ಎಡಬಟ್ಟು ಎಡಬಟ್ಟು ಮಾತನಾಡುವ, ಸೀರೆ ಉಟ್ಟುಕೊಳ್ಳುವ, ಕಳ್ಳ ನಾಟಾ ಸಾಗಿಸುವ ಈ ಶಾಮಣ್ಣ ಮಹಾನ್ ಯಕ್ಷಗಾನ ಪ್ರೇಮಿ. ಯಕ್ಷಗಾನಕ್ಕೆಂದು ಆ ಊರಿಗೆ ಬಂದವರೆಲ್ಲ ಇವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇಂದಿರಾ ಆ ತೋಟದ ಮನೆಗೆ ಬರುವುದಕ್ಕಿಂತ ಮುಂಚೆ ಅದು ಕಳ್ಳಕಾಕರ ಬೀಡಾಗಿತ್ತು. ಯಕ್ಷಗಾನ ಮೇಳ ಬಂದಾಗ ಯಕ್ಷಗಾನದವರಿಗಾಗಿ ಬಿಟ್ಟುಕೊಡುತ್ತಿದ್ದ. ಹೀಗೇ ಒಂದು ದಿನ ಯಕ್ಷಗಾನ, ಇಂದಿರೆಯ ಮನೆಯಲ್ಲಿ ಜನವೋ ಜನ. ಅವತ್ತು ಹಗಲಿಡೀ ಇಂದಿರೆ ಮತ್ತು ಅವಳ ಮಗಳು ಮನೆಯ ಹೊರಗಿನ ಕಟ್ಟೆಯ ಮೇಲೇ ಕಳೆದರು. ಸಂಜೆಯಾಗುತ್ತಿದ್ದಂತೆಯೇ ಒಬ್ಬೊಬ್ಬರಾಗೇ ಖಾಲಿಯಾಗಿ, ಎಲ್ಲರೂ ಯಕ್ಷಗಾನ ಕುಣಿಯಲು ಮೇಳದ ಹತ್ತಿರ ನಡೆದರು.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕತೆಗಳ ಕೊನೆಯ ಕಂತು
ಶಾಮಣ್ಣನ ಸೊಸೆ ರುಕ್ಮಿಣಿ ಮನೆಬಿಟ್ಟು ಹೋಗಿದ್ದದ್ದು ಶಾಮಣ್ಣನಿಂದಾಗಿಯೇ ಎಂಬುದು ಗೊತ್ತಾಗಿದ್ದು ಅವತ್ತು ಮಟಮಟ ಮಧ್ಯಾಹ್ನ ಇಂದಿರೆಯ ಮನೆಗೆ ಬಂದು ಅವಳು ತನ್ನ ವೃತ್ತಾಂತವನ್ನು ಹೇಳಿ ಮನಸ್ಸನ್ನು ಹಗುರಮಾಡಿಕೊಂಡ ಮೇಲೆಯೇ. ಅಲ್ಲಿಯವರೆಗೆ ರುಕ್ಮಿಣಿಗೂ – ಗಂಡನಿಗೂ, ಅತ್ತೆಗೂ-ಸೊಸೆಗೂ ಸರಿಬರಲಿಲ್ಲವೆಂದೂ, ಅವರು ಹವ್ಯಕರು, ಇವರು ಕರ್ನಾಟಕ ಬ್ರಾಹ್ಮಣರು, ಇವರ ಆಚಾರ, ವಿಚಾರ, ಮಡಿ-ಮೈಲಿಗೆಗಳಿಗೆ ರುಕ್ಮಿಣಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತೆಂದೂ, ಅದಿಕ್ಕೇ ಅವಳು ಮನೆಬಿಟ್ಟು ಹೋಗಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದರೇ ವಿನಾ ಯಾರೊಬ್ಬರೂ ಶಾಮಣ್ಣನನ್ನು ಈ ವ್ಯವಹಾರದಲ್ಲಿ ಎಳೆದು ತಂದವರೇ ಅಲ್ಲ.
ಬಿಳಗಿ ಸೀಮೆಯ ಹಳ್ಳಿಯೊಂದರಿಂದ ಬಂದ ರುಕ್ಮಿಣಿ ಸಿದ್ದಾಪುರ ಪ್ಯಾಟೆಯಲ್ಲಿದ್ದ ಶಾಮಣ್ಣನ ಹಿರಿ ಮಗ ಕೆಲಸಕ್ಕೆ ಬಾರದ ಸೋಂಬೇರಿ ಶಂಕರಣ್ಣನನ್ನು ಮದುವೆಯಾಗಿ ಪಡಬಾರದ ಪಾಡು ಪಡುತ್ತಿದ್ದಳು. ಇದಕ್ಕೆ ಸರಿಯಾಗಿ ಶಾಮಣ್ಣನೂ, ಅವನ ಹೆಂಡತಿ ಸೀತಕ್ಕನೂ, ಅವನ ಮದುವೆಯಾಗದ ಮಗಳು ಸುನಂದಾ ಮತ್ತೊಬ್ಬ ಮಗ ಮಂಜು ಎಲ್ಲರೂ ಸೇರಿ ಅವಳನ್ನು ಇನ್ನಿಲ್ಲದಂತೆ ಗೋಳು ಹೊಯ್ದುಕೊಳ್ಳುತ್ತಿದ್ದರು. ಇವನ್ನೆಲ್ಲ ಹೇಳಿಕೊಳ್ಳಲು ಯಾರೂ ಇಲ್ಲದೆ, ಒಳಗೊಳಗೇ ಕುದಿಯುತ್ತಿದ್ದ ರುಕ್ಮಿಣಿ ಆಗೀಗ ತೋಟದ ಕೆರೆಯಲ್ಲಿ ಇಂದಿರೆ ಬಟ್ಟೆ ತೊಳೆಯುವಾಗಲೆಲ್ಲ ಅಲ್ಲಿಗೆ ಬಂದು ದುಃಖ ತೋಡಿಕೊಂಡು ನಿರಾಳವಾಗುತ್ತಿದ್ದಳು. ಆದರೆ ದಿನೇದಿನೆ ಮಾವನ ಕಿರಿಕಿರಿ ಜಾಸ್ತಿಯಾಗಿ ಅದನ್ನು ಗಂಡನ ಬಳಿ ಹೇಳಿಕೊಂಡರೆ, ಮಾಡಲು ಬೇರೆ ಕೆಲಸ ಇಲ್ಲ ನಿಂಗೆ. ನಿನಗೆ ಸಂಶಯವೆಂದು ಅವಳನ್ನೇ ಒಂದಿಷ್ಟು ಬೈದು, ಟವಲು ಕುಡುಗಿ ಹೊರಟುಬಿಟ್ಟ.
ಇಂಥವನಿಂದ ಏನನ್ನು ತಾನೆ ನಿರೀಕ್ಷಿಸಿಯಾಳು? ಇಂದಿರೆ ಅಥವಾ ಅಕ್ಕಪಕ್ಕದವರ ಬಳಿ ದುಃಖ ತೋಡಿಕೊಳ್ಳುತ್ತಿದ್ದರೂ, ಈಗಿನ ಈ ದುಃಖ ಮಾತ್ರ ಯಾರೊಡನೆಯೂ ಹೇಳಿಕೊಳ್ಳಲಾಗದೆ, ಗಂಡನೂ ಅರ್ಥಮಾಡಿಕೊಳ್ಳದೇ ಕಡೆಗೆ ಇಬ್ಬರು ಮಕ್ಕಳನ್ನೂ ಕಟ್ಟಿಕೊಂಡು ಅವಳು ಮನೆಬಿಡುವ ಹಾಗಾಗಿತ್ತು. ಇಂಥ ರುಕ್ಮಿಣಿ ಮನೆಬಿಟ್ಟು ಇನ್ನೂ ಒಂದು ವಾರವೂ ಕಳೆಯದೆ ಇಂದಿರೆಯ ಮನೆಗೆ ಬಂದಿದ್ದಳು ತನ್ನ ಕತೆ ಹೇಳಲು. ಅವಳ ಕತೆ ಕೇಳಿ ರುಕ್ಮಿಣಿಯ ಮನಸ್ಸು ಹಗುರಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಇಂದಿರೆಯ ಮನಸ್ಸು ಮಾತ್ರ ಕುದಿಯತೊಡಗಿತ್ತು.
ಇಂದಿರಾ ಶಾಮಣ್ಣನ ತೋಟದ ಮನೆಯಲ್ಲಿ ಬಾಡಿಗೆಯಲ್ಲಿರುವವಳು. ಅವಳ ಗಂಡ ಸತ್ತು ಎರಡು ವರ್ಷಗಳಾಗಿ, ದುಡಿಯುವ ಜೀವವೇ ಇಲ್ಲದಂತಾಗಿ, ಪೇಟೆಯಲ್ಲಿನ ಮನೆಗಳಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದಿರುವ ಸ್ಥಿತಿಯಲ್ಲಿದ್ದಳು. ಶಾಮಣ್ಣನೇ ತನ್ನ ಮನೆಗೆ ಬಂದಿರಿ ಎಂದು ಕರೆದಾಗ, ಒಲ್ಲದ ಮನಸ್ಸಿನಿಂದಲೇ ಇಂದಿರಾ ಪ್ರಾಯಕ್ಕೆ ಬಂದ ಮಗಳು ಮಾಲತಿಯನ್ನೂ ಕಟ್ಟಿಕೊಂಡು ಆ ಮನೆಯಲ್ಲಿ ವಾಸವಾಗಿದ್ದಳು. ಊರಿನಿಂದ ಹೊರಗಿದ್ದ ಆ ಮನೆ ಹೇಗಿತ್ತೆಂದರೆ ಸುತ್ತ ಕಾಡು, ಎದುರಿಗೆ ತೋಟ, ಅದರ ನಡುವೆ ಇದ್ದ ದೈದುಣ್ಣದಂಥ ಆ ಮನೆಗೆ ಕರೆಂಟೂ ಇರಲಿಲ್ಲ. ಅಕ್ಕಪಕ್ಕ ಯಾವ ಮನೆಗಳೂ ಇಲ್ಲದ ಒಂಟಿಯಾದ ಆ ಮನೆಯಲ್ಲಿ ಇವರಿಬ್ಬರೇ ಇರಬೇಕಾದ ಸ್ಥಿತಿ ಬಂದಿತ್ತು.
ಹೀಗೆ ಅನಿವಾರ್ಯವಾಗಿ ಅಲ್ಲಿಗೆ ಬಂದ ಇಂದಿರೆಗೆ ಆಗೀಗ ಬಟ್ಟೆ ಒಗೆಯುವಾಗ, ಅಥವಾ ತೋಟಕ್ಕೆ ಹೋದಾಗಲೆಲ್ಲ ಜೊತೆಯಾಗಿ ತನ್ನ ಸಂಕಷ್ಟ ಹೇಳಿಕೊಳ್ಳುತ್ತಿದ್ದಳು ರುಕ್ಮಿಣಿ. ಅಂಥ ರುಕ್ಮಿಣಿ ದಿಢೀರೆಂದು ಅವತ್ತು ಮಧ್ಯಾಹ್ನ ಬಂದು ತನ್ನ ಕತೆ ಹೇಳುವುದಕ್ಕೆ ಬಲವಾದ ಕಾರಣಗಳಿದ್ದವು. ರುಕ್ಮಿಣಿಯದ್ದೆರೆಡು ಹೊಸಾ ಸೀರೆ ಕಾಣೆಯಾಗಿದ್ದು, ಅದಕ್ಕೆ ಕಾರಣ ತನ್ನ ಮಾವ ಶಾಮಣ್ಣನೇ ಎಂದು ಅವಳು ಹೇಳಿದ್ದೇ ಇಂದಿರೆಯ ಮನಸ್ಸು ಒಂದೇ ಸಮನೆ ಕೊರೆಯಲು ಶುರುವಾಗಿದ್ದು ಅವಳದ್ದೂ ಸೀರೆ ಕಾಣೆಯಾಗಿದ್ದಕ್ಕೆ. ಅವಳ ಸೀರೆ ಕಾಣೆಯಾಗಿ ಒಂದು ವಾರವಷ್ಟೇ ಕಳೆದಿತ್ತು. ಅದು ಕೂಡ ಹೊಸದೇ ಆಗಿದ್ದು, ಒಂದು ಸಲ ಅಣ್ಣನ ಮನೆಗೆ ಉಟ್ಟುಕೊಂಡು ಹೋದವಳು ಸೀರೆಗೆ ಸ್ವಲ್ಪ ಮಣ್ಣು ತಾಗಿದೆಯೆಂದು ತೊಳೆದು ಜಗುಲಿ ನ್ಯಾಲೆ ಮೇಲೆ ಒಣಗಿಸಿದ್ದಳು. ಆದರೆ ಮಾರನೇ ದಿನದಿಂದ ಆ ಸೀರೆ ಕಾಣ್ತಾ ಇರಲಿಲ್ಲ. ಮಗಳು ತೆಗೆದಿಟ್ಟಿರಬಹುದೆಂದು ಮಗಳಿಗೂ ಕೇಳಿ, ಅವಳಿಗೂ ಗೊತ್ತಿಲ್ಲ ಎಂದಮೇಲೆ ಇಡೀ ಮನೆಯನ್ನು ಹುಡುಕಿದರೂ ಸೀರೆ ಯಾಕೆ ಕಾಣ್ತಾ ಇಲ್ಲ ಎಂಬ ಗುಂಗಲಿದ್ದವಳಿಗೆ, ದೊಡ್ಡಹಬ್ಬದಲ್ಲಿ ತಾಯಿ ಮನೆಯಲ್ಲಿ ಕೊಟ್ಟ ಸೀರೆಯನ್ನು ತಾನು ಎಲ್ಲರಿಗೂ ತೋರಿಸಿ ಅಲ್ಲೇ ಜಗುಲಿಯಲ್ಲಿ ಚಾಪೆಯ ಮೇಲೆ ಇಟ್ಟು ಹೋಗಿ ಬರುವಷ್ಟರಲ್ಲಿ ಸೀರೆ ಇಲ್ಲ, ಅದು ತನ್ನ ಮಾವಂದೇ ಕೆಲಸ, ಎಂದ ರುಕ್ಮಿಣಿ ಇಂದಿರೆಯ ಕಿವಿಯ ಬಳಿ ಬಂದು ಏನೋ ಗುಟ್ಟು ಹೇಳುವವಳಂತೆ, “ನಿಂಗೆ ಗೊತ್ತಿದ್ದಾ ಇಂದಿರಕ್ಕ, ಎನ್ನ ಮಾವ ಸೀರೆ ಉಟ್ಗತ್ತ ಹೇಳಿ?” ಎಂದು ಕೇಳಿದಳು. ಅಷ್ಟರಲ್ಲಾಗಲೇ ಶಾಮಣ್ಣ ಸೀರೆ ಉಟ್ಟು ತೋಟದ ತುಂಬ ಸುತ್ತಾಡುತ್ತಾನೆಂಬ ಸುದ್ದಿ ಊರೆಲ್ಲ ಹರಡಿ ಇವಳ ಕಿವಿಗೂ ಬಿದ್ದಿತ್ತು.
ಹಕ್ಲಗುಂಡಿಯ ವೆಂಕೋಬಣ್ಣನಂತೂ ಈ ಶಾಮಣ್ಣನಿಗೆ ತಲೆಕೆಟ್ಟಿದೆ, ಸೀರೆ ಉಟ್ಗಂಡು ಮಳ್ಳನಹಂಗೆ ಇಡೀ ತೋಟದ ಸುತ್ತ ತಿರುಗ್ತಾನೆ ಎಂದು ಎಲ್ಲಕಡೆ ಹೀಳಿಕೊಂಡು ಬಂದಿದ್ದ. ಶಾಮಣ್ಣನಿಗೆ ತಲೆಕೆಟ್ಟಿರಬಹುದು, ಅದಿಕ್ಕೆ ಅವ ಹೀಗೆ ಸೀರೆ ಉಟ್ಟುಕೊಂಡು ತೋಟದ ತುಂಬ ತಿರುಗುತ್ತಾನೆಂದು ಕೆಲವರೂ, ತೋಟಕ್ಕೆ ಕಳ್ಳಕಾಕರು ನುಗ್ಗಬಾರದು ಎಂದು ಕಳ್ರನ್ನು ಹೆದರಿಸಲು ಅವ ಹೀಗೆಲ್ಲ ಮಾಡುತ್ತಾನೆಂದೂ ಮತ್ತೆ ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅವನ ಸೀರೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
ಅದೆಷ್ಟೆಂದರೆ ಒಂದು ದಿನ ಅವಳ ಅಣ್ಣನ ಮಗ ಗಪ್ಪತಿ, ಸಿದ್ದಾಪುರ ಪ್ಯಾಟೆ ಕೆಲಸ ಮುಗಿಸಿಕೊಂಡು ಇವರ ಮನೆಗೆ ಬರುವಾಗ ಹತ್ತಿರದ ಹಾದಿಯೆಂದು ತೋಟದೊಳಕ್ಕೆ ಬಂದ. ಶಾಮಣ್ಣನ ಮನೆಯ ಪಕ್ಕದಲ್ಲೇ ಒಂದು ಸಣ್ಣ ಬೇಲಿ ಇದೆ. ಆ ಬೇಲಿಯನ್ನು ದಾಟಿಯೇ ತೋಟದೊಳಕ್ಕೆ ಬರಬೇಕು. ಅಲ್ಲೊಂದು ಸಣ್ಣ ಕಾಲು ಹಾದಿ, ಆ ಹಾದಿಯಲ್ಲಿ ಒಂದೆರೆಡು ಫರ್ಲಾಂಗು ದೂರ ಬಂದರೆ ಒಂದು ಕೆರೆ ಕಾಣಿಸುತ್ತದೆ. ಕೆರೆಯ ಪಕ್ಕದಿಂದ ಹೋದರೆ 8-10 ಮೆಟ್ಟಿಲುಗಳಿವೆ. ಅದನ್ನು ಹತ್ತಿ ಹೋದರೆ ಇಂದಿರೆಯ ಮನೆ ಸಿಗುತ್ತದೆ. ಅವತ್ತು ಬೆಳದಿಂಗಳ ರಾತ್ರಿ, ತೋಟದ ತುಂಬೆಲ್ಲ ಹಾಲು ಬೆಳದಿಂಗಳು ಚೆಲ್ಲಿತ್ತು. ಇಡೀ ತೋಟ ನಿಶಬ್ದ, ಇವ ಕೆರೆಯ ಸಮೀಪ ನಡೆದು ಬರುವಷ್ಟರಲ್ಲಿ ಯಾರೋ ಹೆಂಗಸೊಬ್ಬಳು ನಿಂತುಕೊಂಡಿರುವುದು ಕಂಡಿತು. ಒಂದು ಕ್ಷಣ ಬೆಚ್ಚಿ ನಿಂತ. ಇವ ನಿಂತ ನಾಲ್ಕೈದು ಮೆಟ್ಟು ದೂರದಲ್ಲಿ ಈ ಹೆಣ್ಣು ಆಕೃತಿ ನಿಂತು ಉಚ್ಚೆ ಹೊಯ್ತಾ ನಿಂತಿತ್ತು. ಅದು ಉಚ್ಚೆ ಹೊಯ್ಯುವುದು ನೋಡಿ ಇವನಿಗೆ ಖಾತ್ರಿ ಆದದ್ದು ಅದು ದೆವ್ಬ-ಭೂತ ಖಂಡಿತ ಅಲ್ಲ ಎಂದು. ಆದರೆ ಅಲ್ಲಾಡದೇ ಅದು ಹಾಗೇ ನಿಂತಿರುವುದು ನೋಡಿ, ‘ಯಾ…ಯಾರು…ಯಾರದು’ ಎಂದು ತಡವರಿಸುತ್ತಲೇ ಕೇಳಿದ್ದಕ್ಕೆ ಅದು ಒಂದೂ ಮಾತನಾಡದೆ ಸುಮ್ಮನೆ ತೋಟದೊಳಕ್ಕೆ ಸರಿದು ಹೋಯಿತು. ಅದು ಹೋದ ದಿಕ್ಕನ್ನೇ ನೋಡುತ್ತ ಮನೆಗೆ ಬಂದವ “ಅದ್ಯಾರೇ ನಿಂತ್ಕಂಡು ಉಚ್ಚೆ ಹೊಯ್ಯುವ ಹೆಂಗಸ್ರು ಮಾರಾಗಿತ್ತಿ ಇಲ್ಲಿ” ಎಂದು ಇಂದಿರೆ ಮತ್ತು ಮಗಳು ಮಾಲತಿ ಇಬ್ಬರನ್ನೂ ಕೇಳಿದ. “ಅದು ಹೆಂಗಸಲ್ದಾ ಮಾರಾಯ, ಗಂಡಸೇಯ. ಶಾಮಣ್ಣನೇಯ ಸೀರೆ ಉಟ್ಗಂಡು ಹೀಂಗೆಲ್ಲ ತಿರುಗ್ತಾ ಇರತ್ನಡ..” ಎಂದಳು ಮಾಲತಿ.
ಜೊತೆಗೆ ‘ಅಲ್ದಾ ಗಪ್ಪತಿ, ಎಂಥಾ ಸೀರೆ ಉಟ್ಗಂಡಿಯಿದ್ದ, ಅದರ ಕಲರ್ ಎಂತದು’ ಎಂದು ಕುತೂಹಲದಿಂದ ಕೇಳಿದ್ದಕ್ಕೆ “ಅಯ್ಯೋ ಮಾರಾಗಿತ್ತಿ, ಆ ಕತ್ತಲಲ್ಲಿ, ತೋಟದಲ್ಲಿ ಹಂಗೆಲ್ಲ ಹೆಂಗಸೊಬ್ಬಳು ನಿಂತಕಂಡ್ರೇ ಹೆದರಿಕೆ ಆಗ್ತಿಲ್ಯನೆ, ಅದ್ರಲ್ಲಿ ಬಣ್ಣ, ಬಾರ್ಡರು, ರವಿಕೆ ಎಲ್ಲ ನೋಡಕ್ಯೋತ ನಿಂತ್ಗತ್ತಿ ತಡಿ..” ಎಂದು ನಗುತ್ತಲೇ ಹೇಳಿದ.
ಹೀಗೆ ಗಪ್ಪತಿಗೆ ಉಚ್ಚೆ ಹೊಯ್ಯುವ ಹೆಂಗಸಿನ ರೂಪದಲ್ಲಿ ಈ ಸೀರೆ ಉಟ್ಟ ಶಾಮಣ್ಣ ಕಂಡರೆ, ಒಂದು ದಿವಸ ಓದಲೆಂದು ತೋಟದಲ್ಲಿ ಮಾಲತಿ ಕುಳಿತಾಗ ಸಂಜೆ ಐದು ಗಂಟೆಯ ಸಮಯದಲ್ಲೇ ಇವಳ ಪಕ್ಕದಲ್ಲೇ ಸೀರೆ ಉಟ್ಟು ನಡೆದು ಹೋಗಿದ್ದ ಒಂದೂ ಮಾತನಾಡದೆ. ಮತ್ತೊಂದು ದಿನ ಸೌದೆ ಹೊತ್ತುಬರುವ ತಿಮ್ಮಿ, ತೋಟ ಮತ್ತು ಕಾಡಿನ ನಡುವಿನ ಹಾದಿಯಲ್ಲಿ ನಡೆದು ಬರುವಾಗ ದಿಡೀರೆಂದು ಎದುರು ನಿಂತದ್ದು ದೊಡ್ಡ ಸುದ್ದಿಯಾಗಿಬಿಟ್ಟಿತ್ತು. ತಿಮ್ಮಿ ಹೆದರಿ ಜೋರಾಗಿ ದೆವ್ವ ದೆವ್ವ ಎಂದು ಕಿರುಚಿ ಓಡಿ ಹೋಗಿ ತನ್ನ ಪಾಳ್ಯದಲ್ಲೆಲ್ಲ ಸುದ್ದಿ ಬಿಟ್ಟಿದ್ದಳು, ಶಾಮಣ್ಣನ ಸೀರೆಯ ಕತೆಯಾ. ಅದೂ ಅವ ಬೇಕೆಂದೇ ಸೆರಗು ಸರಿಸಿ ನನ್ನೆದುರು ನಿಂತ, ಮುಖಕ್ಕೆಲ್ಲ ಬಣ್ಣ ಹಚ್ಚಿಕೊಂಡು ವಿಕಾರವಾಗಿ ಕಾಣಿಸುತ್ತಿದ್ದ ಎಂದೆಲ್ಲ ಒಂದಷ್ಟು ಬಣ್ಣ ಹಚ್ಚಿ ಹೇಳಿದ ಕತೆಯ ಕೇಳಿ ಅವರೆಲ್ಲ ಶಾಮಣ್ಣನ ಮೈ ಮೇಲೆ ದೆವ್ವ ಬರುತ್ತದೆ, ಅದೇ ಹೀಗೆಲ್ಲ ಮಾಡಿಸುತ್ತದೆ, ಅದಿಲ್ಲದಿದ್ದರೆ ಗಂಡಸೊಬ್ಬ ಸೀರೆ ಉಟ್ಟುಕೊಳ್ಳುವುದೆಂದರೇನು? ಹೀಗೆಲ್ಲ ಹೆಂಗಸರ ಮುಂದೆ ನಿಂತುಕೊಳ್ಳುವುದೇನು? ಎಂದೆಲ್ಲ ಮಾತನಾಡಿಕೊಂಡು ಸುಮ್ಮನಾದರು. ಹೀಗೆ ಸುಮ್ಮನಾದರೇ ವಿನಾ ಯಾರೊಬ್ಬರೂ ಶಾಮಣ್ಣನ ಮನೆಯವರಿಗೆ ಹೋಗಿ ಕೇಳುವ ಧೈರ್ಯ ಮಾಡಿದವರಲ್ಲ. ಆದರೆ ಶಾಮಣ್ಣನ ಈ ಸೀರೆ ಪ್ರಸಂಗವು ಅನೇಕರಿಗೆ ತಿಳಿದು, ಇವ ಸೀರೆ ಉಡುತ್ತಾನೆ, ಇವನ ಹೆಂಡತಿ ಪ್ಯಾಂಟು ಹಾಕಿಕೊಳ್ಳುತ್ತಾಳಾ ಎಂದು ತಮಾಷೆ ಮಾಡುತ್ತಿದ್ದರು.
ಇಂಥ ಹೊತ್ತಲ್ಲಿ ಇಂದಿರೆ ಅವನ ಮನೆಗೆ ಬಾಡಿಗೆಗೆ ಬರುವುದಕ್ಕೂ, ರುಕ್ಮಿಣಿ ಮನೆಬಿಟ್ಟು ಹೋಗಿದ್ದೂ, ಅದೇ ಹೊತ್ತಲ್ಲಿ ಇಂದಿರೆಯ ಸೀರೆಯೂ ಕಳೆದುಹೋಗಿದ್ದೂ… ಎಲ್ಲವೂ ಒಂದಕ್ಕೊಂದು ತಳಕುಹಾಕಿಕೊಂಡಿದ್ದವು.
ಹಾಗೆ ನೋಡಿದರೆ ಈ ಶಾಮಣ್ಣ ಇಂದಿರೆಗೆ ಮೊದಲಿನಿಂದಲೂ ಗೊತ್ತಿದ್ದ ವ್ಯಕ್ತಿಯೇ. ಖ್ಯಾತ ಜೋತಿಷಿಯಾಗಿದ್ದ ಇಂದಿರೆಯ ಗಂಡ ಕೃಷ್ಣಭಟ್ಟರೆಂದರೆ ಸಾಕ್ಷಾತ್ ಪರಮಾತ್ಮನಂತೆ ಕಾಣುತ್ತಿದ್ದ ಶಾಮಣ್ಣ ಉಚ್ಚೆ ಎಡಬದಿಗೆ ಹೊಯ್ಯಬೇಕೋ, ಬಲಬದಿಗೆ ಹೊಯ್ಯಬೇಕೋ ಎಂಬುದನ್ನೂ ಜೋತಿಷ ಕೇಳುತ್ತಿದ್ದ. “ಎಷ್ಟೆಂದರೆ ಭಟ್ರೇ, ಇವತ್ತು ಬಲಬದಿಗೆ ಏಳುವಷ್ಟರಲ್ಲಿ ನನ್ನ ಎಡಗಣ್ಣು ಹೊಡೆದುಕೊಳ್ಳತೊಡಗಿತ್ತು ಎಂತಕ್ಕೆ” ಎಂದು ಬೆಳಗಿನ ತಿಂಡಿಯನ್ನೂ ತಿನ್ನದೇ ಒಮ್ಮೆ ಇವರಮನೆಗೆ ಬಂದುಬಿಟ್ಟಿದ್ದ. ಮಾತೆತ್ತಿದರೆ ಆ ಪಟು ಹೋದ, ಈ ಪಟು ಬಂದ ಎಂದು ಹೇಳುತ್ತಿದ್ದ ಅವನಿಗೆ ಹಕ್ಲಗುಂಡಿ ಆಪಟು ಎಂದೇ ಹೆಸರಿಟ್ಟುಬಿಟ್ಟಿದ್ದರು.
‘ಆ ಪಟು ಅವ ಬಂದವನು ಇಲ್ಲಿ ಉಳಿಯಲೇ ಇಲ್ಲ, ಆ ಪಟು ನೀವು ಬಂದವರು ನಮ್ಮನೆಗೆ ಊಟವನ್ನೂ ಮಾಡಲಿಲ್ಲ…’ ಎಂದುಕ ಣ್ಣು ರೆಪ್ಪೆಯನ್ನು ಪಟಪಟನೇ ಬಡಿಯುತ್ತ ಮಾತನಾಡುತ್ತಿದ್ದ. ತೆಳ್ಳಗೆ ಎತ್ತರಕ್ಕೆ ಇದ್ದ ಶಾಮಣ್ಣ, ಕವಳಹಾಕಿ ಹಾಕಿ, ಬೆಳ್ಳಗಿದ್ದ ಹಲ್ಲುಗಳು ಕೆಂಪು ಬಣ್ಣಕ್ಕೆ ತಿರುಗಿ, ಕಡೆಗೆ ಅದು ಕಪ್ಪುಬಣ್ಣಕ್ಕೂ ತಿರುಗಿ ಅಲ್ಲಿ ಹಲ್ಲುಗಳು ಇದ್ದವಾ ಎಂದು ಅನುಮಾನ ಬರುವಷ್ಟು ಇತ್ತು. ಅವನು ಬಾಯಿ ತೆರೆದರೆ ಅಲ್ಲಿ ಕಪ್ಪಗೆ ಏನೋ ಒಂದು ಕಾಣಿಸುತ್ತಿತ್ತು. ಅಂಥ ಶಾಮಣ್ಣನಿಗೆ ಸುರಸುಂದರಿ ಹೆಂಡತಿ ಸೀತಕ್ಕ ತುಂಬ ಒಳ್ಳೆಯವಳೂ ಆಗಿದ್ದಳು. ಇಷ್ಟೆಲ್ಲ ಸುಂದರಿಯಾಗಿದ್ದ ಸೀತಕ್ಕ ಈ ಶಾಮಣ್ಣನನ್ನು ಹೇಗೆ ಮದುವೆಯಾಗಿ ಇಷ್ಟೆಲ್ಲ ಮಕ್ಕಳಾದವೋ ಎಂದು ಊರವರೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಹಾಗಿದ್ದ ಶಾಮಣ್ಣ ಕೃಷ್ಣ ಭಟ್ರು ತೀರಿಕೊಂಡ ನಂತರ ಇವ ಅವರ ಮನೆ ಕಡೆ ಮುಖ ಹಾಕಿರಲಿಲ್ಲ. ಒಂದು ದಿವಸ ಸಂತೆಯ ದಿವಸ ಬಸ್ ಸ್ಟ್ಯಾಂಡ್ ಬಳಿ ಸಿಕ್ಕವನನ್ನು ನಿಲ್ಲಿಸಿ ಮಾಲತಿ, “ಏನ್, ಶಾಮಣ್ಣಾ, ಮನೆಕಡೆ ಬರೋದೇ ಬಿಟ್ಟುಬಿಟ್ರೀ” ಎಂದು ಕೇಳಿದ್ದಕ್ಕೆ, ತೀರಾ ಅವಳ ಹತ್ತಿರಕ್ಕೆ ಬಂದು, ‘ಅಲ್ಲ, ಅದು ನಾ ಹಾಗೆಲ್ಲ ಈಗ ನಿಮ್ಮನೆಗೆ ಬರಬಾರದು. ಜನ ತಪ್ಪು ತಿಳೀತಾರೆ’ ಎಂದ. ಏನೆಂದು ಅರ್ಥವಾಗದ ಮಾಲತಿ ಹಾಗೇ ಬಂದು ಶಾಮಣ್ಣ ಹೇಳಿದ್ದನ್ನು ಅಮ್ಮನಿಗೆ ಒಪ್ಪಿಸಿದಳು. ಅದುವರೆಗೆ ಹಾಗೆಲ್ಲ ಯೋಚಿಸದ ಅಮ್ಮ ಇಂದಿರೆಯೂ, ಅವ ಬಾರದಿದ್ದದೇ ಒಳ್ಳೆದಾಯಿತು ಎಂದುಕೊಂಡಳು. ಗಂಡ ಸತ್ತುಹೋಗಿದ್ದಾನೆ, ಈಗ ಹೆಣ್ಣು ಹೆಂಗಸರಿಬ್ಬರೇ ಇರುತ್ತಾರೆ. ಇಂಥವರ ಮನೆಗೆ ತಾನು ಹೋದರೆ ನೋಡಿದ ಜನ ತಪ್ಪು ತಿಳಿದಾರು ಎಂಬುದು ಅವನ ಮಾತಿನ ಜಾಡನ್ನು ಅರ್ಥ ಮಾಡಿಕೊಂಡ ಮಾಲತಿಗೆ ಜೋರು ನಗುಬಂದುಬಿಟ್ಟಿತು, ಇವನ ಕುರಿತೂ ಯಾರಾದರೂ ತಪ್ಪು ತಿಳಿಯಲು ಸಾಧ್ಯವಾ ಎಂದು. ಹೀಗೆಲ್ಲ ಇರುವ ಶಾಮಣ್ಣನ ಕುರಿತು ಇಂದಿರೆಗೆ ತೀರ ಹಗುರವಾದ ಭಾವನೆಯಿತ್ತು.
ಕಣ್ಣು ಪಿಟುಕಿಸುತ್ತಾ ಕವಳತುಂಬಿದ ಕಪ್ಪು ಹಲ್ಲುಗಳನ್ನು ಪ್ರದರ್ಶಿಸುವ ಶಾಮಣ್ಣನನ್ನು ಯಾವತ್ತೂ ಅವಳು ಗಂಭೀರವಾಗಿ ತೆಗೆದುಕೊಂಡವಳೇ ಅಲ್ಲ. ತನ್ನ ಗಂಡ ಇರುವಾಗ ಗಂಡನ ಪಾದದ ಕೆಳಗೆ ಕೂತು ಅವನ ಭಕ್ತನಂತೆ ಆಡುತ್ತಿದ್ದ ಶಾಮಣ್ಣ ತನ್ನ ಗಂಡ ತೀರಿಕೊಂಡ ನಂತರ ತಮ್ಮ ಮನೆಗೇ ಬಂದು ಇರಿ ಎಂದು ಅವನು ಕರೆದದ್ದು ತಮ್ಮ ಮೇಲಿನ ಕರುಣೆಯಿಂದಲೇ, ತನ್ನ ಗಂಡನ ಮೇಲಿನ ಭಕ್ತಿಯಿಂದಲೇ ಎಂದು ಭಾವಿಸಿದ್ದಳು ಇಂದಿರಾ. ಆದರೆ ಈಗ ಹೀಗೆಲ್ಲ ಆಡುವುದು ಮೊದಲೇ ಗೊತ್ತಿದ್ದರೆ ಬಹುಶಃ ಅವನ ಮನೆಗೇ ಬರುತ್ತಿರಲಿಲ್ಲವೇನೋ.
ಆ ಮನೆಗೆ ಬಂದ ಮೊದಮೊದಲು ಏನೂ ತೊಂದರೆ ಆಗಿರಲಿಲ್ಲ. ಒಂಟಿ ಮನೆಯಾದ್ದರಿಂದ ರಾತ್ರಿಹೊತ್ತು ಸ್ವಲ್ಪ ಭಯವಾಗುತ್ತಿತ್ತು ಎನ್ನುವುದು ಬಿಟ್ಟರೆ ಮತ್ತೇನೂ ಅಲ್ಲಿ ಭಯವಿರಲಿಲ್ಲ. ಮಳೆಗಾಲವಾದರೆ ಹಗಲಿನ ಹೊತ್ತು ಹಾಳೆಕೊಟ್ಟೆ ಕಟ್ಟಲು ಶಾಮಣ್ಣ ಅವರ ಮನೆಯಲ್ಲೇ ಬಂದು ಕೂರುತಿದ್ದ. ಸುಮ್ಮನೆ ಇವಳು ಕೆಲಸ ಮಾಡುತ್ತಿದ್ದಾಗಲೂ ಹಿಂದ್ಹಿಂದೆ ಬಂದು ಹರಟುತ್ತಿದ್ದ. ಆವಾಗವಾಗ ಮಾತನಾಡಿಸುವ ನೆವದಲ್ಲಿ ಬೇಕೆಂದೇ ಅವಳ ಬೆನ್ನು ತಾಗಿಸುವುದು, ಅವಳ ಕೈ ತಾಗಿಸುವುದು ಮಾಡುತ್ತಿದ್ದ. ಇದೆಲ್ಲ ಗೊತ್ತಾದರೂ ಗೊತ್ತಿಲ್ಲದವಳಂತೆ ನಿರ್ಲಕ್ಷ್ಯಮಾಡಿ ಸುಮ್ಮನಿರುತ್ತಿದ್ದಳು ಇಂದಿರಾ. ಆಗೆಲ್ಲ ಅವನ ಮುಂದೆಯೇ ಹೋಗಿ ಕುಳಿತು ತನ್ನ ಗಂಡನ ಗುಣಗಾನವನ್ನು ಒಂದಿಷ್ಟು ಮಾಡಿ, ಅಂಥ ಮಹಾನ್ ವ್ಯಕ್ತಿ ಮತ್ತೊಬ್ಬರಿಲ್ಲ, ಅವ ಬದುಕಿಲ್ಲದಿದ್ದರೇನಂತೆ, ಅವನ ಆತ್ಮ ತನ್ನ ಸುತ್ತಲೂ ಸದಾ ಸುತ್ತುತ್ತಲೇ ಇರುತ್ತದೆ ಎಂದು ದೊಡ್ಡ ಕಣ್ಣು ಬಿಟ್ಟುಕೊಂಡು ಅವಳಿಗೇ ಗಂಡನ ಆತ್ಮ ಆವಾಹನೆಯಾಗಿದೆಯೇನೋ ಎಂಬಂತೆ ಹೇಳುತ್ತಿದ್ದಂತೆಯೇ, ಶಾಮಣ್ಣನಿಗೆ ಹೌದೆನಿಸಿ ದೂರಸರಿದು ಭಕ್ತಿಯಿಂದ ಭಟ್ರ ಗುಣಗಾನದಲ್ಲಿ ತಾನೂ ಭಾಗಿಯಾಗುತ್ತಿದ್ದ. ಅಷ್ಟರ ನಂತರ ಅವಳ ಬಳಿ ಮಾತನಾಡುವುದನ್ನು ಕಡಿಮೆ ಮಾಡಿದ್ದ. ಆಗೆಲ್ಲ ಅವಳಿಗೆ ಇವನಿಗೆ ಹೆಂಗಸರ ಮಳ್ಳಿದೆ ಎಂದೆನಿಸಿತ್ತೇ ಹೊರತು ಬೇರೆ ಯಾವ ವಿಷಯವೂ ಗೊತ್ತಿರಲಿಲ್ಲ.
ಆದರೆ ಈಗ ರುಕ್ಮಿಣಿ ಇಷ್ಟೆಲ್ಲ ಕತೆ ಹೇಳಿ ‘ಇನ್ನು ಆ ಈ ಮನೆಲಿ ಇರತ್ನಿಲ್ಲೆ ಮಾರಾಗಿತ್ತಿ. ಈ ಮಳ್ಳ ಮಾವನ ಜೊತಿಗೆ ಯಾರಿರ್ತ’ ಎಂದು ಹೇಳಿ ಹೊರಟವಳನ್ನೇ ನೋಡಿದಳು ಇಂದಿರಾ. ನೋಡಲು ಸಾಧಾರಣ ರೂಪಿನ ರುಕ್ಮಿಣಿ, ಮಗನ ಹೆಂಡತಿ, ಎಂಬುದನ್ನೂ ಲೆಕ್ಕಿಸದೇ ಅವಳ ಸೀರೆಯನ್ನೇ ಉಟ್ಟು, ಅವಳ ಎದುರೇ ನಿಂತು ಬಾ ಎಂದು ಕರೆದದ್ದು, ಅದೂ ಸಾಲದೆಂಬಂತೆ ಸೀರೆಯನ್ನೂ ಬಿಚ್ಚಿ ಅವಳ ಮುಂದೆ ನಿಂತದ್ದೆಲ್ಲ ನೋಡಿದ ರುಕ್ಮಿಣಿಗೆ ಈ ಬದುಕೇ ಬೇಡವೆನಿಸಿರಲಿಕ್ಕೂ ಸಾಕು. ಅವಳು ಮಾಡಿದ್ದೇ ಸರಿ ಬಿಡು ಎಂದು ಮಗಳ ಬಳಿ ಹೇಳಿ ನಾವು ಇಲ್ಲಿಂದ ಹೋಗುವುದೊಳಿತು ಎಂದಳು ಇಂದಿರಾ.
ಮಜಾ ಎಂದರೆ ಸೀರೆ ಕಳೆದು ಹೋಗಿ ಒಂದು ವಾರವಾಗಿತ್ತಷ್ಟೇ. ಒಂದು ದಿನ ಮಧ್ಯಾಹ್ನ ಇಂದಿರಾ ಚಾಲಿ ಸುಲಿಯಲು ಹೋದವಳು ವಾಪಾಸು ಬರುವಷ್ಟರಲ್ಲಿ ಅದೇ ಜಗುಲಿಯ ಮೇಲೆ ಅವಳ ಕಳೆದುಹೋದ ಸೀರೆ ನೇತಾಡುತ್ತಿತ್ತು. ಬಾಗಿಲು ತೆರೆದವಳೇ ಎದುರಿಗೆ ನೇತಾಡುತ್ತಿದ್ದ ಸೀರೆ ನೋಡಿ ಒಂದುಕ್ಷಣ ಎದೆಬಡಿತ ನಿಂತಂತಾಗಿ ಹಾಗೇ ನಿಂತಳು. ನಿಧಾನಕ್ಕೆ ಬಂದು ಸೀರೆ ಬಿಡಿಸಿ ನೋಡಿದರೆ ಅರ್ಧಕ್ಕರ್ಧ ಸೀರೆ ಮಣ್ಣುಮಣ್ಣಾಗಿತ್ತು. ಯಾರೋ ಅರಲು ಗದ್ದೆಯಲ್ಲಿ (ಕೆಸರು ಗದ್ದೆ) ಬಿದ್ದು ಹೊರಳಾಡಿ ಬಂದಿದ್ದಾರೇನೋ ಎಂಬಷ್ಟು ಹೊಲಸಾಗಿತ್ತು ಸೀರೆ. ಅದನ್ನು ನೋಡಿದವಳೇ ಇಂದಿರೆಗೆ ಅದೆಲ್ಲಿತ್ತೋ ಸಿಟ್ಟು, ಆ ಸೀರೆಯನ್ನು ಹಾಗೇ ಹಿಡಿದೆಳೆದಳು, ಒಳ ಹೋಗಿ ಚುಮ್ನಿ ಎಣ್ಣೆಯನ್ನು ತಂದು ಅದರ ಮೇಲೆ ಸುರಿದು ಬೆಂಕಿ ಕೊಟ್ಟಳು. ಕ್ಷಣಾರ್ಧದಲ್ಲಿ ಧಗಧಗನೆ ಉರಿಯುತ್ತಿದ್ದ ಸೀರೆಯನ್ನೇ ನೋಡುತ್ತ ಕುಳಿತಳು ಇಂದಿರೆ, ಶಾಮಣ್ಣನನ್ನೇ ದಹಿಸುತ್ತಿದ್ದಾಳೋ ಎಂಬಂತೆ. ಮಾಲತಿಗೂ ಆ ಹೊತ್ತು ಅವಳನ್ನು ನೋಡಲು ಭಯವೆನಿಸಿತ್ತು.
ಇದಾದ ಮೇಲೆ ಇಂದಿರೆ ಈಗ ಶಾಮಣ್ಣನ ಈ ಸೀರೆ ಹಕೀಕತ್ತಿನ ಹಿಂದಿರುವ ಗುಟ್ಟಾದರೂ ಏನು, ಅವ ಯಾಕೆ ಸೀರೆ ಉಡುತ್ತಾನೆ, ಅದೂ ಯಾಕೆ ಹೊಸ ಸೀರೆಯನ್ನೇ ಆಯ್ಕೆಮಾಡಿಕೊಳ್ಳುತ್ತಾನೆ, ಅಷ್ಟು ಬೇಕಿದ್ದರೆ ಇವನಿಗೆ ಅಂಗಡಿಗೆ ಹೋಗಿ ಸೀರೆ ತಂದು ಉಟ್ಟುಕೊಳ್ಳಲಿ ಯಾರು ಬೇಡವೆಂದವರು? ಅಥವಾ ಅವನ ಹೆಂಡತಿಯದ್ದೇ ಸೀರೆ ಉಟ್ಟುಕೊಳ್ಳಲಿ, ಅದು ಬಿಟ್ಟು ಕಂಡಕಂಡ ಹೆಂಗಸರ ಸೀರೆಯ ಮೇಲೆ ಇವನಿಗೇಕೆ ಕಣ್ಣು ಎಂದು ಅವಡುಗಚ್ಚಿ ಕೇಳಿಕೊಂಡಿದ್ದಲ್ಲದೆ, ಇವನ ಸೀರೆಯ ಹಿಂದಿನ ರಹಸ್ಯವನ್ನು ಕಂಡುಹಿಡಿಯಲೇಬೇಕೆಂದು ತನಿಖೆಗೆ ಖುದ್ದು ನಿಂತಳು.
ಒಂದಿನ ಕೆರೆಮೇಲೆ ಕಟ್ಟೆಯ ಮೇಲೆ ಕುಳಿತು ಸೀತಕ್ಕ ಬಟ್ಟೆ ಒಗೆಯುವುದನ್ನು ಅಂಗಳದಲ್ಲಿ ನಿಂತು ನೋಡಿದ ಇಂದಿರಾ ಸೀದಾ ಅವಳ ಹತ್ರ ಹೋಗಿ ಪಕ್ಕ ಕುಳಿತು ಅದೂ ಇದೂ ಮಾತನಾಡುತ್ತ ಮೆಲ್ಲಗೆ ಕೇಳಿದಳು, ‘ಸೀತಕ್ಕ, ನಿಮ್ಮನೇಲಿ ಸೀರೆ ಎಲ್ಲ ಉಂಟಾ. ನಮ್ಮನೇಲಿ ಸೀರೆ ಕಾಣೆ ಆಗ್ತಾ ಇದೆ’ ಎಂದು. ಆದರೆ ಸೀತಕ್ಕ ಇವಳ ಮಾತುಗಳನ್ನು ಕೇಳದವಳಂತೆ ತೊಳೆದಿರುವುದು, ತೊಳೆಯದಿರುವುದು ಎಲ್ಲವನ್ನೂ ಬಕೇಟಿಗೆ ಹಾಕಿಕೊಂಡು ಅಲ್ಲಿಂದ ಹೊರಟೇ ಬಿಟ್ಟಳು. ಅವಳು ಹೋದ ರೀತಿಗೇ ಇಂದಿರೆಗೆ ಅರಿವಾಯಿತು, ಸೀತಕ್ಕನಿಗೆ ಎಲ್ಲ ವಿಷಯವೂ ಗೊತ್ತಿದೆ. ಆದರೆ ಅವಳು ಬಾಯಿಬಿಡುವುದಿಲ್ಲ ಎಂದು. ಹೀಗೆ ತನಿಖೆ ಮಾಡಬೇಕೆಂದುಕೊಳ್ಳುವ ಹೊತ್ತಿನಲ್ಲೇ ಶಾಮಣ್ಣನ ಸೀರೆಯ ಅವತಾರವನ್ನು ಕಣ್ಣಾರೆ ನೋಡುವಂಥ ಸುಸಂದರ್ಭ ಅವಳಿಗೆ ಒದಗಿ ಬಂತು. ಅವತ್ತು ಮನೆಯಂಗಳವನ್ನು ಸಾರಿಸಲು ಒಂದಷ್ಟು ಹಾಳೆಬಾಗವನ್ನಾದರೂ ಹೆಕ್ಕಿಕೊಂಡು ಬರುವಾ ಎಂದು ತೋಟಕ್ಕೆ ಇಳಿದಿದ್ದಳು ಇಂದಿರಕ್ಕ.
ಊರಿನಿಂದ ಹೊರಗಿದ್ದ ಆ ಮನೆ ಹೇಗಿತ್ತೆಂದರೆ ಸುತ್ತ ಕಾಡು, ಎದುರಿಗೆ ತೋಟ, ಅದರ ನಡುವೆ ಇದ್ದ ದೈದುಣ್ಣದಂಥ ಆ ಮನೆಗೆ ಕರೆಂಟೂ ಇರಲಿಲ್ಲ. ಅಕ್ಕಪಕ್ಕ ಯಾವ ಮನೆಗಳೂ ಇಲ್ಲದ ಒಂಟಿಯಾದ ಆ ಮನೆಯಲ್ಲಿ ಇವರಿಬ್ಬರೇ ಇರಬೇಕಾದ ಸ್ಥಿತಿ ಬಂದಿತ್ತು.
ಹೊತ್ತು ಇನ್ನೂ ಮುಳುಗಿರಲಿಲ್ಲ. ಮಾಲತಿ ಇನ್ನೂ ಕಾಲೇಜಿನಿಂದ ಬಂದಿರಲಿಲ್ಲ. ತೋಟದ ಎರಡು ಬಣ್ಣಗಳ ನಡುವಿನ ಕ್ಯಾದಿಗೆಯಲ್ಲಿ ಬಿದ್ದ ಹಾಳೆಬಾಗವನ್ನು ಹೆಕ್ಕಬೇಕೆಂದು ಅದರೊಳಕ್ಕೆ ಇಳಿದು ಎತ್ತಿಕೊಂಡು ಇನ್ನೇನು ಇನ್ನೊಂದು ಬಣ್ಣವನ್ನು (ತೋಟದಲ್ಲಿ ಉದ್ದಕ್ಕೆ ಸಾಲಾಗಿ ಬದುಗಳನ್ನು ನಿರ್ಮಿಸಿರುತ್ತಾರೆ. ಅದಕ್ಕೆ ಬಣ್ಣ ಎಂದೂ, ಅದರೊಳಗಿನ ಸಣ್ಣ ಕೊಡ್ಲಿಗೆ ಕ್ಯಾದಿಗೆ ಎಂದೂ ಅನ್ನುತ್ತಾರೆ.) ಹತ್ತಬೇಕು ಎನ್ನುವಷ್ಟರಲ್ಲಿ ಪಕ್ಕದಲ್ಲಿ ಯಾರೋ ನಡೆದು ಹೋಗುವಂತೆ ಸರಸಬರ ಎಂಬ ಸದ್ದಾಯಿತು. ತಿರುಗಿ ನೋಡಿದರೆ, ಒಂದೆರೆಡು ಬಣ್ಣಗಳಾಚೆ ಯಾರೋ ಸೀರೆ ಉಟ್ಟ ಒಬ್ಬರು ನಡೆಯುತ್ತಿದ್ದುದು ಕಾಣಿಸಿತು. ಯಾರೆಂದು ಕಿರೀ ಹಿಡಿದು ನೋಡಿದರೆ ಅದು ಶಾಮಣ್ಣನೇ. ಕೆಂಪನೆಯ ಸೀರೆ ಉಟ್ಟು, ಅದಕ್ಕೊಪ್ಪುವ ರವಿಕೆಯನ್ನೂ ಧರಿಸಿ ಸರಸರನೆ ನಡೆಯುತ್ತಿದ್ದ. ಅವನ ಕೈಯ್ಯಲ್ಲಿ ಒಂದು ಬೆತ್ತದ ಬುಟ್ಟಿ ಇತ್ತು, ಮತ್ತೊಂದು ಕೈಯ್ಯಲ್ಲಿ ಹಿಡಿ ಇತ್ತು.
ಶಾಮಣ್ಣ ಸೀರೆ ಉಡುತ್ತಾನೆಂದು ಹೊಸ ವಿಷಯವಾಗಿರದಿದ್ದರೂ ಹೀಗೆ ತೋಟದಲ್ಲಿ ಅವಳೆದುರಿಗೇ ಸೀರೆ ಉಟ್ಟು ಹೋಗಿದ್ದು, ಅದನ್ನು ಖುದ್ದು ಕಂಡದ್ದು ಮಾತ್ರ ಭಯವಾಗಿ ಸರಸರನೆ ಮನೆಯಕಡೆ ಹೆಜ್ಜೆ ಹಾಕಿದಳು ಇಂದಿರೆ.
ಹಾಗೆ ಹೆಜ್ಜೆ ಹಾಕುತ್ತಿರುವಾಗಲೇ ಒಂದು ವಿಷಯವನ್ನು ಗಮನಿಸಿದಳು. ಅದೆಂದರೆ ಸೀರೆ ಉಟ್ಟ ಶಾಮಣ್ಣ ಒಂದೇ ಸಮನೆ ಮುಂದಕ್ಕೆ ನೋಡುತ್ತ ಹೋಗುತ್ತಿದ್ದನೇ ಹೊರತು ಅಕ್ಕಪಕ್ಕ ಯಾರಿದ್ದಾರೆಂಬುದನ್ನು ಗಮನಿಸಿಯೂ ಇರಲಿಲ್ಲ. ಇವಳು ಪಕ್ಕದಲ್ಲೇ ಇದ್ದುದನ್ನೂ ಗಮನಿಸಿಯೇ ಇಲ್ಲದವನಂತೆ ಅವನ ನಡೆಯುತ್ತಿದ್ದುದನ್ನು ನೆನಪಿಸಿಕೊಂಡ ಇಂದಿರಾ, ಅವ ಏನು ಮಾಡುತ್ತಾನೆ, ಎಲ್ಲಿಗೆ ಹೋಗುತ್ತಾನೆ, ಯಾಕೆ ಹೀಗೆಲ್ಲ ಮಾಡುತ್ತಾನೆಂದು ನೋಡಬೇಕೆಂದುಕೊಂಡರೂ ಯಾಕೋ ಭಯವಾಗಿ, ತೋಟದ ತುದಿಯಲ್ಲಿದ್ದ ಕೆರೆಯನ್ನು ದಾಟಿ ಎಂಟ್ಹತ್ತು ಮೆಟ್ಟಿಲುಗಳನ್ನು ಹತ್ತಿ ತನ್ನ ಮನೆಗೆ ಬಂದಳು.
ಮನೆಗೆ ಬಂದು ಕುಳಿತರೆ ಕಾಲೇಜಿಗೆ ಹೋಗಿದ್ದ ಮಗಳಿನ್ನೂ ಬಂದಿರಲಿಲ್ಲ. ಅಷ್ಟೊತ್ತಿಗೇ ಕತ್ತಲಾವರಿಸುತ್ತಿತ್ತು. ಕರೆಂಟೂ ಇಲ್ಲದ ದೊಡ್ಡದಾದ ಆ ಮನೆಯಲ್ಲಿ ಕತ್ತಲು ತುಂಬಿದ ಒಳಗೆ ನೋಡಲೇ ಭಯವೆನಿಸಿತು. ಹಾಗಂತ ಮನೆಯ ಹೊರಗೂ ನೋಡಲು ಭಯವೆನಿಸಿ, ಕುಳಿತಲ್ಲಿಂದ ಅಲ್ಲಾಡಲೂ ಇಲ್ಲ. ಈಗ ಕತ್ತಲು ತುಂಬಿದ ಈ ಒಂಟಿಮನೆಯಲ್ಲಿ ಯಾರು ಇಲ್ಲದ ಈ ಹೊತ್ತು ದಿಢೀರೆಂದು ಸೀರೆ ಉಟ್ಟ ಶಾಮಣ್ಣ ಎದುರಿಗೆ ಬಂದರೆ ಎಂದು ನೆನೆಸಿಕೊಂಡು ಸಣ್ಣಗೆ ನಡುಗಿದಳು. ಹಾಗೆ ನೋಡಿದರೆ ಶಾಮಣ್ಣ ಹಾಗೆಲ್ಲ ದಿಡೀರ್ ಎಂದು ಎದುರಿಗೆ ನಿಂತು ಹೆದರಿಸುವವನಲ್ಲ. ಅದರಲ್ಲೂ ಸೀರೆ ಉಟ್ಟಾಗಲಂತೂ ಯಾರೊಡನೆಯೂ ಅವ ಮಾತನಾಡುವುದೂ ಇಲ್ಲ. ಆದರೆ ಇವಳಿಗೆ ಕಾಡುವ ಪ್ರಶ್ನೆ ಎಂದರೆ ಅವ ಯಾಕೆ ಸೀರೆ ಉಡುತ್ತಾನೆ? ಅದಿಕ್ಕೆ ಬೇಕಾದ ಬ್ಲೌಸ್ ಏನು ಮಾಡುತ್ತಾನೆ? ಯಾರ ಬಳಿ ಹೊಲಿಸಿಕೊಳ್ಳುತ್ತಾನೆ? ಅವನ ಮೈಕಟ್ಟಿಗೆ ಹೊಂದುವಂತೆ ಯಾರು ಹೊಲಿದುಕೊಡುತ್ತಾರೆ ಅಥವಾ ಟೈಲರ್ ಗಳ ಬಳಿ ಇವ ಏನು ಹೇಳುತ್ತಾನೆ, ತನಗೇ ಬೇಕೆಂದು ಹೇಗೆ ಕೇಳುತ್ತಾನೆ. ಇಷ್ಟಕ್ಕೂ ಅವ ಸೀರೆ ಉಡುವುದಾದರೂ ಯಾಕಾಗಿ? ಹೀಗೆ ಪ್ರಶ್ನೆಗಳು ಅವಳ ತಲೆಯಲ್ಲಿ ಗಿರುಗುಟ್ಟಿ, ಅವಳಿಗೆ ಶಾಮಣ್ಣ ತೀರ ತೀರಾ ನಿಗೂಢವಾಗಹತ್ತಿದ…!
ಇಂಥ ಶಾಮಣ್ಣ ಕಳ್ಳ ನಾಟ ಮಾಡುತ್ತಿದ್ದ. ರಾತ್ರೋರಾತ್ರಿ ಎಷ್ಟೋಸಲ ದೊಡ್ಡದೊಡ್ಡ ಮರಗಳನ್ನು ಕಡಿದು ಸಾಗಿಸುತ್ತಿದ್ದ. ಅವನ ಮನೆಯನ್ನು ಕಟ್ಟಿದ್ದೆಲ್ಲ ಈ ಕಳ್ಳನಾಟದಿಂದಲೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಇಂದಿರಾ ಇರುವ ಮನೆಯ ಹಿಂದೊಂದು ದೊಡ್ಡ ಖೋಲಿ ಇದೆ. ಅದರಲ್ಲಿ ನಾಟಾಗಳನ್ನು ಇಟ್ಟು ಬೀಗ ಹಾಕಿದ್ದ. ಅವನ್ನೆಲ್ಲ ಏನು ಮಾಡುತ್ತಾನೆ, ಎಲ್ಲಿಗೆ ಸಾಗಿಸುತ್ತಾನೆ ಗೊತ್ತಿಲ್ಲ. ಎಷ್ಟೋ ಸಲ ಮಧ್ಯರಾತ್ರಿಯಲ್ಲೂ ಹಿಂದುಗಡೆ ಖೋಲಿಯಲ್ಲಿ ಸದ್ದು ಕೇಳಿಸುತ್ತಿತ್ತು. ಒಂದು ದಿನ ಹೀಗೇ ಸರಿ ರಾತ್ರಿಯಲ್ಲಿ ಹಿಂದುಗಡೆ ಜೋರು ಜೋರು ಶಬ್ದ ಕೇಳುತ್ತಿತ್ತು. ಏನೆಂದು ಬಚ್ಚಲು ಮನೆಗೆ ಬಂದು ಕಿಟಕಿಯಲ್ಲಿ ನೋಡಿದರೆ ಶಾಮಣ್ಣ ಖೋಲಿಯಲ್ಲಿದ್ದ ಮರಗಳನ್ನು ಹೊರಗೆ ಸಾಗಿಸುತ್ತಿದ್ದ. ಆಗಲೂ ಅವನು ಸೀರೆ ಉಟ್ಟಿದ್ದನ್ನು ಗಮನಿಸಿದಳು. ಬಹುಶಃ ಕಳ್ಳ ನಾಟಾಗಳನ್ನು ಇತರ ಕಳ್ಳರೂ ಮುಟ್ಟದೇ ಇರುವುದು, ಮತ್ತು ಪೊಲೀಸರೂ ಇವನ ಸುದ್ದಿಗೆ ಬರದೇ ಇರುವುದು ಇದೇ ಕಾರಣಕ್ಕಾಗಿರಬಹುದು. ಕಳ್ಳ-ಪೊಲೀಸರನ್ನು ಹೆದರಿಸುವ ಸಲುವಾಗಿಯೇ ಇವ ಸೀರೆ ಉಟ್ಟುಕೊಳ್ಳುತ್ತಾನಾ ಹಾಗಿದ್ದರೆ…?
ಅದೂ ಸುಳ್ಳು ಎಂಬಂಥ ಒಂದು ಘಟನೆ ಒಂದು ದಿನ ಅವಳೆದುರಿಗೇ ನಡೆಯಿತು.
ಎಡಬಟ್ಟು ಎಡಬಟ್ಟು ಮಾತನಾಡುವ, ಸೀರೆ ಉಟ್ಟುಕೊಳ್ಳುವ, ಕಳ್ಳ ನಾಟಾ ಸಾಗಿಸುವ ಈ ಶಾಮಣ್ಣ ಮಹಾನ್ ಯಕ್ಷಗಾನ ಪ್ರೇಮಿ. ಯಕ್ಷಗಾನಕ್ಕೆಂದು ಆ ಊರಿಗೆ ಬಂದವರೆಲ್ಲ ಇವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇಂದಿರಾ ಆ ತೋಟದ ಮನೆಗೆ ಬರುವುದಕ್ಕಿಂತ ಮುಂಚೆ ಅದು ಕಳ್ಳಕಾಕರ ಬೀಡಾಗಿತ್ತು. ಯಕ್ಷಗಾನ ಮೇಳ ಬಂದಾಗ ಯಕ್ಷಗಾನದವರಿಗಾಗಿ ಬಿಟ್ಟುಕೊಡುತ್ತಿದ್ದ. ಹೀಗೇ ಒಂದು ದಿನ ಯಕ್ಷಗಾನ, ಇಂದಿರೆಯ ಮನೆಯಲ್ಲಿ ಜನವೋ ಜನ. ಅವತ್ತು ಹಗಲಿಡೀ ಇಂದಿರೆ ಮತ್ತು ಅವಳ ಮಗಳು ಮನೆಯ ಹೊರಗಿನ ಕಟ್ಟೆಯ ಮೇಲೇ ಕಳೆದರು. ಸಂಜೆಯಾಗುತ್ತಿದ್ದಂತೆಯೇ ಒಬ್ಬೊಬ್ಬರಾಗೇ ಖಾಲಿಯಾಗಿ, ಎಲ್ಲರೂ ಯಕ್ಷಗಾನ ಕುಣಿಯಲು ಮೇಳದ ಹತ್ತಿರ ನಡೆದರು. ಇಂದಿರೆಗೂ ಯಕ್ಷಗಾನದ ಹುಚ್ಚು, ಅವತ್ತು ಎರಡು ಆಟ, ಜಾಂಬವತಿ ಕಲ್ಯಾಣ ಮತ್ತು ರಾಮ ನಿರ್ಯಾಣ. ರಾತ್ರಿ ಬೆಳತನಕದ ಆಟ ಮುಗಿಸಿ ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ಮನೆಯತ್ತ ನಡೆದಳು.
ದೊಡ್ಡ ಕಾಡಿನ ಹಾದಿಯಲ್ಲಿ ಹೆಜ್ಜೆ ಹಾಕಿ ಒಂದು ಸಂಕ ದಾಟಿದರೆ ದೊಡ್ಡದಾದ ಕಾಂಪೌಂಡಿನ ಒಳಗೆ ಇವಳ ಮನೆಯಿದೆ. ಮುಂಚಿನ ದಿವಸ ಮೇಳದ ಅಡುಗೆ ಭಟ್ಟ ಅಡುಗೆ ಮಾಡಿ ಹೆಚ್ಚುಳಿದದ್ದೆಲ್ಲ ಅಲ್ಲೇ ಚೆಲ್ಲಿದ್ದ. ಹುಳಿ, ಸಾಸಿವೆ, ಗೊಜ್ಜುಗಳೆಲ್ಲ ಆ ಹುಲ್ಲು ತುಂಬಿದ ನೆಲದಲ್ಲಿ ಬಿದ್ದಿದ್ದವು. ಅದರ ನಡುವೆ ಒಂದು ದೊಡ್ಡದಾದ ಒಲೆ, ಆ ಒಲೆಯ ಪಕ್ಕ ಕಂಬಳಿ ಹೊದ್ದ ಒಂದು ಆಕೃತಿ ಕುಳಿತಿತ್ತು, ನೋಡಲು ಥೇಟು ಕರಡಿಯಂತೆಯೇ ಕಂಡು ಒಂದು ಕ್ಷಣ ಬೆದರಿ ನಿಂತಳು ಇಂದಿರಾ. ನಂತರ ನಿಧಾನಕ್ಕೆ ಅರಿವಾಗತೊಡಗಿತು ಅದು ಮನುಷ್ಯಾಕೃತಿ ಮತ್ತು ಅದು ಶಾಮಣ್ಣನೇ ಎಂದು. ಅರೆ ನಿನ್ನೆರಾತ್ರಿ ಯಕ್ಷಗಾನ ನೋಡಲು ಬಂದವನಲ್ಲವಾ ಇವನು, ಅವನೂ ಅವನ ಹೆಂಡತಿ ಸೀತಕ್ಕ, ಮಕ್ಕಳು ಎಲ್ಲರೂ ಬಂದು ತನ್ನ ಪಕ್ಕವೇ ಕುಳಿತಿದ್ದದ್ದು ನೋಡಿದ್ದಳು, ಅದ್ಹೇಗೆ ಯಾವಾಗ ಇಲ್ಲಿಗೆ ಬಂದ, ಬೆಳಿಗ್ಗೆ ಎದ್ದು ಬರುವಾಗ ಯಾರನ್ನೂ ಗಮನಿಸದೇ ಸರಸರನೆ ಹೆಜ್ಜೆ ಹಾಕಿದ್ದಳು.
ಇವನನ್ನು ನೋಡುತ್ತಲೇ ಅವನ ಹಿಂದೆಯೇ ಬಂದು ನಿಂತು “ಏನ್ ಶಾಮಣ್ಣಾ ಆಟ ಹೇಗಿತ್ತು,? ಯಾವಾಗ ಎದ್ದು ಬಂದ್ರೀ” ಎಂದು ಕೇಳಿದ್ದಕ್ಕೆ ಒಂದೂ ಮಾತನಾಡದೇ ಎದ್ದು ಸರಸರನೇ ತೋಟದ ಕೆಳಗೆ ನಡೆದುಬಿಟ್ಟ ಶಾಮಣ್ಣ. ಇವಳ ಧ್ವನಿ ಕೇಳಿ ಗಾಬರಿಯಿಂದ ಎದ್ದ ಹೊಡೆತಕ್ಕೆ ಕಂಬಳಿ ಕೊಪ್ಪೆ ಜಾರಿ, ಅವನು ಸೀರೆ ಉಟ್ಟಿದ್ದು ಸರಿಯಾಗಿ ಕಾಣಿಸಿತು. ಸರಕ್ಕನೆ ಕಂಬಳಿಕೊಪ್ಪೆಯನ್ನೂ ಎತ್ತಿಕೊಂಡು ತೋಟದ ಕಡೆ ಹೆಜ್ಜೆಹಾಕಿದವನನ್ನು, ಇವತ್ತು ಏನು ಬೇಕಾದರಾಗಲಿ, ಎಂದು ಆ ಬೆಳಗಿನಹೊತ್ತು ಹಿಂಬಾಲಿಸಿ ಹೊರಟೇ ಬಿಟ್ಟಳು ಇಂದಿರಾ.
ಅವ ತೋಟದ ಅಂಚಿನವರೆಗೂ ನಡೆದು ಹೋಗಿ, ಒಂದು ಸಣ್ಣ ಮನೆಯಂಥದ್ದರ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡ. ತೋಟದ ಆಚೆಯೂ ಒಂದು ಮನೆಯಿದೆ ಇವನಿಗೆ ಎಂಬುದು ತಿಳಿದದ್ದು ಅವತೇ. ಏನಾಗುತ್ತದೆಂದು ಮನೆಯ ಗೋಡೆಗಾನಿಸಿಕೊಂಡು ನಿಂತಳು ಇಂದಿರಾ. ಸ್ವಲ್ಪಹೊತ್ತು ಮೌನ ಆವರಿಸಿತ್ತು. ಎದುರಿಗಿನ ತೋಟವೆಲ್ಲ ಆ ಬೆಳಗಿನ ಮಂಜಲ್ಲಿ ಮಿಂದೆದ್ದವಂತೆ ಭಾಸವಾದರೂ, ಅಲ್ಲಿನ ನೀರವತೆಗೆ ಬೆದರಿ, ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಬಾಗಿಲೊಳಗಿನಿಂದ ಇದ್ದಕ್ಕಿದ್ದಹಾಗೆ,
ಪೃಥವೀಯೊಳಿನಿತು ರೂಪಿಲ್ಲ…
ದ್ರುಪದ ಸುತೆಯ ಕಂಡರಿವೆ ಈ ಪರಿ ಅಂದವಾ…
ಇವಳ್ಯಾವ ಲೋಕದ ಸತಿಯೋ…
ಇಲ್ಲಿಯವಳಲ್ಲ…ಬೇಕೆನಗೆ ಇವಳು…
ಎಂಬ ಯಕ್ಷಗಾನ ಪದ್ಯ ಕೇಳತೊಡಗಿತು. ‘ಸೈರಂದ್ರೀ… ಸ್ವರ್ಗಲೋಕದ ಸುಂದರಿ ನೀನು. ನಿನ್ನ ನೋಡಿದಂದಿನಿಂದ ನಾ ಹುಚ್ಚನಾಗಿದ್ದೇನೆ, ಬಾ… ಎನ್ನ ಮನ ತಣಿಸು…’ ಎಂದು ಹೇಳಿದ. ಜೊತೆಗೆನೇ ‘ಛೀ…ದುಷ್ಟ. ಇವೆಲ್ಲ ನನ್ನ ಗಂಡನಿಗೆ ತಿಳಿದರೆ ನಿನ್ನ ಸಿಗಿದು ಬಿಟ್ಟಾರು’ ಎಂದು ಜೋರಾಗಿ ಹೇಳಿದಳು ಸೈರಂದ್ರಿ. ‘ನಾನು ಈ ದೇಶದ ರಾಜಕುಮಾರ. ಸುರಲೋಕದ ಸುಂದರಿಯಾದ ನಿನ್ನ ಬಿಡುವುದೆಂತು ಭಾಮಿನಿಯೇ…’ ಎಂದು ಮತ್ತೂ ನಾಟಕೀಯವಾಗಿ ಹೇಳಿದ. ಪದ್ಯ ಮತ್ತು ಅರ್ಥದ ಮೇಲೆ ಅವನು ಕೀಚಕ ವಧೆಯ ಪ್ರಸಂಗವನ್ನು ಹೇಳುತ್ತಿದ್ದ ಎಂದು ಅರ್ಥಮಾಡಿಕೊಂಡಳು. ಕೀಚಕ ಮತ್ತು ಸೈರಂಧ್ರಿ ಎರಡೂ ಅವನೇ ಆಗಿ ಅರ್ಥ ಹೇಳುತ್ತಿದ್ದುದನ್ನು ಕೇಳಿ ಒಮ್ಮೆ ನಗುಬಂತು. ಬಾ… ಸೈರಂಧ್ರೀ… ಎನ್ನುತ್ತ ಬಾಗಿಲು ತೆರೆಯುವ ಶಬ್ದ ಕೇಳಿ ಅಲ್ಲಿಯೇ ಅಡಿಕೆ ಕಂಬವೊಂದರಲ್ಲಿ ಮರೆಯಾಗಿ ನಿಂತಳು. ಸೀರೆ ಉಟ್ಟ ಶಾಮಣ್ಣ ಮನೆಯ ಹಾದಿ ಹಿಡಿದರೂ ‘ಸೈರಂದ್ರೀ… ಬಾ… ಎನ್ನುತ್ತಲೂ… ನಿನ್ನ ಆಲಂಗಿಸುವೆ.. ಬಾ’ ಎನ್ನುತ್ತಲೇ ಹೆಜ್ಜೆ ಹಾಕುತ್ತಿದ್ದ. ಇನ್ನೂ ಬೆಳಕು ಹರಿಯದ, ಮಂಜುಮುಸುಕಿದ ಆ ತೋಟದಲ್ಲಿ ಹೀಗೆ ನಡೆಯುತ್ತಿದ್ದ ಶಾಮಣ್ಣನೂ ಅದನ್ನು ನೋಡುತ್ತ ನಿಂತ ತಾನೂ…. ಇಬ್ಬರೂ ಯಾವುದೋ ಲೋಕದಿಂದ ಬಂದಿಳಿದ ಜೀವಿಗಳಂತೆ ಅನಿಸಹತ್ತಿತು ಅವಳಿಗೆ.
ಇದನ್ನೆಲ್ಲ ಕೇಳಿಯೇ ಬಿಡಬೇಕೆಂದು ಒಂದು ದಿನ ಅವನ ಮನೆಗೇ ಹೋದಳು ಇಂದಿರಕ್ಕ. ಆದರೆ ಅವತ್ತು ಶಾಮಣ್ಣನ ಹಿರಿ ಮಗಳು ಅಶ್ವಿನಿ ದೂರದ ಗೋವೆಯಿಂದ ಇಲ್ಲಿಗೆ ಬಂದವಳು ಏನೋ ತಕರಾರು ತಂದಿದ್ದಳು. ಅದಿಕ್ಕೆ ಶಾಮಣ್ಣನಿಗೂ, ಮಗಳು ಮತ್ತು ಅಳಿಯನಿಗೂ ಜೋರು ಜೋರು ಜಗಳ ನಡೆದು, ಇವರಿಬ್ಬರ ಜಗಳದಲ್ಲಿ ಮನೆ ಬಿಟ್ಟು ಹೋದ ರುಕ್ಮಿಣಿಯ ಹೆಸರೂ ನುಸುಳಿತು. ‘ನಿನ್ನಿಂದಲೇ ಅವಳು ಮನೆಬಿಟ್ಟು ಹೋಗಿದ್ದು. ನೀ ಹೀಗೆಲ್ಲ ಮಾಡೋದಾದ್ರೆ ನಮ್ಮನೆಗೆ ಬರೋದೇ ಬೇಡ’ ಎಂದು ಮಗಳು ಜೋರು ಮಾಡುತ್ತಿದ್ದರೆ, ಶಾಮಣ್ಣ ಸುಮ್ಮನೆ ನಿಂತಿದ್ದ, ಸೀತಕ್ಕ ಅಡುಗೆ ಮನೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಳು. ಬಹುಶಃ ಅವರು ಸೀರೆಯ ಕುರಿತೇ ಮಾತನಾಡುತ್ತಿರಬಹುದು ಎನಿಸಿತು ಇಂದಿರೆಗೆ. ಅಂದರೆ ಅವಳ ಮಗಳ ಮನೆಯಲ್ಲೂ… ಸೀರೆ ಕಾಣೆಯಾಗಿರಬೇಕು ಎಂದುಕೊಂಡ ಇಂದಿರೆ, ಈ ಗಲಾಟೆಯ ಮಧ್ಯೆ ಏನೂ ಕೇಳುವುದು ಬೇಡವೆಂದು ವಾಪಾಸು ಹೊರಡಬೇಕೆಂದುಕೊಂಡವಳಿಗೆ, ಅಳುತ್ತಲೇ ಸೀತಕ್ಕ ಹೇಳಿದ ಮಾತುಗಳು ಅವಳನ್ನು ಕಟ್ಟಿಹಾಕಿ ನಿಲ್ಲಿಸಿದವು.
‘ಅಶ್ವಿನಿ, ನಿಂಗಾದ್ರೆ ಮದುವೆಯಾದ್ರೂ ಆಗಿದೆ. ನೀನು ಮನೆಯಿಂದ ದೂರ ಇರುತ್ತೀಯೆ. ಆದ್ರೆ ಇಲ್ಲಿ ನಮ್ಮ ಗತಿ ಏನು? ನಾನಾದ್ರೂ ಈಗ ಬಿದ್ದು ಹೋಗುವ ಮರ. ಪಾಪ, ಈ ನಿನ್ನ ತಂಗಿ ಸುನಂದೆಯ ಗತಿ ಎಂತದೆ? ಇನ್ನೂ ಮದುವೆಯೂ ಆಗಿಲ್ಲ. ಇವಳನ್ನು ಯಾರು ಮದುವೆ ಮಾಡಿಕೊಳ್ಳುತ್ತಾರೆ. ಇದನ್ನೆಲ್ಲ ನೋಡುವ ಬದಲು ಸಾಯುವುದು ಮೇಲು..’ ಎಂದು ಅಳ ಹತ್ತಿದಳು. ಶಾಮಣ್ಣನ ಸೀರೆಗಿಂತಲೂ ತನ್ನ ಮಗಳ ಮದುವೆ ವಿಷಯವೇ ಅವಳನ್ನು ಹೆಚ್ಚು ಕೊರೆಯುತ್ತಿದ್ದಂತೆನಿಸಿತು. ಇನ್ನೊಂದು ದಿವಸ ಬರುವಾ ಎಂದು ಹೊರಟು ತೋಟದ ಆ ಸಣ್ಣ ದಾರಿಯಲ್ಲಿ ನಡೆದು ತುದಿಯಲ್ಲಿರುವ ಕೆರೆಯನ್ನು ದಾಟಿ ಇನ್ನೇನು ಮೆಟ್ಟಿಲು ಹತ್ತಿ ತಮ್ಮ ಮನೆಗೆ ಹೋಗಬೇಕೆನಿಸುವಷ್ಟರಲ್ಲಿ ಕೆರೆಯ ಪಕ್ಕದಲ್ಲಿದ್ದ ಒಂದು ಸಣ್ಣ ಮನೆಯನ್ನು ನೋಡಿ, ತೋಟದ ಆಚೆಯಿದ್ದ ಮನೆಯೊಳಗೆ ನಡೆದ ಕೀಚಕವಧಾ ಯಕ್ಷಗಾನ ಪ್ರಸಂಗ ನೆನಪಾಗಿ ಇಲ್ಯಾವ ಯಕ್ಷಗಾನವಿದೆಯೋ ಎಂದು ಆ ಮನೆಯತ್ತ ಹೋದಳು.
ಎಷ್ಟೋ ಸಲ ಶಾಮಣ್ಣ ಹಗಲು ಹೊತ್ತು ಆ ಮನೆಯ ಬಾಗಿಲು ತೆಗೆದು, ಗುದ್ದಲಿ, ಪಿಕಾಸು, ಬುಟ್ಟಿ, ಕ್ಯಾನು, ಹಗ್ಗ ಹೀಗೆ ತೋಟಕ್ಕೆ ಬೇಕಾದ್ದೆಲ್ಲ ಅದರಲ್ಲಿ ಇಟ್ಟು ತೆಗೆದು ಮಾಡುತ್ತಿದ್ದುದನ್ನು ನೋಡಿದ್ದಳು. ಆದರೆ ಈ ಸೀರೆ ರಾಮಾಯಣ ಇಷ್ಟೆಲ್ಲ ಆದ ಮೇಲೆ ಆ ಮನೆಯಲ್ಲಿ ಏನಿದೆ ಎಂಬ ಕುತೂಹಲ ಕಾಡತೊಡಗಿ, ಮೆಲ್ಲಗೆ ಅಲ್ಲಿ ಹೋದಳು. ಬಾಗಿಲಿಗೆ ಬೀಗ ನೇತಾಡುತ್ತಿದ್ದರೂ ಬೀಗ ಹಾಕಿರಲಿಲ್ಲ. ಹಾಗಾಗಿ ಸುಲಭವಾಗಿ ತೆಗೆಯಲು ಸಾಧ್ಯವಾಯಿತು. ಬೀಗ ತೆಗೆದು ಒಳ ಕಾಲಿಟ್ಟಾಗ ಆಶ್ಚರ್ಯ ಕಾದಿತ್ತು. ಅಲ್ಲಿನ ಬಿದಿರು ಗಳದ ಮೇಲೆ ಸಾಲಾಗಿ ಒಂದಷ್ಟು ಸೀರೆಗಳು, ಬ್ಲೌಸ್ಗ್ಳು ನೇತಾಡುತ್ತಿದ್ದವು. ಬಹುಶಃ ಅವುಗಳಲ್ಲಿ ಕಳೆದು ಹೋಗಿದೆ ಎನ್ನಲಾದ ರುಕ್ಮಿಣಿಯ ಸೀರೆಯೂ ಇದ್ದಿರಬಹುದು, ಯಾರ್ಯಾರ ಸೀರೆಗಳಿದ್ದವೋ… ಒಟ್ಟಿನಲ್ಲಿ ರಾಶಿ ಸೀರೆಗಳೇ ಅಲ್ಲಿದ್ದವು. ಆದರೆ ಅವಳಿಗೆ ಆಘಾತವುಂಟುಮಾಡಿದ ವಿಷಯವೆಂದರೆ, ಅಲ್ಲಿ ಒಂದಷ್ಟು ರವಿಕೆ, ಒಂದಷ್ಟು ಬ್ರಾ ಮತ್ತು ಹೆಂಗಸರ ಚಡ್ಡಿಗಳೂ ನೇತಾಡುತ್ತಿದ್ದವು. ಆ ಪೈಕಿ ಒಂದೆರಡನ್ನು ಅವಳ ಕಣ್ಣುಗಳು ಸರಿಯಾಗಿ ಗುರುತಿಸಿದ್ದವು, ಅದು… ಅದೂ… ತನ್ನದು ಮತ್ತು ತನ್ನ ಮಗಳದ್ದು…!
ಈ ಮೊದಲು ಚಡ್ಡಿ, ಬ್ರೇಸಿಯರ್ ಕಾಣುತ್ತಿಲ್ಲವೆಂದರೆ ಅಲ್ಲೇ ಎಲ್ಲೋ ಇದ್ದಿರಬಹುದು, ಮುಖ್ಯವಾಗಿ ಅದು ಸೀರೆಯಷ್ಟೆಲ್ಲ ಪ್ರಮುಖ ಸ್ಥಾನವನ್ನು ಪಡೆಯದೇ ನಿರ್ಲಕ್ಷ್ಯಕ್ಕೊಳಗಾದ ಕಾರಣ ಅದರ ಕುರಿತು ಅಷ್ಟೆಲ್ಲ ಇಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ. ನೆಂಟರ ಮನೆಗೆ ಹೋದಾಗ ಬಿಟ್ಟಿರಬಹದೆಂದೇ ಅಂದುಕೊಂಡಿದ್ದರು, ಎಷ್ಟೆಂದರೂ ಅವು ಸಣ್ಣದು ತಾನೆ? ಅಲ್ಲದೇ ಅವನ್ನೆಲ್ಲ ಬಹಿರಂಗವಾಗಿ ನಿಮ್ಮನೆಯಲ್ಲಿ ಬಿಟ್ಟುಬಂದಿದ್ದೀನಾ ಎಂದು ಕೇಳುವಂತೆಯೂ ಇರಲಿಲ್ಲ. ಎಲ್ಲಾದರೂ ಅತ್ತೆ, ಅತ್ತಿಗೆ ಯಾರಾದರೂ ಸಿಕ್ಕಾಗ, ಗುಟ್ಟಲ್ಲಿ ನೀನು ಇದನ್ನು ಬಿಟ್ಟು ಹೋಗಿದ್ದೀಯ ಎಂದರೆ ಮಾತ್ರ ಅದರ ನೆನಪಾಗುತ್ತಿತ್ತು. ಅಂಥದ್ದರಲ್ಲಿ ಇವೆರೆಡು ಕಳೆದುಹೋಗಿದ್ದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೇ, ಶಾಮಣ್ಣನ ಸೀರೆಯ ಕತೆಗಳೇ ಹೆಚ್ಚಾಗಿ, ಅದನ್ನು ಹುಡುಕಿಕೊಂಡು ಹೊರಟವಳಿಗೆ ಈಗ ಈ ರೀತಿಯಲ್ಲಿ ಇವೆಲ್ಲ ಎದುರಾಗಿದ್ದು, ಅವಳಿಗೆ ಹೇಸಿಗೆಯಾಗತೊಡಗಿತು, ಇಡೀ ಆ ಮನೆಯನ್ನೇ ಸುಟ್ಟುಬಿಡುವಷ್ಟು ಆಕ್ರೋಶ ಉಂಟಾಯಿತು.
ತನ್ನದೂ ಮಗಳದ್ದೂ ಎರಡನ್ನು ಸರಕ್ಕನೆ ಎಳೆದುಕೊಂಡು ಬಂದು ಅವನ್ನೂ ಅದೇ ರೀತಿ ಸುಟ್ಟು ಹಾಕಿದಳು. ಹಾಗೆ ಸುಡುವಾಗ ಅವಳಿಗೆ ಹೊಳೆದದ್ದು ಇವನ್ನೆಲ್ಲ ಇವ ಹೇಗೆ ತಂದ? ಸಾಧಾರಣವಾಗಿ ಅಟ್ಟದ ಮೇಲೆ ಒಣಗಿಸುತ್ತೇವೆ, ತಾನೂ, ತನ್ನ ಮಗಳೂ. ಅಲ್ಲಿಗೆ ಹೋಗುವುದಾದರೆ ತಮ್ಮ ಮುಂದೆಯೇ ಹೋಗಬೇಕಲ್ಲ? ಅವ ಹೇಗೆ ಅಲ್ಲಿಂದ ತಂದ? ಎಂಬ ಪ್ರಶ್ನೆಯ ಹಿಂದೆಯೇ ಅವತ್ತು ರಾತ್ರಿ ತಮ್ಮಮನೆಗೆ ಬಂದ ಕಳ್ಳನ ನೆನಪಾಗಿ, ಅವರು ಯಾರು ಹಾಗಿದ್ದರೆ? ಏನೆಲ್ಲ ಅನುಮಾನಗಳು ಕಾಡತೊಡಗಿದವು ಅವಳಿಗೆ.
ಅವಳ ಮನೆಗೆ ಕಳ್ಳರು ಬಂದು ಹೋಗಿ ಕೆಲವು ತಿಂಗಳುಗಳೇ ಕಳೆದುಹೋಗಿದ್ದವು.
ಒಂಟಿ ಮನೆ, ಸುತ್ತ ಕಾಡು, ಆ ಮನೆಯಲ್ಲಿ ಕರೆಂಟು ಬೇರೆ ಇರುವುದಿಲ್ಲ. ಇರುವವರಿಬ್ಬರೇ ಎಂಬ ಕಾರಣಕ್ಕೆ ಹಾಸಿಗೆ ಪಕ್ಕ ಒಂದು ಲಾಟಿನ್ ನನ್ನು ಸಣ್ಣ ಮಾಡಿಟ್ಟುಕೊಂಡು ತಾಯಿ-ಮಗಳಿಬ್ಬರೂ ಬೇಗ ಮಲಗಿಬಿಡುತ್ತಿದ್ದರು. ಅವತ್ತೂ ಹಾಗೆಯೇ ಮಲಗಿದ್ದರು. ಇನ್ನೇನು, ನಿದ್ದೆ ಹತ್ತಿತ್ತು…ಅನ್ನೋ ಹೊತ್ತಿಗೇ ಮಹಡಿಮೇಲೆ ಏನೋ ಶಬ್ದವಾಯಿತು. ಮಹಡಿ ಎಂದರೆ ಅದು ಹಗರದಬ್ಬೆಗಳಿಂದ ಮಾಡಿದ ಒಂದು ಅಟ್ಟ (ಸೀಳಿದ ಅಡಕೆ ಮರಗಳಿಂದ ಮಾಡಿದ್ದು) ಅದರ ಮೇಲೆ ಯಾರೋ ನಡೆದುಬರುತ್ತಿರುವಂತೆ ಸದ್ದು. ಮೊದಲು ಎಚ್ಚರವಾದದ್ದು ಮಗಳು ಮಾಲತಿಗೆ. ತಕ್ಷಣ ಕಣ್ಣುಬಿಟ್ಟು ನೋಡಿದಳು. ಮೇಲೆ ಯಾರೋ ನಡೆದು ಬರುತ್ತಿದ್ದಾರೆಂದು ಸ್ಪಷ್ಟವಾಯಿತು. ಕೂಗಲು ಭಯ, ಇಡೀ ಮನೆಯಲ್ಲಿರುವವರು ಇಬ್ಬರೇ. ಅವರೆಷ್ಟು ಜನರಿದ್ದಾರೋ ಏನೋ… ಕೆಳಗೆ ಬಂದು ಏನಾದರೂ ಮಾಡಿಬಿಟ್ಟರೆಂಬ ಭಯದಿಂದ ಸುಮ್ಮನೆ ನೋಡುತ್ತಿದ್ದಳು.
ಅವನು ಒಂದೊಂದೇ ಹೆಜ್ಜೆ ಇಟ್ಟು ಮುಂದಕ್ಕೆ ಬರುವುದು ಹಗರದಬ್ಬೆಗಳ ಜೀರ್ ಜೀರ್ ಶಬ್ದದಿಂದ ತಿಳಿಯುತ್ತಿತ್ತು. ಇದೇ ಹೊತ್ತಿಗೆ ಅಮ್ಮನಿಗೂ ಎಚ್ಚರವಾಗಿ ‘ಮಾಲತಿ ಲಾಟೀನ್ ದೊಡ್ಡಮಾಡು’ ಎಂದಳು. ಯಾವಾಗ ಅಮ್ಮನಿಗೂ ಎಚ್ಚರಾಯಿತೋ ಮಾಲತಿಗೆ ಎಲ್ಲಿಲ್ಲದ ಧೈರ್ಯ ಬಂದು ‘ಯಾರ್ರಾ… ಅದು…’ ಎಂದು ಜೋರಾಗಿ ಕೂಗಿದಳು. ಹಾಗೆ ಕೂಗಿದ ಶಬ್ದಕ್ಕೇ ಯಾರೋ ಓಡಿಹೋದ ಶಬ್ದವಾಯಿತು. ಮತ್ತೆ ಅಟ್ಟದ ಮೇಲಿಂದ ಯಾವುದೇ ಶಬ್ದ ಬರಲಿಲ್ಲ. ಆದರೆ ರಾತ್ರಿ ಬೆಳತನಕ ಇಬ್ಬರೂ ನಿದ್ದೆ ಮಾಡಲಿಲ್ಲ. ಮಾರನೇ ದಿನ ಬೆಳಿಗ್ಗೆ ಕುಂಟು ಹಾಕಿಕೊಂಡು ಬಂದ ಶಾಮಣ್ಣನಿಗೆ, ನಿನ್ನೆರಾತ್ರಿ ಬಂದ ಕಳ್ಳರಕತೆಯನ್ನು ಭಯಮಿಶ್ರಿತ ಧ್ವನಿಯಲ್ಲಿ ವಿವರಿಸಿ ಹೇಳಿದರೆ, “ಹೌದಾ… ಆಪಟು ಇಲ್ಯಾರೂ ಕಳ್ಳರೇ ಬಂದಿರಲಿಲ್ಲ. ಅಲ್ಲ ಇಂದಿರಕ್ಕ, ಇಲ್ಲೆಂತ ಇದೆ ಅಂತ ಕಳ್ರು ಬರ್ತಾರೆ..?” ಎಂದು ಕೇಳಿದ ವಿಚಿತ್ರವಾಗಿ ನಕ್ಕೊಂಡು. ‘ಅಲ್ಲಾ, ಶಾಮಣ್ಣ, ನಮ್ಮನೇಲಿ ಏನಿದೆ, ಏನಿಲ್ಲ ಎಂದು ಬರುವ ಕಳ್ಳರಿಗೇನು ಗೊತ್ತಾಗ್ತದೆ? ಬಂದ ಮೇಲಲ್ವಾ ತಿಳಿಯೋದು’ ಎಂದು ಕೇಳಿದ್ದಳು. ಅದೆಲ್ಲ ನೆನಪಾಗಿ ಇಂದಿರಾಗೆ ಏನೋ ಹೊಳೆದು ಸಣ್ಣಗೆ ಬೆವರಿದಳು.
ಹೀಗೆಲ್ಲ ಯೋಚಿಸಿ ಇನ್ನೇನು ಅಲ್ಲಿಂದ ಹೊರಡಬೇಕೆನಿಸುವಷ್ಟರಲ್ಲಿ ಯಾರೋ ತನ್ನನ್ನು ಗಮನಿಸುತ್ತಿದ್ದಾರೆನಿಸಿತು ಇಂದಿರೆಗೆ. ತಿರುಗಿ ನೋಡಿದರೆ ಶಾಮಣ್ಣ ತೋಟದ ಕೆರೆಯ ಏರಿಯ ಮೇಲೆ ನಿಂತು ಇತ್ತಲೇ ನೋಡುತ್ತಿದ್ದ. ಬೆಚ್ಚಿಬಿದ್ದ ಇಂದಿರಾ ಅದ್ಹೇಗೋ ಸಾವರಿಸಿಕೊಂಡು ಅಲ್ಲಿಂದ ಓಡು ನಡಿಗೆಯಲ್ಲಿ ಬಂದವಳು ಎದುರಿಗೆ ಕಾಲಯವನಂತೆ ನಿಂತ ಶಾಮಣ್ಣನನ್ನು ದೂಡಿ ಕೆಡಗಿ ಹೊರಟಳು. ಅನಿರೀಕ್ಷಿತವಾದ ಅವಳ ಈ ದಾಳಿಯಿಂದ ಧಡಕ್ಕನೇ ಕೆರೆ ಒಳಗೇ ಬಿದ್ದ ಶಾಮಣ್ಣ ವಿಕಾರವಾಗಿ ಕೂಗತೊಡಗಿದ. ಯಾವುದೂ ಕೇಳಿಸದವಳಂತೆ ಓಡಿದಳು ಇಂದಿರಾ ಹಿಂದಿರುಗಿ ನೋಡದವಳಂತೆ.
ಪತ್ರಕರ್ತೆ, ಕವಯತ್ರಿ, ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಈಗ ಬೆಂಗಳೂರಿನಲ್ಲಿ ವಾಸ. ಮೊದಲ ಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು(ಕಥಾ ಸಂಕಲನ), ಮಣ್ಣಿನ ಗೆಳತಿ(ಕೃಷಿ ಮಹಿಳೆಯರ ಅನುಭವ ಕಥನ)ಪುಸ್ತಕಗಳು ಪ್ರಕಟವಾಗಿವೆ.