ಯಶಸ್ಸಿನ ಮೆಟ್ಟಿಲು ಏರುತ್ತ ಹೋಗುವುದು ಎಷ್ಟೊಂದು ಸಂತಸದ ವಿಷಯ. ಆದರೆ ಇಷ್ಟೊಂದು ಮೆಟ್ಟಿಲು ಹತ್ತಿ ತಾನು ಒಂಟಿಯಾಗಿ ಬಿಟ್ಟಿರುವೆ ಎಂಬ ವಿಚಾರ ತುತ್ತತುದಿಯ ಮೆಟ್ಟಿಲನ್ನು ತಲುಪಿದ ಮೇಲೆಯೇ ಗೊತ್ತಾಗುವುದು. ಹಾಗಾಗಿ ಯಶಸ್ಸಿನ ಪರಿಕಲ್ಪನೆಗಳು, ವ್ಯಾಖ್ಯೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಜೀವನದ ಇಂತಹ ಸಂದಿಗ್ಧ ಎಳೆಗಳನ್ನು ಹಿಡಿದು, ನವಿರು ವಿಶ್ಲೇಷಣೆಯ ಜೊತೆಗೆ ಕೆನಡಾದಲ್ಲಿರುವ ಕನ್ನಡದ ಲೇಖಕ ಪ್ರಶಾಂತ್ ಬೀಚಿ ಅವರು ಹದಿನೈದು ದಿನಗಳಿಗೊಮ್ಮೆ ಶನಿವಾರಗಳಂದು ಕೆಂಡಸಂಪಿಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತ್ ಅವರಿಗೆ ಕೆಂಡಸಂಪಿಗೆ ಬಳಗಕ್ಕೆ ಮರಳಿ ಸ್ವಾಗತ.
ವಯಸ್ಸು ಮತ್ತು ಹುಮ್ಮಸ್ಸಿನಲ್ಲಿ ಗೆಲುವೊಂದೆ ಗುರಿ. ಜೀವನದ ಅನೇಕ ಪಾಠಗಳು ನಾವು ಕಲಿಯುವ ಹೊತ್ತಿಗೆ ಕಲಿಯಬೇಕಾದ ವಯಸ್ಸನ್ನು ಮೀರಿರುತ್ತೇವೆ. ನಂತರ ಮುಂದಿನ ಪೀಳಿಗೆಗೆ ಅದರ ಪಾಠವನ್ನು ಹೇಳುತ್ತಾ ನಮ್ಮ ಹಿರಿತನವನ್ನು ಮೆರೆಯುತ್ತೇವೆ. ಮನುಷ್ಯನ ಜೀವನವೆ ಹೀಗೆ. ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿಯಾಗಿ, ಉಳಿದೆಲ್ಲಾ ಪ್ರಾಣಿಗಳಿಗಿಂತ ಕಡೆ ಎಂದು ತಿಳಿದಾಗಲೆ ಮನುಷ್ಯನಿಗೆ ಬುದ್ಧಿ ಬಂದಿದೆ ಎಂದು ತಿಳಿಯುವುದು.
ಹಣದ ಹಿಂದೆ ಬಿದ್ದು ಗುಣವನ್ನು ಕಳೆದುಕೊಂಡ ಮೇಲೆ ಹಣದಿಂದ ಗುಣ ಸಂಪಾದಿಸಲಾಗುವುದಿಲ್ಲ ಎಂದು ತಿಳಿಯುವ ಹೊತ್ತಿಗೆ ಹಣ ಮಾತ್ರ ಇರುತ್ತದೆ. ಹೀಗೆ ಇತ್ತೀಚಿಗೆ ಕೆಲವು ಸ್ನೇಹಿತರ ಕಥೆಗಳನ್ನು ಕೇಳಿ ಸ್ವಗತದ ಚಿಂತನೆ ಕೂಡ ನೆಡೆಯಿತು.
ಶಾಸ್ತ್ರಿ ನನ್ನ ಚಡ್ಡಿ ದೋಸ್ತ್, ಹಾಗಾಗಿ ನಾನು ಅವನು ಜೊತೆ ಜೊತೆಗೆ ಓದಿದ್ದು ಎನ್ನುವ ಉಪಮೇಯದ ಅವಶ್ಯಕತೆ ಇಲ್ಲ, ನಮ್ಮ ಜೊತೆಗಾರಿಕೆ ಪ್ಯಾಂಟ್ ಹಾಕಿದಮೇಲೂ ಮುಂದುವರೆದಿತ್ತು. ಓದಿನಲ್ಲಿ ಬಹಳ ಬುದ್ಧಿವಂತ, ಬ್ರಾಹ್ಮಣ ಆಗಿದ್ದರಿಂದಲೋ ಏನೋ ವಿದ್ಯೆ ಅವನನ್ನು ಹಿಂಬಾಲಿಸಿಕೊಂಡು ಬಂದಿತ್ತು. ಒಟ್ಟಿಗೆ ಓದುತ್ತಿದ್ದೆವು, ಒಟ್ಟಿಗೆ ಆಡುತ್ತಿದ್ದೆವು, ಆದರೂ ಅವನ ಅಂಕಗಳಿಗೂ ನನ್ನ ಅಂಕಗಳಿಗೂ ಶೂದ್ರ ಬ್ರಾಹ್ಮಣರ ವ್ಯತ್ಯಾಸ. ಬಹಳ ಆತ್ಮೀಯ ಗೆಳೆಯರಾಗಿದ್ದ ನಮಗೆ ಜಾತಿಯ ಪರಿವೆ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ನಮಗಿದ್ದ ಬುದ್ಧಿ ನಾಗರೀಕ ಸಮಾಜದವರಿಗೆ ಇರಲಿಲ್ಲ ಎಂದು ಈಗ ತಿಳಿಯುತ್ತಿದೆ.
ಓದಿನಲ್ಲಿ ಬಹಳ ಮುಂದಿದ್ದ ಶಾಸ್ತ್ರಿ ಉತ್ತಮ ಅಂಕಗಳನ್ನು ಪಡೆದುಕೊಂಡು ಉನ್ನತ ಶಿಕ್ಷಣ ಪಡೆಯಲು ಜಿಲ್ಲಾ ಕೇಂದ್ರಕ್ಕೆ ಹೋದ, ನಂತರ ಇಂಜಿನಿಯರಿಂಗ್ ಕೂಡ ಒಳ್ಳೆಯ ಕಾಲೇಜಿನಲ್ಲಿ ಉತ್ತಮ ಅಂಕದೊಂದಿಗೆ ಪಾಸಾದ. ತೊಂಬತ್ತರ ದಶಕದಲ್ಲಿ ಆಗತಾನೆ ಬೆಳೆಯುತ್ತಿದ್ದ ಸಾಫ಼್ಟ್ವೇರ್ ಕಂಪೆನಿಯಲ್ಲಿ ಸೇರಿಕೊಂಡ. ನೋಡು ನೋಡುತ್ತಿದ್ದಂತೆ ಅವನ ಗಳಿಕೆ ವಯಸ್ಸಿಗೆ ಮೀರಿದ್ದಾಗಿತ್ತು. ಅವರ ಅಪ್ಪ ರಿಟೈರ್ಮೆಂಟ್ ಆಗುವ ವಯಸ್ಸಿನಲ್ಲಿ ಪಡೆಯುತ್ತಿದ್ದ ಸಂಬಳಕ್ಕಿಂತ ಇವನ ಕೆಲಸಕ್ಕೆ ಸೇರಿದಾಗಿದ್ದ ಸಂಬಳ ಜಾಸ್ತಿ ಇತ್ತು. ನರಸಿಂಹ ಸ್ವಾಮಿ ಶಾಸ್ತ್ರಿಗಳಿಗೆ ತಮ್ಮ ಮಗನ ಗಳಿಕೆಯ ಬಗ್ಗೆ ಹೆಮ್ಮೆಗಿಂತ ಅಹಂಕಾರ ಜಾಸ್ತಿ ಇತ್ತು. ಅವರ ವಾರಿಗೆಯವರ ಹತ್ತಿರ ಮಕ್ಕಳ ಬಗ್ಗೆ ಕೇಳುತ್ತಾ ತಮ್ಮ ಮಗನ ಹಿರಿಮೆಯನ್ನು ಹಾಡಿ ಹೊಗಳುತ್ತಿದ್ದರು, ಎದುರಿಗಿರುವವರಿಗೆ ಅವಮಾನವಾಗುವ ರೀತಿ ತಮ್ಮ ಮಗನನ್ನು ಬೇರೆಯವರ ಮಕ್ಕಳಿಗೆ ಹೋಲಿಸಿ ಮಾತನಾಡುತ್ತಿದ್ದರೆ, ಮಾತಿಗಿಂತ ಉಗುಳೆ ಜಾಸ್ತಿ ಇರುತ್ತಿತ್ತು.
ಜೀವನದ ಅನೇಕ ಪಾಠಗಳು ನಾವು ಕಲಿಯುವ ಹೊತ್ತಿಗೆ ಕಲಿಯಬೇಕಾದ ವಯಸ್ಸನ್ನು ಮೀರಿರುತ್ತೇವೆ. ನಂತರ ಮುಂದಿನ ಪೀಳಿಗೆಗೆ ಅದರ ಪಾಠವನ್ನು ಹೇಳುತ್ತಾ ನಮ್ಮ ಹಿರಿತನವನ್ನು ಮೆರೆಯುತ್ತೇವೆ. ಮನುಷ್ಯನ ಜೀವನವೆ ಹೀಗೆ.
ತಾವು ರಿಟೈರ್ಮೆಂಟ್ ಆಗುವ ಮೊದಲೆ ತಮ್ಮ ಮಗಳನ್ನು ಹೊರದೇಶದಲ್ಲಿದ್ದ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದರು. ಮಗ ಹೊರದೇಶದಲ್ಲೊಂದಷ್ಟು ದಿನ ಮತ್ತು ಭಾರತದಲ್ಲೊಂದಷ್ಟು ದಿನ ಕೆಲಸ ಮಾಡುತ್ತಿದ್ದ. ನರಸಿಂಹ ಸ್ವಾಮಿಗಳಿಗೆ ರೆಟೈರ್ಮೆಂಟ್ ಆಗುವ ಹೊತ್ತಿಗೆ, ನನ್ನ ಗೆಳೆಯ ಶಾಸ್ತ್ರಿಗೆ ಮದ್ವೆ ಆಗಿ ಹತ್ತು ವರ್ಷ ಆಗಿತ್ತು. ಅವನ ಮಗ ಬೆಂಗಳೂರಿನ ಪ್ರತಿಷ್ಟಿತ ಶಾಲೆಯಲ್ಲಿ ಎರಡನೆ ಕ್ಲಾಸ್. ನರಸಿಂಹ ಸ್ವಾಮಿಗಳಿಗೆ ಈ ಹೊತ್ತಿಗೆ ಅಹಂಕಾರ ಇಳಿದಿತ್ತು. ವಯಸ್ಸು ಮತ್ತು ಜೀವನ ಅವರಿಗೆ ಅನೇಕ ಪಾಠವನ್ನು ಕಲಿಸಾಗಿತ್ತು. ಮಗಳು ಅಮೇರಿಕಾಗೆ ಹೋದಮೇಲೆ ತನ್ನದೇ ಸಂಸಾರದಲ್ಲಿ ಕಳೆದುಹೋಗಿದ್ದಳು. ಮಗ ಶಾಸ್ತ್ರಿಯ ಮದುವೆ ಬಹಳ ಜೋರಾಗಿ ಮಾಡಿದ್ದರು. ಬೀಗರ ಮನಯವರು ಗಟ್ಟಿಯಾಗಿದ್ದರಿಂದ ಅಳಿಯನಿಗೆ ಸಕಲ ಮರ್ಯಾದೆಗಳನ್ನು ಮಾಡಿ ತಮ್ಮಕಡೆ ಮಾಡಿಕೊಂಡಿದ್ದರು. ನರಸಿಂಹ ಸ್ವಾಮಿ ಮಗನ ಮನೆಗೆ ಎಂದು ಬೆಂಗಳೂರಿಗೆ ಹೋದರೂ ಅಲ್ಲಿ ನೆಮ್ಮದಿ ಇರಲಿಲ್ಲ. ಲೋಕದ ನಿಯಮದಂತೆ ಸೊಸೆ ಮತ್ತು ಅತ್ತೆಗೆ ಆಗಿಬರುತ್ತಿರಲಿಲ್ಲ. ಮಗ ಕೂಡ ಹೆಂಡತಿಯ ಕಡೆ ಇದ್ದುದರಿಂದ ನರಸಿಂಹ ಸ್ವಾಮಿ ದಂಪತಿಗಳಿಗೆ ಯಾವುದೇ ಸಂತಸವಿರಲಿಲ್ಲ. ಆಪ್ಪ ಅಮ್ಮರನ್ನು ನೋಡಿಕೊಳ್ಳಬೇಕು ಎಂದು ಆಸೆ ಆದರೂ ತನ್ನ ಹೆಂಡತಿಯ ನಡುವಳಿಕೆ ಮತ್ತು ತನ್ನದೆ ಕೆಲವು ನಿರ್ಲಕ್ಷ್ಯಗಳಿಂದ ಆಗುತ್ತಿರಲಿಲ್ಲ. ಇಂತಹ ಸಂದಿಗ್ಧತೆಯಲ್ಲಿ ನರಸಿಂಹ ಸ್ವಾಮಿಗಳು ಮತ್ತು ಅವರ ಪತ್ನಿ ಬೆಂಗಳೂರಿಂದ ವಾಪಸ್ಸಾಗಿ ಊರಿನಲ್ಲಿದ್ದ ತಮ್ಮ ಸ್ವಂತ ಮನೆಗೆ ಹಿಂತಿರುಗಿದ್ದರು.
ವಿದೇಶದಲ್ಲಿರುವ ಮಗಳು, ನಗರದಲ್ಲಿರುವ ಮಗ ಇಬ್ಬರೂ ಹಣದ ಕೊಪ್ಪರಿಕೆ ಮೇಲೆ ಕೂತಿದ್ದಾರೆ, ಅಪ್ಪ ಅಮ್ಮನಿಗೆ ಬೇಕಾದ ವಸ್ತುಗಳನ್ನು ಖರೀದಿಸಿ ಕಳಿಸುತ್ತಾರೆ, ಯಾವುದೇ ಪದಾರ್ಥಗಳಿಗೆ ಕೊರತೆ ಇಲ್ಲದಂತೆ ಅನುಕೂಲ ಮಾಡಿಕೊಟ್ಟಿದ್ದಾರೆ ಆದರೆ ಆಪ್ತವಾಗಿ ಮಾತಾಡಲು ಮಕ್ಕಳು ಜೊತೆಗಿಲ್ಲ, ತಮ್ಮ ಸಂಕಟವನ್ನು ಬೇರೆಯವರೊಡನೆ ಹಂಚಿಕೊಳ್ಳಲು ಹಿಂದೆ ಕೊಚ್ಚಿಕೊಂಡ ಜಂಬ ಬಿಡುತ್ತಿಲ್ಲ. ಬೇರೆಯವರ ಕಣ್ಣಿಗೆ ಸುಖವೆನ್ನಿಸಿದರೂ ತಮ್ಮ ದುಃಖವನ್ನು ದೂರಮಾಡುವ ಶಕ್ತಿ ಹಣಕ್ಕಿಲ್ಲ ಎಂದು ಅರಿವಾಗಿತ್ತು. ಅದೆ ಕೊರಗಿನಲ್ಲಿ ದಂಪತಿಗಳು ಅಕಾಲವಾದರು.
ಈಗ ಶಾಸ್ತ್ರಿಗೆ ಯಾವುದೋ ಪಾಪ ಪ್ರಜ್ಞೆ. ತಾನು ಹಣದ ಹಿಂದೆ ಬಿದ್ದು ಸಂಪಾದಿಸಿದ ಯಾವುದೇ ವಸ್ತು ಅವನನ್ನು ಪಾಪ ಪ್ರಜ್ಞೆಯಿಂದ ದೂರಮಾಡದು. ಚಿಕ್ಕವನಿದ್ದಾಗ ಅವರ ಅಪ್ಪ ತಟ್ಟಿ ಮಲಗಿಸುತ್ತಿದ್ದುದು, ದಾರಿಯಲ್ಲಿ ನೆಡೆದು ಸುಸ್ತಾದಾಗ ಭುಜದ ಮೇಲೆ ಕೂರಿಸಿಕೊಂಡಿದ್ದು, ಅವರಿಗಿದ್ದ ಸವೆದ ಚಪ್ಪಲಿ ಬದಲಿಸದೆ ಮಗನಿಗೆ ಶೂ ಕೊಡಿಸಿದ್ದು ಇವೆಲ್ಲ ಹೇಳಿಕೊಳ್ಳಲು ಒಂದೆರಡು ಸಂಗತಿಗಳು. ಇದ್ಯಾವುದಕ್ಕೂ ಪ್ರತಿಯಾಗಿ ತಾನೇನು ಮಾಡಲಿಲ್ಲ ಎನ್ನುವ ಕೊರಗು ಇನ್ನು ಮುಂದಿನ ಜೀವನದಲ್ಲಿ ಕಾಡುತ್ತದೆ ಎಂದು ಗೊತ್ತಿತ್ತು. ಹಣ ಮಾಡುವ ಭರದಲ್ಲಿ, ಯಶಸ್ಸು ಗಳಿಸುವ ಉತ್ಸಾಹದಲ್ಲಿ, ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಯ ಕಾಣಿಸಿರಲೇ ಇಲ್ಲ. ಮುಂದೆ ಇರುವ ಒಬ್ಬನೆ ಮಗ ಹೀಗೆ ಮಾಡಿದರೆ ಹೇಗೆ ಬದುಕುವುದು ಎನ್ನುವ ಕೊರಗು ಕಾಣುತ್ತಿದೆ. ಈಗಲೂ ತನ್ನ ಅಪ್ಪನ ನೋವಿಗಿಂತ, ಮುಂದೆ ತನಗೆ ಎದುರಾಗಬಹುದಾದ ನೋವೆ ಅವನಿಗೆ ಜಾಸ್ತಿ.
ಇದೇ ರೀತಿಯ ಕಥೆಗಳನ್ನು, ಯುವಕರಾಗಿ ವಿದೇಶಕ್ಕೆ ಹೋಗಿ ಈಗ ಮಧ್ಯವಯಸ್ಕರಾಗಿರುವ ಅಥವ ಹಿರಿಯ ನಾಗರೀಕರಾಗಿರುವವರಿಂದ ಕೇಳಿಬರುತ್ತದೆ. ಹುಡುಕಾಟ, ಗಳಿಕೆ, ಯಶಸ್ಸು, ಜೀವನದ ಮೆಟ್ಟಿಲುಗಳು ಆದನ್ನು ಹತ್ತುವಾಗ ಕಳೆದುಕೊಳ್ಳುವ ಯಾವುದೂ ಮೆಟ್ಟಿಲುಗಳನ್ನು ಹತ್ತಿದ ಮೇಲೆ ಪಡೆದುಕೊಳ್ಳಲಾಗದು ಎನ್ನುವ ಸಣ್ಣ ಸುಳಿವು ಅರಿವಿಗೆ ಬರುವುದಿಲ್ಲ. ಎಲ್ಲರ ಜೊತೆಜೊತೆಗೆ ಹಾಕುವ ನಾಲ್ಕು ಹೆಜ್ಜೆ, ಎಲ್ಲರನ್ನು ಬಿಟ್ಟು ಹೋಗುವ ನಾಲ್ಕು ಸಾವಿರ ಹೆಜ್ಜೆಗಿಂತ ಉತ್ತಮವೆನಿಸುವುದರೊಳಗೆ ನಾಲ್ಕು ಲಕ್ಷ ಹೆಜ್ಜೆ ಹೋಗಿರುತ್ತೇವೆ. ಆದಕ್ಕೆಂದೆ ಅಡಿಗರು ಬರೆದಿದ್ದು ‘ಯಾವ ಮೋಹನ ಮುರಳಿ ಕರೆಯಿತೋ…ʼ ಎಂದು.
ಪ್ರಶಾಂತ್ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.
Interesting read Prashant… eager for next writing ?
ನಮ್ಮ ಜನರಿಗೆ ಪಾಶ್ಚಿಮಾತ್ಯ ದೇಶಗಳ ಆಕರ್ಷಣೆ ಹಾಗೂ ಸೆಳೆತ ಯಾವ ಕಾಲದಿಂದಲೂ ಇರುವಂತಹುದು. ತಂದೆ-ತಾಯಿಯರಿಗೆ ಮಕ್ಕಳು ಹೊರದೇಶದಲ್ಲಿರುವುದು ಬಹಳ ಹೆಮ್ಮೆಯ ಸಂಗತಿ, ಮಕ್ಕಳಿಗೂ ಅಷ್ಟೇ ಹತ್ತು ಹಲವಾರು ಕಾರಣಗಳಿಗೆ ವಿದೇಶ ಮೋಹ. ಕೈ ತುಂಬಾ ಸಂಪಾದಿಸುವ ಮಕ್ಕಳು ನಿಮ್ಮ ಬರಹದಲ್ಲಿ ತಿಳಿಸಿದಂತೆ ಅಪ್ಪ-ಅಮ್ಮಂದಿರಿಗೆ ಬಹಳ ವಸ್ತು ಸೌಕರ್ಯವನ್ನ ಒದಗಿಸಿಕೊಡುತ್ತಾರೆ. ಆದರೆ ಇಳಿವಯಸ್ಸಿನಲ್ಲಿ ಮಕ್ಕಳೇ ಸಾಂಗತ್ಯಕ್ಕೆ ಹಪಹಪಿಸುತ್ತಾರೆ. ಇಂದಿನ ವಾಸ್ತವವಾದ ಕೋವಿಡ್ ಪಿಡುಗಿನ ಶೋಚನೀಯ ಪರಿಸ್ಥಿತಿಯ ಕಾಲಕ್ಕೆ ಬಹಳ ಸಮಯೋಚಿತವಾದ ಲೇಖನ. ಹೆಮ್ಮೆ, ಹಿರಿಮೆಯೇ ಕೊನೆಗೆ ಕಾಡುವ ಚಿತ್ರವನ್ನ ಎಳೆ ಎಳೆಯಾಗಿ ನಮ್ಮ ಮುಂದಿಟ್ಟಿರುವಿರಿ. ತಂದೆ-ತಾಯಂದಿರ ಮರಣದ ಸಮಯದಲ್ಲಿಅರಳಿ, ಮರಣಾನಂತರ ಮಕ್ಕಳಾಗಿ ಮಾಡುವೆ ಕೊನೆಯ ಕರ್ತವ್ಯಕ್ಕೂ ಬರಲಾಗದ ಪರಿಸ್ಥಿತಿಯಿಂದ ಮಕ್ಕಳು ಕೂಡ ದುಃಖತಪ್ತರಾಗಿದ್ದಾರೆ.