ಗಟ್ಟಿಯವರು ಕಾದಂಬರಿ ಬರೆಯುವಾಗ ನವ್ಯ ತನ್ನ ಉತ್ತುಂಗದಲ್ಲಿ ಇತ್ತು. ತೇಜಸ್ವಿ, ಆಲನಹಳ್ಳಿ ಶ್ರೀ ಕೃಷ್ಣ, ಅಡಿಗರು, ಅನಂತಮೂರ್ತಿ ಇವರೆಲ್ಲರೂ ತಮ್ಮ ವಿಶಿಷ್ಟ ಬಗೆಯ ಬರಹಗಳಿಂದ ಕನ್ನಡ ಸಾಹಿತ್ಯಲೋಕವನ್ನು ರಂಜನೆಯಿಂದ ವೈಚಾರಿಕತೆಯೆಡೆಗೆ ತೆಗೆದುಕೊಂಡು ಹೋಗಿದ್ದರು. ಇವುಗಳ ಮಧ್ಯೆ ಗಟ್ಟಿಯವರ ಬರಹ ಈ ಯಾವ ಚಳುವಳಿಗಳ ಅಥವಾ ಪಂಥಗಳಿಗೆ ಸೇರಲಿಲ್ಲ. ಯಾವ ಚಳುವಳಿಗಳಿಗೂ ಮೇಲ್ಪದರದ ಮಾದರಿಗಳಿಗೂ ಅಂಟಿಕೊಳ್ಳದೇ ತಮ್ಮದೇ ಆದ ಶೈಲಿಯನ್ನು ಗಟ್ಟಿಯಾಗಿಯೇ ನಿರೂಪಿಸಿಕೊಂಡರು.
ಇತ್ತೀಚೆಗೆ ತೀರಿಕೊಂಡ ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿಯವರ ಸಾಹಿತ್ಯದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ

“ಪುರೋಹಿತಶಾಹಿಯದ್ದು ಎಲ್ಲ ಕಾಲಕ್ಕೂ ಒಂದೇ ದನಿ. ಪುರೋಹಿತಶಾಹಿಗೂ ಪೂರ್ವಗ್ರಹಗಳಿಗೂ ಬಿಡಿಸಲಾಗದ ನಂಟು. ಇದರ ಜೀವ ಅದರ ಕತ್ತಿನಲ್ಲಿ; ಅದರ ಜೀವ ಇದರ ಕತ್ತಿನಲ್ಲಿ. ಜಗತ್ತಿನ ಇತಿಹಾಸದಲ್ಲಿ ಇದಕ್ಕೆ ನೂರಾರು ನಿದರ್ಶನಗಳನ್ನು ಕಾಣಬಹುದು” ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಕೆ. ಟಿ. ಗಟ್ಟಿಯವರ “ಅಬ್ರಾಹ್ಮಣ” ಕಾದಂಬರಿಯಲ್ಲಿ ಲೇಖಕರೇ ಆಡುವ ಮಾತುಗಳು ಇವು. ಸುಮಾರು ನಲವತ್ತೈದಕ್ಕೂ ಮೀರಿ ಕಾದಂಬರಿಗಳನ್ನು ಬೇರೆ ಅನೇಕ ವೈವಿಧ್ಯಮಯ ಕೃತಿಗಳನ್ನು ರಚಿಸಿದ ಗಟ್ಟಿಯವರು ವಿಮರ್ಶಕರ ವಲಯದಲ್ಲಿ ಅಷ್ಟೇನು ಗುರುತಿಸಿಕೊಳ್ಳದೇ ಹೋದುದು ಮಾತ್ರ ವಿಮರ್ಶೆ ಎನ್ನುವ ಸಾಹಿತ್ಯದ ಪ್ರಾಕಾರದ ದೌರ್ಬಲ್ಯವಾಗಿದೆ ಎನ್ನಬಹುದು. ಇದಕ್ಕೆ ಕಾರಣ ಅವರು ಧಾರಾವಾಹಿಗಳ ಲೇಖಕರಾಗಿದ್ದರು ಎನ್ನುವ ಕ್ಷೀಣ ಧ್ವನಿಯೊಂದು ಆಗಾಗ ಕೆಲ ಮೂಲೆಯಿಂದ ಕೇಳಿಬರುತ್ತಿತ್ತು.

ಗಟ್ಟಿಯವರು ಯಾವುದೇ ಇಸಂಗೆ ಒಳಗಾದ ಕಥೆಗಾರರಾಗಿರಲಿಲ್ಲ. ಪಂಥವನ್ನು ಮೀರಿದ ಸಾಹಿತಿಯಾಗಿದ್ದರು. ಜಯಂತ ಕಾಯ್ಕಿಣಿ ಅವರ ಸಾಹಿತ್ಯದ ಕುರಿತು “ವ್ಯಾಖ್ಯಾನಗಳನ್ನು ಮೀರುವ ಅಪರೂಪದ ಆಖ್ಯಾನ” (ಇತಿಹಾಸದ ಮೊಗಸಾಲೆ)” ಎಂದು ಬಣ್ಣಿಸುತ್ತಾರೆ. ಅವರ ಬರಹಗಳಲ್ಲಿ ಆಕ್ರೋಶವಿತ್ತು. ಆದರೆ ಅದು ಕಾಡ್ಗಿಚ್ಚಾಗಿರಲಿಲ್ಲ. “ನನ್ನ ಆತ್ಮ ಕಥೆ” ಎನ್ನುವ ಅವರ ಕಾದಂಬರಿಯಲ್ಲಿ ಅವರು ತಾವು ನಿಂತ ನಿಲುವನ್ನು ಸ್ಪಷ್ಟಪಡಿಸುವುದನ್ನು ಕಾಣಬಹುದು. ಗಟ್ಟಿಯವರ ಕಾದಂಬರಿಗಳನ್ನು ಓದಿದಾಗ ನನಗನಿಸಿದ್ದು ಅವರೊಳಗೆ ಓರ್ವ Rationalist ಇದ್ದಾನೆ. ವಿಚಾರವಾದಿ ಎನ್ನುವ ವರ್ತಮಾನದ ಅರ್ಥದಲ್ಲಿ ಈ ಮಾತುಗಳನ್ನು ನಾನು ಹೇಳುವುದಿಲ್ಲ. ಅದಕ್ಕಿಂತಲೂ ಮಿಗಿಲಾಗಿ ಅವರ ಬರಹಗಳಲ್ಲಿ ವಿವೇಚನಾಯುಕ್ತ ಆಲೋಚನೆಗಳನ್ನು ಕಾಣಬಹುದು. ವೈಜ್ಞಾನಿಕ ಮನೋಧರ್ಮವನ್ನು ಅವರು ಇಷ್ಟಪಡುತ್ತಿದ್ದರು. ಅದನ್ನು ಅವರ “ಪರಿಧಿ” ಕಾದಂಬರಿಯಲ್ಲಿ ಗಮನಿಸಬಹುದು.

ದಿಗಂಬರ ಈ ಕಥೆಯ ನಾಯಕ. ಬದುಕೆನ್ನುವ ಪರಿಧಿಯಲ್ಲಿ ಆತ ಬಂಧಿಯಾಗಿದ್ದಾನೆ ಅಥವಾ ಸಿಕ್ಕುಬಿದ್ದಿದ್ದಾನೆ. ದಿಗಂಬರ ಎಂದರೆ ಏನೂ ಇಲ್ಲ ಅಂತಲೂ ಅರ್ಥ. ಪರಿಧಿ ಎನ್ನುವುದು ದಿಗಂಬರತ್ವಕ್ಕೆ ವಿರುದ್ಧವಾಗಿರುವಂತದ್ದು. ಅದು ಒಂದು ಚೌಕಟ್ಟು. ಕಣ್ಣಿಗೆ ಕಾಣಿಸದ ಆದರೆ ಬಂಧನದಲ್ಲಿ ಸಿಲುಕಿದ ಬದುಕು ದಿಗಂಬರನ ಪರಿಧಿ ಆಗಿದೆ. ಅದನ್ನೇ ದಿಕ್ಕಿಲ್ಲದವ ಅಲ್ಲ, ದಿಕ್ಕುಗಳಲ್ಲಿ ಸಿಕ್ಕು ಬಿದ್ದವ ಎಂದರೂ ಆದೀತು. ಬದುಕು ಮತ್ತು ಚಿಂತನೆಗಳು ವ್ಯಕ್ತಿಯ ಸುತ್ತ ಕಟ್ಟಿಕೊಂಡ ಪರಿಧಿಗಳು. ಪರಿಧಿ ಎಂದರೆ ಅದಕ್ಕೊಂದು ಕೇಂದ್ರವಿರಲೇಬೇಕು. ಕೇಂದ್ರವೆಂದರೆ ಒಂದು ಗೂಟಕ್ಕೆ ಸಿಕ್ಕಿರುವ ರಂಧ್ರದಿಂದ ಕೂಡಿರುತ್ತದೆ. ಇಲ್ಲಿ ಭೂತ ವರ್ತಮಾನ ಮತ್ತು ಭವಿಷತ್ತು ಎಲ್ಲವೂ ಪರಿಧಿಯೊಳಗೇ ಗಿರಕಿ ಹೊಡೆಯುತ್ತಿರುತ್ತದೆ. ಕೇಂದ್ರಕ್ಕೆ ಹೊಡೆದ ಗೂಟ ಭೂತವಾದರೆ ಸುತ್ತ ತಿರುಗುವ ಕ್ರಿಯೆ ವರ್ತಮಾನ. ಚಿಂತನೆಗಳು ಬೆಳೆದಂತೆ ಆತನ ಪರಿಧಿ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಈ ಚಿಂತನೆಯೇ ಭವಿಷತ್ತಿನ ಆಲೋಚನೆ. ಮಧ್ಯಮ ವರ್ಗದ ದಿಗಂಬರನಿಗೆ ಕಚೇರಿಗೆ ಹೋಗಬೇಕಾಗಿದೆ. ಕಾರಣಾಂತರದಿಂದ ತಡವಾಗುತ್ತದೆ. ಹೋಗುವ ಮತ್ತು ಅದಕ್ಕೆ ತಡೆಯಾಗುವ ಮಧ್ಯದಲ್ಲಿ ಬರುವ ಆಲೋಚನೆಗಳು ಆತನಿಗೆ ಕಿರಿಕಿರಿ ಉಂಟುಮಾಡುತ್ತವೆ. ಮಾನಸಿಕ ಶಾಂತಿ ಕಳೆದುಕೊಳ್ಳುತ್ತಾನೆ. ಕಾರಣ ಕಚೇರಿಯಲ್ಲಿ ತನಗೆ ವಹಿಸಿರುವ ಕೆಲಸಗಳ ವಿಲೇವಾರಿ ತ್ವರಿತದಲ್ಲಿ ಆಗಬೇಕೆನ್ನುವ ಒತ್ತಡ. ಕದಡಿದ ಮನಸ್ಸಿಗೆ ಆತ ಬಯಸುವುದು ಶಾಂತಿಯನ್ನು. ಶಾಂತಿಯ ಅನ್ವೇಷಣೆಯೇ ಕಾದಂಬರಿಯ ವಸ್ತುವಾಗಿ ಬದಲಾಗುತ್ತದೆ. ಆತ ವರ್ತಮಾನದಲ್ಲಿ ಜೀವಿಸಿದ್ದರೂ ವರ್ತಮಾನ ಆತನಿಗೆ ನಿಲುಕುವುದಿಲ್ಲ. ಆದರೆ ಭೂತ ಮತ್ತು ಭವಿಷತ್ತು ಅಂದರೆ ಏನೆಂದೂ ತಿಳಿಯುವುದಿಲ್ಲ. ಜೀವಿಸುವುದು ಎಂದರೆ ಅದು ವರ್ತಮಾನ. ನಿನ್ನೆ ಎನ್ನುವುದು ಇಂದಿನ ಸಾವು. ನಿನ್ನೆಯೆಂತೆ ಇರಬೇಕು ಎಂತಾದರೆ ಅದು ಸಾವು. ನಾಳೆ ಹೇಗಿರಬೇಕೆಂದು ಅದನ್ನು ಇಂದೇ ಜೀವಿಸಿದರೆ ಅದು ನಾಳೆಯಾಗಿರುವುದಿಲ್ಲ, ನಿನ್ನೆಯಂತೆಯೇ ಇರುವುದಿಲ್ಲ. ಸತ್ತಿರುವುದು ಎಂದರೆ ಭೂತಕಾಲವನ್ನು ಜೀವಿಸುವುದು, ಜೀವಿಸಿರುವುದು ಎಂದರೆ ನಾಳೆಯನ್ನು ಇಂದೇ ಅಂದರೆ ವರ್ತಮಾನಕ್ಕೆ ತರುವುದು. ಒಟ್ಟಾರೆಯಾಗಿ ದಿಗಂಬರನಿಗೆ ಕಾಲ ಗೋಜಲಾಗಿ ದಿಕ್ಕು ಎತ್ತ ಇದೆ ಎನ್ನುವುದನ್ನು ತಿಳಿಯದೆ ಹುಡುಕಾಟ ನಡೆಸುತ್ತಾನೆ. ಕಾಲಕ್ಕೆ ಅವನೇ ಕಂಡುಕೊಳ್ಳುವ ಸತ್ಯ “ನಿನ್ನೆಯಂತೆ ಇಂದೂ ಇರುವುದಾದರೆ ಅದು ಸಾವು. ನಾಳೆ ಹೇಗಿರಬೇಕೆಂದು ನಿರ್ಧರಿಸಿ ಅದನ್ನು ನಾಳೆಗಿಡದೇ ಇಂದೇ ಜೀವಿಸಿದರೆ ಅದು ನಾಳೆಯಂತಿರುವುದಿಲ್ಲ. ನಿನ್ನೆಯಂತೆಯೂ ಇರುವುದಿಲ್ಲ. ಅದೇ ಜೀವನ, ಅದೇ ಜೀವಿಸುವಿಕೆ” ಎಂದು ಕಾಲಕ್ಕೆ ಕೊಡುವ ವ್ಯಾಖ್ಯಾನ ಬದುಕಿನ ಸಂಕೀರ್ಣತೆಯನ್ನು ಸೂಚಿಸುತ್ತದೆ. ಜೊತೆಗೆ ಸಾವು ಮತ್ತು ಜೀವನದ ವ್ಯಾಖ್ಯಾನವೂ ಹೌದು.

ಅವರ ಕಾದಂಬರಿ “ಪರಿಧಿ” ದಿಗಂಬರನನ್ನು ಕೇಂದ್ರೀಕರಿಸಿದ ಕಥೆಯಾದರೂ ಅದರಲ್ಲಿ ಬರುವ ಗಂಡನಿಂದ ಪರಿತ್ಯಕ್ತೆಯಾದ ರೂನಿ, ಅನಿಲ ಸಾಹು, ಅಗರವಾಲನ ಜಗಳದ ಸಂಸಾರ ಇವೆಲ್ಲವನ್ನು ಗಮನಿಸಿದ ನಂತರ ಮದುವೆಯಾಗಿ ತನ್ನದೆನ್ನುವ ಸಂಸಾರವನ್ನು ಯಾಕೆ ಕಟ್ಟಿಕೊಳ್ಳಬೇಕೆನ್ನುವ ಪ್ರಶ್ನೆ ದಿಗಂಬರನಲ್ಲಿ ಎದುರಾಗುತ್ತದೆ. ರೂನಿಯ ತಾಯಿ ತನ್ನ ಅಳಿಯನ ಕುರಿತು ನಿರುಮ್ಮಳವಾಗಿ “ಅಂಗಿ ಬದಲಾಯಿಸುವಂತೆ ಹೆಂಡತಿ ಬದಲಾಯಿಸುವ ಮನುಷ್ಯ” ಎನ್ನುವಾಗ, ಅಂಜು ತನ್ನ ಗಂಡ ಅನಿಲಸಾಹುವಿನ ತಂದೆಯ ಜೊತೆಗಿರುವುದು ಇವೆಲ್ಲವೂ ದಾಂಪತ್ಯದ ವಿವಿಧ ಮಜಲುಗಳನ್ನು ತೆರೆದಿಡಿಸುತ್ತದೆ. ಮನುಷ್ಯನ ಸೃಷ್ಟಿಯೇ ಲೈಂಗಿಕ ಗೊಂದಲದಲ್ಲಿ ಹೊರತೂ ಉದ್ದೇಶಪೂರ್ವಕವಾಗಿಯಲ್ಲ ಎನ್ನುವ ಮಾತುಗಳ ಮೂಲಕ ಜೀವನದ ಹುಡುಕಾಟ ಮತ್ತು ಗುರಿ ಸಿಗದ ಅಸ್ಪಷ್ಟತೆ ಎರಡನ್ನೂ ಕಾಣಬಹುದು. ಆತನ ಸುತ್ತಲಿನ ಎಲ್ಲರ ಬದುಕೂ ಅಸಂಗತೆಯಿಂದ ಕೂಡಿರುವುದನ್ನು ಕಂಡಾಗ ಅದನ್ನೇ ಒಂದು ಕಾದಂಬರಿಯನ್ನಾಗಿಸಲು ಬಯಸುತ್ತಾನೆ. ಅದಕ್ಕೆ ಬೇಕಾಗಿರುವ ವಸ್ತುವನ್ನು ತಡಕಾಡುವಾಗ ಆತನಿಗೆ ಹೊಳೆಯುವುದೇ “ಕೊಲ್ಲುವುದು”. ಇದು ಬದುಕಿನ ಅಸಂಗತೆಯನ್ನು ಕೊಲ್ಲುವ ಆಲೋಚನೆಯೂ ಹೌದು; ಮದುವೆ ಎನ್ನುವ ನಾಗರಿಕ ಬದುಕಿನ ರೂಢಿಗೆ ಒಂದು ಅಂತ್ಯವೂ ಆಗಬೇಕು ಎನ್ನುವದಾಗಿದೆ.

ದಿಗಂಬರನಂತಹ ಸಾತ್ವಿಕನಾಗಿ ತೋರುವ ವ್ಯಕ್ತಿಯ ಒಳಗಡೆ ಕೊಲ್ಲುವಿಕೆಯ ಹಿಂಸಾರತಿ ಅಡಗಿರುವುದೇ ಆಧುನಿಕ ಬದುಕಿನ ಅಸಂಗತಿಯಾಗಿದೆ. ಹಣದುಬ್ಬರದ ನಾಗರಿಕ ಬದುಕಿನಲ್ಲಿ ಮದುವೆಯಾಗುವುದು ಎಂದರೆ ಪ್ಲಾಟು, ಕುಟುಂಬ ಇವನ್ನೆಲ್ಲ ಕಟ್ಟಿಕೊಳ್ಳಲು ಹೋರಾಡುವುದು. ಅಂತಿಮವಾಗಿ ಅದರಲ್ಲಿ ಸಾಧಿಸುವುದು ಗಂಡು ಹೆಣ್ಣುಗಳ ಮಧ್ಯದ ಲೈಂಗಿಕತೆ, ಅದರ ರೂಪವಾಗಿ ಮತ್ತೊಂದು ಜನನ, ಮತ್ತೆ ಸಂಸಾರ ಚಕ್ರದಲ್ಲಿ ಸಿಲುಕುವುದು. ಇದಕ್ಕಾಗಿ ಮದುವೆ ಯಾಕೆ ಬೇಕು, ಒಬ್ಬರಿಗೊಬ್ಬರು ಭೇಟಿಯಾಗುವುದು, ಬೇಕಾದಷ್ಟು ಹೊತ್ತು ಒಟ್ಟಿಗಿರೋದು, ಮತ್ತೆ ಅರವರ ಗೂಡಿಗೆ ಹೋಗುವುದು” ಎನ್ನುವ ಮಾತುಗಳಲ್ಲಿ ಅಸಂಗತ ಬದುಕಿನ ಪರಿಧಿಯ ದಾಟುವಿಕೆಯನ್ನು ಗುರುತಿಸಬಹುದಾಗಿದೆ. ಹಾಗಾಗಿಯೇ ತಾಯಿಯ ಸಾವಿನಲ್ಲಿಯೂ ಅಂತ್ಯಕ್ರಿಯೆ, ಆತ್ಮಕ್ಕೆ ಶಾಂತಿ ಮತ್ತು ದೇವರು ಇವೆಲ್ಲವೂ ಮಾನಸಿಕ ಭ್ರಮೆ ಎನ್ನುವ ದಿಗಂಬರನಿಗೆ ಪ್ರಪಂಚದಲಿ ಸುಖ ಎನ್ನುವುದಿಲ್ಲ ಇರುವುದರಲ್ಲಿ ಸುಖ ಎನ್ನುವ ಮಾನಸಿಕ ಭ್ರಮೆಯಲ್ಲಿ ಬದುಕಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಕೊನೆಗೂ ಆತ ಪರಿಧಿಯ ಮಿತಿಯನ್ನು ಮೀರಿ ಬದುಕುವುದು ಆತನ ಗೆಳೆಯ ಸುಧೀರ ಲೈಂಗಿಕತೆಯೇ ಜೀವನದ ಅಂತ್ಯ ಎಂದಾಗ ಅದನ್ನು ಒಪ್ಪದೇ “ಎಲ್ಲಾ ಕ್ರಿಯೆಗಳ ಮೊತ್ತವೇ ಜೀವನ. ಅಲ್ಲದಿರುವುದು ಮರಣ” ಎನ್ನುವ ಮೂಲಕ ಜೀವನದ ಪರಿಧಿಯನ್ನು ಕಲ್ಪಿಸಿಕೊಳ್ಳುವುದು ಮತ್ತು ಅದನ್ನು ವಿಸ್ತರಿಸುವುದರಲ್ಲಿ ದಿಗಂಬರನ ಚಿಂತನೆಗಳನ್ನು ಓದುಗರ ಮುಂದಿರಿಸುತ್ತಾರೆ. ಜಾಗತಿಕರಣದಲ್ಲಿ ಕುಟುಂಬದ ನೆಲೆಯನ್ನು ಕಳೆದುಕೊಳ್ಳುವುದು ಸಹಜಕ್ರಿಯೆ ಎನ್ನುತ್ತಾರೆ.

ಗಟ್ಟಿಯವರ ಕಾದಂಬರಿಯಲ್ಲಿ ತನ್ನತನದ ಹುಡುಕಾಟವನ್ನು ಕಾಣಬಹುದು. ಅಬ್ರಾಹ್ಮಣದಲ್ಲಿ ಜಗದೀಶ ಭಟ್ಟ ದೆಹಲಿಗೆ ಹೋಗಿ ತತ್ವಶಾಸ್ತ್ರದಲ್ಲಿ ಸ್ನಾತಕೋತರ ಪದವಿಯನ್ನು ಪಡೆದು ಉಡುಪಿಯಲ್ಲಿ ಅಧ್ಯಾಪಕನಾಗುವಾಗ ತನ್ನ ಬ್ರಾಹ್ಮಣೀಯ ಉಪನಾಮವನ್ನು ಕೊಡವಿಕೊಂಡಿದ್ದ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿ ಬ್ರಾಹ್ಮಣಿಕೆಯನ್ನು ಕೊಡವಿಕೊಳ್ಳುವ, ಆದರೆ ಅದೇ ಜಾತಿಯಲ್ಲಿರುವ ಜಾತಿ ಬಂಧುಗಳ ನಡುವಿನ ಬಾಂಧವ್ಯವನ್ನು ಏಗುತ್ತಾ ರೂಢಿಸಿಕೊಳ್ಳುವ ಸವಾಲಿನಲ್ಲಿ ಜಗದೀಶ ತೊಳಲಾಡುತ್ತಾನೆ. ಮುಂದಿನ ಜನ್ಮದಲ್ಲಿ ಮರವೋ ಅರೇಬಿಯಾದ ಮರುಭೂಮಿಯೋ ಎಲ್ಲಾದರೂ ಹುಟ್ಟುವೆ, ಆದರೆ ಬ್ರಾಹ್ಮಣರ ಜಾತಿಯಲ್ಲಿ ಮಾತ್ರ ಬೇಡ ಎನ್ನುವಲ್ಲಿ ಕಂದಾಚಾರದ ಕುರಿತು ರೋಷವಿದೆ. ಪುರೋಹಿತ ಶಾಹಿಗಳ ಕುರಿತು ಅವರ ಟೀಕೆ ಕೇವಲ ಬ್ರಾಹ್ಮಣರಿಗೋ ಅಥವಾ ಹಿಂದುಗಳಿಗೆ ಮಾತ್ರ ಸೀಮಿತವಾದುದಲ್ಲ. ಪಾಶ್ಚಾತ್ಯರಲ್ಲಿ ಮತ್ತು ಇಸ್ಲಾಂನ ಪುರೋಹಿತ ಶಾಹಿಯನ್ನೂ ಅವರು ಅಷ್ಟೇ ಕಟುವಾಗಿ ಟೀಕಿಸುತ್ತಿದ್ದರು. ಇವತ್ತಿಗೂ ಭೂಮಿ ಚಪ್ಪಟೆಯಾಗಿದೆ ಎಂದು ನಂಬುವ ಸೆಮೆಟಿಕ್ ಧರ್ಮದ ಪುರೋಹಿತಶಾಹಿಯ ವಿಷಯವನ್ನೂ ಅಷ್ಟೇ ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. ಭೂಮಿ ಗೋಲಾಕಾರವಾಗಿದೆ ಎಂದ ಗೆಲಿಲಿಯೋಗೆ ವಿಧಿಸಿದ ಶಿಕ್ಷೆ ಮತ್ತು ಜೋನ್ ಆಫ್ ಆರ್ಕ್ ಎನ್ನುವವಳನ್ನು ಜೀವಂತ ಸುಟ್ಟ ವಿಷಯವನ್ನು ಹೇಳುತ್ತಾ ಭಾರತದ ವಿಷಯಕ್ಕೆ ಬಂದಾಗ ಆರ್ಯಭಟ ಭೂಮಿ ಗೋಲಾಕಾರದಲ್ಲಿದೆ ಎನ್ನುವುದನ್ನು ಭಾರತೀಯರು ಒಪ್ಪಿಕೊಂಡಿರುವುದನ್ನು ಅಷ್ಟೇ ನಿರ್ಭಿಡೆಯಿಂದ ಹೇಳುತ್ತಾರೆ.

ಅಬ್ರಾಹ್ಮಣದಲ್ಲಿ ಶಂಭು ಅಂಗಾರನ ಮಗಳನ್ನು ಬಸಿರು ಮಾಡಿದಾಗ ಅಲ್ಲಿಗೆ ಗಲಾಟೆ ಮಾಡಲು ಬಂದವನನ್ನು ಹಣದವನ್ನು ಎಸೆದು ಹೇಗೆ ಸುಮ್ಮನಿರಿಸಲಾಯಿತು ಎನ್ನುವದರ ಕುರಿತು ಅವರಿಗೆ ಅಸಹನೆ ಇದೆ. ಇದನ್ನು ಜಗದೀಶನ ಮೂಲಕ ಅವರು ಹೇಳುತ್ತಾರೆ. ಕೆ. ಟಿ. ಗಟ್ಟಿಯವರು ಧಾರಾವಾಹಿಯ ಮೂಲಕ ಪ್ರಸಿದ್ಧಿ ಪಡೆದಿರಬಹುದು. ಆದರೆ ಧಾರವಾಹಿಗಳ ಪಥವನ್ನು ಬದಲಿಸಿದ ಲೇಖಕ ಎನ್ನಬಹುದಾಗಿದೆ. ಅದು ತನಕ ಧಾರಾವಾಹಿಗಳು ಎಂದರೆ ಮಹಿಳೆಯನ್ನು ಕೇಂದ್ರೀಕೃತವಾದ ಕುಟುಂಬ ವ್ಯವಸ್ಥೆ, ಹುರುಳಿಕಾಯಿಯ ಉಪ್ಪಿಟ್ಟಿಗೆ ಘಮಘಮಿಸುವ ತುಪ್ಪದ ಪರಿಮಳದಲ್ಲಿ ಮುಳುಗಿದ್ದ ಪ್ರಪಂಚವನ್ನು ವೈಚಾರಿಕತೆಯತ್ತ ತೆಗೆದುಕೊಂಡು ಹೋದವರು ಇವರು. ಮೊದಲ ಕಾದಂಬರಿ “ಶಬ್ಧಗಳು” ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದಾಗ ಓದುಗರನ್ನು ಏಕತಾನತೆಯಿಂದ ತಪ್ಪಿಸಿ ಕೇವಲ ಹೆಂಗಸರು ಓದುವ ಪತ್ರಿಕೆಯನ್ನು ಟಿಪಾಯಿಯ ಮೇಲೆ ಇಟ್ಟು ಪ್ರದರ್ಶಿಸುವಂತೆ ಬದಲಾಯಿಸಿದವರು. ಸುಧಾ ವಾರಪತ್ರಿಕೆಯ ಪ್ರಸಾರ ಓರ್ವ ಕಾದಂಬರಿಕಾರನಿಂದ ಹೆಚ್ಚಳವನ್ನು ಕಂಡ ಮೊದಲ ಸಂಗತಿ ಅದು.

ದಿಗಂಬರನಂತಹ ಸಾತ್ವಿಕನಾಗಿ ತೋರುವ ವ್ಯಕ್ತಿಯ ಒಳಗಡೆ ಕೊಲ್ಲುವಿಕೆಯ ಹಿಂಸಾರತಿ ಅಡಗಿರುವುದೇ ಆಧುನಿಕ ಬದುಕಿನ ಅಸಂಗತಿಯಾಗಿದೆ. ಹಣದುಬ್ಬರದ ನಾಗರಿಕ ಬದುಕಿನಲ್ಲಿ ಮದುವೆಯಾಗುವುದು ಎಂದರೆ ಪ್ಲಾಟು, ಕುಟುಂಬ ಇವನ್ನೆಲ್ಲ ಕಟ್ಟಿಕೊಳ್ಳಲು ಹೋರಾಡುವುದು. ಅಂತಿಮವಾಗಿ ಅದರಲ್ಲಿ ಸಾಧಿಸುವುದು ಗಂಡು ಹೆಣ್ಣುಗಳ ಮಧ್ಯದ ಲೈಂಗಿಕತೆ, ಅದರ ರೂಪವಾಗಿ ಮತ್ತೊಂದು ಜನನ, ಮತ್ತೆ ಸಂಸಾರ ಚಕ್ರದಲ್ಲಿ ಸಿಲುಕುವುದು.

ಗಟ್ಟಿಯವರು ಕಾದಂಬರಿ ಬರೆಯುವಾಗ ನವ್ಯ ತನ್ನ ಉತ್ತುಂಗದಲ್ಲಿ ಇತ್ತು. ತೇಜಸ್ವಿ, ಆಲನಹಳ್ಳಿ ಶ್ರೀ ಕೃಷ್ಣ, ಅಡಿಗರು, ಅನಂತಮೂರ್ತಿ ಇವರೆಲ್ಲರೂ ತಮ್ಮ ವಿಶಿಷ್ಟ ಬಗೆಯ ಬರಹಗಳಿಂದ ಕನ್ನಡ ಸಾಹಿತ್ಯಲೋಕವನ್ನು ರಂಜನೆಯಿಂದ ವೈಚಾರಿಕತೆಯೆಡೆಗೆ ತೆಗೆದುಕೊಂಡು ಹೋಗಿದ್ದರು. ಇವುಗಳ ಮಧ್ಯೆ ಗಟ್ಟಿಯವರ ಬರಹ ಈ ಯಾವ ಚಳುವಳಿಗಳ ಅಥವಾ ಪಂಥಗಳಿಗೆ ಸೇರಲಿಲ್ಲ. ಯಾವ ಚಳುವಳಿಗಳಿಗೂ ಮೇಲ್ಪದರದ ಮಾದರಿಗಳಿಗೂ ಅಂಟಿಕೊಳ್ಳದೇ ತಮ್ಮದೇ ಆದ ಶೈಲಿಯನ್ನು ಗಟ್ಟಿಯಾಗಿಯೇ ನಿರೂಪಿಸಿಕೊಂಡರು. ತುಸು ಪತ್ತೇದಾರಿಕೆಯ ಅಂಶವನ್ನೂ ಒಳಗೊಂಡಿರುವುದರಿಂದ ವಾರದಿಂದ ವಾರಕ್ಕೆ ಕುತೂಹಲವನ್ನು ಹೆಚ್ಚಿಸುವತ್ತ ಸಾಗುವ ಕಥಾವಸ್ತುಗಳು ಮುಂದಿನ ಸಂಚಿಕೆಗಾಗಿ ಕಾಯುವಂತೆ ಮಾಡಿತ್ತಿದ್ದವು. ಹಾಗಂತ ಅವರು ಧಾರಾವಾಹಿಯಾಗಲಿ ಎಂದು ತನ್ನ ಕಾದಂಬರಿಯನ್ನು ಬರೆಯಲಿಲ್ಲ. ಅವರ ಮೊದಲ ಕಾದಂಬರಿ “ಶಬ್ಧಗಳು” ಸುಧಾದಲ್ಲಿ ಪ್ರಕಟವಾಗಿರುವುದು 1976 ರಲ್ಲಿ. ಆದರೆ ಅದನ್ನು ಅವರು ಬರೆದಿರುವುದು 1973 ರಲ್ಲಿ. ಸಾಹಿತ್ಯವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡುತ್ತಿದ್ದರು.

ಅವರ ಬಾಲ್ಯ ಗಡಿನಾಡು ಕಾಸರಗೋಡಿನಲ್ಲಿ. ಕಾಸರಗೋಡು ಯಕ್ಷಗಾನವನ್ನು ಉಸಿರಾಡಿಸುವ ಜಿಲ್ಲೆ. ಇಲ್ಲಿನ ಮಾತು ತುಳು, ಮತ್ತು ಮಳೆಯಾಳಿ. ಇವತ್ತಿಗೂ ಹಳ್ಳಿಯಲ್ಲಿನ ಅನೇಕ ಕಡೆ ಕನ್ನಡ ಬರುವುದಿಲ್ಲ. ಆದರೆ ಯಕ್ಷಗಾನದ ವಿಚಾರಕ್ಕೆ ಬಂದಾಗ ಜನಸಾಮಾನ್ಯರೂ ಸಹ ಕನ್ನಡವನ್ನು ಅರಿತು ರಾಮಾಯಣ ಮಹಾಭಾರತಗಳನ್ನು ಪಂಡಿತರಿಗಿಂತಲೂ ಚನ್ನಾಗಿ ವಿಮರ್ಶಿಸಬಲ್ಲವರು. ಇವರ ತಂದೆ ಧೂಮಪ್ಪ ಗಟ್ಟಿಯವರು ಕೃಷಿಕರಾಗಿದ್ದರೂ ಯಕ್ಷಗಾನ ಕಲೆಯ ಕುರಿತು ಆಸಕ್ತಿ ಹೊಂದಿದ್ದರು. ತಾಯಿ ಪರಮೇಶ್ವರಿ ತುಳು ಮಲಯಾಳಂನ ಪಾಡ್ದನಗಳನ್ನು ಹಾಡುತ್ತಿದ್ದರು. ಯಕ್ಷಗಾನ ಮತ್ತು ಭೂತ ಕೋಲಗಳು ಧಾರ್ಮಿಕ ರಿವಾಜುಗಳಲ್ಲದೇ ಅದು ಜನರಲ್ಲಿ ಮಣ್ಣಿನ ಸಂಸ್ಕೃತಿಯನ್ನು ಬೆಳೆಸುವ ಮಾಧ್ಯಮಗಳು. ಈ ದಟ್ಟ ಪ್ರಭಾವದಲ್ಲಿ ಬೆಳೆದವರು ಗಟ್ಟಿಯವರು.

ಇವರದ್ದು ಸ್ವತಂತ್ರ ಓದು. ಬಿ. ಎ. ಬಿ ಎಡ್ ಮುಗಿಸಿ ಶಿಕ್ಷಕರಾಗಿ, ನಂತರ ಖಾಸಗಿಯಾಗಿ ಇಂಗ್ಲೀಷ್‌ ಸ್ನಾತಕೋತ್ತರ ಪದವಿಯನ್ನು ಗಳಿಸಿ ಮಣಿಪಾಲದಲ್ಲಿ ಪ್ರಾಧ್ಯಾಪಕರಾದ ಮೇಲೆ ನಂತರ ಹಿಂದೆ ನೋಡಲಿಲ್ಲ. ಅಫ್ಘಾನಿಸ್ತಾನಕ್ಕೆ ಪ್ರಾಧ್ಯಾಪಕರಾಗಿ ಹೋಗುವ ಸಿದ್ಧತೆಯಲ್ಲಿದ್ದವರಿಗೆ ಅಲ್ಲಿನ ರಾಜಕೀಯ ವಿಪ್ಲವಗಳಿಂದ ತಡೆಯುಂಟಾದರೂ ನಂತರ ಅವರನ್ನು ಕರೆಯುವುದು ಇಥಿಯೋಪಿಯಾ. ಅಲ್ಲಿ 1982ರ ವರೆಗೆ ಇದ್ದು ವಾಪಾಸು ಭಾರತಕ್ಕೆ ಬಂದು ಉಜಿರೆಯಲ್ಲಿ ಕೃಷಿಕರಾಗಿ ತಮ್ಮದೇ ಆದ “ವನಸಿರಿಯಲ್ಲಿ” ತಣ್ಣಗೆ ಸಾಹಿತ್ಯದ ಕೃಷಿಯಲ್ಲಿ ತೊಡಗಿದರು. ಇಂಗ್ಲೀಷ ಸಾಹಿತ್ಯದಲ್ಲಿ ಎಚ್ ಜಿ ವೇಲ್ಸ್ ಇವರ ನೆಚ್ಚಿನ ಲೇಖಕ. ಆತ ತನ್ನಕಾದಂಬರಿಗಳಲ್ಲಿ ವಿಶಿಷ್ಠವಾದ ಪ್ರಯೋಗಗಳನ್ನು ಮಾಡಿದ. ತನ್ನ ಕಾದಂಬರಿಗಳನ್ನು “ಅದ್ಭುತರಮ್ಯ ಕಾಲ್ಪನಿಕಗಳು” “ವ್ಯಕ್ತಿ ಪ್ರಧಾನ ಹಾಸ್ಯಗಳು” “ಚರ್ಚೆಗಳು” ಎನ್ನುವ ರೀತಿಯಲ್ಲಿ ಬರೆದ. ಗಟ್ಟಿಯವರೂ ತಮ್ಮ ಸಾಹಿತ್ಯದಲ್ಲಿ ಇಂಥ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ.

ಇವರ ಬರಹಗಳ ಯಾದಿಯನ್ನು ನೋಡಿದರೆ ಸಾಹಿತ್ಯದ ಯಾವ ಪ್ರಕಾರವನ್ನೂ ಬಿಟ್ಟವರಲ್ಲ. ನಾಟಕಗಳಾಗಲಿ, ಇಂಗ್ಲೀಷಿನಲ್ಲಿ ಬರೆದ Cindrilla & 4 other plays, The Earth is Round & 4 other Plays ಇವುಗಳನ್ನು ಮಕ್ಕಳ ಸಾಹಿತ್ಯಕ್ಕೆ ಸೇರಿಸಬಹುದಾದರೂ ಅವೆಲ್ಲವೂ ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಲ್ಲಿ ಬೆಳೆಸುವುದಾಗಿವೆ. ಇಂಗ್ಲೀಷ್‌ ಸಾಹಿತ್ಯದಲ್ಲಿ ನಡೆದ ಅನೇಕ ಪ್ರಯೋಗಗಳು ಅವರನ್ನು ಆಕರ್ಷಿಸಿದವು. ಅವರ ಸಮಕಾಲೀನ ಹೆಚ್ಚಿನ ಬರಹಗಾರರು ಸಾಮಾಜಿಕ ವಸ್ತುಗಳನ್ನು ಎತ್ತಿಕೊಂಡು ಬರೆದರೆ ಗಟ್ಟಿಯವರು ಅವರೇ ಹೇಳಿಕೊಂಡಂತೆ “ಪ್ರಜ್ಞಾ ಪ್ರವಾಹ” ತಂತ್ರಗಳತ್ತ ಪ್ರಭಾವಿತರಾದರು. ಜೋನಾಥನ್ ಸ್ವಿಫ್ಟ್, Ms. ಡರಥಿ ರಿಚರ್ಡ್ಸನ್, ಜೇಮ್ಸ್ ಜಾಯ್ಸ್, ಕಾಪ್ಕಾ ಇವರೆಲ್ಲರ ಪ್ರಭಾವದಲ್ಲಿ ಇವರ ಸಾಹಿತ್ಯದ ಕುರಿತು ಹೊಸ ಅನ್ವೇಷನೆಗೆ ಸ್ಪೂರ್ತಿಯನ್ನು ಹುಟ್ಟಿಸಿದವು. ಕಾದಂಬರಿ ಎಂದು ಪರಿಗಣಿಸಲು ಅದರಲ್ಲಿ ಇರಬೇಕಾದ ವಿಶಿಷ್ಟಗುಣವೇನು, ಪಾತ್ರ ಪ್ರಧಾನವೇ, ಕಥಾ ಪ್ರಧಾನವೇ, ನಿರೂಪಣಾ ವಿಧಾನವೇ ಎನ್ನುವ ಪ್ರಶ್ನೆಗಳನ್ನು ಅವರೇ ಹಾಕಿಕೊಂಡರು. ಇವರ ಪಾತ್ರಗಳು ಮತ್ತು ಕಥಾವಸ್ತುಗಳು ಕಥಾ ಪ್ರಧಾನವೋ, ಚರಿತ್ರೆಯೋ ಆಗದೇ ಪಾತ್ರದ ಮನೋಲೋಕದ ಚಿತ್ರಣಗಳಿರುತ್ತವೆ. ಪುರಾಣಗಳಂತೆ ನಿರ್ಲಿಪ್ತನಾಗಿ ಕರ್ಮದ ವಾಸನೆಯಲ್ಲಿ ಇವರ ಪಾತ್ರಗಳಾಗಲಿ, ಕಥೆಗಳಾಗಲಿ ಸಾಗುವುದಿಲ್ಲ. ಅವರು ಪಾತ್ರಗಳ ಸದ್ಗುಣ ಮತ್ತು ದುರ್ಗುಣಗಳನ್ನು ವಿಶ್ಲೇಷಣೆಯನ್ನು ಮಾಡುತ್ತಾ ತಾನು ಕಂಡುಕೊಂಡ ಸತ್ಯಗಳನ್ನು ಪಾತ್ರದ ನಡೆ ನುಡಿಯ ಮೂಲಕ ಹೊರಹಾಕುತ್ತಾರೆ.

ಇದನ್ನು ಅವರ “ಅರಗಿನ ಅರಮನೆಯಲ್ಲಿ” ಗುರುತಿಸಬಹುದು. ಇದಕ್ಕೆ ಪ್ರೇರಣೆ ಇಥಿಯೋಪಿಯಾದಲ್ಲಿ ಇವರ ಮನೆಯ ಲಿಂಬೆಯ ಗಿಡವನ್ನು ತಿಂದ ಕುರಿಯನ್ನು ಓಡಿಸುವಾಗ ಯಾರದೋ ನೆಲದಲ್ಲಿ ತನ್ನದೆನ್ನುವ ಮನೋಭಾವ ಸರಿಯೇ ಎನ್ನುವ ಕಾರಣಕ್ಕಾಗಿ ಅಂತರಂಗ ಶೋಧ ಪ್ರಾರಂಭವಾಯಿತು. ಯುದ್ಧ, ಕೂಪ, ಹಾಡುವ ಡೋಲು, ಶಿಲಾ ತಪಸ್ವಿ, ಹೇ ಕಾಪುರುಷ ಮುಂತಾದ ಕಾದಂಬರಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿ ಬಂದಿವೆ. ಅಬ್ರಾಹ್ಮಣದ ಅಂಗಾರುವಿನ ನೋವು, “ಇತಿಹಾಸದ ಮೊಗಸಾಲೆಯಲ್ಲಿ” ಬರುವ “ಅಂಗಾರು” ಇಬ್ಬರೂ ಪಾತ್ರ ಪ್ರತ್ಯೇಕವಾದರು ಅವರು ಅನುಭವಿಸುವ ಶೋಷಣೆಯನ್ನು ಹೇಳುವ ವಿಧಾನ ಬೇರೆ. ಇಬ್ಬರಿಗೂ ತಮಗೆ ಅವಮಾನ ಆಯಿತು, ತಮ್ಮ ಮೇಲೆ ಶೋಷಣೆ ನಡೆಯುತ್ತಿದೆ ಎನ್ನುವುದರ ಅರಿವಿರುವುದಿಲ್ಲ. ಅವರು ಅದೇ ಪ್ರಪಂಚದಲ್ಲಿ ಬದುಕಿ ಬಂದವರು. ಅಂಗಾರುವನ್ನು ಅಡಿಕೆ ಕದ್ದ ಕಾರಣಕ್ಕಾಗಿ ಉಳ್ಳವರು ಅವಳ ಬಟ್ಟೆಯನ್ನು ಬಿಚ್ಚಿ ಆ ಚಿಂದಿ ಬಟ್ಟೆಯಲ್ಲಿಯೇ ಕಟ್ಟಿ ತಲೆಯಮೇಲೆ ಹೊರಿಸಿ ಮೆರವಣಿಗೆ ಮಾಡುವ ಕಾಲ ಇತಿಹಾಸವನ್ನು ಮತ್ತೊಮ್ಮೆ ಮೊಗಸಾಲೆಯಲ್ಲಿ ಪ್ರದರ್ಶಿಸುತ್ತದೆ. ಆ ಕಾದಂಬರಿಯಲ್ಲಿ ಮೊಮ್ಮಗ ಅಜ್ಜನಲ್ಲಿ, “ಈ ಸುಂದರವಾದ ಪ್ರಕೃತಿಯ ಒಂದು ಭಾಗವಾಗಿ ಜೀವಿಸಲು ನಮ್ಮಿಂದ ಯಾಕೆ ಆಗುವುದಿಲ್ಲ” ಎನ್ನುವ ಒಂದು ಪ್ರಶ್ನೆಯನ್ನು ಎತ್ತುತ್ತಾನೆ. ಮುಕ್ತಾಯವಾಗಬೇಕಾದ ಕಥೆ ಇಲ್ಲಿಂದ ಮತ್ತೊಂದು Space ನತ್ತ ಜಾರುತ್ತದೆ.

ಸಾಹಿತಿಗಳ ಮಡಿವಂತಿಕೆ ಅವರಲ್ಲಿ ಸುಳಿಯುತ್ತಿರಲಿಲ್ಲ. ಬಂಡಾಯವೆಂದರೆ ಮುರಿಯುವುದಲ್ಲ, ಮುರಿದ ಸತ್ಯವನ್ನು ಎತ್ತಿ ಮನಃ ಪರಿವರ್ತನೆ ಎನ್ನುವುದನ್ನು ಅವರ ಲೇಖನದಲ್ಲಿ ಕಾಣಬಹುದಾಗಿದೆ. ಸಾವರ್ಕರ್ ಕುರಿತು ಅವರು ಬರೆದ ಬುಲ್ ಬುಲ್ ಹಕ್ಕಿಯ ಭಾಗವನ್ನು ಎತ್ತಿಕೊಂಡು ಅನಾವಶ್ಯಕ ವಿವಾದವನ್ನು ಎಬ್ಬಿಸಲಾಯಿತು. ಓರ್ವ ಲೇಖಕ ತನ್ನ ಅಪಾರ ಅಧ್ಯಯನಗಳ ಮೂಲಕ ತಾನು ಕಂಡುಕೊಂಡ ಸತ್ಯವನ್ನು ತನ್ನ ಬರಹದಲ್ಲಿ ದಾಖಲಿಸಿದರೆ ಅದನ್ನು ಹಾಗೇ ಸ್ವೀಕರಿಸದ ಮನೋಧರ್ಮವೇ ಗಟ್ಟಿಯವರನ್ನು ವಿಮರ್ಶಾವಲಯದಿಂದ ಹೊರಗಿಡುವ ಕೆಲಸ ಮಾಡಿರಬಹುದೆನಿಸುತ್ತದೆ.

ಮಾನವೀಯ ತುಡಿತಗಳಿಗೆ ವೈಜ್ಞಾನಿಕ ಅರ್ಥವನ್ನು ಕೊಟ್ಟು ಅದರ ಮುಂದೆ ಬರಬಹುದಾದ ಪ್ರಶ್ನೆಗಳಿಗೆ ಮತ್ತು ವಿಚಾರಗಳಿಗೆ ಆಸ್ಪದ ಕೊಡುವ ಅವರ ಬರಹಗಳ ವಿಸ್ತೃತ ಅಧ್ಯಯನ ಅಗತ್ಯವಿದೆ. ತಮ್ಮ 78ನೆಯ ವಯಸ್ಸಿನಲ್ಲಿ ಕೆಲಕಾಲದ ಅನಾರೋಗ್ಯದಿಂದ ಕಾಲನಲ್ಲಿ ಸೇರಿಹೋದ ಅವರು ಗಟ್ಟಿ ಬರಹಗಾರ, ಸ್ಪಷ್ಟ ಚಿಂತನೆಕಾರರಾಗಿದ್ದರು.