ಕನ್ನಡದ ಈ ಗಿರಿಬಾಲೆಯ ಹೆಸರು ಶ್ರೀಮತಿ ಸರಸ್ವತೀಬಾಯಿ ರಾಜವಾಡೆ. ಸ್ರೀವಾದ, ಮಹಿಳಾ ಸಬಲೀಕರಣ ಇತ್ಯಾದಿ ಪದಗಳು ಕನ್ನಡದಲ್ಲಿ ಇನ್ನೂ ಕಣ್ತೆರೆಯದಿದ್ದ ಕಾಲದಲ್ಲಿಯೇ ತನ್ನ ಬರಹಗಳಲ್ಲಿ ಈ ಪದಗಳಿಗೆ ಜೀವಕೊಟ್ಟವರು ಈ ಗಿರಿಬಾಲೆ. ಅಪ್ರತಿಮ ಸುಂದರಿಯಾಗಿದ್ದ ಗಿರಿಬಾಲೆ ತನ್ನ ಕೊನೆಯ ದಿನಗಳನ್ನು ವಿರಾಗಿಣಿಯಂತೆ ಕಳೆದವರು. ಕನ್ನಡದ ಮಹತ್ವದ ಲೇಖಕಿ ವೈದೇಹಿ ಗಿರಿಬಾಲೆ ಅರ್ಥಾತ್ ಶ್ರೀಮತಿ ಸರಸ್ವತೀಬಾಯಿ ರಾಜವಾಡೆಯವರ ಕುರಿತ ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ಸಾಗರದ ಅಕ್ಷರ ಪ್ರಕಾಶ ಈ ಪುಸ್ತಕದ ಪ್ರಕಾಶಕರು. ಗಿರಿಬಾಲೆಯವರನ್ನು ಕಂಡು ಮಾತನಾಡಿಸಿ ಬರೆದ ವೈದೇಹಿಯವರ ಲೇಖನ ಇಲ್ಲಿದೆ.
ಅದು ೧೯೮೭ರ ದೀಪಾವಳಿಯ ಸಮಯ. ರಾಜವಾಡೆಯವರು ಕಟ್ಟಿಸಿ ನಿರ್ವಹಿಸುತ್ತಿದ್ದ ಉಡುಪಿಯ ಚಿಟ್ಪಾಡಿಯಲ್ಲಿರುವ ಶ್ರೀ ಶಾರದಾಂಬಾ ದೇವಸ್ಥಾನಕ್ಕೆ ಹೋದಾಗ ಸಂಜೆ ಗಂಟೆ ಏಳು ಏಳೂವರೆ. ಕರೆಂಟು ಹೋದ ಕತ್ತಲಿಗೆ ಎಣ್ಣೆದೀಪ ಹಚ್ಚಿಟ್ಟುಕೊಂಡು ಪೌಳಿಯ ಕಂಬಕ್ಕೊರಗಿ ಅವರು ಯಾರೊಡನೆಯೋ ಮಾತಾಡುತ್ತಾ ಬತ್ತಿ ಹೊಸೆಯುತ್ತಾ ಕುಳಿತಿದ್ದರು. ಆ ಮಿಣಿ ಮಿಣಿ ಬೆಳಕಲ್ಲಿ ಕುತೂಹಲದ ಕಣ್ಣನ್ನು ಅಗಲ ಕಿರಿದುಗೊಳಿಸಿ ಒಮ್ಮೆ ಮುಖವೆತ್ತಿ ನನ್ನನ್ನು ನೋಡಿದರು. ಇವರೇ ಅವರಿರಬಹುದು ಅಂತ ಅನ್ನಿಸಿದರೂ ಕೇಳಿದೆ. ಹಾಂ. ನಾನೇ. ಏನಾಗಬೇಕಿತ್ತು. ಕುಳಿತುಕೊಳ್ಳಿ. ದನಿತುಂಬ ಹೊಸಜನದ ಪರಿಚಯದ ಉಮೇದು. ಬಂದ ಉದ್ದೇಶ ಹೇಳಿದೆ. ಲೌಕಿಕವೇ ಬೇಡವೆಂದು ದೇಗುಲ ಸೇರಿದವರು ಒಪ್ಪಲು ತಯಾರೇ ಇರಲಿಲ್ಲ. ವಾದಿಸಿ ವಾದಿಸಿ ಕಡೆಗೂ ಒಪ್ಪಿದರಂತಾಯಿತು. ಆದರೆ ಬೆಂಗಳೂರಿಗೆ ಪ್ರಯಾಣ ಹೊರಟದ್ದೇ ಅಲ್ಲಿಂದ ಮತ್ತೆ ಮರಳುವವರೆಗೂ ತನ್ನ ಹಳೆಯ ದಿನಗಳ ನೆನಕೆಯಲ್ಲಿ ಅಪೂರ್ವ ಸಂಭ್ರಮದಲ್ಲಿ ಅವರು ಮುಳುಗಿ ಹೋಗಿದ್ದರು. ಬೆಂಗಳೂರೆಂದರೆ ಅವರ ಆಯುಷ್ಯದ ಒಂದು ಪ್ರಮುಖ ಅವಧಿಯನ್ನು ಕಳೆದ ನಗರವಷ್ಟೆ?
#
ಉನ್ನತ ನಿಲುವು, ಶುಭ್ರ ಗೌರವರ್ಣ. ನೆತ್ತಿಗೆ ಎತ್ತಿ ಕಟ್ಟಿದ ತುರುಬು, ಪುಟ್ಟಪುಟ್ಟ ಹೂಹೂವಿನ, ನೀಲಿ ಕೆಂಪು ಹಳದಿ ಇತ್ಯಾದಿ ಬಣ್ಣದ ಸಣ್ಣಂಚಿನ ಬಿಳಿಯ ಮಾಸಲು ಪತ್ತಲ, ಸಡಿಲರವಕೆ, ನಿರಾಭರಣ, ಮುಖದ ಆಕಾರದ ತಿರುವುಗಳಿಗೆ ಮಾತಿಗೆ ತಕ್ಕ ಗತ್ತು ಒದಗಿಸುವ ಸ್ನಾಯುಗತಿ. ಕಲ್ಲನ್ನೂ ಮುಟ್ಟಿ ಮಾತಾಡಿಸಬಲ್ಲವರು. ಕೈ ಬೀಸಿ ಏರಿಸಿ ಇಳಿಸಿ ಕಣ್ಣು ಹುಬ್ಬು ಕೆನ್ನೆಯ ಚಲನೆಯನ್ನೂ ಬೆಸೆದು ಮಾತು `ಆಡು’ವವರು. ಮಾತೆಂದರೆ ಏನದು, ವಾಗ್ವಿಲಾಸವೇ. ಕನ್ನಡ ಜಾಣ್ನುಡಿಗಳು, ಹಿಂದಿ ಉದ್ಗಾರಗಳು, ಮರಾಠೀ ಹಾಡುಗಳು, ಇಂಗ್ಲಿಷ್ ಶಬ್ದಗಳು, ಸಂಸ್ಕೃತ ಸುಭಾಷಿತಗಳು- ನಡುವೆ ತುಳುವನ್ನೂ ಎಳೆದು ತರುವರು; ದೇವರಿಗೆಂದು ನಾನಾಬಗೆಯ ಹೂವು ಕುಸುಮ ಕದಿರು ಪತ್ರೆಗಳನ್ನೆಲ್ಲ ಸೇರಿಸಿ ಮಾಲೆ ಕಟ್ಟುವ ಹಾಗೆ. (ಮರಾಠಿ -ಸ್ಥಳೀಯ ಭಾಷೆಗಳ ಮಿಶ್ರ ಮರಾಠಿ- ಅವರ ಮಾತೃಭಾಷೆ, ಬೆಂಗಳೂರಿನಲ್ಲಿದ್ದಾಗ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳನ್ನೂ ಕಲಿತಿದ್ದರು ಅವರು. ಸ್ಥಳೀಯ ಕನ್ನಡ ಮತ್ತು ತುಳು ಭಾಷೆಗಳು ಹೇಗೂ ಅವರಿಗೆ ಗೊತ್ತೇ ಇತ್ತು. ಹಳೆಮೈಸೂರಿನ ಕೆಲ ಪ್ರಯೋಗಗಳನ್ನವರು ಉಡುಪಿ ಕನ್ನಡಕ್ಕೆ ಸಲೀಸಾಗಿ ಕಸಿಕಟ್ಟಿದ್ದರು. ಹಾಗಲ್ಲರೀ ಹೀಗಲ್ಲರೀ ಆಗತ್ತರೀ ಎಂದು ಮುಂತಾಗಿ ಅವರೆನ್ನುವಾಗ ಇತ್ತ ಅವರ ಉಡುಪಿ ಕನ್ನಡವೂ ಅತ್ತ ಬೆಂಗಳೂರು ಕನ್ನಡವೂ ಒಟ್ಟಿಗೇ ಕೇಳಿದಂತಾಗುವುದು. ಅದೆಲ್ಲ ತನ್ನ ಬೆಂಗಳೂರು ವಾಸದ ಫಲ, ಘಟ್ಟ ಇಳಿದರೂ ಬಿಟ್ಟು ಹೋಗಿಯೇ ಇಲ್ಲವಲ್ಲ ಎಂದು ಆಶ್ಚರ್ಯ ಪಡುತ್ತಿದ್ದರು.) ಮಾತುಗಳೂ ಹೌದು ಅವು ಕತೆಗಳೂ. ಕಹಿ ಸಿಹಿ ನೆನಪುಗಳೆರಡನ್ನೂ ಪ್ರಸನ್ನ ಮೊಗದಿಂದ ಹೇಳುತ್ತಾ ಹೋಗುವ ಅಪರೂಪದ ಒಂದು ಶೈಲಿಯೂ. ಚಿಕ್ಕಂದಿನಲ್ಲಿ `ಹಡೆ ಪೋ’ಎಂದವರು ಮುಂದೆ `ಬಲೆ ಬಲೆ’ (ಬನ್ನಿ ಬನ್ನಿ) ಎನ್ನುವಾಗ ಮನಸ್ಸು ಒಳಗೇ ಚಕಿತಗೊಳ್ಳುತ್ತ ಕಳೆದ ಆ ದಿನಗಳನ್ನು ಹೇಳುವಾಗಲೂ ಒಂದಿನಿತೂ ಕಹಿಯ ಲೇಪವಿಲ್ಲ. ಕಹಿಗೊಳ್ಳದೆ ಕೆಟ್ಟ ನೆನಪುಗಳನ್ನು ಅವರು ಇಟ್ಟುಕೊಂಡಿರುವ ಪರಿಯೇ ಆ ನಗೆಗೆ ಶುಭ್ರತೆಯನ್ನು ತಂದುಕೊಟ್ಟಿರಬಹುದೆ? ನಗು ಎಂದರೆ ನಗು, ಸಿಟ್ಟು ಎಂದರೆ ಸಿಟ್ಟು. ಅಭಿಪ್ರಾಯದಲ್ಲಿ ಖಂಡತುಂಡ. ವೈರಾಗ್ಯ ಎಂಬ ಕಲ್ಪನೆಯ ನವೀನ ಭಾಷ್ಯದಂತಿದ್ದರು ಲೋಕಾನುರಾಗಿ ವಿರಾಗಿ ರಾಜವಾಡೆ. ಎಂತಲೇ ಕೊನೆಯವರೆಗೂ ಅವರಲ್ಲಿ ಇದ್ದುದು ನಿಗಿನಿಗಿ ಉತ್ಸಾಹ ಕುತೂಹಲ ಜೀವಂತಿಕೆಯಿಂದ ಕೂಡಿದ ವಿಶಿಷ್ಟ ವಿರಕ್ತಿ. ಅವರ ಕುರಿತು ಕೇಳಿದರೆ, ಓದಿಕೊಂಡರೆ ಸಾಲದು, ನೋಡಬೇಕು, ಮಾತಾಡಬೇಕು, ನೋಡುತ್ತ ಮಾತಾಡುತ್ತ ಗ್ರಹಿಸಬೇಕು.
#
ಅವರು ಬರುತ್ತಿದ್ದರೆ ಬೆಳಕೊಂದು ನಡೆದು ಬಂದಂತಾಗುತ್ತಿತ್ತು ಎಂದು ಯುವತಿ ಗಿರಿಬಾಲೆಯ ಸೌಂದರ್ಯವನ್ನು ನೆನೆಯುವವರು ಈಗಲೂ ಇದ್ದಾರೆ. ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಶ್ರೀಮತಿ ಸರಸ್ವತೀಬಾಯಿ ರಾಜವಾಡೆ ಆಗಿನ ದ.ಕ. ಜಿಲ್ಲೆಯ ಅಪ್ರತಿಮ ಸುಂದರಿಯರಂತೆ. ಇವರಿಬ್ಬರ ಗಾಂಭೀರ್ಯ, ಘನಸ್ಥಿಕೆಯಿಂದ ಕೂಡಿದ ಸೌಂದರ್ಯ ಆಗ ಮನೆಮಾತಾಗಿತ್ತಂತೆ. ರಾಜವಾಡೆಯವರು ಜರತಾರಿ ಸೀರೆಯುಟ್ಟು ಆಭರಣಗಳನ್ನು ತೊಟ್ಟು ಉಡುಪಿಯ ರಥಬೀದಿಯಲ್ಲಿ ನಡೆದು ಬರುತಿದ್ದರೆ ಸಾಕ್ಷಾತ್ ಮಹಾರಾಣಿಯೇ ಬರುತ್ತಿರುವಳೋ ಎಂಬಂತೆ ಕಾಣುತ್ತಿದ್ದರಂತೆ. ಉಡುಪಿಯ ಒಂದು ತಲೆಮಾರಿನ ಜನರ ಬಾಯಲ್ಲಿ ಅವರೊಂದು ದಂತಕತೆ. ಆಕೆ ತನ್ನ `ಸುಪ್ರಭಾತ’ ಪತ್ರಿಕೆಗೆ ಚಂದಾ ಕೇಳುತಿದ್ದುದು, ಪ್ರೀತಿಬಿರುಸಿನ ದನಿಯಲ್ಲಿ ಪರಿಚಿತರನ್ನೆಲ್ಲ ವಿಚಾರಿಸಿಕೊಳ್ಳುತಿದ್ದುದು ಮುಂತಾದವನ್ನು ಈಗಲೂ ನೆನಸಿಕೊಳ್ಳುವವರಿದ್ದಾರೆ. ಮುಂದೆ ಏನಾದರು ಅಂತ ಮಾತ್ರ ಅನೇಕರಿಗೆ ಗೊತ್ತಿರಲಿಲ್ಲ. ಸುಬ್ಬಣ್ಣನವರು ಹೇಳುವವರೆಗೆ ಅಲ್ಲೇ ಉಡುಪಿಯಲ್ಲೇ ಇದ್ದ ನನಗೂ ಗೊತ್ತಿರಲಿಲ್ಲವಲ್ಲ. ಹಾಗೆ ಗೊತ್ತೇ ಆಗದಂತೆ ತನ್ನ ಕೊನೆಯ ದಿನಗಳನ್ನು ಜೀವಿಸಿದರು ರಾಜವಾಡೆ. ಉದಯವಾಣಿಯಲ್ಲಿ ಅವರ ನಿಧನದ ವಾರ್ತೆ ಓದಿ ಅನೇಕರು `ಅವರು ಇದ್ದಿದ್ದರ?’ ಅಂತ ಉದ್ಗರಿಸಿದ್ದರು.
*****
ಅಂದು ನಾನು ಲೇಖಕಿ `ಗಿರಿಬಾಲೆ’ಯನ್ನು ಕಂಡದ್ದು ಶಾರದೆಯ ನೇರ ಬಹಿರಂಗ ಭಕ್ತೆಯಾಗಿ. ಅಸ್ಖಲಿತ ವಾಗ್ಝರಿಯ, ವಯಸ್ಸಿಗೆ ಮಣಿದು ಮಸುಕಾಗದ ಸುಸ್ಪಷ್ಟ ನೆನಪುಗಳ, ಪುಟಿಪುಟಿವ ಚೇತನವನ್ನು. ಒಂದು ಪ್ರಶ್ನೆ ಹಾಕಿದರೆ ಸಾಕು ಆ ಕಾಲಕ್ಕೆ ಓಡುತ್ತಿದ್ದರು ಅವರು. ಆ ಪ್ರಾಯದಲ್ಲಿಯೇ ನಿಲ್ಲುತ್ತಿದ್ದರು. ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯಕ್ಕೆ ಸ್ತ್ರೀ ಧ್ವನಿ ಕೂಡಿಸಿದಾಕೆ, ಸ್ತ್ರೀಯರ ಪ್ರಗತಿಗಾಗಿಯೇ ಒಂದು ಪತ್ರಿಕೆಯನ್ನು ಹೊರಡಿಸಿದಾಕೆ, ಆಶು ರಚನಕಾರ್ತಿ, ಮಕ್ಕಳಿಗಾಗಿ ಬರೆದವರು, ಕಥೆ ಕವನ ರಚಿಸಿ (ಕನ್ನಡದಲ್ಲಿ ಮಾತ್ರವಲ್ಲ, ತುಳುವಿನಲ್ಲೂ) ಕಾಲಂ ಬರೆದು, ಹರಿಕಥೆ ಮಾಡಿ, ಹಾಡಿ, ಹಾಡಿಸಿ, ವೀಣೆ ನುಡಿಸಿ, ನಾಟಕ ರಚಿಸಿ, ಆಡಿಸಿ, ನಟಿಸಿ- ಒಟ್ಟಿನಲ್ಲಿ ಕಲೆ ಹಾಗೂ ಸಾಹಿತ್ಯಲೋಕದಲ್ಲಿ ಮಿಂಚಿದಾಕೆ – ಅಂತೆಲ್ಲ ಒಂದು ಕಾಲದ ಅವರ ಕ್ರಿಯಾಶೀಲತೆಯನ್ನು ಕೆದಕಿ ಕೇಳ ಹೊರಟರೆ `ಏನೋ. ಎಲ್ಲ ಒಂದು ಹುಚ್ಚಲ್ಲವೆ!’ ಎಂದುಬಿಡುತ್ತಿದ್ದರು. ಬುದ್ಧಿ ಇಲ್ಲದಾಗ ಮಾಡಿದ ಕೆಲಸದಂತೆ, ಅದರ ಪ್ರಸ್ತಾಪವನ್ನೇ ಎತ್ತಲು ಮನಸ್ಸಿಲ್ಲದವರಂತೆ ಮಾತು ಬದಲಾಯಿಸುತ್ತಿದ್ದರು. ಆದರೆ ಒಮ್ಮೊಮ್ಮೆ ಹಾಗೆ ಮರೆಯ ಹೋಗುತ್ತ ಹೋಗುತ್ತ ಅವರ ಅರಿವಿಲ್ಲದೆಯೇ ಅಂದಿನ ನೆನಪಿನ ಕೋಶ ತೆರೆದುಕೊಳ್ಳುತಿತ್ತು.
ತನ್ನ ಕೆಲ ಕಥೆಗಳನ್ನು ನೆನೆದು ಸಾರಾಂಶವನ್ನು ಹೇಳು ಹೇಳುತ್ತ `ಅರರೇ ಎಷ್ಟು ಚೆನ್ನಾಗಿದೆ! ನನಗೆ ಇದು ಹೇಗೆ ಹೊಳೆಯಿತು! ಅಂಥಾ ಕಾಲದಲ್ಲಿ ಹೀಗೆಲ್ಲ ಬರೆದೆ ಎಂದರೆ ನನಗೇ ನಂಬಲು ಆಗುತ್ತಿಲ್ಲ’ ಎಂದು ಅಭಿನಯಪೂರ್ವಕವಾಗಿ ನುಡಿದು ತನ್ನನ್ನೇ ಹೊರಗಿಂದ ನಿಂತು ನೋಡಿ ಅಚ್ಚರಿಯಾಗುತ್ತಿದ್ದರು. ಕೆಲ ಕಥೆಗಳನ್ನು ನೆನೆದು `ಯಾಕಾದರೂ ಬರೆದೆನೋ, ಬೇರೆ ಕೆಲಸವಿಲ್ಲದ್ದಕ್ಕೆ. ಅದೊಂದು ಮರುಳು. ಏನೇನೆಲ್ಲಾ ಬರೆದೆ, ಆಗ ಹೋಗದ್ದು -ನಗುತ್ತಿದ್ದರು. ಸ್ವಂತ ಜೀವನದ ಕತೆಯನ್ನೂ ಅವರು ಹೇಳುವ ರೀತಿಯೆಂದರೆ ಎಲ್ಲೋ ಕಳೆದುಹೋದ ಒಬ್ಬ ಹುಡುಗಿಯ ಚರಿತ್ರೆಯನ್ನು ತನ್ನದಾಗಿಸಿಕೊಂಡು ಹೇಳುತ್ತಿರುವೆನೋ ಎಂಬಂತೆ; ಪೂರ್ತಿಯಾಗಿ ಎಲ್ಲೂ ಹೊರಗೂ ನಿಲ್ಲದೆ, ಒಳಗೂ ನಿಲ್ಲದೆ! ಯಾವ ದುಃಖ, ಉದ್ವೇಗಗಳಿಲ್ಲದೆ, ಹೇಗೆ ಅದನೆಲ್ಲ ದಾಟಿ ಬಂದೆ ಎಂಬ ವಿಸ್ಮಯ-ಸಂಭ್ರಮದಿಂದ. ಸಂಭ್ರಮವೂ ವಿಸ್ಮಯವೂ ಆಕೆಯ ಸ್ಥಾಯೀ ಗುಣಗಳಲ್ಲವೆ. ಮುಖದಲ್ಲೊದು ನಗೆಯ ದೀಪ ಹಚ್ಚಿಕೊಳ್ಳದೆ ಮಾತಾಡಲಿಕ್ಕೇ ತಿಳಿಯದವರು ರಾಜವಾಡೆ. ಹುಟ್ಟಾ ಸ್ವತಂತ್ರ ಮನೋವೃತ್ತಿಯ ಈ ಲೇಖಕಿ ಉದ್ದಕ್ಕೂ ಕಂಡದ್ದು ಕನಸು, ಕನಸು ಮತ್ತೂ ಕನಸು. ಎಂಥ ಕಾಲದಲ್ಲಿಯೂ ಅವರು ತನ್ನ ಕನಸಿನ ಲೋಕವನ್ನು ಮುಚ್ಚಿಕೊಳ್ಳಲಿಲ್ಲ. ಎಂತಲೇ ಅವರು ಬದುಕಿನ ವಿಪ್ಲವ ಪ್ರವಾಹದಲ್ಲಿ ಬಳಿದುಕೊಂಡು ಹೋಗದೆ ಸ್ಥಿರ ನಿಂತು ನಾಳೆಗೆ ಇಣುಕುವ ಕತ್ತಿನ ಬಲ ಉಳಿಸಿಕೊಂಡರು. ಕೊನೆಯ ತನಕವೂ ಅವರಲ್ಲಿನ ಮುಗ್ಧತನ, ಸಣ್ಣ ಸಣ್ಣ ತುಂಟತನ, ನಿಂತೆದ್ದು ಕೈ ತಟ್ಟಿ ಅತ್ತಿತ್ತ ಓಡಾಡಿ ಖುಷಿಪಡುವ ಚಿಮ್ಮು ಉತ್ಸಾಹ, ಕಲ್ಪಕ ಶಕ್ತಿ, ಕನಸುಗಾರಿಕೆ, ವಿಶೇಷ ಗ್ರಹಿಕೆ, ಘಟನಾವಳಿಗಳನ್ನು ಕಣ್ಣೆದುರು ಮಾತಿನಲ್ಲೇ ಮರುಸೃಷ್ಟಿಸಿ ಬಿಡುವ ಪ್ರತಿಭೆ ಮರೆಯಾಗಿರಲೇ ಇಲ್ಲ.
ಅವರು ಹೊರತಂದ ಪತ್ರಿಕೆ `ಸುಪ್ರಭಾತ’ದ ಸಂಚಿಕೆಗಳನ್ನು ಅವಲೋಕಿಸಿದರೆ ಈ ಲೇಖಕಿ ಸ್ತ್ರೀ ಎಚ್ಚರದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕೆಲವು ಪ್ರಸಿದ್ಧ ಲೇಖಕಿಯರನ್ನು ಬೆಳಕಿಗೆ ತಂದ ಪತ್ರಿಕೆ, ಸುಪ್ರಭಾತ. ಶ್ರೀಮತಿ ಆನಂದಿ ಸದಾಶಿವರಾವ್, ದಿ. ಶ್ರೀಮತಿ ಎಂ.ಕೆ. ಜಯಲಕ್ಷ್ಮಿ, ಶ್ರೀಮತಿ ಲೀಲಾಬಾಯಿ ಕಾಮತ್ ಮೊದಲಾದವರು ಅದರಲ್ಲಿ ಬರೆಯುತ್ತಿದ್ದರು. ಅದರಲ್ಲಿ ಪ್ರಕಟವಾದ ಅಂದಿನ ದಿನದಲ್ಲಿ ಅಪರೂಪವೆನಿಸುವ ಕೆಲ ಬರಹಗಳನ್ನು ಕಂಡರೆ ಅವುಗಳನ್ನು ಬರೆದ ಲೇಖಕಿಯರೆಲ್ಲ ಎಲ್ಲಿ ಮಾಯವಾದರೋ ಎಂದು ಧೇನಿಸುವಂತಾಗುತ್ತದೆ. ಪತ್ರಿಕೆಗೆ ಚಂದಾ ಕೇಳಲು ಹೋದರೆ ಮಹಿಳೆಯರು `ನಮ್ಮ ಸಾಹಿತ್ಯವೆಂದರೆ ಕುತ್ತುಂಬರಿ ಜೀರಿಗೆ’ ಎಂದದ್ದನ್ನು ಸುಪ್ರಭಾತದ ವಿಚಾರ ಬಂದಾಗೆಲ್ಲ ನೆನೆದು ನಗುತ್ತಿದ್ದರು ರಾಜವಾಡೆ. ಪತ್ರಿಕೆಯನ್ನು ನಡೆಸಲು ಎದುರಾಗುತ್ತಿದ್ದ ಕಷ್ಟಗಳನ್ನೆಲ್ಲ ಶ್ರೀ ಗೋವಿಂದ ಪೈಯವರಿಗೆ ಹೇಳಿಕೊಳ್ಳುತ್ತ, ಅವರು ಕೊನೆಗೆ ರಚನಾತ್ಮಕ ಶಕ್ತಿ ಉಳ್ಳವರು ಪತ್ರಿಕೆ ನಡೆಸಬಾರದು, ನಿಲ್ಲಿಸು ಎಂದದ್ದರಿಂದ ಅವರ ಮಾತಿಗೆ ಗೌರವ ಕೊಟ್ಟು, ಅದಾಗಲೇ ಚಂದಾ ವಸೂಲಿ ಆಗಿದ್ದರಿಂದಾಗಿ ಒಂದು ವರ್ಷವನ್ನು ಪೂರ್ತಿಗೊಳಿಸಿ, ಹನ್ನೆರಡು ಸಂಚಿಕೆ ಮುಗಿಯುತ್ತಲೇ `ಸುಪ್ರಭಾತ’ವನ್ನು ನಿಲ್ಲಿಸಿದರಂತೆ. ಗೋವಿಂದ ಪೈ ಅವರನ್ನು ರಾಜವಾಡೆಯವರು ಕರೆಯುತ್ತಿದ್ದುದು `ಗುರುದೇವ’ ಅಂತಲೇ. ಪ್ರಾಯಶ; ಅಂದು ಅತ್ಯಂತ ಪ್ರೀತಿ ಹಾಗೂ ಕಾಳಜಿಯಿಂದ, ಅವರನ್ನು ಯಥಾವತ್ ಅರಿತು, ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಒಳಗೊಳಿಸಿಕೊಂಡು, ಹೊಣೆಯಿಂದ ನಡೆಸಿಕೊಂಡ ಅವರ ಕಾಲದ ಬರಹಗಾರರೆಂದರೆ ರಾಷ್ಟ್ರಕವಿ ಗೋವಿಂದ ಪೈ ಒಬ್ಬರೇ. ಸ್ಥಳೀಯವಾಗಿ ಮೆಚ್ಚಿ ಮಾತಾಡುತ್ತಿದ್ದ ಲೇಖಕರು, ಅವರ ಸಮಕಾಲೀನ ಕತೆಗಾರರಾದ `ಕವಿರಾಜಹಂಸ’ ಬಿರುದಾಂಕಿತ, ಶ್ರೀ ಸಾಂತ್ಯಾರು ವೆಂಕಟರಾಜ.
ಮೂಲ್ಕಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಿದ್ದನ್ನು ಕೇಳಿದ ದೊಡ್ಡ ಸಾಹಿತಿಯೊಬ್ಬರು `ಆ ಹೆಂಗಸು ಇನ್ನೂ ಇದೆಯೆ?’ ಎಂದು ಕೇಳಿದ್ದರಂತೆ. ಈ ಪ್ರಶ್ನೆ ಅವರ ಮನದಲ್ಲಿ ಕೊನೆಯವರೆಗೂ ನೆಟ್ಟುಕೊಂಡೇ ಇತ್ತು. ಅದನ್ನು ತಂದು ಅವರ ಕಿವಿಗೆ ಹಾಕಿದ ಪರದುಃಖ ಸಂತೋಷಿಗಳಾದರೂ ಯಾರೋ. ಕೇಳಿ ರಾಜವಾಡೆ ಸಂಕಟ ಪಟ್ಟಿದ್ದರು. `ಹಾಗೆ ಅವರು ಕೇಳಿದ್ದು ನಿಮ್ಮನ್ನು ಛೇಡಿಸುವ ಅಥವಾ ಅಗೌರವಿಸುವ ಉದ್ದೇಶದಿಂದ ಇರಲಿಕ್ಕಿಲ್ಲ. ಖಂಡಿತ ಆತ ಅಂಥವರಲ್ಲ. ಅದು ಮಾತಿನಂಶವಾಗಿ ಹೊಮ್ಮಿದ ಅಚ್ಚರಿ ಆಗಿರಬಹುದು’ ಅಂತ ಸಮಾಧಾನ ಮಾಡಿದರೆ ಆಕೆಗೆ ಸಮಾಧಾನ ಆಗಬೇಕಲ್ಲ! `ಆ ಮಾತು ಅಷ್ಟು ಅಮಾಯಕವಲ್ಲರೀ. ತನ್ನ ಕಾಲದ ಲೇಖಕಿಯೊಬ್ಬಳ ಕಡೆಗೆ ಯಾವ ಗಮನವನ್ನೂ ಕೊಡದೆ ತಮ್ಮ ನೇರಕ್ಕೆ ತಮ್ಮದೇ ವರ್ತುಲದವರೊಂದಿಗೆ ಬರಕೊಂಡು ಹೊರಟವರು ಮಾತ್ರ ಹೀಗೆ ಉದ್ಗರಿಸಲು ಸಾಧ್ಯ. ಅದೊಂದು ಬಗೆಯ ನಿರ್ಲಕ್ಷ್ಯ, ಅನಾದರ. ಅಲ್ಲವೆಂದರೆ ನಾನವರಿಗೆ `ಆ ಗಂಡಸು ಇನ್ನೂ ಇದೆಯೆ?’ ಅಂತನ್ನಲು ಯಾಕೆ ಸಾಧ್ಯವಾಗುವುದಿಲ್ಲ?’ ಎಂದು ಮರುಪ್ರಶ್ನೆ ಹಾಕಿದ್ದರು ರಾಜವಾಡೆ. `ದಾಕ್ಷಿಣ್ಯಕ್ಕೋ ಸಹಾನುಭೂತಿಗೋ ನಾಲ್ಕು ಸಾಲು ಕವನದಲ್ಲೋ ಎದುರಾದಾಗ ಬೆನ್ನುತಟ್ಟಿಯೋ ಮಾತಾಡಿಬಿಟ್ಟರೆ ಸಾಲದು. ಆ ಕಾಲದಲ್ಲಿ ದೊಡ್ಡ ಲೇಖಕರೂ ವಿಮರ್ಶಕರೂ ಇದ್ದರು ನಿಜ; ಆದರೆ ನಮ್ಮನ್ನು ಅವರು ಸೇರಿಸಿಕೊಳ್ಳಲೇ ಇಲ್ಲ. ಈ ಲೆಕ್ಕದಲ್ಲಿ ಮಾತ್ರ ಅವರೆಲ್ಲ ಬರೀ ಬೂಸು. ಯಾವುದಕ್ಕೂ ನಮಗವರು ಒದಗಿ ಬರಲಿಲ್ಲ. ಆಗ ನಮಗೆ ಅದರ ಅಗತ್ಯವಿತ್ತು’ – ಎಂದಿದ್ದರು.
ಪ್ರತಿಭೆ ಇರುವವರು ಯಾರ ಪ್ರೋತ್ಸಾಹ ಶಿಫಾರಸ್ಸನ್ನೂ ಕಾಯದೆ ಬರೆಯುತ್ತಾರೆ ಅಂತ ಸುಲಭದಲ್ಲೊಂದು ಮಾತು ಒಗೆದು ಬಿಡಬಹುದು. ಆದರೆ ರಾಜವಾಡೆಯರ ಮಾತಿನಲ್ಲಿ ಅಡಗಿರುವ ಸೂಕ್ಷ್ಮಾಂಶಗಳನ್ನು ಎಂದಿಗೂ ಅಲ್ಲಗಳೆಯುವಂತಿಲ್ಲ, ಅಲ್ಲವೆ? ಯಾರ ಸತ್ಸಹವಾಸದಿಂದ ದೇಶಾಭಿಮಾನ, ಭಾಷಾಭಿಮಾನ, ಕರ್ತವ್ಯ ಜ್ಞಾನ, ಗುರುಹಿರಿಯರಲ್ಲಿ ಭಕ್ತಿ ಮೊದಲಾದ ಸದ್ಗುಣಗಳ ಅನುಭವವಾದವೋ ಆ `ದೇವ’ ನ ದಿವ್ಯ ಪಾದಪದ್ಮಗಳಲ್ಲಿ ದಾಸಿಯು ಈ ಅಲ್ಪ ಕೃತಿಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿರುವಳು. ಎಂಬ ಅರ್ಪಣೆಯಿರುವ ಅವರ ಆಹುತಿ ಇತ್ಯಾದಿ ಕತೆಗಳು (೧೯೩೮) ಸಂಕಲನಕ್ಕೆ ಮಾತ್ರ (ನನ್ನ ತಿಳಿವಿಗೆ ಬಂದಂತೆ) ಅವರು ಸ್ವತ: ಮುನ್ನುಡಿ ಬರೆದಿದ್ದರೆ ಕದಂಬ (೧೯೪೭) ಸಂಕಲನಕ್ಕೆ ಶ್ರೀ ಎಸ್. ವೆಂಕಟರಾಜ ಅವರ ಮುನ್ನುಡಿಯಿದೆ. ಈ ಎರಡೂ ಸಂಕಲನಗಳು ಶ್ರೀಮತಿ ಸರಸ್ವತೀಬಾಯಿ ರಾಜವಾಡೆ ಎಂದು ಅವರ ಪೂರ್ಣ ಹೆಸರಿನಲ್ಲೆ ಪ್ರಕಟಗೊಂಡಿದೆ. `ಪುಣ್ಯಫಲ’ ಕಿರುಕಾದಂಬರಿ ಪ್ರಕಟವಾಗುವ ಹೊತ್ತಿಗೆ ಅವರು `ಗಿರಿಬಾಲೆ’ಯಾಗಿದ್ದರು. ಮುಂದೆ ೧೯೬೬ರಲ್ಲಿ ಹೊರಬಂದ ಶ್ರೀಮದ್ಭಾವೀ ಸಮೀರ ಶ್ರೀ ವಾದಿರಾಜ ಗುರುವರ ಕೃಪಾತರಂಗಗಳೆಂಬ ಎರಡು ಭಾಗಗಳ ಕೀರ್ತನಸಂಕಲನಗಳಿಗೆ ಉಡುಪಿಯ ಅಷ್ಟಮಠಗಳ ಶ್ರೀ ವಿಶ್ವೇಶ್ವರತೀರ್ಥರು, ಶ್ರೀ ವಿದ್ಯಾವಾರಿನಿಧಿ ತೀರ್ಥರು, ಶ್ರೀ ಸುಜ್ಞಾನೇಂದ್ರ ಶ್ರೀಪಾದಂಗಳವರು, ಶ್ರೀ ವಿಶ್ವೋತ್ತಮ ತೀರ್ಥರು `ಅನುಗ್ರಹ ವಚನ’ಗಳನ್ನು ಬರೆದಿದ್ದಾರೆ.
ರಾಜವಾಡೆಯವರ ಬರಹಗಳ ಮುಖ್ಯ ವಸ್ತುವೇ ಸ್ತ್ರೀ. ಅವರ ಎಲ್ಲ ನಿರ್ಣಯಗಳು, ತರ್ಕ ತಾಕಲಾಟಗಳು, ಸಂಕಟ ಸಂತೋಷ ದುಃಖಗಳು ಸಮಾನತೆಯ ವಾದಗಳು ನಿಂತಿರುವುದು ಆಧ್ಯಾತ್ಮಿಕ ಮತ್ತು ಮಾನವೀಯತೆಯ ತಳಹದಿಯ ಮೇಲೆ. ಆಧ್ಯಾತ್ಮದ ಕಡೆ ವಾಲಿಕೊಂಡಿದ್ದೂ ಕುರುಡಾಗಿ ಶರಣಾಗದ ಸತ್ಯನಿಷ್ಠುರ ಮನಸ್ಸು ಅವರದು. ಎಂತಲೇ ಮಠದ ಸ್ವಾಮಿಗಳ ಕುರಿತು ವಸ್ತುನಿಷ್ಠವಾಗಿ, ನಿರ್ಭಯವಾಗಿ ಅವರು ಬರೆಯಬಲ್ಲವರಾಗಿದ್ದರು. ಬದುಕಿನ ಕಟು ಸತ್ಯಗಳನ್ನು ಕಂಡ ಸ್ವತಃ ಉಂಡ ಈ ಅಪರೂಪದ ಅನುಭವಿಯ ಅಂಜಿಕೆ ಹಿಂಜರಿಕೆಗಳ ಗುರುತೇ ಅರಿಯದ ನಡೆ-ನುಡಿ, ಬದುಕಿಗೆ ಅವರು ತನ್ನನ್ನು ಒಡ್ಡಿಕೊಳ್ಳುತ್ತಿದ್ದ ರೀತಿ, ಸಮಾಜದ ಸಾಮಾನ್ಯಗ್ರಹಿಕೆಗೆ ಎಟಕುತ್ತಿರಲಿಲ್ಲ. ಜನ ಅವರ ಕುರಿತು ಹಿಂದಿನಿಂದ `ಸಂಕುಚಿತ ಲೋಕಸಹಜ’ದ ಟೀಕೆ-ಟಿಪ್ಪಣಿ, ಅಬದ್ಧ ಅಭಿಪ್ರಾಯಗಳನ್ನು ತಮ್ಮ ತಮ್ಮೊಳಗೇ ಆಡಿಕೊಳ್ಳುತ್ತಿದ್ದರಂತೆ. ಆದರೆ ಅವರು ಎದುರು ಬಂದರೆಂದರೆ ಒಂದು ಶಬ್ದ ಟೀಕಿಸುವ ಧೈರ್ಯ ಯಾರೊಬ್ಬರಿಗೂ ಇರದೆ ಅಂದ್ ಅಕ್ಕಾ, ಅತ್ತ್ ಅಕ್ಕಾ ((ಹೌದು ಅಕ್ಕಾ, ಅಲ್ಲ ಅಕ್ಕಾ) ಎಂದು ವಿನೀತರಾಗುತ್ತಿದ್ದರಂತೆ.
ಆಶ್ಚರ್ಯವೆಂದರೆ, ದಿಟ್ಟೆಯಾಗಿಯೂ ಅನುಭವಿಯಾಗಿಯೂ ತನ್ನೊಳಗಿನ ಲೇಖಕಿಯನ್ನು ಸ್ವತಂತ್ರವಾಗಲು ಮಾತ್ರ ಅವರೇ ಬಿಡಲಿಲ್ಲ. ಅರವತ್ತರ ದಶಕದಲ್ಲಿ ತಮ್ಮ ಅದುವರೆಗಿನ ಚಟುವಟಿಕೆಗಳಿಂದ ಸ್ವಯಂ ನಿವೃತ್ತಿ ಹೊಂದಿದರು. ಸಂಪತ್ತನ್ನೆಲ್ಲಾ ಮಾರಿ ಉಡುಪಿ ಶ್ರೀ ಕೃಷ್ಣನಿಗೆ ಸತತ ಮೂರು ಸಪ್ತೋತ್ಸವ ನಡೆಸಿದರು. ತನ್ನ ಮನೆತನಕ್ಕೆ ಬಂದ ಸಾವಿರದಿನ್ನೂರು ವರ್ಷಗಳಷ್ಟು ಹಳೆಯದಾದ ಶ್ರೀ ಶಾರದಾಂಬಾ ವಿಗ್ರಹವನ್ನು ಉಡುಪಿಯ ಚಿಟ್ಪಾಡಿಯಲ್ಲಿ ಸ್ಥಾಪಿಸಿ ಸ್ವಂತ ವೆಚ್ಚದಲ್ಲಿ ದೇಗುಲ ನಿರ್ಮಿಸಿದರು. ಶಾರದೆಯ ಕೈಂಕರ್ಯದ ತನ್ನ ರೀತಿಯನ್ನೇ ಪಲ್ಲಟಿಸಿಕೊಂಡುಬಿಟ್ಟರು. ಲೇಖಕಿ `ಗಿರಿಬಾಲೆ’ಯನ್ನು ನಿಧಾನವಾಗಿ ಮರೆಮಾಡಿ ಕೀರ್ತನಕಾರ್ತಿಯನ್ನು ಆವಾಹನೆ ಮಾಡಿಕೊಂಡರು. ಅಂದಿನಿಂದ ಆಕೆಯ ಜೀವನ ವಿಧಾನವೇ ಬದಲಾಯಿತು.
ಇವೆಲ್ಲ ಬದುಕಿಗೆ ಮೇಲಿಂದ ಮೇಲೆ ಒದಗಿ ಬಂದ ಅನೇಕ ಘಟನಾವಳಿಗಳಿಂದಾಗಿ ಎಂದುಕೊಂಡರೂ ಆ ಘಟನಾವಳಿಗಳ ಪೂರ್ತಿ ವಿವರಗಳನ್ನೂ ಸ್ವತಃ ತಾನೆ ಸಮಾಧಿ ಮಾಡಿದರು, ವಿಶಿಷ್ಟ ಮಾದರಿಯಾಗಿ ಮುಂಚೂಣಿಯಲ್ಲಿ ನಿಲ್ಲಬಹುದಾಗಿದ್ದ ಕನ್ನಡದ ಲೇಖಕಿಯೊಬ್ಬಳು ತನ್ನೊಳಗೇ ಹೀಗೆ ಕರಗಿ ಹೋದಳು.ಅವರು ಬಹಳ ಆಸ್ಥೆಯಿಂದ ಕಟ್ಟಿಸಿದ, ಈಗಲೂ ಕುಂದಿಲ್ಲದ ಸುಂದರ ವಿನ್ಯಾಸದ, ಅವರ ಮನೆ ದೇವಸ್ಥಾನದ ಪಕ್ಕದ ಕಂಪೌಂಡಿನಲ್ಲಿಯೇ ಇದೆ, ಹಾಗೆಯೇ, ತದ್ವತ್. ನನಗವರು ಸಿಗುವ ಕಾಲಕ್ಕೆ ದೇಗುಲದ ಒಂದು ಬದಿಯಲ್ಲಿರುವ ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಗುಡಿಯ ಜವಾಬ್ದಾರಿಯನ್ನು ಒಂದು ಕುಟುಂಬಕ್ಕೆ ವಹಿಸಿ ಆ ಕುಟುಂಬ ತನ್ನದೇ ಎಂಬಂತೆ ಅವರ ಜೊತೆಗಿದ್ದರು. ದೇವಸ್ಥಾನಕ್ಕೆ ಬಂದು ಹೋಗುವವರೊಡನೆಲ್ಲ ಆತ್ಮೀಯವಾಗಿ ಹರಟುತ್ತ ಗುರುತಿಲ್ಲದವರನ್ನೂ ಮಾತಾಡಿಸಿ ಹತ್ತಿರಾಗುತ್ತ ತನ್ನವರೆಂದು ರಕ್ತಸಂಬಂಧದ ಮರೆ ಹಿಡಿದು ಕರೆಯಲು ಯಾರೂ ಇಲ್ಲದೆಯೂ ಆ ನೋವನ್ನು ಮೀರಿ ನಿಂತವರಂತಿದ್ದರು. `ಸಣ್ಣದಿನಲ್ಲಿ ಕಡು ಬಡತನದಲ್ಲಿದ್ದಾಗ ಕಾಪು ಮಾರಿಯಮ್ಮಾ, ನನಗೆ ತುಂಬ ದುಡ್ಡು ಕೊಡು, ವಿದ್ಯೆ ಕೊಡು, ಕಲೆಕ್ಟರ್ ಗಂಡನ್ನ ಕೊಡು ಅಂತ ಬೇಡಿಕೊಂಡಿದ್ದೆ, ಹೆಡ್ಡಿ ನಾನು, ಮಗು ಕೊಡು ಅಂತ ಕೇಳಲೇ ಇಲ್ಲ. ದೇವಿಗಾದರೂ ಅಷ್ಟು ತಿಳಿಯಬೇಡವೇ, ಸಣ್ಣ ಹುಡುಗಿ ಪಾಪ, ಅದೆಲ್ಲ ಅವಳ ತಲೆಯಲ್ಲಿ ಇಲ್ಲ ಅಂತ. ನೋಡಿ ಅವಳು, ಮಗುವನ್ನು ಕೊಡಲೇ ಇಲ್ಲವಲ್ಲ!’ ಎಂದು ನಗುತ್ತಿದ್ದರು.
*****
ರಾಜವಾಡೆಯವರ ಬೆಳಗು ಆರಂಭವಾಗುವುದೇ ದೇವಸ್ಥಾನಕ್ಕೆ ಬಂದು ಸ್ವಂತ ರಚನೆಯ ಶಾರದಾ ಸುಪ್ರಭಾತ ಹೇಳುವ ಮೂಲಕ. `ಗಿರಿಬಾಲೆ’ ಅಂಕಿತದಲ್ಲಿ ಅವರು ಬರೆದ ಅಸಂಖ್ಯ ಕೀರ್ತನೆಗಳು ಸದಾ ಅವರ ನಾಲಗೆಯ ಮೇಲೆಯೇ ಇದ್ದುವು. ಮಾತಾಡುತ್ತಿದ್ದ ಹಾಗೆ ಇದ್ದಕ್ಕಿದ್ದಂತೆ ಅವರು ನಮ್ಮ ನಡುವೆ ದೇವಿಯೂ/ದೇವರೂ ಖಂಡಿತವಾಗಿಯೂ ಕುಳಿತಿರುವಳೋ/ನೋ ಎಂಬಂಥ ಹರ್ಷದಲ್ಲಿ ತಟಕ್ಕನೇ ತನ್ನ ಕೀರ್ತನೆಗೆ ಹಾರಿ, ತಾಳ ಹಾಕುತ್ತ ರಾಗವತ್ತಾಗಿ ಹಾಡಿ ಬಿಡುತ್ತಿದ್ದರು. ಹಾಡುತ್ತ ನಡುವೆ ನಿಲ್ಲಿಸುವರು `ಇದು ನನ್ನ ಕಂಠವೆ? ಛೆ. ಎಷ್ಟು ಚೆನ್ನಾಗಿತ್ತು, ಹೇಗಾಗಿ ಬಿಟ್ಟಿದೆ’ ಉದ್ಗರಿಸುವರು. (ತನ್ನ ಈಚಿನ ಫೋಟೋ ಕಂಡು ಝುಮ್ಮ ಮೈ ನಡುಗಿ, `ಹೊಹೊ, ಇದು ಯಾರು, ನಾನೆ? ಹೇಗಿದ್ದೆ, ಹೇಗಾದೆ’ ಎಂದು ನಕ್ಕಿದ್ದರು ರಾಜವಾಡೆ. ಫೋಟೋ ಮೇಲಿನ ದೃಷ್ಟಿ ಕೀಳದೆ `ಇಹ ಎನ್ನುವುದರ ಮೂಲವೇ ದೇಹ. ಅದರ ಮೇಲಿನ ಮಮತೆ ಯಾವಾಗ ಹೋಯಿತೋ ಆಗಲೇ ಇಹದ, ಸೌಂದರ್ಯದ ಭ್ರಮೆಯೂ ಮಾಯವಾಗುತ್ತದೆ’ ಎಂದಿದ್ದರು.) ಬೆಂಗಳೂರಿನಲ್ಲಿದ್ದ ಕಾಲದಲ್ಲಿ ಸಂಗೀತ ಕಲಿತು ರೂಢಿಸಿಕೊಂಡಿದ್ದ ಕವಿ ಆಕೆ, ಸಂಜೆ ದೇವಸ್ಥಾನಕ್ಕೆ ಬಂದ ಭಕ್ತರಿಗೂ ತನ್ನ ಕೀರ್ತನೆಗಳನ್ನು ಕಲಿಸಿ ಹಾರ್ಮೋನಿಯಂ ನುಡಿಸುತ್ತ ಹಾಡಿಸುತ್ತಿದ್ದರು. ಇವತ್ತಿಗೂ ಅವರಿಂದ ಕಲಿತ ಹಾಡುಗಳನ್ನು ಹಾಡುವವರು ಅನೇಕರಿದ್ದಾರೆ.
ಒಂದು ಗಳಿಗೆ ಸುಮ್ಮನಿರುವ ಜೀವವಲ್ಲ ಅವರದು. ಹೂ ವಿಂಗಡಿಸಬೇಕು, ಕಟ್ಟಬೇಕು. ನಡುನಡುವೆ ಗಂಟೆ ಸದ್ದಾಗುತ್ತದೆ. ಯಾರವರು ಬಂದವರು, ದೇವಸ್ಥಾನಕ್ಕೆ ಜನ ಬಂತು ಜನ ಹೋಯಿತು ಅಂತಿರಬಾರದು. ಬಂದವರನ್ನು ತಾನು ವಿಚಾರಿಸಬೇಕು. ಏನು ಕಷ್ಟ ಕೇಳಬೇಕು. ಏನಿಲ್ಲ ಸುಮ್ಮನೆ ಬಂದೆ ಎಂದವರಿಗೆ ಹ್ಞಾಂ ಒಳ್ಳೆಯದಾಗಲಿ ಎನ್ನಬೇಕು. ಗುರುತಿಲ್ಲದವರು ಬಂದರೆ ಒಂದು ಕ್ಷಣ ಅವರನ್ನೇ ನಿಟ್ಟಿಸಿ ಅವರು ಪ್ರದಕ್ಷಿಣೆ ನಮಸ್ಕಾರ ಎಲ್ಲ ಮುಗಿಸಿದ್ದೇ `ನೀವು ಯಾರು ತಿಳಿಯಲಿಲ್ಲ’ ಎಂದು ಪರಿಚಯಮಾಡಿಕೊಳ್ಳಬೇಕು, ಅವರ ಮುಜುಗರ ಓಡಿಸಿ ಕಷ್ಟವೇನೆಂದು ತಿಳಿದು `ತಾಯಿಯಿದ್ದಾಳೆ, ಧೈರ್ಯವಾಗಿರಿ’ ಎನ್ನಬೇಕು. ಅವರು ಹೊರಟು ಹೋಗುತ್ತಲೆ ಗಂಭೀರ. ತನ್ನ ಕೆಲಸಗಳಲ್ಲಿ ಮಗ್ನ. ಪೂಜೆಗೆ ಸನ್ನೆ ಮಾಡುವ ಶ್ರದ್ಧೆ. ಪೂಜೆಯಾಗುವಾಗ ಶಂಖ ಊದುವ ಪಟ್ಟ ಅವರಿರುವವರೆಗೂ ಅವರದೇ. (ಅವರು ಕೆನ್ನೆಯಲ್ಲಿ ಗಾಳಿ ಬುರುಡೆ ಉಬ್ಬಿಸುತ್ತ ತಗ್ಗಿಸುತ್ತ ಶಂಖ ಊದುವ ಫೋಟೋವನ್ನಾದರೂ ತೆಗೆದಿಟ್ಟುಕೊಂಡೆನೇ! ಈಗ ಎಷ್ಟು ಅನಿಸುತ್ತಿದೆ. ತೆಗೆಯದೆ ಅದು ನನ್ನ ಮನದಲ್ಲಿಯೇ ಉಳಿದು ಹೋಯಿತು. ವ್ಯಕ್ತಿ ಜೀವಂತವಿರುವಾಗ ಮರಣದ ನೆನಪೇ ಆಗುವುದಿಲ್ಲವಲ್ಲ; ಅವರ ಕುರಿತು ಇತರರಿಗೂ ಮುಂದಿನ ಪೀಳಿಗೆಗೂ ಸಾಧ್ಯವಾದಷ್ಟೂ ತಲುಪಿಸುವ ಹೊಣೆಯ ಮತ್ತು ಖುಶಿಯ ನೆನಪೂ.) ಪೂಜೆಯಿಲ್ಲದ ಹೊತ್ತಲ್ಲಿ ಅವರು ಮೂರು ಬಾರಿ ಬಿಡದೆ ಗಂಟೆ ಹೊಡೆದರೆಂದರೆ ಅವರು ಸಾಕಿಕೊಂಡ ಹುಡುಗ (ಈಗ ವಯಸ್ಕ) ಓಡೋಡಿ ಬರುತ್ತಾನೆ. ಏನು ಬೇಕು ಎಂದು ಎದುರು ನಿಲ್ಲುತ್ತಾನೆ. ಇಂದ ಮಣಿ ಸುರ್‍ಮಣ್ಯ ಎಂದು ರಾಜವಾಡೆ ಅವನನ್ನು ಕರೆದ ಉದ್ದೇಶ ಹೇಳುತ್ತಾರೆ. ಕರೆವ ತನ್ನ ಕೋಡ್, ಹೇಗಿದೆ! ಎಂದು ಅಲ್ಲಿ ಆ ಹೊತ್ತಿಗೆ ಜೊತೆಗಿರುವವರೊಡನೆ ಕೇಳುತ್ತ ಕಣ್ಣಕುಡಿಯಲ್ಲೇ ನಗೆ ಮಿಂಚಿಸುತ್ತಾರೆ. ಮಾತಾಡುತ್ತಿದ್ದಂತೆ ಕುಂಕುಮಾರ್ಚನೆಯವರು ದುಡ್ಡು ಕೊಡುತ್ತಾರೆ. ಚಿಲ್ಲರೆ ವಾಪಾಸು ಕೊಡಬೇಕು. ಅವರು ಯಾವತ್ತೋ ಹೇಳಿಕೊಂಡ ಹರಕೆ ಸಫಲವಾಯಿತೇ ಕೇಳಬೇಕು. ನಡುವೆ `ತ್ರಿಮಧುರ’ ಮಾಡಿಸುವ ಜನರಲ್ಲಿ ಮಾತಾಡಬೇಕು. ಅಲ್ಲಿ ಹೊಸಬರಿದ್ದರೆ ತ್ರಿಮಧುರ ಮಾಡಿಸಿದರೆ ಸಂತರ್ಪಣೆ ಮಾಡಿಸಿದಷ್ಟು ಪುಣ್ಯ ಅಂತೆಲ್ಲ ವಿವರಿಸಬೇಕು. ಅಷ್ಟರಲ್ಲಿ ಉದ್ದಜಡೆಯ ಹುಡುಗಿಯೊಬ್ಬಳು ಬರುತ್ತಾಳೆ. ಅವಳಿಗೆ ಮರುದಿನ ಮದುವೆ ನಿಶ್ಚಯ. ದೇವಿಯ ಕೃಪೆಯಿಂದಲೇ ಅಕಸ್ಮಾತ್ ಸಂಬಂಧ ಕೂಡಿಬಂದ ಕಥೆ ಹೇಳಬೇಕು. ಹೇಳುತ್ತಿರುವಾಗಲೇ ಅಲ್ಲಿಗೊಂದು ಜನ ಬರುತ್ತದೆ. ಹೋಯ್ ಎಂಚಿನ? ಎನ್ನುತ್ತ ಅವರ ಮನೆಯ ಹಟ್ಟಿಗೆ (ಯಾರೋ) ಕಲ್ಲುಬೀಸುವುದು ನಿಂತಿತೇ ತಿಳಿಯಬೇಕು. ಅವರ ಮನೆ ಮಾಡಿಗೆ ಕಲ್ಲು ಬೀಳುವ ಕತೆ, ಅದು ನಿಂತ ಕತೆ- ಸ್ವತಃ ತಾನು ಹೇಳದೆ ಆ ಆಗಂತುಕರೇ ಹೇಳುವಂತೆ ಮಾಡಿ, ಕೇಳಿ! ಎಂಬಂತೆ ಹುಬ್ಬೇರಿಸಿ ಇಳಿಸುವ ತಂತ್ರವೂ ಅವರಲ್ಲಿದೆ.
ಒಂದು ವಿಚಿತ್ರ. ಆ ಯಾರನ್ನೇ ಆಗಲಿ ರಾಜವಾಡೆ ಪರಿಚಯ ಮಾಡುವ ಕ್ರಮವೆಂದರೆ ಅವರ ಉಳಿದೆಲ್ಲ ವಿವರಗಳೊಂದಿಗೆ ಜಾತಿಯನ್ನೂ, ಸಾಲದೆಂಬಂತೆ ಜಾತಿಯ ಒಳವಿಭಾಗವನ್ನೂ ಸ್ಪಷ್ಟವಾಗಿ ಸೇರಿಸಿಯೆ. ನನ್ನನ್ನು ಪರಿಚಯ ಮಾಡುವಾಗ ಮರೆಯದೆ `ಇವರು (ಬ್ರಾಹ್ಮಣರೆಂದರಷ್ಟೇ ಸಾಲದು) ಕೋಟಬ್ರಾಹ್ಮಣರು’ ಅಂದಾಗಲೇ ಸಮಾಧಾನ. ತಾನು (ಕೊಂಕಣೇರಲ್ಲಿ) ರಾಜಾಪುರಿ ಕೊಂಕಣಿ ಎಂದು ತಿಳಿಸುವುದೂ ಅವರೇ. ತಮ್ಮ ಟೀಚರುಗಳು ಆಳುಗಳು ಮುಂತಾದವರ ಕುರಿತು ಹೇಳುವಾಗ ಜಾತಿಯನ್ನೋ ಸಮುದಾಯವನ್ನೋ ಹೇಳದೆ ಮುಂದೆ ಹೋಗರು ಅವರು. ಅದಾದರೂ ಹೇಗೆ, ಎಲ್ಲಿಯೂ ಆ ಕುರಿತ ಕಲ್ಮಷಗೆರೆಯ ಕುರುಹು ಕೂಡ ಇಲ್ಲದಂತೆ. ಅದು ಅವರ ಮಾತಿನ ಬಗೆಯೇ ಆಗಿತ್ತು. ಪ್ರಾಯಶಃ ಅದು ಅಂದಿನ ಮಾತುಗಾರಿಕೆಯ ವಿಧಾನವೂ. ಪಂಡಿತ ಸೇಡಿಯಾಪು ಅವರ ಮಾತಿನಲ್ಲಿಯೂ ನಾನದನ್ನು ಕಂಡಿದ್ದೆ. ವಾಸ್ತವದಲ್ಲಿ ಈ ಇಬ್ಬರೂ `ಧಿಕ್ ಜಾತಿ- ಧಿಕ್ ಕುಲ’ ಎಂದು ಬಾಳಿ ತೋರಿದವರು. ಅವರು ನಿರ್ಗಮಿಸಿದಾಗ ಅವರೊಂದಿಗೆ ಆ ಮಾದರಿ ಮಾತುಕತೆಯ ಸತ್ವಸ್ವಾರಸ್ಯವೇ ಹೊರಟು ಹೋದಂತೆನಿಸಿತು ನನಗೆ.
****
ಈಗ ಈಕೆ ಬರೆಯುವ ಕತೆಗಾರ್ತಿ ಅಲ್ಲ, ಹೇಳುವ ಕತೆಗಾರ್ತಿ. ಕೇಳುವವರಿದ್ದರೆ ಹೇಳುವಲ್ಲಿ ದಣಿವಿಲ್ಲ. ನೀರಸತೆಯಿಲ್ಲ. ಬದಲು, ಕೇಳುವ ಮತ್ತೂ ಕೇಳುವ ಎಂದೆನಿಸುವ ನುಡಿವೈಖರಿ. ಮಾತಿನ ರುಚಿ ಹತ್ತಿತೆಂದರೆ ಬರೆವ ರುಚಿ ತಗ್ಗುತ್ತದೆಯೆ? ರಾಜವಾಡೆಯವರ ಮಟ್ಟಿಗೆ ಇದು ಸತ್ಯ. ಅವರು ಹೇಳುವ ಮಾತಾಡುವ ಆನಂದದಲ್ಲಿ, (ಅಥವಾ ನೆಪದಲ್ಲಿಯೋ) ಹಿಂದಿನ ಆ ಕಥಾಲೇಖಕಿ ಗಿರಿಬಾಲೆಯನ್ನು ಮರೆತೇ ಬಿಟ್ಟಂತಿದ್ದರು. ಅಂದು ಬರೆಯುತ್ತಿದ್ದ ಕಥಾವಸ್ತುಗಳು ಈಗ ಮೌಖಿಕಕಥೆಗಳಾಗಿ ಸಂಪೂರ್ಣ ಬೇರೆ ರೂಪ ಪಡೆದಿದ್ದುವು. ಆಗಲೇ ಹೇಳಿದಂತೆ ಮದುವೆಯಾಗದೆ ಉಳಿದ ಹುಡುಗಿಯರ ಕಥೆ, ಮನೆಗೆ ಕಲ್ಲುಬೀಳುವ ಕತೆ, ಮಕ್ಕಳಾಗದವರ ಕತೆ, ಅವರೆಲ್ಲಾ ತನ್ನ ಶಾರದಾಂಬೆಗೆ ಸಲ್ಲಿಸಿದ ವಿಶೇಷ ಪೂಜೆ ಫಲಪ್ರದವಾದ ಕತೆಗಳಾಗಿ ಮುಕ್ತಾಯಗೊಳ್ಳುತ್ತವೆ. ಹೀಗೆ ಅವುಗಳ ಜಾಡೇ ಬದಲಾಗಿದೆ. ಅಂತೆಯೆ ಕವನಗಳ ಜಾಡೂ ಬದಲಾಗಿ ಆ ಜಾಗದಲ್ಲಿ ಕೀರ್ತನೆಗಳು ರಚನೆಯಾಗಿದ್ದವಷ್ಟೆ?
ಶುಕ್ರವಾರದ ದಿನವಂತೂ ಅವರಿಗೆ ಬಹುರಾತ್ರಿಯವರೆಗೂ ಕೆಲಸ. ಅಂದು ದರ್ಶನ. ದಕ್ಷಿಣಕನ್ನಡ ಜಿಲ್ಲೆ (ಅವಿಭಜಿತ) ಯಲ್ಲಿ ದರ್ಶನದ ಕಟ್ಟಳೆ ಸಾಮಾನ್ಯವಾದರೂ ನನಗೆ ತಿಳಿದಿರುವಂತೆ ಹೀಗೆ ಮಹಿಳೆಯೊಬ್ಬಳು ಪಾತ್ರಿ ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿ, ನೇತಾರಳಾಗಿ, ನಿಂತು ಅದನ್ನು ನಡೆಸಿಕೊಡುವ ಉದಾಹರಣೆ ಇಡೀ ಇಂಡಿಯಾದಲ್ಲೇ ಪ್ರಾಯಶಃ ರಾಜವಾಡೆಯವರದು ಮಾತ್ರ. ದರ್ಶನದ ನೇತಾರರೆಂದರೆ ಯಕ್ಷಗಾನದಲ್ಲಿ ಭಾಗವತರಂತೆಯೇ, ತುಸು ವ್ಯತ್ಯಾಸ ಅಷ್ಟೆ ಅಂತ ನನಗೆ ಗೋಚರವಾದದ್ದೂ ರಾಜವಾಡೆಯವರ `ಭಾಗವತಿಕೆ’ ಕಂಡಾಗಲೇ; ಭಾಗವತಿಕೆಗೆ ಇರುವ ಅದರ ರೂಢಿ ಅರ್ಥದ ಜೊತೆಗೆ ಭಾಗವಹಿಸುವುದು, ಪಾಲುಗೊಳ್ಳುವುದು ಎಂಬ ಅರ್ಥ ಕಾಣಿಸಿದ್ದೂ. ಭಾಗವಹಿಸುವ ಅವರ ರೀತಿಯಾದರೂ ಹೇಗೆ! ದರ್ಶನ ನಡೆಯುವಾಗ ಅನೇಕ ಸಲ ನಾನಲ್ಲಿಗೆ ಹೋಗಿ ಕುಳಿತುಕೊಂಡಿದ್ದೇನೆ. ಸಂಕಟದಲ್ಲಿ ಕಂಗೆಟ್ಟು ಬಂದವರ ಅಳಲನ್ನು ಆಲೈಸಿ, ಪಾತ್ರಿಗೆ ತಲುಪಿಸಿ ಅಲ್ಲಿಂದ ಸಮಾಧಾನವನ್ನು ಇವರಿಗೆ ಮುಟ್ಟಿಸುವಲ್ಲಿ, ಈ ಮಧ್ಯಸ್ಥಿಕೆಯ ಅವಧಿಯಲ್ಲಿ, ಆಕೆಯ ಎಲ್ಲ ಗುಣಗಳೂ ಹೊರಹೊಮ್ಮುತ್ತಿದ್ದುವು. ಅವರ ಪರಮಾನಸ ಪ್ರವೇಶಶಕ್ತಿ, ವ್ಯವಹಾರಜ್ಞಾನ, ಅನುಕಂಪ, ಅಂತಃಕರಣ, ಅಭಿನಯ ಚತುರತೆ, ಕಲ್ಪಕಶಕ್ತಿ, ಸ್ತ್ರೀಪರ ದೃಷ್ಟಿ ಎಲ್ಲದರ ದರ್ಶನವೂ ಆಗುತಿತ್ತು. ಆ ಹೊತ್ತಿನಲ್ಲಿ ಆಕೆ ಲೇಖಕಿ, ಗೆಳತಿ, ನಕ್ಕು ನಗಿಸುವ ಮೃದುಹಾಸ್ಯಗಾತಿ, ವಿಮರ್ಶಕಿ, ದೇವರಿಗೇ ಗದರಿ ಆಶೀರ್ವಾದ ವಸೂಲು ಮಾಡುವ ಜೋರಿನ ಭಕ್ತೆ, ಅಕ್ಕ, ತಾಯಿ ಎಲ್ಲವೂ. `ತಾಯಿ, ಈ ಹುಡುಗಿ ಎಷ್ಟು ದಿನದಿಂದ ನಿನ್ನ ಸನ್ನಿಧಾನಕ್ಕೆ ಬಂದು ದುಃಖ ಹೇಳಿಕೊಳ್ಳುತಿದ್ದಾಳೆ. ಒಮ್ಮೆ ಪರಿಹಾರ ಮಾಡಬಾರದೆ’ ಅಂತ ನೇರವಾಗಿ ತಾಯಿ ಶಾರದಾಂಬೆಯ ಜೊತೆ ಏಕಮುಖ ವಾದಕ್ಕಿಳಿಯುತ್ತಿದ್ದರು ಅವರು. ಅವಳ ಪರವಾಗಿ ಆ ಹುಡುಗಿಗೆ ತಾನೆ ಸಾಂತ್ವನದ ಮಾತನ್ನು ಹೇಳುತ್ತ ಅಮ್ಮ ನಡೆಸಿ ಕೊಡುತ್ತಾಳೆ ಹೆದರ ಬೇಡ ಎಂದು ಭರವಸೆಯನ್ನೂ ಕೊಡುತ್ತಿದ್ದರು. ಆ ಹೊತ್ತಿನ ಅವರ ಮನಮುಟ್ಟುವ ಭಾಷೆ, ಸಂತೈಕೆಯ ದನಿ, ಒಮ್ಮೆ ಕೇಳಿದವರು ಮರೆವಂಥದಲ್ಲ.
ಪ್ರತಿ ಸಲವೂ ನಮಗವರು ಹೊಸಹೊಸತಾಗಿ ಕಾಣುವ ಹೊತ್ತು ಅದು; ಆಕೆ ಅಪ್ಪಟ ಸೃಜನಶೀಲೆ ಎಂಬುದಕ್ಕೆ ಸಾಕ್ಷಿಯೂ. ಹೆಂಗಸು ಅಂಜುಕುಳಿಯಾಗಿದ್ದರೆ, ತನ್ನೊಳಗಿನ ಶಕ್ತಿಯನ್ನೇ ಮರೆತು ದೈನ್ಯಕ್ಕೆ ತನ್ನನ್ನು ಒಡ್ಡಿಕೊಂಡಿದ್ದರೆ, ಸಹಾನುಭೂತಿಗೆ ಹಾತೊರೆದು, ಬುದ್ಧಿವಾದ ಹೇಳಿಯೂ ಎಚ್ಚರಾಗದಂತಿದ್ದರೆ, ಗೊಂಬೆಗಳಂತೆ ಬದುಕುತ್ತಿದ್ದರೆ ರಾಜವಾಡೆಯವರಿಗಂತೂ ಸಹಿಸಲೇ ಆಗುತ್ತಿರಲಿಲ್ಲ. ತಡೆಯದೇ ಅಂತಹ ಹೆಂಗಸರನ್ನು `ಅದು’ ಎಂದೇ ಸಂಬೋಧಿಸುತ್ತಿದ್ದರು. (ಅಂತೆಯೇ ಅತಿ ಅಧಿಕಪ್ರಸಂಗಿ ಗಂಡಸು ಕೂಡ ಅವರ ಮಟ್ಟಿಗೆ ‘ಅದು’ವೇ. ಅಧಿಕಾಧಿಕ ಮಾತಾಡುವ, ತಾವೇ ಬುದ್ಧಿವಂತರೆಂಬಂತೆ ರೈಸಲು ಬರುವ, ಮೂಗು ತೂರಿಸುವ, ಮೋಸ-ವಂಚನೆ-ದಗಲುಬಾಜಿ ವರ್ತನೆಯ ಗಂಡಸರನ್ನು ಕಂಡರೋ ಬೆಕ್ಕಿನ ಮರಿಯನ್ನು ಎತ್ತುತ್ತಾರಲ್ಲ, ಹಾಗೆ ತನ್ನ ಮಾತಿನ ಶಕ್ತಿಯಿಂದಲೇ ಅವರನ್ನು ಕತ್ತಿನ ಹಿಂಭಾಗಕ್ಕೆ ಕೈ ಹಾಕಿ ಎತ್ತಿ ಸೀದಾ ಕಸದ ಬುಟ್ಟಿಗೆ ಎಸೆದು ಬಿಡುವಂತಹ ವ್ಯಕ್ತಿ ಅವರು. ಬಿಡುಬೀಸು ವೇಗ ಅಬ್ಬರದ ಏರುದನಿಯ ಅವರು ಜೋರಿನ ಮಹಿಳೆಯಾಗಿಯೂ ಕಾಣುತಿದ್ದರು. ಹಾಗೆ ಒಮ್ಮೆ ಅವರ ವ್ಯಕ್ತಿತ್ವದ ಅಭಿಮಾನಿ ಗಂಡಸೊಬ್ಬರು `ಈ ಜನಕ್ಕೆ ಎಲ್ಲವೂ ಸರಿಯಾಗಿ ನಡೆದಿದ್ದರೆ ಊರು ಇಡುತ್ತಿರಲಿಲ್ಲ.’ ಅಂತ ಅವರೆದುರಿಗೇ ನುಡಿದಾಗ, ರಾಜವಾಡೆಯವರು ನಿರ್ಮಲವಾಗಿ ನಕ್ಕದ್ದು ನೆನಪಾಗುತ್ತಿದೆ. ಮೆಚ್ಚುಗೆಯನ್ನು ಟೀಕೆಯಂತೆ ನುಡಿವ ವಿಧಾನವೂ ನಮ್ಮಲ್ಲಿದೆಯಲ್ಲ? ಈ ಸೂಕ್ಷ್ಮವನ್ನೂ ಗ್ರಹಿಸ ಬಲ್ಲವರು ಅವರು. ನಕ್ಕರು, ಆ ವ್ಯಕ್ತಿಯನ್ನು ಛೇಡಿಸಿಯೂ ಛೇಡಿಸಿದರು `ನೀವೆಲ್ಲ ಊರು ಇಟ್ಟ ಚಂದ ಕಾಣುತಿದೆಯಲ್ಲ!’.)
ದೇವರೇ, ನೀನೇ ಗತಿ ಎಂಬಂತೆ ದುಃಖದ ಹೊರೆ ಹೊತ್ತು ಬಂದು ಬಿಕ್ಕುತ್ತ ಸಮಸ್ಯೆಗಳನ್ನು ಹೇಳಿಕೊಳ್ಳಲಾರದೆ, ಕಂಠನಡುಗಿನಲ್ಲೇ ನಿಂತುಬಿಡುವ ಅನೇಕರಿಗೆ ಅಷ್ಟು ಹೆದರಬಾರದು ಹೆಂಗಸರು – ಎಂದು ಅಲ್ಲಿಯೇ ಧೈರ್ಯ ಹೇಳುತ್ತಿದ್ದರು. ಅನೇಕ ಬಾರಿ ಅವರ ದುಃಖವನ್ನು ದೇವಿಗೆ ತಾನೇ ವಿವರಿಸಿ ಹೇಳುತ್ತಾ ಪರಿಹಾರ ಸೂಚಿಸೆಂದು ಆಕೆಯೊಡನೆ ಚರ್ಚೆಗಿಳಿಯುತ್ತಾ ಆಕೆ ಕೇಳುವ ಕಾಣಿಕೆಯನ್ನೋ ಸೇವೆಯನ್ನೋ ಅಲ್ಲಿಯೇ ವಿಮರ್ಶಿಸಿ ಇವಳ ಹತ್ತಿರ ಅಷ್ಟು ದೊಡ್ಡ ಸೇವೆ ಕೇಳಿದರೆ ಹೇಗೆ ತಾಯಿ? ಸಣ್ಣದು ಕೇಳಿಕೋ. ಇಲ್ಲಾ, ತೀರಿಸುವ ಶಕ್ತಿ ಕೊಡು – ಮುಂತಾಗಿ ಅವಳಿಗೇ ಗದರುತ್ತಿದ್ದರು. ಆ ದೃಶ್ಯಗಳೆಲ್ಲ ಈಗ ಇಲ್ಲವಲ್ಲ……..
ಸಂಜೆ ಬತ್ತಿ ಹೊಸೆಯುತ್ತಾ, ನಡುವೆ ನಿಲ್ಲಿಸಿ, ಮಾತಿನ ಪೆಟ್ಟಿಗೆ ತೆರೆದು, ಎದ್ದು ನಿಂತು, ನಡುವೆ ಕುಳಿತು ಕೈಬೀಸಿ, ಹಾರಿಸಿ ಮಾತನಾಡುತ್ತಾ, ಪುನಃ ಬತ್ತಿ ಹೊಸೆಯುತ್ತಾ ಪ್ರತಿ ಕ್ಷಣವನ್ನೂ ಬೆಳಗಿಕೊಳ್ಳುತ್ತಿದ್ದ ರಾಜವಾಡೆಯವರಿಗೂ ಶ್ರೀ ಕೃಷ್ಣಮಠದ ಜಗಲಿಯಲ್ಲಿ ಬತ್ತಿ ಹೊಸೆಯುತ್ತಾ ಮಠದಲ್ಲಿ ಊಟ ಮಾಡುತ್ತಾ ಆಯುಷ್ಯ ಕಳೆಯುತ್ತಿದ್ದ ಅಂದಿನ ಅಸಹಾಯಕ ವೃದ್ಧವಿಧವೆಯರಿಗೂ ಎಂತಹ ಅಂತರ! ಅನುಭವಗಳಿಗೆ ತೆರೆದುಕೊಂಡು ಪಕ್ಕಾದ ಮನಸ್ಸು ಮತ್ತು ಕದವಿಕ್ಕಿ ಯಾಂತ್ರಿಕವಾದ ಮನಸ್ಸುಗಳು.
#
ದೇವಸ್ಥಾನಕ್ಕೆ ಬಂದ ಯಾರಾದರೂ ಆಕೆಯ ಕಾಲಿಗೆ ನಮಸ್ಕಾರ ಮಾಡಿದರೆಂದರೆ `ಪಾಪಿ ನಾನು. ನನ್ನಂಥವರಿಗೆ ನಮಸ್ಕಾರ ಮಾಡಬೇಡಿ. (ಗರ್ಭಗುಡಿ ತೋರಿಸಿ) ನೋಡಿ, ಈ ಸನ್ನಿಧಾನ ಅವಳದ್ದು, ಇಲ್ಲಿ ಯಾರೂ ಯಜಮಾನರಲ್ಲ, ಯಾರೂ ಕೆಲಸದವರಲ್ಲ. ಇಲ್ಲಿ ಅವಳನ್ನು ಬಿಟ್ಟರೆ ಯಾರೂ ದೊಡ್ಡವರಿಲ್ಲ. ಇಲ್ಲಿ ಕಸ ಗುಡಿಸುವವಳೂ ಅವಳೇ, ಕಿರೀಟ ತೊಡುವವಳೂ ಅವಳೇ. ಆಕೆಗೇ ನಮಸ್ಕಾರ ಮಾಡಿ.’ ಎನ್ನುತ್ತ ಹಿಂದೆ ಹಿಂದೆ ಸರಿಯುತ್ತಿದ್ದರು. ಆದರೆ ನಮಸ್ಕಾರ ಮಾಡುವವರು ಮಾಡಿಯೇ ತೀರುವರು. ಆಗ ಅವರ ಬಾಯಲ್ಲಿ ಹೆಚ್ಚು ಕೇಳಿದ ಆಶೀರ್ವಾದವೆಂದರೆ ಕೀರ್ತಿಶಾಲಿಯಾಗಿ ಎಂಬುದೇ. ಈ ಆಶೀರ್ವಾದಕ್ಕೆ ಲಗತ್ತಾಗಿ ಅವರಲ್ಲೊಂದು ಕತೆ ಇತ್ತು. ಪ್ರಸಿದ್ಧ ರಂತಿದೇವನ ಕತೆಯದು. ಈ ಕತೆಯನ್ನು ಅವರು ಒಬ್ಬರಿಗೇ ಎಷ್ಟು ಸಲವಾದರೂ ಹೇಳಬಲ್ಲರು. ಒಂದೊಂದು ಸಲವೂ ಹೊಚ್ಚ ಹೊಸದೆಂಬಂತೆ.
ರಂತಿದೇವನ ಕತೆಯನ್ನು ನಾನು ಚಿಕ್ಕಂದಿನಲ್ಲಿ ಕೇಳಿದ್ದೆ. ಆದರೆ ರಾಜವಾಡೆ ಅದನ್ನು ಪ್ರತೀ ಸಲ ಹೇಳುವಾಗಲೂ ಗಪ್‌ಚಿಪ್ ಆಲೈಸುತ್ತಿದ್ದೆ. ಅವರನ್ನು ಆಲಿಸುತ್ತಾ ಕೂಡುವುದೇನು ಸಣ್ಣ ಅನುಭವವವಲ್ಲ. ಅವರು ಹೋದ ಮೇಲೆಯೂ ಅನಿಸುತ್ತಿದೆ, ಆಕೆ ಹೇಳುವುದು ನಾನು ಆಲೈಸುವುದು ಇನ್ನೂ ಬಹಳ ನಮೂನೆಯಲ್ಲಿ ಇತ್ತು ಅಂತ. ಒಂದು ದಿನವಾದರೂ ಚೆನ್ನಾಗಿ ಬಿಡುವಾಗಿ ಅವರೆದುರು ಕುಳಿತುಬಿಡಬೇಕು ಅಂದುಕೊಂಡರೆ ಆಗಲೇ ಇಲ್ಲ. ಅವರಿಗೂ ನಾನಾ ಹರಬುಗಳು. ನನಗೂ ಒಂದು ಗಂಟೆಗಿಂತ ಹೆಚ್ಚಿಗೆ ಕುಳಿತರೆ ಮನೆಯ ಎಳೆತ. ಅದೇ ಊರಲ್ಲಿ ಮನೆ ಇದ್ದರೆ ಹಾಗೇ ತಾನೆ?
*****
ಹ್ಞಾ, ರಾಜವಾಡೆ ಹೇಳುತ್ತಿದ್ದ ರಂತಿದೇವನ ಕತೆ – (ಅವರ ಅತ್ಯಂತ ಪ್ರೀತಿಯ ಕಥೆಯಿದು). ‘ನಿಮಗೆ ಹೇಳಿದ್ದೆನಾ ಮುಂಚೆ?’ ಕೇಳುವರು. ನಾನು ಇಲ್ಲವೆನ್ನುವೆ. ಇಲ್ಲವೆನ್ನುವುದು ಪೂರ್ಣಗೊಳ್ಳುವುದರೊಳಗೆ ಅವರ ಕಥೆ ಆರಂಭವಾಗುವುದು.
ರಂತಿದೇವನೆಂಬ ರಾಜನಿದ್ದ. ಮಹಾದಾನಿ, ಅಂತಃಕರಣಿ. ಲೋಕೋಪಕಾರಿ. ಭೂಲೋಕದಲ್ಲಿ ನಾನಾ ತರಹದ ಜನೋಪಯೋಗಿ ಕೆಲಸಗಳನ್ನು ಮಾಡಿ ಒಂದು ದಿನ ಮರಣ ಹೊಂದಿದ. ಮರಣ ಹೊಂದಿ ಸ್ವರ್ಗ ಸೇರಿದ. ಸ್ವರ್ಗದಲ್ಲಿ ಬಹುಕಾಲ ಕಳೆಯುತ್ತಲೂ ಅಲ್ಲಿಗೆ ಯಮದೂತರು ಬಂದರು. ‘ನಿನ್ನ ಇಲ್ಲಿನ ವಾಸದ ಅವಧಿ ಮುಗಿಯಿತು. ಇನ್ನು ನರಕದ ಅವಧಿ. ನಾವು ನಿನ್ನನ್ನು ಕರೆದೊಯ್ಯಲು ಬಂದಿದ್ದೇವೆ. ಬಾ’ ಎಂದರು. ಎನ್ನುತ್ತಲೂ ರಂತಿದೇವ ‘ಅದು ಹೇಗಾಗುತ್ತದೆ? ಎಲ್ಲಿಯವರೆಗೆ ಭೂಲೋಕದಲ್ಲಿ ಹೆಸರು ಇರುತ್ತದೋ ಅಲ್ಲಿಯವರೆಗೆ ಸ್ವರ್ಗವನ್ನು ಅನುಭವಿಸುವ ಹಕ್ಕೂ ಇರುತ್ತದೆ. ನನ್ನ ಹೆಸರಿನ್ನೂ ಭೂಲೋಕದಲ್ಲಿ ಜೀವಂತವಿದೆ. ಹಾಗಿರುವಾಗ ನಾನು ನರಕಕ್ಕೆ ಬರಲೊಲ್ಲೆ’ ಎಂದ. ‘ಹ್ಹೊ! ಹಾಗೆ ಹೇಳುತ್ತೀಯಾ? ಹಾಗೆ ಹೇಗೆ ಹೇಳುತ್ತೀಯಾ?’ ಎಂದರು ಯಮದೂತರು. ಭೂಲೋಕಕ್ಕೆ ಹೋಗಿ ನೀವೇ ಪರೀಕ್ಷಿಸಿ ಬನ್ನಿ ಎಂದ ರಂತಿದೇವ. (ಮಾದರಿ ೨: ‘ಹಾಗಾದರೆ ಭೂಲೋಕದಲ್ಲಿ ಇನ್ನೂ ನಿನ್ನ ಹೆಸರು ಉಂಟಾ?’ ‘ಉಂಟು’ ‘ಇರಲಿಕ್ಕೆ ಸಾಧ್ಯವಿಲ್ಲವಯ್ಯಾ’ ‘ಹಾಗೆಂದರೆ? ಹೋಗಿ ನೋಡಿ. ಬಂದು ಮಾತಾಡಿ’ . ಅಭಿನಯ) ಯಮದೂತರು ಭೂಲೋಕಕ್ಕೆ ಬಂದರು. ಬಂದು ನೋಡುತ್ತಾರೆ ಎಲ್ಲಿ ಕಂಡರೂ ಕ್ಷಾಮ… ಜಲಕ್ಷಾಮ. ಹಾಹಾಕಾರ. ನೀರಿಲ್ಲ ನಿಡಿಯಿಲ್ಲ. ಜನ ನರಳುತ್ತಿದ್ದಾರೆ. ಉಸಿರು ಬಿಡಲೂ ತ್ರಾಣವಿಲ್ಲ. ಅಂಥಲ್ಲಿಯೂ ಯಮದೂತರು ಅವರನ್ನು ‘ರಂತಿದೇವನನ್ನು ಬಲ್ಲಿರಾ’ ಅಂತ ಕೇಳಿಯೇ ಕೇಳಿದರು. ‘ಯಾರಾತ? ಅಯ್ಯೊ, ನಮಗೆ ನೀರು ಕೊಡಿ ನೀರು’ ಎಂದರು ಜನರು. ಹೀಗೆ ಕೇಳುತ್ತ ಯಮದೂತರು ಮುಂದೆ ಮುಂದೆ ಸಾಗಿದರು. ಸಾಗೀ ಸಾಗೀ ಒಂದೆಡೆ ಬರುವಾಗ ಎಲ್ಲಿಂದಲೋ ಕಪ್ಪೆಗಳ ಟರ್ರಂಯ್ ಟರ್ರಂಯ್! ಹ್ಞಂ? ಇದೆಲ್ಲಿಂದ? ಹೋಗಿ ನೋಡಿದರೆ ಅಲ್ಲೊಂದು ಕೆರೆ. (ಅದು ಒಮ್ಮೊಮ್ಮೆ ಬಾವಿಯಾಗುವುದೂ ಇದೆ.) ಆ ಕೆರೆಯಲ್ಲಿ ಹೇರಳ ಕಪ್ಪೆಗಳು, ಸುಖವಾಗಿ ಕುಳಿತು ಗಾಯನ ನಡೆಸುತ್ತಿವೆ. ಅಚ್ಚರಿಯಿಂದ ಹಾರಿ ಬಿದ್ದರು ಯಮದೂತರು. ಕಪ್ಪೆಗಳನ್ನು ಕೇಳಿದರು, ‘ರಂತಿದೇವನೆಂಬ ರಾಜ ಗೊತ್ತೆ ನಿಮಗೆ?’ ಆಗ ಕಪ್ಪೆಗಳು ಏಕಕಂಠದಲ್ಲಿ ಉದ್ಗರಿಸಿದವು ‘ಅಯ್ಯೊ ಅವನ ಹೆಸರನ್ನು ಇನ್ನೊಮ್ಮೆ ಹೇಳಿ. ಅವನಂಥ ಪುಣ್ಯಾತ್ಮ ಇರುವನೆ? ಇದು ನೋಡಿ, ಅವನೇ ಕಟ್ಟಿಸಿದ ಕೆರೆ. ಜಗತ್ತೆಲ್ಲ ನೀರಿಲ್ಲದೆ ಒಣಗಿದರೂ ಈ ಕೆರೆಯ ನೀರು ಒಣಗದು. ಹೋಗಿ, ನೀರಿಲ್ಲದಲ್ಲಿ ಈ ಸುದ್ದಿ ಕೊಡಿ’ ಅವಾಕ್ಕಾದರು ಯಮದೂತರು. ರಂತಿದೇವನ ಹೆಸರಿನ್ನೂ ಭೂಲೋಕದಲ್ಲಿದೆ, ಆತ ಮಾಡಿದ ಪುಣ್ಯ ಕೆಲಸವೂ ಉಳಿದಿದೆ. ಎಂದ ಮೇಲೆ ಅವನನ್ನು ನರಕಕ್ಕೆ ಕರೆದೊಯ್ಯುವುದೆಂತು? ಯಮದೂತರು ಸದ್ದಿಲ್ಲದೆ ಕಾಲುಕಿತ್ತರು.
-ಇದು ರಾಜವಾಡೆಯವರು ಹೇಳುವ ಒಂದು ರೀತಿಯಷ್ಟೆ. ಪ್ರತಿಸಲವೂ ಕತೆಯ ಮುಖ್ಯ ವಿಷಯ ಬಿಟ್ಟು ಉಳಿದೆಲ್ಲ ಸಂಭಾಷಣೆಗಳೂ ವಿವರಣೆಗಳೂ ಬದಲಾಗುತ್ತಿದ್ದುವು. ಹೊಸ ಹುರುಪಿಂದ ಕೂಡಿರುತ್ತಿದ್ದುವು. ರಂತಿದೇವನೇನು ಇವರ ತಲಾಂತರದ ಸಂಬಂಧಿಕನೋ, ಮೊನ್ನೆಮೊನ್ನೆ ತೀರ ಇತ್ತೀಚೆಗಷ್ಟೇ ತೀರಿಕೊಂಡ ಆತ್ಮೀಯನೋ ಎಂಬಂತೆ ರೂಪಿತನಾಗುತ್ತಿದ್ದ. ಒಂದು ರೀತಿಯಲ್ಲಿ ಅಲ್ಲೊಂದು ನಾಟಕವನ್ನೇ ಆಡಿತೋರಿಸುತ್ತಿದ್ದರು ರಾಜವಾಡೆ. ಕೆಲವೊಮ್ಮೆ ನನಗೆ ಹರಿಕಥೆ ದಾಸರೆದುರು ಕುಳಿತಂತೆಯೂ ಆಗುತ್ತಿತ್ತು. ಕತೆಯನ್ನು ಬಾಯಿಂದ ಬಾಯಿಗೆ ಹೊಸ ಹೊಸತಾಗಿ ದಾಟಿಸುವ ಪರಂಪರೆಯೆದುರು ಕುಳಿತಂತೆಯೂ. ಕಥೆಯೆಲ್ಲ ಪೂರ್ತಿ ಕೇಳಿಯಾದ ಮೇಲೆ ಈ ಕಥೆ ಹೇಳಿದ್ದೀರಿ ಹೋದಸಲ – ಅಂತಂದು ನಕ್ಕರೆ, ಹ್ಞಾಂ ಅಂತ ಆ ನಗೆಗೆ ಇನ್ನಷ್ಟು ನಗೆ ಕೂಡಿಸಿ ದೀರ್ಘಗೊಳಿಸುತ್ತಿದ್ದರು.
ಇಂತು, ಭೂಮಿಯ ಮೇಲೆ ತನ್ನ ನಂತರವೂ ಹೆಸರಿರಬೇಕು, ಎಂದರೆ ಕೀರ್ತಿಶರೀರಿಯಾಗಬೇಕು. ಕೀರ್ತಿಶರೀರಿಯಾದವರಿಗೆ ಅಳಿವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು ರಾಜವಾಡೆ. ಅವರು ಹೇಳುವುದನ್ನೆಲ್ಲ ಅವರ ಉಚ್ಚಾರದಲ್ಲೇ ಹಾವಭಾವದಲ್ಲೇ ಸಂಪೂರ್ಣವಾಗಿ ಮೂಡಿಸಲು ನನ್ನಿಂದ ಆಗುತ್ತಿಲ್ಲವಲ್ಲ. ನನ್ನ ಬರೆವ ಶಕ್ತಿಯ ಮೇಲೆಯೇ ಸಿಟ್ಟು ಬರುತ್ತಿದೆ.
ಮೂರ್ಛಾವಸ್ಥೆಗೆ ತೆರಳುವ ಹಿಂದಿನ ರಾತ್ರಿಯವರೆಗೂ ಅಂದಂದಿನ ಲೆಕ್ಕ ಬರೆದರು ರಾಜವಾಡೆ. ಲೆಕ್ಕವೆಂದರೆ ಪೈಸೆ ಪೈಸೆ ಲೆಕ್ಕ. ಮೂರಿಂಚಗಲದ ಖಾಲಿ ಪೇಪರಿನಲ್ಲಿ ಜೀರಿಗೆ ಅಕ್ಷರದಲ್ಲಿ ನಡುಬಗ್ಗಿ ಕುಳಿತು ಅವರು ಸೇವಾಕಾರ್ಯಕ್ಕೆ ಬಂದ ಹಣದ ಲೆಕ್ಕ ಬರಕೊಂಡು ಚಿಲ್ಲರೆ ಕೊಡುವ ಭರಾಟೆ ನೋಡಬೇಕು. ಲೆಕ್ಕ ತಪ್ಪುಂಟಾ ನೋಡಿ. ಇದು ‘ಅಮ್ಮ’ನ ದುಡ್ಡು. ಸನ್ನಿಧಾನದ್ದು, ಆಚೀಚಾಗುವಂತಿಲ್ಲ. ಅವರ ದೇವಿ ತನ್ನ ವಿಚಾರ ಪೇಪರಿಗೆ ಹಾಕಿಸು ಎನ್ನುವುದಿಲ್ಲ. ಪ್ರಚಾರ ದೃಷ್ಟಿ ಕೂಡದು ಎನ್ನುವವಳು ಅವಳು. ಯಾರಲ್ಲಿಯೂ ಬೇಡು ಎನ್ನುವುದಿಲ್ಲ. ಭಕ್ತರು ಸ್ವಇಚ್ಛೆಯಿಂದ ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಮನುಷ್ಯ ತನ್ನ ಗುಣವನ್ನೇ ಅಭಿಲಾಷೆಯನ್ನೇ ದೇವರಿಗೂ ಎಂತು ಹೊಂದಿಸಿ ಬಿಡುತ್ತಾನೆ! ಮಾತ್ರ, ಇಟ್ಟ ಒಂದು ವಸ್ತು ಆಚೀಚಾಗಲಿಕ್ಕಿಲ್ಲ, ಒಂದು ಚೂರು ಕಾಗದ ಪೆನ್ನು ಜಾಗ ತಪ್ಪಲಿಕ್ಕಿಲ್ಲ, ಅಬ್ಬ, ರಾಜವಾಡೆಯವರು ಪ್ರತ್ಯಕ್ಷ ದರ್ಶನ ಪಾತ್ರಿಯೇ, ಕೈಲಿ ಸಿಂಗಾರದ ಕೊನೆ ಮಾತ್ರ ಇರುವುದಿಲ್ಲ ಅಷ್ಟೆ.
****
ಹ್ಞಾ, ಜನವರಿ ೯ ಮತ್ತು ೧೦, ೧೯೮೮ರಂದು ಬೆಂಗಳೂರಿನಲ್ಲಿ ನಡೆವ ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನಕ್ಕೆ ಅಂತೂ ಹೊರಟರಷ್ಟೆ? ಜೊತೆಯಲ್ಲಿ ಶ್ರೀಮತಿ ಪದ್ಮಾಶೆಣೈ, ಶ್ರೀಮತಿ ಸಾರಾಅಬೂಬಕರ್, ಶ್ರೀಮತಿ ಚಂದ್ರಕಲಾ ನಂದಾವರ, ಶ್ರೀಮತಿ ಲೀಲಾವತೀ ಎಸ್. ರಾವ್ ಮತ್ತು ನಾನು. ಇಲ್ಲಿನವರೇ ಆದ ಅವರ ನಂತರದ ಪೀಳಿಗೆಯ ನಮಗೆ ರಾಜವಾಡೆಯವರ ಪರಿಚಯ ಹೊಸತು. ಎಂದ ಮೇಲೆ ಲೇಖನವೃತ್ತಿಯಿಂದ ನಿವೃತ್ತರಾಗಿ ಅವರು ಸಾಹಿತ್ಯಿಕ ಜಗತ್ತಿನಿಂದ ಎಷ್ಟು ಅಜ್ಞಾತರಾಗಿ ಬದುಕುತ್ತಿದ್ದರು ಎಂದು ತಿಳಿಯುವುದಷ್ಟೆ? ಮೂರು ದಿನಗಳ ಕಾಲ ಸ್ವತಃ ಜೊತೆಗಿದ್ದು ಅವರನ್ನು ಕೈಗೆಟಕುವಷ್ಟು ಅರಿತ ಸಂದರ್ಭವದು. ಅವರಿವರು ಆಡುವ ಮಾತಿಂದ ಸಿಕ್ಕ ಚಿತ್ರಕ್ಕಿಂತ ಅದು ಎಷ್ಟು ಭಿನ್ನ ಮತ್ತು ಧೀರವಾಗಿತ್ತು!
ಎಷ್ಟು ದಿನವಾಯಿತೋ, ಹೀಗೆ ಹೊರಟು ಎನ್ನುತ್ತ ಹೊರಡುವ ಮೊದಲಿನ ಉದಾಸೀನತೆಯನ್ನು ಬೇಗ ಓಡಿಸಿಕೊಂಡರು. ಸನ್ಮಾನ ಸಭೆಯಲ್ಲಿ ಎಷ್ಟೋ ಕಾಲದಿಂದ ಕಾಣದೆ ಕಂಡ ಸಂಬಂಧಿಕರ ನಡುವೆ ಕುಳಿತು ಹರಟಿದಂತೆ ಯಾವ ಔಪಚಾರಿಕ ಒಪ್ಪ ಹಾಕದೆ ಸೀದ ಸಹಜವಾಗಿ ದೀರ್ಘವಾಗಿ ಮಾತಾಡಿದರು. ಬೆಂಗಳೂರಿನಲ್ಲಿ ತಾನು ಕಳೆದ ದಿನಗಳನ್ನು ನೆನೆದರು. ಸಾಮಾಜಿಕ ಸಾಹಚರ್ಯವಿಲ್ಲದ ಕಾಲವದು ಎನ್ನುತ್ತ ಅಂದಿನ ಸಾಹಿತ್ಯಿಕ ವಾತಾವರಣದಲ್ಲಿ ಹೆಚ್ಚಿನ ಲೇಖಕರು ತಮ್ಮದೇ ಸತ್ಯ, ತಮ್ಮದು ಮಾತ್ರವೇ ಸಾಹಿತ್ಯವೆಂಬಂತೆ, ತಮ್ಮ ಕಾಲದ ಲೇಖಕಿಯರನ್ನು ಕಿಂಚಿತ್ತೂ ಲೆಕ್ಕಿಸದೆ ಹೋದರು ಎಂದು ಮಾರ್ಮಿಕವಾಗಿ ನುಡಿದರು. ಮಹಿಳೆಯರೇ ಸೇರಿ ಸಮಾರಂಭ ನಡೆಸುವುದು ನೋಡಿದರೇನೇ ಅಷ್ಟು ಖುಷಿಯಾಗುತ್ತದೆ ಎಂದು ಸಂಭ್ರಮಿಸಿದರು.
ಸಮ್ಮೇಳನ ಮುಗಿಸಿ ಮರುದಿನ ಮರಳುವ ದಾರಿಯಲ್ಲಿ ಮಂಗಳೂರು ತಲುಪುತ್ತಲೂ ಗೆಳತಿಯ ನೆನಪೊಂದು ಅವರಲ್ಲಿ ಪಟಕ್ಕನೆ ಕಣ್ತೆರೆಯಿತು. ಅಲ್ಲಿಳಿಯುವವರು ಇಳಿದೊಡನೆ ‘ಅವಳನ್ನು ನೋಡಬೇಕಲ್ಲ, ಇಲ್ಲೇ ರಥಬೀದಿಯಲ್ಲಿದ್ದಾಳೆ. ನೋಡಿಕೊಂಡೇ ಮುಂದೆ ಹೋಗೋಣ? ನಾನೂ ಅವಳೂ ಬಹಳ ಫ್ರೆಂಡ್ಸ್’ ಎಂದರು. ಗೆಳತಿಯ ಮನೆ ಸಿಕ್ಕಿತು. ಹಳೇಹಳೆಯ ಮನೆ. ಮನೆ ತುಂಬ ಮಕ್ಕಳು. ಅಷ್ಟೇನೂ ಒಪ್ಪ ಓರಣಕ್ಕೆ ತಲೆಕೆಡಿಸಿಕೊಳ್ಳದ ಅಪ್ಪಟ ದ.ಕ. (ಹಳೆಯ) ಸಂಸ್ಕೃತಿಯ ಹಳೆಯ ಚಾವಡಿ. ರಾಜವಾಡೆ ಹಿಂದಿನ ನೆನವರಿಕೆಯಿಂದಲೋ ಏನೋ ಅವತ್ತಿನ ಯುವತಿಯಂತೆಯೇ ಒಳಗೆ ನುಗ್ಗಿಕೊಂಡು ಹೋದರು. ಗೆಳತಿಯ ಹೆಸರು ಹೇಳಿ ‘ಇದ್ದಾಳಾ?’ ಕೇಳಿದರು ರಾಜವಾಡೆ. ‘ಹೂಂ, ಇದ್ದಾರೆ, ಕರೆಯುತ್ತೇನೆ’ ಎಂದು ನಡುವಯಸ್ಸಿನ ಮಹಿಳೆಯೊಬ್ಬರು ಒಳಗೆ ಹೋದಳು. ಹೊರಬಂದದ್ದು ಒಬ್ಬ ಜೀರ್ಣ ಮುದುಕಿ. ಒಳಬಾಗಿಲಿಂದ ‘ಕ್ವೋಣ್s?’ ಎನ್ನುತ್ತಾ ಹೊರಗಿಣುಕಿ ‘ಹೋ! ರಾಜವಾಡೆಯಾ! ಬಾ ಬಾ ಕುಳಿತುಕೋ’. ಈಕೆ, ರಾಜವಾಡೆಯ ಜೊತೆಗಾತಿಯೆ! ರಾಜವಾಡೆಯವರನ್ನು ಕಂಡಾಗ ಎಂದೂ ಬರದ ವಯಸ್ಸಿನ ನೆನಪು, ಆ ವೃದ್ಧೆಯನ್ನು ಕಂಡಕೂಡಲೇ ಎದ್ದುಬಂತು. ಸಂಸಾರ ತಾಪತ್ರಯಗಳ ನಡುವೆ ದಣಿದು ತೊಪ್ಪೆಯಾದ ಗೆಳತಿ; ಎದುರು -ಬಹುಕಾಲದ ಮೇಲೆ ಅವಳನ್ನು ಕಂಡು ಖುಶಿಯರಳಿದ ರಾಜವಾಡೆ. ಪ್ರಪಂಚದಲ್ಲಿದ್ದೂ ಪ್ರಪಂಚದ ನೋವನ್ನು ತಿಂದೂ, ಅದರ ಗೋಜಲು ದುಃಖದುಮ್ಮಾನಗಳನ್ನು ಮನಕ್ಕೆ ಹಚ್ಚಿಕೊಂಡೂ ಸಾಕೆನಿಸಿದಾಗ ಅವನ್ನೆಲ್ಲ ಥಟಕ್ಕನೆ ಕೊಡವಿ ಸರಸರ ನಡೆಯ ಬಲ್ಲವರು. ಹಾಗೆ ಎಂಭತ್ತರ ಸನಿಹಸನಿಹಕ್ಕೆ ನಡೆದು ಬಂದವರು; ಬದುಕೊಂದು ನಾಟಕವೆಂಬಂತೆ, ತಾನು ಆ ನಾಟಕದ ಪಾತ್ರವೆಂಬಂತೆ ತನ್ನನ್ನೇ ತಾನು ದೂರ ನಿಂತು ಕಾಣ ಬಲ್ಲವರು. ‘ನಾವು ಆಲ್ ಇಂಡಿಯಾ ಟೂರಿಗೆ ಒಟ್ಟಿಗೇ ಹೋದುದಲ್ಲವೇ, ನಮ್ಮ ‘ಭಕ್ತ ಮೀರಾ’ ನಾಟಕದಲ್ಲಿ ನೀನೂ ಪಾರ್ಟು ಮಾಡಿದ್ದಿಯಲ್ಲವೆ? ನಾನೂ ನೀನೂ ಸೇರಿ ಹಾಗೆ ಮಾಡಿದೆವಲ್ಲವೆ, ಹೀಗೆ ಹೇಳಿಲ್ಲವೆ’ -ನೆನಪರಾಶಿ ಕೆದಕಿ ಆರಿಸಿ ಆರಿಸಿ ಗೆಳತಿಯ ಮುಂದೆ ಇಟ್ಟಂತೆ, ಆಕೆ ಅವೆಲ್ಲವನ್ನೂ ತೀರಾ ನಿರಾಸಕ್ತಿಯಿಂದ ಕೇಳುತ್ತಾ, ಹೂಂ… ಹೂಂ…… ಎನ್ನುತ್ತ ಅದೆಲ್ಲಾ ಆಯಿತಾ …ಮುಗಿಯಿತು ಅದೆಲ್ಲ, ಹಳೆಯಕತೆ. ಪ್ರಾಯ ಸ್ವಲ್ಪ ಆಯಿತನ ಈಗ? ಇನ್ನು ಜೀವ ಒಂದು ಚಂದದಲ್ಲಿ ಹೋದರೆ ಸಾಕು’. ಮುಖದಲ್ಲಿ ಅಚ್ಚರಿ ತೋರಿಸಿಕೊಳ್ಳಲಿಲ್ಲ ರಾಜವಾಡೆ. ಸರಿ, ಆದರೆ ಅವರ ಕಣ್ಣೋ ಅದನ್ನು ಅಡಗಿಸಲಾರದೆ ರೆಪ್ಪೆತುದಿಯಲ್ಲಿ ಮಿಟಿಗುಡುತಿತ್ತು. ‘ಇವಳಿಗೆ ಇದೆಲ್ಲ ನೆನಪುಗಳೇ ಬೇಡವಲ್ಲ! ಅಯ್ಯೊ ದೇವರೆ.’ ಆದರೂ ಸುಮ್ಮನಿರದೆ ಸೊಸೆಯ ಮುಂದೆ ತಾನೂ ಅವಳ ಅತ್ತೆಯೂ ಸೇರಿ ನಡೆಸಿದ ಕಾರುಬಾರುಗಳನ್ನು ವರ್ಣಿಸಿದರು. ಕೇಳುವ ಸೊಸೆಯ ಮುಖದಲ್ಲಿಯೂ ಗೆಲುವಿಲ್ಲ. ಅತ್ತೆಯ ಮುಖದಲ್ಲಿ ಮೊದಲೇ ಇಲ್ಲ. ಆ ಸಂಸಾರ ಯಾವ ತಾಪತ್ರಯದಲ್ಲಿತ್ತೊ. ಗತದ ಮೆಲುಕಿನ ಹುರುಪು ವರ್ತಮಾನದ ಸ್ಥಿತಿಗತಿಯ ಮೇಲೆ ಎಂತೆಲ್ಲಾ ಅವಲಂಬಿತವಾಗಿದೆ! ಅತ್ತ ಗೆಳತಿ, ‘ಹೇಗೆ ಎಲ್ಲಾ ನೆನಪಿಟ್ಟುಕೊಂಡಿದ್ದೀ! ನನಗಂತೂ ಅವೆಲ್ಲ ಮರೆತೇಹೋಗಿದೆ’ ಎಂದು ನಡುವೆ ತಡೆದು ಹಳಿದಾಗ ‘ಹಾ! ಮರೆತುಹೋಯಿತಾ! ಮರೆತೇ ಹೋಯಿತಾ!’ ಅಂತ ಎರಡೆರಡು ಬಾರಿ ಕೇಳಿ ಅವರನ್ನು ನೆನಪಿಗೆಳೆಯಲು ಮತ್ತೊಂದಿಷ್ಟು ಘಟನೆಗಳನ್ನು ಎಳೆತಂದರು ರಾಜವಾಡೆ. ಆದರೂ ಆಕೆ ‘ಸ್ಮರಣೆ ವಿಸ್ಮರಣೆ’ಗಳ ನಡುವೆ ತೂಗಾಡುವುದನ್ನು ಕಂಡು ‘ನಾವಿನ್ನು ಹೊರಡುತ್ತೇವೆ’ ಎಂದು ಮೆಲ್ಲನೆದ್ದರು. ಮುಂದಿನ ದಾರಿಯಲ್ಲಿ, ಮಂಗಳೂರಿಂದ ಉಡುಪಿಯವರೆಗೂ ತಾನೇತಾನಾಗಿ ಬಿಡಿಸಿಕೊಳ್ಳುತಿದ್ದ ನೆನಪಿನ ಸುರುಳಿಸುರುಳಿಗಳು.
ಬೆಂಗಳೂರಿನ ಆ ಪ್ರವಾಸದ ಹರ್ಷ ಅವರಲ್ಲಿ ಬಹುಕಾಲವಿತ್ತು. ಆವತ್ತಿನ ಸಮಾರಂಭದ ಅಚ್ಚುಕಟ್ಟುತನ, ಮಹಿಳೆಯರೇ ನಿರ್ವಹಿಸಿದ ಸಮರ್ಥ ರೀತಿ ಎಲ್ಲವನ್ನೂ ಆಗಾಗ ಮೆಲುಕು ಹಾಕುತ್ತ ತನ್ನ ಕಾಲದಲ್ಲಿ ಇದು ಕೇವಲ ಕನಸಾಗಿತ್ತು. ಹೆಂಗಸರು ಮುಂದೆ ಬರಬೇಕು, ಎಂದು ತಾನು ಮತ್ತು ತನ್ನ ಕಾಲದ ಲೇಖಕಿಯರು ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಬರೆದು ಬೊಬ್ಬೆ ಹೊಡೆಯುತ್ತಿದ್ದೆವು. ಆದರೆ ಆ ಕಾಲ ದಾಟಿ ಹೊರ ಪ್ರಪಂಚ ಇಷ್ಟೆಲ್ಲ ಮುಂದುವರಿದಿದೆ ಎಂದು ನನಗೆ ತಿಳಿದೇ ಇರಲಿಲ್ಲ ಎಂದು ತನ್ನ ಸಮಾಧಾನವನ್ನು ಹೇಳಿಕೊಳ್ಳುತ್ತಿದ್ದರು.
****
ರಾಜವಾಡೆಯವರನ್ನು ಮೊದಮೊದಲು ಸುಮ್ಮನೆ ಹೋಗಿ ಭೇಟಿ ಮಾಡಿ ಬರುತಿದ್ದ ನಾನು ದಿನಹೋದಂತೆ ಅವರ ವ್ಯಕ್ತಿತ್ವದಿಂದ ಆಕರ್ಷಿತಳಾದೆ. ಅವರು ಅಂದಂದು ಮಾತುಮಾತಾಡುತ್ತ ಹೇಳಿಕೊಂಡ ತನ್ನ ಬದುಕಿನಕತೆಯನ್ನು ಮನೆಗೆ ಬಂದವಳೇ ಬರೆದಿಡತೊಡಗಿದೆ. ಮರುಭೇಟಿಯಲ್ಲಿ ಅವರಿಗೆ ಓದಿ ಹೇಳತೊಡಗಿದೆ. ಕೇಳುತ್ತಿದ್ದಂತೆ ಅವರಲ್ಲಿ ಇನ್ನಷ್ಟು ನೆನಪುಗಳು ಧಾವಿಸಿ ಬರತೊಡಗಿದುವು. ಅವೆಲ್ಲವನ್ನೂ ದಾಖಲಿಸುತ್ತ ಬಂದೆ. ಬರೆದದ್ದನ್ನು ಅವರ ಅಭಿಲಾಷೆಯಂತೆ ಮತ್ತೆ ಮತ್ತೆ ಓದಿ ಹೇಳುತ್ತಿದ್ದೆ. ಆಲಿಸುತ್ತ ಬೇಡವೆಂದು ಕಂಡದ್ದನ್ನು ಅಲ್ಲಲ್ಲೆ ತೆಗೆಸಿದರು. ಉಳಿದವನ್ನು ‘ಜನಕ್ಕೆ ಬೇಕೊ ಬೇಡವೋ ಎಂಬ ಆತಂಕ ಬಿಟ್ಟರೆ ನನಗಂತೂ ಇದು ಪ್ರಿಂಟಾದರೆ ಸಂತೋಷ. ಪ್ರಿಂಟ್ ಹಾಕಿಬಿಡಿ’ ಎಂದು ತಲೆಬೀಸಿ ಒಪ್ಪಿಗೆ ನುಡಿದರು.
ಪ್ರತಿಸಲ ಹೋದಾಗಲೂ ಆಕೆಯ ಬಳಿಯಿಂದ ಏಳಲು ಮನಸ್ಸಾಗುತ್ತಿರಲಿಲ್ಲ, ಎಂದೆನೆ, ಆಗಲೆ? ಎಷ್ಟು ಸಲ ನಾನು ಅಂದುಕೊಳ್ಳುತಿದ್ದೆ, ಒಮ್ಮೆ ತುಂಬಾ ಪುರುಸೋತು ಮಾಡಿಕೊಂಡು ಕುಳಿತುಬಿಡಬೇಕು, ಎಷ್ಟು ಹೊತ್ತಾದರೂ ಏಳದೆ, ಅಂತ. ಮುಗಿಯದ ಅವರ ಮಾತನ್ನು ಕಡಿದು ಏಳುವಾಗ ಅವರೊಬ್ಬರನ್ನೇ ಬಿಟ್ಟು ಹೊರಡುತ್ತಿದ್ದೇನೆ ಎಂಬ ನೋವು ಕಲಕುತಿತ್ತು. ಆಕೆ ಪದೇ ಪದೇ ಹೇಳುತ್ತಿದ್ದುದು ಈ ನನ್ನ ತಾಯಿ ಶಾರದಾಂಬೆ ನನ್ನ ಪ್ರೀತಿಯ ಹಸಿವನ್ನು ಇಂಗಿಸಿಬಿಟ್ಟಳು. ಈಗ ನನ್ನಷ್ಟು ಸುಖಿ ಬೇರೆ ಯಾರಿಲ್ಲ. ಹೀಗನ್ನುವಾಗ ಆಕೆ ಪ್ರತ್ಯಕ್ಷ ಆ ನುಡಿಯ ಪ್ರತಿರೂಪವೇ ಆಗಿ ಕಾಣುತ್ತಿದ್ದರೂ, ಮನುಷ್ಯ ಸಹಜವಾಗಿ ಅವರು ನರಳುತ್ತಿರಬಹುದೇ, ಒಳಗೇ? ಕಟ್ಟೇಕಾಂತದಲ್ಲಿ? ಇದು ನನ್ನ ಊಹೆಯ ಪರಿಮಿತಿಯೂ ಇರಬಹುದು. ಆಕೆ ಸ್ಥಾಪಿಸಿಕೊಂಡ ಘನಮೌನದ ಗುರುತು ಅಲ್ಲಲ್ಲಿ ಹತ್ತಿದಂತಾಗುತ್ತಿತ್ತು…….ತಪ್ಪಿದಂತಾಗುತಿತ್ತು. ಗಟ್ಟಿ ಕೇಳಿದರೆ ಲೇಖಕಿ ಗಿರಿಬಾಲೆ ಅವರ ಮನೋಕೇಂದ್ರದಲ್ಲಿ ಇದ್ದೇ ಇದ್ದಳು. ನನ್ನ ಪ್ರಯತ್ನಕ್ಕೆ ಹಟಕ್ಕೆ ಎಲ್ಲೋ ಒಂಚೂರು ಕದಲಿ ಮರುಕ್ಷಣದಲ್ಲೆ ಮೌನಶಿಲೆಗೆ ಆತುಕೊಂಡು ಎಂದಿನ ಮಾತಿನ ಪರದೆ ಇಳಿ ಬಿಡುತ್ತಿದ್ದಳು. ಆ ಪರದೆಯನ್ನು ಭೇದಿಸುವಂತಹ ಪ್ರಶ್ನೆಯನ್ನು ಎತ್ತುವುದು ಹೇಗೆಂಬ ಅಳುಕಿನಿಂದಲೇ ಬಹಳ ಸೂಕ್ಷ್ಮವಾಗಿ ತಿಳಿದೂ ತಿಳಿಯದಂತಹ ರೂಪದಲ್ಲಿ ಕೇಳಿದರೂ ಥಟ್ಟನೆ ಸೂಕ್ಷ್ಮ ಹಿಡಿದು ಆ ಜಾಡನ್ನೇ ಜಾಣ್ಮೆಯಿಂದ ಬಿಟ್ಟು ಮತ್ತೆ ಬಗೆಬಗೆಯ ಮಹಿಮೆ, ಪವಾಡ ಗುಲ್ಲು ಗಲಾಟೆಗಳ ಶಬ್ದತಂತಿಯ ಮರೆ ನಿಂತು ನಗೆ ಮೀಟುತ್ತಿದ್ದರು. ಬಂದವರೆದುರು ಮಾತ್ರ ‘ನೋಡಿ, ಇವರು ನನ್ನ ಜೀವನ ಕತೆ ಬರೆಯುತ್ತಾರೆ’ ಎಂದು ಸಂಭ್ರಮಿಸುತ್ತಿದ್ದರು. ‘ಇದೊಳ್ಳೆ! ನೀವು ಬಿಡಿಸಿ ಹೇಳದೆ ನಾನು ಬರೆಯುವುದು ಹೇಗೆ? ಎಂದರೆ ‘ಹೇಳುತ್ತೇನೆ, ಖಂಡಿತ ಹೇಳುತ್ತೇನೆ….ಎಲ್ಲ.’ ಆದರೆ ತನ್ನ ಅನುಭವಗಳನ್ನು ಗ್ರಹಿಸಲು ಸಮಾಜ ಇನ್ನೂ ಪಕ್ವವಾಗಿಲ್ಲವೆಂದೇ ತನ್ನ ಜೀವಿತದ ಕೊನೆಗಾಲಕ್ಕೂ ಕೂಡ ಅವರಿಗೆ ಅನಿಸಿರಬೇಕು, ಎಷ್ಟೋ ಬಾರಿ ಹೇಳುತ್ತ ತೆರೆಯುತ್ತ ಬೇಡ ಇವರೆ, ಸಮಾಜದ ಬಗ್ಗೆ ಭರವಸೆ ಬೇಡ, ಅದಕ್ಕೆ ಇದು ಯಾವುದೂ ಬೇಡ. ಮುಂದೆ ತೊಂದರೆಯೇ ಎನ್ನುತ್ತಿದ್ದರು. ಹೇಳಿದಷ್ಟು ಅಂಶಗಳಿಗೂ ನನ್ನಲ್ಲೇ ಬೀಗ ಹಾಕಿಟ್ಟರು. ಎಂತಲೇ ದೊರಕಿದ್ದು ಅವರ ‘ಮುಂತಾದ ಕೆಲ ಪುಟಗಳು’ ಮಾತ್ರ.
ದಿನ ನಿತ್ಯದ ಪೇಪರುಗಳನ್ನು ಪತ್ರಿಕೆಗಳನ್ನು ಆಸಕ್ತಿ, ಅನಾಸಕ್ತಿ ಮಿಶ್ರವಾಗಿ ಓದುತ್ತಿದ್ದರು ರಾಜವಾಡೆ. ಒಮ್ಮೆ ಒಂದು ಪತ್ರಿಕೆಯಲ್ಲಿ ಅಚ್ಚಾದ ಜೆಕೊಸ್ಲವಾಕಿಯಾದ ಚಿತ್ರ ತೋರಿಸಿ ‘ಛೆ, ಭೂಮಿಯ ಮೇಲೆಯೇ ಇಷ್ಟು ಸುಂದರ ಸ್ಥಳಗಳಿರುವಾಗ ಸ್ವರ್ಗ ಹೇಗಿರಬಹುದು? ನಾನೂ ಒಂದು ದಿನ ಹೋಗುತ್ತೇನಲ್ಲ, ನೋಡುತ್ತೇನೆ. . .’ ಎಂದು ಕುಶಾಲಿನಿಂದ ನಕ್ಕಿದ್ದರು. ಆರೋಗ್ಯ ಕೆಟ್ಟರೆ ದೇವಿಯ ಕುಂಕುಮವನ್ನು ಬಾಯಿಗೆ ಹಾಕಿಕೊಳ್ಳುತಿದ್ದರು, ಸರಿಯಾಗುತ್ತಿದ್ದರು. ಭಕ್ತಿಯ, ನಂಬಿಕೆಯ ವಿಚಾರವಾಗಿ ಉದ್ದಾನುದ್ದ ಮಾತಾಡಿಯೂ ಯಾವುದೋ ಒಂದು ಕ್ಷಣದಲ್ಲಿ ತನ್ನನ್ನೇ ಅವಲೋಕಿಸಿಕೊಳ್ಳುತ್ತ ಎಲ್ಲ ನಂಬಿಕೆ ಇಲ್ಲಿ (ಎದೆ ತಟ್ಟಿಕೊಂಡು) ಇರುವುದು. ಅಲ್ಲವೆ? ನಂಬಿದರುಂಟು ಇಲ್ಲವಾದರಿಲ್ಲ- ಎಂದು ಸ್ವಗತಕ್ಕಿಳಿಯುತಿದ್ದರು. ಸಾಯುವುದು ಸಂತೋಷವೇ. ಆದರೆ ಸಾಯುವ ರೀತಿ? ‘ಅನಾಯಾಸವಾಗಿ ಸತ್ತರೆ ಸಾಕು’ ಎಂದು ಆ ಪ್ರಸಿದ್ದ ಶ್ಲೋಕವನ್ನು ಹೇಳಿಯೇ ಹೇಳುವರು. ದೈನ್ಯದ ಜೀವನ ಮುಗಿಸಿ ವಿನಾ ದೈನ್ಯೇನ ಜೀವನ ಕಳೆದಾಯಿತು, ಇನ್ನು ಇದೊಂದು ಬಾಕಿ’ ಎಂದಿದ್ದರು. ಹಾಗೆಯೇ ಆಯಿತು.
ಕೊನೆಯ ದಿನಗಳಲ್ಲಿ ಇದ್ದಕ್ಕಿದ್ದಂತೆ ಅವರು ದಪ್ಪವಾಗುತ್ತ ಹೋದರು; ಯಾವತ್ತೂ ಒಂದೇ ಹದದಲ್ಲಿ ಇದ್ದವರು. ದಪ್ಪವಾಗಿ ಬಿಟ್ಟಿದ್ದೀರಿ ಎಂದರೆ ‘ಹೂಂ. ಭಕ್ತರು ಬಗೆಬಗೆ ಫ್ರುಟ್ಸ್ ತಂದು ಕೊಡುತ್ತಿದ್ದಾರೆ, (ಫ್ರುಟ್ಸ್, ಫ್ರೆಂಡ್ಸ್, ಸ್ಟಾಫ್ ಮುಂತಾದ ಈ ಮಾದರಿ ಶಬ್ದಗಳನ್ನು ಆಕೆ ಎಂದೂ ಕನ್ನಡದಲ್ಲಿ ಹೇಳರು). ತಿಂದು ತಿಂದು, ನೋಡಿ ಈಗ!- ಎಂದು ಮಾತು ಹಾರಿಸಿದರು. ಆಕೆ ಹಾಗೆ ‘ತಿಂದು ತಿಂದು’ ಎನ್ನುವಷ್ಟು ತಿನ್ನುವ ಜಾತಿಯಲ್ಲ. ಎಂದೂ ತನ್ನ ಮಿತಿ ತಪ್ಪಿದ್ದಿಲ್ಲ. ಕಟ್ಟುನಿಟ್ಟು ಆಹಾರದವರು. ಏನಾಗಿರಬಹುದು? ಮದ್ದು ತೆಗೆದುಕೊಳ್ಳಿ ಅಂದರೆ ತೆಗೆದುಕೊಳ್ಳುವುದಿಲ್ಲ, ಕುಂಕುಮ ಸಾಕು ಅಂತ ಹಟ ಮಾಡುತ್ತಾರೆ- ಅಂತೆಲ್ಲ ಅವರು ಮಗನಂತೆ ಸಾಕಿಕೊಂಡ ‘ಸುರ್‍ಮಣ್ಯ’ ಚಿಂತಿಸಿದ. ರಾಜವಾಡೆಯವರ ಹಟವೆಂದರೆ ಹಟಯೋಗದಂತೆ. ತನ್ನದೇ ಮನದ ಮಾತಿಗೂ ಬಾಗರು- ಎನ್ನುತಿದ್ದರು ಅವರ ಪರಿಚಯದವರು. ಆ ಹಟ ಅವರನ್ನು ಕಡೆವರೆಗೂ ಬಿಟ್ಟು ಹೋಗಲೇ ಇಲ್ಲ. ಪಾದ ನೋಡಿದರೆ ಬಾತಿತ್ತು. ‘ಪೌಳಿಯಲ್ಲಿ ಕಾಲು ಇಳಿಬಿಟ್ಟು ಕುಳಿತಿದ್ದರಿಂದ ಹಾಗೆ’ ಅಂತ ಅವನಿಗೂ ಇತರರಿಗೂ ಸಮಾಧಾನ ಹೇಳಿದರು. ‘ಅಮ್ಮನ ಪ್ರಸಾದ ವಾಸಿ ಮಾಡುತ್ತದೆ. ವಾಸಿ ಮಾಡದಿದ್ದಲ್ಲಿ ಎಲ್ಲ ಸಾಕು, ಇನ್ನು ಬಾ ಅಂತ ಕರೆದ ಹಾಗೆ.’ ಹಾಗೆ ಹದಿನೈದು ದಿನ ಕಳೆದಿರಬಹುದೇನೋ, ಆತಂಕ ನಿಜವಾಯಿತು.
ಸುಬ್ರಹ್ಮಣ್ಯ ಬಿಕ್ಕುತ್ತ ‘ಅಮ್ಮ’ ಬೆಳಗೆದ್ದೊಡನೆ ಪ್ರಜ್ಞೆ ಜಾರಿ ಅಸ್ವಸ್ಥರಾದುದನ್ನೂ ಆಸ್ಪತ್ರೆಗೆ ಸೇರಿಸಿದ ಸುದ್ದಿಯನ್ನೂ ಹೇಳಿದ. ಹೋಗಿ ನೋಡಿದರೆ ದೀರ್ಘ ಸಶಬ್ದ ಉಸಿರಿನಲ್ಲಿದ್ದರು ರಾಜವಾಡೆ. ಮುಖ ಪ್ರಶಾಂತವಿತ್ತು. ಹೆಸರು ಹಿಡಿದು ಎರಡು ಬಾರಿ ಕರೆದೆ. ಊಹೂಂ, ‘ಲೋಕವಿಲ್ಲ’ದಂತೆ ಮಲಗಿದ್ದರು. ನೋಡಿದೊಡನೆ ಕರೆದೊಡನೆ ಗುಟುಕು ಎಚ್ಚರವಿದ್ದರೂ ಸುಮ್ಮನಿರದವರು. ಎಲ್ಲಾದರೂ ಎಚ್ಚರ ಬಂದಿತೆಂದರೆ ತನ್ನ ಈ ಅವಸ್ಥೆಯ ವರ್ಣನೆಯನ್ನು ಮಾಡದೆ ಬಿಡುವರೆ ಅವರು? ಹಿಂದಿನ ರಾತ್ರಿಯವರೆಗೂ ಸನ್ನಿಧಾನದ ಲೆಕ್ಕವೆಲ್ಲ ಬರೆದು ಪೂರೈಸಿ ಮಲಗಿದ್ದು, ಬೆಳಗಾದೊಡನೆ ತಲೆ ಸುತ್ತಿ ಬಂದದ್ದು, ತನಗೆ ಗೊತ್ತೇ ಆಗದಂತೆ ಅಲ್ಲೇ ಕುಸಿದದ್ದು, ಎಲ್ಲ?
‘ತನಗೆ ಗೊತ್ತೇ ಆಗದಿದ್ದರೂ ಗೊತ್ತಾದವರಿಗಿಂತಲೂ ಹೆಚ್ಚಿಗೆ, ನಾವು ಬಾಯಿ ಕಳೆದು ಕೇಳುವಂತೆ, ಒಂದು ಹರಿಕತೆ ಮಾಡಿ ಬಿಡುತ್ತಿದ್ದರು.’ ಎಂದರು ಅವರ ಪರಿಚಿತರೊಬ್ಬರು.
‘ಅಷ್ಟೆ ಅಲ್ಲ, ಈ ಮೂರ್ಛಾವಸ್ಥೆಯಲ್ಲಿ ತಾನು ಎಲ್ಲಿದ್ದೆ ಏನೆಲ್ಲ ಕಂಡೆ ಅಂತಲೂ. ಸಾಕ್ಷಾತ್ ದೇವಿ ಶಾರದಾಂಬೆ ತನ್ನೆದುರು ಪ್ರತ್ಯಕ್ಷವಾಗಿ ಎದುರು ನಿಂತು ಹೀಗೆಹೀಗಂದಳು ಅಂತಲೂ ಬೇಕಾದರೆ’.
‘ನನಗೆ ಗೊತ್ತಾಗದ ಹಾಗೆ ಸಾವು ಬಂದರೆ ಸಾಕಪ್ಪ, ಆ ತಾಯಿ ಅಷ್ಟು ನಡೆಸಿ ಕೊಡಲಿ’ ಎನ್ನುತ್ತ ದೇವರ ಗರ್ಭಗುಡಿಯ ದಿಕ್ಕಿಗೆ ಕಣ್ಮುಚ್ಚಿ ಕೈ ಮುಗಿದವರು ಅವರು. ಅವರ ಬಯಕೆಯಂತೆ ಆಗಿಯೇ ಆಗುತ್ತದೆ ನೋಡುತ್ತಿರಿ.
‘ವಾಕ್ಸಿದ್ಧಿ ಇತ್ತು ಅವರಿಗೆ ಗೊತ್ತೆ? ಅವರು ಹೇಳಿದ್ದು ಮಾತ್ರವಲ್ಲ, ಬಯಸಿದ್ದೂ ಆಗುತ್ತದೆ’
‘ಆದರೆ ಒಂದು, ಅದನ್ನು ಆಕೆ ಎಲ್ಲಿಯೂ ದುರುಪಯೋಗ ಪಡಿಸಿಕೊಳ್ಳಲಿಲ್ಲ.’
‘ಈ ಹೆಂಗುಸುಂಟಲ್ಲ, ಅಂಥಿಂಥದಲ್ಲ. ಘಟಾನುಘಟಿ. ಯಾರಿಗೂ ಖೇರೇ ಮಾಡುತ್ತಿರಲಿಲ್ಲ. ಮಿನಿಸ್ಟರ್ ಆಗುವ ತಾಕತ್ತಿನವರು’
‘ರಾಣಿ. ರಾಣಿ ಅವರು. ತಾನು ಹೇಳಿದ್ದು ಆಗಬೇಕು. ಸಾಧಿಸಿಯೇ ಶುದ್ಧ’
‘ಜನ ಹೇಳದೆ ಕೇಳದೆ ಪ್ರಯಾಣ ಹೊರಟದ್ದೇ ಅಲ್ಲವೆ. ಮುಂಚಿನಿಂದಲೂ ಹಾಗೆಯೇ ಅವರು, ಎಲ್ಲಿಗಾದರೂ ಹೋಗಬೇಕೆಂದು ಮನಸ್ಸಾಯಿತೇ, ಆಚೀಚೆ ನೋಡಲಿಕ್ಕಿಲ್ಲ, ಸೀರೆ ಸುತ್ತಿಕೊಂಡು ಹೊರಟು ಬಿಡುವುದೇ. ಕಡೆಗೂ ಹಾಗೆಯೇ ಹೊರಟಾರಂತ ಮಾತ್ರ ಯಾರೂ ಎಣಿಸಿರಲಿಲ್ಲ.’ –
‘ಒಂದು ಚೂರು ಕೂಡ ಚಾಕರಿ ಮಾಡಿಸಿಕೊಳ್ಳದೆ, ಹೊರಟು ಹೋಗುತ್ತಾರೆ ನೋಡುತ್ತಿರಿ, ಅವರ ಮನೋಬಲ ಅಂಥದು’
ಮಾತಿನ ಮಂತು ರಾಜವಾಡೆಯವರ ವ್ಯಕ್ತಿತ್ವವನ್ನು ಕಡೆಯುತ್ತ ಶ್ರದ್ಧಾಂಜಲಿಗೆ ಸಿದ್ಧವಾಗುತ್ತ ಇತ್ತು.
ಕೊನೆಗೂ ಅನುಭವದ ಪುಟಪುಟಗಳನ್ನು ತನ್ನೊಳಗೆ ಭದ್ರಪಡಿಸಿಕೊಂಡೇ, ೧೯೯೪ರ ಏಪ್ರಿಲ್ ೨೩ರಂದು, ಮೂರು ದಿನಗಳ ಕಾಲದ ಅಪ್ರಜ್ಞಾವಸ್ಥೆಯ ತುದಿಯಲ್ಲಿ, ಆಸ್ಪತ್ರೆ ಸೇರಿದ ಮೂರನೆಯ ದಿನ ಮುಸ್ಸಂಜೆ ಐದೂವರೆಗೆ ವರ್ಷಸಂದ ದೇಹಗೇಹವನ್ನು ಬಿಟ್ಟು ರಾಜವಾಡೆಯವರು ನಡೆದು ಬಿಟ್ಟರು, ಯಾರೂ ಕಾಣದಂತೆ; ತನಗೂ ತಿಳಿಯದಂತೆ? ಪಾರ್ಥಿವ ಶರೀರದ ಎದುರು ನಿಂತಾಗ ಹಗಲೆಲ್ಲ ಗೆಜ್ಜೆಕಾಲಲ್ಲಿ ಓಡಾಡಿ, ಕುಣಿದಾಡಿ, ಆಡಿ, ಮಾತಾಡಿ, ಅತ್ತು, ನಕ್ಕು, ಕೋಪಿಸಿ, ನಲಿದ ಒಬ್ಬಪುಟ್ಟ ಬಾಲಕಿ ಕತ್ತಲಾಗುತ್ತಲೂ ದಣಿದು ಸ್ವಸ್ಥ ಮಲಗಿರುವಂತೆ ಕಂಡಿತು. ದೇವಸ್ಥಾನದ ಸುತ್ತಿನಲ್ಲೇ ತಿರುಗುತ್ತಾ ಹೊರಜಗತ್ತಿಗೆ ಲೇಖಕಿಯಾಗಿ ತಾನು ಇರುವುದೇ ನೆನಪಾಗದಂತೆ ಇದ್ದುಕೊಂಡು ಮರೆಯಾದರಲ್ಲವೆ ಅವರು!
ಮರುದಿನ ಪತ್ರಿಕೆಯಲ್ಲಿ ಅವರ ನಿಧನವಾರ್ತೆ ಪ್ರಕಟವಾಯಿತು. ಬೆಳಿಗ್ಗೆ ಹತ್ತೂವರೆಗೆ, ದೇವಸ್ಥಾನಕ್ಕೆ ಅನತಿ ದೂರದಲ್ಲಿಯೇ ಇರುವ ಬೀಡಿನ ಗುಡ್ಡೆ ರುದ್ರಭೂಮಿಯತ್ತ ಅವರು ಅದುವರೆಗೆ ವಾಸಿಸಿದ ದೇಹಾಲಯದ ಅಂತಿಮ ಪಯಣ ಸುರುವಾಯಿತು. ನನ್ನ ಪತಿ ಶ್ರೀನಿವಾಸಮೂರ್ತಿಯವರೆಂದರೆ ತುಂಬ, ಭಾರೀ ಎನುವಷ್ಟು, ಇಷ್ಟ ಅವರಿಗೆ. ಹೊಗಳೀ ಹೊಗಳಿ ಇಡುತಿದ್ದರು, ಎದುರೆದುರಿಗೇ. ‘ಎದುರು ಹೊಗಳುವುದೆಂದು ತಿಳಿಯಬೇಡಿ’ ಎನ್ನುತ್ತಲೇ. ರಾಜವಾಡೆಯವರು ತೀರಿಕೊಳ್ಳುವಾಗ ಸುಬ್ರಹ್ಮಣ್ಯ ಅವರಿಗೆ ಜಾಂಡಿಸ್, ಜ್ವರ. ಹಾಗಾಗಿ ಆತನ ಅಪೇಕ್ಷೆಯಂತೆ ಸ್ಮಶಾನದ ವರೆಗೆ ಅವರ ಆ ಪಯಣದ ಮುಂಭಾಗದಲ್ಲಿ ಅಗ್ನಿ ಹಿಡಿದು ಸಾಗಿದ್ದು ಮೂರ್ತಿಯವರೆ! ಸುಬ್ರಹ್ಮಣ್ಯ ವಾಹನದಲ್ಲಿ ಬಂದು ಮುಂದಿನ ಕೆಲಸವನ್ನು ಪೂರೈಸಿದರು. ತನ್ನ ಕಾಲದ ಎಷ್ಟು ಜನ ಮಹಿಳೆಯರೊಂದಿಗೆ ಒಡನಾಡಿದವರು ರಾಜವಾಡೆ. ಅವರಲ್ಲಿ ಹೆಚ್ಚಿನವರೆಲ್ಲ ಅವರವರ ಭವ ಮುಗಿಸಿ ಹೋಗಿಯಾಗಿತ್ತು. ಚಿತೆಯವರೆಗೂ ಕಳಿಸಲು ಬಂದ ಮಹಿಳೆಯೆಂಬವಳು ಕೇವಲ ಆರು ವರ್ಷದಿಂದ ಒಡನಾಡಿದ ನಾನೊಬ್ಬಳೆ. ನೆನೆದಾಗೆಲ್ಲ ನಮಗಿಬ್ಬರಿಗೂ ‘ಯಾವುದೋ ಒಂದು ಋಣಯೋಗ. . . ‘ ಮುಂತಾದ ನಮೂನೆಯ ವಾಕ್ಯಗಳು ತಂತಾನೇ ಬಾಯಲ್ಲಿ ಬಂದು ಬಿಡುತ್ತವೆ.
ಅವರು ನಿಧನರಾದಾಗ ಅಖಿಲಭಾರತ ಲೇಖಕಿಯರ ಸಂಘ ಹೊರತರುವ ‘ಲೇಖಕಿ’ ಪತ್ರಿಕೆಯ ಸಂಪಾದಕೀಯ ಮಹಿಳೆಯರಿಗೆ ತಮ್ಮದೇ ಆದೊಂದು ‘ವ್ಯಕ್ತಿತ್ವ’ವಿದೆ ಎಂದು ಭಾವಿಸದೇ ಇದ್ದ ಕಾಲದಲ್ಲಿ, ಹಾಗೂ ಮಹಿಳೆಯರಿಗೆ ತಮ್ಮದೇ ಆದ ಸ್ವತಂತ್ರ ಮನೋಭೂಮಿಕೆಯ ಅಗತ್ಯವೇ ಇಲ್ಲ ಎಂದು ನಂಬಿದ್ದ ಕಾಲದಲ್ಲಿ ಸರಸ್ವತೀಬಾಯಿ ರಾಜವಾಡೆಯವರು ಅಕ್ಷರಗಳ ರಸಲೋಕದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡರು. ಅಷ್ಟೇ ಅಲ್ಲ, ಬುದ್ಧಿಪ್ರಧಾನರು ಎನಿಸಿಕೊಂಡ ಪುರುಷರ ಗಮನವನ್ನೂ ಸೆಳೆದರು. ‘ಸಣ್ಣ ಕತೆಗಳ ಅನಭಿಷಿಕ್ತ ರಾಣಿ’ ಎನ್ನುವ ಹೊಗಳಿಕೆಗೆ ಪಾತ್ರರಾದರು. ತುತ್ತೂರಿ ಮತ್ತು ಕಹಳೆಗಳಿಂದ ಇಂಥ ಕಿರೀಟಗಳನ್ನು ಬಹಿರಂಗಗೊಳಿಸದೆ ಇತಿಹಾಸದ ಪುಟಗಳ ಪರದೆಯೊಳಗೇ ತಣ್ಣಗೆ ಉಳಿದರು. ಆಧ್ಯಾತ್ಮಿಕದ ಕಡೆ ವಾಲುತ್ತಾ ಸಹಜ ಬದುಕಿನಿಂದ ವಿಮುಖರಾಗಿ ಸನ್ಯಾಸದ ಕಡೆಗೆ ಸೆಳೆಯಲ್ಪಟ್ಟು ಲೌಕಿಕ ಬರಹಗಳಿಗೂ ವಿಮುಖರಾದರು.
ಒಂದು ಕಾಲದಲ್ಲಿ ಶ್ರೀಮತಿ ರಾಜಲಕ್ಷ್ಮಿಯವರೂ ರಾಜವಾಡೆಯವರೂ ಮಾಡಿದ ಸಣ್ಣಕತೆಗಳ ಪ್ರಾರಂಭ ಲೇಖಕಿಯರ ಸಾಹಿತ್ಯ ಚರಿತ್ರೆಯಲ್ಲಿಯೇ ತುಂಬ ಭರವಸೆಗಳನ್ನು ಹುಟ್ಟಿಸುವಂತಹ ಪ್ರಾರಂಭವಾಗಿತ್ತು. ಅದೇ ಕಾಲದಲ್ಲಿ ಮಾಸ್ತಿಯವರೂ ಡಾ. ಶಿವರಾಮಕಾರಂತರೂ ತಮ್ಮ ಬರಹಗಳಿಂದ ಹೊಸಕನ್ನಡದ ಸೃಜನಶೀಲತೆಯ ಹರವನ್ನು ವಿಸ್ತರಿಸುತ್ತಿದ್ದರು. ಈ ಪುರುಷರು ಮೇಲೇರಿದಂತೆ ಈ ಮಹಿಳೆಯರು ಬೆಳೆಯುವ ಎಲ್ಲ ಸಾಧ್ಯತೆಗಳೂ ಇದ್ದವು. ದುರದೃಷ್ಟದ ವಿಷಯವೆಂದರೆ ಇವರ ಖಾಸಗಿ ಬದುಕಿನ ಒತ್ತಡಗಳು ಇವರನ್ನು ಬದುಕಿನಿಂದಲೇ ವಿಮುಖವಾಗುವಂತೆ ಮಾಡಿದ್ದು! ಮಹಿಳೆಯರ ಸಾಹಿತ್ಯ ಚರಿತ್ರೆಯನ್ನು ಯಾರಾದರೂ ದಾಖಲಿಸುವುದಾದರೆ ಅವರು ಮೊದಲು ಈ ವಿಷಯದ ಕಡೆಗೆ ಗಮನ ಹರಿಸಬೇಕು. ಈ ಎರಡು ಚೈತನ್ಯಗಳು ಯಾಕೆ ತಮ್ಮ ಸೃಜನಶೀಲತೆಗೆ ಕೊಡಲಿಪೆಟ್ಟು ಹಾಕಿದರು? ಇದಕ್ಕೆ ಸಮಾಜ ಎಷ್ಟು ಕಾರಣ ಎನ್ನುವುದರ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ಒದ್ದೆಗಣ್ಣಿಂದ ದಾಖಲಿಸಿದೆ. (ಲೇಖಕಿ, ಸಂಚಿಕೆ ೧೦, ‘ಗಿರಿಬಾಲೆ’ ಸ್ಮರಣೆ, ಎಪ್ರಿಲ್-ಜೂನ್, ೧೯೯೪. ಸಂಪಾದಕರು: ಶ್ರೀಮತಿ ಹೇಮಲತಾ ಮಹಿಷಿ, ಶ್ರೀಮತಿ ಶಾಂತಾ ನಾಗರಾಜ್)
ಇಡೀ ಇಂಡಿಯಾ ಹುಡುಕಿದರೂ ನಮ್ಮ ರಾಜವಾಡೆಯವರಂತೆ ವಿಶಿಷ್ಟ ಅನುಭವಗಳನ್ನು ಸೂರೆಗೊಂಡ ಲೇಖಕಿ ಸಿಗಲಿಕ್ಕಿಲ್ಲ. ಆಕೆ ಬದುಕಿನಲ್ಲಿ ಕಂಡುಂಡುದನ್ನು ಸುಮ್ಮನೆ ಯಥಾವತ್ ದಾಖಲೆ ಮಾಡಿದರೂ ಸಾಕಿತ್ತು, ಭಾರತೀಯ ಸಾಹಿತ್ಯಕ್ಕೆ ಕನ್ನಡದ ಒಂದು ಉನ್ನತ ಕೊಡುಗೆಯಾಗುತ್ತಿತ್ತು.
ಅವತ್ತವತ್ತಿಗೆ ಯಾವುದು ಸರಿ, ಯಾವುದು ಸತ್ಯ ಅಂತ ಕಾಣುತ್ತದೋ ಹಾಗೆ ಬದುಕುತ್ತ ಬಂದ ರಾಜವಾಡೆಯವರ ಕತೆಯೆಂದರೆ ಹಾದಿಯುದ್ದಕ್ಕೂ ಪ್ರೀತಿ ಅರಸುತ್ತ ಏಕಾಕಿತನದಿಂದ ಏಕಾಂತಕ್ಕೆ ಹೊರಳಿಕೊಂಡ ಕತೆ. ಮನುಷ್ಯ ನಡೆದುಬಂದ ದಾರಿ ಕೊನೆಗೆ ತನ್ನದೇ ರೀತಿಯಲ್ಲಿ ಆತನನ್ನು ನಡೆಸುತ್ತ ಹೋಗುವುದು, ಒಬ್ಬೊಬ್ಬರನ್ನು ಒಂದೊಂದು ದಿಕ್ಕಲ್ಲಿ, ಎಷ್ಟು ವಿಚಿತ್ರ!
****
ಕೊನೆಗೂ ಪ್ರಶಸ್ತಿ-ಗಿಶಸ್ತಿಗಳ ಯಾವ ಭಾರ-ಬಂಧನಗಳಿಗೂ ಎಟುಕಿಸಿಕೊಳ್ಳದೇ ಅವರು ಜಾರಿಕೊಳ್ಳಲು ಸಾಧ್ಯವಾಯಿತು ಎಂದು ಅಸೂಯೆ ಪಡುವಂತಾಗುತ್ತಿದೆ. ಅವರು ಅಲ್ಲಿದ್ದಾರೆ, ನಿರಂತರ ಅಲ್ಲಿರುತ್ತಾರೆ, ಯಾವಾಗ ಹೋದರೂ ಅಲ್ಲಿರುತ್ತಾರೆ ಅಂತ ನಮಗೆ ಬೇಕಾದವರ ಬಗ್ಗೆ ಎಣಿಸುತ್ತೇವಲ್ಲವೇ? ಎಷ್ಟೆಲ್ಲ ದಿಢೀರ್ ಸಾವುಗಳನ್ನು ಕಂಡೂ!
ಈಗಲೂ ಮೂರ್ತಿಯವರೂ ನಾನೂ ಶ್ರೀ ಶಾರದಾಂಬಾ ದೇವಸ್ಥಾನಕ್ಕೆ ಹೋದೆವೆಂದರೆ ಹ್ಹೊ! ಬಂದಿರಾ, ಬನ್ನಿ ಬನ್ನಿ ಎನ್ನುವ ಹರ್ಷಿ ರಾಜವಾಡೆ ಎಲ್ಲಿ ಎಂದು, ಅವರು ಕುಳಿತುಕೊಳ್ಳುವ ಮಾಮೂಲು ಜಾಗವನ್ನು ಸವರಿ ಎಲ್ಲಿದ್ದೀರಿ ಎಂದು ಕೇಳುವಂತಾಗುತ್ತದೆ. ಸಾವಿನ ನೆನಪನ್ನು ಸಹ ಹುಟ್ಟಿಸದಂತಹ ವ್ಯಕ್ತಿತ್ವದ ರಾಜವಾಡೆಯವರೂ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ