ನನ್ನ ಪಕ್ಕದಲ್ಲಿ ಒಬ್ಬ ತಂದೆ ಮತ್ತು ಅವರ ಹೈಸ್ಕೂಲು ಮೊದಲ ವರ್ಷ ವಯಸ್ಸಿನ ಮಗ ಇದ್ದರು.ಹುಡುಗ ಮೆಲುದನಿಯಲ್ಲಿ ಮದರ್ ಎಂದು ಓದಲಾರಂಭಿಸಿದ.ತಕ್ಷಣವೇ ಅವನ ತಂದೆ ಬಲು ಮುಜುಗರದಿಂದ ‘ಸಾಕು ನಿಲ್ಲಿಸು, ಮುಂದಕ್ಕೆ ಓದಬೇಡ. ಆ ಪದವನ್ನು ನಾವು ಬಳಸುವುದಿಲ್ಲ,’ ಎಂದರು.ಹುಡುಗ ಮುಸಿಮುಸಿ ನಕ್ಕು ‘ಮತ್ಯಾಕೆ ಈ ಕಲಾವಿದ ಆ ಪದವನ್ನ ಬಳಸಿದ್ದಾನೆ’ ಎಂದ.’ಅದಕ್ಕೇ ಅದನ್ನು ಆರ್ಟ್ ಎನ್ನುವುದು,’ ಎಂದು ತಂದೆಯ ಉತ್ತರ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಹೋದ ವಾರ ಟೋನಿ ಆಲ್ಬರ್ಟ್ ಎಂಬುವವರ ‘ವಿಸಿಬಲ್’ (Visible) ಪ್ರಸಿದ್ಧ ಕಲಾಪ್ರದರ್ಶನವನ್ನು ನೋಡಿದೆ. ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಶಾಲಾವರ್ಷದ ಮೂರನೇ ಅಥವಾ ನಾಲ್ಕನೇ ಟರ್ಮ್ ಬಂತೆಂದರೆ ಅಬರಿಜಿನಲ್ ಮತ್ತು Torres Strait Islander ಜನರ ಚರಿತ್ರೆ, ಕಲೆ, ಸಂಸ್ಕೃತಿಗಳ ಬಗ್ಗೆ ಶಾಲಾಮಕ್ಕಳು ಒಂದಷ್ಟು ಕಲಿಯುತ್ತಾರೆ. ರಾಷ್ಟ್ರೀಯ ಪಠ್ಯಕ್ರಮ ನಿಯಮಾವಳಿಯಂತೆ ಎಲ್ಲಾ ಶಾಲೆಗಳು ಅದನ್ನು ಕಡ್ಡಾಯವಾಗಿ ಅನುಸರಿಸಬೇಕು. ಶಾಲೆಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಎಷ್ಟರಮಟ್ಟಿಗೆ ಅದನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಣೆಯಲ್ಲಿ ತರುತ್ತಾರೆ ಎನ್ನುವುದು ಅವರವರ ನಿರ್ಣಯಕ್ಕೆ ಬಿಟ್ಟದ್ದು. ಹಲವರಿಗೆ ಅದು ಕಾಟಾಚಾರದ, ಗೊಣಗಾಟದ ವಿಷಯವಾದರೆ ಕೆಲವರಿಗೆ ಅದು ಮುಖ್ಯವಾದ ಪಠ್ಯವಿಷಯ. ಈ ವರ್ಷ ಬ್ರಿಸ್ಬನ್ ನಗರದ ಕೆಲ ಹೈಸ್ಕೂಲ್ ಗಳು ಮಾಮೂಲಿ ಅಬರಿಜಿನಲ್ ಮತ್ತು Torres Strait Islander ಜನರ ಇತಿಹಾಸ, ಚಿತ್ರಕಲೆ, ನೃತ್ಯ ಮತ್ತು ಡ್ರೀಮ್ ಟೈಮ್ ಸ್ಟೋರೀಸ್ (Dreamtime Stories) ಗಳಷ್ಟೇ ಅಲ್ಲದೆ ‘ವಿಸಿಬಲ್’ ಕಲಾಪ್ರದರ್ಶನವನ್ನು ತಮ್ಮ ಪಠ್ಯಕ್ಕೆಂದು ಆರಿಸಿಕೊಂಡಿವೆ. ಅದರ ಬಗ್ಗೆ ಒಂದು ದೊಡ್ಡ ಅಸೈನ್ಮೆಂಟ್ ಕೂಡ ಸೃಷ್ಟಿಸಿ, ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ವೀನ್ಸ್ ಲ್ಯಾಂಡ್ ಆರ್ಟ್ ಗ್ಯಾಲರಿಗೆ ಹೋಗುವಂತೆ ತಾಕೀತು ಮಾಡಿವೆ. ಹೀಗಾಗಿ ಒಂದಷ್ಟು ಹೈಸ್ಕೂಲ್ ಹುಡುಗರ ಜೊತೆ ಹೋಗಿ ಆ ಪ್ರದರ್ಶನವನ್ನು ನೋಡುವ ಅವಕಾಶ ಬಂದಾಗ ಕುತೂಹಲವನ್ನ ಹೊತ್ತುಕೊಂಡು ನಾನೂ ಕೂಡ ಹೋದೆ.

ಟೋನಿ ಆಲ್ಬರ್ಟ್ ಮೂವತ್ತೇಳು ವರ್ಷದ ಅಪ್ಪಟ ಕ್ವೀನ್ಸ್ ಲ್ಯಾಂಡ್ ಯುವಕ. ರಾಜ್ಯದ ಉತ್ತರ ಭಾಗದ ಟೌನ್ಸ್ ವಿಲ್ಲೇ(Townsville) ನಗರಪ್ರದೇಶದ ಜಿರಾಮೇ, ಯಿಡಿಂಜಿ ಮತ್ತು ಕುಕು-ಯಾಲಂಜಿ ಜನರ ಕುಲಗಳಿಗೆ ಸೇರಿದವರು. ಬ್ರಿಸ್ಬನ್ ನಗರದಲ್ಲಿ ಓದುತ್ತಾ, ಸಮಕಾಲೀನ ಇಂಡಿಜಿನಸ್ ಆರ್ಟ್ (Indigenous Art) ವಿಷಯದಲ್ಲಿ ಪದವಿ ಗಳಿಸಿದ್ದು. ಟೋನಿ ProppaNow ಎಂಬ ಕಲಾಸಮುಚ್ಛಯದ ಸ್ಥಾಪಕರಲ್ಲಿ ಒಬ್ಬರು. ಅವರ ಜನಪ್ರಿಯ ಮತ್ತು ಗಮನ ಸೆಳೆದಿರುವ ಕಲಾ ಯೋಜನೆಗಳು ಹೆಡ್ ಹಂಟರ್, ಹೇ ಯಾ (ಹಾಯ್ ಯಾ), ವಿ ಕ್ಯಾನ್ ಬಿ ಹೀರೋಸ್ ಮತ್ತು ವಿಸಿಬಲ್. ಅವರು ಬಳಸುವ ವಸ್ತುಗಳು ಬಹು ವಿಭಿನ್ನ. ನಾವೆಲ್ಲಾ ಸಾಮಾನ್ಯವಾಗಿ ಬಿಸಾಡುವ ದಿನನಿತ್ಯದ ತರಾವರಿ ವಸ್ತುಗಳು, ಪುನರ್ಬಳಕೆಗೆಂದು ಅಲ್ಲಲ್ಲಿ ಒಟ್ಟು ಹಾಕುವ ವಸ್ತುಗಳ ಗುಡ್ಡೆ ಇವರ ಕಣ್ಣಲ್ಲಿ, ಮನಸಲ್ಲಿ, ಹೃದಯದಲ್ಲಿ ಕಲೆಯಾಗಿ ಪುನರ್ಜನ್ಮ ತಾಳುತ್ತವೆ.

ಮರ, ಲೋಹ, ಗಾಜು, ಪ್ಲಾಸ್ಟಿಕ್, ದಾರ, ಬಟ್ಟೆ ಎಂಬಂತೆ ಏನೆಲ್ಲವನ್ನು ಬಳಸಿಕೊಂಡು ತಮ್ಮ ಜನರಿಗೆ ಆಗಿರುವ ಅನ್ಯಾಯಗಳ ಇತಿಹಾಸವನ್ನು ಟೋನಿ ಹೇಳುತ್ತಾರೆ. ಈ ಬೃಹತ್ ರಾಣಿರಾಜ್ಯದಲ್ಲಿ ಚದುರಿ ಹೋಗಿರುವ ಸಮಕಾಲೀನ ಅಬರಿಜಿನಲ್ ಸಮುದಾಯಗಳನ್ನು ಸಂಪರ್ಕಿಸಿ, ಅವರಿಂದಲೇ ಅನುಭವಗಳನ್ನು ಕಲೆಹಾಕಿ ಅವಕ್ಕೆ ಕಲೆಯ ಮೂಲಕ ಮತ್ತೊಂದು ಹೊಸಜೀವವನ್ನು ತುಂಬಿ ನಗರದಲ್ಲಿ ಅವನ್ನು ತೆರೆದಿಡುತ್ತಾರೆ. ಸಮುದಾಯಗಳ ಮಕ್ಕಳಿಗೆ ಪ್ರಾಜೆಕ್ಟ್ ಅಂತ ಹೇಳಿ, ಅವರಿಂದ ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಮಾಡಿಸಿ, ಅವರ ಕನಸುಗಳನ್ನು, ಈ ಇಪ್ಪತ್ತೊಂದನೇ ಶತಮಾನದಲ್ಲಿ ಅರಳುತ್ತಿರುವ ಅವರ ಕಲ್ಪನೆಗಳನ್ನು ಕಲಾಮಾಧ್ಯಮದ ಮೂಲಕ ದಾಖಲಿಸುತ್ತಾ ಪ್ರೇಕ್ಷಕರ ಮುಂದಿಡುತ್ತಾರೆ.

ನಾವೆಲ್ಲಾ ಸಾಮಾನ್ಯವಾಗಿ ಬಿಸಾಡುವ ದಿನನಿತ್ಯದ ತರಾವರಿ ವಸ್ತುಗಳು, ಪುನರ್ಬಳಕೆಗೆಂದು ಅಲ್ಲಲ್ಲಿ ಒಟ್ಟು ಹಾಕುವ ವಸ್ತುಗಳ ಗುಡ್ಡೆ ಇವರ ಕಣ್ಣಲ್ಲಿ, ಮನಸಲ್ಲಿ, ಹೃದಯದಲ್ಲಿ ಕಲೆಯಾಗಿ ಪುನರ್ಜನ್ಮ ತಾಳುತ್ತವೆ. ಮರ, ಲೋಹ, ಗಾಜು, ಪ್ಲಾಸ್ಟಿಕ್, ದಾರ, ಬಟ್ಟೆ ಎಂಬಂತೆ ಏನೆಲ್ಲವನ್ನು ಬಳಸಿಕೊಂಡು ತಮ್ಮ ಜನರಿಗೆ ಆಗಿರುವ ಅನ್ಯಾಯಗಳ ಇತಿಹಾಸವನ್ನು ಟೋನಿ ಹೇಳುತ್ತಾರೆ.

ವಿಸಿಬಲ್ ಪ್ರದರ್ಶನದಲ್ಲಿ ಅದೆಲ್ಲದರ ನಡುವೆ ನಾವು ನಿಂತು ೩೬೦ ಡಿಗ್ರಿ ಕೋನದಲ್ಲಿ ತಿರುಗಿದರೆ ಹಂಟರ್, ಸಾರೀ, ಪೇ ಅಟೆನ್ಷನ್ ಮದರ್ …ಸ್, ಮುಂತಾದ ಅನುಭವಗಳು ನಮ್ಮನ್ನು ಅಡಿಯಿಂದ ಮುಡಿಯವರೆಗೆ ಆವರಿಸಿಕೊಂಡುಬಿಡುತ್ತವೆ. ನಾವೇ ಆ ಹಂಟರ್ ಮತ್ತು ಹಂಟೆಡ್ ಆದಂತೆ, ನಾವೇ ಪುನಃಪುನಃ ಸಾರೀ ಎಂದಂತೆ, ನಿಲ್ಲಿಸಿ, ಹಿಂಸಿಸಬೇಡಿ, ಕೊಲ್ಲಬೇಡಿ ಎಂದು ಕೂಗಿಕೊಳ್ಳುತ್ತಿರುವಂತೆ ಅನ್ನಿಸಿಬಿಡುತ್ತದೆ. ಎಲ್ಲೋ ದೂರದೂರಿನಲ್ಲಿ, ನಾವ್ಯಾರೂ ನಾಗರೀಕರು ಹೋಗದ ಔಟ್ ಬ್ಯಾಕ್ ನಲ್ಲಿ ಇದು ನಮ್ಮ ನೆಲ, ನಮ್ಮ ನೆಲೆ ಎಂದು ವಾಸಮಾಡುತ್ತಿರುವ ಅಬರಿಜಿನಲ್ ಜನರನ್ನು ಹೇಗೆ ತಲುಪಬೇಕು, ನಮ್ಮೊಡನೆ ನಗರದಲ್ಲೇ ವಾಸವಿರುವ ಅವರುಗಳನ್ನ ಹೇಗೆ ಮಾತನಾಡಿಸಬೇಕು ಎಂಬ ದ್ವಂದ್ವ ಕಾಡಲಾರಂಭಿಸುತ್ತದೆ. ವಲಸೆ ಬಂದು ಈ ನಾಡಿನಲ್ಲಿ ನೆಲೆಸಿರುವ ನಾವು ಅವರಿಗೆ ಅಪರಿಚಿತರಾ, ಅವರ ನಾಡಿನಲ್ಲಿ ಅವರನ್ನೇ ಅಪರಿಚಿತರು ಎಂಬಂತೆ ಮಾಡಿಟ್ಟಿರುವ ಈ ವ್ಯವಸ್ಥೆಯನ್ನು ನಾವು ಮತ್ತು ಅವರು ಹೇಗೆ ಕಾಣುತ್ತಿದ್ದೀವಿ ಎಂಬ ಪ್ರಶ್ನೆಗಳು ಏಳುತ್ತವೆ. ಆಗಾಗ ಪೊಲೀಸರ ಕೈಯಲ್ಲಿ, ಲಾಕಪ್ಪಿನಲ್ಲಿ ಸಾಯುವ ಅಬರಿಜಿನಲ್ ಹುಡುಗರನ್ನು, ಯುವಕರನ್ನು ‘ವಿಸಿಬಲ್’ ಮಾಡುತ್ತಿರುವ ಟೋನಿ ಮತ್ತು ಅವರ ಸಹಕಲಾವಿದರ ಪ್ರಯತ್ನಗಳು ನಮ್ಮ ಕಣ್ಣಿಗೆ ಮತ್ತಷ್ಟು ಕಾಣಲಿ ಎಂಬ ಬಯಕೆಯಾಗುತ್ತದೆ.

ಕೆಲವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಒಂದು ಯೂನಿವರ್ಸಿಟಿಯಲ್ಲಿದ್ದ ಒಬ್ಬ ಅಬರಿಜಿನಲ್ ಸಹೋದ್ಯೋಗಿ ಬಹು ತೀಕ್ಷ್ಣಮತಿ ಮತ್ತು ಹರಿತವಾದ, ಚಿಂತನಶೀಲ ವ್ಯಕ್ತಿ. ಅವರು ತಲೆ ಚಚ್ಚಿಕೊಂಡು ಹೇಳುತ್ತಿದ್ದ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ಗುಯ್ಯೆನ್ನುತ್ತವೆ. “ನಮಗೆ empowerment ಬೇಕಾಗಿಲ್ಲ. ಅವರು ನಮ್ಮನ್ನ empower ಮಾಡಲು ಹೊರಟಿದ್ದಾರೆ ಎನ್ನುವುದರ ಅರ್ಥ ನಮಗೆ ಬದುಕಲು ಬರುವುದಿಲ್ಲ ಎಂದು. ಅವರು ನಮ್ಮನ್ನು ಯಾಕಾಗಿ, ಯಾವ ರೀತಿಯಲ್ಲಿ, ಯಾರಿಗೋಸ್ಕರ empower ಮಾಡಬೇಕು ಎನ್ನುತ್ತಿದ್ದಾರೆ ಎನ್ನುವ ಪ್ರಶ್ನೆ ನಮ್ಮನ್ನು ಸದಾ ಕಾಡಬೇಕು. ನಮ್ಮ ಪ್ರತಿಯೊಬ್ಬರಲ್ಲೂ agency ಎನ್ನುವುದಿದೆ. ನಾವೆಲ್ಲರೂ ಸಬಲರೇ. ಅದನ್ನು ಅವರು ಗುರುತಿಸಬೇಕು, ನಂಬಬೇಕು ಮತ್ತು ಅದನ್ನು ಗೌರವಿಸಬೇಕು. ನಮ್ಮ ಸ್ಥಾನವನ್ನು, ಹಕ್ಕುಗಳನ್ನು ಅವರು ಪಲ್ಲಟಗೊಳಿಸಿದ್ದಾರೆ ಎನ್ನುವುದನ್ನು ಅವರು ಅರ್ಥಮಾಡಿಕೊಂಡು ಆ ನಿಟ್ಟಿನಲ್ಲಿ ಅವರೇ empowered ಆಗಬೇಕಿದೆ. We are inclusive ಎನ್ನುವ ಮಾತನ್ನು ಅವರು ನಮಗೆ ಹೇಳಿದರೆ ನಮ್ಮನ್ನು ಅವರು ಇನ್ನೂ ಎಕ್ಸ್ಕ್ಲೂಡ್ (exclude) ಮಾಡಿಯೇ ಇದ್ದಾರೆ ಎಂದರ್ಥ. ನಮ್ಮ ನೆಲದಲ್ಲಿ ಅವರ ಜೊತೆ ನಮ್ಮನ್ನು ಅವರು include ಮಾಡಿಕೊಳ್ಳುವ ಈ ಪರಿಸ್ಥಿತಿಯನ್ನು ನಾವು ಧೈರ್ಯವಾಗಿ ಪ್ರಶ್ನಿಸಬೇಕು.”

ಆ ಮಾತುಗಳ ಚಿತ್ರಣವೇ ಟೋನಿಯ ಪೇ ಅಟೆನ್ಷನ್ ಮದರ್ …ಸ್ (Pay attention mother …s) ಕಲಾಕೃತಿಯಲ್ಲಿ ಎದ್ದು ಕಾಣುತ್ತದೆ. ಆ ಕಲಾಕೃತಿಯನ್ನು ಪೂರ್ಣಗೊಳಿಸಲು ಟೋನಿ ಜೊತೆಗೆ ಇನ್ನೂ ಅನೇಕ ಮಂದಿ ಕಲಾವಿದರು ಕೈಜೋಡಿಸಿದ್ದಾರೆ. ಉತ್ತರ ಅಮೆರಿಕೆಯಲ್ಲಿ ಮೂಲನಿವಾಸಿ ಕಲಾವಿದರೊಬ್ಬರು ಏರ್ಪಡಿಸಿದ್ದ ಅದೇ ಹೆಸರಿನ ಪ್ರದರ್ಶನವನ್ನು ಟೋನಿ ಆಸ್ಟ್ರೇಲಿಯಾ ಹಿನ್ನೆಲೆಯಲ್ಲಿ ರೂಪಿಸಿದ್ದಾರೆ. ಸತತವಾಗಿ ಸಂಚರಿಸಿ ಅಬರಿಜಿನಲ್ ಕಲಾವಿದರನ್ನೊಳಗೊಂಡ ಬೃಹತ್ ತಂಡದೊಡನೆ ಕೆಲಸ ಮಾಡಿ ಬಹು ಸೂಕ್ಷ್ಮವಾಗಿ ಅವರೆಲ್ಲರ ಛಾಪನ್ನು ಆ ಕಲಾಕೃತಿಯಲ್ಲಿ ಒತ್ತಿದ್ದಾರೆ. ಅದರ ಮುಂದೆ ನಾನು ನಿಂತಿದ್ದಾಗ ನನ್ನ ಪಕ್ಕದಲ್ಲಿ ಒಬ್ಬ ತಂದೆ ಮತ್ತು ಅವರ ಹೈಸ್ಕೂಲು ಮೊದಲ ವರ್ಷ ವಯಸ್ಸಿನ ಮಗ ಇದ್ದರು. ಹುಡುಗ ಮೆಲುದನಿಯಲ್ಲಿ ಮದರ್ ಎಂದು ಓದಲಾರಂಭಿಸಿದ. ತಕ್ಷಣವೇ ಅವನ ತಂದೆ ಬಲು ಮುಜುಗರದಿಂದ ‘ಸಾಕು ನಿಲ್ಲಿಸು, ಮುಂದಕ್ಕೆ ಓದಬೇಡ. ಆ ಪದವನ್ನು ನಾವು ಬಳಸುವುದಿಲ್ಲ,’ ಎಂದರು. ಹುಡುಗ ಮುಸಿಮುಸಿ ನಕ್ಕು ‘ಮತ್ಯಾಕೆ ಈ ಕಲಾವಿದ ಆ ಪದವನ್ನ ಬಳಸಿದ್ದಾನೆ’ ಎಂದ. ‘ಅದಕ್ಕೇ ಅದನ್ನು ಆರ್ಟ್ ಎನ್ನುವುದು,’ ಎಂದು ತಂದೆಯ ಉತ್ತರ. ಹಾಲಿವುಡ್ ಸಿನಿಮಾಗಳಲ್ಲಿ ಮತ್ತು ವೈಲ್ಡ್ ವೆಸ್ಟ್ ಸಿನಿಮಾಗಳಲ್ಲಿ ಆ ಪದವನ್ನು ಯಥೇಚ್ಛವಾಗಿ ಬಳಸಿದ್ದಾರೆ. ಅಮೆರಿಕೆಯ ಜನಜೀವನದಲ್ಲಿ ಅದು ಬಹುಬಳಕೆಯ ಪದ. ಅಮೆರಿಕೆಯನ್ನು ಅನುಕರಿಸುವ ಆಸ್ಟ್ರೇಲಿಯಾದಲ್ಲಿ ಕೂಡ ಅದು ಚಾಲ್ತಿಯಲ್ಲಿದೆ. ಆದರೆ ಅದೇ ಪದವನ್ನ ಒಬ್ಬ ಮೂಲನಿವಾಸಿ ಕಲಾವಿದ ಉಪಯೋಗಿಸಿದಾಗ ಅದು ಅಸಭ್ಯವಾಗುತ್ತದೆ. Exotic Other ಯಾವತ್ತೂ ಪರದೆಯಲ್ಲಿ ಬೇರೆ ಲೋಕದ ಜೀವಿಯಂತೆ ಕಾಣಬೇಕು; ಅವರು ನಿಜ ಪ್ರಪಂಚಕ್ಕೆ ಬಂದುಬಿಟ್ಟರೆ, ನಮ್ಮನಿಮ್ಮಂತೆ ಆಗಿಬಿಟ್ಟರೆ ನಮ್ಮೆಲ್ಲರಿಗೂ ಅದೆಷ್ಟು ಕಸಿವಿಸಿ!

ವಲಸೆ ಬಂದು ಈ ನಾಡಿನಲ್ಲಿ ನೆಲೆಸಿರುವ ನಾವು ಅವರಿಗೆ ಅಪರಿಚಿತರಾ, ಅವರ ನಾಡಿನಲ್ಲಿ ಅವರನ್ನೇ ಅಪರಿಚಿತರು ಎಂಬಂತೆ ಮಾಡಿಟ್ಟಿರುವ ಈ ವ್ಯವಸ್ಥೆಯನ್ನು ನಾವು ಮತ್ತು ಅವರು ಹೇಗೆ ಕಾಣುತ್ತಿದ್ದೀವಿ ಎಂಬ ಪ್ರಶ್ನೆಗಳು ಏಳುತ್ತವೆ. ಆಗಾಗ ಪೊಲೀಸರ ಕೈಯಲ್ಲಿ, ಲಾಕಪ್ಪಿನಲ್ಲಿ ಸಾಯುವ ಅಬರಿಜಿನಲ್ ಹುಡುಗರನ್ನು, ಯುವಕರನ್ನು ‘ವಿಸಿಬಲ್’ ಮಾಡುತ್ತಿರುವ ಟೋನಿ ಮತ್ತು ಅವರ ಸಹಕಲಾವಿದರ ಪ್ರಯತ್ನಗಳು ನಮ್ಮ ಕಣ್ಣಿಗೆ ಮತ್ತಷ್ಟು ಕಾಣಲಿ ಎಂಬ ಬಯಕೆಯಾಗುತ್ತದೆ.

ಈ ಪ್ರದರ್ಶನದಲ್ಲಿ ಕಲಾವಿದರು ಜಾಗರೂಕತೆಯಿಂದ ಕುಂಚ ಹಿಡಿದು ಬಿಡಿಸಿದ ಗೆರೆಗಳು, ಚೆಲ್ಲಾಡಿದ ರಂಗುಗಳಿಲ್ಲ. ಆದರೆ ಬದುಕಿನ ಲೆಕ್ಕವಿಲ್ಲದ ಬಣ್ಣಗಳು ಹೇಳುವ ಅದೆಷ್ಟೋ, ನಮ್ಮ ನಿಲುಕಿಗೆ ಸಿಗದ ಕಥೆಗಳಿವೆ. ಅಬರಿಜಿನಲ್ ಜನರ ಬಗ್ಗೆ ಈಗಲೂ ಇರುವ ಜನಪ್ರಿಯ ವದಂತಿಗಳು, ನಂಬಿಕೆಗಳು ಎಂದರೆ ಅವರು ಕೇವಲ ಮರ್ಮಾಂಗವನ್ನು ಮಾತ್ರ ಮುಚ್ಚಿಟ್ಟುಕೊಳ್ಳುವಂತೆ ಬಟ್ಟೆ ತುಂಡು ಧರಿಸುವ, ಪ್ರಾಣಿಗಳನ್ನು ಅನುಕರಣೆ ಮಾಡುವಂಥ ನೃತ್ಯ ಮಾಡುವ, ಬೇಟೆಯಾಡಿ ಆಹಾರವನ್ನು ತಿನ್ನುವ ಅನಾಗರಿಕರು ಎಂದು. ಈ ದೇಶದಲ್ಲಿ ಅಬರಿಜಿನಲ್ ಗಂಡಸಿನ ಗಡ್ಡ, ಹೆಂಗಸಿನ ಸ್ತನಗಳು, ಕೊಳಕಾಗಿ ಕಾಣುವ ಅರೆನಗ್ನ ಮಕ್ಕಳು, ಅವರೆಲ್ಲರ ಕಡುಕಪ್ಪು, ದಪ್ಪಹೊಟ್ಟೆ ದೇಹಗಳು, ಅವರುಗಳ ಸಂಸ್ಕೃತಿಗಳಲ್ಲಿ ಅವರ ಹಿರೀಕರು ಬಳಸುತ್ತಿದ್ದ ಬೂಮರಾಂಗ್, ಈಟಿ, ಬಾಣ ಇಂಥವನ್ನು ಪದೇಪದೇ ತೋರಿಸುತ್ತಾ ನೂರಾರು ವರ್ಷಗಳ ಕಾಲ ಅವರನ್ನು ಹೀಯಾಳಿಸುವಂತೆ ಮಾಧ್ಯಮಗಳಲ್ಲಿ ಬಿಂಬಿಸುತ್ತಾ ಬಂದಿದ್ದಾರೆ. ಇಲ್ಲವೇ, ಅಬರಿಜಿನಿಗಳು ವಿಲಕ್ಷಣವೋ, ವಿನೂತನವೋ ಆದ ಬೇರೆಯೇ ಲೋಕದ ವಿಚಿತ್ರಗಳು ಎಂದು ಅವರ ಚಿತ್ರಕಲೆ, ನೃತ್ಯ, ಡಿಜಿರೀಡೂಗಳನ್ನು ಅನಗತ್ಯವಾಗಿ ವೈಭವೀಕರಿಸುತ್ತಾರೆ.

ಜನಪ್ರಿಯ ಮಾಧ್ಯಮದ stereotype ಚಿತ್ರಣವನ್ನು ಅಣಕಿಸುವ ಪ್ರಯತ್ನವೂ ಈ ಕಲಾಪ್ರದರ್ಶನದಲ್ಲಿ ಮಾಡಲಾಗಿದೆ. ಅಬರಿಜಿನಲ್ ಹೆಂಗಸರು ಮತ್ತು ಮಕ್ಕಳು ಪಾಲ್ಗೊಂಡ Superheroes ಪ್ರದರ್ಶನ ಅವರು ವೇಷಭೂಷಣಗಳನ್ನು ಧರಿಸಿ Star Wars ಚಿತ್ರದ ಪಾತ್ರಗಳನ್ನು ಮಾಡಿರುವುದು ಈಗಿನ ನವೀನಯುಗದಲ್ಲಿ ಅವರು ನಾನಾತರಹದ ಬದುಕುಗಳನ್ನು ಕಟ್ಟಿಕೊಂಡು ಸಮಾಜದ ಸೂಪರ್ ಹೀರೋಗಳಾಗಿದ್ದಾರೆ ಎನ್ನುವುದನ್ನು ಎತ್ತಿಹಿಡಿಯುತ್ತದೆ. Exotic Other ಹೆಸರಿನ ಭಾಗ ವೈಟ್ ವಾಶ್(White Wash), ಸಾರಿ (Sorry) ಮತ್ತು ಹಂಟರ್(Hunter) ಭಾಗಗಳಿಗೆ ಒಂದು ರೀತಿಯಲ್ಲಿ ಪೂರಕವಾದರೆ ಇನ್ನೊಂದು ರೀತಿಯಲ್ಲಿ ಸವಾಲು ಒಡ್ಡಿ ಸಡ್ಡು ಹೊಡೆಯುತ್ತದೆ.

ನನಗಂತೂ ಈ ಪ್ರದರ್ಶನದ ಭಾಗಗಳನ್ನು ನೋಡುತ್ತಿದ್ದಾಗ ಆ ನನ್ನ ಸಹೋದ್ಯೋಗಿಯ ಮಾತುಗಳು, ಆಲೋಚನೆಗಳು ಮತ್ತೆಮತ್ತೆ ಕಾಡಿದವು. ಆಸ್ಟ್ರೇಲಿಯಾಗೆ ಬಂದು ನೆಲೆಸಿದ ಮೊದಲ ದಶಕದಲ್ಲಿ ಅಬರಿಜಿನಲ್ ಜನರ ಬಗ್ಗೆ ಹಂತಹಂತವಾಗಿ ನನ್ನಲ್ಲೇ ಅದೆಷ್ಟು ಅಭಿಪ್ರಾಯ ಬದಲಾವಣೆಯಾಗಿದೆ ಎಂದೆನಿಸಿತು. ಮೊದಲಲ್ಲಿದ್ದ ನನ್ನ ಅಲ್ಪಜ್ಞಾನ, ನಂತರದ ಕರುಣೆ, ಅವರಿಗೆ ಆದ ಮತ್ತು ಆಗುತ್ತಿರುವ ಅನ್ಯಾಯಗಳ ಬಗ್ಗೆ ನನ್ನಲ್ಲಿ ಉಂಟಾದ ಕೋಪ, ಅದಾದ ನಂತರ ಎದುರಾದ ಕಲ್ಚರಲ್ ಇಂಟರ್ ಫೇಸ್ (cultural interface) ಗ್ರಹಿಕೆ, ಬಹಿರಂಗವಾಗಿ ಅವರಿಗೆ ಕೊಟ್ಟ ಬೆಂಬಲ… ಇವೆಲ್ಲವೂ ಟೋನಿ ಮತ್ತವರ ತಂಡದ ಕಲಾಕೃತಿಗಳಲ್ಲಿ ಪ್ರತ್ಯಕ್ಷವಾಗಿ ಈ ಪ್ರದರ್ಶನ ಒಂದು ರೀತಿಯಲ್ಲಿ ನನ್ನ ಆಂತರಿಕ ನಿಲುವುಗಳ, ಬೆಳವಣಿಗೆಯ, ಪಕ್ವತೆಯ ಹಂತಗಳನ್ನು ಗುರುತಿಸುವ ಮೈಲಿಗಲ್ಲುಗಳ ಪಯಣ ಎಂಬಂತೆ ಭಾಸವಾಯಿತು.