ಏಳೆ ಮೇದಿನಿ…
ಏನಮ್ಮಾ ಮೇದಿನಿ
ಸುಮ್ಮನೆ ಕುಳಿತಿರುವೆ
ಯುದ್ಧ ಬಯಲಿನ ಸುದ್ದಿ
ಕೇಳಿದ್ಯೇನೆ?
ಏನು ಯುದ್ಧವೊ ಏನೊ
ಸಾಕು ಸಾಕಾಗಿದೆ
ಮನಸೆಲ್ಲ ತೂತಾಗಿದೆ.
ಅಲ್ಲಿ ಸಾಗರದಲ್ಲಿ ಎಣ್ಣೆ
ಹಾಕಿದರಂತೆ. ಇಲ್ಲಿ
ನನ್ನೆದೆಯಲ್ಲಿ ಹಾಲುಕ್ಕದು!
ಒಂದಾದರೂ ಒಳ್ಳೆ ಸುದ್ದಿ ಸಿಕ್ಕೀತೆಂದು
ಅಕ್ಷರಕ್ಷರವ ಹೆಕ್ಕಿ ಓದಿಕೊಂಡೆ.
ಸುದ್ದಿ ಪತ್ರಿಕೆ ತುಂಬ ಸಾವು ಕೇಕೆ
ಯುದ್ಧ ಬಯಲಿಗೆ ಒಲವು ಬಾರದೇಕೆ?
ಹಾಲುಗೆನ್ನೆಯ ಕಂದ
ಕುಣಿಕುಣಿದು ಕೇಳುವುದು,
ಯುದ್ಧವೆಂದರೇನಮ್ಮಾ?
ನಮ್ಮೂರಲ್ಲಿ ಅದ ನೋಡಬಹುದೇ?
ಏನ ಹೇಳಲಿ ಕೂಸೆ?
ದಾರಿ ತಪ್ಪಿದ ಧರ್ಮಯುದ್ಧ
ಓಣಿ ಓಣಿ ಹೊಕ್ಕು ಹೊರಳುತಿಹ
ಅಂತರ್ಯುದ್ಧ..
ಆಸ್ತಿಗಾಗಿ ಹೊಡೆದಾಟ
ನೀರಿಗಾಗಿ ಕಾದಾಟ
ಒಬ್ಬರ ತುಳಿವ ಇನ್ನೊಬ್ಬರ ಮೇಲಾಟ.
ಎಲ್ಲ ಕಲುಷಿತ ಧೂಳು.
ಗುದುಮುರಿಗೆ ಬಾಳು.
ನೆಲದ ಹಸಿರೆಲ್ಲವೂ
ವಿಷವಾಗಿ ಕೆರಳಿಹುದು
ಹಸಿರು ನುಂಗಿದ ಹಸುವು ಕನಲಿ ಕವಳಿಸೀತು
ಕೆಚ್ಚಲಿನ ಹಾಲೆಲ್ಲ ವಿಷದ ಧಾರೆ.
ಕಂದನಿಗೆ ಎಲ್ಲ ತಿಳಿಸಿ ಹೇಳಲಿ ಹೇಗೆ?
ಈ ಕಾವು ಮುಗಿದೀತು.
ಸದ್ದೆಲ್ಲ ಅಡಗೀತು
ಯುದ್ಧ ಮನಸಿನ ಉರಿ ತಣ್ಣಗಾದೀತು.
ಏಳಮ್ಮ ಮೇದಿನಿ
ಒಬ್ಬಳೇ ಕೊರಗದಿರು
ಹಸುಗೂಸು ಕೊಸರೀತು
ಯುದ್ಧಕ್ಕೆ ಬಂದವರು
ಹಿಂತಿರುಗಿ ಹೋದಾರು
ಅವರ ಮನೆಗೂ ಒಂದು
ಹೊಸ್ತಿಲುಂಟು.
ಬಿಚ್ಚುಗಣ್ಣಿನ ಹುಡುಗಿ
ಕಾಯುವುದು ನೆನಪಾಗಿ
ಹುಚ್ಚುಕತ್ತಿಯನೆಸೆದು
ಎಳೆವ ನಂಟು !!
“ಬೆಳಕು ಕನಸಿನ ಸುತ್ತ” ಪ್ರಕಟಿತ ಕವನ ಸಂಕಲನ.
ಪತ್ರಿಕೆಗಳಲ್ಲಿ ಹಾಗೂ ಧಾರಾವಾಹಿಗಳ ಕಥಾ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ.
ಇವರ ಕವನ ಸಂಕಲನಕ್ಕೆ ಬಕುಳ ಪ್ರಶಸ್ತಿ, ಅತ್ತಿಮಬ್ಬೆ ಗೌರವ ಪ್ರಶಸ್ತಿ ದೊರಕಿದೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಪದ್ಯ ಇಷ್ಟವಾಯಿತು