ಮುಂದೆ, ಆ ಮನೆಯಲ್ಲಿರಲಿಕ್ಕಾಗದೆ ಆಕೆ ಮನೆ ಖಾಲಿ ಮಾಡಿ ಹೋದಳು. ಅಡಿಗೆ ಮಾಡುವ ಕೆಲಸ ಸಿಕ್ಕಿದೆಯೆಂದು, ಸಂಬಳ ಚೆನ್ನಾಗಿದ್ದು, ಊಟ ಬಟ್ಟೆ ಖರ್ಚು ಕಳೆಯುತ್ತದೆಂದೂ, ಗಂಡನ ಖಾಯಿಲೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ ಸಹಾಯವಾಗುತ್ತದೆಂದು ಹೇಳಿದಳು. ಸಾಲ ಮುಗಿಯಲು ಅನೇಕ ವರ್ಷಗಳೇ ಬೇಕಾಗಬಹುದೆಂದೂ ತಿಳಿಸಿದಳು. ಅವಳ ಸಮಾಧಾನ, ಸ್ಥೈರ್ಯಗಳನ್ನು ಮೆಚ್ಚಿ ನಾನೂ ಕೆಲವು ಧೈರ್ಯದ ಮಾತನ್ನಾಡಿ ಅವಳಿಗೆ ವಿದಾಯ ಹೇಳಿದೆ. ಅಂತೂ ಹಲವು ವರುಷಗಳ ಹೊಡೆತ, ಬಡಿತದ ನರಕದಿಂದ ಆ ಜೀವಿಗೆ ಶಾಶ್ವತ ಬಿಡುಗಡೆ ದೊರೆಯಿತಲ್ಲಾ ಎಂದು ನೆಮ್ಮದಿಯ ಉಸಿರೆಳೆದೆ. ಆಗೊಮ್ಮೆ ಈಗೊಮ್ಮೆ ಈ ಬಡಪಾಯಿಯ ನೆನಪಂತೂ ಬರುತ್ತಲೇ ಇತ್ತು.
ಮೀರಾ ಸಂಪಿಗೆ ಬರೆದ ಈ ವಾರದ ಕತೆ “ಬಿಡುಗಡೆ” ನಿಮ್ಮ ಭಾನುವಾರದ ಓದಿಗೆ

 

ನಾನು ಆಕೆಯ ಪಕ್ಕದ ಮನೆಯವಳು. ಅವಳ ಮನೆಯ ಆಗು ಹೋಗುಗಳಲ್ಲಿ ಕೊಂಚ ಆಸಕ್ತಳೂ ಸಹ. ನಾನು ಅವರಿವರ ಮನೆಯ ಮಾತು ಕದ್ದು ಕೇಳುವ ಚಟದವಳೊ ಅಥವಾ ಕೇವಲ ಕುತೂಹಲಿ ನೆರೆಯವಳೊ, ನನಗೇ ಅರಿಯದು. ಬಹುಶಃ ಇದ್ದರೂ ಇರಬಹುದು, ಇಲ್ಲದಿರಲೂಬಹುದು, ವಸ್ತುತಃ ನಂಗೆ ಬೇರೆ ಆಯ್ಕೆಗಳೇನೂ ಇರಲಿಲ್ಲಾ, ಏಕೆಂದರೆ ಅವಳ ಪುಟ್ಟ, ಅಟ್ಟದ ಗಾತ್ರದ ಮನೆಗೆ ತಗುಲಿಕೊಂಡೇ ನನ್ನ ಲಿಲಿಪುಟ್ ಗಾತ್ರದ ಮನೆಯಿತ್ತು. ಎರಡೂ ಮನೆಗಳ ನಡುವೆ ಗಾರೆ ಪೂರಾ ಕಿತ್ತು ಹೋಗಿ, ಮುರುಕು ಬಿಟ್ಟಿರುವ, ಬಡಕಲು, ಅಸ್ಥಿಪಂಜರದ ಒಂದು ಗೋಡೆ ಮಾತ್ರ. ಅದು ಹುಟ್ಟಿದ ದಿನವೊಂದನ್ನು ಬಿಟ್ಟರೇ, ಇಷ್ಟು ವರ್ಷಗಳೂ ಸುಣ್ಣ, ಬಣ್ಣ, ಗಾರೆ ಇಲ್ಲದೆ, ಹಸಿವಿನಿಂದ ಕಂಗೆಟ್ಟ ಮೂಳೆ ಚಕ್ಕಳವಾಗಿತ್ತು. ಅಲ್ಲಿ ಜೋರಾಗಿ ಸೀನಿದರೆ, ಇಲ್ಲಿ ನನ್ನ ಮನೆಯಲ್ಲಿ ಕಂಪನ. ನನ್ನ ಮನೆಯ ಶಬ್ದದ ಪರಿಣಾಮಗಳು ಅಲ್ಲಿಯೂ ಆಗುತ್ತಿರಬಹುದು, ಹೀಗಿರುವಾಗ ನಾನು ತಾನೇ ಗೋಡೆಯ ಅತ್ತ ಕಡೆ ಭಾಗದ ವಹಿವಾಟುಗಳನ್ನು ಹೇಗೆ ಆಲಿಸದೇ ಇರಲಿ.

ದಿನಂಪ್ರತಿ ಬೆಳಗ್ಗೆ ನಾನು ಎಚ್ಚರಗೊಳ್ಳುತ್ತಿದ್ದುದ್ದೇ ಗೋಡೆಯ ಅತ್ತ ಕಡೆಯಿಂದ ಹೊರಡುತ್ತಿದ್ದ ಭಯಂಕರ ಗೊರ್ ಗೊರ್, ಗರ್ ಗರ್ ಅನ್ನುವ ಶಬ್ದದಿಂದ. ಮನುಷ್ಯ ಸಾವಿನ ದವಡೆಯಲ್ಲಿ ಸಿಕ್ಕಿಕೊಂಡಾಗ ಗಂಟಲಲ್ಲಿ ಹೊರಡುವ ಶಬ್ದದ ಹಾಗೆ, ಗಂಟಲು ಕ್ಯಾಕರಿಸಿ, ಕಫ಼ ತೆಗೆಯಾಟ, ಕೆಮ್ಮುವುದು, ಸೀನುಗಳು, ಜಗಳಗಳಿಂದ ಏರಿದ ಧ್ವನಿ, ಇಲ್ಲವೇ ರಾತ್ರಿ ಸಂಭೋಗ ಕ್ರಿಯೆಯ ಆವೇಶ ತುಂಬಿದ ನರಳಾಟ ತಿಣುಕಾಟಗಳು…. ಹೀಗೇ, ಇವೆಲ್ಲಾ ನಿತ್ಯದ ಕ್ರಿಯಾ ಚಟುವಟಿಕೆಗಳೇ.

ನಾನು, ನನ್ನ ಪತಿ ಈ ಮನೆಗೆ ಬಾಡಿಗೆಗೆ ಬಂದ ಹೊಸದರಲ್ಲಿ, ಈ ವಿವಿಧ ಶಬ್ದಗಳ ಹಾವಳಿಯಿಂದ ಮೊದ ಮೊದಲು ಜಿಗುಪ್ಸೆ, ಮುಜುಗರಗಳಾಯ್ತು. ದಿನ ಕ್ರಮೇಣ, ಈ ಶಬ್ದಗಳು ನಿತ್ಯಕಾರ್ಯಕ್ರಮಗಳಾದ್ದರಿಂದ, ಇವುಗಳಿಗೆ ಒಗ್ಗಿ ಹೋದೆವು. ಇದಲ್ಲದೇ, ಬೀದಿಯಿಂದ ಹೊರಡುತ್ತಿದ್ದ ವಿವಿಧ, ವಿಚಿತ್ರವಾದ ಶಬ್ದಗಳು. ಹೂ, ಹಣ್ಣು, ತರಕಾರಿ ಮಾರಾಟಗಾರರು, ಪ್ಲಾಸ್ಟಿಕ್ ಸಾಮಾನು ಮಾರುವವರು, ಅರ್ಥವೇ ಆಗದಂತೆ, ಕೀಚಲು, ಮೂಗಿನಿಂದ ಏರು ಧ್ವನಿಯಲ್ಲಿ, ಹಾಡಿನ ರೀತಿ ಹಾಡುತ್ತ, ಮಾರಾಟಕ್ಕಿದ್ದ ವಸ್ತುಗಳನ್ನು ಸಾರಿಕೊಂಡು ಸಾಗುವ ಗಲಾಟೆ.

ಹಳೇ ಕಬ್ಬಿಣ, ಬಾಟ್ಲಿ, ಪೇಪರ್ ಕೊಳ್ಳುವವನ ಕರ್ಕಶ ಗಂಟಲು, ವಾಹನ ಸಂಚಾರದ ಆರ್ಭಟ, ನಾಯಿಗಳ ಬೊಗಳಾಟ, ಮಕ್ಕಳ ಕಿರುಚಾಟ, ಹೀಗೆ ಎಲ್ಲಾ ಗಲಾಟೆಗಳೂ ಅಭ್ಯಾಸವಾಗಿ, ನನ್ನ ದಿನ ನಿತ್ಯದ ಜೀವನ ಈ ಎಲ್ಲಾ ಶಬ್ದಗಳಿಂದ ಸುತ್ತುವರೆದು, ಈ ಗಲಾಟೆಗಳಿಲ್ಲದಿದ್ದರೆ ನನಗೆ ಏನನ್ನೊ ಕಳೆದುಕೊಂಡಂತೆ ಕಸಿವಿಸಿ. ಇವೆಲ್ಲಾ ನಿಜ ಜೀವನದ ರಥಯಾತ್ರೆಯ ತುಣುಕುಗಳಾಗಿ, ಟಿವಿಯಲ್ಲಿ ಬರೋ ಸೀರಿಯಲ್ ಗಿಂತಾ ಹತ್ತು ಪಟ್ಟು ಚಟವಾಗಿತ್ತು, ಇವಿಲ್ಲದಿದ್ದರೆ ನನ್ನ ಬದುಕು ನಿಸ್ಸಾರವೆನಿಸುವಮಟ್ಟಿಗೆ.

ನನ್ನ ಪಕ್ಕದ ಮನೆಯಾಕೆ ಬಡಕಲು ಶರೀರದ, ಪೀಚು ಮೈಕಟ್ಟಿನ ಹೆಂಗಸು. ಸುಮಾರು ನಾಲ್ಕು ಅಡಿ ಎತ್ತರವಿದ್ದ ಆಕೆ ಮೃದುಭಾಷಿ, ಧ್ವನಿ ಕೇಳಿಸುವುದೇ ಕಷ್ಟ. ಬೆಳಕು ಹರಿಯುವ ಮುಂಚೆ ಎದ್ದು ತಪ್ಪದೆ ಮನೆಯ ಹೊರಗಡೆ ಗುಡಿಸಿ, ನೀರು ಚುಮುಕಿಸಿ, ರಂಗೋಲಿ ಪುಡಿಯಿಂದ ಸರಳವಾದ ರಂಗೋಲಿ ಹಾಕುವುದು ಅವಳ ದೈನಂದಿನ ಚಟುವಟಿಕೆ. ನಂತರ, ಹಿತ್ತಲಿನಲ್ಲಿ ಅವಳು ಬೆನ್ನು ಬಗ್ಗಿಸಿ ಕುಕ್ಕರಗಾಲಲ್ಲಿ ಕುಳಿತು, ಹಿಂದಿನ ರಾತ್ರಿಯ ಪಾತ್ರೆಗಳನ್ನೆಲ್ಲಾ ತೊಳೆದು ಬಟ್ಟೆ ಒಗೆಯುವುದಿಕ್ಕೆ ಶುರು. ನಾವು ವಾಸಿಸುವೆಡೆ ಮುನ್ಸಿಪಾಲಿಟಿಯಿಂದ ನೀರು ಪೂರೈಕೆ ಬೆಳಗ್ಗೆ ಕೇವಲ ಒಂದು ಗಂಟೆ ಮಾತ್ರ ಇರುವುದರಿಂದ, ಅಷ್ಟರಲ್ಲಿ ಎಲ್ಲರೂ ಅವರವರ ಮನೆಗಳ ಪಾತ್ರೆ, ಬಟ್ಟೆ, ಇತ್ಯಾದಿ ಕೆಲಸ ಮುಗಿಸಿ, ಸ್ನಾನ ಪಾನಾದಿಗಳನ್ನು ಪೂರೈಸಬೇಕು. ಇಡೀ ದಿನದ ಬೇರೆ ಬಳಕೆಗಳಿಗೆ, ನೀರು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ನೀರು ನಿಂತು ಹೋದ ಮೇಲೆ, ಪುನಃ ಮರುದಿನ ಬೆಳಗಿನವರೆಗೂ ನೀರಿನ ಸರಬರಾಜಿಲ್ಲವಾದ್ದರಿಂದ ಧಾವಂತದಿಂದ ಈ ಕೆಲಸಗಳನ್ನೆಲ್ಲ ಮುಗಿಸಿದ ಮೇಲೆಯೇ, ಅವಳ ಮನೆಯಿಂದ ಅಡಿಗೆ ಮಾಡುವ ಶಬ್ದಗಳು ಕೇಳಿ ಬರುವುದು.

ಪುನಃ ಅವಳನ್ನು ಹೊರಗೆ ಕಾಣುವುದು, ಅವಳು ಕೆಲಸಕ್ಕೆ ಹೊರಟಾಗಲೇ. ಸರಳ ವೇಷ ಭೂಷಣ ಅವಳದು. ತಲೆಗೆ ಎಣ್ಣೆ ಹಚ್ಚಿ, ಕೂದಲು ಅಲ್ಲಾಡದಂತೆ ಹಿಂದಕ್ಕೆ ಬಾಚಿ, ಜಡೆಯನ್ನೊ, ಹೆರಳನ್ನೊ ಹಾಕಿ, ಹೂವನ್ನು ಮುಡಿದು, ಮುಖಕ್ಕೆ ತೆಳುವಾಗಿ ಪೌಡರ್ ಲೇಪಿಸಿ, ಹಣೆಯಲ್ಲಿ ಎದ್ದು ಕಾಣುವಂತೆ ಅಗಲವಾಗಿ ಕೆಂಪು ಪುಡಿ ಕುಂಕುಮವಿಟ್ಟು ಹೊರಡುವಳು. ಕತ್ತಿನಲ್ಲಿ ‘ವಿವಾಹಬಂಧನ’ ದ ಚಿಹ್ನೆಯಾದ ಹಳದಿ ಅರಿಶಿನದ ದಾರ. ಚಿನ್ನದ ಮಂಗಳಸೂತ್ರ ಅವಳ ಕೈಗೆ ಎಟುಕದ ವಸ್ತು.

ಆಕಾರ ಚಿಕ್ಕದಾದ್ದರಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಅತ್ತಿಂದಿತ್ತಿಗೆ ಓಲಾಡುತ್ತಾ, ಸಾವಕಾಶದ ನಡಿಗೆ ಅವಳದು, ಪೆಂಗ್ವಿನ್ ಹಕ್ಕಿಗಳು ನಡೆವ ರೀತಿ. ಆದರೂ ಅವಳ ನಡೆಯಲ್ಲಿ ಒಂದು ರೀತಿಯ ರಾಜ ಗಾಂಭೀರ್ಯ. ನಾನೇನಾದರೂ ಆ ಸಮಯ ಹೊರಗೆ ನಿಂತಿದ್ದರೆ, ಅವಳ ಕಡೆಯಿಂದ ಬರೇ ಒಂದು ಮುಗುಳ್ನಗೆ. ಕಾಫಿ ತಿಂಡಿ ಆಯಿತೇ ಎಂಬ ಔಪಚಾರಿಕ ಮಾತು, ಅಲ್ಲಿಗೆ ನಮ್ಮ ಸಂಭಾಷಣೆ ಮುಕ್ತಾಯ. ಸಂಜೆಯಂತೂ ಅವಳನ್ನು ನೋಡುವುದು ಅಪರೂಪವೇ. ಕೆಲಸದಿಂದ ವಾಪಸ್ಸಾದ ಕೂಡಲೇ, ಮನೆ ಒಳಸೇರಿ ಹುದುಗುವಳು.

ಅವಳ ಗಂಡ ಇವಳ ಇರಸರಿಕೆಗೆ ತದ್ವಿರುದ್ಧವಾದ ಪ್ರಾಣಿ. ಕೊಳಕು ಹರಕು ಬಟ್ಟೆಯಲ್ಲಿ ಶೊಭಚಾಗಿ ಕಾಣುವ, ಇವಳಷ್ಟೇ ಸಣಕಲ ಶರೀರದ, ಎತ್ತರದ ವ್ಯಕ್ತಿ. ಎಣ್ಣೆ-ಬಾಚಣಿಗೆ ಕಾಣದ ಪರಕೆಯ ಹಾಗಿರುವ ಕೆಂಗೂದಲು, ಕ್ಷೌರವಿಲ್ಲದ ಕುರಚಲು ಗಡ್ಡದ ಮುಖ, ರಕ್ತ ಕಾರುವ ಕೆಂಗಣ್ಣು, ಯಾರ ಕಡೆಯೂ ನೋಡದ, ಯಾರನ್ನೂ ಮಾತನಾಡಿಸದ, ನಗುವೇ ಕಾಣದ ಸಿಡುಕು ಮುಖ. ಅವನನ್ನು ನೋಡುವುದೇ ಅಪರೂಪ. ಯಾವತ್ತೂ ಬೆಳಗಿನ ಹೊತ್ತು ಕೆಲಸಕ್ಕೆ ಹೊರಟಿದ್ದು ನೋಡಿಲ್ಲಾ. ಇಳಿ ಸಂಜೆಯಾದ ಮೇಲೆ ಮನೆಯಿಂದ ಹೊರಡುವನು. ರಾತ್ರಿ ಹೊತ್ತು ಗೊತ್ತಿಗೆ ಮನೆಗೆ ಬಂದದ್ದು ಕಂಡಿಲ್ಲಾ. ಅವನು ಮನೆಗೆ ಬಂದಿರುವುದು ಅರಿವಾಗುತ್ತಿದ್ದು ಗೋಡೆಯ ಆ ಬದಿಯಿಂದ ಬರುವ ಶಬ್ದಗಳಿಂದಾಗಿ. ನಾವು ಈ ಮನೆಗೆ ಬಂದು ಕೆಲ ದಿನಗಳಾದ ಮೇಲೆ, ಅವಳ ಮನೆಯಿಂದ ಕೇಳಿ ಬರುತ್ತಿದ್ದ ಶಬ್ದಗಳೇನು ಎಂದು ಅರ್ಥವಾಯ್ತು.

ಪ್ರತಿ ರಾತ್ರಿ ಜೋರಾಗಿ ಗುದ್ದಿದ ಶಬ್ದ, ಪಾತ್ರೆಗಳನ್ನು ಎಸೆದಾಡುವ ಶಬ್ದ, ಪಟೀರನೆ ಹೊಡೆಯುವ ಶಬ್ದ. ಆತನ ಅವಾಚ್ಯ ಬೈಗುಳಗಳ ನಡುವೆ ಆತನನ್ನು ಸುಮ್ಮನಾಗಿಸಲು ಶ್… ಶ್…. ಎಂದು ಆಕೆಯ ವ್ಯರ್ಥ ಪ್ರಯತ್ನದ ಪಿಸುಧ್ವನಿ. ಕೊನೆಗೊಮ್ಮೆ ಎಲ್ಲಾ ಶಾಂತವಾಯಿತೆಂದ ಮೇಲೆ ಆಕೆಯ ಯಾತನೆಯ, ಏಟು ಬಿದ್ದ ಪುಟ್ಟ ಕುನ್ನಿ ಮರಿಯಂತೆ ಸಣ್ಣ ಭಯದ ಧ್ವನಿಯಲ್ಲಿ ತಡೆತಡೆದು ಕುಯ್ಯೋ, ಮುಯ್ಯೋ ಅಳುವಿನ ಶಬ್ದ. ಮೈ ಮೇಲೆ ನೀಲಿ ಬಾಸುಂಡೆ ಬರುವ ಹಾಗೆ ಬಡಿದ ಗಂಡನ ಹೊಡೆತಗಳಿಗಿಂತ, ನೆರೆಹೊರೆ ತಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆಂಬುದೇ ಆಕೆಗೆ ಚಿಂತೆ. ಎಂತಹ ಸಮಯದಲ್ಲೂ, ಹೊರ ಪ್ರಪಂಚದಿಂದ ತನ್ನ ಜೀವನದ ಭೀಕರ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಆಕೆಯದು.

ಮರುದಿನ ಏನೂ ಆಗಿಲ್ಲವೆಂಬಂತೆ, ಯಥಾ ಪ್ರಕಾರ, ಮನೆಗೆಲಸಗಳನ್ನೆಲ್ಲಾ ಮುಗಿಸಿ, ಶಿಸ್ತಿನಿಂದ ಉಡುಗೆ ತೊಟ್ಟು ರಾಜಗಾಂಭೀರ್ಯದ, ಪೆಂಗ್ವಿನ್ ಓಲಾಟದ ನಡಿಗೆಯಿಂದ ತನ್ನ ಕೆಲಸಕ್ಕೆ ಹೊರಡುವಳು.

ಕುಡುಕ ಗಂಡ ನಿತ್ಯವೂ ಅವಳನ್ನು ಹೊಡೆದು ಬಡಿದು ಹಿಂಸಿಸುತ್ತಿದ್ದ. ಅವನಿಗೆ ಮಾಡಲು ಕೆಲಸವಿಲ್ಲಾ, ಕಾರ್ಯವಿಲ್ಲಾ. ಬೆಳಿಗ್ಗೆಯೆಲ್ಲಾ ಹಿಂದಿನ ದಿನದ ಅಗ್ಗದ ಹೆಂಡದ ಅಮಲಿನಲ್ಲಿ ನಿದ್ರಿಸುವುದು. ಸಂಜೆ, ಅವಳು ಮನೆಗೆ ಬರುವ ವೇಳೆಗೆ ಎದ್ದು, ಅವಳಿಂದ ಎಷ್ಟು ಹಣ ಸಿಗುವುದೊ, ಅಷ್ಟನ್ನೂ ಕಸಿದುಕೊಂಡು, ಅವಳ ಹತ್ತಿರ ಹಣವಿಲ್ಲದಿದ್ದರೆ, ಮನೆಯಲ್ಲಿ ಏನು ಪದಾರ್ಥ ಸಿಗುವುದೋ, ಅದನ್ನು ಕೊಂಡೊಯ್ದು ಮಾರಿ ಆ ಸಂಜೆಯ ಕುಡಿತಕ್ಕೆ ಹಣ ಹೊಂದಿಸಿಕೊಳ್ಳುತ್ತಿದ್ದ.

ಒಂದು ಸಂಜೆ ಆಕೆ ಏನೋ ಕಾರಣಕ್ಕೆ ಹೊರ ಬಂದಳು. ಇದೇ ಸದಾವಕಾಶ ಎಂದು ಭಾವಿಸಿ, ನಾನು ಎರಡು ಲೋಟ ಕಾಫಿ ಹಿಡಿದು ಹೊರಬಂದೆ. ಅವಳತ್ತ ಒಂದು ಲೋಟ ಕಾಫಿ ನೀಡಿದಾಗ ಒಂದು ಕ್ಷಣ ದಾಕ್ಷಿಣ್ಯದಿಂದ ಲೋಟ ತೆಗೆದುಕೊಳ್ಳುವುದಕ್ಕೆ ಅನುಮಾನಿಸಿದಳು. ನಂತರ ಮಾತಿಲ್ಲದೆ ತೆಗೆದುಕೊಂಡಳು.

“ನೀವೆಲ್ಲಿ ಕೆಲಸಕ್ಕೆ ಹೋಗ್ತಿರಾ?” ನಾನೇ ಮಾತನ್ನು ಪ್ರಾರಂಭಿಸಿದೆ.

“ಬುಟ್ಟಿ ಹೆಣೆಯುವ ಒಂದು ಕೈಗಾರಿಕೆಯಲ್ಲಿ.”
“ನಿಮ್ಮ ಯಜಮಾನರು ಕೆಲಸಕ್ಕೆ ಹೋಗುವುದಿಲ್ಲವೆ?” ನನ್ನ ನೇರ ಮರು ಪ್ರಶ್ನೆ.
“ಇಲ್ಲಾ.” ಸಂಕೋಚದಿಂದ ಗಲಿಬಿಲಿಗೊಂಡು ಕಣ್ಣನ್ನು ಕೆಳಗೆ ಹಾಕಿದಳು. ನಂತರ ಮೌನವಾಗಿಬಿಟ್ಟಳು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ನಾನು ಬಿಡದೇ ಮುಂದುವರೆಸಿ ಮೃದುವಾಗಿ ಹೇಳಿದೆ, “ನಿಮ್ಮ ಗಂಡ, ಕುಡಿದು ಬಂದು ನಿಮ್ಮನ್ನು ಹೊಡೆಯುವುದು ನನಗೆ ತಿಳಿದಿದೆ. ನೀವೇನೂ ಹೇಳಿಕೊಳ್ಳದಿದ್ದರೂ, ನಿಮ್ಮ ಮನೆಯಿಂದ ಬರುವ ಶಬ್ದಗಳೇ ಮತ್ತು ನಿಮ್ಮ ಮೈ ಮೇಲೆ ಕಾಣುವ ನೀಲಿ ಹಸಿರು ಗಾಯಗಳೇ ನಿಮ್ಮ ದುಸ್ತರ ಜೀವನದ ಕಥೆಯನ್ನು ಹೇಳುತ್ತವೆ. ನಿಮ್ಮ ಸಂಕೋಚವೂ ನನಗೆ ಅರ್ಥವಾಗತ್ತೆ.”

ಹಳೇ ಕಬ್ಬಿಣ, ಬಾಟ್ಲಿ, ಪೇಪರ್ ಕೊಳ್ಳುವವನ ಕರ್ಕಶ ಗಂಟಲು, ವಾಹನ ಸಂಚಾರದ ಆರ್ಭಟ, ನಾಯಿಗಳ ಬೊಗಳಾಟ, ಮಕ್ಕಳ ಕಿರುಚಾಟ, ಹೀಗೆ ಎಲ್ಲಾ ಗಲಾಟೆಗಳೂ ಅಭ್ಯಾಸವಾಗಿ, ನನ್ನ ದಿನ ನಿತ್ಯದ ಜೀವನ ಈ ಎಲ್ಲಾ ಶಬ್ದಗಳಿಂದ ಸುತ್ತುವರೆದು, ಈ ಗಲಾಟೆಗಳಿಲ್ಲದಿದ್ದರೆ ನನಗೆ ಏನನ್ನೊ ಕಳೆದುಕೊಂಡಂತೆ ಕಸಿವಿಸಿ.

ಆಕೆಯ ಸಂಯಮದ ಕಟ್ಟೆ ಒಡೆಯಿತು. ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಹೆಪ್ಪುಗಟ್ಟಿದ್ದ ವೇದನೆಯೆಲ್ಲಾ ಕಣ್ಣೀರಿನ ರೂಪ ಪಡೆದು ಧಾರಾಕಾರವಾಗಿ ಸುರಿಯತೊಡಗಿತು. ಇದು ಕೆಲವು ನಿಮಿಷಗಳು ಮಾತ್ರ. ತಕ್ಷಣವೇ ಸಾವರಿಸಿಕೊಂಡು ತನ್ನ ಮೇಲೆ ಹತೋಟಿ ತಂದುಕೊಂಡು ಬಿಟ್ಟಳು. ಪುನಃ ಆಕೆ ಮೌನಿ.
“ನೀವೇಕೆ ಅಂತಹ ವ್ಯಕ್ತಿಯ ಜೊತೆ ಬಾಳ್ತಿದ್ದೀರಿ. ನಿಮಗೆ ಕೆಲಸವಿದೆ, ದುಡಿಯುವುದರಿಂದ ಹಣಕಾಸಿನ ಸ್ವಾತಂತ್ರ್ಯ ಇದೆ. ನಿಮ್ಮ ಗಂಡನಿಂದ ದೂರಾಗಿ ಕೈ ತೊಳೆದುಕೊಳ್ಳಿ,” ಎಂದು ಸಲಹೆ ಕೊಟ್ಟೆ.

ಆಘಾತಕ್ಕೆ ಒಳಗಾದಂತೆ ಅವಳ ಶರೀರವೆಲ್ಲಾ ಕಂಪಿಸಿತು. ಕತ್ತೆತ್ತಿ ನನ್ನ ನೋಡಿ, “ಏನು ಮಾತು ಹೇಳ್ತಿದ್ದೀರಾ, ಹಾಗೆ ಬಿಟ್ಟು ಬಿಡೋಕೆ ಆಗುತ್ಯೇ, ಸಮಾಜ ಏನನ್ನತ್ತೆ? ನೆಂಟರಿಷ್ಟರು ಏನನ್ನುತ್ತಾರೆ, ಹೇಗೆ ಮುಖ ತೋರಿಸಲಿ ಆಮೇಲೆ ಅವರಿಗೆಲ್ಲಾ?”

ಈ ಉತ್ತರವನ್ನು ಎಲ್ಲೊ ನನ್ನ ಮನಸ್ಸಿನ ಮೂಲೆಯೊಂದರಲ್ಲಿ ನಿರೀಕ್ಷಿಸಿಯೇ ಇದ್ದೇ. ನಿಟ್ಟುಸಿರೊಂದು ನನ್ನಿಂದ ಹೊರಟಿತು. ಇಲ್ಲಾ, ಇವಳೆಂದೆಂದಿಗೂ ಹೊರನಡೆಯುವುದಿಲ್ಲಾ.

ಸುಂಟರಗಾಳಿಯಲ್ಲಿ ಸಿಲುಕಿಕೊಂಡ ಅಸಹಾಯಕವಾದ ಎಲೆಗಳಂತೆ ನನ್ನ ತಲೆಯಲ್ಲಿ ಚಿಂತನೆಗಳು ಬಿರುಸಾಗಿ, ಉಗ್ರತೆಯಿಂದ ಎಡೆಬಿಡದೆ ವೃತ್ತಾಕಾರವಾಗಿ ಸುತ್ತಿದವು.

‘ಓದಿ ಉನ್ನತ ಶಿಕ್ಷಣವನ್ನು ಪಡೆದವರೂ ಸಹ ಸೇರಿ, ಇಂತಹ ಹೆಂಗಸರು ನೂರಾರು. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಮದುವೆಯೆಂಬ ದೌರ್ಜನ್ಯದ ಸಂಕೋಲೆಯಲ್ಲಿ ಸಿಕ್ಕಿ ಹಾಕಿಕೊಂಡ ಕೆಲವರಿವರು ಗಂಡನಿಂದ, ಮತ್ತಿತ್ತರರಿಂದ, ಕಿರುಕುಳ, ತಾತ್ಸಾರಗಳನ್ನು ಸಹಿಸುತ್ತಾ, ಎಲ್ಲಾ ನೋವು ಸಂಕಟಗಳನ್ನು ಮೂಕವಾಗಿ ಅನುಭವಿಸುವ ನಿರ್ಭಾಗ್ಯರು. ಆರ್ಥಿಕವಾಗಿ ಸ್ವಾವಲಂಬಿಗಳಾಗಿರದ ಕೆಲವರು. ಇನ್ನಿತರು ಸ್ವಾಲಂಬಿಗಳಾಗಿದ್ದರೂ, ಜೀವನ ಅಸಹನೀಯ ಎನಿಸಿದರೂ ಕಂಡ ಜಗತ್ತಿಗಿಂತ, ಕಾಣದ ಜಗತ್ತಿನ ಬಗ್ಗೆ ಇರುವ ಅಗೋಚರ ಭಯ, ಅನಿಶ್ಚಯತೆಯಿಂದಲೋ ಅಥವಾ ಮಕ್ಕಳ ಸಲುವಾಗಿಯೋ, ಇವೆಲ್ಲಕ್ಕೂ ಮೀರಿ ದಿಗಿಲಾಗುವುದು ಸಮಾಜ ಹಾಗೂ ಬಂಧು ಬಾಂಧವರ ಪ್ರತಿಕ್ರಿಯೆಗೆ. ಈ ಚಕ್ರವ್ಯೂಹದ ಒತ್ತಡಕ್ಕೆ ಸಿಕ್ಕು, ಹೊರಗೆ ಬರಲಾರದೆ, ನಿಷ್ಕ್ರಿಯರಾಗಿ ನಿಸ್ತೇಜವಾದ ಬಾಳನ್ನು ಬಾಳುವರು.’

‘ನನ್ನನ್ನು ಸದಾ ಕಾಡುವ ಪ್ರಶ್ನೆ, ‘ಸಮಾಜ’ ಎಂದರೆ ರಕ್ತ ಸಂಬಂಧಿಕರಾ, ಕುಟುಂಬದವರಾ, ನೆರೆಹೊರೆಯವರಾ ಅಥವಾ ಬೀದಿಯಲ್ಲಿ ಹೋಗಿ ಬರುವ ಜನಗಳಾ? ಕ್ರೂರಿ ಗಂಡನ ಕೈಲಿ ಹಿಂಸೆಗೊಳಗಾಗಿ ನರಳುತ್ತಿರುವಾಗ, ಆಕೆಯ ರಕ್ಷಣೆಗೆ ಇವರ್ಯಾರೂ ಯಾಕೆ ಮುಂದಾಗುವುದಿಲ್ಲ? ಮಾತುಗಳ ಕಲ್ಲನ್ನೆಸೆಯುವರೇ ಹೊರತು, ಈ ಕೌಟುಂಬಿಕ ಅತ್ಯಾಚಾರ, ಅನ್ಯಾಯದ ವಿರುದ್ಧ ಯಾಕೆ ಸೊಲ್ಲೆತ್ತುವುದಿಲ್ಲಾ ಈ ಷಂಡ ಸಮಾಜ! ತಮ್ಮ ತಮ್ಮ ಬದುಕನ್ನು ಮಾತ್ರ ನೋಡಿಕೊಳ್ಳುವ ಸ್ವಾರ್ಥಿ ಸಮಾಜ!’

ಅವಳ ಸ್ಥಿತಿ ಇಷ್ಟು ಹೀನಾಯವಾಗಿದ್ದರೂ, ಆಕೆ ಇದರೆಲ್ಲದರಿಂದ ಹೊರನಡೆಯುವುದಿಲ್ಲ. ಸಮಾಜದ ಕಟ್ಟಳೆಯನ್ನು ದಾಟಿ ಹೊರಗೆ ಬಂದು ಮುನ್ನಡೆಯುವ ಧೈರ್ಯವಿಲ್ಲಾ.’ ಉಕ್ಕುತ್ತಿರುವ ಕ್ರೋಧ, ಜಿಗುಪ್ಸೆಗಳಿಂದ ನನ್ನ ಮನಸ್ಸು ಆಲೋಚಿಸುತ್ತಾ ಹೋಯಿತು. ‘ಶತ ಶತಮಾನಗಳಿಂದ ತುಳಿತಕ್ಕೆ ಒಳಗಾಗಿ, ತಗ್ಗಿ ಬಗ್ಗಿ ನಡೆದೂ ನಡೆದೂ, ದುಸ್ಸಹನೀಯವಾದುದನ್ನೂ ಮೌನವಾಗಿ ಸಹಿಸಿಕೊಂಡು ಹೋಗುವುದು ನಮ್ಮ ಹೆಂಗಸರ ರಕ್ತದ ಕಣ ಕಣದಲ್ಲೂ ಆಳವಾಗಿ ಸೇರಿಹೋಗಿದೆ. ಹೆಣ್ಣಿನ ವ್ಯಕ್ತಿತ್ವವನ್ನೇ ದುರ್ಬಲಗೊಳಿಸಿಬಿಟ್ಟಿದೆ. ಇತರರ ಸುಖಕ್ಕಾಗಿ, ತನ್ನ ಸರ್ವಸ್ವವನ್ನು ತ್ಯಾಗ ಮಾಡುವುದೇ ಅವಳ ಜಾಯಮಾನ. ಸ್ವಂತ ಸುಖದ ತ್ಯಾಗವೇ ಅವಳೆಲ್ಲಾ ನಿರ್ಧಾರ ಮತ್ತು ಕ್ರಿಯೆಗಳಿಗೆ ಅಡಿಪಾಯ. ಸಮಾಜದ ಪ್ರತಿಕ್ರಿಯೆಗೆ ಹೆದರಿ ಹಣ್ಣಾಗುವಳೇ ಹೊರತು, ತನಗೇನು ಬೇಕು ಎಂದು ನಿರ್ಭಯವಾಗಿ ಯೋಚಿಸಲಾರಳು. ಹುಟ್ಟಿನಿಂದಲೇ ಹೆಣ್ಣುಮಕ್ಕಳಿಗೆ ಗಂಡು ಹೆಂಗಸಿಗಿಂತ ಉತ್ತಮನು, ಸಬಲನು, ಸಶಕ್ತನು. ಹೆಣ್ಣು ದುರ್ಬಲಳು, ಅಸಹಾಯಕಳು, ಗಂಡಿಗೆ ಸರಿಸಾಟಿಯಾಗಿ ನಿಲ್ಲುವುದು ಹೆಣ್ಣಿಗೆ ಸಲ್ಲದು. ಹೆಣ್ಣೇ ಎಲ್ಲಾ ಸಂದರ್ಭಗಳಲ್ಲೂ ಅನುಸರಿಸಿಕೊಂಡು, ಹೊಂದಾಣಿಕೆ ಮಾಡಿಕೊಳ್ಳಬೇಕು, ಎಂದೆಲ್ಲಾ ತಲೆಯಲ್ಲಿ ಬಿತ್ತುವರು. ಮದುವೆ ಆಯಿತೆಂದರೆ ಮುಗಿಯಿತು, ಜೀವಮಾನ ಪೂರ್ತಿಯ ಒಪ್ಪಂದವದು. ತಂದೆ ತಾಯಿಯರ ಮನೆಗೆ ಹಿಂದಿರುಗುವ ಪ್ರಶ್ನೆಯೇ ಏಳುವುದಿಲ್ಲ. ಮದುವೆ ಮಾಡಿಕೊಟ್ಟ ಮೇಲೆ, ತಂದೆ ತಾಯಿಯ ಕರ್ತವ್ಯ ಮುಗಿದ ಹಾಗೆಯೇ, ಸಾಯುವವರೆಗೆ ಗಂಡನ ಮನೆಯಲ್ಲೇ ಅವಳ ಸೌಭಾಗ್ಯ.’ ಯೋಚಿಸಿದಂತೆಲ್ಲಾ ರಕ್ತ ಕುದಿಯಿತಷ್ಟೇ ಹೊರತು, ಸಮಸ್ಯೆಗೆ ಸಮಾಧಾನ ಕಾಣಲಿಲ್ಲ.

ಜೀವನ ಹಾಗೆಯೇ ಮುಂದುವರೆಯಿತು. ವರ್ಷವೇ ಉರುಳಿತು. ಪಕ್ಕದ ಮನೆಯ ಗಲಾಟೆ, ಹೊಡೆತ, ಬಡಿತಕ್ಕೆ, ನಾನೂ ಒಗ್ಗಿ ಹೋದೆ. ಇದಕ್ಕೆ ಕೊನೆಯೇ ಇಲ್ಲವೆಂದರಿತು ನನ್ನ ಪಾಡಿಗೆ ನಾನಿದ್ದೆ.

ಒಂದಿನ ಗಂಡನಿಗೆ ಪಿತ್ತಕೋಶದ ಕ್ಯಾನ್ಸರ್ ಬಂದಿದೆ ಎಂದು ಖಿನ್ನಳಾಗಿ ಹೇಳಿದಳು. ಹೆಚ್ಚಿನ ತಪಾಸಣೆಗಾಗಿ ವೈದ್ಯರು ಆಸ್ಪತ್ರೆಗೆ ದಾಖಲು ಮಾಡಲು ಹೇಳಿದ್ದಾರೆಂದಳು. ಕ್ಯಾನ್ಸರ್ ಉಲ್ಬಣಾವಸ್ಥೆ ತಲುಪಿ, ಕೊನೆಯ ಹಂತ ಮುಟ್ಟಿತ್ತು. ಖಾಯಿಲೆ ಗುಣವಾಗುವುದಿಲ್ಲವೆಂಬ ವಿಷಯ ಗೊತ್ತಿದ್ದರೂ, ವೈದ್ಯರೂ ಸಹ ಆ ಬಡಪಾಯಿ ಹೆಂಗಸಿನ ಸ್ಥಿತಿಯನ್ನು ತನ್ನ ಲಾಭಕ್ಕೇ ಬಳಸಿಕೊಂಡರು. ಆ ಪರೀಕ್ಷೆ, ಈ ಚಿಕಿತ್ಸೆ ಎಂದು ಆ ಸಾಯುವ ಮನುಷ್ಯನಿಗೆ ಆಸ್ಪತ್ರೆಗೆ ದಾಖಲು ಮಾಡಿಸಿದರು. ಆಕೆ ಕಂಡ ಕಂಡವರ ಕಾಲು ಹಿಡಿದು ಅವರಿವರಿಂದ ಸಾಲ ಎತ್ತಿ ಹಣ ಖರ್ಚು ಮಾಡಿದಳು. ಕೊನೆಗೆ, ಇನ್ನು ಆಸ್ಪತ್ರೆಯಲ್ಲಿಟ್ಟುಕೊಂಡು ಪ್ರಯೋಜನವಿಲ್ಲವೆಂದು ಕೈ ಅಲ್ಲಾಡಿಸಿ ದೊಡ್ಡ ಮೊತ್ತದ ಬಿಲ್ಲನ್ನು ಆಕೆಗೆ ಕೊಟ್ಟು, ಅವನನ್ನು ಮನೆಗೆ ಕಳುಹಿಸಿದರು. ಕತ್ತಿನವರೆಗೆ ಸಾಲ ಹೊತ್ತು ಮನೆಯಲ್ಲಿ ಗಂಡನ ಸೇವಾ ಶುಶ್ರೂಷೆ ಮೊದಲಾಯಿತು. ನಿತ್ಯ ಕೆಲಸದ ಹೊರೆಯ ಜೊತೆಗೆ, ಹಾಸಿಗೆ ಹತ್ತಿದ ಗಂಡನಿಗೆ ತೊಳೆದೂ ಬಳಿದು ಮಾಡುವುದು, ಊಟ ತಿನ್ನಿಸುವುದೂ ಸೇರಿಕೊಂಡಿತು. ಕೆಲಸಕ್ಕಂತೂ ಹೋಗಲೇಬೇಕು, ಸುಸ್ತಾಯಿತು ಎಂದು ಕೂರುವ ಹಾಗಿಲ್ಲಾ. ಸಂಸಾರದ ನೊಗ ಹೊತ್ತು ಎಳೆದೇ ಎಳೆದಳು.

ಯಾತನಾಮಯ ರೋಗದ ಸ್ಥಿತಿಯಲ್ಲಿಯೂ ಆ ಗಂಡನಿಗೇನೂ ಪಶ್ಚಾತ್ತಾಪವಾದ ಹಾಗೆ ಕಾಣಲಿಲ್ಲ. ತನ್ನ ನೋವನ್ನೆಲ್ಲಾ ಅವಳ ಮೇಲೆ ದ್ವೇಷದ ರೂಪದಲ್ಲಿ ತೀರಿಸುತ್ತಿದ್ದ. ಊಟದ ತಟ್ಟೆ ಎಸೆಯುವುದು, ಅವಳನ್ನು ಒದೆಯುವುದೂ, ಊಟ ಮಾಡಿಸುವಾಗ ಅವಳ ಬೆರಳನ್ನು ಕಚ್ಚುವುದು, ಮಲಗಿದ್ದಲ್ಲೇ ಇವನ ಈಗಿನ ನಿತ್ಯದ ಹಿಂಸೆಗಳು.

ಕೊನೆಗೊಂದು ದಿನ ಮಡಿದ ಆ ಮೃಗ. ಇಪ್ಪತ್ಮೂರು ವರ್ಷಗಳ ನರಕಸದೃಶ ಜೀವನದಿಂದ ಅಂತೂ ಇಂತೂ ಆಕೆಗೆ ಬಿಡುಗಡೆಯಾಯಿತು. ಬಂಧು, ಬಳಗ, ಸ್ನೇಹಿತರು ನೆಪ ಮಾತ್ರಕ್ಕೆ ಬಂದು ಬಾಯುಪಚಾರಕ್ಕೆ ಸಂತಾಪ ತೋರಿ ಕೃತಕ ಸಮಾಧಾನದ ಮಾತನ್ನಾಡಿದರು. ಜನಗಳಿಗೆ ಸಾವು ಹಾಗೂ ಹೆಣವನ್ನು ನೋಡಲು ಅದೇನೋ ವಿಲಕ್ಷಣವಾದ ಕುತೂಹಲ. ಹೆಣವನ್ನು ನೋಡಲು ಬೀದಿಯಲ್ಲಿ ಹೋಗೋ, ಬರೋ ಜನಗಳು ಕುತೂಹಲದಿಂದ ಇಣುಕಿದರು. ಸನ್ನಿವೇಶಕ್ಕೆ ತಕ್ಕಂತೆ ಚ ಚ ಅಂತ ಲೊಚಗುಟ್ಟಿ, ಒಣ ವೇದಾಂತ ಒಗೆದರು. ಸಂಬಂಧಿಕರು ಅಲ್ಪಸ್ವಲ್ಪ ಹಣ ಸೇರಿಸಿ, ಆತನ ಅಂತ್ಯಕ್ರಿಯೆ ಮಾಡಿದರು.

ಮುಂದೆ, ಆ ಮನೆಯಲ್ಲಿರಲಿಕ್ಕಾಗದೆ ಆಕೆ ಮನೆ ಖಾಲಿ ಮಾಡಿ ಹೋದಳು. ಅಡಿಗೆ ಮಾಡುವ ಕೆಲಸ ಸಿಕ್ಕಿದೆಯೆಂದು, ಸಂಬಳ ಚೆನ್ನಾಗಿದ್ದು, ಊಟ ಬಟ್ಟೆ ಖರ್ಚು ಕಳೆಯುತ್ತದೆಂದೂ, ಗಂಡನ ಖಾಯಿಲೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ ಸಹಾಯವಾಗುತ್ತದೆಂದು ಹೇಳಿದಳು. ಸಾಲ ಮುಗಿಯಲು ಅನೇಕ ವರ್ಷಗಳೇ ಬೇಕಾಗಬಹುದೆಂದೂ ತಿಳಿಸಿದಳು. ಅವಳ ಸಮಾಧಾನ, ಸ್ಥೈರ್ಯಗಳನ್ನು ಮೆಚ್ಚಿ ನಾನೂ ಕೆಲವು ಧೈರ್ಯದ ಮಾತನ್ನಾಡಿ ಅವಳಿಗೆ ವಿದಾಯ ಹೇಳಿದೆ. ಅಂತೂ ಹಲವು ವರುಷಗಳ ಹೊಡೆತ, ಬಡಿತದ ನರಕದಿಂದ ಆ ಜೀವಿಗೆ ಶಾಶ್ವತ ಬಿಡುಗಡೆ ದೊರೆಯಿತಲ್ಲಾ ಎಂದು ನೆಮ್ಮದಿಯ ಉಸಿರೆಳೆದೆ. ಆಗೊಮ್ಮೆ ಈಗೊಮ್ಮೆ ಈ ಬಡಪಾಯಿಯ ನೆನಪಂತೂ ಬರುತ್ತಲೇ ಇತ್ತು.

ಸುಮಾರು ಒಂದು ವರ್ಷದ ಹತ್ತಿರ ಆಗಿತ್ತೇನೋ ಅವಳನ್ನು ನೋಡಿ. ಧಿಡೀರ್ ಎಂದು ಒಂದಿನ ನನ್ನ ಮನೆಯ ಬಾಗಿಲಲ್ಲಿ ಕಾಣಿಸಿಕೊಂಡಳು. ನನಗೆ ಸಂತೋಷ, ಆಶ್ಚರ್ಯಗಳು ಒಟ್ಟಿಗೇ ಉಂಟಾದವು. ಎಲ್ಲಿರುವಳೋ, ಹೇಗಿರುವಳೋ ಎಂದೂ ಆಗಾಗ್ಗೆ ಯೋಚಿಸಿದ್ದೂ ಇತ್ತಲ್ಲಾ. ಕೆಂಪಗೆ, ಚೆನ್ನಾಗಿ ದುಂಡಗಾಗಿದ್ದಳು. ಮುಖದ ಮೇಲೆ ನಿರಾಳವಾದ ಕಳೆ, ಸಂತೋಷವಾಗಿಯೂ ಕಂಡಳು. ಕೆಲಸದ ಬಗ್ಗೆ ವಿಚಾರಿಸಿದೆ, ಬಹಳ ಆರಾಮವಾಗಿರುವುದಾಗಿಯೂ, ಮನೆಯ ಯಜಮಾನತಿ ತುಂಬಾ ಒಳ್ಳೆಯವರಾಗಿದ್ದು, ಇವಳನ್ನು ಮನೆಯವಳಂತೇ ಕಾಣುತ್ತಿದ್ದರೆಂದು ತಿಳಿಸಿದಳು. ಅಂತಹ ಮನೆ ಸೇರೋಕೆ ಅದೃಷ್ಟ ಮಾಡಿದ್ದೆನೆಂದಳು. ನನಗೂ ತುಂಬಾ ಸಂತೋಷವಾಯ್ತು. ಸಾಲದ ಹೊರೆ ಬಗ್ಗೆ ಕೇಳಿದೆ. ಅದೂ ನಿಧಾನವಾಗಿ ತೀರುತ್ತಿದೆ, ಆದರೂ ಇನ್ನೂ ಹಲವಾರು ವರ್ಷಗಳಾಗುತ್ತದೆ ಎಂದಳು. ‘ಈಗೇನು ಇಲ್ಲೀ ತನಕ ಬಂದದ್ದು’ ಎಂದು ಕೇಳಿದೆ ‘ಗಂಡನ ವರ್ಷಾಬ್ಧಿಕ ಮಾಡುವುದಿತ್ತಲ್ಲಾ’ ಎಂದಳು. ನಾನು ಗರಬಡಿದವಳಂತೆ ಅವಳತ್ತ ನೋಡಿದೆ. ಸುಧಾರಿಸಿಕೊಂಡು “ಇದಕ್ಕೆಲ್ಲಾ ಹಣ?” ಪ್ರಶ್ನಿಸಿದೆ.

“ನನ್ನ ಸಂಬಳದಿಂದ ಸ್ವಲ್ಪ ಹಣವನ್ನು ಪ್ರತಿ ತಿಂಗಳೂ ಇದಕ್ಕಾಗಿ ಉಳಿಸಿದ್ದೀನಿ.”

“ಅಲ್ಲಾ ಬದುಕಿರುವಷ್ಟು ಸಮಯ ನಿನ್ನನ್ನು ಗೋಳು ಹುಯ್ದು, ಹುರಿದು ಮುಕ್ಕಿದವನ ಆತ್ಮಕ್ಕೆ ಸ್ವರ್ಗದಲ್ಲಿ ಶಾಂತಿಯ ಸ್ಥಾನ ಕಲ್ಪಿಸೋಕೆ, ನೀನೇಕೆ ಕಷ್ಟ ಪಟ್ಟು ದುಡಿದ ಹಣವನ್ನು ಪೋಲು ಮಾಡ್ತಿಯಾ? ಹಳೇ ಸಾಲವೇ ಇನ್ನೂ ಮುಗಿದಿಲ್ಲಾ!”

“ಹಾಗಂದರೆ ಹೇಗ್ಹೇಳಿ? ತಾಳಿ ಕಟ್ಟಿದ ಗಂಡ, ಹೆಂಡತಿಯಾಗಿ ನನ್ನ ಕರ್ತವ್ಯ ನಾನು ಮಾಡಲೇ ಬೇಕಲ್ಲಾ. ಮಾಡದೇ ಹೋದರೆ, ಸಮಾಜ ಬಂಧು ಬಳಗ ಏನಂತಾರೆ ಹೇಳಿ? ಕಷ್ಟವೋ, ನಷ್ಟವೋ, ಮಾಡಿ ಮುಗಿಸಬೇಕು,” ಅಂದಳು ಶಾಂತ ಭಾವದಿಂದ.

ನನ್ನ ತಲೆ ದಿಮ್… ಅನ್ನತೊಡಗಿತು.