ಮೆದುಳು ಮತ್ತು ದೇಹದ ನಡುವಿನ ಸಂಪರ್ಕ ಕಡಿಮೆಯಾಗುತ್ತಿದ್ದಂತೆಯೇ, ವಾಹನದ ಹೆಜ್ಜೆ ಗಡಿ ರೇಖೆಗಳ ಎಲ್ಲೆ ಮೀರಿ ಸಾಗುತ್ತದೆ. ಕೊನೆಗೆ ಪಾದಚಾರಿ ಮಾರ್ಗದತ್ತ ಯಮನ ಅಮೂರ್ತರೂಪವಾಗಿ ನುಗ್ಗುತ್ತದೆ. ಅಲ್ಲಿ ಮಲಗಿದ್ದ, ಬೆವರಿನ ಮಳೆಯಲ್ಲೇ ಬದುಕು ಕಟ್ಟಿಕೊಳ್ಳುವ, ಅಂಗಿಗೆ ಕಿಸೆ ಸದಾ ಅಂಟಿಕೊಂಡೇ ಇರುವ ಜೀವಗಳ ಉಸಿರು ಅರೆಕ್ಷಣದಲ್ಲಿ ನಿಂತು ಹೋಗುತ್ತದೆ. ತನ್ನಿಂದ ನಡೆದ ಘೋರ ಅವಘಡದ ಅರಿವು ಸಣ್ಣ ಮಟ್ಟಿಗೆ ಆಗುತ್ತಿದ್ದಂತೆಯೇ ತನ್ನ ಗೆಳೆಯನೊಂದಿಗೆ ಅಲ್ಲಿಂದ ಕಾರು ಸಮೇತ ಕಾಲು ಕೀಳುತ್ತಾನೆ ದೀಪಕ್.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಶಂಕರ್‌ ನಾಗ್‌ ನಿರ್ದೇಶನದ ‘ಆಕ್ಸಿಡೆಂಟ್’ ಸಿನಿಮಾದ ವಿಶ್ಲೇಷಣೆ

ಅದು 1984ರ ಕಾಲಘಟ್ಟ. ಚಿತ್ರಗಳೆಂದರೆ ಕೌಟುಂಬಿಕ ಕಥೆಗಳು ಮನೋರಂಜನೆಯ ಚಕ್ರಗಳ ಮೇಲೆ ಕುಳಿತು ಬರುವಂಥದ್ದು ಎನ್ನುವ ಸ್ಥಾಪಿತ ಕಲ್ಪನೆಗಳು ಜನರ ಮನಸ್ಸು ತುಂಬಿದ್ದ ಕಾಲ. ಆದರ್ಶದ ಪರಿಕಲ್ಪನೆಗಳು, ಫ್ಯಾಂಟಸಿ ದೃಶ್ಯಾವಳಿಗಳ ಬೆನ್ನೇರಿ ಬರುವ ಚಿತ್ರಗಳೇ ತುಂಬಿದ್ದ ಕಾಲದಲ್ಲಿ, ಕಡು ಸತ್ಯಗಳಿಗೆ ಕನ್ನಡಿ ಹಿಡಿದು, ಸಮಾಜದ ಮಧ್ಯೆ ಅವಿತ ಹುಳುಕುಗಳ ಬೆತ್ತಲಾಗಿಸುವ ಒಂದು ಅನನ್ಯ ಪ್ರಯತ್ನವೇ ಶಂಕರನಾಗ್ ನಿರ್ದೇಶನದ ‘ಆಕ್ಸಿಡೆಂಟ್’. ಸಮಾಜವೊಂದು ಇರುವೆಯ ಪರಿಯಲ್ಲಿ ಸಂಘಟಿತವಾಗಿ ಸೇರದಂತೆ ತಡೆವ, ಪ್ರಭುತ್ವ ಮಾಡುವ ಅನ್ಯಾಯದ ವಿರುದ್ಧ ಮಾನವ ಪ್ರಯತ್ನ ಸೋತರೂ, ಕರ್ಮದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎನ್ನುವ ನೈಜ ಪ್ರದರ್ಶನವೇ ಚಿತ್ರದ ಹೂರಣ. ಸಂಗೀತದ ಅಬ್ಬರವಿಲ್ಲ, ನಾಟಕೀಯ ಅಭಿನಯಗಳಿಲ್ಲ. ಅಲ್ಲೊಂದು ಜಗತ್ತು ಸಾಗುತ್ತಿದೆ, ನಮ್ಮ ಕಣ್ಣುಗಳಿಗೆ ಅಪರಿಚಿತವೇನಲ್ಲದ, ಆದರೆ ಗಟ್ಟಿ ದನಿಗೆ ನಿಲುಕದ, ಸಿಲುಕದ ಸನ್ನಿವೇಶಗಳ ಸಂಘಟನೆಯಿದೆ. ಉಳ್ಳವರ ಉನ್ಮಾದದ ಹೊಡೆತಕ್ಕೆ ಸಿಲುಕಿ, ಉಸಿರು ಚೆಲ್ಲುವ ಹರಿದ ಬದುಕಿನ ವ್ಯಥೆಯೇ ಇಲ್ಲಿ ಕಥೆಯಾಗಿದೆ.

ಆತ ದೀಪಕ್. ದೊಡ್ಡ ರಾಜಕಾರಣಿ ಧರ್ಮಾಧಿಕಾರಿಯ ಮಗ. ಹಣದ ಹೊಳೆಯಲ್ಲಿ ತೇಲುತ್ತಾ, ಅಧಿಕಾರದ ಆಮಲೆಲ್ಲವ ಆವಾಹಿಸಿಕೊಂಡವನಾತ. ಜೊತೆಗೊಬ್ಬ ಗೆಳೆಯ. ಒಂದಿರುಳು ಮಾದಕ ಪದಾರ್ಥ ಆಕ್ರಮಿಸಿದ ದೇಹವ ಹೊತ್ತು, ಮೆಲ್ಲನೆ ಸಾಗಲು ತಿಳಿಯದ ಐಷಾರಾಮಿ ಕಾರಿನ ಬೆನ್ನು ಹತ್ತಿ ರಸ್ತೆಯ ತುಂಬೆಲ್ಲಾ ಓಡಾಡಲು ತೊಡಗುತ್ತಾನೆ. ಮೆದುಳು ಮತ್ತು ದೇಹದ ನಡುವಿನ ಸಂಪರ್ಕ ಕಡಿಮೆಯಾಗುತ್ತಿದ್ದಂತೆಯೇ, ವಾಹನದ ಹೆಜ್ಜೆ ಗಡಿ ರೇಖೆಗಳ ಎಲ್ಲೆ ಮೀರಿ ಸಾಗುತ್ತದೆ. ಕೊನೆಗೆ ಪಾದಚಾರಿ ಮಾರ್ಗದತ್ತ ಯಮನ ಅಮೂರ್ತರೂಪವಾಗಿ ನುಗ್ಗುತ್ತದೆ. ಅಲ್ಲಿ ಮಲಗಿದ್ದ, ಬೆವರಿನ ಮಳೆಯಲ್ಲೇ ಬದುಕು ಕಟ್ಟಿಕೊಳ್ಳುವ, ಅಂಗಿಗೆ ಕಿಸೆ ಸದಾ ಅಂಟಿಕೊಂಡೇ ಇರುವ ಜೀವಗಳ ಉಸಿರು ಅರೆಕ್ಷಣದಲ್ಲಿ ನಿಂತು ಹೋಗುತ್ತದೆ. ತನ್ನಿಂದ ನಡೆದ ಘೋರ ಅವಘಡದ ಅರಿವು ಸಣ್ಣ ಮಟ್ಟಿಗೆ ಆಗುತ್ತಿದ್ದಂತೆಯೇ ತನ್ನ ಗೆಳೆಯನೊಂದಿಗೆ ಅಲ್ಲಿಂದ ಕಾರು ಸಮೇತ ಕಾಲು ಕೀಳುತ್ತಾನೆ ದೀಪಕ್.

ಮಾರನೇ ದಿನ ತನಿಖೆ ಆರಂಭವಾಗುತ್ತದೆ. ತನಿಖಾ ಪತ್ರಕರ್ತ ರವಿ (ಶಂಕರ್ ನಾಗ್) ಗೆ ಈ ಪ್ರಕರಣದ ಹಿಂದೆ ‘ದೊಡ್ಡ’ ಮನುಷ್ಯರ ಕೈವಾಡ ಇರಬಹುದು ಎಂಬ ಸಂಶಯ ಬಂದು ತನ್ನ ತನಿಖೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ಒಡಗೂಡಿ ತೀವ್ರಗೊಳಿಸುತ್ತಾನೆ. ಇಂಪೋರ್ಟೆಡ್ ಕಾರಿದು ಎಂಬ ಸುಳಿವು ಚಕ್ರ ಬಿಟ್ಟು ಹೋದ ನೆರಳಿನ ಜಾಡು ಹಿಡಿದು ಹೋದಾಗ ಸಿಗುತ್ತದೆ. ಕೊನೆಗೆ ಗರಾಜೊಂದರಲ್ಲಿ ನವೀಕರಣಕ್ಕೆ ನಿಲ್ಲಿಸಿದ್ದ ದೀಪಕ್‌ನ ಕಾರು ಸಿಕ್ಕಿ ಹಾಕಿಕೊಳ್ಳುತ್ತದೆ. ಅಷ್ಟು ಹೊತ್ತಿಗೆ ಧರ್ಮಾಧಿಕಾರಿಗೆ ವಿಚಾರ ತಿಳಿದು, ಇನ್ನು ಈ ಸಂಗತಿ ತನ್ನ ರಾಜಕೀಯ ಬದುಕಿಗೆ ಅಂತ್ಯ ಕಾಣಿಸಬಹುದೆಂದು ಭಾವಿಸಿ ತನ್ನ ಪ್ರಭಾವದ ಬಲೆಯ ಬೀಸುತ್ತಾನೆ. ಪರಿಣಾಮ ಇನ್ಸ್ಪೆಕ್ಟರ್ ಕೈ ಕಟ್ಟಿದಂತಾಗುತ್ತದೆ, ರವಿಯ ಲೇಖನ ಪತ್ರಿಕೆಯಲ್ಲಿ ಮೂಡುವುದಿಲ್ಲ. ಆದರೂ, ಅಪಘಾತದಲ್ಲಿ ಬದುಕುಳಿದವನೊಬ್ಬನ ಸಾಕ್ಷಿಯಾಗಿಸಿಕೊಂಡು, ರವಿ ಹೆಜ್ಜೆ ಹಿಂದಿಕ್ಕದೆ ಹೋರಾಟವ ಮಾಡುತ್ತಾನೆ. ಕೊನೆಗೆ, ಕರ್ಮ ಸಿದ್ಧಾಂತದ ಮಾದರಿಯಲ್ಲೇ ಊರು ಬಿಟ್ಟು ಪರದೇಶಕ್ಕೆ ಪರಾರಿಯಾಗಲು ಮತ್ತದೇ ರಕ್ತದ ಹೆಜ್ಜೆ ಗುರುತಿರುವ ಕಾರಿನಲ್ಲಿ ಹೊರಡುವ ದೀಪಕನಿಗೆ ದಾರಿ ಮಧ್ಯೆ ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಎದುರಾಗುತ್ತಾನೆ. ಮಾಸಿದ ಕರಾಳ ಭೂತಕಾಲ ಕಣ್ಣೆದುರು ಬರುತ್ತದೆ. ಮತ್ತದೇ ಥೇಟು ಹಳೆಯ ಘಟನೆಯದೇ ಪುನರಾವರ್ತನೆ. ಮಾನಸಿಕ ಸ್ಥಿಮಿತ ಕಳೆದುಹೋಗುತ್ತದೆ. ಅವಘಡ ಸಂಭವಿಸುತ್ತದೆ. ಈ ಬಾರಿ ದೀಪಕನ ಅವಸಾನವಾಗುತ್ತದೆ. ಇದು ‘ಆಕ್ಸಿಡೆಂಟ್’ ಚಿತ್ರದ ಸಂಕ್ಷಿಪ್ತ ಸಾರಾಂಶ.

32 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದ, ಕನ್ನಡದ ಹಿರಿಮೆ-ಗರಿಮೆಯ ಸಂಕೇತ ಎಂದೇ ಕರೆಯಬಹುದಾದ ಈ ಚಿತ್ರದ ಬಗ್ಗೆ ಬೆಳಕು ಚೆಲ್ಲುವಾಗಲೆಲ್ಲಾ ನೆನಪಾಗುವುದು ಶಂಕರ್ ನಾಗ್. “ಸತ್ತ ಮೇಲೆ ಮಲಗೋದು ಇದ್ದೇ ಇದೆ, ಎದ್ದಿರುವಾಗ ಏನಾದರೂ ಸಾಧಿಸು” ಎಂದು ಹೇಳಿದ ಖ್ಯಾತ ನಟ, ನಿರ್ದೇಶಕ, ಕರಾಟೆ ಕಿಂಗ್, ಅಭಿಮಾನಿಗಳ ಆಟೋರಾಜ ಅವರು. ಅಕ್ಷರಶಃ ತಾನು ನುಡಿದಂತೆ ನಡೆದವರು, ಸಾಹಸ, ಸಾಧನೆಗಳೆಂಬ ಶರಧಿಯನ್ನು ದಾಟಿದವರು. ಪ್ರಾಯಶಃ ಅವರಿಗೆ ಅರಿವಿತ್ತೋ ಏನೋ, ತನ್ನ ಬದುಕಿನ ಪಯಣ ಕಿರು ಮೈಲಿಗಳದ್ದೆಂದು.‌ ಅದಕ್ಕೆಂದೇ, ಜಿದ್ದಿಗೆ ಬಿದ್ದವರಂತೆ ಅನಂತ ಅಸಾಧಾರಣ ಮೈಲಿಗಲ್ಲುಗಳನ್ನು ಪ್ರತಿಷ್ಟಾಪಿಸಿ ಹಾಗೆ ಸುಮ್ಮನೆ ಎದ್ದು ನಡೆದು ಹೋದರು.

ಶಂಕರ್ ನಾಗ್ ಎಂದರೆ ಪ್ರಥಮತಃ ನೆನಪಾಗುವುದು ಅವರ ವೇಗೋತ್ಕರ್ಷ, ಕ್ರಿಯಾಶೀಲತೆ, ತಾಜಾತನ, ಸಮಯ ನಿಷ್ಟೆ ಮತ್ತು ಸರಳತೆ. ನಿಲುಗಡೆ ಇಲ್ಲದ ಮಳೆಯಂತೆ, ಎಲ್ಲೂ ನಿಲ್ಲಿಸದ Non Stop ಬಸ್ಸುಗಳಂತೆ ಅವರ ವೇಗ. ಕೇವಲ 13 ವರುಷಗಳ ಅವಧಿಯಲ್ಲಿ ಅವರು ಕೆಲಸ ಮಾಡಿದ್ದು ಬರೋಬ್ಬರಿ 96 ಸಿನೆಮಾಗಳಲ್ಲಿ ಎನ್ನುವುದೇ ಅವರ ವೇಗಕ್ಕೆ ಹಿಡಿದ ಕೈಗನ್ನಡಿ. ತಾಂತ್ರಿಕತೆ ಉತ್ತುಂಗದ ಶಿಖರದಲ್ಲಿರುವ ಈ ಕಾಲಘಟ್ಟದಲ್ಲಿಯೂ ಒಂದು ಸಂವತ್ಸರದಲ್ಲಿ, ಒಂದು ಸಿನಿಮಾ ಮಾಡಲು ಕಷ್ಟವೆನ್ನುವ ಅಭಿಪ್ರಾಯಗಳನ್ನು ಕೇಳಿದಾಗ ಶಂಕರ್ ನಾಗ್‌ಅವರಿಗೆ 24 ಗಂಟೆಗಳನ್ನು ಮೀರಿದ ಸಮಯವಿತ್ತೇ ಎಂದು ಅಚ್ಚರಿಯಾಗುತ್ತದೆ. ಬಹುಶಃ ಸಮಯವೇನಾದರೂ ವ್ಯಕ್ತಿಯಾಗಿದ್ದರೆ, ಅವರ ವ್ಯಕ್ತಿತ್ವಕ್ಕೊಂದು ಸಾವಿರ ಸಲಾಮನ್ನು ಸಲ್ಲಿಸುತ್ತಿತ್ತೋ ಏನೋ. ಚಿತ್ರ ಜಗತ್ತಿನಲ್ಲಿ ಶಂಕರ್ ನಾಗ್ ahead of the times ವ್ಯಕ್ತಿ. ಅದಕ್ಕೆ ಸಾಕ್ಷಿ ‘ಆಕ್ಸಿಡೆಂಟ್’ ಚಿತ್ರ.

ವಸಂತ ಮೊಕಾಶಿಯವರ ಕಥೆಯನ್ನು, ನೈಜತೆಯ ವರ್ಣವ ಬಳಸಿ ಭಾವ ಪೂರ್ಣ ಚಿತ್ರವಾಗಿ ಬಿಡಿಸಿದ ಪರಿಯೇ ಅತ್ಯಮೋಘ. ಸಂಗೀತ ನಿರ್ದೇಶಕ ಇಳಯರಾಜರಾದರೂ ಚಿತ್ರದಲ್ಲಿ ಒಂದೇ ಒಂದು ಪರಿಪೂರ್ಣ ಹಾಡಿನ ಬಳಕೆಯಿಲ್ಲ. ಆದರೆ, ರೀ ರೆಕಾರ್ಡಿಂಗ್‌ನಲ್ಲಿ ಬಳಸಿದ ಆಂಗ್ಲ ಹಾಡಿನ ತುಣುಕುಗಳು, ವೈವಿಧ್ಯಮಯ ನೈಜ ಸದ್ದುಗಳು, ಮೌನ -ಸಂಗೀತದ ಮಿಶ್ರಣ ಹೀಗೆ ಒಂದು ಅತ್ಯುತ್ತಮ ಹಿನ್ನೆಲೆ ಸಂಗೀತದ ಬಳಕೆಗೆ ಪ್ರಾತ್ಯಕ್ಷಿಕೆಯೇ ಈ ಚಿತ್ರ ಎಂದು ಹೇಳಬಹುದು. ಇನ್ನು ವ್ಯಸನದ ಪರಾಕಾಷ್ಟೆಯ ತೋರಿಸಿದ ರೀತಿ, ಪ್ರಚೋದನಕಾರಿಯಾಗಿಲ್ಲ. ಬದಲಾಗಿ, ಆ ಕತ್ತಲಿನೊಳಗೆ ಸಿಲುಕಿ ಬೆಳಕ ಮರೆವ ಬದುಕಿನ ಬಗ್ಗೆ ರೇಜಿಗೆ ಮತ್ತು ಆತಂಕ ಮೂಡಿಸುತ್ತದೆ. ದುಡ್ಡು, ಅಧಿಕಾರ ಶಾಹಿಗಳ ಅಹಂಕಾರ, ದರ್ಪದ ಬೆಂಕಿಗೆ ದಹಿಸುವ ಬಡವರ ಕನಸುಗಳು, ಸಾಮಾನ್ಯನಿಗೆ ಸದಾ ಸಿಗದೇ ಸಾಗುವ ನ್ಯಾಯ ದೇವತೆ, ಕೊನೆಗೆ ವಿಧಿಯಾಟವೆಂಬ ಚಕ್ರವ್ಯೂಹಕ್ಕೆ ಸಿಲುಕುವ ಜೀವನ ಹೀಗೆ ತಿರುವುಗಳೇ ತುಂಬಿದ ರಸ್ತೆಯ ಮೇಲಿನ ಪಯಣದ ಸೆರೆ ಹಿಡಿಯುವಿಕೆಯೇ ಈ ಚಿತ್ರ. ಅತಿರಂಜಿತ ಹೊಡೆದಾಟ, ಹೀರೋಯಿನ್, ಪ್ರೀತಿ-ಪ್ರೇಮವೆಂಬ ಮರ ಸುತ್ತುವಿಕೆಯೂ ಇಲ್ಲದೆ ಪತ್ರಿಕೆಗಳಲ್ಲಿ ವರದಿಯಾಗುವ ಸಂಗತಿಯೊಂದರ ಹಿಂದಿನ ಸತ್ಯವನ್ನು ಹುಡುಕುವ ಸಾಮಾನ್ಯರ ಕಥೆಯಿದು. ಬದುಕೆಂಬುದು ಒಂದು ವೃತ್ತಕಾರದ ಪರಿಧಿಯ ಪಯಣ. ಮೇಲಿದ್ದವ ಕೆಳಗೆ, ಕೆಳಗಿರುವಾತ ಮೇಲೆ ಸಾಗುತ್ತಲೇ ಇರುತ್ತಾರೆ. ಆದಿ ಮತ್ತು ಅಂತ್ಯದ ಬಿಂದು ಸಂಗಮಗೊಳ್ಳುತ್ತದೆ. ನಮ್ಮ ತಪ್ಪು ಸರಿಗಳ ಲೆಕ್ಕಾಚಾರ, ಬಾಕಿ ಚುಕ್ತಾ ಎಲ್ಲವೂ ನಡೆಯುತ್ತಲೇ ಇರುತ್ತದೆ ಎಂದು ಸಾದೃಶ್ಯಗೊಳಿಸುವ ಚಿತ್ರವೇ ಆಕ್ಸಿಡೆಂಟ್.

ಇಲ್ಲಿ ತನಿಖಾ ಪತ್ರಕರ್ತನಾಗಿ ಶಂಕರನಾಗ್‌ರದ್ದು ಮನೋಜ್ಞ ಅಭಿನಯ. ಧರ್ಮಾಧಿಕಾರಿಯಾಗಿ ಅನಂತನಾಗ್ ಪಾತ್ರಕ್ಕೊಂದು ಮೆರುಗು. ಉಳಿದಂತೆ ಅರುಂಧತಿ ನಾಗ್, ರಮೇಶ್ ಭಟ್, ಟಿ ಎಸ್ ನಾಗಾಭರಣ ಎಲ್ಲರೂ ಪಾತ್ರದೊಳು ಜೀವಿಸಿದ್ದಾರೆ. ನಿರ್ದೇಶಕನಾಗಿ ಶಂಕರ್ ನಾಗ್ ಕಾಲಗಳ ಸರಹದ್ದು ಮೀರಿ ಎಲ್ಲರಿಗೂ ಸ್ಪೂರ್ತಿ. ಚಿತ್ರದ ಗಲ್ಲಾ ಪೆಟ್ಟಿಗೆಯ ಸೋಲು ಗೆಲುವಿನ ಚಿಂತನೆಯಿಂದಾಚೆ ಸಮಾಜದ ನಡುವೆ ತಣ್ಣಗೆ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯಗಳಿಗೆ ಮಸಾಲೆಯ ಮಿಶ್ರಣವಿಲ್ಲದೆ ದರ್ಪಣ ಹಿಡಿವ ಈ ಸುಂದರ ಪ್ರಯತ್ನ ಇಂದಿನ ಕಾಲಘಟ್ಟದ ಸಿನಿಮಾಗಳಿಗೆ ಮಾದರಿ.

ಮುಗಿಸುವ ಮುನ್ನ :
ಜಯಂತ ಕಾಯ್ಕಿಣಿಯವರ ಹಾಡಿನ ಸಾಲೊಂದಿದೆ ‘ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ, ಬಡವನ ಕಣ್ಣಲಿ ಬೆಳಕಾದರೆ ಅದು ಪ್ರೇಮವೇ’ ಎಂದು.

ಬದುಕು ಇರುವುದು ಪ್ರೇಮದ ದೀಪ ಹಚ್ಚಲು. ದೌರ್ಜನ್ಯದ ಜ್ವಾಲೆಯನ್ನಲ್ಲ. ದುಡ್ಡು, ಅಧಿಕಾರ ಎಂಬ ಭೋಗ ಭಾಗ್ಯಗಳು ನೀರ ಮೇಲಿನ ಗುಳ್ಳೆ, ಮಳೆಯ ಆಸು ಪಾಸಿನಲ್ಲಿ ಪ್ರತ್ಯಕ್ಷವಾಗುವ ಕಾಮನಬಿಲ್ಲು ಅಷ್ಟೇ. ಇವೆಲ್ಲವನ್ನೂ ಮೀರಿ ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವನಮ್ಮವನೆಂದಿನಿಸಯ್ಯಾ’ ಎಂಬ ಬಸವಣ್ಣರ ವಚನದಂತೆ ಬದುಕಬೇಕಿದೆ ಕೈಗಳು ಬೆಸೆದ ಸಮಾಜವ ನಿರ್ಮಿಸಲು.