದ್ದಂತೆ ಅವನ ಕಣ್ಣೂ ತುಂಬಿ ಬಂತು.

3

“ಅತ್ತಿಗೇ ಅಣ್ಣನ ಸುದ್ದಿಯೇನಾದ್ರೂ…”
ಚಹಾ ಕುಡಿಯುತ್ತಾ ದಿನೇಶ ಮಾತಿಗಾರಂಭಿಸಿದಾಗ ಪ್ರಿಯಾ ತುಟಿಯಂಚಿನಲ್ಲೇ ನೋವಿನಿಂದ ನಕ್ಕಳು.

“ಅಣ್ಣನ ವಿಷಯ ತುಂಬಾ ಹೇಳುವುದಕ್ಕಿದೆ ದಿನೂ. ನಿನ್ನ ಹತ್ರ ಅದನ್ನೆಲ್ಲ ಹೇಳೋದಕ್ಕೆ ನಂಗೇನೂ ನಾಚಿಕೆಯಿಲ್ಲ. ನಿನ್ನಲ್ಲಲ್ಲದೆ ಮತ್ತೆ ಯಾರ ಬಳಿ ಹೇಳ್ಬೇಕು ನಾನು?” ಅವಳ ಮುಂದಿನ ಮಾತಿಗೆ ಅದು ಪೀಠಿಕೆಯಾಯಿತು.

“ನೀನು ಮನೆಬಿಟ್ಟು ಹೋದ ನಂತರದ ದಿನಗಳು ದಿನ ನನ್ನ ಪಾಲಿಗೆ ನರಕವಾಗಿದ್ದವು. ದ್ವೇಷ ಬಲಿತು ಹುಚ್ಚು ಹಿಡಿದ ಕೊಲೆಗಾರನಂತೆ ಗಂಡ ದಿನಾ ಮೇಲೆರಗುತ್ತಿದ್ದ. ಏನಾದರಾಗಲಿ. ನಾನು ಸಾಯೋದಿಲ್ಲ. ಅಪ್ಪುವಿಗೋಸ್ಕರ ಜೀವ ಹಿಡಿದು ಬಾಳ್ತೇನೆ ಅಂತ ಗಟ್ಟಿ ಮಾಡ್ಕೊಂಡೆ. ‘ನೋಡು. ಇದು ಶರಣಾಗತಿ ಅಂತ ಭಾವಿಸ್ಬೇಡ. ಈ ರಾತ್ರಿ ನಿನ್ನದು ಮಾತ್ರ. ನಾನೇನು ಗೆಲ್ಲಬೇಕಿಲ್ಲ. ಆದರೆ ಸೋಲಿಸಲು ಬಿಡೋದಿಲ್ಲ. ನಿನ್ನ ಮೈಯಡಿಯಲ್ಲಿ ಬಿದ್ದು ಬಸವಳಿಯುತ್ತಿದ್ದ ಹಳೇ ಪ್ರಿಯಾಳನ್ನು ಮರೆತು ಬಿಡು. ನನ್ನ ಮೈ-ಮನಗಳನ್ನು ಅರ್ಥಮಾಡ್ಕೊಂಡು ಮುಟ್ಟಲು, ಪ್ರೀತಿಸಲು ಸಾಧ್ಯವಾಗದ ನಿಂಗ್ಯಾಕೆ ಈ ಆವೇಶ? ಪ್ರಾಣ ಇರೋವರೆಗೂ ನಿನ್ನವಳಾಗಲಾರೆ ಅಂತ ಗೊತ್ತಿದ್ದೂ ಸೋಲಿಸಲು ನೋಡೋದು ಯಾಕೆ?’ ಅಂತ ಕೇಳಿಯೇ ಬಿಟ್ಟೆ. ಒಂದು ಕ್ಷಣ ಅವನೇನೂ ಹೇಳಲಿಲ್ಲ. ಆದರೆ ಆವರೆಗೆ ಹೇಳದ, ಹೇಳಬಯಸಿದ ಏನೆಲ್ಲವನ್ನೋ ಹಲುಬಿದ. ಅದೇ ಕೊನೆ. ಆಮೇಲೆ ಅವನೊಮ್ಮೆಯೂ ನನ್ನನ್ನು ಮುಟ್ಟಲು ಬರ್ಲಿಲ್ಲ. ನಾನೂ ಅಷ್ಟೆ. ಇಲ್ಲಿರುವಷ್ಟು ದಿನ ಅವನ ಮುಸುಡಿಯನ್ನೂ ನೋಡ್ಲಿಲ್ಲ. ಹಾಗೊಂದು ದಿನ ಬೆಳಗ್ಗೆ ಲಾರಿ ಹತ್ತಿ ಹೋದ ಮನುಷ್ಯ ಇವತ್ತಿನವರೆಗೂ ಬರ್ಲಿಲ್ಲ. ದಿನಕಳೆದಂತೆ ಬದುಕು ಕಷ್ಟವೆನಿಸಿತು. ಹೊಟ್ಟೆಗೇನು ಹಾಕೋದು? ಅವತ್ತಿನ ಹಾಗೆ ಬರೇ ಬೀಡಿ ಕಟ್ಟಿದ್ರೆ ಸಾಕಾ? ತವರಿಗೆ ಹೋಗಲಾ? ಅಪ್ಪ ತೀರಿಕೊಂಡ ಮೇಲೆ ಯಾರಿದ್ದಾರೆ ಅಲ್ಲಿ? ಹಾಗಾಗಿ ಹಳ್ಳದ ಆಚೆ ಬದಿಯ ಹೆಂಗಸರನ್ನು ಕಂಡು ಕಷ್ಟ ಹೇಳ್ಕೊಂಡೆ. ಅವರು ನನ್ನನ್ನು ಉದ್ಯೋಗ ಖಾತರಿ ಯೋಜನೆಗೆ ಸೇರಿಸ್ಕೊಂಡ್ರು. ಕೂಲಿ ಕೆಲಸಕ್ಕೂ ಹೋದೆ. ಪಂಚಾಯತಿನಿಂದ ಸಬ್ಸಿಡಿ ಪಡೆದು ಈ ಮನೆಯಾಚೆ ಪಾಳು ಬಿದ್ದ ಗದ್ದೆಯಲ್ಲಿ ತರಕಾರಿ ಬೆಳೆಸಿದೆ. ಭಟ್ರ ಕೊಟ್ಟಿಗೆಯಿಂದ ಸಾಕಷ್ಟು ಸೆಗಣಿಯೂ ಗೋಣಿಗೆ ಮೂವತ್ತು ರೂಪಾಯಿಯಂತೆ ತೆಂಗಿನ ನಾರುಗಳೂ ಸಿಕ್ಕಿದವು. ನಾರನ್ನು ಸೆಗಣಿಯೊಂದಿಗೆ ಸೇರಿಸಿ ಕೊಳೆಯಿಸಿದಾಗ ಒಳ್ಳೆ ಗೊಬ್ಬರ ತಯಾರಾಯ್ತು. ಸಾಕಷ್ಟು ಬೆಳೆಯೂ ಬಂತು. ಅಂಗಡಿಗೆ ಹೋಗೋದರ ಬದಲು ಜನ ನನ್ನ ತರಕಾರಿಗಳನ್ನು ಕೊಂಡರು. ಹೆಚ್ಚೇನೂ ಖರ್ಚಿಲ್ಲದೆ ತಕ್ಕಮಟ್ಟಿನ ಲಾಭ ಬಂತು” ಎನ್ನುತ್ತಾ ಗೋಡೆಗೊರಗಿ ನಿಂತು ಯಾತನೆಯಿಂದ ಕಣ್ಣುಮುಚ್ಚಿಕೊಂಡಳು. ದಿನೇಶ ಕುಳಿತಲ್ಲೇ ಚಡಪಡಿಸುತ್ತಾ ಕಷ್ಟಪಟ್ಟು ಹೇಳಿದ.

“ಏನು ಆಗಬಾರದೆಂದು ಅಂದುಕೊಂಡೆವೋ ಅದೇ ಆಗಿಹೋಯ್ತು. ಛೆ! ನಂಗೆ ಇದೆಲ್ಲ ಗೊತ್ತಾಗುತ್ತಿದ್ರೆ…”
ಪ್ರಿಯಾಳ ತುಟಿಯಲ್ಲಿ ಕ್ಷೀಣ ನಗು ಮೂಡಿತು “ದಿನೂ ನಿನ್ನಲ್ಲೊಂದು ಮಾತು ಕೇಳ್ಬೇಕು” ಸಂಕೋಚದಿಂದ ತಡವರಿಸುತ್ತಾ ಆಕೆ ಕೇಳಿದಳು “ಇಲ್ಲಿಂದ ಹೋದ ಮೇಲೆ ನಿನಗೆ ಯಾವತ್ತಾದರೂ ನನ್ನ ನೆನಪಾಗ್ತಿತ್ತಾ? ನನ್ನ ಸ್ಥಿತಿಯ ಬಗ್ಗೆ ಚಿಂತಿಸಿದ್ದೆಯಾ? ಒಂದುವೇಳೆ ಚಿಂತಿಸಿದ್ದರೆ ಒಮ್ಮೆಯಾದ್ರೂ ಬರಲಿಲ್ಲವೇಕೆ?”
ದನಿ ನಿರ್ವಿಕಾರವಾಗಿದ್ದರೂ ಒಳಗೊಳಗೆ ಉಲ್ಬಣಗೊಂಡಿರಬಹುದಾದ ಕೋಪ ಅಥವಾ ಸಂಕಟವನ್ನು ತಡೆಹಿಡಿಯುವಂತೆ ತುಟಿಕಚ್ಚಿ ನಿಂತಿದ್ದ ಪ್ರಿಯಾ ಸುಡುತ್ತಾ ಮಿಡಿಯುತ್ತಿರುವ ತನ್ನ ಹೃದಯದೊಳಗಿನಿಂದ ನೀಳವಾದ ಉಸಿರೆಳೆದು ಮುಖವನ್ನು ಪಕ್ಕಕ್ಕೆ ತಿರುಗಿಸುತ್ತಿದ್ದಂತೆ ದಿನೇಶ ದುಃಖವನ್ನು ತಾಳಲಾರದೆ ಒಂದು ಸಲ ಬಿಕ್ಕಿ ಅಳುವನ್ನು ಹತ್ತಿಕ್ಕಿಕೊಂಡ.

“ಅತ್ತಿಗೇ ಕಣ್ಣಿನಿಂದ ದೂರವಾದವರು ಮನಸ್ಸಿನಿಂದಲೂ ದೂರವಾಗಬಹುದು ಅಂತ ಭಾವಿಸಿದೆ. ನೀವ್ಯಾರೂ ಕಣ್ಣಿಗೆ ಬೀಳದ ಜಾಗದಲ್ಲಿ ಒಬ್ಬನೇ ಬದುಕಹೊರಟೆ. ಮನಸ್ಸು ಬಿಗಿಹಿಡಿದು ನಿರಂತರ ದುಡಿವ ಮೂಲಕ ಎಲ್ಲವನ್ನೂ ಮರೆಯಬಹುದೆಂದುಕೊಂಡೆ. ಆದ್ರೆ ನೆನಪುಗಳು ಒಂದಿಷ್ಟೂ ದೂರವಾಗ್ಲಿಲ್ಲ. ಚಾಪೆಯ ಮೇಲೆ ಮೈಚಾಚಿ ಅದೆಷ್ಟು ಹೊತ್ತು ನಿನ್ನನ್ನೇ ನೆನೆಯುತ್ತಾ ಸಮಯ ಕಳೆದಿದ್ದೇನೋ ಗೊತ್ತಿಲ್ಲ. ಸಂಪಾದನೆಯೇನೋ ಆಗ್ತಿತ್ತು. ಆದ್ರೆ ನೀನಿಲ್ಲದ ಬದುಕು? ಒಮ್ಮೆಯಾದ್ರೂ ಕಾಣಲು ಸಾಧ್ಯವಾಗಿದ್ದರೆ ಅಂತ ಬಯಸದ ದಿನವಿಲ್ಲ. ಇಲ್ಲಿ ಫೋನ್ ಇರ್ತಿದ್ರೆ ಖಂಡಿತಾ ಕರೆ ಮಾಡ್ತಿದ್ದೆ. ಕಾಗದ ಬರೆದ್ರೆ ಅದೆಲ್ಲಿ ಅಣ್ಣನ ಕೈಗೆ ಸಿಕ್ಕು ಗಲಾಟೆಯಾದೀತೋ, ಆ ನೆಪದಲ್ಲಿ ಮತ್ತೆ ಯಾವ ದುರಂತ ನಿನ್ನ ಪಾಲಿಗೆ ಬಂದೀತೋ ಅಂತ ಸುಮ್ಮನಾದೆ. ಆದರೆ ನೀನು ಇಷ್ಟು ಕಷ್ಟ ಅನುಭವಿಸ್ತಿದ್ದಾಗ ಒಂದಿಷ್ಟೂ ಸಹಾಯ ಮಾಡಲಾಗದ್ದಕ್ಕೆ ನಂಗೆ ನನ್ನ ಮೇಲೇ ಎಷ್ಟು ಸಿಟ್ಟು ಬರ್ತಿದೆ ಅಂದ್ರೆ…”

ಎನ್ನುತ್ತಾ ಮೇಜಿನ ಮೇಲೆ ಎರಡೂ ಕೈಗಳನ್ನೂರಿ ತಲೆಕೆಳಗಿಟ್ಟು ಬೇಗುದಿಗೊಂಡ. ಮೌನವಾದ ಬಿಕ್ಕಳಿಕೆಗಳಿಂದ ಅವನ ಮೈಯಿಡೀ ನಡುಗತೊಡಗಿತು. ಪ್ರಿಯಾ ನಿಂತಲ್ಲಿಂದಲೇ ಕೈಚಾಚಿ ಅವನ ತಲೆ, ಕತ್ತು ಬೆನ್ನುಗಳನ್ನು ಸವರುತ್ತಾ ಹೇಳಿದಳು “ಪರ್ವಾಗಿಲ್ಲ ದಿನೂ ಆದ್ದರಿಂದಲೇ ಅಲ್ವಾ ನಾನು ಬದುಕಲು ಕಲಿತದ್ದು?”


ದಿನೇಶ ತಲೆಯೆತ್ತಿದಾಗ ಇಬ್ಬರ ಕಣ್ಣುಗಳೂ ಒಂದಾದವು. ಅವನು ಪ್ರಿಯಾಳನ್ನು ಎವೆಯಿಕ್ಕದೆ ನೋಡಿದ. ಆ ವಯಸ್ಸಿಗೇ ಆಕೆ ನಡುಹರಯವನ್ನು ಸಮೀಪಿಸಿದಂತಿದ್ದಳು. ತೊಟ್ಟ ರವಿಕೆಯ ಬಣ್ಣ ಮಾಸಿತ್ತು. ಒಗೆದೂ ಒಗೆದು ಕಂದುಬಣ್ಣಕ್ಕೆ ತಿರುಗಿದ ಸೀರೆಯ ಮೇಲೆ ಮಸಿಯ ಕಲೆಗಳಿದ್ದವು. ದೇಹ ತೆಳ್ಳಗಾಗಿತ್ತು. ಕೆನ್ನೆ ತುಸು ಒಳಸರಿದಿತ್ತು. ಕೊರಳ ಕೆಳಗಿನ ಮೂಳೆಗಳು ಎದ್ದು ಕಾಣುತ್ತಿದ್ದವು. ತೋಳುಗಳು ಜೋತು ಬಿದ್ದಿದ್ದವು. ಉಬ್ಬಿದೆದೆ ಮಟ್ಟಸವಾಗಿತ್ತು. ದಿನೇಶ ಎದ್ದು ಮುಂದೆ ಬಂದು ಅವಳ ಕೈ ಹಿಡಿದ. ಇಬ್ಬರೂ ಮಾತಿಲ್ಲದೆ ಪರಸ್ಪರ ನೋಡುತ್ತಾ ನಿಂತಾಗ ತನ್ನ ನರನಾಡಿಗಳೊಳಗೆ ಬೆಚ್ಚಗಿನ ಶಾಖ ಹರಿದಾಡುತ್ತಿರುವುದು ಅವಳ ಅರಿವಿಗೆ ಬಂತು. ತುಸು ಹೊತ್ತಿನ ಮೌನದ ಬಳಿಕ ದಿನೇಶ ಕೇಳಿದ್ದು ಒಂದೇ ಮಾತು “ಅತ್ತಿಗೇ… ನಾಳೆಯಿಂದ ನಾನು ಇಲ್ಲೇ ನಿನ್ನ ಜೊತೆಗಿರಲಾ? ಹೇಳು ಅತ್ತಿಗೆ, ಇನ್ನಾದರೂ ನಾವು ಒಟ್ಟಿಗೆ ಇರೋಣವಾ?”