ಹ್ಞಾ, ರಾಜವಾಡೆ ಹೇಳುತ್ತಿದ್ದ ರಂತಿದೇವನ ಕತೆ – (ಅವರ ಅತ್ಯಂತ ಪ್ರೀತಿಯ ಕಥೆಯಿದು). ‘ನಿಮಗೆ ಹೇಳಿದ್ದೆನಾ ಮುಂಚೆ?’ ಕೇಳುವರು. ನಾನು ಇಲ್ಲವೆನ್ನುವೆ. ಇಲ್ಲವೆನ್ನುವುದು ಪೂರ್ಣಗೊಳ್ಳುವುದರೊಳಗೆ ಅವರ ಕಥೆ ಆರಂಭವಾಗುವುದು.

ರಂತಿದೇವನೆಂಬ ರಾಜನಿದ್ದ. ಮಹಾದಾನಿ, ಅಂತಃಕರಣಿ. ಲೋಕೋಪಕಾರಿ. ಭೂಲೋಕದಲ್ಲಿ ನಾನಾ ತರಹದ ಜನೋಪಯೋಗಿ ಕೆಲಸಗಳನ್ನು ಮಾಡಿ ಒಂದು ದಿನ ಮರಣ ಹೊಂದಿದ. ಮರಣ ಹೊಂದಿ ಸ್ವರ್ಗ ಸೇರಿದ. ಸ್ವರ್ಗದಲ್ಲಿ ಬಹುಕಾಲ ಕಳೆಯುತ್ತಲೂ ಅಲ್ಲಿಗೆ ಯಮದೂತರು ಬಂದರು. ‘ನಿನ್ನ ಇಲ್ಲಿನ ವಾಸದ ಅವಧಿ ಮುಗಿಯಿತು. ಇನ್ನು ನರಕದ ಅವಧಿ. ನಾವು ನಿನ್ನನ್ನು ಕರೆದೊಯ್ಯಲು ಬಂದಿದ್ದೇವೆ. ಬಾ’ ಎಂದರು. ಎನ್ನುತ್ತಲೂ ರಂತಿದೇವ ‘ಅದು ಹೇಗಾಗುತ್ತದೆ? ಎಲ್ಲಿಯವರೆಗೆ ಭೂಲೋಕದಲ್ಲಿ ಹೆಸರು ಇರುತ್ತದೋ ಅಲ್ಲಿಯವರೆಗೆ ಸ್ವರ್ಗವನ್ನು ಅನುಭವಿಸುವ ಹಕ್ಕೂ ಇರುತ್ತದೆ. ನನ್ನ ಹೆಸರಿನ್ನೂ ಭೂಲೋಕದಲ್ಲಿ ಜೀವಂತವಿದೆ. ಹಾಗಿರುವಾಗ ನಾನು ನರಕಕ್ಕೆ ಬರಲೊಲ್ಲೆ’ ಎಂದ. ‘ಹ್ಹೊ! ಹಾಗೆ ಹೇಳುತ್ತೀಯಾ? ಹಾಗೆ ಹೇಗೆ ಹೇಳುತ್ತೀಯಾ?’ ಎಂದರು ಯಮದೂತರು. ಭೂಲೋಕಕ್ಕೆ ಹೋಗಿ ನೀವೇ ಪರೀಕ್ಷಿಸಿ ಬನ್ನಿ ಎಂದ ರಂತಿದೇವ. (ಮಾದರಿ ೨: ‘ಹಾಗಾದರೆ ಭೂಲೋಕದಲ್ಲಿ ಇನ್ನೂ ನಿನ್ನ ಹೆಸರು ಉಂಟಾ?’ ‘ಉಂಟು’ ‘ಇರಲಿಕ್ಕೆ ಸಾಧ್ಯವಿಲ್ಲವಯ್ಯಾ’ ‘ಹಾಗೆಂದರೆ? ಹೋಗಿ ನೋಡಿ. ಬಂದು ಮಾತಾಡಿ’ . ಅಭಿನಯ) ಯಮದೂತರು ಭೂಲೋಕಕ್ಕೆ ಬಂದರು. ಬಂದು ನೋಡುತ್ತಾರೆ ಎಲ್ಲಿ ಕಂಡರೂ ಕ್ಷಾಮ… ಜಲಕ್ಷಾಮ. ಹಾಹಾಕಾರ. ನೀರಿಲ್ಲ ನಿಡಿಯಿಲ್ಲ. ಜನ ನರಳುತ್ತಿದ್ದಾರೆ. ಉಸಿರು ಬಿಡಲೂ ತ್ರಾಣವಿಲ್ಲ. ಅಂಥಲ್ಲಿಯೂ ಯಮದೂತರು ಅವರನ್ನು ‘ರಂತಿದೇವನನ್ನು ಬಲ್ಲಿರಾ’ ಅಂತ ಕೇಳಿಯೇ ಕೇಳಿದರು. ‘ಯಾರಾತ? ಅಯ್ಯೊ, ನಮಗೆ ನೀರು ಕೊಡಿ ನೀರು’ ಎಂದರು ಜನರು. ಹೀಗೆ ಕೇಳುತ್ತ ಯಮದೂತರು ಮುಂದೆ ಮುಂದೆ ಸಾಗಿದರು. ಸಾಗೀ ಸಾಗೀ ಒಂದೆಡೆ ಬರುವಾಗ ಎಲ್ಲಿಂದಲೋ ಕಪ್ಪೆಗಳ ಟರ್ರಂಯ್ ಟರ್ರಂಯ್! ಹ್ಞಂ? ಇದೆಲ್ಲಿಂದ? ಹೋಗಿ ನೋಡಿದರೆ ಅಲ್ಲೊಂದು ಕೆರೆ. (ಅದು ಒಮ್ಮೊಮ್ಮೆ ಬಾವಿಯಾಗುವುದೂ ಇದೆ.) ಆ ಕೆರೆಯಲ್ಲಿ ಹೇರಳ ಕಪ್ಪೆಗಳು, ಸುಖವಾಗಿ ಕುಳಿತು ಗಾಯನ ನಡೆಸುತ್ತಿವೆ. ಅಚ್ಚರಿಯಿಂದ ಹಾರಿ ಬಿದ್ದರು ಯಮದೂತರು. ಕಪ್ಪೆಗಳನ್ನು ಕೇಳಿದರು, ‘ರಂತಿದೇವನೆಂಬ ರಾಜ ಗೊತ್ತೆ ನಿಮಗೆ?’ ಆಗ ಕಪ್ಪೆಗಳು ಏಕಕಂಠದಲ್ಲಿ ಉದ್ಗರಿಸಿದವು ‘ಅಯ್ಯೊ ಅವನ ಹೆಸರನ್ನು ಇನ್ನೊಮ್ಮೆ ಹೇಳಿ. ಅವನಂಥ ಪುಣ್ಯಾತ್ಮ ಇರುವನೆ? ಇದು ನೋಡಿ, ಅವನೇ ಕಟ್ಟಿಸಿದ ಕೆರೆ. ಜಗತ್ತೆಲ್ಲ ನೀರಿಲ್ಲದೆ ಒಣಗಿದರೂ ಈ ಕೆರೆಯ ನೀರು ಒಣಗದು. ಹೋಗಿ, ನೀರಿಲ್ಲದಲ್ಲಿ ಈ ಸುದ್ದಿ ಕೊಡಿ’ ಅವಾಕ್ಕಾದರು ಯಮದೂತರು. ರಂತಿದೇವನ ಹೆಸರಿನ್ನೂ ಭೂಲೋಕದಲ್ಲಿದೆ, ಆತ ಮಾಡಿದ ಪುಣ್ಯ ಕೆಲಸವೂ ಉಳಿದಿದೆ. ಎಂದ ಮೇಲೆ ಅವನನ್ನು ನರಕಕ್ಕೆ ಕರೆದೊಯ್ಯುವುದೆಂತು? ಯಮದೂತರು ಸದ್ದಿಲ್ಲದೆ ಕಾಲುಕಿತ್ತರು.

-ಇದು ರಾಜವಾಡೆಯವರು ಹೇಳುವ ಒಂದು ರೀತಿಯಷ್ಟೆ. ಪ್ರತಿಸಲವೂ ಕತೆಯ ಮುಖ್ಯ ವಿಷಯ ಬಿಟ್ಟು ಉಳಿದೆಲ್ಲ ಸಂಭಾಷಣೆಗಳೂ ವಿವರಣೆಗಳೂ ಬದಲಾಗುತ್ತಿದ್ದುವು. ಹೊಸ ಹುರುಪಿಂದ ಕೂಡಿರುತ್ತಿದ್ದುವು. ರಂತಿದೇವನೇನು ಇವರ ತಲಾಂತರದ ಸಂಬಂಧಿಕನೋ, ಮೊನ್ನೆಮೊನ್ನೆ ತೀರ ಇತ್ತೀಚೆಗಷ್ಟೇ ತೀರಿಕೊಂಡ ಆತ್ಮೀಯನೋ ಎಂಬಂತೆ ರೂಪಿತನಾಗುತ್ತಿದ್ದ. ಒಂದು ರೀತಿಯಲ್ಲಿ ಅಲ್ಲೊಂದು ನಾಟಕವನ್ನೇ ಆಡಿತೋರಿಸುತ್ತಿದ್ದರು ರಾಜವಾಡೆ. ಕೆಲವೊಮ್ಮೆ ನನಗೆ ಹರಿಕಥೆ ದಾಸರೆದುರು ಕುಳಿತಂತೆಯೂ ಆಗುತ್ತಿತ್ತು. ಕತೆಯನ್ನು ಬಾಯಿಂದ ಬಾಯಿಗೆ ಹೊಸ ಹೊಸತಾಗಿ ದಾಟಿಸುವ ಪರಂಪರೆಯೆದುರು ಕುಳಿತಂತೆಯೂ. ಕಥೆಯೆಲ್ಲ ಪೂರ್ತಿ ಕೇಳಿಯಾದ ಮೇಲೆ ಈ ಕಥೆ ಹೇಳಿದ್ದೀರಿ ಹೋದಸಲ – ಅಂತಂದು ನಕ್ಕರೆ, ಹ್ಞಾಂ ಅಂತ ಆ ನಗೆಗೆ ಇನ್ನಷ್ಟು ನಗೆ ಕೂಡಿಸಿ ದೀರ್ಘಗೊಳಿಸುತ್ತಿದ್ದರು.

ಇಂತು, ಭೂಮಿಯ ಮೇಲೆ ತನ್ನ ನಂತರವೂ ಹೆಸರಿರಬೇಕು, ಎಂದರೆ ಕೀರ್ತಿಶರೀರಿಯಾಗಬೇಕು. ಕೀರ್ತಿಶರೀರಿಯಾದವರಿಗೆ ಅಳಿವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು ರಾಜವಾಡೆ. ಅವರು ಹೇಳುವುದನ್ನೆಲ್ಲ ಅವರ ಉಚ್ಚಾರದಲ್ಲೇ ಹಾವಭಾವದಲ್ಲೇ ಸಂಪೂರ್ಣವಾಗಿ ಮೂಡಿಸಲು ನನ್ನಿಂದ ಆಗುತ್ತಿಲ್ಲವಲ್ಲ. ನನ್ನ ಬರೆವ ಶಕ್ತಿಯ ಮೇಲೆಯೇ ಸಿಟ್ಟು ಬರುತ್ತಿದೆ.
ಮೂರ್ಛಾವಸ್ಥೆಗೆ ತೆರಳುವ ಹಿಂದಿನ ರಾತ್ರಿಯವರೆಗೂ ಅಂದಂದಿನ ಲೆಕ್ಕ ಬರೆದರು ರಾಜವಾಡೆ. ಲೆಕ್ಕವೆಂದರೆ ಪೈಸೆ ಪೈಸೆ ಲೆಕ್ಕ. ಮೂರಿಂಚಗಲದ ಖಾಲಿ ಪೇಪರಿನಲ್ಲಿ ಜೀರಿಗೆ ಅಕ್ಷರದಲ್ಲಿ ನಡುಬಗ್ಗಿ ಕುಳಿತು ಅವರು ಸೇವಾಕಾರ್ಯಕ್ಕೆ ಬಂದ ಹಣದ ಲೆಕ್ಕ ಬರಕೊಂಡು ಚಿಲ್ಲರೆ ಕೊಡುವ ಭರಾಟೆ ನೋಡಬೇಕು. ಲೆಕ್ಕ ತಪ್ಪುಂಟಾ ನೋಡಿ. ಇದು ‘ಅಮ್ಮ’ನ ದುಡ್ಡು. ಸನ್ನಿಧಾನದ್ದು, ಆಚೀಚಾಗುವಂತಿಲ್ಲ. ಅವರ ದೇವಿ ತನ್ನ ವಿಚಾರ ಪೇಪರಿಗೆ ಹಾಕಿಸು ಎನ್ನುವುದಿಲ್ಲ. ಪ್ರಚಾರ ದೃಷ್ಟಿ ಕೂಡದು ಎನ್ನುವವಳು ಅವಳು. ಯಾರಲ್ಲಿಯೂ ಬೇಡು ಎನ್ನುವುದಿಲ್ಲ. ಭಕ್ತರು ಸ್ವಇಚ್ಛೆಯಿಂದ ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಮನುಷ್ಯ ತನ್ನ ಗುಣವನ್ನೇ ಅಭಿಲಾಷೆಯನ್ನೇ ದೇವರಿಗೂ ಎಂತು ಹೊಂದಿಸಿ ಬಿಡುತ್ತಾನೆ! ಮಾತ್ರ, ಇಟ್ಟ ಒಂದು ವಸ್ತು ಆಚೀಚಾಗಲಿಕ್ಕಿಲ್ಲ, ಒಂದು ಚೂರು ಕಾಗದ ಪೆನ್ನು ಜಾಗ ತಪ್ಪಲಿಕ್ಕಿಲ್ಲ, ಅಬ್ಬ, ರಾಜವಾಡೆಯವರು ಪ್ರತ್ಯಕ್ಷ ದರ್ಶನ ಪಾತ್ರಿಯೇ, ಕೈಲಿ ಸಿಂಗಾರದ ಕೊನೆ ಮಾತ್ರ ಇರುವುದಿಲ್ಲ ಅಷ್ಟೆ.
****

ಹ್ಞಾ, ಜನವರಿ ೯ ಮತ್ತು ೧೦, ೧೯೮೮ರಂದು ಬೆಂಗಳೂರಿನಲ್ಲಿ ನಡೆವ ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನಕ್ಕೆ ಅಂತೂ ಹೊರಟರಷ್ಟೆ? ಜೊತೆಯಲ್ಲಿ ಶ್ರೀಮತಿ ಪದ್ಮಾಶೆಣೈ, ಶ್ರೀಮತಿ ಸಾರಾಅಬೂಬಕರ್, ಶ್ರೀಮತಿ ಚಂದ್ರಕಲಾ ನಂದಾವರ, ಶ್ರೀಮತಿ ಲೀಲಾವತೀ ಎಸ್. ರಾವ್ ಮತ್ತು ನಾನು. ಇಲ್ಲಿನವರೇ ಆದ ಅವರ ನಂತರದ ಪೀಳಿಗೆಯ ನಮಗೆ ರಾಜವಾಡೆಯವರ ಪರಿಚಯ ಹೊಸತು. ಎಂದ ಮೇಲೆ ಲೇಖನವೃತ್ತಿಯಿಂದ ನಿವೃತ್ತರಾಗಿ ಅವರು ಸಾಹಿತ್ಯಿಕ ಜಗತ್ತಿನಿಂದ ಎಷ್ಟು ಅಜ್ಞಾತರಾಗಿ ಬದುಕುತ್ತಿದ್ದರು ಎಂದು ತಿಳಿಯುವುದಷ್ಟೆ? ಮೂರು ದಿನಗಳ ಕಾಲ ಸ್ವತಃ ಜೊತೆಗಿದ್ದು ಅವರನ್ನು ಕೈಗೆಟಕುವಷ್ಟು ಅರಿತ ಸಂದರ್ಭವದು. ಅವರಿವರು ಆಡುವ ಮಾತಿಂದ ಸಿಕ್ಕ ಚಿತ್ರಕ್ಕಿಂತ ಅದು ಎಷ್ಟು ಭಿನ್ನ ಮತ್ತು ಧೀರವಾಗಿತ್ತು!

ಎಷ್ಟು ದಿನವಾಯಿತೋ, ಹೀಗೆ ಹೊರಟು ಎನ್ನುತ್ತ ಹೊರಡುವ ಮೊದಲಿನ ಉದಾಸೀನತೆಯನ್ನು ಬೇಗ ಓಡಿಸಿಕೊಂಡರು. ಸನ್ಮಾನ ಸಭೆಯಲ್ಲಿ ಎಷ್ಟೋ ಕಾಲದಿಂದ ಕಾಣದೆ ಕಂಡ ಸಂಬಂಧಿಕರ ನಡುವೆ ಕುಳಿತು ಹರಟಿದಂತೆ ಯಾವ ಔಪಚಾರಿಕ ಒಪ್ಪ ಹಾಕದೆ ಸೀದ ಸಹಜವಾಗಿ ದೀರ್ಘವಾಗಿ ಮಾತಾಡಿದರು. ಬೆಂಗಳೂರಿನಲ್ಲಿ ತಾನು ಕಳೆದ ದಿನಗಳನ್ನು ನೆನೆದರು. ಸಾಮಾಜಿಕ ಸಾಹಚರ್ಯವಿಲ್ಲದ ಕಾಲವದು ಎನ್ನುತ್ತ ಅಂದಿನ ಸಾಹಿತ್ಯಿಕ ವಾತಾವರಣದಲ್ಲಿ ಹೆಚ್ಚಿನ ಲೇಖಕರು ತಮ್ಮದೇ ಸತ್ಯ, ತಮ್ಮದು ಮಾತ್ರವೇ ಸಾಹಿತ್ಯವೆಂಬಂತೆ, ತಮ್ಮ ಕಾಲದ ಲೇಖಕಿಯರನ್ನು ಕಿಂಚಿತ್ತೂ ಲೆಕ್ಕಿಸದೆ ಹೋದರು ಎಂದು ಮಾರ್ಮಿಕವಾಗಿ ನುಡಿದರು. ಮಹಿಳೆಯರೇ ಸೇರಿ ಸಮಾರಂಭ ನಡೆಸುವುದು ನೋಡಿದರೇನೇ ಅಷ್ಟು ಖುಷಿಯಾಗುತ್ತದೆ ಎಂದು ಸಂಭ್ರಮಿಸಿದರು.

ಸಮ್ಮೇಳನ ಮುಗಿಸಿ ಮರುದಿನ ಮರಳುವ ದಾರಿಯಲ್ಲಿ ಮಂಗಳೂರು ತಲುಪುತ್ತಲೂ ಗೆಳತಿಯ ನೆನಪೊಂದು ಅವರಲ್ಲಿ ಪಟಕ್ಕನೆ ಕಣ್ತೆರೆಯಿತು. ಅಲ್ಲಿಳಿಯುವವರು ಇಳಿದೊಡನೆ ‘ಅವಳನ್ನು ನೋಡಬೇಕಲ್ಲ, ಇಲ್ಲೇ ರಥಬೀದಿಯಲ್ಲಿದ್ದಾಳೆ. ನೋಡಿಕೊಂಡೇ ಮುಂದೆ ಹೋಗೋಣ? ನಾನೂ ಅವಳೂ ಬಹಳ ಫ್ರೆಂಡ್ಸ್’ ಎಂದರು. ಗೆಳತಿಯ ಮನೆ ಸಿಕ್ಕಿತು. ಹಳೇಹಳೆಯ ಮನೆ. ಮನೆ ತುಂಬ ಮಕ್ಕಳು. ಅಷ್ಟೇನೂ ಒಪ್ಪ ಓರಣಕ್ಕೆ ತಲೆಕೆಡಿಸಿಕೊಳ್ಳದ ಅಪ್ಪಟ ದ.ಕ. (ಹಳೆಯ) ಸಂಸ್ಕೃತಿಯ ಹಳೆಯ ಚಾವಡಿ. ರಾಜವಾಡೆ ಹಿಂದಿನ ನೆನವರಿಕೆಯಿಂದಲೋ ಏನೋ ಅವತ್ತಿನ ಯುವತಿಯಂತೆಯೇ ಒಳಗೆ ನುಗ್ಗಿಕೊಂಡು ಹೋದರು. ಗೆಳತಿಯ ಹೆಸರು ಹೇಳಿ ‘ಇದ್ದಾಳಾ?’ ಕೇಳಿದರು ರಾಜವಾಡೆ. ‘ಹೂಂ, ಇದ್ದಾರೆ, ಕರೆಯುತ್ತೇನೆ’ ಎಂದು ನಡುವಯಸ್ಸಿನ ಮಹಿಳೆಯೊಬ್ಬರು ಒಳಗೆ ಹೋದಳು. ಹೊರಬಂದದ್ದು ಒಬ್ಬ ಜೀರ್ಣ ಮುದುಕಿ. ಒಳಬಾಗಿಲಿಂದ ‘ಕ್ವೋಣ್s?’ ಎನ್ನುತ್ತಾ ಹೊರಗಿಣುಕಿ ‘ಹೋ! ರಾಜವಾಡೆಯಾ! ಬಾ ಬಾ ಕುಳಿತುಕೋ’. ಈಕೆ, ರಾಜವಾಡೆಯ ಜೊತೆಗಾತಿಯೆ! ರಾಜವಾಡೆಯವರನ್ನು ಕಂಡಾಗ ಎಂದೂ ಬರದ ವಯಸ್ಸಿನ ನೆನಪು, ಆ ವೃದ್ಧೆಯನ್ನು ಕಂಡಕೂಡಲೇ ಎದ್ದುಬಂತು. ಸಂಸಾರ ತಾಪತ್ರಯಗಳ ನಡುವೆ ದಣಿದು ತೊಪ್ಪೆಯಾದ ಗೆಳತಿ; ಎದುರು -ಬಹುಕಾಲದ ಮೇಲೆ ಅವಳನ್ನು ಕಂಡು ಖುಶಿಯರಳಿದ ರಾಜವಾಡೆ. ಪ್ರಪಂಚದಲ್ಲಿದ್ದೂ ಪ್ರಪಂಚದ ನೋವನ್ನು ತಿಂದೂ, ಅದರ ಗೋಜಲು ದುಃಖದುಮ್ಮಾನಗಳನ್ನು ಮನಕ್ಕೆ ಹಚ್ಚಿಕೊಂಡೂ ಸಾಕೆನಿಸಿದಾಗ ಅವನ್ನೆಲ್ಲ ಥಟಕ್ಕನೆ ಕೊಡವಿ ಸರಸರ ನಡೆಯ ಬಲ್ಲವರು. ಹಾಗೆ ಎಂಭತ್ತರ ಸನಿಹಸನಿಹಕ್ಕೆ ನಡೆದು ಬಂದವರು; ಬದುಕೊಂದು ನಾಟಕವೆಂಬಂತೆ, ತಾನು ಆ ನಾಟಕದ ಪಾತ್ರವೆಂಬಂತೆ ತನ್ನನ್ನೇ ತಾನು ದೂರ ನಿಂತು ಕಾಣ ಬಲ್ಲವರು. ‘ನಾವು ಆಲ್ ಇಂಡಿಯಾ ಟೂರಿಗೆ ಒಟ್ಟಿಗೇ ಹೋದುದಲ್ಲವೇ, ನಮ್ಮ ‘ಭಕ್ತ ಮೀರಾ’ ನಾಟಕದಲ್ಲಿ ನೀನೂ ಪಾರ್ಟು ಮಾಡಿದ್ದಿಯಲ್ಲವೆ? ನಾನೂ ನೀನೂ ಸೇರಿ ಹಾಗೆ ಮಾಡಿದೆವಲ್ಲವೆ, ಹೀಗೆ ಹೇಳಿಲ್ಲವೆ’ -ನೆನಪರಾಶಿ ಕೆದಕಿ ಆರಿಸಿ ಆರಿಸಿ ಗೆಳತಿಯ ಮುಂದೆ ಇಟ್ಟಂತೆ, ಆಕೆ ಅವೆಲ್ಲವನ್ನೂ ತೀರಾ ನಿರಾಸಕ್ತಿಯಿಂದ ಕೇಳುತ್ತಾ, ಹೂಂ… ಹೂಂ…… ಎನ್ನುತ್ತ ಅದೆಲ್ಲಾ ಆಯಿತಾ …ಮುಗಿಯಿತು ಅದೆಲ್ಲ, ಹಳೆಯಕತೆ. ಪ್ರಾಯ ಸ್ವಲ್ಪ ಆಯಿತನ ಈಗ? ಇನ್ನು ಜೀವ ಒಂದು ಚಂದದಲ್ಲಿ ಹೋದರೆ ಸಾಕು’. ಮುಖದಲ್ಲಿ ಅಚ್ಚರಿ ತೋರಿಸಿಕೊಳ್ಳಲಿಲ್ಲ ರಾಜವಾಡೆ. ಸರಿ, ಆದರೆ ಅವರ ಕಣ್ಣೋ ಅದನ್ನು ಅಡಗಿಸಲಾರದೆ ರೆಪ್ಪೆತುದಿಯಲ್ಲಿ ಮಿಟಿಗುಡುತಿತ್ತು. ‘ಇವಳಿಗೆ ಇದೆಲ್ಲ ನೆನಪುಗಳೇ ಬೇಡವಲ್ಲ! ಅಯ್ಯೊ ದೇವರೆ.’ ಆದರೂ ಸುಮ್ಮನಿರದೆ ಸೊಸೆಯ ಮುಂದೆ ತಾನೂ ಅವಳ ಅತ್ತೆಯೂ ಸೇರಿ ನಡೆಸಿದ ಕಾರುಬಾರುಗಳನ್ನು ವರ್ಣಿಸಿದರು. ಕೇಳುವ ಸೊಸೆಯ ಮುಖದಲ್ಲಿಯೂ ಗೆಲುವಿಲ್ಲ. ಅತ್ತೆಯ ಮುಖದಲ್ಲಿ ಮೊದಲೇ ಇಲ್ಲ. ಆ ಸಂಸಾರ ಯಾವ ತಾಪತ್ರಯದಲ್ಲಿತ್ತೊ. ಗತದ ಮೆಲುಕಿನ ಹುರುಪು ವರ್ತಮಾನದ ಸ್ಥಿತಿಗತಿಯ ಮೇಲೆ ಎಂತೆಲ್ಲಾ ಅವಲಂಬಿತವಾಗಿದೆ! ಅತ್ತ ಗೆಳತಿ, ‘ಹೇಗೆ ಎಲ್ಲಾ ನೆನಪಿಟ್ಟುಕೊಂಡಿದ್ದೀ! ನನಗಂತೂ ಅವೆಲ್ಲ ಮರೆತೇಹೋಗಿದೆ’ ಎಂದು ನಡುವೆ ತಡೆದು ಹಳಿದಾಗ ‘ಹಾ! ಮರೆತುಹೋಯಿತಾ! ಮರೆತೇ ಹೋಯಿತಾ!’ ಅಂತ ಎರಡೆರಡು ಬಾರಿ ಕೇಳಿ ಅವರನ್ನು ನೆನಪಿಗೆಳೆಯಲು ಮತ್ತೊಂದಿಷ್ಟು ಘಟನೆಗಳನ್ನು ಎಳೆತಂದರು ರಾಜವಾಡೆ. ಆದರೂ ಆಕೆ ‘ಸ್ಮರಣೆ ವಿಸ್ಮರಣೆ’ಗಳ ನಡುವೆ ತೂಗಾಡುವುದನ್ನು ಕಂಡು ‘ನಾವಿನ್ನು ಹೊರಡುತ್ತೇವೆ’ ಎಂದು ಮೆಲ್ಲನೆದ್ದರು. ಮುಂದಿನ ದಾರಿಯಲ್ಲಿ, ಮಂಗಳೂರಿಂದ ಉಡುಪಿಯವರೆಗೂ ತಾನೇತಾನಾಗಿ ಬಿಡಿಸಿಕೊಳ್ಳುತಿದ್ದ ನೆನಪಿನ ಸುರುಳಿಸುರುಳಿಗಳು.

ಬೆಂಗಳೂರಿನ ಆ ಪ್ರವಾಸದ ಹರ್ಷ ಅವರಲ್ಲಿ ಬಹುಕಾಲವಿತ್ತು. ಆವತ್ತಿನ ಸಮಾರಂಭದ ಅಚ್ಚುಕಟ್ಟುತನ, ಮಹಿಳೆಯರೇ ನಿರ್ವಹಿಸಿದ ಸಮರ್ಥ ರೀತಿ ಎಲ್ಲವನ್ನೂ ಆಗಾಗ ಮೆಲುಕು ಹಾಕುತ್ತ ತನ್ನ ಕಾಲದಲ್ಲಿ ಇದು ಕೇವಲ ಕನಸಾಗಿತ್ತು. ಹೆಂಗಸರು ಮುಂದೆ ಬರಬೇಕು, ಎಂದು ತಾನು ಮತ್ತು ತನ್ನ ಕಾಲದ ಲೇಖಕಿಯರು ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಬರೆದು ಬೊಬ್ಬೆ ಹೊಡೆಯುತ್ತಿದ್ದೆವು. ಆದರೆ ಆ ಕಾಲ ದಾಟಿ ಹೊರ ಪ್ರಪಂಚ ಇಷ್ಟೆಲ್ಲ ಮುಂದುವರಿದಿದೆ ಎಂದು ನನಗೆ ತಿಳಿದೇ ಇರಲಿಲ್ಲ ಎಂದು ತನ್ನ ಸಮಾಧಾನವನ್ನು ಹೇಳಿಕೊಳ್ಳುತ್ತಿದ್ದರು.
****

ರಾಜವಾಡೆಯವರನ್ನು ಮೊದಮೊದಲು ಸುಮ್ಮನೆ ಹೋಗಿ ಭೇಟಿ ಮಾಡಿ ಬರುತಿದ್ದ ನಾನು ದಿನಹೋದಂತೆ ಅವರ ವ್ಯಕ್ತಿತ್ವದಿಂದ ಆಕರ್ಷಿತಳಾದೆ. ಅವರು ಅಂದಂದು ಮಾತುಮಾತಾಡುತ್ತ ಹೇಳಿಕೊಂಡ ತನ್ನ ಬದುಕಿನಕತೆಯನ್ನು ಮನೆಗೆ ಬಂದವಳೇ ಬರೆದಿಡತೊಡಗಿದೆ. ಮರುಭೇಟಿಯಲ್ಲಿ ಅವರಿಗೆ ಓದಿ ಹೇಳತೊಡಗಿದೆ. ಕೇಳುತ್ತಿದ್ದಂತೆ ಅವರಲ್ಲಿ ಇನ್ನಷ್ಟು ನೆನಪುಗಳು ಧಾವಿಸಿ ಬರತೊಡಗಿದುವು. ಅವೆಲ್ಲವನ್ನೂ ದಾಖಲಿಸುತ್ತ ಬಂದೆ. ಬರೆದದ್ದನ್ನು ಅವರ ಅಭಿಲಾಷೆಯಂತೆ ಮತ್ತೆ ಮತ್ತೆ ಓದಿ ಹೇಳುತ್ತಿದ್ದೆ. ಆಲಿಸುತ್ತ ಬೇಡವೆಂದು ಕಂಡದ್ದನ್ನು ಅಲ್ಲಲ್ಲೆ ತೆಗೆಸಿದರು. ಉಳಿದವನ್ನು ‘ಜನಕ್ಕೆ ಬೇಕೊ ಬೇಡವೋ ಎಂಬ ಆತಂಕ ಬಿಟ್ಟರೆ ನನಗಂತೂ ಇದು ಪ್ರಿಂಟಾದರೆ ಸಂತೋಷ. ಪ್ರಿಂಟ್ ಹಾಕಿಬಿಡಿ’ ಎಂದು ತಲೆಬೀಸಿ ಒಪ್ಪಿಗೆ ನುಡಿದರು.

ಪ್ರತಿಸಲ ಹೋದಾಗಲೂ ಆಕೆಯ ಬಳಿಯಿಂದ ಏಳಲು ಮನಸ್ಸಾಗುತ್ತಿರಲಿಲ್ಲ, ಎಂದೆನೆ, ಆಗಲೆ? ಎಷ್ಟು ಸಲ ನಾನು ಅಂದುಕೊಳ್ಳುತಿದ್ದೆ, ಒಮ್ಮೆ ತುಂಬಾ ಪುರುಸೋತು ಮಾಡಿಕೊಂಡು ಕುಳಿತುಬಿಡಬೇಕು, ಎಷ್ಟು ಹೊತ್ತಾದರೂ ಏಳದೆ, ಅಂತ. ಮುಗಿಯದ ಅವರ ಮಾತನ್ನು ಕಡಿದು ಏಳುವಾಗ ಅವರೊಬ್ಬರನ್ನೇ ಬಿಟ್ಟು ಹೊರಡುತ್ತಿದ್ದೇನೆ ಎಂಬ ನೋವು ಕಲಕುತಿತ್ತು. ಆಕೆ ಪದೇ ಪದೇ ಹೇಳುತ್ತಿದ್ದುದು ಈ ನನ್ನ ತಾಯಿ ಶಾರದಾಂಬೆ ನನ್ನ ಪ್ರೀತಿಯ ಹಸಿವನ್ನು ಇಂಗಿಸಿಬಿಟ್ಟಳು. ಈಗ ನನ್ನಷ್ಟು ಸುಖಿ ಬೇರೆ ಯಾರಿಲ್ಲ. ಹೀಗನ್ನುವಾಗ ಆಕೆ ಪ್ರತ್ಯಕ್ಷ ಆ ನುಡಿಯ ಪ್ರತಿರೂಪವೇ ಆಗಿ ಕಾಣುತ್ತಿದ್ದರೂ, ಮನುಷ್ಯ ಸಹಜವಾಗಿ ಅವರು ನರಳುತ್ತಿರಬಹುದೇ, ಒಳಗೇ? ಕಟ್ಟೇಕಾಂತದಲ್ಲಿ? ಇದು ನನ್ನ ಊಹೆಯ ಪರಿಮಿತಿಯೂ ಇರಬಹುದು. ಆಕೆ ಸ್ಥಾಪಿಸಿಕೊಂಡ ಘನಮೌನದ ಗುರುತು ಅಲ್ಲಲ್ಲಿ ಹತ್ತಿದಂತಾಗುತ್ತಿತ್ತು…….ತಪ್ಪಿದಂತಾಗುತಿತ್ತು. ಗಟ್ಟಿ ಕೇಳಿದರೆ ಲೇಖಕಿ ಗಿರಿಬಾಲೆ ಅವರ ಮನೋಕೇಂದ್ರದಲ್ಲಿ ಇದ್ದೇ ಇದ್ದಳು. ನನ್ನ ಪ್ರಯತ್ನಕ್ಕೆ ಹಟಕ್ಕೆ ಎಲ್ಲೋ ಒಂಚೂರು ಕದಲಿ ಮರುಕ್ಷಣದಲ್ಲೆ ಮೌನಶಿಲೆಗೆ ಆತುಕೊಂಡು ಎಂದಿನ ಮಾತಿನ ಪರದೆ ಇಳಿ ಬಿಡುತ್ತಿದ್ದಳು. ಆ ಪರದೆಯನ್ನು ಭೇದಿಸುವಂತಹ ಪ್ರಶ್ನೆಯನ್ನು ಎತ್ತುವುದು ಹೇಗೆಂಬ ಅಳುಕಿನಿಂದಲೇ ಬಹಳ ಸೂಕ್ಷ್ಮವಾಗಿ ತಿಳಿದೂ ತಿಳಿಯದಂತಹ ರೂಪದಲ್ಲಿ ಕೇಳಿದರೂ ಥಟ್ಟನೆ ಸೂಕ್ಷ್ಮ ಹಿಡಿದು ಆ ಜಾಡನ್ನೇ ಜಾಣ್ಮೆಯಿಂದ ಬಿಟ್ಟು ಮತ್ತೆ ಬಗೆಬಗೆಯ ಮಹಿಮೆ, ಪವಾಡ ಗುಲ್ಲು ಗಲಾಟೆಗಳ ಶಬ್ದತಂತಿಯ ಮರೆ ನಿಂತು ನಗೆ ಮೀಟುತ್ತಿದ್ದರು. ಬಂದವರೆದುರು ಮಾತ್ರ ‘ನೋಡಿ, ಇವರು ನನ್ನ ಜೀವನ ಕತೆ ಬರೆಯುತ್ತಾರೆ’ ಎಂದು ಸಂಭ್ರಮಿಸುತ್ತಿದ್ದರು. ‘ಇದೊಳ್ಳೆ! ನೀವು ಬಿಡಿಸಿ ಹೇಳದೆ ನಾನು ಬರೆಯುವುದು ಹೇಗೆ? ಎಂದರೆ ‘ಹೇಳುತ್ತೇನೆ, ಖಂಡಿತ ಹೇಳುತ್ತೇನೆ….ಎಲ್ಲ.’ ಆದರೆ ತನ್ನ ಅನುಭವಗಳನ್ನು ಗ್ರಹಿಸಲು ಸಮಾಜ ಇನ್ನೂ ಪಕ್ವವಾಗಿಲ್ಲವೆಂದೇ ತನ್ನ ಜೀವಿತದ ಕೊನೆಗಾಲಕ್ಕೂ ಕೂಡ ಅವರಿಗೆ ಅನಿಸಿರಬೇಕು, ಎಷ್ಟೋ ಬಾರಿ ಹೇಳುತ್ತ ತೆರೆಯುತ್ತ ಬೇಡ ಇವರೆ, ಸಮಾಜದ ಬಗ್ಗೆ ಭರವಸೆ ಬೇಡ, ಅದಕ್ಕೆ ಇದು ಯಾವುದೂ ಬೇಡ. ಮುಂದೆ ತೊಂದರೆಯೇ ಎನ್ನುತ್ತಿದ್ದರು. ಹೇಳಿದಷ್ಟು ಅಂಶಗಳಿಗೂ ನನ್ನಲ್ಲೇ ಬೀಗ ಹಾಕಿಟ್ಟರು. ಎಂತಲೇ ದೊರಕಿದ್ದು ಅವರ ‘ಮುಂತಾದ ಕೆಲ ಪುಟಗಳು’ ಮಾತ್ರ.

ದಿನ ನಿತ್ಯದ ಪೇಪರುಗಳನ್ನು ಪತ್ರಿಕೆಗಳನ್ನು ಆಸಕ್ತಿ, ಅನಾಸಕ್ತಿ ಮಿಶ್ರವಾಗಿ ಓದುತ್ತಿದ್ದರು ರಾಜವಾಡೆ. ಒಮ್ಮೆ ಒಂದು ಪತ್ರಿಕೆಯಲ್ಲಿ ಅಚ್ಚಾದ ಜೆಕೊಸ್ಲವಾಕಿಯಾದ ಚಿತ್ರ ತೋರಿಸಿ ‘ಛೆ, ಭೂಮಿಯ ಮೇಲೆಯೇ ಇಷ್ಟು ಸುಂದರ ಸ್ಥಳಗಳಿರುವಾಗ ಸ್ವರ್ಗ ಹೇಗಿರಬಹುದು? ನಾನೂ ಒಂದು ದಿನ ಹೋಗುತ್ತೇನಲ್ಲ, ನೋಡುತ್ತೇನೆ. . .’ ಎಂದು ಕುಶಾಲಿನಿಂದ ನಕ್ಕಿದ್ದರು. ಆರೋಗ್ಯ ಕೆಟ್ಟರೆ ದೇವಿಯ ಕುಂಕುಮವನ್ನು ಬಾಯಿಗೆ ಹಾಕಿಕೊಳ್ಳುತಿದ್ದರು, ಸರಿಯಾಗುತ್ತಿದ್ದರು. ಭಕ್ತಿಯ, ನಂಬಿಕೆಯ ವಿಚಾರವಾಗಿ ಉದ್ದಾನುದ್ದ ಮಾತಾಡಿಯೂ ಯಾವುದೋ ಒಂದು ಕ್ಷಣದಲ್ಲಿ ತನ್ನನ್ನೇ ಅವಲೋಕಿಸಿಕೊಳ್ಳುತ್ತ ಎಲ್ಲ ನಂಬಿಕೆ ಇಲ್ಲಿ (ಎದೆ ತಟ್ಟಿಕೊಂಡು) ಇರುವುದು. ಅಲ್ಲವೆ? ನಂಬಿದರುಂಟು ಇಲ್ಲವಾದರಿಲ್ಲ- ಎಂದು ಸ್ವಗತಕ್ಕಿಳಿಯುತಿದ್ದರು. ಸಾಯುವುದು ಸಂತೋಷವೇ. ಆದರೆ ಸಾಯುವ ರೀತಿ? ‘ಅನಾಯಾಸವಾಗಿ ಸತ್ತರೆ ಸಾಕು’ ಎಂದು ಆ ಪ್ರಸಿದ್ದ ಶ್ಲೋಕವನ್ನು ಹೇಳಿಯೇ ಹೇಳುವರು. ದೈನ್ಯದ ಜೀವನ ಮುಗಿಸಿ ವಿನಾ ದೈನ್ಯೇನ ಜೀವನ ಕಳೆದಾಯಿತು, ಇನ್ನು ಇದೊಂದು ಬಾಕಿ’ ಎಂದಿದ್ದರು. ಹಾಗೆಯೇ ಆಯಿತು.

ಕೊನೆಯ ದಿನಗಳಲ್ಲಿ ಇದ್ದಕ್ಕಿದ್ದಂತೆ ಅವರು ದಪ್ಪವಾಗುತ್ತ ಹೋದರು; ಯಾವತ್ತೂ ಒಂದೇ ಹದದಲ್ಲಿ ಇದ್ದವರು. ದಪ್ಪವಾಗಿ ಬಿಟ್ಟಿದ್ದೀರಿ ಎಂದರೆ ‘ಹೂಂ. ಭಕ್ತರು ಬಗೆಬಗೆ ಫ್ರುಟ್ಸ್ ತಂದು ಕೊಡುತ್ತಿದ್ದಾರೆ, (ಫ್ರುಟ್ಸ್, ಫ್ರೆಂಡ್ಸ್, ಸ್ಟಾಫ್ ಮುಂತಾದ ಈ ಮಾದರಿ ಶಬ್ದಗಳನ್ನು ಆಕೆ ಎಂದೂ ಕನ್ನಡದಲ್ಲಿ ಹೇಳರು). ತಿಂದು ತಿಂದು, ನೋಡಿ ಈಗ!- ಎಂದು ಮಾತು ಹಾರಿಸಿದರು. ಆಕೆ ಹಾಗೆ ‘ತಿಂದು ತಿಂದು’ ಎನ್ನುವಷ್ಟು ತಿನ್ನುವ ಜಾತಿಯಲ್ಲ. ಎಂದೂ ತನ್ನ ಮಿತಿ ತಪ್ಪಿದ್ದಿಲ್ಲ. ಕಟ್ಟುನಿಟ್ಟು ಆಹಾರದವರು. ಏನಾಗಿರಬಹುದು? ಮದ್ದು ತೆಗೆದುಕೊಳ್ಳಿ ಅಂದರೆ ತೆಗೆದುಕೊಳ್ಳುವುದಿಲ್ಲ, ಕುಂಕುಮ ಸಾಕು ಅಂತ ಹಟ ಮಾಡುತ್ತಾರೆ- ಅಂತೆಲ್ಲ ಅವರು ಮಗನಂತೆ ಸಾಕಿಕೊಂಡ ‘ಸುರ್‍ಮಣ್ಯ’ ಚಿಂತಿಸಿದ. ರಾಜವಾಡೆಯವರ ಹಟವೆಂದರೆ ಹಟಯೋಗದಂತೆ. ತನ್ನದೇ ಮನದ ಮಾತಿಗೂ ಬಾಗರು- ಎನ್ನುತಿದ್ದರು ಅವರ ಪರಿಚಯದವರು. ಆ ಹಟ ಅವರನ್ನು ಕಡೆವರೆಗೂ ಬಿಟ್ಟು ಹೋಗಲೇ ಇಲ್ಲ. ಪಾದ ನೋಡಿದರೆ ಬಾತಿತ್ತು. ‘ಪೌಳಿಯಲ್ಲಿ ಕಾಲು ಇಳಿಬಿಟ್ಟು ಕುಳಿತಿದ್ದರಿಂದ ಹಾಗೆ’ ಅಂತ ಅವನಿಗೂ ಇತರರಿಗೂ ಸಮಾಧಾನ ಹೇಳಿದರು. ‘ಅಮ್ಮನ ಪ್ರಸಾದ ವಾಸಿ ಮಾಡುತ್ತದೆ. ವಾಸಿ ಮಾಡದಿದ್ದಲ್ಲಿ ಎಲ್ಲ ಸಾಕು, ಇನ್ನು ಬಾ ಅಂತ ಕರೆದ ಹಾಗೆ.’ ಹಾಗೆ ಹದಿನೈದು ದಿನ ಕಳೆದಿರಬಹುದೇನೋ, ಆತಂಕ ನಿಜವಾಯಿತು.

ಸುಬ್ರಹ್ಮಣ್ಯ ಬಿಕ್ಕುತ್ತ ‘ಅಮ್ಮ’ ಬೆಳಗೆದ್ದೊಡನೆ ಪ್ರಜ್ಞೆ ಜಾರಿ ಅಸ್ವಸ್ಥರಾದುದನ್ನೂ ಆಸ್ಪತ್ರೆಗೆ ಸೇರಿಸಿದ ಸುದ್ದಿಯನ್ನೂ ಹೇಳಿದ. ಹೋಗಿ ನೋಡಿದರೆ ದೀರ್ಘ ಸಶಬ್ದ ಉಸಿರಿನಲ್ಲಿದ್ದರು ರಾಜವಾಡೆ. ಮುಖ ಪ್ರಶಾಂತವಿತ್ತು. ಹೆಸರು ಹಿಡಿದು ಎರಡು ಬಾರಿ ಕರೆದೆ. ಊಹೂಂ, ‘ಲೋಕವಿಲ್ಲ’ದಂತೆ ಮಲಗಿದ್ದರು. ನೋಡಿದೊಡನೆ ಕರೆದೊಡನೆ ಗುಟುಕು ಎಚ್ಚರವಿದ್ದರೂ ಸುಮ್ಮನಿರದವರು. ಎಲ್ಲಾದರೂ ಎಚ್ಚರ ಬಂದಿತೆಂದರೆ ತನ್ನ ಈ ಅವಸ್ಥೆಯ ವರ್ಣನೆಯನ್ನು ಮಾಡದೆ ಬಿಡುವರೆ ಅವರು? ಹಿಂದಿನ ರಾತ್ರಿಯವರೆಗೂ ಸನ್ನಿಧಾನದ ಲೆಕ್ಕವೆಲ್ಲ ಬರೆದು ಪೂರೈಸಿ ಮಲಗಿದ್ದು, ಬೆಳಗಾದೊಡನೆ ತಲೆ ಸುತ್ತಿ ಬಂದದ್ದು, ತನಗೆ ಗೊತ್ತೇ ಆಗದಂತೆ ಅಲ್ಲೇ ಕುಸಿದದ್ದು, ಎಲ್ಲ?

‘ತನಗೆ ಗೊತ್ತೇ ಆಗದಿದ್ದರೂ ಗೊತ್ತಾದವರಿಗಿಂತಲೂ ಹೆಚ್ಚಿಗೆ, ನಾವು ಬಾಯಿ ಕಳೆದು ಕೇಳುವಂತೆ, ಒಂದು ಹರಿಕತೆ ಮಾಡಿ ಬಿಡುತ್ತಿದ್ದರು.’ ಎಂದರು ಅವರ ಪರಿಚಿತರೊಬ್ಬರು.
‘ಅಷ್ಟೆ ಅಲ್ಲ, ಈ ಮೂರ್ಛಾವಸ್ಥೆಯಲ್ಲಿ ತಾನು ಎಲ್ಲಿದ್ದೆ ಏನೆಲ್ಲ ಕಂಡೆ ಅಂತಲೂ. ಸಾಕ್ಷಾತ್ ದೇವಿ ಶಾರದಾಂಬೆ ತನ್ನೆದುರು ಪ್ರತ್ಯಕ್ಷವಾಗಿ ಎದುರು ನಿಂತು ಹೀಗೆಹೀಗಂದಳು ಅಂತಲೂ ಬೇಕಾದರೆ’.
‘ನನಗೆ ಗೊತ್ತಾಗದ ಹಾಗೆ ಸಾವು ಬಂದರೆ ಸಾಕಪ್ಪ, ಆ ತಾಯಿ ಅಷ್ಟು ನಡೆಸಿ ಕೊಡಲಿ’ ಎನ್ನುತ್ತ ದೇವರ ಗರ್ಭಗುಡಿಯ ದಿಕ್ಕಿಗೆ ಕಣ್ಮುಚ್ಚಿ ಕೈ ಮುಗಿದವರು ಅವರು. ಅವರ ಬಯಕೆಯಂತೆ ಆಗಿಯೇ ಆಗುತ್ತದೆ ನೋಡುತ್ತಿರಿ.
‘ವಾಕ್ಸಿದ್ಧಿ ಇತ್ತು ಅವರಿಗೆ ಗೊತ್ತೆ? ಅವರು ಹೇಳಿದ್ದು ಮಾತ್ರವಲ್ಲ, ಬಯಸಿದ್ದೂ ಆಗುತ್ತದೆ’
‘ಆದರೆ ಒಂದು, ಅದನ್ನು ಆಕೆ ಎಲ್ಲಿಯೂ ದುರುಪಯೋಗ ಪಡಿಸಿಕೊಳ್ಳಲಿಲ್ಲ.’
‘ಈ ಹೆಂಗುಸುಂಟಲ್ಲ, ಅಂಥಿಂಥದಲ್ಲ. ಘಟಾನುಘಟಿ. ಯಾರಿಗೂ ಖೇರೇ ಮಾಡುತ್ತಿರಲಿಲ್ಲ. ಮಿನಿಸ್ಟರ್ ಆಗುವ ತಾಕತ್ತಿನವರು’
‘ರಾಣಿ. ರಾಣಿ ಅವರು. ತಾನು ಹೇಳಿದ್ದು ಆಗಬೇಕು. ಸಾಧಿಸಿಯೇ ಶುದ್ಧ’
‘ಜನ ಹೇಳದೆ ಕೇಳದೆ ಪ್ರಯಾಣ ಹೊರಟದ್ದೇ ಅಲ್ಲವೆ. ಮುಂಚಿನಿಂದಲೂ ಹಾಗೆಯೇ ಅವರು, ಎಲ್ಲಿಗಾದರೂ ಹೋಗಬೇಕೆಂದು ಮನಸ್ಸಾಯಿತೇ, ಆಚೀಚೆ ನೋಡಲಿಕ್ಕಿಲ್ಲ, ಸೀರೆ ಸುತ್ತಿಕೊಂಡು ಹೊರಟು ಬಿಡುವುದೇ. ಕಡೆಗೂ ಹಾಗೆಯೇ ಹೊರಟಾರಂತ ಮಾತ್ರ ಯಾರೂ ಎಣಿಸಿರಲಿಲ್ಲ.’ –
‘ಒಂದು ಚೂರು ಕೂಡ ಚಾಕರಿ ಮಾಡಿಸಿಕೊಳ್ಳದೆ, ಹೊರಟು ಹೋಗುತ್ತಾರೆ ನೋಡುತ್ತಿರಿ, ಅವರ ಮನೋಬಲ ಅಂಥದು’
ಮಾತಿನ ಮಂತು ರಾಜವಾಡೆಯವರ ವ್ಯಕ್ತಿತ್ವವನ್ನು ಕಡೆಯುತ್ತ ಶ್ರದ್ಧಾಂಜಲಿಗೆ ಸಿದ್ಧವಾಗುತ್ತ ಇತ್ತು.

ಕೊನೆಗೂ ಅನುಭವದ ಪುಟಪುಟಗಳನ್ನು ತನ್ನೊಳಗೆ ಭದ್ರಪಡಿಸಿಕೊಂಡೇ, ೧೯೯೪ರ ಏಪ್ರಿಲ್ ೨೩ರಂದು, ಮೂರು ದಿನಗಳ ಕಾಲದ ಅಪ್ರಜ್ಞಾವಸ್ಥೆಯ ತುದಿಯಲ್ಲಿ, ಆಸ್ಪತ್ರೆ ಸೇರಿದ ಮೂರನೆಯ ದಿನ ಮುಸ್ಸಂಜೆ ಐದೂವರೆಗೆ ವರ್ಷಸಂದ ದೇಹಗೇಹವನ್ನು ಬಿಟ್ಟು ರಾಜವಾಡೆಯವರು ನಡೆದು ಬಿಟ್ಟರು, ಯಾರೂ ಕಾಣದಂತೆ; ತನಗೂ ತಿಳಿಯದಂತೆ? ಪಾರ್ಥಿವ ಶರೀರದ ಎದುರು ನಿಂತಾಗ ಹಗಲೆಲ್ಲ ಗೆಜ್ಜೆಕಾಲಲ್ಲಿ ಓಡಾಡಿ, ಕುಣಿದಾಡಿ, ಆಡಿ, ಮಾತಾಡಿ, ಅತ್ತು, ನಕ್ಕು, ಕೋಪಿಸಿ, ನಲಿದ ಒಬ್ಬಪುಟ್ಟ ಬಾಲಕಿ ಕತ್ತಲಾಗುತ್ತಲೂ ದಣಿದು ಸ್ವಸ್ಥ ಮಲಗಿರುವಂತೆ ಕಂಡಿತು. ದೇವಸ್ಥಾನದ ಸುತ್ತಿನಲ್ಲೇ ತಿರುಗುತ್ತಾ ಹೊರಜಗತ್ತಿಗೆ ಲೇಖಕಿಯಾಗಿ ತಾನು ಇರುವುದೇ ನೆನಪಾಗದಂತೆ ಇದ್ದುಕೊಂಡು ಮರೆಯಾದರಲ್ಲವೆ ಅವರು!

ಮರುದಿನ ಪತ್ರಿಕೆಯಲ್ಲಿ ಅವರ ನಿಧನವಾರ್ತೆ ಪ್ರಕಟವಾಯಿತು. ಬೆಳಿಗ್ಗೆ ಹತ್ತೂವರೆಗೆ, ದೇವಸ್ಥಾನಕ್ಕೆ ಅನತಿ ದೂರದಲ್ಲಿಯೇ ಇರುವ ಬೀಡಿನ ಗುಡ್ಡೆ ರುದ್ರಭೂಮಿಯತ್ತ ಅವರು ಅದುವರೆಗೆ ವಾಸಿಸಿದ ದೇಹಾಲಯದ ಅಂತಿಮ ಪಯಣ ಸುರುವಾಯಿತು. ನನ್ನ ಪತಿ ಶ್ರೀನಿವಾಸಮೂರ್ತಿಯವರೆಂದರೆ ತುಂಬ, ಭಾರೀ ಎನುವಷ್ಟು, ಇಷ್ಟ ಅವರಿಗೆ. ಹೊಗಳೀ ಹೊಗಳಿ ಇಡುತಿದ್ದರು, ಎದುರೆದುರಿಗೇ. ‘ಎದುರು ಹೊಗಳುವುದೆಂದು ತಿಳಿಯಬೇಡಿ’ ಎನ್ನುತ್ತಲೇ. ರಾಜವಾಡೆಯವರು ತೀರಿಕೊಳ್ಳುವಾಗ ಸುಬ್ರಹ್ಮಣ್ಯ ಅವರಿಗೆ ಜಾಂಡಿಸ್, ಜ್ವರ. ಹಾಗಾಗಿ ಆತನ ಅಪೇಕ್ಷೆಯಂತೆ ಸ್ಮಶಾನದ ವರೆಗೆ ಅವರ ಆ ಪಯಣದ ಮುಂಭಾಗದಲ್ಲಿ ಅಗ್ನಿ ಹಿಡಿದು ಸಾಗಿದ್ದು ಮೂರ್ತಿಯವರೆ! ಸುಬ್ರಹ್ಮಣ್ಯ ವಾಹನದಲ್ಲಿ ಬಂದು ಮುಂದಿನ ಕೆಲಸವನ್ನು ಪೂರೈಸಿದರು. ತನ್ನ ಕಾಲದ ಎಷ್ಟು ಜನ ಮಹಿಳೆಯರೊಂದಿಗೆ ಒಡನಾಡಿದವರು ರಾಜವಾಡೆ. ಅವರಲ್ಲಿ ಹೆಚ್ಚಿನವರೆಲ್ಲ ಅವರವರ ಭವ ಮುಗಿಸಿ ಹೋಗಿಯಾಗಿತ್ತು. ಚಿತೆಯವರೆಗೂ ಕಳಿಸಲು ಬಂದ ಮಹಿಳೆಯೆಂಬವಳು ಕೇವಲ ಆರು ವರ್ಷದಿಂದ ಒಡನಾಡಿದ ನಾನೊಬ್ಬಳೆ. ನೆನೆದಾಗೆಲ್ಲ ನಮಗಿಬ್ಬರಿಗೂ ‘ಯಾವುದೋ ಒಂದು ಋಣಯೋಗ. . . ’ ಮುಂತಾದ ನಮೂನೆಯ ವಾಕ್ಯಗಳು ತಂತಾನೇ ಬಾಯಲ್ಲಿ ಬಂದು ಬಿಡುತ್ತವೆ.

ಅವರು ನಿಧನರಾದಾಗ ಅಖಿಲಭಾರತ ಲೇಖಕಿಯರ ಸಂಘ ಹೊರತರುವ ‘ಲೇಖಕಿ’ ಪತ್ರಿಕೆಯ ಸಂಪಾದಕೀಯ ಮಹಿಳೆಯರಿಗೆ ತಮ್ಮದೇ ಆದೊಂದು ‘ವ್ಯಕ್ತಿತ್ವ’ವಿದೆ ಎಂದು ಭಾವಿಸದೇ ಇದ್ದ ಕಾಲದಲ್ಲಿ, ಹಾಗೂ ಮಹಿಳೆಯರಿಗೆ ತಮ್ಮದೇ ಆದ ಸ್ವತಂತ್ರ ಮನೋಭೂಮಿಕೆಯ ಅಗತ್ಯವೇ ಇಲ್ಲ ಎಂದು ನಂಬಿದ್ದ ಕಾಲದಲ್ಲಿ ಸರಸ್ವತೀಬಾಯಿ ರಾಜವಾಡೆಯವರು ಅಕ್ಷರಗಳ ರಸಲೋಕದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡರು. ಅಷ್ಟೇ ಅಲ್ಲ, ಬುದ್ಧಿಪ್ರಧಾನರು ಎನಿಸಿಕೊಂಡ ಪುರುಷರ ಗಮನವನ್ನೂ ಸೆಳೆದರು. ‘ಸಣ್ಣ ಕತೆಗಳ ಅನಭಿಷಿಕ್ತ ರಾಣಿ’ ಎನ್ನುವ ಹೊಗಳಿಕೆಗೆ ಪಾತ್ರರಾದರು. ತುತ್ತೂರಿ ಮತ್ತು ಕಹಳೆಗಳಿಂದ ಇಂಥ ಕಿರೀಟಗಳನ್ನು ಬಹಿರಂಗಗೊಳಿಸದೆ ಇತಿಹಾಸದ ಪುಟಗಳ ಪರದೆಯೊಳಗೇ ತಣ್ಣಗೆ ಉಳಿದರು. ಆಧ್ಯಾತ್ಮಿಕದ ಕಡೆ ವಾಲುತ್ತಾ ಸಹಜ ಬದುಕಿನಿಂದ ವಿಮುಖರಾಗಿ ಸನ್ಯಾಸದ ಕಡೆಗೆ ಸೆಳೆಯಲ್ಪಟ್ಟು ಲೌಕಿಕ ಬರಹಗಳಿಗೂ ವಿಮುಖರಾದರು.

ಒಂದು ಕಾಲದಲ್ಲಿ ಶ್ರೀಮತಿ ರಾಜಲಕ್ಷ್ಮಿಯವರೂ ರಾಜವಾಡೆಯವರೂ ಮಾಡಿದ ಸಣ್ಣಕತೆಗಳ ಪ್ರಾರಂಭ ಲೇಖಕಿಯರ ಸಾಹಿತ್ಯ ಚರಿತ್ರೆಯಲ್ಲಿಯೇ ತುಂಬ ಭರವಸೆಗಳನ್ನು ಹುಟ್ಟಿಸುವಂತಹ ಪ್ರಾರಂಭವಾಗಿತ್ತು. ಅದೇ ಕಾಲದಲ್ಲಿ ಮಾಸ್ತಿಯವರೂ ಡಾ. ಶಿವರಾಮಕಾರಂತರೂ ತಮ್ಮ ಬರಹಗಳಿಂದ ಹೊಸಕನ್ನಡದ ಸೃಜನಶೀಲತೆಯ ಹರವನ್ನು ವಿಸ್ತರಿಸುತ್ತಿದ್ದರು. ಈ ಪುರುಷರು ಮೇಲೇರಿದಂತೆ ಈ ಮಹಿಳೆಯರು ಬೆಳೆಯುವ ಎಲ್ಲ ಸಾಧ್ಯತೆಗಳೂ ಇದ್ದವು. ದುರದೃಷ್ಟದ ವಿಷಯವೆಂದರೆ ಇವರ ಖಾಸಗಿ ಬದುಕಿನ ಒತ್ತಡಗಳು ಇವರನ್ನು ಬದುಕಿನಿಂದಲೇ ವಿಮುಖವಾಗುವಂತೆ ಮಾಡಿದ್ದು! ಮಹಿಳೆಯರ ಸಾಹಿತ್ಯ ಚರಿತ್ರೆಯನ್ನು ಯಾರಾದರೂ ದಾಖಲಿಸುವುದಾದರೆ ಅವರು ಮೊದಲು ಈ ವಿಷಯದ ಕಡೆಗೆ ಗಮನ ಹರಿಸಬೇಕು. ಈ ಎರಡು ಚೈತನ್ಯಗಳು ಯಾಕೆ ತಮ್ಮ ಸೃಜನಶೀಲತೆಗೆ ಕೊಡಲಿಪೆಟ್ಟು ಹಾಕಿದರು? ಇದಕ್ಕೆ ಸಮಾಜ ಎಷ್ಟು ಕಾರಣ ಎನ್ನುವುದರ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ಒದ್ದೆಗಣ್ಣಿಂದ ದಾಖಲಿಸಿದೆ. (ಲೇಖಕಿ, ಸಂಚಿಕೆ ೧೦, ’ಗಿರಿಬಾಲೆ’ ಸ್ಮರಣೆ, ಎಪ್ರಿಲ್-ಜೂನ್, ೧೯೯೪. ಸಂಪಾದಕರು: ಶ್ರೀಮತಿ ಹೇಮಲತಾ ಮಹಿಷಿ, ಶ್ರೀಮತಿ ಶಾಂತಾ ನಾಗರಾಜ್)

ಇಡೀ ಇಂಡಿಯಾ ಹುಡುಕಿದರೂ ನಮ್ಮ ರಾಜವಾಡೆಯವರಂತೆ ವಿಶಿಷ್ಟ ಅನುಭವಗಳನ್ನು ಸೂರೆಗೊಂಡ ಲೇಖಕಿ ಸಿಗಲಿಕ್ಕಿಲ್ಲ. ಆಕೆ ಬದುಕಿನಲ್ಲಿ ಕಂಡುಂಡುದನ್ನು ಸುಮ್ಮನೆ ಯಥಾವತ್ ದಾಖಲೆ ಮಾಡಿದರೂ ಸಾಕಿತ್ತು, ಭಾರತೀಯ ಸಾಹಿತ್ಯಕ್ಕೆ ಕನ್ನಡದ ಒಂದು ಉನ್ನತ ಕೊಡುಗೆಯಾಗುತ್ತಿತ್ತು.

ಅವತ್ತವತ್ತಿಗೆ ಯಾವುದು ಸರಿ, ಯಾವುದು ಸತ್ಯ ಅಂತ ಕಾಣುತ್ತದೋ ಹಾಗೆ ಬದುಕುತ್ತ ಬಂದ ರಾಜವಾಡೆಯವರ ಕತೆಯೆಂದರೆ ಹಾದಿಯುದ್ದಕ್ಕೂ ಪ್ರೀತಿ ಅರಸುತ್ತ ಏಕಾಕಿತನದಿಂದ ಏಕಾಂತಕ್ಕೆ ಹೊರಳಿಕೊಂಡ ಕತೆ. ಮನುಷ್ಯ ನಡೆದುಬಂದ ದಾರಿ ಕೊನೆಗೆ ತನ್ನದೇ ರೀತಿಯಲ್ಲಿ ಆತನನ್ನು ನಡೆಸುತ್ತ ಹೋಗುವುದು, ಒಬ್ಬೊಬ್ಬರನ್ನು ಒಂದೊಂದು ದಿಕ್ಕಲ್ಲಿ, ಎಷ್ಟು ವಿಚಿತ್ರ!
****

ಕೊನೆಗೂ ಪ್ರಶಸ್ತಿ-ಗಿಶಸ್ತಿಗಳ ಯಾವ ಭಾರ-ಬಂಧನಗಳಿಗೂ ಎಟುಕಿಸಿಕೊಳ್ಳದೇ ಅವರು ಜಾರಿಕೊಳ್ಳಲು ಸಾಧ್ಯವಾಯಿತು ಎಂದು ಅಸೂಯೆ ಪಡುವಂತಾಗುತ್ತಿದೆ. ಅವರು ಅಲ್ಲಿದ್ದಾರೆ, ನಿರಂತರ ಅಲ್ಲಿರುತ್ತಾರೆ, ಯಾವಾಗ ಹೋದರೂ ಅಲ್ಲಿರುತ್ತಾರೆ ಅಂತ ನಮಗೆ ಬೇಕಾದವರ ಬಗ್ಗೆ ಎಣಿಸುತ್ತೇವಲ್ಲವೇ? ಎಷ್ಟೆಲ್ಲ ದಿಢೀರ್ ಸಾವುಗಳನ್ನು ಕಂಡೂ!
ಈಗಲೂ ಮೂರ್ತಿಯವರೂ ನಾನೂ ಶ್ರೀ ಶಾರದಾಂಬಾ ದೇವಸ್ಥಾನಕ್ಕೆ ಹೋದೆವೆಂದರೆ ಹ್ಹೊ! ಬಂದಿರಾ, ಬನ್ನಿ ಬನ್ನಿ ಎನ್ನುವ ಹರ್ಷಿ ರಾಜವಾಡೆ ಎಲ್ಲಿ ಎಂದು, ಅವರು ಕುಳಿತುಕೊಳ್ಳುವ ಮಾಮೂಲು ಜಾಗವನ್ನು ಸವರಿ ಎಲ್ಲಿದ್ದೀರಿ ಎಂದು ಕೇಳುವಂತಾಗುತ್ತದೆ. ಸಾವಿನ ನೆನಪನ್ನು ಸಹ ಹುಟ್ಟಿಸದಂತಹ ವ್ಯಕ್ತಿತ್ವದ ರಾಜವಾಡೆಯವರೂ ಫೋಟೋದೊಳಗೆ ಸೇರಿಬಿಟ್ಟರೆ!