“ಸಂಜೆ ಮುಂಜಾವುಗಳ ಸೂರ್ಯನ ಕೆಂಗಿರಣಗಳ ಬೆರಳು ಶರಾವತಿಯ ತರಂಗಗಳಲ್ಲಿ ಆಡುತ್ತಾ ಮಾಗೋಡಿನ ಗದ್ದೆ ತೋಟಗಳನ್ನು ಹಾದು ಬರುವ ನಾದ ಮಾಧುರ್ಯಕ್ಕೆ ಸರಗೊಟ್ಟಿತು.ಅರೆಯೂ ಪ್ರತಿಧ್ವನಿಗೊಡುವಂತೆ, ಅನತಿ ದೂರದ ಆರಿಮೆ,ತೋಟಗಳಲ್ಲಿ ಝೇಂಕರಿಸುವ ದುಂಬಿಗಳ ನಾದದಿಂದೊಡಗೂಡಿ ಗಂಧರ್ವರ ನಾಡು ಇದೆಂಬಂತೆ ಮೊರಗೋಳೆಯಿಂದ ಉಲ್ಲಾಸಭರಿತವೂ,ಇಂಪಾದುದೂ ಆದ ಅಭಂಗ ಮತ್ತು ಕೀರ್ತನೆಗಳ ಗಾಯನ ಶಾಂತಿಯ ಅಲೆಯನ್ನು ಪ್ರಸರಿಸಿತು.ಹೀಗೆ ನೆಲ,ಜಲ,ಗಗನವನ್ನಾವರಿಸುವ ಮಧುರ ಸಂಗೀತದ ಇಂಪು ಎಲ್ಲೆಂದರಲ್ಲಿ ಒಡಮೂಡುತ್ತ ಗಂಧರ್ವ ಲೋಕದ ಹೊಳಹೊಂದು ನೆಡೆಗೊಟ್ಟಿತು.”
ಗಜಾನನ ಈಶ್ವರ ಹೆಗಡೆ ಬರೆದ ಅನೂಹ್ಯ ಕಲಾವಿದನೊಬ್ಬನ ಸಂಗೀತ ಲೋಕ.
ಭೋರ್ಗರೆದು ಮೊರೆವ ಪಡುವಣ ಕಡಲು ಒಂದೆಡೆ, ಇನ್ನೊಂದೆಡೆ ಗಿರಿಶ್ರೇಣಿಗಳನ್ನು ಎತ್ತಿ ಹಿಡಿದು ಹಸಿರನ್ನು ಹಾಸಿ, ಹಸಿರನ್ನು, ಹೊದ್ದು ದಕ್ಷಿಣೋತ್ತರ ವ್ಯಾಪಿಸಿದ ಸಹ್ಯಾದ್ರಿ ಹಕ್ಕಿಗಳ ಕಲರವದಿಂದಲೂ, ತರ ತರದ ಕೀಟಗಳ ಝೇಂಕಾರದಿಂದಲೂ ಇನಿದಾದ ನಾದ ತರಂಗವನ್ನು ಎಡೆಬಿಡದೆ ಪಸರಿಸುತ್ತಿದೆ. ಈ ಕಡಲು ಮತ್ತು ಸಾಲು ಬೆಟ್ಟಗಳ ನಡುವೆ ಮೈಚಾಚಿದ 206 ನೇ ಸಂಖ್ಯೆಯ ಹೆದ್ದಾರಿ ಕಾರವಾರ ಬೆಂಗಳೂರನ್ನು ಜೋಡಿಸಿದುದು 1971ರಲ್ಲಿ. ಅದು ಆ ನಂತರದ ವರ್ಷಗಳಲ್ಲಿ ಊರು, ಕೇರಿ, ಪಟ್ಟಣ, ಹೆಮ್ಮರಗಳ ಕಾನನ ಎನ್ನದೆ ಎಲ್ಲೆಡೆಯೂ ತನ್ನ ಶಾಖೋಪಶಾಖೆಗಳನ್ನು ಚಾಚಿತು. ಈ ಹೆದ್ದಾರಿಯ ಇಕ್ಕೆಲಗಳಲ್ಲಿಯ ಹೊನ್ನಾವರದಿಂದ ಗೇರುಸೊಪ್ಪೆಯ ತನಕದ ನಿಸರ್ಗದ ಐಸಿರಿ ವರ್ಣನೀಯವಾದದ್ದು. ಎಲ್ಲೆಲ್ಲೂ ಪ್ರಯಾಣಿಕರ ಕಣ್ಮನ ಅರಳಿಸುವ ಸುತ್ತಿ ಸುತ್ತಿ ಅಡಿಕೆಯ ಗೊನೆಯನಕ ಕಣಜದಂತೆ ಹಬ್ಬಿದ ವೀಳೆಯದೆಲೆ ಬಳ್ಳಿಗಳಿಂದ ಶೋಭಾಯಮಾನವಾದ ಅಡಿಕೆಯ ಮರಗಳು, ತನ್ನ ಕಂಕುಳಲ್ಲಿ ಸಿಹಿನೀರ ಗೊನೆಗಳನ್ನು ಆಕಾಶದೆತ್ತರಕ್ಕೆ ಎತ್ತಿ ಗರಿ ಬಿಚ್ಚಿ ತೂಗಾಡುತ್ತಿರುವ ತೆಂಗಿನ ಮರಗಳು, ಸುಳಿಗಾಳಿಗೆ ಅಲೆದಲೆದು ನಿಂತು ತನ್ನ ಸದ್ದಿಗೆ ತಾನೇ ಸಂಭ್ರಮಿಸಿ ತೂಗಾಡುವ ಬಾಳೆಲೆಯ ಗಿಡಗಳು ಮತ್ತು ಸುಗಂಧಿತ ಬತ್ತದ ತೆನೆ ತೂಗುವ ಗದ್ದೆಗಳು! ನಿಬಿಡ ಗಿಡ ಮರ ಬಳ್ಳಿಗಳ ನಡುವೆ ಮನೆಗಳಲ್ಲಿಯೂ ಮಂದಿರಗಳಲ್ಲಿಯೂ ಸಂಗೀತದ ಅಭ್ಯಾಸ, ಸಂಗೀತದ ಸೇವೆ! ಮುಂದರಿಯುವ ಮಾರ್ಗದೊಂದಿಗೆ ಸಮ್ಮಿಳಿತವಾದ ಸಂಗೀತ-ಗೋಷ್ಠಿಗಳು ಹೊರಹೊಮ್ಮಿಸುವ ಏರಿಳಿದು ಅತ್ತಿತ್ತ ಬಾಗಿ ಬಳುಕುವ ನಾದತರಂಗ! ಇಲ್ಲಿ ನಿಸರ್ಗ ಸಹಜವಾಗಿ ಅರಳಿದ ಸಮಷ್ಠಿಯೂ ಮಾನವ ನಿರ್ಮಿತ ಜೀವನ್ಮುಖಿಯಾದ ಸಾಂಸ್ಕೃತಿಕ ಲೋಕದ ಸಮಷ್ಠಿ-ಪ್ರಜ್ಞೆಯ ವೈವಿಧ್ಯತೆಯೂ ಸಹಯೋಗ ಹೊಂದಿರುವುದನ್ನು ಗಮನಿಸಬಹುದು.
ನನಗೆ ತಿಳಿದಂತೆ ಕಲ್ಲಬಾಗದ ಶ್ರೀ ಗೋವಿಂದ ಹೆಗಡೆಯವರು ಹಲಸಿನ ಹಪ್ಪಳವನ್ನು ತೆಂಗಿನ ತುರಿಯೊಂದಿಗೆ ನುರಿಸುತ್ತ, ಸಮಾನ ಮನಸ್ಕರೊಂದಿಗೆ ಹರಟುತ್ತ ತಮ್ಮೊಂದಿಗೆ ಇದ್ದ ಎಲೆಯಡಿಕೆ ಸಿಬ್ಬಲದ ಒಂದೊಂದೇ ಎಲೆಯನ್ನು ಎತ್ತಿ ಉಟ್ಟ ಪಂಚೆಗೆ ಒರೆಸುತ್ತ ಅದರ ಸಿಬಿರನ್ನು ಇಡಿಯಾಗಿ ತೆಗೆದು ಸುಣ್ಣ ಹಚ್ಚಿ ಅದರೊಂದಿಗೆ ನಾದದ ಇಂಪೊಂದನ್ನು ಈ ಪ್ರದೇಶದಲ್ಲಿ ಮೊಟ್ಟಮೊದಲು ಸೇರಿಸಿಬಿಟ್ಟವರು. ಇದರ ಪರಿಣಾಮ ಆಗ ತಾನೆ ತೆರೆದ ಹೊನ್ನಾವರದ ಪ್ರಥಮ ದರ್ಜೆ ಕಾಲೇಜಿನ ತರಗತಿಗಳಲ್ಲಿ ಹಾರ್ಮೋನಿಯಂ, ತಂಬೂರ, ತಬಲಾದ ಶೃತಿ ತರಂಗ ಕಿವಿಗೂ ಮನಕ್ಕೂ ಹಿತವೆನ್ನಿಸಿ ಹಲವು ವಿದ್ಯಾಥಿಗಳ ಐಚ್ಛಿಕ ವಿಷಯ ಸಂಗೀತ ಆಯಿತು.
ಶರಾವತಿಯ ಉತ್ತರದ ತಟದ ಮೇಲೆ ನೆಲೆ ನಿಂತಿರುವ ಊರುಗಳು ಮಾವಿನ ಹೊಸ ಚಿಗುರನ್ನು ಕಚ್ಚಿ ಕಚ್ಚಿ ಕುಕಿಲುವ ಕೋಗಿಲೆಗಳಂತೆ ಸಂಭ್ರಮಗೊಂಡವು. ಮಡಲಿನ ತಟ್ಟಿಯ ಮರೆಯಲ್ಲಿದ್ದ ಸಣ್ಣ ಹಕ್ಕೆಯ ಹೊಳ್ಳಿಯಿಂದ ಹೊರಹೊಮ್ಮುತ್ತಿದ್ದ ಕೊಳಲ ನಾದ ಹಾರೂರಿಯ ಆಚೆ ಈಚೆಯ ಕೇರಿಯ ಮನೆಗಳಿಗೆ ಹಿತವಾಗಿಯೂ, ಇಂಪಾಗಿಯೂ ರಂಜಿಸಿತು. ಕಲ್ಲಬಾಗದ ಕಿಟಕಿಯ ಮನೆಯ ಹೊಳ್ಳಿಯಿಂದಲೂ, ಗುಂಡಿಬೈಲಿನ ದತ್ತ ಭಟ್ಟರ ಮನೆಯ ಮೊಳಗೊಟ್ಟಿಯ ಮಂಚದ ಮೇಲಿನಿಂದಲೂ ಹತ್ತಾರು ಕಂಠಗಳಲ್ಲಿ ಸುಸ್ವರ ನಾದಮಾಧುರ್ಯದಿಂದ ಹೊರಹೊಮ್ಮಿತು. ಅದಕ್ಕೆ ಹತ್ತಾರು ಹತ್ತಾರು ಕೇರಿ ಮನೆಗಳು ಕಿವಿಗೊಟ್ಟವು. ಮೈಕಿನ ಮುಖದ ಆಕಾರದಲ್ಲಿರುವ ಹಿರೇಮಕ್ಕಿಯ ತಬಲೆಯ ನುಡಿನರ್ತನ ಮಾದರಿ ಎಂಬಂತೆ ಸುತ್ತ ಹಬ್ಬಿರುವ ಗುಡ್ಡ ಬೆಟ್ಟಗಳಿಂದಲೂ ಪ್ರತಿಧ್ವನಿಸಿತು. ಸಂಜೆ ಮುಂಜಾವುಗಳ ಸೂರ್ಯನ ಕೆಂಗಿರಣಗಳ ಬೆರಳು ಶರಾವತಿಯ ತರಂಗಗಳಲ್ಲಿ ಆಡುತ್ತಾ ಮಾಗೋಡಿನ ಗದ್ದೆ ತೋಟಗಳನ್ನು ಹಾದು ಬರುವ ನಾದ ಮಾಧುರ್ಯಕ್ಕೆ ಸರಗೊಟ್ಟಿತು. ದಿಬ್ಬಣಗಲ್ಲರೆಯ ಅರೆಯೂ ಪ್ರತಿಧ್ವನಿಗೊಡುವಂತೆ, ಅನತಿ ದೂರದ ಆರಿಮೆ, ತೋಟಗಳಲ್ಲಿ ಝೇಂಕರಿಸುವ ದುಂಬಿಗಳ ನಾದದಿಂದೊಡಗೂಡಿ ಗಂಧರ್ವರ ನಾಡು ಇದೆಂಬಂತೆ ಮೊರಗೋಳೆಯಿಂದ ಉಲ್ಲಾಸಭರಿತವೂ, ಇಂಪಾದುದೂ ಆದ ಅಭಂಗ ಮತ್ತು ಕೀರ್ತನೆಗಳ ಗಾಯನ ಶಾಂತಿಯ ಅಲೆಯನ್ನು ಪ್ರಸರಿಸಿತು. ಹೀಗೆ ನೆಲ, ಜಲ, ಗಗನವನ್ನಾವರಿಸುವ ಮಧುರ ಸಂಗೀತದ ಇಂಪು ಎಲ್ಲೆಂದರಲ್ಲಿ ಒಡಮೂಡುತ್ತ ಗಂಧರ್ವ ಲೋಕದ ಹೊಳಹೊಂದು ನೆಡೆಗೊಟ್ಟಿತು.
ದೇಶೀಯ ಕಲೆಗಳಲ್ಲಿ ಮಾರ್ಗದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಯಕ್ಷಗಾನದ ಹಿಮ್ಮೇಳದಲ್ಲಿ ಶೃತಿಗೆ ಮುಖವೀಣೆಯ ಸ್ಥಾನದಲ್ಲಿ ಹಾರ್ಮೊನಿಯಂ ಸಾಂಗತ್ಯ ಪಡೆಯತೊಡಗಿತು. ಯಕ್ಷಗಾನ ಮತ್ತು ಭಜನಾ ಮಂಡಳಿಗಳ ಅಖಾಡದಂತಿರುವ ನೆಲೆಯಲ್ಲಿಯೂ ಕೆಲವೊಮ್ಮೆ ಹಾರ್ಮೊನಿಯಂ ಮತ್ತು ಪಿಟೀಲಿನ ನಾದ ಒಪ್ಪಿತವಾಯಿತು. ಚಂಡೆಯ ಅಬ್ಬರ ಸಳ ಮತ್ತು ತಾಸ್ಮಾರನ್ನು ಹಿಂದಿಕ್ಕಿತು. ಈ ನೆಲದ ಸಹಜ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿಗಳಂತೆ ಸಂಗೀತಪ್ರಿಯರೂ, ಸಂಗೀತ ಕಲಾವಿದರೂ ತಮಗೊಲಿದ ಸಂಗೀತದ ಯಾವುದಾದರೊಂದು ಪ್ರಕಾರದಲ್ಲಿ ಊರೂರಿನ ಕೇರಿ ಕೇರಿಗಳಲ್ಲಿ ತಮ್ಮ ಧ್ವನಿಗೂಡಿಸಿದರು. ಹೀಗೆ ನೆಲದ ಸಹಜ ಸೃಷ್ಠಿಯಾಗಿ ಬೆಳೆದ ಅಗ್ರಮಾನ್ಯರಲ್ಲಿ ಬಾಳೆಗದ್ದೆಯ ವಿದ್ವಾನ್ ಗಜಾನನ. ಆರ್. ಭಟ್ಟರೂ ಒಬ್ಬರು.
ನಿಬಿಡ ಗಿಡ ಮರ ಬಳ್ಳಿಗಳ ನಡುವೆ ಮನೆಗಳಲ್ಲಿಯೂ ಮಂದಿರಗಳಲ್ಲಿಯೂ ಸಂಗೀತದ ಅಭ್ಯಾಸ, ಸಂಗೀತದ ಸೇವೆ! ಮುಂದರಿಯುವ ಮಾರ್ಗದೊಂದಿಗೆ ಸಮ್ಮಿಳಿತವಾದ ಸಂಗೀತ-ಗೋಷ್ಠಿಗಳು ಹೊರಹೊಮ್ಮಿಸುವ ಏರಿಳಿದು ಅತ್ತಿತ್ತ ಬಾಗಿ ಬಳುಕುವ ನಾದತರಂಗ! ಇಲ್ಲಿ ನಿಸರ್ಗ ಸಹಜವಾಗಿ ಅರಳಿದ ಸಮಷ್ಠಿಯೂ ಮಾನವ ನಿರ್ಮಿತ ಜೀವನ್ಮುಖಿಯಾದ ಸಾಂಸ್ಕೃತಿಕ ಲೋಕದ ಸಮಷ್ಠಿ-ಪ್ರಜ್ಞೆಯ ವೈವಿಧ್ಯತೆಯೂ ಸಹಯೋಗ ಹೊಂದಿರುವುದನ್ನು ಗಮನಿಸಬಹುದು.
ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲಿಯ ಭಾಸ್ಕೇರಿ, ಸುಬ್ರಹ್ಮಣ್ಯ ದೇಗುಲದ ನಡುವೆ ಬಾಳೆಗದ್ದೆ ಒಂದು ಸಣ್ಣ ಊರು. ಅಲ್ಲಿ ಸಾಮ ಶಾಖೆಯ ಕುಟುಂಬಗಳದ್ದೇ ಯಾಜಮಾನ್ಯ. ಅಲ್ಲಿಂದ ಸದಾ ಹೊರಹೊಮ್ಮುತ್ತಿದ್ದ ಸಾಮವೇದದ ಮಂತ್ರಘೋಷದ ಒಡಲಲ್ಲಿ ಒಡಮೂಡಿಬಂದದ್ದು ವಿದ್ವಾನ್ ಜಿ.ಆರ್. ಭಟ್ಟರ ಸಂಗೀತಾಮೃತ. ಇಂದು ವಿದ್ವಾನ್ ಜಿ.ಆರ್. ಭಟ್ಟರ ಸಂಗೀತದ ವಿದ್ಯಾರ್ಥಿಗಳ ಸುಸ್ವರ ಗಾಯನ ಅಂದಿನ ಅವರ ವಿದ್ವತ್ತನ್ನೂ ಮತ್ತು ಅವರು ವಿದ್ಯಾರ್ಥಿಗಳಿಗೆ ಧಾರೆಯೆರೆಯುತ್ತಿದ್ದ ಅವರ ಸಂಗೀತಮಯ ವ್ಯಕ್ತಿತ್ವವನ್ನೂ ಸಾಕ್ಷಾತ್ಕರಿಸುವಂತೆ ವೈಭವೋಪೇತವಾಗಿ ಹೊರಹೊಮ್ಮುತ್ತಾ ಜನಮಾನ್ಯವಾಗಿದೆ. ನಾನು ಕಂಡು ಕೇಳಿದ ಪಂಡಿತ ಜಿ.ಆರ್. ಭಟ್ಟರ ಒಂದು ಸಂಗೀತ ಕಛೇರಿಯ ಅನುಭವವನ್ನು ನನ್ನ ಅರಿವಿನ ಮಿತಿಯಲ್ಲಿ ಇಲ್ಲಿ ಪರಿಚಯಿಸುತ್ತೇನೆ.
ಎರಡು ಸಾವಿರದ ಏಳರ ಮೇ ತಿಂಗಳು. ಅಂದು ನನ್ನ ಎರಡನೆಯ ಮಗಳ ಮದುವೆಗೆ ಕರೆಯಲು ಹೋಗಿದ್ದೆ. ನನ್ನೊಂದಿಗೆ ನನ್ನ ತಮ್ಮ ಮಹಾಬಲೇಶ್ವರ ಇದ್ದ. ನೀಲಕೋಡಿನ, ಮೇಲಿನ ಸಾಲಕೋಡಿನ ಬಂಧುಗಳನ್ನು ಆಮಂತ್ರಿಸಿ ತಿರುಗಿ ಬರುವಾಗ ಸೂರ್ಯ ಪಶ್ಚಿಮಾಂಬುಧಿಯಲ್ಲಿ ಕಾಲೂರುತ್ತಿದ್ದ. ನಾವು ಸಾಲಕೋಡಿನ ಹೊಳೆ ದಾಟುವಾಗ ಮಸುಕು ಮಸುಕು. ದೂರದಿಂದ ಸಂಗೀತ ಕೇಳತೊಡಗಿತು. “ಎಲ್ಲೋ ಸಂಗೀತ ಕಚೇರಿ ನಡೆಯುತ್ತಿದೆ” ಎಂದು ನಾನೆಂದೆ. “ಇದು ರೆಕಾರ್ಡ್ ಸಂಗೀತ ಇದ್ದಂತಿಲ್ಲ” ಮಹಾಬಲ ಎಂದ. ನಾವು ಮುಂದೆ ಮುಂದೆ ಹೆಜ್ಜೆ ಇಡುತ್ತಿದ್ದಂತೆ ಆ ಸಂಗೀತವೇ ನಮಗೆ ದಾರಿಯ ಬೆಳಕಾಯಿತು. ನಾವು ಆ ಸ್ವರಮಾಧುರ್ಯ ಆಸ್ವಾದಿಸುತ್ತ ಮುಂದರಿದು ಕೈಕಂಟಕೇರಿ ಶ್ರೀ ಪರಮೇಶ್ವರ ಹೆಗಡೆಯವರ ಮನೆಯ ಅಂಗಳದ ತೋರಣದ ಹತ್ತಿರ ಬಂದು ನಿಂತೆವು. ತೋರಣದ ಒಂದು ಮಗ್ಗುಲಲ್ಲಿ ನಿಂತು ತುಸು ಎರಗಿ ನೋಡಿದೆವು. ಅಂಗಳದ ತುಂಬಾ ಜನ ಕುಳಿತಿದ್ದರು. ಸಂಗೀತದ ಆಸ್ವಾದನೆಯಲ್ಲಿ ಮಗ್ನರಾದ ಆ ರಸಿಕ ಹೃದಯಿಗಳ ನಡುವೆ ನುಗ್ಗಿ ಹೋಗುವುದು ನಮಗೆ ಸರಿ ಎನ್ನಿಸಲಿಲ್ಲ. ಎರಡು ಮೂರು ನಿಮಿಷ ಮಂಟಪದ ಹತ್ತಿರವೇ ನಿಂತೆವು. ಯಾರೂ ನಮ್ಮನ್ನು ಗಮನಿಸಲಿಲ್ಲ. ಮಹಾಬಲ ನನ್ನನ್ನು ಮುಟ್ಟಿ ಒಳಗೆ ಹೋಗುವಾ ಎಂದು ಪಿಸುಗುಟ್ಟಿದ. ಇನ್ನೇನು ಮಾಡುವುದು ಎಂದು ‘ಸರಿ’ ಎಂದೆ. ಇಬ್ಬರೂ ಚಪ್ಪರದ ಒಳ ಪ್ರವೇಶ ಮಾಡಿ ಆ ಸಭೆಯ ಒಂದು ಬದಿಯಿಂದ ಮುಂದೆ ನಡೆದು ಅದೇ ಅಂಗಳಕ್ಕೆ ಹೊಂದಿದ್ದ ದಿವಂಗತ ಗಜಾನನ ಹೆಗಡೆಯವರ ಮನೆಯ ಮುಂದೆ ಹೋದೆವು. ಅಲ್ಲಿ ಒಂದು ಬೆಂಚಿನ ಮೇಲೆ ತಾಯಿಯೊಬ್ಬರು ಕುಳಿತಿದ್ದರು. ಅವರು ನಮ್ಮನ್ನು ನೋಡಿ ತಮ್ಮ ಪಕ್ಕದಲ್ಲಿದ್ದ ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಸರಿದು ನಮಗೆ ಜಾಗ ಕೊಟ್ಟರು.
ಶ್ರೀ ಪರಮೇಶ್ವರ ಹೆಗಡೆಯವರ ಮನೆಯ ತುಳಸಿಕಟ್ಟೆಯ ಹತ್ತಿರ ಒಂದು ಚಾಪೆ ಹಾಸಿ, ಅದರ ಮೇಲೊಂದು ಕಂಬಳಿ, ಅದರ ಮೇಲೊಂದು ಚಾದರ, ಒಂದು ಪಕ್ಕದಲ್ಲಿ ಎರಡು ಒರಗು ದಿಂಬುಗಳು. ಇದೇ ವೇದಿಕೆ. ಮಧ್ಯದಲ್ಲಿ ಪಂಡಿತ ಜಿ.ಆರ್. ಭಟ್ಟರು. ಎಡ ಬಲಗಳಲ್ಲಿ ಹಾರ್ಮೊನಿಯಂ, ತಬಲಾ ಸಾಥಿಗಳು. ಹಬ್ಬುವ ಗಾನಲತೆಗೆ ಹಾರ್ಮೊನಿಯಂ ಮತ್ತು ತಬಲಾ ಹಂದರದಂತಿದ್ದವು. ಪಕ್ಕದಲ್ಲಿ ಅವರ ಶಿಷ್ಯ ಇರಬಹುದು ಕುಳಿತಿದ್ದು ಆಗಾಗ ಸ್ವರ ಸೇರಿಸುತ್ತಿದ್ದರು. ಶೃತಿ, ತಾಳ, ಲಯಗಳು ಮೇಳೈಸಿದ ಶ್ರೀಯುತ ಭಟ್ಟರ ರಾಗಾಲಾಪ ಆಗಲೇ ಸ್ವರಮಾಧುರ್ಯದ ಲೋಕವೊಂದನ್ನು ಸೃಷ್ಟಿಸಿತ್ತು. ಯಮನ್ ರಾಗದ ಏರಿಳಿವ ಸ್ವರಗಳೊಂದಿಗೆ ಶ್ರೀ ಭಟ್ಟರ ಹಸ್ತದ ಸಂಚಲನ ಮತ್ತು ಮುಂದೆ ಚಾಚುವ ಬೆರಳಲ್ಲಿ ಸ್ಥಿರವಾಗಿ ನಿಲ್ಲುವ ದೃಷ್ಟಿ. ಹಾಡುವ ಪದ್ಯಾರ್ಥದ ಛಾಯೆಯು ಕಿವಿಗೆ ಇಂಪನ್ನು ಮತ್ತು ಕಣ್ಣಿಗೆ ಒಂದು ಮಾಟವನ್ನು ಕಟ್ಟಿಕೊಡುತ್ತಿತ್ತು. ಆ ಗಾನಾಮೃತದ ಅಲೆಯಲ್ಲಿ ಎಲ್ಲರೊಂದಿಗೆ ನಾವೂ ತೇಲಿದೆವು. ನನ್ನ ತಮ್ಮನನ್ನು ಗಮನಿಸಿದೆ. ಬಹು ಜನರ ತಲೆಗಳಂತೆ ಅವನ ತಲೆಯೂ ತೂಗಾಡುತ್ತಿತ್ತು. ತಾಳದ ಗತಿಗೆ ಬೆರಳು ಆಡುತ್ತಿತ್ತು. ನಮ್ಮ ಪಕ್ಕದಲ್ಲಿ ತಾಯಿಯ ತೊಡೆಯ ಮೇಲೆ ಕುಳಿತಿದ್ದ ಕಂದಮ್ಮ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿ ತಾಳ ಹಾಕುತ್ತಿತ್ತು.
ವಿದ್ವಾನ್ ಜಿ. ಆರ್ ಭಟ್ಟರು ಸಾಯಂಕಾಲದಲ್ಲಿ ಹಾಡಲು ಒಪ್ಪಿತವಾದ ಯಮನ್ ರಾಗದ ಪ್ರಸಿದ್ಧ ಚೀಸೊಂದನ್ನು ಆಯ್ಕೆ ಮಾಡಿಕೊಂಡಿದ್ದರು. ಆಗ ಎರಡನೆಯ ಚರಣದ ಗಾಯನ ಮುಂದರಿದಿತ್ತು. ರಾಜಸ್ಥಾನಿ ಭಾಷೆಯ ಚೀಸ್ ಅದು –
ಏ ರೀ ಆಲೀ ಪಿಯಾ ಬಿನ ಕಲ್ ನಾ ಪರತ್ ಮೋಹೇ|
ಏ ರೀ ಆಲೀ ಪಿಯಾ ಬಿನ|
ಅರೀ ಏ ರೀ ಆಲೀ ಪಿಯಾ ಬಿನ ಸಖೀ ಕಲ್ ನಾ ಪರತ್ ಮೋಹೇ|
ಇಸ್ ಘರ್ ಪಲ್ ಛಿನ|
ಏ ರೀ ಆಲೀ ಪಿಯಾ ಬಿನ|
ಅರೀ ಏ ರೀ ಆಲೀ ಪಿಯಾ ಬಿನ||
ಜಬಸೇ ಪಿಯಾ ಪರದೇಶ್ ಗಯೇ ಮೋರೇ|
ರತಿಯಾ ಕಟತ ಮೋರೀ ತಾರೇ ಗಿನ ಗಿನ || 1 ||
(ಈ ಚೀಸಿನ ಇನ್ನೊಂದು ಪಠ್ಯ)
ಸಖೀ ಏ ರೀ ಆಲೀ ಪಿಯಾ ಬಿನ|
ಏ ರೀ ಆಲೀ ಪಿಯಾ ಬಿನ|
ಕಲ್ ನಾ ಪರತ ಮೊಹೇ ಘಡೀ ಪಲ್ ಛಿನ್ ದಿನ್|
ಏ ರೀ ಆಲೀ ಪಿಯಾ ಬಿನ|
ಕಲ್ ನಾ ಪರತ ಮೊಹೇ ಘಡೀ ಪಲ್ ಛಿನ್ ಛಿನ್||
ಜಬಸೇ ಪಿಯಾ ಪರದೇಸ್ ಗಮನ ಕೀನೋ|
ಸಖೀ ಜಬಸೇ ಪಿಯಾ ಪರದೇಶ್ ಗವನ ಕೀನೋ|
ರತಿಯಾ ಕಟತ ಮೋರೀ ತಾರೇ ಗಿನ ಗಿನ || 2 ||
ಇದರ ಅರ್ಥ – ಹೇ ಗೆಳತಿ, ಪ್ರಿಯತಮನಿಲ್ಲದೆ ನನ್ನ ಸಮಯವೇ ಕಳೆಯುತ್ತಿಲ್ಲ. ಒಂದೊಂದು ಕ್ಷಣವೂ ದೀರ್ಘವೆನ್ನಿಸುತ್ತಿದೆ. ಅವನು ಪರದೇಶಕ್ಕೆ ಹೋದಂದಿನಿಂದ ನನ್ನ ರಾತ್ರಿಯೆಲ್ಲ ಬಾನಿನ ತಾರೆಗಳನೆಲ್ಲಾ ಎಣಿಸುವುದರಲ್ಲೇ ಕಳೆಯುತ್ತಿದೆ. ವಿದ್ವಾನ್ ಜಿ.ಆರ್. ಭಟ್ಟರು ಈ ಚೀಸಿನ ಎರಡನೆಯ ಚರಣವನ್ನು ಹಾಡುತ್ತಿದ್ದರು. ಕೆಲವು ಸಂಗೀತ ಕಲಾವಿದರಂತೆ “ಕಲನ ರಪತ” ಎಂದು ಹಾಡದೆ ಹೇ ಸಖೀ “ಕಲ ನ ಪರತ” ಎಂದು ಹಾಡುತ್ತಾ ಚೀಸಿನ ವಾಚ್ಯಾರ್ಥ ಭಾವಾರ್ಥ ಲೋಕದಲ್ಲಿ ವಿಹರಿಸುತ್ತಾ ಪ್ರಿಯತಮನ ಅಗಲಿಕೆಯ ನೋವಿನ ನೆಲೆಗಳನ್ನು ಆಲಾಪನೆಯ ಕಡೆಗೋಲಿನಲ್ಲಿ ಕಡೆದು ಮೂರ್ತೀಕರಿಸುತ್ತಿದ್ದರು. ಅರ್ಥ ಮತ್ತು ಭಾವ ಹಿಗ್ಗಿ ಹಿಗ್ಗಿ ಸ್ಫುರಣಗೊಳ್ಳುತ್ತಿತ್ತು. ಮುಂಗತ್ತಲಲ್ಲಿ ಹಾಡುವ ಈ ಕೃತಿ (ಬಂದಿಶ್) ಪ್ರೇಮಲೋಕದ ಅನರ್ಘ್ಯ ರತ್ನ. ‘ಆತ ಪರದೇಶವಾಸಿ. ಈಗ ಹೇಗಿರುವನೋ? ಹಗಲಲ್ಲಿ ದಿನದ ಕ್ಷಣಗಳನ್ನು ಎಣಿಸುವೆನು, ರತಿಯಿಲ್ಲದ ರಾತ್ರಿಯಲ್ಲಿ ನಕ್ಷತ್ರಗಳನ್ನು ಎಣಿಸುತ್ತಿರುವೆನು’ (ಗಿನ ಗಿನ) – ಶ್ರೀ ಭಟ್ಟರ ಗಾನಮಯೂರ ನರ್ತಿಸುತ್ತಿರಲಿಲ್ಲ! ತನ್ನಂತರಂಗದ ಬಣ್ಣ ಬಣ್ಣದ ಗರಿಯ ಕಣ್ಣುಗಳನ್ನು ನಾದಪೀಯೂಷದಲ್ಲದ್ದಿ ಹೊಳೆಯಿಸುತ್ತಿತ್ತು. ರತಿ ರಹಿತ ರಾತ್ರಿಯಲ್ಲಿ ತಾರೆಗಳನ್ನೆಣಿಸುವ ವಿರಹಿಣಿಯ ಅಗಲಿಕೆಯ ನೋವನ್ನು ಭಾವಿಸಿ ನನ್ನ ಹೃದಯ ದೇವರೇ ಎಂದು ಉಗ್ಗಡಿಸಿತು. ಅನಂತ ವಿಸ್ತಾರದ ಆಕಾಶ, ಅಲ್ಲಿ ಅನಂತಾನಂತ ಹೊಳೆವ ತಾರೆಗಳು, ನೂರಾರು ಕೋಟಿ ವರ್ಷ ಎಣಿಸಿದರೂ ಮುಗಿಯದ ವಿಪುಲ ನಕ್ಷತ್ರಗಳು. ಅಗಲಿಕೆಯನ್ನು ಒಪ್ಪಿ ಅದನ್ನು ಜನ್ಮ ಜನ್ಮಾಂತರದಲ್ಲೂ ಮುಂದರೆಸುವ ತನ್ನ ನಿರ್ಧಾರವನ್ನು ಸಖಿಗೆ ಸೂಚಿಸುವ ಮನೋಜ್ಞವಾದ ಸಂಕೇತ ಕ್ರಿಯೆಯಲ್ಲಿ ಮನ ಮುಟ್ಟುತ್ತಾ ಶೃಂಗಾರ ವಿಪ್ರಲಂಬಕ್ಕೆ ತಿರುಗುತ್ತ ಕರುಣೆಯ ಮಡಿಲಲ್ಲಿ ವಿಶ್ರಮಿಸಿದಂತೆ ತೋರಿತು. ಶ್ರೇಷ್ಠ ಗಾಯಕ ಮಾತ್ರ ಶೃತಿ, ರಾಗ, ತಾಳ, ಲಯಗಳ ಚೌಕಟ್ಟಿನಲ್ಲಿ ತಾನಿದ್ದೂ ಅದರಾಚೆಗೆ ಸಹೃದಯಿಯ ಭಾವಲೋಕಗಳ ಬಾಗಿಲನ್ನು ತೆರೆಯಬಲ್ಲ.
ಅನಂತ ವಿಸ್ತಾರದ ಆಕಾಶ, ಅಲ್ಲಿ ಅನಂತಾನಂತ ಹೊಳೆವ ತಾರೆಗಳು, ನೂರಾರು ಕೋಟಿ ವರ್ಷ ಎಣಿಸಿದರೂ ಮುಗಿಯದ ವಿಪುಲ ನಕ್ಷತ್ರಗಳು. ಅಗಲಿಕೆಯನ್ನು ಒಪ್ಪಿ ಅದನ್ನು ಜನ್ಮ ಜನ್ಮಾಂತರದಲ್ಲೂ ಮುಂದರೆಸುವ ತನ್ನ ನಿರ್ಧಾರವನ್ನು ಸಖಿಗೆ ಸೂಚಿಸುವ ಮನೋಜ್ಞವಾದ ಸಂಕೇತ ಕ್ರಿಯೆಯಲ್ಲಿ ಮನ ಮುಟ್ಟುತ್ತಾ ಶೃಂಗಾರ ವಿಪ್ರಲಂಬಕ್ಕೆ ತಿರುಗುತ್ತ ಕರುಣೆಯ ಮಡಿಲಲ್ಲಿ ವಿಶ್ರಮಿಸಿದಂತೆ ತೋರಿತು.
ವಿದ್ವಾನ್ ಜಿ.ಆರ್. ಭಟ್ಟರು ತಮ್ಮ ಅಂದಿನ ಗಾಯನದ ಸಾರ್ಥಕ ಅಂಚನ್ನು ತಲುಪುತ್ತಿದ್ದಂತೆ ಶ್ರೀ ಪರಮೇಶ್ವರ ಹೆಗಡೆ ನಮ್ಮ ಹತ್ತಿರ ಬಂದು ಕೈಹಿಡಿದು ನಮ್ಮನ್ನು ಮನೆಯೊಳಗೆ ಕರೆದೊಯ್ದರು. ಅತ್ತಿತ್ತ ನೋಡಿ ಎರಡು ಮಣೆಗಳನ್ನು ಹಾಕಿ ನಮ್ಮನ್ನು ಕೂಡಿಸಿದರು. ನಮ್ಮ ಮುಂದುಗಡೆ ವಿವಿಧ ಭಕ್ಷ್ಯ ತುಂಬಿದ ಪಾತ್ರೆಗಳು. ಹೋಳಿಗೆ, ಜಿಲೇಬಿ, ಲಾಡು, ಬೋಂಡ, ಕರೆ, ಚಕ್ಕಲಿ, ಹಪ್ಪಳ, ಮೂರೋ ನಾಲ್ಕೋ ಪಲ್ಯಗಳು, ತೊವ್ವೆ, ಹುಳಿ ಘಮ ಘಮ ಸುವಾಸನೆ! ನಮಗೆ ಬೇಕಾದ ತಿನಿಸನ್ನು ಕೊಡುತ್ತಾ ಪಿಸು ದನಿಯಲ್ಲಿಯೇ ನಾವು ಬಂದ ವಿಷಯ ತಿಳಿದು ಸಂತೋಷಪಟ್ಟರು. ಸವಿಯಾದ ತಿನಿಸಿನೊಂದಿಗೆ ಗಾನರಸವೂ ಬೆರೆಯುತ್ತಿತ್ತು. ಪಿಸುದನಿಯ ಮಾತಿನ ಮಧ್ಯೆ ಮಹಾಬಲ ಇನ್ನೂ ಕರೆಯಬೇಕಾದ ಮನೆಗಳಿವೆ ಎಂದು ನೆನಪು ಮಾಡಿದ. ಒಲ್ಲದ ಮನಸ್ಸಿನಿಂದ ಹೊರಟೆವು. ಅವರು ಹಾಡುತ್ತಿದ್ದ “ತರನಾನಾ” ದೂರದವರೆಗೂ ಬಂದು ನಮ್ಮನ್ನು ಬೀಳ್ಕೊಟ್ಟಿತು.
ನಡೆಯುತ್ತಾ ಮಹಾಬಲ, ಭಟ್ಟರು ಹಾಡುತ್ತಾ ಹಾಡುತ್ತಾ ಕೊನೆಯಲ್ಲಿ ಸಖೀ ಎಂದು ಸಂಬೋಧಿಸುವ ಭಾವ ಬದಲಾಗಿತ್ತಲ್ಲವೆ ಎಂದು ಕೇಳಿದ. ಬದಲಾದ ಭಟ್ಟರ ಭಾವವನ್ನು ಮಹಾಬಲ ಗಮನಿಸಿದುದು ನನಗೆ ಸಂತೋಷ ಉಂಟುಮಾಡಿತು. ಸಖಿ ಮತ್ತು ಆಲಿ ಸಮಾನಾರ್ಥಕ ಶಬ್ದಗಳಾಗಿದ್ದರೂ ಸಖಿ ಶಬ್ದಕ್ಕೆ ಮಾತ್ರ ದುಂಬಿ ಎಂಬ ಅರ್ಥವಿದೆ. ತಾನು ಅಗಲಿದ ಗೋಪಿಕೆಯರನ್ನು ಸಾಂತ್ವನಗೊಳಿಸಲೆಂದು ಶ್ರೀ ಕೃಷ್ಣನು ಗೋಕುಲಕ್ಕೆ ಉದ್ಧವನನ್ನು ಕಳುಹಿಸುತ್ತಾನೆ. ಆಗ ಗೋಪಿಕೆಯರು ಪರಪುರುಷನಾದ ಆತನನ್ನು ನೋಡಲು ತೃಣಮಾತ್ರಕ್ಕೂ ಒಪ್ಪುವುದಿಲ್ಲ. ಉದ್ಧವ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲಾರದೆ ಪರಿತಪಿಸತೊಡಗುತ್ತಾನೆ. ಆಗ ಗೋಪಿಕೆಯರ ಮುಂದೊಂದು ದುಂಬಿ ಹಾರಿ ಬರುತ್ತದೆ. ಗೋಪಿಕೆಯರು ಅದನ್ನು ಕುರಿತು ಸಖೀ ಎಂದು ಸಂಬೋಧಿಸಿ ವಿರಹದ ನೋವನ್ನು ತೋಡಿಕೊಳ್ಳುತ್ತಾರೆ. ತಮ್ಮ ವಿರಹದ ಯಾತನೆಯನ್ನು ನಕ್ಷತ್ರಗಳ ಎಣಿಕೆಯ ಮೂಲಕ ಸೂಚಿಸುತ್ತಾ ಕೃಷ್ಣನಿಗಾಗಿ ಜನ್ಮ ಜನ್ಮಾಂತರವೂ ಕಾಯುವ ತಮ್ಮ ನಿರ್ಧಾರವನ್ನು ಕೃಷ್ಣನಿಗೆ ತಲುಪಿಸುತ್ತಾರೆ. ಶೃಂಗಾರ ಭಾವದ ಹಾಡೆಂಬಂತೆ ಆರಂಭವಾಗಿ ವಿಷಾದ ಭಾವದತ್ತ ಹೊರಳಿ ವಿಪ್ರಲಂಬ ಶೃಂಗಾರದ ನಿರವಧಿಯ ಅಲೆಯಲ್ಲಿ ತೊನೆದಾಡಿ ಸರ್ವಾರ್ಪಣೆಯ ನಿರಂಬಳತೆಯಲ್ಲಿ ಹಾಡು ವಿರಮಿಸಿದ ವಿದ್ವಾನ್ ಜಿ.ಆರ್. ಭಟ್ಟರ ಹಾಡಿಕೆಯ ರೀತಿ ಪರಿಪಕ್ವತೆಯನ್ನು ಹೊಂದಿದ ಗಾನವಿದನ ಪ್ರಾತ್ಯಕ್ಷಿಕೆಯಂತೆ ಇತ್ತು. ಬಯಕೆಯ ಸುಪ್ಪತ್ತಿಗೆಯಲ್ಲಿ ಉರುಳಾಡುವ ಮನಸ್ಸನ್ನು ನಕ್ಷತ್ರಗಳ ಬೆಳಕಿನ ಅಲೆಯಲ್ಲಿ ತೇಲಾಡಿಸುವ ಮಾಂತ್ರಿಕತೆ ವಿದ್ವಾನ್ ಜಿ.ಆರ್. ಭಟ್ಟರ ಸಾಧನೆಯ ಫಲ ಆಗಿದೆ.
ವಿದ್ವಾನ್ ಜಿ.ಆರ್. ಭಟ್ಟರು ಮರದೆತ್ತರಕ್ಕೆ ಅಟ್ಟಣಿಗೆ ಹಾಕಿ ಅಲ್ಲಿ ತಮ್ಮ ಗಾನ ಮೊಳಗಿದವರಲ್ಲ. ಬದಲಾಗಿ ಗಾನವೃಕ್ಷದ ಬೇರುಗಳಿಗೆ ತಮ್ಮ ಗಾನಪಂಚಾಮೃತವನ್ನೆರೆದವರು. ಅದರಿಂದ ಅವರ ನೂರಾರು ಶಿಷ್ಯರು ಇಂದು ನಾಡಿನಾದ್ಯಂತ ಗಾನವೃಕ್ಷದ ಕೊರಳಾಗಿ ಸಂಗೀತ ಸಂಭ್ರಮದ ಆವರಣವೊಂದರ ಸೃಷ್ಟಿಗೆ ಕಾರಣವಾಗುತ್ತಿದ್ದಾರೆ. ವಿದ್ವಾನ್ ಜಿ.ಆರ್. ಭಟ್ಟರ ಶಿಷ್ಯಗಣದ ಸಾಧನೆ ಮತ್ತು ಸಿದ್ಧಿ ಗುರುವಿನ ವ್ಯಕ್ತಿತ್ವದ ಹೂಗಂಧ ಆಗಿದೆ. ಸಂಗೀತ ಆತ್ಮಗತವಾಗುವ ಹೆದ್ದಾರಿಯ ಗಮನಕ್ಕೆ ಆರಾಧನೆ ಮತ್ತು ಅರ್ಪಣೆ ಊರುಗೋಲುಗಳು. ಆಕಾಶದ ತನ್ಮಾತ್ರೆ ಶಬ್ದವಾಗಿದ್ದು ಅದು ಸಕಲ ನಾದ ಮತ್ತು ಗಾನದ ಮೂಲದ್ರವ್ಯ. ಸಂಗೀತ ಆಕಾಶ ಸಂಬಂಧಿ. ಸಂಕುಚಿತ ಹೃದಯ ನಾದೋಪಾಸನೆಯ ಪೀಠವೆಂದೂ ಆಗದು. ಇಂದು ಸಂಗೀತರಂಗ ಒಂದು ವೃತ್ತಿರಂಗದಂತೆ ಅರ್ಥ ಸಾಧನೆಯ ಮಾರ್ಗವಾಗಿದ್ದು ಕೆಲವು ಸಂಗೀತವಿದರು ತಮ್ಮ ಸಂಗೀತ ವಿದ್ವತ್ತಿನಚಾಪೆಯ ಆಚೆ ಶಿಷ್ಯರ ರಾಗಾಂಗ ಚಾಚದಂತೆ ಎಚ್ಚರ ವಹಿಸುತ್ತಾರೆ. ಒಳಗೊಳ್ಳುವ ‘ಸಂಗೀತ-ಗುರು’ವಿನ ಹೃದಯ ಮಾತ್ರ ಗುರುತ್ವಸಿದ್ಧಿಯ ನೆಲೆ ಆಗುವುದು. ತಮ್ಮ ಕಾಲಾವಧಿಯ ಅನಂತರವೂ ವಿದ್ವಾನ್ ಜಿ.ಆರ್. ಭಟ್ಟರು ಜನಮಾನಸದಲ್ಲಿ ನೆನಪಾಗಿ, ಮಾರ್ಗದರ್ಶಿಯಾಗಿ ಪ್ರಜ್ವಲಿಸಿ ಬೆಳಗುತ್ತಿರುವುದು ಅವರ ಗುರುತ್ವದ ಹಿರಿಮೆಯೇ ಆಗಿದೆ.
(ನೆರವು: ಡಾ. ಬಿ.ಜೆ. ರಂಗನಾಥ, ಸಂಗೀತಜ್ಞರು, ನಿವೃತ್ತ ಪ್ರಾಧ್ಯಾಪಕರು, ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಇಂಜನಿಯರಿಂಗ್; ಎಂ. ಬಸವರಾಜು, ಸಂಶೋಧನಾ ವಿದ್ಯಾರ್ಥಿ, ಕುವೆಂಪು ವಿಶ್ವವಿದ್ಯಾನಿಲಯ)
ಗಜಾನನ ಈಶ್ವರ ಹೆಗಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಧ್ಯಾಪಕರು. ಇವರ ಪ್ರಕಟಿತ ಕೃತಿಗಳು ಶ್ರೀಕಲ್ಪ, ಕವನ ಸಂಕಲನ; ಗುರು, ನೀಳ್ಗವನ; ಸಮಾಜಮುಖಿ, ಗೀತ ನಾಟಕ; ರಸರಾಮಾಯಣ, ಕಾವ್ಯ; ಲೋಕ ಶಂಕರ, ಕಾವ್ಯ. ರಂಗದಲ್ಲಿ ಪ್ರದರ್ಶಿತವಾದ ಗೀತನಾಟಕಗಳು ಶ್ರೀರಾಮ ಚಂದನ, ಶರಣ ಸಂಕುಲ, ಶಿವರಾಗಿಣಿ, ಭವತಾರಿಣಿ. ಹೊಯ್ಸಳ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ. ಇವರ ಕವನ, ಕಥೆ, ವಿಮರ್ಶೆ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ.
ಇವತ್ತು ಉತ್ತರಕನ್ನಡ ದತುಂಬಾ ಹಿಂದುಸ್ತಾನಿ ಸಂಗೀತದ ಮೇರು ಕಲಾವಿದರಿದ್ದಾರೆ. ಅದರ ಹಿನ್ನೆಲೆಯಲ್ಲಿ foundation ಹಾಕಿದವರು ಕಲಭಾಗ ಗೋವಿಂದ ಹೆಗಡೆ (ಪಂ. ಪರಮೇಶ್ವರ ಹೆಗಡೆಯವರ ತಂದೆ), ಬಾಳೆಗೆದ್ದೆ ಪಂ. ಜೊ. ಆರ್. ಭಟ್ಟರು ಮತ್ತು ಕಡತೋಕಾ ಶಂಭು ಭಟ್ಟರು. ಜಿ. ಆರ್. ಭಟ್ಟರು ಎಲೆಯಮರೆಯ ಕಾಯಂತೆ ಇದ್ದು ಇಡೀ ಸಮುದಾಯದ ಸಹೃದಯತೆಯ ಪ್ರೇಕ್ಷಕರ ಬೆಳವಣಿಗೆಗೆ ಕಾರಣರಾದರು.