ಕಾಲ ಮೇಲೆ ಏನೋ ಬಿದ್ದ ಹಾಗನ್ನಿಸಿತು ಅಂತ ಕಾಲಿನ ಕಡೆ ನೋಡ್ತಾಳೆ. ಇವಳದ್ದೆ ಕಾಸಿನ ಸರ ತುಂಡಾಗಿ ಕಾಲಮೇಲೆ ಕಾಸು ಬಿದ್ದಿದೆ. ಕೂಡಲೇ ಸೆರಗು ಅಡ್ಡ ಹಿಡಿದಳು ಮತ್ತು ಆದಷ್ಟು ಕಾಸು, ಗುಂಡು ಅಲ್ಲೇ ಬೀಳಿಸಿಕೊಂಡಳು. ಇವಳ ಪಾಡು ನೋಡಿ ಯಾರೋ ಬಸ್ಸು ನಿಲ್ಲಿಸಿ ಅಂತ ಕೂಗಿದರು. ಬಸ್ಸು ನಿಲ್ತು. ಇಡೀ ಬಸ್ಸಿನ ಜನ ಸೀಟು ಕೆಳಗೆ ಬಗ್ಗಿ ಬಗ್ಗಿ ಹುಡುಕಿ ಇವಳ ಕಾಸು ಗುಂಡು ಆರಿಸಿ ಇವಳ ಕೈಗೆ ಕೊಟ್ಟರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ

ಬೆಂಗಳೂರಿಗೆ ಬರುವ ಮೊದಲು ನಮ್ಮ ವಾಸ ತುಮಕೂರು ಅಂತ ಹೇಳಿದ್ದೆ ತಾನೇ. ನಮ್ಮ ತಂದೆ ರೈಲ್ವೆ ಕಂಟ್ರಾಕ್ಟರ್ ಬಳಿ ಕೆಲಸ ಮತ್ತು ಅವರಿಗೆ ಊರು ಸುತ್ತುವ ಕೆಲಸ. ಕೆಲಸದ ಒತ್ತಡದಲ್ಲಿ ಕೆಲವು ಸಲ ತಿಂಗಳಿಗೆ ಸರಿಯಾಗಿ ಮನೆಗೆ ಸಂಬಳ ತಲುಪಿಸುವುದು ಸಾಧ್ಯ ಆಗ್ತಾ ಇರಲಿಲ್ಲ, ಅದು ಬೇಜವಾಬ್ದಾರಿ ಅಂತ ಅಲ್ಲ. ನಾವು ಚಿಕ್ಕವರಿದ್ದಾಗ ಅಮ್ಮ ಈ ಪ್ರಸಂಗ ಹೇಳುವಾಗಲೆಲ್ಲಾ ಅಪ್ಪ ಇಷ್ಟು ಇರ್ರೆಸ್ಪಾಂನ್ಸಿಬಲ್ಲೆ ಅಂತ ಅನಿಸೋದು. ನಾವು ಬೆಳೆದ ಹಾಗೆ ಅಪ್ಪ ನಮ್ಮ ಬಗ್ಗೆ ತೋರುತ್ತಿದ್ದ ಪ್ರೀತಿ ಕಾಳಜಿ ಇವುಗಳು ಅಪ್ಪ ಅನಿವಾರ್ಯವಾಗಿ ಸಂಬಳದ ದಿವಸ ಅದನ್ನು ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ನಂಬಿಕೆ ಮೂಡಿಸಿತು!

ನಾವು ಪುಟ್ಟವರು, ನಮ್ಮಮ್ಮ ಸಂಬಳ ವಸೂಲಿಗೆ ಬೆಂಗಳೂರಿಗೆ ಕಂಟ್ರಾಕ್ಟರ್‌ ಆಫೀಸಿಗೆ ಹೋಗೋರು. ಬೆಳಿಗ್ಗೆ ರೈಲಿನಲ್ಲಿ ಹೊರಟು ಮಧ್ಯಾಹ್ನ ಅಲ್ಲಿ ಸೇರಿ ವಸೂಲಿ ನಂತರ ರಾತ್ರಿ ಏಳು ಎಂಟರ ಸುಮಾರಿಗೆ ಮನೆ ಸೇರೋದು ಅಮ್ಮ. ಬರುವಾಗ ನಮಗೆ ಬೆಂಗಳೂರಿನ ತಿಂಡಿ ಅಂದರೆ ಮೈಸೂರು ಪಾಕು, ಖಾರಾ ಸೇವೆ (ಈಗ ಮಿಕ್ಷರ್ ಅನ್ನುತ್ತೇವಲ್ಲಾ ಅದು) ಮತ್ತು ಮದ್ದೂರು ವಡೆ ತರುತ್ತಿದ್ದಳು. ಪ್ರತಿಯೊಂದಕ್ಕೂ ಅದರದ್ದೇ ಆದ ರುಚಿ. ಖುಷಿಯಿಂದ ಅದನ್ನು ನಾವು ಕೂತು ಖಾಲಿ ಮಾಡಬೇಕಾದರೆ, ಹಾಗೂ ಅಮ್ಮ ನಮಗೆ ಕೈ ತುತ್ತು ಹಾಕುತ್ತಾ ಅವಳು ಬೆಂಗಳೂರಿಗೆ ಹೋಗಿ ಬಂದ ಪ್ರಸಂಗಗಳನ್ನು ಆದಷ್ಟೂ ರಸವತ್ತಾಗಿ ಹಾವ ಭಾವಗಳಿಂದ ಅಭಿನಯ ಪೂರ್ವಕವಾಗಿ ಹೇಳುವಳು. ಹಾಗೆ ಕೇಳಿದ ಎಷ್ಟೋ ಸಾವಿರ ಸಾವಿರ ಪ್ರಸಂಗಗಳಲ್ಲಿ ಕೆಲವೊಂದು ತುಣುಕುಗಳು ಇನ್ನೂ ಚೂರು ಚೂರು ಮೆದುಳಿಗೆ ಅಂಟಿಕೊಂಡಿದೆ. ಅದು ಈಗ ತಮ್ಮುಂದೆ..

(ಅಪ್ಪನೊಟ್ಟಿಗೆ ಅಮ್ಮ…)

ಅಮ್ಮ ಆಗಿನ BTS ಬಸ್ಸಿನಲ್ಲಿ (BMTC ಗೆ ಮೊದಲಿನ ಹೆಸರು ಇದು) ಹದಿನೆಂಟನೇ ಕ್ರಾಸಿಗೆ ಟಿಕೆಟ್ ಕೊಂಡಳು, ಕೂತಳು. ಅಮ್ಮ ಬರೀ ಮೂರನೇ ಕ್ಲಾಸು ಓದಿದ್ದು. ಇಂಗ್ಲಿಷ್, ಪಂಗ್ಲಿಶು ಗೊತ್ತಿಲ್ಲದ ಮುಗ್ಧೆ. ಬಸ್ಸು ಎಲ್ಲೆಲ್ಲೋ ಸುತ್ತಿ ಹೋಗುತ್ತಾ ಇತ್ತು. ಇವಳು ಬೆರಗಿನಿಂದ ಆಚೆ ನೋಡುತ್ತಾ ಕುಳಿತಿದ್ದಳು. ಎಲ್ಲೋ ಒಂದು ಕಡೆ ಕಂಡಕ್ಟರ್ ಹತ್ತಿರ ಬಂದ. ಎಲ್ಲಿಗೆ ಹೋಗಬೇಕಮ್ಮಾ ನೀನು…? ಅಂದ.
ಅಮ್ಮ ಹದಿನೆಂಟನೇ ಕ್ರಾಸು ಅಂದಳು.

ಆಗಲೇ ಕೂಗಿದೆನಲ್ಲ, ಏಯ್ಟಿಂತ್ ಕ್ರಾಸ್ ಅಂತ ಯಾಕೆ ಇಳಿಲಿಲ್ಲ.. ಅಂದ.

ಐಟೀನ್, ನೈನ್ ಟಿನ್, ಫಾರ್ಟಿನ್ ಅಂತ ನೀನು ಕೂಗಿದೆ ಕಣಪ್ಪಾ. ಆದರೆ ಹದಿನೆಂಟನೇದೂ ಬರಲೇ ಇಲ್ಲವೇ.. ಅಂದಳು. ಇಡೀ ಬಸ್ಸಿನ ಜನ ಹೊ ಅಂತ ನಕ್ಕರು. ಕಂಡಕ್ಟರ್ ಅದನ್ನ ಅವಮಾನ ಅಂತ ಅಂದುಕೊಳ್ಳಲಿಲ್ಲ, ಬದಲಿಗೆ ಅವನಿಗೆ ಅದೇನೋ ತಮಾಷೆ ಅನಿಸಿರಬೇಕು. ತುಂಬಾ ಸ್ಪೋರ್ಟಇವ್ ಆಗಿ ತಗೊಂಡ. ಬಸ್ಸಿನಲ್ಲಿ ನಕ್ಕವರ ಜತೆ ಸೇರಿ ಕಂಡಕ್ಟರ್ ಸಹ ಬಿದ್ದು ಬಿದ್ದು ನಕ್ಕ. ಕೂತ್ಕಳೀ, ನೀವು ಇಳಿಯೋ ಜಾಗ ಆಗಲೇ ಹೋಯ್ತು. ವಾಪಸ್ ಬರ್ತಾ ಬಿಡ್ತೀನಿ ಅಂತ ಹೇಳಿ ವಾಪಸ್‌ ಬರಬೇಕಾದರೆ ಜ್ಞಾಪಿಸಿಕೊಂಡು ಇಳಿಸಿದ, ಅಮ್ಮೋರೇ ಹೋಗಿದ್ದು ಬನ್ನಿ ಉಸಾರು, ಇದು ಬೆಂಗಳೂರು ನಿಮ್ಮೂರಿನ ಹಾಗಲ್ಲ ಅಂದನಂತೆ. ಅಮ್ಮ ಈ ಸಂಗತಿ ಸುಮಾರು ಸಲ ಹೇಳುತ್ತಿದ್ದಳು.

ಇನ್ನೊಂದು ರೈಲಿನ ಪ್ರಸಂಗ ಅಂದರೆ, ಒಂದು ಹಳ್ಳಿಯ ಹಾಗೆ ಕಾಣುವ ಹೆಂಗಸು ಅಮ್ಮನಿಗೆ ಚಿನ್ನ ಮಾರಲು ಪ್ರಯತ್ನಿಸಿದ್ದು. ಒಂದು ಹೆಂಗಸು ಹಳ್ಳಿಯವಳ ಹಾಗೆ ಕಾಣುತ್ತಿದ್ದ ಆಕೆ ರೈಲಿನಲ್ಲಿ ಇವಳ ಪಕ್ಕ ಕೂತಳು. ಇವಳ ಜತೆ ಮಾತಿಗೆ ಶುರು ಮಾಡಿದಳು. ಅವಳ ಮನೆ ಕತೆ ಹೇಳಿದಳು, ಅವಳ ಬಡತನದ ಕತೆ ಹೇಳಿ ಕಣ್ಣೀರು ತೊಟ್ಟಿಕ್ಕಿಸಿದಳು. ಮೆಲ್ಲಗೆ ಎಲೆ ಅಡಿಕೆ ಚೀಲದಿಂದ ಒಂದು ಸರ ತೆಗೆದಳು. ತುಂಬಾ ಕಷ್ಟದಲ್ಲಿ ಇದೀನಿ. ಇದನ್ನ ಮಾರುಕ್ಕೆ ಅಂತ ಒಗ್ತಾ ಅವ್ನಿ. ಬೇಕಾರೆ ನಿಮ್ಗೇ ಕೊಡ್ತೀನಿ. ಏನಾದರೂ ಹೆಚ್ಚು ಕಮ್ಮಿ ಮಾಡ್ಕಂಡು ಕೊಡಿ ಅಂದಳು. ಅಮ್ಮ ಕೈನಲ್ಲಿ ಸರ ಹಿಡಿದು ನೋಡಿದಳು. ತೂಕಾ ಏನೋ ಇತ್ತು, ಆದರೆ ಬಂಗಾರ ಹೌದೋ ಅಲ್ಲವೋ ತಿಳಿಲಿಲ್ಲ. ಅವಳು ಆ ಸರಕ್ಕೆ ನೂರು ಕೊಡಿ ಸಾಕು ಅಂತ ಇದಾಳೆ. ಚಿನ್ನದ ಅಂಗಡೀಲಿ ಅದಕ್ಕೆ ಕಡಿಮೆ ಅಂದರೂ ಆ ಕಾಲದಲ್ಲಿ ಐನೂರು ಆರ್ನೂರ್ ಆಗಬಹುದು. ಅಮ್ಮ ಕುಬುಸದ ಸೀಕ್ರೆಟ್ ಜೇಬಿನಲ್ಲಿ ಸಾಕಷ್ಟು ದುಡ್ಡು ಇಟ್ಟುಕೊಂಡಿದ್ದಳು. ಆಗ ಅದನ್ನ ಕೊಟ್ಟು ಸರ ತಗೊಂಡು ಬಿಡಬೇಕು ಅನ್ನುವ ಆಸೆ ಹೆಚ್ಚುತ್ತಾ ಇದೆ. ಆದರೆ ಟೋಪಿ ಬಿದ್ದರೆ..? ಇಂಥ ವಿಷಯದಲ್ಲಿ ಕೆಲವು ಹೆಂಗಸರು ಬಹಳ ಹುಷಾರು.

ನೀನು ಎಲ್ಲಿ ಇಳಿತಿಯಮ್ಮಾ.. ಅಂತ ವಿಚಾರಿಸಿದಳು. ಆಕೆ ಇನ್ನೂ ಮೂರು ಸ್ಟೇಶನ್ ಆದಮೇಲೆ ಅಂದಳು. ಮುಂದಿನ ಸ್ಟೇಶನ್‌ನಲ್ಲಿ ನನ್ನ ತಮ್ಮ ಇದೇ ರೈಲಿಗೆ ಬರ್ತಾನೆ. ಅವನಿಗೆ ಇಲ್ಲೇ ಪೊಲೀಸ್ ಡ್ಯೂಟಿ. ಅವನ ಹತ್ರ ಕಾಸು ಇಸ್ಕೊಂಡು ಕೊಡ್ತೀನಿ ಅಂತ ಸರ ತೆಗೆದು ಬ್ಯಾಗಿನಲ್ಲಿ ಹಾಕಿಕೊಳ್ಳಲು ಹೋದಳು. ಕೂಡಲೇ ಆ ಹೆಂಗಸು ಸರ ಇಸ್ಕೊಂಡಳು ಮತ್ತು ದಡ ದಡ ಎದ್ದು ನಾಲ್ಕಾರು ಸಾಲು ದೂರ ಹೋಗಿ ಅಲ್ಲಿ ಇನ್ನೊಂದು ಹೆಂಗಸಿನ ಪಕ್ಕ ಕೂತಳು. ಅಮ್ಮಂಗೆ ಡೌಟ್ ಬಂತು, ಅದೇನೋ ಮೋಸ ಅಂತ. ನಾನು ಇಲ್ಲೇ ಕೂತರೆ ಇದೇ ಡಬ್ಬಿಯಲ್ಲಿ ಕೂತಿರುವ ಬೇರೆ ಹೆಂಗಸರಿಗೆ ಟೋಪಿ ಹಾಕುತ್ತಾಳೆ ಅನಿಸಿತು. ಇವಳೂ ಎದ್ದು ಅಲ್ಲೇ ಹೋದಳು. ಅವಳ ಎದುರು ಸೀಟಿನಲ್ಲಿ ಕೂತಳು. ಅಲ್ಲಿ ಅವಳ ಸಂಗಡ ಅದೂ ಇದೂ ಮಾತನಾಡುತ್ತಾ ಸರ ಮಾರೋ ವಿಷಯ ತೆಗೆಯದ ಹಾಗೆ ನೋಡಿಕೊಂಡಳು. ಸ್ಟೇಶನ್ ಬರ್ತಿದ್ದ ಹಾಗೆ ಪಕ್ಕದ ಹೆಂಗಸು ಎದ್ದಳು. ಅವಳ ಜತೆ ಎದುರು ಕೂತಿದ್ದ ಹೆಂಗಸು ಸೇರಿದ ಹಾಗೆ ನಾಲ್ಕೈದು ಹೆಂಗಸರು ಇಳಿದು ಓಡಿ ಬಿಟ್ಟರು. ಒಂದು ದೊಡ್ಡ ಅಪರಾಧವನ್ನ ಅಮ್ಮ ತಡೆದು ಬಿಟ್ಟಿದ್ದಳು!

ಈ ಕತೆ ಸುಮಾರು ಸಲ ಅಮ್ಮ ಹೇಳಿ ಹೇಳಿ ನಮಗೆ ಬಾಯಿ ಪಾಠ ಆಗಿತ್ತು. ಅಂದ ಹಾಗೆ ನಮ್ಮ ಮನೇಲಿ ಯಾರೂ ಪೊಲೀಸ್ ಕೆಲಸದಲ್ಲಿರಲಿಲ್ಲ! ನಮ್ಮ ತುಂಬಾ ದೂರದ ಬಂಧು ಒಬ್ಬರು ಪೇದೆ ಆಗಿದ್ದರು ಅಂತ ಕೇಳಿದ್ದೆ. ಮುಂದಿನ ಸ್ಟೇಶನ್‌ನಲ್ಲಿ ತಮ್ಮ ಬರೋದು ಅಮ್ಮ ಸಮಯಕ್ಕೆ ಸರಿಯಾಗಿ ಬಿಟ್ಟ ಒಂದು ಬುರುಡೆ.

ತುಮಕೂರಿನಲ್ಲಿ ನಾವಿದ್ದ ವಠಾರದಲ್ಲಿ ಶ್ರೀ ಲಕ್ಷ್ಮಣ ಶಾಸ್ತ್ರಿಗಳು ಅಂತ ಸಂಗೀತ ವಿದ್ವಾಂಸರು ಇದ್ದರು. ಅವರು ಆಗಾಗ ತಂಬೂರಿ ಮೀಟಿ ರಾಗಾಲಾಪನೆ ಮಾಡುತ್ತಿದ್ದರು. ಬಹುಶಃ ಇದರ ಪ್ರಭಾವ ಇರಬೇಕು, ಅಮ್ಮ ದಾಸರ ಪದಗಳನ್ನು ಸೊಗಸಾಗಿ ಹಾಡುತ್ತಿದ್ದಳು. ಸಂಪ್ರದಾಯದ ಗೀತೆಗಳು, ದೇವರನಾಮ, ಗೀತೆ ಶ್ಲೋಕ…. ಹೀಗೆ ಅಮ್ಮ ಒಂದು ತರಹ ಹಾಡಿನ ಖಣಜ. ಇವೆಲ್ಲದರ ಜತೆಗೆ ನಾಟಿ ವೈದ್ಯ ಬೇರೆ. ತುಮಕೂರಿನಲ್ಲಿದ್ದಾಗಲೂ ಇದ್ದ ನಾಟಿ ವೈದ್ಯ ಬೆಂಗಳೂರಿಗೆ ಬಂದ ಮೇಲೂ ಸಹ ಮುಂದುವರೆದಿತ್ತು.

ಹಾಡಿನ ವಿಷಯ ಬಂದರೆ ಯಾವುದೇ ಗುಂಪು ಇರಲಿ ಯಾರೇ ಆದರೂ ಅಚ್ಚಮ್ಮ ಒಂದು ಹಾಡು ಹೇಳೇ ಅಂದರೆ ಸಾಕು ಅಮ್ಮ ರೆಡಿ. ಒಂದು ಹಾಡು ಎರಡು ಎರಡು ನಾಲ್ಕು… ಹೀಗೆ ಅರ್ಧ ಮುಕ್ಕಾಲು ಗಂಟೆ ಅಮ್ಮನ ಹಾಡೋತ್ಸವ! ದೇವರ ಪೂಜೆ ಆಗಬೇಕಾದರೆ ಸಹ ಅಚ್ಚಮ್ಮ… ಅಂದರೆ ಸಾಕು ಅಚ್ಚಮ್ಮನಿಂದ ಒಂದರ ಹಿಂದೆ ಒಂದರ ಹಾಗೆ(ಬಿಟ್ಟ ಪದಗೊಳ್ ಬಾಣ ದ ಹಾಗೆ)ಹಾಡುಗಳು ಹರಿಯುತ್ತಿದ್ದವು. ಪುರಂದರದಾಸರ, ವಿಜಯದಾಸರ, ವಾದಿರಾಜರ ಹಾಡು, ದೇವರನಾಮಗಳನ್ನು ನಾನು ಕೇಳಿದ್ದು ಹೀಗೆ. ಈಗಲೂ ಆಗ ಕೇಳಿದ ಸುಮಾರು ಹಾಡುಗಳ ಒಂದೆರೆಡು ಚರಣಗಳು ನನ್ನ ತಲೆಯಲ್ಲಿ ಆಗಾಗ ಓಡುತ್ತವೆ. ಸಂಸ್ಕೃತ ಶ್ಲೋಕಗಳು ಸಹ ಅಮ್ಮನಿಗೆ ಕಂಠ ಪಾಠ. ಕಣ್ಣು ಮುಚ್ಚಿಕೊಂಡು ಭಜ ಗೋವಿಂದನ ಹಾಡು ಹೇಳುತ್ತಿದ್ದರೆ ಕೇಳುವವರು ಮಂತ್ರ ಮುಗ್ಧರು. ದೇವರ ಪೂಜೆಯ ಮಂತ್ರಗಳು ಸಹ ಹಾಗೇ. ಇದೆಲ್ಲಾ ಹೇಗೆ ಕಲಿತೆ ಅಂತ ಎಷ್ಟೋ ಸಲ ಅಮ್ಮನ್ನ ಕೇಳಿದ್ದೆ. ಹೇಳಿಕೊಳ್ತಾ ಹೇಳಿಕೊಳ್ತಾ ಬಂದು ಬಿಡ್ತು… ಅನ್ನೋಳು!

ಒಂದು ಸಲ ಯಾರೊಂದಿಗೋ ಮಾತಾಡ್ತಾ ಇದ್ದಾಳೆ. ನಾನು ಅಲ್ಲೇ ಏನೋ ಮಾಡ್ತಾ ಕೂತಿದ್ದೆ. ಯಾರೋ ಹಾಡಿದ ಸಂಗೀತದ ವಿಷಯ ಮಾತುಕತೆಯದ್ದು. “ಬ್ರೋಚೆ ವಾರೆ ವರುರಾ…” ಹಾಡಿನ ಒಂದೆರೆಡು ಚರಣ ಹೇಳಿ ಕಮಾಚ್ ರಾಗದ್ದು ಏನು ಸೊಗಸಾಗಿ ಹೇಳಿದರು….. ಅಂತ ಹೇಳಿದಳು. ಅಮ್ಮ ಯಾರೋ ಸಂಗೀತ ಗೊತ್ತಿಲ್ಲದೇ ಇರೋರ ಹತ್ತಿರ ಸಖತ್ ಬುರುಡೆ ಬಿಡ್ತಾ ಇದ್ದಾಳೆ ಅನಿಸಿಬಿಡ್ತು. ಇದು ನನ್ನ ತಲೆಯ ಯಾವ ಮೂಲೆಯಲ್ಲಿ ಕೂತಿತ್ತು ಅಂತ ತಿಳಿಯದು. ಈ ಪ್ರಸಂಗ ನಡೆದು ಅದೆಷ್ಟೋ ವರ್ಷ ಆದಮೇಲೆ ಆ ಹಾಡಿನ ರಾಗ ಹುಡುಕಿದೆ. ಅದು ಕಮಾಚ್ ರಾಗದ ಕೃತಿ ಆಗಿರಬೇಕೇ….!

ಬೆಂಗಳೂರಿಗೆ ಬಂದಮೇಲೆ ರೇಡಿಯೋ ಅಭ್ಯಾಸ ಶುರು ಆಯಿತು. ಅದರಲ್ಲಿ ಮಧ್ಯಾಹ್ನದ ಹೊತ್ತು ಬರುತ್ತಿದ್ದ ಸಂಪ್ರದಾಯದ ಹಾಡು ಕೇಳುತ್ತಿದ್ದಳು. ಅದರ ಜತೆ ಕೆಲವು ಸಲ ಹಾಡುಗಳನ್ನು ತಾನೂ ಹಾಡುವಳು. ಅಯ್ಯೋ ತಪ್ಪು ಹೇಳಿಬಿಟ್ಟರು ಅಂತ ರೇಡಿಯೋ ಹಾಡು ತಪ್ಪಾದಾಗ ಇವಳು ವ್ಯಥೆ ಪಡೋಳು! ಇವಳನ್ನ ರೇಡಿಯೋ ಸ್ಟೇಶನ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಹಾಡಿಸಬೇಕು ಅನ್ನುವ ಯೋಚನೆ ನಮಗ್ಯಾರಿಗೂ ಬರಲೇ ಇಲ್ಲ.

ಅಮ್ಮನಿಗೆ ಸಿನಿಮಾ ನೋಡುವ ಆಸೆಯೂ ತುಂಬಾ. ಯಾವ ಥಿಯೇಟರ್‌ನಲ್ಲಿ ಯಾವ ಸಿನಿಮಾ ಅಂತ ಎದುರಿಗೆ ಪೇಪರು ಹರಡಿ ನೋಡುತ್ತಿದ್ದಳು. ಸಮಯ ನೋಡಿಕೊಂಡು ನನ್ನನ್ನು, ನಮ್ಮ ಅಣ್ಣ ಹಾಗೂ ಅಕ್ಕ ಇವರ ಜತೆ ಬಸ್ಸು ಹತ್ತಿ ಥಿಯೇಟರ್ ಸೇರಿಬಿಡುತ್ತಿದ್ದಳು. ಸಿನಿಮಾ ನೋಡಿಕೊಂಡು ಬಂದ ನಂತರ ಮುಂದಿನ ಸಿನಿಮಾ ನೋಡುವತನಕ ಈ ಸಿನಿಮಾದ ಮಾತುಕತೆ ಇರುತ್ತಿತ್ತು. ಕೆಲವು ಸಲ ಅಮ್ಮನ ಪರಿಚಯದವರ ಹತ್ತಿರ ಮಾತು ಆಡಬೇಕಾದರೆ ಹಳೇ ಸಿನಿಮಾಗಳ ಸಂಗತಿ ಸಹ ಬರುತ್ತಿತ್ತು. ಹೀಗಾಗೇ ನನಗೆ ಕೃಷ್ಣನ್, ಸುಂದರಾಂಬಾಲ್, ವೀರಪ್ಪನ್ ಮೊದಲಾದ ಹಿಂದಿನ ನಟ ನಟಿಯರ ಹೆಸರು ತಿಳಿದದ್ದು.

ಒಂದು ಸಲ ಹೀಗೇ ಮೆಜೆಸ್ಟಿಕ್ ಏರಿಯಾದ ಯಾವುದೋ ಥಿಯೇಟರ್‌ನಲ್ಲಿ ಯಾವುದೋ ಸಿನಿಮಾ ಇರೋದು ಪೇಪರ್ ನಲ್ಲಿ ನೋಡಿದ್ದಳು. ಅಪ್ಪ ಎಂದಿನ ಹಾಗೆ ಹೊರ ಊರಿಗೆ ಕೆಲಸದ ಮೇಲೆ ಹೋಗಿತ್ತು. ಬಾರೋ ಹೋಗೋಣ ಅಂತ ನನ್ನೂ ಕರಕೊಂಡು ಬಸ್ ಸ್ಟಾಪಿಗೆ ಬಂದಳು. ಬಸ್ಸು ಬಂತು. ಇವಳು ಒಂದು ಮೆಟ್ಟಿಲು ಹತ್ತಿದ್ದಾಳೆ, ಬಸ್ಸು ಮುಂದೆ ಚಲಿಸಿಬಿಟ್ಟಿತು… ಅದು ಹೇಗೋ ಸಾವರಿಸಿಕೊಂಡು ಬಸ್ಸು ಹತ್ತಿದ ಅಮ್ಮ ಅವತ್ತು ಡ್ರೈವರ್ ಮತ್ತು ಕಂಡಕ್ಟರ್ ಜನ್ಮ ಜಾಲಾಡಿಬಿಟ್ಟಳು. ಅಮ್ಮಾ ಕಾಲಿಗೆ ಬೀಳ್ತಿನಿ, ಸುಮ್ಕಿಕಿರಿ ಅನ್ನೋ ಸ್ಟೇಜ್‌ವರೆಗೆ ಇವಳು ಬೈದಿದ್ದು. ಇದು ಈ ಸಂಗತಿ ಅದು ಹೇಗೋ ನಮ್ಮ ನಂಟರಿಗೆ ಸುತ್ತ ಮುತ್ತ ಇದ್ದೋರಿಗೆ ತಿಳೀತು (ಇದರಲ್ಲಿ ನನ್ನ ಪಾತ್ರ ಇತ್ತಾ ಗೊತ್ತಿಲ್ಲ).

ಲಕ್ಷ್ಮೀ ದೇವಮ್ಮನೋರೆ ಹುಷಾರು, ಏನಾದರೂ ಆಗಿದ್ದರೆ….. ಅಂತ ನೆರೆ ಹೊರೆ ಅವರು ಆತಂಕ ತೋರಿಸಿದರು. ನಮ್ಮಮ್ಮ ಈ ವೇಳೆಗೆ ಅಚ್ಚಿ ಇಂದ (ಸೋದರ ಮಾವಂದಿರು ಹಾಗೂ ನಮ್ಮಪ್ಪ ಕರೀತಿದ್ದದ್ದು) ಲಕ್ಷ್ಮಮ್ಮ (ಮೊದಲು ಹಿರೇರು ಅಂತ ಕರಿತಿದ್ದರು) ಇಂದ ಲಕ್ಷ್ಮಿ ದೇವಮ್ಮಗೆ (ಇದು ಸುತ್ತ ಮುತ್ತಾ ಮಕ್ಕಳಿಗೆ ಚಿಟಿಕೆ ಪ್ರಯೋಗದ ನಂತರ) ಪ್ರಮೋಷನ್ ತಗೊಂಡಿದ್ದರು!

ನಮ್ಮ ಸೋದರ ಮಾವಂದಿರು ಅಮ್ಮಂಗೆ ಬುದ್ಧಿ ಹೇಳಿದ್ದು ಹೀಗೆ.. ಅಚ್ಚೀ ಹಾಳು ಸಿನಿಮಾ ಹುಚ್ಚು ಬಿಟ್ಟು ಬಿಡೆ… ಬಸ್ಸುಗಿಸ್ಸಿಂದ ಬಿದ್ದು ಸತ್ತೀಯಾ. ಆಮೇಲೆ ಮಕ್ಕಳು ಅಮ್ಮ ಇಲ್ಲದೇ ಬೆಳೀಬೇಕಾಗುತ್ತೆ… ನಮ್ಮಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು… ಇನ್ಮೇಲೆ ಬಸ್ಸಲ್ಲಿ ಹೋಗಬೇಡ. ಜಟಕಾ ಮಾಡಿಕೊಂಡು ಹೋಗು! ಬಸ್ಸು ಗುದ್ದಿದರೆ ಜಟಕಾಗೆ ಗುದ್ದಬೇಕು, ಒಳಗಿರೋರಿಗೆ ಏನೂಂತ ಗೊತ್ತಾಗೋ ಅಷ್ಟರಲ್ಲಿ ಜೀವ ಹೋಗಿರುತ್ತೆ..

ಈ ಪ್ರಸಂಗದಿಂದ ಅಮ್ಮನಿಗೆ ಸಿನಿಮಾ ಹುಚ್ಚು ಕಡಿಮೆ ಆಗಲಿಲ್ಲ, ಇನ್ನೂ ಹೆಚ್ಚಿತು. ಸಂಗೀತ ತುಂಬಾ ಆಸಕ್ತಿಯಿಂದ ಕೇಳುತ್ತಿದ್ದ ಅಮ್ಮ ಮನೆ ಹತ್ತಿರದ ಕಚೇರಿಗಳಿಗೆ ನಮ್ಮನ್ನೂ ಬಲವಂತವಾಗಿ ಕರೆದುಕೊಂಡು ಹೋಗೋಳು. ಅಲ್ಲಿನ ಸಂಗೀತ ಕೇಳಿಕೊಂಡು ಬಂದು ಇವಳು ಅದನ್ನ ಹೇಳೋದು ಕೇಳೋದಕ್ಕೆ ಖುಷಿ ಆಗೋದು. ನಾವು ತುಮಕೂರಿನಲ್ಲಿ ರಾಮಕೃಷ್ಣಯ್ಯ ಅವರ ವಠಾರದಲ್ಲಿದ್ದಾಗ ಶ್ರೀ ಲಕ್ಷ್ಮಣ ಶಾಸ್ತ್ರಿಗಳು ಅಂತ ಒಬ್ಬರು ಸಂಗೀತ ವಿದ್ವಾಂಸರು ವಠಾರದಲ್ಲಿದ್ದರು. ಅವರು ಮನೆಯಲ್ಲಿ ಹಾಡುತ್ತಿದ್ದ ರಾಗಾಲಾಪಣೆ ಅಮ್ಮನ ಮೇಲೆ ಪ್ರಭಾವ ಬೀರಿತ್ತು ಎಂದು ಹೇಳಿದ್ದೆ. ಇದು ನನ್ನ ಊಹೆ ಅಷ್ಟೇ. ಎ.ಸುಬ್ಬರಾಯರ ತಾರಕ್ಕ ಬಿಂದಿಗೆ, ರಾಜ ಅಯ್ಯಂಗಾರರ ಜಗದೋದ್ಧಾರನ, ಸುಬ್ಬಲಕ್ಷ್ಮಿ ಅವರ ಭಜ ಗೋವಿಂದಂ.. ಮೊದಲಾದ ಹಾಡುಗಳು ಅಮ್ಮನ ದನಿಯಲ್ಲಿ ಈಗಲೂ ನನಗೆ ಹಸಿರು ಹಸಿರು. ಎಪ್ಪತ್ತರ ನಡುವಿನಲ್ಲಿ ಟೇಪ್ ರೆಕಾರ್ಡರ್ ಬಂತಲ್ಲಾ ಆಗ ಒಂದುಸಲ ಅಮ್ಮ ದೊಡ್ಡ ಸೋದರ ಮಾವನ ಮನೆಗೆ ಹೋಗಿದ್ದಳು. ಟೇಪ್ ರೆಕಾರ್ಡರ್‌ನಲ್ಲಿ ಅಮ್ಮ ಹಾಡಿದ ಎರಡು ದೇವರ ನಾಮವನ್ನು ಸೋದರ ಮಾವನ ಮಗ ಬದರಿ ರೆಕಾರ್ಡ್ ಮಾಡಿದ. ರೆಕಾರ್ಡ್‌ನಲ್ಲಿ ಸೋದರ ಮಾವ ಕೊಟ್ಟ ಸೂಚನೆ, ಯಾವುದೋ ಕಾಮೆಂಟ್, ಮೂರು ಸೆಕೆಂಡ್‌ನಷ್ಟು ಒಂದು ನಗು….ಇವೆಲ್ಲಾ ಸೇರಿವೆ. ಐದಾರು ವರ್ಷಗಳ ಹಿಂದೆ ಆ ಎರಡು ಹಾಡು ನನಗೆ ಸೋದರಮಾವನ ಮಗಳು ಕಳಿಸಿದಳು. ಅಮ್ಮ ಸತ್ತು ಎಷ್ಟೋ ವರ್ಷ ಆಗಿದೆ. ಅಮ್ಮ ಹಾಡಿದ್ದ ಆ ಹಾಡು ನನ್ನ ಮೊಬೈಲ್‌ನಲ್ಲಿ ಸೇರಿದೆ. ಆಗಾಗ ನನ್ನ ಜತೆ ಈ ಹಾಡುಗಳು ಸಹ ವಾಕಿಂಗ್ ಮಾಡುತ್ತೆ. ಯಾರೇ ರಂಗನ ಕರೆಯಬಂದವರು…., ಸೀತಾರಾಮ ಪರಿಪೂರ್ಣ ಕಾಮ… ಅಂತ ಗುನುಗುತ್ತೆ. ಅಮ್ಮನಿಗೆ ಬರುತ್ತಿದ್ದ ಎಲ್ಲಾ ಹಾಡುಗಳನ್ನೂ ರೆಕಾರ್ಡ್ ಮಾಡಿ ಇಡಬೇಕಿತ್ತು ಅಂತ ಅನಿಸುತ್ತೆ. ಆದರೆ ಈಗ ಎಲ್ಲಿಂದ ಮಾಡ್ತೀರಿ?

ಅಮ್ಮ ನೋಡಲು ಎಂ ಎಸ್ ಸುಬ್ಬುಲಕ್ಷ್ಮಿ ಹಾಗೆ ಕಾಣುತ್ತಿದ್ದಳು. ಗಂಟು ಹಾಕಿ ಕೂದಲು ಕಟ್ಟಿಕೊಂಡು ಅದರ ಸುತ್ತಲೂ ಮಲ್ಲಿಗೆ ಮುಡಿದಾಗ, ಮುಂದೆಳೆ ಕೂದಲು ಗಾಳಿಗೆ ಹಾರಾಡಬೇಕಾದರೆ… ಥೇಟ್ ಎಂ ಎಸ್ಸೇ…! ಗೌರ ವರ್ಣ ನೋಡಿದ ಕೂಡಲೇ ಒಂದು ರೀತಿ ಗೌರವ ಮತ್ತು ಆಪ್ತತೆ ಆವರಿಸುತ್ತಿತ್ತು. ಮುಂದೆಲೆ ಗುಂಗುರು ಹಾರಾಡುತ್ತಿತ್ತು ಮತ್ತು ಹಣೆಗೆ ಮೂರು ಕಾಸಿನಗಲದ ಕುಂಕುಮ. ಸುತ್ತಮುತ್ತಲಿನ ಎಲ್ಲರಿಗೂ ಕೌನ್ಸೆಲಿಂಗ್, ಗಂಡ ಹೆಂಡತಿ ಜಗಳದಲ್ಲಿ ಮಧ್ಯಸ್ತಿಕೆ, ನಾಟಿ ವೈದ್ಯ…. ಹೀಗೆ ಅವಳು ಪಾಪ್ಯುಲರ್ ಪುಟ್ಟಮ್ಮ. ಪುಟ್ಟ ಮಕ್ಕಳಿಗೆ ಬಳೆ ಚೂರು ಕಾಯಿಸಿ ಚಿಟಿಕೆ ಹಾಕುವುದು ಇವಳ ಒಂದು ಚಿಕಿತ್ಸೆ. ಮಕ್ಕಳಿಗೆ ಯಾವ ಚಿಕಿತ್ಸೆ ಬೇಕು ಎಂದು ಖಾಯಿಲೆ ಮೇಲೆ ನಿರ್ಧಾರ. ಯಾವುದೂ ವೈದ್ಯಕೀಯ ವ್ಯಾಸಂಗದ ಹಿನ್ನೆಲೆ ಇಲ್ಲದ ಅಮ್ಮ ಚಿಕಿತ್ಸೆ ನೀಡುವುದು ನಮಗೆ ಆತಂಕದ ಸಂಗತಿ. ಯಾರಿಗೋ ಹೀಗೆ ಚಿಕಿತ್ಸೆ ಕೊಡ್ತೀಯಾ, ಆಮೇಲೆ ಏನಾದರೂ ಆದರೆ, ಮಗು ಸತ್ತರೆ ಪೊಲೀಸಿನವರು ನಿನ್ನ ಜೈಲಿಗೆ ಹಾಕ್ತಾರೆ ಅಂತ ಅಮ್ಮನಿಗೆ ಹೆದರಿಸುತ್ತಾ ಇದ್ದೆವು. ಆದರೂ ಅಮ್ಮ ಕೊನೆವರೆಗೂ ಈ ಅಭ್ಯಾಸ ಬಿಡಲಿಲ್ಲ. ಬಾಣಂತಿಯರಿಗೆ, ಬಸಿರಿಯರಿಗೆ ಮತ್ತು ಮಕ್ಕಳ ಹಲವಾರು ಕಾಹಿಲೆಗಳಿಗೆ ಅಮ್ಮನ ಚಿಕಿತ್ಸೆ. ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ ಮತ್ತು ಇದಕ್ಕೆ ಎಂದೇ ಒಂದು ಸಮಯ ಗಿಮಯ ಇಲ್ಲ. ಸೊಗಡೆ ಬೇರಿನ ಕಷಾಯ ಪ್ರತಿದಿವಸ ತಯಾರಾಗುತ್ತಿತ್ತು. ಅಪ್ಪ ಕಾಲವಾದ ಮೇಲೆ ಅಮ್ಮನ ಹಣೆಯ ಮೇಲಿನ ಕುಂಕುಮ ಮಿಸ್ ಆಯಿತು. ನಿಧಾನಕ್ಕೆ ಈ ವೈದ್ಯ ಸಹ ಕಡಿಮೆ ಆಗಿ ನಿಂತು ಹೋಯಿತು. ನಿಧಾನಕ್ಕೆ ಈ ಸಂಗೀತ ಹೇಳುವುದು ಸಹಾ ನಿಂತುಬಿಟ್ಟಿತು. ಕೊನೇ ಒಂದು ಆರು ತಿಂಗಳು ಮರೆವು ಬಂದು ಊಟಕ್ಕೆ ಎಬ್ಬಿಸಿದರೆ ಈಗ ತಾನೇ ಆಯ್ತಲ್ಲಾ ಅನ್ನುತ್ತಿದ್ದಳು. ಸಂಜೆ ಸ್ನಾನ ಮಾಡಿ ಬಿಡುತ್ತಿದ್ದಳು, ಬೆಳಿಗ್ಗೆ ಆಗಿದೆಅಂದುಕೊಂಡು. ದಿವಸಕ್ಕೆ ಕೆಲವು ಸಲ ಐದಾರು ಸಲ ಸ್ನಾನ ಆಗಿಬಿಡೋದು. ಅವಳಿಗೆ ಮರೆವು ಬರ್ತಿದೆ ಎನ್ನುವ ಸಂಶಯ ನಮಗೆ. ಅದನ್ನು ಪರೀಕ್ಷಿಸಲು ನಾನ್ಯಾರು ಗೊತ್ತಾಯ್ತಾ ಅಂದರೆ ಹ ಹ ಗೋಪಿ ಅಲ್ವೇ ಅಂತ ಹೇಳಿ ಮರುಕ್ಷಣದಲ್ಲೇ ಅವಳ ಬಾಲ್ಯದ ನೆನಪಿಗೆ ಹಾರ್ತಾ ಇದ್ದಳು. ನನ್ನ ದೊಡ್ಡ ಅಣ್ಣ ಅತ್ತಿಗೆ ಅಕ್ಕ ಅಮ್ಮನ ಕೊನೇ ದಿವಸಗಳಲ್ಲಿ ನೋಡಿಕೊಂಡರು, ಪುಣ್ಯ ಸಂಪಾದಿಸಿದರು. ಅಮ್ಮ ತೀರಿಕೊಂಡಾಗ ಪುರೋಹಿತರು ಮುಂದಿನ ಶಾಸ್ತ್ರಕ್ಕೆ ಬಂದರು. ತಾಯಿ ಕರ್ಮ ಕೊನೇ ಮಗ ಮಾಡತಕ್ಕದ್ದು ಅಂತ ಒಂದು ಸಂಸ್ಕೃತ ಶ್ಲೋಕ ಹೇಳಿದರು. ನಾನೇ ಕೊನೆಯದು, ಅಮ್ಮನಿಗೆ. ಆದರೆ ಲೀಗಲ್ ಸಾಂಕ್ಷನ್ ಇಲ್ಲ. ಕಾರಣ ನನಗೆ ಉಪನಯನ ಆಗಿರಲಿಲ್ಲ. ಅದಿಲ್ಲದೆ ಮದುವೆ ಮಕ್ಕಳು ಆಗಿಬಿಟ್ಟಿತ್ತು! ಪುರೋಹಿತರಿಗೆ ಈ ಸಮಸ್ಯೆ ಹೇಳಿದೆ. ಪರವಾಗಿಲ್ಲ ಈ ಕಡೆ ಬನ್ನಿ, ಈಗ ಉಪನಯನ ಮಾಡೋಣ ಅಂದರು. ಅಮ್ಮನ ಹೆಣ ಹಾಲ್‌ನಲ್ಲಿ ಇದೆ, ಅಡುಗೆ ಮನೇಲಿ ನನಗೆ ತಾತ್ಕಾಲಿಕ ಯಜ್ಞೋಪವೀತ ಧಾರಣಮ್ ಅಂತ ಮಂತ್ರ ಹೇಳಿ ಉಪನಯನ ಮಾಡಿದರು. ಅಷ್ಟೊಂದು ವಯಸ್ಸು ಆದಮೇಲೆ ಮಕ್ಕಳೂ ಸಹ ಹುಟ್ಟಿದ ನಂತರ ಉಪನಯನ ಮಾಡಿಸಿಕೊಂಡ ಏಕಮೇವ ವ್ಯಕ್ತಿ ಬಹುಶಃ ನಾನೊಬ್ಬನೇ ಇರಬೇಕು!

ಅಪ್ಪನಿಗೆ ಸಂಗೀತದ ಗೀಳು ಇಲ್ಲ. ಆದರೂ ಸುಶ್ರಾವ್ಯ ರಾಗದಲ್ಲಿ ತೆಲುಗಿನ ಜೋಗುಳದ ಹಾಡು ಹಾಡುತ್ತಾ ಮೊಮ್ಮಕ್ಕಳ ತೊಟ್ಟಿಲು ತೂಗುತ್ತಿದ್ದರು. ಯಾವುದೋ ರಾಮಾಯಣದ ಹಾಡು ತೆಲುಗು ಭಾಷೆಯದು ತುಂಬಾ ಚಿಕ್ಕದಾಗಿತ್ತು. ಅದು ಅವರ ಪೆಟ್ ಹಾಡು. ಜತೆಗೆ ಅದೆಷ್ಟೋ ದೇವರ ನಾಮಗಳು. ಇದು ಯಾವುದೂ ನಮಗೆ ನಾವು ಚಿಕ್ಕ ಕೂಸುಗಳಿದ್ದಾಗ ಹಾಡಿದ ನೆನಪು ನಮಗ್ಯಾರಿಗೂ ಇಲ್ಲ. ಆದರೆ ಎಲ್ಲಾ ಮೊಮ್ಮಕ್ಕಳಿಗೆ ಇವರ ಜೋಗುಳ ಇದ್ದೇ ಇರುತ್ತಿತ್ತು. ಇದು ಅಪ್ಪ ಕಾಲವಾಗುವ ತನಕ ಇತ್ತು. ಅಪ್ಪನ ಜೋಗುಳದ ಹಾಡುಗಳನ್ನು ರೆಕಾರ್ಡ್ ಮಾಡಿಡಬೇಕಿತ್ತು ಅಂತ ಈಗ ಅನಿಸುತ್ತೆ. ರೈಲು ಹೋದ ಮೇಲೆ ಸ್ಟೇಶನ್‌ಗೆ ಬಂದ ಹಾಗೆ!

ಮುತ್ತಾತನ ಕಾಲದ ಹಿಂದಿನ ನಾಲ್ಕು ಸಾಲಿಗ್ರಾಮ ನಮ್ಮ ಮನೆಯಲ್ಲಿತ್ತು. ಅಂಡಾಕಾರದ ತೆಳು ನೀಲಿ ಬಣ್ಣದ ಒಂದು, ಕಡು ಕಪ್ಪಿನವು ಮೂರು, ಒಟ್ಟು ನಾಲ್ಕು. ಅಪ್ಪ ಮನೆಯಲ್ಲಿ ಇದ್ದಾಗ ಅದಕ್ಕೆ ಭಕ್ತಿಯಿಂದ ಪೂಜೆ ಪಾರಾಯಣ ನಡೆಸೋರು. ಅವರು ಪೂಜೆ ಮಾಡಲು ಸಿದ್ಧತೆಯದೇ ಒಂದು ಕತೆಗಾಗುವಶ್ಟು ಸರಕು. ಒದ್ದೆ ಮಡಿ ಪಂಚೆ ಮೊಣಕಾಲಿನ ಮೇಲಕ್ಕೆ ಬರುವಂತಹದನ್ನು ಕಚ್ಚೆ ಹಾಕಿ ಉಟ್ಟು ಕೃಷ್ಣಾಂಜಿನದ ಪೆಟ್ಟಿಗೆಯಿಂದ ಸಾಲಿಗ್ರಾಮ ಹೊರ ತೆಗೆದು ಅದನ್ನು ಬೆಳ್ಳಿ ತಟ್ಟೆಯಲ್ಲಿ ಇಡುತ್ತಿದ್ದರು. ಎದುರಿಗೆ ಸಾಣೆ ಕಲ್ಲು, ಗಂಧದ ಕೊರಡು ಇಟ್ಟುಕೊಂಡು ಗಂಧ ತೇಯುತ್ತಿದ್ದರು. ತೇಯ್ದ ಗಂಧವನ್ನು ಆಗಾಗ ತೆಗೆದು ಒಂದು ಬೆಳ್ಳಿ ಬಟ್ಟಲಿಗೆ ತುಂಬುವರು. ಒಂದು ಅರ್ಧ ಬಟ್ಟಲು ಗಂಧ ತುಂಬಿದ ನಂತರ ಪುಟ್ಟ ಪಂಚಪಾತ್ರೆಯಿಂದ ಗೋಪಿ ಚಂದನ, ಮುದ್ರೆ ಆಚೆ ಇಡುವರು. ಬಲಗೈಯಿಂದ ಗೋಪಿಚಂದನ ಹಿಡಿದು ಎಡ ಅಂಗೈ ಮೇಲೆ ಎರಡು ಉದ್ಧರಣೆ ನೀರು ಹಾಕಿ ಸುತ್ತಗೆ ಸುತ್ತಿದರೆ ಚಂದನ ಪೇಸ್ಟ್ ರೆಡಿ. ನಂತರ ಆ ಚಂದ ನಕ್ಕೆ ಮುದ್ರೆ ಒತ್ತಿ ಅದನ್ನು ಎಡ ತೋಳು, ಬಲ ತೋಳು, ಹಣೆ ಹಣೆ ಅಕ್ಕ ಪಕ್ಕ, ಎದೆ, ಹೊಟ್ಟೆ ಬೆನ್ನು ಭಾಗಗಳಿಗೆ ಒತ್ತುವರು. ಕುತ್ತಿಗೆ ಕೆಳಭಾಗಗಳಿಗೆ ತೋರು ಬೆರಳಿನಿಂದ ಗಂಧ ತೆಗೆದು ಅದನ್ನು ಓರೆಯಾಗಿ ಸವರಿಕೊಳ್ಳುವರು. ಈ ಪ್ರಕ್ರಿಯೆ ನಡೆವಾಗ ಮಂತ್ರ, ದೇವರನಾಮ ಹಾಡುತ್ತಿದ್ದರು. ಇದು ಮೊದಲ ಪಾರ್ಟ್. ನಂತರ ಮನೆ ಮೇಲೆ ಎಸೆದು ಬಿಸಿಲಿಗೆ ಒಣಗಿ ಬಾಳೆಹಣ್ಣಿನ ಸಿಪ್ಪೆಗಳಲ್ಲಿ ಚೆನ್ನಾಗಿ ಒಣಗಿದ ಸಿಪ್ಪೆ ತರುವರು. ಅದನ್ನು ಚೆನ್ನಾಗಿ ಒರೆಸಿ ಈ ಗಾಗಲೇ ಹತ್ತಿಸಿರುವ ದೀಪದ ಕಂಬದ ದೀಪಗಳಿಗೆ ಹಿಡಿಯುವರು. ಸಿಪ್ಪೆ ಹತ್ತಿ ಉರಿದಾಗ ಅದರ ಕರೇ ಬೂದಿ ಮಂಗಳಾರತಿ ತಟ್ಟೆಗೆ ಉದುರಿಸಿ ಅದಕ್ಕೆ ಒಂದು ಉದ್ದರಣೆ ನೀರು ಹಾಕಿ ಕಲಸಿದರೆ ಅಕ್ಷತೆ ರೆಡಿ. ಇದು ಹಣೆಯ ಮಧ್ಯಕ್ಕೆ. ಊಟಕ್ಕೆ ಕೂರುವಾಗ ಈ ಅಕ್ಷತೆ ಒಂದು ಮಸ್ಟ್.

ನಂತರ ಪೂಜೆಗೆ ತಯಾರಿ ಮಂತ್ರಗಳು. ದೇವರ ನಾಮ, ಗೀತಾ ಪಠಣ ಪೂಜೆಯ ಭಾಗ. ಪೂಜೆ ನಂತರ ಮತ್ತೆ ಅದು ಕೃಷ್ಣಾಂಜಿನದ ಪೆಟ್ಟಿಗೆ ಸೇರುತ್ತಿತ್ತು. ಈ ಚೇಗೆ ಒಬ್ಬರು ಮಠದ ಸ್ವಾಮಿಗಳ ಕೊಠಡಿಯಲ್ಲಿ ಜಿಂಕೆ ಚರ್ಮ ಇತ್ತು ಅಂತ ಅರೆಸ್ಟ್ ಮಾಡಿದ್ದರಲ್ಲಾ (ವನ್ಯ ಮೃಗ ಸಂರಕ್ಷಣಾ ಕಾಯಿದೆ ಉಲ್ಲಂಘನೆ) ಆಗ ನನಗೆ ನಮ್ಮ ಮನೆಲ್ಲಿದ್ದ ಆ ಕೃಷ್ಣಾಂಜಿನದ ಪೆಟ್ಟಿಗೆ ನೆನಪಿಗೆ ಬರೋದು. ನಮ್ಮನ್ನೂ ಸಹ ಆಗ ಅರೆಸ್ಟ್ ಮಾಡುತ್ತಿದ್ದರಾ ಅಂತನಿಸೋದು. ಕೃಷ್ಣಾಂಜಿನ ಅಂದರೆ ಜಿಂಕೆ ಚರ್ಮ. ಈಗ ಈ ಚರ್ಮದ ಕತೆ ಮಧ್ಯೆ ಮತ್ತೊಂದು ತೀರಾ ಈಚಿನ ನೆನಪು ಬಂತು. ಅದನ್ನ ಈಗ ಹೇಳಲೇ…

ಅಲ್ಲಿ ಅವಳ ಸಂಗಡ ಅದೂ ಇದೂ ಮಾತನಾಡುತ್ತಾ ಸರ ಮಾರೋ ವಿಷಯ ತೆಗೆಯದ ಹಾಗೆ ನೋಡಿಕೊಂಡಳು. ಸ್ಟೇಶನ್ ಬರ್ತಿದ್ದ ಹಾಗೆ ಪಕ್ಕದ ಹೆಂಗಸು ಎದ್ದಳು. ಅವಳ ಜತೆ ಎದುರು ಕೂತಿದ್ದ ಹೆಂಗಸು ಸೇರಿದ ಹಾಗೆ ನಾಲ್ಕೈದು ಹೆಂಗಸರು ಇಳಿದು ಓಡಿ ಬಿಟ್ಟರು. ಒಂದು ದೊಡ್ಡ ಅಪರಾಧವನ್ನ ಅಮ್ಮ ತಡೆದು ಬಿಟ್ಟಿದ್ದಳು!

ನನ್ನ ಹೆಂಡತಿ ಚಿಕ್ಕಪ್ಪ ಸತ್ಯವ್ರತ ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗಾಂಧೀವಾದಿ. ವಿನೋಬಾ ಅವರ ಸರ್ವೋದಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಹೆಂಡತಿ ಡಾ. ಲಕ್ಷ್ಮಿ ಅವರು ನ್ಯಾಚುರೋಪತಿ ವೈದ್ಯರು. ಅವರು ವಾಸ ಇದ್ದ ಕುಮಾರ ಪಾರ್ಕನ ಗಾಂಧಿ ಭವನದ ಸುತ್ತ ರಾಜಾಸ್ಥಾನದ ಮಾರವಾಡಿಗಳು ಮತ್ತು ಉತ್ತರ ಭಾರತೀಯರ ವಾಸ. ಇವರು ಅಲ್ಲಿ ಎಲ್ಲರಿಗೂ ತುಂಬಾ ಆಪ್ತರು ಮತ್ತು ಬೇಕಾದವರು. ಇವರಿಗೆ ಸುತ್ತ ಮುತ್ತಲಿನವರು ಆಗಾಗ ಏನಾದರೂ ವಿಶೇಷವಾದದ್ದನ್ನು ತಂದು ಕೊಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಒಂದು ಸಲ ಅವರ ಮನೆಗೆ ಹೋಗಿದ್ದೆವು ನಾನು, ನನ್ನಾಕೆ. ಊಟಕ್ಕೆ ಎಬ್ಬಿಸಿದರು. ಸರಿ ಅಂತ ಚಕ್ಕಳ ಮಕ್ಕಳ ಹಾಕಿ ಕೂತೆವು. ಗುಜರಾತ್ ನವರು ಕಾಕ್ರಾ ಅಂತ ಒಂದು ರೀತಿಯ ತಿನಿಸು ಮಾಡುತ್ತಾರೆ. ಒಣಗಿದ ಹಪ್ಪಳದ ಹಾಗಿರುತ್ತೆ. ನಾಲ್ಕು ಕಾಕರಾ ಹಾಕಿದರು, ತಿಂದೆವು. ಎರಡು ಮೂರು ತರಹ ಹಣ್ಣು ಹೆಚ್ಚು ಹಾಕಿದರು. ಅದೂ ಎಲ್ಟಿಂದಾ ತಿಂದಾಯಿತು. ಅನ್ನ ಹುಳಿ ಬರತ್ತೆ ಅಂತ ಹಾಗೇ ಕೂತಿದ್ದೆವು. ಇನ್ನೂ ಕಾ ಕ್ರಾ ಹಾಕಲೇ…. ಅಂದರು. ಅನ್ನ ಹಾಕಿ ಅಂದೆ. ಅವರು ನಕ್ಕರು. ನಮ್ಮಲ್ಲಿ ಅನ್ನ ಮಾಡಲ್ಲ, ಇದೇ ನಮ್ಮೂಟ….. ಅಂದರು. ಅಯ್ಯೋ ಇದು ನಾವು ಊಟಕ್ಕೆ ಮೊದಲು ತಿನ್ನುತ್ತೀವಿ ಅಂತ ನಕ್ಕೆ.

ಎರಡು ಹೊಸ ಕುರ್ಚಿ ಅವರ ಮನೆಯ ಪಡಸಾಲೆಯಲ್ಲಿ ಕಾಣಿಸಿದವು. ಮಾಮೂಲು ಕುರ್ಚಿಯ ಹಾಗೆ ಅವು ಕಾಣಲಿಲ್ಲ. ಹಾಗೇ ಮಾತಾಡುತ್ತಾ ಇರಬೇಕಾದರೆ ಸತ್ಯವ್ರತ ಅವರು ಆ ಕುರ್ಚಿ ತೋರಿಸಿದರು. ಇದು ಯಾವುದರಿಂದ ಮಾಡಿದ್ದಾರೆ ಗೊತ್ತಾ ಅಂದರು. ಹೊಸದಾಗಿತ್ತು. ಅಂಚಿಗೆ ಮರದ ಪಟ್ಟಿ ಇತ್ತು, ಈಸಿ ಚೇರ್ ಮಾದರಿ ಕೂಡುವ ಜಾಗಕ್ಕೆ ದಪ್ಪನೆ ಒಂದು ಅರ್ಧ ಇಂಚು ದಪ್ಪದ ಹಾಸು ಇತ್ತು. ಮೊದಲನೇ ಬಾರಿಗೆ ಅಂತಹ ಕುರ್ಚಿ ನೋಡಿದ್ದು ನಾನು.

ತಿಳಿಯದು ಅಂತ ತಲೆ ಆಡಿಸಿದೆ.

ನೋಡಿ ಇದು ಘೇಂಡಾ ಮೃಗದ ಚರ್ಮ ಅಂತ ಹೇಳಿ ಅದನ್ನು ಮುಟ್ಟಿಸಿದರು, ಸವರಿ ಅಂದರು, ಅದರ ಮೇಲೆ ಕೂಡಿಸಿ ಹೇಗಿದೆ ಅಂದರು….! ಪ್ರಾಣಿ ಮೇಲೆ ಕೂತ ಹಾಗಿತ್ತು.

ಯಾರು ಕೊಟ್ಟರು ಅಂತ ವಿಚಾರಿಸಿದೆ. ಯಾರೋ ಮಾರವಾಡಿ, ಎಂಟು ತಂದನಂತೆ, ಎರಡು ಇಲ್ಲಿ ಕೊಟ್ಟ ಅಂದರು…!

ಸಾರ್ ಘೇಂಡಾಮೃಗ ಅಳಿವಿನ ಅಂಚಿನಲ್ಲಿ ಇರೋ ಪ್ರಾಣಿ. ಯಾರಾದರೂ ಸರ್ಕಾರದವರು ಇದನ್ನ ನೋಡಿದರೆ ನಿಮ್ಮನ್ನು ಅರೆಸ್ಟ್ ಮಾಡಿ ಬಿಡ್ತಾರೆ ಹುಷಾರು ಅಂದೆ. ಯಾಕೆ ಎಂದು ಮುಗ್ಧರಾಗಿ ಕೇಳಿದರು. ವನ್ಯ ಮೃಗ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಎಂದೆ. ಆಗಾಗ ಅವರನ್ನು ತಮಾಷೆ ಮಾಡುತ್ತಿದ್ದೆ. ತಮಾಷೆಯ ಭಾಗವಾಗಿ ಅವರು ನಂಬಿದ ಸಿದ್ಧಾಂತಗಳನ್ನು ಸಹ ವ್ಯಂಗ್ಯ ಮಿಶ್ರಿತ ಹಾಸ್ಯ ಮಾಡುತ್ತಿದ್ದೆ. ಪಾಪ ಹಸುವಿನ ಸ್ವಭಾವದವರು, ಅಳಿಯನ ಮಾತಿಗೆ ನಕ್ಕು ಎಳಸು ಎಳಸು ಅಂದುಕೊಳ್ಳುತ್ತಿದ್ದರು. ಎಂದಿನ ಹಾಗೆ ರೇಗಿಸುತ್ತಾ ಇದೀನಿ ಅಂತ ಅಂದುಕೊಂಡು ಬಾಯ್ತುಂಬಾ ನಕ್ಕರು. ಅವರು ನಿಧನರಾದ ಕೆಲವು ವರ್ಷದವರೆಗೂ ಆ ಕುರ್ಚಿಗಳು ಮನೆಯ ಹೊರ ಪಡಸಾಲೆಯಲ್ಲಿ ಇದ್ದವು. ಬಿಸಿಲು ಮಳೆ ಗಾಳಿಗೆ ಮೈ ಒಡ್ಡಿ ಮೊದಲಿನ ಚೆಲುವು ಹೋಗಿತ್ತು. ಇವರನ್ನ ಯಾರೂ ಬದುಕಿದ್ದಾಗ ಅರೆಸ್ಟ್ ಮಾಡಲಿಲ್ಲವಲ್ಲ; ದೇವರು ದೊಡ್ಡವನು ಎಂದು ನಂಟರು ಇಷ್ಟರ ಮುಂದೆ ಹೇಳಿ ಹಲವರ ನಗುವಿಗೆ ಕಾರಣ ಆಗಿದ್ದೆ! ತುರ್ತು ಪರಿಸ್ಥಿತಿಯಲ್ಲಿ ಅವರು ಜೈಲಿನಲ್ಲಿ ಇದ್ರಲ್ಲಾ ಅಂತ ನೆಂಟರು ನೆನೆಸಿಕೊಳ್ಳುತ್ತಾ ಇದ್ದರು. ಅವರ ಮರಣದ ನಂತರ ಕೊನೆಗೆ ಮನೆ ಸುಪರ್ದಿಗೆ ತೆಗೆದುಕೊಂಡ ಗಾಂಧಿ ಭವನದವರು ಆ ಕುರ್ಚಿ ಯಾರಿಗೆ ಕೊಟ್ಟರೋ ತಿಳಿಯದು. ಕೃಷ್ಣಾಂಜಿನದ ನೆನಪು ಘೆಂಡಾಮೃಗಕ್ಕೆ ಬಂತಾ.. ಸಾಲಿಗ್ರಾಮದ ಬಗ್ಗೆ ಹೇಳ್ತಾ ಇದ್ದೆ.

ಸಾಲಿಗ್ರಾಮದ ಪೂಜೆಯ ನಂತರ ಕೆಲವು ಸಲ ಪ್ರಸಾದವೂ ಸಹ ಸಿಗುತ್ತಿತ್ತು. ಅಪ್ಪ ತೀರಿದ ನಂತರ ಯಾರೋ ಪುರೋಹಿತರು ಮನೆಗೆ ಬಂದಿದ್ದರು. ಅವರಿಗೆ ನಾವು ಆಚಾರ್ರು ಎನ್ನುತ್ತೇವೆ. ಸಾಲಿಗ್ರಾಮ ಪ್ರತಿದಿನ ಪೂಜೆ ಮಾಡಿಸಿಕೊಳ್ಳಬೇಕು. ಹಾಗೇ ಅದನ್ನ ಪೆಟ್ಟಿಗೆಯಲ್ಲಿ ಇಡಬಾರದು ಎಂದು ಅದೇ ಪುರೋಹಿತರು ಹೇಳಿದರು. ಪೂಜೆ ಇಲ್ಲದೇ ಸಾಲಿಗ್ರಾಮ ಮನೇಲಿ ಇದ್ದರೆ ಇದ್ದರೆ ಮನೆಗೆ ಕೇಡು. ಗಂಡಸರು ಪೂಜೆ ಮಾಡಬೇಕು ಈ ದೇವರಿಗೆ ಅಂದರು. ಮನೆಯಲ್ಲಿದ್ದ ಮೂವರು ಅಣ್ಣಂದಿರಲ್ಲಿ ಇಬ್ಬರು ಫ್ಯಾಕ್ಟರಿಲಿ ಶಿಫ್ಟ್‌ನಲ್ಲಿ ಕೆಲಸ ಮಾಡುವವರು. ಇನ್ನೊಬ್ಬ ಅಣ್ಣ ಬೆಂಗಳೂರಿಂದ ದೂರ ಇದ್ದ. ಕೊನೇ ಗಂಡಸು ನಾನು ಪೂಜೆ ಪುನಸ್ಕಾರ ಇಂದ ಹತ್ತು ಗಾವುದ ದೂರ. ಯಾರೂ ಪೂಜಿಸುವವರು ಇಲ್ಲದೇ ನಂತರ ಸಾಲಿಗ್ರಾಮ ದೇವಸ್ಥಾನ ಸೇರಿತು! ಈಗ ನಮ್ಮ ಯಾರ ಮನೆಯಲ್ಲಿಯು ಸಾಲಿಗ್ರಾಮ ಇಲ್ಲ. ಮಡಿ ಸಹ ಇಲ್ಲ. ದೇವಸ್ಥಾನಕ್ಕೆ ಕೊಡುವ ಮೊದಲು ಒಮ್ಮೆ ಸಾಲಿಗ್ರಾಮ ಮುಟ್ಟಬೇಕು, ಕೈಯಲ್ಲಿ ಹಿಡಿಯಬೇಕು ಅನ್ನಿಸಬೇಕೆ… ಯಾರಿಗೂ ಗೊತ್ತಾಗದ ಹಾಗೆ ಪೆಟ್ಟಿಗೆಯಿಂದ ಅದನ್ನು ಆಚೆ ತೆಗೆದು ಒಂದು ಕೈಯಲ್ಲಿ, ನಂತರ ಎರಡು ಕೈಯಲ್ಲಿ ಅದನ್ನು ಹಿಡಿದು ಬೊಗಸೆಯಲ್ಲಿ ಮುಚ್ಚಿಟ್ಟುಕೊಂಡು ನಂತರ ಪೆಟ್ಟಿಗೆ ಒಳಗಿಟ್ಟೆ. ಬೊಗಸೆಯಲ್ಲಿ ಇಟ್ಟು ಮುಚ್ಚಿಕೊಂಡಾಗ ಅದೆಂತಹ ಸ್ಪರ್ಶ ಸುಖ ಅನುಭವಿಸಿದ್ದೆ ಗೊತ್ತೇ… ಇಂತಹ ಸಾಲಿಗ್ರಾಮ ಸ್ಪರ್ಶ ಸುಖ ಯಾರಿಗುಂಟು ಯಾರಿಗಿಲ್ಲ…..!

ನಮ್ಮದು ತಳ ಮಧ್ಯಮ ವರ್ಗದ ಕುಟುಂಬ. ಆಸ್ತಿ ಪಾಸ್ತಿ ಮಾಡಲು ಸಾಕಷ್ಟು ಹಣ ಇರಲಿಲ್ಲ ಹಾಗೂ ಮಾಡಲಿಲ್ಲ. ಆದರೆ ಜೀವನವನ್ನು ತುಂಬಾ ಪ್ರಾಮಾಣಿಕವಾಗಿ ನಡೆಸಿಕೊಂಡು ಬಂದಿದ್ದರು. ಅದೇ ಗುಣ ನಮ್ಮಲ್ಲೂ ಸಹ ವಂಶ ವಾಹಿನಿ ಆಗಿದೆ. ಅಡುಗೆ ತಡ ಆಯಿತು ಅಂತ ಹಸಿವು ಆಗಿದೆಯೇ ಹೊರತು ಹೊಟ್ಟೆಗಿಲ್ಲದೆ ನಾವೆಂದೂ ಸಂಕಟ ಪಟ್ಟವರಲ್ಲ. ಇನ್ನೂ ತಮಾಷೆ ಅಂತ ನನಗೆ ಬೆಳೆದ ಮೇಲೆ ಅನ್ನಿಸಿದ್ದು ನಮ್ಮನೆಯಲ್ಲಿ ಸಹ ಒಬ್ಬ ಕೆಲಸದಾಕೆ ಇದ್ದರು. ಅಂದರೆ ನಮ್ಮ ಆಗಿನ ಧಿಮಾಕು ನೋಡಿ. ಗಂಜಿ ಕುಡಿಯೋನಿಗೆ ಗಡ್ಡ ಹಿಡಿಯೋನು ಒಬ್ಬ ಅಂತೆ. ಕೆಲಸದಾಕೆ ಮನೆಗೆ ಆಗಾಗ ನಾನು ನಮ್ಮ ಅಣ್ಣ ಶಾಮು ಹೋಗ್ತಾ ಇದ್ದೆವು. ಆಕೆ ಹೆಸರು ಜಾಕೀರಾಬಿ ಅಂತ. ಅಲ್ಲಿ ನಮಗೆ ಆಕೆ ಬಲವಂತ ಮಾಡಿ ತಿಂಡಿ ಕೊಡ್ತಾ ಇದ್ದಳು. ಹೀಗೇ ಒಮ್ಮೆ ಅಕ್ಕಿರೊಟ್ಟಿ ಕೊಟ್ಟಳು. ತಿಂದು ಮನೆಗೆ ಬಂದೆವು. ನಮ್ಮ ಅಣ್ಣ ಅಮ್ಮನ ಬಳಿ ಪಿಸು ಮಾತಿನಲ್ಲಿ ಹೇಳಿದ ಅಮ್ಮಾ ಜಾಕಿರಾಬಿ ಮನೇಲಿ ಅಕ್ಕಿ ರೊಟ್ಟಿ ಮಾಡ್ತಾರೆ…! ನಮ್ಮ ಮನೇಲಿ ಅಕ್ಕಿ ರೊಟ್ಟಿ ಅನ್ನೋದು ಒಂದು ಲಕ್ಷುರಿ ಆಗ. ಅಮ್ಮ ಪೆಚ್ಚಾದಳು. ಅದಾದ ಮೇಲೆ ವಾರಕ್ಕೆ ಒಮ್ಮೆ ಆದರೂ ಅಕ್ಕಿ ರೊಟ್ಟಿ ಮಾಡಿ ಕೊಡೋಳು!

ಅದೂ ಹೇಗೆ ಅಂತೀರಿ. ಮನೇಲಿ ಒಂದು ದೊಡ್ಡ ಡಬರಿ ಇತ್ತು. ಅದು ಹುಳಿ, ಬಿಸಿಬೇಳೆ ಭಾತ್ ಮಾಡಬೇಕಾದರೆ ಅಟ್ಟದಿಂದ ಕೆಳಗೆ ಬರ್ತಿತ್ತು. ಈಗ ರೊಟ್ಟಿಗೂ ಸಹ ಅದೇ. ಎರಡು ಸೇರು ರೊಟ್ಟಿ ಹಿಟ್ಟು ಕಲಸೋದು, ಅದಕ್ಕೆ ಎಲ್ಲಾ ಬೇಕಾದ್ದು ಅಂದರೆ ಜೀರಿಗೆ, ಈರುಳ್ಳಿ ಇಲ್ಲವೇ ಕೊಬ್ರಿ ತುರಿ ಹಸಿಮೆಣಸಿನ ಕಾಯಿ ಸೇರಿಸೋದು. ಡಬರಿಯಲ್ಲಿ ಅದನ್ನು ತಟ್ಟೋದು. ಅಷ್ಟೂ ಮಕ್ಕಳಿಗೆ ಒಂದು ಡಬರಿಯಲ್ಲಿ ತಟ್ಟಿದ ರೊಟ್ಟಿ ಮಸ್ತ್ ಆಗ್ತಾ ಇತ್ತು. ಅದಕ್ಕೆ ತಾಳಿ ಪಿಟ್ಟು ಅಂತ ಹೆಸರು. ವಯಸ್ಸಾಗುತ್ತಾ ಆಗುತ್ತಾ ಇಂತಹ ನೆನಪುಗಳು ಹೆಚ್ಚಂತೆ!

ಅಮ್ಮ ಕಾದಂಬರಿ ಓದುವುದರಲ್ಲಿ ಎತ್ತಿದ ಕೈ. ಇನ್ನೂರು ಪುಟದ ಕಾದಂಬರಿ ಒಂದೇ ದಿನದಲ್ಲಿ ಓದಿ ಮುಗಿಸಿ ಬಿಡ್ತಾ ಇದ್ದಳು. ಅವಳ ಪೆಟ್ ಕಾದಂಬರಿಕಾರರು ಅಂದರೆ ಅನಕೃ, ರಾಮಮೂರ್ತಿ. ಇವರಿಬ್ಬರ ಪುಸ್ತಕ ಅಂದರೆ ಸರಿ ರಾತ್ರಿ ಆದರೂ ಓದಬೇಕು. ಅಪ್ಪ ಊರಿಂದ ಬರಬೇಕಾದರೆ ಕೈಲಿ ಕೊರವಂಜಿ ಪತ್ರಿಕೆ ಇರುತ್ತಿತ್ತು. ಅದನ್ನ ಒಂದು ಒಂದೂವರೆ ಗಂಟೆ ಅಷ್ಟರಲ್ಲಿ ಅಮ್ಮ ಓದಿ ಮುಗಿಸೋಳು. ನಂತರ ಮುಂದಿನ ಸಂಚಿಕೆ ಬರುವವರೆಗೆ ಈ ಸಂಚಿಕೆಯ ವಿಷಯವೇ ಅವಳ ಮಾತಿನ ಪ್ರೈಮ್ ಸಂಗತಿ. ಅದರ ನಂತರ ಅನಕೃ, ರಾಮಮೂರ್ತಿ. ಅಪರೂಪಕ್ಕೆ ನರಸಿಂಹಯ್ಯ. ಮೊದಲು ತಾಯಿನಾಡು ಪತ್ರಿಕೆ ಮನೆಗೆ ಬರ್ತಿತ್ತು. ನಂತರ ಅದು ಪ್ರಜಾವಾಣಿಗೆ ಶಿಫ್ಟ್ ಆಯಿತು. ಅದು ಯಾವ ಮಾಯದಲ್ಲಿಯೊ ಅಮ್ಮ ಮನೆ ಕೆಲಸ ಮುಗಿಸಿಬಿಡ್ತಾ ಇದ್ದಳು, ಮತ್ತು ಓದಿಗೆ ಸಮಯ ಮಾಡಿಕೊಳ್ತಾ ಇದ್ದಳು! ಅನಕೃ ಪ್ರಭಾವ ಹೇಗಿತ್ತು ಅಂದರೆ ಮನೆಗೆ ಬಂದವರಿಗೆ ತಿಂಡಿ ಮಾಡಿ ತಟ್ಟೆ ತುಂಬಾ ತುಂಬಿಸಿ ಕೊಡುವಳು. ಅಯ್ಯೋ ತಾಯಿ ಇಷ್ಟೊಂದು ಬೇಡ ಅಂತ ಅವರು ಅರ್ಧ ಸುರಿದು ಮಿಕ್ಕದ್ದು ತಗೋತಿದ್ದರು. ಪಾವಿನ ಲೋಟದ ತುಂಬಾ ಕಾಫಿ ಅಥವಾ ಟೀ ಯಾ ಹಾಲು… ಊಟ ಬಡಿಸೋದು ಸಹ ಅನಕೃ ಕಾದಂಬರಿಗಳಲ್ಲಿ ಬರೆದ ಹಾಗೆ! ಊಟದ ನಂತರ ತಟ್ಟೆ ತುಂಬುವ ಹಾಗೆ ಚಕ್ಕಲಿ ಕೋಡುಬಳೆ ತೆಂಗೊಳು… ಹೀಗೆ…. ಮನೆಗೆ ಬಂದ ಸೊಸೆಯರು ಈ ಉಪಚಾರ ಕಂಡು ಮೊದಮೊದಲು ಹೆದರೋರು. ಅಭ್ಯಾಸ ಆದಮೇಲೆ ಅವರೂ ಇದಕ್ಕೆ ಹೊಂದಿಕೊಂಡರು. ಎಷ್ಟೋಸಲ ಅಮ್ಮನ ಉಪಚಾರದ ವೈಖರಿ ನೋಡಿ ಅನಕೃ ಅದನ್ನೆಲ್ಲಾ ತಮ್ಮ ಕೃತಿಗಳಲ್ಲಿ ಬರೆದರೇನೋ ಅನಿಸೋದು.

ಅರವತ್ತು ಎಪ್ಪತ್ತರ ದಶಕದಲ್ಲಿ ಸರಗಳ್ಳತನ ಇನ್ನೂ ಬೆಂಗಳೂರಿಗೆ ಕಾಲಿಟ್ಟರಲಿಲ್ಲ. ಅಂತ ಒಂದು ದಿನ ಅಮ್ಮ ಬಿಟಿಎಸ್ ಬಸ್ಸು ಹತ್ತಿದಳು. ಕೂಡಲು ಜಾಗ ಇಲ್ಲದೇ ನಿಂತಳು. ಕಾಲ ಮೇಲೆ ಏನೋ ಬಿದ್ದ ಹಾಗನ್ನಿಸಿತು ಅಂತ ಕಾಲಿನ ಕಡೆ ನೋಡ್ತಾಳೆ. ಇವಳದ್ದೆ ಕಾಸಿನ ಸರ ತುಂಡಾಗಿ ಕಾಲಮೇಲೆ ಕಾಸು ಬಿದ್ದಿದೆ. ಕೂಡಲೇ ಸೆರಗು ಅಡ್ಡ ಹಿಡಿದಳು ಮತ್ತು ಆದಷ್ಟು ಕಾಸು, ಗುಂಡು ಅಲ್ಲೇ ಬೀಳಿಸಿಕೊಂಡಳು. ಇವಳ ಪಾಡು ನೋಡಿ ಯಾರೋ ಬಸ್ಸು ನಿಲ್ಲಿಸಿ ಅಂತ ಕೂಗಿದರು. ಬಸ್ಸು ನಿಲ್ತು. ಇಡೀ ಬಸ್ಸಿನ ಜನ ಸೀಟು ಕೆಳಗೆ ಬಗ್ಗಿ ಬಗ್ಗಿ ಹುಡುಕಿ ಇವಳ ಕಾಸು ಗುಂಡು ಆರಿಸಿ ಇವಳ ಕೈಗೆ ಕೊಟ್ಟರು. ಅಮ್ಮಾ ಎಲ್ಲಾ ಸರಿ ಇದೆಯಾ, ನೋಡಿಕೊಳ್ಳಿ ಅಂತ ಎರಡು ಮೂರು ಸಲ ವಿಚಾರಿಸಿದರು. ಅಮ್ಮ ಮನೆಗೆ ಬಂದವಳು ಬೆಂಗಳೂರಿನ ಜನ ಎಷ್ಟು ಒಳ್ಳೇರು ಅಂತ ಹೇಳಿದ್ದು ಹೇಳಿದ್ದೇ…! ಈಗ ಅದೇ ಅಮ್ಮ ಕಾಸಿನ ಸರ ಹಾಕೊಂಡು ರಸ್ತೇಲಿ ಒಂದು ರೌಂಡ್ ಹೋಗಿ ಬಂದಿದ್ದರೆ….. ಯಾವುದೋ ಕಳ್ಳ ಎಲ್ಲಾ ಬೋಳಿಸಿ, ಅಮ್ಮನನ್ನು ಎಲ್ಲೋ ನೂಕಿ ಕಳಿಸಿರೋನು ಅಂತ ಅನಿಸುತ್ತೆ.

ಅಮ್ಮನ ಹತ್ತಿರ ಕಾಸಿನ ಸರ ಹೇಗೆ ಬಂತು ಅಂದರೆ ಅದೇ ಒಂದು ಕತೆ. ತಿಂಗಳು ತಿಂಗಳೂ ಖರ್ಚಿನಲ್ಲಿ ಮಿಗಿಸಿ ಚಿನ್ನ ಕೊಳ್ಳೊಳು ಆರೇಳು ತಿಂಗಳಿಗೆ ಒಮ್ಮೆ. ಆಗ ಸವರನ್ ಚಿನ್ನಕ್ಕೆ ಇಪ್ಪತ್ತೋ ಮುವತ್ತೋ ಅಂತೆ. ಸೇರಿಸಿದ ಹಣ ಅದು ಒಳ್ಳೇ ಶೇಖರಣೆ ಆದಾಗ ಚಿನ್ನದ ಅಂಗಡಿಗೆ ಹೋಗಿ ಸರದ ಆರ್ಡರ್ ಮಾಡೋಳು. ಈ ರೀತಿ ಅವಳ ಉಳಿತಾಯದಲ್ಲೆ ಕಾಸಿನ ಸರ, ಅವಲಕ್ಕಿ ಸರ, ಕೈ ಬಳೆಗಳು…. ಹೀಗೆ ಏನೇನೋ ವಡವೆ ಇತ್ತು ಅಮ್ಮನ ಹತ್ತಿರ. ಡಾಬು ಒಂದು ಇರಲಿಲ್ಲ ಅಂತ ಕಾಣುತ್ತೆ, ಯಾಕೆ ಅಂದರೆ ಅಮ್ಮ ಡಾಬು ತೊಟ್ಟಿದ್ದು ನಾನು ನೋಡಿಲ್ಲ. ಮತ್ತೊಂದು ಹಣ ಕೂಡಿಸುವ ವಿಧಾನ ಅಂದರೆ ಚೀಟಿ ಹಾಕೋದು. ಪಾಪ ಇದರಲ್ಲಿ ಅಮ್ಮನಿಗೆ ಒಬ್ಬರು ತುಂಬಾ ನಂಬಿಕಸ್ತರು ಮೋಸಮಾಡಿ ಅಮ್ಮನ ಚೀಟಿ ಹುಚ್ಚು ಬಿಡಿಸಿದರು!

ಅಮ್ಮ ಅಷ್ಟು ಓದುತ್ತಾ ಇದ್ದದ್ದರಿಂದ ಏನೋ ನನಗೂ ಅದು ಬಳುವಳಿ ಆಯಿತು. ನನ್ನ ಮೊದಲ ಲೇಖನ ಮಾಸ್ತಿ ಸಂಭಾವನಾ ಗ್ರಂಥದಲ್ಲಿ ಪ್ರಕಟ ಆಯಿತು. ನಾನು ಕಾಲೇಜಿನ ಕೊನೆ ಬೆಂಚಲ್ಲಿ ಕೂತು ಬರೆದು ಪೋಸ್ಟ್ ಡಬ್ಬಕ್ಕೆ ಹಾಕಿ ಪೂರ್ತಿ ಮರೆತಿದ್ದೆ. ಒಂದು ಸಂಜೆ ಮನೆಗೆ ಬರ್ತೀನಿ, ಅಪ್ಪ ಅಮ್ಮ ಇಬ್ಬರೂ ಖುಷಿಯಿಂದ ದಪ್ಪನೆ ಪುಸ್ತಕ ಎದುರು ಹಿಡಿದರು. ಮಧ್ಯಾಹ್ನ ಪೋಸ್ಟ್‌ನಲ್ಲಿ ಬಂತು. ಅದೇನು ಚೆನ್ನಾಗಿ ಬರೆದಿದ್ದೀಯಲ್ಯೋ ಅಂತ ಇಬ್ಬರೂ ಖುಷಿ ಪಟ್ಟಿದ್ದೆ ಪಟ್ಟಿದ್ದು. ಒಂದೆರೆಡು ವಾರದಲ್ಲಿ (ಆಗಿನ್ನೂ ಪೋನ್ ಇರಲಿಲ್ಲ. ಸುದ್ದಿ ಅಂದರೆ ಪೋಸ್ಟ್ ಅಥವಾ ಮೋಖ್ತಾ ಭೇಟಿ ಅಷ್ಟೇ) ಇಡೀ ನಮ್ಮ ವಂಶಕ್ಕೆ ಗೋಪಿ ಬರೆದದ್ದು ಪ್ರಿಂಟ್ ಆಗಿದೆ, ದಪ್ಪ ಪುಸ್ತಕದಲ್ಲಿ ಅಂತ ಪ್ರಚಾರ ಆಗಿತ್ತು. ಆ ಪುಸ್ತಕ ಇನ್ನೂ ನನ್ನ ಬಳಿ ಇದೆ!
ಇನ್ನೂ ಇದೆ

(ಮುಂದುವರಿಯುವುದು….)