ಮೆಲ್ಲನೆ ಸದ್ದಾಗದಂತೆ ಸದ್ದು ಬರುವ ಕಡೆ ಗಿಡಗಂಟಿಗಳ ಬಳಿ ಇಣುಕುತ್ತಾ ನಡೆದೆ. ಆಹಾ, ಸಣ್ಣ ಕಂದು ಬಣ್ಣದ ಎರಡು ಮೊಲಗಳು ತರಗೆಲೆಗಳನ್ನು ಬದಿಗೆ ತಳ್ಳುತ್ತಿವೆ. ಆಶ್ಚರ್ಯದಿಂದ ನಾನು ಇನ್ನಷ್ಟು ಹತ್ತಿರ ಬಂದೆ. ಬಹುಶಃ ಅವುಗಳ ಕೆಲಸದಲ್ಲಿ ತಲ್ಲೀನವಾಗಿದ್ದರಿಂದ ನನ್ನ ಇರುವನ್ನು ಗುರುತಿಸಿರಲಿಕ್ಕಿಲ್ಲ. ಹಾಗಾಗಿ ಅವುಗಳಿಗೆ ಇನ್ನಷ್ಟು ಹತ್ತಿರವಾದೆ. ಅವುಗಳು ಅಪಾಯಕಾರಿ ಪ್ರಾಣಿಗಳಲ್ಲವೆಂದು ತಿಳಿದಿದ್ದರಿಂದ ಅವುಗಳನ್ನು ಹಿಡಿಯುವ ಮೂರ್ಖತನಕ್ಕೆ ಕೈ ಹಾಕಿದೆ. ಯಾವ ರೀತಿ ಹಿಡಿಯಬೇಕೆಂಬ ಪ್ರಾಥಮಿಕ ಜ್ಞಾನವೂ ನನಗಿರಲಿಲ್ಲ. ಹಿಂದೊಮ್ಮೆ ಸಂಬಂಧಿಕರ ಮನೆಯಲ್ಲಿ ಸಾಕಿದ್ದ ನಾಲ್ಕೈದು ಮೊಲಗಳ ಜೊತೆ ಆಟವಾಡಿದ್ದೇ ಹೊರತು, ಅವುಗಳನ್ನು ಮುಟ್ಟಲು ಆ ಮನೆಯವರು ಸಮ್ಮತಿಸಿರಲಿಲ್ಲ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳು.

ಅಪ್ಪ ಆ ರಸ್ತೆ ಬದಿಯ ಕುರುಚಲು ಕಾಡನ್ನೇಕೆ ಕೊಂಡಿದ್ದರು? ಈ ಪ್ರಶ್ನೆ ನನ್ನನ್ನು ಬೆಂಬಿಡದೆ ಕಾಡುತ್ತಲೇ ಇತ್ತು. ಅಪ್ಪನನ್ನು ಪ್ರಶ್ನಿಸುವ ಧೈರ್ಯ ಯಾರಿಗಿದೆ, ಸುಮ್ಮನೆ ನುಂಗಿ ಬಿಟ್ಟಿದ್ದೆ. ಆಗ ನಾನು ಸಣ್ಣವನು, ನಮ್ಮ ಮನೆಯಿಂದ ಅನತಿ ದೂರದಲ್ಲಿ ಕುರುಚಲು ಕಾಡೊಂದಿತ್ತು. ಅಪ್ಪ ಫಾರೆಸ್ಟ್ ಗಾರ್ಡ್, ರೇಂಜರ್ ಗಳಲ್ಲೆಲ್ಲ ಮಾತನಾಡಿ ನ್ಯಾಯಯುತವಾಗಿ ರಿಜಿಸ್ಟ್ರು ಮಾಡಿಸಿಕೊಂಡಿದ್ದರು. ಆ ಹೊತ್ತಿಗೆ ಅದಾಗಲೇ ಆಪಾದನೆಗಳೆಲ್ಲಾ ಬೆಟ್ಟದಷ್ಟು ಬೆಳೆದುಬಿಟ್ಟಿತ್ತು. ಪೂರ್ವ ದಿಕ್ಕಿಗೆ ಪಾಳು ಬಿದ್ದ ಆ ಬಯಲು ಸಮೃದ್ಧವಾಗಿತ್ತು. ಬಿದಿರು ಅಕ್ಕಿ ಬಿಡುವಷ್ಟು ವಯಸ್ಸಿನವುಗಳು. ಮತ್ತೆ ಬೇಲಿ ಹಾಕಿಸಿ, ಒಂದು ಬಾವಿ ತೋಡಿಸಿದ್ದರು. ಎಲ್ಲ ಮೂಲೆಗೂ ಗೇರು ಸಸಿ ಮತ್ತು ತೆಂಗು, ಮಾವು ನೆಡಿಸಿದ್ದರು. ಆದರೆ ತೆಂಗಿನ ಗಿಡಗಳು ಹೆಚ್ಚು ದೊಡ್ಡದಾಗಲೇ ಇಲ್ಲ. ರಾತ್ರಿಯ ಹೊತ್ತಿಗೆ ಕಾಡು ಹಂದಿಯೋ, ಜಿಂಕೆಯೋ ತಿರುಳು ತಿಂದರೆ, ಬೆಳಗಿನ ಹೊತ್ತಿಗೆ ಅಬ್ಬೇಪಾರಿ ದನಗಳ ಹೊಟ್ಟೆಗಾಯ್ತು.

ಜಿಂಕೆಗೂ ಆಪಾದನೆ ಹೊರಿಸಿದ್ದಕ್ಕೆ ಕಾರಣವುಂಟು. ಅದೇ ಪ್ರದೇಶದಲ್ಲಿ ತುಂಬಾ ಸಲ ರಾತ್ರಿ ಹೊತ್ತು ವಾಹನಲ್ಲಿ ಬರುತ್ತಿದ್ದವರು ಜಿಂಕೆಗಳು ರಸ್ತೆ ದಾಟುವುದನ್ನು ನೋಡಿದ್ದರಂತೆ. ರೆಕ್ಕೆ ಸುಟ್ಟ ಕೋಳಿಯಂತೆ ಒಂದಷ್ಟು ದಿನ ತೆಂಗಿನ ಸಸಿಗಳು ಕಂಡವಾದರೂ ಮತ್ತೆ ಹೇಳಹೆಸರಿಲ್ಲದಂತೆ ಮಾಯವಾದವು. ಗೇರು ಸಸಿ ಬೆಳೆದು ಕಾಯಿಯಾಗುವ ಹೊತ್ತಿಗೆ ಸೋಮಾರಿಗಳಾದ ನಮಗೆ ಕೆಲಸ ಸಿಕ್ಕಿತು. ದಿನಾ ಸಂಜೆ ಅಲ್ಲಿ ಹೋಗಿ ಬೀಜ ಹೆಕ್ಕುವುದೇ ನಮಗೆ ಸಿಕ್ಕ ಕೆಲಸವಾಗಿತ್ತು. ಕಾಡುಸುತ್ತಿ ಬರೋಣವೆಂದರೆ ಅರೆಕ್ಷಣದಲ್ಲಿ ಹೊರಡುವ ನನಗೆ, ಕೆಲಸಕ್ಕಾಗಿ ಕಾಡು ಸುತ್ತುವುದೆಂದರೆ ಸೋಮಾರಿತನ ಎಲ್ಲಿಂದಲೋ ಬಂದು ಅಂಟಿಕೊಳ್ಳುತ್ತಿತ್ತು. ಹೀಗೆ ಒಂದು ಬಕೆಟ್ ಹಿಡಿದುಕೊಂಡು ಹೊರಟರೆ ಗಿಡಗಂಟಿಗಳನ್ನೆಲ್ಲಾ ನುಗ್ಗುನುರಿ ಮಾಡಿಕೊಂಡು ದಾರಿ ಮಾಡಿ, ಬೇಲಿ ದಾಟಿ ಗೇಟು ತೆರೆದು ಒಳ ಪ್ರವೇಶಿಸುತ್ತಿದ್ದೆವು. ಕೆಲಸದವರೆಲ್ಲಾ ಸೇರಿ ಅಷ್ಟೂ ಸ್ಥಳವನ್ನು ಕಡಿದು ಸ್ವಚ್ಛ ಮಾಡಿ ಒಪ್ಪ ಓರಣವಾಗಿಸಿದ್ದರು. ನನಗೆ ಬೀಜ ಹುಡುಕುವ ಕೆಲಸಕ್ಕಿಂತ ಸುಮ್ಮನೆ ಕಾಡು ನೋಡುತ್ತಾ, ಪಕ್ಷಿಯನ್ನೋ ಪ್ರಾಣಿಯನ್ನೋ ನಿರೀಕ್ಷಿಸಿ ಕುಳಿತುಕೊಳ್ಳುವುದೇ ಖುಷಿ ಕೊಡುತ್ತಿತ್ತು. ಮಾಗಿದ ಹಣ್ಣು ಕಂಡರೆ ಕೊಯ್ದು ತಿನ್ನುವುದು, ಸ್ವಲ್ಪ ಹೆಚ್ಚಿಗೆ ಇದ್ದರೆ ಅದೇ ಬುಟ್ಟಿಯಲ್ಲಿ ತುಂಬಿ ಮನೆಯವರಿಗೆ ತರುತ್ತಿದ್ದೆವು. ಯಾರೂ ತಿನ್ನದಿದ್ದರೆ ಮುಂದಿನ ಪಾಲು ನಮ್ಮ ದನಗಳಿಗೆ. ಹಣ್ಣುಗಳು ಕಡಿಮೆಯಾದ ದಿನಗಳಲ್ಲಿ ಎಳಸು ಕಾಯಿಗಳನ್ನು ತಿನ್ನಲು ಹೋಗಿ ಗಂಟಲು ಕೆರೆತ ಶುರುವಾಗಿ ಅಮ್ಮನಿಂದ ಬೈಸಿಕೊಳ್ಳುವುದಂತೂ ರೂಢಿಯಾಗಿಹೋಗಿತ್ತು. ಕೆಲವೊಮ್ಮೆ ಬೀಜ ಹೆಕ್ಕಲು ಹೋದವರು ಮುಳ್ಳು ಬೇಲಿ ನುಸುಳಿ ಹೊರ ದಾರಿಯಲ್ಲಿ ಗೆಳೆಯನ ಮನೆಗೆ ಹೋಗಿ ತಡವಾಗಿ ಕ್ರಿಕೆಟ್ ನೋಡಿ ಬರುತ್ತಿದ್ದದ್ದೂ ಉಂಟು. ಆಗಂತೂ “ಲಾಕಪ್ ಡೆತ್” ಬಿಟ್ಟು ಬೇರೆಲ್ಲಾ ಪೋಲಿಸ್ ಶಿಕ್ಷೆ ಮನೆಯಲ್ಲಿ ತಯ್ಯಾರಾಗಿರುತ್ತಿತ್ತು. ದಿನವೂ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಬೀಳುವ ಪೆಟ್ಟಿಗೆ ಹೆದರಿ ತಪ್ಪೇ ಮಾಡದೆ ಕುಳಿತುಕೊಳ್ಳುವ ಮಕ್ಕಳು ಯಾರಿರುತ್ತಾರೆ!

ಒಮ್ಮೆ ನಾನೊಬ್ಬನೇ ಬೀಜ ಹೆರಕಲು ಹೊರಟಿದ್ದೆ. ಎಡ ಕೈಯಲ್ಲೊಂದು ಬಕೆಟ್ ಹಿಡಿದು ಬಲ ಕೈಯಲ್ಲಿ ದೋಟಿ ಎಳೆದುಕೊಂಡು ಬರುತ್ತಿದ್ದೆ. ಕಾಲು ದಾರಿಯಲ್ಲಿ ದೋಟಿ ತಾಗುವುದಕ್ಕಾಗಿ ಹಿಂದೆ- ಮುಂದೆ ಮಾಡಿಕೊಂಡು ಬರುತ್ತಿದ್ದೆ. ಅಪರಾಹ್ನದ ಮೂರುವರೆ ಗಂಟೆಯಾಗಿರಬಹುದು. ಪ್ರಶಾಂತ ಕಾಡು, ಹಕ್ಕಿಯ ಚಿಲಿಪಿಲಿ ಬಿಟ್ಟರೆ ಬಿದಿರಿನ ಕೀರಲು ಶಬ್ಧ. ವಾತಾವರಣ ಹೆದರಿಕೆ ಹುಟ್ಟಿಸದಿರಲು ಸಾಕಷ್ಟು ಕಾಡು ಸಶಬ್ಧವಾಗಿರಲೆಂದು ಕತ್ತೆ ರಾಗದಲ್ಲಿ ಗುನುಗು ಹಾಡು ಹೇಳುತ್ತಾ ಗಿಡಗಳ ಮಧ್ಯೆ ನುಸುಳುತ್ತಾ ಬರುತ್ತಿದ್ದೆ. ನಾನು ಬಯಲು ಪ್ರವೇಶಿಸುತ್ತಿದ್ದಂತೆ ನನ್ನನ್ನು ಯಾರೋ ಹಿಂಬಾಲಿಸಿದಂತೆ ಹಿಂದಿನಿಂದ ಒಂದು ಸದ್ದು ಕೇಳಿದ ಹಾಗಾಯಿತು. ಆದರೂ ಯಾವ ಶಬ್ಧವನ್ನೂ ತಲೆಗೆ ಹಾಕಿಕೊಳ್ಳದೆ ವೇಗವಾಗಿ ಮುಂದುವರಿದೆ. ನಾನು ನಡೆದಂತೆಲ್ಲಾ ಆ ಸದ್ದು ಇನ್ನೂ ಜೋರಾಗುತ್ತಿತ್ತು. ಆಗ ಸಣ್ಣಗೆ ದಿಗಿಲು ಶುರುವಾಗಿ ಗಕ್ಕನೆ ನಿಂತೆ. ಹಿಂದಿನಿಂದ ಕೇಳಿಸುತ್ತಿದ್ದ ಶಬ್ಧವೂ ನಿಂತಿತು. ಈಗ ನನ್ನ ಪ್ರಾಣ ಬಾಯಿಗೆ ಬಂದಿತ್ತು. ಧೈರ್ಯ ಮಾಡಿಕೊಂಡು ಪ್ರಾರ್ಥಿಸುತ್ತಾ ಮುಂದುವರಿದೆ. ಅರೇ! ಏನೂ ಇಲ್ಲ. ನನಗೆ ಇನ್ನಷ್ಟು ದಿಗಿಲಾಯಿತು. ‘ಈ ಹಾಡು ಹಗಲಲ್ಲಿ ಮಕ್ಕಳನ್ನು ಹಿಡಿಯುವವರು ಯಾರಾದರೂ ಹಿಂಬಾಲಿಸುತ್ತಿರಬಹುದೇ? ಭೂತ ಪ್ರೇತವಂತೂ ಈ ಸಂಜೆಯಲ್ಲಿ ಖಂಡಿತಾ ಬಾರದು’ ನನಗೆ ನಾನೇ ಸಮಾಧಾನದ ಮಾತುಗಳನ್ನು ಹೇಳಿಕೊಳ್ಳುತ್ತಿದ್ದೆ. ಎರಡ್ಮೂರು ಬಾರಿ ನಡೆಯುತ್ತಿದ್ದಂತೆ ಪಕ್ಕನೆ ಹಿಂತಿರುಗಿ ನೋಡುವುದು, ಮತ್ತೆ ಮುಂದಕ್ಕೆ ನಡೆಯುವುದು ಮಾಡುತ್ತಲೇ ಇದ್ದೆ. ಹಿಂತಿರುಗಿ ನೋಡಿದರೆ ಯಾವುದೇ ಪ್ರಾಣಿಯಾಗಲಿ, ಮನುಷ್ಯನಾಗಲೀ ನನ್ನನ್ನು ಹಿಂಬಾಲಿಸುತ್ತಲೇ ಇರಲಿಲ್ಲ. ಆದರೂ ಹೆದರಿಕೆ ಮತ್ತೂ ಹೆಚ್ಚುತ್ತಲೇ ಇತ್ತು. ಈ ಬಾರಿ ಹೆದರಿಕೆಯನ್ನು ತೋರ್ಪಡಿಸದೆ, ಸ್ವಲ್ಪ ಉಚ್ಛ ಸ್ವರದಲ್ಲಿ ಹಾಡತೊಡಗಿದೆ.

ಒಂದು ತಿರುವು ಬಂತು, ನನ್ನ ದೋಟಿಯನ್ನಾರೋ ಹಿಡಿದೆಳೆದಂತೆ ಭಾಸವಾಯಿತು. ಭಯದಿಂದ ಆದಾಗಲೇ ಬೆವರತೊಡಗಿದ್ದ ನಾನು ಅಲ್ಪ ಸ್ವಲ್ಪ ಧೈರ್ಯ ತಂದುಕೊಂಡು ತಿರುಗಿ ನೋಡುತ್ತೇನೆ. ನನ್ನ ದೋಟಿ ಗಿಡಗಂಟಿಗಳಿಗೆ ಸಿಕ್ಕಿ ಹಾಕಿಕೊಂಡಿದೆ. ನನ್ನ ಅವಸ್ಥೆ ನೋಡಿ ನನಗೆ ನಗು-ಕೋಪ ಎರಡೂ ಒಟ್ಟಿಗೆ ಉಕ್ಕಿ ಬಂತು. ಒಬ್ಬನೇ ಹೋಗುವ ದಾರಿ, ಜೊತೆಗೆ ಈ ಶಬ್ಧದಿಂದ ಹೆದರಿದ್ದರಿಂದ ನನ್ನ ಭುಜದಲ್ಲಿದ್ದ ದೋಟಿಯನ್ನೇ ಮರೆತಿದ್ದೆ, ಬರುವ ದಾರಿಯಲ್ಲೆಲ್ಲಾ ಅದು ಗಿಡಗಂಟಿಗಳನ್ನು ತಾಗುತ್ತಿದ್ದರಿಂದ ಯಾರೋ ಹಿಂಬಾಲಿಸುವಷ್ಟೇ ಜೋರಾಗಿ ಶಬ್ಧ ಮಾಡುತ್ತಿತ್ತು. ನಾನು ನಿಂತಾಗ ಅದೂ ಶಾಂತವಾಗುತ್ತಿತ್ತು. ಈಗ ಸ್ವಲ್ಪ ಧೈರ್ಯ ಬಂದಿತ್ತು, ಮತ್ತೆ ಏಕಾಂಗಿಯಾಗಿ ದೋಟಿಗೆಟಕುತ್ತಿದ್ದ ಕಣ್ಣಿಗೆ ಕಂಡ ಎಲ್ಲ ಮರದಿಂದ ಹಣ್ಣು ಕೋಯ್ದು ಬೀಜ ಪ್ರತ್ಯೇಕಿಸಿ ಬಕೆಟ್ ತುಂಬಿಕೊಂಡು ಮನೆಗೆ ಬಂದೆ.

ಕಾಡುಸುತ್ತಿ ಬರೋಣವೆಂದರೆ ಅರೆಕ್ಷಣದಲ್ಲಿ ಹೊರಡುವ ನನಗೆ, ಕೆಲಸಕ್ಕಾಗಿ ಕಾಡು ಸುತ್ತುವುದೆಂದರೆ ಸೋಮಾರಿತನ ಎಲ್ಲಿಂದಲೋ ಬಂದು ಅಂಟಿಕೊಳ್ಳುತ್ತಿತ್ತು. ಹೀಗೆ ಒಂದು ಬಕೆಟ್ ಹಿಡಿದುಕೊಂಡು ಹೊರಟರೆ ಗಿಡಗಂಟಿಗಳನ್ನೆಲ್ಲಾ ನುಗ್ಗುನುರಿ ಮಾಡಿಕೊಂಡು ದಾರಿ ಮಾಡಿ, ಬೇಲಿ ದಾಟಿ ಗೇಟು ತೆರೆದು ಒಳ ಪ್ರವೇಶಿಸುತ್ತಿದ್ದೆವು.

ಆಮೇಲೆ ಸುಮಾರು ದಿನಗಳ ತರುವಾಯ ಮತ್ತೊಮ್ಮೆ ನಾನು ಒಬ್ಬಂಟಿಯಾಗಿ ಹೋಗಬೇಕಾಗಿ ಬಂದಿತ್ತು. ಈ ಬಾರಿ ಬೀಜ ಕೊಯ್ಯುವುದಕ್ಕಲ್ಲ. ಅಪ್ಪ ಹೊಸದಾಗಿ ತೋಡಿದ ಬಾವಿಗೆ ಕೆಲಸದವರ ಉಪಯೋಗಕ್ಕಾಗಿ ರಾಟೆ ಮತ್ತು ಹಗ್ಗ ಮನೆಯಿಂದ ತಂದು ಬಿಟ್ಟು ಹೋಗಿದ್ದರು. ಅದನ್ನು ತರಬೇಕಾಗಿದ್ದರಿಂದ ಉಮ್ಮ ನನ್ನೊಬ್ಬನನ್ನೇ ಕಳಿಸಿದ್ದರು. ಆದಷ್ಟು ಬೇಗ ಓಡಿಕೊಂಡು ಹೋಗಿ ತರಲು ಉಮ್ಮ ಹೇಳಿದ್ದರಿಂದ ಸಾಕಷ್ಟು ವೇಗವಾಗಿಯೇ ಓಡುತ್ತಿದ್ದೆ. ಗೇಟು ತೆರೆದು ಒಳಗೆ ಹೊಕ್ಕು ಸ್ವಲ್ಪ ನಡೆಯುವಷ್ಟರಲ್ಲಿ ತರಗಲೆಗಳ ಮಧ್ಯೆ ಬರಬರನೆ ಓಡುವ ಸದ್ದು ಕೇಳಿತು. ಹೆದರಿಕೊಂಡ ನಾನು ‘ಭುಜದಲ್ಲಿ ದೋಟಿ ಇದೆಯೇ?’ ಎಂದು ಪರೀಕ್ಷಿಸಿಕೊಂಡೆ. ಈ ಬಾರಿ ದೋಟಿ ಇರಲಿಲ್ಲ. ಹೆದರಿ ಕಂಗಾಲಾಗಿ ಹೋದೆ. ಅಲ್ಲೇ ಕಲ್ಲಾಗಿ ನಿಂತೆ. ಸ್ವಲ್ಪ ಸಮಯದ ತರುವಾಯ ಮತ್ತೊಮ್ಮೆ ತುಂಬಾ ಹತ್ತಿರದಲ್ಲೇ ಬರಬರನೇ ಸದ್ದಾಯಿತು. ನನಗೆ ಹೆದರಿಕೆಯ ಜೊತೆ ಕುತೂಹಲ ಹೆಚ್ಚುತ್ತಿತ್ತು. ತರಗೆಲೆ ಸದ್ದು ಭೂಮಿ ನೇರದಿಂದ ಬರುತ್ತಿದ್ದರಿಂದ ಯಾವುದೋ ಸಣ್ಣ ಪ್ರಾಣಿಯೇ ಇರಬೇಕೆಂದು ಅಂದಾಜು ಮಾಡಿದ್ದೆ. ಮೆಲ್ಲನೆ ಸದ್ದಾಗದಂತೆ ಸದ್ದು ಬರುವ ಕಡೆ ಗಿಡಗಂಟಿಗಳ ಬಳಿ ಇಣುಕುತ್ತಾ ನಡೆದೆ. ಆಹಾ, ಸಣ್ಣ ಕಂದು ಬಣ್ಣದ ಎರಡು ಮೊಲಗಳು ತರಗೆಲೆಗಳನ್ನು ಬದಿಗೆ ತಳ್ಳುತ್ತಿವೆ. ಆಶ್ಚರ್ಯದಿಂದ ನಾನು ಇನ್ನಷ್ಟು ಹತ್ತಿರ ಬಂದೆ. ಬಹುಶಃ ಅವುಗಳ ಕೆಲಸದಲ್ಲಿ ತಲ್ಲೀನವಾಗಿದ್ದರಿಂದ ನನ್ನ ಇರುವನ್ನು ಗುರುತಿಸಿರಲಿಕ್ಕಿಲ್ಲ. ಹಾಗಾಗಿ ಅವುಗಳಿಗೆ ಇನ್ನಷ್ಟು ಹತ್ತಿರವಾದೆ. ಅವುಗಳು ಅಪಾಯಕಾರಿ ಪ್ರಾಣಿಗಳಲ್ಲವೆಂದು ತಿಳಿದಿದ್ದರಿಂದ ಅವುಗಳನ್ನು ಹಿಡಿಯುವ ಮೂರ್ಖತನಕ್ಕೆ ಕೈ ಹಾಕಿದೆ. ಯಾವ ರೀತಿ ಹಿಡಿಯಬೇಕೆಂಬ ಪ್ರಾಥಮಿಕ ಜ್ಞಾನವೂ ನನಗಿರಲಿಲ್ಲ. ಹಿಂದೊಮ್ಮೆ ಸಂಬಂಧಿಕರ ಮನೆಯಲ್ಲಿ ಸಾಕಿದ್ದ ನಾಲ್ಕೈದು ಮೊಲಗಳ ಜೊತೆ ಆಟವಾಡಿದ್ದೇ ಹೊರತು, ಅವುಗಳನ್ನು ಮುಟ್ಟಲು ಆ ಮನೆಯವರು ಸಮ್ಮತಿಸಿರಲಿಲ್ಲ.

ಅವು ಬಹಳ ಸೂಕ್ಷ್ಮ ಪ್ರಾಣಿಗಳಂತೆ, ಹೊಟ್ಟೆಯಲ್ಲೋ, ಕುತ್ತಿಗೆಯಲ್ಲೋ ಹಿಡಿದರೆ ಸತ್ತು ಹೋಗುತ್ತವೆಯೆಂದು ಹೆದರಿಸಿದ್ದರು. ನಾನಂತೂ ಮೊಲಗಳ ಹಿಂದಿನಿಂದ ಹಿಡಿಯುವ ತೀರ್ಮಾನಕ್ಕೆ ಬಂದಿದ್ದೆ. ಅವುಗಳು ಗಿಡಗಳ ಮರೆಯಲ್ಲಿ ಎಷ್ಟು ಜಾಗರೂಕತೆಯಿಂದ ಕುಳಿತಿದ್ದವೆಂದರೆ ಯಾವುದೇ ಪ್ರಾಣಿ ಬಂದರೂ ಆ ಗಿಡಗಂಟಿ ಮೂಲ ಕೈ-ಬಾಯಿ ಹಾಕಿ ಹಿಡಿದುಕೊಳ್ಳಲಾಗದಷ್ಟು. ಬಹುಶಃ ಅವುಗಳು ಅಲ್ಲಿ ಮನೆ ಮಾಡಿಕೊಳ್ಳುತ್ತಿದ್ದಿರಬೇಕು. ನಾನು ಇನ್ನೊಂದು ಹೆಜ್ಜೆಮುಂದಿಡುವಷ್ಟಕ್ಕೆ ಅವುಗಳೆರೆಡರ ಕಿವಿ ನಿಮಿರಿತು. ಇನ್ನೇನು ಗಿಡಗಳ ಮಧ್ಯೆ ಕಷ್ಟಪಟ್ಟು ಕೈ ತೂರಿಸುತ್ತೇನೆನ್ನುವಷ್ಟರಲ್ಲಿ ಮಿಂಚಿನ ವೇಗದಲ್ಲೇ ಅವೆರಡೂ ಮೊಲಗಳು ಛಂಗನೆ ಹಾರಿ ಪರಾರಿ ಕಿತ್ತವು. ಓಡುತ್ತಿರುವಂತೆ ಒಂದು ಮೊಲವನ್ನು ದೂರದಲ್ಲೇ ನೋಡಿದೆ. ಹೊಟ್ಟೆ ಸ್ವಲ್ಪ ಉಬ್ಬಿದ್ದು ಗಮನಿಸಿದೆ. ಬಹುಶಃ ಗರ್ಭಿಣಿ ಮೊಲವಿರಬೇಕು, ಜೋಡಿ ಮೊಲಗಳು ಮರಿ ಹಾಕಲು ಪ್ರಶಸ್ತ ಸ್ಥಳ ಹುಡುಕುತ್ತಿರಬೇಕೆಂಬ ತೀರ್ಮಾನಕ್ಕೆ ಬಂದೆ. ಅವುಗಳು ಹುಡುಕಿದ ಸ್ಥಳ ಗಿಡಗಂಟಿಗಳಿಂದ ತುಂಬಿ ಸುಲಭವಾಗಿ ಯಾರೂ ನುಸುಳಲಾಗದಷ್ಟು ಸಂಕೀರ್ಣವಾಗಿತ್ತು. ಒಂದೊಮ್ಮೆ ಅವುಗಳೇ ಗಿಡಗಳೆಲ್ಲಾ ಬಾಗುವಂತೆ ಮಾಡಿ ಅಡಗು ತಾಣ ಮಾಡಿರಲೂಬಹುದು. ಆ ಬಳಿಕ ಅಂತದೇ ಹಲವಷ್ಟು ಗಿಡಗಂಟಿಗಳು ಬಾಗಿದ್ದ ಗೂಡಿನಾಕೃತಿ ಗಮನಿಸಿದ್ದೇನೆ.

ಮೊಲಗಳು ತಮ್ಮ ಜೀವಿತಾವಧಿಯಲ್ಲಿ ಸುಮಾರು ೮೦೦ ಮರಿಗಳಿಗೆ ಜನ್ಮ ನೀಡಬಲ್ಲುದಂತೆ. ಹಸಿರೆಲೆ ಚಿಗುರು, ಹುಲ್ಲು ತಿಂದು ಜೀವಿಸುವ ಇವುಗಳು ಸಸ್ಯಾಹಾರಿಗಳು. ಸಣ್ಣದರಿಂದ ದೊಡ್ಡ ಮಾಂಸಾಹಾರಿ ಮೃಗಗಳಿಗೆ ಆಹಾರವಾಗುತ್ತದೆ. ಇವುಗಳ ಮಾಂಸ ರುಚಿಕರವಾಗಿರುವುದರಿಂದ ಮಾಂಸಕ್ಕಾಗಿ ಜನರು ಇವುಗಳನ್ನು ಸಾಕುವುದಿದೆ. ಒಂದೆರಡು ಬಾರಿ ಯಾರೋ ಮನೆಗೆ ಕೊಟ್ಟಿದ್ದ ಪದಾರ್ಥವನ್ನು ನಾನು ತಿಂದ ನೆನಪು. ಹೆಚ್ಚು ಕಡಿಮೆ ಕೋಳಿ ಮಾಂಸದಷ್ಟೇ ಮೃದುವಾಗಿರುತ್ತದೆ ಮತ್ತು ಸ್ವಾದವಾಗಿರುತ್ತದೆ. ಆಗಲೇ ಹೊತ್ತು ಮೀರಿದ್ದರಿಂದ ಇನ್ನಷ್ಟು ಖಗ-ಮಿಗ ನೋಡಿ ಕಾಲಹರಣ ಮಾಡಿದರೆ ಉಮ್ಮನಿಂದ ಪೆಟ್ಟು ಬೀಳುವ ಎಲ್ಲಾ ಸಾಧ್ಯತೆಗಳಿದ್ದರಿಂದ ಯಾವ ಕಾಡಿನ ಶಬ್ದಕ್ಕೂ ಕಿವಿಗೊಡದೆ ರಾಟೆ ಹಿಡಿದು ಹಗ್ಗ ಎಳೆದುಕೊಂಡು ಬೇಗಬೇಗನೆ ಮನೆಯ ಕಡೆಗೆ ನಡೆದೆ.

ಇದಾಗಿ ಕೆಲವು ದಿನಗಳು ಕಳೆದಿರಬಹುದು. ಒಮ್ಮೆ ಮನೆಯವರೆಲ್ಲಾ ಜೊತೆಯಾಗಿ ಅಪ್ಪನ ಹೊಸ ಜಾಗ ನೋಡಲು ಹೊರಟೆವು. ಒಂದು ಬಕೀಟೂ ಸಹ ತುಂಬುವಷ್ಟು ಬೀಜವೂ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಎಲ್ಲರ ಕೈಯಲ್ಲೂ ಒಂದೊಂದು ಬಕೀಟು ಹಿಡಿದುಕೊಂಡಿದ್ದೆವು. ಅನುಭವಿಯಂತೆ ನಾನು ಎಲ್ಲರಿಗೂ ದಾರಿ ತೋರಿಸುತ್ತೇನೆಂಬಂತೆ ಮುಂದೆಮುಂದೆ ನಡೆಯುತ್ತಿದ್ದೆ. ಜೋರಾಗಿ ಓಡುವಾಗಲೆಲ್ಲಾ ಹಿಂದಿನಿಂದ ಉಮ್ಮನ ಬೆದರಿಕೆ ಕೇಳುತ್ತಿದ್ದರೂ ನನಗೆ ಕಿವಿಗೆ ಹಾಕಿಕೊಳ್ಳುವಷ್ಟು ವ್ಯವಧಾನವಿರಲಿಲ್ಲ. ಎಲ್ಲರೂ ಗೇರು ಬೀಜ ಹೆರಕತೊಡಗಿದರು. ತಂಗಿ-ಅಕ್ಕಂದಿರು ಹಣ್ಣಿಗಾಗಿ ಆಸೆ ಪಟ್ಟರೆ, ಉಮ್ಮ, ಅಣ್ಣ, ನಾನು ಮತ್ತು ಅಬ್ಬ, ಗೇರು ಬೀಜ ಹುಡುಕುತ್ತಿದ್ದೆವು. ಒಮ್ಮಿಂದೊಮ್ಮಲೇ ಉಮ್ಮ “ಹೇಯ್ ಮೊಟ್ಟೆ” ಎಂದು ಹೇಳಿರಬೇಕು. ಆಗ ತಾನೇ ತಂಗಿ ತೋರಿಸಿದ್ದ ಗೇರುಹಣ್ಣು ಕೊಯ್ಯಲು ಗಿಡವೇರಿದ್ದ ನನ್ನ ಅಂತಃಸತ್ವ ಎಚ್ಚರಿಸಿತು. ಚಂಗನೇ ಎತ್ತರವೆಷ್ಟೆಂದು ನೋಡದೆ ಜಿಗಿದಿದ್ದೆ. ಕಾಲು ಉಳುಕಿದಂತೆ ನೋವಾಗಿದ್ದರೂ ಸಾವರಿಸಿಕೊಂಡು ಉಮ್ಮನ ಹತ್ತಿರ ಮಿಂಚಿನಂತೆ ಬಂದು ನಿಂತೆ.

ನಾನು ಇನ್ನೊಂದು ಹೆಜ್ಜೆಮುಂದಿಡುವಷ್ಟಕ್ಕೆ ಅವುಗಳೆರೆಡರ ಕಿವಿ ನಿಮಿರಿತು. ಇನ್ನೇನು ಗಿಡಗಳ ಮಧ್ಯೆ ಕಷ್ಟಪಟ್ಟು ಕೈ ತೂರಿಸುತ್ತೇನೆನ್ನುವಷ್ಟರಲ್ಲಿ ಮಿಂಚಿನ ವೇಗದಲ್ಲೇ ಅವೆರಡೂ ಮೊಲಗಳು ಛಂಗನೆ ಹಾರಿ ಪರಾರಿ ಕಿತ್ತವು. ಓಡುತ್ತಿರುವಂತೆ ಒಂದು ಮೊಲವನ್ನು ದೂರದಲ್ಲೇ ನೋಡಿದೆ. ಹೊಟ್ಟೆ ಸ್ವಲ್ಪ ಉಬ್ಬಿದ್ದು ಗಮನಿಸಿದೆ.

“ಇಷ್ಟು ದಿನ ನಾನೂ ಬಂದಿದ್ದೆನಲ್ಲಾ, ನನಗೇಕೆ ಮೊಟ್ಟೆಯೊಂದೂ ಕಾಣಲಿಲ್ಲ” ಎಂದು ನನ್ನಲ್ಲೇ ಪ್ರಶ್ನಿಸಿಕೊಂಡೆ. ಪರಿಸರವನ್ನು ಅಷ್ಟೂ ಸೂಕ್ಷ್ಮವಾಗಿ ವೀಕ್ಷಿಸದ ನಮ್ಮಂತವರಿಗೆ ಕಟ್ಟಿಗೆಗೋ, ಗಿಡಮೂಲಿಕೆಗಳಿಗೋ ಕಾಡನ್ನು ಅವಲಂಬಿಸಿರುವ ಉಮ್ಮನಂತವರಿಗೆ ಹೋಲಿಸಲಾಗುತ್ತದೆಯೇ; ಕೋಳಿ ಮೊಟ್ಟೆ ಗಾತ್ರಕ್ಕಿಂತ ಸ್ವಲ್ಪ ದೊಡ್ಡ ಮೊಟ್ಟೆ, ಹುಲ್ಲಿನ ಮಧ್ಯೆ ಸುರಕ್ಷಿತವಾಗಿರಿಸಿದಂತಿತ್ತು. ನಾನು ಕುತೂಹಲ ತಾಳಲಾರದೆ ಮುಟ್ಟಲು ಹೋದೆ, “ಹೇಯ್, ಮುಟ್ಟಬೇಡವೋ, ಹಾವಿನ ಮೊಟ್ಟೆಯಾಗಿರಬಹುದು” ಎಂದು ಉಮ್ಮ ಎಚ್ಚರಿಸಿದರು. ಮೊಟ್ಟೆಯ ಬಗ್ಗೆ ಸ್ವಲ್ಪ ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ, “ನವಿಲಿನದ್ದೋ, ಕಾಡು ಕೋಳಿಯದ್ದೋ ಆಗಿರಬೇಕು, ಹಾಳಾದ ಮೊಟ್ಟೆಯೆಂದು ತೋರುತ್ತದೆ” ಅಮ್ಮ ಸಂಶಯ ವ್ಯಕ್ತಪಡಿಸಿದ್ದರು. ನನಗೆ ಕುತೂಹಲ ತಣಿದಿರಲಿಲ್ಲ. ಎಲ್ಲರೂ ಹಿಂತಿರುಗಿ ಹೊರಟಾಗಲೂ ನನಗೆ ಮೊಟ್ಟೆಯನ್ನು ಹಾಗೆಯೇ ಬಿಟ್ಟು ಬರುವ ಮನಸ್ಸಾಗಲಿಲ್ಲ. ಬರುವಾಗ ಎಲ್ಲರಿಗಿಂತ ಮುಂದಿದ್ದ ನಾನು ಈಗ ಸಾಕಷ್ಟು ಹಿಂದುಳಿದೆ. ಮೊಟ್ಟೆ ಇರುವ ಕಡೆ ಗುರುತಿಗಾಗಿ ಕೋಲೊಂದನ್ನಿಟ್ಟು ಉಳಿದವರನ್ನು ಹಿಂಬಾಲಿಸಿದೆ. ದಾರಿ ಮಧ್ಯೆ ಇನ್ನಷ್ಟು ಅಂಥದ್ದೇ ಒಡೆದ ಮೊಟ್ಟೆಗಳ ಸಿಪ್ಪೆಗಳನ್ನು ಉಮ್ಮ ಗುರ್ತಿಸಿದರು. ಆ ರಾತ್ರಿ ಸುಮ್ಮನೆ ಮೊಟ್ಟೆಗಳ ಬಗ್ಗೆ ಉಮ್ಮನಲ್ಲಿ ಸಂಶಯ ಕೇಳಿದ್ದೆ. ಉಮ್ಮ ಮೊಟ್ಟೆಗಳ ಬಗ್ಗೆ ಅನುಭವ ತಿಜೋರಿಯನ್ನೇ ತೆರೆದಿಡುತ್ತಾರೆಂಬ ಭರವಸೆಯಿರುವುದರಿಂದ ಅಕ್ಕ ತಂಗಿಯಂದಿರೂ ಕೂಡಿಕೊಂಡಿದ್ದರು. ನನಗೆ ಮಾತ್ರ ಮೊಟ್ಟೆಯ ಬಗ್ಗೆ ಕುತೂಹಲ ಮುಗಿದಿರಲೇ ಇಲ್ಲ. ಮರುದಿನ ಸಂಜೆಯಾಗುವುದನ್ನೇ ಕಾಯುತ್ತಾ, ಬೀಜ ಕೊಯ್ಯಲು ಸೋಮಾರಿಯಾಗಿದ್ದ ನಾನೇ ಬೀಜ ಹೆರಕಲು ಹೋಗುತ್ತಿದ್ದೇನೆಂದು ಅನುಮತಿ ಪಡೆದುಕೊಂಡು ಒಬ್ಬನೇ ಹೊರಟೆ.

ಆದಷ್ಟು ವೇಗದಲ್ಲಿ ಓಡಿದೆ. ನಿನ್ನೆ ಹಾಕಿದ್ದ ಗುರುತು ಹುಡುಕಿದೆ, ಸುಮಾರು ಹತ್ತು ನಿಮಿಷ ಹುಡುಕಿದ ಬಳಿಕ ಆ ಸ್ಥಳ ಇದೇ ಎಂಬ ತೀರ್ಮಾನಕ್ಕೆ ಬಂದೆ. ನನ್ನ ಊಹೆ ತಪ್ಪಾಗಿರಲಿಲ್ಲ. ಮೊಟ್ಟೆ ಅನಾಥವಾಗಿ ಅಲ್ಲೆ ಇತ್ತು. ಒಂದು ಸಣ್ಣ ಕೋಲುಹಿಡಿದು ಆಚೀಚೆ ಹೊರಳಿಸಿದೆ. ಅಚಾನಕ್ ಮೊಟ್ಟೆ ಉರುಳಿ ಹತ್ತಿರದಲ್ಲೇ ಇದ್ದ ಕಲ್ಲಿಗೆ ಬಡಿಯಿತು. ಅಷ್ಟಕ್ಕೆ ಮೊಟ್ಟೆಯೊಳಗಿನಿಂದ ಲೋಳೆ ಹೊರ ಬರತೊಡಗಿತು. ಕುತೂಹಲದಿಂದ ಕೋಲಿನಿಂದ ಇನ್ನಷ್ಟು ಸಿಪ್ಪೆಯನ್ನು ಅಗಲಿಸಿದೆ. ವಿಪರೀತ ಗಬ್ಬು ವಾಸನೆ ಬರುತ್ತಿತ್ತು. ಇನ್ನಷ್ಟು ಮೊಟ್ಟೆಯ ಸಿಪ್ಪೆಯನ್ನು ಅಗಲಿಸಿದರೆ ಕೊಳೆತಿದ್ದ ಹಕ್ಕಿ ಮರಿಯ ಭ್ರೂಣವೊಂದು ಹೊರ ಬಿತ್ತು. ಅಲ್ಲಿ ಹಕ್ಕಿಗಳ “ಅಬಾರ್ಶನ್” ಅಂದರೆ ಇದೇ ಇರಬೇಕೆಂದು ಕಲ್ಪಿಸಿಕೊಂಡೆ. ಅಸಹ್ಯ ವಾಸನೆಗೆ ಹೊಟ್ಟೆ ತೊಳಸಿ ಬರುವಂತಿತ್ತು. ಹತ್ತಿರದಲ್ಲಿದ್ದ ನಾಲ್ಕೈದು ಬೀಜ ಹೆರಕಿ ಬಕೀಟಿಗೆ ಹಾಕಿಕೊಂಡು ಜಾಗ ಖಾಲಿ ಮಾಡಿದೆ. “ನಿನ್ನೆ ಹೋಗಿದ್ದೇವಲ್ವಾ? ಅದ್ಕೇ ಸ್ವಲ್ಪೇ ಸ್ವಲ್ಪ ಬೀಜ ಸಿಕ್ಕಿದವು” ಎಂದು ಸುಳ್ಳು ವರದಿ ಒಪ್ಪಿಸಿದ್ದೆ. ಆದರೂ ಹಾಳಾದ ಮೊಟ್ಟೆ ಅಮ್ಮ ಹೇಗೆ ಗುರ್ತಿಸಿದರೆಂದು ಮತ್ತು ಉಮ್ಮನಿಗೆ ಅದು ಹೇಗೆ ತಿಳಿಯಿತೆಂದು ಈವರೆಗೂ ಆಶ್ಚರ್ಯ, ಕುತೂಹಲ.


ವರ್ಷಗಳ ಹಿಂದೆ ಆರ್ಥಿಕವಾಗಿ ಸಂಕಷ್ಟ ಬಂದಾಗ ಅದೇ ಜಾಗವನ್ನು ಅಪ್ಪ ಮಾರಿಬಿಟ್ಟರು. ಈಗಲೂ ಆ ಜಾಗವನ್ನು ನೋಡುವಾಗ ನೆನಪಿನ ಬುತ್ತಿ ಬಿಚ್ಚಿಟ್ಟುಕೊಳ್ಳುತ್ತದೆ. ಬಹುಶಃ ಈಗಲೂ ಅದೇ ಜಾಗ ನಮ್ಮದೇ ಸುಪರ್ದಿಯಲ್ಲಿದ್ದಿದ್ದರೆ ನಾನು ಆ ಜಾಗವನ್ನು ಶಾಶ್ವತ ಕಾಡಿನಂತೆ ಇರಿಸಿ, ತೇಜಸ್ವಿಯವರಂತೆ ನನ್ನ ಪರಿಸರ ವೀಕ್ಷಣೆಗೆ ಬಳಸಿಕೊಳ್ಳುತ್ತಿದ್ದೆ.