ಗಜಾರಿಷ್
ನಾನು ಹುಟ್ಟಿದಾಗಲೇ
ನನ್ನನ್ನು ಬಂಧಿಸಿಡಲು
ಗುಟ್ಟಾಗಿ ಸಂಕೋಲೆ ಸಿದ್ಧಪಡಿಸಿದರು
ತಲತಲಾಂತರಗಳಿಂದ ನನ್ನ ಜಾತಿಯ ಕಾಲುಗಳಿಗೆ ಮೆಹಂದಿ ಹಚ್ಚಿ
ಬಾಗಿಲೊಳಗೆ ಕೂರಿಸಿ ಖೈದು ಮಾಡಿದರು
ಜೋಗುಳ ಹಾಡಿಕೊಳ್ಳೆಂದು ನನ್ನಜಾತಿಯ ಕಂಕುಳಿಗೆ ಕೂಸನಿತ್ತು
ಸಹನೆಯ ಆಭರಣ ಮಾಡಿ ಸಿಂಗರಿಸಿದರು
ಆಗಿಂದ ಈಗಿನವರೆಗೆ
ನಾಲ್ಕು ಗೋಡೆಗಳ ಮಧ್ಯೆ ಓಡಿಓಡಿ
ಬೇಸತ್ತು ಹೋಗಿದ್ದೇವೆ ಮಹಾನುಭಾವರೇ!
ಪ್ರತಿ ರಾತ್ರಿ ಯಾವುದೋ ಒಂದು ಮೂಲೆಯಲ್ಲಿ
ನಮ್ಮ ಕರುಳು ಹಾಡಿದ ಹಾಡುಗಳು ಕೇಳಿಸುತ್ತಲೇ ಇವೆ
ನಾನೀಗ ನಿಜವ ನುಡಿಯುತ್ತಿರುವೆ
ಧೈರ್ಯವಾಗಿ ಧ್ವನಿಯೆತ್ತಿ ನಿಜವನ್ನೇ ಮಾತನಾಡುತ್ತಿರುವೆ
ಕಿರುಬೆರಳಷ್ಟೂ ನೀನು ಇಲ್ಲವೆಂದು
ಎಂದೋ ಹಾಕಬೇಕಾದ ಅಕ್ಕಿ ಕಾಳನ್ನು
ಈಗ ಪ್ರೀತಿಯಿಂದ ನನ್ನ ಗಂಟಲಲ್ಲಿ ತುರಕಬೇಡಿ
ನಮ್ಮ ಶವಗಳು ಮೆರವಣಿಗೆ ಹೊರಟಾಗ
ಆನಂದದಿಂದ ಕುಣಿದಾಡಿದ ನಿಮ್ಮ ಕಾಲುಗಳಿಗೊಂದು ನಮಸ್ಕಾರ
ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವ ಪ್ರತಿಸಾರೀ
ನಿಂತ ನಿಲುವಲ್ಲಿಯೋ ಅಡ್ಡವಾಗಿಯೋ ಗುಪ್ತವಾಗಿ
ಸೀಳುಹೋಗುತ್ತಲೇ ಇದ್ದೇವೆ
ನಮ್ಮನ್ನು ಸರೋವರಗಳಾಗಿಸಿ
ಈಜುವುದನ್ನು ಕಲಿತುಕೊಂಡ ನಿಮ್ಮಜಾಣತನ ಇನ್ನು ಸಾಕು
ಈ ಜನ ಅಂಗಲಾಚಿದರೂ
ಕನಿಕರವಿಲ್ಲದೆ ಕಷ್ಟಕ್ಕೆ ದೂಡಿದರೂ ಬೇಫಿಕರ್
ನಾನೀಗ ನಿಜವನ್ನೇ ಮಾತನಾಡುವೆ
ನಮಗೀಗ ಕರಿಮಣಿಗಳ ಬಂಧನ
ಮತ ಪ್ರೀತಿಯ ಸಂಸಾರಗಳು ಬೇಡ
ನಿಜ ಮಾತನಾಡುವ ಜೊತೆಗಾರ ಬೇಕು
ನನ್ನನ್ನು ಹಡೆದಿದ್ದಕ್ಕೆ
ನನ್ನ ಅಬ್ಬಾಜಾನನ್ನು ಅದನ್ನೇ ಕೇಳುತ್ತೇನೆ
ಏಕೆಂದರೆ ನಾನು
ಬಿಗಿದ ಮುಷ್ಟಿಯೊಂದಿಗೆ ಹುಟ್ಟಿದವಳು.
ಕಾ.ಹು. ಚಾನ್ ಪಾಷ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು.
ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರು.
ಮನದ ಮಲ್ಲಿಗೆ (ಚುಟುಕು ಸಂಕಲನ), ಜನ ಮರುಳೋ! (ಕಥಾ ಸಂಕಲನ)
ಭಲೇ! ಗಿಣಿರಾಮ (ಮಕ್ಕಳ ನಾಟಕ) ಮತ್ತು ಅನುವಾದಿತ ಕಥಾ ಸಂಕಲನಗಳು ಪ್ರಕಟಗೊಂಡಿವೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Cheennagide! Jagattu ariyali!
ಕವಮ ತುಂಬಾ ಚೆನ್ನಾಗಿದೆ. ತಮ್ಮ ಅನುವಾದ ಅತ್ಯಂತ ಸಹಜವಾಗಿದೆ, ಸರಳವಾಗಿದೆ, ಸುಂದರವಾಗಿದೆ. ಇನ್ನೂ ಹೆಚ್ಚಿನ ಅನುವಾದಗಳನ್ನು ತಮ್ಮಿಂದ ನಿರೀಕ್ಷಿಸುತ್ತೇವೆ. ಒಂದೊಳ್ಳೆಯವ ಕವನವನ್ನು ಓದಿ ಸವಿಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್