ಅವರ ಹೆಜ್ಜೆ ಶಬ್ದ ಕೇಳದೆ ಎಲ್ಲವೂ ಶಾಂತವಾಗುವವರೆಗೆ ಕಾದ. ಆಮೇಲೆ ಮಿಟ್ಕಾ ನಿಕೊಲಾಯ್ ಇಬ್ಬರೂ ಕೆಳಗೆ ಮಕ್ಕಳ ಹಾಗೆ ಜಗಳವಾಡುತ್ತಿರುವಾಗ ಬಹಳ ಶಾಂತಚಿತ್ತನಾಗಿ, ಆರಾಮವಾಗಿ ನಡೆದುಕೊಂಡು ಗೇಟು ದಾಟಿ ಹೋದ. ಯಾರಾದರೂ ಅವನನ್ನ ನೋಡಿರಬಹುದು. ಆದರೆ ಗಮನ ಕೊಡಲಿಲ್ಲ. ಬಹಳ ಜನ ಓಡಾಡತಾ ಇದ್ದರು. ಅವನು ಖಾಲಿ ಮನೆಯಲ್ಲಿ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡಿದ್ದಾಗ ವಡವೆ ಡಬ್ಬಿ ಅವನ ಜೇಬಿನಿಂದ ಜಾರಿ ಬಾಗಿಲ ಹಿಂದೆ ಮೂಲೆಯಲ್ಲಿ ಬಿದ್ದಿರಬೇಕು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ನಾಲ್ಕನೆಯ ಅಧ್ಯಾಯ

 

ಝೋಸ್ಸಿಮೋವ್ ಎತ್ತರವಾದ ದಪ್ಪ ಮೈಯವನು. ಬಣ್ಣ ಮಾಸಿದ ಬಟ್ಟೆಯಂಥ ಮುಖದವನು. ನುಣ್ಣಗೆ ಕ್ಷೌರಮಾಡಿಕೊಂಡ ಮುಖದ, ಉದ್ದ ನೆಟ್ಟನೆ ಕೂದಲಿನ ತಲೆಯವನು. ಕೊಬ್ಬಿ ಊದಿಕೊಂಡ ಬೆರಳಿಗೆ ಬಂಗಾರದ ಉಂಗುರ ತೊಟ್ಟಿದ್ದ. ಅವನಿಗೆ ಸುಮಾರು ಇಪ್ಪತ್ತೇಳು ವರ್ಷವಾಗಿತ್ತು. ಶೋಕಿಲಾಲರು ಬೇಸಗೆಯಲ್ಲಿ ತೊಡುವಂಥ ಸಡಿಲ ಕೋಟು ತೊಟ್ಟಿದ್ದ. ಎಲ್ಲವೂ ಹೊಚ್ಚ ಹೊಸವು. ಒಟ್ಟಾಗಿ ಹೇಳಬೇಕೆಂದರೆ ಅವನ ಉಡುಪು, ಅಲಂಕಾರ ಎಲ್ಲವೂ ಸಡಿಲವಾಗಿ, ಮೋಜುಗಾರರಿಗೆ ಹೇಳಿಮಾಡಿಸಿದ ಹಾಗಿದ್ದವು. ಅಂಗಿಯ ಮೇಲೆ ಒಂದೇ ಒಂದು ಕಣ ಧೂಳೂ ಇರಲಿಲ್ಲ. ಅವನ ಗಡಿಯಾರದ ಸರಪಳಿ ತುಂಬ ದಪ್ಪವಾಗಿತ್ತು. ತೀರ ಜಡಪ್ರಕೃತಿಯವನ ಹಾಗೆ ಅವನ ಚಲನವಲನ. ‘ಎಲ್ಲವನ್ನೂ ಸಾವಕಾಶವಾಗಿ ಮಾಡುವಂಥ ಸಾಮಾನ್ಯ ಮನುಷ್ಯ ನಾನು,’ ಅನ್ನುವ ಹಾಗೆ ಇರುತ್ತಿದ್ದ.

ಕಷ್ಟಪಟ್ಟು ಬೆಳೆಸಿಕೊಂಡ ಈ ತೋರಿಕೆಯ ಹಿಂದೆ ಅಹಂಕಾರದ ಬಡಿವಾರ ಕ್ಷಣಕ್ಷಣವೂ ಇಣುಕುತ್ತಿತ್ತು. ಅವನನ್ನು ಒಪ್ಪಿಸುವುದು ಎಷ್ಟು ಕಷ್ಟವೆನ್ನುವುದು ಅವನನ್ನು ಬಲ್ಲವರಿಗೆಲ್ಲ ತಿಳಿದಿತ್ತು. ಹಾಗಿದ್ದರೂ ಕಸುಬು ಬಲ್ಲ ಡಾಕ್ಟರು ಅನ್ನುವ ಹೆಸರಿತ್ತು.

‘ನಿಮ್ಮ ಮನೆಗೆ ಎರಡು ಸಾರಿ ಬಂದಿದ್ದೆ, ಬ್ರದರ್. ಪರಿಸ್ಥಿತಿ ಹೇಗಾಗಿದೆ ನೋಡಿ!’ ಅಂದ ರಝುಮಿಖಿನ್.

‘ನೋಡತೇನೆ, ನೋಡತೇನೆ. ಹೇಗಿದ್ದೀಯಾ ಈಗ?’

ರಾಸ್ಕೋಲ್ನಿಕೋವ್‍ ನನ್ನು ಗಮನವಿಟ್ಟು ನೋಡುತ್ತ, ರಾಸ್ಕೋಲ್ನಿಕೋವ್‍ ನ ಕಾಲ ಬಳಿ ಸೋಫಾದ ಮೇಲೆ ಸಾಧ್ಯವಾದಷ್ಟೂ ಆರಾಮವಾಗಿ ಕೂರುತ್ತ ಝೋಸ್ಸಿಮೋವ್ ಕೇಳಿದ.

‘ಇನ್ನೂ ಮುನಿಸಿಕೊಂಡೇ ಇದಾನೆ. ಅವನ ಅಂಗಿ ಬದಲಾಯಿಸುವುದಕ್ಕೆ ನೋಡಿದೆವು. ಅಳುವುದಕ್ಕೇ ಶುರುಮಾಡಿದ,’ ಅಂದ ರಝುಮಿಖಿನ್.

‘ಅರ್ಥ ಆಗತ್ತೆ. ಅವನಿಗೆ ಬೇಡದೆ ಇದ್ದರೆ ಶರ್ಟು ಬದಲಾಯಿಸುವುದಕ್ಕೆ ಯಾಕೆ ಹೋದಿರಿ… ಪಲ್ಸು ಚೆನ್ನಾಗಿದೆ. ಸ್ವಲ್ಪ ತಲೆನೋವು ಇದೆ, ಅಲ್ಲವಾ?’

‘ನಾನು ಚೆನ್ನಾಗಿದೇನೆ, ಪೂರಾ ಹುಷಾರಾಗಿದೇನೆ,’ ಸಿಡುಕಿನಲ್ಲಿ ಒತ್ತಿ ಹೇಳುವ ಹಾಗೆ ರಾಸ್ಕೋಲ್ನಿಕೋವ್ ಮಾತಾಡಿದ. ಸೋಫಾದ ಮೇಲೆ ತಟಕ್ಕನೆ ಎದ್ದು ಕೂತ. ಝೋಸ್ಸಿಮೋವ್ ಲಕ್ಷ್ಯವಿಟ್ಟು ನೋಡುತ್ತಿದ್ದ.

‘ವೆರಿ ಗುಡ್… ಎಲ್ಲಾ ಸರಿಯಾಗಿದೇ…’ ಸಾವಕಾಶವಾಗಿ ಹೇಳಿದ. ‘ಹೊಟ್ಟೆಗೆ ಏನಾದರೂ ತೆಗೆದುಕೊಂಡನಾ?’ ಎಂದು ಕೇಳಿದ.
ಏನು ತಿಂದ ಅನ್ನುವುದನ್ನು ಹೇಳಿದರು. ಏನು ಕೊಡಬಹುದು ಎಂದು ಕೇಳಿದರು.

‘ಸೂಪು, ಟೀ… ಏನು ಬೇಕಾದರೂ ಕೊಡಿ. ಪಥ್ಯ ಏನಿಲ್ಲ. ಮಾಮೂಲಾಗಿ ಅಣಬೆ, ಸೌತೆಕಾಯಿ ಬೇಡ ಅಷ್ಟೆ. ಬೀಫ್ ಕೂಡ ಬೇಕಾಗಿಲ್ಲ… ಮತ್ತೆ, ಇನ್ನೇನಿಲ್ಲ…’ ಅನ್ನುತ್ತ ರಝುಮಿಖಿನ್‍ ನನ್ನು ನೋಡಿದ. ‘ಇನ್ನೇನೂ ಔಷಧಿ ಬೇಕಾಗಿಲ್ಲ. ನಾಳೆ ಬಂದು ನೋಡತೇನೆ, ಸಾಧ್ಯವಾದರೆ ಇವತ್ತೇ ಇನ್ನೊಂದು ಸಾರಿ ಬರತೇನೆ,’ ಅಂದ.

‘ನಾಳೆ ಸಾಯಂಕಾಲ ಇವನನ್ನ ಹೊರಗೆ ಸುತ್ತಾಡುವುದಕ್ಕೆ ಕರಕೊಂಡು ಹೋಗತೇನೆ. ಯೂಸುಪೋವ್ ಗಾರ್ಡನ್ನಿಗೆ ಆಮೇಲೆ ಕ್ರಿಸ್ಟಲ್ ಪ್ಯಾಲೇಸಿಗೆ,’ ರಝುಮಿಖಿನ್ ನಿರ್ಧಾರದ ದನಿಯಲ್ಲಿ ಹೇಳಿದ.

‘ನಾನಾಗಿದ್ದರೆ ಅವನು ಒಂದು ಇಂಚು ನಡೆದಾಡುವುದಕ್ಕೂ ಬಿಡತಾ ಇರಲಿಲ್ಲ. ಹ್ಞೂಂ… ಸ್ವಲ್ಪ ಸ್ವಲ್ಪ ಓಡಾಡಿದರೆ ಆದೀತು,’ ಅಂದ ಝೋಸ್ಸಿಮೊವ್.

‘ಛೇ, ಛೇ… ಹೀಗಾಗಬಾರದಾಗಿತ್ತು. ಇವತ್ತು ರಾತ್ರಿ ನಾವು ಹೊಸಮನೆಗೆ ಒಕ್ಕಲಾಗತಿದೇವೆ. ಇಲ್ಲೇ, ಎರಡೇ ಹೆಜ್ಜೆ. ಇವನೂ ಬಂದಿದ್ದರೆ ಚೆನ್ನಾಗಿರುತಿತ್ತು. ಕೊನೆ ಪಕ್ಷ ನಮ್ಮ ಮನೆಯಲ್ಲಿ ಸೋಫಾ ಮೇಲೆ ಸುಮ್ಮನೆ ಮಲಗಿದ್ದರೂ ಸಾಕು. ಮತ್ತೆ, ನೀವು? ನೀವು ಬರುತ್ತೀರಿ ಅಲ್ಲವಾ ಡಾಕ್ಟರೇ, ಮರೆಯಬೇಡಿ, ಮಾತು ಕೊಟ್ಟಿದ್ದೀರಿ,’ ಅಂದ ರಝುಮಿಖಿನ್.

‘ಸ್ವಲ್ಪ ಲೇಟಾಗಬಹುದು. ಏನು ಪ್ಲಾನು ಮಾಡಿದೀರಿ?’ ಝೋಸ್ಸಿಮೋವ್ ಕೇಳಿದ.

‘ವಿಶೇಷ ಏನಿಲ್ಲ, ಟೀ, ವೋಡ್ಕಾ, ಪಿಕಲ್ಡ್ ಹೆರಿಂಗ್, ಆಮೇಲೆ ಪೈ, ಸ್ನೇಹಿತರನ್ನ ಮಾತ್ರ ಕರೆದಿದ್ದೇವೆ.’

‘ಅಂದರೆ? ಯಾರು ಯಾರು ಬರತಾ ಇದ್ದಾರೆ?’

‘ಎಲ್ಲಾ ಇದೇ ಏರಿಐಾದವರು. ನಿಜ ಹೇಳಬೇಕೆಂದರೆ ಎಲ್ಲರೂ ಹೊಸ ಸ್ನೇಹಿತರು. ನಮ್ಮ ಚಿಕ್ಕಪ್ಪ ಮಾತ್ರ ಹಳಬ. ನಿನ್ನೆ ತಾನೇ ಏನೋ ಕೆಲಸದ ಮೇಲೆ ಪೀಟರ್ಸ್‍ಬರ್ಗ್‍ ಗೆ ಬಂದ. ನಾವೂ ಒಬ್ಬರ ಮುಖ ಒಬ್ಬರು ನೋಡುವುದು ಐದು ವರ್ಷಕ್ಕೆ ಒಂದು ಸಾರಿ.’

‘ಏನು ಮಾಡತಾರೆ ಅವರು?’

‘ನಮ್ಮ ಚಿಕ್ಕಪ್ಪ ಹಳ್ಳಿಯ ಪೋಸ್ಟ್ ಮಾಸ್ಟರ್ ಆಗಿದ್ದುಕೊಂಡು ಇಡೀ ಜೀವನ ಹಳ್ಳಿಯಲ್ಲೇ ಕಳೆದರು. ಈಗ ಏನೋ ಒಂದಿಷ್ಟು ಪೆನ್ಶನ್ ಬರತ್ತೆ. ಅರುವತ್ತೈದು ವರ್ಷ. ಹೇಳಿಕೊಳ್ಳುವಂಥ ವಿಶೇಷ ಏನಿಲ್ಲ. ಆದರೂ ಚಿಕ್ಕಪ್ಪನ ಮೇಲೆ ನನಗೆ ತುಂಬ ಪ್ರೀತಿ. ಆಮೇಲೆ ಫೋರ್ಫಿರಿ ಪೆಟ್ರೋವಿಚ್ ಇರತಾರೆ. ಅದೇ ನಮ್ಮ ಏರಿಯದ ಪೋಲೀಸ್ ಇನ್ಸ್ಪೆಕ್ಟರು, ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟು. ಲಾಯರು. ನಿಮಗೆ ಗೊತ್ತಿರಬಹುದು ಅವರು.’

‘ಅವರೂ ನಿಮ್ಮ ನೆಂಟರಾ?’

‘ಬಹಳ ದೂರದ ಸಂಬಂಧ. ಮುಖ ಸಿಂಡರಿಸುತ್ತಿದ್ದೀರಲ್ಲ, ಯಾಕೆ? ಓಹೋ, ನೀವು ಅವರ ಜೊತೆ ಒಂದು ಸಾರಿ ಜಗಳ ಆಡಿದೀರಿ ಅಂತ ಕಾಣತ್ತೆ. ಹಾಗಾದರೆ ಬರಲ್ಲವಾ ನೀವು?’

‘ಅವನನ್ನ ಕಟ್ಟಿಕೊಂಡು ನನಗೇನಾಗಬೇಕು, ಸಾಯಲಿ…’

‘ಸರಿ ಹಾಗಾದರೆ. ಕೆಲವು ಸ್ಟೂಡೆಂಟುಗಳು, ಒಬ್ಬ ಮೇಷ್ಟರು, ಒಬ್ಬ ಸಂಗೀತಗಾರ, ಒಬ್ಬ ಸಿವಿಲ್ ಸರ್ವೆಂಟು, ಪೋಲೀಸ್‍ಸ್ಟೇಶನ್ನಿನ ಗುಮಾಸ್ತ ಝಮ್ಯತೋವ್…’

‘ಪ್ಲೀಸ್, ದಯವಿಟ್ಟು ಹೇಳು. ನಿನಗಾಗಲೀ ಅಥವಾ,’ ರಾಸ್ಕೋಲ್ನಿಕೋವ್ ದಿಕ್ಕಿನಲ್ಲಿ ತಲೆ ತೂಗುತ್ತ, ‘ಅವನಿಗಾಗಲೀ ಝಮ್ಯತೋವ್ ಥರದವನ ಜೊತೆಯಲ್ಲಿ ಸ್ನೇಹ ಹೇಗೆ ಸಾಧ್ಯ?’

ಓ, ಈ ಜನ ಏನು ರೇಗತಾರಪ್ಪ! ತತ್ವ, ಸಿದ್ಧಾಂತ!… ಸ್ಪ್ರಿಂಗಿನ ಮೇಲೆ ನಿಂತ ಬೊಂಬೆಗಳ ಥರ ನೀವು ನಿಮ್ಮ ತತ್ವಕ್ಕೆ ಅಂಟಿಕೊಂಡಿರತೀರಿ. ಸ್ವತಃ ಒಂದಿಂಚು ಕೂಡ ಅತ್ತ ಇತ್ತ ಅಲ್ಲಾಡುವವರಲ್ಲ. ನನ್ನ ಕೇಳಿದರೆ, ಮನುಷ್ಯ ಒಳ್ಳೆಯವನಾ ಅನ್ನುವುದೊಂದೇ ತತ್ವ, ಸಿದ್ಧಾಂತ. ಅದಕ್ಕಿಂತ ಜಾಸ್ತಿ ನನಗಿನ್ನೇನೂ ಬೇಕಾಗಿಲ್ಲ. ಝಮ್ಯತೋವ್ ಅದ್ಭುತವಾದ ಮನುಷ್ಯ, ಒಳ್ಳೆಯವನು.’

‘ದುಡ್ಡು ನೋಡಿದರೆ ಅವನ ಕೈ ಕಡಿಯತ್ತೆ.’

‘ಅದಕ್ಕೇನಂತೆ! ಕಟ್ಟಿಕೊಂಡು ನನಗೇನಾಗಬೇಕು? ಯಾರಿಗೇನಾಗಬೇಕು?’ ರಝುಮಿಖಿನ್ ಇದ್ದಕ್ಕಿದ್ದ ಹಾಗೆ ಅಸಹಜವಾಗಿ ಕೋಪಗೊಂಡಿದ್ದ. ‘ಕೈ ಕಡಿಯುವುದು, ಲಂಚ ತಗೊಳ್ಳುವುದು ಒಳ್ಳೆಯದು ಅಂದೆನಾ ನಾನು? ಅವನ ಥರದಲ್ಲಿ ಅವನು ಒಳ್ಳೆಯ ಮನುಷ್ಯ ಅಂದೆ. ಬರೀ ತತ್ವ, ಸಿದ್ಧಾಂತ ಅಂತ ಕೂತರೆ ಒಳ್ಳೆಯವರು ಎಷ್ಟು ಜನ ಸಿಗುತ್ತಾರೆ? ಉಹ್ಞೂಂ, ಒಬ್ಬರೂ ಸಿಗಲ್ಲ. ಹೊಟ್ಟೆ, ಕರುಳು, ರಕ್ತ, ಮಾಂಸ ಎಲ್ಲ ಇರುವ ನಾನು ಕೂಡ ಒಂದು ಬೇಯಿಸಿದ ಈರುಳ್ಳಿಯಷ್ಟು ಬೆಲೆಬಾಳಲ್ಲ. ಬೇಯಿಸಿದ ಈರುಳ್ಳಿ ಬೇಕಾದರೆ ನನ್ನ ಜೊತೆ ನಿಮ್ಮನ್ನೂ ಸೇರಿಸಿ ಮಾರಬೇಕು.’

‘ಕಡಮೆಯಾಯಿತು. ನಾನು ನಿನಗೆ ಎರಡು ಈರುಳ್ಳಿ ಬೆಲೆ ಕಟ್ಟತೇನೆ.’

‘ನಿಮಗೆ ನಾನು ಕೊಡುವುದು ಒಂದೇನೇ… ನೋಡಿ ಈ ಜಾಣರನ್ನ! ಝಮ್ಯತೋವ್ ಇನ್ನೂ ಹುಡುಗ, ಯುವಕ. ಅವನಿಗೆ ಬೈದು ಬುದ್ಧಿ ಹೇಳಬಹುದು. ಅವನನ್ನ ನಮ್ಮವನಾಗಿ ಮಾಡಿಕೊಳ್ಳಬೇಕೇ ಹೊರತು ದೂರ ತಳ್ಳಬಾರದು. ದೂರ ತಳ್ಳಿದರೆ ಯಾರನ್ನೂ ಒಳ್ಳೆಯವರಾಗಿ ಮಾಡುವುದಕ್ಕೆ ಆಗಲ್ಲ. ಅದರಲ್ಲೂ ಹುಡುಗರಾಗಿದ್ದರೆ ಎರಡರಷ್ಟು ಎಚ್ಚರ ಇರಬೇಕು. ನೀವೆಲ್ಲ ಪ್ರಗತಿಪರ ಪೆದ್ದರು, ನಿಮಗೆ ಏನೂ ಅರ್ಥ ಆಗಲ್ಲ! ಬೇರೆಯ ಮನುಷ್ಯರಿಗೆ ಅವಮಾನ ಮಾಡಿದರೆ ಹಾಳಾಗುವವರು ನೀವೇನೇ. ನಿಮಗೆ ನಿಜ ಹೇಳಬೇಕು ನಾನು ಮತ್ತೆ ಝಮ್ಯತೋವ್ ಒಂದು ಕೇಸಿನಲ್ಲಿ ಒಟ್ಟಿಗೆ ಕೆಲಸ ಮಾಡತಾ ಇದೇವೆ…’

‘ಯಾವ ಕೇಸು…’

‘ಅದೇ, ಮನೆಗೆ ಬಣ್ಣ ಬಳಿಯುವವನ ಕೇಸು. ಅಂದರೆ, ನಾವು ಅವನನ್ನ ಜೈಲಿನಿಂದ ಬಿಡಿಸತೇವೆ! ಬಿಡುಗಡೆ ಆಯಿತು ಅಂತಲೇ ಲೆಕ್ಕ. ಸ್ವಲ್ಪ ಉರಿ ಹೆಚ್ಚು ಮಾಡಿದರೆ ಬೇಳೆ ಬೆಂದು ಬಿಡತ್ತೆ.’

‘ಬಣ್ಣ ಬಳಿಯುವವನ ಕೇಸು? ಏನದು?’

‘ಹೇಳಲಿಲ್ಲವಾ ನಿಮಗೆ ನಾನು? ನಿಜವಾಗಲೂ? ಹೌದು…. ಮುದುಕಿಯ ಕೊಲೆಯಾಯಿತಲ್ಲ, ಅದೇ, ಗಿರವಿ ಇಟ್ಟುಕೊಂಡು ಸಾಲ ಕೊಡುತಿದ್ದ ಮುದುಕಿ, ಅವಳ ಗಂಡ ಆಫೀರಾಗಿದ್ದ, ಸತ್ತು ಹೋದ… ಆ ಕೊಲೆ ಕೇಸಿನಲ್ಲಿ ಈ ಬಣ್ಣ ಬಳಿಯುವವನು ಸಿಕ್ಕಿಬಿದ್ದಿದಾನೆ ಈಗ.’

‘ನೀನು ಹೇಳುವುದಕ್ಕೂ ಮೊದಲೇ ಕೊಲೆ ಸುದ್ದಿ ಕಿವಿಗೆ ಬಿದ್ದಿತ್ತು. ಪೇಪರಿನಲ್ಲೂ ಓದಿದೆ. ಈ ಕೇಸಿನಲ್ಲಿ ನನಗೂ ಬೇರೆ ಕಾರಣಕ್ಕೆ ಕುತೂಹಲ ಇದೆ…’

‘ಲಿಝಾವೆಟಳನ್ನ ಕೂಡ ಕೊಂದು ಹಾಕಿದರು,’ ನಸ್ತಾಸ್ಯಾ ತಟ್ಟನೆ ರಾಸ್ಕೋಲ್ನಿಕೋವ್‍ ಗೆ ಹೇಳಿದಳು. ಅವಳಿನ್ನೂ ಬಾಗಿಲಿಗೆ ಒತ್ತಿ ನಿಂತು ಎಲ್ಲರ ಮಾತನ್ನೂ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದಳು.

‘ಲಿಝವೆಟ?’ ಯಾರಿಗೂ ಕೇಳಿಸದಷ್ಟು ಕ್ಷೀಣ ದನಿಯಲ್ಲಿ ರಾಸ್ಕೋಲ್ನಿಕೋವ್ ಗೊಣಗಿಕೊಂಡ.

‘ಲಿಝಾವೆಟಾ. ಅದೇ, ಹಳೆ ವಸ್ತುಗಳನ್ನು ಮಾರಾಟಮಾಡಿಕೊಡತಾ ಇದ್ದಳು… ಆವಾಗಾವಾಗ ಕೆಳಗಡೆ ಮನೆಗೆ ಬರತಾ ಇದ್ದಳು… ಒಂದು ಸಾರಿ ನಿನ್ನ ಅಂಗಿಗೆ ಕೂಡ ಹೊಲಿಗೆ ಹಾಕಿಕೊಟ್ಟಿದ್ದಳು.’

ರಾಸ್ಕೋಲ್ನಿಕೋವ್ ಗೋಡೆಯ ಕಡೆ ತಿರುಗಿದ. ಕೊಳಕಾದ ಹಳದಿಯ ವಾಲ್ ಪೇಪರಿನ ಮೇಲೆ ಇದ್ದ ಪುಟ್ಟ ಹೂಗಳನ್ನು ನೋಡಿದ. ಕಂದು ಗೆರೆಗಳಿದ್ದ ಬಿಳಿಯ ಹೂವೊಂದನ್ನು ಆರಿಸಿಕೊಂಡು ಅದಕ್ಕೆ ಎಷ್ಟು ದಳ ಇವೆ, ಎಂಥ ಥರದ ದಳ ಇವೆ, ಎಷ್ಟು ಎಲೆಗಳಿವೆ, ಎಲೆಗಳ ಮೇಲೆ ಎಷ್ಟು ಗೆರೆಗಳಿವೆ, ಸಣ್ಣಗೆರೆ ಎಷ್ಟಿವೆ ಎಣಿಸುವುದಕ್ಕೆ ಶುರುಮಾಡಿದ. ಅವನ ಕೈ, ಕಾಲು ಆಡಿಸುವುದಕ್ಕೇ ಆಗದಷ್ಟು ಜಡವಾಗಿದ್ದವು—ಪಾರ್ಶವಾಯುವಿಗೆ ತುತ್ತಾದ ಹಾಗೆ. ಅವನು ಅಲುಗಾಡುವ ಪ್ರಯತ್ನ ಕೂಡ ಮಾಡಲಿಲ್ಲ. ಹೂವನ್ನೇ ದುರುದುರು ನೋಡುತ್ತ ಇದ್ದುಬಿಟ್ಟ.

‘ಬಣ್ಣ ಬಳಿಯುವವನ ವಿಚಾರ ಏನು?’ ಝೋಸ್ಸಿಮೋವ್ ಮದ್ಯೆ ಬಾಯಿ ಹಾಕಿದ. ನಸ್ತಾಸ್ಯಳ ಬಡಬಡಿಕೆಯಿಂದ ಅವನಿಗೆ ಕಿರಿಕಿರಿಯಾಗಿತ್ತು. ನಿಟ್ಟುಸಿರು ಬಿಟ್ಟು ಸುಮ್ಮನಾದಳು ನಸ್ತಾಸ್ಯ.

‘ಅವನೂ ಕೊಲೆಗಾರ ಇರಬಹುದು ಅನ್ನುತಿದ್ದಾರೆ!’ ರಝುಮಿಖಿನ್ ಉತ್ಸಾಹದಿಂದ ಹೇಳಿದ.

‘ಅದಕ್ಕೆ ಸಾಕ್ಷಿ ಏನಾದರೂ ಸಿಕ್ಕಿದೆಯಾ?’

‘ಸಾಕ್ಷಿಯನ್ನ ದೆವ್ವಾ ಹಿಡಿಯಲಿ! ಅವರಿಗೆ ಸಿಕ್ಕಿರುವ ಸಾಕ್ಷಿ ಸಾಕ್ಷಿಯೇ ಅಲ್ಲ. ಅದನ್ನ ನಾವು ತೋರಿಸಿಕೊಟ್ಟರೆ ಸಾಕು. ಯಾರನ್ನೋ ಹಿಡಿದರಲ್ಲಾ, ಏನವರ ಹೆಸರು, ಕೋಚ್ ಒಬ್ಬ, ಪೆಸ್ಟ್ರ್ಯಕೋವ್ ಇನ್ನೊಬ್ಬ, ಅವರ ಮೇಲೆ ಪೋಲೀಸರಿಗೆ ಮೊದಲು ಸಂಶಯ ಹುಟ್ಟಿತ್ತು. ಕೇಸು ಆಗ ಎಲ್ಲಿತ್ತೋ ಈಗಲೂ ಅಲ್ಲೇ ಇದೆ. ಥೂ. ಎಷ್ಟು ಪೆದ್ದು ಪೆದ್ದಾಗಿ ಕೆಲಸ ಮಾಡತಾರೆ ಈ ಪೋಲೀಸಿನವರು! ಅಸಹ್ಯ ಆಗತ್ತೆ… ಪೆಸ್ಟ್ರ್ತಕೋವ್ ಇವತ್ತು ನಮ್ಮನೆಗೆ ಬಂದರೂ ಬರಬಹುದು… ಅಂದ ಹಾಗೆ, ರೋದ್ಯಾ, ನಿನಗೆ ಕತೆ ಗೊತ್ತಾ? ನಿನಗೆ ಕಾಯಿಲೆ ಶುರುವಾಗುವುದಕ್ಕೆ ಮೊದಲು ಈ ಕತೆ ನಡೆಯಿತು. ಆಫೀಸಿನಲ್ಲಿ ಅವರು ಈ ವಿಚಾರ ಮಾತಾಡತಿದ್ದಾಗ ನೀನು ಎಚ್ಚರ ತಪ್ಪಿ ಬಿದ್ದೆಯಂತಲ್ಲ, ಸರಿಯಾಗಿ ಅದಕ್ಕೆ ಒಂದು ದಿನ ಮೊದಲು…’

ಝೋಸ್ಸಿಮೋವ್ ಕುತೂಹಲದಿಂದ ರಾಸ್ಕೋಲ್ನಿಕೋವ್ ಕಡೆ ನೋಡಿದ. ರಾಸ್ಕೋಲ್ನಿಕೋವ್ ಅಲ್ಲಾಡಲಿಲ್ಲ.

‘ರಝುಮಿಖಿನ್ . ನೀನು ದೊಡ್ಡ ತಲೆಹರಟೆ, ನೋಡಿದರೇ ಗೊತ್ತಾಗತ್ತೆ!’ ಅಂದ ಝೋಸ್ಸಿಮೊವ್.

‘ಇರಬಹುದು. ನಾವು ಅವನನ್ನ ಬಿಡಿಸೇ ಬಿಡಿಸತೇವೆ,’ ರಝುಮಿಖಿನ್ ಜೋರಾಗಿ ಚೀರುತ್ತ ಮುಷ್ಟಿ ಕಟ್ಟಿ ಟೇಬಲ್ಲಿನ ಮೇಲೆ ಗುದ್ದಿದ. ‘ನನಗೆ ಸಿಟ್ಟು ಬರುವುದು ಯಾಕೆ ಗೊತ್ತಾ? ಅವರು ಸುಳ್ಳು ಹೇಳತಾರೆ ಅಂತಲ್ಲ. ಸುಳ್ಳನ್ನ ಕ್ಷಮಿಸಬಹುದು. ಸುಳ್ಳು ಹೇಳುವುದು ಒಳ್ಳೆಯದು ಕೂಡ, ಯಾರಾದರೂ ಹೇಳುವ ಸುಳ್ಳುಗಳನ್ನಿಟ್ಟುಕೊಂಡೇ ಸತ್ಯವನ್ನ ಪತ್ತೆಹಚ್ಚಬಹುದು. ಫೋರ್ಫಿರಿ ಬಗ್ಗೆ ನನಗೆ ಗೌರವ ಇದೆ… ಅವರು ಮೊದಲು ದಾರಿ ತಪ್ಪಿದ್ದು ಎಲ್ಲಿ ಅಂತ ಗೊತ್ತಾ? ಮೊದಲು ಬಾಗಿಲ ಚಿಲಕ ಒಳಗಿನಿಂದ ಹಾಕಿತ್ತು. ವಾಚ್‍ಮ್ಯಾನು ಬಂದಾಗ ಬಾಗಿಲು ತೆರೆದಿತ್ತು. ಅಂದರೆ ಕೋಚ್ ಮತ್ತೆ ಪೆಟ್ರ್ಯಕೋವ್ ಕೊಲೆಮಾಡಿದ್ದಾರೆ. ಇದು ಪೋಲೀಸಿನವರ ತರ್ಕ.’

‘ಅಷ್ಟೊಂದು ಕೆರಳಬೇಕಾಗಿಲ್ಲ. ಅವರನ್ನ ಸಂಶಯದ ಮೇಲೆ ಸುಮ್ಮನೆ ಬಂಧಿಸಿದ್ದಾರೆ… ಅದರರ್ಥ… ಅವರು ಅಪರಾಧಿಗಳು ಅಂತಲ್ಲ. ಅಂದಹಾಗೆ ಈ ಕೋಚ್ ಅನ್ನುವ ಮನುಷ್ಯನನ್ನ ಒಂದೆರಡು ಸಾರಿ ನೋಡಿದೇನೆ. ಗಿರವಿ ಇಟ್ಟು ವಾಯಿದೆ ಮೀರಿದ ವಸ್ತುಗಳನ್ನ ಅವನು ಮುದುಕಿಯಿಂದ ಖರೀದಿ ಮಾಡತಿದ್ದ, ಅಲ್ಲವಾ?’

‘ಹೌದು, ಟೋಪಿ ಹಾಕುವವನು! ಪ್ರಾಮಿಸರಿ ನೋಟುಗಳನ್ನೂ ಖರೀದಿ ಮಾಡತಿದ್ದ. ಕಳ್ಳ ವ್ಯಾಪಾರಿ. ದೆವ್ವ ಹಿಡಿಯಲಿ ಅವನನ್ನ! ನನಗೆ ಸಿಟ್ಟು ಬರುವುದು ಯಾಕೆ ಗೊತ್ತಾ? ಅವರು ತನಿಖೆ ಮಾಡುವ ರೀತಿ ನೋಡಿದರೆ ಕೋಪ ಬರತ್ತೆ. ಹಳಸಿ ಹೋದ ತನಿಖೆಯ ರೀತಿ ಅದು… ಇಲ್ಲಿ, ಈ ಒಂದು ಕೇಸಿನಲ್ಲಿ, ಹೊಸ ಪದ್ಧತಿ ಶುರುಮಾಡುವ ಅವಕಾಶ ಇದೆ. ಮನಸ್ಸಿನ ಸಂಗತಿಗಳ ಪುರಾವೆ ಇಟ್ಟುಕೊಂಡು ಸರಿಯಾದ ದಾರಿಯಲ್ಲಿ ಹೋಗುವುದು ಹೇಗೆ ಅನ್ನುವುದನ್ನ ಈ ಕೇಸಿನಲ್ಲಿ ತೋರಿಸಬಹುದು. ಸತ್ಯವಾದ ಪುರಾವೆಗಳು ಸಿಕ್ಕಿವೆ ಅನ್ನತಾರೆ. ಪುರಾವೆಗಳೇ ಎಲ್ಲಾನೂ ಅಲ್ಲ. ಪುರಾವೆ ಇಟ್ಟುಕೊಂಡು ಏನು ಮಾಡಬೇಕು ಅದು ಗೊತ್ತಿದ್ದರೆ ಅರ್ಧ ಆಟ ಗೆದ್ದ ಹಾಗೆ.

‘ಪುರಾವೆಗಳನ್ನು ಬಳಸುವುದು ಹೇಗೆ, ನಿನಗೆ ಗೊತ್ತೋ?’

‘ಗೊತ್ತು. ಕೇಸಿನಲ್ಲಿ ಸಹಾಯ ಮಾಡಬಹುದು ಅನ್ನುವುದು ಗೊತ್ತಿದ್ದರೂ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರುವುದು ಕಷ್ಟ. ಕೇಸಿನ ವಿವರ ನಿಮಗೆ ಗೊತ್ತೋ?’

‘ಬಣ್ಣ ಬಳಿಯುವವನ ಕತೆ ಕೇಳಿಲ್ಲ, ಇನ್ನೂ ಕಾಯ್ತಾ ಇದೇನೆ.’

‘ಹ್ಞಾ, ಎಲ್ಲಿದ್ದೆ ನಾನು!… ಸರಿ, ಕೇಳಿ. ಕೊಲೆಯಾಗಿ ಸರಿಯಾಗಿ ಮೂರು ದಿನ ಆದಮೇಲೆ. ಕೋಚ್ ಮತ್ತೆ ಪೆಸ್ಟ್ರಕೋವ್‍ ತಮ್ಮ ಒಂದೊಂದೂ ಹೆಜ್ಜೆಯನ್ನು ಕುರುಡರಿಗೂ ಕಾಣಿಸುವಷ್ಟು ವಿವಿರವಾಗಿ ತಿಳಿಸಿದರು. ಆಮೇಲೂ ಇನ್ನೂ ಅವರಿಗೆ ಪೋಲೀಸ್ ಟ್ರೀಟ್‍ಮೆಂಟು ಕೊಡುತಿದ್ದರಲ್ಲಾ, ಆಗ ಊಹೆ ಮಾಡಿರದಂಥ ವಿಷಯ ಗೊತ್ತಾಯಿತು. ದುಷ್ಕಿನ್ ಅಂತ, ಯಾರೋ ರೈತ, ಕೊಲೆಯಾದ ಮನೆಯ ಬೀದಿಯಲ್ಲೇ ಎದುರುಗಡೆ ಹೆಂಡದಂಗಡಿ ಇಟ್ಟುಕೊಂಡಿದಾನೆ. ಅವನು ಅವತ್ತು ಬೆಳಗ್ಗೆ ಪೋಲೀಸಿನವರ ಹತ್ತಿರ ಬಂದ. ವಡವೆ ಬಾಕ್ಸು ತಂದಿದ್ದ. ಅದರಲ್ಲಿ ಬಂಗಾರದ ಇಯರ್ ರಿಂಗ್ ಇದ್ದವು. ಅವನು ಹೇಳಿದ್ದೆಲ್ಲ ನಡೆದದ್ದು ಅವತ್ತೇ, ಕೊಲೆಯಾದ ದಿನ, ಸುಮಾರಾಗಿ ಅದೇ ಹೊತ್ತಿನಲ್ಲಿ.

ದುಷ್ಕಿನ್ ಹೇಳಿದ: ‘ಮೊನ್ನೆ ಸಾಯಂಕಾಲ… ಸುಮಾರು ಎಂಟು ಗಂಟೆಯ ಹೊತ್ತಿನಲ್ಲಿ’ ಒಬ್ಬ ಕೆಲಸಗಾರ, ಅವನ ಹೆಸರು ನಿಕೊಲಾಯ್, ಬಣ್ಣ ಬಳಿಯುವವನು, ಓಡಿಕೊಂಡು ಬಂದ, ಹರಳು ಕೂಡಿಸಿರುವ ಬಂಗಾರದ ಇಯರ್ ರಿಂಗು ಇದ್ದ ಇದೇ ಬಾಕ್ಸನ್ನು ನನಗೆ ಕೊಟ್ಟ, ಅವನ್ನ ಗಿರವಿ ಇಡಬೇಕು, ರಿಂಗು ಇಟ್ಟುಕೊಂಡು ಎರಡು ರೂಬಲ್ ಕೊಡಿ ಅಂದ, ಎಲ್ಲಿ ಸಿಕ್ಕಿದವು ಅಂತ ಕೇಳಿದೆ. ಫುಟ್‍ಪಾತಿನ ಮೇಲೆ ಅಂದ. ಅವನನ್ನ ಜಾಸ್ತಿ ಪ್ರಶ್ನೆ ಕೇಳಲಿಲ್ಲ. ಒಂದು ರೂಬಲ್ ಕೊಟ್ಟು ವಡವೆ ತಗೊಂಡೆ. ನಾನು ತಗೊಳ್ಳದೆ ಇದ್ದರೆ ಬೇರೆಯವರ ಹತ್ತಿರ ಹೋಗಿ ಗಿರವಿ ಇಡತಾನೆ. ನಾನು ಎಷ್ಟು ಕೊಟ್ಟರೂ ಒಂದೇ, ಹೋಗಿ ಕುಡಿತಾನೆ. ಬೇರೆಯವರ ಹತ್ತಿರ ಗಿರವಿ ಇಡುವ ಬದಲು ನನ್ನ ಹತ್ತಿರವೇ ಇಡಲಿ, ಬಚ್ಚಿಟ್ಟಿರತೇನೆ, ಏನಾದರೂ ತೊಂದರೆ ಬಂದು ಜನ ಆಡಿಕೊಂಡರೆ ವಡವೆ ತಗೊಂಡು ಸೀದಾ ಪೋಲೀಸಿನವರ ಹತ್ತಿರ ಹೋಗತೇನೆ, ಹೋಗಿ ಎಲ್ಲ ಹೇಳ್ತೇನೆ, ಅಂದುಕೊಂಡೆ,’ ಅಂದ.

ರಝುಮಿಖಿನ್ ಮುಂದುವರೆಸಿ ‘ಇದೆಲ್ಲ ಅಡುಗೂಳಜ್ಜಿ ಕತೆ. ಸುಳ್ಳು ಹೇಳತಾ ಇದಾನೆ ಅವನು. ಈ ದುಷ್ಕಿನ್ ನನಗೆ ಗೊತ್ತು. ಅವನು ಗಿರವಿ ಇಟ್ಟುಕೊಂಡು ಸಾಲ ಕೊಡತಾನೆ. ಕಳ್ಳ ಮಾಲು ಕೂಡ ಖರೀದಿ ಮಾಡತಾನೆ. ಮೂವತ್ತು ರೂಬಲ್ ವಡವೆಗೆ ಒಂದು ರೂಬಲ್ ಕೊಟ್ಟು ಬಣ್ಣ ಹೊಡೆಯುವ ನಿಕೊಲಾಯ್‍ ಗೆ ಟೋಪಿ ಹಾಕಿದ. ಪೋಲೀಸಿನವರಿಗೆ ಒಪ್ಪಿಸುವ ಇರಾದೆ ಅವನಿಗೆ ಇರಲೇ ಇಲ್ಲ. ಕೊಲೆ ವಿಚಾರ ಗೊತ್ತಾಗಿ ಭಯಬಿದ್ದ. ದೆವ್ವ ಹಿಡಿಯಲಿ ಅವನ್ನ. ಈ ದುಷ್ಕಿನ್ ಇನ್ನೂ ಏನು ಹೇಳಿದ ಗೊತ್ತಾ,’ ಅಂದು ದುಷ್ಕಿನ್ ಹೇಳಿದ ಕಥೆಯನ್ನು ಮುಂದುವರೆಸಿದ:

‘ನಿಕೊಲಾಯ್ ಇದಾನಲ್ಲ, ಅವನು ರೈತ. ನಾನು ಹುಡುಗನಾಗಿದ್ದಾಗಿನಿಂದಲೂ ಅವನನ್ನು ಬಲ್ಲೆ. ಅವನು ನಮ್ಮ ರೈಝಾನ್ ಪಕ್ಕದ ಝರೈಸ್ಕ್ ಜಿಲ್ಲೆಯವನು. ನಿಕೊಲಾಯ್ ಕುಡೀತಾನೆ, ನಿಜ, ಆದರೆ ಕುಡುಕನಲ್ಲ. ಆ ಮನೆಯಲ್ಲಿ ಬಣ್ಣ ಬಳಿಯುವ ಕೆಲಸ ಮಾಡತಿದ್ದಾನೆ ಅನ್ನುವುದು ನನಗೆ ಗೊತ್ತಿತ್ತು. ಅವನ ಜೊತೆ ಇನ್ನೊಬ್ಬ ಇದ್ದ, ಮಿಟ್ಕಾ ಅಂತ. ಇಬ್ಬರೂ ಅಕ್ಕ ಪಕ್ಕದ ಊರಿನವರು. ರೂಬಲ್ ಸಿಕ್ಕ ತಕ್ಷಣ ನಿಕೊಲಾಯ್ ಜೇಬು ಸುಟ್ಟು ತೂತು ಬಿತ್ತು. ರೂಬಲ್ ಮುರಿಸಿದ. ಎರಡು ಕಪ್ ವೋಡ್ಕಾ ಅವನ ಹೊಟ್ಟೆ ಸೇರಿತು. ಚಿಲ್ಲರೆ ಇಸಕೊಂಡು ಹೊರಟ. ಆವಾಗ ಅವನ ಜೊತೆಯಲ್ಲಿ ಮಿಟ್ಕಾ ಇದ್ದಿದ್ದು ನೋಡಲಿಲ್ಲ. ಮಾರನೆಯ ದಿನ ಗೊತ್ತಾಯಿತು, ಅಲ್ಯೋನ ಇವಾನೋವ್ನ ಮತ್ತೆ ಅವಳ ತಂಗಿ ಲಿಝವೆಟ ಇಬ್ಬರನ್ನೂ ಯಾರೋ ಕೊಡಲಿಯಲ್ಲಿ ಹೊಡೆದು ಸಾಯಿಸಿದಾರೆ ಅನ್ನುವುದು ಕಿವಿಗೆ ಬಿತ್ತು. ಅವರಿಬ್ಬರೂ ನನ್ನ ಪರಿಚಯದವರು, ಸಾಹೇಬರೇ. ಆಗ ನನ್ನ ತಲೆಯಲ್ಲಿ ಈ ಇಯರ್ ರಿಂಗುಗಳ ವಿಚಾರ ಓಡುವುದಕ್ಕೆ ಶುರುವಾಯಿತು. ಸತ್ತ ಹೆಂಗಸು ಇಂಥ ವಸ್ತುಗಳನ್ನ ಗಿರವಿ ಇಟ್ಟುಕೊಂಡು ಸಾಲ ಕೊಡುತ್ತಿದ್ದಳು. ಬಣ್ಣ ಬಳಿಯುವವರ ಮನೆಗೆ ಹೋದೆ, ನನ್ನ ಸಮಾಧಾನಕ್ಕೆ ಹುಷಾರಾಗಿ ವಿಚಾರಣೆ ಮಾಡಿದೆ. ನಿಕೊಲಾಯ್‍ ನ ಬಂದಿದ್ದನಾ ಅಂತ ಮೊಲು ಕೇಳಿದೆ. ಅದಕ್ಕೆ ಅವನ ಜೊತೆಗಾರ ಮಿಟ್ಕಾ-ಅವನು ಮಜಾ ಮಾಡಕ್ಕೆ ಹೋದ, ಬೆಳಗಿನ ಜಾವದ ಹೊತ್ತಿಗೆ ಮನೆಗೆ ಬರುವ ಹೊತ್ತಿಗೆ ಕುಡಿದಿದ್ದ – ಅಂತ ಹೇಳಿದ. ‘ನಿಕೊಲಾಯ್ ಹತ್ತು ನಿಮಿಷ ಮನೆಯಲ್ಲಿದ್ದು ಮತ್ತೆ ಹೊರಟನಂತೆ ಆಮೇಲೆ ಮಿಟ್ಕಾ ಅವನನ್ನ ನೋಡಲಿಲ್ಲ. ಒಬ್ಬನೇ ಹೋಗಿ ಬಣ್ಣ ಬಳಿಯುವ ಕೆಲಸ ಮುಗಿಸತಿದ್ದ. ಅವರಿಬ್ಬರೂ ಕೆಲಸ ಮಾಡತಾ ಇದ್ದದ್ದು ಎರಡನೆಯ ಮಹಡಿಯಲ್ಲಿ.

‘ನನಗೆ ಈಗ ತಾನೇ ಕೊಲೆಯ ಬಗ್ಗೆ ಎಲ್ಲಾ ತಿಳಿಯಿತು. ಮತ್ತೆ ಮನೆಗೆ ಹೋದೆ. ಮನಸ್ಸಿನಲ್ಲಿ ಅನುಮಾನ ಇದ್ದೇ ಇತ್ತು. ಮೂರು ದಿನ ಆದ ಮೇಲೆ, ಇವತ್ತು ಬೆಳಿಗ್ಗೆ ಎಂಟು ಗಂಟೆಗೆ, (ಗಮನಿಸಿ, ಮೂರು ದಿನ ಆದಮೇಲೆ ಎಂದು ರಝುಮಿಖಿನ್ ಒತ್ತಿ ಹೇಳಿದ) ನಿಕೊಲಾಯ್ ಬರತಾನೆ ಕುಡಿದ್ದು ತಲೆಗೆ ಏರಿದ್ದರೂ ಸುತ್ತಲೂ ನಡೆಯುತ್ತಿರುವುದು ಅರ್ಥ ಆಗುವ ಹಾಗೆ ಇರತಾನೆ, ಒಂದೂ ಮಾತಾಡದೆ ಬೆಂಚಿನ ಮೇಲೆ ಕೂರತಾನೆ. ಅವನ ಪಕ್ಕದಲ್ಲಿ ಇನ್ನೊಬ್ಬನೇ ಒಬ್ಬ ಗೊತ್ತಿಲ್ಲದ ಮನುಷ್ಯ ಹೆಂಡದಂಗಡಿಯಲ್ಲಿರತಾನೆ, ನನ್ನ ಪರಿಚಯದವನೊಬ್ಬ ಬೆಂಚಿನ ಮೇಲೆ ನಿದ್ದೆ ಮಾಡಿರತಾನೆ, ನಮ್ಮವರಿಬ್ಬರು ಹುಡುಗರು ಇರತಾರೆ.

‘ಅಯ್ಯಾ ಮಿಟ್ಕಾನ ನೋಡಿದೀಯ?’ ಅಂತ ಕೇಳತೇನೆ,

‘ಇಲ್ಲ, ನೋಡಿಲ್ಲ,’ ಅಂತಾನೆ ನಿಕೊಲಾಯ್.

‘ಇಲ್ಲಿಗೆ ಬಂದಿದ್ದೆಯಾ?’

‘ಹ್ಞೂಂ, ಎರಡು ದಿನದ ಹಿಂದೆ,’

‘ನಿನ್ನೆ ರಾತ್ರಿ ಎಲ್ಲಿ ಮಲಗಿದ್ದೆ?’

‘ಪೆಸ್ಕಿಯಲ್ಲಿ. ಕೊಲೋಮ್ನಾದಿಂದ ಬಂದ ಇಬ್ಬರು ಹುಡುಗರಿದ್ದರು,’

‘ಸರಿ, ಆ ಇಯರ್ ರಿಂಗು ನಿನಗೆ ಎಲ್ಲಿ ಸಿಕ್ಕವು?’ ಅಂತೇನೆ.

‘ಫುಟ್‍ಪಾತಿನ ಮೇಲೆ ಸಿಕ್ಕವು,’ ಅಂತಾನೆ.

‘ಅವನು ಮಾತಾಡಿದ ಥರ ನೋಡಿದರೆ ನಿಜ ಅನ್ನಿಸಲ್ಲ. ನನ್ನ ಮುಖ ನೋಡುವುದೇ ಇಲ್ಲ ಅವನು.

‘ಅವತ್ತೇ ರಾತ್ರಿ, ಅದೇ ಹೊತ್ತಲ್ಲಿ, ಅದೇ ನೀನು ಕೆಲಸ ಮಾಡುವ ಮನೆಯ ಮಹಡಿಯಲ್ಲಿ ಹೀಗೆ ಹೀಗೆ ಆಯಿತು, ಗೊತ್ತಾ?’ ಅಂತೇನೆ.

‘ಉಹ್ಞೂಂ, ಗೊತ್ತಿಲ್ಲ,’ ಅಂತಾನೆ.

ಅವನ ಕಣ್ಣುಗುಡ್ಡೆ ಇನ್ನೇನು ಬಿದ್ದು ಹೋಗತವೆ ಅನ್ನುವ ಹಾಗೆ ಮುಂದಕ್ಕೆ ಬರತವೆ, ಅವನ ಮುಖ ಸೀಮೆಸುಣ್ಣದಷ್ಟು ಬೆಳ್ಳಗಾಗತ್ತೆ. ನಾನಿನ್ನೂ ಅವನ ಜೊತೆ ಮಾತಾಡತಾ ಇರೋವಾಗಲೇ ಹ್ಯಾಟು ಎತ್ತಿಕೊಂಡು ಹೊರಡುವುದಕ್ಕೆ ನೋಡತಾನೆ. ಆವಾಗ, ಅವನನ್ನ ಅಲ್ಲೇ ಉಳಿಸಿಕೊಳ್ಳಬೇಕು ಅಂತ—

‘ತಾಳು ನಿಕೊಲಾಯ್, ಇನ್ನೂ ಸ್ವಲ್ಪ ಡ್ರಿಂಕ್ಸ್ ತಗೋಬಹುದಲ್ಲ?’ ಅಂದೆ.

‘ನಮ್ಮ ಕೆಲಸದ ಹುಡುಗನಿಗೆ ಕಣ್ಣು ಹೊಡೆದು, ಬಾಗಿಲು ಭದ್ರ ಅನ್ನುವುದನ್ನ ಕಣ್ಸನ್ನೆಯಲ್ಲೇ ಹೇಳಿ, ಕೌಂಟರಿನಿಂದ ನಾನು ಎದ್ದು ಹೊರಡಬೇಕು, ಅಷ್ಟರಲ್ಲಿ ಅವನು ದಢಾರಂತ ನನಗಿಂತ ಮೊದಲೇ ಆಚೆಗೆ ನುಗ್ಗಿ, ಗಲ್ಲಿಗೆ ನುಸುಳಿ ಮಾಯವಾದ. ಅವನನ್ನ ನೋಡಿದ್ದು ಅದೇ ಕೊನೆ. ಎಲ್ಲ ಅನುಮಾನ ಮಾಯವಾಯಿತು. ಪಾಪದ ಕೆಲಸ ಮಾಡಿದ್ದು ಅವನೇ ಅನ್ನುವುದು ಗ್ಯಾರಂಟಿಯಾಯಿತು…’ ಅಂತ ದುಷ್ಕಿನ್ ಹೇಳಿದ,’ ಎಂದು ರಝುಮಿಖಿನ್ ಕಥೆ ಹೇಳಿದ.

ಬರೀ ತತ್ವ, ಸಿದ್ಧಾಂತ ಅಂತ ಕೂತರೆ ಒಳ್ಳೆಯವರು ಎಷ್ಟು ಜನ ಸಿಗುತ್ತಾರೆ? ಉಹ್ಞೂಂ, ಒಬ್ಬರೂ ಸಿಗಲ್ಲ. ಹೊಟ್ಟೆ, ಕರುಳು, ರಕ್ತ, ಮಾಂಸ ಎಲ್ಲ ಇರುವ ನಾನು ಕೂಡ ಒಂದು ಬೇಯಿಸಿದ ಈರುಳ್ಳಿಯಷ್ಟು ಬೆಲೆಬಾಳಲ್ಲ.

‘ಅನುಮಾನವೇ ಇಲ್ಲ,…’ ಝೋಸ್ಸಿಮೋವ್…ʼ

‘ತಾಳಿ! ಮಿಕ್ಕ ಕಥೆ ಕೇಳಿ! ನಿಕೊಲಾಯ್‍ ನನ್ನು ಹಿಡಿಯಲು ಪೋಲೀಸಿನವರು ದಡಬಡ ಹೊರಟರು. ದುಷ್ಕಿನ್‍ ನನ್ನು ಸ್ಟೇಶನ್ನಿನಲ್ಲೇ ಕೂರಿಸಿಕೊಂಡರು. ಅವನ ಮನೆ ಜಾಲಾಡಿದರು. ಮಿಟ್ಕಾನನ್ನು ಜೊತೆಗೆ ಕೋಲ್ಮೋನ್‍ ನ ಇಬ್ಬರು ಹುಡುಗರನ್ನು ತಲಾಶು ಮಾಡಿದರು. ಎರಡು ದಿನದ ಹಿಂದೆ ಇದ್ದಕಿದ್ದ ಹಾಗೆ ಸ್ವತಃ ನಿಕೊಲಾಯ್‍ ನನ್ನೇ ಹಿಡಿದರು. ಅವನನ್ನ –ಊರಿನ ಟೋಲ್ ಗೇಟಿನ ಹತ್ತಿರ ಹೋಟೆಲಿನವರು ಹಿಡಿದಿಟ್ಟುಕೊಂಡಿದ್ದರು. ಅವನು ಅಲ್ಲಿಗೆ ಹೋಗಿ ಬೆಳ್ಳಿಯ ಶಿಲುಬೆ ಕೊಟ್ಟು ಇದಕ್ಕೆ ಬದಲಾಗಿ ಕುಡಿಯುವುದಕ್ಕೆ ಹೆಂಡ ಕೊಡಿ ಅಂತ ಕೇಳಿದ್ದ. ಕೊಟ್ಟರು. ಸ್ವಲ್ಪ ಹೊತ್ತಾದಮೇಲೆ ಅಲ್ಲೇ ಯಾವುದೋ ಮನೆಯಲ್ಲಿ ಯಾರೋ ಹೆಂಗಸು ತನ್ನ ಕೊಟ್ಟಿಗೆಗೆ ಹೋದಳಂತೆ. ಅಲ್ಲಿ ಗೋಡೆಯ ಬಿರುಕಿನಲ್ಲಿ ನೋಡಿದರೆ ಪಕ್ಕದ ಕೊಟ್ಟಿಗೆಯಲ್ಲಿ ಈ ನಿಕೊಲಾಯ್ ಚಾವಣಿಯ ತೊಲೆಗೆ ಬೆಲ್ಟು ಕಟ್ಟಿ, ತಾನು ಮರದ ದಿಮ್ಮಿಯ ಮೇಲೆ ನಿಂತು, ಕೊರಳಿಗೆ ಉರುಳು ಹಾಕಿಕೊಳ್ಳುತ್ತಿದ್ದ. ಆ ಹೆಂಗಸು ಆಕಾಶಕ್ಕೆ ಮುಟ್ಟುವಷ್ಟು ಗಟ್ಟಿಯಾಗಿ ಚೀರಿಕೊಂಡಳು. ಜನ ಬಂದರು. ಏನು ಮಾಡತಾ ಇದೀಯ ಅಂತ ಕೇಳಿದರು. ‘ನನ್ನನ್ನ ಇಂಥಾ ಪೋಲೀಸು ಸ್ಟೇಶನ್ನಿಗೆ ಕರಕೊಂಡು ಹೋಗಿ, ಎಲ್ಲಾನೂ ಒಪ್ಪಿಕೊಳ್ಳತೇನೆ,’ ಅಂದ ಅವನು. ಜನ ಅವನನ್ನ ಇಂಥಾ ಪೋಲೀಸ್ ಸ್ಟೇಶನ್ನಿಗೆ, ಅಂದರೆ ಇಲ್ಲಿಗೆ ಕರಕೊಂಡು ಬಂದರು. ಆಮೇಲೆ ಅದು-ಇದು, ಯಾರು-ಎತ್ತ, ಎಷ್ಟು ವರ್ಷ-ಇಪ್ಪತ್ತೆರಡು, ಇತ್ಯಾದಿ ತಪಾಸಣೆ ನಡೆಯಿತು:

‘ನೀನು, ಮಿಟ್ಕಾ ಇಬ್ಬರೂ ಎಲ್ಲಿ ಕೆಲಸ ಮಾಡತೀರಿ, ಅವತ್ತು ಇಷ್ಟು ಗಂಟೆಯ ಹೊತ್ತಿಗೆ ಆ ಮನೆಯಲ್ಲಿ ಮಹಡಿ ಮೆಟ್ಟಿಲ ಮೇಲೆ ಯಾರನ್ನಾದರೂ ನೋಡಿದಿರಾ?’

‘ಎಷ್ಟೋ ಜನ ಬರತಾ ಹೋಗತಾ ಇದ್ದರು, ಗಮನ ಕೊಡಲಿಲ್ಲ ನಾವು’

‘ನಿಮಗೆ ಏನಾದರೂ ಗದ್ದಲ, ಚೀರಾಟ, ಕೂಗಾಟ, ಇಂಥದ್ದೇನಾದರೂ ಕೇಳಿಸಿತಾ?’

‘ವಿಶೇಷವಾಗಿ ಏನೂ ಕೇಳಿಸಲಿಲ್ಲ,’

‘ಇಂಥಾ ದಿನ, ಇಷ್ಟು ಗಂಟೆಯ ಹೊತ್ತಿಗೆ ಇಂಥಾ ಹೆಸರಿನ ವಿಧವೆಯನ್ನು ಯಾರೋ ಕೊಲೆ ಮಾಡಿ ಮನೆ ದೋಚಿದ್ದರು ಅನ್ನುವುದು ನಿನಗೆ ಗೊತ್ತಾ ನಿಕೋಲಾಯ್?’

‘ಇಲ್ಲ ಸಾರ್. ನನಗೆ ಆ ವಿಚಾರ ಏನೂ ಗೊತ್ತೇ ಇಲ್ಲ ಸಾರ್. ಮೂರು ದಿನ ಆದಮೇಲೆ ನನಗೆ ಆ ವಿಚಾರವನ್ನ ಹೆಂಡದಂಗಡಿಯಲ್ಲಿ ಅಫಾನಸೆ ಪಾವ್ಲೋವೊವಿಚ್ ಹೇಳಿದರು.’

‘ಕಿವಿಯ ರಿಂಗು ನಿನಗೆ ಎಲ್ಲಿ ಸಿಕ್ಕಿತು?’

‘ಫುಟ್‍ಪಾತಿನ ಮೇಲೆ,’

‘ಮಾರನೆಯ ದಿನ ಬೆಳಗ್ಗೆ ಯಾಕೆ ಮಿಟ್ಕಾ ಜೊತೆ ಕೆಲಸಕ್ಕೆ ಹೋಗಲಿಲ್ಲ?’

‘ಮಜಾ ಮಾಡಕ್ಕೆ ಹೋಗಿದ್ದೆ,’

‘ಎಲ್ಲಿಗೆ?’ ಅಂದಾಗ ಇಂತಿಂಥ ಕಡೆ ಅಂತ ಹೇಳಿದ.

‘ದುಷೆನ್ಕಾಗೆ ಸಿಗದೆ ಯಾಕೆ ಓಡಿ ಹೋದೆ ಅವನ ಎದುರಿಗೇನೇ?’

‘ನನಗೆ ಭಯವಾಗಿತ್ತು,’

‘ಯಾವ ಭಯ?’

‘ನನ್ನ ಜೈಲಿಗೆ ಹಾಕಿದರೆ ಅನ್ನುವ ಭಯ.’

‘ಏನೂ ತಪ್ಪು ಮಾಡಿರದಿದ್ದರೆ ಯಾಕೆ ಭಯಬೀಳಬೇಕು…’

ನೋಡಿ ಝೋಸ್ಸಿಮೋವ್, ನೀವು ನಂಬಿದರೆ ನಂಬಬಹುದು, ಬಿಟ್ಟರೆ ಬಿಡಬಹುದು, ಇದೇ ಪ್ರಶ್ನೆಯನ್ನ ಸಾವಿರ ಪದಗಳಲ್ಲಿ ಎಷ್ಟೋ ಸಾರಿ ಕೇಳಿದರು. ನನಗೆ ಗೊತ್ತು, ನನಗೆ ಹೇಳಿದವರು ಕರೆಕ್ಟಾಗಿ ಹೇಳಿದರು! ಇದಕ್ಕೇನನ್ನುತ್ತೀರಿ?’ ಅಂತ ದೀರ್ಘವಾಗಿ ಹೇಳಿ ಮುಗಿಸಿದ ರಝುಮಿಖಿನ್.

‘ಅದೇನಾದರೂ ಇರಲಿ, ಪುರಾವೆಗಳಿವೆಯಲ್ಲ.’

‘ನಾನೀಗ ಪುರಾವೆಗಳ ಬಗ್ಗೆ ಹೇಳತಾ ಇಲ್ಲ. ಅವರಿಗೆ, ತಾವು ಏನು ಮಾಡತಾ ಇದ್ದೇವೆ ಅನ್ನುವುದು ಅರ್ಥ ಆಗಿದೆಯಾ ಅನ್ನುವ ಪ್ರಶ್ನೆ ಕೇಳತಾ ಇದೇನೆ. ದೆವ್ವ ಹಿಡಿಯಲಿ! ಅವನನ್ನ ಹಿಂಡಿ, ಹಿಸುಕಿ, ಹೊಡೆದು, ಬಡಿದು ಮಾಡಿದರು. ಅವನು ಒಪ್ಪಿಕೊಂಡ.

‘ಇಯರ್ ರಿಂಗು ಫುಟ್‍ಪಾತಿನ ಮೇಲೆ ಸಿಗಲಿಲ್ಲ, ನಾನೂ ಮಿಟ್ಕಾನೂ ಕೆಲಸ ಮಾಡುವ ಜಾಗದಲ್ಲಿ ಸಿಕ್ಕಿದವು,’ ಅಂದ.

‘ಹೇಗೆ ಸಿಕ್ಕಿದವು?’

‘ಇಡೀ ದಿನ, ಎಂಟು ಗಂಟೆ ರಾತ್ರಿಯವರೆಗೆ ನಾವು ಬಣ್ಣ ಬಳಿಯುತ್ತಾ ಇದ್ದೆವು. ಇನ್ನೇನು ಹೊರಡಬೇಕು ಅನ್ನುವಾಗ ಮಿಟ್ಕಾ ಬಣ್ಣ, ಬ್ರಶ್ಶು ತಗೊಂಡು ನನ್ನ ಮಗ್ ನ ಮೇಲೆ ಬಣ್ಣ ಬಳಿದು ಓಡಿ ಹೋದ. ನಾನು ಅವನನ್ನ ಅಟ್ಟಿಸಿಕೊಂಡು ಹೋದೆ. ಜೋರಾಗಿ ಕಿರಚತಾ ಇದ್ದೆ. ಮೆಟ್ಟಿಲು ಇಳಿದು ಗೇಟಿನ ಕಡೆ ತಿರುಗಿದೆ. ವಾಚ್ ಮ್ಯಾನು ಮತ್ತೆ ಯಾರೋ ಮರ್ಯಾದಸ್ಥರು ಎದುರಿಗೆ ಸಿಕ್ಕರು. ಎಷ್ಟು ಜನ ಅನ್ನುವುದು ಮರೆತುಹೋಗಿದೆ. ಅವರಿಗೆ ನಾನು ಡಿಕ್ಕಿ ಹೊಡೆದೆ ಅಂತ ವಾಚ್‍ಮ್ಯಾನು ನನ್ನ ಬೈದ. ಇನ್ನೊಬ್ಬ ವಾಚ್‍ಮ್ಯಾನೂ ಬೈದ. ಅವನ ಹೆಂಡತಿ ಬಂದು ನಮ್ಮನ್ನೆಲ್ಲ ಬೈದಳು. ಆಗ ಯಾರೋ ಮರ್ಯಾದಸ್ಥ ಮೆಟ್ಟಿಲಿಳಿದು ಗೇಟಿನ ಹತ್ತಿರ ಬರತಾ ಇದ್ದ. ಅವನ ಜೊತೆ ಯಾರೋ ಲೇಡೀಸ್ ಇದ್ದರು. ಅವನು ಕೂಡಾ ನನ್ನನ್ನೂ ಮಿಟ್ಕಾನೂ ಬೈದ. ಯಾಕೆ ಅಂದರೆ ಮಿಟ್ಕಾ ದಾರಿಗೆ ಅಡ್ಡವಾಗಿ ನೆಲದ ಮೇಲೆ ಬಿದ್ದಿದ್ದ.

ನಾನು ಅವನ ಜುಟ್ಟು ಹಿಡಿದು ಮೇಲಕ್ಕೆತ್ತಿ ಮೆಟ್ಟಿಲ ಮೇಲೆ ಹಾಕಿಕೊಂಡು ಹೊಡೆಯುತ್ತಿದ್ದೆ. ನಾನು ಮೇಲಿದ್ದೆ, ಮಿಟ್ಕಾ ನನ್ನ ಕೆಳಗಿದ್ದ. ಅವನು ನನ್ನ ಕೂದಲು ಹಿಡಿದು ನನ್ನ ಹೊಡೆದ, ಪರಚಿದ, ಗುದ್ದಿದ. ನಾವೇನು ಹುಚ್ಚರಲ್ಲ, ಇದೆಲ್ಲ ನಿಜವಾಗಲೂ ನಡೆದ ಗೆಳೆಯರ ಜಗಳ, ತಮಾಷೆಗೆ ಮಾಡತಾ ಇದ್ದಿದ್ದು. ಮಿಟ್ಕಾ ತಪ್ಪಿಸಿಕೊಂಡು ರಸ್ತೆಗೆ ಓಡಿಹೋದ. ನಾನು ಅವನ ಹಿಂದೆ ಹೋದೆ. ಅವನನ್ನ ಹಿಡಿಯುವುದಕ್ಕೆ ಆಗಲಿಲ್ಲ. ಒಬ್ಬನೇ ಅಪಾರ್ಟ್‍ಮೆಂಟಿಗೆ ಹೋದೆ. ಯಾಕೆ ಅಂದರೆ ನಾವು ಕೆಲಸ ಮಾಡುತ್ತಿದ್ದ ಮನೆಯನ್ನ ಕ್ಲೀನು ಮಾಡಬೇಕಾಗಿತ್ತು. ಸ್ವಚ್ಛ ಮಾಡತಾ ಮಿಟ್ಕಾ ವಾಪಸು ಬಂದರೇ ಅಂತ ಕಾಯುತ್ತ ಇದ್ದೆ. ಬಾಗಿಲ ಹತ್ತಿರ, ಗೋಡೆ ಹಿಂದೆ ಮೂಲೆಯಲ್ಲಿ ಒಂದು ಡಬ್ಬಿ ಮೇಲೆ ಕಾಲಿಟ್ಟೆ. ತೆಗೆದು ನೋಡಿದೆ. ಪೇಪರಲ್ಲಿ ಸುತ್ತಿದ್ದರು. ಬಿಡಿಸಿದೆ. ಡಬ್ಬಿ ಒಳಗೆ ಇಯರ್ ರಿಂಗ್ ಇದ್ದವು…’

‘ಬಾಗಿಲ ಹಿಂದೆ? ಅದು ಬಾಗಿಲ ಹಿಂದೆ ಇತ್ತಾ? ಬಾಗಿಲ ಹಿಂದೇ?’

ಇದ್ದಕ್ಕಿದ್ದ ಹಾಗೆ ರಾಸ್ಕೋಲ್ನಿಕೋವ್ ಗಟ್ಟಿಯಾಗಿ ಚೀರಿದ. ಕಣ್ಣಲ್ಲಿ ಭಯವಿತ್ತು. ರಝುಮಿಖಿನ್‍ ನನ್ನು ಮಂಕಾಗಿ ದಿಟ್ಟಿಸುತ್ತಿದ್ದ. ಸೋಫಾದ ಮೇಲೆ ಕೈ ಊರಿ ನಿಧಾನವಾಗಿ ಮೇಲೆದ್ದು ಕೂತ.

‘ಹೌದು… ಯಾಕೆ? ಏನು ಸಮಾಚಾರ? ಯಾಕೆ ಹಾಗೆ ನೋಡುತಿದ್ದೀಯಾ?’ ರಝುಮಿಖಿನ್ ಕೂಡ ಎದ್ದ.

ಯಾರಿಗೂ ಕೇಳಿಸದಷ್ಟು ಕ್ಷೀಣವಾದ ದನಿಯಲ್ಲಿ ‘ಏನಿಲ್ಲ…’ ಅಂದು ಮತ್ತೆ ದಿಂಬಿನ ಮೇಲೆ ಕುಸಿದು, ಮತ್ತೆ ಗೋಡೆಯ ಕಡೆಗೆ ತಿರುಗಿದ. ಸ್ವಲ್ಪ ಹೊತ್ತು ಎಲ್ಲರೂ ಮೌನವಾಗಿದ್ದರು.

‘ನಿದ್ದೆ ಮಾಡತಿದ್ದ ಅಂತ ಕಾಣತ್ತೆ. ತಟಕ್ಕಂತ ಎಚ್ಚರ ಆಗಿರಬೇಕು’ ಅನ್ನುತ್ತ ರಝುಮಿಖಿನ್ ಹೌದೇ ಎಂದು ಕೇಳುವ ಹಾಗೆ ಝೋಸ್ಸಿಮೋವ್‍ ನನ್ನು ನೋಡಿದ. ಅವನು ‘ಇಲ್ಲ’ ಅನ್ನುವ ಹಾಗೆ ಒಂದಿಷ್ಟೇ ತಲೆ ಆಡಿಸಿದ.

‘ಸರಿ, ಮುಂದಕ್ಕೆ ಹೇಳು. ಆಮೇಲೇನಾಯಿತು?’ ಝೋಸ್ಸಿಮೋವ್ ಕೇಳಿದ.

‘ಮುಂದಿನ್ನೇನು? ಇಯರ್‍ ರಿಂಗ್ ಕಂಡ ತಕ್ಷಣ ಮಿಟ್ಕಾನ ಮರೆತ, ಬಣ್ಣ ಬಳಿಯುತಿದ್ದ ಮನೆ ಮರೆತ, ಸೀದಾ ದುಷ್ಕಿನ್ ಹತ್ತಿರ ಓಡಿದ. ನಮಗೆ ಗೊತ್ತಲ್ಲ ಆ ಕಥೆ. ಅವನ ಹತ್ತಿರ ರೂಬಲ್ ಇಸಕೊಂಡು ಹೆಂಡದಂಗಡಿಗೆ ಹೋದ. ಕಿವಿಯ ರಿಂಗು ಫುಟ್ ಪಾತಿನ ಮೇಲೆ ಸಿಕ್ಕವು ಅಂತ ಸುಳ್ಳು ಹೇಳಿದ. ಮಜಾ ಮಾಡುವುದಕ್ಕೆ ಹೊರಟ. ‘ಕೊಲೆ ಬಗ್ಗೆ ನನಗೇನೂ ಗೊತ್ತಿಲ್ಲ. ಕೊಲೆ ಆಗಿ ಮೂರು ದಿನ ಆದಮೇಲೆ ಆ ವಿಷಯ ತಿಳಿಯಿತು,’ ಅಂತ ತನಗೇ ಮತ್ತೆ ಮತ್ತೆ ಹೇಳಿಕೊಂಡ. ಮೊದಲೇ ಯಾಕೆ ಬರಲಿಲ್ಲ ಅಂದರೆ ಭಯ ಆಗಿತ್ತು ಅನ್ನಬೇಕು, ನೇಣು ಹಾಕಿಕೊಳ್ಳುವುದಕ್ಕೆ ಯಾಕೆ ಹೋದೆ ಅಂದರೆ ಚಿಂತೆಯಿಂದ ಅನ್ನಬೇಕು, ಏನು ಚಿಂತೆ ಅಂದರೆ ನನ್ನ ಮೇಲೆ ತಪ್ಪು ಹೊರಿಸಬಹುದು ಅನ್ನುವ ಚಿಂತೆ ಅಂತ ಉತ್ತರ ಸಿದ್ಧಮಾಡಿಕೊಂಡ.’

‘ಅಂದುಕೊಳ್ಳುವುದಕ್ಕೆ ಏನಿದೆ? ಕೊನೆಯ ಪಕ್ಷ ಎಂಥದೋ ಒಂದು ಸುಳಿವು ಸಿಕ್ಕಿದೆ. ಬಣ್ಣ ಬಳಿಯುವವನನ್ನು ಸುಮ್ಮನೆ ಬಿಟ್ಟುಬಿಡಬೇಕು ಅನ್ನತೀಯೇನು?’

‘ಕೊಲೆಯನ್ನ ಈಗ ಅವನ ತಲೆಗೇ ಕಟ್ಟುತ್ತಾರೆ. ಅವನೇ ಕೊಲೆಗಾರ ಅನ್ನುವ ವಿಷಯದಲ್ಲಿ ಅವರಿಗೆ ಸಂಶಯವೇ ಇಲ್ಲ.’

‘ನಾನ್ಸೆನ್ಸ್. ನಿನಗೆ ಉದ್ರೇಕ ಜಾಸ್ತಿ. ಕಿವಿ ರಿಂಗುಗಳ ವಿಷಯ ಏನು? ಮುದುಕಿಯ ಪೆಟ್ಟಿಗೆಯಲ್ಲಿದ್ದ ಕಿವಿಯ ರಿಂಗುಗಳು ಅದೇ ದಿನ, ಸುಮಾರು ಅದೇ ಹೊತ್ತಿನಲ್ಲಿ ನಿಕೊಲಾಯ್‍ ಗೆ ಅದು ಹೇಗೋ ಸಿಕ್ಕಿದ್ದವು ಅನ್ನುವುದನ್ನ ನೀನು ಒಪ್ಪಬೇಕು. ಅಲ್ಲವಾ? ಇಂಥ ಪತ್ತೇದಾರಿಕೆಯಲ್ಲಿ ಇದು ಸಣ್ಣ ವಿಷಯ ಅಲ್ಲ.’

‘ಹೇಗೆ ಹೋದವು! ನೀವು ಡಾಕ್ಟರು, ಮನುಷ್ಯನನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವುದು ನಿಮ್ಮ ಪ್ರಥಮ ಕರ್ತವ್ಯ. ಅಂಥ ತಿಳಿವಳಿಕೆ ಪಡೆಯುವ ಅವಕಾಶ ಮಿಕ್ಕೆಲ್ಲರಿಗಿಂತ ನಿಮಗೇ ಮೊದಲು ಸಿಗುತ್ತದೆ. ಈಗ ಕಣ್ಣೆದುರಿಗೆ ಇರುವ ಪುರಾವೆಗಳಿಂದ ನಿಕೊಲಾಯ್ ಎಂಥ ಮನುಷ್ಯ ಅನ್ನುವುದನ್ನು ತಿಳಿಯುವ ಕುತೂಹಲವಿಲ್ಲವೇ? ಮೊದಲಿನಿಂದಲೂ ವಿಚಾರಣೆಯ ಸಮಯದಲ್ಲಿ ಅವನು ಹೇಳಿದ ಮಾತು ಸತ್ಯ ಅನ್ನಿಸುವುದಿಲ್ಲವೇ? ಅವನು ಹೇಳಿದ ಹಾಗೇ ಅವನು ಡಬ್ಬಿಯ ಮೇಲೆ ಕಾಲಿಟ್ಟ, ಡಬ್ಬಿಯಲ್ಲಿದ್ದ ರಿಂಗು ಅವನಿಗೆ ಸಿಕ್ಕಿದವು.’

ರಝುಮಿಖಿನ್ ಮುಂದುವರೆಸಿದ. ‘ನನ್ನ ಮಾತು ಗಮನವಿಟ್ಟು ಕೇಳಿಸಿಕೊಳ್ಳಿ. ವಾಚ್‍ಮ್ಯಾನು, ಕೋಚ್, ಪೆಸ್ಟ್ರ್ಯಕೋವ್ ಆಮೇಲೆ ಇನ್ನೊಬ್ಬ ವಾಚ್‍ಮ್ಯಾನು, ಜೊತೆಗೆ ಮೊದಲನೆಯ ವಾಚ್‍ಮ್ಯಾನ್‍ ನ ಹೆಂಡತಿ, ಮಾರ್ಕೆಟ್ಟಿನ ಹೆಂಗಸು, ಅದೇ ವಾಚ್‍ಮ್ಯಾನ್ ಹೆಂಡತಿಯ ಜೊತೆ ಅವರ ರೂಮಿನಲ್ಲಿ ಆ ಹೊತ್ತಿನಲ್ಲಿ ಕೂತಿದ್ದವಳು, ಆ ಹೊತ್ತಿಗೆ ಸಾರೋಟಿನಿಂದ ಇಳಿದು ಮಹಿಳೆಯ ತೋಳಿಗೆ ತೋಳು ಸೇರಿಸಿಕೊಂಡು ಗೇಟಿನಿಂದ ಒಳಕ್ಕೆ ಬರುತ್ತಿದ್ದ ಕೋರ್ಟ್‍ ಕೌನ್ಸಿಲರ್ ಕ್ರಿಯುಕೋವ್-ಇವರೆಲ್ಲರೂ, ಒಟ್ಟು ಎಂಟು ಹತ್ತು ಜನ ಒಕ್ಕೊರಲಿನಿಂದ ಹೇಳುತ್ತಾರೆ ನಿಕೊಲಾಯ್ ಇದಾನಲ್ಲ ಅವನು ಮಿಟ್ಕಾನನ್ನು ನೆಲಕ್ಕೆ ಕೆಡವಿಕೊಂಡಿದ್ದ, ಅವನನ್ನು ಹೊಡೆಯುತ್ತಿದ್ದ, ನೆಲದ ಮೇಲೆ ಬಿದ್ದಿದ್ದವನು ಕೂಡ ನಿಕೊಲಾಯ್‍ ನ ಕೂದಲು ಹಿಡಿದು ಅವನನ್ನು ಹೊಡೆಯುತ್ತಿದ್ದ ಅನ್ನುತ್ತಾರೆ. ಅವರು ದಾರಿಗಡ್ಡವಾಗಿ ನೆಲದ ಮೇಲೆ ಬಿದ್ದಿದ್ದರು, ಸುತ್ತಮುತ್ತ ಇದ್ದ ಜನರೆಲ್ಲ ಅವರನ್ನ ಬೈಯುತ್ತಿದ್ದರು, ಚಿಕ್ಕ ಮಕ್ಕಳ ಥರ (ಅಕ್ಷರಶಃ ಇದೇ ಮಾತನ್ನು ಬಳಸಿ ಆಮೇಲೆ ಎಷ್ಟೊಂದು ಜನ ಸಾಕ್ಷಿ ಹೇಳಿದರು) ಒಬ್ಬರ ಮೇಲೆ ಒಬ್ಬರು ಬಿದ್ದು ಕುಯ್ಞ್ ಕುಯ್ಞ್ ಅನ್ನುತ್ತ, ಜಗಳವಾಡುತ್ತ, ಒಬ್ಬರಿಗಿಂತ ಇನ್ನೊಬ್ಬರು ಜೋರಾಗಿ ನಗುತ್ತ ಚಿತ್ರ ವಿಚಿತ್ರವಾಗಿ ಮುಖ ಸೊಟ್ಟಗೆ ಮಾಡುತ್ತ ಇದ್ದವರು ಮಕ್ಕಳ ಥರ ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ತಟ್ಟನೆ ಬೀದಿಗೆ ಓಡಿಹೋದರು, ಅನ್ನತಾರೆ. ಅಲ್ಲವಾ? ಈಗ ಗಮನಿಸಿ:

ಮಹಡಿಯ ಮೇಲಿದ್ದ ಹೆಣಗಳು ಇನ್ನೂ ಬೆಚ್ಚಗಿದ್ದವು, ಗಮನಿಸಿ, ಬೆಚ್ಚಗಿದ್ದವು, ಬೆಚ್ಚಗಿರುವಾಗಲೇ ಅವು ಸಿಕ್ಕಿದ್ದು. ಬಣ್ಣ ಬಳಿಯುತ್ತಿದ್ದ ಇಬ್ಬರು ಅಥವಾ ನಿಕೊಲಾಯ್ ಒಬ್ಬನೇ ಅವರನ್ನ ಕೊಂದು, ಪೆಟ್ಟಿಗೆ ಒಡೆದು, ದರೋಡೆ ಮಾಡಿ, ಅಥವಾ ಹೇಗೋ ಅದರಲ್ಲಿದ್ದ ಒಡವೆ ತಗೊಂಡರು ಅನ್ನುವುದಾದರೆ ಈ ಪ್ರಶ್ನೆಗೆ ಉತ್ತರ ಹೇಳಿ. ಅಂಥಾ ಮನಸ್ಥಿತಿ, ಅಂದರೆ ಗೇಟಿನ ಹತ್ತಿರ ಮಕ್ಕಳ ಹಾಗೆ ಹೊರಳಾಡುವುದು, ಕೂಗಾಡುವುದು, ಕಿರುಚುವುದು, ನಗಾಡುವುದು ಇವೆಲ್ಲಾನೂ ಕೊಡಲಿ, ರಕ್ತ, ಕೊಲೆಗಡುಕ ಕುತಂತ್ರ, ಕಳ್ಳತನ, ದರೋಡೆಗಳ ಜೊತೆ ಹೊಂದುತ್ತವೇನು? ಇದೇ ಈಗ, ಐದಾರು ನಿಮಿಷ ಮೊದಲು, ಕೊಲೆ ಮಾಡಿದವರು—ಕೊಲೆಯಾದ ದೇಹಗಳು ಬೆಚ್ಚಗಿದ್ದವು ಅಂದರೆ ಅದೇ ತಾನೇ ಅರ್ಥ—ತಟಕ್ಕನೆ ಹೆಣ ಅಲ್ಲೇ ಬಿಟ್ಟು, ಜನ ಈಗ ತಾನೇ ಮೇಲೆ ಹೋಗುತ್ತಿದ್ದಾರೆ ಅನ್ನುವುದು ಗೊತ್ತಿದ್ದರೂ ಬಾಗಿಲು ಹಾರುಹೊಡೆದು, ದರೋಡೆ ಮಾಡಿದ ಮಿಕ್ಕ ವಸ್ತುಗಳನ್ನು ಅಲ್ಲೇ ಬಿಟ್ಟು, ರಸ್ತೆಗೆ ಓಡಿ ಬಂದು, ಮಕ್ಕಳ ಥರ ನಗುತ್ತ, ಕೂಗಾಡುತ್ತ, ಜನಗಳ ಗಮನ ಸೆಳೆಯುವ ಹಾಗೆ ಜಗಳವಾಡುವುದಕ್ಕೆ ಸಾಧ್ಯವೇ? ಈ ಹತ್ತು ಜನವೇ ಅಲ್ಲವಾ ನಿಮ್ಮ ಒಕ್ಕೊರಲ ಸಾಕ್ಷಿಗಳು!’

‘ವಿಚಿತ್ರ, ಹೀಗಾಗುವುದು ನಿಜವಾಗಲೂ ಅಸಾಧ್ಯ. ಆದರೂ…’

‘ಆದರೆ ಗೀದರೆ ಏನಿಲ್ಲ, ಬ್ರದರ್. ಕಿವಿಯ ರಿಂಗು, ಆ ದಿನ ಆ ಹೊತ್ತಿನಲ್ಲಿ ನಿಕೊಲಾಯ್ ಕೈಯಲ್ಲಿದ್ದವು ಅನ್ನುವುದು ಅವನ ವಿರುದ್ಧ ಇರುವ ಅಲ್ಲಗಳೆಯಲಾಗದ ಪುರಾವೆ. ಅದು ತನ್ನ ಕೈಗೆ ಹೇಗೆ ಬಂದವು ಅನ್ನುವುದನ್ನು ಸ್ವತಃ ಅವನೇ ನೇರವಾಗಿ ವಿವರಿಸಿದ್ದು ಸಂಶಯಾಸ್ಪದ ಪುರಾವೆ. ನಾವು ಇನ್ನೂ ಕೆಲವು ಪುರಾವೆಗಳನ್ನ, ನಿಕೊಲಾಯ್ ಪರವಾಗಿರುವಂಥವನ್ನ ನೋಡಬೇಕು. ಅವು ಅಲ್ಲಗಳೆಯಲಾಗದ ಪುರಾವೆಗಳು. ಆದರೆ, ನಮ್ಮ ನ್ಯಾಯವ್ಯವಸ್ಥೆಯು ಅವನ್ನು ಒಪ್ಪುತ್ತದೆಯೇ ಅನ್ನುವುದು ಪ್ರಶ್ನೆ. ಯಾಕೆಂದರೆ ಅವು ಮನಸ್ಥಿತಿಯನ್ನು ಆಧಾರವಾಗಿಟ್ಟುಕೊಂಡ ಪುರಾವೆಗಳು. ಮನಶ್ಶಾಸ್ತ್ರೀಯವಾಗಿ ಹೀಗೆ ನಡೆದಿರುವುದು ಅಸಂಭವ ಎನ್ನುವ ಸಂಗತಿಯನ್ನು ಭೌತಿಕ ಸಾಕ್ಷಿಗಳಿಗಿಂತ ಮಿಗಿಲು ಎಂದು ಪರಿಗಣಿಸುತ್ತಾರೆಯೇ? ಖಂಡಿತ ಇಲ್ಲ. ಬಿಲ್‍ಕುಲ್ ಇಲ್ಲ. ಯಾಕೆ ಅಂದರೆ ಅವರಿಗೆ ವಡವೆ ಡಬ್ಬಿ ಸಿಕ್ಕಿದೆ, ಮತ್ತೆ ಹಾಗೆ ಸಿಕ್ಕಿದ ಮನುಷ್ಯ ನೇಣು ಹಾಕಿಕೊಳ್ಳಲು ಹೋಗಿದ್ದ, ಅಂದರೆ ಅವನು ತಪ್ಪಿತಸ್ಥ ಅಂತ ತಾನೇ ಅರ್ಥ! ಇದು ಮುಖ್ಯವಾದ ಪ್ರಶ್ನೆ. ಅದಕ್ಕೇ ಅಷ್ಟೊಂದು ರೇಗಿದ್ದು ನಾನು, ಗೊತ್ತಾಯಿತಾ?’

‘ಓ! ತಿಳಿಯಿತು. ತಾಳು, ಮರೆತಿದ್ದೆ. ವಡವೆ ಡಬ್ಬಿ ಕೊಲೆಯಾದ ಹೆಂಗಸಿನ ಪೆಟ್ಟಿಗೆಯಲ್ಲಿದ್ದದ್ದು ಅನ್ನುವುದಕ್ಕೆ ಸಾಕ್ಷಿ ಏನಿದೆ?’

‘ಅದು ಸಾಬೀತಾಗಿದೆ,’ ಮಾತಾಡಲು ಮನಸ್ಸಿಲ್ಲದವನ ಹಾಗೆ ಮುಖ ಗಂಟಿಕ್ಕಿಕೊಂಡು ರಝುಮಿಖಿನ್ ಹೇಳಿದ. ‘ಕಿವಿಯ ರಿಂಗನ್ನ ಕೋಚ್ ಗುರುತು ಹಿಡಿದ, ಆಮೇಲೆ ಪೋಲೀಸಿನವರನ್ನ ಆ ರಿಂಗಿನ ಓನರ್ ಹತ್ತಿರ ಕರಕೊಂಡು ಹೋದ, ಅವನು ರಿಂಗು ನನ್ನವೇ ಅಂತ ಒಪ್ಪಿಕೊಂಡ.’

‘ಇನ್ನೊಂದು ವಿಷಯ. ಕೋಚ್ ಮತ್ತೆ ಪೆಸ್ಟ್ರಕೋವ್ ಮಹಡಿಯ ಮೇಲಿರುವ ಹೊತ್ತಿನಲ್ಲಿ ಯಾರಾದರೂ ನಿಕೊಲಾಯ್‍ ನನ್ನು ನೋಡಿದ್ದಾರಾ? ಸಾಬೀತು ಮಾಡಲು ಆಗುತ್ತದಾ?’

‘ಅದೇ ಪಾಯಿಂಟು. ಅವನನ್ನ ಯಾರೂ ನೋಡಿಲ್ಲ. ತಲೆ ಕೆಡಿಸುವ ವಿಚಾರ ಅದೇನೇ. ಕೋಚ್ ಮತ್ತೆ ಪೆಸ್ಟ್ರ್ಯಕೋವ್ ಮಹಡಿ ಹತ್ತುತ್ತಾ ಅವರನ್ನ ನೋಡಲಿಲ್ಲ ಅನ್ನತಾರೆ, ಅವರ ಮಾತಿಗೇನೂ ಅಂಥ ಬೆಲೆ ಇಲ್ಲ ಅನ್ನಿ. ‘ಅಪಾರ್ಟ್‍ಮೆಂಟಿನ ಬಾಗಿಲು ತೆಗೆದಿತ್ತು, ಯಾರೋ ಒಳಗೆ ಕೆಲಸ ಮಾಡತಿದ್ದರು, ನಾವು ಗಮನ ಕೊಡಲಿಲ್ಲ, ಅಲ್ಲಿ ಕೆಲಸಗಾರರು ಇದ್ದರೋ ಇಲ್ಲವೋ ಗೊತ್ತಿಲ್ಲ,’ ಅನ್ನುತ್ತಾರೆ,’ ಅಂದ ರಝುಮಿಖಿನ್.

‘ಹ್ಞೂಂ. ಅವರ ಪರವಾಗಿರುವ ವಾದ ಒಂದೇ: ಒಬ್ಬರನ್ನೊಬ್ಬರು ಒದ್ದುಕೊಂಡು ನಗತಾ ಹೊಡೆದಾಡತಿದ್ದರು ಅನ್ನುವುದು. ಇದು ಬಹಳ ಬಲವಾದ ಪುರಾವೆಯೇ ಇರಬಹುದು, ಆದರೆ… ನೋಡು ಇಡೀ ಘಟನೆಯನ್ನ ನೀನು ಸ್ವತಃ ಹೇಗೆ ವಿವರಿಸುತ್ತೀಯ, ಹೇಳು. ಕಿವಿಯ ರಿಂಗು ಅವನು ಹೇಳಿದ ಹಾಗೇ ಸಿಕ್ಕಿದ್ದಾದರೆ ಅದನ್ನ ಹೇಗೆ ವಿವರಿಸುತ್ತೀಯ?’

‘ನಾನು ಹೇಗೆ ವಿವರಿಸುತ್ತೇನೆ? ವಿವರಿಸುವುದಕ್ಕೆ ಏನಿದ? ಎಲ್ಲಾ ಸ್ಪಷ್ಟವಾಗಿದೆ! ಕೊನೆಯ ಪಕ್ಷ ಈ ಕೇಸು ಯಾವ ದಾರಿ ಹಿಡಿದು ಸಾಗಬೇಕು ಅನ್ನುವುದು ಸ್ಪಷ್ಟವಾಗಿದೆ. ವಡವೆ ಡಬ್ಬಿ ಅದನ್ನ ಸ್ಪಷ್ಟಮಾಡುತ್ತದೆ. ನಿಜವಾದ ಕೊಲೆಗಾರ ಕಿವಿಯ ರಿಂಗು ಬೀಳಿಸಿಕೊಂಡ. ಆ ಕೊಲೆಗಾರ ಮಹಡಿಯ ಮೇಲೇ ಇದ್ದ. ಕೋಚ್ ಮತ್ತೆ ಪೆಸ್ಟ್ರ್ಯಕೋವ್ ಬಾಗಿಲು ಬಡಿದಾಗ ಮನೆಯ ಒಳಗೇ ಇದ್ದು ಬಾಗಿಲು ಹಾಕಿಕೊಂಡಿದ್ದ. ಕೋಚ್ ಪೆದ್ದನ ಥರ ಮೆಟ್ಟಿಲಿಳಿದು ಹೋದಾಗ ಕೊಲೆಗಾರ ಹೊರಕ್ಕೆ ಬಂದು ಓಡಿಕೊಂಡು ಮೆಟ್ಟಿಲಿಳಿದ. ಹಾಗೆ ಮಾಡದೆ ಅವನಿಗೆ ಬೇರೆ ದಾರಿ ಇರಲಿಲ್ಲ. ಮೆಟ್ಟಿಲು ಇಳಿಯುವಾಗ ಮೇಲಕ್ಕೆ ಬರುತ್ತಿದ್ದ ಕೋಚ್, ಪೆಸ್ಟ್ರ್ಯಕೋವ್ ಮತ್ತು ವಾಚ್‍ಮ್ಯಾನ್ ಕಣ್ಣಿಗೆ ಬೀಳದ ಹಾಗೆ ಖಾಲಿ ಮನೆಯಲ್ಲಿ ಬಚ್ಚಿಟ್ಟುಕೊಂಡ. ಆ ಹೊತ್ತಿಗೆ ಸರಿಯಾಗಿ ಮಿಟ್ಕಾ ಮತ್ತೆ ನಿಕೊಲಾಯ್ ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೊರಕ್ಕೆ ಓಡಿಹೋಗಿದ್ದರು. ಕೊಲೆಗಾರ ಬಾಗಿಲ ಹಿಂದೆ ನಿಂತ. ವಾಚ್‍ಮ್ಯಾನು ಜೊತೆಗೆ ಮಿಕ್ಕವರೂ ಮಹಡಿ ಹತ್ತಿ ಹೋದರು.

ಅವರ ಹೆಜ್ಜೆ ಶಬ್ದ ಕೇಳದೆ ಎಲ್ಲವೂ ಶಾಂತವಾಗುವವರೆಗೆ ಕಾದ. ಆಮೇಲೆ ಮಿಟ್ಕಾ ನಿಕೊಲಾಯ್ ಇಬ್ಬರೂ ಕೆಳಗೆ ಮಕ್ಕಳ ಹಾಗೆ ಜಗಳವಾಡುತ್ತಿರುವಾಗ ಬಹಳ ಶಾಂತಚಿತ್ತನಾಗಿ, ಆರಾಮವಾಗಿ ನಡೆದುಕೊಂಡು ಗೇಟು ದಾಟಿ ಹೋದ. ಯಾರಾದರೂ ಅವನನ್ನ ನೋಡಿರಬಹುದು. ಆದರೆ ಗಮನ ಕೊಟ್ಟಲಿಲ್ಲ. ಬಹಳ ಜನ ಓಡಾಡತಾ ಇದ್ದರು. ಅವನು ಖಾಲಿ ಮನೆಯಲ್ಲಿ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡಿದ್ದಾಗ ವಡವೆ ಡಬ್ಬಿ ಅವನ ಜೇಬಿನಿಂದ ಜಾರಿ ಬಾಗಿಲ ಹಿಂದೆ ಮೂಲೆಯಲ್ಲಿ ಬಿದಿರಬೇಕು. ಅದು ಅವನಿಗೆ ಗೊತ್ತಾಗಿಲ್ಲ. ಯಾಕೆಂದರೆ ಅವನ ಮನಸ್ಸಿನ ತುಂಬ ಬೇರೆ ವಿಚಾರಗಳೇ ಇದ್ದವು. ವಡವೆ ಡಬ್ಬಿ ಸಿಕ್ಕಿದೆಯಲ್ಲ ಅದರಿಂದಲೇ ಕೊಲೆಗಾರ ಬಾಗಿಲ ಹಿಂದೆ ಅಡಗಿದ್ದ ಅನ್ನುವುದು ತಿಳಿಯುತ್ತದೆ!’

‘ಜಾಣ, ಬ್ರದರ್, ನೀನು ಜಾಣ. ನಿಜವಾಗಲೂ! ಇದಕ್ಕಿಂತ ಜಾಣ ವಿವರಣೆ ಸಾಧ್ಯವೇ ಇಲ್ಲ!’

‘ಯಾಕೆ, ಯಾಕೆ?’

‘ಟೈಮಿಂಗು… ಎಲ್ಲ ಎಷ್ಟು ಅಚ್ಚುಕಟ್ಟಾಗಿ ಹೊಂದಿಕೊಳ್ಳತವೆ, ನಾಟಕದಲ್ಲಿ ಆಗುವ ಹಾಗೆ.’

‘ಅಯ್ಯ್…’ ರಾಸ್ಕೋಲ್ನಿಕೋವ್ ಚೀರುವುದರಲ್ಲಿದ್ದ. ಅಷ್ಟರಲ್ಲಿ ಬಾಗಿಲು ತೆರೆದುಕೊಂಡು ಹೊಸಬನೊಬ್ಬ, ರೂಮಿನಲ್ಲಿದ್ದವರು ಯಾರೂ ನೋಡಿರದವನು, ಒಳಕ್ಕೆ ಬಂದ.