ಕತ್ತಲ ಸಾಮ್ರಾಜ್ಯದಲ್ಲಿ ಹುಟ್ಟಿನ ಜಾಡು ಹಿಡಿದು ಕತೆ ಹೇಳುವ ಮೆಟ್ಟಿನ ಕತೆ ಬರೀ ಕತೆಯಾಗದೆ ಕಾವ್ಯವಾಗುವ ಪರಿಯೇ ಒಂದು ವೈಶಿಷ್ಟ್ಯಪೂರ್ಣ. ತನ್ನ ಕತ್ತಲ ಸಾಮ್ರಾಜ್ಯದ ಕತೆಯನ್ನು ದೇಶಕ್ಕೆ, ಪ್ರಪಂಚಕ್ಕೆ, ಇಡೀ ಭೂಮಂಡಲಕ್ಕೆ ವಿಸ್ತರಿಸಿ ಹೇಳುತ್ತೇನೆನ್ನುವ ಅದರ ತುಡಿತ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಪ್ರಕ್ರಿಯೆಯೂ ಆಗಿದೆ. ಈ ನಿಟ್ಟಿನಲ್ಲಿ ಕವಿಗೆ ತನ್ನ ಕಾವ್ಯದ ಉದ್ದೇಶಗಳ ಕುರಿತು ಸ್ಪಷ್ಟತೆ ಇದೆ. ಈ ದಿಶೆಯಲ್ಲಿ ಇದೊಂದು ಅಪಾರವಾದ ಮಾನವೀಯ ಮೌಲ್ಯಗಳ ತಾಯ್ತನ ತುಡಿತದ ಪ್ರಯೋಗಶೀಲ ಕಾವ್ಯ ಅನ್ನಬಹುದು. ಈ ಅಂಶ ಕಾವ್ಯದ ಉದ್ದಕ್ಕೂ ಓದುಗನನ್ನು ಮನಮುಟ್ಟುತ್ತದೆ.
ಎಂ. ಜವರಾಜ್‌ ಕಥನ ಕಾವ್ಯ “ಮೆಟ್ಟು ಹೇಳಿದ ಕಥಾ ಪ್ರಸಂಗ”ದ ಕುರಿತು ಪ್ರಶಾಂತ್‌ ಬೆಳತೂರು ಬರಹ

ಇದುವರೆಗೆ ಯಾವುದೇ ಪ್ರಚಾರ, ಪ್ರಶಸ್ತಿ, ವೇದಿಕೆಗಳ ಗೊಡವೆಗೆ ಹೋಗದೆ ತಮ್ಮ ಪಾಡಿಗೆ ತಾವು ಎಲೆಮರೆಕಾಯಿಯಂತೆ ಸಾಹಿತ್ಯದ ಗಂಭೀರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬರೆಯುತ್ತಿರುವ ಎಂ.ಜವರಾಜ್ ಕವಿ ಕತೆಗಾರ ಕಾದಂಬರಿಕಾರ ವಿಮರ್ಶಕ.

(ಎಂ. ಜವರಾಜ್‌)

ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ತಾಣ ಹಾಗು ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದ ಕೂಡಲ ಸಂಗಮ ತಿರುಮಕೂಡಲು. ನರಸೀಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಭೈರಾಪುರ ಗ್ರಾಮದ ಇವರು ಈಗಾಗಲೇ “ಕಿಡಿ” ಎಂಬ ಕಾದಂಬರಿ, “ನವೂಲರಮ್ಮನ ಕಥೆ” ಎಂಬ ಕಥಾ ಸಂಕಲನ “ಅವ್ವ ನನ್ಹ್ನೆತ್ತು ಮುದ್ದಾಡುವಾಗ” ಎಂಬ ಕವಿತಾ ಸಂಕಲನ ಹಾಗೂ “ನೆಲದ ಚಿತ್ರಗಳು” ಎಂಬ ವಿಮರ್ಶಾ ಬರಹಗಳನ್ನು ಪ್ರಕಟಿಸಿದ್ದಾರೆ. ಸದ್ಯ ಇವರ “ಮೆಟ್ಟು ಹೇಳಿದ ಕಥಾ ಪ್ರಸಂಗ” ಇತ್ತೀಚೆಗೆ ಬಿಡುಗಡೆಗೊಂಡ, ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾದ ಒಂದು ವಿಶಿಷ್ಟ ಕೃತಿಯೆನಿಸಿದೆ.

“ಮೆಟ್ಟು ಹೇಳಿದ ಕಥಾ ಪ್ರಸಂಗ” ಕೃತಿಯಲ್ಲಿ ಸಾಮಾನ್ಯ ಮೆಟ್ಟುಗಳನ್ನು ರೂಪಕವಾಗಿ ಬಳಸಿಕೊಂಡಿರುವ ವಿಶಿಷ್ಟತೆ ಕವಿಯ ಕಥನ ತಂತ್ರಗಾರಿಕೆಗಳಲ್ಲೊಂದು. ಇದು ಈ ಕಾವ್ಯದುದ್ದಕ್ಕು ಎದ್ದು ಕಾಣುತ್ತದೆ! ವ್ಯಕ್ತಿಗಳಿಗಿಂತಲೂ ಇಲ್ಲಿ ವಸ್ತುಗಳು ಜೀವ ಪಡೆದು ನಿರೂಪಗೊಂಡಿರುವುದು ಕಥನದ ಜೀವಂತಿಕೆಯಾಗಿದೆ. ದೇವನೂರ ಮಹಾದೇವ ಅವರ ಕುಸುಮಬಾಲೆಯಲ್ಲಿ ಮಂಚವೊಂದು ತಾನು ಕಂಡ ಅನುಭವಗಳನ್ನು ವಿವರಿಸುವ ಸನ್ನಿವೇಶದಂತೆ ಇಲ್ಲಿ ಮೆಟ್ಟು ತನ್ನ ಅನುಭವಗಳನ್ನು ಹೇಳುವಂತೆ, ಇಲ್ಲಿ ಒಂದಿಡೀ ಕಾವ್ಯ ಮೆಟ್ಟೇ ಜೀವ ಪಡೆದು ಕಾವ್ಯದ ಆತ್ಮದಂತೆ ಕಲಾತ್ಮಕತೆಯನ್ನೇ ಮೈದುಂಬಿಕೊಂಡು ತನ್ನ ವಿಭಿನ್ನ ನಿರೂಪಣೆಯೊಂದಿಗೆ ಮಾನವೀಯ ಮೌಲ್ಯದ ಹುಡುಕಾಟ ನಡೆಸುತ್ತದೆ. ಈ ಮೂಲಕ ಮೆಟ್ಟು ಜೀವನ ಪರ್ಯಂತದಲ್ಲಿ ಶೋಷಿತ ಬದುಕುಗಳು ಸವೆಯುವ ಕ್ರಿಯೆಯಿಲ್ಲಿ ವ್ಯಕ್ತವಾಗುತ್ತದೆ.

ಕವಿ ಜವರಾಜ್ ಅವರ ಈ ಕಾವ್ಯದಲ್ಲಿ ಮೆಟ್ಟನ್ನು ಮೆಟ್ಟುವ ಅಯ್ನೋರು ಎಂಬ ಪಾತ್ರವಿದೆ. ಈ ಪಾತ್ರದ ಜಾತಿಯ ಕುರಿತು ಎಲ್ಲೂ ಹೇಳದಿದ್ದರೂ ಆ ಪದವೇ ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿಯ ಕುರಿತದ್ದು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತದೆ. ಕಚ್ಚೆಹರಕುತನದ ಈ ಅಯ್ನೋರ ವ್ಯಕ್ತಿತ್ವಗಳನ್ನು ಕುರಿತು ಮೆಟ್ಟಿನ ಜೊತೆ ಅವರ ಪಂಚೆಯ ಅಂಚೂ ಜೀವ ತಳೆದು ಮಾತಾಡುವುದು ಕಾವ್ಯಕ್ಕೆ ಮೆರುಗು ತಂದಿದೆಯಲ್ಲದೆ ಬೆರಗು ಹುಟ್ಟಿಸುತ್ತದೆ. ಅಲ್ಲದೇ ಮೆಟ್ಟು ಮತ್ತು ಪಂಚೆಯ ನಡುವಿನ ಮಾತುಕತೆ ಅವು ಅನುಭವಿಸುವ ಒಳ ಹೊರಗಿನ ತಾರತಮ್ಯಗಳನ್ನು, ಕವಿ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಹಾಗೆ ಅಯ್ನೋರೊಂದಿಗೆ ಹೊಸಿಲು ದಾಟಿ ಮನೆ ಒಳ ಪ್ರವೇಶಿಸುವ ಪಂಚೆ ಅಂಚು, ಅಯ್ನೋರ ಪಾದದಿಂದ ಕಳಚಿ ಹೊಸಿಲ ಹೊರಗೇ ಉಳಿವ ಮೆಟ್ಟನ್ನು ವ್ಯಂಗ್ಯದ ದನಿಯಲ್ಲಿ ಅಣಕಿಸುವ ಸನ್ನಿವೇಶ ವ್ಯವಸ್ಥೆಯೊಳಗಿನ ದಲಿತ ಬದುಕಿನ ಜೀವಂತ ಸ್ಥಿತಿಯನ್ನು ಹೇಳುತ್ತದೆ.

ಕಾವ್ಯದಲ್ಲಿ ಬರುವ ಕಾಲಯ್ಯನ ಪಾತ್ರವೊಂದಿದೆ. ಇಲ್ಲಿ ಈ ಕಾಲಯ್ಯ ಶೋಷಿತ ವರ್ಗದ ಪ್ರತಿನಿಧಿ. ಚರ್ಮವೃತ್ತಿಯ ಆತನೇ ಈ ಮೆಟ್ಟುಗಳನ್ನು ಸೃಷ್ಟಿಸುತ್ತಾನೆ. ಶೋಷಿತರ ಒಡಲಾಳದ ವೇದನೆಗಳನ್ನು, ಬೆಳಕಿಗೆ ಬರದೆ ಕತ್ತಲಲ್ಲೇ ಕರಗಿ ಹೋಗುವ ಅವರ ದಾರುಣ ಬದುಕಿನ ಕಟುವಾಸ್ತವಗಳನ್ನು ಸೃಜನಶೀಲವಾಗಿ ಕಟ್ಟಿಕೊಡುವಲ್ಲಿ ಈ ಕಾವ್ಯ ಮಹತ್ವಪೂರ್ಣವಾಗಿದೆ ಎನಿಸುತ್ತದೆ.

ಕಾಲಯ್ಯ ಎಂಬುದರಲ್ಲಿರುವ ‘ಕಾಲ’ – ಕಾಲದ ಘಟನಾವಳಿಗಳನ್ನು ಮೆಲುಕು ಹಾಕುವ, ಕಾಲವನ್ನು ಮೀರುವ, ಕಾಲವನ್ನು ನಿರ್ಲಕ್ಷಿಸಿದರೆ ಆಗುವ ಅನಾಹುತಗಳನ್ನು ಮತ್ತು ‘ಕಾಲ’ದ ನಾಶ ಬಯಸುವ ಅಹಂಕಾರ ಮನಸ್ಥಿತಿಯಿದೆ. ಕಡೆಗೆ ಆ ಅಹಂಕಾರದ ಮನಸ್ಥಿತಿ ದಕ್ಕಿಸಿಕೊಳ್ಳುವುದಾದರು ಏನು ಎಂಬ ಪ್ರಶ್ನೆಯೂ ಕಾಡುತ್ತದೆ.

ಮೆಟ್ಟು ಮತ್ತು ಪಂಚೆಯ ನಡುವಿನ ಮಾತುಕತೆ ಅವು ಅನುಭವಿಸುವ ಒಳ ಹೊರಗಿನ ತಾರತಮ್ಯಗಳನ್ನು, ಕವಿ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಹಾಗೆ ಅಯ್ನೋರೊಂದಿಗೆ ಹೊಸಿಲು ದಾಟಿ ಮನೆ ಒಳ ಪ್ರವೇಶಿಸುವ ಪಂಚೆ ಅಂಚು, ಅಯ್ನೋರ ಪಾದದಿಂದ ಕಳಚಿ ಹೊಸಿಲ ಹೊರಗೇ ಉಳಿವ ಮೆಟ್ಟನ್ನು ವ್ಯಂಗ್ಯದ ದನಿಯಲ್ಲಿ ಅಣಕಿಸುವ ಸನ್ನಿವೇಶ ವ್ಯವಸ್ಥೆಯೊಳಗಿನ ದಲಿತ ಬದುಕಿನ ಜೀವಂತ ಸ್ಥಿತಿಯನ್ನು ಹೇಳುತ್ತದೆ.

ಕಾವ್ಯದ ಕೇಂದ್ರ ಬಿಂದುವಾಗಿರುವ ಸವ್ವಿ ದನಿಯಿರದ ಹೆಣ್ಣು ಮಗಳು. ಅಪ್ಪನಿಂದಲೇ ಸಂಭೋಗಕ್ಕೆ ಒಳಗಾಗುವ ಸವ್ವಿಯ ದಾರುಣ ಬದುಕಿನ ಅಸಹಾಯಕತೆ ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಕತ್ತಲ ಸಾಮ್ರಾಜ್ಯದಲ್ಲಿ ಹುಟ್ಟಿನ ಜಾಡು ಹಿಡಿದು ಕತೆ ಹೇಳುವ ಮೆಟ್ಟಿನ ಕತೆ ಬರೀ ಕತೆಯಾಗದೆ ಕಾವ್ಯವಾಗುವ ಪರಿಯೇ ಒಂದು ವೈಶಿಷ್ಟ್ಯಪೂರ್ಣ. ತನ್ನ ಕತ್ತಲ ಸಾಮ್ರಾಜ್ಯದ ಕತೆಯನ್ನು ದೇಶಕ್ಕೆ, ಪ್ರಪಂಚಕ್ಕೆ, ಇಡೀ ಭೂಮಂಡಲಕ್ಕೆ ವಿಸ್ತರಿಸಿ ಹೇಳುತ್ತೇನೆನ್ನುವ ಅದರ ತುಡಿತ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಪ್ರಕ್ರಿಯೆಯೂ ಆಗಿದೆ. ಈ ನಿಟ್ಟಿನಲ್ಲಿ ಕವಿಗೆ ತನ್ನ ಕಾವ್ಯದ ಉದ್ದೇಶಗಳ ಕುರಿತು ಸ್ಪಷ್ಟತೆ ಇದೆ. ಈ ದಿಶೆಯಲ್ಲಿ ಇದೊಂದು ಅಪಾರವಾದ ಮಾನವೀಯ ಮೌಲ್ಯಗಳ ತಾಯ್ತನ ತುಡಿತದ ಪ್ರಯೋಗಶೀಲ ಕಾವ್ಯ ಅನ್ನಬಹುದು. ಈ ಅಂಶ ಕಾವ್ಯದ ಉದ್ದಕ್ಕೂ ಓದುಗನನ್ನು ಮನಮುಟ್ಟುತ್ತದೆ.

ಅಯ್ನೋರ ಪಾದದಡಿ ಅಲೆದು ಸಾಕಾಗಿ ಬಂದ ಮೆಟ್ಟು ಬೆವರು ಮಣ್ಣಿನ ಜಿಡ್ಡಿನಲ್ಲಿ ಭಂಗಪಟ್ಟು ಸರೊತ್ತಲ್ಲಿ ಜಗುಲಿ ಮೂಲೆ ಸೇರಿದ ಹೊತ್ತಲ್ಲಿ ಮೆಟ್ಟಿನ ಅಂಗಾಂಗವನ್ನು ಕಟ್ಟಿರುವೆಗಳು ಆವರಿಸಿ ಇಂಚಿಂಚು ಕಚ್ಚಿಕಚ್ಚಿ ತಿನ್ನುತ್ತವೆ. ಇಲ್ಲಿ ಇರುವೆಗಳ ಹಸಿವು ನೀಗುವ ಪರಿ ಮತ್ತು ಮೆಟ್ಟಿಗೂ ಇರುವೆಗಳಿಗೂ ನಡೆವ ಸಂಭಾಷಣೆ ಮಂಟೇಸ್ವಾಮಿ ಕಥಾನಕದ ಧರೆಗೆ ದೊಡ್ಡೋರ ಪ್ರಸಾದ ಸ್ವೀಕಾರದ ಇರುವೆ ಸಾಲುಗಳ ಸನ್ನಿವೇಶದ ಚಿತ್ರಣವನ್ನು ನೆನಪಿಸುತ್ತದೆ. ಹಾಗೆ ಮಾರನ ತಡಕ ಮನೆ ಜಗುಲಿ ಮೂಲೆಯಲ್ಲಿ ಮಾತಾಡುವ ಗುಂಡುಕಲ್ಲಿನ ಪ್ರಸಂಗ. ಹಾಗಾಗಿ ಜವರಾಜ್ ಅವರ ಈ ಮೆಟ್ಟಿನ ಕಾವ್ಯವನ್ನು ಜಾನಪದದ ವಿಸ್ತೃತ ನೆಲೆಯಲ್ಲಿಯೂ ನೋಡಬಹುದಾಗಿದೆ.

ಈಗಾಗಲೆ ಈ ಕಾವ್ಯದ ಕುರಿತು ಮುನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ, ಕೃತಿ ಬಿಡುಗಡೆ ಹೊತ್ತಲ್ಲಿ ಓ.ಎಲ್.ನಾಗಭೂಷಣಸ್ವಾಮಿ, ಸಿ.ಬಸವಲಿಂಗಯ್ಯ, ಕಾಳೇಗೌಡ ನಾಗವಾರ, ಜ್ಯೋತಿ ಗುರುಪ್ರಸಾದ್, ನಾ.ದಿವಾಕರ, ಈ ಕಾವ್ಯದ ಹಿನ್ನೋಟದಲ್ಲಿ ಆರ್.ವಿಜಯರಾಘವನ್, ಹೆಚ್.ಗೋವಿಂದಯ್ಯ, ತರಹದ ಲೇಖಕರು ಒಟ್ಟು ಸಂಕ್ಷಿಪ್ತದಲ್ಲಿ “ಭಿನ್ನ ಆಯಾಮವುಳ್ಳ ಮಾನವೀಯ ಮೌಲ್ಯಗಳ ಹುಡುಕಾಟದ ಸೃಜನಶೀಲ ಹಾಗು ರಚನಾತ್ಮಕ ಭಾಷಾಶೈಲಿಯ ಮಹತ್ವದ ಪ್ರಯೋಗಶೀಲ ಕೃತಿ” ಎಂದಿರುವುದು “ಮೆಟ್ಟು ಹೇಳಿದ ಕಥಾ ಪ್ರಸಂಗ” ದ ಗಟ್ಟಿತನವನ್ನು, ಈ ಕಾವ್ಯದ ಮೌಲ್ಯವನ್ನು ಹೇಳುತ್ತದೆ.

ಹಾಗೆ ಕೊನೆಯದಾಗಿ, ರಂಗಕರ್ಮಿಗಳ ಮೂಲಕ ಕೆ.ಬಿ ಸಿದ್ದಯ್ಯ ಅವರ ದಕ್ಲಾಕಥಾ ದೇವಿಕಾವ್ಯ, ದೇವನೂರರ ಒಡಲಾಳ, ಕುಸುಮಬಾಲೆ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು ಇನ್ನೂ ಕೆಲ ಲೇಖಕರ ಕೃತಿಗಳು ರಂಗ ರೂಪದಲ್ಲಿ ಪ್ರಯೋಗಶೀಲತೆಯನ್ನು ತೋರಿದಂತೆ ಈ ಕಥನ ಕಾವ್ಯವನ್ನು ಈತರದ ವಿವಿಧ ರೂಪದ ಪ್ರಯೋಗಗಳ ಸಾಧ್ಯತೆ ಬಗ್ಗೆ ಯೋಚಿಸುವಂತಾದರೆ ‘ಮೆಟ್ಟು ಹೇಳಿದ ಕಥಾ ಪ್ರಸಂಗ’ದ ಕಥಾ ವಿಸ್ತೃತತೆ ಹಲವು ಮಗ್ಗುಲುಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಪೂರ್ಣವಾಗಿ ದಕ್ಕಬಹುದೇನೊ.

(ಕೃತಿ: ಮೆಟ್ಟು ಹೇಳಿದ ಕಥಾ ಪ್ರಸಂಗ (ಕಥನ ಕಾವ್ಯ), ಲೇಖಕರು: ಎಂ.ಜವರಾಜ್, ಪ್ರಕಾಶಕರು: ಸಂಧ್ಯಾ ಪ್ರಕಾಶನ, ಶ್ರೀರಂಗಪಟ್ಟಣ (9845880592), ಬೆಲೆ: 285/-)