“ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಈ ಕತೆಗಾರನ ಹೊಸ ಕೊಯ್ಲು “ಮಲ್ಲಿಗೆ ಹೂವಿನ ಸಖ”.ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ.ಇವರ ಹಿಂದಿನ ಕತೆಗಳ ರುಚಿಬಲ್ಲವರನ್ನು ನಿರಾಸೆ ಮಾಡುವುದಿಲ್ಲ. ಹೊಸ ಓದುಗರಲ್ಲೂ ಹೊಸದೊಂದು ಅನುಭೂತಿ ಉಂಟು ಮಾಡಬಲ್ಲಷ್ಟು ರುಚಿಕಟ್ಟು. ಒಂದೇ ಗುಕ್ಕಿಗೆ ಪುಸ್ತಕ ನನ್ನೊಳಗಿಳಿದುಬಿಟ್ಟಿತು.ಒಳಗಿಳಿದ ಕತೆಗಳು ಸುಮ್ಮನೇ ಕೂರಲಿಲ್ಲ.”
ಟಿ.ಎಸ್.ಗೊರವರ ಹೊಸ ಕಥಾ ಸಂಕಲನದ ಪರಿಚಯ ಬರಹ.
ಹೊಸ ತಲೆಮಾರಿನ ಕತೆಗಾರರಲ್ಲಿ ತಮ್ಮ ವಿಶಿಷ್ಟ ಕತೆಗಳಿಂದಾಗಿ ಹೊಸ ಸಂಚಲನ ಮೂಡಿಸುತ್ತಿರುವವರಲ್ಲಿ ಟಿ.ಎಸ್. ಗೊರವರ ಅವರು ಪ್ರಮುಖರು. ಶಿಷ್ಟ ಭಾಷೆಯೊಂದಿಗೆ ಜವಾರಿ ಭಾಷೆಯ ದೇಸೀ ಪದಗಳ ಹೆಣಿಗೆ ಇವರ ವೈಶಿಷ್ಟ್ಯತೆ. ಇಲ್ಲಿನ ಕತೆಗಳು ಓದಿಯಾದ ಮೇಲೂ ಕಾಡುವಂತವು. ಆ ಕಾಡುವ ಗುಣವೇ ಅವರನ್ನು ಕನ್ನಡ ಕಥಾಪ್ರಪಂಚದಲ್ಲಿ ಸಾಕಷ್ಟು ದೂರ ನಡೆಸಿಕೊಂಡು ಹೋಗಬಲ್ಲದು.
ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಈ ಕತೆಗಾರರ ಹೊಸ ಕೊಯ್ಲು “ಮಲ್ಲಿಗೆ ಹೂವಿನ ಸಖ”. ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ. ಇವರ ಹಿಂದಿನ ಕತೆಗಳ ರುಚಿಬಲ್ಲವರನ್ನು ಯಾವುದೇ ಕಾರಣಕ್ಕೂ ನಿರಾಸೆ ಮಾಡುವುದಿಲ್ಲ. ಹೊಸ ಓದುಗರಲ್ಲೂ ಹೊಸದೊಂದು ಅನುಭೂತಿ ಉಂಟು ಮಾಡಬಲ್ಲಷ್ಟು ರುಚಿಕಟ್ಟು. ಒಂದೇ ಗುಕ್ಕಿಗೆ ಪುಸ್ತಕ ನನ್ನೊಳಗಿಳಿದುಬಿಟ್ಟಿತು. ಒಳಗಿಳಿದ ಕತೆಗಳು ಸುಮ್ಮನೇ ಕೂರಲಿಲ್ಲ. ಹಾಗಾಗಿ ಅವನ್ನು ಹೀಗೊಂದು ಬರಹದ ಮೂಲಕ ಹೊರತರಬೇಕಾಯಿತು. ಇದರ ಶ್ರೇಯ ಕತೆ ಹಾಗು ಕತೆಗಾರರಿಗೆ ಸಲ್ಲಬೇಕಾದದ್ದು.
ಮನಸಿನ ವ್ಯಾಪಾರಗಳೇ ಹಾಗೆ ತರ್ಕಕ್ಕೆ ನಿಲುಕದವು. ಈ ಸಂಕಲನದ ಮೊದಲನೆ ಕತೆ “ಮನಸಿನ ವ್ಯಾಪರ”ವೂ ಸಹ ತರ್ಕದಿಂದ ದೂರ ಉಳಿವ ಕನಸಿನೊಂದಿಗೆ ಶುರುವಾಗುತ್ತದೆ. ಸಾಮಾನ್ಯವಾಗಿ ಕನಸೊಂದು ಜೀವಿಸಿದಷ್ಟು ತೀವ್ರವಾಗಿದ್ದಾಗ ಅದು ಕಾಡುವ ರೀತಿ ಕೆಲವೊಮ್ಮೆ ವಿನಾಕಾರಣವೇ. ಜ್ಯೋತಿಷ್ಯದ ಮತ್ತು ಮನೋವೈಜ್ಞಾನಿಕ ನೆಲೆಗಟ್ಟುಗಳನ್ನು ಮೀರಿಯೂ ಕೆಲವು ಕನಸುಗಳು ಸುಮ್ಮನೇ ತೀಡಿ ಬಿಟ್ಟ ನಾದಸ್ವರದ ಸ್ವರಾಲಾಪದಂತೆ ಗುಯ್ಗುಡುತ್ತಾ ಸಂತೆಯೊಳಗೂ ಕಾಡುವ ಏಕಾಂತವನ್ನು ಸೃಷ್ಟಿಸಿಬಿಡುತ್ತವೆ. ಇಲ್ಲಿನ ಪರಮೇಶಿಯ ಕತೆಯೂ ಹಾಗೆ ಕನಸು ಕಾಡಿದ ಪರಿಯಿಂದಾಗಿ ಬರಿದೆ ಕನಸೆಂದು ಉಡಾಫೆಯಿಂದ ಉಫ್ ಎನ್ನಲಾರ. ಬೆಳ್ಳಂಬೆಳಗ್ಗೆ ಕಂಡು ಕೇಳಿದ ಜಗಳ ಮತ್ತು ಅದರ ಧ್ವನಿರೂಪ ಅವನೊಳಗಿನ ಸುಪ್ತ ಬೈಗುಳದ ರಾಶಿಯ ತಿಜೋರಿ ಕೀಲಿಯನ್ನು ಖುಲಾಸೆಗೊಳಿಸಿರಲಿಕ್ಕೂ ಸಾಕು ಅವನ ಆ ದಿನವನ್ನು ನುಂಗಿಹಾಕಲು. ಅದಕ್ಕೆ ಪೂರಕವೇ ಅನಿಸುವಂತೆ ಘಟಿಸುತ್ತಾ ಹೋಗುವ ಘಟನಾವಳಿಗಳು ಕಾಕತಾಳೀಯವಷ್ಟೇ. ಆದರೆ ತರ್ಕವನ್ನು ಬದಿ ಸರಿಸಿ ಅದನ್ನೇ ಸತ್ಯವೆಂದು ನಂಬಲು ತಯಾರಾದ ಮನಸಿಗೆ ಪರಾಮರ್ಷೆಯೇ ಮಿಥ್ಯ… ಅದೇ ಮನಸಿನ ವ್ಯಾಪಾರ. ಇಲ್ಲಿ ಗೊರವರ ಅವರು ಕಟ್ಟಿಕೊಡುವ ಸಣ್ಣ ಸಣ್ಣ ವಿವರಗಳು ಅವರ ಸೂಕ್ಷ್ಮ ದೃಷ್ಟಿಗೆ ಸಬೂತು. ಒಂದು ಸಣ್ಣ ಅನುಭವದ ಮೇಲೆ ನಿಂತಿರುವ ಕತೆ ಕತೆಗಾರನ ಉದ್ದೇಶಿತ ಅನುಭವನ್ನು ಉಂಟುಮಾಡುವುದರಲ್ಲಿ ಸೋಲುವುದಿಲ್ಲ. ಕತೆ ಕಟ್ಟುವಿಕೆಯಲ್ಲಿನ ಬಿಗಿಯೂ ಸಹ ಚೌಕಟ್ಟಿನಾಚೆ ಕತೆ ಹಾಯದಂತೆ ಹಿಡಿದಿಟ್ಟಿದೆ ಮತ್ತು ಓದುಗರನ್ನೂ ಸಹ.
ಇನ್ನು “ಕತ್ತಲಿನಾಚೆ” ಇಲ್ಲಿನ ಎರಡನೇ ಕತೆ. ಬಹಳಷ್ಟು ಕಾರಣಗಳಿಗಾಗಿ ಇದೊಂದು ಅತಿ ಮುಖ್ಯವಾದ ಕತೆ. ಇಲ್ಲಿ ಗೊರವರ ಅವರು ಕತೆಗಾಗಿ ಬಳಸುವ ಶಿಷ್ಟ ಮತ್ತು ಜವಾರಿ ಭಾಷೆಯ ಪದಪುಂಜಗಳ ಜುಗಲ್ಬಂದಿ ನಿಜಕ್ಕೂ ಚಂದ. ಈ ಕತೆಯ ಕಥಾನಾಯಕಿ ಪದ್ಮ ಸಾಮಾನ್ಯ ಹೆಣ್ಣುಮಗಳೊಬ್ಬಳ ಮೂರ್ತರೂಪ. ಅವಳೂ ತನ್ನದೆನ್ನುವ ಸಣ್ಣ ಏಕಾಂತವನ್ನು ಬಯಸುತ್ತಾಳೆ. ಒಂದು ಸಣ್ಣ ಸ್ವಚ್ಛಂದತೆಗಾಗಿ ಕಾತರಿಸುತ್ತಾಳೆ. ಇನ್ನು ತಾನು ಗರ್ಭದೊಂದಿಗೆ ಹುಟ್ಟಿ ಋತುವಿನೊಂದಿಗೆ ಬದುಕಿರುವಾಗ ಅದರ ಮುಂದಿನ ಹಂತವಾಗಿ ತಾನೊಂದು ಮುದ್ದಾದ ಮಗುವಿಗೆ ತಾಯಾಗಬೇಕೆನ್ನುವುದು ಇತರರ ಬಯಕೆಗಿಂತಲೂ ಅದು ಅವಳ ಅತಿ ಖಾಸಗಿ ಬಯಕೆ ಮತ್ತು ಅದರ ಘನತೆಯೇ ಹೆಚ್ಚು. ಆದರೆ ಸಮಾಜ ಹಾಗಲ್ಲ ಅದರ ದೃಷ್ಟಿಯಲ್ಲಿ ಅವಳ ನೋವೊಂದು ನೋವೇ ಅಲ್ಲ! ಅವಳ ಗಂಡ ಅತ್ತೆ ಮಾವನೂ ಅದಕ್ಕೆ ಹೊರತಲ್ಲ. ಅವಳಿಗೆ ಮಕ್ಕಳಾಗಲಿಲ್ಲವೆಂದು ಗಂಡ ಇನ್ನೊಂದು ಮದುವೆಯಾಗಬಹುದು ಆದರೆ ಹೆಂಡತಿ ಗಂಡನ ಅಸಮರ್ಥತೆಯನ್ನು ಮುಂದಿಟ್ಟುಕೊಂಡು ಅವನದೇ ನಡೆಯನ್ನು ಅನುಸರಿಸಬಾರದು…. ತನ್ನ ಮತಿಭ್ರಮಣಿತ ಸ್ಥಿತಿಯಲ್ಲಿ ಅವಳು ಯಾರದೋ ಮೋಸಕ್ಕೆ ಸಿಕ್ಕಿ ಬಸಿರಾಗುತ್ತಾಳೆ. ಅದನ್ನು ಅತ್ತೆಯಾದವಳು (ಹೆಣ್ಣಾಗಿ ಯೋಚಿಸದಿದ್ದರೂ…) ಮನೆಯ ಮರ್ಯಾದೆಯ ನೆಪದಲ್ಲಿ ಅವಳನ್ನು ಸಮರ್ಥಿಸುತ್ತಾಳೆ (ಅದು ಕನಿಷ್ಟತಮ ಅತ್ತೆಯಿಂದ ಪದ್ಮಳಿಗಾಗುವ ಉಪಕಾರ). ಆದರೆ ಅದನ್ನು ಒಪ್ಪಿಕೊಳ್ಳಲಾರದ ಗಂಡ ಮಗುವಿನ ಹೋಲಿಕೆ ಹಿಡಿದು ಅವಳನ್ನು ಬಳಸಿಕೊಂಡ ಗಂಡಿನ ಜಾಡನ್ನು ಹಿಡಿಯಲು ಹೊರಡುವುದು, ಕೊನೆಗೆ ಅದೇ ಖಿನ್ನತೆಯಲ್ಲಿ ಹುಚ್ಚನಂತಾಗುವುದು ಗಂಡಿನ ರೋಗಗ್ರಸ್ಥ ಮನಸಿಗೆ ಹಿಡಿದ ಕೈಗನ್ನಡಿಯಂತೆ ತೋರುತ್ತದೆ. ಇಲ್ಲಿ ಕತೆಗಾರ ಒಂದು ಜಾಣ್ಮೆಯನ್ನು ವಹಿಸುತ್ತಾರೆ . ಪದ್ಮಾಳಿಗೆ ಹುಚ್ಚು ಹಿಡಿಸಿ ತನ್ನ ಆ ಸ್ಥಿತಿಯಲ್ಲಿ ಅವಳು ಮತ್ತೊಬ್ಬನಿಗೆ ತಾಯಾಗುವಂತೆ ಹಾಗೂ ಹುಚ್ಚು ವಾಸಿಯಾದ ಮೇಲೆ ಗುಟ್ಟಾಗಿಯೇ ಉಳಿದು ಸಮಾಧಿಯಾಗಬೇಕಾದ ಎಲ್ಲವನ್ನೂ ಅವಳ ನೆನಪಿನಿಂದಲೇ ಇಲ್ಲವಾಗಿಸಿ ಸಮಾಜ ಸಹಜವಾಗಿ ಒಪ್ಪಿಕೊಳ್ಳುವುದನ್ನು ಸುಲಭವಾಗಿಸುತ್ತಾರೆ. ಇಲ್ಲವಾಗಿದ್ದರೆ ಸಮಾಜವಿರಲಿ ಅವಳ ಅತ್ತೆಯೂ ಅವಳನ್ನು ಒಪ್ಪಿಕೊಳ್ಳುವುದು ಅಸಂಭವವಿತ್ತು…!? ಅವಳ ಮುಂದಿನ ಜೀವನದ ಭದ್ರತೆ ಇದೇ ಕತ್ತಿಯಂಚಿನ ಮೇಲ ಅಲಗಿನ ಮೇಲೆಯೇ ನಿಂತಿದೆ ಎನ್ನುವುದು ಶೋಚನೀಯ. ಈ ಕತೆ ಹೆಣ್ಣಿನ ಅಸ್ಮಿತೆಯನ್ನು ಸಾದ್ಯಂತ ಕಲಕಿಬಿಡುವ ಕತೆಯಾಗಿಯೂ ಗಮನ ಸೆಳೆಯುತ್ತದೆ ಮತ್ತು ಕನ್ನಡ ಕಥಾಪ್ರಪಂಚದಲ್ಲಿ ಸಾಕಷ್ಟು ಕಾಲ ಉಳಿಯಬಲ್ಲದು ಸಹ.
ಇನ್ನು ತಾನು ಗರ್ಭದೊಂದಿಗೆ ಹುಟ್ಟಿ ಋತುವಿನೊಂದಿಗೆ ಬದುಕಿರುವಾಗ ಅದರ ಮುಂದಿನ ಹಂತವಾಗಿ ತಾನೊಂದು ಮುದ್ದಾದ ಮಗುವಿಗೆ ತಾಯಾಗಬೇಕೆನ್ನುವುದು ಇತರರ ಬಯಕೆಗಿಂತಲೂ ಅದು ಅವಳ ಅತಿ ಖಾಸಗಿ ಬಯಕೆ ಮತ್ತು ಅದರ ಘನತೆಯೇ ಹೆಚ್ಚು. ಆದರೆ ಸಮಾಜ ಹಾಗಲ್ಲ ಅದರ ದೃಷ್ಟಿಯಲ್ಲಿ ಅವಳ ನೋವೊಂದು ನೋವೇ ಅಲ್ಲ!
“ಪೆಪ್ಪರಮೆಂಟ” ಇಲ್ಲಿನ ಮೂರನೆ ಕತೆ. ಓದಿಯಾದ ಮೇಲಿನ ನನ್ನ ಒಂದೆರಡು ಕ್ಷಣಗಳು ನಿರ್ವಾತಗೊಂಡುಬಿಟ್ಟವು. ಶೂನ್ಯ ಆವರಿಸಿಬಿಟ್ಟಿತು. ಎಷ್ಟೊಂದು ವ್ಯಾಕುಲಗೊಳಿಸುತ್ತದೆ ಈ ಕತೆ…?! ಸತ್ಯ ತನ್ನ ಹೊರಮೈ ಕವಚದ ಹಂಗು ತೊರೆದು ಎದುರು ಬಂದು ನಿಂತುಬಿಟ್ಟರೆ ಹೇಗಾಗಬಹುದು!? ಗೊರವರ ಅವರು ಮಕ್ಕಳ ಮನೋಪ್ರಪಂಚವನ್ನು ಎಷ್ಟು ಚಂದ ಪ್ರಸ್ತುತಪಡಿಸುತ್ತಾರೆ ಈ ಪುಟ್ಟ ಕತೆಯಲ್ಲಿ! ಮಗುವೊಂದು ಸಾಧಾರಣ ಪೆಪ್ಪರಮೆಂಟನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಹಂಬಲಿಸುವುದು ಬಡತನದ ತೀವ್ರತೆಯನ್ನು ತೋರಿಸುತ್ತದೆ. ಆದರೆ ಮಗುವಿನ ಆ ಹಂಬಲ ದಾರುಣ ಅಂತ್ಯವನ್ನು ಮುಟ್ಟಿಸಿದಾಗ ಮಾತ್ರ ಅಂತಃಕರಣವಿರುವ ಯಾರ ಹೃದಯವನ್ನಾದರೂ ಚೀತ್ಕರಿಸುವಂತೆ ಮಾಡಿಬಿಡುತ್ತದೆ. ಮಕ್ಕಳೇ ಹಾಗೆ. ಅವರ ಮುಗ್ಧ ಹೃದಯದಷ್ಟು ಶುದ್ಧವಾದ ಜಾಗ ಯಾವ ಮಂದಿರ ಮಸ್ಜಿದ್ ಈಗರ್ಜಿಗಳಲ್ಲೂ ಇರಲಿಕ್ಕಿಲ್ಲ. ಅದಕ್ಕೆ ಮಕ್ಕಳೊಂದಿಗೆ ನಡೆಯುವ ಯಾವುದೇ ಸಣ್ಣ ದುರಂತವೂ ನಮ್ಮದೇ ಎನ್ನುವಷ್ಟು ನಮ್ಮನ್ನು ಕಲಕಿಬಿಡುತ್ತದೆ. ಮಲ್ಲ ನೊಣವಾಗಿಯಾದರೂ ಪೆಪ್ಪರಮೆಂಟನ್ನು ಸವಿಯಬೇಕೆಂದು ಕನಸುವುದು, ಕೊನೆ ಪಕ್ಷ ಈರ ಚೀಪುತ್ತಿರುವ ಪೆಪ್ಪರಮೆಂಟನ್ನು ಕೊಟ್ಟರೂ ತಿಂದುಬಿಡಬೇಕೆಂದು ಆಸೆಪಡುವುದು, ಕೊನೆಗೆ ಪೆಪ್ಪರಮಂಟಿನ ಆಸೆಗೆ ಬಿದ್ದು ಗೂಡಂಗಡಿಯ ಕೀ ಕದ್ದು ಅಪರಾತ್ರಿಯಲ್ಲಿ ಅಂಗಡಿಯ ಒಳ ಸೇರಿ, ಪೆಪ್ಪರಮೆಂಟನ್ನು ಸವಿದು ಅಲ್ಲಿಯೇ ಬಿಂಕಿ ಅವಘಢಕ್ಕೆ ತುತ್ತಾಗಿ ಅಸುನೀಗುವುದು ಕರುಣಾಜನಿಕ. ಪಾಪ ಗುಬ್ಬಚ್ಚಿಯಂತ ಹುಡುಗನ ಪ್ರಾಣವೇ ಅವನ ಸಣ್ಣದೊಂದು ಆಸೆಗೆ ಬೆಲೆ(ಬಲಿ)ಯಾಯಿತಲ್ಲ… ಎನ್ನುವಲ್ಲಿಗೆ ಎಲ್ಲ ಮುಗಿಯಿತು…. ನಿಟ್ಟುಸಿರೊಂದು ಹೊರಚಾಚಿಕೊಳ್ಳುತ್ತದೆ. ಕೊನೆ ಪಕ್ಷ ಸಾಯುವ ಮುಂಚೆ ತನ್ನ ಆಸೆಯನ್ನಾದರೂ ಪೂರೈಸಿಕೊಂಡಿತಲ್ಲ ಮಗು ಇನ್ನದರ ಆತ್ಮ ವಿರಮಿಸುತ್ತದೆ ಎನಿಸಿದರೂ ಮಕ್ಕಳ ಸಣ್ಣ ಪುಟ್ಟ ಆಸೆಗಳನ್ನೂ ಪೂರೈಸಲಾಗದಂತ ಬಡತನ ಭೂಮಿಯ ಮೇಲಿರುವುದೇ ಎನ್ನುವ ದಟ್ಟ ವಿಷಾದ ಮಾತ್ರ ಕಾಡುತ್ತಲೇ ಉಳಿಯುತ್ತದೆ. ಇದೊಂದು ಅತ್ಯಂತ ಗಟ್ಟಿ ಕತೆ. ಬಾಳಿಕೆ ಬರುವಂತದ್ದು.
ಪುಸ್ತಕದ ಶೀರ್ಷಿಕೆಯಾಗಿರುವ “ಮಲ್ಲಿಗೆ ಹೂವಿನ ಸಖ” ಒಂದು ಅದ್ಭುತ ಅನುಭೂತಿಯ ಕತೆ. ಮಗುವಿದ್ದಾಗಿನಿಂದಲೂ ಅಂಟಿಕೊಂಡು ಬಂದ ಮನೋವ್ಯಾಧಿಯೊಂದು ನಿರುಪದ್ರವಿಯೆಂಬ ಕಾರಣಕ್ಕೆ ಬೆಳೆಯಲು ಅವಾಕಾಶಪಡೆದುಕೊಳ್ಳುತ್ತದೆ ಮತ್ತು ಅದು ಯಾವಾಗ ಸಮಸ್ಯೆಯಾಗಿ ಕಾಡಲು ಶುರುವಾಗುತ್ತದೋ ಆಗ ಎಲ್ಲರೂ ತಮ್ಮ ಬದುಕನ್ನು ಸರಳಗೊಳಿಸಿದ್ದ ಸಮಸ್ಯೆಗೆ ಅಂತ್ಯ ಕಾಣಿಸಲಾಗದೆ ತೊಳಲಾಡತೊಡಗುತ್ತಾರೆ. ಕಥಾನಾಯಕ ಯಮನೂರಪ್ಪ ಸಮಸ್ಯೆಯನ್ನು ಹಚ್ಚಿಕೊಂಡು ಬದುಕಿದವನು ಈಗ ಸಮಸ್ಯೆಯಾ? ಮುಂದಿನ ಬದುಕಾ? ಎನ್ನುವ ದ್ವಂದ್ವದಲ್ಲಿರುವಾಗಲೇ ಮುಂದಿನ ಸಾಕಷ್ಟು ಊಹಾಪೋಹಗಳಿಗೆ ಓದುಗರನ್ನು ಈಡುಮಾಡಿ ಕತೆ ಮಾತ್ರ ತಣ್ಣಗೆ ಮುಗಿದುಳಿಯುತ್ತದೆ. ನಾವೆಲ್ಲರೂ ಒಂದು ನಮೂನಿ ಯಮನೂರಪ್ಪಗಳಾಗಿಯೇ ಕಾಣುತ್ತದೆ. ತೆರಣಿಯ ಹುಳು ತನ್ನ ನೂಲ ತಾನೇ ಸುತ್ತಿ ಸಾಯುವಂತೆ ನಾವೇ ಹಚ್ಚಿಕೊಂಡ ಸಮಸ್ಯೆಯೊಳಗೆ ಸಿಕ್ಕಿ ಹೊರಬರಲಿಚ್ಚಿಸದೆ ಅದರೊಂದಿಗೆ ರಾಜಿಯಾಗಿ ಬದುಕಲು ಹವಣಿಸುವಾಗ ಬದುಕು ಸೃಷ್ಟಿಸುವ ಯಾವುದಾದರೊಂದೇ ಆಯ್ಕೆಯನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಕ್ಕಿ ನಲುಗುತ್ತಿರುತ್ತೇವೆ ಎನಿಸಿಬಿಡುತ್ತದೆ.
“ದೇವರಾಟ” ಇಲ್ಲಿನ ಐದನೆ ಕತೆ. ಇದೊಂದು ಸರಳವಾದ ಕತೆ. ಸಾಂಪ್ರದಾಯಿಕ ಒಳಿತು ಕೆಡುಕಿನ ನಡುವಿನ ಸಂಘರ್ಷವನ್ನು ಕಥಾವಸ್ತು ಧ್ವನಿಸುತ್ತದೆಯಾದರೂ ಕತೆಯನ್ನು ನಿರ್ವಹಿಸಿರುವ ರೀತಿ ಮತ್ತು ತಂತ್ರದಿಂದಾಗಿ ಗಮನ ಸೆಳೆಯುತ್ತದೆ. ಮಾವ ಶಂಕ್ರಪ್ಪ ಸೊಸೆಯನ್ನು ಮಗಳಂತೆ ನೋಡುತ್ತಾನೆ, ಆ ಸೊಸೆಯೂ ಮಗಳಂತವಳು. ಆದರೆ ಮಗನ ಬೇಜಾವಾಬ್ದಾರಿತನವೇ ಅವರಿಬ್ಬರ ಶತ್ರು. ಹಾಗಂತ ಶತ್ರುವನ್ನು ತೊಲಗಿಸಬೇಕಿದೆಯೇ ಹೊರತು ಅವನ ಮಗ , ಅವಳ ಗಂಡನಾದ ಹನುಮಂತನನ್ನು ನೀಗಿಸಿಕೊಳ್ಳುವಂತಿಲ್ಲ. ಈ ಸೂಕ್ಷ್ಮವನ್ನು ಅರಿತ ಶಂಕ್ರಜ್ಜ ಧಾರ್ಮಿಕ ನಂಬಿಕೆಯ ದುರ್ಬಳಕೆ (ಒಳಿತಿನ ಕಾರಣಕ್ಕಾಗಿ ಎನ್ನುವ ಮಾಫಿ ಕೊಟ್ಟುಕೊಳ್ಳಬಹುದು) ಮಾಡಿಕೊಂಡು ಮಗನನ್ನು ದಾರಿಗೆ ತರುವ ಮತ್ತು ಅವನ ಸಂಸಾರವನ್ನು ಸರಿಮಾಡುವ ಕೆಲಸ ಮಾಡುತ್ತಾನೆ. ಅದರಲ್ಲಿ ಅವನ ಸ್ವಹಿತಾಸಕ್ತಿಯೂ ಇದೆ. ತಾನು ಕಷ್ಟ ಪಟ್ಟು ಸಂಪಾದಿಸಿದ ಆಸ್ತಿಯನ್ನು ಮಗ ಕ್ಷಣಾರ್ಧದಲ್ಲಿ ಕಳೆಯಲು ನಿಂತಾಗ ಅವನು ವಿಹ್ವಲನಾಗುತ್ತಾನೆ. ಅದು ಅವನ ಜೀವಿತದ ಸಾರಾಂಶ ಮತ್ತು ಅದಿಲ್ಲದೆ ಅವನ ಅಸ್ತಿತ್ವವೇ ಅರ್ಥಹೀನ ಅನಿಸಿಬಿಡುವ ಮನೋಸ್ಥಿತಿಯಲ್ಲಿ ಧಾರ್ಮಿಕ ಆಚರಣೆಯೊಂದು ಅವನ ಪಾಲಿಗೆ ವರವಾಗಿ ಪರಿಣಮಿಸುತ್ತದೆ. ಈ ಕತೆಯ ಹೆಣ್ಣು ಪಾತ್ರಧಾರಿ ಹುಲಗವ್ವ ಸ್ವಾಭಿಮಾನಿ. ಗಂಡನಿಗೆ ಹೆದರುವವಳಾದರೂ ಗಂಡ ತಪ್ಪು ದಾರಿ ಹಿಡಿದಾಗ ಖಂಡಿಸುವ ದಿಟ್ಟೆ. ಬೇಜವಾಬ್ದಾರಿಯುತ ಗಂಡ ಸಂಸಾರದ ಸೂತ್ರ ಹರಿಬಿಟ್ಟಾಗ ಅದನ್ನು ಕೈಗೆತ್ತಿಕೊಂಡು ಸಮತೂಕದಲ್ಲಿ ಮುನ್ನಡೆಸಿದ ಛಲಗಾತಿ. ಅಂತಿಮವಾಗಿ ಅವಳ ಪ್ರಾರ್ಥನೆಯೊಂದೇ. ಈ ಗಂಡನೆನ್ನಿಸಿಕೊಂಡವ ನೆಟ್ಟಗಾಗಲಿ ಎನ್ನುವುದು. ಸಂಸಾರದ ಬಗೆಗಿನ ಅವಳ ಸ್ವಾರ್ಥಕ್ಕೂ ಅರ್ಥವಿದೆ. ಆದರೆ ಗಂಡನಾಗಿ ತಂದೆಯಾಗಿ ಮಗನಾಗಿ ಯಾವೊಂದು ಪಾತ್ರವನ್ನೂ ನೆಟ್ಟಗೆ ನಿರ್ವಹಿಸದ ಗಂಡಿನ ಸ್ವಾರ್ಥವಿಲ್ಲಿ ಅಪ್ಪಟ ಸ್ವಾರ್ಥವಲ್ಲದೆ ಮತ್ತೇನೂ ಅಲ್ಲ.
ಇನ್ನು ಈ ಸಂಕಲನದ ಆರನೆಯ ಮತ್ತು ಕೊನೆಯ ಕಥೆಯೇ “ಕದ್ದು ನೋಡುವ ಚಂದಿರ”. ತಂತ್ರದ ದೃಷ್ಟಿಯಿಂದ ಪ್ರಯೋಗಾತ್ಮಕವಾದದ್ದು. ಮಾನವ ಹಸ್ತಕ್ಷೇಪವಿರುವಲ್ಲೆಲ್ಲಾ ಚಾಚಿಕೊಳ್ಳುವ ಅವನ ದುಷ್ಟ ಕಬಂಧ ಬಾಹುವಿನ ದಾಹ ಈ ಲೋಕದವನೇ ಅಲ್ಲದ ಚಂದ್ರನಿಗೆ ಕೊನೆಗೂ ಅರ್ಥವಾಗದೆ ವಿಚಿತ್ರವೆನಿಸಿ ತನಗಿದು ಸ್ಥಳವಲ್ಲ ಎಂದು ಇಲ್ಲವಾಗುವಲ್ಲಿಗೆ ಕತೆ ಮುಗಿಯುತ್ತದೆ. ಕದ್ದು ನೋಡುವುದೂ ಅನೈತಿಕವಾಗಿರುವಾಗ ಮಾನವನ ಅನೈತಿಕ ಚಟುವಟಿಕೆಗಳನ್ನು ಮುಗ್ಧನಂತೆ ಗಮನಿಸುವ ಚಂದ್ರನ ಬಗ್ಗೆ ಮರುಕ ಹುಟ್ಟುವುದಿಲ್ಲ.
ಕಥನಕ್ರಮ, ತಂತ್ರ ರೂಪಿಸಿಕೊಳ್ಳುವ ಪ್ರತಿಭೆ, ಉತ್ತರ ಕರ್ನಾಟಕದ ಭಾಷೆಯ ಸೊಗಡು ಬಹಳವೇ ಚಂದ ಗೊರವರ ಅವರ ಕತೆಗಳಲ್ಲಿ. ಓದಿಯಾದ ಮೇಲೂ ಮತ್ತೊಂದು ಓದಿಗೆ ಕರೆಯುತ್ತಿದ್ದಾನೆ ಈ “ಮಲ್ಲಿಗೆ ಹೂವಿನ ಸಖ”.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”