ಹೆರಿಗೆಗೆಂದು ಮನೆಗೆ ಬಂದಿದ್ದ ಮಗಳಿಗೆ ದಿನ ತುಂಬುವ ಮೊದಲೆ ನಡುರಾತ್ರಿ ಹೆರಿಗೆ ನೋವು ಪ್ರಾರಂಭವಾದಾಗ ಅಣ್ಣಪ್ಪನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಗ ನೆನಪಾಗಿದ್ದು ನಂಜೆಗೌಡರು. ಸೀದಾ ಓಡುವವನಂತೆ ನಡೆಯುತ್ತಾ ಹೋಗಿ ನಂಜೆಗೌಡರ ಬಂಗಲೆಮನೆಯ ಬಾಗಿಲು ತಟ್ಟಿದಾಗ ಗೌಡರು ತಮ್ಮ ಕಾರಿನಲ್ಲಿಯೇ ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ದಿಕ್ಕೆ ತೋಚದೆ ಕುಳಿತಿದ್ದ ಅಣ್ಣಪ್ಪನಿಗೆ ಬೆಂಬಲವಾಗಿ ನಿಂತು ಬೆಳಕು ಹರಿಯುವವರೆಗೂ ಜೊತೆಗಿದ್ದರು. ಎರಡು ದಿನದ ನಂತರ ನಂಜೆಗೌಡರು ತಮ್ಮ ಮಡದಿ ಸೀತಮ್ಮನವರ ಜೊತೆಗೆ ಆಸ್ಪತ್ರೆಗೆ ಬಂದು ತಾಯಿ-ಮಗುವಿನ ಕುಶಲ ವಿಚಾರಿಸಿ ತಾಯಿಯ ಕೈಗೆ ಒಂದಿಷ್ಟು ಹಣವನ್ನು ಕೊಟ್ಟು ಹೋಗಿದ್ದರು.
ನಂದೀಶ್ ಬಂಕೇನಹಳ್ಳಿ ಬರೆದ ಈ ವಾರದ ಕತೆ
ಪಡುಗೆರೆಯೆಂಬ ಮಲೆನಾಡಿನ ಮೂಡಣದಲ್ಲಿ ಆಗಷ್ಟೆ ನಿಧಾನಕ್ಕೆ ರಂಗು ಮೂಡುತ್ತಿತ್ತು. ಬೆಟ್ಟಸಾಲುಗಳು, ಕಾಫಿ, ಅಡಿಕೆ ತೋಟಗಳ ಅಂಚಿನ ಗದ್ದೆಯ ನಡುವೆ ಸಾಗಿದ್ದ ಕಾಲುದಾರಿಯಲ್ಲಿ ನಡೆದು ಹೋಗುತ್ತಿದ್ದ ಅಣ್ಣಪ್ಪ, ಅಕ್ಷಯ ಚೆಲುವಿನ ನಿಸರ್ಗ ಚಿತ್ರಣ ಸುತ್ತಮುತ್ತ ಚೆಲ್ಲಾಡಿದ್ದರೂ ಗಮನಿಸುವ ಮನಸ್ಥಿತಿಯಲ್ಲಿರಲಿಲ್ಲ. ನಿನ್ನೆ ರಾತ್ರಿ ಮಲಗುವಾಗಲೇ ‘ಬೆಳಿಗ್ಗೆ ಎದ್ದಿದ್ದು ನಂಜೆಗೌಡ್ರು ಮನಿಗೆ ಹೋಗ್ ಬರ್ಬೇಕು. ಎಷ್ಟ್ ಆದ್ರೂ ಹತ್ ಹದಿನೈದು ವರ್ಷ ಅವ್ರು ತೋಟದಲ್ಲಿ ದುಡ್ದಿದ್ದು ಅವ್ರಿಗ್ ಮರ್ತ್ ಹೋಗಿರಕ್ಲಾ’ ಎಂದು ಮನದಲ್ಲೆ ಅಂದುಕೊಂಡವನು ಬೆಳಿಗ್ಗೆ ಮುಂಚೆಯೇ ಮುಖ ತೊಳೆಯುವ ಶಾಸ್ತ್ರ ಮಾಡಿ ಬರಗಾಫಿ ಹೀರಿ ನಂಜೆಗೌಡರ ಮನೆಗೆ ಕಾಲುದಾರಿಯಲ್ಲಿ ಹೊರಟಿದ್ದ.
ನಿಧಾನಕ್ಕೆ ಬೆಳಗಾಗಿ ಬೆಳಕಾಗುತ್ತಿದ್ದಂತೆ ಹಸಿರ ಒಡಲಿನಿಂದ ಹಕ್ಕಿಗಳ ಕೂಗು ಕೇಳತೊಡಗುತ್ತಾ ಅಲ್ಲೊಂದು ಇಲ್ಲೊಂದು ಕಾಡುಕೋಳಿಗಳು ಪರಸ್ಪರ ಪೈಪೋಟಿ ನೀಡುವಂತೆ ಕೂಗತೊಡಗಿದ್ದವು. ಗದ್ದೆಸಾಲುಗಳು ಮುಗಿದು ತೋಟಕ್ಕೆ ದಾಟುವ ಬೇಲಿಗೇಟಿನ ಮೂಲಕ ಕಾಫಿತೋಟದ ನಡುವೆ ಸಾಗಿದ್ದ ಕಾಲುದಾರಿಯಲ್ಲಿ ಅಣ್ಣಪ್ಪ ಸಾಗುತ್ತಿದ್ದಂತೆ ಆಗಷ್ಟೆ ಬಿರಿದು ಕಂಪು ಬೀರುತ್ತಿದ್ದ ಕಾಫಿ ಹೂವಿನ ಕಂಪು ಮೈಮನದೊಳಗೆ ನವೋಲ್ಲಾಸ ಮೂಡಿಸುವಂತಿದ್ದರೂ, ಅವುಗಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ ಅಣ್ಣಪ್ಪನ ಮನಸ್ಸು.
ಬೆಳ್ಳಂಬೆಳಗೆ ಕಾಲುದಾರಿಯಲ್ಲಿ ಸಾಗುತ್ತಿದ್ದ ಅಣ್ಣಪ್ಪನಿಗೆ ಪ್ರಯಾಣದೊಡನೇ ಮೌನವೂ ಹೆಜ್ಜೆ ಹಾಕುತ್ತಿತ್ತು. ಆ ಮೌನ, ಯೋಚನೆಯ ಖಜಾನೆಯ ಕೀಲಿಕೈಯಂತಾಗಿ ಮೊಗೆದಷ್ಟು ಯೋಚನೆಗಳು ಅಣ್ಣಪ್ಪನ ಚಿತ್ತದೊಳಗೆ ನುಸುಳತೊಡಗಿದವು.
ಪಡುಗೆರೆಯ ನಂಜೆಗೌಡರು ಇದ್ದ ಮೂವರು ಅಣ್ಣತಮ್ಮಂದಿರ ನಡುವೆ ಆಸ್ತಿ ಪಾಲಾದ ನಂತರ ತಮ್ಮ ಪಾಲಿಗೆ ಬಂದ ಕಾಫಿ, ಅಡಿಕೆತೋಟ ಮತ್ತು ಗದ್ದೆಗಳನ್ನು ನೋಡಿಕೊಳ್ಳಲು ಒಕ್ಕಲೊಂದು ಬೇಕೆಂದು ಮೇಸ್ತ್ರಿ ಶೇಷಪ್ಪನಿಗೆ ಹೇಳಿದ ಮೇಲೆ ‘ಚಿಗಿರು ಕಸಿಯಿಂದ ಹಿಡ್ದು ಗದ್ದಿ ಕುಯ್ಲು ಮಾಡಾ ತನಕ ಎಲ್ಲಾ ಕೆಲ್ಸನ್ನೂ ಗೊತ್ತೀತೆ. ಇಂಥದ್ ಬರಕ್ಲಾ ಅನ್ನಂಗಿಲ್ಲ. ಕಾಫಿಗಿಡ್ಗಳನ್ನ ತಮ್ಮ ಮಕ್ಳುಮರಿ ನೋಡ್ದಂಗ್ ನೋಡ್ಕತ್ತವೆ’ ಎಂದು ಶೇಷಪ್ಪ, ಪಕ್ಕದ ಕೆಳ್ಳಳ್ಳಿಯ ಅಣ್ಣಪ್ಪನ ಕುಟುಂಬವನ್ನು ತೋಟದ ಲೈನುಮನೆಗೆ ತಂದು ಬಿಟ್ಟಿದ್ದ.
ಅಣ್ಣಪ್ಪ ತನ್ನ ತಂದೆಯಿಂದ ಕಲಿತ ತೋಟದ ಕೆಲಸದ ಕೌಶಲ್ಯದಿಂದ ಕೆಲವೆ ದಿನಗಳಲ್ಲಿ ಗೌಡರ ಮೆಚ್ಚುಗೆಗೆ ಪಾತ್ರನಾದ. ಎಷ್ಟರ ಮಟ್ಟಿಗೆಂದರೆ ತೋಟಕ್ಕೆ ಯಾವ ಸಮಯಕ್ಕೆ ಗೊಬ್ಬರ ಹಾಕಬೇಕು, ಕಸಿ ಮಾಡಬೇಕು. ಗದ್ದೆ ಕುಯ್ಲಿಗೆ ಯಾವ ತಳಿ ಹಾಕಿದರೆ ಸರಿ ಎನ್ನುವುದನ್ನು ನಂಜೆಗೌಡರೇ ಅಣ್ಣಪ್ಪನ ಬಳಿ ಕೇಳಿ ನಂತರ ಕೆಲಸ ಮಾಡಿಸುತ್ತಿದ್ದರು. ಅಣ್ಣಪ್ಪ ತೋಟದ ಕೆಲಸವನ್ನು ತನ್ನದೇ ಕೆಲಸವೆನ್ನುವಂತೆ ಕಾಳಜಿ ವಹಿಸಿ ಮಾಡುತ್ತಿದ್ದದ್ದೂ ಅಣ್ಣಪ್ಪ ಮತ್ತು ನಂಜೆಗೌಡರ ನಡುವೆ ವಿಶ್ವಾಸ ಬೆಳೆಯಲು ಮುಖ್ಯ ಕಾರಣವಾಗಿತ್ತು.
ಕೃಷಿ ಸಮಾವೇಶ, ಸಾವಯವ ವಿಚಾರ ಸಂಕಿರಣ ಎಂದು ವಾರಗಟ್ಟಲೆ ಹೊರಗೆ ಹೋಗುತ್ತಿದ್ದ ನಂಜಗೌಡರು ಅಣ್ಣಪ್ಪನಿಗೆ ತೋಟದ ಕೆಲಸದ ಉಸ್ತುವಾರಿಯನ್ನು ವಹಿಸಿ ಹೋಗುತ್ತಿದ್ದರು. ಅಣ್ಣಪ್ಪನ ಮೊದಲ ಮಗಳ ಮದುವೆಯನ್ನು ನಂಜೆಗೌಡರೆ ಮುಂದೆ ನಿಂತು ಮಾಡಿದ್ದರು. ಇಂತಿದ್ದ ಅಣ್ಣಪ್ಪ ಮತ್ತು ನಂಜೇಗೌಡರ ಆಳು ಮತ್ತು ಧಣಿಯ ಸಂಬಂಧ ಮುರಿದುಬೀಳಲು ಕೆಲವು ಘಟನೆಗಳು ಕಾರಣವಾದವು.
****************
ಮೇಸ್ತ್ರೀ ಶೇಷಪ್ಪ, ಮಲೆನಾಡಿನ ಕಾಫಿತೋಟಗಳಿಗೆ ಜನಗಳನ್ನು ಬಿಡುವ, ಕಾಫಿ ಕುಯ್ಲಿನ ಸಂದರ್ಭದಲ್ಲಿ ಬಯಲುಸೀಮೆಯಿಂದ ತೋಟದಾಳುಗಳನ್ನು ಕರೆ ತರುವ ಕೆಲಸ ಮಾಡುತ್ತಿದ್ದ. ಮುಂಚೆಯೆಲ್ಲಾ ಕಾಫಿ ಕುಯ್ಲು ಪ್ರಾರಂಭವಾಗುವ ಮುನ್ನ ಕಾಫಿ ತೋಟಗಳ ಮಾಲೀಕರ ‘ಬಂಗಲೆ’ಮನೆಗಳ ಮುಂದೆ ಕಾದು ನಿಂತು ಮುಂಗಡ ಪಡೆದು ತೋಟಕ್ಕೆ ಜನ ಬಿಡುತ್ತಿದ್ದ ಶೇಷಪ್ಪ, ಈಗ ಸ್ವಸಹಾಯ ಸಂಘಕ್ಕೆ ಸೇರಿ ಸಾಲ ಪಡೆದು ಸ್ವಂತ ಆಟೋ ಕೊಂಡಿದ್ದ. ಪ್ರತಿದಿನ ಅದೇ ಆಟೋದಲ್ಲಿ ತೋಟದಾಳುಗಳನ್ನು ತೋಟಕ್ಕೆ ಬಿಡುವ ಸಂಜೆ ಕರೆದ್ಯೊಯುವ ಕೆಲಸ ಮಾಡುತ್ತಿದ್ದ. ಇತ್ತೀಚ್ಚೆಗೆ ತೋಟದಾಳುಗಳು ಸಿಗುವುದೇ ಕಷ್ಟವಾದಾಗ ತೋಟದ ಮಾಲೀಕರೆಲ್ಲಾ ಶೇಷಪ್ಪನನ್ನು ಹುಡುಕಿಕೊಂಡು ಬರಲು ಪ್ರಾರಂಭಿಸಿದರು.
ಯಾವಾಗ ತೋಟದಾಳುಗಳಿಗೆ ಬೇಡಿಕೆ ಬರಲು ಪ್ರಾರಂಭವಾಯಿತೊ ಶೇಷಪ್ಪ ತಾನೂ ಈ ಮುಂಚೆ ತೋಟಗಳಿಗೆ ಬಿಟ್ಟಿದ್ದ ಆಳುಗಳನ್ನು ಹೆಚ್ಚಿನ ಸಂಬಳದ ಆಸೆ ತೋರಿಸಿ ಅಥವಾ ಇನ್ಯಾವುದೋ ಆಮಿಷ ಒಡ್ಡಿ ಹೆಚ್ಚು ಕಮಿಷನ್ ಕೊಡುವ ತೋಟಗಳಿಗೆ ಬಿಡುತ್ತಿದ್ದ. ಕೆಲ ಆಳುಗಳು ತಾವು ಹಲವು ವರ್ಷಗಳಿಂದ ಇದ್ದ ತೋಟವನ್ನು ಬಿಟ್ಟು ಬರಲು ಒಪ್ಪದೆ ಇದ್ದಾಗ ತನ್ನ ಮಾತಿನ ಜಾಣತನದಿಂದ ‘ನಿಮ್ ಒಳ್ಳೆದಕ್ಕೆ ನಾನ್ ಹೇಳೋದು, ಈ ತ್ವಾಟ್ದಲ್ಲಿ ಎಷ್ಟ್ ವರ್ಷ ದುಡ್ದ್ರೂ ಇದೇ ಕತೆ, ಎಷ್ಟ್ ವರ್ಷ ಅಂತ ಲೈನ್ ಮನೆಲ್ಲಿರ್ತೀರಿ. ಒಂದ್ ಬಾಡಿಗೆ ಮನೆ ಮಾಡ್ಕಂಡ್ ಇರಿ. ನಿಧಾನಕ್ಕೆ ಸ್ವಂತ ಮನೆ ಕಟ್ಟಿರಾಯ್ತು. ಪಂಚಾಯ್ತಿಲ್ಲಿ ಮನೆ ಮಾಡ್ಕೊಡೋ ಜಬಾದಾರಿ ನಂದು. ಒಂದ್ ಮನೆ ಅಂತಾದ್ ಮೇಲೆ ಒಂದೆ ತ್ವಾಟಕ್ಕೆ ಕೆಲ್ಸಕ್ ಹೋಗ್ ಬೇಕು ಅಂತೆನೂ ಇಲ್ಲ. ಯಾರ್ ತ್ವಾಟಕ್ ಬೇಕಾರ್ ಹೋಗ್ಬೋದು. ಒಳ್ಳೆ ಸಂಬಳಾನೂ ಸಿಕ್ತಿತ್ತೇ. ವಾರ ವಾರ ಕರೆಕ್ಟ್ ಬಟವಾಡಿ ಕೊಡ್ತಾರೆ’ ಎಂದೇಳಿ ಆ ತೋಟದಿಂದ ಬರುವಂತೆ ಮಾಡುತ್ತಿದ್ದ.
ಬೆಂಗಳೂರು ಮೂಲದ ಟೆಕ್ಕಿ ವಿಕಾಸ್, ಮಲೆನಾಡಿನ ರೆಸಾರ್ಟವೊಂದಕ್ಕೆ ಬಂದ ವೇಳೆ ಇಲ್ಲಿನ ನಿಸರ್ಗಸೌಂದರ್ಯಕ್ಕೆ ಮನಸೋತು, ಕಾಡಿಗೆ ಹೊಂದಿಕೊಂಡಂತಿರುವ ಕಾಫಿತೋಟವನ್ನು ಕೊಂಡು ತೋಟದ ನಡುವೆ ಮನೆಯೊಂದನ್ನು ಕಟ್ಟಿ ತಿಂಗಳಿಗೊಮ್ಮೆಯೊ, ಆರು ತಿಂಗಳಿಗೊಮ್ಮೆಯೊ ಬೆಂಗಳೂರಿನ ಗೆಳೆಯರೊಂದಿಗೆ ಬರುತ್ತಿದ್ದ. ತೋಟದ ಮನೆ ನೋಡಿಕೊಳ್ಳಲು ಕೆಲಸಗಾರ ಕುಟುಂಬವೊಂದು ಬೇಕೆಂದು ವಿಕಾಸ್, ಶೇಷಪ್ಪಣನಿಗೆ ಹೇಳಿದಾಗ ಮಲೆನಾಡಿನ ತೋಟದಾಳುಗಳಿಗೆ ನೀಡುವ ಕೂಲಿಯ ಅಂದಾಜಿಲ್ಲದ ಟೆಕ್ಕಿ ವಿಕಾಸ್ ಬಳಿ ಹೆಚ್ಚಿನ ಹಣ ವಸೂಲಿ ಮಾಡಬಹುದೆಂಬ ದುರಾಲೋಚನೆ ಬಂದ ಶೇಷಪ್ಪ ಸೀದಾ ನಡೆದಿದ್ದು ನಂಜೆಗೌಡರ ತೋಟದ ಲೈನುಮನೆಗೆ.
ಬೆಂಗಳೂರು ಮೂಲದ ಟೆಕ್ಕಿ ಕೊಂಡ ತೋಟದ ಮನೆ ನೋಡಿಕೊಳ್ಳಲು ಅಣ್ಣಪ್ಪಣ್ಣ ಕುಟುಂಬ ಸಮೇತನಾಗಿ ಬರಬೇಕೆಂದು ಶೇಷಪ್ಪ ಹೇಳಿದಾಗ ಅಣ್ಣಪ್ಪಣ ಆ ಆಹ್ವಾನವನ್ನು ಸಕಾರಣವಾಗಿಯೇ ನಿರಾಕರಿಸಿದ. ಯಾಕೆಂದರೆ ನಂಜೆಗೌಡ ಮತ್ತು ಅಣ್ಣಪ್ಪಣ್ಣನ ಧಣಿ ಮತ್ತು ಆಳಿನ ಸಂಬಂಧ ದುಡಿದು ಕೂಲಿ ತೆಗೆದುಕೊಳ್ಳುವ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೇ ವಿವರಣೆಗೆ ನಿಲುಕದ ಭಾವನಾತ್ಮಕ ಸಂಬಂಧವೊಂದು ಅವರ ನಡುವೆ ಬೆಳೆದಿತ್ತು. ಅದಲ್ಲದೇ ಇಷ್ಟು ವರ್ಷ ಕೆಲಸ ನೀಡಿದ ಧಣಿಗಳ ಬಳಿ ನಾನು ಬೇರೆಡೆಗೆ ಹೋಗುತ್ತೇನೆ ಎಂದು ಯಾವ ಬಾಯಿಯಿಂದ ಕೇಳುವುದು? ಒಂದು ವೇಳೆ ಹಾಗಂದರೆ ಅವರೆಷ್ಟು ನೊಂದುಕೊಳ್ಳಬಹುದು ಎಂದು ಅಣ್ಣಪ್ಪಣ ಶೇಷಪ್ಪಣನಿಗೆ ಬೇರೆ ಎಲ್ಲಿಯಾದರೂ ಜನ ನೋಡುವಂತೆ ಹೇಳಿ ಕಳಿಸಿದ್ದ.
ಆದರೆ ಮರುಮಾತನಾಡದೆ ಹಿಡಿದ ಕೆಲಸವನ್ನು ತನ್ನ ಮನೆಯ ಕೆಲಸ ಎನ್ನುವಂತೆ ಮಾಡುವ, ಅಣ್ಣಪ್ಪಣ್ಣನಂಥ ಆಳನ್ನು ಮತ್ತೆಮತ್ತೆ ನೆನಪಿಸಿಕೊಂಡರೂ ಬೇರ್ಯಾರ ಹೆಸರು ಹೊಳೆಯಲಿಲ್ಲ. ಹಾಗೆ ಕೆಲ ತೋಟದಾಳುಗಳಿದ್ದರೂ ಅವರನ್ನು ನಂಬಿ ಟೆಕ್ಕಿಯ ತೋಟದ ಮನೆಯ ಜವಾಬ್ದಾರಿ ವಹಿಸುವಂತೆಯೂ ಇರಲಿಲ್ಲ. ತೋಟದ ಕಾಫಿ, ಮೆಣಸು ಮಾರುವುದು, ಧಣಿಗಳ ಮನೆಯ ವಸ್ತುಗಳನ್ನು ಕದ್ದು ಮಾರುವುದು ಇವೇ ಕೆಲಸಗಳಲ್ಲಿ ಪ್ರವೀಣರಾಗಿದ್ದ ಅವರನ್ನು ತೋಟದಮನೆ ನೋಡಿಕೊಳ್ಳಲು ಬಿಡುವುದು ಸರಿ ಎನಿಸಲಿಲ್ಲ. ಶೇಷಪ್ಪ ತನ್ನ ಪ್ರಯತ್ನ ಬಿಡದೆ ಅಣ್ಣಪ್ಪಣನ ಹೆಂಡತಿ ಗೌರಿಯ ಮೂಲಕ ತನ್ನ ಪ್ರಯತ್ನ ಮುಂದುವರಿಸಿದ.
‘ನೋಡ್ ಗೌರಕ್ಕ. ಅಣ್ಣಪ್ಪಂಗೆ ಹೇಳಿರೇ ಅರ್ಥ ಆಗಾಕ್ಲ. ಗೌಡ್ರು ಅವ್ರ ತ್ವಾಟ, ಗದ್ದಿಗೆ ಜನ ಬೇಕು ಅಂತ ಅಣ್ಣಪ್ಪಣನ ವಿಶ್ವಾಸ್ದಲ್ಲಿ ಇಟ್ಕಂಡಾರೆ. ಎಷ್ಟ್ ದಿನ ಅಂತ ಈ ಲೈನ್ ಮನಿಲ್ ಇರ್ತಿರಿ. ಬೆಂಗಳೂರ್ ಕಡೆರೋ ಒಬ್ರು ತ್ವಾಟ ಮಾಡ್ಯಾರೆ. ಅಲೆನ್ ಅಂತ ದೊಡ್ ಕೆಲ್ಸ ಇಲ್ಲ. ನೀವ್ ಗಂಡ ಹೆಂಡ್ತಿ ಇಬ್ರುವೆ ತ್ವಾಟಾ ಮನಿಕಡಿಗ್ ನೋಡ್ಕಂಡ್ ಗಿಡ್ಗಳಿಗೆ ಕಸಿ ಚಿಗ್ರು ತೆಗ್ದಕಂಡ್ ಇದ್ರೆ ಸಾಕ್. ಒಳ್ಳೆ ಸಂಬ್ಳನೇ ಕೊಡ್ತಾರೆ. ತ್ವಾಟದ್ ಮನೀಲೆ ಇರ್ಬೋದು. ಕರೆಂಟ್ ನೀರು ಎಲ್ಲ ಇದೆ. ಈ ತರ ಮತ್ತೇಲ್ ಸಿಕ್ತದೇ ನೀನೇ ಹೇಳು?’ ಎಂದು ಶೇಷಪ್ಪ ಹೇಳಿದಾಗ ಗೌರಿಗೆ ಶೇಷಪ್ಪ ಹೇಳುವುದರಲ್ಲಿಯೂ ಸತ್ಯವಿದೆ ಎನಿಸಿತ್ತು.
ಈ ಮುಂಚೆ ಲೈನುಮನೆಯಲ್ಲೇ ಇದ್ದ ಸದಾನಂದನ ಕುಟುಂಬ ಅದೇ ಊರಿನ ಕಂಪನಿ ಕಾಫಿ ಎಸ್ಟೇಟಿಗೆ ಸೇರಿ ಸ್ವಂತ ಮನೆಯನ್ನು ಕಟ್ಟಿ ಮಗನಿಗೆ ಬೈಕ್ ತೆಗೆದುಕೊಟ್ಟು ಚಂದವಾಗಿ ಬದುಕು ಕಟ್ಟಿಕೊಂಡಿರುವಾಗ, ನಂಜೇಗೌಡರ ತೋಟದಲ್ಲಿ ಅಣ್ಣಪ್ಪಣನ ಜೊತೆಗೆ ಕೆಲಸ ಮಾಡುತ್ತಿದ್ದ ರಾಜೇಶ, ಮರಗಸಿ ಕೆಲಸ ಮಾಡುತ್ತಲ್ಲೆ ಸಣ್ಣದಾಗಿ ಟಿಂಬರ್ ಬಿಸಿನೆಸ್ ಶುರುಮಾಡಿ ಸ್ವಂತ ಲಾರಿ ಕೊಂಡು ನಂಜೇಗೌಡರ ತೋಟದಲ್ಲಿಯೇ ಮರ ವಹಿಸಿಕೊಂಡು ಮರದ ದಿಮ್ಮಿಗಳನ್ನು ತನ್ನ ಲಾರಿಯಲ್ಲಿಯೆ ತುಂಬಿಸಿಕೊಂಡು ಹೋಗುವ ಮಟ್ಟಕ್ಕೆ ಬೆಳೆದಿರುವಾಗ ನಾವ್ಯಾಕೆ ಹೀಗೆ ಇರಬೇಕು ಎಂದು ಈ ಮುಂಚೆಯೇ ಗೌರಿಗೆ ಅನಿಸಿರದೇ ಇರಲಿಲ್ಲ. ಆದರೆ ಗಂಡ ಅಣ್ಣಪ್ಪಣ್ಣನ ಮನಸ್ಸು ಗೊತ್ತಿದ್ದರಿಂದ ಆ ವಿಚಾರವನ್ನು ಪ್ರಸ್ತಾಪಿಸಲು ಹೋಗಿರಲಿಲ್ಲ.
ಆದರೆ ಯಾವಾಗ ಶೇಷಪ್ಪ ತನ್ನ ಮನದಲ್ಲಿದ ಮಾತಿಗೆ ಪುಷ್ಟಿ ನೀಡುವಂತೆ ಮಾತನಾಡಿದನೋ ಗೌರಿಗೆ ಇನ್ನೂ ಸುಮ್ಮನಿದ್ದು ಪ್ರಯೋಜನವಿಲ್ಲ ಎನಿಸಿ ಗಂಡ ಅಣ್ಣಪ್ಪಣ್ಣ ಸಂಜೆ ಬಂದೊಡನೇ ನಂಜೆಗೌಡರ ತೋಟ ಬಿಡುವ ವಿಚಾರ ತಿಳಿಸಿದಾಗ ಅಣ್ಣಪ್ಪಣ್ಣನೂ ಸುತಾರಂ ಆಗುವುದೇ ಇಲ್ಲ ಎಂದೆ ಹೇಳಿದ್ದ. ಆದರೆ ಮುಂಚಿನಿಂದಲೂ ಮಿತಭಾಷಿಯಾಗಿದ್ದ ಅಣ್ಣಪ್ಪಣ್ಣ ಗೌರಿಯ ಹಠಕ್ಕೆ ಸೋಲಲೇಬೇಕಾಗಿತ್ತು. ಮರುದಿನ ನಂಜೆಗೌಡರಿಗೆ ವಿಷಯ ತಿಳಿಸುವುದು ಹೇಗೆಂದು ಅಣ್ಣಪ್ಪಣ್ಣ ನಂಜೆಗೌಡರ ಬಂಗಲೆ ಕಡೆಗೆ ಹೋಗದೆ ಇದ್ದಾಗ ಗೌರಿಯೆ ನಂಜೆಗೌಡರ ಬಳಿ ತೋಟ ಬಿಡುವ ವಿಷಯ ಹೇಳಿದ್ದಳು. ಈ ವಿಷಯ ಕೇಳಿ ಒಂದು ಕ್ಷಣ ಮೌನವಾದ ನಂಜೆಗೌಡರು ‘ಅಣ್ಣಪ್ಪ್ ಎಲ್ ಹೋದ. ಅವ್ನೆ ಬರಕ್ಕೇಳು. ಮಾತಡಾಣ’ ಎಂದಾಗ, ‘ಅವ್ರೆ ನನ್ನ ಕಳ್ಸಿದ್ದು’ ಎಂದ ಗೌರಿಯ ಮಾತಿಗೆ ಗೌಡರು ಮರು ಮಾತನಾಡದೇ ಕೆಲಸದ ಲೆಕ್ಕ ಮಾಡಿ ಉಳಿದ ಹಣವನ್ನು ಗೌರಿಯ ಕೈಗಿಟ್ಟು ಕಳಿಸಿದ್ದರು.
ಮೇಸ್ತ್ರಿ ಶೇಷಪ್ಪಣ್ಣ, ಅಣ್ಣಪ್ಪಣ್ಣನ ಕುಟುಂಬವನ್ನು ಟೆಕ್ಕಿ ವಿಕಾಸ್ ನ ತೋಟದಲ್ಲಿ ಬಿಟ್ಟು ಹೋದ ಮೇಲೆ ತೋಟದಮನೆಯ ಹೊಸ ಪರಿಸರದಲ್ಲಿ ಅಣ್ಣಪ್ಪಣ್ಣ ಮತ್ತು ಗೌರಿ ಖುಷಿಯಿಂದಲೇ ಕೆಲಸ ಪ್ರಾರಂಭಿಸಿದ್ದರು. ಗೌರಿ ತೋಟದ ಮನೆಯ ಕೆಲಸಗಳನ್ನು ಮಾಡಿದರೆ ಅಣ್ಣಪ್ಪಣ್ಣ ಮನೆ ಸುತ್ತಲಿನ ಕೆಲಸಗಳನ್ನು ಮಾಡುತ್ತಿದ್ದ. ವಾರಕ್ಕೆ, ತಿಂಗಳಿಗೊಮ್ಮೆ ಬರುತ್ತಿದ್ದ ವಿಕಾಸ್ ಬರುವಾಗ ಒಂದಷ್ಟು ಗೆಳೆಯರನ್ನು ಕರೆದುಕೊಂಡು ಬರುತ್ತಿದ್ದ. ಬಂದವರಿಗೆ ತುಂಡಿನ ಅಡಿಗೆ ಮಾಡಿ ಬಡಿಸುವ ಕೆಲಸ ಗೌರಿಯದಾದರೆ, ಅವರಿಗೆ ಬೇಕಾದ ಮದ್ಯ ಮುಂತಾದ ವಸ್ತುಗಳನ್ನು ಅಣ್ಣಪ್ಪಣ್ಣ ಸರಬರಾಜು ಮಾಡಬೇಕಾಗಿತ್ತು.
ವರ್ಷ ಕಳೆಯುವವರೆಗೂ ವಾರಕ್ಕೆ, ತಿಂಗಳಿಗೊಮ್ಮೆ ಬರುತ್ತಿದ್ದ ವಿಕಾಸ್ ಅನಂತರದಲ್ಲಿ ತೋಟದ ಮನೆ ಕಡೆಗೆ ಬರುವುದನ್ನೆ ನಿಲ್ಲಿಸಿದ್ದ. ಮುಂಚೆ ತೋಟಕ್ಕೆ ಬಂದಾಗಲ್ಲೆಲ್ಲಾ ಅಷ್ಟಿಷ್ಟು ಹಣ ಕೊಟ್ಟು ಹೋಗುತ್ತಿದ್ದ ವಿಕಾಸ್ ಕೊನೆಯ ಬಾರಿ ಬಂದಾಗ ಎಟಿಎಂ ಕಾರ್ಡ್ವೊಂದನ್ನು ಕೊಟ್ಟು ತಿಂಗಳು ತಿಂಗಳು ಅಕೌಂಟಿಗೆ ಹಣ ಹಾಕುವುದಾಗಿಯೂ ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳುವಂತೆ ಹೇಳಿ ಹೋಗಿದ್ದ.
ತನ್ನ ತಂದೆಯ ಕಾಲದಿಂದಲೂ ಕಾಫಿ ತೋಟದ ಲೈನಿನಲ್ಲಿ ಬೆಳೆದ ಅಣ್ಣಪ್ಪನಿಗೆ ಕಾಫಿತೋಟದ ಕೆಲಸವೆಂದರೆ ಅದೊಂದು ತರದ ಧ್ಯಾನ. ಕಾಲಕಾಲಕ್ಕೆ ಯಾವ ಯಾವ ಕೆಲಸಗಳನ್ನು ಮಾಡಬೇಕು, ನೆರಳು ಹೆಚ್ಚಿದರೆ ಎಲ್ಲಿ ಮರಗಸಿ ಮಾಡಬೇಕು, ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು, ಚಿಗುರು, ಕಸಿ, ಅಗತೆ ಮುಂತಾದ ಕೆಲಸಗಳ ಜ್ಞಾನ ಅವನ ತಂದೆಯ ಕಡೆಯಿಂದ ಬಂದ ಬಳುವಳಿ. ಬೆಳಿಗ್ಗೆಯಿಂದ ಕಷ್ಟ ಪಟ್ಟು ತೋಟದಲ್ಲಿ ದುಡಿದು ಸಂಜೆ ಉಂಡು ಮಲಗಿದರೆ ಸಾವಿನಂಥ ನಿದ್ದೆ. ಶ್ರಮದ ಹಿಂದಿನ ನೆಮ್ಮದಿ ಮತ್ತು ಸುಖ ಅಣ್ಣಪ್ಪನಿಗೆ ಅಭ್ಯಾಸವಾಗಿ ಹೋಗಿತ್ತು. ಮುಂಚಿನಿಂದಲೂ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತಿರಲಿಲ್ಲ. ಏನಾದರೂ ವಿಶೇಷ ಕಾರ್ಯಗಳಿದರೆ ಮಾತ್ರ ತೋಟದ ಕೆಲಸಕ್ಕೆ ರಜೆ ಹಾಕುತ್ತಿದ್ದ ಅಣ್ಣಪ್ಪಣ.
ನಂಜೆಗೌಡ ಮತ್ತು ಅಣ್ಣಪ್ಪಣ್ಣನ ಧಣಿ ಮತ್ತು ಆಳಿನ ಸಂಬಂಧ ದುಡಿದು ಕೂಲಿ ತೆಗೆದುಕೊಳ್ಳುವ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೇ ವಿವರಣೆಗೆ ನಿಲುಕದ ಭಾವನಾತ್ಮಕ ಸಂಬಂಧವೊಂದು ಅವರ ನಡುವೆ ಬೆಳೆದಿತ್ತು. ಅದಲ್ಲದೇ ಇಷ್ಟು ವರ್ಷ ಕೆಲಸ ನೀಡಿದ ಧಣಿಗಳ ಬಳಿ ನಾನು ಬೇರೆಡೆಗೆ ಹೋಗುತ್ತೇನೆ ಎಂದು ಯಾವ ಬಾಯಿಯಿಂದ ಕೇಳುವುದು?
ಆದರೆ ವಿಕಾಸ್ ನ ತೋಟದ ಮನೆಗೆ ಬಂದ ನಂತರ ಮುಂಚಿನ ತರದ ಶ್ರಮದ ಕೆಲಸ ಇರುತ್ತಿರಲಿಲ್ಲ. ಕಾಫಿಗಿಡಗಳನು ಮಕ್ಕಳಂತೆ ಬೆಳೆಸಿ ಬಿಸಿಲಾದರೆ ನೆರಳು ಮಾಡಿ ಮಳೆ ಕಡಿಮೆಯಾದರೆ ನೀರು ಹಾಯಿಸಿ ಕೆಲಸಗಾರರರ ಸಂಬಳ, ಗೊಬ್ಬರ, ಕೀಟನಾಶಕ ಮುಂತಾದವುಗಳಿಗೆ ಖರ್ಚು ಮಾಡಿ ಕಾಫಿ ಬೆಳೆ ತೆಗೆಯಬೇಕೆಂಬ ಅನಿವಾರ್ಯತೆ ಇಲ್ಲದ ವಿಕಾಸ್ ನಿಗೆ ಕಾಫಿ ತೋಟದ ಗಿಡಗಳಿಗೂ ಮನೆ ಮುಂದಿನ ಅಲಂಕಾರಿಕ ಗಿಡಗಳಿಗೂ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಅಪರೂಪಕ್ಕೆ ಒಮ್ಮೆ ಮೋಜುಮಸ್ತಿ ಮಾಡಲು ತೋಟದ ಮನೆಗೆ ಬರುವ ವಿಕಾಸ್ ಗೆ ಕಾಫಿ ಸಂಸ್ಕೃತಿಯ ಗಂಧಗಾಳಿಯ ಅರಿವು ಇರಲಿಲ್ಲ. ಅದರ ಅಗತ್ಯವೂ ಅವನಿಗೆ ಬೇಕಿರಲಿಲ್ಲ.
ಮೊದಮೊದಲು ಎಲ್ಲವೂ ಚಂದವಾಗೆ ಕಂಡ ಬದುಕು ಬರಬರುತ್ತಾ ಖಾಲಿ ಖಾಲಿ ಎನಿಸತೊಡಗಿತ್ತು ಅಣ್ಣಪ್ಪಣ್ಣನಿಗೆ. ಅಣ್ಣಪ್ಪಣ್ಣನಿಗೆ ಪ್ರತಿತಿಂಗಳು ಎಟಿಎಂನಿಂದ ಹಣ ಸಿಗುತ್ತಿತ್ತಾದರೂ ಹೆಚ್ಚಿನ ಹಣವನ್ನು ಕೇಳುವಂತಿರಲಿಲ್ಲ. ಹಬ್ಬ ಸುಗ್ಗಿ ಎಂದಾಗ ಬಟ್ಟೆಗೆ, ಮಕ್ಕಳಿಗೆ ಎಂದು ಹೆಚ್ಚಿನ ಹಣ ಬೇಕಾದಾಗ ಅವರಿವರ ಬಳಿ ಸಾಲ ಪಡೆದುಕೊಳ್ಳುವಂತಾಯಿತು. ಮುಂಚೆ ನಂಜೆಗೌಡರ ತೋಟದಲ್ಲಿರುವಾಗ ಹೆಚ್ಚಿನ ಹಣ ಬೇಕೆಂದಾಗ ಸಿಗುತ್ತಿತ್ತು. ಆದರೆ ಈ ಎಟಿಎಂ ಯಂತ್ರದ ಮುಂದೆ ಸುಮ್ಮನೆ ಕಾರ್ಡ್ ಹಾಕಿ ಬಂದಷ್ಟು ಹಣ ತೆಗೆದುಕೊಂಡು ಬರಬೇಕಾಗಿತ್ತು.
ಹೀಗೆ ಕೆಲವರ್ಷಗಳು ಕಳೆದವು. ಕಾಫಿ ಕುಯ್ಲಿನ ಸಂದರ್ಭದಲ್ಲಿ ಬಯಲುಸೀಮೆಯಿಂದ ಬರುವ ಹದಿನಾರು ಕೆಲಸದವರಂತೆ ಮಲೆನಾಡಿನ ಕಂಪನಿ ಕಾಫಿ ಎಸ್ಟೇಟ್ ವೊಂದಕ್ಕೆ ಅಸ್ಸಾಂ ಕಡೆಯ ಒಂದೆರಡು ಕುಟುಂಬಗಳು ಬಂದವು. ಅವರಿಗೆ ಅಲ್ಲಿ ಕೆಲಸವಿಲ್ಲದೆ ಇಲ್ಲಿಗೆ ಬಂದರೋ ಅಥವಾ ಇಲ್ಲಿನ ಕಂಪನಿ ಎಸ್ಟೇಟ್ ನವರು ತೋಟದಾಳುಗಳ ಕೊರತೆಯಿಂದ ಅಲ್ಲಿಂದ ಅವರನ್ನು ಕರೆತಂದರೋ ಒಟ್ಟಿನಲ್ಲಿ ಬಂದ ಒಂದೆರಡು ಅಸ್ಸಾಂ ಕುಟುಂಬಗಳು ವರ್ಷಕೊಮ್ಮೆ ಅಸ್ಸಾಂಗೆ ಹೋಗಿ ಹಿಂದಿರುಗುವಾಗ ಮತ್ತಷ್ಟು ಅಸ್ಸಾಂ ಕುಟುಂಬಗಳನ್ನು ಕರೆತಂದರು. ಕೆಲ ವರ್ಷಗಳಲ್ಲಿ ಸುತ್ತಮುತ್ತಲ್ಲಾ ಎಸ್ಟೇಟ್ ಗಳಲ್ಲಿ ಅಸ್ಸಾಂ ಕಾರ್ಮಿಕರೇ ಹೆಚ್ಚಾಗಿ ಕಾಣಿಸತೊಡಗಿದ್ದರು. ಅಸ್ಸಾಂ ತೋಟದಾಳುಗಳ ಭಾಷೆಯ ಸಮಸ್ಯೆಯಿಂದಾಗಿ ಎಸ್ಟೇಟ್ ಗಳಲ್ಲಿನ ಮಲೆನಾಡಿನ ಮೇಸ್ತ್ರಿಗಳು ಸರಿಯಾಗಿ ಕೆಲಸ ಮಾಡಿಸಲಾಗದೇ ಅತ್ತ ಹಿಂದಿಯೂ ಅಲ್ಲದ ಇತ್ತ ಕನ್ನಡವೂ ಅಲ್ಲದ ಒಂದು ತರದ ಭಾಷೆಯಲ್ಲಿ ಮಾತನಾಡಿ ಕೆಲಸ ಮಾಡಿಸಲು ಪರದಾಡುವಂತಾಯಿತು.
ಕೊನೆಕೊನೆಗೆ ಅಸ್ಸಾಂ ಕೆಲಸಗಾರರಲ್ಲೆ ಮಲೆನಾಡಿಗೆ ಬಂದ ಹಳಬರಾದ ಅಲ್ಪಸ್ವಲ್ಪ ಕನ್ನಡ ಮಾತನಾಡಲು ಬರುವ ಕೆಲ ಅಸ್ಸಾಂ ಕೆಲಸಗಾರರನ್ನೆ ಮೇಸ್ತ್ರಿಗಳಾಗಿ ಕೆಲ ಎಸ್ಟೇಟ್ ಗಳಲ್ಲಿ ನೇಮಿಸಲಾಯಿತು. ಪ್ರಾರಂಭದಲ್ಲಿ ಪಟ್ಟಿಗೆ ಸೇರಿದ ಎಸ್ಟೇಟ್ ನಲ್ಲಿ ಮೇಸ್ತ್ರಿಗಳಾಗಿ ದುಡಿಯುತ್ತಿದ್ದ ಅಸ್ಸಾಂ ಮೇಸ್ತ್ರಿಗಳು ಅಕ್ಕಪಕ್ಕದ ತೋಟಗಳಿಗೂ ತಾವೆ ಕೆಲಸದಾಳುಗಳನ್ನು ಅಸ್ಸಾಂನಿಂದ ತಂದು ಬಿಡಲು ಪ್ರಾರಂಭಿಸಿದರು. ಇದರಿಂದ ದಕ್ಷಿಣಕನ್ನಡದಿಂದ, ಬಯಲುಸೀಮೆಯ ಕಡೆಯಿಂದ ಬಂದು ಮಲೆನಾಡಿನ ಕಾಫಿತೋಟಗಳಿಗೆ ತೋಟದಾಳುಗಳನ್ನು ಬಿಡುತ್ತಿದ್ದ ಶೇಷಪ್ಪನಂತಹ ಮೇಸ್ತ್ರಿಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಕಡಿಮೆಯಾಗತೊಡಗಿತ್ತು.
ಪ್ರಾರಂಭದಲ್ಲಿ ಟೆಕ್ಕಿ ವಿಕಾಸ್ ಎಟಿಎಂಗೆ ಸರಿಯಾಗಿ ತಿಂಗಳು ತಿಂಗಳು ಹಣ ಹಾಕುತ್ತಿದ್ದವನು, ನಂತರ 3 ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಹಣ ಹಾಕತೊಡಗಿದಾಗ ಅಣ್ಣಪ್ಪನಿಗೆ ಕಷ್ಟವಾಗತೊಡಗಿತ್ತು. ಹೆಂಡತಿಯ ಮಾತಿನಿಂದಾಗಿ ಪ್ರತಿವಾರ ಹಣ ಕಟ್ಟಿ ಒಡವೆ ಪಡೆಯುವ ನಾಲ್ಕೈದು ಸ್ಕೀಮಿಗೆ ಸೇರಿದ್ದರಿಂದ ಅಣ್ಣಪ್ಪನಿಗೆ ಖರ್ಚು ಕೂಡ ಹೆಚ್ಚಾಗಿತ್ತು. ವರ್ಷದ ಹಿಂದೆ ಮದುವೆಯಾಗಿದ್ದ ಮಗಳು ಹೆರಿಗೆಗೆಂದು ಮನೆಗೆ ಬಂದರೂ ಮದುವೆಗೆ ಸ್ವಸಹಾಯ ಸಂಘದಲ್ಲಿ ಮಾಡಿದ್ದ ಸಾಲ ಇನ್ನೂ ತೀರಿರಲಿಲ್ಲ. ಅದರ ಕಂತನ್ನು ವಾರ ವಾರ ಕಟ್ಟಲೇಬೇಕಾದ್ದರಿಂದ ಅಣ್ಣಪ್ಪನ ಆರ್ಥಿಕ ಪರಿಸ್ಥಿತಿ ವಿಕಾಸ್ ನ ಬ್ಯಾಂಕಿಗೆ ಹಾಕುವ ಹಣವನ್ನೆ ನೆಚ್ಚಿಕೊಂಡಿತ್ತು.
ಹೀಗಿರುವಾಗಲೇ ಹೆರಿಗೆಗೆಂದು ಮನೆಗೆ ಬಂದಿದ್ದ ಮಗಳಿಗೆ ದಿನ ತುಂಬುವ ಮೊದಲೆ ನಡುರಾತ್ರಿ ಹೆರಿಗೆ ನೋವು ಪ್ರಾರಂಭವಾದಾಗ ಅಣ್ಣಪ್ಪನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಗ ನೆನಪಾಗಿದ್ದು ನಂಜೆಗೌಡರು. ಸೀದಾ ಓಡುವವನಂತೆ ನಡೆಯುತ್ತಾ ಹೋಗಿ ನಂಜೆಗೌಡರ ಬಂಗಲೆಮನೆಯ ಬಾಗಿಲು ತಟ್ಟಿದಾಗ ಗೌಡರು ತಮ್ಮ ಕಾರಿನಲ್ಲಿಯೇ ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ದಿಕ್ಕೆ ತೋಚದೆ ಕುಳಿತಿದ್ದ ಅಣ್ಣಪ್ಪನಿಗೆ ಬೆಂಬಲವಾಗಿ ನಿಂತು ಬೆಳಕು ಹರಿಯುವವರೆಗೂ ಜೊತೆಗಿದ್ದರು. ಎರಡು ದಿನದ ನಂತರ ನಂಜೆಗೌಡರು ತಮ್ಮ ಮಡದಿ ಸೀತಮ್ಮನವರ ಜೊತೆಗೆ ಆಸ್ಪತ್ರೆಗೆ ಬಂದು ತಾಯಿ-ಮಗುವಿನ ಕುಶಲ ವಿಚಾರಿಸಿ ತಾಯಿಯ ಕೈಗೆ ಒಂದಿಷ್ಟು ಹಣವನ್ನು ಕೊಟ್ಟು ಹೋಗಿದ್ದರು.
ಅದಾದ ನಂತರದಲ್ಲಿ ಅಣ್ಣಪ್ಪನಿಗೆ ಏನೆನಸಿತೋ ಏನೋ ಒಂದು ರಾತ್ರಿ ಮಲಗಿರುವಾಗ ‘ಬೆಳಿಗ್ಗೆ ಎದ್ದಿದ್ದು ನಂಜೆಗೌಡ್ರು ಮನಿಗೆ ಹೋಗ್ ಬರ್ಬೇಕು. ಎಷ್ಟ್ ಆದ್ರೂ ಹತ್ ಹದಿನೈದು ವರ್ಷ ಅವ್ರು ತೋಟದಲ್ಲಿ ದುಡ್ದಿದ್ದು ಅವ್ರಿಗ್ ಮರ್ತ್ ಹೋಗಿರಕ್ಲಾ’ ಎಂದು ಮನದಲ್ಲೆ ಅಂದುಕೊಡವನು ಬೆಳಿಗ್ಗೆ ಮುಂಚೆಯೆ ಮುಖತೊಳೆಯುವ ಶಾಸ್ತ್ರ ಮಾಡಿ ಬರಗಾಫಿ ಹೀರಿ ನಂಜೆಗೌಡರ ಮನೆಗೆ ಕಾಲುದಾರಿಯಲ್ಲಿ ಹೊರಟ್ಟಿದ.
****************
ಮೂಡಣದ ಸೂರ್ಯ ಸ್ವಲ್ಪ ಮೇಲೆರಿದ್ದ. ಸುತ್ತತೋಟ, ಅದರಾಚೆಗೆ ಅಕ್ಷಯ ಕಾನನ ಹರಡಿದ್ದ ಪಡುಗೆರೆಯ ತುಂಬ ದಿವ್ಯಮೌನವೊಂದು ಆವರಿಸಿಕೊಂಡಿತ್ತು. ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ನಂಜೆಗೌಡರ ಬಂಗಲೆಮನೆಯ ಹಂಚಿನ ನಡುವಿನ ಹೊಗೆಕೊಳವೆಯಿಂದ ಹೊಗೆ ಬಳುಕುತ್ತಾ ಆಗಸವನ್ನು ಮುಟ್ಟಿ ಮೋಡವಾಗುತ್ತಿತ್ತು.
ಬಂಗಲೆ ಮನೆಯ ಅಂಗಳದ ಮೂಲೆಯಲ್ಲಿದ್ದ ತೆಂಗಿನಮರ ಸೋಗೆಗರಿಯೊಂದು ದಡಾಲ್ ಎಂದು ಹೆಂಚಿನ ಮೇಲೆ ಬೀಳಲು ಒಂದೆರಡು ಹೆಂಚು ಒಡೆದು ಸೋಗೆಯೊಂದಿಗೆ ನೆಲಕ್ಕೆ ಬಿತ್ತು. ಮೌನವೇ ಸಾಮ್ರಾಜ್ಯ ಸ್ಥಾಪಿಸಿದಂತಿದ್ದ ಆ ಪರಿಸರದಲ್ಲಿ ಮೌನದ ಕೊಳಕ್ಕೆ ಶಬ್ದಕೋಲಾಹಲದ ಕಲ್ಲೆಸೆದಂತಾಗಿ ಗೊಬ್ಬರಗುಂಡಿಯಲ್ಲಿ ಕೆದರುವ ಕಾರ್ಯದಲ್ಲಿ ನಿರತವಾಗಿದ್ದ ಹೆಂಟೆಕೋಳಿಯೊಂದು ಜೋರಾಗಿ ಕೂಗಿತ್ತು. ಅದರ ಕೂಗು ಕೇಳಲು ಕಾಫಿತೋಟದೊಳಗೆ ಅಲ್ಲಲ್ಲಿ ದರಗು ಕೆದರುತ್ತಿದ್ದ ಮರಿ, ಹಿರಿ, ಹೆಂಟೆ, ಹುಂಜ, ಹೂಮರಿಗಳು ಕೂಗತೊಡಗಿತ್ತು. ಕೋಳಿಗಳ ಗದ್ದಲದಿಂದ ನಂಜೆಗೌಡ ಮನೆಯ ಸೌದೆಕೊಟ್ಟಿಗೆಯಲ್ಲಿ ಬೆಚ್ಚಗೆ ಮಲಗಿದ್ದ ಒಂದೆರಡು ನಾಯಿಗಳು ಹೊರಬಂದು ನೆಲಮುಗಿಲು ಒಂದಾಗುವಂತೆ ಬೊಗಳತೊಡಗಿದ್ದವು. ಕೋಳಿ, ನಾಯಿಗಳ ಶಬ್ದಕೋಲಾಹಲದಿಂದ ಇಡಿ ಪರಿಸರ ಶಬ್ದಮಯವಾಗಿ ಹೋಯಿತು.
ಹೊಗೆ ತುಂಬಿದ್ದ ನಸುಗತ್ತಲೆಯ ಅಡಿಗೆ ಕೋಣೆಯಲ್ಲಿ ರೊಟ್ಟಿ ಮಾಡುತ್ತಿದ್ದ ಸೀತಮ್ಮನವರು ರೊಟ್ಟಿಯೊಂದನ್ನು ಬಾಣಲಿಯ ಮೇಲೆ ಹಾಕಿ ಅಂಗಳಕ್ಕೆ ಬಂದವರೆ ‘ಇದರ್ ಹಿಂಡ್ ಉದ್ರಾ, ಏನ್ ಸಾಯ್ತಾವ್ ಹಂಗೇ, ಹಚ್ಚಾ ಹಚ್ಚಾ’ ಎಂದು ಅಂಗಳದಲ್ಲಿ ಅರಚುತ್ತಿದ್ದ ನಾಯಿಗಳನ್ನು ಅಟ್ಟಲು ತೋಟದೊಳಗೆ ನುಗಿದ್ದ ನಾಯಿಗಳ ಅನಿರೀಕ್ಷಿತ ಆಗಮನದಿಂದ ಕಾಫಿಗಿಡಗಳ ಕೆಳಗೆ ಬೊಬ್ಬೆ ಹಾಕುತ್ತಿದ್ದ ಕೋಳಿಗಳ ಕೂಗು ಮತ್ತೂ ಹೆಚ್ಚಾಯಿತು. ಆಗಷ್ಟೇ ಮಿಂದು ದೇವರಕೋಣೆಯಲ್ಲಿ ಪೂಜೆ ಮಾಡುವುದರಲ್ಲಿ ನಿರತರಾಗಿದ್ದ ನಂಜೆಗೌಡರು ಈ ಗದ್ದಲದ ದೆಸಿಯಿಂದ ‘ನೆಮ್ದಿಯಿಂದ ಪೂಜಿ ಮಾಡಕ್ಕೂ ಬಿಡಕ್ಲಾ’ ಎಂದು ಅವಸರದಿಂದ ಪೂಜೆ ಮುಗಿಸಿ ಅಂಗಳಕ್ಕೆ ಬಂದರು. ಬೆಳಿಗ್ಗೆ ಒಂಬತ್ತಕ್ಕೆಲ್ಲಾ ಬಂದು ಬಿಡುತ್ತಿದ್ದ ಕೆಲಸಗಾರರನ್ನು ಕರೆ ತರುತ್ತಿದ್ದ ಆಟೋ ಗಂಟೆ ಹತ್ತಾದರೂ ಬರದೆ ಇದ್ದಾಗ ಮನೆ ಮುಂದಿನ ರಸ್ತೆಗೆ ಕಣ್ಣಾಗಿ ಅಂಗಳದ ಒಂದು ಬದಿಯಲ್ಲಿದ್ದ ಆರಾಮಕುರ್ಚಿಗೆ ಒರಗಿದರು.
ತೋಟದ ಲೈನಿನಲ್ಲಿ ಹಲವು ವರ್ಷಗಳ ಹಿಂದಿನಿಂದ ಇದ್ದ ಕುಟುಂಬಗಳು ಒಬ್ಬೊಬ್ಬರಾಗಿ ಹೋದ ನಂತರ ನಂಜೆಗೌಡರು ಬಯಲುಸೀಮೆಯಿಂದ ತೋಟಕ್ಕೆ ಜನಬಿಡುತ್ತೇನೆ ಎಂದು ಹೇಳಿಕೊಂಡು ಬಂದ ಮೇಸ್ತ್ರಿಯ ಮಾತಿಗೆ ಒಂದು ಕುಟುಂಬವನ್ನು ಕರೆಸಿಕೊಂಡಿದ್ದರು. ಮುರ್ನಾಲ್ಕು ತಿಂಗಳು ಚೆನ್ನಾಗಿಯೇ ಕೆಲಸ ಮಾಡಿದ್ದ ಆ ಕುಟುಂಬ ದೀಪಾವಳಿಗೆ ಊರಿಗೆ ಹೋಗಿ ಬರುತ್ತೇವೆ ಎಂದು ಬಯಲುಸೀಮೆಗೆ ಹೋದವರು ಇತ್ತಮುಖ ಮಾಡಿರಲೇ ಇಲ್ಲ. ಸ್ವಲ್ಪ ಸಾಲವನ್ನು ಕೊಟ್ಟಿದ್ದ ನಂಜೆಗೌಡರು ಅದರ ನಂತರ ಬಯಲುಸೀಮೆಯ ತೋಟದಾಳುಗಳನ್ನು ತೋಟಕ್ಕೆ ಸೇರಿಸಿಕೊಳ್ಳಲು ಹಿಂಜರಿಯುತ್ತಿದ್ದರು.
ಕಾಫಿ ಕುಯ್ಲಿನಂಥ ತುರ್ತಿನ ಕೆಲಸಗಳಿದ್ದಾಗ ಆಳುಗಳ ಅನಿವಾರ್ಯತೆ ಇದ್ದ ಕಾರಣಕ್ಕಾಗಿ ಅಸ್ಸಾಂ ಮೇಸ್ತ್ರಿಯ ಮೂಲಕ ನಾಲ್ಕೈದು ಕುಟುಂಬಗಳನ್ನು ತೋಟದ ಲೈನಿಗೆ ಕರೆಸಿಕೊಂಡಿದ್ದರು. ತೋಟದ ಕೆಲಸದಲ್ಲಿ ಅಷ್ಟಾಗಿ ಅನುಭವವಿಲ್ಲದ, ಭಾಷೆಯ ಸಮಸ್ಯೆಯಿಂದಾಗಿ ಕೆಲಸ ತೆಗೆಸಿಕೊಳ್ಳಲು ಸಾಧ್ಯವಾಗದೇ ಇದ್ದರೂ ತೋಟದಾಳುಗಳೆ ಸಿಗದೇ ಇದ್ದುದರಿಂದ ಅಸ್ಸಾಂ ಆಳುಗಳನ್ನು ನಂಜೆಗೌಡ ಸಹಿಸಿಕೊಳ್ಳಲೇಬೇಕಾಗುತ್ತಿತ್ತು.. ಗೌಡರು ಬೆಳೆಗಾರರ ಸಂಘ, ರೈತಸಂಘ, ಸಾವಯವ ಕೃಷಿಕರ ಸಂಘ ಮುಂತಾದ ಸಂಘಗಳಲ್ಲೂ ಸಕ್ರಿಯವಾಗಿದ್ದರಿಂದ ವಾರದಲ್ಲಿ 3 ದಿನ ಮೀಟಿಂಗ್, ಸಂವಾದ, ಪ್ರ್ಯಾತ್ಯಕ್ಷತೆ, ಪ್ರತಿಭಟನೆ ಎಂದು ತಿರುಗಾಟ ಇದ್ದೇ ಇರುತಿತ್ತು. ಒಳ್ಳೆ ಭಾಷಣಕಾರರು ಆಗಿದ್ದ ನಂಜೆಗೌಡರು ಉಪನ್ಯಾಸ ನೀಡಲು ರಾಜ್ಯಮಟ್ಟದ ಕಾರ್ಯಕ್ರಮಗಳಿಗೂ ಹೋಗಬೇಕಾಗುತ್ತಿತ್ತು.
ತೋಟ ಮತ್ತು ಸಂಘಟನೆಗಳ ಜವಾಬ್ದಾರಿ ನಿಭಾಯಿಸಲು ಗೌಡರಿಗೆ ಕಷ್ಟವೆನಿಸುತ್ತಿತ್ತು. ಒಮ್ಮೊಮ್ಮೆ ಈ ತೋಟವನ್ನೆಲ್ಲಾ ಮಾರಿ ಮಗನೊಡನೆ ಬೆಂಗಳೂರಿನಲ್ಲಿ ಇದ್ದುಬಿಡುವ ಎನಿಸುತ್ತಿತ್ತು. ಪೇಟೆಯಿಂದ ಸಾಕಷ್ಟು ದೂರವಿದ್ದ, ಸುತ್ತಾ ಕಾಡಿನ ಅಂಚಿನಲ್ಲಿರುವ ಸರಿಯಾದ ರಸ್ತೆ ಸೌಕರ್ಯವೂ ಇಲ್ಲದ ಈ ಹಳ್ಳಿಯಲ್ಲಿ ದುಡಿದು ಮಾಡುವುದೇನಿದೆ ಎಂದೆಸಿದರೂ ಮತ್ತೆ ಇಲ್ಲಿರುವಷ್ಟು ನೆಮ್ಮದಿ ಮತ್ತೆಲ್ಲೂ ಸಿಗಲಾರದು ಎಂದೂ ಎನಿಸುತ್ತಿತ್ತು. ಗೌಡರ ಬಂಗಲೆ ಮನೆಗೆ ಬರಬೇಕಾದರೆ ಒಂದಷ್ಟು ಕಿ.ಮಿ ಮೀಸಲು ಅರಣ್ಯ ನಡುವೆ ಬರಬೇಕಾಗುತ್ತಿತ್ತು. ಮೀಸಲು ಅರಣ್ಯದೊಳಗೆ ವಿದ್ಯುತ್ ಕಂಬಗಳನ್ನು ನೆಡಲು ಅವಕಾಶ ಸಿಗದೆ ಇರುವುದರಿಂದ ಗೌಡರು ಸೋಲಾರ್, ಜನರೇಟರ್ ಬಳಸುತ್ತಿದ್ದರು.
ಅರಣ್ಯ ಇಲಾಖೆಗೆ ಹಲವು ಬಾರಿ ತಮ್ಮ ಪ್ರಭಾವ ಬಳಸಿ ವಿದ್ಯುತ್ ಲೈನ್ ಎಳೆಯಲು ಅನುಮತಿ ಪಡೆದುಕೊಂಡಿದ್ದರೂ ಯಾರೋ ಕೆಲ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅರಣ್ಯ ಇಲಾಖೆಯವರು ವಿದ್ಯುತ್ ಕಂಬಗಳನ್ನು ಹಾಕಲು ಒಪ್ಪದೆ ಹೋದರು.
‘ಈ ಪರಿಸರವಾದಿಗಳಿಂದ ಬರ್ಕತ್ ಇಲ್ಲ. ಆತ್ರ್ ಗಳಿಗೆ ಒಂದ್ ಹಾಲುವಾಣ ಗೂಟ ನೆಟ್ ಗೊತ್ತಿರಕ್ಲ, ಇವ್ರೆಲ್ಲ ಪರಿಸರವಾದಿಗಳಂತೆ. ಗುಡ್ಡದ್ ಮ್ಯಾಲೆ, ಕಾಡ್ ಒಳ್ಗೆ ಅಷ್ಟ್ ದೊಡ್ ಹೈಟೆನ್ಸ್ ಕರೆಂಟ್ ಲೈನ್ ಹೋಗ್ಯಾದೆ. ಅದ್ ಕಾಣಾಕ್ಲ. ಇಲ್ಲಿ ಕತ್ಲೆಲ್ಲಿ ಜೀವ್ನ ಕಳಿತ್ತಾ ಇದ್ದಿವೀ. ಕರೆಂಟ್ ಕನೆಕ್ಷನ್ ತಗಳನಾ ಅಂದ್ರೆ ಇರ್ತ್ಗಳ್ದ್ ಒಂದ್ ರ್ವಾತೆ’ ಎಂದು ಯಾವುದೋ ವಿಚಾರ ಸಂಕಿರಣವೊಂದರಲ್ಲಿ ಬಹಿರಂಗವಾಗಿಯೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಎಲ್ಲಾ ತರಲೆ ತಾಪತ್ರಯಗಳಲ್ಲೆ ಮುಳುಗಿ ಹೋಗಿದ್ದ ಗೌಡರಿಗೆ ತೋಟದ ಕೆಲಸಗಳನ್ನು ನೋಡಿಕೊಳ್ಳುವ ನಂಬಿಕಸ್ತ ಆಳಿನ ಅಗತ್ಯ ಖಂಡಿತವಾಗಿಯೂ ಇತ್ತು. ಅಣ್ಣಪ್ಪಣನ ಹೆಂಡತಿ ಗೌರಿ ಅಂದು ತೋಟ ಬಿಡುವ ಬಗ್ಗೆ ಬಂದು ಹೇಳಿದಾಗ ನಿಜವಾಗಲೂ ಗೌಡರಿಗೆ ಬೇಸರವಾಗಿತ್ತು. ಸಂಬಳ ಬೇಕಾದರೆ ಹೆಚ್ಚು ಮಾಡುವ, ಬೇಕಾದರೆ ಬಾಡಿಗೆ ಮನೆಯಲ್ಲಿ ಇದ್ದುಕೊಂಡೆ ನಮ್ಮ ತೋಟಕ್ಕೆ ಕೆಲಸಕ್ಕೆ ಬನ್ನಿ ಎಂದು ಹೇಳಬೇಕು ಎಂದುಕೊಂಡಿದ್ದರು.
ಆದರೆ ಅಂದು ಗೌರಿಯ ಮಾತಿನ ದಾಟಿಯಲ್ಲಿದ್ದ ಒಂದು ರೀತಿ ಅಹಂ ನಂಜೆಗೌಡರಿಗೆ ಹಾಗೆ ಹೇಳದಂತೆ ತಡೆದಿತ್ತು. ಆ ಗುಂಗಿನಲ್ಲಿಯೇ ಲೆಕ್ಕ ಮಾಡಿ ಕಳಿಸಿದರೂ ಕೂಡ. ಅಣ್ಣಪ್ಪಣ್ಣ ಮತ್ತೆ ಸಿಕ್ಕಾಗ ಹೇಗಾದರೂ ಮಾಡಿ ಅವನನ್ನು ಮನವೊಲಿಸಿ ನಮ್ಮ ತೋಟಕ್ಕೆ ಕೆಲಸಕ್ಕೆ ಬಾ ಎಂದು ಹೇಳಬೇಕೆಂದರೂ ಮತ್ತೆ ಅಣ್ಣಪ್ಪ ಬಂಗಲೆ ಕಡೆಗೆ ಬಂದಿರಲಿಲ್ಲ. ಒಂದೆರಡು ಬಾರಿ ಸಿಕ್ಕರೂ ಮಾತನಾಡಿಸಲು ಆಗಿರಲಿಲ್ಲ. ಅಣ್ಣಪ್ಪನಿಗೂ ಗೌಡರಿಗೆ ಹೇಗೆ ಮುಖ ತೋರಿಸುವುದು ಎಂದೆನಿಸಿರಬೇಕೋ ಏನೋ.
ನಂಜೆಗೌಡರು ಬಂಗಲೆ ಮನೆಯ ಮುಂದಿನ ಆರಾಮ ಖುರ್ಚಿಗೆ ಒರಗಿಗೊಂಡು ಸಮಯ ಕಳೆದರೂ ಬಾರದ ಕೆಲಸದಾಳುಗಳ ಆಟೋದ ನಿರೀಕ್ಷೆಯಲ್ಲಿ ಕುಳಿತಿರುವಾಗ ರಸ್ತೆಯಲ್ಲಿ ಯಾರೋ ನಡೆದುಕೊಂಡು ಬರುತ್ತಿರುವುದು ಕಾಣಿಸಿತು. ಆಕೃತಿ ಹತ್ತಿರವಾಗುತ್ತಿದ್ದಂತೆ ನಂಜೆಗೌಡರು ಅಚ್ಚರಿಯಿಂದ ನಗುಮೊಗದಿಂದಲೇ ‘ಏನ್ ಅಣ್ಣಪ್ಪ, ಎಲ್ಲಾ ಮಾರಾಯ ನೀನು. ಸುದ್ದಿ ಇಲ್ಲಲ್ಲಾ ನಿಂದು. ಬಾ ಕುತ್ಕಾ’ ಎಂದು ಪಕ್ಕದಲ್ಲೆ ಇದ್ದ ಕಟ್ಟೆಯ ಕಡೆಗೆ ಕೈತೋರಿಸಿದರು. ಅಣ್ಣಪ್ಪಣ್ಣ ಕಟ್ಟೆಯ ಮೇಲೆ ಕುಳಿತುಕೊಂಡವನೆ, ‘ಕಾಫಿ ಪುಲ್ ಹಣ್ ಆಗ್ಯಾದೆ. ಕುಯ್ಲು ಸುರು ಮಾಡೀರಾ ಗೌಡ್ರೆ?’ ಎಂದು ಕೇಳಿದ.
ಗೌಡರು ‘ಇಲ್ ಕಣಾ ಮಾರಾಯಾ, ಈ ಅಸ್ಸಾಂ ಜನಗಳನ್ನ ಇಡ್ಕಂಡ್ ಎಂತಾ ಕೆಲಸ್ ಮಾಡಾದ ಏನಾ. ಇಲ್ಲಿಯೋರೆ ಒಂದಷ್ಟ್ ಜನಗಳು ಬರ್ತೀವಿ ಅಂದ್ರು. ಇಷ್ಟೋತ್ ಆದ್ರೂ ಕಾಣಕ್ಲ. ಎಂಥಾ ಮಾಡಾದ ಏನಾ. ಒಂದು ತಲೆಗ್ ಹೋಗಾಕ್ಲಾ’ ಎಂದರು.
ಆ ವೇಳೆಗೆ ಮನೆಯೊಳಗಿಂದ ಬಂದ ನಂಜೆಗೌಡರ ಪತ್ನಿ ಸೀತಮ್ಮನವರು ‘ಏನಾ ಅಣ್ಣಪ್ಪ, ಮಗಳು ಹೆಂಗ್ ಅದಳಾ. ಕೈ ತೊಳ್ಕಳ್ಳಿ ತಿಂಡಿ ಮಾಡಿರಂತೆ’ ಎಂದು ಒಳಹೋದರು. ಗೌಡರು ಆರಾಮಕುರ್ಚಿಯಿಂದ ಎದ್ದು ಕೈತೊಳೆಯಲೆಂದು ಒಳಹೋದರು. ಅಣ್ಣಪ್ಪಣ್ಣ ಕೂಡ ಗೌಡರನ್ನು ಹಿಂಬಾಲಿಸಿ ಒಳನಡೆದ.
ಅದಾಗಿ ಒಂದು ವಾರಕ್ಕೆ ಅಣ್ಣಪಣ್ಣನ ಕುಟುಂಬ ಮತ್ತೆ ನಂಜೆಗೌಡರ ತೋಟಕ್ಕೆ ಬಂತು. ‘ಲೈನ್ ಮನಿಲ್ ಇರದ ಬ್ಯಾಡ’ ಎಂದು ಗೌಡರು ಬಂಗಲೆ ಸಮೀಪದಲ್ಲೆ 2 ಕೊಠಡಿಯ ಮನೆಯೊಂದನ್ನು ಮಾಡಿಕೊಟ್ಟರು. ತೋಟದ ಕೆಲಸ ಜವಾಬ್ದಾರಿಯನ್ನು ಅಣ್ಣಪ್ಪಣ್ಣನಿಗೆ ಬಿಟ್ಟು ಉಪನ್ಯಾಸ, ಹೋರಾಟಗಳಲ್ಲಿ ತೊಡಗಿಕೊಂಡರು. ಮೇಸ್ತ್ರಿ ಶೇಷಪ್ಪ ತೋಟಕ್ಕೆ ಜನ ಬಿಡುವ ಕೆಲಸ ಬಿಟ್ಟು. ಗ್ರಾ.ಪಂ. ತಾ.ಪಂಚಾಯತ್ ಗಳಿರುವ ಕಾಮಗಾರಿಗಳನ್ನು ಹಿಡಿದು ಕಂಟ್ರಾಕ್ಟರ್ ಮಾಡಲು ಪ್ರಾರಂಭಿಸಿದ. ನಂಜೆಗೌಡರು ಬಂಗಲೆಮನೆಗೆ ವಿದ್ಯುತ್ ಲೈನ್ ಎಳೆಸಲು ತಮ್ಮ ಪ್ರಯತ್ನವನ್ನು ಎಂದಿನಂತೆ ಮುಂದುವರಿಸಿದರು. ಮಲೆನಾಡು ಕೂಡ ನಿಧಾನಕ್ಕೆ ಬದಲಾವಣೆಗೆ ಒಗ್ಗಿಕೊಳ್ಳತೊಡಗಿತು.
ಹವ್ಯಾಸಿ ಫೋಟೋಗ್ರಾಫರ್. ಕೊಟ್ಟಿಗೆ ಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ‘ಮುಖವಾಡ’ ಇವರ ಕವನ ಸಂಕಲನ.