”ಹತ್ತನೆ ಶತಮಾನ ನಮಗೆ ಮಹತ್ವವಾದ ಉನ್ನತವಾದ ಕಾಲ ಅಂದ್ರೆ ಸಂಸ್ಕೃತ ಸಾಹಿತ್ಯದ ಇಳಿಗಾಲದಲ್ಲಿ ದೇಶಭಾಷೆಗಳ ಉಚ್ಛ್ರಾಯಕಾಲ. ಯಾಕಂದ್ರೆ ದೇಶಭಾಷೆಗಳೆಲ್ಲ ಸಂಸ್ಕೃತದ ಹಿಡಿತವನ್ನು ನಿಧಾನವಾಗಿ ಕಳ್ಕೊಳ್ತಾ ತಮ್ಮ ಅನನ್ಯತೆಯನ್ನು ರೂಪಿಸಿಕೊಳ್ಳೊದಕ್ಕೆ ಪ್ರಯತ್ನಿಸುತ್ತಿದ್ದ ಕಾಲ. ಅಲ್ಲಿ ಇನ್ನೂ ಚೆನ್ನಾಗಿ ಗೊತ್ತಾಗುತ್ತೆ, ಹನ್ನೆರಡನೆ ಶತಮಾನದ ವಚನಕಾರರನ್ನು ನೋಡಿದ್ರೆ, ಹರಿಹರನನ್ನ ನೋಡಿದ್ರೆ ಅದು ಇನ್ನೂ ನಿಚ್ಚಳವಾದ ಕಾಲವನ್ನ ಒಂದುವರೆ-ಎರಡನೆ ಶತಮಾನದಲ್ಲಿ ಕಾಣಿಸಿಕೊಳ್ಳುತ್ತೆ. ಹೀಗೆ ಮೊದಲಾಗಿ ಕನ್ನಡಕ್ಕೆ ತನ್ನದೆಯಾದ ಅನನ್ಯ ಕಾವ್ಯ ಭಾಷೆಯನ್ನು ಕಟ್ಟಿದ್ದೇ ಪಂಪನ ವಿಶಿಷ್ಟತೆ”
ಕನ್ನಡದ ಕಾವ್ಯ ಗಾರುಡಿಗ ಕಿ.ರಂ.ನಾಗರಾಜ ಅವರ ಜೊತೆ, ವಿಮರ್ಶಕ ಪ್ರೊಫೆಸರ್ ಓ.ಎಲ್.ನಾಗಭೂಷಣಸ್ವಾಮಿ ಅವರು ಮೈಸೂರಿನ ರಾಮು ಮಾಮ ಮನೆಯಲ್ಲಿ೨೦೧೦ರ ಜೂನ್ ೨೨ ರಂದು ನಡೆಸಿದ ಒಂದು ಅಪರೂಪದ ಸಂದರ್ಶನ.

 

ಓ.ಎಲ್.ಎನ್ : ಯಾರಾದ್ರೂ ವಿದ್ಯಾರ್ಥಿಗಳು ಸಾವಿರವರ್ಷದ ಹಿಂದೆ ಇದ್ದ ಪಂಪ ನಮಗೆ ಹೇಗೆ ಈಗ ಸಮಕಾಲೀನ ಆಗ್ತಾನೆ ಅಂತ ಕೇಳಿದರೆ ಅಧ್ಯಾಪಕರಾಗಿ ಏನು ಉತ್ತರ ಕೊಡ್ತೀರಿ?

ಕಿ.ರಂ : ಇವರೇ ಸಮಕಾಲೀನ ಅಂತ ಜನರಲೈಸ್ ಮಾಡೋದಲ್ಲ. ಈಗ ಪಂಪನಲ್ಲಿ ಉದಾಹರಣೆಗೆ ಜಾತಿಯ ಪ್ರಶ್ನೆ. ಪಂಪ ಎದುರಿಸಿರೊ ಜಾತಿಯ ಪ್ರಶ್ನೆ. ಯಾತರದ್ದು? ಮತ್ತು ಇವತ್ತು ನಮ್ಮ ಜಾತಿಯ ಪ್ರಶ್ನೆ ಏನು? ಇದನ್ನ ಎದುರುಬದರು ಮಾಡುವುದರ ಮೂಲಕ ಒಂದು ರೀತಿ ಪಂಪನ ನೆಲೆಯನ್ನು ನಾವು ಇವತ್ತು ಗ್ರಹಿಸಿಕೊಳ್ಳೋಕೆ ಸಾಧ್ಯ ಇದೆ. ಉದಾಹರಣೆಗೆ ವಿಕ್ರಮಾರ್ಜುನೇಯ ವಿಜಯದ ಯುದ್ಧ ಮತ್ತು ಆದಿಪುರಾಣದಲ್ಲಿನ ಯುದ್ಧವನ್ನು ತೆಗೆದುಕೊಳ್ಳೋಣ. ಈಗ ಉದಾಹರಣೆಗೆ ದುರ್ಯೋಧನ. ನಾನು ಯಾವ ಕಾರಣದಿಂದಲೂ ಕೂಡ ರಾಜ್ಯವನ್ನ ಹಾಗೆ ಬಿಟ್ಟುಕೊಡುವುದಿಲ್ಲ ಎನ್ನುವ ಛಲದಿಂದ ಭೂಮಿಗಾಗಿ ಆತುಕೊಳ್ಳುವ ದುರ್ಯೋಧನ. ಹೀಗಾಗಿ ಹತ್ತನೆ ಶತಮಾನದ ಯುದ್ಧ ನಮ್ಮ ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೂಡ ಇರುವ ಯುದ್ಧದ ನೆಲೆಯೊಂದಿಗೆ ಎದುರಾಗಿಸಿದ್ರೆ ಏನು ಕಾಣಿಸುತ್ತೆ? ಅದು ಒಂದು ಸಾಮ್ರಾಜ್ಯದ ವಿಸ್ತರಣೆಯ ಪ್ರಶ್ನೆ. ಇವತ್ತು ಪ್ರಬಲ ರಾಷ್ಟ್ರಗಳು ತಮ್ಮ ಎಲ್ಲ ರೀತಿಯ ಆರ್ಥಿಕ ಕೇಂದ್ರವನ್ನು ವಿಸ್ತರಿಸಿಕೊಳ್ಳುತ್ತಿರೊ ಕ್ರಮ ಏನು? ಈ ಎರಡಕ್ಕೂ ಹ್ಯಾಗೆ ಒಳ ಸಂಬಂಧ ಏರ್ಪಡುತ್ತೆ? ಈಗ ಭೋಗ ಆಧುನಿಕ ಭೋಗದ ಕಲ್ಪನೆ ಮತ್ತು ಪಂಪ ಹೇಳುವ ಭೋಗದ ಕಲ್ಪನೆಗೆ ಇರುವಂತ ಸಂಬಂಧ ಈವಾಗ ಅಷ್ಟೆಲ್ಲಾ ಭೋಗದ ತುತ್ತತುದಿಯಲ್ಲಿ ಇದ್ದಂತಹ ಆದಿನಾಥ ಅವೆಲ್ಲವನ್ನೂ ನಿರಾಕರಿಸುವ ನೆಲೆ ಹೇಗೆ? ಅಥವಾ ಬಾಹುಬಲಿ ಅದನ್ನ ನಿರಾಕರಿಸ್ತಾನಲ್ಲ ಅದು ಹ್ಯಾಗೆ?

ಓ.ಎಲ್.ಎನ್ : ಆ ನಿರಾಕರಣಿ ಒಂದೊಂದು ಜನ್ಮದಲ್ಲಿ ಒಂದೊಂಥರಾನೂ ಇದೆ.
ಕಿರಂ : ಬೇರೆ ಬೇರೆ ಇದೆ. ಭೋಗದ ಎಷ್ಟೆಷ್ಟೋ ಮಾದರಿಗಳಿವೆ. ಆದಿಪುರಾಣದಲ್ಲಿ ಬೇರೆಬೇರೆಯಾದ ಭೋಗದ ಮಾದರಿ ಇದೆ. ಅಥವಾ ಸಾವಿನ ಪ್ರಶ್ನೆಯ ಅನೇಕ ನೆಲೆಗಳು.

ಓ.ಎಲ್.ಎನ್ : ಹೌದು, ಇವು ಕಾಂಟೆಪ್ರರಿ ಪ್ರಶ್ನೆಗಳೂ ಹೌದು.

ಕಿ.ರಂ. : ಹೌದು. ಅಥವಾ ಅದಕ್ಕಿಂತ ಪ್ರಭುತ್ವದ ಪ್ರಶ್ನೆ ಬಹಳ ಮುಖ್ಯವಾಗಿರುವಂಥದ್ದು. ಆ ಪ್ರಭುತ್ವ ಅದರ ನಿಜವಾದ ನೇರವಾದಂತಹ ರಾಜಕೀಯವಾದಂತ ಪ್ರಭುತ್ವದ ಪ್ರಶ್ನೆ. ಅಂದ್ರೆ ಅಧಿಕಾರದ ಪ್ರಶ್ನೆ. ಅಥವಾ ಧರ್ಮ ಈಗ ಧರ್ಮ ಸಮಕಾಲೀನವಾದ ಬೇರೆಬೇರೆ ಅವತಾರಗಳು ಅಂತಹ ಪ್ರಶ್ನೆಗೆ ಪಂಪನ ಕಾವ್ಯ ಏನನ್ನು ಕೊಡ್ತಾ ಇದೆ ನಮಗೆ? ಪಂಪನನ್ನ ಓದುತ್ತಾ ಇರುವಾಗ ನಮಗೆ ಹೊಳೆಯಬೇಕಿರುವುದು ಆಧುನಿಕ ಕಾಂಟೆಕ್ಟ್ಸೇ. ಅದರಿಂದ ನಾನು ನನ್ನ ಸಮಕಾಲೀನವನ್ನೇ ಓದುತ್ತೀನಿ. ನಾನು ಎದುರಾಗ್ತಿರೊ ಅನುಭವಗಳಿಗೇನೆ ಆ ಕಾವ್ಯ ಪ್ರತಿಸ್ಪಂದಿಸ್ತಾ ಇದೆ ಹೊರತು ಪಂಪನ ಕಾವ್ಯ ಕೊಡ್ತಾಯಿರೊ ಅನುಭವವೇ ಬೇರೆ ನಾನು ಬದುಕ್ತಿರೊ ಬದುಕಿನ ಕ್ರಮನೇ ಬೇರೆ ಅಂತ ನಾನು ತಿಳಿದಿಲ್ಲ. ಅಥವಾ ವಿಕ್ರಮಾರ್ಜುನೇಯ ವಿಜಯದಲ್ಲಿ ಹಿಂಸೆಯ ಮಾದರಿಗಳು ಹೇಗಿದೆ? ಅದು ಇಡೀ ಕಾವ್ಯವೇ ವಧೆ. ಅಸಂಖ್ಯಾ ವಧೆಗಳು ಕೂಡಿವೆ. ಅಲ್ಲಿ ನೀವು ಆಧುನಿಕ ಹಿಂಸೆಯ ಅಸಂಖ್ಯಾ ಸ್ವರೂಪಗಳ ಎದುರುಗಡೆ ಅದನ್ನು ಇಟ್ಟರೆ ಆಗ ಹ್ಯಾಗೆ ವಿಕ್ರಮಾರ್ಜುನೇಯ ವಿಜಯ ಹಿಂಸಾರಭಸಮತಿಯ ಬೇರೆ ಬೇರೆಯಾದ ಪ್ಯಾಟ್ರರ್ನ್ ಗಳನ್ನು ಹೇಳುತ್ತೆ ಅಂತ ತಿಳಿಯುತ್ತೆ. ಅಥವಾ ಆಧುನಿಕ ಕಾಲದಲ್ಲಿ ಹೇಗೆ ಭೋಗದ ವಿಸ್ತರಣಿ ಬೇರೆ ಬೇರೆ ಮಟ್ಟುಗಳಲ್ಲಿವೆ ಅಂತ ತಿಳಿಯುತ್ತೆ.

ನಾವು ಎಲ್ಲಾ ಕವಿಗಳಿಂದ ತಿಳಿಯಬೇಕಾದದ್ದೆ ಈ ತೆರನಾದ ವಿಷಯಗಳು. ಏಕಂದ್ರೆ ಓದುವವನು ತನ್ನ ಸಮಕಾಲೀನವಾದ ಅನುಭವದಿಂದ ಓದುತ್ತಾ ಇದ್ದಾನೆ. ಕೃತಿಯೇ ಒಂದು ಅನುಭವ ಕೊಡ್ತಾಯಿದೆ. ಒಂದು ಸಂಸ್ಕೃತಿಯಲ್ಲಿಯೂ ಅಷ್ಟೇ. ಈ ಎಲ್ಲಾ ಅನುಭೂತಿಗಳು ಇರುವಂತವರೆ ಅದರ ಓದುಗರು ಅಥವಾ ಕೇಳುಗರು. ಈಗ ಮಹಾಭಾರತವನ್ನೇ ತಗೊಳ್ಳಿ ವ್ಯಾಸರ ಭಾರತದೊಳಗಡೆ ಅಷ್ಟೊಂದು ದೊಡ್ಡ ಲೋಕ ಇದೆಯಲ್ಲ!? ಆ ಲೋಕದಿಂದ ಹೊರಡುವುದೇನು? ದುರ್ಯೋಧನನ ಪಾತ್ರ ಬಿಡಿ. ದುರ್ಯೋದನನ ಆ ನಿಜವಾದ ಪಾತ್ರದಿಂದ ಹೊರಹೊಮ್ಮತಕ್ಕ ಅಂಶಗಳೇನು? ನೀಲಾಂಜನೆ ಬಿಡಿ. ನಿಲಾಂಜನೆಯಿಂದ ಪ್ರತೀತವಾಗ್ತಿರೋ ಅನುಭೂತಿಗಳೇನು? ಆದಿನಾಥನಿಂದ ಪ್ರತೀತವಾಗ್ತಿರೊ ಅನುಭೂತಿಗಳೇನು? ಹೀಗೆ ನಾವು ಒಂದು ಕೃತಿಯನ್ನ ಎಷ್ಟೇ ಪಾತ್ರಕೇಂದ್ರವಾಗಿ ನೋಡಿದ್ರೂ ಕೂಡ ಆಯಾ ಪಾತ್ರಗಳು ಅಸಂಖ್ಯಾವಾದ ಈ ರೀತಿಯ ಎಥಿಕಲ್ ಲೋಕವನ್ನ ಅಥವಾ ಲೋಕದ ಬೇರೆ ಬೇರೆ ನೆಲೆಗಳನ್ನು ಉತ್ಪಾದನೆ ಮಾಡುತ್ತಿವೆ.

ಓ.ಎಲ್.ಎನ್ : ನೀವು ಹೇಳ್ತಿರಲ್ಲ ಸಾಹಿತ್ಯದ ಓದಿಗೆ ಇದೇ ಕಾಲ ಅಂತಿರೋಲ್ಲ… ಓದು ಯಾವಾಗಲೂ ಸಮಕಾಲೀನವೆ ಅಂತ….

ಕಿ.ರಂ: ಮ್ಯಾಕ್ ಬೆತ್ ಏನನ್ನ ರೆಪ್ರೆಸೆಂಟ್ ಮಾಡ್ತಾನೆ? ಲೋಕದಲ್ಲಿ ಇರುವಂತ ಒಂದು ತೀವ್ರವಾದ ನೆಲೆಯನ್ನ ರೆಪ್ರೆಸೆಂಟ್ ಮಾಡ್ತಾಯಿದ್ದಾನೆ. ಒಂದೇ ಮಾಡ್ತಿಲ್ಲ ಹಾಗೂ ಮಾಡ್ತಾಯಿದ್ದಾನೆ. ದುರ್ಯೋಧನ ಯಾವುದೊ ಒಂದನ್ನ ರೆಪ್ರೆಸೆಂಟ್ ಮಾಡ್ತಾಯಿಲ್ಲ. ದುರ್ಯೋಧನನ ಮೂಲಕ ಉತ್ಪನ್ನವಾಗ್ತಿರೋದು ಅಸಂಖ್ಯ ವಿಷಯಗಳಿವೆ. ಈಗ ಕರ್ಣನಿಂದ ಏನೇನು ಉತ್ಪನ್ನ ಆಗುತ್ತೆ ಅಂತ ಹೇಳೋಣ? ಜಾತಿಯ ಪ್ರಶ್ನೆ ಇದೆ, ವಂಶದ ಪ್ರಶ್ನೆ ಇದೆ. ಅಲ್ಲವೇ?

ಓ.ಎಲ್.ಎನ್ : ಸ್ನೇಹದ ಪ್ರಶ್ನೆ ಇದೆ, ತಾಯಿ-ಮಕ್ಕಳ ಸಂಬಂಧದ ಪ್ರಶ್ನೆ ಇದೆ.

ಫೋಟೋಗಳು: ನೇತ್ರರಾಜು

ಕಿ.ರಂ. : ಹೌದು. ಅಥವಾ ಜನ್ಮರಹಸ್ಯದ ಪ್ರಶ್ನೆ ಇದೆ. ಈ ಪ್ರಶ್ನೆಗಳೆಲ್ಲ ಎಲ್ಲಾ ಕಾಲದಲ್ಲೂ ಮನುಷ್ಯಲೋಕ ಬೇರೆ ಬೇರೆ ರೀತಿಯಲ್ಲಿ ಎದುರಾಗ್ತಿರೊ ಅನುಭೂತಿಗಳೇ ಆಗಿವೆ ಮತ್ತು ಅದಕ್ಕಿಂತ ಭಿನ್ನವಾಗಿಯೂ ಇದೆ. ಯಾಕೆ ಇಡೀ ಭಾರತದ ನೋಟಕರು ರಾಮಾಯಣವನ್ನ ಹಾಗೆ ನೋಡಿದ್ರು? ಅಥವಾ ರಾಮನ ಕಥೆ ಅನ್ನುವುದು ಕೇವಲ ವಾಲ್ಮಿಕಿಯ ಕಥೆಯೊ ಅಥವಾ ನಮ್ಮ ಸಮಕಾಲೀನ ರಾಜಕಾರಣದ ಕಥೆಯೊ? ರಾಮ ಇವತ್ತು ವಾಲ್ಮೀಕಿ ಕಟ್ಟಿಕೊಟ್ಟ ಮಿತ್ ಆಗಿದೆಯೊ ಅಥವಾ ನಮ್ಮ ಆಧುನಿಕ ಸಂದರ್ಭದಲ್ಲಿ ಅದು ಮೂರು ಮಹಾಚುನಾವಣೆಗೆ ದ್ರವ್ಯ ಆಗಿದೆ. ಅದಕ್ಕೆ ಏನು ಮಾಡೋಣ ನಾವು? ಈಗ ಅಯೋಧ್ಯೆ ಎನ್ನುವುದು ವಾಲ್ಮೀಕಿ ರಾಮಾಯಣದ ಅಯೋಧ್ಯೆಯೂ ಅಲ್ಲ ಅಥವಾ ಕುವೆಂಪು ರಾಮಾಯಣದಲ್ಲಿರೊ ಅಯೋಧ್ಯೆಯೂ ಅಲ್ಲ. ಅದು ಬುಲ್ಡೋಜರ್ಗೊಳಿಸಿದ ಒಂದು ಕಲ್ಪನೆ. ಎಲ್ಲಾ ಸುಳ್ಳುಗಳನ್ನು ಕಿತ್ತಾಕಿರೋ ಕಲ್ಪನೆ. ಅದು ಒಂದು ಕಾಂಟೆಂಪ್ರರಿ ಪೊಲೈಟಿಕಲ್ ಮಿಥ್ ಆಗಿ ಕೂತ್ಕೊಂಡುಬಿಟ್ಟಿದೆ. ನಾವು ಮಾತ್ರ ಪಂಪನನ್ನ ಹತ್ತನೆ ಶತಮಾನದ ಕವಿಯಾಗಿಯೇ ನೋಡ್ತಾ ಇದ್ದೀವಿ! ನಮ್ಮ ಎದುರುಗಡೆ ಇರುವಂತಹ ಈ ವೈಭವದ ಜಗತ್ತಿದೆಯಲ್ಲ ದೊಡ್ಡ ವೈಭವದ ಭೋಗದ ಜಗತ್ತದು. ಅದನ್ನೇ ಮನುಷ್ಯರು ಎದುರಿಸ್ತಾಇರೋದು. ನಾವು ಈ ಭೋಗದ ಜಗತ್ತೇ ಬೇರೆ ಆದಿಪುರಾಣ ಹೇಳ್ತಾಯಿರೊ ಭೋಗದ ಜಗತ್ತೇ ಬೇರೆ ಅಂತ ಯಾಕೆ ತಿಳಿದಿದ್ದೀವಿ? ಕೇವಲ ಸಾಹಿತ್ಯಿಕ ಓದಿನಿಂದ ಆ ರೀತಿಯಾದ ತಿಳುವಳಿಕೆ ಇದ್ದೀತೆ ಹೊರತು ಒಂದು ಸಾಂಸ್ಕೃತಿಕ ಓದಿನಿಂದ ಸಾಧ್ಯವಾಗಲ್ಲ. ನೋಡಿ ಎರಡು ಕಡೆಯಿಂದ ಅಪರಿಮಿತ ರಾಜ್ಯಾಧಿಕಾರಕ್ಕೆ ನಡೆಯೊ ಹೋರಾಟದ ಕಥೆಯಿದೆ ಅಲ್ಲಿ. ಆದಿಪುರಾಣ ಮತ್ತು ವಿಕ್ರಮಾರ್ಜುನೇಯ ವಿಜಯದಲ್ಲಿ ದಾಯಾದಿ ಕಲಹ ಇರುವಂತೆ ನಾವು ಇವತ್ತು ಪಕ್ಷ ಪಕ್ಷಗಳ ಕಲಹ ನೋಡ್ತಿದ್ದೀವಿ. ಒಂದೇ ಪಕ್ಷದ ನೂರೆಂಟು ಕವಲುಗಳು, ಒಂದೇ ವಂಶದ ಕಾರ್ಯಕ್ರಮಗಳು. ಇದರಿಂದ ಯಾವುದನ್ನ ಕ್ಲಾಸಿಕ್ಸ್ ಅಂತ ಕರೀಲಾಗಿದೆ ಅವುಗಳ ಜತೆಯಲ್ಲಿ ಅನುಸಂಧಾನೆ ಹೀಗೆ ಆಗ್ತಾಯಿರತ್ತೆ ಅನ್ನೋದು ನನ್ನ ಅನಿಸಿಕೆ. ಶೇಕ್ಸ್ಪಿಯರ್ ಬಗೆಗೆ ಬೇಕಾದಷ್ಟು ಲಿಬರ್ಟಿಸ್ ತಗೊಂಡು ಬಹಳ ಕಾಂಟೆಂಪ್ರರಿಯಾದ ಪ್ರೊಡಕ್ಷನ್ ಮಾಡ್ತಿದಾರೆ.

ಓ.ಎಲ್.ಎನ್ : ಅಲ್ಲ ಸ್ವತಃ ಶೇಕ್ಸಪಿಯರ್ ನೆ ಆ ಕೆಲಸ ಮಾಡಿದ್ದಾನಲ್ಲ!

ಕಿ.ರಂ : ಹೌದು ಶೇಕ್ಸ್ ಪಿಯರ್ ಕೂಡ ಮಾಡಿದಾನೆ. ಅದನ್ನ ಇವತ್ತಿನ ಇಪ್ಪತ್ತು-ಇಪ್ಪತ್ತೊಂದನೇ ಶತಮಾನದ ಕೇಳುಗರಿಗೆ, ಓದುಗರಿಗೆ ಬೇಕಾಗೊ ರೀತಿಯಲ್ಲಿ ಅನುಸಂಧಾನ ಮಾಡ್ತಿದ್ದಾರೆ. ಹಾಗೆ ಹೇಳುವಾಗ ಅದರಲ್ಲಿ ಸ್ಕಾಲರ್ಲಿಯಾದ ಅಧ್ಯಯನಗಳು ನಡಿತಾ ಇವೆ.

ಓ.ಎಲ್.ಎನ್ : ಹೌದು ಭಾಷಿಕವಾದ ಅಧ್ಯಯನಗಳು ನಡೀತಾ ಇದೆ.

ಕಿ.ರಂ. : ಮತ್ತೆ ಈ ಮಿತ್ ಗಳ ಬೇರೆಬೇರೆಯಾದ ಅಧ್ಯಯನ ಹೊಸ ಓದಿನ ಸಾಧ್ಯತೆಯನ್ನ ಕಂಡುಕೊಳ್ಳುವ ಕ್ರಮಗಳು. ಯಾಕಂದ್ರೆ ನಾವು ನಮ್ಮ ಓದುಗನ ಅನುಭವದ ಕೋಶದೊಂದಿಗೆ ನಮ್ಮ ಯಾವುದೇ ಕೃತಿಯನ್ನ ಎಡತಾಗದೇ ಇದ್ರೆ ಆ ರೀತಿಯಾದಂತಹ ಸಿಗ್ನಿಫಿಕೆಂಟ್ ಎನ್ನಬಹುದಾದ ಸಮಕಾಲೀನವಾದಂತ ಅನುಭವವನ್ನ ನಮ್ಮ ಕೃತಿಯಿಂದ ಪಡೆಯಲಾಗಲ್ಲ. ಬೇಕಾದ್ರೆ ಇದನ್ನ ಜಾನಪದ ಸಾಹಿತ್ಯಕ್ಕೂ ಅನ್ವಯಿಸಬಹುದು, ಮಂಟೇಸ್ವಾಮಿ ಕಾವ್ಯಕ್ಕೂ ಸದ ಇದು ಅನ್ವಯವಾಗುತ್ತೆ.

ಓ.ಎಲ್.ಎನ್ : ಓದಬೇಕಾದದ್ದೆ ಹಾಗೆ.

ರಾಮನ ಕಥೆ ಅನ್ನುವುದು ಕೇವಲ ವಾಲ್ಮಿಕಿಯ ಕಥೆಯೊ ಅಥವಾ ನಮ್ಮ ಸಮಕಾಲೀನ ರಾಜಕಾರಣದ ಕಥೆಯೊ? ರಾಮ ಇವತ್ತು ವಾಲ್ಮೀಕಿ ಕಟ್ಟಿಕೊಟ್ಟ ಮಿತ್ ಆಗಿದೆಯೊ ಅಥವಾ ನಮ್ಮ ಆಧುನಿಕ ಸಂದರ್ಭದಲ್ಲಿ ಅದು ಮೂರು ಮಹಾಚುನಾವಣೆಗೆ ದ್ರವ್ಯ ಆಗಿದೆ. ಅದಕ್ಕೆ ಏನು ಮಾಡೋಣ ನಾವು? ಈಗ ಅಯೋಧ್ಯೆ ಎನ್ನುವುದು ವಾಲ್ಮೀಕಿ ರಾಮಾಯಣದ ಅಯೋಧ್ಯೆಯೂ ಅಲ್ಲ ಅಥವಾ ಕುವೆಂಪು ರಾಮಾಯಣದಲ್ಲಿರೊ ಅಯೋಧ್ಯೆಯೂ ಅಲ್ಲ. ಅದು ಬುಲ್ಡೋಜರ್ಗೊಳಿಸಿದ ಒಂದು ಕಲ್ಪನೆ.

ಕಿ.ರಂ : ಈಗ ನಮ್ಮ ಹೊರಗಡೆ ಪ್ರಪಂಚವೇ ಬೇರೆ ನಮ್ಮ ಕ್ಲಾಸ್ ರೂಂನೇ ಬೇರೆ. ಕ್ಲಾಸ್ ರೂಮಿನಲ್ಲಿ ನಾವು ಗ್ರಹಿಸಬೇಕಾಗಿರೊ ಕ್ರಮವೇ ಬೇರೆ. ಶೇಕ್ಸ್ ಪಿಯರ್ ಕೂಡ ಮಕ್ಕಳ ಕತೆಯಿಂದ ಹಿಡಿದು ಕಾರ್ಟೂನ್ ಜಗತ್ತಿಗೆ ಎಷ್ಟೆಷ್ಟು ವಿಸ್ತಾರಗೊಂಡಿದೆ. ಆದ್ರೆ ನಾವಿನ್ನೂ ಹೀಗೆ ಹೇಳೋದು ಸರಿನಾ? ಅವರು ಹಾಗಂತ ಹೇಳ್ತಾ ಇದ್ದಾರೆ? ನಾವು ಹಳಗನ್ನಡವನ್ನಾಗಲಿ, ನಡುಗನ್ನಡವನ್ನಾಗಲಿ ಈ ತರಹನೇ ಓದುತ್ತಾ ಹೋದ ಪಕ್ಷದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಕೆಲವರು ಮಾತ್ರ ಅದನ್ನ ವ್ಯಾಖ್ಯಾನ ಮಾಡುವಂತಹ, ಅವರ ಮೂಲಕಾನೆ ಈ ಕೃತಿನಾ ತಿಳಿಯುವಂತಾಗುತ್ತೆ. ನಾವು ಜನರಾಡುವ ಭಾಷೆಯಾಗಿರುವ ಕನ್ನಡ ಇದೆಯಲ್ಲ ಆ ಕನ್ನಡ ಭಾಷೆಯ ಸಾಹಿತ್ಯವನ್ನು ಒಂದು ರೀತಿ ಪಂಡಿತರಿಂದ ನಿರ್ವಚಿಸಲು ಸಾಧ್ಯವಾಗುವ ಕೃತಿಗಳಿವು. ಯಾರಪ್ಪ ಇದನ್ನು ವಿವರಿಸಬೇಕು? ನೋಡಿ ಅವರು ವಿವರಿಸುತ್ತಾರೆ, ನೋಡಿ ಇವರೂ ವಿವರಿಸುತ್ತಾರೆ ಅನ್ನೋ ಮಟ್ಟಿಗೆ ತರ್ತೀವಿ. ಕೆಲವರು ಮಾತ್ರ ಎಕ್ಸ್ಪರ್ಟ್ಸ್ ಇದ್ದಾರೆ. ಸಾಮಾನ್ಯರಿಗೆ ಸಾಧ್ಯ ಇಲ್ಲ ಅಂತ ಅವರು ಇದನ್ನ ವಿವರಿಸಬಲ್ಲರು. ಕನ್ನಡದ ಮಹತ್ವ ಕೃತಿಗಳನ್ನ ದುರೂಪ ಮಾಡುವ ಪ್ರಯತ್ನ ಇದು. ಅಧ್ಯಯನ ಮಾಡೋರು? ತಿಳಿದಿರೋರು? ಅದು ಆ ಒಂದು ತಲೆಮಾರಿಗೇ ಆಗೊಯ್ತು. ಈ ರೀತಿಯಾದ ಧೋರಣಿ ಯಾವ ಕಾರಣದಿಂದ ಹುಟ್ಟಿರಬಹುದು.

ನಮ್ಮ ಶಿಕ್ಷಣ ಕ್ರಮದಿಂದ ಈ ರೀತಿಯಾದಂಥ ಧೋರಣೆ ಹುಟ್ಟಿದೆಯೊ? ಈಗಾಗಲೆ ನಾವು ವಿಚಾರ ಮಾಡಿದ್ದೀವಿ ಅದನ್ನ ಮೀರಿ ಏನೂ ಮಾತನಾಡೋಕೆ ಸಾಧ್ಯವಿಲ್ಲ ಅನ್ನುವ ರೀತಿಯ ಒಂದು ಸಿದ್ಧ ಅಧ್ಯಯನದ ಮಾದರಿಗಳು ಅವುಗಳೆಲ್ಲ ಹಾಗೆ ಸ್ಥಾಪಿತವಾಗಿರೋದಕ್ಕೆ ಕಾರಣವೊ? ನಮ್ಮ ಕವಿಗಳಿಗೆಲ್ಲ ಇಂತ ಸ್ಥಿತಿ ಯಾಕೆ ಏರ್ಪಟ್ಟಿದೆ?

ಓ.ಎಲ್.ಎನ್ : ಒಂಥರಾ ಟೇಕನ್ ಫಾರ್ ಗ್ರ್ಯಾಂಟೆಟ್ ಅನ್ನೋ ಥರಾ ಅಲ್ಲವೇ…

ಕಿ.ರಂ. : ಹಾಂ. ಈಗಾಗಲೆ ಹೇಳಿರೋದಕ್ಕಿಂತ ಮೀರಿ ಹೇಳೋದಕ್ಕೆ ಆಗ್ತದೆಯೆ? ಎಲ್ಲವನ್ನೂ ಹೇಳಾಗಿದೆ. ಓ.ಎಲ್.ನಾಗಭೂಷಣ ಸ್ವಾಮಿ ಏನಾದ್ರೂ ವಿಶೇಷವಾಗಿ ಹೇಳಿದ್ರು ಕೂಡ ಈಗಾಗಲೆ ಇರೋ ವಿಚಾರದ ಬಗ್ಗೆ ಅವರಿಂತ ಸಲ್ಲೋ ಮಾತಾಡ್ತಾರೆ.

ಓ.ಎಲ್.ಎನ್ : ಇಲ್ಲಿ ತಿಳಿಬೇಕಾದದ್ದು ಏನೂ ಇಲ್ಲ.

ಕಿ.ರಂ : ತಿಳೀಬೇಕಾದ್ದು ಏನೂ ಇಲ್ಲ ಅಥವಾ ತಿಳಿದು ಬೇರೆ ರೀತಿ ಏನೇ ಹೇಳಿದ್ರು ಕೂಡ ಅದನ್ನ ಬಹಳ ಓಲ್ಡ್ ಅಂತ ನೋಡಲಾಗ್ತಾ ಇದೆ.

ಓ.ಎಲ್.ಎನ್ : ಅಂದ್ರೆ ಒಂದು ಟೆಕ್ಸ್ಟ್ ಅನ್ನು ತಾವೆ ಅದರ ಒಳಹೋಗಿ ಅನುಭವಿಸಿ ಹೇಳೋತರದ್ದು ಕಡಿಮೆಯಾಗ್ಬಿಟ್ಟಿದೆ.

ಕಿ.ರಂ : ಅದನ್ನೆ ಹೇಳ್ತಾ ಇರೋದು. ಆಮೇಲೆ ಇನ್ನೂ ಒಂದಾಗಿದೆ. ಈ ಹಳಗನ್ನಡ, ನಡುಗನ್ನಡ ಎನ್ನುವುದನ್ನ ಒಂದು ರೀತಿ ಬಹಳ ಕಷ್ಟದಿಂದ ಸಾಧಿಸಬೇಕಾದದ್ದು, ಹಾಗೆ ಈಗ ಇರೊತರಹ ಓದು ಪಾಂಡಿತ್ಯ ಇವುಗಳಿಂದ ಆ ಕೃತಿಯನ್ನ ಹಾಗೆ ತಿಳಿಯೋಕೆ ಬರಲ್ಲ, ಆಧುನಿಕ ಪೀಳಿಗೆಯವರಿಗೆ ಆ ರೀತಿಯಾದ ದೊಡ್ಡ ವಿದ್ವತ್ತಿನ ಕೊರತೆಯಿದೆ ಅಂತ.

ಓ.ಎಲ್.ಎನ್ : ನಿಮಗೆ ‘ಆದಿಪುರಾಣ’ ಹೇಗೆ ಪರಿಚಯವಾಗಿ ತೆರೆದುಕೊಳ್ತಾ ಹೋಯಿತು.

ಕಿ.ರಂ : ನನಗೆ ಸಹಜವಾಗಿನೆ. ನಾನು ಬಿ.ಎ ಓದುವಾಗ ಇನ್ನು ಬಿ.ಎ ಓದೋಕೆ ಮುಂಚೇನೆ ಹೇಳ್ತೀನಿ. ನನಗೆ ಹಾಸನದ ಒಂದು ಪಬ್ಲಿಕ್ ಲೈಬ್ರರಿ ಇದೆಯಲ್ಲ ಅಲ್ಲಿ ಮುಳಿಯ ತಿಮ್ಮಪ್ಪನವರ ‘ನಾಡೋಜ ಪಂಪ’ ಕಾಣಿಸಿಕೊಳ್ತು. ಪಂಪನ ಮೇಲೆ ಬರೆದ ದೊಡ್ಡ ಪುಸ್ತಕ ಏನಪ್ಪ ಇದು ಅಂತ ಕುತೂಹಲ ಬಂತು ನನಗೆ. ಆ ಕುತೂಹಲವೆ ಮುಂದುವರೆಯಿತು. ಪಂಪನ ಪದ್ಯಗಳು ಎಷ್ಟು ಗೊತ್ತಾಗುತ್ತೊ ಅಷ್ಟು ಹಾಗೆ ಗೊತ್ತಾದ್ದರಿಂದ ಮುಂದಕ್ಕೆ ಹೋಗೋದು ಅದರ ಬಗ್ಗೆ ಅವರೇನೊ ತಮ್ಮದೆಯಾದ ಧೋರಣೆ ಕೊಟ್ಟಿದ್ರು. ಈ ಪುಸ್ತಕದ ಬಗ್ಗೆನೆ ಒಂದು ಪ್ಯಾಷನ್ ಏರ್ಪಟ್ಟಿತು ಮೊದಲನೆಯದು.

ಇದೇನಪ್ಪ ಇದು ಆ ಕಾಲದೊಳಗೆ ಪಂಪನ ಬಗ್ಗೆ ಇಂತ ಒಂದು ಸಮಗ್ರವಾದ ಪುಸ್ತಕ ಬರೆದಿದ್ದಾರಲ್ಲ ನಮ್ಮ ವಿದ್ವಾಂಸರು ಆ ಮೇಲೆನೆ ನನಗೆ ಪಂಪನ್ನ ಓದಬೇಕು ಅನ್ನಿಸ್ತು. ಅಲ್ಲೇ ಇದ್ದಂತ ‘ಪಂಪ ಭಾರತ’ದ ಬೇರೆ ಬೇರೆ ಎಡಿಷನ್ ಸಿಕ್ತು. ಹೀಗೆ ಹಂತ ಹಂತವಾಗಿ ಒಂದು ಪ್ರೇರಣೆಯಿಂದ ಇನ್ನೊಂದು ಪ್ರೇರಣೆಗೆ ಆಮೇಲೊಂದು ‘ಆದಿಪುರಾಣ’ ಸಂಗ್ರಹ ಸಿಗ್ತು. ಆಮೇಲೆ ತೀ.ನಂ.ಶ್ರೀಕಂಠಯ್ಯನವರು ಬರೆದ ‘ಪಂಪ’ ಅಂತ ಒಂದು ಪುಸ್ತಕ ಸಿಕ್ಕಿತು. ಆದರೆ ಪಂಪನ ಹೆಸರನ್ನ ಮಿಡ್ಲ್ ಸ್ಕೂಲ್ ನಲ್ಲಿದ್ದಾಗಲೇ ಎಲ್ಲೋ ಕೇಳಿದ್ದೆ. ಆ ನಂತರ ನಾನು ನಾನಾಗೇ ನೋಡೊ ಕಡೆಗೆ ತೊಡಗಬಹುದು ಅನ್ನೋ ವಿಶ್ವಾಸವೂ ಬಂತು. ಆಮೇಲಾಮೇಲೆ ಪಠ್ಯವಾಗಿ ಓದೋ ಕ್ರಮವೆಲ್ಲ ಬೇರೆಯದು. ಪಂಪ ಇಡೀ ಕನ್ನಡದ ಲಾರ್ (ಐಔಖಇ) ನಲ್ಲಿ ಇರೊ ಕವಿಯಲ್ವೆ? ಬಸವಣ್ಣನನ್ನ ಪ್ರತ್ಯೇಕವಾಗಿ ಓದೋ ಕ್ರಮ ಒಂದು. ಬಸವಣ್ಣ ಲಾರ್ ನಲ್ಲಿ ಸಹಜವಾಗಿ ಇರೋ ಕ್ರಮ ಇನ್ನೊಂದು.

ಓ.ಎಲ್.ಎನ್ : ಆದರೆ ಬಸವಣ್ಣ, ಕುಮಾರವ್ಯಾಸ ಇದ್ದ ಹಾಗೆ ಒಂದು ಲಾರ್ ನಲ್ಲಿ ಪಂಪ ಕೂಡ ಇದ್ದಾನೆ ಅಂತಿರಾ?

ಕಿ.ರಂ : ಹೌದು ಲಾರ್ ನಲ್ಲಿದ್ದಾನೆ. ಲಾರ್ ನಲ್ಲಿ ಪಂಪನ ಹೆಸರು ಕೇಳಿದ್ದಾರೆ. ಶ್ರವಣಬೆಳಗೊಳ ನೋಡಿದಾಕ್ಷಣ ಆ ಬಾಹುಬಲಿಯ ಹಿಂದಿನ ಕಥನವೂ ಕೂಡ ಆದಿಪುರಾಣಕ್ಕೆ ಕನೆಕ್ಟ್ ಆಗಿಬಿಡುತ್ತೆ. ಒಂದು ಶಿಲ್ಪದಲ್ಲಿದ್ದಾಳಪ್ಪ. ಈಗ ಕರ್ನಾಟಕದ ಒಂದು ಮುಖ್ಯವಾದ ಐಕನ್ನೆ ನಾನೇಳೊದು ಗೊಮ್ಮಟೇಶ್ವರ ಅಂತ. ಆ ಗೊಮ್ಮಟ ಶಿಲ್ಪವೆ ನೋಡದವರಿಗೆ ಚಿತ್ರದಲ್ಲಿ ನೋಡಲಿ, ಗೊಮ್ಮಟನನ್ನೆ ನೋಡಲಿ ಸಾಕ್ಷಾತ್ ಅದರ ಜೊತೆ ಒಂದು ಡೈಲಾಗ್ ಇದೆಯಲ್ಲಾ? ಕಾವ್ಯವೆ ಲಾರ್ ನಲ್ಲಿರೊ ಕ್ರಮ ಒಂದಾದರೆ, ಆ ಮಿಥ್ ಇದೆಯಲ್ಲಾ ಈ ಎಲ್ಲಾನು ಹಾಗೇನೆ ಇದೆ. ಮಹಾಭಾರತದಲ್ಲಿ ಮಿಥ್ ಇದೆ ಕುಮಾರವ್ಯಾಸನೂ ಇದ್ದಾನೆ. ಲಕ್ಷ್ಮೀಶನ ಜೈಮಿನಿ ಭಾರತದ ಜೈಮಿನಿ ಕಥೆಯೂ ಇದೆ ಕಾವ್ಯವೂ ಇದೆ.

ಓ.ಎಲ್.ಎನ್ : ಹಾಗೆ ಒಂದು ಮಿಥ್ ಆಗಿ ಲಾರ್ ನಲ್ಲಿರೋದಕ್ಕೂ ಪಠ್ಯವಾಗಿ ಓದಿ, ಅಭ್ಯಾಸ ಮಾಡಿ ಪಾಠ ಮಾಡೊದಕ್ಕೂ ಮುಖ್ಯವಾದ ವ್ಯತ್ಯಾಸ ಏನಾದ್ರೂ ಇದೆಯಾ?

ಕಿ.ರಂ : ಹೌದಲ್ವೆ, ನಿರ್ದಿಷ್ಟವಾದಂತ ಒಬ್ಬ ಕವಿಯ ರಚನೆ ಕೃತಿಯಾದಾಗಿನಿಂದ ಆರಂಭ ಆಗುತ್ತೆ. ಆಮೇಲಿಂದ ನಿಮಗೆ ಗೊತ್ತಿರೊ ಹಾಗೆ ನಮ್ಮ ಶಿಕ್ಷಣ ಪದ್ಧತಿಯೊಳಗೆ ಅದರ ಕೆಲವು ಭಾಗಗಳು, ಅದರ ಕೆಲವು ಬಿಡಿ ಪದ್ಯಗಳು ಅನೇಕ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತೆ ಹಲವು ರೂಪದಲ್ಲಿ ಆದರಿಂದ ಪಂಪನ ಕಾವ್ಯ ಇರುವ ಎಲ್ಲಾ ಕಾವ್ಯಕ್ಕೂ ಅನ್ವಯಿಸುತ್ತೆ. ಆ ಕಾವ್ಯವನ್ನ ಓದಿಸಿ ಅಥವಾ ತಾನೆ ಓದಿ, ತಿಳಿದು ಪಠ್ಯ ಪರಂಪರೆಗೆ ಒಳಗಾಗುತ್ತೆ. ವಿದ್ಯಾರ್ಥಿಗಳೂ ಹಾಗೆ ಒಳಗಾಗುವರಲ್ಲ. ಅಥವಾ ನಮ್ಮ ಹಿಂದಿನ ಓದಣಿಕೆ ಕ್ರಮದಲ್ಲಿ ಪಠ್ಯವಲ್ಲದೆಯೂ ಈ ಕೃತಿ ಕೂಡ ಓದಿಗೆ ಗುರಿಯಾಗ್ತಾ ಇತ್ತಲ್ಲ. ಈಗ ಆಧುನಿಕ ವಿದ್ಯಾಭ್ಯಾಸದಲ್ಲಿ ಇದು ಪಠ್ಯವಾಗುತ್ತೆ. ಅದಲ್ಲೆಯೂ ನಮ್ಮದೆಯಾದಂತಹ ಒಂದು ಓದುವಿಕೆಯ ಕ್ರಮ, ವಿವರಿಸಿಕೊಳ್ಳೊ ಕ್ರಮ, ವಾಚನ, ವ್ಯಾಖ್ಯಾನ, ವಿವರಣೆ ಈ ಮೂಲಕ ನಡೆದಿದೆಯಲ್ಲ ಅದು ಇವತ್ತಿಗೂ ಇದೆ.

ಓ.ಎಲ್.ಎನ್ : ಪಠ್ಯ ಅನ್ನುವಾಗ ಪಾಠ ಮಾಡೋದು, ಕೆಲವು ಮಾದರಿಗಳನ್ನ ಸೃಷ್ಠಿಮಾಡೋದು, ಕೆಲವು ಥಿಯರಿಗಳನ್ನೂ ಸೃಷ್ಟಿಮಾಡುತ್ತೆ. ನೀವು ಮೂವತ್ತು ವರ್ಷ ಪಾಠ ಮಾಡಿದಾಗ ಬೇರೆ ಬೇರೆ ಥಿಯರಿಗಳ ಜತೆಯೂ ಒಡನಾಟವಿತ್ತು ನಿಮಗೆ. ಅದರ ಜತೆಗೆ ಒಂದೊಂದು ಥಿಯರಿಯನ್ನೂ ಅಪ್ಲೈ ಮಾಡಿ ನೋಡುವಾಗ ಪಂಪ-ಪಂಪನ ಕೃತಿಗಳು ಬೇರೆ ಬೇರೆ ತರಹ ಕಂಡವೊ? ಅಥವಾ ಅದರ ಹಿರಿಮೆ ದೊಡ್ಡತನ ಯಾವುದರಿಂದ ನೋಡಿದ್ರೆ ಹೆಚ್ಚಾಗ್ತಾ ಹೋಗಿದೆ? ನೋಡೊದಾರಿ ಬದಲಾಗುತ್ತೆ ಅಂತ ಪಂಪನೆ ಹೇಳ್ತಾನಲ್ಲಾ.

ಕಿ.ರಂ : ಎರಡನೆಯದೇ ಕರೆಕ್ಟು. ನೋಡೊ ದಾರಿ ಬದಲಾಗುತ್ತೆ. ಪಂಪನ ಕಾವ್ಯದ ನಿಜವಾದಂತಹ ಸ್ತರಗಳು ಬೇರೆ ರೀತಿಯಾಗಿ ಕಾಣಿಸೋದಕ್ಕೆ ಆರಂಭವಾಗುತ್ತೆ. ಎಲ್ಲಾ ಥಿಯರಿಯ ಉದ್ದೇಶ ಕೂಡ ಒಂದು ಪಠ್ಯವನ್ನು ಅದರ ಓದನ್ನ ವಿಸ್ತೀರ್ಣ ಮಾಡುತ್ತೆ ಎನ್ನುವ ವಿಮರ್ಶಾ ಪಂಥಗಳೂ ಇವೆ. ಅದರಿಂದ ಬೇರೆ ಬೇರೆ ಸಿದ್ಧಾಂತಗಳು ಇದ್ರೆ ಅದು ಆ ಕೃತಿಯ ಓದಿನ ಗ್ರಹಿಕೆಯನ್ನು ಕೂಡ ಸ್ವಾಭಾವಿಕವಾಗಿ ಹಿಗ್ಗಿಸುತ್ತೆ ಅನ್ನೋದೆ ನನ್ನ ವೈಯಕ್ತಿಕವಾದ ತಿಳುವಳಿಕೆ.

ಓ.ಎಲ್.ಎನ್ : ಹಿಗ್ಗಿಸುತ್ತೊ ಅಥವಾ ಮಿತಿಯಾಗ್ತವೊ?
ಕಿ.ರಂ : ಹಾಂ, ಎರಡೂ ಆಗುತ್ತೆ ಒಂದೊಂದು ಅಪ್ರೊಚ್ ಗೂ ಅದರದೆಯಾದಂತ ಸಾಧ್ಯತೆಗಳು, ಅದರದೆಯಾದಂತ ಮಿತಿಯಗಳು ಇರ್ತವೆ. ಯಾಕಂದ್ರೆ ಒಂದೇ ಒಂದು ಪಂಥ ಎಲ್ಲಾ ಹೊಸ ಸಾಧ್ಯತೆಗಳನ್ನ ತೆಗೆದು ತೋರಿಸುತ್ತೆ ಅನ್ನೋದು ಬಹಳ ಕಷ್ಟ.

ಓ.ಎಲ್.ಎನ್ : ಆಗಲ್ಲ.

ಕಿ.ರಂ : ನೀವು ಹೇಳಿದಂತೆ ಈ ಎಲ್ಲವನ್ನೂ ಬೇರೆ ಬೇರೆ ಅಪ್ರೋಚ್ ನಲ್ಲಿಟ್ಟು ನೋಡಿದಾಗ ಪಂಪ ನಮಗೆ ಬಹುಮುಖಿಯಾಗಿ ಬೇರೆ ರೀತಿಯಲ್ಲಿಯೆ ಕಾಣಿಸ್ತಾನೆ. ಅಲ್ಲ ನೀವೇ ಹೇಳಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಶೇಕ್ಸ್ ಪಿಯರ್ ನ ಬೇರೆ ಪಂಥಗಳು ಭಿನ್ನ ರೀತಿಯಲ್ಲಿ ನೋಡ್ತಾನೆ ಬರ್ತಾ ಇವೆ. ನಮಗೆ ಪಂಪನ ಇತಿ-ಮಿತಿಗಿಂತ ಪಂಪನ ಕೃತಿ ಓದುಗರಲ್ಲಿ ಬೇರೆ ಸಾಧ್ಯತೆಗಳನ್ನ ನಿರ್ಮಾಣ ಮಾಡ್ತಾ ಹೋಗ್ತಿದೆ. ಅದರಿಂದ ಯಾವುದೇ ಒಂದು ಪಂಥ ಎಂದಾಗ ಆ ಪಂಥದಲ್ಲಿ ಕೂಡ ಬೇರೆ ರೀತಿಯಾದ ಪಲ್ಲಟಗಳು ಆಗ್ತಾ ಇರುತ್ತೆ ಅನ್ನೋದು ನಿಜ. ಒಂದು ಪಂಥಕ್ಕೂ ಕೂಡ ನಿರ್ದಿಷ್ಟವಾದ ಚೌಕಟ್ಟು ಅಂತೇನೂ ಇಲ್ಲ. ಈಗ ಉದಾಹರಣೆಗೆ ಮಾರ್ಕ್ಸ್ ವಾದಿ ಅಪ್ರೋಚ್ ನ ಯೋಚ್ನೆ ಮಾಡಿ. ಎಷ್ಟು ರೀತಿಯಾದ ಪಂಥಗಳು ಮಾರ್ಕ್ಸ್ ವಾದಿ ಪಂಥದಲ್ಲೇ ಇವೆ. ಅಪ್ರೋಚ್ ಅಂದ್ರೆ ಅದು ಬಹಳ ಸೀಮಿತವಾಗಿರುತ್ತೆ ಅಂತ ಭಾವಿಸಬೇಕಾಗಿಲ್ಲ. ಸೂಕ್ಷ್ಮಜ್ಞರಿಂದ ಒಂದು ಅಪ್ರೋಚ್ ಕೂಡ ಬೆಳೆದು ಅದನ್ನ ಮೀರಿದಂತ ಗ್ರಹಿಕೆಗಳನ್ನೂ ಒಂದು ಕೃತಿಯಿಂದ ಪಡಕೊಳ್ಳೋಕೆ ಸಾಧ್ಯ ಆಗುತ್ತೆ. ನಿರ್ದಿಷ್ಟವಾದ ಒಂದು ಚೌಕಟ್ಟಿನಲ್ಲಿ ಒಂದು ಥಿಯರಿ ಇರುತ್ತೆ ಅಂತ ಹೇಳೋಕೆ ಆಗಲ್ಲ. ಆ ಒಂದೇ ಥಿಯರಿಯೊಳಗೆ ಘರ್ಷಣೆಗಳು ಇರ್ತವೆ ಹಾಗೆ ಒಡಂಬಡಿಕೆಗಳೂ ಇರ್ತವೆ.

ಈ ಹಳಗನ್ನಡ, ನಡುಗನ್ನಡ ಎನ್ನುವುದನ್ನ ಒಂದು ರೀತಿ ಬಹಳ ಕಷ್ಟದಿಂದ ಸಾಧಿಸಬೇಕಾದದ್ದು, ಹಾಗೆ ಈಗ ಇರೊತರಹ ಓದು ಪಾಂಡಿತ್ಯ ಇವುಗಳಿಂದ ಆ ಕೃತಿಯನ್ನ ಹಾಗೆ ತಿಳಿಯೋಕೆ ಬರಲ್ಲ, ಆಧುನಿಕ ಪೀಳಿಗೆಯವರಿಗೆ ಆ ರೀತಿಯಾದ ದೊಡ್ಡ ವಿದ್ವತ್ತಿನ ಕೊರತೆಯಿದೆ ಅಂತ.

ಓ.ಎಲ್.ಎನ್ : ಆದಿಪುರಾಣದ ಬಗ್ಗೆ ತೀ.ನಂ.ಶ್ರೀಯವರು ಪಂಪ ಇಲ್ಲಿ ‘ಕೈ ಕಟ್ಟಿಸಿಕೊಂಡ ಜಟ್ಟಿಯಾಳಿನಂತೆ ಕಾಣಿಸ್ತಾನೆ’ ಅಂತ ಹೇಳ್ತಾರೆ. ಆದಿಪುರಾಣಕ್ಕಿಂತ ಪಂಪಭಾರತದಿಂದ ಪಡೆದದ್ದು ಹೆಚ್ಚು ಅಂತ, ಅದು ಮುಖ್ಯ ಅಂತ ಬಹಳ ಕಾಲದಿಂದ ಅಧ್ಯಾಪಕರುಗಳು ವಿದ್ಯಾರ್ಥಿಗಳಿಗೆ ಹೇಳ್ತಾನೆ ಬರ್ತಿದಾರೆ.

ಕಿ.ರಂ : ಇಡೀ ನವೋದಯ ಸಾಹಿತ್ಯದ ನೋಡುವಿಕೆಯ ನೆಲೆಯೇ ಪ್ರಧಾನವಾಗಿ ಕವಿಯ ಮೂಲಕವಾಗಿ ಅದು ಪ್ರತಿಭೆಯ ಮೂಲಕ ಚಿಂತನೆ ಮಾಡುತ್ತೆ. ಅದರ ಪರಿಣಾಮವಾಗಿ ಈಗ ನೋಡಿ ತೀ.ನಂ.ಶ್ರೀ ಪಂಪನ ಬಗ್ಗೆ ಬರೆದಿರೋದನ್ನ ನೋಡಿದ್ರೆ ಅಲ್ಲಿ ಪಂಪನನ್ನ ಮುಖ್ಯನನ್ನಾಗಿ ಮಾಡಿದ್ದಾರೆಯೇ ಹೊರತು ಕೃತಿಯನ್ನಲ್ಲ. ಪಂಪ ಇದನ್ನ ಎಷ್ಟು ಚೆನ್ನಾಗಿ ಹೇಳಿದ್ದಾನೆ, ಎಷ್ಟು ಪರಿಣಾಮಕಾರಿಯಾಗಿ ಹೇಳಿದ್ದಾನೆ, ಎಷ್ಟು ಸೂಕ್ಷ್ಮವಾಗಿ ಹೇಳಿದ್ದಾನೆ, ಎಷ್ಟು ಹಿತಮಿತವಾಗಿ ಹೇಳಿದ್ದಾನೆ…. ಅದಕೆಲ್ಲಕ್ಕೂ ಕೂಡ ಕವಿಯನ್ನೇ ಕಾರಣ ಮಾಡಿ ಒಂದು ರೀತಿ ಅದು ಅಪ್ರಿಸಿಯೇಷನ್ ನ ಪಂಪನೊ ಅಥವಾ ಅಪ್ರಿಸಿಯೇಷನ್ ನ ಪಂಪಭಾರತವೊ, ಆದಿಪುರಾಣವೊ ಗೊತ್ತಾಗಲ್ಲ. ಕವಿ ಕೇಂದ್ರಿತ ವಿಮರ್ಶೆಯಲ್ಲಿರುವಂತ ದೊಡ್ಡ ಮಿತಿಯನ್ನು ಇಡೀ ನವೋದಯದ ವಿಮರ್ಶೆ ಹಾಕಿಕೊಂಡಿತು. ನಮ್ಮ ನವೋದಯದ ಸಂದರ್ಭದಲ್ಲಿ ಬಹಳ ಮುಖ್ಯವಾದ ಚಿಂತನೆಗಳು ಬಂದಿವೆ. ತೀ.ನಂ.ಶ್ರೀ, ಡಿ.ಎಲ್.ಎನ್, ಕುವೆಂಪು ಆ ಕಾಲದಲ್ಲಿ ಪಂಪನ ಕುರಿತು ಚಿಂತನೆ ಮಾಡಿದ್ದಾರೆ. ಅವರೆಲ್ಲರೂ ಕೂಡ ಕವಿಕೇಂದ್ರಿತವಾಗಿ ಪಂಪನನ್ನ ನೋಡಿದರು. ಪಂಪ ಇಂಥ ಕಾವ್ಯವನ್ನ ಬರೀಬೇಕಾದ್ರೆ ತುಂಬಾ ಎಕ್ಸಲೆನ್ಸ್ ತೋರಿಸಿದಾನೆ ಅಂತ ಹೇಳಿದ್ರು.

ಓ.ಎಲ್.ಎನ್ : ಯಾಕೆ ಎಕ್ಸಲೆನ್ಸ್?

ಕಿ.ರಂ : ಆ ಎಕ್ಸಲೆನ್ಸ್ ಏನು ಅಂತ ಹೇಳಲಿಲ್ಲ. ಆಗ ಒಂದು ರೀತಿಯಾದ ಅಪ್ರಿಸಿಯೇಷನ್ನು ಪ್ರಧಾನವಾಗಿತ್ತು. ಅದನ್ನೆ ಇಟ್ಟುಕೊಂಡಂಥವು ಇನ್ನು ಆಮೇಲೆ ಬಂದಂತಹ ಕೆಲವು ಚರ್ಚೆಗಳು ಕಲ್ಬುರ್ಗಿ, ಚಿದಾನಂದಮೂರ್ತಿ ಮುಂತಾದವರು ಚಾರಿತ್ರಿಕವಾಗಿ ಪ್ರಶ್ನೆಯನ್ನ ಒಬ್ಬ ಕವಿಗೆ ಆ ವಲಯವೂ ಬೇಕು ಅಲ್ಲವೆ? ಶೇಕ್ಸ್ ಪಿಯರ್ ಗೆ ಅಂತ ಚರ್ಚೆ ಹ್ಯಾಗೆ ದೊಡ್ಡಪ್ರಮಾಣದಲ್ಲಿ ಇದೆಯೊ ಅದು ಕೂಡ ಮುಖ್ಯವಾದದ್ದೆ. ಅದಕ್ಕೆ ನನಗೆ ಟೋಟಲ್ ಕಲ್ಬರಲ್ ಇಂಪಾರ್ಟೆನ್ಸ್ ಏನು ಅನ್ನೋದು ಮುಖ್ಯ.

ಓ.ಎಲ್.ಎನ್ : ಅದು ಹಂಗೆ ಹುಡುಕೋದು ಸಾಧ್ಯವಾಗದಾದ್ರೆ ಇಡೀ ಕನ್ನಡ ಸಂಸ್ಕೃತಿಯನ್ನೆ ನೋಡೊ ಕೆಲಸ.

ಕಿ.ರಂ : ಆ ರೀತಿ ಏನಾದ್ರೂ ಅಧ್ಯಯನ ಆರಂಭ ಆಗಿದ್ರೆ ಮುಂದಿನ ನಮ್ಮ ಎಲ್ಲಾ ಕವಿಗಳ ಸಂದರ್ಭದಲ್ಲಿ ಕೂಡ ಇಂತ ಅಧ್ಯಯನ ಹೆಚ್ಚು ಬೇರೆ ರೀತಿಯಲ್ಲಿ ಬೆಳಿತಾಯಿತ್ತು.

ಓ.ಎಲ್.ಎನ್ : ಅದರ ಪರಿಣಾಮವಾಗಿಯೇ ಆದಿಪುರಾಣಕ್ಕೆ ಸುಮಾರು ವರ್ಷಗಳ ಕಾಲ ಸಿಗಬೇಕಾದಂತ ಗಮನ ಸಿಗದೆಹೋಯಿತೆನೊ ಏನೋ.

ಕಿ.ರಂ : ಆದಿಪುರಾಣಕ್ಕೆ ಮಾತ್ರ ಅಲ್ಲ. ನಮ್ಮ ಎಲ್ಲಾ ಕ್ಲಾಸಿಕಲ್ ಗಳಿಗೂ ಹಾಗಾಗಿದೆ. ಏಕಂದ್ರೆ ಒಂದು ಕ್ಲಾಸಿಕ್ ನ ರೇಂಜೆ ಬೇರೆ ಅದರ ಸ್ಟ್ರಕ್ಚರ್ರೇ ಬೇರೆ. ಈಗ ಆದಿಪುರಾಣ ಹದಿನಾರು ಆಶ್ವಾಸಗಳ ಕಾವ್ಯ. ಅದರ ಒಂದು ಸ್ಟ್ರಕ್ಚರ್ ಅನ್ನು ರೂಪಿಸಿರೋ ನೆಲೆಯನ್ನ ಕುರಿತು ಆ ಕಾಲದಲ್ಲಿ ವಿಚಾರಗಳೇ ಇಲ್ಲ. ಹೀಗಾಗಿ ಅಲ್ಲಿ ಯಾವ ವಿಚಾರವೇ ಬರಲಿ ಕವಿಯ ಮೂಲಕ ನಿಯಂತ್ರಿತ ಆಗ್ತಾ ಇದೆ ಅಂತ ಧೋರಣೆ ಇದೆ. ಹೀಗಾಗಿ ಅದನ್ನ ಕವಿನಿಯಂತ್ರಿತ ಪಠ್ಯವಾಗಿ ಅದನ್ನ ನೋಡಲಾಗಿದೆಯೆ ಹೊರತು ಅದೊಂದು ದೊಡ್ಡ ಕಲ್ಚರಲ್ ಎಂಟಿಟಿ ಆಗಿ, ಕನ್ನಡ ಸಂಸ್ಕೃತಿಯ ನೆಲೆಯಿಂದ ಮೈಪಡೆದಿರುವ ಕೃತಿಯಾಗಿ, ಕನ್ನಡ ಸಂಸ್ಕೃತಿಯ ಮೂಲಚೂಲಗಳನ್ನ ಅದರ ಬೇರೆ ಬೇರೆ ಸೂಕ್ಷ್ಮ ಸ್ತರಗಳನ್ನ ಆ ಕೃತಿ ರೆಪ್ರೆಸೆಂಟ್ ಮಾಡುತ್ತೆ ಅನ್ನೊ ಕಲ್ಪನೆ ಇಲ್ಲವೆ ಇಲ್ಲ. ಅದಕ್ಕೆ ನೀವು ಹೇಳ್ತಿರೊ ಅಂಥ ಮಾತು ಕವಿ ಕೈಕಟ್ಟಿಸಿಕೊಂಡ ಜಟ್ಟಿಯಾಳಿನಂತೆ ಕಾಣ್ತನೆ ಅಂತ. ಹಾಗಾಂತ ಹೇಳಿದ್ರೆ ಅದೊಂದು ಮೌನವಾಗಿ ಕಾಣಿಸುತ್ತೆ ಹೊರತು ಬೇರೆಯಲ್ಲ.

ಓ.ಎಲ್.ಎನ್ : ಸಾರ್ ಈಗ ಆದಿಪುರಾಣ ಯಾವ ಕಾರಣದಿಂದ ಅಷ್ಟೊಂದು ಮಹತ್ವ ಪಡೆದುಕೊಳ್ಳುತ್ತೆ?

ಕಿ.ರಂ : ಅದೊಂದೇ ಅಲ್ಲ ಅನೇಕ ಕಾವ್ಯಗಳಿವೆ. ನನಗೆ ಸಂಸ್ಕೃತಿ ವಿಶಿಷ್ಟವಾದ ಮಹತ್ವದ ಪ್ರಶ್ನೆಗಳನ್ನು ಒಂದು ಕಾಲದ ಬಿಂದುವಿನಲ್ಲಿ ಪಂಪ ಆದಿಪುರಾಣದ ಮೂಲಕ ಎದುರಾಗ್ತಿದ್ದಾನೆ ಅನ್ಸುತ್ತೆ. ಉದಾಹರಣೆಗೆ ಧರ್ಮದ ಪ್ರಶ್ನೆ ಇರಬಹುದು. ಒಂದು ಸಂಸ್ಕೃತಿಯಲ್ಲಿ ಧರ್ಮದ ನಿಜವಾದಂಥ ನೆಲೆ ಯಾವ ಯಾವ ರೀತಿಯಾದ ಜಿಜ್ಞಾಸೆಗೆ ಗುರಿಯಾಗುತ್ತೆ? ಈಗ ಒಂದು ಸಂಸ್ಕೃತಿಯ ಅನೇಕ ಪ್ರಶ್ನೆಗಳು ಒಂದು ಪ್ರಶ್ನೆ ಅಂತ ಹೇಳ್ತಾಯಿಲ್ಲ. ಅದು ಧರ್ಮದ ಪ್ರಶ್ನೆ, ಧರ್ಮ ಮತ್ತು ಇನ್ನಿತರ ಧರ್ಮಗಳ ನಡುವಣ ಸಂಬಂಧದ ಪ್ರಶ್ನೆ ಇದೆ. ಧರ್ಮದ ಬಗ್ಗೆ ಮಾತನಾಡುವಾಗ ಅದು ಜೈನಧರ್ಮದ ಪ್ರಶ್ನೆಯನ್ನು ಪ್ರಧಾನವಾಗಿ ವಿಚಾರ ಮಾಡುತ್ತೆ ಅಂತ. ಇಲ್ಲಿ ಒಂದು ಸಂಸ್ಕೃತಿಯೊಳಗೆ ಒಂದೇ ಧರ್ಮ ಇರ್ತದೆಯೇ? ಬೇರೆ ಬೇರೆ ಧರ್ಮಗಳೊಂದಿಗೆ ಆ ರೀತಿಯಾದ ಸಂಬಂಧ, ಅಂತರ್ ವಿರೋಧ, ಸಹಮತ ಇವೆಲ್ಲಾ ಇದ್ದೆ ಇರುತ್ತೆ.

ಓ.ಎಲ್.ಎನ್ : ‘ಅರಿವಂ ಪೊಸೆಯಿಸುವುದಂ’ ಅಂದ ಹಾಗೆ…

ಕಿ.ರಂ : ‘ಕಾವ್ಯ ಧರ್ಮಮುಂ ಧರ್ಮಮುಂ…’ ಅಂದ್ರೆ ಜೈನಧರ್ಮ ಅಂತ ಅಂತೀವಿ ನಾವು. ಕಾವ್ಯಧರ್ಮವೇ ಧರ್ಮ ಅಂತ ಯಾಕೆ ಹೇಳಲ್ಲ? ನಾವೇನು ಜೈನಧರ್ಮದವನೆ ಅಂತ ಹೇಳಬೇಕಾಗಿಲ್ಲ. ನಾವೇನಂದ್ಕೊಂಡಿದೀವಿ ಅಂದ್ರೆ ಆದಿಪುರಾಣದಲ್ಲಿರೋದು ‘ಜೈನ ಧರ್ಮಮುಂ ಕಾವ್ಯಧರ್ಮಮುಂ’ ಕಾವ್ಯಧರ್ಮವನ್ನ ಧರ್ಮವನ್ನ ಜೊತೆಯಾಗಿ ನೋಡಿ ನೋಡಿರೋದು ನಿಜವೇ. ಅದು ಆ ಕಥನದಲ್ಲಿಯೆ ಇದೆ. ಅದು ಗಂಡು-ಹೆಣ್ಣಿನ ಪ್ರಶ್ನೆ ಇರಬಹುದು, ಪ್ರೇಮ-ಕಾಮಗಳ ಪ್ರಶ್ನೆ ಇರಬಹುದು, ಅಥವಾ ಒಂದು ಸಂಸ್ಕೃತಿ ಸಂದರ್ಭದ ಅನೇಕ ರೀತಿಯಾದ ಸಂಬಂಧಗಳ ಜಾತಿ-ರಾಜಕೀಯ ಇರಬಹುದು ಅಥವಾ ಆವೊತ್ತಿನ ಸಾಮಾಜಿಕ ಜೀವನ ಇರಬಹುದು ಅದಕ್ಕೇ ನಾನು ಇವನ್ನೆಲ್ಲ ಸೇರಿದ ಒಂದು ಸಂಸ್ಕೃತಿ ಅಂತ ಹೇಳ್ತಾ ಇದ್ದೀನಿ. ಮಹಾಕಾವ್ಯವೊಂದನ್ನು ನೋಡುವ ಕ್ರಮವೇ ನಮ್ಮ ಆರಂಭದ ಹಂತದಲ್ಲಿ ಬಿಡಿಯಾದ ಪದ್ಯವನ್ನ ತೆಗೆದುಕೊಂಡು ಆ ಪದ್ಯದ ಸೌಂದರ್ಯಗಳನ್ನ ವಿವರಿಸೋ ಕಡೆಗೆ ಗಮನ ಕೊಟ್ಟ ಹಾಗೆ ಅದರ ಕಥನ ಕ್ರಮದ ಬಗ್ಗೆ ಅದು ಸಂಸ್ಕೃತಿ ವಿಶಿಷ್ಟವಾದ ನಿರ್ಮಿತಿ ಅಂತ ನಾವು ನೋಡಲೇ ಇಲ್ಲ.

ಓ.ಎಲ್.ಎನ್ : ಸಾರ್ ಇದು ಬಹುಶಃ ಎಲ್ಲಾ ಜೈನರ ಮಹಾಕಾವ್ಯಕ್ಕೂ ಅಪ್ಲೈ ಆಗಲ್ವ?

ಕಿ.ರಂ : ಆಗುತ್ತೆ.

ಓ.ಎಲ್.ಎನ್ : ಯಾಕಂದ್ರೆ ಎಲ್ಲಾ ಜೈನ ತೀರ್ಥಂಕರರು..

ಕಿ.ರಂ : ನಾನೆಲ್ಲಾ ಜೈನಧರ್ಮದ ಬಗ್ಗೆ ಹೇಳ್ತಾಯಿಲ್ಲ.

ಓ.ಎಲ್.ಎನ್ : ಅಲ್ಲಲ್ಲ ಅದರಲ್ಲೂ ಕೂಡ ಭವ, ಜನ್ಮಾಂತರ, ರಾಜಕೀಯ ಎಲ್ಲಾ ಬರುತ್ತಲ್ಲ ಪಂಪ ಹೇಗೆ ವಿಶೇಷ ಅಂತ.

ಕಿ.ರಂ : ಹೌದಲ್ವೆ! ಪಂಪ ಏನ್ಮಾಡ್ತಿದ್ದಾನೆ? ಈ ಜನ್ಮಾಂತರ… ಹಾಂ ಅಲ್ಲೇ ಪಂಪನ ಕಾವ್ಯಧರ್ಮದ ಕಥೆ ಇರೋದು. ಈ ಕಾವ್ಯ ಧರ್ಮದ ಪ್ರಶ್ನೆ ಇರೋದೆ ಅಲ್ಲಿ ಅಂತ. ಪಂಪನಲ್ಲಿ ಅದು ಕೇವಲ ಧಾರ್ಮಿಕ ಪರಿಭಾಷೆ-ಕಲ್ಪನೆ ಆಗದೆ ಅದನ್ನ ಕಾವ್ಯ ಮಾಡೊ ಕ್ರಮ ಹೇಗೆ? ತುಂಬಾ ದೊಡ್ಡ ಪ್ರಶ್ನೆ ಇದು. ನಿಮಗೇ ಗೊತ್ತಿರೊ ಹಾಗೆ ಜಗತ್ತಿನಲ್ಲಿ ಹಾಗಾಗಿದೆ. ಅದೊಂದು ಬಿಬ್ಲಿಕಲ್ (biblical), ಆ ಬಿಬ್ಲಿಕಲ್ ಕಥನಕ್ಕೆ ಬೇರೆ ಬೇರೆ ಆಯಾಮಗಳು ಜೋಡಣೆ ಆದ ತಕ್ಷಣ ಅದು ನಿರ್ದಿಷ್ಟವಾದ ಒಂದು ಬಿಬ್ಲಿಕಲ್ ಆದಂತಹ ನೆಲೆ ಅನ್ನೋದನ್ನ ಕಳೆದುಕೊಂಡುಬಿಡುತ್ತೆ.

ಓ.ಎಲ್.ಎನ್ : ಅದೇ ಒಂದು ಮೈ ಪಡೆಯೋದು ಅಂತಾನಲ್ಲ…

ಕಿ.ರಂ : ಹೊಸ ಮೈ ಪಡೆಯೋದು ಅಂತ ಹೇಳ್ತಾನಲ್ಲ, ಭವಾವಳಿ ಅನ್ನೋದನ್ನ ಕೇವಲ ಜನ್ಮಾಂತರದ ಹಿನ್ನೆಲೆಯಲ್ಲಿ ತೆಗೆದುಕೊಳ್ಳದೆ ಅದೊಂದು ವಿಕಸನ ಶೀಲತೆಯ ಒಂದು ಕಲ್ಪನೆಯನ್ನಾಗಿ ಒಂದು ರೂಪಕದ ಕ್ರಮವನ್ನಾಗಿ ನೋಡುವಂತಹ ನೆಲೆ ಆಗಬಹುದು. ಅಥವಾ ಅದು ಮಾನವತೆಯ ನಿರಂತರ ಪಯಣದ ಕಥೆಯನ್ನಾಗಿ ನೋಡಬಹುದು. ಆದಿಪುರಾಣಕ್ಕೆ ಕೊನೆ ಇಲ್ವಲ್ಲ. ಅದಕ್ಕೇ ಆದಿನಾಥನ ಕಥೆ ಕೊನೆಗೊಳ್ಳೋದೇ ಇಲ್ಲ. ಭರತನ ನಂತರವೂ ಕಥೆ ಮುಂದುವರೆಯುತ್ತಲೇ ಇದೆ. ಹೀಗಾಗಿ ಅದಕ್ಕೊಂದು ಪ್ರೋಸಸ್ ಇದೆ. ಅದು ಪಂಪಭಾರತಕ್ಕೂ ಈ ಮಾತೇ ಅನ್ವಯ. ಈಗ ನೀವೆ ಯೋಚನೆ ಮಾಡಿ. ನೀವೆಷ್ಟು ಜಾಲಾಡಿದ್ರೂ ಕೂಡ ಈಗಾಗಲೆ ಪ್ರಖ್ಯಾತವಾಗಿರುವ ಒಂದು ನಲವತ್ತು ವೃತ್ತ. ನಲವತ್ತು ಕಂದ ಇಂತಿಂಥ ಭಾಗಗಳನ್ನು ಬಿಟ್ಟುಬಿಟ್ರೆ ಆದಿಪುರಾಣ ಅದಕ್ಕೆ ಮಾತ್ರ ಶ್ರೇಷ್ಠವಾಗಿದೆ ಅನ್ನೋಮಟ್ಟಿಗೆ ಬಂದಿದ್ದೀವಿ ನಾವು.

ಓ.ಎಲ್.ಎನ್ : ಹೌದೌದು.
ಕಿ.ರಂ : ಅದಕ್ಕೆ ಮಾತ್ರ ಮುಖ್ಯವಾದದ್ದು ಅಂತ ಈಗಲೂ ಏನ್ಮಾಡ್ತಾ ಇದ್ದೀವಿ? ‘ನೆತ್ತಮನಾಡಿ ಬಾನುಮತಿ…’ ಈ ಕುರಿತು ಸುಮಾರು ಮೂವತ್ತು ಲೇಖನ ಬಂದಿದೆ. ನೆತ್ತಮನಾಡಿದ್ದು ಯಾರು? ಈ ರೀತಿಯಾದ ಕೆಲವು ಪ್ರಶ್ನೆಗಳಿಗೆ ನಾವು ಮಹತ್ವಕೊಟ್ಟಿದೆವೆಯೆ ಹೊರತು ಇಡೀ ಒಂದು ಸ್ಟ್ರಕ್ಚರ್ ಈ ಸಂಸ್ಕೃತಿಯ ನಿಜವಾದಂತ ಕಥನವನ್ನ ಎಷ್ಟು ಭಿನ್ನ ಆಯಾಮಗಳಲ್ಲಿ ಬೇರೆ ಬೇರೆ ಮಟ್ಟುಗಳಲ್ಲಿ ಪರಿಶೀಲಿಸಲು ಪ್ರಯತ್ನಿಸಿದೆ? ಎಪಿಕ್ ನ ಸ್ಟ್ರಕ್ಚರ್ ಬೇರೆ ರೀತಿಯಾದದ್ದು.

ಎಪಿಕ್ ಸ್ಟ್ರಕ್ಚರ್ ಎಂದರೇನು? ಸಂಸ್ಕೃತಿಯ ಎಲ್ಲಾ ಸ್ತರಗಳು ಕೂಡ ಬೇರೆಬೇರೆ ರೀತಿಗಳಲ್ಲಿ ಪ್ರಶ್ನೆಗೆ ಅಥವಾ ಜಿಜ್ಞಾಸೆಗೆ ಅಥವಾ ಚಿಂತನೆಗೆ ಗುರಿಯಾಗಿ ಓದುಗನಿಗೆ ಒಂದು ಅನುಭವ ಕೊಟ್ಟು ಅವರು ಚಿಂತಿಸುವ ಕ್ರಮದ ಕಡೆಗೆ ಕರೆದುಕೊಂಡು ಹೋಗೋದು ಈಗಾಗಲೆ ಕೆಲವು ಓದುಗಳನ್ನ ನಾವು ಪಡಕೊಂಡು, ಆ ಪಡೆದುಕೊಂಡಿರುವ ಓದನ್ನ ಒಂದು ರೀತಿಯಲ್ಲಿ ಪ್ರೊಜೆಕ್ಟ್ ಮಾಡ್ತಾ ಇದ್ದೀವಿ. ಪಂಪನ ಕಾವ್ಯ ಅದರ ನಿಜವಾದಂತ ರೀಡಿಂಗ್ ಪಬ್ಲಿಕ್ ಮತ್ತು ಪಂಪನ ಭಾಷೆ ಹೇಗೆ ಅದು ನಮ್ಮಲ್ಲಿ ಇಡೀ ನಮ್ಮ ಕನ್ನಡದ ಪರಂಪರೆಯಲ್ಲಿ ಬೇರೆಯದ್ದೆಯಾದ ಮುನ್ನಲೆಯನ್ನು ಅಥವಾ ವಿಕಾಸವನ್ನು ತೋರಿಸಿದೆ? ಅಂತ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕಾಗಿದೆ.

ಓ.ಎಲ್.ಎನ್ : ಬಹುಶಃ ಕಳೆದ ಒಂದೆರಡು ದಶಕಗಳಲ್ಲಿ ಜನಪರ ಎನ್ನುವಂತ ಧೋರಣೆ, ಕವಿಯ ವರ್ಗ, ಜಾತಿಗಳನ್ನು ಕುರಿತದ್ದು ಇವೂ ಕೂಡ ಪಂಪನಂತೆ ಕವಿಗೆ ಅನ್ಯಾಯ ಮಾಡಿದವು ಅಂತ ಅನ್ಸುತ್ತಾ?
ಕಿ.ರಂ : ಇಲ್ಲಿ ಅನ್ಯಾಯ ಅನ್ನೋ ಪದವನ್ನ ನಾನು ಒಪ್ಪಲ್ಲ.

ರೇಖಾಚಿತ್ರ: ಬಿ.ಜಿ.ಗುಜ್ಜಾರಪ್ಪ

ಓ.ಎಲ್.ಎನ್ : ಅನ್ಯಾಯ ಅಂದ್ರೆ ಅನ್ಯಾಯ ಅಂತಲ್ಲ. ನೋಡುವ ಧೋರಣೆಗಳನ್ನು ಮಿತಿಗೊಳಿಸಿದವು. ಈಗ ಪಂಪ ಬರೀ ಊಳಿಗಮಾನ್ಯ ಪದ್ಧತಿ ನೆಚ್ಕೊಂಡು ಬರೆದ್ಕೊಂಡು ಹೋಗಿರೋನು… ಈ ಥರದ ಮಾತುಗಳ ಬಗ್ಗೆ ಹೇಳಿದ್ದು….

ಕಿ.ರಂ : ಆ ತರಹ ಪ್ರಶ್ನೆ ಮಾಡಿದ್ರೆ ನಾನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಲ್ಲ. ಆಧುನಿಕ ಲೇಖಕರನ್ನು ಸೇರಿಸಿಕೊಂಡೆ ಆ ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ಪಂಪನಿಗೇ ಆ ಪ್ರಶ್ನೆ ಬೇಕಾಗಿಲ್ಲ. (ಇವೆಲ್ಲವನ್ನು ರೆಕಾರ್ಡ್ ಮಾಡಿದ್ರೆ ನನಗೆ ಬಹಳ ಕಷ್ಟ ಆಗುತ್ತೆ)
ಈಗ ಎಲ್ಲಾ ಕಾಲದಲ್ಲೂ ಯಾವುದೋ ಒಂದು ವ್ಯವಸ್ಥೆಯಲ್ಲಿ ಮನುಷ್ಯರು ಇದ್ದೇ ಇರ್ತಾರಲ್ಲ.

ಓ.ಎಲ್.ಎನ್ : ಹೌದು.
ಕಿ.ರಂ : ಅಲ್ವಾ ಸಾರ್. ಹಾ ನನಗೆ ಅದು ಮಿತಿಗೊಳಿಸುತ್ತೆ ಅಂತ ಹೇಳಲ್ಲ. ನೀವೆ ಹೇಳಿ, ಬಹಳ ವರ್ಷ ಇಂಗ್ಲೀಷ್ ನ ಭೋದಿಸಿದ್ದೀರಿ ಮತ್ತು ಅಧ್ಯಾಪಕರು ಶೇಕ್ಸ್ಪಿಯರ್ ನ ಮೇಲೆ ಈ ರೀತಿಯಾದ ಪ್ರಶ್ನೆಗಳಿಲ್ಲವೆ? ಅಲ್ಲಾ ಈಗ ಏಟ್ಸ್ ಕವಿ ಮೇಲೆ ಪ್ರಶ್ನೆ ಇರುತ್ತೆ, ಮಿಲ್ವನ್ ಮೇಲೂ ಇರುತ್ತೆ. ನಾವೇನು ಮಾಡಿಟ್ಟಿದೀವಿ ನಮ್ಮಲ್ಲಿ ಅದನ್ನ ಬಹಳ ಜೋರಾದ ಪ್ರಶ್ನೆಯಾಗಿ ಪ್ರೊಜೆಕ್ಷನ್ ಗೆ ಬಂದಿದೆ. ಅದನ್ನ ಒಬ್ಬ ಚಿತ್ರಕಲಾವಿದನಿಗೂ ಹೇಳಬಹುದು, ಒಬ್ಬ ಸಂಗೀತಗಾರನಿಗೂ ಹೇಳಬಹುದು, ಒಬ್ಬ ಶಿಲ್ಪಿಗೂ ಈ ಮಾತು ಹೇಳಬಹುದು. ಬರೀ ವರ್ಬಲ್ ಆರ್ಟ್ ಗೆ ಮಾತ್ರ ಅಲ್ಲ. ನಮ್ಮ ಹಿಂದಿನ ಗಾಯಕರೆಲ್ಲಾ ಕೂಡ ರಾಜಸ್ಥಾನದಲ್ಲಿ ಗಾಯಕರಾಗಿದ್ರು. ಹಾಗಂದ ಮಾತ್ರಕ್ಕೆ ಸಂಗೀತದ ಮೇಲೆ ಪ್ರಶ್ನೆ ಎಂದಹಾಗಾಗುತ್ತ? ಅಥವಾ ನಾವು ಇವತ್ತು ಯಾವುದನ್ನ ಕರ್ನಾಟಕದ ಶ್ರೇಷ್ಠವಾದ ಕಲೆ ಅಂತ ಕರೀತಿವಿ ಅವುಗಳೆಲ್ಲ ಪ್ರಭುತ್ವದ ಅಡಿಯಲ್ಲೆ ಸೃಷ್ಠಿಯಾದವು-ನಿರ್ಮಾಣವಾದವು ಅಲ್ಲಿ ಯಾಕೆ ಆ ಪ್ರಶ್ನೆಗಳು ಮುಖ್ಯ ಅಲ್ಲ? ಕಾಳಿದಾಸನಂತ ಕವಿಗೆ ಅನ್ವಯ ಅಲ್ವೆ? ಇಂತ ಮಾತುಗಳು ಆಗೇನಾಗುತ್ತೆ? ಪಂಪನಂತ ಒಬ್ಬ ಕವಿ ಅದು ರಾಜನ ಆಶ್ರಯದಲ್ಲಿ ಇದ್ದ ಮಾತ್ರಕ್ಕೆ ತನ್ನ ಇಡೀ ಪ್ರತಿಭೆಯನ್ನು ಆಧಿಪತ್ಯಗೊಳಿಸಿದಾನೆ ಅಂತ ಹೇಳಿದಾಗ ಪಂಪನನ್ನ ಮಿತಿಗೊಳಿಸಿ ಯೋಚನೆ ಮಾಡದಂತಾಗುತ್ತೆ ಅನ್ನೋದೆ ನನ್ನ ತಿಳುವಳಿಕೆ. ಆದರಿಂದ ಈ ರೀತಿಯಾದ ವಿಮರ್ಶೆಯಿಂದ ಪಂಪನ ಕೃತಿಗಳಿಗೇನೂ ಮಿತಿ ಬಂದಿಲ್ಲ. ಪಂಪನಿಗೆ ಅಂತಹ ವಿಮರ್ಶೆಗಳು ಕೂಡ ಆಡ್ ಆಗಿದೆ ಅಂತ ಹೇಳ್ತೀನಿ.

ಓ.ಎಲ್.ಎನ್ : ಈಗ ಕುವೆಂಪು, ಬೇಂದ್ರೆ, ಕುಮಾರವ್ಯಾಸ ಆ ಕವಿಗಳು ಒಂಥರಾ ಸಂಥಿಂಗ್ ಸ್ಪೇಷಲ್ ಅನ್ನೋಥರಾ ಜನರಲ್ ಐಡಿಯಾ ಇದ್ದಾವೆ. ಕುವೆಂಪು ಅಂದ್ರೆ ಹೀಗೆ, ಮಾಸ್ತಿ ಅಂದ್ರೆ ಹೀಗೆ, ‘ಕುಮಾರವ್ಯಾಸನು ಹಾಡಿದನೆಂದರೆ…’ ಅಂತಿದೆ. ಒಂದು ಪಿಕ್ಚರ್ ಇದೆ ಆ ಕವಿಗಳ ಬಗ್ಗೇನೆ. ಹಾಗೆ ಪಂಪನ ಬಗ್ಗೆ ಸ್ಪೆಷಲ್ಲಾದ ಪಿಕ್ಚರ್ ನಿಮ್ಮ ಮನಸಿನಲ್ಲಿ ಯಾವುದು ಮೂಡುತ್ತೆ?

ಕಿ.ರಂ. : ಅನೇಕ ಮೂಡುತ್ತೆ (ನಗು)
ಓ.ಎಲ್.ಎನ್ : ಆ ಅನೇಕ ಯಾವುದು (ನಗು)
ಕಿ.ರಂ : ಕನ್ನಡ ಭಾಷೆಯನ್ನ ಹಾಗೆ ಬಹಳ ಅರ್ಥಪೂರ್ಣವಾಗಿ ಕಟ್ಟಿದ ಕವಿ ಅವನು. ನಮ್ಮ ಇಡೀ ಕಾವ್ಯ ಪರಂಪರೆಗೆ ಒಂದು ಭದ್ರವಾದಂತ ನೆಲೆಗಟ್ಟನ್ನು ನಿರ್ಮಿಸಿ ಕೊಟ್ಟವನು. ಆ ರೀತಿಯಾದಂಥ ಅವನ ನಿರ್ಮಾಣ ಇದೆಯಲ್ಲ ನಾವೆಲ್ಲ ಹೇಳ್ತಿವಲ್ಲ ಮಾರ್ಗ ಮತ್ತು ದೇಸಿ ಇಂತವುಗಳನ್ನ ಬೇರೆ ರೀತಿಯಲ್ಲಿ ಅಳವಡಿಸಿದವನು ಪಂಪ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಪರಂಪರಾಗತವಾದ ಕಥನವನ್ನ ತನ್ನ ಸಮಕಾಲೀನಕ್ಕೆ ಅವಸ್ಥಾಂತರಿಸಿದವನು.

ಓ.ಎಲ್.ಎನ್ : ಸಾರ್ ಅದಕ್ಕೆ ಅಂತ ಕಾಣುತ್ತೆ ಆದಿಪುರಾಣದಲ್ಲಿ ಕೊನೆಪಕ್ಷ ಪೇಜ್ ಗೆ ಒಂದು ಸಲನಾದರೂ ‘ಪೊಸತು’ ಅನ್ನೊ ಮಾತು ಬರುತ್ತೆ.
ಕಿ.ರಂ : ಹೌದು.
ಓ.ಎಲ್.ಎನ್ : ಪೊಸದು ಮಾಡ್ತಾ ಇದ್ದೀನಿ. ಕಾನ್ಷಿಯಸ್ಸಾಗಿ ಮಾಡ್ತಿರ್ತಿನಿ ಅಂತ.
ಕಿ.ರಂ : ‘ವಿಕ್ರಮಾರ್ಜುನೇಯ ವಿಜಯ’ದಲ್ಲೂ ಇದೆ ‘ಇದು ನಿಚ್ಚಂ ಪೊಸತು’ ಅಂತ.
ಓ.ಎಲ್.ಎನ್ : ಅವಳ ಭಂಗಿ ಪೊಸತು ಅಂತ ಪೊಸತು ಅನ್ನೋದನ್ನ ಎಷ್ಟು ಸಲ ಬಳಸ್ತಾನೆ ಅಂದ್ರೆ ಅವನು!!

ಕಿ.ರಂ : ‘ನಿಚ್ಚಂ ಪೊಸೆಯಿಸಿ’, ‘ಪೊಸತಂ ಸ್ತ್ರಿರಾಜ್ಯಮಂಮೇನ್ ಪಡೆದನೋವಿಧಿ… ನೀವು ಹೇಳಿದ್ರಲ್ಲ ತುಂಬಾ ವಿಶಿಷ್ಟವಾದದ್ದು ಅಂತ ನೋಡಿ ಈಗ ಉದಾಹರಣೆಗೆ ಅಖಿಲಭಾರತದ ಒಂದು ಕಥನವನ್ನ ನಮ್ಮ ಪ್ರಾದೇಶಿಕ ವ್ಯಾಪ್ತಿಯಲ್ಲಿ ಜೋಡಿಸಿಕೊಟ್ಟ ಕ್ರಮ ಇದೆಯಲ್ಲಾ ‘ವಿಕ್ರಮಾರ್ಜುನ ವಿಜಯ’ ಬಹಳ ದೊಡ್ಡ ಕೊಡುಗೆ. ಮುಂದೆ ರನ್ನನಂಥವರು ಹಾಗೂ ಮುಂದೆ ಬಂದಂತವರು ಅದನ್ನ ಅನುಸರಿಸೊ ಪ್ರಯತ್ನವನ್ನೂ ಮಾಡಿದ್ರು ಪಂಪನದೆ ಆದಂಥ ಈ ವಿಶಿಷ್ಟವಾದ ಕ್ರಮ ತನ್ನ ಸಮಕಾಲೀನವಾದಂತ ಇತಿಹಾಸಕ್ಕೆ ಮಹಾಭಾರತದ ಕಥೆಯನ್ನ ಜೋಡಿಸಿ ಒಂದು ಮೂರನೇ ಆಯಾಮವನ್ನು ಹೊಸದಾಗಿ ತೋರಿಸ್ತಿದೆ.

ಫೋಟೋಗಳು: ನೇತ್ರರಾಜು

ಓ.ಎಲ್.ಎನ್ : ಬಹುಶಃ ರಾಮಾಯಣ ಮಹಾಭಾರತ ಈ ಎರಡು ಸೇರಿಸಿ ಇದು ಕಾವ್ಯವಾಗಿರಬಹುದು.
ಕಿ.ರಂ : ಹೌದು, ಒಂದು, ರಾಮಾಯಣ ಮಹಾಭಾರತ ಸೇರಿಸಿದ ಕಾವ್ಯ. ಎರಡು, ಪಂಪನ ಹಿಂದೆ ಇದ್ದಂಥ ಸಂಸ್ಕೃತ ಕವಿಗಳು ಅವರೆಲ್ಲರ ಸೂಕ್ಷ್ಮತೆಗಳನ್ನೂ ಹಿಡಿದ. ಪಂಪ ಬರೆದ ಕಾಲ ಸಂಸ್ಕೃತ ಸಾಹಿತ್ಯದ ಅವನತಿಯ ಕಾಲ ಹಾಗೇ ಹತ್ತನೆ ಶತಮಾನ ನಮಗೆ ಮಹತ್ವವಾದ ಉನ್ನತವಾದ ಕಾಲ ಅಂದ್ರೆ ಸಂಸ್ಕೃತ ಸಾಹಿತ್ಯದ ಇಳಿಗಾಲದಲ್ಲಿ ದೇಶಭಾಷೆಗಳ ಉಚ್ಛ್ರಾಯಕಾಲ. ಯಾಕಂದ್ರೆ ದೇಶಭಾಷೆಗಳೆಲ್ಲ ಸಂಸ್ಕೃತದ ಹಿಡಿತವನ್ನು ನಿಧಾನವಾಗಿ ಕಳ್ಕೊಳ್ತಾ ತಮ್ಮ ಅನನ್ಯತೆಯನ್ನು ರೂಪಿಸಿಕೊಳ್ಳೊದಕ್ಕೆ ಪ್ರಯತ್ನಿಸುತ್ತಿದ್ದ ಕಾಲ. ಅಲ್ಲಿ ಇನ್ನೂ ಚೆನ್ನಾಗಿ ಗೊತ್ತಾಗುತ್ತೆ, ಹನ್ನೆರಡನೆ ಶತಮಾನದ ವಚನಕಾರರನ್ನು ನೋಡಿದ್ರೆ, ಹರಿಹರನನ್ನ ನೋಡಿದ್ರೆ ಅದು ಇನ್ನೂ ನಿಚ್ಚಳವಾದ ಕಾಲವನ್ನ ಒಂದುವರೆ-ಎರಡನೆ ಶತಮಾನದಲ್ಲಿ ಕಾಣಿಸಿಕೊಳ್ಳುತ್ತೆ. ಹೀಗೆ ಮೊದಲಾಗಿ ಕನ್ನಡಕ್ಕೆ ತನ್ನದೆಯಾದ ಅನನ್ಯ ಕಾವ್ಯ ಭಾಷೆಯನ್ನು ಕಟ್ಟಿದ್ದೇ ಪಂಪನ ವಿಶಿಷ್ಟತೆ. ನೀವೇ ಹೇಳಿದ್ರಲ್ಲ ಬೇರೆ ಬೇರೆ ಕವಿಗಳಲ್ಲಿ ಒಂದೊಂದನ್ನ ಏನೋ ಎಣಿಸಬಹುದು. ಪಂಪನಲ್ಲಿರುವ ಒಂದು ಸಮಗ್ರವಾದಂತ ಈ ಒಂದು ಕನ್ನಡದ್ದೆಯಾದ ಕಾವ್ಯದ ಕಟ್ಟುವಿಕೆ ಇದೆಯಲ್ಲ ಆ ಕಾವ್ಯದ ಕಟ್ಟುವಿಕೆ ಸಾಮಾನ್ಯವಾದ ನಮ್ಮ ಕಲ್ಪನೆಗೆ ಸಿಕ್ಕಲ್ಲ. ಮತ್ತೆ ಈಗ ನೀವು ಪಂಪನನ್ನ ಎಣಿಸದೆ ಕನ್ನಡ ಕಾವ್ಯವನ್ನೆ ಎಣಿಸೋಕೆ ಬರಲ್ವಲ್ಲ. ಅಲ್ವ? ಪಂಪನಿಗೆ ಬಹಳ ದೊಡ್ಡದಾದ ಜವಾಬ್ದಾರಿಯೂ ಇತ್ತು. ತನ್ನ ಭಾಷೆಯನ್ನ ಇಷ್ಟೊಂದು ಭಾಷಾ ವೈವಿಧ್ಯಗಳ ಸಂದರ್ಭದಲ್ಲಿ ಒಂದು ಕಾವ್ಯ ಭಾಷೆಯಾಗಿ ಕಟ್ಟುವ ಕ್ರಮ ಪಂಪನ ಬಂಧವೇ ಸಾಕಲ್ವೆ ನಮಗೆ? ಮತ್ತೆ ಹಿಂದಿನ ನಿಮ್ಮ ಪ್ರಶ್ನೆಗೆ ಬರ್ತೀನಿ. ಪಂಪನ ಅಧ್ಯಯನದಲ್ಲಿ ಇಂತಹ ಸಾಧ್ಯತೆಗಳನ್ನ ತಂದುಕೊಳ್ಳೋಕೆ ಆಗಿಲ್ಲ.

ಓ.ಎಲ್.ಎನ್ : ಆಗಿಲ್ಲ. ಸುಮ್ನೆ ಕುತೂಹಲದ ಪ್ರಶ್ನೆ. ವಚನಕಾರರ ಮೇಲೆ ಪಂಪನ ಪ್ರಭಾವ ಏನಾದ್ರು ಆಗಿತ್ತಾ? ಪಂಪನನ್ನ ಓದಿರಬಹುದಾ ವಚನಕಾರರು.

ಕಿ.ರಂ : ಹಾಂ ನಾವೇನ್ಮಾಡ್ಬಿಟ್ಟಿದ್ದೀವಿ ಅಂದ್ರೆ ಈ…
ಓ.ಎಲ್.ಎನ್ : ಸುಮ್ನೆ ಕುತೂಹಲದ ಪ್ರಶ್ನೆ ಸರ್…

ಕಿ.ರಂ : ಇವತ್ತಿನಲ್ಲಿ ಆ ರೀತಿಯಾದ ಪ್ರಭಾವಗಳನ್ನ ಕೇವಲ ಅದರ ಸ್ಟೈಲಿಸ್ಟಿಕ್ಕಾದ ಕ್ರಮದಿಂದ ನೋಡುವಂತದ್ದಲ್ಲ.
ಓ.ಎಲ್.ಎನ್ : ಅಲ್ಲಲ್ಲ ಯಾಕಂದ್ರೆ ಆ ಕಾಲದ ಒಬ್ಬ ದೊಡ್ಡ ಕವಿಯನ್ನ ಕನ್ನಡ ಒಪ್ಕೊಂಡಿತ್ತು. ವಚನಕಾರರು ಜೈನರಿಗೆ ರಿಯಾಕ್ಟ್ ಮಾಡಿದ್ದಿದೆ. ವಿಶೇಷವಾಗಿ ಪಂಪನಿಗೆ ರಿಯಾಕ್ಟ್ ಮಾಡಿದ್ದು ಎಲ್ಲಾದರೂ ಗಮನಕ್ಕೆ ಬಂದಿದೆಯಾ?

ಕಿ.ರಂ : ವಚನಕಾರರು ಯಾವುದೇ ಕಾವ್ಯಕ್ಕೆ ಆ ರೀತಿ ರಿಯಾಕ್ಟ್ ಮಾಡಲೇ ಇಲ್ಲ. ಹಾಗೆ ರಿಯಾಕ್ಟ್ ಮಾಡುವುದು ಬಸವಣ್ಣನ ಕ್ರಮನೂ ಆಗಿರಲಿಲ್ಲ. ಸ್ವಲ್ಪ ಅಲ್ಲಮಪ್ರಭುವಿನಲ್ಲಿ ಎರಡು-ಮೂರು ವಚನಗಳು ಸಿಗುತ್ತೆ. ವಸ್ತುಕ, ವರ್ಣಕ ಇಂತಹ ಕವಿಗಳು ಅವ್ರು ಏನ್ ಮಾಡ್ತಾರೆ ಅಂತೇಳಿ?

ಕನ್ನಡ ಭಾಷೆಯನ್ನ ಹಾಗೆ ಬಹಳ ಅರ್ಥಪೂರ್ಣವಾಗಿ ಕಟ್ಟಿದ ಕವಿ ಅವನು. ನಮ್ಮ ಇಡೀ ಕಾವ್ಯ ಪರಂಪರೆಗೆ ಒಂದು ಭದ್ರವಾದಂತ ನೆಲೆಗಟ್ಟನ್ನು ನಿರ್ಮಿಸಿ ಕೊಟ್ಟವನು. ಆ ರೀತಿಯಾದಂಥ ಅವನ ನಿರ್ಮಾಣ ಇದೆಯಲ್ಲ ನಾವೆಲ್ಲ ಹೇಳ್ತಿವಲ್ಲ ಮಾರ್ಗ ಮತ್ತು ದೇಸಿ ಇಂತವುಗಳನ್ನ ಬೇರೆ ರೀತಿಯಲ್ಲಿ ಅಳವಡಿಸಿದವನು ಪಂಪ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಪರಂಪರಾಗತವಾದ ಕಥನವನ್ನ ತನ್ನ ಸಮಕಾಲೀನಕ್ಕೆ ಅವಸ್ಥಾಂತರಿಸಿದವನು.

ಓ.ಎಲ್.ಎನ್ : ಅದನ್ನೂ ರಿಜೆಕ್ಟ್ ಮಾಡಲಿಕೆ ಹೇಳೋದು.

ಕಿ.ರಂ : ಅದನ್ನ ರಿಜೆಕ್ಟ್ ಮಾಡಲಿಕ್ಕೆ ಹೇಳೋದರಿಂದ ವಚನಕಾರರಿಂದ ಮುಂದಿನ ಕಾವ್ಯ ಪರಂಪರೆಗೆ ಬೇರೆ ರೀತಿಯಾದ ರಕ್ತದಾನ ಆಯಿತೇ ಹೊರತು ಅವರು ಕಾವ್ಯಪರಂಪರೆಯನ್ನ ಒಂದು ಪ್ರತ್ಯೇಕವಾದ ರೀತಿಯೊಳಗೆ ಹಾಗೆ…

ಓ.ಎಲ್.ಎನ್ : ಅಲ್ಲ ಕಾವ್ಯಪರಂಪರೆ ಅಂತ ಅಲ್ಲದಿದ್ರೂ ಕೂಡ ಕನ್ನಡದಲ್ಲಿ ಟೆಕ್ಸ್ಟ್ ಗಳಿದ್ದವು. ಚಂಪೂ ಇತ್ತು. ಅವರಿಗೆ ಗೊತ್ತಿರಲಿಲ್ಲ ಅಂತೇನೂ ಅಲ್ಲ. ಅದರಿಂದ ಏನು ಪಡೆದುಕೊಂಡಿರಬಹುದು? ಊಹೆ ಮಾಡಕ್ಕಾಗುತ್ತಾ ಸರ್.

ಕಿ.ರಂ : ಒಳ್ಳೆ ಪ್ರಶ್ನೆ. ಮುಂದಿನ ಕವಿಗಳಲ್ಲಿ ಚೆನ್ನಾಗಿ ಗೊತ್ತಾಗುತ್ತೆ… ವಚನಕಾರರಿಂದ ನಿಜವಾದದ್ದನ್ನ ಏನು ಪಡೆದೆ ಹರಿಹರ ಅಂತ ಹೇಳಬಹುದು, ನಾರಾಣಪ್ಪ ಏನು ಪಡೆದ ಅಂತ ಹೇಳಬಹುದು, ರಾಘವಾಂಕ ಮುಂತಾದವರು ಏನೇನು ಪಡೆದರು ಅಂತಾನೆ ಹೇಳ್ತಾ ಹೋಗಬಹುದು. ಆದರೆ ಪಂಪನಿಂದ ಏನು ಪಡೆದರು ಅಂದ್ರೆ ಇವರಿಗೊಂದಿತ್ತು. ಈ ರೀತಿಯಾದ ಒಂದು ಕ್ಲಾಸಿಕಲ್ ಮಾರ್ಗದ ಬಗ್ಗೇನೆ ವಚನಕಾರರಿಗೆ ಆಸಕ್ತಿ ಇರಲಿಲ್ಲ. ಯಾವಾಗ ಬಸವಣ್ಣ ‘ಆನು ಒಲಿದಂತೆ ಹಾಡುವೆ…’ ಅಂತ ಹೇಳಿದ ತಕ್ಷಣ ಇನ್ನು ಎಲ್ಲಾ ಕ್ರಮದ ಬಗ್ಗೆಯೂ ಅದು ವೈದಿಕ ಕವಿಗಳು, ಜೈನ ಕವಿ ಯಾವುದೇ ಕವಿಗಳಾಗಿರಬಹುದು ಅದನ್ನ ಹೇಳ್ತಾನೆ ಸ್ವಲ್ಪ ಬಾಣ, ಮಯೂರ ಮುಂತಾದವರ ಬಗ್ಗೆ ಬಸವಣ್ಣ ಅಷ್ಟಿಷ್ಟು ಉಲ್ಲೇಖಗಳನ್ನ ಹೇಳ್ತಾನೆ. ಆದ್ರೆ ನೀವು ಕೇಳೊ ಪ್ರಶ್ನೇನೆ ಅಧ್ಯಯನ ಮಾಡುವಂತ ಒಂದು ವಿಶೇಷವಾದ ಅಂಶ. ಆದರೆ ನನಗೆ ಹಿಂಗನ್ಸುತ್ತೆ. ಪಂಪ ಬಳಸಿದಂತಹ ಗದ್ಯದ ಕ್ರಮ ಇದೆಯಲ್ಲ. ಆ ಕ್ರಮ ಒಂದಿಡೀ ಪರಿಸರದಲ್ಲಿ ಪರಿಣಾಮ ಮಾಡಿರಬಹುದು. ಒಂದು ರೀತಿ ಛಂದೋನಿಷ್ಟತೆಯಿಂದ ಕೂಡಿರುವುದಕ್ಕೂ ಮತ್ತು ರಿಲ್ಯಾಕ್ಸ್ ಆಗಿ ಬರೆಯೊ ಗದ್ಯಕ್ಕೂ ಬೇರೆ ರೀತಿಯಾದ ವ್ಯತ್ಯಾಸಗಳಿವೆ.

ಓ.ಎಲ್.ಎನ್ : ಅಥವಾ ರೂಪಕಗಳಲ್ಲಿ ಏನಾದರೂ ಅಂದ್ರೆ ಪಂಪನ ರೂಪಕಗಳನ್ನೇನಾದರೂ ಬೇರೆ ತರಹ ಮಾಡಿಕೊಂಡು ಹೇಳೋದು…

ಕಿ.ರಂ : ಇದೆ ಇದೆ… ಅಂತದ್ದಿದೆ. ಗಾದೆ ಮಾತುಗಳನ್ನ, ಲೋಕೊಕ್ತಿಗಳನ್ನ ಬಹಳ ಚೆನ್ನಾಗಿ ಬಳಸ್ತಾನಲ್ಲ. ಇದನ್ನೆಲ್ಲಾ ಎಳೆದುತಂದು ವಚನಕಾರರಲ್ಲಿ ಕಟ್ಟಿದಂತಾಗುತ್ತೆ ಹೊರತು ಸಹಜವಾಗಿ ಹೇಳಬೇಕು ಅಂತ ಈ ತಕ್ಷಣದಲ್ಲಿ ಅನ್ನಿಸ್ತಿಲ್ಲ.

ಓ.ಎಲ್.ಎನ್ : ಕುತೂಹಲವೆಂದ್ರೆ ಒಬ್ಬ ಅಷ್ಟು ದೊಡ್ಡ ಕವಿ ಕನ್ನಡಕ್ಕೆ ಅಷ್ಟೆಲ್ಲ ಮಾಡಿದವನು ಮುಂದೆ ಬಂದವರು ಕನ್ನಡವನ್ನು ಇನ್ನೊಂದು ದಿಕ್ಕಿಗೆ ತಿರುಗಿಸಿದವರು. ಆ ಒಂದು ಪರಂಪರೆ ಶತಮಾನವಿತ್ತಲ್ಲ ಹಿಂದಿನದು..

ಕಿ.ರಂ : ಇನ್ನೊಂದು ದಿಕ್ಕಿಗೆ ತಿರುಗಿಸಿದ್ರು ಅಂತ ಎಲ್ಲಾ ಹೇಳ್ತಾರೆ. ಪಂಪನ ಆ ರೀತಿಯಾದ ದಿಕ್ಕನ್ನ ಬಹಳ ಅಳ್ಳಕವಾಗಿ ಬಳಸಿದಂತಹ ಮುಂದಿನ ಕವಿಗಳೂ ಇದ್ದಾರೆ. ಹದಿನೇಳನೇ ಶತಮಾನದವರೆಗೂ ಚಂಪೂ ಬರೆಯೋರು ಇದ್ದೆ ಇದ್ರಲ್ಲ.

ಓ.ಎಲ್.ಎನ್ : ಹಾಗೆ ಪ್ರಕಾರ ಎಲ್ಲೂ ಹೋಗಲ್ಲ ಇರ್ತವೆ. ಅವು ವಚನಕಾರರ ಧೋರಣೆ, ಮಹತ್ವವನ್ನು ಕುಮಾರವ್ಯಾಸನವರೆಗೂ ಬಳಸಿದ್ದಿದೆ, ಅದು ಕಾಣುತ್ತೆ.

ಕಿ.ರಂ : ಅದು ಆ ರೀತಿ ಇದೆ. ಆ ಮಾತನ್ನು ಅಲ್ಲಿ ಒಪ್ತೀನಿ ಉದಾಹರಣೆಗೆ ಜಾತಿ ಬಗ್ಗೆ ಮುಂತಾದವುಗಳ ಬಗ್ಗೆ ತೋರಿಸೊ ಧೋರಣೆ. ನೋಡಿ, ಹನ್ನೆರಡನೇ ಶತಮಾನದ ಧೋರಣೆ ಮುನ್ನಲೆಗೆ ಬರಬೇಕಾದರೆ ಅದಕ್ಕೆ ಪೂರ್ವಪೀಠಿಕೆ ಆಗಿ ಪಂಪನಲ್ಲೆ ಆ ರೀತಿಯಾದ ಧೋರಣೆಗಳಿವೆ. ದ್ರೋಣ, ಭೀಷ್ಮ, ಕರ್ಣ ಇವರ ಚರ್ಚೆ ನಡೆಯುತ್ತೆ. ಪ್ರಾಯ, ಕುಲ, ಈ ಪ್ರಶ್ನೆಗಳ ಕುರಿತಾಗಿ ಬಹಳ ಮುಕ್ತವಾದ ಡಿಬೇಟ್ ನಡೆಯುತ್ತೆ. ಅಂತಹ ಡಿಬೇಟ್ ನಡೆಯೋದಿಕ್ಕೆ ಪಂಪನ ಸಂದರ್ಭದಲ್ಲೇ ಆ ರೀತಿಯಾದ ಚರ್ಚೆ ಇದೆ. ಆ ಚರ್ಚೆ ಏನಾಯಿತು? ಹನ್ನೆರಡನೇ ಶತಮಾನದಲ್ಲಿ ಫ್ಲೋರ್ ಫ್ರಂಚ್ ಗೆ ಬಂತು; ಹೆಚ್ಚು ಮುನ್ನಲೆಗೆ ಬಂತು.

ಓ.ಎಲ್.ಎನ್ : ಹೀಗೆ ಹೇಳಬಹುದಾ ಸರ್. ಯಾವುದೇ ಒಂದು ದೊಡ್ಡ ಸಂಸ್ಕೃತಿಯಲ್ಲಿ ಮುಖ್ಯವಾದ ಕನಸರ್ನ್ಸ್ ಇರ್ತವೆ. ಆದ್ರೆ ಎಲ್ಲಾ ಕಾಲದಲ್ಲೂ ಅವಕ್ಕೆ ರೂಪ ಕೊಡೊ ರೀತಿ ಮಾತ್ರ ಬದಲಾಗ್ತಾ ಹೋಗ್ತವೆ.
ಕಿ.ರಂ : ಹೌದು ಅಷ್ಟಲ್ಲದೆ ಪಂಪನಿಗೂ ಬಸವಣ್ಣನಿಗೂ ಎರಡು ಶತಮಾನಗಳ ಅಂತರವು ಇದೆಯಲ್ಲ. ಅದು ಸಾಮಾನ್ಯ ಅಲ್ಲ. ಪಂಪನಿಗಿಂತ ಇನ್ನೂ ಹೆಚ್ಚು ಡಿಮಾಕ್ರಟೈಜ್ ಆಗೋ ಕಡೆಗೆ ನಮ್ಮ ಸಂಸ್ಕೃತಿ ಚಲಿಸಿದೆ. ಈಗ ಸಮುದಾಯದ ಒಂದು ಭಾಷಾಕ್ರಮ ಬಸವಣ್ಣನಲ್ಲಿ ಹ್ಯಾಗೆ ಬೇರೆ ರೀತಿಯಲ್ಲಿ ಮೈ ಪಡೆಯುತ್ತೆ? ಅಂದ್ರೆ ಪ್ರಮಾಣದ ವ್ಯತ್ಯಾಸ ಇರಬಹುದು. ಪಂಪನಲ್ಲಿ ಮತ್ತು ಬಸವಣ್ಣನಲ್ಲಿ ಅದರ ಪ್ರಮಾಣ ವ್ಯತ್ಯಾಸವಾಗುತ್ತೆ.

ಓ.ಎಲ್.ಎನ್ : ಈಗ ಆದಿಪುರಾಣದಂತಹ ಟೆಕ್ಟ್ಸ್ ನ ಬೇರೆ ಬೇರೆ ತರಹ ಪ್ರೆಜೆಂಟ್ ಮಾಡಿರೋರ ಬಗ್ಗೆ ಕನ್ನಡದಲ್ಲಿ ಏನೇನು ಪ್ರಯೋಗಗಳು ನಡೆದಿದೆ ಅನ್ಸುತ್ತೆ. ಈಗ ಬಸವರಾಜುರವ್ರು ಆದಿಪುರಾಣವನ್ನ ವಾಚಕರಿಗೆ ಅನುಕೂಲವಾಗೊ ತರಹ ಸರಳ ಕೆಲಸ ಮಾಡಿದ್ದಾರೆ. ಆ ತರಹ ಇನ್ನು ಅನೇಕ ಪ್ರಯೋಗಗಳನ್ನು ಮಾಡ್ಬೇಕಾಗುತ್ತೆ ಅಲ್ಪ? ಪಂಪನಂತಹ ಕವಿ ಬಗ್ಗೆ…

ಕಿ.ರಂ : ನಿಮಗೇ ಗೊತ್ತಲ್ಲ. ಶೇಕ್ಸ್ ಪಿಯರ್ ನ ಎಷ್ಟೆಷ್ಟು ವೈವಿಧ್ಯವಾಗಿ ಪ್ರೆಜೆಂಟ್ ಮಾಡಲಾಗಿದೆ ಅಂತ. ನಮ್ಮ ದೊಡ್ಡ ಹೊಣೆಗಾರಿಕೆನೆ ಪಂಪನನ್ನ ನಾವು ಪ್ರಾಚೀನ ಎಂದು ತಿಳಿಯಲಾಗದು. ನಮ್ಮ ಕಾಲಕ್ಕೆ ಪಂಪನನ್ನ ಹಾಗೆ ನಾವು ಮತ್ತೆ ಪುನರ್ ಆವಿಷ್ಕಾರಗೊಳಿಸ್ಕೋತಿವಿ.

ಓ.ಎಲ್.ಎನ್ : ನೀವು ಹೇಳಿದ್ದು ಸರಿ. ಈಗ ಸುಮ್ಮನೆ ಒಂದು ಬೌದ್ಧಿಕ ಕುತೂಹಲದ ಪ್ರಶ್ನೆ. ಪಂಪನನ್ನ ಎಡಿಟ್ ಮಾಡಿರೋರು ಒಂದೈದಾರು ಮಂದಿ ಮುಖ್ಯವಾದೋರು ಇದ್ದಾರೆ. ಅವರು ಎಡಿಟ್ ಮಾಡೊ ಕ್ರಮದಲ್ಲಿ ಯಾರು ನಿಮಗೆ ಹೆಚ್ಚು ನಮ್ಮ ಓದಿಗೆ ಉಪಯುಕ್ತ ಅನ್ಸುತ್ತೆ? ಪೀಠಿಕೆಗಳನ್ನು ಬರೆದವರಿದ್ದಾರೆ, ಸರಳ ಓದಿಗೆ ಮಾಡಿದವರಿದ್ದಾರೆ… ಆ ಎಡಿಟರ್ಗಳ ದೃಷ್ಟಿಯಲ್ಲೇ ಏನಾದ್ರೂ ದ್ವಂದ್ವಗಳು ಕಾಣುತ್ತವಾ ನಿಮಗೆ..

ಕಿ.ರಂ : ಪಂಪನಂತಹ ಒಬ್ಬ ದೊಡ್ಡ ಕವಿಗೆ ಯಾವುದೇ ರೀತಿಯಾದ ಪ್ರಯತ್ನಗಳನ್ನು ಯಾರ್ಯಾರು ಮಾಡಿದ್ರು ಕೂಡ ಅವೆಲ್ಲವೂ ಇವತ್ತಿನ ಅಧ್ಯಯನಕ್ಕೆ ಉಪಯುಕ್ತವೇ. ಮೊದಲ ಪಂಪಭಾರತ ಎಡಿಟ್ ಆಗಿದ್ದು ಪ್ರಾಯಶಃ ರೈಸ್ ನಿಂದ ಅಲ್ಲವೆ? ಅದಾದ ಮೇಲೆ ಒಂದು ಟೀಮ್ ವರ್ಕಾಗಿ ಬಂತು. ಅದಕ್ಕೆ ನಾಲ್ಕಾರು ವಿದ್ವಾಂಸರು ಸೇರಿ ಬೆಳ್ಳಾವೆ ಎಡಿಷನ್ ಆಗಿರೋದು. ಅದಾದ ಮೇಲೆ ಮತ್ತೆ ಪಂಪಭಾರತ ಎಡಿಟ್ ಆಗಲೇ ಇಲ್ಲ. ಬಸವರಾಜುರವರೆ ಮತ್ತೆ ಅದನ್ನ ನಮ್ಮ ಸಂದರ್ಭದಲ್ಲಿ ಎಡಿಟ್ ಮಾಡಿಕೊಟ್ಟೋರು. ಹಾಗೆ ನೋಡಿದ್ರೆ ತುಂಬಾ ಎಡಿಷನ್ ಗಳಿಲ್ಲ. ನೀವು ಹೇಳಿದಂತೆ ಮಿಲ್ಟ್ ನದು ಎಷ್ಟು ಎಡಿಷನ್ ಗಳಿದ್ದಾವು, ಶೇಕ್ಸ್ಪಿಯರ್ ದು ಎಷ್ಟು ಎಡಿಷನ್ಗಳಿದ್ದಾವು? ಡಾಂಟೆಗೂ, ಹೋಮರ್ ಗೂ ಎಷ್ಟು ಅನುವಾದಕರಿದ್ದಾರು? ಹೀಗಾಗಿ ಅದು ವ್ಯಾಪ್ತಿಯನ್ನ ಪಡೆದುಕೊಂಡಿದೆ. ನಾವೇನ್ಮಾಡ್ತಿದಿವಿ ಅಂದ್ರೆ ಇರೋ ಈ ಮೂರು-ನಾಲ್ಕು ಎಡಿಷನ್ ಗಳ ಬಗ್ಗೇನೆ ಅದು ಸರಿ ಇದು ಸರಿಯಿಲ್ಲ.. ಹೀಗಾಗಬೇಕು ಹಾಗಾಗಬೇಕು ಅಂತ ಅಂತಿದ್ದೀವಿ. ಅದಕ್ಕೆ ಕಾರಣ ಇವರಿಗೆ ತಮ್ಮ ವಿದ್ವತ್ತಿನ ಸ್ಥಾಪನೆಯೇ ಪ್ರಧಾನವಾಗಿದೆಯೊ? ಪಂಪನ ಅಧ್ಯಯನಗಳನ್ನ ಬೇರೆ ಸ್ತರಗಳಿಗೆ ಮತ್ತು ಆಧುನಿಕ ಸಂದರ್ಭದಲ್ಲಿ ಹ್ಯಾಗೆ ವಿಸ್ತಾರ ಮಾಡಬೇಕು ಅಂತ ಕಾಳಜಿ ಇದೆಯೊ? ಗೊತ್ತಾಗ್ತಿಲ್ಲ.

ಬಸವರಾಜು ಯಾವುದಾದ್ರೂ ಒಂದು ಹೊಸ ಕ್ರಮ ತೋರಿಸಿದ್ರೆ ಅದು ಹ್ಯಾಗಾಗುತ್ತೆ ಅಂತ ಕ್ಯಾತೆ ತೆಗೆಯೋರು ನಮ್ಮ ಮಧ್ಯೆ ಇದ್ದಾರೆ. ಆ ರೀತಿ ಶೇಕ್ಸ್ ಪಿಯರ್ ನ ಹೀಗೆ ಎಡಿಟ್ ಮಾಡಬಹುದಿತ್ತೆ ಅಂತ ಯಾರಾದ್ರೂ ಪ್ರಶ್ನೆ ಕೇಳಿದ್ರೂ ಆ ಪ್ರಶ್ನೆಯನ್ನ ಅವರ್ಯಾರು ಮುಖ್ಯವಾಗಿ ಕನ್ಸೀಡರ್ ಮಾಡೇ ಇಲ್ಲ. ಆದಿಪುರಾಣವನ್ನ ವೆಂಕಟಾಚಲಶಾಸ್ತ್ರಿಯವರು ಸಂಸ್ಕೃತಿ ಇಲಾಖೆಗೆ ಪುನರ್ ಎಡಿಟ್ ಮಾಡ್ಕೊಟ್ಟಿದ್ದಾರೆ. ಎಸ್.ಜಿ. ನರಸಿಂಹಚಾರ್ಯರು ಎಡಿಷನ್ನನ್ನು ನಾವು ಎಪ್ಪತ್ತರ ದಶಕದಲ್ಲಿ ಬಂದ ಬಸವರಾಜುರವರ ಎಡಿಷನ್ ಆದ ಮೇಲೆ ಮತ್ತೆ ಅದನ್ನ ಪ್ರಸ್ತುತಗೊಳಿಸಿದ್ದೀವಿ. ಆ ಎಡಿಷನ್ ಆದ ಮೇಲೆ ಮತ್ತೆ ಅದನ್ನ ಪ್ರಸ್ತುಗೊಳಿಸಿದ್ದೀವಿ. ನಾನು ಪ್ರಸ್ತುತಗೊಳಿಸಬಾರದು ಅಂತೇನು ಹೇಳ್ತಿಲ್ಲ. ಆ ಎಡಿಷನ್ ಡಿಟ್ಯಾಚ್ಡ್ ಆಗಬಹುದು. ಅದನ್ನ ಇವರು ಎಡಿಟ್ ರೀಎಡಿಟ್ ಮಾಡಿದ್ರು. ಅದೂ ಅಲ್ಲದೆ ಬಸವರಾಜುರವರ ಒಂದು ಪ್ರಯೋಗ ಇದೆಯಲ್ಲ ಆ ಪ್ರಯೋಗವನ್ನ ಆ ರೀತಿ ಯಾರೂ ಧೈರ್ಯವಾಗಿ ಪ್ರಶ್ನಿಸಿಲ್ಲ. ಎದುರಿಸೊ ಧೈರ್ಯವೊ ತಾಕತ್ತೊ ನಮ್ಮ ಸ್ವಘೋಷಿತ ವಿದ್ವಾಂಸರಿಗೆ ಇದ್ದಂತೆ ತೋರಲ್ಲ. ನಮ್ಮ ನವೋದಯದ ಸಂದರ್ಭದಲ್ಲಿ ಬಹಳ ಮುಖ್ಯವಾದ ಚಿಂತನೆಗಳು ಬಂದಿವೆ. ತಿ.ನಂ.ಶ್ರೀ, ಡಿ.ಎಲ್.ಎನ್ ಕುವೆಂಪು ಆ ಕಾಲದಲ್ಲಿ ಪಂಪನ ಕುರಿತು ಚಿಂತನೆ ಮಾಡಿದ್ದಾರೆ.

ನಾವು ನಮ್ಮ ಸಾಹಿತ್ಯ ಕೃತಿಗಳನ್ನ ಒಂದು ರೀತಿಯಲ್ಲಿ ನಿರ್ಬಂಧಗೊಳಿಸಿದ್ದೀವಿ. ಎಲ್ಲರ ನಾಲಗೆಯಲ್ಲೂ ಸಹಜವಾಗಿ ಓಡಾಡೋ ಹಾಗೆ ಮಾಡೋದು ನಮ್ಮ ಕೆಲಸ ಆಗ್ಬೇಕು. ಈಗ ಬಸವರಾಜು ಮೇಷ್ಟ್ರು ಮಾಡಿರೋದು ಅದೇ. ಇದು ಒಬ್ಬ ಕವಿಯನ್ನ ವಿಸ್ತಾರಗೊಳಿಸುವ ಯೋಜನೆಗಳು. ಅದು ನಮ್ಮಂತಹ ಚಲನಶೀಲವಾದಂತಹ ಕನ್ನಡ ಭಾಷೆಯ ಸಂದರ್ಭದಲ್ಲಿ ಈ ರೀತಿಯಾದ ವಾತಾವರಣ ಏರ್ಪಡುವುದಿದೆಯಲ್ಲ ಅದು ಪಂಪನಿಗೆ ಅಲ್ಲ ಯಾವುದೇ ಕವಿಗೆ ಅಸಹಜ. ನಮ್ಮ ಕೃತಿಗಳಿಗೆ ಪ್ರವೇಶಿಸುವುದು ಹೇಗೆ? ಎನ್ನುವ ಹೊಸಮಾರ್ಗವನ್ನ ಕೂತು ನಾವೆಲ್ಲ ಯೋಚನೆ ಮಾಡಬೇಕು. ಆ ದೆಸೆಯೊಳಗೆ ಚಲಿಸಬೇಕು. ಅದಕ್ಕೆ ಕೇವಲ ಬರವಣಿಗೆ ಮಾರ್ಗಾನೆ ಅಲ್ಲದೆ ಮೌಖಿಕ ಮಾರ್ಗದ ಮೂಲಕವಾಗಿಯೂ ಇದರ ಪ್ರಸಾರ ನಡೆಯಬೇಕು. ಕಾವ್ಯಾನುಸಂಧಾನ ಅನೇಕ ಕ್ರಮಗಳಲ್ಲಿ ನಡೆಯುತ್ತೆ. ಈ ಪ್ರಶ್ನೆನೂ ಇದೆ. ನಮ್ಮ ನಿಜವಾದ ಚೆನ್ನಾಗಿ ಕಲಿತ ವಿದ್ವಾಂಸರು ಅನ್ನಿಸಿಕೊಳ್ಳೋರು ಜನಪದ ಮಹಾಕಾವ್ಯಗಳನ್ನ ಕೇಳಿಸಿಕೊಳ್ಳುವಾಗ ಎಷ್ಟು ರೀತಿಯಾದ ಅಡತಡೆಗಳು ಬರ್ತವೆ ನೋಡಿ. ಹಾಗೆ ಈ ಕಾವ್ಯಗಳನ್ನ ಓದುವಾಗಲೂ ಅಷ್ಟೇನೆ. ಈಗ ಜನಪದ ಕಾವ್ಯವನ್ನು ಮೀರಬೇಕಾದರೆ ನನಗೂ ಬೇರೆ ರೀತಿಯಾದ ಕಿವಿ ಬೇಕು. ಅದನ್ನ ಕೇಳಿಕೊಂಡು, ಬಹುಕಿಕೊಂಡು ಬಂದಿದೆ. ಮಂಟೇಸ್ವಾಮಿ, ಮಹದೇಶ್ವರರನ್ನ ಒಂದು ವಲಯ ತಿಳಿದಿಲ್ಲ. ಆದಿಪುರಾಣ ಅಥವಾ ಇನ್ನೊಂದು ಕಾವ್ಯವನ್ನ ಆ ಸಮುದಾಯ ತಿಳಿದಿಲ್ಲ. ಈ ಎರಡನ್ನೂ ಕೂಡಿಸ್ಕೊಂಡು ಓದೊ ಯೋಚ್ನೆ ಮಾಡಬೇಕಿದೆ ನಾವು. ಇವು ಕೇವಲ ಸೆಮಿನಾರ್ ಗಳಿಂದ ಆಗುವಂತದ್ದಲ್ಲ. ಈಗ ಉದಾಹರಣೆಗೆ ‘ಕುಸುಮಬಾಲೆ’ ಅದು ಬಂದಾಗ ಹಾಗೆ ಒಂದು ಸಣ್ಣ ತಳಮಳವನ್ನು ನಿರ್ಮಾಣ ಮಾಡಿತ್ತು. ಕಾಲಕಳೆದಂತೆಲ್ಲ ಆ ಎಲ್ಲ ತಳಮಳವೂ ಹೊರಟುಹೋಗಿ, ಅದಕ್ಕೆ ಬೇರೆಯದೆ ಆದ ಆಸಕ್ತಿ, ಕುತೂಹಲ ಹುಟ್ಟಿಕೊಳ್ತು. ಚರ್ಚೆ-ವಿಚಾರ ಬೆಳೀತಾನೆ ಇದೆ ಈಗಲೂ ಅದಕ್ಕೆ ಇನ್ನೂ ಬೆಳೀಬೇಕು. ಯಾವುದೇ ಕೃತಿಯ ಓದಿಗೆ ಕೆಲವು ಶಕ್ತಿಗಳನ್ನ ಓದುಗರಾಗಲಿ, ಕೇಳುಗರಾಗಲಿ ವ್ಯವಧಾನದಿಂದ ರೂಪಿಸ್ಕೊಬೇಕಾಗುತ್ತೆ. ಒಬ್ಬ ಕೃತಿಕಾರನಿಗಿಂತ ಇನ್ನೊಬ್ಬ ಕೃತಿಕಾರನಿಗೆ ಬೇರೆ ರೀತಿಯಾದ ಹೊಂದಾಣಿಕೆ ಬೇಕು. ಎಲ್ಲಾ ಕೃತಿಗಳನ್ನ ಒಂದೇ ರೀತಿಯಲ್ಲಿ ಹಾಗೆ ಗ್ರಹಿಸ್ತೀನಿ ಅಂತ ಹೇಳೋಕೆ ಬರಲ್ಲ.
ಓ.ಎಲ್.ಎನ್ : ಸಾಧ್ಯವೇ ಇಲ್ಲ.

ಕಿ.ರಂ : ಮತ್ತೆ ಕನ್ನಡದಲ್ಲಿ ಅದೆಷ್ಟು ವೈವಿಧ್ಯಮಯವಾದ ಕನ್ನಡ ಇದೆ. ಈ ಹೊಸ ವಿದ್ಯಾಭ್ಯಾಸ ಈ ರೀತಿಯಾದ ಕೆಲವು ಸರಳೀಕರಣದ ನೆಲೆಗಳಿಗೆ ನಮ್ಮನ್ನ ತಳ್ಳಿದೆ. ನನಗೆ ಕನ್ನಡ ಮಾತನಾಡೋಕೆ ಬರುತ್ತಲ್ಲ ನನಗ್ಯಾಕೆ ರನ್ನ ಗೊತ್ತಾಗಬಾರದು? ಮತ್ತೆ ನಮಗೆಲ್ಲಾ ಅರ್ಥ ಆಗಂಗೇ ಬರೀರಿ ಅಂತ!! ಅವ್ರು ಏನು ಅರ್ಥಮಾಡ್ಕೊಂಡಿರಲ್ಲ ಅವರಿಗೆ ಅರ್ಥ ಹಾಗೋ ಹಾಗೆ ಬರೀಬೇಕು ಅಂತ ಕೇಳ್ತಾ ಇದ್ದಾರೆ! ಅರ್ಥಮಾಡಿಕೊಳ್ಳೊದಕ್ಕಲ್ಲ ಒಂದು ಕೃತಿ ಇರೋದು ಅನುಭವಿಸೋಕೆ. ಈ ವಿದ್ವತ್ತಿನ ಜಗತ್ತು ಮತ್ತು ಸಾಹಿತ್ಯದ ಈ ರೀತಿಯಾದ ಸಂವಹನ ಜಗತ್ತುಗಳ ಮಧ್ಯೆ ಒಂದು ಗೋಡೆಯನ್ನು ನಾವೇ ನಿರ್ಮಾಣ ಮಾಡಿಟ್ಟಿದ್ದೀವಿ. ಇಂತಹ ಗೋಡೆಗಳನ್ನ ಛೇದಿಸದೆ ಬಂಧನದಲ್ಲಿ ಸಿಲುಕಿರೊ ನಮ್ಮ ಕೃತಿಗಳನ್ನ ಹೊರಗೆಡವಲು ಸಾಧ್ಯವಾಗುವುದಿಲ್ಲ.

 

ಫೋಟೋಗಳು: ನೇತ್ರರಾಜು
ರೇಖಾಚಿತ್ರ: ಬಿ.ಜಿ.ಗುಜ್ಜಾರಪ್ಪ

(ಬರೆಹ ರೂಪ:ಆರ್. ಸುಧೀಂದ್ರ ಕುಮಾರ್)