ಕೀಲೆಣ್ಣೆ ಅಥವಾ ಹೆರೆಣ್ಣಿ ಹಾಕುವ ಚಟಗಿ ಅಂದರೆ ಬಾಟಲಿಯು ಸಂಧಿಯೋ ಸಮಾಸವೋ ಆಗಿ ಈ ‘ಹೆರ್ಚಟಗಿ’ ಎಂಬ ಪದವೊಂದು ನಮ್ಮೂರ ಜನರ ಬಾಯಲ್ಲಿ ರೂಪುಗೊಂಡಿತ್ತು. ಊರಲ್ಲಿ ಹೀಗೆ ಎಲ್ಲರಿಗೂ ಒಂದೊಂದು ಅನ್ವರ್ಥ ನಾಮ ಅಂಟಿಕೊಂಡಿರುತ್ತದಲ್ಲ. ನನ್ನ ಅನ್ವರ್ಥನಾಮ ‘ಹೆರ್ಚಟಗಿ’. ಅದರ ಪದವಿವರಣೆ ಏನೇ ಇರಲಿ, ಹಾಗೆ ಊರಲ್ಲಿ ಹಾಗೆ ಕರೆಸಿಕೊಂಡಾಗ, ನನ್ನ ಮನದೊಳಗೆ ಮೂಡುವ ಭಾವಕ್ಕೆ ಮಾತ್ರ ನಾಮಕರಣ ಮಾಡುವುದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಒಳಗೊಳಗೇ ನಗು ಮೂಡುತ್ತದೆ. -ವೀರಣ್ಣ ಮಡಿವಾಳರ ಬರೆಯುವ ತಾರೆಗಳ ಹಿಡಿಯುವೆವು ಅಂಕಣ ಇಂದಿನ ಓದಿಗಾಗಿ.
ಅಂಗನವಾಡಿಯ ಮೆಟ್ಟಿಲು ಹತ್ತಲೇ ಇಲ್ಲ ನಾನು. ಅದೆಲ್ಲಿತ್ತು ಅಂತ ಈಗ ನೆನಪಿಸಿಕೊಂಡರೆ ನೆನಪಾಗುವುದು ಗೋಣಿಬಸಪ್ಪನ ಗುಡಿ. ಮತ್ತೊಂದು ನಮ್ಮ ಅಲೈದೇವರನ್ನ ಕೂರಿಸುತ್ತಿದ್ದ ಒಂದು ಬಾಗಿಲಿಲ್ಲದ ಭವನ. ಮಕ್ಕಳನ್ನ ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದವರು ಮಕ್ಕಳನ್ನು ಅಲ್ಲಿ ಬಿಟ್ಟು ಹೋಗುವ ಜಾಗವದು ಎಂದುಕೊಂಡಿದ್ದೆ. ಅಳುವ ಪುಟ್ಟ ಮಕ್ಕಳನ್ನ ಸಮಾಧಾನಪಡಿಸಲೆಂದೇ ಅಲ್ಲಿನ ‘ಅಂಗನವಾಡಿ ಅಕ್ಕೋರು’ ಇದ್ದಾರೆ ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು. ನಮ್ಮ ಮನೆಯಲ್ಲಿ ಯಾರೂ ಕೂಡ ನನ್ನನ್ನ ಅಂಗನವಾಡಿಗೆ ಸೇರಿಸುವ ಮನಸ್ಸೇ ಮಾಡಲಿಲ್ಲ. ಅದ್ಯಾಕೋ ನನಗೆ ಗೊತ್ತಿಲ್ಲ. ಆದರೆ ಒಂದಂತೂ ಅನಿಸುತ್ತದೆ ಬಹುಶಃ ಮನೆಕೆಲಸ, ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗುವ ಕಾರಣಕ್ಕಾಗಿ ನಾನು ಅಂಗನವಾಡಿ ಸೇರಲಾಗಲಿಲ್ಲವೇನೋ ಎಂದು. ಇನ್ನೊಂದು ನನಗೆ ನಾಲ್ಕೈದು ವರ್ಷವಾಗಿದ್ದಾಗ ನಾನು ಬಹಳ ದೊಡ್ಡವನು ಎಂಬ ಭಾವನೆ ನನ್ನೊಳಗೆ ಮನೆ ಮಾಡಿತ್ತು. ಅದಕ್ಕೆ ಕಾರಣ ನಾನು ಯಾವಾಗಲೂ ನನಗಿಂತ ದೊಡ್ಡವರೊಡನೆ ಆಡುತ್ತಿದ್ದುದು ಓಡಾಡುತ್ತಿದ್ದುದು, ಒಡನಾಡುತ್ತಿದ್ದುದೇ ಆಗಿತ್ತು. ಬಹುಶಃ ಇದೂ ಒಂದು ಕಾರಣವಾಗಿ ನನಗೆ ಅಂಗನವಾಡಿಯ ಬಗ್ಗೆ ಆಸಕ್ತಿ ಬರಲಿಲ್ಲವೇನೋ.
ನಾನು ನನ್ನ ವಯಸ್ಸಿನವರಿಗಿಂತ ದೊಡ್ಡವನು ಎಂಬ ಭಾವ ನನ್ನೊಳಗೆ ಮೂಡಿರಲು ಮುಖ್ಯ ಕಾರಣ ಅಲ್ಲಿನ ಬಹುತೇಕರು ‘ಈರ ಬಹಳ ಬುದ್ಧಿವಂತ’ ಎಂಬ ಪ್ರೀತಿ ಮತ್ತು ಆದರಗಳಿಂದ ನನ್ನನ್ನ ಕಾಣುತ್ತಿದ್ದುದೂ ಕೂಡ ಆಗಿತ್ತು. ಬೆಳಗಾಯಿತೆಂದರೆ ಹೈನಿದ್ದವರ ಮನೆ ಮನೆ ತಿರುಗಿ ಮೊಸರು ತರುವುದು, ಅಂಗಡಿಗೆ ಹೋಗಿ ಮನೆಗೆ ಅಗತ್ಯವಾದ ಸಾಮಾನು ತರುವುದು. ಕೊಟ್ಟ ರೊಕ್ಕಕ್ಕೆ ಸರಿಯಾಗಿ ಲೆಕ್ಕ ಹೇಳುವುದು, ಎಷ್ಟು ಖರ್ಚಾಯಿತು, ಎಷ್ಟು ಉಳಿಯಿತು ಎಂದು ತೊದಲದೆ ಅಸ್ಖಲಿತವಾಗಿ ಹೇಳಬೇಕಾದ ಅಘೋಷಿತ ನಿಯಮವಿತ್ತು. ತೊದಲಿದರೆ ‘ಐದು ಹತ್ತು ಪೈಸೆ ಗೋಲ್ ಮಾಲ್ ಮಾಡ್ಯಾನ ಮಗಾ’ ಎಂಬ ಗುಮಾನಿ ಬಂದು ಮನೆಯವರೆಲ್ಲ ಛೇಡಿಸುತ್ತಿದ್ದರು.
ನನಗೆ ನಾಲ್ಕೈದು ವರ್ಷವಾಗಿದ್ದಾಗ ನಾನು ಬಹಳ ದೊಡ್ಡವನು ಎಂಬ ಭಾವನೆ ನನ್ನೊಳಗೆ ಮನೆ ಮಾಡಿತ್ತು. ಅದಕ್ಕೆ ಕಾರಣ ನಾನು ಯಾವಾಗಲೂ ನನಗಿಂತ ದೊಡ್ಡವರೊಡನೆ ಆಡುತ್ತಿದ್ದುದು ಓಡಾಡುತ್ತಿದ್ದುದು, ಒಡನಾಡುತ್ತಿದ್ದುದೇ ಆಗಿತ್ತು.
ಹತ್ತು ಗಂಟೆಯ ಹೊತ್ತಿಗೆ ಜನಗಳ ದನಗಳೆಲ್ಲ ಮೇಯಲು ಹೋದ ಮೇಲೆ ಮನೆಯಲ್ಲಿ ಬುತ್ತಿಗಂಟು ತಯಾರಾಗುತ್ತಿತ್ತು. ನಸುಕಿನಲ್ಲೇ ಗಳೆ ಹೊಡೆಯಲು ಹೋಗಿರುತ್ತಿದ್ದ ಮಾಮಂದಿರಿಗೆ ಬುತ್ತಿ ತೆಗೆದುಕೊಂಡ ಹೋಗಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿರುತ್ತಿತ್ತು. ಪ್ರತಿ ಸಾರಿ ಬುತ್ತಿಗಂಟು ಹೊತ್ತು ಹೋಗುವ ಮುಂಚೆ ನನಗೆ ಹತ್ತು ಪೈಸೆ ಸಿಗುತ್ತಿತ್ತು ಮತ್ತು ಒಮ್ಮೆಲೇ ಹೋಗಲೊಪ್ಪದ ನನ್ನನ್ನ ನನ್ನ ಚಿಕ್ಕಮ್ಮ ಜುಲುಮಿ ಮಾಡಿ ಮಮತೆ ತೋರಿಸಿ ಒಪ್ಪಿಸಿ ಕಳುಹಿಸುತ್ತಿದ್ದಳು. ಈ ಎರಡು ಕಾರಣಗಳು ಐದು ವರ್ಷದವನಿದ್ದ ನನಗೆ ಏಳು ಸಮುದ್ರ ದಾಟಿ ಗುರಿಮುಟ್ಟಿ ಬರುವ ಧೈರ್ಯ ಉತ್ಸಾಹ ತುಂಬುತ್ತಿದ್ದವು. ಆದರೆ ಒಡಕಿನ ಹಳ್ಳದಲ್ಲಿ ಆಗಾಗ ಕಾಣಸಿಗುತ್ತಿದ್ದ ಮಿಕಗಳು ನನ್ನಲ್ಲಿ ಬಹಳಷ್ಟು ಅಂಜಿಕೆ ಹುಟ್ಟಿಸುತ್ತಿದ್ದವು. ಆದರೆ ನಾನು ಹೊಲಕ್ಕೆ ಹೋಗಲೇಬೇಕಿರುತ್ತಿತ್ತು. ಇದಕ್ಕೆ ಒಂದು ಉಪಾಯವಾಗಿ ನಾನು ಇಬ್ಬರು ಗೆಳೆಯರನ್ನ ಮಾಡಿಕೊಂಡಿದ್ದೆ. ಒಬ್ಬನು ಕಮ್ಮಾರ ಮಾನ್ಯಾ, ಇನ್ನೊಬ್ಬ ಗೊಲ್ಲರ ಶರಣ. ಬಹುತೇಕ ಸಂದರ್ಭಗಳಲ್ಲಿ ನಾವು ಮೂವರೂ ಜೊತೆಗೇ ಇರುತ್ತಿದ್ದೆವು. ನಮ್ಮ ನಮ್ಮಲ್ಲಿ ಕರಾರು ಏನೆಂದರೆ ನಾವು ಮೂವರೂ ಬುತ್ತಿಕೊಡಲು ಹೋಗುವುದು ಆದರೆ ಒಬ್ಬರ ಮನೆಯವರಿಗೆ ಮಾತ್ರವಲ್ಲ ನಮ್ಮ ಮೂವರೂ ಮನೆಯವರಿಗೆ ಅವರವರ ಹೊಲಕ್ಕೆ ಹೋಗಿ ಬುತ್ತಿಕೊಟ್ಟು ಬರುವುದು ಎಂಬ ಕಡ್ಡಾಯ ನಿಯಮ. ಒಡಕಿನ ಹಳ್ಳದ ಮಿಕಗಳನ್ನ ಎದುರಿಸಲು ನಾವು ಮೂವರೂ ಬಲವಾದ ಸೈನಿಕರು ಎಂಬ ಗಟ್ಟಿತನ ನಮ್ಮ ಮೂವರಲ್ಲೂ ಬರುತ್ತಿತ್ತು.
ಒಬ್ಬರ ಹೊಲವಾದ ನಂತರ ಮತ್ತೊಬ್ಬರ ಹೊಲ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದು ಮಾಮ ಕೊಟ್ಟಿರುತ್ತಿದ್ದ ಹತ್ತು ಪೈಸೆಯಲ್ಲಿ ಗುರುನ ಅಂಗಡಿಯಲ್ಲಿ ಆರು ಗುಂಡಾ (ಗೋಲಿ) ತೆಗೆದುಕೊಂಡು ಮೂವರೂ ಹಂಚಿಕೊಂಡು ಗುಂಡಾ ಆಡುವ ತಂಡಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆವು. ಒಮ್ಮೆ ಆಟ ಶುರುವಾಯಿತೆಂದರೆ ಸಾಕು ಜನಗಳ ದನ ವಾಪಸ್ ಮನೆಗೆ ಬಂದು ಹೊತ್ತು ಮುಳುಗಿ ಗುಂಡಾ ಇನ್ನೇನು ಕಣ್ಣಿಗೆ ಕಾಣಿಸುತ್ತಿಲ್ಲ ಎನ್ನುವಷ್ಟರ ಹೊತ್ತಿನವರೆಗೂ ಆಟದಲ್ಲಿ ಮಗ್ನರಾಗಿರುತ್ತಿದ್ದೆವು. ಗುಂಡಾ ಆಟದಲ್ಲಿ ನಾನದೆಷ್ಟು ಪಳಗಿದ್ದೆನೆಂದರೆ ಹತ್ತರಿಂದ ಮೂವತ್ತು ಅಡಿ ದೂರದಲ್ಲಿದ್ದರೂ ನಾನು ಗುಂಡಾವನ್ನು ಹೊಡೆಯುತ್ತಿದ್ದೆ ಮತ್ತು ಒಡೆಯುತ್ತಿದ್ದೆ. ಹಾಗಾಗಿ ನನ್ನನ್ನ ‘ಗುಂಡು ಹೊಡೆದ ಕೈ’ ಹೆರ್ಚಟಿಗಿದು ಎಂಬ ಬಿರುದು ನಾಮಾಂಕಿತಗಳು ನನಗೆ ಆಗ ಸಿಕ್ಕಿದ್ದವು.
ಹೌದು ‘ಹೆರ್ಚಟಿಗಿ’ ಎಂದರೆ ಇದು ನನ್ನ ಅನ್ವರ್ಥ ನಾಮ. ನಮ್ಮೂರಿನಲ್ಲಿ ನಾವು ಒಬ್ಬರನ್ನೊಬ್ಬರು ಓರಗೆಯವರನ್ನ ಯಾರೂ ಅವರವರ ಹೆಸರಿನಿಂದ ಕರೆಯುತ್ತಿರಲಿಲ್ಲ. ಬಹುತೇಕ ಎಲ್ಲರಿಗೂ ಅನ್ವರ್ಥ ನಾಮಗಳಿದ್ದವು. ನನಗೆ ‘ಹೆರ್ಚಟಿಗಿ’, ಗೊಲ್ಲರ ಶರಣನಿಗೆ ‘ಕೈಜಲ್ಲಿ’ ಮತ್ತು ಕಮ್ಮಾರ ಮೌನೇಶನಿಗೆ ‘ಕಬ್ಣ’. ಈ ಅಡ್ಡ ಹೆಸರುಗಳಿಂದ ನಮ್ಮನ್ನ ಬಹುತೇಕರು ಪ್ರೀತಿತುಂಬಿದ ಸಲಿಗೆಯಿಂದ ಕರೆಯುತ್ತಿದ್ದರಾದರೂ ಕೆಲವರು ವ್ಯಂಗ್ಯವಾಗಿ ಕಟಕಿಯಿಂದ ಬೈದಾಗ ತುಂಬಾ ಅವಮಾನವೆನಿಸುತ್ತಿತ್ತು. ಬಹುತೇಕರಿಗೆ ಈ ‘ಹೆರ್ಚಟಿಗಿ’ ಅಂದರೆ ಅರ್ಥವೇನು ಎಂಬುದು ತಲೆಯಲ್ಲಿ ಕೊರೆಯುತ್ತಿರಬಹುದು. ಚಕ್ಕಡಿಗಳ ಗಾಲಿಗೆ ಗ್ರೀಸ್ ತರದ ಕಪ್ಪು ಎಣ್ಣಿಯನ್ನ ಹಾಕುವುದನ್ನ ನೀವೆಲ್ಲ ನೋಡಿರುತ್ತೀರಿ. ಇದಕ್ಕೆ ಕೆಲವು ಕಡೆ ಕೀಲೆಣ್ಣೆ ಎಂದರೆ ನಮ್ಮ ಕಡೆ ಹೆರೆಣ್ಣಿ ಎನ್ನುತ್ತಾರೆ. ಈ ಹೆರೆಣ್ಣಿಯನ್ನು ಹಾಕುವ ಡಬ್ಬಿ ಅಥವಾ ಚಟಿಗಿಗೆ ಹೆರೆಣ್ಣಿ ಚಟಿಗಿ ಎನ್ನುತ್ತಾರೆ. ಈ ಹೆರೆಣ್ಣಿ ಚಟಿಗಿ ಎಲ್ಲರ ಬಾಯಲ್ಲಿ ಹೆರ್ಚಟಿಗಿ ಹೆರ್ಚಟಿಗಿ ಎಂಬುದಾಗಿತ್ತು. ನನ್ನನ್ನ ಈ ಹೆಸರಿನಿಂದ ಕರೆದವರೇ ಹೆಚ್ಚು. ಇದಕ್ಕೆ ಕಾರಣ ನಾನು ಕಡುಗಪ್ಪು ಬಣ್ಣದವನಾಗಿದ್ದುದೇ ಆಗಿತ್ತು. ಈಗಲೂ ನಾನು ಕಲಿವಾಳಕ್ಕೆ ಹೋದಾಗ ಯಾರಿಗೂ ‘ವೀರಣ್ಣ ಮಡಿವಾಳರ’ ಎಂದರೆ ಗುರುತು ಸಿಗುವುದಿಲ್ಲ. ಅಗಸರ ಈರ ಎಂದರೆ ಅರ್ದ ಜನಕ್ಕೆ ತಿಳಿಯುತ್ತದೆ. ಹೆರ್ಚಟಿಗಿ ಎಂದರೆ ಪಕ್ಕಾ ಎಲ್ಲರೂ ಗುರುತಿಸುತ್ತಾರೆ.
ಬಲಗೈಯಲ್ಲಿ ಗುಂಡಾ ಹೊಡೆಯುತ್ತಾ, ಎಡಗೈಯಲ್ಲಿ ಎಲ್ಲ ಕಾಲದಲ್ಲು ಧಾರಾಕಾರ ಸುರಿಯುತ್ತಿದ್ದ ಶಿಂಬಳ ಒರೆಸಿಕೊಳ್ಳುತ್ತಾ ಓಡಾಡುತ್ತಿದ್ದ ನಾನು ಮಾಸ್ತರನಾದ ಮೇಲೆ ಬೈಕ್ ತೆಗೆದುಕೊಂಡು (ಸಾಲ ಮಾಡಿ) ಕಲಿವಾಳಕ್ಕೆ ಹೆಜ್ಜೆ ಇಟ್ಟರೆ ನನಗೆ ದೂರದಿಂದ ಯಾರೋ ಮಾತನಾಡುತ್ತಿದ್ದುದರಲ್ಲಿ ಕೇಳಿಸಿದ್ದೇನು “ ಲೇ ಅಲ್ನೋಡ್ರಲೇ, ಹೆರ್ಚಟಿಗಿ ಮಾಸ್ತರಾಗ್ಯಾನಂತ! ಬೈಕ್ ಮ್ಯಾಲ ಹೆಂಗ ಬರ್ತಾನ ನೋಡ್ರಲೇ!”. ಇದನ್ನ ಕೇಳಿಸಿಕೊಂಡ ನನಗೆ ಒಳಗೊಳಗೆ ನಗು ಮತ್ತು ಹೇಳಲಸದಳ ಭಾವ, ಈ ಭಾವಕ್ಕೊಂದು ಹೆಸರು ನನಗಿನ್ನೂ ಸಿಕ್ಕಿಲ್ಲ.
ಇನ್ನು ಕೈಜಲ್ಲಿ ಮತ್ತು ಕಬ್ಣದ ವಿಷಯ. ಈ ಕೈಜಲ್ಲಿ ಎಂದರೆ ಈಚಲು ಮರದಿಂದ ಮಾಡಿದ ಜಲ್ಲಿಗಳನ್ನ ನೀವು ನೋಡಿರುತ್ತೀರಿ. ಇದರಲ್ಲಿ ಬೇರೆ ಬೇರೆ ವಿಧದ ಜಲ್ಲಿಗಳಿವೆ. ಈ ಕೈಜಲ್ಲಿ ಎಂದರೆ ಸಗಣಿ ತುಂಬಿ ಚಲ್ಲಲು ಬಳಸುವ ಜಲ್ಲಿ ಅಥವಾ ರಾಶಿ ಮಾಡಿದಾಗ ಚೀಲ ತುಂಬಲು ಬಳಸುವ ಜಲ್ಲಿ. ಈ ಜಲ್ಲಿ ಸ್ವಲ್ಪ ಅಗಲವಾಗಿದ್ದು ಅದರಲ್ಲಿ ನೆಗುವ ಬಹುದಾದ ಭಾರವನ್ನ ತುಂಬಬಹುದಾಗಿರುತ್ತದೆ. ಗೊಲ್ಲರ ಶರಣ ಗಿಡ್ಡ ಮತ್ತು ಅಗಲವಾಗಿದ್ದ. ಹಾಗಾಗಿ ಅವನಿಗೆ ಈ ಹೆಸರು. ಈ ಕಬ್ಣ ಎಂದರೆ ಪಕ್ಕಾ ಕಬ್ಬಿಣವೇ. ಈ ಹೆಸರು ಕಮ್ಮಾರ ಮಾನ್ಯಾನಿಗೆ ಬರಲು ಕಾರಣ ವಿವರಿಸಲೇಬೇಕಿಲ್ಲ. ಆದರೆ ಸ್ವಾರಸ್ಯವೆಂದರೆ ಅವನೂ ಕಬ್ಬಿಣದಂತೆ ಕಪ್ಪಗಿದ್ದ ಎಂಬುದು ಒಂದೆಡೆಯಾದರೆ ಮಾನ್ಯಾ ನಾನು ಶರಣ ಯಾವಾಗಲೂ ಕುಲುಮೆಯಲ್ಲಿ ತುಂಡು ಕಬ್ಬಿಣ ಆಯ್ದು ಮಧ್ಯಾಹ್ನದೊತ್ತಿಗೆ ಬರುತ್ತಿದ್ದ ಬರ್ಪಿನ ಶಂಕ್ರಣ್ಣನ ಹತ್ತಿರ ಆ ಕಬ್ಬಿಣ ಕೊಟ್ಟು ಬರ್ಪು ತಿನ್ನುತ್ತಿದ್ದೆವು. ಕಬ್ಬಿಣದ ತುಂಡು ಸಿಗದೇ ಹೋದ ಪಕ್ಷದಲ್ಲಿ ಮನೆಯಲ್ಲಿ ಬಿದ್ದಿರುತ್ತಿದ್ದ ಕಬ್ಬಿಣದ ತುಂಡುಗಳನ್ನ ಮಾನ್ಯಾ ಕದ್ದು ತರುತ್ತಿದ್ದ. ಇದೂ ಕೂಡ ಮಾನ್ಯಾನಿಗೆ ಕಬ್ಣ ಕಬ್ಣ ಎಂದು ಕರೆಯಲು ಕಾರಣವಾಗಿತ್ತು.
ನನ್ನ ಬಾಲ್ಯಕ್ಕೆ ಜೀವ ತುಂಬಿದ್ದ ಗೊಲ್ಲರ ಶರಣ ನನ್ನ ಆಪ್ತಮಿತ್ರ ‘ಕೈಜಲ್ಲಿ’ ಇತ್ತೀಚೆಗೆ ಹದಿಹರೆಯದಲ್ಲೇ ತೀರಿಹೋದದ್ದು ನನಗೆ ಗೊತ್ತಾದದ್ದು ನನ್ನ ಸೋದರ ಮಾವ ನನ್ನ ಗುರು ಕೋಟೆಪ್ಪ ತೀರಿಹೋದದಿನ, ನಾನು ಆತನ ಶವಸಂಸ್ಕಾರಕ್ಕೆ ಹೋದದಿನ ಶರಣನ ತಾಯಿ ಹೇಳಿ ಕಣ್ಣೀರಿಟ್ಟಾಗಲೇ…
ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿರುವ ವೀರಣ್ಣ ಮಡಿವಾಳರ ಅವರು ಕವಿ, ನಾಟಕಕಾರ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಯಭಾಗದ ಬಳಿ ನಿಡಗುಂದಿ ಎಂಬಲ್ಲಿ ಕನ್ನಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು. ನೆಲದ ಕರುಣೆಯ ದನಿ ಅವರು ಬರೆದ ಕವನ ಸಂಕಲನ.ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ -ಖಂಡಕಾವ್ಯ ತೆರೆಯದ ಪುಟ – ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರದರ್ಶನಕ್ಕೆ ಆಯ್ಕೆಯಾಗಿ ನಾಡಿನಾದ್ಯಂತ ಪ್ರದರ್ಶನ ಕಂಡಿದೆ.
ಉತ್ತಮ ಲೇಖನ ಮಡಿವಾಳರೆ ???
Super sir namma balya nenapaytu
ವೀರಣ್ಣವರ ನಮಸ್ಕಾರ‌್ರೀ… ಉತ್ತರ ಕರ್ನಾಟಕ ಭಾಸೇದಾಗ ಭಾಳ ಚೆಂದ್ ಬರದೀರಿ. ನಾವ್ ಸಣ್ಣವರಿದ್ದಾಗಿನ ಎಲ್ಲಾ ನೆನಪು ಕಣ್ ಮುಂದ್ ಬಂದ ಹ್ವಾದ್ವ ನೋಡ್ರಿ. ಆ ಹೆರ್ಚಟಗಿ, ಕೈಜಲ್ಲಿ, ಕಬ್ಣ ಅನ್ನೋ ಅಚ್ಚ ಉ.ಕ ಭಾಷೆ ಐತೆಲ್ಲ ಬ್ಯಾರೆ ಯಾರಗೂ ಅರ್ಥ ಆಗೋದಿಲ್ಲ ಬಿಡ್ರಿ. ಅಂಥಾವ್ನ ಎಲ್ಲಾರಗೂ ನೀವ್ ಪರಿಚಯ ಮಾಡಿಕೊಟ್ರಿ.
ಸವಿ ಸವಿ ನೆನಪು ಸಾವಿರ ನೆನಪು… ಅಂತ ನಮ್ಮೆಲ್ಲ ನೆನಪುಗಳಿಗೆ ನಿಮ್ಮ ಈ ವರ್ಣಗಳು ಬಣ್ಣ ತುಂಬ್ಯಾವು. ತುಂಬಾ ಧನ್ಯವಾದ ನಿಮಗ.
ಭಾಷೆಯ ಹದ, ಬಾಲ್ಯಕ್ಕೂ ಜೀವನ್ಮುಖಿ ಸ್ಪರ್ಶ ನೀಡುವ ಮುದ, ಮನಸ್ಸು ಮುಟ್ಟುತ್ತದೆ. ಬರವಣಿಗೆ ಜೀವನ ಪ್ರೀತಿಯ ಮೆರವಣಿಗೆಯಂತಿದೆ….. ಧನ್ಯವಾದ ವೀರಣ್ಣ ಸರ್…
‘ಗುಂಡು ಹೊಡೆದ ಕೈ’ ವೀರಣ್ಣ ಗುಂಡು ಹಾರಿದಂತೆ ಕವಿತೆಗಳ ವಾಚಿಸುತ್ತಿದ್ದರೆ, ಕೇಳುವುದೇ ನಮ್ಮ ಕಿವಿಗಳಿಗೊಂದು ಹಬ್ಬ, ಈ ಕವಿಯ ಸೂಕ್ಷ್ಮ ಮತ್ತು ಕುತೂಹಲಕರ ಆತ್ಮ ಕಥನ ಬಹುಬೇಗ ಪೂರ್ಣಗೊಳ್ಳಲಿ ಎಂದು ಹಾರೈಸುವೆ.
ಹೃದಯಸ್ಪರ್ಶಿ ಲೇಖನ . ನಮ್ಮ ಎಲ್ಲರ ಬಾಲ್ಯದ ದಿನಗಳು ನೆನಪಾದವು