ಆಕೆ ಸಿಕ್ಕದಿದ್ದರೂ ಊರು ನಿಧಾನಕ್ಕೆ ಅಮ್ಮನನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಪೊರೆಯುತ್ತಿತ್ತು. ಆದರೆ ಜಯಮ್ಮನ ಸ್ನೇಹದ ರುಚಿ ಸಿಗದೆ ನಷ್ಟವಾಗುತ್ತಿತ್ತು. ಯಾವುದೋ ಊರಿನ ಹೆಂಗಸು ಇಲ್ಲಿ ಬಂದಿಳಿದರೆ ನನಗೇನಾಗಬೇಕು? ನೆಂಟರಾ? ಇಷ್ಟರಾ? ಎಂದಾಕೆ ದೂರವುಳಿಯಬಹುದಿತ್ತು. ಹೊಸ ಊರಿನಲ್ಲಿ ಮನೆತನಕ ಬಂದು ಮಾತನಾಡುತ್ತಾ ಕೂರುವ ಈ ಹೆಂಗಸಿಗೆ ನನ್ನಿಂದ ಏನಾದರೂ ಸಹಾಯದ ನಿರೀಕ್ಷೆಯಿದೆಯೆ? ನಂಬಿಸಿ ಮೋಸ ಮಾಡಿದರೇನು ಗತಿ? ಎಳೆಮಗುವನ್ನು ಇವಳ ಕೈಗಿತ್ತು ಹೇಗೆ ಹೋಗಲಿ? ಎಂದೆಲ್ಲ ಅನುಮಾನಿಸಿ ಅಮ್ಮನೂ ಚಿಪ್ಪಿನೊಳಗೆ ಸೇರಬಹುದಿತ್ತು. ಆದರೆ ಅಕಾರಣ ಪ್ರೀತಿಯನ್ನು ಅಷ್ಟೇ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದರಿಂದ ಸ್ನೇಹದ ಬಳ್ಳಿ ಹಬ್ಬಿತ್ತು. ಇರುವಷ್ಟು ಕಾಲ ಮಲ್ಲಿಗೆ ಸುರಿದಿತ್ತು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ
ಈ ಸಲ ಎಲ್ಲರನ್ನೂ ಮುವ್ವತ್ತು ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುವ ಮನಸ್ಸಾಗುತ್ತಿದೆ. ಏನೆಲ್ಲ ಬದಲಾದರೂ, ಬದಲಾವಣೆಯೊಂದೇ ಶಾಶ್ವತವೆಂದರೂ, ಕಳೆದ ಕಾಲದ ಮೆಲುಕು ಎಷ್ಟೋ ಬಾರಿ ಸದ್ಯದ ದಂದುಗದಿಂದ ಪಾರಾಗಲು ದೊರಕುವ ಮಾಯಾಕಿಂಡಿ. ಪ್ರತಿ ಮಾತನ್ನು, ವ್ಯಕ್ತಿಯನ್ನು, ನಡೆಯನ್ನು ಅನುಮಾನದ ನೋಟದಲ್ಲೇ ಎದುರುಗೊಳ್ಳುವ ಕಾಲದಲ್ಲಿ ನಿರ್ಮಲ ಸ್ನೇಹವೊಂದು ಘಟಿಸುವುದು ಅಪರೂಪವಿರಬಹುದು. ಆದರೆ ಈಗ ಹೇಳಲಿರುವ ಕಾಲ ಮಾತ್ರ ಅಂಥದ್ದಲ್ಲ. ನೆನಪಾದರೆ ಅರಳುಮಲ್ಲಿಗೆ ದಂಡೆಯನ್ನು ಕಣ್ಣಿಗೊತ್ತಿಕೊಂಡು ಮುಡಿದ ಭಾವ.
ಮೂರು ವರ್ಷದ ಕೂಸು ಹಾಗೂ ಒಡಲಿನಲ್ಲಿ ಮೂರು ತಿಂಗಳ ಚಿಗುರನ್ನು ಹಿಡಿದುಕೊಂಡು ತಣ್ಣನೆ ಬೆಂಗಳೂರಿನಿಂದ ಮೈಸೂರಿನ ಬಿಸಿಲಿಗೆ ಬಂದಿಳಿದಾಗ ಅಮ್ಮನಿಗೆ ಹೊಸ ಜಾಗ ಕಗ್ಗಾಡಿನಂತೆ ಕಂಡಿತ್ತಂತೆ. ಅಪ್ಪನಿಗದು ಹುಟ್ಟಿ ಬೆಳೆದ ಊರೆಂಬ ಹೆಮ್ಮೆ. ಸೈಕಲ್ ಹತ್ತಿ ಒಂಭತ್ತಕ್ಕೆ ಮನೆ ಬಿಟ್ಟರೆ ಸಂಜೆ ಏಳರ ತನಕ ವಾಪಾಸು ಬರುವಂತಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ಮೂಲೆ ಅಂಗಡಿಯಲ್ಲಿ ದೊರತಿದ್ದೇ ತರಕಾರಿ, ಸಂಜೆಯಾದರೆ ಅಕ್ಕಪಕ್ಕದ ಮನೆಯ ನಡುವೆ ಎಂಥದ್ದೋ ಜಗಳ, ಓದಲು ಪುಸ್ತಕವಿಲ್ಲ. ಹೊಲಿಯಲು ಬಟ್ಟೆಯಿಲ್ಲ. ಎಷ್ಟಂತ ಮನೆ ಕೆಲಸ ಮಾಡುವುದು? ಹೇಗೋ ಏನೋ ಅಳುಕಿನಲ್ಲಿ ಅಮ್ಮ ತುಟಿ ಬಿಚ್ಚದೆ ಕುಳಿತಿರುತ್ತಿದ್ದಳಂತೆ.
“ಯಾವೂರವ್ವ ನಿಂದು? ಮತ್ತೆ ಎರಡನೇದಕ್ಕೆ ಭೀಮನ್ಸಿಯಂಗೆ ಕಾಣ್ತೀಯಲ್ಲವ್ವ… ವತ್ತಾರೆಯಿಂದ ಸಂಜೆಗಂಟ ಮನೇಲೆ ಕೂತು ಏನ್ ಮಾಡೀಯ? ಯಾವಾಗಾನ ಬಂದು ಮಾತಾಡುಸ್ಕೊಂಡ್ ಒಯ್ತೀನಿ ತೊಗೊ… ನಮ್ಮೂರಿಂದ ತಣ್ಣೀಕಾಳು ತಂದಿದ್ದೆ. ನಿಂಗೊಂದೊಸಿ ಮಡಿಕೊ” ಎಂದು ಆಗೀಗ ಮನೆಯ ಹತ್ತಿರ ಸುಳಿದು ಅಕ್ಕಪಕ್ಕದ ಮನೆಯವರು, ಅಂಗಡಿ, ಶಾಲೆ, ಹಿಟ್ಟಿನ ಗಿರಣಿ, ಡಾಕ್ಟರ್ ಶಾಪ್ ತೋರಿಸಿಕೊಟ್ಟವಳು ಜಯಮ್ಮ. ಹತ್ತಿರದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯಾ ಕೆಲಸದಲ್ಲಿದ್ದಾಕೆ. ನಸುಗಂದು ಬಣ್ಣದ ಲಕ್ಷಣವಾದ ಮುಖದ ಜಯಮ್ಮ ಜಡೆಗೆ ಯಾವುದಾದರೂ ಹೂ ಮುಡಿಯದೆ ಹೊಸ್ತಿಲು ದಾಟಿದ್ದೇ ಇಲ್ಲ. ತುಂಬುನಗೆಯ ಅಕಾರಣ ಅಕ್ಕರೆಯ ಹೆಂಗಸು. ಜಯಮ್ಮನ ದೆಸೆಯಿಂದಲೇ ಅಮ್ಮ ನನ್ನನ್ನು ಅದೇ ಕನ್ನಡ ಶಾಲೆಗೆ ಸೇರಿಸಿದ್ದಳು. “ಮನೇಲದಿಯಾ ಕಮಲವ್ವ? ನಿನ್ ಮಗಳಿಗೆ ಜ್ವರ ಸುಡ್ತಿತ್ತು. ಕ್ರೋಸಿನ್ ಮಾತ್ರೆ ತಿನ್ನಿಸ್ಕೊಂಡೇ ಕರ್ಕೊಂಡು ಬಂದೀವ್ನಿ. ಸಂಜೆಗಂಟ ನೋಡಿ ಡಾಕ್ಟರ್ ತಾವ ಓಗ್ಬನ್ನಿ” ಎಂದು ಅದೆಷ್ಟು ಸಲ ಶಾಲೆಯಿಂದ ನನ್ನನ್ನು ಸೊಂಟದಲ್ಲಿ ಹೊತ್ತುಕೊಂಡು ತಂದುಬಿಟ್ಟಳೋ, “ಕನಕಾಂಬರ ದಿಂಡು ಕಟ್ಟಿವ್ನಿ… ನಿಂದೇ ಗ್ಯಪ್ತಿಯಾಯ್ತು. ತಗಬಂದೆ..” ಎಂದು ಹೂ ಕೊಟ್ಟಳೋ, “ಕಾಳು ಕಡ್ಡಿ ನಮ್ ಹಳ್ಳಿಲಿ ಸಿಕ್ಕಂಗೆ ಇಲ್ಲಿ ಸಿಗಲ್ಲ ಕಮಲವ್ವ. ಮುಂದಿನ ಸಲ ಹೆಸರುಕಾಳು ತರ್ತೀನಿ ನೀನೇ ನೋಡೀವ್ಯಂತೆ” ಎಂದು ಕಾಳು ಸೊಪ್ಪು ತಂದಿತ್ತಳೋ, “ಅಯ್ಯ… ಅದ್ಯಾಕೆ ಇಬ್ರು ಯೆಣ್ಮಕ್ಳೆ ಅಂತ ಕಣ್ಣೀರಾಕ್ತೀಯ? ಹೆಣ್ಣಲ್ಲ… ಗಂಡು ಹೆತ್ತೀವ್ನಿ ಅನ್ಕೊಂಡು ಗಟ್ಟಿಯಾಗಿ ಸಾಕು. ನೀನ್ ಮಾಡಿದ್ ದೇವ್ರು ದಿಂಡ್ರು ಕಾಪಾಡ್ತದೆ. ನಿನ್ ಮಕ್ಳು ತಣ್ಣಗಿರ್ತಾರೆ ಸುಮ್ಕಿರು. ನಾಳೆ ಕಂಡೋರ್ಯಾರು?” ಎಂದು ಅದೆಷ್ಟು ಸಮಾಧಾನ ಹೇಳಿದಳೋ ಲೆಕ್ಕವಿಲ್ಲ.
“ಕಮಲವ್ವ ಟೇಲರಿಂಗ್ ಪಾಠ ಯೇಳ್ತೀನಿ ಅಂದ್ಯಲ್ಲ… ನಮ್ ಮನೆ ತಾವ ಹೊಸದಾಗಿ ಅದೇನೋ ಯೆಣ್ ಮಕ್ಕಳ ಶಾಲೆ ಮಾಡೌರೆ. ಅಲ್ಲಿ ಒಂದ್ಮಾತು ಕೇಳ್ಕೊಂಡು ಬರವಾ ಬಾ” ಎಂದು ಕೆಲಸ ಕೊಡಿಸಿದ್ದಳು. “ಇಲ್ಲೇ ಮೂರು ಬೀದಿ ಆಚೆ ಕಸೂತಿ, ಡಿಜೈನ್ ಅದೇನೇನೋ ಯೋಳ್ಕೊಡ್ತಾರೆ. ನೂರು ರುಪಾಯಿ ಪೀಜು… ಸೇರ್ಕೊತೀಯಾ ಕಮಲವ್ವ?” ಎಂದು ಹೊಸ ಕಲೆಗೆ ದಾರಿ ತೋರಿಸಿದ್ದಳು. ಇಷ್ಟಾಗಿ ಅಮ್ಮ “ಏನೋ ಜಯಮ್ಮ… ಅದ್ಯಾವ ಜನ್ಮದಲ್ಲಿ ಅಕ್ಕ-ತಂಗಿ ಆಗಿದ್ವೋ? ಈ ಜನ್ಮದಲ್ಲಿ ಗೊತ್ತಿಲ್ಲದ ಈ ಊರಲ್ಲಿ ಅಕ್ಕನ ಹಾಗೆ ಜೊತೆಯಿದ್ದು ಕಷ್ಟಸುಖಕ್ಕೆ ಆಗ್ತಿದೀಯ.” ಎಂದು ಕಣ್ತುಂಬಿಕೊಂಡರೆ, “ಇವೆಲ್ಲ ಯಾವ ಸೀಮೆ ಸಹಾಯ ತಗಳಿ… ನೀವು ನಗ್ ನಗ್ತಾ ಇರ್ಬೇಕು. ಅದು ಮುಖ್ಯ ಕಂಡ್ರವ್ವ. ಯೆಣ್ಮಕ್ಳು ಕಣ್ಣೀರಾಕುದ್ರೆ ಮನೆಗೆ ಕೇಡು ಕಂಡ್ರವ್ವ” ಎಂದು ಬುದ್ಧಿ ಹೇಳಿ ಮಾತು ತೇಲಿಸಿ ಹೊರಟುಬಿಡುತ್ತಿದ್ದಳು.
ಮುಂದೆ ಜಯಮ್ಮನ ಬದುಕಿನಲ್ಲೇ ನೂರೆಂಟು ಏರಿಳಿತಗಳಾಗಿ ಹಳ್ಳಿಗೆ ವಾಪಸಾದಳು. ಆದರೆ ಇವತ್ತಿಗೂ ಅಮ್ಮನಿಗೆ ಮೈಸೂರಿನ ಮೊದಲ ಸ್ನೇಹಿತೆಯಾಕೆ. ಆಕೆ ಸಿಕ್ಕದಿದ್ದರೂ ಊರು ನಿಧಾನಕ್ಕೆ ಅಮ್ಮನನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಪೊರೆಯುತ್ತಿತ್ತು. ಆದರೆ ಜಯಮ್ಮನ ಸ್ನೇಹದ ರುಚಿ ಸಿಗದೆ ನಷ್ಟವಾಗುತ್ತಿತ್ತು. ಯಾವುದೋ ಊರಿನ ಹೆಂಗಸು ಇಲ್ಲಿ ಬಂದಿಳಿದರೆ ನನಗೇನಾಗಬೇಕು? ನೆಂಟರಾ? ಇಷ್ಟರಾ? ನಮಗ್ಯಾಕೆ ಊರ ಉಸಾಬರಿ? ಎಂದಾಕೆ ದೂರವುಳಿಯಬಹುದಿತ್ತು. ಹೊಸ ಊರಿನಲ್ಲಿ ಮನೆತನಕ ಬಂದು ಮಾತನಾಡುತ್ತಾ ಕೂರುವ ಈ ಹೆಂಗಸಿಗೆ ನನ್ನಿಂದ ಏನಾದರೂ ಸಹಾಯದ ನಿರೀಕ್ಷೆಯಿದೆಯೆ? ನಂಬಿಸಿ ಮೋಸ ಮಾಡಿದರೇನು ಗತಿ? ನಮ್ಮನೆ ಸಮಾಚಾರ ಊರಿಗೆಲ್ಲ ಹರಡಿ ಆಡಿಕೊಂಡು ನಕ್ಕರೇನು ಗತಿ? ಎಳೆಮಗುವನ್ನು ಇವಳ ಕೈಗಿತ್ತು ಹೇಗೆ ಹೋಗಲಿ? ಎಂದೆಲ್ಲ ಅನುಮಾನಿಸಿ ಅಮ್ಮನೂ ಚಿಪ್ಪಿನೊಳಗೆ ಸೇರಬಹುದಿತ್ತು. ಆದರೆ ಅಕಾರಣ ಪ್ರೀತಿಯನ್ನು ಅಷ್ಟೇ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದರಿಂದ ಸ್ನೇಹದ ಬಳ್ಳಿ ಹಬ್ಬಿತ್ತು. ಇರುವಷ್ಟು ಕಾಲ ಮಲ್ಲಿಗೆ ಸುರಿದಿತ್ತು.
ಕಾಲ ತನ್ನಷ್ಟಕ್ಕೆ ಓಡುತ್ತದೆ. ಜೊತೆಗೆ ಕಾಲದೊಂದಿಗೆ ಮನುಷ್ಯನ ರೀತಿ-ನೀತಿ, ವರ್ತನೆ, ಸ್ವಭಾವಗಳು ಬದಲಾಗಿವೆ. ಅಳೆದು ಸುರಿದು ತೂಗಿ ಗುಣಿಸಿ ವ್ಯಕ್ತಿಗಳಿಂದ ದೂರವಾಗಿ, ವಸ್ತುಗಳಿಗೆ ಹತ್ತಿರವಾಗಿ ಬದುಕುತ್ತಿದ್ದೇವೆ. ಯಾರದ್ದೋ ಮಾತು ಕೇಳಿ ನೋಯುತ್ತೇವೆ. ನೋಯಿಸುತ್ತೇವೆ. ದ್ವೀಪವಾಗಿ ಉಳಿದು ಗೆದ್ದೆನೆಂದು ಬೀಗುತ್ತೇವೆ. ದೂರವಾಗುವಾಗಲೂ ಮುಳ್ಳಿನ ಮೊನೆ ತಗುಲಿಸಿಯೇ ಹೊರಡುತ್ತೇವೆ. ನನ್ನಿಂದಲೇ ಎಲ್ಲ. ನನ್ನ ಹೆಸರ ಬಲದಿಂದಲೇ ಯಾರೋ ಪ್ರಸಿದ್ಧರಾಗುತ್ತಾರೆ, ಬೀಗುತ್ತಾರೆ, ಬೆನ್ನಿಗಿರಿದು ನಗುತ್ತಾರೆ ಎಂಬ ಭ್ರಮೆಗಳನ್ನು ಪೋಷಿಸುತ್ತೇವೆ. ಆದರೆ ಹೃದಯದ ಮಾತಿಗೆ ಕಿವಿಗೊಟ್ಟರಷ್ಟೇ ಘಟಿಸುವ ಇಂತದ್ದೊಂದು ಸಹಜ ಸ್ನೇಹ ಸಾಧ್ಯವಾದರೆ ಚೆನ್ನ. ಅಲ್ಲವೆ?

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.