ಕೇವಲ ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದಲೇ ಅದೆಷ್ಟೋ ಹೆಂಗಸರ ಗಂಡು ಜೀವನಸಂಗಾತಿಗಳು ಅವರನ್ನು ಬಿಟ್ಟುಹೋದದ್ದಿದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಧೈರ್ಯವನ್ನು ತುಂಬಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಕಥೆಗಳಿವೆ. ತಮ್ಮ ಖಾಸಗಿ ಜೀವನದಲ್ಲಿನ ತಮ್ಮ ಸ್ವಲಿಂಗ ಸಂಬಂಧ ಆಯ್ಕೆಯಿಂದಾಗಿ ಕೆಲವರು ಕೆಲಸದ ಸ್ಥಳದಲ್ಲಿ ತಾರತಮ್ಯಕ್ಕೊಳಗಾಗಿ, ಬೆರಳು ತೋರಿಸುವ ಮಂದಿಯ ಕೈಯಲ್ಲಿ ಅನಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅದೆಷ್ಟು ನರಳಿದ್ದಾರೆ. ಇಂತಹುದೇ ಲಿಂಗ ತಾರತಮ್ಯತೆ ಇಂದಿಗೂ ಪಾಶ್ಚಾತ್ಯದೇಶಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಕಾಣುತ್ತದೆ ಎನ್ನುವುದು ಸತ್ಯ. ಅದು ಹೊರಾಂಗಣ ಶಿಕ್ಷಣದಲ್ಲೂ ಎಷ್ಟು ಸತ್ಯವಾದದ್ದು ಎನ್ನುವುದನ್ನು ಅನೇಕ ಲೇಖಕಿಯರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಬಹಳ ದಿನಗಳಿಂದ ಈ ಪುಸ್ತಕದ ಬಗ್ಗೆ ಬರೆಯಬೇಕೆಂಬ ಆಲೋಚನೆಯಿತ್ತು. ಹೋದ ವರ್ಷ ಎರಡು ಜೋಡಿ ಪುಸ್ತಕ ಕಪಾಟುಗಳು ನಮ್ಮನೆಗೆ ಕಾಲಿಟ್ಟಾಗ ಅವಲ್ಲಿ ನಮ್ಮಲ್ಲಿರುವ ಪುಸ್ತಕಗಳನ್ನು ತುಂಬಿಡುವ ಭರಾಟೆಯಲ್ಲಿ ಅನೇಕ ಪುಸ್ತಕಗಳು ಸ್ಥಾನಪಲ್ಲಟಗೊಂಡಿದ್ದವು. ಜೋಡಿ ಕಪಾಟುಗಳು ಬಲು ಮುದ್ದಾಗಿದ್ದವು, ಹೊಸದಾಗಿ ಹುಟ್ಟಿದ ಮಗುವಿನಂತೆ, ಚಿಗುರಿದ ಮೊಳಕೆಯಂತೆ, ರಾತ್ರಿ ಮೊಗ್ಗಾಗಿದ್ದು ಬೆಳಕು ಹರಿದಾಗ ಅರಳಿ ನಸುನಕ್ಕ ಹೂವಿನಂತೆ ಅವು ನಮ್ಮ ಕಣ್ಣಿಗೆ ಕಾಣುತ್ತಿದ್ದವು. ಹಾರ್ನ್ ಬಿಲ್ ಹಕ್ಕಿಗಳ ಜೋಡಿಯಂತಿದ್ದ ಕಪಾಟುಗಳ ಚೆಂದವನ್ನು, ಗಾತ್ರವನ್ನು ನೋಡುತ್ತಾ ಆನಂದಿಸುವುದರಲ್ಲಿ ನಾವು ಮುಳುಗಿಹೋಗಿದ್ದೆವು. ಕಪಾಟುಗಳಲ್ಲಿ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ನಿಂತಿದ್ದರೂ, ಕೂತಿದ್ದರೂ, ಮಲಗಿದ್ದರೂ, ಕೆಲವು ಮುಖವಡಿಯಾಗಿದ್ದರೂ, ಇರುಕಿಸಿಕೊಂಡಿದ್ದರೂ ಪಾಪ, ಅವಕ್ಕೆ ಸಮಾಧಾನ ಹೇಳುತ್ತಾ ನಾವು ಕಪಾಟುಗಳ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದೆವು. ಇಷ್ಟೆಲ್ಲಾ ಸಮಾಚಾರದಲ್ಲಿ ಭಾರಿ ಮೈಯಿದ್ದರೂ ಕೂಡ ಈ ಒಂದು ಪುಸ್ತಕ ಮಾತ್ರ ಅದೆಲ್ಲೋ ಮಂಗಮಾಯವಾಗಿತ್ತು.

ಬೇಸಿಗೆ ರಜೆ ಮುಗಿಯುವ ಮುನ್ನ ಪಟ್ಟುಹಿಡಿದು ಹುಡುಕಿ ಕಡೆಗೂ ಅದು ಅಡಗಿದ್ದ (ನಾವು ಅಡಕಿದ್ದ) ಜಾಗವನ್ನು ಪತ್ತೆ ಹಚ್ಚಿ ಬಂಧನದಿಂದ ಬಿಡಿಸಿ ಅದನ್ನು ಮೇಜಿನ ಮೇಲಿಟ್ಟೆ. ಪುಸ್ತಕವನ್ನು ನೋಡಿದಾಗಲೆಲ್ಲ ಅದರ ಹುಟ್ಟಿನ ಹಿಂದೆ ಇದ್ದ ಅದೆಷ್ಟೋ ನೆನಪುಗಳು ಮರುಕಳಿಸುತ್ತಿದ್ದವು. ಆ ನೆನಪುಗಳಲ್ಲಿ ನನ್ನದು ರವೆಯಷ್ಟಾದರೆ ಕೆಲವರದ್ದು ಗುಡ್ಡದಷ್ಟು. ಇಂಥದ್ದೊಂದು ಪುಸ್ತಕವನ್ನು ಹೊರತರಬೇಕು ಎಂದು ಆಲೋಚಿಸಿದ ಅದರ ಇಬ್ಬರು ಮಾತೃಗಳಿಗೆ ಇನ್ನೆಷ್ಟು ನೆನಪುಗಳಿರಬೇಡ! ಇದನ್ನು ಆವಾಹಿಸಿಕೊಂಡು ಹೊತ್ತು ಹೆರುವುದಕ್ಕೆ ಬರೋಬ್ಬರಿ ನಾಲ್ಕು ವರ್ಷಗಳೇ ಹಿಡಿಸಿವೆ ಎಂದರೆ ಇದೆಂಥ ಅಪರೂಪದ ಪುಸ್ತಕವೆನ್ನುವುದು ಅರಿವಾಗುತ್ತದೆ.

ಸರಿಸುಮಾರು ಒಂದು ಸಾವಿರ ಪುಟಗಳಲ್ಲಿ ಇರುವ ಅನೇಕಾನೇಕ ಕಥೆಗಳ ನೆನಪಿನ ಬುತ್ತಿಯನ್ನು ಬಿಚ್ಚಿದಾಗ, ಬುತ್ತಿಯೊಳಗಿದ್ದ ಹೆಣ್ಣಿನ ಮನಸ್ಸನ್ನು, ಅದರ ತುಣುಕುಗಳನ್ನು ಬೇರೆಯವರು ನೋಡಿದಾಗ ಅವರಿಗೆ ಏನೆಲ್ಲಾ ಅನ್ನಿಸಿರಬೇಕು? ಇಬ್ಬರು ಸಂಪಾದಕಿಯರ (Tonia Gray ಮತ್ತು Denise Mitten) ನೇತೃತ್ವದಲ್ಲಿ ಒಟ್ಟು ಎಂಭತ್ತು ಮಹಿಳೆಯರು ಒಗ್ಗೂಡಿ, ಬಿಡಿಯಾಗಿ ಮತ್ತು ಜೋಡಿಯಾಗಿ ಲೇಖನಗಳನ್ನು ಬರೆದಿರುವ ಪರಿಯನ್ನು ಗಮನಿಸಿದರೆ ಮಾತೆ ಪಾರ್ವತಿ ತನ್ನ ಸುಕುಮಾರ ಗಣೇಶನನ್ನು ಸೃಷ್ಟಿ ಮಾಡಿದಂತೇನೋ, ಅದಕ್ಕಿಂತಲೂ ಸ್ವಲ್ಪ ಹೆಚ್ಚೇನೋ ಅನ್ನಿಸುತ್ತದೆ.

ಇಲ್ಲಿ ಬರೀ ಮೈಬೆವರಷ್ಟೇ ಇಲ್ಲ, ಬೆವರಲ್ಲಿ ಬೆರೆತ ‘ಹೊರಾಂಗಣ ಹೆಣ್ಣಿನ’ ಮೈಕೊಳೆಯೂ ಇದೆ. ಮಣ್ಣು, ನೀರನ್ನು ಬೆರೆಸಿ ಹದಮಾಡಿದ ಕುಂಬಾರಿಕೆಯ ಕುಶಲಕಲೆಯೇನೋ ಅಥವಾ ಹೆಣ್ಣು ತನ್ನ ಕೈಗಳಿಂದ ನೆಲದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದ ಗಿಡದಂತೆಯೋ ಎನ್ನುವ ಭಾವನೆಗಳು ಹುಟ್ಟುತ್ತವೆ.

(Tonia Gray)

ಪುಸ್ತಕದ ಹೆಸರು ‘The Palgrave International Handbook of Women and Outdoor Learning’. ಅದನ್ನು ಪ್ರಕಟಿಸಿರುವುದು Palgrave Macmillan ಮತ್ತು ತಾನು ಭಾಗವಾಗಿರುವ Springer Nature ಸಂಸ್ಥೆ. ಪ್ರಕಟಗೊಂಡ ವರ್ಷ ೨೦೧೮. ಪ್ರಕಟಗೊಂಡಿರುವ ಸರಣಿ ‘Gender and Education.’ ಆದಿಶಕ್ತಿಯಂತೆ ಬೃಹತ್ ಎನ್ನಿಸುವ ಪುಸ್ತಕದಲ್ಲಿ ೬೨ ಅಧ್ಯಾಯಗಳಿವೆ. ಅವನ್ನು ಬೇರೆಬೇರೆ ಆರು ಭಾಗಗಳ ಉಪ-ವಿಷಯಗಳಿಗೆ ಸರಿಹೊಂದುವಂತೆ ವಿಂಗಡಿಸಲಾಗಿದೆ.

ಗುಡ್ಡಬೆಟ್ಟಗಳನ್ನು ಏರುತ್ತಾ, ನದಿ ಸಮುದ್ರಗಳಲ್ಲಿ ಈಜುತ್ತಾ, ಬಂಡೆಯೇರುವುದನ್ನು ಕಲಿಸುತ್ತ, ದೋಣಿಯನ್ನು ನಡೆಸುವುದು ಹೇಗೆ ಎಂದು ಹೇಳಿಕೊಡುತ್ತ ಹೊರಾಂಗಣ ಕಲಿಕೆ ಎಂಬ ಕ್ಷೇತ್ರದಲ್ಲಿ ಕಷ್ಟಪಟ್ಟು ದುಡಿದ ಮಹಿಳೆಯರು ಇವರುಗಳು. ತಮ್ಮ ವಿದ್ಯಾರ್ಥಿಗಳೊಂದಿಗೆ, client ತಂಡಗಳೊಂದಿಗೆ, ಮಕ್ಕಳೊಂದಿಗೆ, ಕುಟುಂಬದೊಂದಿಗೆ ಕಾಡುಮೇಡುಗಳಲ್ಲಿ ಅಲೆದಾಡಿದವರು. ತಮ್ಮದೇ ಸಂಸ್ಥೆಗಳನ್ನು ನಡೆಸುತ್ತಲೋ, ಶಾಲೆ, ಕಾಲೇಜು, ಯೂನಿವರ್ಸಿಟಿಗಳಲ್ಲಿ ಪಾಠ ಹೇಳುತ್ತಲೊ, ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಲೋ ಇದ್ದು ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಅನುಭವಕಲಿಕೆಯನ್ನು ಜಪಿಸಿದ ತಪಸ್ವಿಗಳು.

ಇವರುಗಳು ಹೊರಾಂಗಣ ಕ್ಷೇತ್ರದಲ್ಲಿ ಪ್ರತಿಕ್ಷಣವೂ ತಮಗೆ ಎದುರಾದ ತೊಂದರೆಗಳನ್ನೂ, ಭಿನ್ನಮತೀಯರನ್ನೂ, ಸವಾಲುಗಳನ್ನೂ ಎದುರಿಸಿದ ಸಾಹಸಿ ಹೆಣ್ಣುಗಳು. ಎಲ್ಲಕ್ಕಿಂತಲೂ ಹೆಚ್ಚಾಗಿ ಹೊರಾಂಗಣ ಕಲಿಕೆ ಎಂಬ ಕ್ಷೇತ್ರವನ್ನು ಈ ಹಿಂದೆ ಆಳಿರುವ, ಈಗಲೂ ಆಳುತ್ತಿರುವ ಪುರುಷಪ್ರಾಧಾನ್ಯತೆಯನ್ನು, ಅದನ್ನು ಬೆಂಬಲಿಸುವ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಿ, ಪುರುಷರಿಗೆ ಸಮಾನವಾಗಿದ್ದ ತಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಗೆ ಸಲ್ಲಬೇಕಿದ್ದ ಮಾನ್ಯತೆಯನ್ನು ಕೇಳಿದವರು. ಹೆಣ್ಣು ಅಬಲೆ, ಬಹು ಮೃದು, ಸೂಕ್ಷ್ಮ ಮೈಮನಸ್ಸು ಉಳ್ಳವಳು, ಕೋಮಲಾಂಗಿ, ಅವಳನ್ನು ಜೋಪಾನಿಸಿ ನಾಲ್ಕುಗೋಡೆಗಳ ಮಧ್ಯೆ ಕ್ಷೇಮವಾಗಿರಿಸಿ ಅವಳಿಗೆ ಕೇರಿಂಗ್ ಮತ್ತು ಸರ್ವಿಂಗ್ ಪಾತ್ರಗಳನ್ನು ಕೊಟ್ಟು ಮೀಸಲಾತಿ ನೀಡಿದ ಸಮಾಜದ ನೆನಪಿನ ಪದರುಗಳನ್ನು ಈ ‘ಹೊರಾಂಗಣ ಹೆಣ್ಣುಗಳು’ ಬಿಡಿಸಿದವರು. ಆ ನೆನಪಿನ ಪದರುಗಳಲ್ಲಿ ಹೊರಾಂಗಣ ಕಲಿಕೆ ಕ್ಷೇತ್ರದಲ್ಲಿ ಅಪರಿಮಿತವಾಗಿ ಕೆಲಸ ಮಾಡಿದ್ದ ಹೆಣ್ಣುಗಳನ್ನು ಅದುಮಿದ್ದ, ಅಡಗಿಸಿದ್ದ, ಪಕ್ಕಕ್ಕೆ ಸರಿಸಿಟ್ಟಿದ್ದ, ಕೀಳೆಂದು ನೋಡಿದ್ದ, ಬೇಕಂತಲೇ ಮರೆ ತುಹೋಗಿದ್ದ ಅನೇಕ ಪ್ರಸಂಗಗಳಿದ್ದವು. ಹಾಗೆ ನಡೆದಿದ್ದ ಅನ್ಯಾಯಗಳನ್ನು ಹೂವಿನ ದಳಗಳನ್ನು ಬಿಡಿಸುವಂತೆ ನಾಜೂಕಾಗಿ ಬಿಡಿಸಿ ಎಂಭತ್ತು ಮತ್ತು ಎರಡು – ಎಂಭತ್ತೆರಡು ಹೆಣ್ಣು ಮನಸ್ಸುಗಳು ತಮ್ಮ ಕಥೆಗಳನ್ನು ಈ ಪುಸ್ತಕದಲ್ಲಿ ಲೋಕಾರ್ಪಣೆಯೆಂದು ಪ್ರಕಟಿಸಿದ್ದಾರೆ. ತಮ್ಮತಮ್ಮ ಕಥೆಗಳಲ್ಲಿ ಮಹಿಳಾ-ಅಧ್ಯಯನ, ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವ ಬಗೆಗಳ ಬಗ್ಗೆ ಅನೇಕ ಉಪಕಥೆಗಳನ್ನು ನೆನಪಿಸಿಕೊಂಡು ಅವನ್ನು ಪುಷ್ಟಿಯಾಗಿ, ಗಟ್ಟಿಯಾಗಿ ಬೆಳೆಸಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

(Denise Mitten)

ಈ ಪುಸ್ತಕ ಸ್ತ್ರೀವಾದ ಅಥವಾ ಮಹಿಳಾ ಸಮಾನತೆಯ ಬಗ್ಗೆ ಇಲ್ಲ, ಅಲ್ಲ. ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಹೆಂಗಸರ ವೃತ್ತಿಪರ ಅನುಭವಗಳು, ಅವುಗಳಿಗೆ ತಳುಕು ಹಾಕಿಕೊಂಡಿರುವ ಅವರ ಖಾಸಗಿ ಪ್ರಪಂಚ-ಕುಟುಂಬ, ಮಕ್ಕಳು, ಸ್ವಂತಿಕೆ, ಅಸ್ಮಿತೆ, ತಮ್ಮದೆಂಬ ಸಮಯ ಮತ್ತು ಜಾಗ, ಪ್ರೇಮ, ತಾಯ್ತನ, ಹೆಣ್ಣು ಎಂಬ ಕಾರಣದಿಂದಲೇ ತಮ್ಮ ಕೆಲಸದಲ್ಲಿ ಅವರಿಗೆದುರಾಗುವ ಸಂಕಷ್ಟಗಳು, ತಾರತಮ್ಯ ಇಲ್ಲಿ ಹೊಮ್ಮಿವೆ.

ಇಲ್ಲಿ ಬರೀ ಮೈಬೆವರಷ್ಟೇ ಇಲ್ಲ, ಬೆವರಲ್ಲಿ ಬೆರೆತ ‘ಹೊರಾಂಗಣ ಹೆಣ್ಣಿನ’ ಮೈಕೊಳೆಯೂ ಇದೆ. ಮಣ್ಣು, ನೀರನ್ನು ಬೆರೆಸಿ ಹದಮಾಡಿದ ಕುಂಬಾರಿಕೆಯ ಕುಶಲಕಲೆಯೇನೋ ಅಥವಾ ಹೆಣ್ಣು ತನ್ನ ಕೈಗಳಿಂದ ನೆಲದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದ ಗಿಡದಂತೆಯೋ ಎನ್ನುವ ಭಾವನೆಗಳು ಹುಟ್ಟುತ್ತವೆ.

ಅವುಗಳಲ್ಲಿ ಭಾವನೆಗಳು ತುಂಬಿವೆ, ಭಾವಾವೇಶವಿದೆ, ನವಿರುತನವಿದೆ, ಅಕಾಡೆಮಿಕ್ ಚರ್ಚೆಯಿದೆ. ತಮ್ಮ ನಾಯಕತ್ವ, ನಾಯಕಳಾದರೂ ಹೆಣ್ಣು ಕಲಿಯುತ್ತಾ ಹೋಗುವ ಪರಿ, ತಾವೆದುರಿಸುವ ಅನುಭವಗಳ ಮೂಸೆಯಲ್ಲಿ ಅವರಿಗೊದಗಿ ಬರುವ ಅವಕಾಶಗಳು, ಅಂತಹ ಅವಕಾಶಗಳಿಂದ ಅವರಲ್ಲಾಗುವ ಬದಲಾವಣೆಗಳು, ಆ ಬದಲಾವಣೆಗಳಿಂದ ಅವರ ಅಸ್ಮಿತೆಯಲ್ಲಿ ಆಗುವ ನಾಜೂಕು ಅಲ್ಲೋಲಕಲ್ಲೋಲಗಳು, ಇದೆಲ್ಲದರ ನಡುವೆ ಇರುವ ಅನೇಕ ಸ್ವಗತಗಳು, ಹಾಡು-ಕವನಗಳು… ಮುತ್ತುಗಳು ಪೋಣಿಸಿದ ಹಾರವೇನೋ ಇದು.

ಆಸ್ಟ್ರೇಲಿಯಾ, ನ್ಯೂಜಿಲಂಡ್, ಜಪಾನ್, ಭಾರತ, ಅಮೆರಿಕ, ಕೆನಡಾ, ಬ್ರಿಟನ್, ನಾರ್ವೆ, ಡೆನ್ಮಾರ್ಕ್ ಮತ್ತಿತರ ದೇಶಗಳ ವಿವಿಧ ಹೂಗಳನ್ನು ಸೇರಿಸಿ ಪೋಣಿಸಿ ಕಟ್ಟಿದ ಹಾರದಂತಿದೆ. ಕೈಗೆತ್ತಿಕೊಂಡಾಗ ಭಾರವೆನಿಸಿದರೂ ಸದಾ ಏನೋ ಒಂದು ಭಾರವನ್ನು ಹೊತ್ತೇ ಬದುಕುವ ನಮ್ಮ ಪ್ರಪಂಚದ ಹೆಂಗೆಳೆಯರು ಬರೆದ ಪುಸ್ತಕವೆನ್ನುವುದು ನೆನಪಾಗಿ ಪಾರಿಜಾತದ ಹಾರವಾಗುತ್ತದೆ. ಪುಸ್ತಕದ ಮುಖಪುಟದ ಮೇಲಿರುವ ಚಿತ್ರ ಹೆಣ್ಣೊಬ್ಬಳು ತನ್ನ ಬೆನ್ನಚೀಲವನ್ನು ಹೊತ್ತು, ಒಂದು ಪರ್ವತದ ಮೇಲೆ ನಿಂತಿರುವುದು. ಅವಳು ತನ್ನೆದುರು ಇರುವ ಬಿಸಿಲು ಹಾಸಿದ ಹೊನ್ನಬಣ್ಣದ ಶಿಖರಗಳನ್ನು ಮತ್ತು ದೂರದಿಗಂತದಲ್ಲಿ ಕಾಲವೆನ್ನುವುದಕ್ಕೆ ತಾವು ಸಾಕ್ಷಿ ಎಂಬಂತೆ ತಲೆಯೆತ್ತಿರುವ ಹಿಮಪರ್ವತಗಳನ್ನು ನೋಡುತ್ತಿರುವಂತಿರುವ ಚಿತ್ರವದು. ಆ ಚಿತ್ರ ಸೂಚಿಸುವ ಅನೇಕ ಪ್ರತಿಮೆಗಳನ್ನು ನಾವು ಅಲ್ಲಗೆಳೆಯಲಾಗುವುದಿಲ್ಲ.

ಭಾರತದಲ್ಲಿ ‘ಹೊರಾಂಗಣ ಶಿಕ್ಷಣ’ ಎಂಬ ವಿಷಯ ಸಾರ್ವತ್ರಿಕವಾಗಿ ಇನ್ನೂ ಬೆಳೆಯುವ ಹಂತದಲ್ಲಿದೆ. ಮನರಂಜನೆಗಾಗಿ ಬೆಟ್ಟ ಹತ್ತುವ, ಕಯಾಕ್ ನಡೆಸುವ, ಕಾಡುಮೇಡು ಸುತ್ತುವುದೇ ಒಂದು ವಿಷಯ. ನಮ್ಮ ನೈಸರ್ಗಿಕ ಪರಿಸರವನ್ನು ಅರ್ಥೈಸಿಕೊಂಡು, ಅದಕ್ಕೆ ಹೊಂದಿಕೊಂಡು, ಸಾಹಸ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಅಭ್ಯಸಿಸಲು ಅವನ್ನು (ಪರಿಸರ ಅಧ್ಯಯನ ಮತ್ತು ಪೂರಕ ಮಾನವ ಚಟುವಟಿಕೆಗಳು) ಶಿಕ್ಷಣವನ್ನಾಗಿ ಸ್ವೀಕರಿಸಿ ಅಧ್ಯಯನ ಮಾಡುವುದು ಪಾಶ್ಚಾತ್ಯ ದೇಶಗಳಲ್ಲಿ ಕಳೆದ ಒಂದು ನೂರು ವರ್ಷಗಳಿಂದ ಕ್ರಮಬದ್ಧವಾಗಿ ಬೆಳೆದಿದೆ. ಹೆಚ್ಚುಕಡಿಮೆ ಪಶ್ಚಿಮ ದೇಶಗಳಲ್ಲಿ ಎಲ್ಲರೂ ಗುರುತಿಸುವುದು Outward Bound ಎಂಬ ಹೊರಾಂಗಣ ಶಿಕ್ಷಣ ಪದ್ಧತಿಯನ್ನು. ಬ್ರಿಟನ್ ದೇಶದಲ್ಲಿ ೧೯೪೧ರಲ್ಲಿ ಇದನ್ನು ಆರಂಭಿಸಿದ Kurt Hahn ಇದಕ್ಕೂ ಮೊದಲೇ ೧೯೨೦ರಲ್ಲಿ ತನ್ನ ತವರು ದೇಶವಾದ ಜರ್ಮನಿಯಲ್ಲಿ Schule Schloss Salem ಎಂಬ ಶಾಲೆಯನ್ನು ಅದೇ ಉದ್ದೇಶದಿಂದ ಆರಂಭಿಸಿದ್ದರು. ಇವತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನ ಬಹು ಪ್ರಸಿದ್ಧಿಯಾದ Outward Bound ಸಂಸ್ಥೆಯಿಂದ ತರಬೇತಿ ಪಡೆದು ಹೊರಾಂಗಣ ಶಿಕ್ಷಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ Schule Schloss Salem ಬಗ್ಗೆ ಅಷ್ಟೊಂದು ಕೇಳಿಬರುವುದಿಲ್ಲ.

ಆ ಜರ್ಮನ್ ಶಾಲೆಯ ಹುಟ್ಟಿನ ಬಗ್ಗೆ ಇರುವ ಒಂದು ಸತ್ಯ ಇತ್ತೀಚೆಗೆ ಹೊರಬಂದಿದೆ. Kurt ಜೊತೆಯಲ್ಲಿ ನಿಂತು ಶಾಲೆಯನ್ನು ಸ್ಥಾಪಿಸಿದ ಕೀರ್ತಿ Marina Ewald ಎನ್ನುವ ಒಬ್ಬ ಹೆಣ್ಣಿಗೂ ಕೂಡ ಸಲ್ಲಬೇಕಿತ್ತು. ಆದರೆ ಆಕೆಯ ಹೆಸರನ್ನು ಎಲ್ಲೂ ಕೂಡ ಪ್ರಚಾರ ಮಾಡಲಿಲ್ಲ. Kurt ಹೆಸರು ಇಂದು ಅಜರಾಮರ; ಮರೀನಾ ಹೆಸರು ಯಾರಿಗೂ ಗೊತ್ತಿಲ್ಲ. ಅಮೆರಿಕನ್ ಹೊರಾಂಗಣ ಶಿಕ್ಷಕಿ ಡಿನೀಸ್ ಮಿಟೆನ್ ೨೦೧೪ರ ತಮ್ಮ ಆಸ್ಟ್ರೇಲಿಯಾ ಭೇಟಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಾಗ ಅಂದು ಅಲ್ಲಿದ್ದ ಸುಮಾರು ಹತ್ತು ದೇಶಗಳ ಹೊರಾಂಗಣ ಶಿಕ್ಷಣ ತಜ್ಞರು ಬೆಚ್ಚಿಬಿದ್ದರು. ಅಲ್ಲಿಯವರೆಗೂ ಮುಚ್ಚಿಟ್ಟಿದ್ದ ಅಥವಾ ಬೇಕೆಂದೆ ಮರೆತಿದ್ದ ಮರೀನಾ ಹೊರಬಂದರು. ಇಪ್ಪತ್ತನೇ ಶತಮಾನದ ಆರಂಭದಲ್ಲೇ ಮಹಿಳೆಯರು ಹೊರಾಂಗಣ ಶಿಕ್ಷಣದಲ್ಲಿ ನುರಿತವರಾಗಿದ್ದರು ಎಂಬುದು ಸಾಬೀತಾಯಿತು.

(Kurt Hahn)

ಇಂತಹುದೇ ಲಿಂಗ ತಾರತಮ್ಯತೆ ಇಂದಿಗೂ ಪಾಶ್ಚಾತ್ಯದೇಶಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಕಾಣುತ್ತದೆ ಎನ್ನುವುದು ಸತ್ಯ. ಅದು ಹೊರಾಂಗಣ ಶಿಕ್ಷಣದಲ್ಲೂ ಎಷ್ಟು ಸತ್ಯವಾದದ್ದು ಎನ್ನುವುದನ್ನು ಅನೇಕ ಲೇಖಕಿಯರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಲೇಖನಗಳಲ್ಲಿ ಅವರ ಸ್ಪಷ್ಟ ದನಿ ಕೇಳಿಸುತ್ತದೆ. ತಮ್ಮ ಜೀವನ, ಕೆಲಸ, ಅಧ್ಯಯನ ಮತ್ತು ಓದು ಎಲ್ಲವೂ ಆಗಿರುವ ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣನ್ನು ಮೂದಲಿಸುವ, ದೂಷಿಸುವ, ಕೈಬೆರಳು ತೋರಿಸಿ ಅನ್ನುವ, ‘ಹೆಣ್ಣು ರೂಪದ ಗಂಡು’ ಎಂದು ಆಡಿಕೊಳ್ಳುವ, ಅಮ್ಮನಾಗಿಬಿಟ್ಟರೆ ಸಾಕು ಆಯ್ತು ನಿನ್ನ ಕೆರಿಯರ್ ಮುಗಿಯಿತು ಎಂದು ನಗುವ ಮತ್ತೂ ಅದೆಷ್ಟೋ ತರಹದ ಮೂದಲಿಕೆ, ಕೊಂಕು, ಅಸಮಾನತೆಗಳನ್ನು, ಅನುಭವಗಳನ್ನು ಬಟ್ಟಬಯಲುಮಾಡುತ್ತವೆ. ಹಾಗೆ ಮಾಡುತ್ತಲೇ ಸಮಾಜದ ವಕ್ರಗಳನ್ನು, ಸಾಂಸ್ಕೃತಿಕ ಅಸಮಾನತೆಗಳನ್ನು, ಲಿಂಗ ತಾರತಮ್ಯತೆಯನ್ನು ಬಟಾಬಯಲುಮಾಡುತ್ತವೆ.

ಕೇವಲ ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದಲೇ ಅದೆಷ್ಟೋ ಹೆಂಗಸರ ಗಂಡು ಜೀವನಸಂಗಾತಿಗಳು ಅವರನ್ನು ಬಿಟ್ಟುಹೋದದ್ದಿದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಧೈರ್ಯವನ್ನು ತುಂಬಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಕಥೆಗಳಿವೆ. ತಮ್ಮ ಖಾಸಗಿ ಜೀವನದಲ್ಲಿನ ತಮ್ಮ ಸ್ವಲಿಂಗ ಸಂಬಂಧ ಆಯ್ಕೆಯಿಂದಾಗಿ ಕೆಲವರು ಕೆಲಸದ ಸ್ಥಳದಲ್ಲಿ ತಾರತಮ್ಯಕ್ಕೊಳಗಾಗಿ, ಬೆರಳು ತೋರಿಸುವ ಮಂದಿಯ ಕೈಯಲ್ಲಿ ಅನಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅದೆಷ್ಟು ನರಳಿದ್ದಾರೆ.

(Marina Ewald)

ಪುಸ್ತಕದ ಸಂಪಾದಕಿಯರಾದ ಟೋನಿಯಾ ಮತ್ತು ಡಿನೀಸ್ ಹೇಳಿರುವಂತೆ ಬಹಳಷ್ಟು ಲೇಖಕಿಯರು ಬಿಳಿಯರು ಮತ್ತು ಪಶ್ಚಿಮದೇಶದವರು. ಒಂದಿಬ್ಬರು ಲೇಖಕಿಯರು ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ಬಿಳಿಯರಲ್ಲದ ಇತರೆ (ಬಣ್ಣದ) ಮಹಿಳೆಯರು ಕೆಲಸ ಮಾಡುವುದೇ ದೊಡ್ಡ ಸವಾಲು, ಅದನ್ನು ಒಪ್ಪಿಕೊಳ್ಳುವುದು ಅತ್ಯಂತ ಕಡಿಮೆ ಎನ್ನುವ ವಿಷಯವನ್ನು ಚರ್ಚಿಸಿದ್ದಾರೆ. ಈ ಕ್ಷೇತ್ರದಲ್ಲಿ ಆಫ್ರಿಕನ್ -ಅಮೆರಿಕನ್ ಮಹಿಳೆಯರ ಕೊಡುಗೆಗಳನ್ನು ಮರೆಮಾಚಿರುವುದು, ಕೆನಡಾ ದೇಶದಲ್ಲಿ ಮೂಲನಿವಾಸಿ ಹೆಣ್ಣುಗಳ ಬೃಹತ್ ಪಾತ್ರವನ್ನು ಮರೆತಿರುವುದನ್ನು ಪ್ರಸ್ತಾವಿಸಿ ಚರ್ಚಿಸಿದ ಲೇಖನಗಳಿವೆ. ನಾನು ಪಾಶ್ಚಿಮಾತ್ಯರು ಹುಟ್ಟುಹಾಕಿ ಬೆಳೆಸಿದ ಆಧುನಿಕ ಹೊರಾಂಗಣ ಶಿಕ್ಷಣ ಕ್ಷೇತ್ರವನ್ನು ಬಿಟ್ಟು ಹೊರಬಂದು ಆಲೋಚಿಸಿದರೆ ವಿವಿಧ ಸಮಾಜಗಳಲ್ಲಿ ಈಗಲೂ ಹೊರಾಂಗಣದಲ್ಲಿ ಹೆಣ್ಣು ಎನ್ನುವ ವಿಷಯವೇ ಅತ್ಯಂತ ಆಳವಾದದ್ದು ಮತ್ತು ಗಂಭೀರವಾದದ್ದು; ಭಾರತದಂಥ ದೇಶಗಳಲ್ಲಿ ಹೊರಾಂಗಣದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳುವ ಪರಿಯೇ ವಿಶಿಷ್ಟವಾದದ್ದು ಎನ್ನುವ ವಿಷಯವನ್ನು ಒಂದಷ್ಟು ಕೆದಕಿದ್ದೀನಿ. ಎನ್ನುವ ವಿಷಯವನ್ನು ಒಂದಷ್ಟು ಕೆದಕಿದ್ದೀನಿ.

ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಸಂಪಾದಕಿಯರು ಹೇಳಿರುವಂತೆ ಈ ಒಂದು ಬೃಹತ್ ಪುಸ್ತಕ ಕೇವಲ ಕೆಲ ಮಹಿಳೆಯರ ಕಥನಗಳನ್ನು, ಅನುಭವಗಳನ್ನು, ದೃಷ್ಟಿಕೋನಗಳನ್ನು ಮತ್ತು ಆತ್ಮಶೋಧನೆಯನ್ನು ಒಳಗೊಂಡಿದೆಯಷ್ಟೆ. ಆ ಒಂದು ದೃಷ್ಟಿಯಲ್ಲಿ ಇದೊಂದು ಪುಟ್ಟ ಪುಸ್ತಕವಷ್ಟೇ! ಇದರಲ್ಲಿ ಬರೆಯದ, ಬರೆಯಲಾಗದ ಅದೆಷ್ಟೋ ಅನೇಕ ಮಹಿಳೆಯರು ಹೊರಾಂಗಣ ಶಿಕ್ಷಣದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿವರ್ಷವೂ ತಮ್ಮ client ಗಳೊಂದಿಗೆ ಎವರೆಸ್ಟ್ ಪರ್ವತವನ್ನು ಏರುವ, ಶಿಖರತುದಿಯನ್ನು ಮುಟ್ಟಿಬರುವ ಶೆರ್ಪಾ ಗಂಡಸರನ್ನು ಇತ್ತೀಚೆಗಷ್ಟೇ ಗುರುತಿಸಿ ಅವರಿಗೂ ಕೂಡ ಮನ್ನಣೆ ಕೊಡಲಾಗುತ್ತಿದೆ. ಅದೇ ಕಾರಣಕ್ಕಾಗಿ ಹಿಮಾಲಯ ಶಿಖರಗಳನ್ನೇರುವ ಶೆರ್ಪಾ ಮಹಿಳೆಯರೂ ಕೂಡ ಅಂತಹುದೇ ಮನ್ನಣೆಗೆ ಅರ್ಹರು. ಇಂತಹ ವಿಷಯಗಳನ್ನು ಉದಾಹರಣೆಯಾಗಿಟ್ಟುಕೊಂಡು ಪ್ರಪಂಚದಾದ್ಯಂತ ಹೊರಾಂಗಣದಲ್ಲಿ ಹೆಣ್ಣಿನ ಗುರುತರ ಪಾತ್ರವನ್ನು ಎಚ್ಚರಿಕೆಯಿಂದ ಗಮನಿಸಿ ಅದನ್ನು ಕುರಿತು ಎಲ್ಲರೂ ಮಾತನಾಡಬೇಕಿದೆ; ಕೆಲಸವನ್ನು ಅವಿರತವಾಗಿ ಮುಂದುವರೆಸುವ ಅವಶ್ಯಕತೆಯಿದೆ.