ಹೈಗುಂದ ಡಾಕ್ಟರರು ಕಾವ್ಯವನ್ನು ಅರ್ಥಗಾರಿಕೆಗೆ ಆಧಾರವನ್ನಾಗಿ ಬಳಸುತ್ತಿದ್ದರೂ ಅವರ ಆದ್ಯತೆ ಪ್ರಸಂಗಗಳ ಪದ್ಯಗಳಾಗಿತ್ತು. ಇಲ್ಲಿನ ಕಥಾನಕಕ್ಕೆ ನಿಷ್ಠರಾಗಿಯೇ ಅವರು ಕುಮಾರವ್ಯಾಸನನ್ನೊ ಜೈಮಿನಿಯನ್ನೋ ಬಳಸುತ್ತಿದ್ದರು. ಹಾಗಂತ ಅಲ್ಲಿನ ಪದ್ಯಗಳನ್ನು ಯಥಾವತ್ತಾಗಿ ತರುವದಕ್ಕೆ ಇವರ ವಿರೋಧವಿರುತ್ತಿತ್ತು. ಪ್ರಸಂಗಗಳಲ್ಲಿ ಕನ್ನಡವಲ್ಲದೇ ಅನ್ಯ ಭಾಷೆ ಅದು ಸಂಸ್ಕೃತವೇ ಆಗಿರಲಿ ಅದನ್ನು ಬಳಸುವದನ್ನು ಅಷ್ಟೇ ಉಗ್ರವಾಗಿ ವಿರೋಧಿಸುತ್ತಿದ್ದರು.
ಪ್ರಸಿದ್ಧ ಅರ್ಥಧಾರಿಗಳಾಗಿದ್ದ ಡಾ. ಹೈಗುಂದ ಪದ್ಮನಾಭಯ್ಯನವರ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ

ಉತ್ತರ ಕನ್ನಡದ ಯಕ್ಷಗಾನದ ಇತಿಹಾಸವನ್ನು ಅವಲೋಕಿಸುವಾಗ ಇಲ್ಲಿನ ರಂಗಭೂಮಿಯ ಬೆಳವಣಿಗೆಯ ಕುರಿತು ಬೇಕಾದಷ್ಟು ವಿವರ ಸಿಗುತ್ತದೆ. ಪ್ರಸಿದ್ಧ ಕಲಾವಿದರುಗಳೂ ಅನೇಕ ಸಿಗುತ್ತಾರೆ. ಮರಾಠೀ ರಂಗಭೂಮಿಯ ಹುಟ್ಟಿಗೆ ಕಾರಣವಾದ ಕರ್ಕಿ ಯಕ್ಷಗಾನ ಮಂಡಳಿಯ ಕುರಿತು ವಿವರವಾದ ವರ್ಣನೆ ದೊರೆಯುತ್ತದೆ. ಘಟ್ಟದ ಮೇಲಿನ ಕಲಾವಿದರು, ಪ್ರಸಂಗಕರ್ತರ ಕುರಿತು ಅನೇಕ ವಿವರಗಳನ್ನು ನಾವು ಗಮನಿಸಬಹುದು. ಆದರೆ ಇಲ್ಲಿನ ತಾಳ ಮದ್ದಳೆಯ ಇತಿಹಾಸವನ್ನು ಗಮನಿಸುವಾಗ ಅಂತಹ ಯಾವ ವಿವರವೂ ದೊರೆಯುವದಿಲ್ಲ. ಇಂದಿಗೂ ತಾಳಮದ್ದಳೆಯೆಂದರೆ ಅದಕ್ಕೆ ದಕ್ಷಿಣಕನ್ನಡದವರೇ ಆಗಬೇಕು ಎನ್ನುವ ಪೂರ್ವಾಗ್ರಹ ನಮ್ಮ ಪ್ರೇಕ್ಷಕರನ್ನು ಬಿಟ್ಟಿಲ್ಲ. ಇದಕ್ಕೆ ಕೆಲ ಅರ್ಥದಾರಿಗಳು ಹೊರತಾಗಿದ್ದಾರೆ ಎನ್ನುವದು ಸತ್ಯವಾದರೂ ಕುಣಿತಕ್ಕೆ ಬಡಗು ಮಾತಿಗೆ ತೆಂಕು ಎನ್ನುವ ಗಾದೆ ಮಾತು ಹುಟ್ಟಿದ್ದು ಸುಳ್ಳಲ್ಲ. ಈ ಜಿಲ್ಲೆಯ ಬಯಲಾಟವೆಂದರೆ ಅದು ವಿಲಂಬಿತ ಭಾಗವತಿಕೆ ಮತ್ತು ಸಾಹಿತ್ಯದ ಸ್ಪಷ್ಟ ಉಚ್ಛಾರಣೆ ಹಾಗೂ ಅಭಿನಯ ಪೂರ್ಣವಾಗಿರುವಂತಹದ್ದಾಗಿತ್ತು. ಇಡೀ ಪದ್ಯಕ್ಕೆ ಅಭಿನಯವನ್ನು ವಿಸ್ತಾರವಾಗಿ ಮಾಡಿ ನಂತರ ಮುಗಿದ ಮೇಲೆ ಸ್ವಲ್ಪ ಕುಣಿದು ಅದಕ್ಕೆ ಸಾಂದರ್ಭಿಕವಾಗಿ ಒಂದೆರಡು ಮಾತಿನಲ್ಲಿ ಅರ್ಥಹೇಳಿ ಮುಂದಿನ ಪದ್ಯಕ್ಕೆ ಹೋಗುವದು ಇಲ್ಲಿನ ರಿವಾಜು. ಇಲ್ಲಿ ಆ ಕಾಲದಲ್ಲಿ ತಾಳಮದ್ದಳೆ ಆಗುತ್ತಿರುವದು ಸತ್ಯವಾದರೂ, ಅದು ಈಗಿನ ಸ್ವರೂಪದ್ದಾಗಿರಲಿಲ್ಲ. ಮಳೆಗಾಲದಲ್ಲಿ ಆಟದ ತರಬೇತಿಗೋ ಬೇಸರ ಕಳೆಯಲೋ ಮದ್ದಳೆಗೆ ಬೋನ ಹಚ್ಚಿ ತಾಳ ಹೊರಗೆ ತೆಗೆದು ನಡುಮನೆಯಲ್ಲೋ ಮೆತ್ತಿನ ಮೇಲೆಯೋ ತಾಳ ಮದ್ದಳೆ ನಡೆಯುತ್ತಿದ್ದುದುಂಟು. ಇವುಗಳೆಲ್ಲಾ ಹೇಗಿರುತ್ತಿತ್ತು ಅಂದರೆ ಅವು ವೇಷಭೂಷಣ ಕಟ್ಟದ ಆಟಗಳೇ ಆಗಿರುತ್ತಿದ್ದವು. ಇಲ್ಲೆಲ್ಲಾ ಕಲಾವಿದರಾಗಿ ಭಾಗವಹಿಸುವರೆಲ್ಲಾ ಸಾಭಿನಯಪೂರ್ವಕವಾಗಿ ಭಾಗವತರೊಂದಿಗೆ ಹಾಡಿ ಹಸ್ತಾಭಿನಯವನ್ನು ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಅದರಲ್ಲೂ ಭೀಮನ ಪಾತ್ರ ಮಾಡುವವನಂತೂ ಮೂರುಸೆಲ್ಲಿನ ದೊಡ್ಡ ಬ್ಯಾಟರಿಯನ್ನು ಹುಡುಕಿ ಅದನ್ನು ಗಧೆಯಂತೆ ಹೆಗಲಮೇಲೆ ಇಟ್ಟುಕೊಂಡು ಬರುತ್ತಿದ್ದ. ಇನ್ನು ಶೂರ್ಪನಖಿ ಪಾತ್ರ ಮಾಡುವವನಂತೂ ನಾಸಾಚ್ಛೇದನವಾದ ಮೇಲೆ ಇಡೀ ನೆಲದಲ್ಲಿಯೇ ಹೊರಳಾಡಿ ಬೊಬ್ಬೆ ಹೊಡೆಯುತ್ತಿದ್ದ. ಒಟ್ಟಿನಲ್ಲಿ ಮಳೆಗಾಲದ ಧೋ ಧೋ ಎಂದು ಸುರಿಯುವ ಮಳೆಗೆ ಎದುರಾಗಿ ಪ್ರಸಂಗ ಎನ್ನುವ ಮನರಂಜನೆ ಇಲ್ಲಿ ಆಗುತ್ತಿತ್ತು.

ಮೂಡ್ಕಣಿ ನಾರಾಯಣ ಹೆಗಡೆ, ವೆಂಕಪ್ಪ ಭಂಡಾರಿಯಂತಹ ಮಹಾನ್‌ ಕಲಾವಿದರು ಇಲ್ಲಿನ ಬಯಲಾಟವನ್ನು ಬಹಳ ಪರಿಣಾಮಕಾರಿಯಾಗಿ ತೋರಿಸುತ್ತಿದ್ದರು. ಕರ್ಕಿ ಮೇಳದ ಅಜ್ಜ ಪರಮಯ್ಯ ಹಾಸ್ಯಗಾರರಿಂದ ಹಿಡಿದು ನಂತರದವರೆಲ್ಲರೂ ತುಂಬಾ ಶಾಸ್ತ್ರೀಯತರದಲ್ಲಿ ಪ್ರಸಂಗವನ್ನು ಪ್ರದರ್ಶಿಸುತ್ತಿದ್ದರು ಎನ್ನುವದು ಸತ್ಯವಾದರೂ ಅವರ ಮಾತುಗಾರಿಕೆ ಪದ್ಯದ ಸರಳ ಅರ್ಥಗಾರಿಕೆಗೆ ಮತ್ತು ಮುಂದಿನ ಪದ್ಯದ ಎತ್ತ್ಗಡೆಗೆ ಸಹಕಾರಿಯಾಗಿರುತ್ತಿತ್ತು. ಅಂತಹ ಹೊತ್ತಿನಲ್ಲಿ ಬ್ರಹ್ಮಾವರದ ಕಡೆಯಿಂದ ಬರುವ ಆಟದ ಮೇಳದಲ್ಲಿ ತೆಕ್ಕಟ್ಟೆ ಬಾಬಣ್ಣ, ಗಣಪತಿ ಪ್ರಭುಗಳು ಮುಂತಾದ ಕಲಾವಿದರ ಮಾತು ಪ್ರೇಕ್ಷಕರನ್ನು ಸೆಳೆಯುತ್ತಿದ್ದವು. ಅವುಗಳ ಮುಂದೆ ನಮ್ಮವರೆಲ್ಲ ಸಪ್ಪೆ ಎನ್ನುವ ಮಟ್ಟಕ್ಕೆ ಇಲ್ಲಿನವರು ಬಂದಿದ್ದರು.

ಇಂತಹ ಹೊತ್ತಿನಲ್ಲಿ ಯಕ್ಷಗಾನಕ್ಕೆ ಪ್ರವೇಶವಾದುದು ಅಣ್ಣೂಹಿತ್ತಲ ಸದಾನಂದ ಹೆಗಡೆಯವರದ್ದು. ಆ ಕಾಲದಲ್ಲಿಯೇ ಓದಿಕೊಂಡಿದ್ದ ಅವರು ಮಾಮಲೇದಾರರಾಗಬೇಕಾದವರು ಕುಟುಂಬದ ಅನಿವಾರ್ಯತೆಯಿಂದಾಗಿ ಆ ಪ್ರಯತ್ನ ಬಿಟ್ಟು ಅಣ್ಣೂಹಿತ್ತಲಿಗೆ ಬಂದು ತಮ್ಮ ಸ್ವಗ್ರಹದಲ್ಲಿ ನೆಲೆಸಿದ್ದರು. ಅವರ ತಮ್ಮ ತಿಮ್ಮಣ್ಣ ಹೆಗಡೆ ಅದಾಗಲೇ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು. ಅವರೊಟ್ಟಿಗೆ ಸದಾನಂದ ಹೆಗಡೆಯವರೂ ವೇಷಹಾಕುತ್ತಿದ್ದರು. ತಮ್ಮ ವಿದ್ಯೆ ಮತ್ತು ನಿರಂತರ ಓದಿನ ಮೂಲಕ ಅವರು ಗೇರುಸೊಪ್ಪಾ ಸೀಮೆಯ ಮುಖಂಡರೆಂದೂ ಪರಿಗಣಿಸಲ್ಪಟ್ಟಿದ್ದರು. ಆ ಕಾಲದಲ್ಲಿ ಕಾಸರಗೋಡು, ಕೆಳಗಿನೂರಿನ ಗಜನೀಮಠದ ವೈದಿಕರುಗಳೆಲ್ಲ ಸೇರಿ ಇಲ್ಲಿನ ಬಟ್ಟೆವಿನಾಯಕ ದೇವಸ್ಥಾನ ಹಾಗೂ ಇನ್ನಿತರ ಕಡೆಗಳಲ್ಲೆಲ್ಲಾ ತಾಳಮದ್ದಳೆಯನ್ನು ನಡೆಸುತ್ತಿದ್ದರು. ಅಲ್ಲೆಲ್ಲಾ ವಿದ್ಯಾವಂತರೆಂದು ಗುರುತಿಸಿಕೊಂಡ ಸದಾನಂದ ಹೆಗಡೆಯವರಿಗೆ ಎದುರಾಳಿಗಳು ಯಾರೂ ಸಿಗುತ್ತಿರಲಿಲ್ಲ. ಆಗ ಆ ವೈದಿಕ ವೃಂದಕ್ಕೆ ಮತ್ತಿತರಿಗೆ ನಮ್ಮಲ್ಲಿಂದಲೂ ದಕ್ಷಿಣಕನ್ನಡದ ಕಲಾವಿದರಿಗೆ ಸಾಠಿಯಾಗಿ ಅರ್ಥಹೇಳಬಲ್ಲವರೆಂದರೆ ಅದು ಸದಾನಂದಹೆಗಡೆ ಎನ್ನುವಾಭಿಪ್ರಾಯಕ್ಕೆ ಬಂದರು. ಅದ್ಯಾರ ಹತ್ತಿರವೋ ಬ್ರಹ್ಮಾವರದ ತೆಕ್ಕಟ್ಟೆ ಬಾಬಣ್ಣನವರು ನಿಮ್ಮಲ್ಲಿ ಮಾತುಗಾರರೇ ಇಲ್ಲ ಎಂದು ಲಘುವಾಗಿ ಆಡಿದ್ದರು ಎನ್ನುವ ಸುದ್ದಿ ಹಬ್ಬಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ ಅವರಿಗೆ ಸರಿದೊರೆಯಾಗಿ ಅರ್ಥಹೇಳಿ ವೇಷವನ್ನೂ ಹಾಕಿ ಸೈ ಎನಿಸಿಕೊಂಡವರು ಸದಾನಂದ ಹೆಗಡೆಯವರು.

ಮತ್ತೊಮ್ಮೆ ಅವರಿಗೂ ಶೃಂಗೇರಿ ಶಾಸ್ತ್ರಿ ಎನ್ನುವವರ ಜೊತೆಗೂ ನಡೆದ ಸಂವಾದ ಇಂದಿಗೂ ಗಾದೆಗಳಾಗಿಬಿಟ್ಟಿವೆ. ಅವರಿಗೆ ಸಮದಂಡಿಗಳಾಗಿ ಅರ್ಥಗಾರರು ಆಗ ಉತ್ತರಕನ್ನಡ ವಿಶೇಷತವಾಗಿ ಗೇರುಸೊಪ್ಪಾ ಸೀಮೆಯಲ್ಲಿ ಇರಲಿಲ್ಲ. 1948ರಲ್ಲಿ ಸದಾನಂದ ಹೆಗಡೆಯವರ ನಿಧನದೊಟ್ಟಿಗೆ ಮತ್ತೆ ಅವರ ಸ್ಥಾನ ತುಂಬುವ ಕಲಾವಿದನ ಸ್ಥಾನ ಶೂನ್ಯವೇ ಆಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಅವರ ಗರಡಿಯಲ್ಲಿ ತಯಾರಾದವರು ಕೆರಮನೆ ಶಿವರಾಮ ಹೆಗಡೆಯವರು. ಹೆಗಡೆಯವರಂತೂ ಸದಾನಂದ ಹೆಗಡೆಯವರು ತನ್ನ ಗುರುಗಳು ಎನ್ನುವದನ್ನು ತಮ್ಮ ಆತ್ಮಕತೆಯಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ. ಶಿವರಾಮ ಹೆಗಡೆಯವರಲ್ಲಿ ಚನ್ನಾಗಿ ಅರ್ಥಗಾರಿಕೆ ಇದ್ದಿತ್ತು. ಆದರೂ ಅವರಿಗೆ ಸಮರ್ಥವಾದ ಎದುರಾಳಿ ಇದ್ದಿರಲಿಲ್ಲ. ಹೀಗೆ ಇರುವ ಉತ್ತರ ಗೇರುಸೊಪ್ಪಾ ಸೀಮೆಗೆ ಸುಮಾರು 1942ರ ಸುಮಾರಿಗೆ ಗಡಿ ಭಾಗದ ಶಿರೂರಿನಿಂದ ಯುವ ವೈದ್ಯರೊಬ್ಬರ ಆಗಮನವಾಯಿತು. ಅವರೇ ಡಾ. ಪದ್ಮನಾಭಯ್ಯನವರು, ಅಂದರೆ ಜನಸಾಮಾನ್ಯರ ಪಾಲಿಗೆ ಹೈಗುಂದ ಡಾಕ್ಟರರು. ಉತ್ತರ ಕನ್ನಡದ ಅದರಲ್ಲೂ ವಿಶೇಷತವಾಗಿ ಗೇರುಸೊಪ್ಪಾ ಸೀಮೆಯ ಯಕ್ಷಗಾನದ ಅರ್ಥಗಾರಿಕೆಗೆ ಒಂದು ತಾತ್ವಿಕ ಸ್ವರೂಪವನು ಮತ್ತು ಅರ್ಥಹೇಳುವಿಕೆ ಎಂದರೆ ಅದು ವಾಚಿಕಾಭಿನಯ, ಅದರಲ್ಲಿ ಸಾಹಿತ್ಯವಿರಬೇಕು, ಒಣ ಹರಟೆ ಇರಲೇಕೂಡದು, ತತ್ವಬೋಧೆಯೂ ಸೇರಿರಬೇಕು, ಸೇರಿದ ಸಭಿಕರಲ್ಲಿ ತಾವು ಆಡುವ ಪ್ರಸಂಗ ಮತ್ತು ಪಾತ್ರದ ಚಿತ್ರಣದ ಕುರಿತು ಸ್ಪಷ್ಟ ಚಿತ್ರಣ ಮೂಡಿಸಬೇಕು ಎನ್ನುವದನ್ನು ತೋರಿಸಿಕೊಟ್ಟವರು.

(ಕೆರಮನೆ ಶಂಭು ಹೆಗಡೆಯವರ ಜೊತೆಗೆ ತಾಳಮದ್ದಳೆಯಲ್ಲಿ… )

ತಾಳಮದ್ದಳೆ ಎಂದರೆ ಕೇವಲ ಹರಟೆ ಹೊಡೆಯುವ ಕೂಟವಲ್ಲ ಅಥವಾ ಪದ್ಯದಿಂದ ಪದ್ಯಕ್ಕೆ ಜಾರಿಸುವ ಒಂದು ಸೇತುಬಂಧವೂ ಅಲ್ಲ ಎನ್ನುವದನ್ನು ಓರ್ವ ಹೆಡ್‌ಮಾಸ್ತರರಂತೆ ಸೀಮೆಯಾದ್ಯಂತ ಎಲ್ಲಾ ಹಿರಿಕಿರಿಯ ಕಲಾವಿದರಿಗೆ ಯಕ್ಷಗಾನಾಸಕ್ತರಿಗೆ ತೋರಿಸಿಕೊಟ್ಟವರು ಅವರು. ಹೈಗುಂದ ಡಾಕ್ಟರರ ಪ್ರವೇಶ ಅಣ್ಣುಹಿತ್ತಲ ಸದಾನಂದ ಹೆಗಡೆಯವರು ಅರ್ಥಗಾರಿಕೆಯ ವಿಷಯದಲ್ಲಿ ತೆರವು ಮಾಡಿದ ಸ್ಥಾನವನ್ನು ತುಂಬಿದ್ದಷ್ಟೇ ಅಲ್ಲ, ಮತ್ತಿಷ್ಟು ಸಮಾನಾಭಿರುಚಿಯ ಅರ್ಥಗಾರರನ್ನು ಹುಟ್ಟುಹಾಕಲು ಕಾರಣರು ಎನ್ನುವದನ್ನು ಅರಿತಾಗ ಅವರ ಕೊಡುಗೆ ಗೇರುಸೊಪ್ಪಾ ಸೀಮೆಯ ಹಾಗೂ ಹೊನ್ನಾವರದ ಯಕ್ಷಗಾನದ ವಿಕಾಸನದ ಅಧ್ಯಯನ ಮಾಡುವವರಿಗೆ ತುಂಬಾ ಸಹಕಾರಿಯಾಗುತ್ತದೆ.

ಡಾ. ಪದ್ಮನಾಭಯ್ಯನವರ ಮೂಲ ಊರು ಇಂದಿನ ಉಡುಪಿ ಜಿಲ್ಲೆಯ ಶಿರೂರು. ಅಲ್ಲಿನ ವಂಶಪಾರಂಪರ್ಯ ಶಾನುಭೋಗ ಮನತನ. ಆಡ್ಯಸ್ಥ ಮನೆತನ. ಅದೂ ಆ ಕಾಲದಲ್ಲಿ ಶಾನುಭೋಗ ಮನೆತನ ಎಂದರೆ ಸಮಾಜದಲ್ಲಿ ಒಂದು ಪ್ರತಿಷ್ಠಿತ ಸ್ಥಾನವಿತ್ತು. ಸುಮಾರು ಅರವತ್ತು ಮಾನಿಗೆ ಹುಟ್ಟುವಳಿಯ ದೊಡ್ಡ ಜಮೀನುದಾರರೂ ಹೌದು. 1916 ರಲ್ಲಿ ಪದ್ಮನಾಭಯ್ಯನವರ ಜನನವಾಯಿತು. ಇವರ ತಂದೆ ವಿಶ್ವೇಶ್ವರ ತಾಯಿ ಪಣಿಯಮ್ಮ. ವಿಶ್ವೇಶ್ವರ ಶಾನುಭೋಗರು ತುಂಬಾ ಮೃದು ಸ್ವಭಾವದವರಾಗಿದ್ದರು. ಆಳು ಸ್ವಲ್ಪ ಎತ್ತರದವರಾಗಿದ್ದರು. ಮನೆಯಲ್ಲಿ ಯಾವತ್ತಿಗೂ ನೆಂಟರಿಷ್ಟರು ಇರಲೇಬೇಕೆನ್ನುವ ಜನ. ಪಾಲು ಪಂಚಾಯಿತಿಕೆಯಲ್ಲಿ ಇವರದ್ದು ಎತ್ತಿದ ಕೈ. ಇವರ ತೀರ್ಮಾನವೆಂದರೆ ಅದು ನ್ಯಾಯನೀತಿಯಿಂದ ಕೂಡಿರುತ್ತಿತ್ತು. ಅದನ್ನು ಎಲ್ಲರೂ ಗೌರವದಿಂದ ಒಪ್ಪಿಕೊಳ್ಳುತ್ತಿದ್ದರು. ಇವರ ಪತ್ನಿ ದಮಯಂತಿ. ಅವರೂ ಸಹ ಹಾಗೇ. ತುಂಬುಕುಟುಂಬದ ಯಜಮಾನತಿಯಾಗಿ ಎಲ್ಲರನ್ನು ಸಂಭಾಳಿಸಿಕೊಂಡು ಹೋಗುವ ಸ್ವಭಾವದವರು. ಆಗೆಲ್ಲಾ ಬೆಳೆಯಲ್ಲಿ ಏನಾದರೂ ಹಾನಿ ಉಂಟಾಗಿ ರೈತನಿಗೆ ಗೇಣಿ ಕೊಡಲು ಕಷ್ಟವಾಯಿತು ಎಂದರೆ, ಅವರೆಲ್ಲಾ ಶಾನುಭೋಗರ ಮನೆಗೆ ಹಿತ್ತಿಲ ಬಾಗಿಲ ಕಡೆ ಹೋಗಿ ಈ ಅಮ್ಮನಿಗೆ ತಮ್ಮ ತೊಂದರೆಯನ್ನು ಹೇಳಿಕೊಂಡರೆ ಆಯಿತು. “ಆಯಿತು ನಾನು ನೋಡಿಕೊಳ್ಳುತ್ತೇನೆ, ಮುಂದಿನ ವರ್ಷ ಮಾತ್ರ ತಪ್ಪಿಸಲಿಕ್ಕಲ್ಲ ಗೊತಾಯ್ತಾ” ಎಂದು ಹೇಳಿಕಳಿಸುವ ಜಾಯಮಾನದವರು. ಅವರ ಮಾತಿಗೆ ಶಾನುಭೋಗರು ಪ್ರತಿಯಾಡಿದ್ದು ಇಲ್ಲ. ಹೀಗೆ ಇಡೀ ಊರವರ ಪಾಲಿಗೆ ತಂದೆತಾಯಿಯಂತೆ ಬದುಕಿದವರು ಈ ದಂಪತಿಗಳು. ಇವರಿಗೆ ಮೂರು ಜನ ಮಕ್ಕಳು. ಇವರಲ್ಲಿ ನಡುವಿನವರು ಪದ್ಮನಾಭಯ್ಯ.

ಶಾನುಭೋಗರ ಮನೆತನ ಕೇವಲ ಜಮೀನುದಾರಿಕೆಯಲ್ಲಿ ಮಾತ್ರ ಹೆಸರು ಮಾಡಿದ್ದಲ್ಲ. ಅವರು ಆ ಕಾಲದಲ್ಲಿ ಸಹಜವಾಗಿದ್ದ ಯಕ್ಷಗಾನಾಸಾಕ್ತರೂ ಆಗಿದ್ದರು. ಇವರ ಮನೆಯ ದಾಯಾದಿಗಳಾದ ಪಣಿಯಪ್ಪಯ್ಯ ಎನ್ನುವವರು ಸುಮಾರು ಮುನ್ನೂರಕ್ಕೂ ಹೆಚ್ಚು ಪ್ರಸಂಗಗಳನ್ನು ಬರೆದಿದ್ದರಂತೆ. ಇವರ ಅಜ್ಜ, ಅಪ್ಪ ಚಿಕ್ಕಪ್ಪರೆಲ್ಲ ಯಕ್ಷಗಾನದ ಅರ್ಥದಾರಿಗಳಾಗಿದ್ದರು. ಆ ಕಾಲದಲ್ಲಿ ಅದರಲ್ಲೂ ಸುಮಾರು 1925ರಿಂದ ದಕ್ಷಿಣ ಕನ್ನಡದ ಅರ್ಥಗಾರಿಕೆಯಲ್ಲಿ ಒಂದು ಹೊಸ ಭಾಷ್ಯವನ್ನು ಬರೆದ ಕಾಲ. ಕಿರಿಕ್ಕಾಡ ವಿಷ್ಣು ಮಾಸ್ತರರು, ಶೃಂಗೇರಿ ಶಾಸ್ತ್ರಿಗಳು, ಪೊಳಲಿ ಶಂಕರ ನಾರಾಯಣ ಶಾಸ್ತ್ರಿಗಳು, ಕಿಲ್ಲೆಯವರು, ಎಚ್.ಎಫ್. ಒಡೆಯರ್, ಕವಿಭೂಷಣ ಕೆ.ವಿ. ವೆಂಕಪ್ಪ ಶೆಟ್ಟರು, ಇವರೆಲ್ಲಾ ಪ್ರಸಂಗ ಸಾಹಿತ್ಯವನ್ನು ಆಧಾರವನ್ನಾಗಿಟ್ಟುಕೊಂಡು ಪ್ರತೀ ರಾತ್ರಿಯೂ, ತಾಳಮದ್ದಳೆಗಳಲ್ಲಿ ಒಂದೊಂದು ಹೊಸ ಹೊಸ ಕಾವ್ಯವನ್ನೇ ಸೃಷ್ಟಿಸಿದವರು. ಇವರೆಲ್ಲಾ ಶಿರೂರು ಬೈಂದೂರಿನ ಸುತ್ತ ಮುತ್ತ ಬಂದರೆಂದರೆ ಅವರೆಲ್ಲಾ ಉಳಿಯುವದು ಶಾನುಭೋಗರ ಮನೆಯಲ್ಲಿ. ಹಾಗಾಗಿ ಬಾಲ್ಯದಿಂದಲೇ ಪದ್ಮನಾಭಯ್ಯನವರಿಗೂ ಸಹಜವಾಗಿ ಯಕ್ಷಗಾನದತ್ತ ಆಸಕ್ತಿ ಮೂಡಿತು. ಮನೆಯಿಂದಲೇ ಯಕ್ಷಗಾನದ ಕುಣಿತದ ಕಲಿಕೆ ಪ್ರಾರಂಭವಾಯಿತು.

ಹೈಸ್ಕೂಲಿಗೆ ಹೋಗುವಾಗಲೇ ಅವರು ಶಾಲೆಯ ವಾರ್ಷಿಕೋತ್ಸವದಲ್ಲಿ ವೇಷಕಟ್ಟಿ ಕುಣಿದದ್ದೂ ಉಂಟು. ಇಂಥ ವಾತಾವರಣದಲ್ಲಿ ಬೆಳೆದ ಹುಡುಗನಿಗೆ ಚಿಕ್ಕಪ್ಪ ಹಾಗೂ ತಾಯಿಯಿಂದ ಕುಮಾರವ್ಯಾಸ ಮತ್ತು ಜೈಮಿನಿ ಭಾರತದ ಕುರಿತು ಆಸಕ್ತಿ ಮೂಡಿತು. ಅದನ್ನು ಕಂಠಪಾಠ ಮಾಡಿಕೊಂಡರು. ಬಾಲ್ಯದ ವಿದ್ಯಾಭ್ಯಾಸವನ್ನು ಶಿರೂರಿನಲ್ಲಿ ಮಾಡಿ ನಂತರ ಮೆಟ್ರಿಕ್ಕನ್ನು ಕುಂದಾಪುರದಲ್ಲಿ ಪೂರೈಸಿದರು. ಮೆಟ್ರಿಕ್ ನಂತರ ಇವರಿಗೆ ವೈದ್ಯಕೀಯ ಕಲಿಯುವ ಆಸೆಯಾಯಿತು. ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯದಲ್ಲಿತ್ತು. ಉತ್ತರ ಕನ್ನಡ ಮುಂಬೈ ಪ್ರಾಂತ್ಯದಲ್ಲಿತ್ತು. ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯಬೇಕೆನ್ನುವ ಕಾರಣದಿಂದ “Sabsidised Medical Practitioner (SMP))” ಎನ್ನುವ ಕೋರ್ಸ್ ಒಂದು ಇತ್ತು. ಮುಂಬೈ ಪ್ರಾಂತ್ಯದಲ್ಲಿ ಇದು “Registered Medical Practitioner (RMP)” ಎನ್ನುವದಾಗಿತ್ತು. ಇದನ್ನು ಕಲಿತ ವ್ಯಕ್ತಿ ಹಿಂದುಳಿದ ಪ್ರದೇಶದಲ್ಲಿ ಹೋಗಿ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕಾಗಿತ್ತು. ಅದೇ ಕಾಲದಲ್ಲಿ ಅವರ ಲಗ್ನ ಶಿರಾಲಿಯ ಕಡವಿನಕಟ್ಟಾದ ಪಣಿಯಮ್ಮ ಎನ್ನುವವರ ಜೊತೆ ಆಯಿತು. ತಾನು ಕಲಿತ ವಿದ್ಯೆಯನ್ನು ಜನರಿಗೆ ಏನಾದರೂ ಉಪಯೋಗವಾಗುವಂತೆ ಮಾಡಬೇಕು ಎನ್ನುವದು ಅವರ ಒಳತೋಟಿಯಾಗಿತ್ತು. ಆ ಕಾಲದಲ್ಲಿ ಬ್ರಿಟಿಷ್‌ ಸರಕಾರದಲ್ಲಿ ಈ ರೀತಿ “SMP/RMP” ಆದವರು ಹಿಂದುಳಿದ ಪ್ರದೇಶದಲ್ಲಿ ವೈದ್ಯವೃತ್ತಿ ಕೈಗೊಳ್ಳುವದಾದರೆ ಅವರಿಗೆ ಕಟ್ಟಡ ಒದಗಿಸುತ್ತಿದ್ದರು. ಸರಕಾರವೇ ಔಷಧಗಳನ್ನು ಪೂರೈಸುತ್ತಿತ್ತು. ವಾರ್ಷಿಕವಾಗಿ ಸ್ವಲ್ಪ ಗೌರವ ಧನವೂ ಬರುತ್ತಿತ್ತು.

ಇದಕ್ಕೆಲ್ಲ ಅದಕ್ಕೆ ನಿಯುಕ್ತಿಗೊಂಡ ವೈದ್ಯರು ನಿಯಮಿತವಾಗಿ ರಜಿಸ್ಟರ್ ಇರಿಸಬೇಕಾಗಿತ್ತು. ಇದೊಂದು ಆ ಕಾಲದಲ್ಲಿ ಗೌರವದ ಹುದ್ದೆಯಾಗಿತ್ತು. ಈ ವೃತ್ತಿಯನ್ನು ಡಾ. ಪದ್ಮನಾಭಯ್ಯನವರು ಆಯ್ಕೆಮಾಡಿಕೊಂಡರು. ಸರಕಾರ ಅವರಿಗೆ ಸೂಚಿಸಿದ ಪ್ರದೇಶ ಹೈಗುಂದವೆನ್ನುವ ಶರಾವತಿ ನದಿಯ ನಡುಗಡ್ಡೆ. ಇದು ಸುಮಾರು 1944ರ ಕಾಲ. ಹೊಳೆಸಾಲು ಎಂದರೆ ಸುಮಾರು 1975ರ ವರೆಗೂ ಅತ್ಯಂತ ಹಿಂದುಳಿದ ಪ್ರದೇಶ. ಸಾರಿಗೆ ಸೌಲಭ್ಯಕ್ಕಾಗಿ ದೋಣಿಯನ್ನೇ ಅವಲಂಭಿಸಬೇಕಾದ ಸ್ಥಿತಿ. ರೋಗ ರುಜಿನಗಳು ಸಾಮಾನ್ಯ. ಹಾವು, ಚೇಳುಗಳೆಲ್ಲ ಓಡಾಡುವ ಸ್ಥಳ. ಇಂತಹ ಹೈಗುಂದದಲ್ಲಿ ಫಾರೆಸ್ಟ್‌ ಕಟ್ಟಡವೊಂದನ್ನು ಡಾಕ್ಟರರಿಗೆ ಪೂರೈಸಿ ಆಸ್ಪತ್ರೆ ಪ್ರಾರಂಭಿಸಲು ತಿಳಿಸಿದರು. ಬಹುಶಃ ಬೇರೆ ಯಾರಾದರೂ ಆಗಿದ್ದರೆ ಆಗಿನ ಪರಿಸ್ಥಿತಿಯಲ್ಲಿ ಇಲ್ಲಿಗೆ ಬರಲು ಒಪ್ಪುತ್ತಿದ್ದರೋ ಇಲ್ಲವೋ. ಪದ್ಮನಾಭಯ್ಯನವರಿಗೆ ಹೊಟ್ಟೆಪಾಡಿಗಾಗಿ ಇಂಥಲ್ಲೆಲ್ಲ ಬಂದು ವೃತ್ತಿ ಪ್ರಾರಂಭಿಸಬೇಕಾದ ಆರ್ಥಿಕ ಅನಿವಾರ್ಯತೆ ಇದ್ದಿರಲಿಲ್ಲ. ಅವರಲ್ಲಿ ಇದ್ದಿದ್ದು ಜನರಿಗಾಗಿ ತಾನು ಏನಾದರೂ ಮಾಡಬೇಕೆಂಬ ಹಂಬಲ. ಹಾಗಾಗಿ ಸತೋಷದಿಂದಲೇ ಹೈಗುಂದಕ್ಕೆ ಬಂದು ಆಸ್ಪತ್ರೆ ಪ್ರಾರಂಭಿಸಿಯೇ ಬಿಟ್ಟರು. ಶಿರೂರಿನ ಶಾನುಭೋಗ ಮನೆತನದವರು ಹೈಗುಂದ ಡಾಕ್ಟರರಾದದ್ದು ಹೀಗೆ.

ಆ ಕಾಲಕ್ಕೆ ಹೈಗುಂದಕ್ಕೆ ಹೊತ್ತಿಕೊಂಡಿರುವ ಶರಾವತಿ ನದಿಯ ಎಡ ಮತ್ತು ಬಲದಂಡೆಗಳು ಯಕ್ಷಗಾನಕ್ಕೆ ಪ್ರಸಿದ್ಧವಾಗಿದ್ದವು. ಅದರಲ್ಲೂ ಕೆರಮನೆ ಶಿವರಾಮ ಹೆಗಡೆಯವರು ಯಕ್ಷಗಾನ ಮೇಳವನ್ನು ಮಾಡಿ ಯಶಸ್ವಿಯಾಗಿದ್ದ ಕಾಲ. ಅವರು ಮಾವಿನಕೆರೆ ಯಾಜಿ ಭಾಗವತರು, ಬಳಕೂರು ಮತ್ತು ಮಣ್ಣಿಗೆಯ ಯಾಜಿ ಬಂಧುಗಳು, ಮೂಡ್ಕಣಿ ನಾರಾಯಣ ಹೆಗೆಡೆಯವರು, ಕೊಂಡದಕುಳಿ ಅವಳಿ ಸಹೋದರರು ಅದಾಗಲೇ ಪ್ರಸಿದ್ಧಿ ಪಡೆದಿದ್ದ ಮಾವಿನಕುರ್ವಾ ಮೇಳ ಹೀಗೆ ಬಯಲಾಟವೆನ್ನುವದು ಇಲ್ಲಿನ ಮನೆಮನೆಗಳಲ್ಲಿ ವ್ಯಾಪಿಸಿತ್ತು. ಅದೊಂದು ಗೀಳಾಗಿತ್ತು. ಹೆಚ್ಚಿನ ಎಲ್ಲಾ ಮೇಳಗಳೂ ಇಡಗುಂಜಿ ಮಹಾಗಣಪತಿಯ ಹೆಸರಿನಿಂದ ಆಟ ಆಡುತ್ತಿದ್ದರು. ಯಕ್ಷಗಾನದಿಂದ ಪ್ರಭಾವಿತರಾಗಿದ್ದ ಡಾಕ್ಟರರಿಗೆ ಇಂತಹ ಪರಿಸರ ದೊರೆತದ್ದು ಮನೆಯಿಂದ ದೂರವಿದ್ದರೂ ಮನೆಯೊಳಗೇ ಇರುವಂತಹ ವಾತಾವರಣ ಸಿಕ್ಕಿದಂತಾಯಿತು. ತಮ್ಮ ವೈದ್ಯವೃತ್ತಿಯಿಂದ ಬಹುಬೇಗ ಜನಪ್ರಿಯರಾದರು. ಯಕ್ಷಗಾನವನ್ನು ಮಾಧ್ಯಮವನ್ನಾಗಿ ಉಪಯೋಗಿಸಿಕೊಂಡು ಮನೆಮನೆಗೆ ದೋಣಿಯಲ್ಲೋ ನಡೆದುಕೊಂಡೋ ಔಷಧೋಪಚಾರಕ್ಕಾಗಿ ತಿರುಗಾಡಿ ಚಿಕಿತ್ಸೆ ನೀಡಲು ಪ್ರಾರಂಭಿಸಿದರು.

ಸುಮಾರು ಐದು ಫೂಟು ಆರು ಇಂಚಿನ ಸದೃಢಕಾಯದ ಹಾಫ್‌ ಪ್ಯಾಂಟಿನೊಂದಿಗೆ ಹಳ್ಳಿ ಹಳ್ಳಿಗಳನ್ನು ತಿರುಗಾಡಿ ಸಣ್ಣಪುಟ್ಟ ಜ್ವರದಿಂದ ಹಿಡಿದು ಬಾಣಂತನದವರೆಗೆ ಎಲ್ಲ ಬಗೆಯ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಕಂಡದ್ದನ್ನು ನೇರವಾಗಿ ಹೇಳುವ ಸ್ವಭಾವ, ದೊಡ್ಡ ಧ್ವನಿಯಲ್ಲಿ ಗದರುವಂತೆ ನೀಡುವ ಸಲಹೆಗಳು, ರೋಗಿಗಳಲ್ಲಿ ಭೇದವೆಣಿಸದಿರುವಿಕೆಯ ಗುಣಗಳು ಇವರನ್ನು ಗೇರುಸೊಪ್ಪಾ ಸೀಮೆಯ ಓರ್ವ ನಂಬಿಗಸ್ಥ ವೈದ್ಯರನ್ನಾಗಿಸಿತು. ಹಾಗೇ ಇವರು ಗಮನಿಸಿದ್ದು ಯಕ್ಷಗಾನದಲ್ಲಿನ ಅರ್ಥಗಾರಿಕೆಯನ್ನು. ಇದಕ್ಕೂ ಸಹ ಒಂದು ಕಾಯಕಲ್ಪ ಬೇಕು ಎಂದುಕೊಂಡು ಆ ಕುರಿತು ಜನರಲ್ಲಿ ಬೆರೆಯತೊಡಗಿದರು. ಕೆರಮನೆ ಶಿವರಾಮ ಹೆಗಡೆಯವರ ವೇಷನೋಡಿ ಮಾರುಹೋಗಿದ್ದ ಪದ್ಮನಾಭಯ್ಯನವರಿಗೆ ಶಿವರಾಮ ಹೆಗಡೆಯವರೂ ಆತ್ಮೀಯರಾಗಿದ್ದರು. ಅವರಿಗೂ ವ್ಯವಸಾಯಿ ಮೇಳದಲ್ಲಿನ ಸಂಭಾಷಣೆ ಪರಿಷ್ಕೃತವಾಗಬೇಕಾಗಿತ್ತು. ಪದ್ಮನಾಭಯ್ಯನವರು ಅದಾಗಲೇ ಕುಮಾರವ್ಯಾಸನ ಭಾರತ, ತೊರವೆ ರಾಮಾಯಣ ಮತ್ತು ಜೈಮಿನಿಯನ್ನು ಚನ್ನಾಗಿ ಅಭ್ಯಾಸ ಮಾಡಿದ್ದರು. ಕುಮಾರವ್ಯಾಸ ಭಾರತದ ಹೆಚ್ಚಿನ ಎಲ್ಲಾ ಪದ್ಯಗಳೂ ಡಾಕ್ಟರರಿಗೆ ಬಾಯಿಪಾಠವಾಗಿತ್ತು. ಇಲ್ಲಿನ ಸಂಭಾಷಣೆಯೆನ್ನುವುದನ್ನು ಅರ್ಥಗಾರಿಕೆ ಎನ್ನುವ ಕಥನಕ್ಕೆ ತಿರುಗಿಸಲು ಅವರು ನಿರ್ಧರಿಸಿದರು. ಹಾಗಾಗಿ ಆಟಕ್ಕಿಂತ ಆಗಾಗ ಕೂಟವನ್ನೂ ಏರ್ಪಡಿಸತೊಡಗಿದರು. ಅದಾಗಲೇ ಗಜನೀಮಠದ ವೈದಿಕ ವಿದ್ವಾಂಸರಿಂದ, ನಂತರ ಅಣ್ಣುಹಿತ್ತಲ ಸದಾನಂದ ಹೆಗಡೆಯವರವರೆಗೆ ಬಂದು ನಿಂತುಹೋಗಿದ್ದ ಅರ್ಥಗಾರಿಕೆಗೆ ಮರು ಚಾಲನೆಯನ್ನು ಇವರು ನೀಡಿದರು.

ಶಿವರಾಮ ಹೆಗಡೆಯವರು ಹೇಳುವ ಪ್ರಕಾರ ಅವರ ಅರ್ಥಗಾರಿಕೆಯಲ್ಲಿ ಹೈಗುಂದ ಪದ್ಮನಾಭಯ್ಯನವರ ಪ್ರಭಾವ ತುಂಬಾ ಇದೆ. ಅದನ್ನು ಅವರು ತಮ್ಮ ಆತ್ಮಕಥನ “ನೆನಪಿನ ರಂಗಸ್ಥಳದಲ್ಲಿ” ವಿವರವಾಗಿ ಬಿಚ್ಚಿಟ್ಟಿದ್ದಾರೆ. ಇಡಗುಂಜಿ ದೇವಸ್ಥಾನ, ಬೇರಂಕಿಯ ಡಿಪೋ ಹೆಗಡೆಯವರ ಮನೆ, ಬಳಕೂರಿನ ಪೈಗಳ ಮನೆ, ಮಾಗೋಡು ಹೀಗೆ ಎಲ್ಲಾ ಕಡೆ ತಾಳ ಮದ್ದಳೆಯನ್ನು ಪ್ರಾರಂಭಿಸಿದರು. ಅಲ್ಲಿ ಇವರದ್ದು ಪ್ರಮುಖವಾದ ಅರ್ಥ. ಇವರ ಕರ್ಣ ತುಂಬಾ ಪ್ರಸಿದ್ಧಿ ಪಡೆದ ಪಾತ್ರ. ಇಂದಿನ ಕರ್ಣಪರ್ವದ ಕರ್ಣನ ನಡೆಯನ್ನು ರಂಗದ ಮೇಲೆ ಹಾಕಿಕೊಟ್ಟವರು ಮೂಲತಃ ಅಣ್ಣುಹಿತ್ತಲ ಸದಾನಂದ ಹೆಗಡೆಯವರು. ಅದನ್ನು ನಂತರದಲ್ಲಿ ತಾಳಮದ್ದಳೆಯಲ್ಲಿ ಬಳಕೆಗೆ ತಂದವರು ಹೈಗುಂದ ಪದ್ಮನಾಭಯ್ಯ ಎಂದು ಶಂಭು ಹೆಗಡೆಯವರು, ಮಹಾಬಲ ಹೆಗಡೆಯವರು ಹೇಳುವದನ್ನು ಕೇಳಿದ್ದೇನೆ. ಇವರ ಕರ್ಣ ಕುಮಾರ ವ್ಯಾಸನ ಭಾರತದಲ್ಲಿದ್ದಂತೆ ಚಿತ್ರಿತವಾಗುತ್ತಿತ್ತು. ನಿಜ ಜೀವನದಲ್ಲಿ ದೊಡ್ಡ ದನಿಯಲ್ಲಿ ಗದರಿಸುವ ಡಾಕ್ಟರರು ಕರ್ಣನ ಪಾತ್ರ ಮಾಡಿದಾಗ ಮಂದ್ರಧ್ವನಿಯಲ್ಲಿ ಮಾತನಾಡುತ್ತಿದ್ದರು. ಆಗೆಲ್ಲಾ ಶಲ್ಯ ಸಾರಥ್ಯದಿಂದ ತೊಡಗಿ ಕರ್ಣ ಪರ್ವ ಪ್ರಾರಂಭವಾಗುತ್ತಿತ್ತು. ಇವರ ಕರ್ಣನ ಪ್ರವೇಶದಲ್ಲಿ ಪೀಠಿಕೆಯ ಭಾರವಿರುತ್ತಿರಲಿಲ್ಲ. ಅಲ್ಲಿ ಅವರು ಸಂಧಾನಕ್ಕೆಂದು ಬಂದ ಕೃಷ್ಣ ಕರ್ಣನಿಗೆ ಅವನ ಜನ್ಮ ರಹಸ್ಯವನ್ನು ಹೇಳಿ ಅವನ ಮನಸ್ಸನ್ನು ಅಸ್ತವ್ಯಸ್ತಗೊಳಿಸಿದ ಮುಂದಿನ ಭಾಗವಾಗಿ ಚಿತ್ರಿಸುತ್ತಾರೆ. ತಾಳಮದ್ದಳೆಯಲ್ಲಿ ಈ ಭಾಗ ತುಂಬಾ ಕಠಿಣವಾದುದು. ಯಾಕೆಂದರೆ ತಾಳಮದ್ದಳೆಯಲ್ಲಿ ಆಂಗಿಕವಿಲ್ಲ, ಇಲ್ಲಿನದು ಏನಿದ್ದರು ವಾಚಿಕ. ಇಲ್ಲಿ ಅದನ್ನು ವಿವರವಾಗಿ ಹೇಳಿದರೆ ಅದು ವಾಚಿಕಾಭಿನಯವಾಗದೇ ವಾಚಾಳಿತನವಾಗುತ್ತದೆ. ಡಾಕ್ಟರರು ಪ್ರಸಂಗದ ಈ ಭಾಗದಿಂದಲೇ ಜನರನ್ನು ತನ್ನೆಡೆಗೆ ಸೆಳೆಯುವದು ವಾಚಿಕಾಭಿನಯದ ಮೂಲಕ. ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಆಂಗಿಕ ಮತ್ತು ಭಾಷೆಯ ಹದವಾದ ಮಿಶ್ರಣವಿರಬೇಕು ಎಂದು ನನ್ನಲ್ಲಿ ಅನೇಕ ಸಲ ಹೇಳಿದ್ದರು.

ಒಮ್ಮೆ ನನ್ನನ್ನು ಕೂರಿಸಿಕೊಂಡು ಅರ್ಥಗಾರಿಕೆಯ ಕುರಿತು ಹೇಳಿದ ಮಾತು ನನ್ನ ನೆನಪಿನಲ್ಲಿ ಇನ್ನೂ ಇದೆ. “ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದ ತಕ್ಷಣ ವಿಷಾದ, ರೋಷ, ಅಸಹಾಯಕತೆ, ವಿಧಿಯಮೇಲಿನ ಸೇಡು ಹೀಗೆ ಅನೇಕ ಭಾವನೆಗಳು ಸಂಚಾರಿಯಾಗಿ ಆವರಿಸಿಕೊಳ್ಳಬೇಕು. ರಂಗದಲ್ಲಿ ಇದನ್ನು ಶಾರೀರಿಕ ಪ್ರತಿಕ್ರಿಯೆಯಾಗಿ ಅಭಿನಯ ಮಾಧ್ಯಮದಲ್ಲಿ ಅದನ್ನು ನೋಡುವ ಸೂಕ್ಷ್ಮತೆಯೂ ಪ್ರೇಕ್ಷಕರಲ್ಲಿ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಭಾಷೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಭಾಷೆ ಎನ್ನುವದು ಸ್ವತಂತ್ರವಾಗಿ ವಿಹರಿಸಬಾರದು. ಅದು ಆಂಗಿಕಕ್ಕೆ ಪೂರಕವಾಗಿ ಅಭಿವ್ಯಕ್ತವಾಗಬೇಕಾಗುತ್ತದೆ. ಅದು ಹೇಗೆಂದರೆ ಸ್ವರವನ್ನು ನಿಯತ ಕ್ರಮದಲ್ಲಿ ಉಚ್ಛರಿಸುವದು. ಉದಾಹರಣೆಗೆ ನೋವಿನಿಂದ ಕೂಡಿದಾಗ ‘ಹಾss’ ಎನ್ನುವದು, ಸಂತೋಷದಲ್ಲಿ ‘ಹೋss’ ಎನ್ನುವದು, ಸಮಾಧಾನ ಭಾವದಲ್ಲಿ ‘ಹಂss’ ಎನ್ನುವದು ಹೀಗೆ ಈ ರೀತಿಯಲ್ಲಿ ಸ್ವರವಿಧಾನಗಳನ್ನು ಬಳಸಿಕೊಂಡು ಶಬ್ಧವನ್ನು ನುಡಿಸಬೇಕು. ಅದಲ್ಲದಿದ್ದರೆ ಅದು ಬರೀ ಎತ್ತು ಉಚ್ಚೆ ಹೊಯ್ಯುವಂತೆ ಆಗುತ್ತದೆ ಗೊತ್ತಾತನೋ” ಎಂದಿದ್ದರು. ಇದು ಅವರ ಎಲ್ಲ ಪಾತ್ರಗಳ ಅರ್ಥಗಾರಿಕೆಗೂ ಅನ್ವಯವಾಗುತ್ತಿತ್ತು. ಹಾಗಾಗಿ ಅವರು ಯಾವಾಗಲೂ ಆಂಗಿಕವೆನ್ನುವದು ಅಭಿನಯಕ್ಕೆ ಮುಖ್ಯವಾದರೂ ಎಲ್ಲವನ್ನೂ ಆಂಗಿಕದ ಮೂಲಕವೇ ಸ್ಥಾಯಿಯಾಗಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು.

(ಕೆರಮನೆ ಮಹಾಬಲ ಹೆಗಡೆಯವರು ಡಾ. ಪದ್ಮನಾಭಯ್ಯನವರನ್ನು 1986 ರಲ್ಲಿ ಸನ್ಮಾನಿಸಿದಾಗ…: ಫೋಟೋ ಕೃಪೆ ಕೆರಮನೆ ಶಿವಾನಂದ ಹೆಗಡೆ)

ಹೈಗುಂದ ಡಾಕ್ಟರರ ಪ್ರವೇಶ ಅಣ್ಣುಹಿತ್ತಲ ಸದಾನಂದ ಹೆಗಡೆಯವರು ಅರ್ಥಗಾರಿಕೆಯ ವಿಷಯದಲ್ಲಿ ತೆರವು ಮಾಡಿದ ಸ್ಥಾನವನ್ನು ತುಂಬಿದ್ದಷ್ಟೇ ಅಲ್ಲ, ಮತ್ತಿಷ್ಟು ಸಮಾನಾಭಿರುಚಿಯ ಅರ್ಥಗಾರರನ್ನು ಹುಟ್ಟುಹಾಕಲು ಕಾರಣರು ಎನ್ನುವದನ್ನು ಅರಿತಾಗ ಅವರ ಕೊಡುಗೆ ಗೇರುಸೊಪ್ಪಾ ಸೀಮೆಯ ಹಾಗೂ ಹೊನ್ನಾವರದ ಯಕ್ಷಗಾನದ ವಿಕಾಸನದ ಅಧ್ಯಯನ ಮಾಡುವವರಿಗೆ ತುಂಬಾ ಸಹಕಾರಿಯಾಗುತ್ತದೆ.

ರಂಗದಲ್ಲಿ ಆಂಗಿಕ ಭಾಷೆಗಳು ಮೌಲಿಕವಾದುದು. ಹಾಗಾಗಿ ಅವರ ಕರ್ಣನ ಪಾತ್ರವನ್ನು ನಿರೂಪಿಸುವಲ್ಲಿ ಭಾಷೆ ತುಂಬಾ ಪರಿಣಾಮ ಬೀರುತ್ತಿತ್ತು. ಇಲ್ಲಿ ದುಃಖವಿದ್ದರೂ ಅದು ಒಳಗಡೆ ಹುದುಗಿ ಕರ್ಣನ ವೀರರಸ ಅಡಗಿಕೊಂಡೇ ಹೊರಬರುವ ರೀತಿಯಲ್ಲಿ ಇರುತ್ತಿತ್ತು. ಪಾತ್ರಧಾರಿ ರಂಗದಮೇಲೆ ಅಳುವದನ್ನೂ, ವಿಕ್ರಿಷ್ಟವಾಗಿ ನಗುವದನ್ನೂ ಅವರು ಮಾಡುತ್ತಿರಲಿಲ್ಲ. ಆದರೆ ಇವರ ಕರ್ಣನ ಅರ್ಥಗಾರಿಕೆಯಲ್ಲಿ ಕೇಳುಗರು ಅಳುವಂತೆ ಆ ಪಾತ್ರವನ್ನು ನಿರ್ವಹಿಸುತ್ತಿದ್ದರು. “ಅಂತಿಮವಾಗಿ ಹೊರೆದ ದಾತಾರಂಗೆ ಹಗೆಗಳ ಶಿರವನರಿದೊಪ್ಪಿಸುವ” ಕರ್ಣನಿಗೆ ಆ ಅವಕಾಶ ತಪ್ಪಿಹೋದಾಗ ಆಗುವ ನೋವು ಹೊರ ಬರಲಾರದ ಬೋನಿನಲ್ಲಿ ತಾನು ಸಿಕ್ಕಿಹಾಕಿಕೊಂಡ ತನ್ನ ಕುರಿತಾಗಿ ನೈಚ್ಯಭಾವ, ಸಂಬಂಧವೆನ್ನುವದು ಭಾವುಕತೆಗೆ ಸಿಕ್ಕಿಕೊಳ್ಳುವ ಅಸಹಾಯಕತೆ ಈ ಎಲ್ಲದರ ಬಿಡುಗಡೆಯೆನ್ನುವದು ತನ್ನ ತಲೆಯನ್ನು ಸುಯೋಧನನ ಸಲುವಾಗಿ ರಣಾಂಗಣದಲ್ಲಿ ಅರ್ಪಿಸುವುದೊಂದೇ ಪರಿಹಾರ ಎನ್ನುವದನ್ನು ಅವರ ಪಾತ್ರ ವಿವರಿಸುತ್ತಿತ್ತು. ಜನ್ಮತವಾಗಿ ಗಂಭೀರವಾಗಿರುವ ಅವರ ಸ್ವರ ಆದ್ರವಾಗಿ ಸ್ಪಷ್ಟವಾದ ಉಚ್ಚಾರಣೆಯೊಂದಿಗೆ ಭಾಷೆಯನ್ನು ನಿಧಾನಕ್ಕೆ ಬಿಡಿಬಿಡಿಯಾಗಿ ಉಸಿರತೊಡಗುತ್ತಿದ್ದಂತೆ ಕರ್ಣಪರ್ವ ‘ಕರ್ಣ ರಸಾಯನ’ವಾಗಿ ಪರಿವರ್ತಿತವಾಗುತ್ತಿತ್ತು. ಇವರ ಅರ್ಥಗಾರಿಕೆಯಲ್ಲಿ ಯಾವತ್ತಿಗೂ ವಾದವೆನ್ನುವದು ಇರುತ್ತಿರಲಿಲ್ಲ. ಹಾಗಂತ ಅದು ಏಕಾಂಕ ನಾಟಕದ ರೀತಿಯ ಸಂಭಾಷಣೆಯೂ ಅಲ್ಲವಾಗಿರುತ್ತಿತ್ತು.

ಅದೇ ರೀತಿ ಅವರ ಶ್ರೀ ಕೃಷ್ಣ ಸಂಧಾನದ ಕೌರವ. ಇಲ್ಲಿಯೂ ಅಷ್ಟೇ ಕೌರವ ವಿತಂಡವಾದಿಯಲ್ಲ. ಬದಲಿಗೆ ತನಗೆ ದಕ್ಕಬೇಕಾದ ರಾಜ್ಯ ತನ್ನ ಹಕ್ಕು. ಅದನ್ನು ತಾನು ಪಡೆಯಲು ತಾನು ಅನುಸರಿಸುವ ಮಾರ್ಗವೇ ಸರಿ ಎನ್ನುವ ಹುಂಬತನ ಇವೆರಡರ ಭಾವ ಅಲ್ಲಿ ಅಡಕವಾಗುತ್ತಿತ್ತು. ಕೌರವ ಎಲ್ಲಿಯೂ ಪಾಂಡವರ ಜನ್ಮದ ಕುರಿತಾಗಿಯೋ ಅಥವಾ ದ್ರೌಪದಿಯ ಲಗ್ನದ ಕುರಿತಾಗಿಯೋ ಆಕ್ಷೇಪವನ್ನು ವ್ಯಕ್ತಪಡಿಸದೇ ತನಗೆ ರಾಜ್ಯನಡೆಸಲು ಇರಬೇಕಾದ ಎಲ್ಲ ಅರ್ಹತೆ ಇದ್ದೂ ಅದಕ್ಕೆ ಅಡ್ಡಿ ಬರುವ ಪಾಂಡವರ ಕುರಿತಾಗಿ ಇರುವ ಅಸಹನೆಯನ್ನು ಆತ ವ್ಯಕ್ತಪಡಿಸುತ್ತಿದ್ದ. ಕೌರವನ ಭಾವಕ್ಕೆ ಕೃಷ್ಣ,
“ಆರಿಹರು ಭೂತಳದಿ ನಿನ್ನಯ/
ಭೂರಿ ಭಾಗ್ಯದ ಪೋಲುವಿಕೆಗೆ //”
ಎಂದು ಹೇಳಬೇಕಾದ ರೀತಿಯಲ್ಲಿ ಅವರ ಕೌರವನ ಅರ್ಥ ಇರುತ್ತಿತ್ತು. ಇದು ಇಡೀ ಸಂಧಾನದ ಚರಮ ಭಾಗ. ರಸಘಟ್ಟ ಇಲ್ಲಿ ತೆರೆದುಕೊಳ್ಳಬೇಕು. ಆಗ ಮಾತ್ರ ಸಮಗ್ರವಾದ ಸಂಧಾನವೆನ್ನುವ ಕಾವ್ಯ ರಂಗದಮೇಲೆ ಅನಾವರಣಗೊಳ್ಳುತ್ತದೆ. ಇಲ್ಲವಾದರೆ ಇಡೀ ಸಂಧಾನವೆನ್ನುವದು ಒಂದು ನ್ಯಾಯಾಲಯದ ಕಟೆಕಟೆಯಾಗಿ ಪರಿವರ್ತಿತವಾಗುತ್ತದೆ. ಇದು ಇಂದಿನ ಕಾಲಕ್ಕೆ ಬಲು ಮುಖ್ಯವಾದ ಸಂಗತಿ. ಇದನ್ನು ಪದ್ಮನಾಭಯ್ಯನವರು ಅರಿತಿದ್ದರು. ಅದೇ ರೀತಿ ಅವರ ಕೃಷ್ಣ ಪಾತ್ರವೂ ಇರುತ್ತಿತ್ತು. ಕೌರವನಾಗಿ ಅರ್ಥಹೇಳುವಾಗ ತನ್ನ ಎದುರು ಕೃಷ್ಣ ಯಾವರೀತಿ ಇರಬೇಕೆಂದು ಕಲಾವಿದ ಬಯಸುತ್ತಾನೋ ಅದೇ ರೀತಿ ಪಾತ್ರದ ಚಿತ್ರಣವಿರುತ್ತಿತ್ತು.

ಇನ್ನು ಅವರ ವಿದುರ, ಶಲ್ಯನನ್ನು ನೋಡಿದ್ದೇನೆ. ಸುಧನ್ವ ಕಾಳಗದ ಅರ್ಜುನ ಇವರ ಇನ್ನೊಂದು ಹೆಸರಾದ ಪಾತ್ರ. ಇಲ್ಲಿ ಸುಧನ್ವನ ವೀರತನ ಕಂಡು ಅರ್ಜುನ ಸೋತುಹೋಗಿದ್ದಾನೆ. ಅವನನ್ನು ಕೊಲ್ಲಲು ಮನಸ್ಸೇ ಬರುವದಿಲ್ಲ. ಮನಸ್ಸು ಮಾಡಿದರೆ ಅರ್ಜುನನಿಗೆ ಸುಧನ್ವ ಏನೂ ಅಲ್ಲ, ಆದರೆ ಭಾರತ ಯುದ್ಧದಲ್ಲಿ ತನ್ನ ಮಗ ಅಭಿಮನ್ಯುವನ್ನು ಕಳೆದುಕೊಂಡ ನೋವು ಅವನನ್ನು ಕಾಡುತ್ತಿದೆ. ಇಂತಹ ಸಂದಿಗ್ಧದಲ್ಲಿ ತನ್ನ ಸಂಶಯಕ್ಕೆ ನಿವಾರಣೆಗಾಗಿ ಕೃಷ್ಣ ಬರಲಿ ಎನ್ನುವದು ಅವರ ಅರ್ಥಗಾರಿಕೆಯ ತಿರುಳಾಗಿರುತ್ತಿತ್ತು.

ಹೈಗುಂದ ಡಾಕ್ಟರರು ಕಾವ್ಯವನ್ನು ಅರ್ಥಗಾರಿಕೆಗೆ ಆಧಾರವನ್ನಾಗಿ ಬಳಸುತ್ತಿದ್ದರೂ ಅವರ ಆದ್ಯತೆ ಪ್ರಸಂಗಗಳ ಪದ್ಯಗಳಾಗಿತ್ತು. ಇಲ್ಲಿನ ಕಥಾನಕಕ್ಕೆ ನಿಷ್ಠರಾಗಿಯೇ ಅವರು ಕುಮಾರವ್ಯಾಸನನ್ನೊ ಜೈಮಿನಿಯನ್ನೋ ಬಳಸುತ್ತಿದ್ದರು. ಹಾಗಂತ ಅಲ್ಲಿನ ಪದ್ಯಗಳನ್ನು ಯಥಾವತ್ತಾಗಿ ತರುವದಕ್ಕೆ ಇವರ ವಿರೋಧವಿರುತ್ತಿತ್ತು. ಪ್ರಸಂಗಗಳಲ್ಲಿ ಕನ್ನಡವಲ್ಲದೇ ಅನ್ಯ ಭಾಷೆ ಅದು ಸಂಸ್ಕೃತವೇ ಆಗಿರಲಿ ಅದನ್ನು ಬಳಸುವದನ್ನು ಅಷ್ಟೇ ಉಗ್ರವಾಗಿ ವಿರೋಧಿಸುತ್ತಿದ್ದರು. ಒಮ್ಮೆ ಒಬ್ಬರು ಪ್ರಸಿದ್ಧ ಅರ್ಥಗಾರರು ಇವರೆದುರು ಅರ್ಥಹೇಳುತ್ತಾ ಇದ್ದವರು ಮಾತು ಮಾತಿಗೂ ಸಂಸ್ಕೃತದ ಶ್ಲೋಕವನ್ನು ಉದುರಿಸುತ್ತಿದ್ದರು. ಸಹಿಸಿ ಸಹಿ ಕೊನೆಗೆ ಇವರು ಇಂಗ್ಲೀಷಿನಲ್ಲಿ ಅರ್ಥಹೇಳಲು ಪ್ರಾಂಭಿಸಿಯೇ ಬಿಟ್ಟರು. ಎದುರಾಳಿ ಸ್ತಬ್ಧನಾಗಿ ಬಿರು. ಅರ್ಥವೆನ್ನುವದು ನಮ್ಮ ಪಾಂಡಿತ್ಯದ ಪ್ರದರ್ಶನಕ್ಕಲ್ಲ ಅದು ಕಥನಕಟ್ಟುವ ಮಾಧ್ಯಮ ಎನ್ನುವ ಖಚಿತ ನಿಲುವನ್ನು ಅವರು ಹೊಂದಿದ್ದರು.

ಅವರು ಗೇರುಸೊಪ್ಪಾ ಸೀಮೆಯಲ್ಲಿ ಕೇವಲ ಅರ್ಥಗಾರರಾಗಿ ಹೆಸರು ಮಾಡಿದವರಲ್ಲ. ಅರ್ಥಗಾರಿಕೆ ಬೆಳೆಯಬೇಕು ಎನ್ನುವ ಕಾರಣಕ್ಕೆ ಇನ್ನಿತರ ಅರ್ಥಗಾರರನ್ನು ತಯಾರು ಮಾಡುವ ಕಾರ್ಯಕ್ಕೂ ಕೈಹಾಕಿದರು. ಬಳ್ಕೂರಿನ ರಾಮಚಂದ್ರ ಯಾಜಿ, ಮಾಗೋಡ ರಾಮ ಹೆಗಡೆ ಹಾಗೇ ಇನ್ನೂ ಅನೇಕರನ್ನು ಅವರು ಅರ್ಥಗಾರಿಕೆಯಲ್ಲಿ ಮುನ್ನೆಲೆಗೆ ತಂದರು. ಇಂತವರೆಲ್ಲ ಅರ್ಥಹೇಳುವದನ್ನು ಕೇಳಿದಾಗ ಸಂತೋಷಪಟ್ಟು ದೊಡ್ಡ ವೇಷವನ್ನು ಅವರಿಗೇ ಕೊಟ್ಟು ತಾನು ಸಣ್ಣ ಪಾತ್ರವನ್ನು ಮಾಡುವ ಸ್ವಭಾವ ಅವರದಾಗಿತ್ತು. ಹಾಗೇ ಇಂತಹ ಕಲಾವಿದರೇನಾದರೂ ರಂಗದಲ್ಲಿ ಉಪದ್ವಾಪಿತನದ ಅರ್ಥಹೇಳಲು ಪ್ರಾರಂಭಿಸಿದರೋ ರಂಗದಲ್ಲೇ ಪದ್ಯ ನಿಲ್ಲಿಸಿ “ಇದೆಂತಾ ಅರ್ಥ ಹೇಳ್ತ್ಯೋ, ನಿಂಗೆ ಮಂಡೆಸಮಾ ಇಲ್ಯಾ” ಎಂದು ತರಾಟೆಗೆ ತಗೆದುಕೊಳ್ಳುತ್ತಿದ್ದರು. ಒಮ್ಮೆ ಭಟ್ಕಳದಲ್ಲಿ ಇವರ ಮತ್ತು ಶೇಣಿಯವರ ನಡುವೆ ಯವುದೋ ಒಂದು ವಿಷಯಕ್ಕೆ ಜಟಾಪಟಿ ಪ್ರಾರಂಭವಾಗಿ ಕೊನೆಗೆ ತಾಳಮದ್ದಳೆಯೇ ನಿಂತು ಹೋಗಿತ್ತಂತೆ.

ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ರಂಗಚಿಂತಕರಾಗಿದ್ದ ಕೆರಮನೆ ಶಂಭು ಹೆಗಡೆಯವರು ಯಕ್ಷಗಾನರಂಗದಲ್ಲಿ ವೇಷಗಾರಿಕೆ ಮಾಡುವದಕ್ಕೆ ಅವರ ತಂದೆ ಶಿವರಾಮ ಹೆಗಡೆಯವರ ಒಪ್ಪಿಗೆ ಇರಲಿಲ್ಲ. ಮಗ ತನ್ನಂತೆ ಕಷ್ಟ ಪಡಬಾರದು ಎನ್ನುವದು ಅವರ ಇಚ್ಛೆಯಾಗಿತ್ತು. ಶಿವರಾಮ ಹೆಗಡೆಯವರನ್ನು ಒಪ್ಪಿಸಿ ಶಂಭು ಹೆಗಡೆಯವರು ಅವರ ಪ್ರಥಮ ವೇಷ ರಂಗಕ್ಕೆ ಬರಲು ಕಾರಣ ಪದ್ಮನಾಭಯ್ಯನವರು. ಇಡಗುಂಜಿಯ ಸಮೀಪದ ಬಳಕೂರಿನಲ್ಲಿ ಶಂಭು ಹೆಗಡೆಯವರ ಪ್ರಥಮ ವೇಷ ಬಂದಿರುವುದು ಹೀಗೆ. ಮುಂದಿನದ್ದು ಯಕ್ಷಗಾನದಲ್ಲಿ ಅವರಿಂದ ಇತಿಹಾಸ ನಿರ್ಮಾಣವಾಯಿತು.

ಅದೇ ರೀತಿ ಪ್ರಖ್ಯಾತ ಭಾಗವತರಾದ ನಾರಾಯಣ ಭಾಗವತ, ನೆಬ್ಬೂರರ ವಿಷಯದಲ್ಲಿಯೂ ಹೀಗೆ ಆಯಿತು. ಭಾಗವತಿಕೆಯನ್ನು ಕಲಿಯಬೇಕೆಂಬ ಆಸೆಯಿಂದ ನೆಬ್ಬೂರಿನ ಬಾಲಕ ನಾರಾಯಣ ಕೆರಮನೆಗೆ ಒಂದು ಮಧ್ಯಾನ್ನ ಬರುತ್ತಾನೆ. ಶಿವರಾಮ ಹೆಗಡೆಯವರ ಮನೆ ಎಂದರೆ ಅದು ಅಲ್ಲಿ ಪ್ರತೀ ದಿವಸವೂ ವಿರಾಮ ಸಮಯದಲ್ಲಿ ಯಕ್ಷಗಾನ ಚಿಂತಕರಿಂದ ಕೂಡಿರುವ ಒಂದು ಗೋಷ್ಠಿಯಾಗಿರುತ್ತಿತ್ತು. ಆ ದಿವಸ ಪದ್ಮನಾಭಯ್ಯನವರೂ ಇದ್ದರು. ಮಧ್ಯಾಹ್ನ ಮತ್ತು ರಾತ್ರಿಯ ಊಟವಾಯಿತು. ಈ ಹುಡುಗನಿಗೆ ಭಾಗವತಿಕೆ ಏನು ಬರುತ್ತದೆ ಎಂದು ತಿಳಿಯಲಿಕ್ಕೋಸುಗ ಒಂದು ಪದ್ಯ ಹೇಳಲು ಹೇಳುತ್ತಾರೆ. ಕೆರಮನೆ ಗಜಾನನ ಹೆಗಡೆಯವರು ಮದ್ದಳೆಯನ್ನು ಶ್ರುತಿ ಮಾಡಿ ಸಿದ್ಧವಾಗುತ್ತಾರೆ. ಎಲ್ಲಾದರೂ ನಗು ಬಂದರೆ ಗೊತ್ತಾಗಬಾರದೆಂದು ಪದ್ಮನಾಭಯ್ಯನವರು ತಿರುಗಿ ಮಲಗಿರುತ್ತಾರೆ. ನೆಬ್ಬೂರು ಮೊದಲ ಪದ್ಯ ಹಾಡಿದ್ದೇ ತಡ. ಮಲಗಿದ ಡಾಕ್ಟರರು ತಟ್ಟನೆ ಎದ್ದು ಕೂರುತ್ತಾರೆ. ಮುಖದಲ್ಲಿ ತೃಪ್ತಿಯ ಮಂದಹಾಸವಿದೆ. ಎರಡು ಮೂರು ಪದ್ಯ ಮುಗಿದ ತಕ್ಷಣ ಶಿವರಾಮ ಹೆಗಡೆಯವರ ಹತ್ತಿರ “ಇವನಿಗೆ ನೀವು ಭಾಗವತಿಕೆ ಕಲಿಸುತ್ತೀರೋ ಅಥವಾ ನಾನು ದಾಸ ಭಾಗವತರ ಹತ್ತಿರ ಕರೆದೊಯ್ದು ಕಲಿಸಲೋ.” ಎಂದು ಕೇಳಿಯೇಬಿಟ್ಟರು. ಮುಂದೆ ಶಿವರಾಮ ಹೆಗಡೆಯವರ ಮನೆ ಮಗನಂತೆ ನೆಬ್ಬೂರು ನಾರಾಯಣ ಭಾಗವತರು ಬೆಳೆದದ್ದು ಇತಿಹಾಸ. ಒಳ್ಳೆಯದು ಯಕ್ಷಗಾನಕ್ಕೆ ಸಿಕ್ಕಿತು ಎಂದರೆ ಪದ್ಮನಾಭಯ್ಯನವರು ಅವರನ್ನು ಬೆಳೆಸಬೇಕೆಂಬ ಭಾವವನ್ನು ಹೊಂದಿದವರಾಗಿದ್ದರು.

ಯಕ್ಷಗಾನವಿರಲಿ ತಾಳಮದ್ದಳೆಯಿರಲಿ ಅದು ತನ್ನ ಮಿತಿ ಮೀರಬಾರದೆನ್ನುವದು ಪದ್ಮನಾಭಯ್ಯನವರ ನಿಲುವಾಗಿತ್ತು. ಅದನ್ನು ಮೀರಿದವರು ಯಾರೇ ಆಗಿರಲಿ ಅವರನ್ನು ಖಂಡಿಸದೇ ಬಿಡುತ್ತಿರಲಿಲ್ಲ. ಒಮ್ಮೆ ಸಿರಸಿಯಲ್ಲಿ ತಾಳಮದ್ದಳೆ. ಮಹಾನ್ ಅರ್ಥದಾರರೊಬ್ಬರ ಕರ್ಣ. ಕೆರೆಕೈ ಕೃಷ್ಣ ಭಟ್ಟರ ಶಲ್ಯ. ಇಬ್ಬರ ವಾದ ಪ್ರತಿವಾದಗಳು ಜೋರಾಗಿಯೇ ನಡೆಯಿತು. ಮಹನೀಯರು ತಡೆಯಲಾರದೇ “ಶಲ್ಯ ನಿಜವಾಗಿಯೂ ಇರಿಯಿತು” ಎಂಬರ್ಥದ ಮಾತುಗಳನ್ನಾಡಿದರು. ಅದಕ್ಕೆ ಕೃಷ್ಣ ಭಟ್ಟರು “ಕರ್ಣ ಶುದ್ಧೀಕರಣಕ್ಕೆ ಶಲ್ಯ ಚುಚ್ಚಲೇಬೇಕು” (ಹೀಗೇ ಹೇಳಿದ್ದರು ಎಂದರ್ಥವಲ್ಲ. ಆದರೆ ಮಾತಿನ ಭಾವ ಹೀಗೆಯೇ ಇತ್ತು) ಎಂದು ಉತ್ತರ ಕೊಟ್ಟರು. ಮುಂದೆ ಈ ಪ್ರಕರಣ ದೊಡ್ಡ ವಿವಾದಕ್ಕೆ ಹೋಗಿ ಆ ದಿನದ ತಾಳ ಮದ್ದಳೆಯೂ ನಿಂತು ಹೋಗಿತ್ತಂತೆ. ನಂತರ ಈ ಕುರಿತಾದ ಪತ್ರವ್ಯವಹಾರಗಳೆಲ್ಲಾ ಆಗಿ ದೊಡ್ಡ ವಿವಾದ ಆಗಿಬಿಟ್ಟಿತ್ತಂತೆ. ಆ ಸಂದರ್ಭದಲ್ಲಿ ಪದ್ಮನಾಭಯ್ಯನವರು ಕೃಷ್ಣ ಭಟ್ಟರನ್ನು ಸಮರ್ಥಿಸಿ ಪತ್ರ ಬರೆದಿದ್ದರಂತೆ. ಕಲೆಯ ಮುಂದೆ ಯಾರೂ ದೊಡ್ಡವರಲ್ಲ ಎನ್ನುವದು ಅವರ ಖಚಿತ ನಿಲುವಾಗಿತ್ತು. ಹಾಗೆ ನೋಡಿದರೆ ಇವರ ಅರ್ಥದಲ್ಲಿಯೂ ಒಮ್ಮೊಮ್ಮೆ ಇಂಗ್ಲೀಷ ಭಾಷೆ ಹಾದು ಹೋಗುತ್ತಿತ್ತು. ಒಮ್ಮೆ ವಿದುರನ ಪಾತ್ರ ಮಾಡಿದಾಗ “ಯಸ್” ಎಂದಿದ್ದರಂತೆ. ಅಂದಿನಿಂದ ಹೊನ್ನಾವರ ಕುಮಟಾ ಕಡೆ “ಯೆಸ್ಸ್ ಎಂದನಾ ವಿದುರ” ಎನ್ನುವ ಮಾತು ತಮಾಷೆಯಾಗಿ ಚಾಲ್ತಿಯಲ್ಲಿದೆ.

ಈ ಸಂದರ್ಭದಲ್ಲಿ ಹೈಗುಂದದಲ್ಲಿ ವೈದ್ಯ ವೃತ್ತಿಯಲ್ಲಿ ಅವರ ತೊಡಗುವಿಕೆಯಲ್ಲಿ ಯಾವ ಕೊರತೆಯೂ ಇರಲಿಲ್ಲ. ಅವರ ಸಂಸಾರದಲ್ಲಿ ನಾಲ್ಕು ಗಂಡು ಮತ್ತು ಮೂರು ಹೆಣ್ಣುಮಕ್ಕಳು ಸೇರಿ ಏಳು ಮಕ್ಕಳಾದರು. ಗಜಾನನ, ಶಾರದಾ, ಮೋಹನದಾಸ, ವಿಶ್ವೇಶ್ವರ, ಮಂಗಲಾ, ಶ್ರೀಧರಯ್ಯ ಮತ್ತು ನಿರ್ಮಲಾ ಇವರ ಮಕ್ಕಳು. ಮಹಾತ್ಮಾ ಗಾಂಧಿಯವರ ಮರಣದ ದಿನ ಹುಟ್ಟಿದ ಇವರ ಮಗನಿಗೆ ಮೋಹನದಾಸ ಎಂದೇ ಹೆಸರಿಟ್ಟರು. ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಇವರ ಆಸ್ಪತ್ರೆ ಅಲ್ಲಿಂದ ನದಿ ದಂಡೆಯ ಎಡಭಾಗದಲ್ಲಿರುವ ಬೇರಂಕಿಗೆ ಸ್ಥಳಾಂತರವಾಯಿತು. ಆ ಹೊತ್ತಿನಲ್ಲಿ ಮನೆಯನ್ನು ಬಳಕೂರಿನಲ್ಲಿ ಮಾಡಿ ಮಕ್ಕಳ ಶಿಕ್ಷಣದ ವ್ಯವಸ್ಥೆ ಸುಗಮವಾಗಿ ಆಗುವಂತೆ ನೋಡಿಕೊಂಡರು. ನಂತರ ಮಕ್ಕಳು ಬೆಳೆದಂತೆ ಅವರ ಕಾಲೇಜು ಶಿಕ್ಷಣ ಸರಾಗವಾಗಿ ಆಗಲಿ ಎಂದು 1966 ರಿಂದ 1977ರವರೆಗೆ ಹೊನ್ನಾವರದಲ್ಲಿ ಮನೆಯನ್ನು ಮಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರು. ಆಮೇಲೆ 1977 ರಲ್ಲಿ ಉಪ್ಪೋಣಿಯಲ್ಲಿ ಜಮೀನು ಖರೀದಿಸಿ ನಾಲ್ಕನೇ ಮಗ ವಿಶ್ವೇಶ್ವರನ ಜೊತೆ ಇದ್ದು ಅಲ್ಲಿಯೂ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುತ್ತಿದ್ದರು. ತನ್ನ ಅಪರಿಮಿತ ಆಸಕ್ತಿಯ ಮತ್ತು ಉದ್ಯೋಗದ ನಡುವೆ ಮಕ್ಕಳ ಹಾಗೂ ಕುಟುಂಬವನ್ನು ಮರೆಯದೇ ಅವರಿಗೊಂದು ಉತ್ತಮ ಸಂಸ್ಕಾರ ಕೊಡಿಸಿದ ಅವರು ಯಶಸ್ವೀ ಕುಟುಂಬಸ್ಥರೂ ಹೌದು.

ಪದ್ಮನಾಭಯ್ಯನವರು ಕೂಟಗಳಲ್ಲಿ ತುಂಬಾ ಪ್ರಸಿದ್ಧಿ ಪಡೆದ ಅರ್ಥಧಾರಿ. ಇವರ ವ್ಯಾಪ್ತಿ ಪ್ರಾರಂಭದಲ್ಲಿ ಗೇರುಸೊಪ್ಪಾ ಸೀಮೆಯಲ್ಲಾಗಿದ್ದರೂ ನಂತರ ದಕ್ಷಿಣೋತ್ತರ ಜಿಲ್ಲೆಯ ಎಲ್ಲಾ ಕಡೆ ವ್ಯಾಪಿಸಿತ್ತು. ಘಟ್ಟದ ಮೇಲೆ ಮಳೆಗಾಲದಲ್ಲಿ ನಡೆಯುವ ತಾಳ ಮದ್ದಳೆಗೆ ಪದ್ಮನಾಭಯ್ಯನವರಿದ್ದರೆ ತುಂಬಾ ಬೇಡಿಕೆ ಇತ್ತು. ಮತ್ತಮರಡು ಸುಬ್ರಾಯ ಹೆಗಡೆ ಇವರ ಅಭಿಮಾನಿಯಾಗಿದ್ದರು. ಅವರು ಏರ್ಪಡಿಸುತ್ತಿದ್ದ ತಾಳಮದ್ದಳೆಯ ಕೂಟಗಳಿಗೆ ಇವರಿರಲೇಬೇಕಿತ್ತು. ಅದೇ ರೀತಿ ಅಂಕೋಲಾದಲ್ಲಿ ಇವರ ಅಭಿಮಾನಿಗಳು ಸಾಕಷ್ಟಿದ್ದರು. ಅಲ್ಲಿನ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಅಂಕೋಲಾದಲ್ಲಿ ಆಟದಲ್ಲಿ ವೇಷವನ್ನೂ ಮಾಡಿದ್ದರು. 1977 ರಲ್ಲಿ ಚಂದ್ರ ಅಡಿಗರ ಕಮಲಶಿಲೆ ಮೇಳದಲ್ಲಿ ಕವಲಕ್ಕಿಯಲ್ಲಿ ಕೀಚಕ ವಧೆಯಲ್ಲಿ ವಲಲನ ವೇಷ ಹಾಕಿದ್ದರು. ನರಸಿಂಹ ದಾಸ ಭಾಗವತರು, ಯಾಜಿ ಭಾಗವತರು, ಕಡತೋಕಾ ಮಂಜು ಭಾಗವತರು, ಕೃಷ್ಣ ಭಾಗವತರು, ನೆಬ್ಬೂರು ನಾರಾಯಣ ಭಾಗವತರು ಮತ್ತು ಕೆಪ್ಪೆಕೆರೆ ಸುಬ್ರಾಯ ಭಾಗವತರು ಎಂದರೆ ಇವರಿಗೆ ತುಂಬಾ ಅಚ್ಚುಮೆಚ್ಚಾಗಿತ್ತು. ಅದರಲ್ಲೂ ಕಡತೋಕಾ ಭಾಗವತರ ರಂಗತಂತ್ರವನ್ನು ಮತ್ತು ಆಟ ಆಡಿಸುವ ವೈಖರಿಯನ್ನು ತುಂಬಾ ಮೆಚ್ಚಿಕೊಂಡಿದ್ದರು.

ಹೈಗುಂದ ಡಾಕ್ಟರರು ಎಂದು ಪ್ರಸಿದ್ಧರಾದ ಪದ್ಮನಾಭಯ್ಯನವರು ವೈದ್ಯಕೀಯ ವೃತ್ತಿಯಲ್ಲಿ ಹೊಳೆಸಾಲಿನ ಭಾಗದ ಜನರಿಗೆ ಅಕ್ಷರಶಃ ದೇವರೇ ಆಗಿದ್ದರು. ಹೊನ್ನಾವರದ ಕಾಡುಪ್ರದೇಶದಲ್ಲಿ ವ್ಯಾಪಕವಾದ ಮಂಗನ ಕಾಯಿಲೆಗೆ ಇವರು ಕೊಡುವ ಔಷಧ ತುಂಬಾ ಪರಿಣಾಮಕಾರಿಯಾಗಿತ್ತು. ಹಾಗೇ ಅರ್ಧಾಂಗ ವಾಯುವಿಗೂ ಇವರು ಔಷಧಿ ನೀಡುತ್ತಿದ್ದರು. ಹಾವು ಕಡಿತಕ್ಕೆ ಒಳಗಾದ ಅನೇಕರನ್ನು ಬದುಕಿಸಿದ ಕೀರ್ತಿ ಇವರದ್ದು. ಹೆರಿಗೆಯ ಸಂದರ್ಭಗಳಲ್ಲಿ ಹೊತ್ತು ಗೊತ್ತು ನೋಡದೇ ಹೋಗಿ ತಾಯಿ-ಮಗುವಿನ ಜೀವ ಉಳಿಸಿದ ಅನೇಕ ಉದಾಹರಣೆಗಳಿವೆ. ನೇರವಾಗಿ ಕಂಡದ್ದನ್ನು ಹೇಳುವ ಆದರೆ ಅಷ್ಟೇ ಮೃದು ಸ್ವಭಾವದವರಾದ ಇವರು ಹೊನ್ನಾವರದ ತಾಲೂಕಿನ ಶರಾವತೀ ನದಿಯ ಭಾಗಗಳಲ್ಲಿ ಕೇವಲ ದೋಣಿ ಮತ್ತು ಲಾಂಚ್ ಇರುವ ಹೊತ್ತಿನಲ್ಲಿ ಆರೋಗ್ಯಭಾಗ್ಯವನ್ನು ಕರುಣಿಸಿದ ಧನ್ವಂತರಿಯೂ ಹೌದು. ಉತ್ತರ ಕನ್ನಡದ ಅರ್ಥಗಾರಿಕೆಗೆ ಒಂದು ರೀತಿಯಲ್ಲಿ ಶುದ್ಧೀಕರಣವನ್ನು ಮಾಡಿ ಕಲಾವಿದರಿಗೆ ಪ್ರಸಂಗದ ಜೊತೆ ಕುಮಾರವ್ಯಾಸ, ಜೈಮಿನಿ, ತೊರವೆ ಮುಂತಾದ ಕಾವ್ಯಗಳ ಅಗತ್ಯವನ್ನು ಹೇಳಿ ಭಾಷಾ ಶುದ್ಧಿ, ಭಾವಶುದ್ಧಿಯ ಅರ್ಥಗಾರಿಕೆಯನ್ನು ತಿಳಿಸಿದ ಓರ್ವ ಶಕಪುರುಷರಾಗಿ ಇವರು ಗುರುತಿಸಲ್ಪಡುತ್ತಾರೆ. ತನ್ನ ಎಂಬತ್ನಾಲ್ಕನೆಯ ವಯಸ್ಸಿನಲ್ಲಿ 2000ನೆಯ ಇಸ್ವಿಯ ನವಂಬರ ತಿಂಗಳ 3ನೆಯ ತಾರೀಖಿನಂದು ಈ ಜೀವ ನಮ್ಮಿಂದ ಕಣ್ಮರೆಯಾಯಿತು. ಹಾಗಾಗಿ ಈ ಜಿಲ್ಲೆಯ ತಾಳಮದ್ದಳೆಯ ಮತ್ತು ಯಕ್ಷಗಾನ ರಂಗಭೂಮಿ ಯಾವತ್ತಿಗೂ ನೆನಪಿಸಿಟ್ಟುಕೊಳ್ಳಬೇಕಾದ ವ್ಯಕ್ತಿ ಹೈಗುಂದ ಪದ್ಮನಾಭಯ್ಯನವರು.